`ನೀಟ್’ ಜಾರಿಗೆ ಪೂರ್ವ ಸಿದ್ಧತೆ ಅಗತ್ಯ

ಸಂಪುಟ: 10 ಸಂಚಿಕೆ: 20 May 8, 2016
neet

ಶಿಕ್ಷಣ ಕ್ಷೇತ್ರವಿಂದು ಗೊಂದಲಗಳ ಗೂಡಾಗಿದೆ. ಒಂದೆಡೆ ಆಳುವವರು ತೆಗೆದುಕೊಳ್ಳುವ ನಿರ್ಧಾರಗಳು, ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಹಿಡಿತ ಹೊಂದಿರುವ ಖಾಸಗಿ ಶಿಕ್ಷಣೋದ್ಯಮಿಗಳು. ಕಾಲಕಾಲಕ್ಕೆ ನ್ಯಾಯಾಲಯಗಳ ತೀರ್ಪುಗಳು ಹೀಗೆ ಅವುಗಳನ್ನು ಗೋಜಲುಗೊಳಿಸುತ್ತಲೇ ಇರುತ್ತವೆ. ಅದೆಷ್ಟೋ ಬಾರಿ ಸಮಸ್ಯೆಗಳಿಗೆ ಸೂಚಿಸುವ ಪರಿಹಾರಗಳೂ ಸಹ ಸಾಂದರ್ಭಿಕ ಕಾಲ ಮಿತಿಗಳಿಂದಾಗಿ ಅರಗಿಸಿಕೊಳ್ಳಲಾಗದ ಅನ್ನವಾಗಿಯೂ ಬಿಡುತ್ತವೆ.

ಈಗ ದೇಶದಲ್ಲಿ, ನಮ್ಮ ರಾಜ್ಯದಲ್ಲಿಯೂ ವ್ಯಾಪಕ ಚರ್ಚೆ ನಡೆಯುತ್ತಿರುವುದು ವೈದ್ಯಕೀಯ, ಮತ್ತಿತ್ತರ ಕೋರ್ಸ್‍ಗಳಿಗೆ ಪ್ರವೇಶಾವಕಾಶ ಕುರಿತ (ನೀಟ್) ಸುಪ್ರಿಂಕೋರ್ಟ್‍ನ ಆದೇಶದ ಸುತ್ತ. ಇದೇ ಏಪ್ರಿಲ್ 28 ರಂದು ಮೆಡಿಕಲ್, ಡೆಂಟಲ್ ಶಿಕ್ಷಣದ ಪ್ರವೇಶಾತಿಗೆ `ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ಎನ್.ಇ.ಇ.ಟಿ) ಕಡ್ಡಾಯ ಮತ್ತು ಇಡೀ ದೇಶದಲ್ಲಿನ ಪ್ರಕ್ರೀಯೆಗೆ ಅದೊಂದೇ ಕ್ರಮ ಅನುಸರಿಸಬೇಕು ಎಂಬ ಆದೇಶವನ್ನು ಸುಪ್ರೀಂಕೋರ್ಟ್‍ನ ಐದು ನ್ಯಾಯ ಮೂರ್ತಿಗಳ ಪೀಠ (ನ್ಯಾ. ಅನಿಲ್ ದವೆ ನೇತೃತ್ವದ ಸಂವಿಧಾನ ಪೀಠ) ತೀರ್ಪು ನೀಡಿತ್ತು.

ಈಗ ನಿಗದಿಯಾದಂತೆ ಮೊದಲ ಹಂತದ ಪರೀಕ್ಷೆಗಳನ್ನು 2016 ರ ಮೇ 1 ರಂದು ನಡೆಸಬೇಕೆಂದೂ, ಹೊಸದಾಗಿ ಬರೆಯಬೇಕಿರುವವರಿಗೆ ಜುಲೈ 24, 2016 ರಂದು ದಿನಾಂಕಗಳನ್ನು ಸೂಚಿಸಿತು. ಈ ಏಕರೂಪದ ಪರೀಕ್ಷೆಯೇ ದೇಶದ ಎಲ್ಲ ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಅನಿವಾರ್ಯ, ಕಡ್ಡಾಯ ಅದನ್ನು ಪಾಲಿಸಬೇಕೆಂದು ಕಠಿಣವಾದ ನಿರ್ದೇಶನವನ್ನು ನೀಡಿತು.

ಪರೀಕ್ಷೆ ತೀರಾ ಹತ್ತಿರವಿರುವಾಗ, ರಾಜ್ಯಗಳು ಸಿಇಟಿ, ಕಾಮೆಡ್-ಕೆ. ಯಂತಹ ತನ್ನದೇ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗಿರುವಾಗ, ತಮಿಳುನಾಡಿನಲ್ಲಿ ಇಂತಹ ಪರೀಕ್ಷೆಗಳೆ ಇಲ್ಲದೆ, ಮಂಡಳಿಯ ಪರೀಕ್ಷೆಯ ಅಂಕಗಳನ್ನೇ ಆಧಾರವಾಗಿ ಇರಿಸಿಕೊಂಡು ಅರ್ಹತೆಯ ಆಯ್ಕೆ ಮಾಡುತ್ತಿರುವಾಗ, ಅದೆಲ್ಲವನ್ನು ರದ್ದುಗೊಳಿಸಿ `ನೀಟ್’ ಪರೀಕ್ಷೆಯೊಂದನ್ನೇ ಅನುಸರಿಸಬೇಕೆಂಬುದು ಬಹುತೇಕ ಎಲ್ಲರಲ್ಲಿ, ಮುಖ್ಯವಾಗಿ ಪೋಷಕರು, ವಿದ್ಯಾರ್ಥಿಗಳಲ್ಲಿ ಆತಂಕ, ತಲ್ಲಣಗಳನ್ನೂ ಸೃಷ್ಟಿಸಿರುವುದು ನಿಜ. ಆದರೆ ನ್ಯಾಯಾಲಯ ತನ್ನ ಬಿಗಿ ನಿಲುವು ಸಡಿಲಗೊಳಿಸುವುದು ಅಸಾಧ್ಯವೆಂದು ಮುಂದಿನ ಮನವಿ ಕುರಿತ ಸಂದರ್ಭದಲ್ಲಿ ಸ್ವಷ್ಟಪಡಿಸಿದೆ.

2016 ರ ಈ ತೀರ್ಪು ತನ್ನ ಹಿಂದಿನ 2013ರ ಬಹುತೇಕ ತೀರ್ಪಿನ್ನು ಅನೂರ್ಜಿತಗೊಳಿಸಿದಂತೆ ಆಗಿದೆ. 2013 ರಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ನ್ಯಾ. ಅಲ್ತಮಸ್ ಕಬೀರ್ ರವರ ಮೂರು ನ್ಯಾಯಮೂರ್ತಿಗಳ ಪೀಠ ಬಹುಮತದಿಂದ ನೀಟ್ ಪದ್ಧತಿಯನ್ನು ನಿರಾಕರಿಸಿ ರಾಜ್ಯಗಳಲ್ಲಿ ಅವರದೇ ರೀತಿಯ ಪರೀಕ್ಷೆಗಳನ್ನೂ ನಡೆಸಲು ಆದೇಶಿಸಿತ್ತು. ಮಹಾನಗರಗಳಲ್ಲಿ ಬೆಳೆದ ಮಕ್ಕಳು ಮತ್ತು ಗ್ರಾಮೀಣ ಪರಿಸರದ ಮಕ್ಕಳ ನಡುವೆ ಜ್ಞಾನದ ಕಲಿಕೆಯಲ್ಲಿ ಅಪಾರ ವ್ಯತ್ಯಾಸವಿದೆ. ರಾಜ್ಯಗಳ ಹಾಗೂ ಅಲ್ಪ ಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ಮಾನ್ಯ ಮಾಡಬೇಕಾಗುತ್ತದೆ ಎಂದು ತನ್ನ ತೀರ್ಪಿಗೆ ಸಮರ್ಥನೆಯನ್ನು ನೀಡಿತ್ತು. ಈ ತೀರ್ಪು ಬಹುಮತದಿಂದ ತೆಗೆದುಕೊಂಡದ್ದಾಗಿತ್ತಲ್ಲದೆ, ನ್ಯಾ. ಅಲ್ತಮಸ್ ರವರು ನಿವೃತ್ತಿ ಹೊಂದುವ ಹಿಂದಿನ ದಿನ ತೀರ್ಪು ಪ್ರಕಟಿಸಿದ್ದನ್ನ ಪ್ರಶ್ನಿಸಲಾಗಿತ್ತು. ಈಗಲೂ ನ್ಯಾ. ದವೆ ಯವರ ನೇತೃತ್ವದ ಪೀಠ ಈ ಪ್ರಶ್ನೆಯನ್ನು ಪ್ರಸ್ತಾಪಿಸಿದೆ.

2016ರ ಏಪ್ರಿಲ್ 28 ರ ತನ್ನ ತೀರ್ಪಿನಲ್ಲಿ ಈ ವಾಸ್ತವಗಳನ್ನು ಗಮನಿಸಿದಾಗ್ಯೂ ಈ ಅವಕಾಶವನ್ನೇ ಬಳಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ-ಪೋಷಕರಿಂದ ವಿಪರೀತ ಹಣವನ್ನು ಸುಲಿಯುತ್ತಿವೆ. ಮಾತ್ರವಲ್ಲ, ಅವರವರದ್ದೇ ಪರೀಕ್ಷಾ ಪದ್ಧತಿಗಳು ಇರುವುದರಿಂದಾಗಿ ವಿದ್ಯಾರ್ಥಿಗಳು ಹಲವಾರು ಪರಿಕ್ಷೆಗಳನ್ನು ಬರೆಯಬೇಕಾದ ವಿಪರೀತ ಒತ್ತಡದಲ್ಲಿದ್ದಾರೆ, ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಇದು ತೊಲಗಿ ಒಂದು ಏಕರೂಪದ ಪರೀಕ್ಷಾ ವ್ಯವಸ್ಥೆ ಅನಿವಾರ್ಯ, ಅಗತ್ಯವೆಂದು ಈಗಿನ ಪೀಠ ಪ್ರತಿಪಾದಿಸಿತು.

ಎತ್ತಲಾದ ಹಲವು ಪ್ರಶ್ನೆಗಳಿಗೆ ಸ್ವಷ್ಟನೆ ನೀಡುತ್ತಾ ಪೀಠವು ರಾಜ್ಯದ ನೀಟ್ ಹಂಚಿಕೆ ಕೋಟಾ 85% ರಷ್ಟು ಈಗಿರುವಂತೆ ಮುಂದುವರಿಯುತ್ತದೆಂದೂ ಕೇಂದ್ರಕ್ಕೆ 15% ಹಂಚಿಕೆ ಈಗಿರುವಂತೆ ಲಭ್ಯವೆಂದೂ ಹೇಳಿ ರಾಜ್ಯಗಳ, ಪ್ರಾದೇಶಿಕ, ಸಂವಿಧಾನಾತ್ಮಕ ಹಾಗೂ ಮೀಸಲಾತಿಗಳನ್ನು ನಿರಾಕರಿಸುವುದಿಲ್ಲ, ಪಾಲಿಸಲೇಬೇಕು ಎಂದೂ ಹೇಳಿದೆ. ಹಾಗೇ ಕ್ಯಾಪಿಟೇಶನ್, ಡೋನೇಷನ್ ಸುಲಿಗೆಗೆ ನಿಯಂತ್ರಣದ ಬಗ್ಗೆಯೂ ಸೂಚಿಸಿದೆ. ಭಾರೀ ಅವ್ಯವಹಾರಗಳ ಆಗರವಾಗಿದೆಯೆಂಬ ಆರೋಪವಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಆಡಳಿತ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿ ಕೇಂದ್ರ ಸರ್ಕಾರ ಪರ್ಯಾಯವಾಗಿ ಮುಂದಿನ ಕಾನೂನು – ವ್ಯವಸ್ಥೆಯನ್ನು ಮಾಡುವವರೆಗೆ ನಿಗಾ ಸಮಿತಿಯನ್ನು ರಚಿಸಿ ಕಣ್ಗಾವಲು ಇರಿಸಿದೆ.

ಈ ಒಟ್ಟು ತೀರ್ಪಿನಲ್ಲಿ ಹಲವಾರು ಸಕಾರಾತ್ಮಕ ಅಂಶಗಳಿವೆ. ಶಿಕ್ಷಣದ ವ್ಯಾಪಾರೀಕರಣ, ಅದರಲ್ಲೂ ವೃತ್ತಿ ಶಿಕ್ಷಣದ ಭಾರೀ ದಂಧೆಯಲ್ಲಿ ಹಣದ ಲೂಟಿಗೆ ಕಡಿವಾಣ ಹಾಕುವುದು ಸ್ವಾಗತಾರ್ಹ. ಆದರೆ ಇಂತಹ ಅತ್ಯಂತ ಮಹತ್ವದ ತೀರ್ಪನ್ನು ಜಾರಿಗೊಳಿಸಬೇಕಾದರೆ ಕಾಲಾವಾಕಾಶ ಬೇಕಾಗುತ್ತದೆ. ಹಲವಾರು ಪ್ರಶ್ನೆಗಳಿಗೆ ಪ್ರಾಯೋಗಿಕವಾದ ಉತ್ತರಗಳನ್ನು ಕಂಡು ಕೊಳ್ಳಬೇಕಾಗುತ್ತದೆ, ಜಾರಿವಿಧಾನಗಳನ್ನು ರೂಪಿಸಬೇಕಾಗುತ್ತದೆ.

ಆದ್ದರಿಂದ 2016 ಏಪ್ರೀಲ್ 28 ರ ಸುಪ್ರಿಂ ಕೋರ್ಟ್‍ನ ತೀರ್ಪನ್ನು 2017-18ರ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವುದು ಅತ್ಯಗತ್ಯ.

ಇದರೊಂದಿಗೆ ಹಲವು ಸಮಸ್ಯೆಗಳೂ ಇವೆ. ಹಿಂದೆ ನ್ಯಾಯಾಲಯ ಗಮನಿಸಿದಂತೆ, ಇಡೀ ರಾಷ್ಟ್ರಕ್ಕೆ ಏಕರೂಪ ಪರೀಕ್ಷೆಯಾದಾಗ ಬಹುತೇಕ ರಾಜ್ಯಗಳಲ್ಲಿ ಆ ಮಟ್ಟದ ಕಲಿಕೆ, ತರಬೇತಿಗಳು ಇಲ್ಲ. ಹಾಗೂ ಇನ್ನೂ ನೀಡುವ ಕೋಚಿಂಗ ಸೆಂಟರ್, ಶಿಕ್ಷಣ ಸಂಸ್ಥೆಗಳು ವಿಪರೀತ ಹಣವನ್ನು (1.5 ಲಕ್ಷದಿಂದ 2 ಲಕ್ಷ ಪ್ರತಿ ವರ್ಷ) ಸುಲಿಯುತ್ತವೆ. ಕಾಲೇಜು ಪೀಜ್ ಕಟ್ಟಲೇ ಅಸಾಧ್ಯವಿರುವವರು ಆರ್ಥಿಕವಾಗಿ ಸಾಮಾಜಿಕವಾಗಿ ದುರ್ಬಲರು ಹೇಗೆ ತರಬೇತಿ ಪಡೆಯಲು ಸಾಧ್ಯ? ಅಲ್ಲದೆ ಆಯಾ ರಾಜ್ಯಗಳಲ್ಲಿ ಒಂದೊಂದು ರೀತಿಯ ಪಠ್ಯಕ್ರಮವೂ ಇರುತ್ತದೆ. ಪ್ರಾದೇಶಿಕ ಭಿನ್ನತೆ ಇರುತ್ತದೆ. ಹೀಗಿರುವಾಗ `ಮುಂದುವರಿದ’ ವಿಭಾಗಗಳು `ನೀಟ್’ ನ ಲಾಭ ಬಾಚಿಕೊಳ್ಳಲಾರರೇ? ಹಾಗಾಗಿ ನಮ್ಮ ರಾಜ್ಯಗಳಲ್ಲಿಯೂ ಕೆಳಹಂತದಿಂದ ಮೇಲಿನ ವರೆಗೆ ಪಠ್ಯಕ್ರಮದಲ್ಲಿ ಗುಣಮಟ್ಟದ ಸುಧಾರಣೆ, ಶಿಕ್ಷಣ ನೀಡಿಕೆ, ಮೂಲಭೂತ ಸೌಲಭ್ಯಗಳನ್ನು ಉನ್ನತೀಕರಿಸುವುದು ಅನಿವಾರ್ಯ, ಅತ್ಯಗತ್ಯ.

ಅದೇ ಹೊತ್ತಿನಲ್ಲಿ ಶಿಕ್ಷಣ ಮತ್ತು ಪ್ರವೇಶಾತಿಗಳನ್ನು ವಿಪರೀತವಾಗಿ ಕೇಂದ್ರೀಕರಿಸುವುದು ಸರಿಯಲ್ಲ. ಕಾರ್ಪೋರೇಟ್ ಧಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವೀಕರಣದ ಮೂಲ ನೀತಿಗಳನ್ನು ಬದ್ಧತೆಯಿಂದ ಪಾಲಿಸಲು ಹೆಚ್ಚಿನ ಗಮನ ನೀಡಬೇಕಿದೆ.

ಹೀಗಾಗಿ `ನೀಟ್’ ಜಾರಿಯನ್ನು ಮುಂದಿನ ವರ್ಷದಿಂದ ಸಕಲ ಸಿದ್ಧತೆ ಮಾಡಿ ನಡೆಸುವುದು ವಾಸ್ತವದ ಕ್ರಮವಾಗುವುದು. ನಿಜ, ಇಂದು ಖಾಸಗೀ ಸಂಸ್ಥೆಗಳ ಲೂಟಿ. ಹಲವು ಪರೀಕ್ಷೆಗಳ ಹೆಸರಿನಲ್ಲಿ (ಸಿಇಟಿ, ಕಾಮೆಡ್-ಕೆ ಮತ್ತು ಆಯಾ ಸಂಸ್ಥೆಗಳೇ ನಡೆಸುವ ಪರೀಕ್ಷೆಗಳು ಕೊನೆಗೆ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಕೋಟಿಗಳಿಗೆ ಮಾರುವುದು). ಹಣ ದೋಚುವ, ಶಿಕ್ಷಣ ದಂಧೆಗೆ ಕಡಿವಾಣ ಹಾಕಲೇಬೇಕು. `ಶಿಕ್ಷಣದ ಸೇವೆ’ಗೆಂದೇ ಜನಿಸಿದೆವೆಂದು ಘೋಷಿಸಿರುವ ಶಿಕ್ಷಣೋದ್ಯಮಗಳು `ಸೇವೆ’ ಮಾಡಿದರೆ ಅಷ್ಟೇ ಸಾಕು!

ಇಂತಹ ಸ್ಥಿತಿಯಲ್ಲಿ ರಾಜ್ಯ ಸರ್ಕಾರವೂ ಈ ಕ್ಷೇತ್ರದ ತಜ್ಞರೊಂದಿಗೆ, ಪೋಷಕರು, ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಸೂಕ್ತ ನಿಲುವು, ಕ್ರಮ ವಹಿಸುವುದು ಅಗತ್ಯವಾಗಿದೆ.

– ಎಸ್.ವೈ. ಗುರುಶಾಂತ

Advertisements