ಭಾರತದಲ್ಲಿ ರೈತ ಚಳುವಳಿಗಳು ೧೯೨೦-೧೯೫೦

ಪುಸ್ತಕ ಪ್ರೀತಿ ಆಯ್ಕೆ

ಸ್ವಾತಂತ್ರ್ಯಪೂರ್ವ ಭಾರತದಲ್ಲಿ (೧೯೨೦-೫೦)ನಡೆದ ಐದು ಪ್ರಮುಖ ರೈತ ಚಳುವಳಿಗಳ ಚಿತ್ರಣ ಮತ್ತು ಸಮಾಜ ಶಾಸ್ತ್ರೀಯ ವಿಶ್ಲೇಷಣೆಯಿರುವ ಪ್ರಸಿದ್ಧ ಸಮಾಜಶಾಸ್ತ್ರಜ್ಞ ಪ್ರೊ. ಡಿ.ಎನ್.ಧನಗೆರೆ ಅವರ ’ಕ್ಲಾಸಿಕ್’ ಎನಿಸಿದ ಪುಸ್ತಕ ಇದು. ಮಲಬಾರಿನ ಮಾಪಿಳ್ಳೆ ದಂಗೆ, ಬಾರ್ಡೋಲಿ ಸತ್ಯಾಗ್ರಹ, ಅವಧದ ೧೯೨೦-೨೨ ಮತ್ತು ೧೯೩೦-೩೨ರ ಚಳುವಳಿ, ಬಂಗಾಳದ ತೇಭಾಗ ಚಳುವಳಿ, ತೆಲಂಗಾಣ ರೈತರ ಸಶಸ್ತ್ರ ಹೋರಾಟ – ಇವೇ ಇಲ್ಲಿನ ಪ್ರಮುಖ ರೈತ ಚಳುವಳಿಗಳು. ಇವಲ್ಲದೆ ೧೯೨೦ರ ಮೊದಲಿನ ರೈತ ಬಂಡಾಯಗಳ ಸ್ಥೂಲ ಚಿತ್ರಣವೂ ಇದೆ. ಇಲ್ಲಿ ಐದು ಪ್ರಮುಖ ರೈತ ಚಳುವಳಿಗಳನ್ನು – ಚಳುವಳಿಗೆ ತಕ್ಷಣದ ಕಾರಣವಾದ ಸಮಸ್ಯೆ, ಚಾರಿತ್ರಿಕ ಹಿನ್ನೆಲೆ, ಚಳುವಳಿ ನಡೆದ ಪ್ರದೇಶದಲ್ಲಿ ವರ್ಗಗಳ ಸಂರಚನೆ, ವಿವಿಧ ವರ್ಗಗಳ ಪಾತ್ರ, ರೈತರನ್ನು ಅಣಿ ನೆರೆಸುವ ವ್ಯೂಹ-ತಂತ್ರಗಳು, ಸಮಸ್ಯೆಗೆ ಕಂಡುಕೊಂಡ ಪರಿಹಾರ, ಚಳುವಳಿಯ ಒಟ್ಟು ಪರಿಣಾಮಗಳು – ಈ ಎಲ್ಲಾದೃಷ್ಟಿಕೋನಗಳಿಂದ ವಿಶ್ಲೇಷಿಸಲಾಗಿದೆ.

   ’ಸ್ವಾತಂತ್ರ್ಯಪೂರ್ವ ಚಳುವಳಿಗಳಿಂದ ಇಂದಿನ ರೈತ ಚಳುವಳಿ ಏನು ಕಲಿಯಬಹುದು?’ ಮತ್ತು ಪ್ರೊ. ಧನಗೆರೆಯವರ ವಿಶ್ಲೇಷಣೆಯ ವಿಮರ್ಶಾತ್ಮಕ ಹಿನ್ನೋಟ ಕೊಡುವ ಅಖಿಲ ಭಾರತ ಕಿಸಾನ್ ಸಭಾದ ಇಬ್ಬರು ನಾಯಕರು ಬರೆದ ಮುನ್ನುಡಿ-ಬೆನ್ನುಡಿ ಈ ಪುಸ್ತಕದ ಉಪಯುಕ್ತತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ರೈತ ಮತ್ತು ಪ್ರಜಾಸತ್ತಾತ್ಮಕ ಚಳುವಳಿಗಳಲ್ಲಿ ತೊಡಗಿರುವ ಕಾರ್ಯಕರ್ತರು, ನಾಯಕರು; ಇತಿಹಾಸ ಮತ್ತಿತರ ಸಮಾಜ ವಿಜ್ಞಾನಗಳ ವಿದ್ಯಾರ್ಥಿಗಳು, ಸಂಶೋಧಕರು; ಮತ್ತು ಇತರ ಸಾಮಾನ್ಯ ಆಸಕ್ತರು ಓದಲೇಬೇಕಾದ ಮಾತ್ರವಲ್ಲ ಗಂಭೀರವಾಗಿ ಅಧ್ಯಯನ ಮಾಡಬೇಕಾದ ’ಕ್ಲಾಸಿಕ್’ ಪುಸ್ತಕ. ಇದರ ಅನುವಾದ ಓದಿಸಿಕೊಂಡು ಹೋಗುವಂತಹುದೂ ಆಗಿದೆ.

Raitha Chaluvali Cover Front

ಭಾರತದಲ್ಲಿ ರೈತ ಚಳುವಳಿಗಳು
ಮೂಲ: ಪ್ರೊ. ಡಿ.ಎನ್.ಧನಗೆರೆ ಅನು: ರಾಮಚಂದ್ರ ಉಡುಪ, ಅನಂತ ಕೃಷ್ಣ ಹೆಬ್ಬಾರ, ಪ್ರದೀಪ ಶೆಟ್ಟಿ
ಕ್ರಿಯಾ ಪ್ರಕಾಶನ ಬೆಲೆ ರೂ. ೨೩೦

Advertisements