( ಸಂಪುಟ 8, ಸಂಚಿಕೆ 38, 21 ಸೆಪ್ಟೆಂಬರ್  2014)

 

17 ಲಕ್ಷಕ್ಕೂ ಹೆಚ್ಚು ಬಡಜನರನ್ನು ಲೂಟಿ ಮಾಡಿದ ಸಾರಧಾ ಚಿಟ್ಫಂಡಿನ ಭ್ರಷ್ಟ ವ್ಯವಹಾರದಲ್ಲಿ ತೃಣಮೂಲ ಕಾಂಗ್ರೆಸ್ ಕೂಡ ಅಷ್ಟೇ ದೊಡ್ಡ ಅಪರಾಧಿ ಎಂಬುದು ದಿನೇದಿನೇ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಇಂತಹ ನೀಚತನ ಭಯೋತ್ಪಾದನೆ ಮತ್ತು ಚಿತ್ರಹಿಂಸೆಯ ರಾಜಕೀಯದೊಂದಿಗೆ ಸೇರಿಕೊಂಡು ಇಂದು ಬಂಗಾಲದ ಜನತೆಯನ್ನು ಒಂದು ನಿಜವಾದ ಅಪಾಯಕ್ಕೆ ಗುರಿಪಡಿಸಿದೆ.

– ಸೀತಾರಾಮ್ ಯೆಚೂರಿ

   ಪಶ್ಚಿಮ ಬಂಗಾಲದ 17 ಲಕ್ಷಕ್ಕೂ ಹೆಚ್ಚು ಬಡ ಜನರನ್ನು ಲೂಟಿ ಮಾಡಿದ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣ ಈಗ ಎಂತಹ ಪ್ರಮಾಣವನ್ನು ತಲುಪಿದೆಯೆಂದರೆ ರಾಜ್ಯದಲ್ಲಿ ಆಳುತ್ತಿರುವ ತೃಣಮೂಲ ಕಾಂಗ್ರೆಸಿನ ಹಲವು ಪ್ರಮುಖ ಮುಖಂಡರುಗಳು ಅದರಲ್ಲಿ ಕುತ್ತಿಗೆಯ ವರೆಗೂ ಮುಳುಗಿರುವುದು ದಿನಗಳೆದಂತೆ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.

   ಈ ಹಗರಣವನ್ನು ಬಯಲಿಗೆ ತರಲು, ತಪ್ಪಿತಸ್ಥರನ್ನು ಗುರುತಿಸಲು ಮತ್ತು ನಾಡಿನ ಕಾನೂನಿನ ಪ್ರಕಾರ ಅವರನ್ನು ಶಿಕ್ಷಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳು ಮಧ್ಯಪ್ರವೇಶಿಸಬೇಕೆಂದು ಸಿಪಿಐ(ಎಂ) ಕಳೆದ ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸಕ್ರಿಯವಾಗಿ ಆಗ್ರಹಿಸುತ್ತಲೇ ಬಂದಿದೆ. ಎಡರಂಗ ಸರಕಾರದ ಅಡಿಯಲ್ಲಿ ಹಣಕಾಸು ನಿಯಂತ್ರಣಾ ಸಂಸ್ಥೆಯಾದ ಸೆಬಿ(ಭಾರತದ ಶೇರು ವಿನಿಮಯ ಮಂಡಳಿ)ಗೆ ಒಂದು ಪತ್ರ ಕಳಿಸಿ ಈ ಬಗ್ಗೆ ಆಮೂಲಾಗ್ರ ತನಿಖೆ ನಡೆಸಬೇಕು ಎಂದು ಕೇಳಲಾಗಿತ್ತು. ಆಮೇಲೆ, 2011ರ ವಿಧಾನ ಸಭಾ ಚುನಾವಣೆಗಳ ನಂತರ ಸಿಪಿಐ(ಎಂ) ಮತ್ತು ಎಡರಂಗದ ನಿಯೋಗಗಳು ರಾಷ್ಟ್ರಪತಿಗಳನ್ನು ಎರಡು ಬಾರಿ, ಪ್ರಧಾನ ಮಂತ್ರಿಗಳನ್ನು ಮೂರು ಬಾರಿ ಮತ್ತು ಕಾರ್ಪೊರೇಟ್ ವ್ಯವಹಾರಗಳ ಮಂತ್ರಿಯನ್ನು ಎರಡು ಬಾರಿ ಭೇಟಿಯಾದವು. ಈ ಎಲ್ಲ ಭೇಟಿಗಳಲ್ಲಿ ಸಿಪಿಐ(ಎಂ) ಕೇಂದ್ರ ಸಂಸ್ಥೆಗಳು ಮಧ್ಯಪ್ರವೇಶಿಸುವ ತುರ್ತು ಅಗತ್ಯ, ಶಾರದಾ ಕಂಪನಿಗಳ ಗುಂಪಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಅದರಿಂದ ಬರುವ ಹಣವನ್ನು ಈ ಹಗರಣಕ್ಕೆ ಬಲಿಯಾದವರಿಗೆ ಸಾಕಷ್ಟು ಪರಿಹಾರ ಒದಗಿಸಲು ಬಳಸುವಂತಾಗಬೇಕು ಎಂಬ ಬಗ್ಗೆ ಒತ್ತು ನೀಡುತ್ತ ಬಂದಿದೆ.

ಹಗರಣಕೋರರ ಮೋಸಕ್ಕೆ ರಾಜ್ಯದ ಬೊಕ್ಕಸದಿಂದ ಪರಿಹಾರ!

   ತೃಣಮೂಲ ಕಾಂಗ್ರೆಸ್ ಮತ್ತು ಅದರ ಸರಕಾರ ಇಂತಹ ಒಂದು ತನಿಖೆಯನ್ನು ಏಕೆ ನಿರಾಕರಿಸುತ್ತ ಬಂತು ಎಂಬುದೀಗ ಸ್ಪಷ್ಟ. ಈ ಹಗರಣವನ್ನು ಮುಚ್ಚಿ ಹಾಕಲೆಂದೇ, ಮತ್ತು ಹಗರಣಕೋರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬದಲು, ಹಣ ಕಳಕೊಂಡ ಕೆಲವರಿಗೆ ರಾಜ್ಯದ ಬೊಕ್ಕಸದ ಮೂಲಕ ನಾಮಮಾತ್ರದ ಪರಿಹಾರ ಒದಗಿಸಲು ಅದು ನಿರ್ಧರಿಸಿತು. ಒಂದು ಪೂರ್ಣ ಪ್ರಮಾಣದ ನಾಟಕವೇ ನಡೆಯಿತು. ಬಂಗಾಲದ ಎಲ್ಲೆಡೆಗಳಿಂದ ಸರಕಾರದ ಖರ್ಚಿನಲ್ಲಿ ಜನರನ್ನು ಕರಕೊಂಡು ಬಂದು ಮುಖ್ಯಮಂತ್ರಿಗಳು ಕೊಲ್ಕತಾದ ನೇತಾಜಿ ಒಳಾಂಗಣ ಸ್ಟೇಡಿಯಂನಲ್ಲಿ ವಂಚನೆಗೊಳಗಾದ ಕೆಲವರಿಗೆ ಅಲ್ಪ ಮೊತ್ತದ ಚೆಕ್ಗಳನ್ನು ಕೊಡಮಾಡಿದರು. ಕೊನೆಗೂ ಹಗರಣಕೋರರು ಮಾಡಿದ ಮೋಸಕ್ಕೆ ಪಶ್ಚಿಮ ಬಂಗಾಲದ ಜನತೆ ಬೆಲೆ ತೆರಬೇಕಾಗಿ ಬಂತು. ಈ ಹಗರಣಕೋರರನ್ನು ತೃಣಮೂಲ ಕಾಂಗ್ರೆಸ್ ಮತ್ತು ರಾಜ್ಯ ಸರಕಾರ ರಕ್ಷಿಸಲು ಮುಂದಾಗಿತ್ತು ಎಂಬುದು ಸ್ಪಷ್ಟ.

   ಅಂತಿಮವಾಗಿ 2011ರ ಮೂರು ವರ್ಷಗಳ ನಂತರ ಸುಪ್ರಿಂ ಕೋರ್ಟ್ ಮಧ್ಯಪ್ರವೇಶಿಸಿತು. ಈ ಹಗರಣಕ್ಕೆ ಇನ್ನೂ ದೊಡ್ಡ ಆಯಾಮಗಳಿವೆ ಎಂದು ವರ್ಣಿಸಿದ ದೇಶದ ಸರ್ವೋಚ್ಚ ನ್ಯಾಯಾಲಯ ಈ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಹೇಳಿತ್ತು.

ಟಿಎಂಸಿ ಮುಖಂಡರ ವಿಚಾರಣೆ

  ರಾಜ್ಯಸಭೆಯ ಒಬ್ಬ ತೃಣಮೂಲ ಕಾಂಗ್ರೆಸ್ ಸದಸ್ಯ ಈ ಹಗರಣದ ಇಡೀ ಕತೆಯನ್ನು, ಇದರಲ್ಲಿ ಮುಖ್ಯಮಂತ್ರಿಯೂ ಒಳಗೊಂಡಿರುವುದನ್ನು ಹೊರಗೆಡಹುವುದಾಗಿ ಬೆದರಿಕೆ ಹಾಕಿದಾಗ, ತಕ್ಷಣವೇ ಆತನನ್ನು ರಾಜ್ಯ ಸರಕಾರದ ವಿಶೇಷ ತನಿಖಾ ತಂಡ ಬಂಧಿಸಿ ತನ್ನ ಸುಪರ್ದಿಗೆ ತೆಗೆದು ಕೊಂಡಿತು. ಆತ ಒಂದು ವರ್ಷ ಕಳೆದ ನಂತರವೂ ಈಗಲೂ ಜೈಲಿನಲ್ಲಿದ್ದಾರೆ.

  ಇನ್ನೊಬ್ಬ ಟಿಎಂಸಿ ರಾಜ್ಯಸಭಾ ಸದಸ್ಯ, ಅಹ್ಮದ್ ಹಸನ್ ಇಮ್ರಾನ್ರನ್ನು ಹಗರಣದಲ್ಲಿ ಸಿಲುಕಿದ್ದ ಚಿಟ್ಫಂಡ್ ಗುಂಪಿಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಒಳಪಡಿಸಿತು. ‘ವಿಶೇಷ ವಂಚನೆ ತನಿಖಾ ಸಂಘಟನೆ’ (ಎಸ್ಎಫ್ಐಒ) ನಡೆಸಿದ ತನಿಖೆಗಳಲ್ಲಿ ಈ ಸಂಸತ್ ಸದಸ್ಯ 200 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಹವಾಲಾ ವ್ಯವಹಾರಗಳಲ್ಲಿ ತೊಡಗಿದ್ದುದು ಕಂಡು ಬಂದಿದೆ ಎನ್ನಲಾಗಿದೆ. ಈ ಕೇಸನ್ನು ಒಂದು ನೆರೆದೇಶದಲ್ಲಿ ಭಯೋತ್ಪಾದನಾ ಸಂಪರ್ಕ ಹೊಂದಿರಬಹುದಾದ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ವಹಿಸಲಾಗಿದೆ.

  ವಿವಿಧ ತೃಣಮೂಲ ಕಾಂಗ್ರೆಸ್ ಮುಖಂಡರನ್ನು, ರಾಜ್ಯ ಸಂಪುಟದ ಹಲವಾರು ಮಂತ್ರಿಗಳನ್ನು ಕೂಡ ತನಿಖೆಗೆ ಕರೆಸಿಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಇದರಲ್ಲಿ ಇತ್ತೀಚಿನದ್ದು ಎಂದರೆ ಸಶಸ್ತ್ರ ಪೋಲೀಸ್ ಪಡೆಯ ಮಾಜಿ ಮಹಾನಿರ್ದೇಶಕ ರಜತ್ ಮಜುಂದಾರ್ರವರ ಬಂಧನ. ಈತ ಈಗ ತೃಣಮೂಲ ಕಾಂಗ್ರೆಸಿನ ಉಪಾಧ್ಯಕ್ಷರು. ಈ ಹಿಂದೆ ರಾಜ್ಯದ ಡಿಐಜಿಯಾಗಿ, ಡಿಐಜಿ(ಕಾರ್ಯಾಚರಣೆ) ಆಗಿ ಕೆಲಸ ಮಾಡಿದ್ದರು.

ಮುಖ್ಯಮಂತ್ರಿ ಸಹ ಶಾಮೀಲು?

  ಈ ಇಡೀ ಹಗರಣದಲ್ಲಿ ಮುಖ್ಯಮಂತ್ರಿ ಸಹ ಶಾಮೀಲಾಗಿರಬಹುದು ಎಂಬ ಊಹಾಪೋಹಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿವೆ. ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗಳು ಮತ್ತು ಶಾರದಾ ಗುಂಪಿನ ಬಾಸ್ ಸುದಿಪ್ತೊ ಸೆನ್( ಈಗ ಬಂಧಿತನಾಗಿ ಪೋಲಿಸ್ ಕಸ್ಟಡಿಯಲ್ಲಿದ್ದಾರೆ) 2012ರಲ್ಲಿ ಕಲಿಂಪೊಂಗ್ನಲ್ಲಿ ಭೇಟಿಯಾಗಿದ್ದರು ಎಂಬ ವರದಿಗಳು ಇರುವ ಬಗ್ಗೆ ತನಗೆ ತಿಳಿದಿರುವುದಾಗಿ ಸಿಬಿಐ ನಿರ್ದೇಶಕರು ಹೇಳಿದ್ದಾರೆ ಎಂದು ‘ಟೆಲಿಗ್ರಾಫ್'(ಸಪ್ಟಂಬರ್ 10, 2014) ವರದಿ ಮಾಡಿದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗಿದ್ದೇವೆ, ಸ್ವಲ್ಪ ಸಮಯದಲ್ಲೇ ದೊಡ್ಡ ಫಲಿತಾಂಶಗಳನ್ನು ಪಡೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿರುವುದಾಗಿಯೂ ವರದಿಯಾಗಿದೆ. ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗಳು 2010ರಲ್ಲಿ ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಶಾರದಾ ಗುಂಪು ರೈಲ್ವೆ ಮಂತ್ರಿಗಳ ಖಯಾಲಿಯ ಪ್ರಾಜೆಕ್ಟ್ ‘ಭಾರತ ತೀರ್ಥ’ವನ್ನು ಜಾರಿಗೊಳಿಸುವ ರೈಲ್ವೆ ಕಾಂಟ್ರಾಕ್ಟನ್ನು ಪಡೆಯಿತು ಎಂಬ ವರದಿಗಳೂ ಕಾಣ ಬಂದಿವೆ.

  ಇವೆಲ್ಲವೂ, 17 ಲಕ್ಷಕ್ಕೂ ಹೆಚ್ಚು ಬಡಜನರನ್ನು ಲೂಟಿ ಮಾಡಿದ ಈ ಭ್ರಷ್ಟ ವ್ಯವಹಾರದಲ್ಲಿ ತೃಣಮೂಲ ಕಾಂಗ್ರೆಸ್ ಕೂಡ ಅಷ್ಟೇ ದೊಡ್ಡ ಅಪರಾಧಿ ಎಂಬುದನ್ನು ಸ್ಪಷ್ಟಗೊಳಿಸುತ್ತವೆ. ಸಿಬಿಐ, ಎಸ್ಎಫ್ಐಒ, ಇಡಿ ಮತ್ತಿತರ ಸಂಸ್ಥೆಗಳೆಲ್ಲ ಇಡೀ ಹಗರಣವನ್ನು ಬಯಲಿಗೆ ತಂದು ತಪ್ಪಿತಸ್ಥರನ್ನು ಶಿಕ್ಷಿಸುತ್ತವೆ, ಲೂಟಿಗೆ ಬಲಿಯಾದವರಿಗೆ ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ಒದಗಿಸುತ್ತವೆ ಎಂದು ಆಶಿಸಬೇಕಷ್ಟೇ.

  ಈಗಾಗಲೇ ತೃಣಮೂಲ ಕಾಂಗ್ರೆಸ್ ರಾಜ್ಯದಾದ್ಯಂತ ಭಯೋತ್ಪಾದನೆ ಮತ್ತು ಚಿತ್ರಹಿಂಸೆಯ ರಾಜಕೀಯದ ಮೂಲಕ ಪ್ರಜಾಪ್ರಭುತ್ವದ ಮೇಲೆ ವ್ಯಾಪಕ ಪ್ರಮಾಣದಲ್ಲಿ ವಿಶೇಷವಾಗಿ ಎಡಪಕ್ಷಗಳ ಮೇಲೆ ಗುರಿಯಿಟ್ಟು ದಾಳಿ ನಡೆಸುತ್ತಲೇ ಇದ್ದು, ಅದರೊಂದಿಗೆ ಈ ನೀಚ ವ್ಯವಹಾರವೂ ಸೇರಿಕೊಂಡಿದೆ. ಮಹಿಳೆಯರ ಮೇಲೆ ನಿಲ್ಲದ ಹಿಂಸಾಚಾರ ಮತ್ತು ಲೈಂಗಿಕ ಅಪರಾಧಗಳು, ಬಲವಂತದ ವಸೂಲಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಗಳು, ಬಹಿರಂಗವಾಗಿಯೇ ಚುನಾವಣೆಗಳಲ್ಲಿ ಮೋಸ, ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯನ್ನೇ ವಿರೂಪಗೊಳಿಸುವುದು ಇತ್ಯಾದಿಗಳಿಂದಾಗಿ ಬಂಗಾಲದಲ್ಲಿ ಪ್ರಜಾಪ್ರಭುತ್ವ ರಚನೆ ಮತ್ತು ಸಂಸ್ಥೆಗಳು ಮುರಿದು ಬೀಳುವಂತಾಗಿದೆ.

ಅಪಾಯಕಾರಿ ಸನ್ನಿವೇಶ

  ಸಿಪಿಐ(ಎಂ) ಮತ್ತು ಎಡಪಕ್ಷಗಳು ಈ ಎಲ್ಲ ದಾಳಿಗಳನ್ನು ಎಡೆಬಿಡದೆ ಎದುರಿಸಿಕೊಂಡು ಬಂದಿವೆ. ನೂರಾರು ಧೀರ ಹೋರಾಟಗಾರರನ್ನು ಈ ದಾಳಿಗಳು ಬಲಿ ತೆಗೆದುಕೊಂಡಿವೆ. ಸಾವಿರಾರು ಮಂದಿ ಮನೆಮಾರು ಕಳಕೊಂಡಿದ್ದಾರೆ. ಬಂಗಾಲದಲ್ಲಿ ಎಡರಂಗ ಬೇಗನೇ ಪುಟಿದೆದ್ದು ಬರುತ್ತದೆ ಎಂಬ ಭಯದಿಂದ ತೃಣಮೂಲ ಕಾಂಗ್ರೆಸ್ ಕೋಮು ಭಾವನೆಗಳನ್ನು ಬಡಿದೆಬ್ಬಿಸಿ ಅಲ್ಪಸಂಖ್ಯಾತರ ಬೆಂಬಲ ಗಿಟ್ಟಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಇದು ಆರೆಸ್ಸೆಸ್/ಬಿಜೆಪಿಗೆ ಒಂದು ಕೋಮುವಾದಿ ಪ್ರತಿದಾಳಿಯನ್ನು ನಡೆಸಿ ತನ್ನ ಚುನಾವಣಾ ನೆಲೆಯನ್ನು ಕ್ರೋಢೀಕರಿಸಿಕೊಳ್ಳಲು, ಬಹುಶಃ ಬಂಗಾಲದ ವಿಧಾನಸಭೆಗೆ ಮೊದಲ ಬಾರಿಗೆ ಪ್ರವೇಶ ಪಡೆಯುವ ಅಪಾಯಕಾರೀ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇಂತಹ ಕೋಮುವಾದಿ ಸ್ಪರ್ಧೆ ರಾಜ್ಯದಲ್ಲಿ ಎಡರಂಗ ಸರಕಾರದ ಮೂರು ದಶಕಗಳ ಆಳ್ವಿಕೆ ಕಟ್ಟಿ ಬೆಳೆಸಿದ ಕೋಮುಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ವಾತಾವರಣವನ್ನು ಸಂಪೂರ್ಣವಾಗಿ ನಾಶಪಡಿಸುವಂತಹ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿದೆ.

  ಇದೀಗ ಇಂದು ಬಂಗಾಲದ ಜನತೆಯನ್ನು ಒಂದು ನಿಜವಾದ ಅಪಾಯಕ್ಕೆ ಗುರಿಪಡಿಸಿದೆ. ಸಿಪಿಐ(ಎಂ) ಮತ್ತು ಎಡಪಕ್ಷಗಳು ಇಂತಹ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಲು ಮತ್ತು ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಯನ್ನು ಮರುಸ್ಥಾಪಿಸಲು ಕಟಿಬದ್ಧವಾಗಿವೆ. ಎಡರಂಗದ ಆಳ್ವಿಕೆಯ ಅಡಿಯಲ್ಲಿ ವಿಶಾಲ ಜನಸಮೂಹಗಳು ಗಳಿಸಿದ್ದನ್ನು ಸತತವಾಗಿ ಮತ್ತು ಸಂಪೂರ್ಣವಾಗಿ ಅಳಿಸಿ ಹಾಕುವ ಪ್ರಯತ್ನ ನಡೆಯುತ್ತಿರುವಾಗ, ಅವರ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು, ಕಾಯ್ದುಕೊಳ್ಳಲು ಸಿಪಿಐ(ಎಂ) ಮತ್ತು ಎಡಪಕ್ಷಗಳು ಕೆಲಸ ಮಾಡುತ್ತವೆ.