RSS

Category Archives: ಈ ವಾರ

ಬೆಳಗಾವಿ ಅಧಿವೇಶನ : ಕಾಲಹರಣದ ಕಲಾಪವಾದೀತೇ?

ಈ ವಾರ – ಎಸ್. ವೈ. ಗುರುಶಾಂತ್

( ಸಂಪುಟ 8, ಸಂಚಿಕೆ 51, 21 ಡಿಸೆಂಬರ್ 2014 )

Belgaum_Karnataka_Assembly

   `ಪ್ರತಿ ನಿಮಿಷವೂ ವ್ಯರ್ಥವಾಗಬಾರದು, ಅದರ ಸದ್ಬಳಕೆಯಾಗಲಿ’ ಎಂದು ವಿಧಾನ ಸಭೆಯ ಸಭಾದ್ಯಕ್ಷ ಕಾಗೋಡು ತಿಮ್ಮಪ್ಪನವರು ಸದನದ ಆರಂಭಕ್ಕೆ ಮೊದಲು ಹೇಳಿದ್ದರು. ಹಾಗೆ ಹೇಳಲು ಅವರಿಗೆ ಕಾರಣಗಳಿದ್ದವು. ಈ ಬಾರಿಯೂ ಹಿಂದಿನಂತೆ ಸದನ ಗದ್ದಲ-ಗೋಜುಗಳಿಂದ ತುಂಬಿ ಕಾಲಹರಣವೇ ಕಲಾಪ ಎನ್ನುವಂತಾಗುವ ಸೂಚನೆ ದೊರೆತಿತ್ತು. ಚಳಿಗಾಲದಲ್ಲಿ ಬೆಳಗಾವಿಯಲ್ಲಿ ಸದನದ ಕಲಾಪಗಳು ನಡೆಯಬೇಕು ಎನ್ನುವಾಗ ಉತ್ತರ ಕರ್ನಾಟಕದ ಜನತೆಯ ಪ್ರಮುಖ ಪ್ರಶ್ನೆಗಳಿಗೊತ್ತು ಸಿಗಬೇಕು ಮತ್ತು ಪರಿಹಾರ ಕೊಡುವ ಅಧಿವೇಶನವನ್ನಾಗಿಯೇ ನಡೆಸುವುದಾಗಿ ಬಿಂಬಿಸಲಾಗಿತ್ತು. ಆದರೆ ಈಗ ಕಳೆದ ನಾಲ್ಕು ದಿನಗಳ ಕಲಾಪಗಳನ್ನು ನೋಡಿದರೆ ಜನರ ಬದುಕಿಗಿಂತ ತಮ್ಮ ರಾಜಕೀಯ ಮೇಲಾಟಗಳೇ ಪ್ರಧಾನ ಎಂಬುದಕ್ಕೆ ಆ ಎಲ್ಲರೂ ಸ್ಪರ್ಧೆಗಿಳಿದಿರುವುದು ಕಾಣುತ್ತದೆ. ಇಲ್ಲಿ ಈ ಭಾಗದಲ್ಲಿ ಸಿಗುವ ಮಾಧ್ಯಮ ಪ್ರಚಾರವೇ ಈ ಹೈಪರ್ ಚಟುವಟಿಕೆಗಳ ಒಂದು ಆಕರ್ಷಣೆಯ ಕೇಂದ್ರ ಬಿಂದೂ ಕೂಡ. ಹೀಗಾಗಿ ಜನರ ಕಣ್ಣಿಗೆ ಮಣ್ಣು ತೂರುವ ವರಸೆ!

   ಬೆಳಗಾವಿಯಲ್ಲಿ ಅಧಿವೇಶನ ಸೇರುವ ಇಂಗಿತ ಪ್ರಕಟವಾದ ಕೂಡಲೇ ಆಡಳಿತ ಪಕ್ಷಕ್ಕೆ ಹೇಗೆಲ್ಲಾ ಮುಜುಗರ, ಅಡ್ಡಿ ಒಡ್ಡಬಹುದೆಂದು ಅಧಿಕೃತ ವಿರೋಧ ಪಕ್ಷವಾದ ಬಿ.ಜೆ.ಪಿ. ತನ್ನ ಯೋಜನೆಗಳನ್ನು ಹೊರಹಾಕ ತೊಡಗಿತು. ಬಿಜೆಪಿಗೆ ಜನರ ಪ್ರಶ್ನೆಗಳಿಗಿಂತ ಆಡಳಿತ ಪಕ್ಷವನ್ನು ಮುಜುಗರಕ್ಕೆ ಈಡು ಮಾಡುವುದೇ ಪ್ರಧಾನ. ಅದಕ್ಕೆ ಸರಿ ಹೊಂದುವ ವಿಷಯಗಳನ್ನು ಹೊಸೆಯಿತೇ ಹೊರತು ಜನರ ಪ್ರಶ್ನೆಗಳೆಂದು ಕೈಗೆತ್ತಿಕೊಂಡ ಕಬ್ಬು ಬೆಳೆಗಾರರ ಪ್ರಶ್ನೆಯೂ ಕೂಡ ನಿಜ ಕಾಳಜಿಯಿಂದಲ್ಲ.

   ಹಾಗೆಯೇ ಕಾಂಗ್ರೆಸ್ ಪಕ್ಷವೂ ಸಹ ಸದನದ ಕಲಾಪಗಳನ್ನು ಅರ್ಥಪೂರ್ಣವಾಗಿಸಲು ಗಂಭೀರ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ. ಪ್ರಸ್ತಾಪಿಸುವ ಪ್ರಶ್ನೆಗಳನ್ನು ಗಂಭೀರವಾಗಿ ಜನರ ಮುಂದೆ ಇಡಲಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳ ವೈಖರಿ ಗಮನಿಸಿದರೆ ಸದನದ ಕಲಾಪಗಳನ್ನು ಹೇಗೋ ಸಾಗಿಸುವ ಇರಾದೆ ಇದ್ದಂತಿತ್ತು. ಈ ನಾಲ್ಕು ದಿನಗಳಲ್ಲಿ ಕಬ್ಬು ಬೆಳೆಗಾರರ ಪ್ರಶ್ನೆ ಮೇಲೆ ಸದನದ ಒಳಗೂ, ಹೊರಗೂ ಬಿಜೆಪಿ ಗದ್ದಲ ಎಬ್ಬಿಸಿದೆ. ಪ್ರಿಯಾಂಕ ಗಾಂಧಿಯವರ ಭಾವಚಿತ್ರವನ್ನು ಅಸಭ್ಯವಾಗಿ ವೀಕ್ಷಿಸಿದ ಬಿಜೆಪಿ ಶಾಸಕ ಹೀನ ವರ್ತನೆಗೆ ಇನ್ನೆರಡು ದಿನಗಳು ಬಲಿಯಾಗಿವೆ. ಹೀಗೆಯೇ ಹತ್ತು ದಿನಗಳ ಕಲಾಪಗಳು ಕಿರುಚಾಟಗಳ ವೀರಾವೇಶದಲ್ಲಿ ಜಾರಿದರೂ ಆಶ್ಚರ್ಯವಿಲ್ಲ.

   ನಿಜಕ್ಕೂ ಸರಕಾರ ಪ್ರಾಮಾಣಿಕವಾಗಿ ಕೈಗೆತ್ತಿಗೊಳ್ಳಬೇಕಾದ ಹಲವು ಅಭಿವೃದ್ದಿಯ ಪ್ರಶ್ನೆಗಳು ಉತ್ತರ ಕರ್ನಾಟಕದಲ್ಲಿವೆ. ಕಬ್ಬು ಬೆಳೆಗಾರರ ಪ್ರಶ್ನೆಯ ಜೊತೆ, ಭತ್ತ, ತೊಗರಿ, ಶೇಂಗಾ, ಸೂರ್ಯಕಾಂತಿ ಮುಂತಾದ ಫಸಲಿಗೆ ಬೆಂಬಲಿತ ಬೆಲೆ ನಿಗದಿಯಾಗಬೇಕಿದೆ. ಅತಿವೃಷ್ಟಿ-ಬರದ ಬವಣೆಗೆ ಸಿಲುಕಿದ ತಾಲೂಕುಗಳು ಇಲ್ಲಿವೆ. ಕೃಷ್ಣಾ ಐ ತೀರ್ಪೀನಲ್ಲಿ ಲಭ್ಯವಾಗುವ ನೀರಿನ ಬಳಕೆ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕ್ರಮಗಳೂ ಅಗತ್ಯವಾಗಿವೆ. ಮುಖ್ಯವಾಗಿ ಬಕರ್ ಹುಕುಂ ಸೇರಿ ಅರಣ್ಯ ಭೂಮಿ ಹಂಚಿಕೆ, ಪಟ್ಟಾ ನೀಡಿಕೆ ಜ್ವಲಂತ ವಿಷಯವಾಗಿದೆ. ಸರಕಾರ ಹೊಸ ಕೈಗಾರಿಕೆಯ ನೀತಿಯನ್ನು ಪ್ರಕಟಿಸಿದೆ, ಆದರೆ ಈ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದಿಮೆಗಳ ಸ್ತಾಪನೆಯ ರೂಪು ರೇಷೆ ಏನು? 371 ಜೆ ವಿಧಿಯ ಅನ್ವಯದ ಜಾರಿ ಹೇಗೆ? ವಿದ್ಯುತ್ ಉತ್ಪಾದನೆಯ ಪ್ರಶ್ನೆ, ರಸ್ತೆ, ಕುಡಿಯುವ ನೀರು, ಮುಂತಾದ ಮೂಲ ಸೌಕರ್ಯಗಳು, ಮುಖ್ಯವಾಗಿ ರೇಷನ್, ಗ್ರಾಮೀಣ ಉದ್ಯೋಗ ಖಾತ್ರಿ, ವಸತಿ, ಶಿಕ್ಷಣ ಇತ್ಯಾದಿಗಳು ನಿರ್ಲಕ್ಷಿತವಾಗಿವೆ. ಕಾರ್ಮಿಕರ-ಅಸಂಘಟಿತರ ಕಾರ್ಮಿಕರ ಪ್ರಶ್ನೆಗಳು ಮೂಲೆಗೊತ್ತಲ್ಪಟ್ಟಿವೆ. ರಾಜ್ಯದಲ್ಲಿಯೂ ದಲಿತರು, ದುರ್ಬಲರು, ಮಹಿಳೆಯರ ಮೇಲಿನ ದೌರ್ಜನ್ಯ, ಕೋಮು ದ್ವೇಷ ಹೆಚ್ಚಿಸುವ ಧಾಳಿಗಳು ನಡೆದಿವೆ. ಇವೆಲ್ಲಾ ಇತ್ಯರ್ಥ ಕಾಣಬೇಕಾದ ಕೆಲವು ಪ್ರಶ್ನೆಗಳು.

   ವಿರೋಧ ಪಕ್ಷವಾಗಿರುವ ಬಿಜೆಪಿಗೆ ಇವು ಗಂಭೀರ ಪ್ರಶ್ನೆಗಳೇನಲ್ಲ. ಅದು ಈ ಮೊದಲು ‘ಕಳಂಕಿತ ಸಚಿವರ’ ರಾಜೀನಾಮೆ, ಸರಕಾರದ ವೈಫಲ್ಯಗಳ ವಿರುದ್ಧ 50,000 ಜನರೊಂದಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿತ್ತು. ಆದರೆ ಅಷ್ಟು ಜನರನ್ನೂ ಅಣಿನೆರಸಲಾಗಲಿಲ್ಲ. ಮೊದಲ ದಿನವೇ ಸರಕಾರದ ವಿರುದ್ಧ ಕೋಲಾಹಲ ಸೃಷ್ಟಿಸುವುದಾಗಿ ಘೋಷಿಸಿತ್ತು. ಆದರೆ ಅವರ ಶಾಸಕರೇ ಸರಿಯಾಗಿ ಕಲಾಪಕ್ಕೆ ಹಾಜರಾಗಲಿಲ್ಲ. ಸದನದ ಕಲಾಪಗಳು ನಡೆದಿರುವಾಗಲೇ ಅಲ್ಲಿ ಹಾಜರಾಗಿದ್ದ ಶಾಸಕ ಪ್ರಭು ಚೌಹಾಣ್ ಪ್ರಿಯಾಂಕರವರ ಭಾವಚಿತ್ರವನ್ನು ಅಸಭ್ಯವಾಗಿ ನೋಡುತ್ತಾ ತಮ್ಮ ಹೇಯ ‘ಸಂಸ್ಕೃತಿ’ಯನ್ನು ತೋರಿಸಿದ. ಈ ಹಿಂದೆಯೂ ಬಿಜೆಪಿಯ ಸಚಿವರೇ ಅಶ್ಲೀಲ ಚಿತ್ರಗಳನ್ನು ನೋಡಿದ್ದರು. ಆದರೆ ಇದು ತಪ್ಪು ಎನ್ನುತ್ತಲೇ ಅದನ್ನು ಸಮರ್ಥಿಸಿದ ಬಿಜೆಪಿ ನಾಯಕರ ವರ್ತನೆ ಹೇಯಕರ, ಖಂಡನೀಯ. ಸದನದ ಮಹತ್ವ, ಗಂಭೀರತೆ ಹಾಳಾಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಒದಗಿದ ದುರಂತದ ಸಂದರ್ಭ.

   ಈ ಕಲಾಪಗಳು ನಡೆಯುವಾಗಲೂ ಆಡಳಿತ ಪಕ್ಷವಾದ ಕಾಂಗ್ರೆಸ್ನಲ್ಲಿದ್ದ ಒಳಜಗಳ ಬಯಲಿಗೆ ಬಂದಿದ್ದು ಮತ್ತೊಂದು ವಿಶೇಷ. ಅಧಿವೇಶನ ಮುಗಿದ ಬಳಿಕ ಕೆಲವು ಸಚಿವರನ್ನು ತೆಗೆಯಲಾಗುವುದು ಎಂಬ ಸುದ್ದಿ ಪ್ರಾಧಾನ್ಯತೆಯನ್ನು ಪಡೆಯಿತು. ಅದರಲ್ಲಿ ವಿಶೇಷವಾಗಿ ಮಂಡಳಿ, ನಿಗಮಗಳಿಗೆ ತನ್ನವರನ್ನೆಲ್ಲಾ ನೇಮಿಸಲಿಲ್ಲವೆಂದು ಖ್ಯಾತೆ ತೆಗೆದಿರುವ ಸಚಿವ ಅಂಬರೀಶ್ ವಿರುದ್ದ ಹೈಕಮಾಂಡ್ಗೆ ದೂರು ನೀಡಿದ್ದು ದೊಡ್ಡ ಸುದ್ದಿಯಾಗಿ ಬಿಜೆಪಿ ಬಾಯಿಗೆ ರಸಗವಳವಾಗಿ ಚೌಹಾಣ್ ಪ್ರಕರಣದಲ್ಲಿ ಮಸಿ ಬಳಿದುಕೊಂಡಿದ್ದ ಮುಖವನ್ನು ಒರೆಸಿಕೊಳ್ಳಲು ಅವಕಾಶ ಕಲ್ಪಿಸಿತು.

   ಇನ್ನು ವಿರೋಧ ಪಕ್ಷದ ಸ್ಥಾನ ಕಳೆದುಕೊಂಡು, ಆಂತರಿಕವಾಗಿ ಶಾಸಕರ ಬಂಡಾಯವನ್ನು ಎದುರಿಸುತ್ತಿರುವ ಜೆ.ಡಿ.ಎಸ್ ಈ ಕಲಾಪಗಳಲ್ಲಿ ಅಸ್ತಿತ್ವಕ್ಕಾಗಿ ಹೆಣಗುವ ಸ್ಥಿತಿಯಲ್ಲಿದೆ. ನಾಯಕ ಕುಮಾರಸ್ವಾಮಿಯವರೇನೋ ಹಲವು ವಿಷಯಗಳನ್ನು ಎತ್ತಿದ್ದಾರೆ, ಆದರೆ ಅವನ್ನೆಲ್ಲಾ ಪರಿಣಾಮಕಾರಿಯಾಗಿ ಮಂಡಿಸಲು, ಛಾಪು ಮೂಡಿಸಲು ಸಾಧ್ಯವೇ, ಅದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಗಳು ಅವಕಾಶ ನೀಡುವವೇ ನೋಡಬೇಕಷ್ಟೇ.

ಈ ಹಿಂದಿನಿಂದಲೂ ಗಮನಿಸಿದಂತೆ ಬೆಳಗಾವಿಯಲ್ಲಿ ಇದೂ ಸೇರಿ ನಾಲ್ಕನೆಯ ಅಧಿವೇಶನ. ಹಿಂದಿನ ಅಧಿವೇಶನಗಳಲ್ಲಿ ಈ ಭಾಗದ ಬಗ್ಗೆ ಹಲವು ಪ್ರಕಟನೆ, ನಿರ್ಧಾರಗಳನ್ನು ಮಾಡಿಯಾಗಿದೆ, ಮರೆತೂ ಆಗಿದೆ. ಹೀಗಾದರೆ ಅಧಿವೇಶನ ನಡೆಸುವುದಾದರಲ್ಲಿ ಯಾವ ಸಾರ್ಥಕತೆ ಇದೆ? ಕೇವಲ ಹೇಳಿಕೊಳ್ಳಲೋ? ಆನರ ತೆರಿಗೆಯ ಹಣ, ಸಮಯ ಹಾಳು ಮಾಡುವ ಇಂತಹ ಜಾತ್ರೆಗಳಿಂದ ಜನರಿಗೇನು ಪ್ರಯೋಜನ?

   ಈ ಹೊತ್ತಿನಲ್ಲಿಯೂ ಉಳಿದ ದಿನಗಳ ಕಲಾಪಗಳು ಅರ್ಥಪೂರ್ಣವಾಗಿ ನಡೆಯಲಿ, ಜನರ ಸಂಕಷ್ಟಗಳಿಗೆ ಪ್ರಜಾಪ್ರಭುತ್ವದ ವೇದಿಕೆ ಒಂದಿಷ್ಟು ಪರಿಹಾರಗಳನ್ನು ನೀಡಲಿ ಎಂಬ ನಿರೀಕ್ಷೆ ಜನರದ್ದು.

 
 

Tags: , , , ,

ಸರಕಾರವೋ, ಡಿ.ಕೆ.ಶಿ.ಯೋ, ಕೇಬಲ್ ಪ್ರಸಾರಕರೋ : ಮಾಧ್ಯಮಗಳ ಬಾಯಿಗೆ ಬಡಿಯಲು ಬ್ಲಾಕ್ಮೇಲ್ ರಾಜಕಾರಣ

(ಸಂಪುಟ 8 ಸಂಚಿಕೆ 49 – 7 ಡಿಸೆಂಬರ್ 2014 )

ಈ ವಾರ – ಗುರುಶಾಂತ್ ಎಸ್.ವೈ

0

 

   ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿ ಸದ್ದು-ಗದ್ದಲ ಮಾಡಿ ಗುದ್ದು ಹಾಕಬಹುದಾಗಿದ್ದ ಸುದ್ದಿಯೊಂದು ಸರಕಾರದ ‘ಸಾಂತ್ವನದ ಪ್ಯಾಕೇಜ್’ನಿಂದ ತಣ್ಣಗಾಗಿ ಹೋದ ವಿದ್ಯಾಮಾನ ಮಾಧ್ಯಮ ಕ್ಷೇತ್ರದಲ್ಲಿ ಈ ವಾರ ನಡೆದು ಹೋಗಿದೆ. ಈ ಸೋಮವಾರ ಮತ್ತು ಮಂಗಳವಾರ ಟಿ.ವಿ.9, ನ್ಯೂಸ್9 ಚಾನೆಲ್ಗಳು ಕೇಬಲ್ ನೆಟ್ವರ್ಕ್ನಲ್ಲಿ ಪ್ರಸಾರವಾಗದೇ ಬ್ಲಾಕ್ ಔಟ್ ಆಗಿದ್ದವು!

   ಕನ್ನಡದ ಜನಪ್ರಿಯ ವಾಹಿನಿಯಾದ ಟಿ.ವಿ.9 ರಾಜ್ಯ ಸರಕಾರದ ವಿರುದ್ದ ನಿರಂತರವಾಗಿ (ಅಪ)ಪ್ರಚಾರ ಮಾಡುತ್ತಿದೆಯೆಂದು, ಹೀಗೆ ಮುಂದುವರಿದಲ್ಲಿ ತಮ್ಮ ಉದ್ಯಮವು ಸರಕಾರದ ಅವಕೃಪೆಗೆ ಒಳಗಾಗಿ ಹೆಚ್ಚಿನ ತೆರಿಗೆಯ ಹೊರೆ ಮತ್ತು ಈಡೇರಬಹುದಾದ ತಮ್ಮ ಕೆಲವು ಮುಖ್ಯ ಬೇಡಿಕೆಗಳ ಲಾಭಗಳನ್ನು ಕಳೆದುಕೊಂಡು ನಷ್ಟ ಅನುಭವಿಸಬೇಕಾಗಿ ಬರಲಿರುವುದರಿಂದ ಆ ಸಮೂಹದ ಪ್ರಸಾರವನ್ನು ಯಾರೂ ಮಾಡಬಾರದೆಂಬುದು ಪ್ರಸಾರ ನಿಲ್ಲಿಸಿದವರ ಅಂಬೋಣ! ಹೀಗೆಯೇ ಮಾಡಬೇಕೆಂಬುದು ಕೇಬಲ್ ನೆಟ್ ವರ್ಕ್ಗಳ ಸಂಘದ ಆದೇಶ. ಬಹುತೇಕ ಎಲ್ಲಾ ಪ್ರಸಾರಕರು ಈ ತೀರ್ಮಾನವನ್ನು ಚಾಚೂ ತಪ್ಪದೇ ಜಾರಿಗೊಳಿಸಿದ್ದರು. ತಮ್ಮ ‘ಶಕ್ತಿ’ ಏನೆಂದು ಚಾನೆಲ್ನವರಿಗೆ ಬಿಸಿ ಮುಟ್ಟಿಸಿದ್ದರು. ಅರ್ಥಾತ್ ಅಧಿಕಾರಸ್ತರ ಆದೇಶ ಪಾಲಿಸಿದ್ದರು!

   ಇಂತಹ ‘ಬಿಸಿ’ಯ ಮೂಲಕ ಸಂಘಟಿತವಾಗಿ ಬ್ಲಾಕ್ಮೇಲ್ ಮಾಡುವಲ್ಲಿ ಈ ಖಾಸಗಿ ಪ್ರಸಾರಕರು ಮುಂದಾದುದು, ಯಶಸ್ವಿಯೂ ಆದುದು ನಿಜಕ್ಕೂ ದಿಗ್ಬ್ರಮೆ ಹುಟ್ಟಿಸುವ ಸಂಗತಿ. ಯಾವುದೇ ಒಂದು ವಾಹಿನಿಯು ಏನನ್ನು ಪ್ರಸಾರ ಮಾಡಬೇಕು, ಮಾಡಬಾರದು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಅದರ ಸಂಪಾದಕೀಯ ವಿಭಾಗ ಮತ್ತು ಆಡಳಿತ ಮಂಡಳಿ. ಕೇವಲ ಪ್ರಸಾರ ಮಾಡುವುದು ಕೇಬಲ್ ನೆಟ್ ವರ್ಕ್ ದಾರರ ಕೆಲಸ, ಇದೇನೂ ಪುಕ್ಕಟೆ ಸೇವೆಯೇನಲ್ಲ. ಈ ಸೇವೆಗೆ ಗ್ರಾಹಕರಿಂದ ಸೇವಾ ಶುಲ್ಕವನ್ನು ಪಡೆಯಲಾಗುತ್ತದೆ ಕೂಡ. ಏನಾದರೂ ಆಕ್ಷೇಪಗಳಿದ್ದರೆ ಅದು ಸಂಬಂಧಿತರ ನಡುವಿನ ವ್ಯವಹಾರ. ಗ್ರಾಹಕರಾಗಿ, ನಾಗರೀಕ ಪ್ರಜೆಗಳಾಗಿರುವವರ ಹಕ್ಕು. ಮಾಹಿತಿ ಪಡೆಯುವ ಅವರ ಹಕ್ಕನ್ನು ಯಾರೂ ಕಸಿಯುವಂತಿಲ್ಲ, ಬೇಕಾ ಬಿಟ್ಟಿಯಾಗಿ ನಿರ್ಬಂಧಿಸುವಂತಿಲ್ಲ.

   ಒಂದು ವೇಳೆ ಸರಕಾರಕ್ಕೇನಾದರೂ ಆಕ್ಷೇಪಗಳಿದ್ದರೆ ಅದನ್ನು ನೇರವಾಗಿ ಚಾನೆಲ್ ಜೊತೆಗೆ ಸಂವಾದಿಸಬಹುದು ಅಥವಾ ಕಾನೂನಿನ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಗ್ರಾಹಕರಿಗೆ ಸೇವೆ ಒದಗಿಸುವ ಕೇಬಲ್ ನೆಟ್ ವರ್ಕ್ದಾರರು ಸರಕಾರದ ಪಕ್ಷ ವಹಿಸುವಂತೆ ಮಾಡಿದ್ದೇಕೆ? ಅವರು ವಹಿಸಿಕೊಂಡಿದ್ದೇಕೆ? ಅಥವಾ ತಾನೇ ಸರಕಾರವಾಗಿ ಅಥವಾ ಕಾನೂನು ಜಾರಿಗೊಳಿಸುವ ಸಂಸ್ಥೆಯಾಗಿ ದಂಡಿಸುವ ಕ್ರಮ ಜಾರಿಗೊಳಿಸಿದ್ಹೇಗೆ? ಸಂವಿಧಾನ ಕೊಡ ಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವ, ‘ಪ್ರಜಾಪ್ರಭುತ್ವದ ನಾಲ್ಕನೆಯ’ ಸ್ಥಂಬದ ಮೇಲೆ ಧಾಳಿ ಮಾಡುವ ಧಾಷ್ಟ್ರ್ಯವನ್ನು ತೋರಿದ್ದು ಹೇಗೆ?

   ಇದು ಒಂದು ಮಗ್ಗಲಿನ ಸಂಗತಿಯಾದರೆ, ಮತ್ತೊಂದರಲ್ಲಿ ಸರಕಾರದ ಪಾತ್ರವೇನು? ಸಂವಿಧಾನಾತ್ಮಕವಾಗಿ ಅಪಾರವಾದ ಅಧಿಕಾರಗಳನ್ನು ಹೊಂದಿರುವ ನಾಗರೀಕ ಸರಕಾರವೊಂದು ಖಾಸಗಿ ಕೇಬಲ್ ನೆಟ್ ವರ್ಕ್ ಪೂರೈಕೆದಾರರ ಮೂಲಕ ತನ್ನ ಕ್ರಮವನ್ನು ಜಾರಿಗೊಳಿಸಲು ಮುಂದಾಗಬೇಕಿತ್ತೇ? ಹೀಗೆ ಯೋಚಿಸುವಾಗ ಇದು ಕಣ್ಣಿಗೆ ಕಾಣುವ, ಕೇಳಿಸುವ ಚಿತ್ರ-ಮಾತುಗಳಷ್ಟು ಸರಳ ಪ್ರಕರಣವಲ್ಲವೆಂಬುದು ಗೊತ್ತಾಗುತ್ತದೆ. ಇದರಲ್ಲಿ ಸಂವಿಧಾನಾತ್ಮಕ, ಕಾನೂನಾತ್ಮಕ ಸಂಗತಿಗಳ ಉಲ್ಲಂಘನೆಯ ಪ್ರಕರಣಕ್ಕಿಂತ ಇನ್ನೂ ಹೆಚ್ಚಿನ ಸಂಗತಿಗಳು ಇರುವುದು ಸ್ಪಷ್ಟ. ಅಂದರೆ ಸರಕಾರ ಅರ್ಥಾತ್ ಅಧಿಕಾರಸ್ಥರು ತಮಗಾಗದವರನ್ನು ಹಣಿಯಲು ಅಡ್ಡದಾರಿ ಹಿಡಿದಿದ್ದಾರೆ! ಹಾಗಾದರೆ ಅಂತಹ ಸಂಗತಿಗಳಾದರೂ ಏನಿವೆ! ಸಾಮಾಜಿಕ ನ್ಯಾಯದ ಬಗ್ಗೆ ದಿನದ 24 ಗಂಟೆಗಳೂ ಬೊಬ್ಬೆ ಹೊಡೆಯುವ ಸಿದ್ಧರಾಮಯ್ಯನವರ ಸರಕಾರ ಹೀಗೇಕೆ ಮಾಡಿತು?

   ಸಂಗತಿ ಸ್ಪಷ್ಟ, ಟಿ.ವಿ.9, ನ್ಯೂಸ್9 ಚಾನೆಲ್ಗಳು ಕಾಂಗ್ರೆಸ್ ಸರಕಾರದಲ್ಲಿ ‘ಪವರ್’ ಫುಲ್ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ರವರು ನಡೆಸಿರುವರು ಎನ್ನಲಾದ ಹಗರಣಗಳ ಬಗ್ಗೆ ಈ ಚಾನೆಲ್ಗಳು ಪ್ರಸಾರಿಸುತ್ತಿವೆಯಂತೆ. ಈ ಸೋಮವಾರ ಭಾರಿ ಹಗರಣಗಳ ಬಗ್ಗೆ ಸ್ಪೋಟಕ ವರದಿಯನ್ನು ಪ್ರಸಾರಿಸುವ ಕಾರ್ಯಕ್ರಮವಿದ್ದುದರಿಂದ ಅದು ರಾಜ್ಯದ ಜನತೆಗೆ ತಲುಪಬಾರದು ಎಂಬ ಉದ್ದೇಶದಿಂದ ಆ ಎರಡು ಚಾನೆಲ್ಗಳ ಪ್ರಸಾರವನ್ನು ನಿರ್ಬಂಧಿಸಲಾಯಿತು. ಉಪಗ್ರಹಗಳ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಪಡೆಯುವ ಟಿ.ವಿ.ಗಳನ್ನು ಹೊರತು ಪಡಿಸಿದರೆ ಬಹುತೇಕವಾಗಿ ಎಲ್ಲರೂ ಖಾಸಗಿ ಕೇಬಲ್ ನೆಟ್ಗಳನ್ನೇ ಅವಲಂಬಿಸಬೇಕಿದೆ. ಈ ಸಂಗತಿಯನ್ನೇ ಬಳಸಿಕೊಂಡು ತನ್ನ ಹಗರಣಗಳ ಮಾಹಿತಿಯು ಜನರಿಗೆ ಹೋಗದಂತೆ ತಡೆಯಲು ಸಚಿವ ಡಿ.ಕೆ.ಶಿ. ಮುಂದಾಗಿದ್ದಾರೆಂದು ಕೆಲವು ಮುದ್ರಣ ಮಾಧ್ಯಮದಲ್ಲಿ ವರದಿಯಾಗಿರುವುದು ಆಧಾರ ರಹಿತವೇನಲ್ಲ. ಈ ಪ್ರಕರಣದಲ್ಲಿ ತನ್ನ ಕೈ ಏನೂ ಇಲ್ಲವೆಂದು ಸಚಿವ ಮಹಾಶಯ ಅಲ್ಲಗೆಳೆದರಾದರೂ ಚಾನೆಲ್ ಮೇಲೆ ದೂಷಣೆಯನ್ನು ನಿಲ್ಲಿಸಲಿಲ್ಲ. ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದವ, ಮುಂದೆ ಶಾಸಕನಾಗಿ, ಸಚಿವನಾಗಿ ಬೆಳೆದುದು, ಒಬ್ಬ ಸಾಮಾನ್ಯ ರೈತನ ಮಗ ಇಂದು ಸಾವಿರಾರು ಕೋಟಿ ರೂಪಾಯಿಗಳ ವಹಿವಾಟಿನ ‘ರಾಜಕೀಯ ಉದ್ಯಮಿಯಾಗಿ’ ಬೆಳೆದುದನ್ನು, ಇಂದು ಮುಖ್ಯಮಂತ್ರಿ ಗದ್ದುಗೆಗೆ ಗಾಳ ಹಾಕಿ ಕುಳಿತಿರುವುದನ್ನು ಕಂಡಿರುವ ನಾಡಿನ ಜನತೆಗೆ ಅವರ ‘ಸಾಧನೆಯ ಹಾದಿ’ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ.

   ಟ.ವಿ.9, ನ್ಯೂಸ್9 ಪ್ರಶ್ನಾತೀತವೆಂಬುದು ನಮ್ಮ ಅಭಿಪ್ರಾಯವೇನಲ್ಲ. ಎಲ್ಲಾ ಖಾಸಗಿ ಚಾನೆಲ್ಗಳ ಬಲ, ದೌರ್ಬಲ್ಯ, ಮಾಧ್ಯಮ ಉದ್ದಿಮೆಯ ಲಾಭದ ಸೂತ್ರಗಳ ಅನುಕರಣೆಯಿಂದ ಅದು ಹೊರತಲ್ಲ. ಆದರೆ ಅಪಾರ ಪ್ರಮಾಣದ ಹಣ, ಬಲ, ಅಧಿಕಾರಗಳನ್ನು ಹೊಂದಿರುವ ಸಚಿವರೊಬ್ಬರು ಭಿನ್ನಾಭಿಪ್ರಾಯವಿದೆಯೆಂದು, ತನ್ನ ಸ್ವಾರ್ಥ ಹಿತಾಸಕ್ತಿಗೆ ಪೂರಕವಾಗಿಲ್ಲವೆಂದು ಕೇಬಲ್ ಸಂಘದವರ ಮೂಲಕ ದಮನದ ಕೃತ್ಯಗಳಿಗೆ ಮುಂದಾಗುವುದು ಉಗ್ರ ಖಂಡನೀಯ. ಮತ್ತು ಇದಕ್ಕೆ ಕುಣಿದಿರುವ ಕೇಬಲ್ ಸಂಘದ ಕ್ರಮವೂ ಖಂಡನಾರ್ಹ.

   ಈ ಪ್ರಕರಣವು ಬಿಗಾಡಿಯಿಸುವ ಹಂತಕ್ಕೆ ಹೋಗುವಾಗ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಚಾನೆಲ್ ಪ್ರಸಾರವಾಗುವಂತೆ ಕ್ರಮ ವಹಿಸಿ ಬಗೆಹರಿಸಿದ್ದಾರಂತೆ. (ಈ ನಡುವೆ ಸರಕಾರ/ಸಚಿವ, ಚಾನೆಲ್ ಮತ್ತು ಕೇಬಲ್ ಸಂಘಗಳ ನಡುವೆ ಆದ ಡೀಲ್ ಏನು ಅಂತಾ ಬಹಿರಂಗವಾಗಿಲ್ಲ) ಆದರೆ ಅವರೂ ಸಹ ದಮನದ ಕೃತ್ಯಗಳನ್ನು ತಡೆಯುವ, ಕಾರಣರಾದವರಿಗೆ ಎಚ್ಚರಿಸುವ ಗೋಜಿಗೇ ಹೋಗಿಲ್ಲ! ಅಭಿವ್ಯಕ್ತಿ ಸ್ವಾತಂತ್ರ್ಯ ಅಬಾಧಿತವೆಂಬ ಸಂದೇಶವನ್ನೂ ನೀಡಿಲ್ಲ. ಇಂತಹ ‘ಖಾಜಿ ನ್ಯಾಯ’ವು ‘ರಾಜೀ ನ್ಯಾಯವಾಗಿ’ ಸಿದ್ಧರಾಮಯ್ಯನವರ ಕುರ್ಚಿ ಅಲುಗಾಟದ ಕಂಪನಕ್ಕೆ ಸ್ವಲ್ಪ ಮಾತ್ರ ಸಾಂತ್ವನ ಹೇಳೀತು ಅಷ್ಟೇ.

   ಮೂಲತಃ ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವ ವಿರೋಧಿಯಾಗಿ ಸರ್ವಾಧಿಕಾರಿ ಪ್ರವೃತ್ತಿಯನ್ನು ತನ್ನ ಅಂತರ್ಗತವಾಗಿ ಹೊಂದಿದೆ. ರಾಜ್ಯದ ಕಾಂಗ್ರೆಸ್ ಸರಕಾರ, ಅದರ ನಾಯಕರು ಅದಕ್ಕಿಂತ ವ್ಯತಿರಿಕ್ತವಾಗಿ ಹೇಗೆ ನಡೆದುಕೊಂಡಾರು? ಉದಾರೀಕರಣದ ಮಂತ್ರಕ್ಕೆ ಅನುಗುಣವಾಗಿ ಚಾನೆಲ್ಗಳು, ಕೇಬಲ್ ಖಾಸಗಿ ಪ್ರಸಾರದ ಅನಿಷ್ಠಗಳ ಜನಕರೂ ಇವರೇ ಆಗಿರುವುದರಿಂದ ಮೂಲಕ್ಕೆ ಕೈಹಾಕಲಾದರೂ ಸಾಧ್ಯವೆಲ್ಲಿ?

   ಈ ಶಕ್ತಿಶಾಲಿ ಮಾಧ್ಯಮದ ‘ಬಹುಮುಖ’ ಪ್ರಯೋಜನವನ್ನು ಪಡೆಯಲು ಎಲ್ಲರೂ ಹವಣಿಸುತ್ತಾರೆ. ತಮ್ಮ ತುತ್ತೂರಿಯಾಗಿರಬೇಕೆಂದು ಆಳುವವರು, ಅಧಿಕಾರಸ್ಥರು ಬಯಸಿದರೆ, ಮಾಧ್ಯಮಗಳ ಮಾಲೀಕರು ತಮ್ಮ ತುತ್ತಿನ ಚೀಲವು ಕಾಂಚಾಣದ ಕಣಜವಾಗಬೇಕೆಂದು ಹಪಾಹಪಿಸುತ್ತಾರೆ. ಈಗಾಗಲೇ ವೃತ್ತ ಪತ್ರಿಕೆಗಳ ಪ್ರಸಾರದಲ್ಲಿ, ಅಲ್ಲಿನ ಅನಾರೋಗ್ಯಕಾರಿ ಸ್ಪರ್ಧೆಯಲ್ಲಿ ವಿತರಕರ ನಡುವೆ ಮಾಫಿಯಾಗಳ ಹಿಡಿತ, ಅನಾಹುತಕಾರಿ ಸಮರ ಜಾಗತಿಕವಾಗಿಯೂ, ದೇಶೀಯವಾಗಿಯೂ ನೋಡಿಯಾಗಿದೆ. ಈ ಕೇಬಲ್ ಪ್ರಸಾರಕರ ನಡುವೆ ಮಾಫಿಯಾಗಳ ದುಷ್ಕೃತ್ಯಕ್ಕೆ ಈ ಪ್ರಕರಣವೂ ಒಂದು ಜೀವಂತ ಸಾಕ್ಷಿ. ಇಲ್ಲಿ ಉಳ್ಳವರ ‘ಅಭಿವೃದ್ಧಿ’ಯ ರಾಜಕಾರಣ, ಇದರ ಆಧಾರಿತ ಮಾಧ್ಯಮಗಳು, ಈ ಉದ್ದಿಮೆಯ ಶಕ್ತಿಗಳ ಎದುರಲ್ಲಿ ಗ್ರಾಹಕರಾದ ಜನರು ಬಲಿಗಳು.

…….ಎದ್ದೇಳು ಗ್ರಾಹಕ, ಎದ್ದೇಳು!

 
Comments Off

Posted by on 03/12/2014 in ಈ ವಾರ

 

Tags: , , , , , , , ,

ಸೌಜನ್ಯಳ ಪ್ರಕರಣಕ್ಕೆ ಎರಡು ವರುಷಗಳು ನಮ್ಮೆದುರು ಇರುವುದೀಗ ಪ್ರಶ್ನೆಗಳ ಸರಮಾಲೆ

( ಸಂಪುಟ 8, ಸಂಚಿಕೆ 44, 2 ನವೆಂಬರ್ 2014 )

- ಎಸ್. ವೈ. ಗುರುಶಾಂತ್

ಸೌಜನ್ಯ
ಸೌಜನ್ಯ

   ಅಕ್ಟೋಬರ್ 9, ಕುಮಾರಿ ಸೌಜನ್ಯಾಳ ಮೇಲಿನ ಅತ್ಯಾಚಾರ ಮತ್ತು ಬರ್ಬರ ಕಗ್ಗೊಲೆಯ ಪ್ರಕರಣ ನಡೆದ ದಿನ. ಇಂದಿಗೆ ಎರಡು ವರುಷಗಳೇ ಗತಿಸಿ ಹೋದವು. ಇದರಲ್ಲಿ ನ್ಯಾಯ ಸಿಕ್ಕಿತೇ? ಅತ್ಯಾಚಾರಿಗಳು, ಕೊಲೆಪಾತಕರನ್ನು ಪತ್ತೆ ಹಚ್ಚಲಾಯಿತೇ? ದಂಡಿಸಲಾಯಿತೇ? ಈ ಪ್ರಕರಣ ಯುವತಿಯರ ಮೇಲೆ, ಮಹಿಳೆಯರ ಮೇಲೆ ನಿತ್ಯ ನಡೆಯುವ ದೌರ್ಜನ್ಯಗಳಿಗೆ, ದೌರ್ಜನ್ಯಕಾರರಿಗೆ ತಕ್ಕ ಪಾಠವನ್ನು ಕಲಿಸುವಂತಾಯಿತೇ? ತಡೆಯುವಂತಾಯಿತೇ? ಈಗ ನಮ್ಮೆದುರು ಪ್ರಶ್ನೆಗಳ ಸರಮಾಲೆಗಳು. . .!

   ಕು.ಸೌಜನ್ಯ 17 ವಯಸ್ಸಿನ, ಧರ್ಮಸ್ಥಳ-ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪಿ.ಯು.ಸಿ. ವಿದ್ಯಾರ್ಥಿನಿಯಾಗಿದ್ದಳು. 2012ರ ಅಕ್ಟೋಬರ್ 9ರಂದು ಸಂಜೆ ಮನೆಯತ್ತ ಹೊರಟಾಗ ಅಪಹರಿಸಲ್ಪಟ್ಟು ಅತ್ಯಂತ ಹೇಯವಾಗಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿ ಹೋದಳು. ಈ ಪ್ರಕರಣ ಬೆಳ್ತಂಗಡಿ ತಾಲೂಕಿನಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ ನಂತರ ರಾಜ್ಯದಲ್ಲಿಯೂ ಎಲ್ಲರನ್ನೂ ಬೆಚ್ಚಿ ಬೀಳಿಸಿತು. ಆತಂಕ, ಆಕ್ರೋಶ ಪ್ರತಿಭಟನೆಯಾಗಿ ಎಲ್ಲೆಡೆ ಹಬ್ಬಿತು. ಯಾರೋ ಒಬ್ಬ ಸಿಕ್ಕನೆಂದು 50ರ ವಯಸ್ಸಿನ ಸಂತೋಷ್ರಾವ್ ಎನ್ನುವಾತನನ್ನು ಬಂಧಿಸಿ ಆತನೇ ಆರೋಪಿ, ಅಪರಾಧಿ ಎಂದು ಪೋಲೀಸ್ ಇಲಾಖೆ ಕೈ ತೊಳೆದುಕೊಳ್ಳಲು ಮುಂದಾಯಿತು. ಆದರೆ ಈ ಪ್ರಕರಣ ಒಂದು ಸಾಧಾರಣ ಘಟನೆಯಲ್ಲ, ಈ ಧರ್ಮಸ್ಥಳ ಪರಿಸರದಲ್ಲಿ ನಡೆಯುತ್ತಲೇ ಇರುವ ನೂರಾರು (ಹಿಂದೆ 462 ಅನುಮಾನಾಸ್ಪದ ಸಾವುಗಳು ಅಂತಾ) ಪ್ರಕರಣಗಳ ಸರಮಾಲೆಯಲ್ಲಿ ಒಂದು. ಇವುಗಳ ಹಿಂದೆ ಪ್ರಬಾವಿಗಳ ಒಂದು ದೊಡ್ಡ ತಂಡವೇ ಇದೆ, ಅದನ್ನು ಪತ್ತೆ ಹಚ್ಚಬೇಕು ಎಂಬ ಆಗ್ರಹ ಹೆಚ್ಚಾಯಿತು. ಸಾರ್ವಜನಿಕ ಒತ್ತಡ ಹೆಚ್ಚಾದಾಗ ಸಿ.ಐ.ಡಿ ತನಿಖೆ ವಹಿಸಿದ್ದು, ಅದು ತನಿಖೆಯಲ್ಲಿ ಯಾವುದೇ ಮುನ್ನಡೆ ಸಾಧಿಸದೇ, ಪ್ರಭಾವಿಗಳನ್ನು ಪತ್ತೇ ಹಚ್ಚದೇ ಮುಗಿಸಿದ್ದು ಆಯ್ತು. ಅಂದರೆ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರ, ಆಡಳಿತ ಯಂತ್ರ ಅತ್ಯಂತ ಜಾಗರೂಕತೆಯಿಂದ ಪ್ರಯತ್ನಿಸುವುದು ಕಂಡಿತು. ಆಗ ಅಧಿಕಾರದಲ್ಲಿದ್ದುದು ಬಿ.ಜೆ.ಪಿ.ಸರಕಾರ.

   ದೇಶದಲ್ಲಿ, ರಾಜ್ಯದಲ್ಲಿ ನಡೆಯುತ್ತಲಿದ್ದ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಸಾರ್ವಜನಿಕ ಎಚ್ಚರ, ಪ್ರತಿಭಟನೆಗಳು ಬೆಳೆಯುತ್ತಿರುವಾಗ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಲೇಬೇಕೆಂಬ ಹೋರಾಟಕ್ಕೆ ವಿಶೇಷ ತಿರುವು ಸಿಕ್ಕಿದ್ದು ಬೆಳ್ತಂಗಡಿಯಲ್ಲಿ ಡಿ.ವೈ.ಎಫ್.ಐ, ಜೆ.ಎಂ.ಎಸ್. ಮತ್ತು ಸಿಪಿಐ(ಎಂ) ಮುಂತಾದ ಸಂಘಟನೆಗಳು ಧೃಡವಾಗಿ ನಿಂತದ್ದರಿಂದ, ರಾಜಿ ಇಲ್ಲದೇ ಹೋರಾಟವನ್ನು ಹರಿತವಾಗಿ ನಡೆಸಿದ್ದರಿಂದ. ಇದು ಜಿಲ್ಲೆಯಲ್ಲಿಯೂ, ರಾಜ್ಯದಲ್ಲಿಯೂ ವ್ಯಾಪಕವಾಗಿ ಹರಡಿತು. 2013 ರಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ ತನಿಖೆಯನ್ನು ಆಳವಾಗಿ ನಡೆಸಲು ಸಿ.ಬಿ.ಐ.ಗೆ ವಹಿಸುವಂತೆ ಪ್ರಬಲ ಹೋರಾಟ ನಡೆದ ಬಳಿಕವೇ ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ (ಧರ್ಮಸ್ಥಳದ ವೀರೇಂದ್ರ ಹೆಗಡೆಯವರ ದೈವಾನುಮತಿ ಬಳಿಕ!) ಸಿಬಿಐ ತನಿಖೆಗೆ ವಹಿಸಲಾಯಿತು.

   ಆದರೆ ಹೋರಾಟ ನಿಂತಿಲ್ಲ, ನಿಲ್ಲುವುದೂ ಇಲ್ಲ. ವರುಷವಾದರೂ ಸಿ.ಬಿ.ಐ. ವಿಶೇಷ ತಂಡ ತನಿಖೆಯಲ್ಲಿ ಒಂದಿಷ್ಟೂ ನಿರ್ಣಾಯಕ ಪ್ರಗತಿಯನ್ನು ಕಂಡಿಲ್ಲ. ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು, ಪ್ರಭಾವಿಗಳನ್ನು ಪತ್ತೆ ಹಚ್ಚಲಿಲ್ಲ. ಮೇಲಾಗಿ, ಇದೀಗ ನರೇಂದ್ರ ಮೋದಿಯವರ ಸರಕಾರ! ಅದು ಹಿಂದಿದ್ದ ತನಿಖಾ ಅಧಿಕಾರಿಗಳನ್ನು ಬದಲಾಯಿಸಿದೆ. ಈ ತಂಡ ಬಂದ ನಂತರ ತಣ್ಣಗೆ ಕೂತಿದೆ. ಹಿಂದಿನ ತಂಡಕ್ಕಿದ್ದ ಕನಿಷ್ಠ ಚುರುಕೂ ಇಲ್ಲವಾಗಿದೆ. ಮೇಲಾಗಿ ಈಗಾಗಲೇ ತನಿಖೆಗೆ ನಡೆಸಿದ್ದವರನ್ನೇ ಮರು ವಿಚಾರಣೆ ನಡೆಸುತ್ತಿದೆ. ಅಂದರೆ ನಿಜಕ್ಕೂ ಸಿ.ಬಿ.ಐ.ನ ಈ ತನಿಖಾ ತಂಡ ಪ್ರಭಾವಿ ಆರೋಪಿಗಳನ್ನು, ಪತ್ತೇ ಹಚ್ಚುವುದೇ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದೇ ಅನುಮಾನವಾಗಿದೆ.

   ಈ ‘ನಮೋ’ ತಂಡದ ವೈಖರಿ ಅರ್ಥವಾಗದಿರುವುದೇನಲ್ಲ. ಮುಖ್ಯವಾಗಿ ಈ ಪ್ರಕರಣದಲ್ಲಿ ಕೇಳಿ ಬಂದ ಪ್ರಮುಖ ಹೆಸರು ಧರ್ಮಸ್ಥಳದ ವೀರೇಂದ್ರ ಹೆಗಡೆ ಮತ್ತವರ ಸಹೋದರರು, ನಿಕಟ ಪರಿವಾರದವರು. ಅತ್ಯಾಚಾರ ನಡೆಸಿದವರಲ್ಲಿ ಹೆಗಡೆಯವರ ಸಹೋದರನ ಮಗ ಮತ್ತು ಅವರ ನಿಕಟವರ್ತಿಗಳ ತಂಡ ಎಂಬ ದೂರು ಇದೆ. ಈ ಕಾರಣಗಳಿಂದಲೇ ತನಿಖೆ ತೀವ್ರವಾಗಿ, ನಿಷ್ಠುರವಾಗಿ ನಡೆಯದೇ ಕಾಲಹರಣಕ್ಕಾಗಿ ತೆವಳುತ್ತಿದೆ ಎಂಬುದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಹೆಗಡೆಯವರು ಸಂಘಪರಿವಾರಕ್ಕೆ ಸದಾ ಸೇರಿದವರು, ಈ ವರುಷದಲ್ಲಿ ನಡೆಯಲಿರುವ ವಿಶ್ವ ಹಿಂದೂ ಪರಿಷತ್ನ ಸುವರ್ಣ ಮಹೋತ್ಸವದ ಸ್ವಾಗತ ಸಮಿತಿಯ ಗೌರವಾದ್ಯಕ್ಷರು! ಬಿಜೆಪಿಯ ಸಮರ್ಥಕರು. ಧರ್ಮದ ರಕ್ಷಣೆಯ ಹೊದಿಕೆಯಲ್ಲಿ ರಕ್ಷಿತರು! ಈಗಂತೂ ಮೋದಿ ಸರಕಾರ ಕೇಂದ್ರದಲ್ಲಿ ಆಸೀನ. ಬಿಜೆಪಿಯವರ ಮಾತಿನಲ್ಲೇ ಹೇಳುವುದಾದರೆ ಕೇಂದ್ರದ ಯಜಮಾನನ ‘ಸಾಕು ನಾಯಿ’. ಇನ್ನು ಯಜಮಾನನ ಅಣತಿ ಧಿಕ್ಕರಿಸುವುದೆಂದು ಭಾವಿಸಲಾದಿತೇ?

   ಈ ಪ್ರಕರಣ ಸಿಬಿಐ ಗೆ ವಹಿಸುವ ಮೊದಲೇ ಲಭ್ಯವಿದ್ದ ಬಹುತೇಕ ಎಲ್ಲಾ ಸಾಕ್ಷಿಗಳನ್ನು ನಾಶಪಡಿಸಲಾಗಿದೆ. ಉದಾಹರಣೆಗೆ ಈ ಪ್ರಕರಣದಲ್ಲಿನ ಆರೋಪಿ ಧೀರಜ್ ಜೈನ್ ಎಂಬಾತನ ಮನೆಯ ಕೆಲಸ ಮಾಡುತ್ತಿದ್ದ ವಾರಿಜಾ ಆಚಾರ್ತಿ (55) ‘ಆತ್ಮಹತ್ಯೆ ಮಾಡಿಕೊಂಡಳು! ಎಂದು ಹೇಳಲಾಯಿತು. ಈಕೆಗೆ ಈ ಪ್ರಕರಣದ ಪ್ರಮುಖ ಮಾಹಿತಿಗಳಿದ್ದು ಮುಖ್ಯ ಸಾಕ್ಷಿಯಾಗಿದ್ದಳು. ಹಾಗೆಯೇ ಈಗ ಬಂಧಿಸಲಾದ ಮಾನಸಿಕ ಅಸ್ವಸ್ತ ಸಂತೋಷ್ರಾವ್ನನ್ನು ಹಿಡಿದು ಕೊಟ್ಟವನೆಂದು ಹೇಳಲಾದ ರವಿ ಪೂಜಾರಿಯೂ ಒಬ್ಬ ಮುಖ್ಯ ಸಾಕ್ಷಿ, ಆತನೂ ಕೂಡ ‘ಆತ್ಮಹತ್ಯೆ ಮಾಡಿಕೊಂಡನಂತೆ! ಇನ್ನು ಹತ್ಯೆಗೀಡಾದ ಸೌಜನ್ಯಳ ಪೋಸ್ಟ್ಮಾರ್ಟಂ ವರದಿಯಲ್ಲೂ ಹಲವು ಅಂಶಗಳು ಮರೆಯಾಗಿವೆ. ಅಂದರೆ ಬಹುತೇಕ ಸಾಕ್ಷಿ ಆಧಾರಗಳು ಇಲ್ಲವಾದ ಬಳಿಕ ಹಿಡಿಯುವುದು ಯಾರನ್ನು? ಶಿಕ್ಷಿಸುವುದೂ ಯಾರನ್ನು? ತಡೆಯುವುದು ಏನನ್ನು?

   ಈಗ ಬಂಧಿತನಾಗಿರುವ ಆರೋಪಿ ಸಂತೋಷ್ರಾವ್ ಮಾನಸಿಕ ಅಸ್ವಸ್ಥ, ಮೇಲಾಗಿ ಲೈಂಗಿಕ ನ್ಯೂನತೆಗಳಿರುವ ಅಸಮರ್ಥ ಎಂದು ವರದಿ ಬಂದಿವೆ. ಹೀಗಾಗಿ ಖಂಡಿತಕ್ಕೂ ನಿಜ ಆರೋಪಿಗಳು ಬೇರೆಯೇ ಇರುವುದರಲ್ಲಿ ಅನುಮಾನವಿಲ್ಲ.

   ಮೇಲಾಗಿ ಈ ವಿಷಯದಲ್ಲಿ ಇನ್ನೂ ಕೆಲವು ಆಟಗಳೂ ನಡೆದಿವೆ. ಸೌಜನ್ಯ ಪ್ರಕರಣವನ್ನು ಬೇಧಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ವ್ಯತಿರಿಕ್ತವಾಗಿ ಮತ್ತು ಹೆಗಡೆ ಪಾಳೇಗಾರಿ ‘ಪ್ರಭುತ್ವದ ವಿರುದ್ಧ ಜನರ ಆಕ್ರೋಶವನ್ನು ಬೇರೆಡೆಗೆ ತಿರುಗಿಸುವ ಯತ್ನದ ಭಾಗವಾಗಿ ಸಂಘಪರಿವಾರದ ತಿಮರೋಡಿ ಈಗಲೂ ಹೊಸ ನಾಟಕ ಶುರುವಿಟ್ಟು ಕೊಂಡಿದ್ದಾನೆ. ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿದವರಿಗೆ ಶಿಕ್ಷೆ ದೊರೆಯುವಂತಾಗಲು ‘ಸಹಸ್ರ ಚಂಡಿಕಾ ಯಜ್ಞ’ ವನ್ನು 1008 ಮುತೈದೆಯವರನ್ನೊಡಗೂಡಿಸಿ ಮಾಡಿದ್ದಾರೆ! ಗಂಭಿರವಾದ ಸಮಸ್ಯೆಗೆ ನೇರ ಹೋರಾಟಕ್ಕೆ ಇಳಿಯದೇ, ನಮ್ಮ ಕಾನೂನಿನಂತೆ ಶಿಕ್ಷೆ ಕೊಡಿಸದೇ ದೇವರಿಂದ ಶಿಕ್ಷೆ ಕೊಡಿಸಲು, ಧಾರ್ಮಿಕ ಹೆಸರಿನಲ್ಲಿ ಹಾದಿ ತಪ್ಪಿಸುವ ಪ್ರಯತ್ನವಲ್ಲದೇ ಬೇರೇನಲ್ಲ. ಜೊತೆಗೆ ಕಮ್ಯೂನಿಸ್ಟರ ವಿರುದ್ಧ ವೃಥಾ ಆರೋಪಗಳನ್ನು ಮಾಡಿ ಪತ್ರಿಕಾಗೋಷ್ಠಿ ನಡೆಸಿದ್ದಾದರೂ ಯಾವ ಉದ್ದೇಶದಿಂದ? ಧರ್ಮರಕ್ಷಕ ಪಾಳೇಗಾರರನ್ನು ಮೆಚ್ಚಿಸಲು ಅಲ್ಲವೇ? ತಮಾಷೆಯೆಂದರೆ ಇಂತಹ ತಿಮರೋಡಿಯ ಮೇಲೆ ಧರ್ಮಸ್ಥಳದ ಹೆಗಡೆ ಪರಿವಾರ ಕೇಸ್ ಹಾಕಿದೆಯಂತೆ! ಈ ಇಬ್ಬರೂ ಪಾಳೇಗಾರರು ಎಂಬುದರಲ್ಲಿ ಸಂಶಯವಿಲ್ಲ.

   ಈಗಲೂ ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ. ಕೇಂದ್ರಕ್ಕೆ ವರ್ಗಾಯಿಸಿ ಹೊಣೆ ತೊಳೆದುಕೊಂಡಿದೆ.
ಈ ಎಲ್ಲಾ ಆಟಗಳು, ವಿಳಂಬಗಳ ವಿರುದ್ಧ ಇತ್ತೀಚೆಗೆ ಡಿ.ವೈ.ಎಫ್.ಐ ಮತ್ತಿತರ ಪ್ರಗತಿಪರ ಸಂಘಟನೆಗಳು ಮತ್ತು ಸಿಪಿಎಂ ಪಕ್ಷಗಳು ಸಿಬಿಐ ತನಿಖೆ ತೀವ್ರಗೊಳಿಸುವಂತೆ, ಕೂಡಲೇ ಮದ್ಯಂತರ ವರದಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ. ಇನ್ನಷ್ಟು ವಿಸ್ತಾರಗೊಳ್ಳಲಿದೆ.
ಸೌಜನ್ಯಳ ಮೇಲೆ ಅತ್ಯಾಚಾರ ನಡೆದು, ಬರ್ಬರ ಕೊಲೆಯಾಗಿ ಎರಡು ವರುಷಗಳು ಕಳೆದಿವೆ. ಹೋರಾಟದ ಧ್ವನಿ ಎತ್ತರಗೊಂಡಿದೆ. ಆದರೆ. . . .?!

 
Comments Off

Posted by on 27/10/2014 in ಈ ವಾರ

 

Tags: , , ,

ಉದ್ಯೋಗದ ಹಸಿವು ಹಿಂಗಿಸದ ಹೂಡಿಕೆ ನೀತಿಗಳು

- ಗುರುಶಾಂತ್ ಎಸ್.ವೈ. ( ಸಂಪುಟ 8, ಸಂಚಿಕೆ 43, 26 ಅಕ್ಟೋಬರ್  2014)

 

   ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡುವುದೆಲ್ಲಾ ಅಭಿವೃದ್ಧಿಗೆ ಸಂಬಂಧಿಸಿದ್ದೇ ಆಗಿದೆ ಎಂದು ಬಿಂಬಿಸಲಾಗುತ್ತಿದೆ. ಅದು ಮೋದಿಯೇ ಆಗಲಿ, ಇಲ್ಲಿ ಸಿದ್ಧರಾಮಯ್ಯನವರೇ ಇರಲಿ ಅವರ ಸಾಮಥ್ರ್ಯ ಸಾಬೀತಾಗುವುದು ಎಷ್ಟು ಬಂಡವಾಳ ಬಳಿದು ತರುತ್ತಾರೆ ಎಂಬುದರಲ್ಲಿದೆ ಅಂತಾರೆ ವಾಣಿಜ್ಯ ಪಂಡಿತರು! ಸರಕಾರ ಬಿಜೆಪಿಯೋ, ಕಾಂಗ್ರೆಸ್ಸೋ ಯಾವುದೇ ಇರಲಿ ಹೂಡಿಕೆದಾರರನ್ನು ಸೆಳೆಯಲು ಕಸರತ್ತುಗಳು ಮಾಡೋದು ಮಾತ್ರ ನಿಶ್ಚಿತ. ಇದಕ್ಕಾಗಿ ವಿಶ್ವ ಹೂಡಿಕೆದಾರರ ಸಮಾವೇಶದಂತಹ ಹಲವು ಮನೋರಂಜಕ ಮೇಳಗಳೂ ಆಯೋಜಿತಗೊಳ್ಳುತ್ತವೆ. ಇಷ್ಟಾದರೆ ಸಾಕು ದೇಶ-ರಾಜ್ಯ ಅಭಿವೃದ್ಧಿಯಾಗಿ ಬಿಡುತ್ತದೆ ಎಂಬಂತಿದೆ ಆಳುವವರ ಧೋರಣೆ!

   ಮೊನ್ನೆ ನಮ್ಮ ಸಿ.ಎಂ. ಸಿದ್ಧರಾಮಯ್ಯನವರು ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಿ ಹೂಡಿಕೆ ಮತ್ತು ಅದು ಸೃಷ್ಟಿಸಲಿರುವ ಉದ್ಯೋಗಗಳ ಬಗ್ಗೆ ಹೇಳಿದರು. ಸುಮಾರು 9,912 ಕೋಟಿ ರೂಪಾಯಿಗಳ ಹೂಡಿಕೆಯ ಒಟ್ಟು 13 ಹೊಸ ಯೋಜನೆಗಳಿಗೆ ಅನುಮತಿ ನೀಡಲು ಮುಖ್ಯಮಂತ್ರಿ ಅಧ್ಯಕ್ಷತೆಯ ಸರಕಾರದ ಉನ್ನತ ಸಮಿತಿ ನಿರ್ಧರಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅನುಷ್ಟಾನಗೊಳ್ಳಲಿರುವ ಇವುಗಳಿಂದ 6,000 ಜನರಿಗೆ ನೇರ ಉದ್ಯೋಗ ಸಿಗಲಿದೆಯೆಂದು, ಸಿ.ಎಂ. ಹೇಳಿದ್ದಾರೆ. ಇದಲ್ಲದೇ ತಮ್ಮ ಸರಕಾರ ಬಂಡವಾಳ ಹೂಡಿಕೆಗೆ ಪರವಾಗಿದೆಯೆಂದು ಅದಕ್ಕೆ ಅನುಕೂಲವಾಗುವ ಔದ್ಯಮಿಕ ಹೂಡಿಕೆಯ ಹೊಸ ನೀತಿಯನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

   ಕಳೆದ ಮಾರ್ಚ್ 5 ರಂದು 34ನೆಯ ಉನ್ನತ ಸಮಿತಿಯು ರೂ.13,770 ಕೋಟಿಗಳ ಹೂಡಿಕೆಯ ಸುಮಾರು 31 ಯೋಜನೆಗಳಿಗೆ ಅನುಮೋದನೆಯನ್ನು ನೀಡಿತ್ತು. ಇದರಿಂದ 44,726 ಜನರಿಗೆ ಕೆಲಸ ಸಿಗುವುದಾಗಿಯೂ ಘೋಷಿಸಲಾಗಿತ್ತು. ಅಂದರೆ ಇಂತಹ ಹೂಡಿಕೆಗಳ ಪ್ರಸ್ತಾವನೆಯನ್ನು ಅಂಗೀಕರಿಸುವ ಸಭೆಗಳು 5-6 ತಿಂಗಳಿಗೊಮ್ಮೆ ಯಥಾ ರೀತಿ ನಡೆಯುತ್ತಲೇ ಇರುತ್ತವೆ. ಇಂತಹ ಹೂಡಿಕೆಯ ಪ್ರಸ್ತಾವಗಳೂ, ಅಂಗೀಕಾರಕ್ಕಾಗಿ ‘ಏಕ ಗವಾಕ್ಷಿ ಅನುಮೋದನೆ’ ವ್ಯವಸ್ಥೆಗಳೂ ಪ್ರತಿ ಜಿಲ್ಲೆಗಳಲ್ಲಿಯೂ, ರಾಜ್ಯ ಮಟ್ಟದಲ್ಲಿಯೂ ರೂಪಿತಗೊಂಡಿವೆ. ಇವು ಹೂಡಿಕೆಯ ಬಂಡವಾಳದ ಪ್ರಮಾಣಕ್ಕೆ ಅನುಗುಣವಾಗಿ ಯಾವ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಎಂಬುದು ನಿಗದಿಯಾಗುತ್ತದೆ. 10 ಕೋಟಿಯೊಳಗಿದ್ದರೆ ಅದು ಜಿಲ್ಲಾ ವಿಂಡೋ ಸಮ್ಮತಿ ಕೊಡುತ್ತದೆ, ಹಾಗೇ 100 ಕೋಟಿ ಮೇಲಾದರೆ ಸಂಪುಟ, 1,000 ಕೋಟಿ ಮೇಲಾದರೆ ಉನ್ನತ ಸಮಿತಿ ಹೀಗೆ.

   ಆರಂಭದಲ್ಲಿ ಬಂಡವಾಳಗಾರರು, ಅವರ ಮಾಧ್ಯಮಗಳು ಸಿದ್ದು ಬಂಡವಾಳ ಹೂಡಿಕೆಯ ವಿರೋಧಿ ಎಂಬಂತೆ ಬಿಂಬಿಸಿ ಚೌಕಾಸಿಗೆ ಇಳಿದಿದ್ದವು. ಬಿಜೆಪಿ ಆಡಳಿತದಲ್ಲಿ ಬಂಡವಾಳ ಹೂಡಿಕೆದಾರರದೇ ಆಧಿಪತ್ಯ ಎನ್ನುವ ವಾತಾವರಣಕ್ಕೆ ಭಿನ್ನವಾಗಿ ಬಿಂಬಿಸಿಕೊಳ್ಳಲು ಕಾಂಗ್ರೆಸ್ ಸರಕಾರವೂ ಯತ್ನಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ತಾನೂ ಸಹ ವಿಶ್ವ ಹೂಡಿಕೆದಾರರ ಸಮಾವೇಶ ನಡೆಸಲು ಸಜ್ಜಾಯಿತು. ಈಗಲೂ ಆ ಪ್ರಯತ್ನ ನಿಂತಿಲ್ಲ.

   ಹಿಂದೆ ಬಿಜೆಪಿ ಸರಕಾರ 2009-14 ರ ಒಂದು ನೀತಿಯನ್ನು ಅಂಗೀಕರಿಸಿ ಜಾರಿಗೊಳಿಸಿತ್ತು. ಅದರ ಅವಧಿ ಈ ಮಾರ್ಚ್ 31ಕ್ಕೆ ಮುಗಿದಿದೆ. ಆದ್ದರಿಂದ ಈ ಸರಕಾರವೂ ಹೊಸ ನೀತಿಯನ್ನು ಅಂಗೀಕರಿಸುವ ಹಂತದಲ್ಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಕಟಿಸಿರುವಂತೆ ಹೊಸ ಕೈಗಾರಿಕಾ ಬಂಡವಾಳ ಹೂಡಿಕೆ ನೀತಿ 2014-19 ರ ಅನುಷ್ಟಾನದಿಂದ ಸುಮಾರು 5 ವರುಷಗಳಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹರಿದು ಬರಲಿದ್ದು, ಸುಮಾರು 15 ಲಕ್ಷ ಉದ್ಯೋಗಗಳ ಸೃಷ್ಟಿಸುವ ಭರವಸೆಯನ್ನು ನೀಡುತ್ತಿದೆ. ಆದರೆ ಇದು ಸಾಧ್ಯವೇ?

   ಈ ಪ್ರಶ್ನೆ ಏಳುವುದು ಯಾಕೆಂದರೆ ಹಿಂದಿನ ಸರಕಾರಗಳು ಇಂತಹುದೇ ಅಂಕಿ-ಅಂಶಗಳನ್ನು ನೀಡಿದ್ದವು. ಬಿಜೆಪಿ ಸರಕಾರ ಸುಮಾರು 8-9 ಲಕ್ಷ ಕೋಟಿ ರೂ.ಗಳ ಹೂಡಿಕೆಯನ್ನು, ಇದರಿಂದ 25 ಲಕ್ಷ ಉದ್ಯೋಗಗಳ ಸೃಷ್ಟಿಯನ್ನು ನಿರೀಕ್ಷಿಸಿತ್ತು. ಆದರೆ ಭರವಸೆಯಂತೆ ಯೋಜನೆಗಳಲ್ಲಿ ಹೂಡಿಕೆಯೂ ಆಗಲಿಲ್ಲ, (ಸೆ. 2014ರಲ್ಲಿ ರೂ.81.3 ಬಿಲಿಯನ್ ಹೂಡಿಕೆಯಂತೆ, ದೇಶದಲ್ಲಿ ಮೊದಲ ಸ್ಥಾನ ಎಂಬ ಹೆಗ್ಗಳಿಕೆ!) ಉದ್ಯೋಗವೂ ದೊರೆಯಲಿಲ್ಲ, ದೊರೆತದ್ದು ಬಹಳವೆಂದರೆ ಹೇಳಿದ್ದರ ಅಂದಾಜು ಶೇ.15-20 ರಷ್ಟು ಅಷ್ಟೇ. ಇದಕ್ಕಾಗಿ ಬಂಡವಾಳಗಾರರನ್ನು ಆಕರ್ಷಿಸಲು ಭೂಮಿ ಒಳಗೊಂಡು ಸರಕಾರ ಕೊಡ ಮಾಡುವ ತೆರಿಗೆ ರಿಯಾಯಿತಿಗಳು, ಸಬ್ಸಿಡಿಗಳು, ಒದಗಿಸುವ ಮೂಲ ಸೌಲಭ್ಯಗಳು ಎಷ್ಟೆಲ್ಲಾ! ಈಗಿನ ಸರಕಾರ ಉದ್ಯಮಿಪತಿಗಳ ಮಾತು ಕೇಳಿದರೂ ಸಿಗುವ ಪ್ರತಿಫಲವೆಷ್ಟು? ರಾಜ್ಯ ಸರಕಾರವೊಂದು ಹಲವಾರು ವ್ಯತಿರಿಕ್ತ ಸನ್ನಿವೇಶಗಳಲ್ಲಿ ಕೆಲಸ ಮಾಡಬೇಕಾಗುವುದು. ಇತ್ತೀಚೆಗೆ ಚರ್ಚೆಗೆ ಗ್ರಾಸವಾದ ಹೀರೋ ಮೋಟೋ ಕಾರ್ಪೋ ಎಂಬ ಜಪಾನಿ ಕಂಪನಿಯು ರಾಜ್ಯದಲ್ಲಿ (ಧಾರವಾಡ) ಹೂಡಿಕೆ ಮಾಡಲು ಸಿದ್ದವಾಗಿರುವಾಗಲೇ ಪಕ್ಕದ ಆಂಧ್ರ ಸರಕಾರದ ಹೆಚ್ಚಿನ ರಿಯಾಯಿತಿಯ ಆಹ್ವಾನದಿಂದಾಗಿ ಅಲ್ಲಿಗೇ ಹೋಯಿತು. ಇದಕ್ಕೆ ಕೇಂದ್ರ ಸರಕಾರ ನೀಡಿದ ವಿಶೇಷ ರಿಯಾಯಿತಿಯೂ ಕಾರಣ. ಇಂತಹ ಕಂಪನಿಗಳನ್ನು ಒಲಿಸಿಕೊಳ್ಳಲು ಹೋಗಿ ನಮ್ಮ ನೆಲ, ಜಲ ಸಂಪತ್ತನ್ನು ಅದೆಷ್ಟು ಕಳೆದುಕೊಳ್ಳುತ್ತೇವೆ. ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸಬೇಕು, ಹಕ್ಕುಗಳನ್ನು ದಮನಿಸಬೇಕು. ಇಷ್ಟೆಲ್ಲಾ ಆದ ಮೇಲೂ ನಿರೀಕ್ಷಿತ ಆದಾಯ, ಉತ್ಪಾದನೆ ವಹಿವಾಟು, ಉದ್ಯೋಗ ಸೃಷ್ಟಿ ಆಗುವುದೇ ಇಲ್ಲ.

   ಇನ್ನೂ ಒಂದಂಶವೆಂದರೆ ಈಗಿನ ಬಹುತೇಕ ಹೂಡಿಕೆ ಎಂಬುದು ಸೇವಾ ಕ್ಷೇತ್ರದಲ್ಲಿಯೇ ಅತ್ಯಧಿಕವೇ ಹೊರತು, ಮೂಲಭೂತವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಅಲ್ಲ. ಇದಿಲ್ಲವಾದರೆ ಉದ್ಯೋಗಗಳ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯ ಸ್ಥಿರತೆ ಅಸಾಧ್ಯ. ಇದನ್ನೇ ಪೂರ್ಣ ನಿರ್ಲಕ್ಷಿಸಲಾಗಿದೆ.

   ಹೀಗಿರುವಾಗ, ರಾಜ್ಯ ಸರಕಾರದ ಉದಾರೀಕರಣದ ಕೈಗಾರಿಕಾ ನೀತಿ ಸ್ವರ್ಗವನ್ನು ಸೃಷ್ಟಿಸಲಾರದು. ನರಕವನ್ನು ತಪ್ಪಿಸಲಾರದು. ಅದೇನೋ ಒಟ್ಟು ಅಭಿವೃದ್ದಿ ದರದಲ್ಲಿ ಶೇ.20 ರಷ್ಟು ಹೆಚ್ಚಳವನ್ನು ನಿರೀಕ್ಷಿಸಿದೆ. 6 ವಲಯಗಳಲ್ಲಿ (ಹೈ-ಕ ಸೇರಿ)ಬೆಳವಣಿಗೆಗೆ ಯೋಜಿಸಿದೆ. ಇಲ್ಲಿ ಅಹಿಂದ ಮಂತ್ರದಂತೆ ಶೇ.22.5 ಮೀಸಲಾತಿ ಸೌಲಭ್ಯ, ಸ್ವಉದ್ಯೋಗ ಯೋಜನೆ ಇತ್ಯಾದಿಯ ಸೂಚನೆಗಳು ಉದ್ಯೋಗದ ಹಸಿವನ್ನು ಹಿಂಗಿಸಿಯಾವೇ?

 

 
Comments Off

Posted by on 22/10/2014 in ಈ ವಾರ

 

Tags: , , , , , ,

ಮೋದಿ ‘ವಾಲಾ’ ರಾಜ್ಯ ಪಾಲ!

( ಸಂಪುಟ 8, ಸಂಚಿಕೆ 38, 21 ಸೆಪ್ಟೆಂಬರ್ 2014 )

 

ಗುಜರಾತ್ ನ ಶ್ರೀ ವಾಜುಭಾಯಿ ರೂಢಭಾಯಿ ವಾಲಾ ಇದೀಗ ಕರ್ನಾಟಕದ ನೂತನ ರಾಜ್ಯಪಾಲರು. ಯಥಾ ಸಂಪ್ರದಾಯದಂತೆ ಹೈಕೋರ್ಟ್ ನ  ಮುಖ್ಯ ನ್ಯಾಯಮೂರ್ತಿಗಳಾದ ಡಿ.ಹೆಚ್. ವಘೇಲಾ ರವರು 2014 ಸೆಪ್ಟಂಬರ್.2 ರಂದು ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಈ ‘ಸ್ವಗತ’ ಸಮಾರಂಭದಲ್ಲಿ ಮುಖ್ಯಮಂತ್ರಿಯವರನ್ನೂ ಒಳಗೊಂಡು ಹಲವು ಸಚಿವರು ಹಾಜರಿದ್ದದ್ದು, ಶಿಷ್ಟಾಚಾರದ ಔಪಚಾರಿಕತೆಗೆ ಮಾತ್ರ. ಇದಕ್ಕೆ ಎರಡು ದಿನಗಳ ಮೊದಲೇ ರಾಜ್ಯಪಾಲರನ್ನು ನೇಮಿಸುವಾಗ ತಮ್ಮೊಂದಿಗೆ ಸಮಾಲೋಚಿಸಲಿಲ್ಲ ಎಂದು ಪ್ರತಿಭಟನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಎತ್ತಿದ್ದು ಇದೇ ಹಿನ್ನೆಲೆಯಲ್ಲೇ. ಆದರೆ ನಿಜಕ್ಕೂ ಸಂಭ್ರಮವಿದ್ದದ್ದು ಬಿಜೆಪಿ ಪಾಳಯದಲ್ಲಿ!

ಅನಿಷ್ಟ ಸೂಚನೆಗಳು

   ಅವರೆಲ್ಲಾ ಇಂತಹ ರಾಜ್ಯಪಾಲರ ಆಗಮನಕ್ಕೆ ತುದಿಗಾಲಲ್ಲೇ ಕಾದು ನಿಂತಿದ್ದರೇನೋ ಎಂಬಂತೆ, ತಮ್ಮ ಒಬ್ಬ ನಿಷ್ಠಾವಂತ ಕಾರ್ಯಕರ್ತನೊಬ್ಬ ಮನೆಗೆ ಬಂದಂತೆ ಸಂಭ್ರಮ ಪಟ್ಟರು. ಈ ರಾಜ್ಯಪಾಲರ ಆಗಮನದಿಂದಾಗಿ ವಿರೋಧ ಪಕ್ಷದ ಜಾಗದಲ್ಲಿ ಕುಳಿತಿರುವ ಬಿಜೆಪಿ ಶಕ್ತಿ ಕೇಂದ್ರದ ಸ್ಥಾನಕ್ಕೇರಿ ಬಿಟ್ಟಿದೆ ಎಂಬಂತೆ ಬೀಗುತ್ತಿದ್ದುದು ಮುಂದೆ ಸಂಭವಿಸಲಿರುವ ಕೆಸರೆರಚಾಟದ ರಾಜಕಾರಣದ ಸೂಚಕ. ಅದರ ಸಂಕೇತವಾಗಿ ಇಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಹೇಗೆಲ್ಲಾ ಕಿರಿ ಕಿರಿ ಇಡಬಹುದು ಎಂದು ಬಿಜೆಪಿ ಬಹಿರಂಗವಾಗಿಯೇ ತನ್ನ ಲೆಕ್ಕಾಚಾರವನ್ನು ಬಿಚ್ಚಿಡತೊಡಗಿದೆ. ಈ ಕೂಡಲೇ ಅರ್ಕಾವತಿ ಲೇಔಟ್ನ ಡೀ-ನೋಟಿಫಿಕೇಷನ್ ವಿವಾದವನ್ನು ರಾಜ್ಯಪಾಲರ ಮುಂದೆ ಕೊಂಡೊಯ್ದು ರಂಪಾಟ ಮಾಡಲು ಸ್ಕೆಚ್ ಹಾಕಿದೆ. ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ರವರು ‘ಸಿದ್ಧರಾಮಯ್ಯಗೆ ಕಾದಿದೆ ಈಗ’ ಎಂದು ಕತ್ತಿ ಝಳಪಿಸುತ್ತಾ ಓಡಾಡುತ್ತಿದ್ದಾರೆ. ಅಂತಹ ಯಾವುದೇ ಉದ್ದೇಶಕ್ಕೆ ರಾಜಭವನವನ್ನು ಬಳಸುವುದಿಲ್ಲವೆಂದು ಯಡಿಯೂರಪ್ಪನವರು ವಿಶೇಷವಾಗಿ ಸ್ಪಷ್ಟೀಕರಣ ನೀಡುತ್ತಿರುವುದರ ಔಚಿತ್ಯವೇನು?

   ಶ್ರೀ ಹೆಚ್.ಆರ್. ಭರದ್ವಾಜ್ ರವರ ಅವಧಿ ಮುಗಿದು ಪ್ರಯಾಣಕ್ಕೆ ಸಿದ್ಧವಾಗುವ ಮೊದಲೇ ಇಲ್ಲಿಗೆ ಕೇರಳದ ಬಿಜೆಪಿ ನಾಯಕ ಓ. ರಾಜಗೋಪಾಲನ್ ರಾಜಭವನದೊಳಗೆ ಸೇರಲಿದ್ದಾರೆ ಎಂಬ ದಟ್ಟವಾದ ವದಂತಿ ಇತ್ತು. ಆದರೆ ಕೊನೆ ಗಳಿಗೆಯಲ್ಲಿ ಬದಲಾದುದು ಹೇಗೆ? ಬದಲಾವಣೆಯೆಂದರೆ ಬಿಜೆಪಿಯ ಗುಪ್ತ ಅಜೆಂಡಾವೇನೂ ಬದಲಾಗಿಲ್ಲ. ಬದಲಾವಣೆ ಆಗಿರುವುದು ಕೇವಲ ಹೆಸರಷ್ಟೇ. ಅಂದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸುವಾಗ ಆರ್.ಎಸ್.ಎಸ್ನ ಅಥವಾ ಪರಿವಾರಕ್ಕೆ ನಿಷ್ಠವಾಗಿರುವ, ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣರಾಗಿರುವವರನ್ನೇ ನೇಮಿಸಲಾಗುತ್ತಿರುವುದು ಬಹುಸ್ಪಷ್ಟ. ಆ ಮೂಲಕ ಆ ರಾಜ್ಯ ಸರಕಾರಗಳ ಮೇಲೆ ತನ್ನ ನಿಯಂತ್ರಣ ಸಾಧಿಸಬೇಕು ಎಂಬುದರಲ್ಲಿ ಯಾವುದೇ ರಿಯಾಯಿತಿ ನೀಡುವ ಪ್ರಶ್ನೆಯನ್ನೇ ಆರ್.ಎಸ್.ಎಸ್. -ಬಿಜೆಪಿ ಪಕ್ಷ ಇರಿಸಿಕೊಂಡಿಲ್ಲ. ಹೀಗಾಗಿಯೇ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ವಿರೋಧ ಪಕ್ಷಗಳ ಸರಕಾರ ಇರುವಲ್ಲಿ, ಅದರಲ್ಲೂ ಹಿಂದಿನ ಯು.ಪಿ.ಎ. ಸರಕಾರ ನೇಮಿಸಿದ್ದ ರಾಜ್ಯಪಾಲರನ್ನೆಲ್ಲಾ ಅವಧಿಯಿನ್ನೂ ಬಾಕಿ ಇರುವಾಗಲೇ ಕಿತ್ತೆಸೆಯುವ ‘ಕರಸೇವೆ’ ಯನ್ನು ಕೈಗೆತ್ತಿಕೊಂಡು ಝಾಡಿಸಿದರು. ಅವಧಿ ಮುಗಿದವರ ಸ್ಥಾನದಲ್ಲಿ ನಿಷ್ಠರನ್ನು ಸ್ಥಾಪಿಸಿದರು. ಅದರಲ್ಲಿ ಬಂದಿಳಿದವರು ಈ ವಾಲಾರವರು!

   ಹೌದು! ಈ ರಾಜ್ಯಪಾಲ ವಾ.ರೂ.ವಾಲಾ ಯಾರು? ಅದೂ ಕರ್ನಾಟಕಕ್ಕೆ ಇವರ ಆಯ್ಕೆಯ ಅಗತ್ಯವಾದರೂ ಏನಿತ್ತು?
ನೇಮಕದ ಹಿಂದೆ

  ವಾ.ರೂ.ವಾಲಾರವರು ಗುಜರಾತ್ನ ಒಬ್ಬ ಅತ್ಯಂತ ಹಿರಿಯ ರಾಜಕೀಯ ನಾಯಕ. ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಿ ನಗರಾಭಿವೃದ್ಧಿ, ಇಂಧನ-ವಿದ್ಯುತ್, ಕಂದಾಯ, ಸಾರಿಗೆ, ಕಾರ್ಮಿಕ ಖಾತೆಗಳು ಮುಖ್ಯವಾಗಿ ಹಣಕಾಸು ಮಂತ್ರಿಯಾಗಿ 18 ಬಾರಿ ಬಜೆಟ್ ಮಂಡಿಸಿ ದಾಖಲೆಯಾದವರು. ಕಾನೂನು ಅನುಭವಿಯಾಗಿ, ಸ್ಪೀಕರ್ ಆಗಿ,ಪಕ್ಷದ ರಾಜ್ಯ ಅಧ್ಯಕ್ಷರಾಗಿ ಹೊಣೆ ನಿರ್ವಹಿಸಿದವರು ಎಂದರೆ ಮೋದಿ ಸರಕಾರದಲ್ಲಿ ವಾಲಾ ಅವರ ಮಹತ್ವ, ಸ್ಥಾನ-ಮಾನ ನಿಮಗೆ ಅರ್ಥವಾದೀತು. ಇವಕ್ಕೆಲ್ಲಾ ‘ಗರಿ ಇಟ್ಟಂತೆ’ ಆರ್.ಎಸ್.ಎಸ್.ನಲ್ಲಿ ಜೀವನ ಆರಂಭಿಸಿದ್ದು ಅವರು ವಿದ್ಯಾರ್ಥಿಯಾಗಿರುವಾಗ ಬಾಲ ಸ್ವಯಂಸೇವಕನಾಗಿ. ಆ ಸಂಬಂಧ ಈಗಲೂ ಅಭಾಧಿತ. ಹೀಗೆ ನಮ್ಮ ರಾಜ್ಯದ ಜನರಿಗೆ ಸೇವೆಗೆಂದು ಸಿಕ್ಕಿರುವುದು ಒಬ್ಬ ನುರಿತ, ನಿಪುಣ, ಅದೃಶ್ಯ ‘ಗಣವೇಷಧಾರಿ’ ಸ್ವಯಂಸೇವಕ!

karntaka_governr

   ಇಂತಹ ಸ್ವಯಂಸೇವಕನಿಗಾಗಿಯೇ ರಾಜ್ಯದ ಬಿಜೆಪಿಯ ನಾಯಕರು ಹಳಹಳಿಸುತ್ತಿದ್ದರು. ಅವರು ತಮಗೆ ಬೇಕಾದವರ ಹೆಸರುಗಳ ಪಟ್ಟಿಯನ್ನೂ ಮೋದಿಗೆ ನೀಡಿ ಬಂದಿದ್ದರು! ರಾಜ್ಯಾಧ್ಯಕ್ಷ ಪ್ರಲ್ಹಾದಜೋಷಿ ಯಾವ ಶಿಷ್ಠಾಚಾರ, ಅಳುಕೂ ಇಲ್ಲದೇ ಸಂವಿಧಾನಾತ್ಮಕ ಸ್ಥಾನಕ್ಕೆ ಆಗಲಿರುವ ನೇಮಕವನ್ನು ಒಂದು ಮುನ್ಸಿಪಾಲಿಟಿಗೆ ಮೆಂಬರನ್ನಾಗಿ ನೇಮಕ ಮಾಡುವ ರೀತಿಯಲ್ಲಿ ಬಹಿರಂಗವಾಗಿಯೇ ಈ ಸಂಗತಿಗಳನ್ನು ‘ವದರಿದ್ದರು’. ಹೊಸ ರಾಜ್ಯಪಾಲ ಬರುತ್ತಿದ್ದಂತೆಯೇ ಅರ್ಕಾವತಿ ಬಡಾವಣೆಯ ಡೀ-ನೋಟಿಫಿಕೇಷನ್ ವ್ಯವಹಾರವನ್ನು ರಾಜ್ಯಪಾಲರ ಗಮನಕ್ಕೆ ತಂದು ತಕ್ಕ ಶಾಸ್ತಿ ಮಾಡಿಸುವುದಾಗಿ ಶೆಟ್ಟರ್ ಗುಡುಗಿದ್ದರು. ಹೀಗೆ ತಮ್ಮ ಡೀಲಿಂಗ್ ಅಜೆಂಡಾಗಳನ್ನು ಕಮಲದ ಪಾಳ್ಯ ಇರಿಸಿಕೊಂಡದ್ದು ನಿರೀಕ್ಷಿತವೇ. ಈ ಒಟ್ಟು ಪ್ರಸಂಗಗಳಲ್ಲಿ ಬಿಜೆಪಿ ನಾಯಕರ ತಲೆಯಲ್ಲಿ ಹರಿದಾಡುತ್ತಿದ್ದ ಹುಳುಗಳೆಲ್ಲಾವುಗಳ ಹೂರಣ ಒಂದೇ. ಹಿಂದೆ ತಮ್ಮ ಸರಕಾರವಿರುವಾಗ ಭರದ್ವಾಜ್ರವರ ಮೂಲಕ ಕಾಂಗ್ರೆಸ್ ಕಾಡಿದಂತೆ, ಈಗಲೂ ಕಾಂಗ್ರೆಸ್ ಸರಕಾರವನ್ನು ಪೀಡಿಸಲು ಒಬ್ಬ ಸಮರ್ಥ ಕಾರ್ಯಕರ್ತ ಬೇಕು ಎಂದು. ರಾಜಭವನವೇ ತಮ್ಮ ರಾಜಕೀಯ ತಂತ್ರ ಹೆಣೆಯುವ ಕಛೇರಿಯಾಗಬೇಕು ಎಂದು ಅಥವಾ ಕೇಶವಶಿಲ್ಪದ ಮಂತ್ರ ಜಾರಿಗೊಳಿಸುವ ಯಂತ್ರ ಇವರಾಗಿರಬೇಕು ಎಂದು. ಅದಕ್ಕೆಂದೇ ಹಿಂದಿನ ರಾಜ್ಯಪಾಲರ ಬಗ್ಗೆ, ಸ್ಥಾನದ ಬಗ್ಗೆ ಇವರಾಡಿದ ನೀತಿ ಮಾತುಗಳನ್ನು ಜನರಿಗೆ ಮರೆಸಿ ಬಿಟ್ಟಿದ್ದಾರೆ?

  ಇಲ್ಲಿ ಬರುವ ಪ್ರಶ್ನೆಯೆಂದರೆ: ನೆನ್ನೆಯವರೆಗೂ ಅತ್ಯಂತ ಸಕ್ರಿಯ ರಾಜಕಾರಣಿಯಾಗಿದ್ದವರನ್ನು, ಅದರಲ್ಲೂ ಅಧಿಕಾರದಲ್ಲಿರುವ ಪಕ್ಷಕ್ಕೆ, ಆಳುವ ಸರಕಾರಕ್ಕೆ, ಪ್ರಧಾನಿಯಾಗಿರುವ ಮೋದಿಗೆ (ಸಂವಿಧಾನೇತರ ಶಕ್ತಿಯಾಗಿರುವ ಸಂಘಕ್ಕೆ) ಕಡು ನಿಷ್ಠರಾಗಿರುವವರನ್ನು ರಾಜ್ಯಪಾಲರನ್ನಾಗಿ ನೇಮಿಸಬಹುದೇ? ಅದೂ ವಿರೋಧ ಪಕ್ಷದ ಸರಕಾರವಿರುವಲ್ಲಿಗೆ?

   ನಮ್ಮ ಸಂವಿಧಾನದ ಕಲಮು 153 ಗವರ್ನರ್ ಬಗ್ಗೆ ಹೇಳುತ್ತದೆ. 154ನೇ ಕಲಮು ಅವರ ಅಧಿಕಾರಗಳನ್ನು ವಿವರಿಸಿದರೆ 155 ರಾಷ್ಟ್ರಪತಿಗಳಿಂದಾಗುವ ನೇಮಕದ ಬಗ್ಗೆ ಹೇಳುವುದು. ಕಲಂ 156 ಅವರ ಅವಧಿಯನ್ನು 5 ವರ್ಷವೆಂದೂ ಆದರೆ ‘ರಾಷ್ಟ್ರಪತಿ ಬಯಸುವವರೆಗೂ ಮಾತ್ರ ಅಧಿಕಾರದಲ್ಲಿ ಇರಬಹುದು’ ಎಂದು ಹೇಳುತ್ತದೆ. ಸಂವಿಧಾನದ ರಕ್ಷಣೆ, ಅದರ ಸಮರ್ಥನೆ, ಕಾನೂನು-ಸುವ್ಯಸ್ಥೆ ಕಾಪಾಡುವುದು, ಪ್ರಭುತ್ವದ ಹೆಸರಿನಲ್ಲಿ ಜನರಿಗೆ ಸೇವೆ ಸಲ್ಲಿಸುವುದು ಮುಖ್ಯ ಹೊಣೆಯನ್ನಾಗಿ ಸೂಚಿಸಿದೆ.

ನಕಾರಾತ್ಮಕ ಪಾತ್ರ

   ಆದರೆ ಈ ರಾಜ್ಯಪಾಲರ ಹುದ್ದೆ, ಅವರು ವಹಿಸುತ್ತಿರುವ ನಕಾರಾತ್ಮಕ ಪಾತ್ರ ಅತ್ಯಂತ ತೀವ್ರವಾದ ಟೀಕೆಗೂ ಗುರಿಯಾಗಿದೆ. ರಾಜ್ಯಪಾಲರೆಂದರೆ ‘ಕೇಂದ್ರದ ಏಜೆಂಟ್, ಆಳುವ ಪಕ್ಷದ ಏಜೆಂಟ್’ ಎನ್ನುವವರೆಗೂ ತೀವ್ರ ವಿಮರ್ಶೆಗೂ ಈಡಾಗಿದೆ. ಈ ಸಂವಿಧಾನಾತ್ಮಕ ಸ್ಥಾನವನ್ನು ಕೇಂದ್ರದಲ್ಲಿ ಆಳುವ ಪಕ್ಷಗಳು ಎಡ ಪಕ್ಷಗಳನ್ನೂ ಸೇರಿಸಿ ತಮಗಾಗದ ವಿರೋಧ ಪಕ್ಷಗಳ ಮೇಲೆ ರಾಜಕೀಯ ಸೇಡಿಗಾಗಿ ಮನಬಂದಂತೆ ದುರುಪಯೋಗ ಪಡಿಸಿಕೊಂಡಿವೆ. 1957 ರಿಂದ 59 ರಲ್ಲಿ ಕೇರಳದಲ್ಲಿ ಜನರಿಂದ ಆಯ್ಕೆಯಾಗಿದ್ದ ಮೊಟ್ಟ ಮೊದಲ ಕಮ್ಯೂನಿಸ್ಟ್ ಪಕ್ಷದ ನೇತೃತ್ವದ ಇ.ಎಂ.ಎಸ್ ರವರ ಸರಕಾರವನ್ನು ಉರುಳಿಸಿದ್ದು ಚರಿತ್ರೆಯಲ್ಲಿ ಒಂದು ಕರಾಳ ಅಧ್ಯಾಯವಾಗಿದೆ.

ಬೇಡವಾದ ಸೂಚನೆಗಳು

   ಮುಂದೆ ಇಂತಹ ಅನೇಕ ಪ್ರಕರಣಗಳು ರಾಜ್ಯಪಾಲರ ಮೂಲಕ ಸಂವಿಧಾನದ ಕಲಂ 356 ನ್ನು ಬಳಸಿ ಚುನಾಯಿತ ಸರಕಾರಗಳನ್ನು ಉರುಳಿಸುವ ಕುಕೃತ್ಯಗಳು ದೇಶ್ಯಾದ್ಯಂತ ಎಗ್ಗಿಲ್ಲದೇ ನಡೆದವು. ಇದಲ್ಲದೇ ಸಂಪನ್ಮೂಲಗಳು, ಅಧಿಕಾರ ಹಂಚಿಕೆ, ಸಂಬಂಧಗಳ ಪುನರ್ರಚನೆ ಆಗ್ರಹಗಳು, ಹೀಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಇಂತಹ ಘರ್ಷಣೆಯ ಸನ್ನಿವೇಶದ ಹಿನ್ನೆಲೆಯಲ್ಲಿ ನೇಮಿಸಲ್ಪಟ್ಟನ್ಯಾಯಮೂರ್ತಿ.ಆರ್.ಎಸ್. ಸರ್ಕಾರಿಯಾ ನೇತೃತ್ವದ ಆಯೋಗವು 1988ರಲ್ಲಿ ನೀಡಿದ ವರದಿಯಲ್ಲಿ ರಾಜ್ಯಪಾಲರ ವಿಷಯದಲ್ಲಿ ಸ್ಪಷ್ಟ ಮಾರ್ಗಸೂಚಿ ಶಿಫಾರಸುಗಳನ್ನು ನೀಡಿದೆ. ಮೊದಲನೆಯದಾಗಿ ರಾಜ್ಯಪಾಲನನ್ನಾಗಿ ಆರಿಸುವಾಗ ಮತ್ತು ನೇಮಿಸುವಾಗ ಆತ ಸಾಮಾಜಿಕ ಜೀವನದಲ್ಲಿ ಗಣ್ಯನಾಗಿರಬೇಕು. ಎರಡನೆಯದಾಗಿ, ಆತ ರಾಜ್ಯದ ಹೊರಗಿನ ವ್ಯಕ್ತಿಯಾಗಿದ್ದು ರಾಜ್ಯದ ರಾಜಕಾರಣದಲ್ಲಿ ಆಳ ಸಂಬಂಧಗಳನ್ನು ಹೊಂದಿರಬಾರದು. ಮೂರನೆಯದಾಗಿ, ಸಾಮಾನ್ಯವಾಗಿ ರಾಜಕೀಯದಲ್ಲಿ ಬಹು ಮಹತ್ವದ ಪಾತ್ರವನ್ನು ಹೊಂದಿರಬಾರದು. ವಿಶೇಷವಾಗಿ ನೇಮಕವಾಗುವ ಅವಧಿಯ ಹಿಂದೆ ಸಕ್ರಿಯ ರಾಜಕಾರಣದಲ್ಲಿ ಇರಲೇಬಾರದು. ಆಯ್ಕೆ ಮಾಡುವಾಗ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ಆದ್ಯತೆಯನ್ನು ನೀಡಬೇಕು ಎಂದೂ ಹೇಳಿದೆ.

   ಇಷ್ಟು ಮಾತ್ರವಲ್ಲ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸೇರಿದ ಯಾವುದೇ ವ್ಯಕ್ತಿಯನ್ನು, ಅದರಲ್ಲೂ ವಿರೋಧ ಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಿಸಲೇ ಕೂಡದು ಎಂದೂ ಜಸ್ಟೀಸ್ ಸರ್ಕಾರಿಯಾ ಆಯೋಗ ಸೂಚಿಸಿದೆ. ಆಯಾ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿಯೇ ನೇಮಿಸಬೇಕು ಎಂದೂ ಹೇಳಿದೆ. ರಾಜ್ಯಪಾಲರ ಕಾರ್ಯಾವಧಿ ಇತ್ಯಾದಿಗಳ ಬಗ್ಗೆ ಮುಂದೆ 2002ರಲ್ಲಿ ಜ.ವೆಂಕಟಾಚಲಯ್ಯ ಆಯೋಗ ಮತ್ತು 2010ರಲ್ಲಿ ಪಂಚ್ಛಿ ಆಯೋಗಗಳು ಇನ್ನಷ್ಟು ನಿರ್ಧಿಷ್ಟ ಸೂಚನೆಗಳನ್ನು ನೀಡಿವೆ.

   ಇಂತಹ ಎಚ್ಚರಗಳನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುತ್ತಲೇ ಬಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಸರ್ವಾಧಿಕಾರಿ ಕೇಂದ್ರ ಸರಕಾರಗಳು ಬಗೆದ ಕೇಡುಗಳು, ಕಹಿ ಅನುಭವಗಳ ಹಲವಾರು ಸಂಗತಿಗಳನ್ನು ಎದುರಿಗಿಟ್ಟು ನೋಡಿದರೆ ಮೋದಿಯವರ ಸರಕಾರ ಈಗಲೂ ಏನು ಮಾಡಲು ಹೊರಟಿದೆ ಎಂಬುದು ತಿಳಿಯುತ್ತದೆ. ತಮ್ಮ ನಿಷ್ಠರನ್ನೇ ನೇಮಿಸಿ ರಾಜಭವನವನ್ನು ರಾಜಕೀಯ ಆಡುಂಬೋಲದ ಕಣವಾಗಿಸುವ ಹುನ್ನಾರ ನಿಚ್ಚಳ. ಅಂದರೆ ರಾಜಭವನವನ್ನು ಘಂಟಾಘೋಷವಾಗಿ ರಾಜಕೀಯ ಭವನವನ್ನಾಗಿಸಿ ಅದರ ಸಂವಿಧಾನಾತ್ಮಕ ಘನತೆಯನ್ನು ಮಣ್ಣು ಮುಕ್ಕಿಸುವುದು ಎಂದರ್ಥ.

ಅನಾಹುತಕಾರಿ ಕ್ರಮಗಳು

   ಇತ್ತೀಚೆಗೆ ಕರ್ನಾಟಕವನ್ನೂ ಒಳಗೊಂಡು ಇತರೆ ರಾಜ್ಯಗಳಿಗೆ ಸಕ್ರಿಯ ರಾಜಕಾರಣಿಗಳನ್ನು ನೇಮಕ ಮಾಡುವಾಗ ಕೈಗೊಂಡ ನಿರ್ಧಾರ ಅತ್ಯಂತ ಸಂಕುಚಿತ ರಾಜಕೀಯ ಹಿತಾಸಕ್ತಿಯಿಂದ ಕೂಡಿದ್ದು ಪ್ರಜಾಸತ್ತಾತ್ಮಕ, ಒಕ್ಕೂಟದ ವ್ಯವಸ್ಥೆಗೆ ಗಂಡಾಂತರಕಾರಿಯಾಗಿವೆ. ಅವಧಿ ಮುಗಿಯುವ ಮೊದಲೇ ಹಲವಾರು ರಾಜ್ಯಗಳಲ್ಲಿನ ರಾಜ್ಯಪಾಲರನ್ನು ಕಿತ್ತೆಗೆಯುವ ವರಸೆ, ಒತ್ತಡಗಳು, ಸೃಷ್ಟಿಸಿದ ಇರುಸು ಮುಜುಗರದ ಪ್ರಸಂಗಗಳು ಮೋದಿ ಸರಕಾರ ಒಂದು ಸಂವಿಧಾನಾತ್ಮಕ ಸ್ಥಾನವನ್ನು ಎಷ್ಟು ನಿಕೃಷ್ಟವಾಗಿ ನಡೆಸಿ ಕೊಳ್ಳಬಲ್ಲುದು ಎಂಬುದನ್ನು ತೋರಿಸಿದೆ. ತಮ್ಮ ಈ ಹೀನ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಹೀಗೆ ಮಾಡಿತ್ತಲ್ಲಾ ಎಂದು ಹೇಳುತ್ತಿದೆ. ಅಂದರೆ ಕಾಂಗ್ರೆಸ್ಗಿಂತ ತಾವು ಭಿನ್ನರು ಎಂದು ಬಿಜೆಪಿ-ಚೆಡ್ಡಿಪಡೆ ಕೊಚ್ಚಿಕೊಳ್ಳುವುದರಲ್ಲಿ ಏನರ್ಥವಿದೆ?

   ಮೋದಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದಲೂ ನಿರಂತರವಾಗಿ ಸಂವಿಧಾನದ ಮೇಲೆ, ನ್ಯಾಯಾಂಗ, ಕಾರ್ಯಾಂಗ, ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಒಂದಿಲ್ಲೊಂದು ಬಗೆಯಲ್ಲಿ ಧಾಳಿ ಮಾಡುತ್ತಲೇ ಇದೆ. ಅವುಗಳನ್ನು ಸಂಕುಚಿತ ರಾಜಕೀಯದ ವಿಷಾನಿಲದಿಂದ ತೋಯಿಸಿ ದುರ್ಬಲಗೊಳಿಸುವುದು ಅದರ ಗುರಿ ಇದ್ದಂತೆ ಕಾಣುತ್ತದೆ. ಕೇರಳದ ರಾಜ್ಯಪಾಲರನ್ನಾಗಿ ಸುಪ್ರಿಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಥಾಸಿವಂ ರವರ ನೇಮಕ ನ್ಯಾಯಾಂಗವನ್ನು ದುರ್ಬಲಗೊಳಿಸುವ, ರಾಜಕೀಯ ಅಧಿಕಾರದ ದುರಾಸೆ-ಲಾಲಸೆಗೆ ನ್ಯಾಯಾಂಗವನ್ನು ಈಡು ಮಾಡುವ ಕೇಂದ್ರದ ಕುತಂತ್ರಕ್ಕೆ ನಿದರ್ಶನ. ಅತ್ಯಂತ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬ ಇಂತಹ ಸ್ಥಾನ ಒಪ್ಪಿಕೊಳ್ಳುವುದೇ ಘನತೆಗೆ ಕೇಡು ಮತ್ತು ಅಧಿಕಾರಕ್ಕೆ ಹಪಾಹಪಿಸುವ ದುರಾಸೆಯ ಪ್ರತೀಕ. ಕೇರಳ ಹೈಕೋಟ್ನ ನ್ಯಾಯವಾದಿಗಳ ಸಂಘದ ಎಲ್ಲಾ 177 ಸದಸ್ಯರುಗಳು ‘ಈ ನೇಮಕವನ್ನು ಅಂಗೀಕರಿಸಬಾರದು, ಅದು ನ್ಯಾಯಾಂಗವನ್ನು ಕೆಟ್ಟದಾಗಿ ಪ್ರಭಾವಿಸಲಿದೆ’ ಎಂದು ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ನೀಡಿದರೂ ಕೇಳದ ಕೇಂದ್ರ ಸರಕಾರ ಮತ್ತು ಹಿಂದೆ ಸರಿಯದ ಈ ನ್ಯಾಯಮೂರ್ತಿಯವರ ವರ್ತನೆಗೆ ಏನೆನ್ನ ಬೇಕು? ಇವರು ಸುಪ್ರಿಂಕೋರ್ಟ್ ನಲ್ಲಿರುವಾಗ ಗುಜರಾತ್ ನ ಸೊಹ್ರಾಬುದ್ದೀನ್ ಕೊಲೆ ಕೇಸ್ನಲ್ಲಿ ಈಗಿನ ಬಿಜೆಪಿ ಅಖಿಲ ಭಾರತ ಅಧ್ಯಕ್ಷ ಅಮಿತ್ ಶಾನಿಗೆ ಅನುಕೂಲಕರವಾಗಿ ನೀಡಿದ ತೀರ್ಪಿಗೆ ನೀಡಿದ ಪ್ರತಿಫಲವಿದು ಎಂದು ಎಲ್ಲೆಡೆ ಗಟ್ಟಿಯಾಗಿ ಕೇಳಿಬರುತ್ತಿರುವ ತೀವ್ರ ಆರೋಪವನ್ನು ನಿರ್ಲಕ್ಷಿಸಲಾದೀತೆ?

ರದ್ದಾಗಬೇಕಾದ ಹುದ್ದೆ

   ಇಷ್ಟೆಲ್ಲಾ ಆದ ಮೇಲೆ ಉಳಿಯುವ ಒಂದು ಮುಖ್ಯ ಪ್ರಶ್ನೆಯೆಂದರೆ, ಈ ರಾಜ್ಯಪಾಲರ ಹುದ್ದೆ ಅವಶ್ಯಕವಿದೆಯೇ? ಪ್ರಜಾಸತ್ತಾತ್ಮಕ, ಒಕ್ಕೂಟ ತತ್ವದ ಆಧಾರದಲ್ಲಿನ ಈ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ಜನತೆಯಿಂದ ಚುನಾಯಿತವಾದ ಸರಕಾರ ಮತ್ತು ಶಾಸಕಾಂಗ ಇರುವಾಗ ರಾಜ್ಯಪಾಲ ಹುದ್ದೆ ಮತ್ತು ಅಂತಹ ವ್ಯವಸ್ಥೆ ಇರುವುದೇ ಅನಗತ್ಯ. ಕೇಂದ್ರ ಸರಕಾರ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲೆಂದೇ ಈ ಹುದ್ದೆ, ವ್ಯವಸ್ಥೆ ರೂಪಿಸಲಾಗಿದೆ. ರಾಜಕೀಯ ನಿರಾಶ್ರಿತರ ಶಿಬಿರವೂ ಆಗಿರುವ, ಜನರ ಹೆಗಲಿಗೆ ಭಾರವಾಗಿರುವ ಈ ರಾಜಭವನ ಮತ್ತು ರಾಜ್ಯಪಾಲರ ಹುದ್ದೆಯನ್ನು ಈ ಕೂಡಲೇ ರದ್ದು ಮಾಡುವುದು ಆಗಬೇಕಾದ ಕೆಲಸ.

 
Comments Off

Posted by on 15/10/2014 in ಈ ವಾರ

 

Tags: , , ,

ಉಪ ಚುನಾವಣೆ: ಫಲಿಸದ ಮೋದಿ ಮಂತ್ರ, ಕಾಂಗ್ರೆಸ್ ಕಿತ್ತಾಟದ ತಂತ್ರ ಬೇಕಿದೆ ಜನಕೆ ಪರ್ಯಾಯ ಯಂತ್ರ

   ‘ಮೋದಿ ಹೇಳಿದಂತೆ ದೇಶದಲ್ಲಿ ಜಾದೂ ನಡೆಯಲಿಲ್ಲ, ಹಣದುಬ್ಬರ ಕಡಿಮೆಯಾಗಲಿಲ್ಲ ಅದು ಶೇ 8 ಕ್ಕೆ ಹೆಚ್ಚಿದೆ, ಅಗತ್ಯ ವಸ್ತುಗಳ ಬೆಲೆಗಳೂ ಇಳಿಯದೇ ಏರು ಮುಖದಲ್ಲೇ ಇವೆ. ಕೆಂಪು ಕೋಟೆಯ ಮೇಲೆ ನಿಂತು ಮನರಂಜಕ ಭಾಷಣ ಬಿಟ್ಟರೆ ಮೋದಿ ಕೊಟ್ಟದ್ದೇನು ‘ಎಂದೂ ಪ್ರಶ್ನಿಸಿ ವಿಭಿನ್ನವಾಗಿ ಕನ್ನಡದ ಪ್ರಾದೇಶಿಕ ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು.

  ನೂರು ದಿನಗಳ ಅಧಿಕಾರದ ಸಂಭ್ರಮೋತ್ಸವದ ಸಿದ್ಧತೆಯಲ್ಲಿರುವ ಮೋದಿ ಸರಕಾರಕ್ಕೆ ಮತ್ತು ಬಿಜೆಪಿಗೆ ಮಂಕು ಬಡಿದಿರುವುದು ನಿಜ. ಅದರಲ್ಲೂ ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳಲ್ಲಿನ ಉಪ ಚುನಾವಣಾ ಫಲಿತಾಂಶಗಳು ಬಿಜೆಪಿಯ ನೆಮ್ಮದಿ ಕೆಡಿಸಿದ ಸಂಗತಿಗಳಲ್ಲಿ ಒಂದು ಎಂಬುದೂ ನಿಜ. ಪಂಜಾಬ್, ಮಧ್ಯಪ್ರದೇಶ, ಬಿಹಾರ ಮತ್ತು ಕರ್ನಾಟಕ ರಾಜ್ಯಗಳ ವಿಧಾನಸಭೆಯ 18 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ 10ರಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಗೆದ್ದಿವೆ, 7ರಲ್ಲಿ ಬಿಜೆಪಿ ಹಾಗೂ 1ರಲ್ಲಿ ಅದರ ಮಿತ್ರ ಪಕ್ಷ ಗೆದ್ದಿವೆ. ಇಲ್ಲಿಯೂ 2 ಕಡೆ ಬಿಜೆಪಿ ಗೆದ್ದಿರುವುದು ಕೇವಲ ಸುಮಾರು 400, 700 ಮತಗಳ ಅಂತರದಲ್ಲಿ ಮಾತ್ರ! ವಿಶೇಷವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದಂತಹ ಕಡೆ ಅಧಿಕಾರದಲ್ಲಿರುವ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ಸಿಕ್ಕಿದ್ದು ಕೇವಲ 2 ಮಾತ್ರ. ಉಳಿದ್ದು ಬಿಜೆಪಿಗೆ. ಇದರಿಂದ ಆಕಾಶಕ್ಕೇರಿದ್ದ ಬಿಜೆಪಿಗೆ ಈಗಿನ ಫಲಿತಾಂಶ ನಿರಾಸೆ ತಂದಿದೆ.

ರಾಜ್ಯದಲ್ಲಿ

   ಅಲ್ಲಿ ಮಾತ್ರವೇ ಅಲ್ಲ ಕರ್ನಾಟಕದಲ್ಲಿಯೂ 3 ಸ್ಥಾನಗಳಲ್ಲಿ ಬಿ.ಜೆ.ಪಿ.ಗೆ ಸಿಕ್ಕಿದ್ದು ಒಂದು ಮಾತ್ರ. ಅದೂ ಶಿಕಾರಿಪುರ ಕ್ಷೇತ್ರದಲ್ಲಿ ಸಂಸದ ಯಡಿಯೂರಪ್ಪನವರ ಮಗ ಮಾಜಿ ಸಂಸದ ರಾಘವೇಂದ್ರನ ಗೆಲುವೂ ಕೂಡ ಅತ್ಯಂತ ಪ್ರಯಾಸಕರ. ಹಿಂದೆ 2013ರಲ್ಲಿ ಯಡಿಯೂರಪ್ಪನವರು 24,424 ಮತಗಳ ಅಂತರದಿಂದ ಗೆದ್ದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ 59,500 ರಷ್ಟು ಅಧಿಕ ಮತಗಳು ಈ ಕ್ಷೇತ್ರದಲ್ಲೇ ಸಿಕ್ಕಿದ್ದವು. ಆದರೆ ಇದಾದ ಮೂರು ತಿಂಗಳಲ್ಲೇ ಅವರ ಮಗ, ಬಿಜೆಪಿ ಅಭ್ಯರ್ಥಿ ಗೆದ್ದದ್ದು ಕೇವಲ 6430 ಮತಗಳಿಂದ. ಅದೂ ಅವರು ಹರಿಸಿದ ಹಣದ ಹೊಳೆಯಿಂದ ಎನ್ನುವ ಮಾತು ಸುಳ್ಳೇನಲ್ಲ.

   ಇನ್ನು ಬಳ್ಳಾರಿ ಗ್ರಾಮಾಂತರ ಜನಾರ್ಧನರೆಡ್ಡಿ-ಶ್ರೀರಾಮುಲು ಬಿಜೆಪಿಯ ಭದ್ರ ಕೋಟೆ ಎಂದೇ ಭಾವಿಸಲಾಗಿತ್ತು. ಅಲ್ಲಿ ಮತದಾರರು ಮಿಥ್ಯೆಯನ್ನು ಭಗ್ನಗೊಳಿಸಿದ್ದಾರೆ. ಹಿಂದೆ ಶ್ರೀರಾಮುಲು ಗೆದ್ದಿದ್ದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣರ ಎದುರು ಬಿಜೆಪಿಯ ಓಬಳೇಶ್ 33,104 ಅಂತರದಿಂದ ಸೋಲನ್ನಪ್ಪಿದ್ದಾರೆ, ಗಣಿ ಆಧಿಪತ್ಯಕ್ಕೆ ಸವಾಲು ಹಾಕಿದ್ದಾರೆ, ಅವರ ದಿವಾಳಿತನವನ್ನು ಬಯಲುಗೊಳಿಸಿದ್ದಾರೆ.

  ಇನ್ನೊಂದು ಕ್ಷೇತ್ರ ಚಿಕ್ಕೋಡಿ-ಸದಲಗಾದಲ್ಲಿ ಮಾಜಿ ಸಚಿವ, ಸಂಸದ ಪ್ರಕಾಶ ಹುಕ್ಕೇರಿಯವರ ಪುತ್ರ ಗಣೇಶ ಹುಕ್ಕೇರಿ 31820 ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ ಹಿಂದಿನಂತಹ ಅಂತರವನ್ನು ಕಾಯ್ದುಕೊಳ್ಳಲು ಆಗಿಲ್ಲ ಎಂಬುದೂ ಗಮನಾರ್ಹ.

   ಹೀಗೆ ರಾಜ್ಯದಲ್ಲಿ ಮೂರರಲ್ಲಿ ಎರಡನ್ನು ಕಾಂಗ್ರೆಸ್ ಪಡೆದಿದೆ. ಬಿಜೆಪಿಯಿಂದ ಒಂದನ್ನು ಕಿತ್ತುಕೊಂಡಿದೆ. ಶಿಕಾರಪುರದಂತಲ್ಲಿ ಜೆಡಿ(ಎಸ್) ನ ಸಕ್ರಿಯ ಬೆಂಬಲವೂ ಕಾಂಗ್ರೆಸ್ಗೆ ಹೆಚ್ಚು ಮತ ಪಡೆಯಲು ನೆರವಾಗಿದೆ. ಹಾಗೆಯೇ ಲೋಕಸಭಾ ಚುನಾವಣಾ ಫಲಿತಾಂಶದಿಂದ ಎಚ್ಚೆತ್ತ ಜೆಡಿಯು ವಿನ ಶರದ್, ಆರ್ಜೆಡಿಯ ಲಲ್ಲೂ ಮತ್ತು ಕಾಂಗ್ರೆಸ್ ನ ಮೈತ್ರಿಯ ಒಗ್ಗಟ್ಟು ಬಿಹಾರದಂತಹ ಕಡೆ ಬಿಜೆಪಿಯನ್ನು ಎದುರಿಸಲು ಸಾಧ್ಯವಾಗಿದೆ. 10 ಕ್ಷೇತ್ರಗಳಲ್ಲಿ 6ನ್ನು ಅವು ಗೆದ್ದಿವೆ. ಬಾಕಾ ಕ್ಷೇತದಲ್ಲಿ ಸೋತಿದ್ದು711 ಮತಗಳಿಂದ.

ಬಿಜೆಪಿಗೆ ಏಟು

   ಈ ಎಲ್ಲಾ ಫಲಿತಾಂಶಗಳು ಹಾರಾಡುತ್ತಿದ್ದ ಬಿಜೆಪಿ ಬಾಯಿ ಮುಚ್ಚಿಕೊಳ್ಳುವಂತೆ ಮಾಡಿವೆ. ‘ಮೋದಿಯ ಅಲೆಯನ್ನೇ ನಂಬಿ ಕೂಡದಿರಿ, ನಿಮ್ಮ ಕೆಲಸಗಳತ್ತ ಗಮನ ಕೊಡಿ’ ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿರುವುದು ಇಂತಹ ಹಿನ್ನೆಲೆಯಲ್ಲೇ ಇರಬೇಕು. ಲೋಕಸಬಾ ಚುನಾವಣೆ ಮತ್ತು ರಾಜ್ಯಗಳ ರಾಜಕೀಯ ಸಂದರ್ಭಗಳು ಭಿನ್ನವಾಗಿರುತ್ತವೆ ಎಂಬುದು ನಿಜವಾದರೂ ಕರ್ನಾಟಕದಲ್ಲಿ ಮತ್ತು ಬಿಹಾರದಲ್ಲಿ ಆ ಚುನಾವಣೆಗಳ ಬಳಿಕ ತಮ್ಮದೇ ಮೇಲುಗೈ ಎಂದು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ಬಿಜೆಪಿಗೆ ಜನ ಕೊಟ್ಟ ತಿರಸ್ಕಾರದ ಸಾಂಕೇತಿಕ ಏಟು ಎನ್ನುವುದನ್ನು ನಿರ್ಲಕ್ಷಿಸಲಾಗದು. ಹಾಗೆಯೇ ಬಿಜೆಪಿ ನಾಯಕರು ಅವಲೋಕನದ ಹೆಸರಿನಲ್ಲಿ ಈ ಹಿನ್ನೆಡೆಗೆ ಮಾಡಿಕೊಳ್ಳಲು ಒಂದು ಕುಂಟು ನೆಪ ಹುಡುಕಲು ದೆಹಲಿಯಲ್ಲಿ ಬೈಠಕ್ ಕುಳಿತಿದ್ದಾರೆ.

ಹೆಚ್ಚಲಿರುವ ಒತ್ತಡಗಳು

   ರಾಜ್ಯದಲ್ಲಿ ಹಲವಾರು ಗುಂಪುಗಳಾಗಿ, ಅಧಿಕಾರದ ವ್ಯಸನದ ಅತೃಪ್ತಿಯಿಂದ ಬಳುತ್ತಿದ್ದ ಕಾಂಗ್ರೆಸ್ ಒಳಗೆ ಒಗ್ಗಟ್ಟು ಮೂಡಿದ್ದು ಫಲಿತಾಂಶ ಉತ್ತಮವಾಗಲು ಪರಿಣಾಮ ಬೀರಿದೆ. ಈ ಫಲಿತಾಂಶವನ್ನು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ತಮ್ಮ ಸಾಧನೆಗಳ ಸರಮಾಲೆಗೆ ಪೋಣಿಸಿಕೊಳ್ಳಲು ತೊಡಗಿದ್ದಾರೆ. ಹಾಗೆ ಹೇಳಿಕೊಂಡರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಇನ್ನೊಂದಿಷ್ಟು ತಿಂಗಳು ಮುಂದುವರಿಯಬಹುದು, ಪರಮೇಶ್ವರರಂಥವರು ಉಪ ಮುಖ್ಯಮಂತ್ರಿ ಗದ್ದುಗೆಗೆ ಕ್ಲೇಮು ಹಾಕಬಹುದು, ಡಿ.ಕೆ.ಶಿವಕುಮಾರ್ ತನ್ನ ಸಾಮಥ್ರ್ಯ ಏನೆಂದು ತೋರಿಸಿ ಮುಂದೆ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹನೆಷ್ಟು ಎಂದೂ ಹೈಕಮಂಡ್ಗೆ ವರದಿ ನೀಡಬಹುದು. ಆದರೆ ಜನ ಲೋಕಸಭೆಯ ರಾಜಕಾರಣಕ್ಕಿಂತ ರಾಜ್ಯದಲ್ಲಿನ ಬೆಳವಣಿಗೆಗೆ ಒತ್ತು ನೀಡಿದ್ದಾರೆ.

   ಈ ಫಲಿತಾಂಶವು ಇನ್ನು ಸಿದ್ಧರಾಮಯ್ಯನವರು ಸರಾಗವಾಗಿ ಆಡಳಿತ ನಡೆಸಲು ಶಕ್ತಿ ತುಂಬಿದೆ, ಚುರುಕಿನಿಂದ ಕೆಲಸ ಮಾಡಬಹುದು ಎಂಬಂತಹ ಮಾತುಗಳು ಕೇಳಿಬಂದಿವೆ. ಆದರೆ ಅದು ಸುಲಭವೇನಲ್ಲ. ಈ ಫಲಿತಾಂಶವು ಸಿದ್ಧರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ಪಕ್ಷದೊಳಗೆ ಕೆಲವು ಒತ್ತಡಗಳನ್ನು ತಂದಿದೆ. ಸಂಪುಟದ ವಿಸ್ತರಣೆ, ಪುನರ್ ರಚನೆಯನ್ನು ಈ ಉಪಚುನಾವಣೆ ಬಳಿಕ ಮಾಡುವುದಾಗಿ ಹೇಳಿದ್ದರು. ಇದೀಗ ಸೇರಿದ್ದ ಪಕ್ಷದ ಉನ್ನತ ಸಮಿತಿ ಕೇವಲ ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳಿಗೆ ಮಾತ್ರ ಸೇರಿಸಿಕೊಳ್ಳುವುದಾಗಿ ಪ್ರಕಟಿಸಿದೆ. ಇನ್ನು ಅಧಿಕಾರದ ಪಾಲು ಬಯಸಿ ಕಾದಿರುವ ಆಕಾಂಕ್ಷಿಗಳಿಗೆ ನಿಗಮ, ಮಂಡಳಿ ಗಳಿಗೆ ನೇಮಿಸುವುದೂ ಇದರೊಂದಿಗೆ ನಡೆಯಲಿದೆಯೆಂದೂ ಹೇಳಲಾಗುತ್ತಿದೆ. ಆದರೆ ಇವೆಲ್ಲಾ ಹೇಳಿದಷ್ಟೂ ಸುಲಭವೇನಿಲ್ಲ. ಪರಮೇಶ್ವರ್ಗೆ ಉಪ ಮುಖ್ಯಮಂತ್ರಿ ಸ್ಥಾನ ಇಲ್ಲವೆಂದೂ, ಅವರು ಸಚಿವರಾಗಿ ಮಾತ್ರ ಇರಲಿದ್ದಾರೆಂಬುದು ಅವರ ‘ಓರಾಟ’ವನ್ನು ಮುಂದುವರಿಸುವ ಸೂಚನೆ ನೀಡುತ್ತವೆ. ಜೊತೆಗೆ ಸಭಾದ್ಯಕ್ಷರಾಗಿರುವ ಕಾಗೋಡು ತಿಮ್ಮಪ್ಪನವರು ‘ತಮ್ಮನ್ನು ಮಂತ್ರಿ ಮಾಡಬೇಡಿರೆಂದೂ ತಮಗೆ ಅದು ಬೇಕಿಲ್ಲವೆಂದೂ ಗುಡುಗಿದ್ದಾರೆ. ಪೂರ್ವ ಪೀಠಿಕೆಯಾಗಿ ಈ ಸರಕಾರ ಅಸ್ತಿತ್ವದಲ್ಲಿದೆಯೇ, ಎಲ್ಲಿದೆ? ಎಂದು ವಿರೋಧ ಪಕ್ಷದ ಧಾಟಿಯಲ್ಲೇ ಬಹಿರಂಗ ಹೇಳಿರುವುದು ಸವಾಲು ಹಾಕಿದಂತೆ. ಡಿಕೆಶಿ ಬಳ್ಳಾರಿ ಬಲದ ಬಳಿಕ ಅವರ ದನಿಯೂ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಇಂತಹ ತಿಕ್ಕಾಟಗಳು ಏನಿದ್ದರೂ ನಿಲ್ಲುವುದಿಲ್ಲ, ಅವು ಹೆಚ್ಚಾಗುವ ಸಂಭವವೇ ಹೆಚ್ಚು.

   ಬಿಜೆಪಿ-ಮೋದಿ ಬಗೆಗೆ ಸೃಷ್ಟಿಸಿದ್ದ ಭ್ರಮೆಗಳು ನಿಧಾನವಾಗಿ ಕರಗುತ್ತಿವೆ. ಹಾಗೆ ನೋಡಿದರೆ ಸಾಧಾರಣವಾಗಿ ಉಪಚುನಾವಣೆಗಳಲ್ಲಿ ಅಧಿಕಾರ ರೂಢ ಪಕ್ಷಕ್ಕೆ ಜನರು ಬೆಂಬಲಿಸುವುದು ತಮ್ಮ ಸಮಸ್ಯೆಗಳು ನೀಗಲಿ ಎಂಬ ಒಂದು ವ್ಯಾವಹಾರಿಕ ತೀರ್ಮಾನವಾಗಿರುತ್ತದೆ.

ಪರ್ಯಾಯದ ಕೊರತೆ

   ರಾಜ್ಯದಲ್ಲಿನ ಈ ಫಲಿತಾಂಶವು ಬಿಜೆಪಿಗೆ ಜನರ ಬೆಂಬಲ ಶಾಶ್ವತವಲ್ಲ ಎಂದೂ, ಕಾಂಗ್ರೆಸ್ ಸಹ ಬೀಗುವಂತಹುದು ಏನಿಲ್ಲವೆಂದೂ, ತೋರಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗುವ ಅವಕಾಶಗಳನ್ನು ನಿರಾಕರಿಸಿ, ‘ಸಂಪನ್ಮೂಲ’ದ ಕೊರತೆಯಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ ಜನತಾ ದಳ ವಹಿಸಬಹುದಾದ ರಾಜಕೀಯ ಪಾತ್ರವನ್ನು ಅದು ಕೈಬಿಟ್ಟಿದೆ. ಈ ಸಂದರ್ಭವು ಪರ್ಯಾಯದ ಕೊರತೆಯ ಗಂಭೀರ ಅಂಶವನ್ನು ಎತ್ತಿ ತೋರಿಸಿದೆ.

 
Comments Off

Posted by on 04/09/2014 in ಈ ವಾರ

 

Tags: , , , , , ,

ಅಧಿಕಾರ ಲಾಲಸೆಯ ಕಿತ್ತಾಟದಲ್ಲಿ ಕಾಂಗ್ರೆಸ್

(ಸಂಪುಟ 8 , ಸಂಚಿಕೆ 27, ಜುಲೈ  2014 )

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಏನಾಗಿದೆ? ಏನು ಮಾಡುತ್ತಿದೆ? ಎಂಬಂತಹ ಸಹಜ ಪ್ರಶ್ನೆಯನ್ನು ಹಾಕಿಕೊಂಡು ಮೇಲೆ, ಕೆಳಗೆ ನೋಡಿದರೆ ಸಾಮಾನ್ಯವಾಗಿ ತಿದ್ದಿಕೊಳ್ಳುವ ಬುದ್ದಿಯೇನಾದರೂ ಇದೆಯೇ ಎಂದು ಇಣುಕಿದರೆ ಅದಂತೂ ಅಲ್ಲಿ ಕಾಣ ಸಿಗುವುದಿಲ್ಲ.

ನಿರ್ಲಕ್ಷತೆ

ಹಾಗೆ ನೋಡಿದರೆ ಕಾಂಗ್ರೆಸ್ ಇದುವರೆಗೂ ತನ್ನ ಸೋಲಿನ ಕಾರಣಗಳನ್ನು ಅದು ಗಂಭೀರವಾಗಿ ಪರಿಶೀಲಿಸಿದ್ದಿಲ್ಲ, ವಿಮರ್ಶಿಸಿದ್ದಿಲ್ಲ. ತಿದ್ದಿಕೊಳ್ಳುವುದಂತೂ ದೂರವೇ ಉಳಿಯಿತು. ಅಂತಹ ಜರೂರತ್ತು ಅದಕ್ಕಿಲ್ಲವೇ ಇಲ್ಲ. ಈಗಲೂ ಪರಿಶೀಲನೆಯನ್ನು ಆ ಪಕ್ಷದ ಹೊರಗಿರುವವರು ಮಾಡುತ್ತಿದ್ದಾರೆ ಹೊರತು ಹೊಣೆ ಹೊತ್ತಿರುವವರಲ್ಲ. ಮೊನ್ನೆ ಮೈಸೂರಿನಲ್ಲಿಯ ಒಂದು ವಿಚಾರಗೋಷ್ಟಿಯಲ್ಲಿ ತಮ್ಮ ಮಗ್ಗುಲಲ್ಲೇ ಇರುವ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟುರವರು ಮಾಡಿದ ವಿಮರ್ಶೆಯನ್ನಾದರೂ ಕಾಂಗ್ರೆಸ್ ನಾಯಕರು ಕೇಳಿಸಿಕೊಂಡರೇ? ಕೇಂದ್ರದವರು ಇರಲಿ ರಾಜ್ಯದ ಕಾಂಗ್ರೆಸ್ನ ಎಷ್ಟು ನಾಯಕರು ಕಿವಿಗೊಟ್ಟರು? ಹೌದು, ಇಂತಹುಗಳಿಂದ ಅವರಿಗೇನು ಗದ್ದುಗೆ ಸಿಗುತ್ತದೆಯೇ? ಬಿಜೆಪಿ ಅವಲೋಕಿಸುತ್ತದೆಯಾದರೂ ಸತ್ಯವನ್ನು ಮರೆ ಮಾಚುತ್ತದೆ. ಸತ್ಯ ಕಾರಣ ಬಹಿರಂಗದಲ್ಲಿ ಗುರುತಿಸಲು ಬಹುತೇಕರು ನಿರಾಕರಿಸುತ್ತಾರೆ. ಇದು ಜನತಾದಳದಂತಹ ಪಕ್ಷದ ವಿಷಯದಲ್ಲೂ ನಿಜ. ಅವರೆಲ್ಲಾ ದೇಶದ ರೆಸಾರ್ಟ್ ಗಳು ಸಾಲದು ಅಂತಾ ಶ್ರೀಲಂಕಾ ದೇಶದ ರೆಸಾರ್ಟ್ ಗಳಲ್ಲಿ ವಿಮರ್ಶೆಯ ವಿಶ್ರಾಂತಿ ಪಡೆದು ಬಂದರಲ್ಲ, ಅಲ್ಲಿಂದ ಹಿಡಿದು ತಂದದ್ದಾದರೂ ಏನು? ಹೀಗೆ ಪಕ್ಷ, ಅದರ ನೀತಿ, ಜನರ ಮೇಲಿನ ಪ್ರೀತಿ ಎಂಬುದೀಗ ಮರೆಯಾಗಿ ಲೇಬಲ್ ಯಾವುದಾದರೇನು, ದಡ ಸೇರಲು ದೋಣಿಯೊಂದಿದ್ದರೆ ಅಷ್ಟೇ ಸಾಕು ಎನ್ನುವಷ್ಟರ ಮಟ್ಟಿಗೆ ಈ ಪಕ್ಷಗಳು ತಲುಪಿ ಬಿಟ್ಟಿವೆ. ಪಕ್ಷದ ಚಟುವಟಿಕೆಗಳು ಕುಟುಂಬದ ಖಾಸಗಿ ಆಸ್ತಿ ವ್ಯವಹಾರ.

ಅಧಿಕಾರವೇ ಮಂತ್ರ-ತಂತ್ರ

ಯಾವಾಗ ಲೋಕಸಭಾ ಚುನಾವಣೆ ಮುಗಿಯಿತೋ ಮಣ್ಣು ಮುಕ್ಕಿದ ಕೇಂದ್ರದ ಕಾಂಗ್ರೆಸ್ ನಾಯಕರು ‘ತಿಂದಿದ್ದನ್ನೆಲ್ಲಾ ಅರಗಿಸಿಕೊಳ್ಳಲು’ ಹಾಸಿಗೆ ಮೇಲೆ ಕಾಲು ಚಾಚಿ ದಿಂಬು ಎಳೆಯುತ್ತಿದ್ದಾರೆ. ಆದರೆ ಅದೇ ಹೊತ್ತಿನಲ್ಲಿ ಹಸಿದಿರುವ ರಾಜ್ಯ ನಾಯಕರು ಅಧಿಕಾರ ಹಂಚಿಕೊಳ್ಳುವ (ಮುಂದೆ ಅಧಿಕಾರ ಕಳೆದುಕೊಳ್ಳುವ) ಕಿತ್ತಾಟದಲ್ಲಿ ತೋಳೇರಿಸಿ ತೊಡೆ ತಟ್ಟಿ ನಿಂತು ಬಿಟ್ಟಿದ್ದಾರೆ. ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ಸೇನಾದರೂ ಒಂದಿಷ್ಟು ನೆಮ್ಮದಿ ತರಬಹುದು ಎಂಬ ಆಶೆಯಿಂದ ಅಧಿಕಾರಕ್ಕೇರಿಸಿದ ರಾಜ್ಯದ ಜನತೆಯನ್ನೇ ಮರೆತು ಬಿಟ್ಟಿದ್ದಾರೆ. ಈ ಗೆಲುವು ತಮ್ಮಿಂದಲೇ, ಆದ್ದರಿಂದ ಅಧಿಕಾರದ ರಸಗವಳದಲ್ಲಿ ತಮಗೆ ಪಾಲು ಸಿಗಲೇಬೇಕೆಂದು ಪಟ್ಟು ಹಿಡಿದು ರಂಪಾಟ ಆರಂಭಿಸಿದ್ದಾರೆ. ‘ಕೊಟ್ಟವನೇ ಕೋಡಂಗಿ, ತಿಂದವನೇ ಈರಭದ್ರನಲ್ಲವೇ?

ಕಾಂಗ್ರೆಸ್ನಲ್ಲಿ ಈಗ ಕಾಣುತ್ತಿರುವುದು ಕುಸ್ತಿ, ಮಸ್ತಿ, ಮುಷ್ಟಿ ಯುದ್ಧ. ಅದು ಒಂದಾಗಿದ್ದ ದಿನಗಳು ಮರೆಯಾಗಿ ದಶಕಗಳೇ ಸರಿದು ಹೋದವು. ಈಗಲೂ ರಾಜ್ಯದ ಕಾಂಗ್ರೆಸ್ ಒಂದು ಐಕ್ಯತೆ ಇರುವ ಪಕ್ಷವಲ್ಲ, ಬದಲಾಗಿ ಮೂಲ ಕಾಂಗ್ರೆಸ್ಸಿಗರು-ವಲಸಿಗರು ಎಂದೋ, ವಿವಿಧ ನಾಯಕರ ಹಿಂಬಾಲಕರ ಬಣಗಳಾಗಿಯೋ ಹೀಗೆ ಸ್ಥಾಪಿತ ಹಿತಾಸಕ್ತಿಗಳ ಹಲವಾರು ಗುಂಪುಗಳ ಗುದ್ದಾಡುವ ಕೂಟ. ಈಗ ಲೋಕಸಭೆಯ ಚುನಾವಣೆ ಮುಗಿಯಲೆಂದೇ ಕಾದು ಕುಳಿತಿದ್ದ ನಾಯಕರೆಲ್ಲಾ ಅಧಿಕಾರದ ತಮ್ಮ ಪಾಲು ಕೊಡಬೇಕೆಂದು ಕದನ ಆರಂಭಿಸಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ರವರು ಸಿ.ಎಂ.ಆಗಲಿಲ್ಲ, ಡಿ.ಸಿ.ಎಂ.ನ್ನಾದರೂ ಮಾಡಲೇಬೇಕೆಂದು ಬಹಿರಂಗವಾಗಿಯೇ ಆಗ್ರಹಿಸುತ್ತಿದ್ದಾರೆ. ಅದಕ್ಕಾಗಿ ಪಟ್ಟು ಹಿಡಿದು ಗುದ್ದಾಡಿ ವಿಧಾನ ಪರಿಷತ್ತಿನಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇದನ್ನು ತಡೆಯಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಣದ ತಂತ್ರಗಳೂ ಗುಪ್ತವೇನಲ್ಲ. ಜಿ.ಪ.ರವರನ್ನು ರಾಜ್ಯಸಭೆಯ ಸದಸ್ಯರನ್ನಾಗಿಸಿ ದೆಹಲಿಗೆ ಸಾಗ ಹಾಕಿ ಬಿಡಬೇಕೆಂಬ ಸಿದ್ದು ಬಣದ ಯತ್ನಗಳನ್ನು ಹೈಮಾಂಡ್ ನೆರವಿನಿಂದ ತಡೆದು ರಾಜ್ಯದ ರಾಜಕಾರಣದಲ್ಲೇ ಜಿ.ಪ. ಉಳಿದಿದ್ದಾರೆ.

ಜಾತಿ ಗುರಾಣಿಗಳು

ಇನ್ನು ಉಪ ಮುಖ್ಯಮಂತ್ರಿಯಾಗುವ ಆಸೆ ಈಡೇರಿಕೆಯ ಹಣಾ ಹಣಿ. ಆ ದಾರಿಯೂ ಸುಗಮವೇನಿಲ್ಲ. ಇದಕ್ಕೆ ಸಿದ್ಧರಾಮಯ್ಯ ಒಪ್ಪುತ್ತಿಲ್ಲವಾದ್ದರಿಂದ ಕೊನೆಗೆ ಮಂತ್ರಿಗಿರಿಗೆ ಪೈಪೋಟಿ! ಒಂದು ವೇಳೆ ಜಿ.ಪ.ರವರು ಮಂತ್ರಿಯಾದರೆ ತೆರವಾಗುವ ಪಕ್ಷದ ರಾಜ್ಯ ಅಧ್ಯಕ್ಷಗಿರಿಗೆ ಯಾರು ಬರಬೇಕು, ಡಿ.ಸಿ.ಎಂ ಯಾರಾಗಬೇಕು ಎಂಬ ವಿಷಯದ ಸುತ್ತಲೂ ಲಾಭಿ, ಪೈಪೋಟಿ ತೀವ್ರ ಸ್ವರೂಪ ಪಡೆಯುತ್ತಿದೆ. ಇದಕ್ಕಾಗಿ ಎಲ್ಲರೂ ಆಶ್ರಯಿಸುತ್ತ್ತಿರುವುದು ಜಾತಿ ಮೂಲಗಳನ್ನೇ. ಆದ್ದರಿಂದಲೇ ಮೇಲ್ಮನೆ ಸದಸ್ಯತ್ವ ಪಡೆಯಲು, ಮಂತ್ರಿಯಾಗಲು ಅಥವಾ ಪಕ್ಷದ ಹುದ್ದೇಗೇರಲು ಬಳಸುತ್ತಿರುವ ಕೋಲು ಎಂದರೆ ಜಾತಿಯೇ. ಈ ಸ್ಪರ್ಧೆಗೆ ಈಗ ಇಳಿದಿರುವವರು ಸೂಕ್ತ ಸ್ಥಾನ ಸಿಕ್ಕಿಲ್ಲವೆಂದು ಲಿಂಗಾಯತರು, ಒಕ್ಕಲಿಗರು, ಅಹಿಂದ ಹೆಸರಿನಲ್ಲಿ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿಯೇ ವೀರಶೈವ ಮಹಾಸಭಾ ಮೂಲಕ ಲಿಂಗಾಯತರಿಗೆ ಕಾಂಗ್ರೆಸ್ನಲ್ಲಿ ಸ್ಥಾನವಿಲ್ಲವೆಂದೂ, ಎಲ್ಲವೂ ಅಹಿಂದಮಯವಾಗಿದೆಯೆಂದು ನೀಡಿದ ಹೇಳಿಕೆಯ ಹಿಂದೆ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಕೈವಾಡ ಇರುವುದರಲ್ಲಿ ಯಾರಿಗೂ ಅನುಮಾನ ಉಳಿದಿಲ್ಲ. ತಮ್ಮ ಸ್ವಂತ ಮಗನಿಗೇ ಅಧ್ಯಕ್ಷಗಿರಿ ಬರಲಿ ಎಂಬ ದೂರಾಶೆ! ಇದು ಸಿಗದಿದ್ದರೆ ಡಿ.ಸಿ.ಎಂ. ಸ್ಥಾನವಾದರೂ ಸಿಗಲಿ ಎಂದು ದಾಳ ಬಿಟ್ಟವರು ಒಕ್ಕಲಿಗರ ಪ್ರಾತಿನಿಧ್ಯದ ಬಗ್ಗೆ ಹೇಳುತ್ತಿದ್ದಾರೆ. ಇವುಗಳಿಗೂ ಎದಿರೇಟು ನೀಡಲು ಸಿದ್ಧವಾಗಿರುವ ಸಿದ್ದು ಬಣ ಒಂದೊಮ್ಮೆ ಅಂತಹ ಜಾತಿ ಸೂತ್ರದ ಜಾರಿ ಬಂದರೆ ತಮ್ಮ ಹುದ್ದರಿಗಳನ್ನೇ ಅಲ್ಲಿ ಪ್ರತಿಷ್ಠಾಪಿಸುವ ತಂತ್ರವನ್ನೂ ಹೆಣೆಯುತ್ತಿದ್ದಾರೆ. ಈ ಕದನದಲ್ಲಿ ಎಲ್ಲಾ ಬಣಗಳೂ ಇಳಿದಿವೆ. ಕಾಂಗ್ರೆಸ್ಸನ್ನೇ ಬೆಂಬಲಿಸುತ್ತಾ ಬಂದಿದ್ದೇವೆ ಎಂದು ಹೇಳಿಕೊಂಡ ವೀರಶೈವ ಮಹಾಸಭಾದ ನಾಯಕರಿಗೂ ಸಚಿವ ಆಂಜನೇಯಲು ಅವರಿಗೂ ನಡೆದ ಬಹಿರಂಗ ವಾಗ್ವಾದ ವಿಚಿತ್ರವಾದ ಪ್ರಹಸನವಾಯಿತು.

ಈ ಬಣ ಬಡಿದಾಟದ ಸ್ವರೂಪ ಮತ್ತೊಮ್ಮೆ ಪ್ರದರ್ಶಿತವಾದುದು ಮೇಲ್ಮನೆಗೆ ನಾಲ್ವರ ನಾಮಕರಣದ ವಿಷಯದಲ್ಲಿ. ಮೊದಲು ಸಾಂಸ್ಕೃತಿಕ ಕ್ಷೇತ್ರದಿಂದ ಪ್ರಗತಿಪರ ಚಿಂತಕ ಡಾ.ಮರುಳಸಿದ್ದಪ್ಪನವರನ್ನು ನೇಮಿಸುವ ಪ್ರಕಟಣೆಗಳು ಹೊರಬಂದವು. ಆದರೆ ಅದು ಕೇವಲ ಸುದ್ದಿ ಮಟ್ಟಕ್ಕೆ ನಿಂತಿತು. ಹಾಗೆಯೇ ಇಂಟಕ್ ಕಾರ್ಮಿಕ ನೇತಾರ ಶಾಂತಕುಮಾರರವರ ಹೆಸರೂ ಕೂಡ ರಾಜಭವನ ಪ್ರವೇಶಿಸುವ ವೇಳೆಗೆ ಬದಲಾಗಿ ಹೋಯ್ತು. ಆ ಪಟ್ಟಿಯಲ್ಲಿ ನಟಿ ಜಯಮಾಲ, ಡಿಸೋಜಾ, ಜಬ್ಬರಖಾನ್, ಉಗ್ರಪ್ಪ, ಇಕ್ಬಾಲ್ ಅ. ಸರಡಗಿಯವರ ಹೆಸರುಗಳು ಅಂಗೀಕಾರಕ್ಕೆ ಮಂಡಿತವಾದವು. ಇಲ್ಲಿ ಸಂಸದ ಹೈಕಮಾಂಡ್ನ ಬಿ.ಕೆ.ಹರಿಪ್ರಸಾದ್, ಶಾಮನೂರು ಅವರ ಪಟ್ಟುಗಳೇ ಮೊದಲಿನ ಇಬ್ಬರ ನೇಮಕದಲ್ಲಿ ಕೆಲಸ ಮಾಡಿದವಂತೆ. ಈ ಜಗಳದಲ್ಲಿಯೂ ‘ಅಹಿಂದ’ ಫಾರ್ಮುಲಾವನ್ನೇ ಅನುಸರಿಸಲಾಯಿತಂತೆ!

ಇನ್ನು ಪಕ್ಷದ ಸಂಘಟನೆಯಾದರೂ ಯಾವ ಸ್ಥಿತಿಯಲ್ಲಿದೆ. ಸಚಿವರ ಕೆಲಸ, ಶಾಸಕರ ಅನಿಸಿಕೆಗಳ ಬಗ್ಗೆ ಕೇಂದ್ರದ ನಾಯಕರ ಸಮ್ಮುಖದಲ್ಲಿ ನಡೆದ ಅವಲೋಕನ ಸಭೆಯು ಕೆಲವು ಸಚಿವರನ್ನು ದೂಷಿಸುವ, ನಿರುಪಯೋಗಿಗಳೆಂದು ಪದಚ್ಯುತಿಗೊಳಿಸುವ ಧಾಳಿಯ ಸಂದರ್ಭವಾಗುವಲ್ಲಿ ಬಣ ರಾಜಕೀಯ ಮತ್ತು ಸಚಿವಾಕಾಂಕ್ಷಿ ಲಾಲಸೆಯೂ ಇಲ್ಲದಿರಲಿಲ್ಲ. ಸರ್ಕಾರದ ನಿಗಮ, ಮಂಡಳಿಗಳಿಗೆ ನೇಮಕ ಇತ್ಯಾದಿಗಳನ್ನು ಏನೇನೋ ನೆಪ ಹೇಳಿ ಮುಂದಕ್ಕೆ ಒತ್ತುತ್ತಾ ಬಂದಿರುವುದು ಮತ್ತೇ ಲೋಕಸಭಾ ಚುನಾವಣೆಯ ಬಳಿಕವೇ ಅಧಿಕಾರ ನೇಮಕಾತಿ ಎಂಬ ಸೂಚನೆ ನೀಡಿದ್ದು ಒಂದು ಒತ್ತಡವನ್ನು ಸೃಷ್ಟಿಸಿತ್ತು. ಇದು ಮೇಲ್ಮನೆಗೆ ಶಾಸಕರಾಗುವ ಧಾವಂತದಲ್ಲೂ ಕಂಡಿತು. ಮಂತ್ರಿಮಂಡಲದ ವಿಸ್ತರಣೆಯ ಸಂದರ್ಭವಂತೂ ಕಾಂಗ್ರೆಸ್ನಲ್ಲಿ ಇನ್ನಷ್ಟೂ ಕಿತ್ತಾಟವನ್ನು ಹುಟ್ಟು ಹಾಕುವುದರಲ್ಲಿ ಅನುಮಾನವೇ ಇಲ್ಲ.

ಬಹಿರಂಗ ಕಿತ್ತಾಟಗಳು

ಮೇಲಾಗಿ ಅವಲೋಕನದ ಸಂದರ್ಭದಲ್ಲಿ ಮಂತ್ರಿಗಳು ಉಸ್ತುವಾರಿಯಾಗಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋತದ್ದೇಕೆ ಎಂಬ ಪ್ರಸ್ತಾಪನೆಯೂ ಸಹ ಅಂತಃಕಲಹವನ್ನು ಬಯಲಿಗಿಟ್ಟಿತು. ಆಗಲೇ ಸೋತ ರಮ್ಯಾ ನೇರವಾಗಿ ಅಂಬರೀಶ್ ಬಣವೇ ತಮ್ಮ ಸೋಲಿಗೆ ಕಾರಣವೆಂದು ದೂಷಿಸಿದ್ದರು. ಅಂಬಿ ಬಣವೂ ಕೂಡ ರಮ್ಯಾ ಹೈಕಮಾಂಡ್ಗೆ ದೂರು ನೀಡುವ, ಮತ್ತಿತರೆ ಬೆದರಿಕೆಗಳಿಗೆ ಬಗ್ಗುವುದಿಲ್ಲವೆಂದು ಮಾಧ್ಯಮಗಳ ಮುಂದೆಯೇ ಸವಾಲೆಸೆದಿದ್ದರು. ಇದೂ ಕೂಡ ಪರೋಕ್ಷವಾಗಿ ಹಿರಿಯ ನಾಯಕ ಎಸ್.ಎಂ.ಕೃಷ್ಣರ ಬಣದ ವಿರುದ್ಧದ ಧಾಳಿಯಾಗಿತ್ತು. ಇದಾದ ಬಳಿಕ ಸಚಿವ ಅಂಬರೀಶ್ ಅಕ್ರಮವಾಗಿ ಐದು ನಿವೇಶನಗಳನ್ನು ಪಡೆದಿದ್ದಾರೆ ಎಂಬ ದೂರುಗಳಲ್ಲಿ ವಿರೋಧಿ ಬಣದ ಕೈವಾಡ ಇದೆ ಎನ್ನಲಾಗುತ್ತಿದೆ. ಅಂದರೆ ಈ ಕಿತ್ತಾಟ ಖಂಡಿತಕ್ಕೂ ನಿಲ್ಲುವಂತಹುದೇನಲ್ಲ.

ಬಿಜೆಪಿಗೆ ನೀಡುತ್ತಿರುವ ಅವಕಾಶಗಳು

ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಕೇಂದ್ರದಲ್ಲಿ ದಯನೀಯವಾಗಿ ಸೋತು ತತ್ತರಿಸುತ್ತಿರುವ ಕಾಂಗ್ರೆಸ್ ಕಿಂಚಿತ್ತಾದರೂ ಪಾಠ ಕಲಿಯುತ್ತದೆ ಎಂದು ಭಾವಿಸಲು ಸಾಧ್ಯವೇ ಇಲ್ಲ ಎಂಬುದು ಖಚಿತ. ಅದರಲ್ಲೂ ಬಿಜೆಪಿ ಭಾರೀ ಬಹುಮತವನ್ನು ಸಂಸತ್ತಿನಲ್ಲಿ ಹೊಂದಿ ಧರ್ಮನಿರಪೇಕ್ಷತೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು, ನ್ಯಾಯಾಂಗವನ್ನೂ, ರಾಜ್ಯಪಾಲರ ಹುದ್ದೆಯಂತಹ ಸಂಸದೀಯ ಸಂಸ್ಥೆಗಳನ್ನು ದುರ್ಬಲಗೊಳಿಸುವ ಹಲವು ಪ್ರಯತ್ನದಲ್ಲಿ ತೊಡಗಿದೆ. ಬೆಲೆ ಹೆಚ್ಚಿಸುವ ನೀತಿಗಳ ಮೂಲಕವೂ ಜನರ ಮೇಲೆ ಧಾಳಿ ಆರಂಭಿಸಿದೆ. ವಿಶೇಷವಾಗಿ ಸಂಘಪರಿವಾರವು ಕೋಮುವಾದ ಬೆಳೆಸಲು, ವಿಭಜನೆ ತರಲು ದೇಶಾದ್ಯಂತ ಹಿಂದೂ ಸಮಾಜೋತ್ಸವಗಳಂತಹ ಹಲವಾರು ಕಾರ್ಯಕ್ರಮಗಳನ್ನು, ಅಲ್ಪಸಂಖ್ಯಾತರ ಮೇಲೆ ಧಾಳಿಯನ್ನೂ ನಡೆಸುತ್ತಿದೆ. ಹೀಗಿರುವಾಗ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮೋದಿ ಸರಕಾರದ ನೀತಿಗಳ ವಿರುದ್ಧ ಪರಿಣಾಮಕಾರಿಯಾಗಿ ಏನೂ ಮಾಡದೇ ಒಂದು ರೀತಿಯ ಮೌನವ್ರತ ಹಿಡಿದಿರುವುದರ ಅರ್ಥವೇನು? ಇದರೊಟ್ಟಿಗೆ ಅಧಿಕಾರ ಇರುವ ರಾಜ್ಯಗಳಲ್ಲಿಯೂ ಸಂಘಟನಾತ್ಮಕವಾಗಿಯೂ, ರಾಜಕೀಯವಾಗಿಯೂ ಒಡಕು, ಕಿತ್ತಾಟ ಮತ್ತು ನಿಷ್ಕ್ರಿಯತೆಗಳು ಖಂಡಿತಕ್ಕೂ ಹಾನಿ ತರದೇ ಇರಲಾರದು. ಅಂದರೆ ರಾಜ್ಯದಲ್ಲಿ ನೆಲಕಚ್ಚಿದ್ದ ಬಿಜೆಪಿ ಲೋಕಸಭಾ ಚುನಾವಣೆಯ ಬಳಿಕ ಮತ್ತೇ ತಲೆ ಎತ್ತಿ ನಡೆಯಲು ಮುಕ್ತ ಅವಕಾಶವನ್ನು ಕಲ್ಪಿಸುತ್ತಿದೆ. ಉದಾಹರಣೆಯೆಂದರೆ ರೈಲ್ವೇ ರೇಟ್ ಹೆಚ್ಚಳದ ಬಗ್ಗೆ ಕಾಂಗ್ರೆಸ್ ಏನೂ ಮಾಡಲಿಲ್ಲ, ಆದರೆ ಕಬ್ಬು ಬೆಳೆಗಾರರ ಪ್ರಶ್ನೆಯೆತ್ತಿ ಬಿಜೆಪಿ ಸದನದಲ್ಲಿ ಪ್ರತಿಭಟನೆ ನಡೆಸಿತು!

ಇಂತಹ ಸನ್ನಿವೇಶದಲ್ಲಿ ಎಡಶಕ್ತಿಗಳು, ಜನ ಸಂಘಟನೆಗಳು ಪರ್ಯಾಯ ನೀತಿಗಳ ಆಧಾರದಲ್ಲಿ ಜನತೆಯ ನಡುವೆ ವ್ಯಾಪಕವಾಗಿ ಹೋಗಬೇಕಾಗಿದೆ.

 
Comments Off

Posted by on 21/08/2014 in ಈ ವಾರ

 

Tags: , , , , , , , ,

 
Follow

Get every new post delivered to your Inbox.

Join 2,660 other followers

%d bloggers like this: