“ಭಾಗ್ ವಿಸಿ ಭಾಗ್”!

ಸಂಪುಟ: 10 ಸಂಚಿಕೆ: 21 Sunday, May 15, 2016

ಮೇ 10ರಂದು ಅಪರಾಹ್ನ 2.30ಕ್ಕೆ  ಜೆಎನ್‍ಯು ಅಕಡೆಮಿಕ್ ಕೌನ್ಸಿಲ್ ಸಭೆ ಆರಂಭವಾದಾಗ ಉಪಕುಲಪತಿಗಳು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಗಳ ಚರ್ಚೆಯನ್ನು ಮೊದಲು ಎತ್ತಿಕೊಳ್ಳಬೇಕು ಎಂಬ ವಿದ್ಯಾರ್ಥಿಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯ ಜಂಟಿ ಆಗ್ರಹವನ್ನು ತಿರಸ್ಕರಿಸಿದರು. ಆದರೆ ಹಲವು ಡೀನ್‍ಗಳು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರೂ ಈ ಬೇಡಿಕೆಯನ್ನು ಬೆಂಬಲಿಸಿದಾಗ ಕೊನೆಗೂ ಚರ್ಚೆಗೆ ಎತ್ತಿಕೊಳ್ಳಬೇಕಾಯಿತು. ಒಂದು ಗಂಟೆ ಚರ್ಚೆ ನಡೆದರೂ ಉಪಕುಲಪತಿಗಳು ಯಾವುದೇ ಭರವಸೆ ನೀಡಲಿಲ್ಲ. ಸುಮಾರು ಒಂದು ಗಂಟೆಯ ಚರ್ಚೆಯ ನಂತರ ಉಪಕುಲಪತಿಗಳು ಇದ್ದಕ್ಕಿದ್ದಂತೆ ಸಭೆಯನ್ನು ಬರ್ಖಾಸ್ತು ಮಾಡಿ ಎದ್ದು ನಡೆದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹಲಾ ರಶೀದ್ “ಸರ್, ನೀವು ಹಾಗೆ ಹೋಗುವಂತಿಲ್ಲ. ಈ ಮುಷ್ಕರದಲ್ಲಿ ಪ್ರಾಣ ಕಳಕೊಳ್ಳಬಹುದಾದ ವಿದ್ಯಾರ್ಥಿಗಳ ರಕ್ತ ನಿಮ್ಮ ಕೈಗಂಟುತ್ತದೆ” ಎಂದರೂ ಕೇಳದೆ ಹೊರನಡೆದರು.
ಆದರೆ ಹೊರಗೆ ಉಪವಾಸ ನಿರತ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಭಟಿಸುತ್ತಿದ್ದ ಸುಮಾರು 200 ವಿದ್ಯಾರ್ಥಿಗಳು ಎದುರಾದರು. ಇದನ್ನು ಕಂಡ ಉಪಕುಲಪತಿಗಳು 250 ಮೀಟರ್ ದೂರದಲ್ಲಿದ್ದ ಆಡಳಿತ ಕಟ್ಟಡದತ್ತ ಓಡಲಾರಂಭಿಸಿದರು. ಕೈ-ಕೈ ಹಿಡಿದು ಮಾನವ ಸರಪಣಿ ಹೆಣೆದಿದ್ದ ವಿದ್ಯಾರ್ಥಿಗಳು “ಭಗೋಡಾ ವಿಸಿ ವಾಪಸ್ ಆವೊ” (ಓಡಿ ಹೋಗುವ ಉಪಕುಲಪತಿ, ಹಿಂದಿರುಗಿ ಬಾ) ಎಂದು ಕೂಗಲಾರಂಭಿಸಿದ.

ಓಟ ಕಿತ್ತ ಉಪಕುಲಪತಿಗಳು ಆಡಳಿತ ಕಟ್ಟಡವನ್ನು ಸೇರಿಕೊಂಡ ಮೇಲೆ ಬಾಗಿಲು ಹಾಕಲಾಯಿತು. ವಿದ್ಯಾರ್ಥಿಗಳು ಮುಚ್ಚಿದ ಬಾಗಿಲ ಹೊರಗಿನಿಂದಲೇ ಘೋಷಣೆ ಮುಂದುವರೆಸಿದರು.

ನಂತರ ವಿವಿ ಆಡಳಿತ ನೀಡಿದ ಹೇಳಿಕೆಯಲ್ಲಿ ವಿಸಿಯವರನ್ನು ಅಡ್ಡಗಟ್ಟಿದ ವಿದ್ಯಾರ್ಥಿಗಳಲ್ಲಿ ಕೆಲವರು ಅವರ ಶರ್ಟ್ ಎಳೆದು ನಿಲ್ಲಿಸಲು ಪ್ರಯತ್ನಿಸಿದರು  ಎನ್ನಲಾಗಿದೆ.

ಇದನ್ನು ನಿರಾಕರಿಸಿರುವ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯ ಕುಮಾರ್, ವಿದ್ಯಾರ್ಥಿಗಳ ಶಾಂತಿಯುತ ಘೋಷಣೆಗಳು ಮತ್ತು ಹಾಡುಗಳ ನಡುವೆ ವಿಸಿಯವರನ್ನು ಹತ್ತಾರು ಭದ್ರತಾ ಸಿಬ್ಬಂದಿ ಕರೆದುಕೊಂಡು ಹೋಗುತ್ತಿರುವುದನ್ನು ವೀಡಿಯೋಗ್ರಾಫ್ ಮಾಡಲಾಗಿದೆ ಎಂದಿದ್ದಾರೆ.

ಜೆಎನ್ ಯು ಅಧ್ಯಾಪಕರ ಸಂಘ ನೀಡಿರುವ ಪತ್ರಿಕಾ ಹೇಳಿಕೆಯೂ ಉಪಕುಲಪತಿಗಳ ವರ್ತನೆಯನ್ನು ಖಂಡಿಸಿದೆ. ಹಲವಾರು ಡೀನ್ ಗಳು ಮತ್ತೆ-ಮತ್ತೆ ಮಾಡಿದ ಮನವಿಯಿಂದಾಗಿ ಚರ್ಚೆ ಕೊನೆಗೂ ಆರಂಭವಾಗಿ ಅದರಲ್ಲಿ ಮಾತಾಡಿದ ಹನ್ನೆರಡು ಮಂದಿ ಅಕಡೆಮಿಕ್ ಕೌನ್ಸಿಲ್ ಸದಸ್ಯರೂ ಶಿಕ್ಷೆಗಳು ವಿಪರೀತವಾಗಿವೆ, ಅವನ್ನು ಕೈಬಿಡಬೇಕು ಎಂದು ವಿನಂತಿಸುವುದನ್ನು ಕಂಡ ವಿಸಿ ಇದ್ದಕ್ಕಿದ್ದಂತೆ ಸಭೆಯನ್ನು ಮುಂದೂಡಿ ಹೊರಟದ್ದು ಕಂಡ ಎಲ್ಲರೂ ವಿಸ್ಮಿತರಾದರು ಎಂದು ಆ ಹೇಳಿಕೆ ತಿಳಿಸಿದೆ.

ಈ ನಡುವೆ ಅಕಡೆಮಿಕ್ ಕೌನ್ಸಿಲ್ ಸಭೆಗೆ ಹಾಜರಾಗಿದ್ದ ಸದಸ್ಯರಲ್ಲಿ ಬಹುಸಂಖ್ಯಾತರು (53ಮಂದಿ) ವಿವಿ ಆಢಳಿತ ವಿಧಿಸಿದ ದಂಡಗಳನ್ನು ರದ್ದು ಮಾಡಬೇಕೆಂಬ ಒಂದು ನಿರ್ಣಯವನ್ನು ಅಂಗೀಕರಿಸಿದರು.

“ಈ ಸಭೆಯಲ್ಲಿ ವ್ಯಕ್ತವಾಗಿರುವ ಬಹು ಮಂದಿಯ ಭಾವನೆಗಳ ಮೇರೆಗೆ ವಿದ್ಯಾರ್ಥಿಗಳಿಗೆ ವಿಧಿಸಿರುವ ವಜಾ, ಅಮಾನತು, ಕ್ಯಾಂಪಸ್ ಪ್ರವೇಶಕ್ಕೆ ನಿಷೇಧ, ವಿಪರೀತ ದಂಡ ಇತ್ಯಾದಿ ಕಠಿಣತಮ ಶಿಕ್ಷೆಗಳನ್ನು ತಕ್ಷಣವೇ ರದ್ದು ಮಾಡಬೇಕು” ಎಂದ ಈ ನಿರ್ಣಯ “ಸಭೆಯ ಅಧ್ಯಕ್ಷತೆ ವಹಿಸಿದವರು ಅಕಡೆಮಿಕ್ ಕೌನ್ಸಿಲ್ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಏನೊಂದು ಗೌರವ ತೋರದೆ ಇದ್ದಕ್ಕಿದ್ದಂತೆ, ಕಾರಣವಿಲ್ಲದೆ ಮುಂದೂಡಿದ್ದನ್ನು ಕಂಡು ಬೇಸರವಾಗಿದೆ. ನಾವು, ಅಕಡೆಮಿಕ್ ಕೌನ್ಸಿಲ್‍ನ ಸದಸ್ಯರು ಫೆಬ್ರುವರಿ 9ರ ಘಟನೆಯ ಕಾರಣ ವಿಧಿಸಿದ್ದ ಎಲ್ಲ ನಿಷ್ಕಾರಣ ಶಿಕ್ಷೆಗಳನ್ನು ರದ್ದು ಮಾಡುವುದಾಗಿ ನಿರ್ಧರಿಸುತ್ತೇವೆ. ಉಪಕುಲಪತಿಗಳು ತಕ್ಷಣವೇ ಇದನ್ನು ಜಾರಿ ಮಾಡಬೇಕು ಎಂದು ನಿರ್ಧರಿಸುತ್ತೇವೆ” ಎಂದಿದೆ. ಸಭೆಯನ್ನು ಮುಂದೂಡಿ ಹೋದ ಉಪಕುಲಪತಿಗಳು ಇದಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ದೂರಿರುವುದರ ಬಗ್ಗೆ ಆಘಾತವನ್ನೂ ಈ ನಿರ್ಣಯ ವ್ಯಕ್ತಪಡಿಸಿದೆ.

ಅಂದೇ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಿರತ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಎಐಡಿಡಬ್ಲ್ಯುಎ, ಎಐಎಲ್‍ಯು, ಎಐಪಿಡಬ್ಯುಎ, ಎನ್.ಎಫ್.ಐ.ಡಬ್ಲ್ಯು,, ಎಸ್.ಎಫ್.ಐ, ಡಿ.ವೈ.ಎಫ್.ಐ, ಜನವಾದಿ ಲೇಖಕ ಸಂಘ, ಜನನಾಟ್ಯ ಮಂಚ್, ಜನಸಂಸ್ಕøತಿ ಇತ್ಯಾದಿ 44 ಲೇಖಕರು, ಕಲಾವಿದರು, ಮಾನವ ಹಕ್ಕು ಕಾರ್ಯಕರ್ತರು, ಮಹಿಳಾ, ವಿದ್ಯಾರ್ಥಿ, ಯುವಜನ, ಕಾರ್ಮಿಕರ ಸಂಘಟನೆಗಳು 4 ಗಂಟೆಗಳ ಧರಣಿ ಕಾರ್ಯಕ್ರಮ ನಡೆಸಿದರು.

ಮರುದಿನ ಈ ಸಂಘಟನೆಗಳ ಮುಖಂಡರು ರಾಷ್ಟ್ರಪತಿಗಳಿಗೆ ರಾಷ್ಟ್ರದ ಮುಖ್ಯಸ್ಥರಾಗಿ ಮತ್ತು ಈ ವಿಶ್ವವಿದ್ಯಾಲಯದ ಸಂದರ್ಶಕರಾಗಿ ತುರ್ತಾಗಿ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳಿಗೆ ವಿಧಿಸಿರುವ ಕಠಿಣ ದಂಡಗಳನ್ನು ರದ್ದು ಮಾಡಬೇಕು ಎಂದು ಕೋರುವ ಮನವಿ ಪತ್ರವನ್ನು ಸಲ್ಲಿಸಿದರು.

ಕರ್ನಾಟಕ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಜೆಎನ್ ಯು ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹಗಳನ್ನು ನಡೆಸಲಾಗಿದೆ.

Advertisements

ಸುಪ್ರಿಂ ಕೋರ್ಟ್ ತೀರ್ಪು-ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದು ಬಿಜೆಪಿಯ ಸಂವಿಧಾನ-ವಿರೋಧಿ ಪಿತೂರಿಗೆ ಹಿನ್ನಡೆ – ಸಿಪಿಐ(ಎಂ) ಪೊಲಿಟ್‍ಬ್ಯುರೊ

ಸಂಪುಟ: 10 ಸಂಚಿಕೆ: 21 Sunday, May 15, 2016

ಮೇ 10ರಂದು ಉತ್ತರಾಖಂಡ ವಿಧಾನ ಸಭೆಯಲ್ಲಿ ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ ನಡೆದ ವಿಶ್ವಾಸ ಮತ ಪರೀಕ್ಷೆಯಲ್ಲಿ ಕಾಂಗ್ರೆಸ್ ಸರಕಾರ  33-28ಮತಗಳಿಂದ ಗೆದ್ದಿರುವುದರಿಂದ ಅಲ್ಲಿ ಮೋದಿ ಸರಕಾರ ಹೇರಿದ್ದ ರಾಷ್ಟ್ರಪತಿ ಆಳ್ವಿಕೆ ರದ್ದಾಗಿದೆ.

ಸರಕಾರದ ಬಲಾಬಲದ ಪರೀಕ್ಷೆ ವಿಧಾನ ಸಭೆಯಲ್ಲೇ ಆಗಬೇಕು ಎಂಬ ಬೊಮ್ಮಾಯಿ ತೀರ್ಪನ್ನು ಮತ್ತು ಸಂವಿಧಾನವನ್ನು ಎತ್ತಿ ಹಿಡಿದಿರುವ ನ್ಯಾಯಾಂಗ ತೀರ್ಪನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸ್ವಾಗತಿಸಿದೆ.

ಇದು ಬಿಜೆಪಿಗೆ ಒಂದು ದೊಡ್ಡ ಹಿನ್ನಡೆ. ರಾಜ್ಯಗಳಲ್ಲಿನ ಸರಕಾರಗಳನ್ನು ಉರುಳಿಸಿ ತನ್ನ ಆಳ್ವಿಕೆಯನ್ನು ಹೇರುವ ಬಿಜೆಪಿಯ ಸಂವಿಧಾನ-ವಿರೋಧಿ ಪಿತೂರಿ ವಿಫಲವಾಗಿದೆ ಎಂದು ಸಿಪಿಐ(ಎಂ) ಹೇಳಿದೆ. ಪ್ರತಿಪಕ್ಷಗಳ ನೇತೃತ್ವದಲ್ಲಿರುವ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ರಾಜ್ಯ ಸರಕಾರಗಳನ್ನು ತೆಗೆದು ಹಾಕಲು ಇಂತಹ ಕಪಟೋಪಾಯಗಳಿಗೆ ಇಳಿದರೆ ಅದು  ಯಶಸ್ವಿಯಾಗುವುದಿಲ್ಲ ಎಂಬುದನ್ನು ಬಿಜೆಪಿ ಕಲಿತುಕೊಳ್ಳಬೇಕು ಎಂದು ಅದು ಹೇಳಿದೆ..

ಆದರೆ ಈ ನಡುವೆಯೂ ಮೇ 10ರಂದು ಸುಪ್ರಿಂ ಕೋರ್ಟ್ ನಿರ್ದೇಶಿತ ಬಲಾಬಲ ಪರೀಕ್ಷೆಯ ಹಿಂದಿನ ದಿನವೇ, ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಸಂಸತ್ತು ಇನ್ನೂ ಅನುಮೋದಿಸದೇ ಇದ್ದರೂ, ವಾಸ್ತವವಾಗಿ ಅದು ಪ್ರಶ್ನಾರ್ಹವಾಗಿದ್ದರೂ   ಉತ್ತರಾಖಂಡದ ಬಜೆಟಿಗೆ ಸಂಸತ್ತಿನ ಅನುಮತಿ ಪಡೆಯಲು ಮುಂದಾಯಿತು. ಮೋದಿ ಸರಕಾರಕ್ಕೆ ಈಗಲೂ ಇಂತಹ ಆತುರ ಏಕೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕೇಳುತ್ತಾರೆ. (ಈ ವಾರದ ಪಿಡಿ ಸಂಪಾದಕೀಯದಲ್ಲಿ)

ಕಪ್ಪು ಹಣದ ಮೊತ್ತದ ಅಧಿಕೃತ ಅಂದಾಜು ಸಾಧ್ಯವಿಲ್ಲ ಎಂದರೆ ‘ಅಚ್ಚೇದಿನ್’ ಗತಿ?

ಸಂಪುಟ: 10 ಸಂಚಿಕೆ: 21 date:  Sunday, May 15, 2016

ಭಾರತದ ವ್ಯಕ್ತಿಗಳು ವಿದೇಶಗಳಿಗೆ ಎಷ್ಟು ಕಪ್ಪು ಹಣ ಕಳಿಸಿದ್ದಾರೆ ಎಂಬುದರ ಅಧಿಕೃತ ಅಂದಾಜು ಇಲ್ಲ ಎಂದು ಮೋದಿ ಸರಕಾರದ ಹಣಕಾಸು ರಾಜ್ಯಮಂತ್ರಿಗಳು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ಹೇಳಿದ್ದಾರೆ.(ಪಿಟಿಐ, ಮೇ 3)

“ಭಾರತೀಯ ವ್ಯಕ್ತಿಗಳು ಹೊರಗಿನ ದೇಶಗಳಿಗೆ ಕಳಿಸಿರುವ ಕಪ್ಪು ಹಣ ಎಷ್ಟೆಂದು ರ್ನಿರಿಸುವುದು ಒಂದು ತನಿಖೆಯ ಸಂಗತಿ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಇತ್ಯಾದಿ ಸಂಬಂಧಪಟ್ಟ ಕಾನೂನು ಜ್ಯಾರಿ ಸಂಸ್ಥೆಗಳಿಂದ ಫಾಲೋ-ಅಪ್ ಕ್ರಿಯೆಗಳು ನಡೆಯುತ್ತಿವೆ. ಆದರೆ ಇಂತಹ ಪ್ರಕರಣಗಳಲ್ಲಿ ಇರುವ ಮೊತ್ತಗಳ ವಿವರಗಳನ್ನು ಕೇಂದ್ರೀಯವಾಗಿ ಇಡುವುದಿಲ್ಲ” ಇದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸರಕಾರದಿಂದ ಬಂದಿರುವ ಉತ್ತರ. ಅಂದರೆ ಬಳಿ ಲೆಕ್ಕ ಇಲ್ಲ.

ಬ್ಯಾಂಕ್ ಆಫ್ ಇಟೆಲಿಯ ಆರ್ಥಿಕ ತಜ್ಞರ ಇತ್ತೀಚಿನ ಲೆಕ್ಕಾಚಾರಗಳ ಪ್ರಕಾರ ಜಗತ್ತಿನಾದ್ಯಂತ ತೆರಿಗೆಮುಕ್ತಧಾಮಗಳಲ್ಲಿ ಗುಡ್ಡೆ ಹಾಕಿರುವ ಕಪ್ಪು ಹಣದಲ್ಲಿ ಭಾರತದ ಪಾಲು 152ರಿಂದ 181 ಬಿಲಿಯ ಡಾಲರುಗಳು, ಅಂದರೆ ಸುಮಾರು 10 ರಿಂದ 12 ಲಕ್ಷ ಕೋಟಿ ರೂ.ಗಳು. ಈ ಮಾಹಿತಿ ಬಗ್ಗೆ ಸರಕಾರ ಏನನ್ನುತ್ತದೆ ಎಂದು ಕೇಳಿದಾಗ ಇದು ಕೆಲವು ಅನುಮಾನಗಳ ಆಧಾರದಲ್ಲಿ ಮಾಡಿರುವ ಲೆಕ್ಕಾಚಾರ, ಇದಕ್ಕೆ ಸಾಕ್ಷಿಗಳೇನೂ ಇದ್ದ ಹಾಗೆ ಕಾಣುವುದಿಲ್ಲ ಎಂಬುದು ಸರಕಾರದ ಉತ್ತರ.

ಇನ್ನೊಂದು ಲೆಕ್ಕಾಚಾರದ ಪ್ರಕಾರ ಕಪ್ಪು ಹಣದ ಮೊತ್ತದಲ್ಲಿ ಭಾರತದ ಪಾಲು 4ರಿಂದ 5 ಬಿಲಿಯ ಡಾಲರ್ ಗಳು, ಅಂದರೆ 26ರಿಂದ 33 ಸಾವಿರ ಕೋಟಿ ರೂ.ಗಳು ಎಂದು ಹೇಳಿದ ಹಣಕಾಸು ರಾಜ್ಯಮಂತ್ರಿಗಳು ಇಂತಹ ವಿಭಿನ್ನ ಅಂದಾಜುಗಳ ಸಂರ್ಭದಲ್ಲಿ ಇವನ್ನು ಬಹಳ ಜಾಗರೂಕತೆಯಿಂದ ನೋಡಬೇಕಾಗುತ್ತದೆ, ಈ ಬಗ್ಗೆ ದೃಢ ಮಾಹಿತಿ ಯಾವ ರೀತಿಯಲ್ಲೂ ಸಿಗುವುದಿಲ್ಲ ಎಂಬುದು ಮೋದಿ ಸರಕಾರದ ಕಿರಿಯ ಹಣಕಾಸು ಮಂತ್ರಿಗಳು ಎರಡು ವರ್ಷಗಳ ಆಳ್ವಿಕೆಯ ನಂತರ ಕೊಟ್ಟಿರುವ ಉತ್ತರ.

ಹಾಗಿದ್ದರೆ 2014ರಲ್ಲಿ ಚುನಾವಣಾ ಪ್ರಚಾರದಲ್ಲಿ ಆಗಿನ ಪ್ರಧಾನಿ ಪಟ್ಟಾಕಾಂಕ್ಷಿ ಮೋದಿಯವರು ವಿದೇಶಗಳಲ್ಲಿ ಭಾರತದ 80ಲಕ್ಷ ಕೋಟಿ ರೂ.ಗಳಷ್ಟು ಕಪ್ಪು ಹಣ ರಾಶಿ ಬಿದ್ದಿದೆ ಎಂದು ಯಾವ ಆಧಾರದಲ್ಲಿ ಹೇಳಿದರು ಎಂಬ ಪ್ರಶ್ನೆ ಸಹಜ. ಅವರ ನೆಚ್ಚಿನ ಬೆಂಬಲಿಗ ಬಾಬಾ ರಾಂದೇವ್ ಇನ್ನೂ ಮುಂದೆ ಹೋಗಿ 400 ಕೋಟಿ ಲಕ್ಷ ರೂ. ಅಂದರು. ಬಿಜೆಪಿಯ ಟಾಸ್ಕ್ ಫೋರ್ಸ್ 11 ರಿಂದ 22.5 ಲಕ್ಷ ಕೋಟಿ ರೂ. ಎಂದು ಲೆಕ್ಕ ಹಾಕಿತ್ತು.

ಕಪ್ಪು ಹಣದ ಲೆಕ್ಕ ಸಿಗುವುದೇ ಇಲ್ಲ ಎಂದಿರುವಾಗ ಇವೆಲ್ಲ ಕೇವಲ ಚುನಾವಣಾ ಬುರುಡೆಗಳು, ಮತದಾರರಲ್ಲಿ ಪ್ರತಿಯೊಬ್ಬರ ಖಾತೆಗೆ 15 ರಿಂದ 20 ಲಕ್ಷ ರೂ,ಗಳು ಬಂದು ಬೀಳುವ ವಚನವೂ ಕೇವಲ ಬುರುಡೆಯೇ? ಮತದಾರರು ಇದನ್ನು ತಿಳಿಯಲು ಈ ಎರಡು ವರ್ಷಗಳ ಕಾಲ ಕಾಯಬೇಕಾಗಿತ್ತೇ?

ಬಿಜೆಪಿಯ ಟಾಸ್ಕ್ ಪೋರ್ಸ್ ನ ಅಂದಾಜು ಸುಮಾರಾಗಿ ಬ್ಯಾಂಕ್ ಆಫ್ ಇಟೆಲಿಯ ಆರ್ಥಿಕ ತಜ್ಞರ ಅಂದಾಜಿನ ಹತ್ತಿರಕ್ಕೆ ಬರುತ್ತದೆ. ಆದರೆ ಈ ಬಗ್ಗೆ ‘ಹೆಮ್ಮೆ’ ಪ್ರದರ್ಶಿಸುವ ಧೈರ್ಯವೂ ಈಗ  ಆಳುವ ಪಕ್ಷವಾಗಿರುವ ಅದಕ್ಕೆ ಇದ್ದಂತಿಲ್ಲ. ಏಕೆಂದರೆ ಆಗ ಪ್ರತಿಯೊಬ್ಬರ ಖಾತೆಗೆ 15-20ಲಕ್ಷ ರೂ. ಯಾವಾಗ ಬರುತ್ತದೆ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿರುತ್ತದೆ.

ವೇದರಾಜ್ ಎನ್.ಕೆ.

ರಾಜಸ್ತಾನ : ಕನ್ಹೈಯ ಕುಮಾರ್ ಗಳು ಹುಟ್ಟದಂತೆ ಮಾಡುವ ಪಠ್ಯಕ್ರಮ!

ಸಂಪುಟ: 10 ಸಂಚಿಕೆ: 21 date: Sunday, May 15, 2016

ರಾಜಸ್ತಾನದ ‘ಮಾದರಿ’ ಶಿಕ್ಷಣ ಮಂತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ. ‘ಈ ರಾಜ್ಯದಲ್ಲಿ ಕನ್ಹೈಯ ಕುಮಾರ್‍ಗಳು ಹುಟ್ಟದಂತೆ ಮಾಡುವ ಪಠ್ಯಕ್ರಮವನ್ನು ತರುತ್ತೇವೆ’ ಎಂದು ಅವರು ಈ ಹಿಂದೆ ಹೇಳಿದ್ದು ನಮ್ಮ ಓದುಗರಿಗೆ ನೆನಪಿರಬಹುದು. ಅದನ್ನೀಗ ಜಾರಿಗಪಳಸುತ್ತಿರುವಂತೆ ಕಾಣುತ್ತದೆ.

ಅದಕ್ಕೆ ಒಂದು ಉದಾಹರಣೆ ಆಗಲೇ ಜನಜನಿತವಾಗಿ ಬಿಟ್ಟಿದೆ. ಅವರ ಪ್ರಕಾರ ‘ಪುನರ್ರಚಿಸಿದ’ ಎಂಟನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕ ಈ ವಾರ ಎಲ್ಲ ಮಾಧ್ಯಮಗಳಲ್ಲಿ ಸುದ್ದಿ ಮಾಡಿದೆ. ಅದರಲ್ಲಿ ಜವಹರಲಾಲ್ ನೆಹರೂ ಅವರ ಹೆಸರು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿಯೂ ಇಲ್ಲವಂತೆ, ಅವರು ದೇಶದ ಮೊದಲ ಪ್ರಧಾನ ಮಂತ್ರಿ  ಎಂಬ ಪ್ರಸ್ತಾಪವೂ ಆ ಪುಸ್ತಕದಲ್ಲಿ ಎಲ್ಲೂ ಇಲ್ಲವಂತೆ.

ಮಹಾತ್ಮ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದ ಎಂಬ ಸಂಗತಿಯೂ ಈ ಪಠ್ಯಪುಸ್ತಕದಲ್ಲಿ ಇಲ್ಲವಂತೆ. ಅದಕ್ಕೆ ಆಶ್ಚರ್ಯವೇನೂ ಪಡಬೇಕಾಗಿಲ್ಲ, ಏಕೆಂದರೆ ಕನ್ಹೈಯ ಕುಮಾರ್ ಗಳು ಹುಟ್ಟದಿರಬೇಕಾದರೆ ಈ ರೀತಿ ಇತಿಹಾಸವನ್ನು ಹುಸಿಗೊಳಿಸಲೇ ಬೇಕು ತಾನೇ?

ಆದರೆ ಅದೇಕೋ ಈ ಮಂತ್ರಿಗೆ ಇವನ್ನು ಸಮರ್ಥಿಸಿಕೊಳ್ಳುವ ಭಂಡತನ ಪ್ರದರ್ಶಿಸುವ ಧೈರ್ಯವಾಗಿಲ್ಲ. ಈ ಹೊಸ ಪಠ್ಯಪುಸ್ತಕಗಳನ್ನು ಪರಿಣಿತರು ಸಿದ್ಧಪಡಿಸಿದ್ದು, ಇದರಲ್ಲಿ ಸರಕಾರದ ಪಾತ್ರವೇನೂ ಇಲ್ಲ ಎಂದು ನುಸುಳಿಕೊಳ್ಳಬೇಕೆಂದು ಅವರಿಗೆ ಏಕೋ ಅನಿಸಿದೆ. ಆದರೆ ಅದನ್ನು ಯಾರೂ ನಂಬದಿದ್ದಾಗ ಯಾವ ಹೊಸ ಪುಸ್ತಕದಲ್ಲಿ ಎಷ್ಟು ಬಾರಿ ನೆಹರೂ ಹೆಸರು ಬಂದಿದೆ ಎಂದು ಲೆಕ್ಕ ಮಾಡಲು ಕೂತಂತೆ ಕಾಣುತ್ತದೆ.

ಪುಟ 91ರಲ್ಲಿ(ಸಂವಿಧಾನದ ಗುರಿಗಳ ಕುರಿತ ನಿರ್ಣಯವನ್ನು ಮಂಡಿಸಿದವರು ಎಂದು) ಮತ್ತು 177ರಲ್ಲಿ(ರಾಜಸ್ತಾನದ ಏಕೀಕರಣದ ದಾರಿಯಲ್ಲಿ ಒಂದು ಹೆಜ್ಜೆಯನ್ನು ಉದ್ಘಾಟಿಸಿದವರು ಎಂದು) ಅವರ ಹೆಸರು ಬಂದಿದೆ ಎಂದರು. ನಂತರ ಒಂದು ಹೇಳಿಕೆಯನ್ನೇ ಕೊಟ್ಟು 7, 9 ಮತ್ತು 11ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿ ನೆಹರೂ ಅವರ ಹೆಸರು ‘ಕನಿಷ್ಟ 15’ ಕಡೆ ಬಂದಿದೆ ಎಂದು ಲೆಕ್ಕ ಕೊಟ್ಟಿದ್ದಾರೆ. ಆದರೆ ಇವುಗಳಲ್ಲಿ ಕನಿಷ್ಟ 13 ಕೇವಲ ಲೆಕ್ಕಕ್ಕೆ ಸೇರಿಸಿದಂತಿದೆ ಎಂದು ಟೈಂಸ್ ಆಫ್ ಇಂಡಿಯಾ ವರದಿಗಾರರು ಹೇಳಿದ್ದಾರೆ.

ಇದಕ್ಕಿಂತ ಮುಖ್ಯವಾಗಿ ಬಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ  ನೆಹರೂ ಅವರ 1947ರ ಅಗಸ್ಟ್ 14-15ಮಧ್ಯರಾತ್ರಿಯ ಐತಿಹಾಸಿಕ ಭಾಷಣ ‘ಭವಿಷ್ಯದೊಂದಿಗೆ ಸಮಾಗಮ’ವನ್ನು ಹೊಸ  ಪುಸ್ತಕದಲ್ಲಿ ತೆಗೆದು ಹಾಕಲಾಗಿದೆಯಂತೆ. ಹನ್ನೊಂದನೇ ತರಗತಿಯ ಹಿಂದಿ ಸಾಹಿತ್ಯದ ಪಠ್ಯಪುಸ್ತಕದಲ್ಲಿದ್ದ ‘ಭಾರತ್ ಮಾತಾ’ ಎಂಬ ಅವರ ಲೇಖನವನ್ನೂ  ತೆಗೆದು ಹಾಕಲಾಗಿದೆಯಂತೆ. ಕನ್ಹೈಯ ಕುಮಾರ್‍ಗಳು ಹುಟ್ಟದಂತೆ ಮಾಡಲು ಇವೆರಡಂತೂ ಅತ್ಯಗತ್ಯ!

‘ಅಚ್ಚೇ ದಿನ್’ ರೂವಾರಿ ಗುಜರಾತ್ ಬಿಟ್ಟು ದಿಲ್ಲಿಗೆ ಹೋದ ಮೇಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 10 ನೇ ಸ್ಥಾನದಲ್ಲಿರುವ ಅವರ ಗುಜರಾತ್ ಮಾದರಿಯ ಸ್ಥಾನವನ್ನು, ಇನ್ನೂ ಕೆಳಗೆ, ಭಾರತದ ಸರಾಸರಿಗಿಂತಲೂ ಕೆಳಗೆ, 12ನೇ ಸ್ಥಾನದಲ್ಲಿರುವ ‘ರಾಜಸ್ತಾನ ಮಾದರಿ’ ಪಡೆಯುತ್ತಿರುವಂತೆ ಕಾಣುತ್ತದೆ-ಕಾರ್ಮಿಕ ಹಕ್ಕುಗಳ ರಂಗದಲ್ಲಿ, ಶೈಕ್ಷಣಿಕ ರಂಗದಲ್ಲಿ ಮತ್ತು ಚಮಚಾ ಬಂಡವಾಳಶಾಹಿಯ ರಂಗದಲ್ಲೂ!

ಈ ನಡುವೆ ಈ ಶಿಕ್ಷಣ ಮಂತ್ರಿಗೆ ಆರೆಸ್ಸೆಸ್ ಕಚೇರಿಯಿಂದ ಬುಲಾವ್ ಬಂದಿದೆಯಂತೆ. ಏಕೆ ನೆಹರೂ ಪ್ರಸ್ತಾಪಗಳನ್ನು ತೆಗೆದಿದ್ದೀರಿ ಎಂದು ಕೇಳಲಿಕ್ಕಂತೂ ಅಲ್ಲ. ಆದರೆ ಕೇಸರೀಕರಣ ಮಾಡುವಾಗಲೂ ವಹಿಸಬೇಕಾದ ‘ಜಾಗರೂಕತೆ’ಯನ್ನು ವಹಿಸಿಲ್ಲ ಎಂದು ತರಾಟೆಗೆ ತೆದುಕೊಳ್ಳಲು ಎಂದು ಟೈಂಸ್ ಆಫ್ ಇಂಡಿಯಾ (ಮೇ12) ವರದಿ ಮಾಡಿದೆ. ನೆಹರೂರವರಿಗೆ ಕೊಕ್ ಕೊಡುವ ಭರದಲ್ಲಿ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಿಗೆ ಸ್ಫೂರ್ತಿ ತುಂಬಿದ್ದ ರಾಂಪ್ರಸಾದ್ ಬಿಸ್ಮಿಲ್ ಅವರ ‘ಸರ್‍ಫರೋಶೀ ಕೀ ತಮನ್ನಾ..’(ಕಟುಕನ ಕೈಗಳಿಗೆ ತಲೆ ಕೊಡುವ ಹುಮ್ಮಸ್ಸಿದೆ, ಕಟುಕನ ಬಾಹುಗಳಲ್ಲಿ ಶಕ್ತಿಯೆಷ್ಟಿದೆ ನೋಡಬೇಕಾಗಿದೆ) ಎಂಬ ಉರ್ದು ಕವನವನ್ನು ಮತ್ತು ಹಿಂದಿಯ ಪ್ರಖ್ಯಾತ ಕವಯಿತ್ರಿ ಮತ್ತು ಆ ರಾಜ್ಯದಲ್ಲಿ ಗಾಂಧೀಜಿಯ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಮೊದಲ ಮಹಿಳೆ ಸುಭದ್ರಾ ಕುಮಾರಿ ಅವರ ಪ್ರಖ್ಯಾತ ‘ಝಾನ್ಸೀ ಕೀ ರಾನಿ’ ಕವನವನ್ನೂ ಕೈಬಿಡಲಾಗಿದೆಯಂತೆ. ಏನು ಮಾಡುವುದು, ಸಂಘ ಪರಿವಾರದ ಸಿದ್ಧಾಂತಗಳನ್ನು ಅಕ್ಷರಶಃ ಪಾಲಿಸ ಬೇಕೆಂದು ಹೊರಡುವವರಿಂದ ಇಂತಹ ‘ತಪ್ಪು’ಗಳು ಆಗುತ್ತಿವೆ. ದಿಲ್ಲಿಯ ಶಿವಸೇನೆಯವರು ಅಮೆರಿಕಾದ ಅಧ್ಯಕ್ಷ ಸ್ಥಾನದ ರಿಪಬ್ಲಿಕನ್ ಅಭ್ಯರ್ಥಿ ಗೆಲ್ಲಲಿ ಎಂದು ವಿಶೇಷ ಹವನ ಮಾಡಿಸಿದಂತೆ, ಜೆಎನ್‍ಯು ಪ್ರಕರಣದಲ್ಲಿ ಗೃಹಮಂತ್ರಿಗಳೇ ಟ್ವೀಟ್ ಮಾಡಿ ಬೇಸ್ತು ಬಿದ್ದಂತೆ, ಕೇಂದ್ರ ಹಣಕಾಸು ಮಂತ್ರಿಗಳು ಪಿಎಫ್ ವಿಷಯದಲ್ಲಿ ಎರಡು ತಿಂಗಳಲ್ಲಿ ಮೂರು ಬಾರಿ ತಿಪ್ಪರಲಾಗ ಹಾಕಿದಂತೆ, ಎಲ್ಲಕ್ಕೂ ಮಿಗಿಲಾಗಿ ಬಿಜೆಪಿಯ ಅತಿರಥ -ಮಹಾರಥರೇ ಉತ್ತರಾಖಂಡದಲ್ಲಿ ಹೆಜ್ಜೆ-ಹೆಜ್ಜೆಗೂ ಹೈಕೋರ್ಟ್-ಸುಪ್ರಿಂ ಕೋರ್ಟ್ ತರಾಟೆಗೆ ಗುರಿಯಾಗುವಂತಹ ಪ್ರದರ್ಶನ ನೀಡಿದಂತೆ!

ವೇದರಾಜ್ ಎನ್. ಕೆ.

‘ತಗೊಳ್ಳಿ ನಮ್ಮ 5ರೂ’-ರೇಗ ಕಾರ್ಮಿಕರು ‘…ಮತ್ತು ನಮ್ಮ 7ರೂ’-ಪಿಂಚಣಿದಾರರು 2 ವರ್ಷಗಳಾಗುತ್ತಿರುವಂತೆ ‘ವಂತಿಗೆ’ಗಳ ಮಹಾಪೂರ!

ಸಂಪುಟ: 10 ಸಂಚಿಕೆ: 21 date: Sunday, May 15, 2016

ಅಯ್ಯೋ ಪಾಪ, ಉದ್ಯಮಿಗಳಿಗೆ ಇನ್ನಷ್ಟು ರಿಯಾಯ್ತಿಗಳನ್ನು ಕೊಡಲು ಮೋದಿ ಸರಕಾರದ ಬಳಿ ದುಡ್ಡಿಲ್ಲ ಎಂದುಕೊಂಡು ಮೊನ್ನೆ ಮೇ ದಿನದಂದು ಝಾರ್ಖಂಡ್ ನ ನೂರಾರು ರೇಗ ಕಾರ್ಮಿಕರು ಪ್ರಧಾನ ಮಂತ್ರಿಗಳಿಗೆ ತಮಗೆ ಈ ವರ್ಷ ಕೊಟ್ಟ 5 ರೂ. ಕೂಲಿ ಹೆಚ್ಚಳವನ್ನು ಹಿಂದಿರುಗಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ನಂತರ ಮೇ 5 ರಂದು ಪಿಂಚಣಿದಾರರ ‘ಚಲೋದಿಲ್ಲಿ’ಗೆ ಬಂದ ರಾಜಸ್ತಾನದ ಗ್ರಾಮೀಣ ಪಿಂಚಣಿದಾರರು ತಮ್ಮ ಒಂದು ದಿನದ ಪಿಂಚಣಿ 7ರೂ.ಗಳನ್ನು ಇದೇ ರೀತಿ ‘ಅಯ್ಯೋ ಪಾಪ’ ಎನ್ನುತ್ತ ಪ್ರಧಾನ ಮಂತ್ರಿಗಳಿಗೆ ಕಳಿಸಿದ್ದಾರೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.

ಎರಡು ವರ್ಷಗಳ ‘ಅಚ್ಚೇ ದಿನ್’ಗಳು ಅದರ ರೂವಾರಿಯ ಬಗ್ಗೆ ಮೂಡಿಸಿದ ವಿಶ್ವಾಸದ ಪ್ರತೀಕ ಇದು.

ರೇಗ ಅಥವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಂದು ಹಕ್ಕು ಆಧಾರಿತ ಯೋಜನೆ, ಇದರ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಕೇಳುವವರಿಗೆ ವರ್ಷಕ್ಕೆ ಕನಿಷ್ಟ 100ದಿನಗಳ ಉದ್ಯೋಗಗಳನ್ನು ಇಲ್ಲವೇ ಭತ್ಯೆಯನ್ನು ಒದಗಿಸಲು ಸರಕಾರ ಬಾಧ್ಯವಾಗಿದೆ ಈ ವರ್ಷ ಎಪ್ರಿಲ್‍ನಲ್ಲಿ ಈ ಹಕ್ಕು-ಆಧಾರಿತ ಸ್ಕೀಮಿಗೆ ಕನಿಷ್ಟ ಕೂಲಿಯನ್ನು ಕೇವಲ 5ರೂ.ಗಳಷ್ಟು ಹೆಚ್ಚಿಸಿತು. ಇದನ್ನು ಪ್ರತಿಭಟಿಸಿ ಝಾರ್ಖಂಡ್ ನಲ್ಲಿ ಮಾಣಿಕ ಎಂಬ ಹಳ್ಳಿಯ ನೂರಾರು ಕೆಲಸಗಾರರು ಈ ಅಲ್ಪ ಹೆಚ್ಚಳವನ್ನು ಪ್ರಧಾನ ಮಂತ್ರಿಗಳಿಗೆ ನೀವೇ ಇಟ್ಟುಕೊಳ್ಳಿ ಎಂದು ಕಳಿಸಿದ್ದಾರೆ. 100ದಿನಗಳ ಕೆಲಸವಂತೂ ಕೊಡುವುದಿಲ್ಲ, ಮಾಡಿಸಿಕೊಂಡ ಕೆಲಸಕ್ಕೆ ಕೂಲಿ ಕೂಡ ಸಮಯಕ್ಕೆ ಸರಿಯಾಗಿ ಕೊಡುವುದಿಲ್ಲ, ಕೂಲಿ ಕೊಟ್ಟರೂ ಅದು ಕನಿಷ್ಟ ಕೂಲಿಗಿಂತ ಕಡಿಮೆಯಿರುತ್ತದೆ. ಝಾರ್ಖಂಡ್ ನಲ್ಲಿ ಕನಿಷ್ಟ ದಿನ ಕೂಲಿ 212ರೂ. ಎಂಬುದನ್ನು ಗಮನಿಸಬೇಕು. ಇದೀಗ ‘ಒಳ್ಳೆಯ ದಿನ’ಗಳ ಪ್ರಾಮಾಣಿಕತೆ!

ಇನ್ನು ಗ್ರಾಮೀಣ ಪ್ರದೇಶದ ಬಡ ಪಿಂಚಣಿದಾರರ ಪಿಂಚಣಿಯನ್ನು 2006ರಿಂದ ಪರಿಷ್ಕರಿಸಿಲ್ಲ. ರಾಜಸ್ತಾನದ ತಾರಾಗರ್ ನಿಂದ ಬಂದ 76 ವರ್ಷದ ಛಾಗ್ನಿ ದೇವಿಗೆ ಸಿಗುವ ಪಿಂಚಣಿ ತಿಂಗಳಿಗೆ 200ರೂ. ಅಂದ ರೆ ದಿನಕ್ಕೆ 7ರೂ.ಗಳಷ್ಟೂ ಇಲ್ಲ! ಇದನ್ನು ರಾಜಸ್ತಾನ ಪಿಂಚಣಿದಾರರು ಪ್ರಧಾನ ಮಂತ್ರಿಗಳಿಗೆ ಕಳಿಸಿದ್ದಾರೆ, ಅವರಿಗಂತೂ ಪ್ರಯೋಜನವಾದೀತು ಎಂದು!

‘#ಪೋ ಮೋನೆ ಮೋದಿ’ ಟ್ವಿಟರ್ ರ

ಎರಡು ವರ್ಷಗಳ ಆಳ್ವಿಕೆ ರೇಗಾ ಕಾರ್ಮಿಕರಿಂದ, ಪಿಂಚಣಿದಾರರಿಂದ ‘ವಂತಿಗೆ’ಗಳ ಪ್ರತಿಭಟನೆಗಳನ್ನು ಕೊಡಿಸಿದರೆ ಕೇರಳದಲ್ಲಿ ಪ್ರಧಾನಿಗಳ ಚುನಾವಣಾ ಭಾಷಣಗಳು ಅವರಿಗೆ ಟ್ವಿಟರ್ ವ್ಯಂಗ್ಯಗಳ ಮಾಲೆಯನ್ನೇ ತಂದು ಕೊಟ್ಟಿದೆ. ಕೇರಳದಲ್ಲಿ ಪರಿಶಿಷ್ಟ ವರ್ಗಗಳಲ್ಲಿ ಶಿಶು ಮರಣ ದರ ಸೋಮಾಲಿಯಾಕ್ಕಿಂತಲೂ ಕೆಟ್ಟದಾಗಿದೆ ಎಂಬ ಅಣಿಮುತ್ತು ಉದುರಿಸಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳಲು(ಅಥವ ಸೆಲ್ಫಿ ತಗೊಳ್ಳಲು) ಅಣಿಯಾಗುತ್ತಿರುವಂತೆ  ರಾಜ್ಯದಲ್ಲಿರುವ ಮತ್ತು ಹೊರಗೂ ಇರುವ ಕೇರಳೀಯರ ಆಕ್ರೋಶದ ಸರಮಾಲೆ ಅವರನ್ನು ಸುತ್ತಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಂತೂ ‘#ಪೋ ಮೋನೆ ಮೋದಿ’ ಮತ್ತು “#ಸೊಮಾಲಿಯ’ ಎಂಬ ಟ್ವಿಟರ್ ಗಳಲ್ಲಿ ಭಾರತದಂತಹ ದೇಶದ ಪ್ರಧಾನಿಗೆ ತಕ್ಕುದಲ್ಲದ ಹತ್ತಾರು ಸಾವಿರ ಗೇಲಿ ಮಾತುಗಳನ್ನು  ಎದುರಿಸಬೇಕಾಗಿ ಬಂದಿದೆ ಎಂದು ವರದಿಯಾಗಿದೆ.

– ವೇದರಾಜ್ ಎನ್.ಕೆ.

ಸಾಮಥ್ರ್ಯವಿದ್ದರೆ `ಕೇರಳ ಮಾದರಿ ಅಭಿವೃದ್ಧಿ’ಯನ್ನು ಗುಜರಾತ್‍ನಲ್ಲಿ ಜಾರಿ ಮಾಡಿ – ಯೆಚೂರಿ ಸವಾಲು

ಸಂಪುಟ: 10 ಸಂಚಿಕೆ: 21 Sunday, May 15, 2016

ಕೇರಳದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಚುನಾವಣಾ ಪ್ರಚಾರವೂ ತೀವ್ರವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರದಲ್ಲಿ ಮಾತನ್ನಾಡುತ್ತಾ `ಬಿಜೆಪಿ ಕೂಟ’ವನ್ನು ಗೆಲ್ಲಿಸಿದರೆ ಕೇರಳವನ್ನು `ಗುಜರಾತ್ ಮಾದರಿ’ಯಲ್ಲಿ ಅಭಿವೃದ್ಧಿ ಮಾಡುವುದಾಗಿ ಕೇರಳದ ಜನತೆಗೆ ಭರವಸೆ ಕೊಡುತ್ತಿದ್ದಾರೆ. ಮೋದಿಯವರ ಈ ಮಾತು ಕೇಳಿ ಕೇರಳದ ಪ್ರಜ್ಞಾವಂತ ಜನತೆಯಂತೂ ಮನಸಾರೆ ನಕ್ಕಿರುತ್ತಾರೆ.

ಎಲ್ಲಿಯ ಕೇರಳ? ಎಲ್ಲಿಯ ಗುಜರಾತ್ !! ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರು ಈ ಹೇಳಿಕೆಗೆ ಸೂಕ್ತ ಉತ್ತರ ನೀಡಿದ್ದಾರೆ. ಅವರು `ಕೇರಳವು ತನ್ನ ಮಾದರಿಯಲ್ಲೆ ಸಂತೋಷವಾಗಿದೆ. ಸಾಮಥ್ರ್ಯವಿದ್ದರೆ ಕೇರಳ ಮಾದರಿಯನ್ನು ಗುಜರಾತ್‍ನಲ್ಲಿ ಜಾರಿಮಾಡಿ’ ಎಂದು ಸವಾಲು ಹಾಕಿದ್ದಾರೆ.  ಈ ಸವಾಲಿಗೆ ಆಧಾರವಾದ ಅಂಶಗಳಲ್ಲಿ ಕೆಲವನ್ನು ಪರಿಶೀಲಿಸೋಣ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳವು ದೇಶಕ್ಕೆ ಮೊತ್ತ ಮೊದಲ ಸ್ಥಾನದಲ್ಲಿದೆ. ಗುಜರಾತ್ ಈ ಸಾಲಿನಲ್ಲಿ 12 ನೇ ಸ್ಥಾನದಲ್ಲಿದೆ. ಇದು ಒಟ್ಟಾರೆ ಅಭಿವೃದ್ಧಿಯ ಪ್ರಶ್ನೆ. ಬಿಡಿ ಬಿಡಿಯಾಗಿಯೂ ಅಭಿವೃದ್ಧಿಯ ಹಲವು ಆಯಾಮಗಳನ್ನು ಪರಿಶೀಲಿಸಬಹುದು. ಸಾಕ್ಷರತೆಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ 18 ನೇ ಸ್ಥಾನದಲ್ಲಿದೆ. ಮನುಷ್ಯನ ಸರಾಸರಿ ಜೀವಿತಾವಧಿಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ 9 ನೇ ಸ್ಥಾನದಲ್ಲಿದೆ. ಗಂಡು-ಹೆಣ್ಣುಗಳ ಉತ್ತಮ ಅನುಪಾತದಲ್ಲಿ ಸಹ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ ಕಡೆ ಕಡೆಯ 25 ನೇ ಸ್ಥಾನದಲ್ಲಿದೆ. ಶಿಶು ಮರಣ ನಿಯಂತ್ರಿಸುವಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 21 ನೇ ಸ್ಥಾನದಲ್ಲಿದೆ. ಜನಾರೋಗ್ಯ ಸಾಧನೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 20 ನೇ ಸ್ಥಾನದಲ್ಲಿದೆ. ಬಡತನ ನಿವಾರಣೆಯಲ್ಲಿ ಕೇರಳ 2 ನೇ ಸ್ಥಾನದಲ್ಲಿದ್ದರೆ ಗುಜರಾತ್ 14 ನೇ ಸ್ಥಾನದಲ್ಲಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಕೇರಳ ಮೂರನೇ ಸ್ಥಾನದಲ್ಲಿದ್ದರೆ ಗುಜರಾತ್ 9 ಸ್ಥಾನದಲ್ಲಿದೆ. ಮನೆಗಳ ವಿದ್ಯುದೀಕರಣದಲ್ಲಿ ಕೇರಳ 5 ಸ್ಥಾನದಲ್ಲಿದ್ದರೆ ಗುಜರಾತ್ 11 ನೇ ಸ್ಥಾನದಲ್ಲಿದೆ. ಸ್ವಚ್ಛತೆಯ ವಿಷಯದಲ್ಲಿ ಕೇರಳ ದೇಶಕ್ಕೆ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 16 ನೇ ಸ್ಥಾನದಲ್ಲಿದೆ. ಜನನ ನಿಯಂತ್ರಣದಲ್ಲಿ ಕೇರಳ ಎರಡನೇ ಸ್ಥಾನದಲ್ಲಿದ್ದರೆ, ಗುಜರಾತ್ 17ನೇ ಸ್ಥಾನದಲ್ಲಿದೆ.

ಪರಿಸ್ಥಿತಿ ಹೀಗಿರುವಾಗ ಯಾರು ಯಾವುದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾದ ಪರಿಸ್ಥಿತಿ ಇದೆ. ಸಂಘಪರಿವಾರ ಇಂತಹ ಯೋಚನೆ ಮಾಡದಿದ್ದರೂ ಕೇರಳದ  ಜನರಂತೂ ಈ ಬಗೆಗೆ ತೀರ್ಮಾನಿಸುತ್ತಾರೆ.

ಎಲ್‍ಡಿಎಫ್ ಪ್ರಚಾರ ಸಾಮಾಗ್ರಿಗೆ ಬೆಂಕಿ

ಧರ್ಮಾದಮ್ ಒಂದು ವಿಧಾನ ಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್ ಅಭ್ಯರ್ಥಿ. ಮೂರು ಜನ ಅರೆಸ್ಸೆಸಿಗರ ತಂಡ ರಾತ್ರೋ ರಾತ್ರಿ ಪಿಣರಾಯಿ ವಿಜಯನ್ ಅವರ ಪ್ರಚಾರ ಸಾಮಾಗ್ರಿಗಳಿಗೆ ಬೆಂಕಿ ಇಟ್ಟಿದೆ. ಪ್ರಚಾರ ಸಾಮಾಗ್ರಿಗಳನ್ನು ಸುಡಬಹುದು. ಜನರ ಮನಸ್ಸಿನಲ್ಲಿ ಸಿಪಿಐ(ಎಂ) ಬಗೆಗೆ ಮತ್ತು ಎಲ್‍ಡಿಎಫ್ ಬಗೆಗೆ ಇರುವ ಒಲವನ್ನು ಸುಡಲಾಗದು ಎಂಬುದು ಪಾಪ ಅವರಿಗೆ ಗೊತ್ತಿಲ್ಲ.

`ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಹೊಂದಿದ, ಜಾತ್ಯತೀತ ಕೇರಳ’ಕ್ಕಾಗಿ

ಕೇರಳದಲ್ಲಿ ಇಲ್ಲಿಯವರೆಗೆ ಖಾತೆ ತೆರೆಯಲು ವಿಫಲವಾಗಿರುವ ಭಾರತೀಯ ಜನತಾ ಪಾರ್ಟಿ- ಬಿಜೆಪಿಯ ಮುಖಂಡರು ಕೇರಳದಲ್ಲಿ ಸ್ಫರ್ಧೆ ಇರುವುದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಕೂಟದ ನಡುವೆ ಎಂದೂ, ಬಿಜೆಪಿ ನೇತೃತ್ವದ ರಂಗ ಅಧಿಕಾರಕ್ಕೆ ಬರಲಿದೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಈ ಬಗೆಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಮುಖಂಡ ಪಿಣರಾಯಿ ವಿಜಯನ್ `ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಹೊಂದಿದ, ಜಾತ್ಯತೀತ ಕೇರಳ’ಕ್ಕಾಗಿ ಜನತೆ ಎಲ್‍ಡಿಎಫ್ ಅನ್ನು ಆರಿಸಿ ತರಲಿದ್ದಾರೆ. ಕಾಂಗ್ರೆಸ್, ಬಿಜೆಪಿಗಳ ಸ್ಪರ್ಧೆ ಏನಿದ್ದರೂ ಎರಡನೇ ಸ್ಥಾನಕ್ಕಾಗಿ ಎಂದು ತಿರುಗೇಟು ನೀಡಿದ್ದಾರೆ. ಇದಲ್ಲದೇ ಯುಡಿಎಫ್ ಮತ್ತು ಬಿಜೆಪಿ ನಡುವ ರಹಸ್ಯ ಒಪ್ಪಂದ-ಮ್ಯಾಚ್ ಫಿಕ್ಸಿಂಗ್ ಏರ್ಪಟ್ಟಿದೆ ಎಂದೂ ಹೇಳಿದ್ದಾರೆ.

ನಾನಾ ಗಣ್ಯರ ಪ್ರಚಾರ

ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಸೇರಿದಂತೆ  ಚುನಾವಣೆಯಲ್ಲಿ  ಸಿಪಿಐ(ಎಂ) ಪಕ್ಷದ ನಾನಾ ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಪಟ್ಟಣತಿಟ್ಟ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಪ್ರಕಾಶ್ ಕಾರಟ್ ಪ್ರಚಾರ ಕೈಗೊಂಡಿದ್ದಾರೆ. ತ್ರಿಪುರದ ಮುಖ್ಯಮಂತ್ರಿ ಹಾಗೂ ಪಾಲಿಟ್ ಬ್ಯೂರೋ ಸದಸ್ಯರಾದ ಮಾಣಿಕ್ ಸರಕಾರ್ ಸೇರಿದಂತೆ  ಪಾಲಿಟ್ ಬ್ಯೂರೋ ಸದಸ್ಯರುಗಳಾದ ಬೃಂದಾ ಕಾರಟ್ ಕೋಜಿಕ್ಕೋಡ್ ನಲ್ಲಿ, ಸುಭಾಷಿಣಿ ಆಲಿ ಅಲಪುಜದಲ್ಲಿ, ತಿರುವನಂತಪುರದಲ್ಲಿ ಬಿ.ವಿ. ರಾಘವುಲು, ಪ್ರಚಾರ ಭಾಷಣಗಳನ್ನು ಮಾಡಿದ್ದಾರೆ. ಕೋಡಿಯೇರಿ ಬಾಲಕೃಷ್ಣನ್ ಅವರಲ್ಲದೇ ವರದರಾಜನ್ ಅವರು ಜೊತೆಗೂಡಿದ್ದಾರೆ.

ಬಿ.ವಿ. ರಾಘವುಲು ಅವರು ಮಾನತಾಡುತ್ತಾ ಎಲ್‍ಡಿಎಫ್ ನದು ಜನಪರ ಅಭಿವೃದ್ಧಿಯ ಕಣ್ಣೋಟ, ಆದರೆ ಯುಡಿಎಫ್ ನದು ಕಾರ್ಪೋರೇಟ್ ಪರವಾದ ಅಭಿವೃದ್ಧಿಯ ಕಣ್ಣೋಟ ಎಂದು ತೀವ್ರವಾಗಿ ಟೀಕಿಸಿದ್ದಾರೆ.

-ಆರ್. ರಾಮಕೃಷ್ಣ

ಪಶ್ಚಿಮ ಬಂಗಾಳ : ತೃಣಮೂಲಿಗರ ಚುನಾವಣೋತ್ತರ ಹಿಂಸಾಚಾರ

ಸಂಪುಟ: 10 ಸಂಚಿಕೆ: 21 Sunday, May 15, 2016

ಜನರಲ್ಲಿ ಜಾಗೃತಿ ಮತ್ತು ಪ್ರತಿರೋ ಧ, ಚುನಾವಣಾ ಆಯೋಗದ ಬಿಗಿಯಾದ ಕ್ರಮಗಳು ಇತ್ಯಾದಿಗಳಿಂದ ತಾವು ಯೋಜಿಸಿದಷ್ಟು ಚುನಾವಣಾ ಅಕ್ರಮಗಳನ್ನು ನಡೆಸಲು ಸಾಧ್ಯವಾಗದ ತೃಣಮೂಲ ಕಾಂಗ್ರೆಸ್ ಚುನಾವಣೆ ಮುಗಿದ ಮೇಲೆ ಹಲ್ಲೆ ಹಿಂಸೆಗಳನ್ನು ನಡೆಸುತ್ತಿದೆ.

ಚುನಾವಣೆಗಳು ಮುಗಿದ ಕೂಡಲೇ ಕೇಂದ್ರ ಮೀಸಲು ಪಡೆಯ ಯೋಧರು ಮತ್ತು ಪೋಲಿಸ್ ಕಾವಲನ್ನು ತೆಗೆಯಲಾಗುತ್ತದೆ. ಆಗ ಎಡರಂಗದ ಪರವಾಗಿ ಬೂತ್ ಏಜೆಂಟರಾಗಿ ಕೆಲಸ ಮಾಡಿದವರನ್ನು ಹುಡುಕಿ ಹಲ್ಲೆ ಮಾಡುವುದು, ಸಿಪಿಐ(ಎಂ) ಮತ್ತು ಎಡರಂಗಕ್ಕಾಗಿ ದುಡಿದವರನ್ನು ಹುಡುಕಿ ಹಿಂಸೆ ನೀಡುವುದು ನಡೆಯುತ್ತಿವೆ. ಈ ಬಾರಿ ಹಿಂಸಾಚಾರ ಮತ್ತೊಂದು ಘಟ್ಟವನ್ನು ಮುಟ್ಟಿದೆ.

ಎಡರಂಗಕ್ಕಾಗಿ ಕೆಲಸ ಮಾಡಿದವರನ್ನು ಹುಡುಕಿ ಹಲ್ಲೆ ನಡೆಸುವುದಲ್ಲದೇ ಅವರ ಮನೆಯ ಸದಸ್ಯರ ಮೇಲೆ, ಅದೂ ಮಕ್ಕಳ ಮೇಲೆ ಹಲ್ಲೆಗಳು ನಡೆದಿವೆ. ಹೆಣ್ಣು ಮಕ್ಕಳು ಎಂಬ ಅಂಶವನ್ನೂ ಸಹ ಲೆಕ್ಕಕ್ಕೆ ತೆಗೆದುಕೊಳ್ಳದೇ ಮಕ್ಕಳ ಮೇಲೆ ಕ್ರೂರ ಹಲ್ಲೆಗಳನ್ನು ನಡೆಸಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಡೋಮ್ಕಾಲ್ ಮತಗಟ್ಟೆಯಲ್ಲಿ ಸಿಪಿಐ(ಎಂ) ಪರ ಏಜೆಂಟ್ ಆಗಿದ್ದ ತಹಿದುಲ್ ಇಸ್ಲಾಂ ಅನ್ನು ಟಿಎಂಸಿ ಗೂಂಡಾಗಳು ಕೊಂದುಹಾಕಿದ್ದಾರೆ. ಬಧ್ರ್ವಾನ್ ಜಿಲ್ಲೆಯಲ್ಲಿ ಸಿಪಿಐ(ಎಂ) ಏಜೆಂಟ್ ಆಗಿ ಕೆಲಸ ಮಾಡಿ ವಾಪಸ್ ಬರುವಾಗ ಟಿಎಂಸಿ ಗೂಂಡಾಗಳು ಎಸ್.ಕೆ. ಫಜಲ್ ಹಕ್ವೆ ಮೇಲೆರಗಿ ಕೊಂದು ಹಾಕಿದ್ದಾರೆ. ತನ್ನ ಮಗನನ್ನು ಸಿಪಿಐ(ಎಂ) ಪರವಾಗಿ ಬೂತ್ ಏಜೆಂಟ್ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ 48 ವರ್ಷದ ದೂಖ್ರಿರಾಮ್ ದಾಲ್ ಅವರನ್ನು ಕಗ್ಗೊಲೆ ಮಾಡಲಾಗಿದೆ. ಇದೇ ಬಧ್ರ್ವಾನ್ ಜಿಲ್ಲೆಯಲ್ಲೆ ಕಾಂಡಕೋಶ್‍ನಲ್ಲಿ ಖಾಂಡಕರ್ ಆಲಿ ಹುಸೇನ್ ಎಂಬ ಕಾಂಗ್ರೆಸ್ ಕಾರ್ಯಕರ್ತರನ್ನು ಟಿಎಂಸಿ ಗೂಂಡಾಗಳು ಕೊಂದು ಹಾಕಿದ್ದಾರೆ.

ಇದು ನಡೆದದ್ದು ಬೆಹಲ(ಪೂರ್ವ)ಹರಿದೇವ್ ಪುರ್ ದಲ್ಲಿ; ಮತ ಚಲಾಯಿಸಬಾರದು ಎಂದು ಟಿಎಂಸಿ ಗೂಂಡಾಗಳು ನೀಡಿದ್ದ ಎಚ್ಚರಿಕೆ ಮೀರಿ ತಾತ ಚಲಾಯಿಸಿದ. ರಾತ್ರಿ ಹುಡುಕಿಕೊಂಡು ಬಂದ ಗೂಂಡಾಗಳು ಆತ ಮನೆಯಲ್ಲಿ ಇಲ್ಲದಿದ್ದಾಗ ಏಳು ವರ್ಷದ ಮುಗ್ಧ ಮಗು ಪ್ರೀತಿ ಮೇಲೆ ಹೀನಾಯ ಹಲ್ಲೆ ಮಾಡಿದರು. 24 ಪರಗಣ ಜಿಲ್ಲೆಯ ಸದ್ಗಚಿಯಾದಲ್ಲಿ ಟಿಎಂಸಿ ಗೂಂಡಾಗಳು ಮೂರು ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಗುವಿನ ಕಿವಿಗೆ ಪೆಟ್ಟು ಬಿದ್ದು ಗಾಯವಾಗಿದೆ. ಇಂತಹ ಅಮಾನವೀಯ ಪ್ರಕರಣಗಳ ದೊಡ್ಡ ಪಟ್ಟಿಯೇ ಸಿಗುತ್ತದೆ.

ಎಡರಂಗದ ಪರವಾಗಿ ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮತ್ತು  ಫಲಿತಾಂಶದ ಹಂತದವರೆಗೆ ಅಗತ್ಯ ಭಧ್ರತೆಯ ಕ್ರಮಗಳನ್ನು ಮುಂದುವರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಜನ ಸಮುದಾಯದ ಬಲದಿಂದ ಜನಶಕ್ತಿಯ  ಬಲದಿಂದ ತೃಣಮೂಲಿಗರ ಗೂಂಡಾಗಿರಿಯನ್ನು ಎದುರಿಸಲು ಗಮನ ನೀಡಲಾಗುತ್ತಿದೆ.

ಮೇ 14 ಎಡಪಕ್ಷಗಳಿಂದ `ಜಾರ್ಖಂಡ್ ಬಂದ್’ಗೆ ಕರೆ

ಸಂಪುಟ: 10 ಸಂಚಿಕೆ: 21 Sunday, May 15, 2016

ಜಾರ್ಖಂಡ್ ರಾಜ್ಯದಲ್ಲಿ ಕೋಮುವಾದ ತಲೆ ಎತ್ತಲು ಹವಣಿಸುತ್ತಿದೆ. ಕೋಮುಗಲಭೆಗಳ ಸರಣಿ ಘಟನೆಗಳು ವರದಿಯಾಗುತ್ತಿವೆ. ಕೋಮುವಾದದ ಅಮಲನ್ನು ಜನರ ತಲೆಗೇರಿಸಲು ಪ್ರಯತ್ನಿಸಲಾಗುತ್ತಿದೆ. ಅದೇ ಸಮಯದಲ್ಲಿ ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋಧಿ ಬದಲಾವಣೆಗಳನ್ನು ತರಲಾಗುತ್ತಿದೆ. ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳುವ ಕಾರ್ಮಿಕರ ಹಕ್ಕಿದೆ ಧಕ್ಕೆ ತರಲಾಗಿದೆ. ಸಂತಾಲ್ ಪರಗಣ ಮತ್ತು ಛೋಟಾನಾಗಪುರ ಗೇಣಿಕಾಯ್ದೆಗಳಿಗೆ ತಿದ್ದುಪಡಿ ತರಲು ಯತ್ನಿಸಲಾಗುತ್ತಿದೆ. ಬಡ ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗೂ ಚ್ಯುತಿ ಬಂದಿದೆ.

ಈ ಎಲ್ಲ ಬೆಳವಣಿಗೆಗಳ ಕುರಿತು ಚರ್ಚಿಸಿರುವ ರಾಜ್ಯದ ಎಡಪಕ್ಷಗಳು ಈ ನೀತಿಗಳ ವಿರುದ್ಧ ಮೇ 14 ರಂದು ಜಾರ್ಖಂಡ್ ಬಂದ್ ಗೆ ಕರೆ ನೀಡಿವೆ.

ಎತ್ತಿಹೊಳೆ ಯೋಜನೆ ವಿರೋಧಿ ಜಿಲ್ಲಾ ಬಂದ್ ಗೆ ಸಿಪಿಐ(ಎಂ) ಬೆಂಬಲ ಇಲ್ಲ

Friday, May 13, 2016

ಎತ್ತಿನ ಹೊಳೆ ಯೋಜನೆಯನ್ನು ವಿರೋದಿಸಿ ಮೇ.19ರಂದು ಕರೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಬಂದ್‍ಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಬೆಂಬಲ ನೀಡುವುದಿಲ್ಲ ಎಂದು ಸಿಪಿಐ(ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರೂ ನ್ಯಾಯವಾದಿಗಳೂ ಆದ ಬಿ.ಎಂ.ಭಟ್ ಹೇಳಿದ್ದಾರೆ.

ಇದು ಜನರನ್ನು ಮೂಲ ಸಮಸ್ಯೆಗಳಿಂದ ದೂರ ಸರಿಸುವ ಪ್ರಯತ್ನವಷ್ಟೇ ಆಗಿದೆ. ಎತ್ತಿನಹೊಳೆ ಯೋಜನೆಗೂ ದ.ಕ.ಜಿಲ್ಲೆಯ ನೀರಿನ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂಬ ಸತ್ಯ ಬಂದ್‍ಗೆ ಕರೆ ನೀಡಿದವರಿಗೂ ಸೇರಿದಂತೆ ಎಲ್ಲರಿಗೂ ಗೊತ್ತಿದೆÉ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋದಿಸುತ್ತಾ, ಕೋಲಾರದಲ್ಲಿ ಬೆಂಬಲ ನೀಡುತ್ತಿವೆ. ಇದು ಜಿಲ್ಲೆಗೆ ನಿಜವಾಗಿಯು ಸಮಸ್ಯೆ ಎಂದು ಇಲ್ಲಿ ಹೇಳುವ ಈ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಜನಪ್ರತಿನಿಧಿಗಳು ಲೋಕಸಭೆಯಲ್ಲಾಗಲಿ, ವಿಧಾನ ಸಭೆಯಲ್ಲಾಗಲಿ ತುಟಿಬಿಚ್ಚುವುದಿಲ್ಲ. ಇಂತವರು ಇಲ್ಲಿ ಬಂದ್‍ಗೆ ಬೆಂಬಲ ಘೋಷಿಸಿದರೆ, ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ವಿಚಾರ ಬೇರೆ ಸಿಗಲಾರದು.

ಜಿಲ್ಲೆಯಲ್ಲಿ ಈಗ ನೀರಿನ ಸಮಸ್ಯೆ ಉದ್ಬವಿಸಿದೆ. ಸುಮಾರು ಮೂವತ್ತು ವರ್ಷಗಳಿಂದ ಜಿಲ್ಲೆಯ ನೀರಿನ ಫಸಲು ಕಡಿಮೆಯಾಗುತ್ತಾ ಬರುತ್ತಿರುವುದು ನಮಗೆಲ್ಲಾ ಗೊತ್ತಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಸಿಪಿಐ(ಎಂ) ಹೋರಾಡುತ್ತಾ ಬಂದಿದ್ದರೂ ಈಗ ಎತ್ತಿನಹೊಳೆಯನ್ನು ವಿರೋದಿಸುವವರ್ಯಾರು ಬೆಂಬಲ ನೀಡಿರಲಿಲ್ಲ. ಜಿಲ್ಲೆಯ ಎಲ್ಲಾ ನದಿಗಳಿಗೆ ಕಿಂಡಿ ಅಣೆಕಟ್ಟು ಕಟ್ಟಬೇಕು, ಜಿಲ್ಲಾದ್ಯಂತ ಇಂಗು ಗುಂಡಿ ನಿರ್ಮಿಸಿ ನೀರಿಂಗಿಸುವ ಕೆಲಸಗಳಾಗಬೇಕು, ಯಾಂತ್ರಿಕೃತ ಮರಳುಗಾರಿಕೆ ನಿಷೇಧಿಸಬೇಕು ಎಂದು ಸಿಪಿಐ(ಎಂ) ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದರೂ, ಜಿಲ್ಲೆಯ ನೀರಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದ ಜನ ಈಗ ನೀರಿನ ಬರಕ್ಕೆ ಎತ್ತಿನಹೊಳೆ ಕಾರಣ ಎಂದು ಹೇಳಿ ಜನರನ್ನು ದಾರಿತಪ್ಪಿಸುತ್ತಿರುವುದು ಸರಿಯಲ್ಲ. ನೈಜ ಸಮಸ್ಯೆಗಳ ಪರಿಹಾರಕ್ಕಾಗಿಯಾಗಲಿ, ಬೀಡಿಕಾರ್ಮಿಕರು ಬೀದಿ ಪಾಲು ಮಾಡುವ ಕೋಟ್ಪಾ ಕಾಯ್ದೆಯ ವಿರುದ್ದವಾಗಲಿ, ಕಸ್ತೂರಿರಂಗನ್ ವರದಿಯ ವಿರುದ್ದವಾಗಲಿ ಇವರ್ಯಾರೂ ಜಿಲ್ಲಾ ಬಂದ್ ಗೆ ಕರೆ  ನೀಡಿಲ್ಲ. ಈಗ ಕೇವಲ ರಾಜಕೀಯ ಲಾಭಕ್ಕಾಗಿ, ಜನರನ್ನು ನೈಜ ಸಮಸ್ಯೆಗಳಿಂದ ದೂರ ಸರಿಸಲು, ಅಕ್ರಮ ಮರಳುಗಾರಿಕೆಯು ನೀರಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಜನ ಪ್ರತಿಭಟಿಸದಂತೆ ಹಾಗೂ ಎಂ.ಆರ್.ಪಿ.ಯಲ್ ನಂತಹ ಕಂಪೆನಿಗಳು ನೇತ್ರಾವತಿ ನೀರು ಕಬಳಿಸುವುದನ್ನು ಜನ ವಿರೋಧಿಸದಂತೆ ಮಾಡಲು ಈ ನಾಟಕ ಆಡಲಾಗುತ್ತಿದೆ.

ಸಾಂಪ್ರದಾಯಿಕ ಹೊಲಗದ್ದೆಗಳು ಈಗ ಇಲ್ಲದಾಗಿದ್ದು ನೀರಿಂಗಿಸುವ ಬಗ್ಗೆ ಬದಲಿ ವ್ಯವಸ್ಥೆ ಮಾಡಬೇಕಾದ ಸರಕಾರ ಅಕ್ರಮ ಮರಳು ಸಾಗಾಟಕ್ಕೆ ಬೆಂಬಲ ನೀಡುತ್ತಿದೆ. ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವ ಬದಲು ನದಿ ತೀರದಿಂದ ಪ್ರತಿದಿನ ಸಾವಿರಾರು ಟನ್ ಮರಳನ್ನು ಯಂತ್ರಗಳ ಮೂಲಕ ತೆಗೆದು ಲೂಟಿ ಮಾಡಲಾಗುತ್ತಿದೆ. ಇದು ಜಿಲ್ಲೆಯ ನೀರಿನ ಬರ ಹೆಚ್ಚಲು ಕಾರಣವಾಗಿದ್ದರೂ, ಮರಳು ಲಾಬಿಯವರ ವಿರುದ್ದ ಯಾರೂ ಜಿಲ್ಲಾ ಬಂದಿಗೆ ಕರೆ ನೀಡುವುದಿಲ್ಲ. ಮರಳು ಅಕ್ರಮ ಸಾಗಾಣಿಕೆಯಿಂದ ನೀರಿನ ಬರ ಬರುವುದೆಂದೂ ಕೂಡಾ ಜನ ಗಮನಿಸದೇ ಇರಲು ಎತ್ತಿನಹೊಳೆಯನ್ನು ಜನರ ಶತ್ರುವನ್ನಾಗಿ ಬಿಂಬಿಸಲಾಗುತ್ತಿದೆ.

ಜಿಲ್ಲೆಯ ನೀರಿನ ಬರ ಎತ್ತಿನಹೊಳೆ ಯೋಜನೆ ಜಾರಿಯಾಗುವ ಮೊದಲೇ ಇತ್ತು ಹಾಗೂ ಈಗ ಎದುರಾಗಿರುವ ಬರ ಎತ್ತಿನಹೊಳೆಗೆ ಸಂಭಂದಿಸಿರದ ಜಿಲ್ಲೆಗಳಲ್ಲೂ ಇದೆ. ದ.ಕ. ಜಿಲ್ಲೆ ಹಿಂದೆ ಗದ್ದೆ ಬೇಸಾಯಗಳಿಂದ ಕಂಗೊಳಿಸುತ್ತಿದ್ದು, ಬಿದ್ದ ಮಳೆಯ ನೀರು ಕೂಡಾ ಭೂಮಿಯ ಒಳಗೆ ಇಂಗುತ್ತಿತ್ತು. ಆದರೆ ಜಿಲ್ಲೆಯಲ್ಲಿ ಭತ್ತದ ಬೇಸಾಯ ಲಾಭದಾಯಕವಲ್ಲದ ಕಾರಣ ಅನಿವಾರ್ಯವಾಗಿ ಅಡಿಕೆ, ರಬ್ಬರ್ ಬೆಳೆಗಳಿಗೆ ಶರಣಾಗಿ ಹೊಲಗದ್ದೆಗಳೆಲ್ಲಾ ನಾಶವಾಯಿತು. ಇದರಿಂದ ಜಿಲ್ಲೆಯ ಜನ ಆರ್ಥಿಕವಾಗಿ ಸಬಲರಾದರೂ ನೀರಿಗೆ ಬರ ಬರತೊಡಗಿತು. ಇದರಿಂದ ಮಳೆ ನೀರೆಲ್ಲಾ ಸಮುದ್ರ ಪಾಲಾಗುವಂತಾಯಿತು. ಇಂತಹ ಸಮಯ ಜಿಲ್ಲೆಯ ನೀರಿನ ಒಸರು ಹೆಚ್ಚಲು ಕ್ರಮ ಕೈಗೊಳ್ಳಲು ಒತ್ತಾಯಿಸಿ ಯಾರೂ ಜಿಲ್ಲಾ ಬಂದ್‍ಗೆ ಕರೆ ನೀಡಿರಲಿಲ್ಲ ಯಾಕೆ ? ನೀರಿಗಾಗಿ ಸಿಪಿಐ(ಎಂ) ಹೋರಾಡುತ್ತಾ ಇರುವುದನ್ನೂ ಬೆಂಬಲಿಸಲಿಲ್ಲ ಯಾಕೆ ? ನದಿಯನ್ನೇ ಖಾಸಗೀಕರಣ ಮಾಡಲು ಹೊರಟಾಗ ಹೋರಾಡಿ ಲಾಠಿಏಟು, ಜೈಲು ವಾಸ ಅನುಭವಿಸಿದ್ದು, ಸಿಪಿಐ(ಎಂ) ಪಕ್ಷದ ಸದಸ್ಯರು ಮಾತ್ರ ಎಂಬುದು ಜಿಲ್ಲೆಯ ಚರಿತ್ರೆ.

ಈ ಎಲ್ಲಾ ನೈಜ ಸಮಸ್ಯೆಗಳನ್ನು ಬದಿಗೊತ್ತಿ ಎತ್ತಿನಹೊಳೆ ಯೋಜನೆಯನ್ನು ಜನರ ಶತ್ರುವನ್ನಾಗಿ ಮಾಡಿ ರಾಜಕೀಯ ನಡೆಸುವುದನ್ನು ಸಿಪಿಐ(ಎಂ) ಖಂಡಿಸುತ್ತದೆ. ಜನರು ಇದನ್ನು ಅರ್ಥ ಮಾಡಿಕೊಂಡು ಜಿಲ್ಲೆಯ ಉಳಿವಿಗೆ ಸಿಪಿಐ(ಎಂ) ದಾರಿಯನ್ನು ಅನುಸರಿಸಿದರೆ ಉತ್ತಮ. ಜನ ಈ ನೀರಿನ ಸಮಸ್ಯೆಗಳ ವಿರುದ್ದ ಸರಕಾರ ನಡೆಸುವ ಪಕ್ಷಗಳ ವಿರುದ್ದ ಹೋರಾಡದೆ ಇರಲು, ರಾಜಕೀಯೇತರವಾಗಿ ಹೋರಾಡಿ ತಮ್ಮ ಅಸ್ತಿತ್ವವನ್ನು ಉಳಿಸುವ ಹತಾಶ ಪ್ರಯತ್ನವೇ ಎತ್ತಿನಹೊಳೆ ವಿರೋಧಿ ಹೇಳಿಕೆಗಳು ಮತ್ತು ಹೋರಾಟಗಳು. ಸರಕಾರದ ಜನ ವಿರೋಧಿ ಆಡಳಿತದಿಂದ  ಸರಕಾರದ ವಿರುದ್ದ ಜನರ ರೋಷ ಉಕ್ಕಿ ಹೋರಾಡದಂತೆ ತಡೆಯಲು, ಹಿಂದುಗಳ ಅಭಿವೃದ್ದಿ ಆಗದಿರಲು ಮುಸ್ಲಿಂನವರು ಕಾರಣ ಎಂದು ಬಿಂಬಿಸಿ ಕೋಮುಗಲಬೆ ಬೆಳೆಸಿದಂತೆ, ಇದನ್ನು ಕೂಡಾ ಭಾವನಾತ್ಮಕ ವಿಚಾರವನ್ನಾಗಿಸಿ ಜನರು ನೈಜ ಸಮಸ್ಯೆಗಳ ವಿರುದ್ದ ಹೋರಾಡದಂತೆ ಮಾಡುವುದಷ್ಟೇ ಈ ಜಿಲ್ಲಾ ಬಂದಿನ ಉದ್ದೇಶವಾಗುತ್ತದಷ್ಟೇ.

ನಾವು ಜಿಲ್ಲೆಯ ಜನರ ಬದುಕನ್ನು ಉಳಿಸುವತ್ತ ಗಮನ ನಿಡಬೇಕಾಗಿದೆ. ಬೀಡಿ ಉದ್ಯಮ ಉಳಿಸಲು, ಕಸ್ತೂರಿರಂಗನ್ ವರದಿ ತಿರಸ್ಕರಿಸಲು, ಮಳೆ ನೀರನ್ನು ನೀರಿಂಗಿಸಲು, ಅಕ್ರಮ ಮರಳುಗಾರಿಕೆ ತಡೆಯಲು, ಕಿಂಡಿಅಣೆಕಟ್ಟು ನಿರ್ಮಿಸಲು ಹೋರಾಡಿ ಜನರ ಬದುಕನ್ನು ಉಳಿಸಿದರೆ ಈ ಜಿಲ್ಲೆಯು ಜೀವಂತ ಇರುತ್ತದೆ. ಈ ರೈತ-ಕಾರ್ಮಿಕರನ್ನು ಉಳಿಸಿದರೆ ಮಾತ್ರ ಹಿಂದು ಧರ್ಮ ಎನ್ನಲು, ಮುಸ್ಲಿಂ ಧರ್ಮ ಎನ್ನಲು, ಕ್ರಿಶ್ಚಿಯನ್ ಧರ್ಮ ಎನ್ನಲು, ಆ ಜಾತಿ, ಈ ಜಾತಿ ಎನ್ನಲು ಜನ ಇರುತ್ತಾರೆ. ಜನರ ಬದುಕಿಗೆ ಗಮನ ನೀಡಿದರೆ ಮಾತ್ರ ಎಲ್ಲವು ಉಳಿಯಲು ಸಾದ್ಯ. ಧರ್ಮೋಧ್ದಾರಕರು, ನದಿ ಉಳಿಸೋರು, ಪ್ರತ್ಯೇಕ ರಾಜ್ಯ ಕಟ್ಟುತ್ತೇವೆ ಎನ್ನೋರು ಮೊದಲು ಮನುಷ್ಯರನ್ನು ಉಳಿಸುವ, ನೆಮ್ಮದಿ ಜೀವನ ದೊರಕಿಸುವ ಕಡೆ ಗಮನ ನೀಡಬೇಕಾಗಿದೆ. ಟಾಟಾ ಬಿರ್ಲಾರಿಗೆ ಕಷ್ಟ ಬಂದಿದೆ ಎಂದು ಸಂಕಟ ಪಡುವ ರಾಜಕಾರಣಿಗಳಿಗೆ ಎಲ್ಲರನ್ನು ಬದುಕುಳಿಯುವಂತೆ ಮಾಡುವ ನಡೆದಾಡುವ ದೇವರು ಅನ್ನದಾತನಾದ ರೈತರ ಸಂಕಷ್ಟಗಳು ಅರ್ಥವಾಗುವುದೇ ಇಲ್ಲವಲ್ಲ. ಟಾಟಾ ಉತ್ಪಾದಿಸುವ ಸೊತ್ತುಗಳಿಲ್ಲದಿದ್ದರೂ ಬದುಕಬಹುದು, ರೈತ ಉತ್ಪಾದಿಸುವ ಅನ್ನ ಇಲ್ಲದಿದ್ದರೆ ಬದುಕಲಾರೆವು ತಿಳಿಯಿರಿ.

ಸಿಪಿಐ(ಎಂ) ಪಕ್ಷವು ಜಿಲ್ಲೆಯ ನೀರಿನ ಸಮಸ್ಯ ಪರಿಹರಕ್ಕಾಗಿ, ಹೋರಾಟ ಮುಂದುವರಿಸಲಿದೆ. ಜಿಲ್ಲೆಯ ಎಲ್ಲಾ ನದಿಗಳಿಗೂ ಕಿಂಡಿಅಣಕಟ್ಟು ಕಟ್ಟಲು ಒತ್ತಾಯಿಸಿ, ಜಿಲ್ಲಾದ್ಯಂತ ಇಂಗು ಗುಂಡಿ ನಿರ್ಮಿಸಿ ನೀರಿಂಗಿಸಲು ಆಗ್ರಹಿಸಿ, ಅಕ್ರಮ ಮರಳುಗಾರಿಕೆಯನ್ನು ವಿರೋಧಿಸಿ, ದ.ಕ.ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿಸಲು ಮಾಡಬೇಕಾದ ಅಗತ್ಯ ಕೆಲಸಗಳಿಗಾಗಿ ಒತ್ತಾಯಿಸಿ ಸಿಪಿಐ(ಎಂ) ಹೋರಾಟವನ್ನುತೀವ್ರ ರೀತಿಯಲ್ಲಿ ಮುನ್ನಡೆಸಲಿದೆ. ಜಿಲ್ಲೆಯ ಜನ ಈ ಹೋರಾಟವನ್ನು ಬೆಂಬಲಿಸಿ ಜಿಲ್ಲೆಯ ಉಳಿವಿಗೆ ನೈಜ ಹೋರಾಟದತ್ತ ಸಾಗಬೇಕೆಂದು ಬಿ.ಎಂ.ಭಟ್ ಜಿಲ್ಲೆಯ ಜನತೆಯನ್ನು ವಿನಂತಿಸಿದ್ದಾರೆ. ರೈತರ ಭೂಮಿಯ ಪ್ರಶ್ನೆ, ಹಾಗೂ ರೈತರ ಬದುಕಿನ ರಕ್ಷಣೆಗಾಗಿ, ಬೀಡಿ ಕಾರ್ಮಿಕರ ಬದುಕಿನ ಉಳಿವಿಗಾಗಿ ಹೋರಾಡುತ್ತಿರುವ ಸಿಪಿಐ(ಎಂ)ಗೆ ಜಿಲ್ಲೆಯ ಭವಿಷ್ಯದ ಬಗ್ಗೆಯೂ ಕಾಳಜಿ ಇದೆ. ಅದು ಸರಿಯಾದ ದಾರಿಯಲ್ಲಿ ಸಾಗಿ ಸರಿಯಾದ ಪರಿಹಾರ ಕಂಡುಕೊಳ್ಳುವುದಾಗಿದೆ.

ಬರಗಾಲ ಜನಗಳಿಗೆ ಸಂಕಷ್ಟ ! ಸರಕಾರಗಳಿಗೆ ಇಷ್ಟ!

ಸಂಪುಟ: 10 ಸಂಚಿಕೆ: 20Sunday, May 8, 2016

ಒಟ್ಟಾರೆ, ಇದೆಲ್ಲವೂ ಬರಗಾಲ ಗಂಭಿರವಾಗಿರುವುದನ್ನು ಹೇಳುತ್ತಿದೆ. ಕೆಲ ತಜ್ಞರು ಇಂತಹ ಬರದ ಭೀಕರತೆ ಕಳೆದ 73 ವರ್ಷಗಳ ಹಿಂದೆ ಕಂಡು ಬಂದಿತ್ತೆಂದು ಹೇಳುತ್ತಿದ್ದಾರೆ. ಯಾಕೀ ಪರಿಸ್ಥಿತಿ? ಈ ಎರಡೂ ಸರಕಾರಗಳಿಗೆ ಮತ್ತು ಗ್ರಾಮೀಣ ಪಟ್ಟಭದ್ರರಿಗೆ ಇಂತಹ ಬರಗಾಲಗಳು ಬೇಕಾಗಿವೆ. ಗ್ರಾಮೀಣ ಭೂಮಾಲಕರು ಮತ್ತು ಬಡ್ಡಿವ್ಯಾಪಾರಿ ಪಟ್ಟಭದ್ರರಿಗಂತೂ ಈ ಬರಗಾಲಗಳು ಖಂಡಿತಾ ಸುಗ್ಗಿಯಾಗಿವೆ. ಸರಕಾರಗಳಿಗೂ ಬೇಕಾಗಿದೆ. ಅದು ಅವುಗಳ ಜಾಗತೀಕರಣದ ನೀತಿಯ ಭಾಗವಾಗಿದೆ.

ಯೆಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಕಾಲ 2010ರಲ್ಲಿ ರೂಪಿಸಿದ ಸರಕಾರದ ಕರ್ನಾಟಕದ ದೂರದೃಷ್ಟಿ 2020 ಅದನ್ನು ಸ್ಪಷ್ಠಪಡಿಸುತ್ತಿದೆ. ಅದರಂತೆ, 2020ರೊಳಗೆ ಗ್ರಾಮೀಣ ಪ್ರದೇಶದ ಅರ್ಧದಷ್ಟು ದುಡಿಯುವ ಜನತೆಯನ್ನು ವ್ಯವಸಾಯದಿಂದ ಮತ್ತು ಗ್ರಾಮಗಳಿಂದ ಹೊರದಬ್ಬುವುದು ಅದರ ಗುರಿಯಾಗಿದೆ. ಇದಕ್ಕಾಗಿಯೇ ಅಲ್ಲವೇ, ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಸಾಲಬಾಧಿತ ರೈತರ ಜಮೀನುಗಳನ್ನು ಖರೀದಿಸಲು, ಭೂಮಾಲಕರು ಮತ್ತು ವಾರ್ಷಿಕ 25 ಲಕ್ಷ ಆದಾಯ ಉಳ್ಳವರಿಗೆ ಜಮೀನನ್ನು ಹೊಂದಲು ಸಾದ್ಯವಾಗುವಂತೆ ಭೂ ಸುಧಾರಣಾ ಕಾಯ್ದೆ – 1961 ಕ್ಕೆ ಈಚೆಗೆ ರಾಜ್ಯ ಸರಕಾರ, ತಿದ್ದುಪಡಿ ಮಾಡಿದುದು. ಹಾಗೆಂದೂ ಇಂತಹ ಭೀಕರ ಬರಗಾಲದಲ್ಲಿ ಸರಕಾರಗಳು ಸುಮ್ಮನಿದ್ದರೇ, ಜನಗಳು ಸುಮ್ಮನಿರುವರೇ? ಆದ್ದರಿಂದ ಬರಗಾಲ ನಿವಾರಣೆಗೆ ಭಾರೀ ಕಾಳಜಿ ಇದೆಯೆಂದು ತೋರಿಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲೇ ಈ ಅಸಮರ್ಪಕ ಅರೆಬರೆ ಬರ-ಪರಿಹಾರದ ಕೆಲಸ.

ಇದೀಗ ಮುಖ್ಯಮಂತ್ರಿಗಳು ಬರ ಪರಿಹಾರದ ಸಮೀಕ್ಷೆಗಾಗಿ ರಾಜ್ಯದ ಪ್ರವಾಸದಲ್ಲಿ ತೊಡಗಿರುವುದು ಮತ್ತು ವಿರೋಧ ಪಕ್ಷವು ಅದರಲ್ಲಿ ತೊಡಗುವ ಮೂಲಕ ರಾಜ್ಯದ ಬರ ಪರಿಸ್ಥಿತಿ ಮರಳಿ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿಗಳು ಅಲ್ಲಲ್ಲಿ ಅಧಿಕಾರಿಗಳ ಮೇಲೆ ಹರಿಹಾಯುತ್ತಾ ಕೆಲವರನ್ನು ಅಮಾನತುಗೊಳಿಸುತ್ತಾ ಅಗತ್ಯ ಬರ ಪರಿಹಾರ ನೀಡದಿರುವುದರ ಕುರಿತು ಕೇಂದ್ರ ಸರಕಾರದ ಮೇಲೆ ವಾಗ್ದಾಳಿಯಲ್ಲಿ ತೊಡಗಿದರೇ, ವಿರೋಧ ಪಕ್ಷದ ಯಡೆಯೂರಪ್ಪನವರು ರಾಜ್ಯ ಸರಕಾರದ ವಿಫಲತೆಯ ಕಡೆ ಬೆರಳು ಮಾಡುತ್ತಾ ಇಬ್ಬರೂ ಬರಗಾಲದ ರಾಜಕೀಯ ಲಾಭದೋಚಿಕೊಳ್ಳಲು ಯತ್ನಿಸುತ್ತಿದ್ದಾರೆ. ವಾಸ್ತವದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬರದಿಂದ ಜನತೆಯನ್ನು ರಕ್ಷಿಸಲು ಗಂಭೀರವಾಗಿಲ್ಲದಿರುವುದು ಸ್ಪಷ್ಠವಿದೆ. ಇವರು ಅನುಸರಿಸುತ್ತಿರುವ ಆರ್ಥಿಕ ನೀತಿಗಳೇ ಈ ದುಸ್ಥಿತಿಯ ಮೂಲವಾಗಿವೆ.

ಬರದ ಗಾಂಭೀರ್ಯತೆ ;

ಕರ್ನಾಟಕ ರಾಜ್ಯ 2015-16 ನೇ ವರ್ಷದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಯ ವೈಫಲ್ಯದಿಂದಾಗಿ ತೀವ್ರ ಬರ ಪೀಡಿತ ಪ್ರದೇಶವಾಗಿದೆ. ರಾಜ್ಯದ ಒಟ್ಟು ಸಾಗುವಳಿ ಭೂಪ್ರದೇಶದ ಮುಂಗಾರಿನಲ್ಲಿ ಶೇ65ರಷ್ಟು ಮತ್ತು ಹಿಂಗಾರಿನಲ್ಲಿ ಶೇ 90 ರಷ್ಟು ಭೂ ಪ್ರದೇಶ ಬೆಳೆಯನ್ನು ಕಾಣಲಿಲ್ಲ. ನಗರ ತಾಲೂಕುಗಳನ್ನು ಹೊರತು ಪಡಿಸಿದರೇ ಉಳಿದೆಲ್ಲಾ 137 ತಾಲೂಕುಗಳು ಬರ ಪೀಡಿತವೇ ಆಗಿವೆ. ಈ ಕಾರಣದಿಂದ ಈ ವರ್ಷ ಭಾರೀ ದೊಡ್ಡ ಪ್ರಮಾಣದಲ್ಲಿ ನಗರ ಪ್ರದೇಶಗಳ ಕಡೆ ಗುಳೆಹೊರಟ ಜನತೆಯನ್ನು ಕಾಣುತ್ತಿದ್ದೇವೆ. ಪ್ರತಿ ಎಕರೆಗೆ ರೈತರು ಸರಾಸರಿ 25,000 ರೂಗಳಷ್ಟು ಬೆಳೆ ನಷ್ಠವನ್ನು ಅನುಭವಿಸಿದ್ದಾರೆ. ಆದಾಯವಿಲ್ಲದೇ ರಾಜ್ಯದ ಬಹುತೇಕ ಗ್ರಾಮೀಣ ಕುಟುಂಬಗಳು ಹಲವು ದಶ ಸಾವಿರ ರೂಪಾಯಿಗಳಷ್ಟು ಜೀವನ ವೆಚ್ಚದ ಸಾಲದ ಹೊರೆಯನ್ನು ಹೊತ್ತಿವೆ. ಇಲ್ಲವೇ ಇದ್ದ ಬದ್ದ ಸಣ್ಣ ಪುಟ್ಟ ಆಸ್ತಿಗಳನ್ನು ಇರುವ ಚಿಕ್ಕಪುಟ್ಟ ಬಂಗಾರದೊಡವೆಗಳನ್ನು ಭೂಮಾಲಕ ಬಡ್ಡಿ ಸಾಹುಕಾರರುಗಳಿಗೆ ಮಾರಾಟ ಮಾಡಿಕೊಂಡಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ ಸುರಿಯುವ ಮಳೆಯೇ, ರಾಜ್ಯದ ತುಂಗಭದ್ರ, ಭೀಮಾ, ಕಾವೇರಿ ಮುಂತಾದ ಬಹುತೇಕ ನದಿಗಳಿಗೆ, ಆಣೆಕಟ್ಟುಗಳಿಗೆ ಆಧಾರವಾಗಿದ್ದು ಶೇ 40 ಸಾಗುವಳಿ ಪ್ರದೇಶದ ನೀರಾವರಿ ಜಮೀನುಗಳಿಗೆ ಮತ್ತು ರಾಜ್ಯದ ದೊಡ್ಡ ದೊಡ್ಡ ನಗರ/ ಪಟ್ಟಣಗಳಿಗೆ ನೀರು ಒದಗಿಸುತ್ತಿತ್ತು. ಕಳೆದ ವರ್ಷ ಅಲ್ಲಿಯೂ ಮಳೆ ಕ್ಷೀಣಗೊಂಡುದರಿಂದ ಮಲೆನಾಡು ಮತ್ತು ಕರಾವಳಿ ಪ್ರದೇಶವೂ ಬರಗಾಲಕ್ಕೆ ತುತ್ತಾಗ ಬೇಕಾಯಿತು. ಆಣೆಕಟ್ಟುಗಳಲ್ಲಿ ಸಂಗ್ರಹಿಸಲ್ಪಟ್ಟ ನೀರು ಕೇವಲ ಒಂದು ಬೆಳೆಗೆ ನೀರು ಒದಗಿಸಲಷ್ಠೇ ಸಫಲವಾಯಿತಲ್ಲದೇ ಮತ್ತೊಂದು ಬೆಳೆಗೆ ನೀರು ಒದಗಿಸದೇ ಹೋದುದು ಮತ್ತು ಆಣೆಕಟ್ಟುಗಳು ಮತ್ತು ನದಿಗಳು ಬತ್ತುವಂತಾದುದು ರಾಜ್ಯದ ಬರದ ಬೇಗೆಯನ್ನು ತೀವ್ರಗೊಳಿಸಿತು. ನದಿಗಳ ಮೂಲದಿಂದ ಪಂಪ್‍ಗಳ ಮತ್ತು ಏತ ನೀರಾವರಿ ಮೂಲಕ ನೀರು ಸಾಗಿಸಿಕೊಂಡು ವ್ಯವಸಾಯದಲ್ಲಿ ತೊಡಗಿದ್ದ ಹಲವು ದಶಲಕ್ಷಾಂತರ ಎಕರೆ ಪ್ರದೇಶದ ರೈತರು ಬೆಳೆ ನಷ್ಠವನ್ನು ಅನುಭವಿಸುವಂತಾಯಿತು. ಅದೇ ರೀತಿ, ಇದರಿಂದಾಗಿ ನದಿಗಳ ಇಕ್ಕೆಲಗಳಲ್ಲಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿನ ತೊಂ ದರೆ ಬಂದಿತು ಮತ್ತು ನಗರ/ಪಟ್ಟಣಗಳ ಜನತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಅದು ಉಲ್ಬಣಗೊಳಿಸಿ 10-12 ದಿನಗಳಿಗೊಮ್ಮೆ ನೀರು ಪಡೆಯುವಂತಹ ದುಸ್ಥಿತಿಯನ್ನು ತಂದಿತು.

ಬಹುತೇಕ ಮಳೆಯಾಧಾರಿತ ಪ್ರದೇಶವು ಮಾತ್ರವಲ್ಲ, ಅಂತರ್‍ಜಲದ ಕೊರತೆಯಿಂದಾಗಿ ಕೊಳವೇ ಬಾವಿ ನೀರಾವರಿ ಪ್ರದೇಶದ ಬೆಳೆಗಳನ್ನು ನಾಶ ಮಾಡಿದೆ. ಇದೆಲ್ಲವೂ ಸಾಲ ಭಾಧಿತ ರೈತರನ್ನು ಹತಾಶೆಗೀಡುಮಾಡಿತಲ್ಲದೇ, ಇದರೊಂದಿಗೆ ಬೆಲೆ ಕುಸಿತವೂ ಸೇರಿ ಈ ಅವಧಿಯಲ್ಲಿ 11 ಸಾವಿರಕ್ಕಿಂತಲೂ ರೈತರು ಆತ್ಮಹತ್ಯೆಯಲ್ಲಿ ತೊಡಗುವಂತಾಯಿತು. ರಾಜ್ಯದ ದಶ ಸಾವಿರಗಟ್ಟಲೆ ಗ್ರಾಮಗಳಲ್ಲಿ ಕುಡಿಯುವ ನೀರಿನ ತತ್ವಾರ ಉಂಟಾಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ತುಮುಕೂರು ಮುಂತಾದ ಜಿಲ್ಲೆಗಳಲ್ಲಿ ಸಾವಿರಾರು ಅಡಿ ಅಳಕ್ಕೆ ಕೊರೆದರೂ ಕುಡಿಯುವ ನೀರು ಸಿಗುತ್ತಿಲ್ಲ. ಈಗಲೂ ಸರಕಾರದ ಹಲವು ಪ್ರಯತ್ನಗಳ ನಡುವೆಯೂ ಫ್ಲೋರೈಡ್ ಮಿಶ್ರಿತ ವಿಷದ ನೀರೇ ಅಲ್ಲಿನ ಜನಗಳಿಗೆ ಆಧಾರವಾಗಿದೆ.

ಮಳೆಯಾಶ್ರಿತ ಪ್ರದೇಶದ ಬರ ಪೀಡಿತ ಜನತೆಗೆ ನೀರಾವರಿ ಪ್ರದೇಶವೂ ಕನಿಷ್ಠ ಒಂದೆರಡು ತಿಂಗಳಾದರೂ ಉದ್ಯೋಗ ಒದಗಿಸುವ ಪ್ರಸಂಗವಿತ್ತು. ಈ ಭಾರೀ ನದಿಗಳು, ಕೆರೆಗಳು ಮತ್ತು ಆಣೆಕಟ್ಟುಗಳು ಬತ್ತಿಹೋದುದು ಇವರಿಗೆ ನೀರಾವರಿ ಪ್ರದೇಶದಲ್ಲಿ ಉದ್ಯೋಗವಿಲ್ಲದಂತಾಯಿತು. ಮಾತ್ರವಲ್ಲಾ, ನೀರಾವರಿ ಪ್ರದೇಶದ ಕೂಲಿಕಾರರು ಮತ್ತು ಕಸುಬುದಾರರು ಮತ್ತಿತರೇ ಬಡವರು ಕೂಡ ಗ್ರಾಮಗಳನ್ನು ತೊರೆದು ಹೋಗುವಂತಾಗಿದೆ. ಕಳೆದ ದಿನಗಳಲ್ಲಿ ಮಳೆಯಾಶ್ರಯದ ಪ್ರದೇಶದಿಂದ ವಲಸೆ ಅಥವಾ ಗುಳೆ ಹೋಗುವ ಒಟ್ಟು ಜನತೆಯಲ್ಲಿ ಶೇ 60 ರಷ್ಟು ಜನತೆ ನೀರಾವರಿ ಪ್ರದೇಶದಲ್ಲಿ ಮತ್ತು ಕೃಷಿಯೇತರ ಕೆಲಸಗಳಲ್ಲಿ ಆಶ್ರಯ ಪಡೆದಿದ್ದರೇ ಈಗ ಶೇ 100ರಷ್ಟು ಜನತೆ ನಗರ/ಪಟ್ಟಣಗಳ ಕಡೆ ನಡೆಯುವಂತಾಗಿದೆ. ಮಾತ್ರವಲ್ಲಾ ನೀರಾವರಿ ಪ್ರದೇಶದಿಂದಲೂ ವಲಸೆ/ ಗುಳೆಯನ್ನು ಹೆಚ್ಚಿಸಿದೆ.

ಜಾನುವಾರುಗಳು, ಪಕ್ಷಿಗಳು ಮತ್ತು ಕಾಡು ಪ್ರಾಣಿಗಳು ಮೇವಿನ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ.

ಕಳೆದ ವರ್ಷದ ಮಳೆಯ ಅಭಾವ ಮತ್ತು ಮಹಾರಾಷ್ಠ್ರ, ತೆಲಂಗಾಣ ಹಾಗೂ ಆಂದ್ರ ಪ್ರದೇಶಗಳಲ್ಲಿ ಬೀಸುತ್ತಿರುವ ಬಿಸಿಗಾಳಿಯು ರಾಜ್ಯದ ತಾಪಮಾನವನ್ನು ಅಗಾಧವಾಗಿ ಹೆಚ್ಚಿಸಿದೆ. ಇದರಿಂದಾಗಿ ಕಲಬುರಗಿಯ ಯುವ ವಕೀಲರೊಬ್ಬರು ಬಿಸಿಲಿನ ತಾಪಕ್ಕೆ ಬಲಿಯಾದ ವರದಿ ಬಂದಿದೆ.

ಒಟ್ಟಾರೆ, ಇದೆಲ್ಲವೂ ಬರಗಾಲ ಗಂಭಿರವಾಗಿರುವುದನ್ನು ಇದು ಹೇಳುತ್ತಿದೆ. ಕೆಲ ತಜ್ಞರು ಇಂತಹ ಬರದ ಭೀಕರತೆ ಕಳೆದ 73 ವರ್ಷಗಳ ಹಿಂದೆ ಕಂಡು ಬಂದಿತ್ತೆಂದು ಹೇಳುತ್ತಿದ್ದಾರೆ.
ಸರಕಾರಗಳ ಅಸಮರ್ಪಕ ಕ್ರಮಗಳು :

ಗ್ರಾಮೀಣ ಪ್ರದೇಶವೂ ಅಲ್ಲಿನ ದುಡಿಯುವ ಜನತೆಗೆ ಇದರಿಂದಾಗಿ ಭೀಕರವಾಗಿರುವಾಗ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಅಷ್ಠೇನು ಗಂಭಿರವಾಗಿ ಪರಿಗಣಿಸದಿರುವುದನ್ನು ಕಾಣುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಬಿಜೆಪಿಯ ಯಡಿಯೂರಪ್ಪನವರೂ ಏನೆಲ್ಲಾ ತಾವು ಕ್ರಮಕೈಗೊಂಡಿರುವುದಾಗಿ ಕೊಚ್ಚಿಕೊಂಡು ಪರಸ್ಪರರ ಮೇಲೆ ಆರೋಪಿಸಿಕೊಂಡರೂ ಅದು ಕೇವಲ ಬೂಟಾಟಿಕೆ ಎಂಬುದು ಸ್ಪಷ್ಠವಿದೆ. ಗ್ರಾಮೀಣ ದುಡಿಯುವ ಜನತೆ ಬರದಿಂದಾಗಿ ತೀವ್ರ ನಷ್ಟ ಕ್ಕೊಳಗಾಗುತ್ತಿರುವುದು ಇದ್ದ ಬದ್ದ ಆಸ್ತಿಗಳನ್ನೆಲ್ಲ ಮಾರಾಟಮಾಡುತ್ತಿರುವುದು, ಸಾಲಭಾಧಿತರಾಗುತ್ತಿರುವುದು ಮತ್ತು ಗ್ರಾಮೀಣ ಪ್ರದೇಶದಿಂದ ನಗರಗಳೆಡೆ ಗುಳೆ ಹೋಗುತ್ತಿರುವುದು ಸ್ಪಷ್ಟವಾಗಿದ್ದರೂ ಅದನ್ನು ತಡೆಯುವ ಯಾವುದೇ ಗಂಭೀರ ಪ್ರಯತ್ನಗಳನ್ನು ಅವು ಮಾಡುತ್ತಿಲ್ಲ. ರೈತರು ಈ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆಗಳನ್ನು ಮಾಡಿಕೊಂಡರೂ ಅವುಗಳನ್ನು ನಿಲ್ಲಿಸುವ ಗಂಭೀರ ಹೆಜ್ಜೆಗಳನ್ನು ಇಡಲು ಅವು ನಿರಾಕರಿಸುತ್ತಿವೆ. ಉದ್ಯೋಗ ಖಾತ್ರಿಯಂತಹ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿ ಗ್ರಾಮೀಣ ವಲಸೆಯನ್ನು ತಡೆಯಬಹುದಿತ್ತು. ಸರಕಾರಗಳು ಅದನ್ನು ಮಾಡದೇ ಗ್ರಾಮೀಣ ಪಟ್ಟಭದ್ರರೂ ಲೂಟಿ ಮಾಡಲು ಬಿಡುತ್ತಿವೆ. ಇದರಿಂದಾಗಿ ಸಾವಿರಾರು ಕೋಟಿ ಹಣವು ಗ್ರಾಮೀಣ ಪಟ್ಟಭದ್ರರರ ಪಲಾಗಿದೆ. ಮುಖ್ಯಮಂತ್ರಿಗಳು ಕಳೆದ ಒಂದು ವಾರದಿಂದ ರಾಜ್ಯದ ಪ್ರವಾಸದಲ್ಲಿದ್ದಾರೆ ಇಂತಹ ಬರಗಾಲದಲ್ಲಿ ಎಲ್ಲಿಯಾದರೂ ಸಾವಿರಾರು ಸಂಖ್ಯೆಯಲ್ಲಿ ಜನತೆ ಉದ್ಯೋಗ ಖಾತ್ರಿಯಲ್ಲಿ ತೊಡಗಿದುದುನ್ನು ಕಂಡರೇ? ಯಾಕೆ ಕಾಣಲಿಲ್ಲ.

ಅದೇ ರೀತಿ, ಬರಗಾಲದಿಂದ ಮುಕ್ತಿಯನ್ನು ಪಡೆಯಲು ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕದಲ್ಲಿ ನೂರಾರು ದಿನಗಳೀಂದ ನಡೆದಿರುವ ಮತ್ತು ಮದ್ಯ ಹಾಗೂ ದಕ್ಷಿಣ ಕರ್ನಾಟಕದ ಪಶ್ಚಿಮ ಘಟ್ಟಗಳ ನೀರಿಗಾಗಿ ನಡೆದಿರುವ ಹಲವು ವರ್ಷಗಳಿಂದ ನಡೆದಿರುವ ಹೋರಾಟಗಳನ್ನು ಯಾಕೆ ಪರಿಗಣಿಸುತ್ತಿಲ್ಲ?

ಈ ಅವಧಿಯಲ್ಲಿ ಬೆಳೆ ನಷ್ಠ ಮತ್ತು ಜೀವನ ವೆಚ್ಚದಿಂದ ಲಕ್ಷಾಂತರ ರೂಪಾಯಿಗಳ ಸಾಲದ ಹೊರೆಯನ್ನು ರೈತರು ಹೊತ್ತಿದ್ದರೂ, ಅದನ್ನು ಕಡಿಮೆ ಮಾಡಲು ಮುಖ್ಯವಾಗಿ ಬಡ ಹಾಗೂ ಮದ್ಯಮ ರೈತರ ಎಲ್ಲ ರೀತಿಯ ಖಾಸಗೀ ಹಾಗೂ ಸಾರ್ವಜನಿಕ ಹಾಗೂ ಸಹಕಾರಿ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಲು ಅಗತ್ಯ ಕ್ರಮವಹಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸರಕಾರಗಳು ಸ್ಪಷ್ಠವಾಗಿ ನಿರಾಕರಿಸುತ್ತಿವೆ. ಹಾಗೂ ಅವುಗಳು ನೀಡಲಾಗುತ್ತದೆಂದು ಹೇಳುತ್ತಿರುವ  ಬೆಳೆ ನಷ್ಠಪರಿಹಾರವು ಕೇವಲ ಮಳೆಯಾಧಾರಿತ ಪ್ರದೇಶಕ್ಕೆ ಸೀಮಿತವಾಗಿದೆ ಮತ್ತು ಅದು ಆ ಪ್ರದೇಶದ ರೈತರ ಮತ್ತು ಕೂಲಿಕಾರರ ಕೂಲಿ ನಷ್ಠದ ಪರಿಹಾರವನ್ನು ಅದು ಘೋಷಿಸಿಲ್ಲ ಮತ್ತು ನೀಡುತ್ತಿರುವ ಪರಿಹಾರವೂ ಭಾರೀ ತಮಾಯದಾಗಿದೆ. ಅದಕ್ಕೆ ಯಾವುದೇ ಮಾನದಂಡಗಳಿಲ್ಲ. ಕೆಲವೆಡೆ ಎಕರೆಗೆ 1000ರೂಗಳಿಗಿಂತಲೂ ಕಡಿಮೆ ನೀಡಿದರೇ ಇನ್ನೂ ಕೆಲವೆಡೆ 1900 ರೂ ಮತ್ತೆ ಕೆಲವರಿಗೆ 3,000 ರೂ ನೀಡಿದೆ. ಕೆಲವರಿಗೆ 100 ರೂಗಿಂತಲೂ ಕಡಿಮೆ ನೀಡಿದ ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ಹಲವು ಲಕ್ಷ ಮಳೆಯಾಶ್ರಯದ ರೈತಕುಟುಂಬಗಳಿಗೆ ಅದು ಇನ್ನೂ ಕೂಡಾ ತಲುಪಿಲ್ಲ. ಇನ್ನು ನೀರಾವರಿ ನಂಬಿ ನಷ್ಠ ಹೊಂದಿದ ನದಿ ನೀರನ್ನು ಬಳಸಿ ವ್ಯವಸಾಯದಲ್ಲಿ ತೊಡಗಿದ, ಎರಡನೆ ಬೆಳೆಗೆ ನೀರು ದೊರಯದೇ ನಷ್ಠವಾದ ಮತ್ತು ಪಂಪ್‍ಸೆಟ್ ಮೂಲಕ ನೀರಾವರಿ ಮಾಡಿಕೊಂಡು ನಷ್ಟ ಹೊಂದಿದ ದಶಲಕ್ಷಾಂತರ ರೈತರಿಗೆ ಪರಿಹಾರವೆ ಇಲ್ಲಾ!

ಕುಡಿಯುವ ನೀರಿಗಾಗಿ ಎಲ್ಲಾ ಕ್ರಮವಹಿಸಲಾಗಿದೆಯೆಂದು ಕೋಟ್ಯಾಂತರ ಹಣ ಬಿಡುಗಡೆ ಮಾಡಲಾಗಿದೆಯೆಂದು, ಹಣದ ಕೊರತೆ ಇಲ್ಲವೆಂದು ಸರಕಾರ ಹೇಳುತ್ತಿದ್ದರೂ, ಈಗಲೂ ರಾಜ್ಯದ ಜನತೆ ಗಂಭಿರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬಂಡಿಹಳ್ಳಿಯಲ್ಲಿ ಇಂತಹ ಭಾರೀ ತಾಪಮಾನದಲ್ಲಿ ತಲಾ ರೇಷನ್ ಕಾರ್ಢಗೆ ಎರಡು ಕೊಡ ನೀರು ನೀಡಲಾಗುವುದೆಂದು ಹೇಳಲಾಗಿದೆ. ನಗರಗಳ ಜನತೆ ನೀರಿಗಾಗಿ ಕೆಲಸವನ್ನು ಬಿಟ್ಟು ಅಲೆಯಬೇಕಾದ ಪರಿಸ್ಥಿತಿ ಮುಂದುವರೆದಿದೆ. ಭೀಮಾ ನದಿ ಇಕ್ಕೆಲಗಳ ನೂರಾರು ಗ್ರಾಮಗಳಿಗೆ ನದಿಗಳು ಬತ್ತಿಹೋಗಿರುವುದರಿಂದ ಟ್ಯಾಂಕ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲವೆಂದು ಮಹಾರಾಷ್ಠ್ರ ಸರಕಾರಕ್ಕೆ ಸದರಿ ನದಿಗೆ ಅಲ್ಲಿನ ಆಣೆಕಟ್ಟೆಗಳಿಂದ ನೀರು ಬಿಡುವಂತೆ ಸರಕಾರ ಮನವಿ ಮಾಡಿದೆ. ಇಂತಹದ್ದೇ ಪರಿಸ್ಥಿತಿ ಇತರೇ ನದಿಗಳ ದಂಡೆಗಳ ಮೇಲಿನ ಗ್ರಾಮಗಳದ್ದು ಆಗಿದೆ.

ಯಾಕೀ ಪರಿಸ್ಥಿತಿ?

ಯಾಕೆಂದರೇ ಎರಡೂ ಸರಕಾರಗಳಿಗೆ ಮತ್ತು ಗ್ರಾಮೀಣ ಪಟ್ಟಭದ್ರರಿಗೆ ಇಂತಹ ಬರಗಾಲಗಳು ಬೇಕಾಗಿವೆ. ಗ್ರಾಮೀಣ ಭೂಮಾಲಕರು ಮತ್ತು ಬಡ್ಡಿವ್ಯಾಪಾರಿ ಪಟ್ಟಭದ್ರರಿಗಂತೂ ಈ ಬರಗಾಲಗಳು ಖಂಡಿತಾ ಸುಗ್ಗಿಯಾಗಿವೆ. ಆದ್ದರಿಂದ ಅವುಗಳು ಇರಬೇಕೆಂಬುದೇ ಅವರ ಅಭಿಲಾಷೆಯಾಗಿದೆ. ಸರಕಾರಗಳಿಗೂ ಬೇಕಾಗಿದೆ. ಅದು ಅವುಗಳ ಜಾಗತೀಕರಣದ ನೀತಿಯ ಭಾಗವಾಗಿದೆ. ರೈತರೂ ಭೂಮಿಗಳನ್ನು ತೊರೆಯುವುದು ಮತ್ತು ಬೀದಿಪಾಲಾದ ರೈತ ಕುಟುಂಬಗಳು ಮತ್ತು ಕೂಲಿಕಾರರು, ಕಸುಬುದಾರರು ಗ್ರಾಮಗಳನ್ನು ತೊರೆಯುವಂತೆ ಮಾಡುವುದು ಈ ಎರಡು ಸರಕಾರಗಳ ಯೋಜನೆಯಾಗಿದೆ.  ವ್ಯವಸಾಯವನ್ನು ರೈತರು ಮತ್ತು ಕಸುಬುದಾರರು ಹಾಗೂ ಕೃಷಿಕೂಲಿಕಾರರಿಂದ ಕಸಿದು ಅದನ್ನು ಬಹುರಾಷ್ಠ್ರೀಯ ಸಂಸ್ಥೆಗಳ ಹೆಗಲಿಗೆ ಹಾಕುವ ಹುನ್ನಾರದ ಭಾಗವಾಗಿದೆ.

ಯೆಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಕಾಲ 2010ರಲ್ಲಿ ರೂಪಿಸಿದ ಸರಕಾರದ ಕರ್ನಾಟಕದ ದೂರದೃಷ್ಟಿ 2020 ಅದನ್ನು ಸ್ಪಷ್ಠಪಡಿಸುತ್ತಿದೆ. ಅದರಂತೆ, 2020ರೊಳಗೆ ಗ್ರಾಮೀಣ ಪ್ರದೇಶದ ಅರ್ಧದಷ್ಟು ದುಡಿಯುವ ಜನತೆಯನ್ನು ವ್ಯವಸಾಯದಿಂದ ಮತ್ತು ಗ್ರಾಮಗಳಿಂದ ಹೊರದಬ್ಬುವುದು ಅದರ ಗುರಿಯಾಗಿದೆ. ಇದಕ್ಕಾಗಿಯೇ ಅಲ್ಲವೇ, ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಸಾಲಬಾಧಿತ ರೈತರ ಜಮೀನುಗಳನ್ನು ಖರೀದಿಸಲು, ಭೂಮಾಲಕರು ಮತ್ತು ವಾರ್ಷಿಕ 25ಲಕ್ಷ ಆದಾಯ ಉಳ್ಳವರಿಗೆ ಜಮೀನನ್ನು ಹೊಂದಲು ಸಾದ್ಯವಾಗುವಂತೆ ಭೂ ಸುಧಾರಣಾ ಕಾಯ್ದೆ – 1961 ಕ್ಕೆ ಈಚೆಗೆ ರಾಜ್ಯ ಸರಕಾರ, ತಿದ್ದುಪಡಿ ಮಾಡಿದುದು. ಅದೂ ರಾಜ್ಯ ಭೀಕರ ಬರಗಾಲದಲ್ಲಿ ಮತ್ತು ರೈತರು ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆಯಲ್ಲಿ ತೊಡಗಿದ್ದಾಗ ಅವುಗಳ ಕಡೆ ಗಮನ ಹರಿಸದೇ ತರಾತುರಿಯಲ್ಲಿ ತಿದ್ದುಪಡಿ ತಂದಿದ್ದು

ಹೀಗಾಗಿ, ಬರಗಾಲವೆಂದರೇ ಕೇವಲ ಭೂಮಾಲಕ ಪಟ್ಟಭದ್ರರಿಗೆ ಮಾತ್ರವೇ ಇಷ್ಟವಲ್ಲ, ಅದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೂ ಇಷ್ಠವಾಗಿದೆ. ಹಾಗೆಂದೂ ಇಂತಹ ಭೀಕರ ಬರಗಾಲದಲ್ಲಿ ಸರಕಾರಗಳು ಸುಮ್ಮನಿದ್ದರೇ, ಜನಗಳು ಸುಮ್ಮನಿರುವರೇ? ಆದ್ದರಿಂದ ಬರಗಾಲ ನಿವಾರಣೆಗೆ ಭಾರೀ ಕಾಳಜಿ ಇದೆಯೆಂದು ತೋರಿಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲೇ ಈ ಅಸಮರ್ಪಕ ಅರೆಬರೆ ಕೆಲಸ

ಚಳುವಳಿಯೊಂದೇ ದಾರಿ

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬರಗಾಲವನ್ನು ಶಾಶ್ವತವಾಗಿ ನಿವಾರಿಸಲು ದುರುದ್ದೇಶದಿಂದಲೇ ಕ್ರಮವಹಿಸದಿರುವಾಗ ಗ್ರಾಮೀಣ ಪ್ರದೇಶದ ದುಡಿಯುವ ಜನತೆಗೆ ಚಳುವಳಿಯನ್ನು ಇನ್ನಷ್ಠು ತೀವ್ರಗೊಳಿಸುವುದೊಂದೇ ಮಾರ್ಗವಾಗಿದೆ. ಇದಕ್ಕಾಗಿ ಐಕ್ಯ ಹಾಗೂ ಸುಸಂಘಟಿತ ಚಳುವಳಿಯ ಅಗತ್ಯವಿದೆ. ಬರ ಪರಿಹಾರಕ್ಕೆ ಕೈಗೊಳ್ಳ ಬೇಕಾದ ಕ್ರಮಗಳಿವೆ. ಇವುಗಳಿಗಾಗಿ ಹೋರಾಡಬೇಕಷ್ಠೇ!

  1. ಬರ ಪೀಡಿತ ಎಲ್ಲಾ ಪ್ರದೇಶದ ರೈತರು ಹಾಗೂ ಕಸಬುದಾರರು ಮತ್ತು ಕೂಲಿಕಾರರ ಪ್ರತಿ ಕುಟುಂಬಕ್ಕೆ  ತಲಾ 25 ಕೇಜಿ ಉಚಿತವಾಗಿ ಅಕ್ಕಿಯನ್ನು ಒದಗಿಸಬೇಕು. ಈ ಪ್ರದೇಶದ ಎಲ್ಲಾ ಶಾಲೆಗಳಲ್ಲೂ ರಾತ್ರಿ ಊಟವನ್ನು ಆರಂಭಿಸಬೇಕು.
  2. ಪ್ರತಿ ಕುಟುಂಬಕ್ಕೆ ನಿಜವಾದ ಅರ್ಥದಲ್ಲಿ ಪ್ರತಿದಿನ ಕನಿಷ್ಠ 500 ರೂಗಳ ಕೂಲಿಯಂತೆ 200 ದಿನಗಳ ಉದ್ಯೋಗ ಖಾತ್ರಿ ಕೆಲಸವನ್ನು ಒದಗಿಸಬೇಕು. ಅಲ್ಲಿನ ಭ್ರಷ್ಠಾಚಾರವನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ಅನುಸರಿಸಬೇಕು.
  3. ಪ್ರತಿ ಗ್ರಾಮದಲ್ಲಿ ಅಗತ್ಯ ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಬೇಕು. ಫ್ಲೋರೈಡ್ ವಿಷದಿಂದ ಮುಕ್ತ ಗೊಳಿಸಬೇಕು. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮೇವಿನ ಬ್ಯಾಂಕ್ ತೆರೆಯಬೇಕು
  4.  ಬೆಳೆ ನಷ್ಠ ಪರಿಹಾರವನ್ನು ತಲಾ ಎಕರೆಗೆ ಕನಿಷ್ಟ 25 ಸಾವಿರ ರೂ. ನೀಡಬೇಕು. ಇದನ್ನು ನೀರಾವರಿ ಪ್ರದೇಶದಲ್ಲಾದ ನಷ್ಠಕ್ಕೂ ಅನ್ವಯಿಸಬೇಕು.
  5. ರೈತರ ಎಲ್ಲಾ ರೀತಿಯ ಸಾಲ ಮನ್ನಾಮಾಡಲು, ಕೇರಳದ ಈ ಹಿಂದಿನ ಎಡ ಮತ್ತು ಪ್ರಜಾಸತ್ತಾತ್ಮಕ ರಂಗದ ಸರಕಾರ ಜಾರಿಗೆ ತಂದ ಋಣಮುಕ್ತ ಕಾಯ್ದೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು. ಎಲ್ಲ ರೈತರು, ಕೂಲಿಕಾರರು ಮತ್ತು ಕಸಬುದಾರರಿಗೂ ಅಗತ್ಯದಷ್ಟು ಹೊಸ ಸಾಲವನ್ನು ನೀಡಲು ಕ್ರಮವಹಿಸಬೇಕು.
  6. ಬರಗಾಲದಿಂದ ಶಾಶ್ವತವಾಗಿ ಮುಕ್ತಿ ಹೊಂದಲೂ ಶಾಶ್ವತನೀರಾವರಿ ಯೋಜನೆಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
  7. ಬೆಳೆ ವಿಮೆಯು ಸಮಯ ಬಧ್ಧವಾಗಿ ಸಿಗುವಂತೆ ಮತ್ತು ಒಟ್ಟು ಬೆಳೆಯ ನಷ್ಠವನ್ನು ತುಂಬಿಕೊಡುವಂತೆ ಸರಿಪಡಿಸಿ, ಪ್ರತಿಯೊಬ್ಬ ರೈತನಿಗೂ ಅದು ದೊರೆಯುವಂತೆ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರಬೇಕು
  8. ಈ ಪ್ರದೇಶದ ವಿದ್ಯಾರ್ಥಿಗಳಿಗೆ ಎಲ್ಲಾ ಹಂತದ ಶಾಲಾ ಕಾಲೇಜುಗಳಲ್ಲೂ ಉಚಿತವಾದ ಪ್ರವೇಶ ನೀಡಬೇಕು.

ಯು. ಬಸವರಾಜು