ಎತ್ತಿಹೊಳೆ ಯೋಜನೆ ವಿರೋಧಿ ಜಿಲ್ಲಾ ಬಂದ್ ಗೆ ಸಿಪಿಐ(ಎಂ) ಬೆಂಬಲ ಇಲ್ಲ

Friday, May 13, 2016

ಎತ್ತಿನ ಹೊಳೆ ಯೋಜನೆಯನ್ನು ವಿರೋದಿಸಿ ಮೇ.19ರಂದು ಕರೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಬಂದ್‍ಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಬೆಂಬಲ ನೀಡುವುದಿಲ್ಲ ಎಂದು ಸಿಪಿಐ(ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರೂ ನ್ಯಾಯವಾದಿಗಳೂ ಆದ ಬಿ.ಎಂ.ಭಟ್ ಹೇಳಿದ್ದಾರೆ.

ಇದು ಜನರನ್ನು ಮೂಲ ಸಮಸ್ಯೆಗಳಿಂದ ದೂರ ಸರಿಸುವ ಪ್ರಯತ್ನವಷ್ಟೇ ಆಗಿದೆ. ಎತ್ತಿನಹೊಳೆ ಯೋಜನೆಗೂ ದ.ಕ.ಜಿಲ್ಲೆಯ ನೀರಿನ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂಬ ಸತ್ಯ ಬಂದ್‍ಗೆ ಕರೆ ನೀಡಿದವರಿಗೂ ಸೇರಿದಂತೆ ಎಲ್ಲರಿಗೂ ಗೊತ್ತಿದೆÉ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋದಿಸುತ್ತಾ, ಕೋಲಾರದಲ್ಲಿ ಬೆಂಬಲ ನೀಡುತ್ತಿವೆ. ಇದು ಜಿಲ್ಲೆಗೆ ನಿಜವಾಗಿಯು ಸಮಸ್ಯೆ ಎಂದು ಇಲ್ಲಿ ಹೇಳುವ ಈ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಜನಪ್ರತಿನಿಧಿಗಳು ಲೋಕಸಭೆಯಲ್ಲಾಗಲಿ, ವಿಧಾನ ಸಭೆಯಲ್ಲಾಗಲಿ ತುಟಿಬಿಚ್ಚುವುದಿಲ್ಲ. ಇಂತವರು ಇಲ್ಲಿ ಬಂದ್‍ಗೆ ಬೆಂಬಲ ಘೋಷಿಸಿದರೆ, ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ವಿಚಾರ ಬೇರೆ ಸಿಗಲಾರದು.

ಜಿಲ್ಲೆಯಲ್ಲಿ ಈಗ ನೀರಿನ ಸಮಸ್ಯೆ ಉದ್ಬವಿಸಿದೆ. ಸುಮಾರು ಮೂವತ್ತು ವರ್ಷಗಳಿಂದ ಜಿಲ್ಲೆಯ ನೀರಿನ ಫಸಲು ಕಡಿಮೆಯಾಗುತ್ತಾ ಬರುತ್ತಿರುವುದು ನಮಗೆಲ್ಲಾ ಗೊತ್ತಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಸಿಪಿಐ(ಎಂ) ಹೋರಾಡುತ್ತಾ ಬಂದಿದ್ದರೂ ಈಗ ಎತ್ತಿನಹೊಳೆಯನ್ನು ವಿರೋದಿಸುವವರ್ಯಾರು ಬೆಂಬಲ ನೀಡಿರಲಿಲ್ಲ. ಜಿಲ್ಲೆಯ ಎಲ್ಲಾ ನದಿಗಳಿಗೆ ಕಿಂಡಿ ಅಣೆಕಟ್ಟು ಕಟ್ಟಬೇಕು, ಜಿಲ್ಲಾದ್ಯಂತ ಇಂಗು ಗುಂಡಿ ನಿರ್ಮಿಸಿ ನೀರಿಂಗಿಸುವ ಕೆಲಸಗಳಾಗಬೇಕು, ಯಾಂತ್ರಿಕೃತ ಮರಳುಗಾರಿಕೆ ನಿಷೇಧಿಸಬೇಕು ಎಂದು ಸಿಪಿಐ(ಎಂ) ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದರೂ, ಜಿಲ್ಲೆಯ ನೀರಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದ ಜನ ಈಗ ನೀರಿನ ಬರಕ್ಕೆ ಎತ್ತಿನಹೊಳೆ ಕಾರಣ ಎಂದು ಹೇಳಿ ಜನರನ್ನು ದಾರಿತಪ್ಪಿಸುತ್ತಿರುವುದು ಸರಿಯಲ್ಲ. ನೈಜ ಸಮಸ್ಯೆಗಳ ಪರಿಹಾರಕ್ಕಾಗಿಯಾಗಲಿ, ಬೀಡಿಕಾರ್ಮಿಕರು ಬೀದಿ ಪಾಲು ಮಾಡುವ ಕೋಟ್ಪಾ ಕಾಯ್ದೆಯ ವಿರುದ್ದವಾಗಲಿ, ಕಸ್ತೂರಿರಂಗನ್ ವರದಿಯ ವಿರುದ್ದವಾಗಲಿ ಇವರ್ಯಾರೂ ಜಿಲ್ಲಾ ಬಂದ್ ಗೆ ಕರೆ  ನೀಡಿಲ್ಲ. ಈಗ ಕೇವಲ ರಾಜಕೀಯ ಲಾಭಕ್ಕಾಗಿ, ಜನರನ್ನು ನೈಜ ಸಮಸ್ಯೆಗಳಿಂದ ದೂರ ಸರಿಸಲು, ಅಕ್ರಮ ಮರಳುಗಾರಿಕೆಯು ನೀರಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಜನ ಪ್ರತಿಭಟಿಸದಂತೆ ಹಾಗೂ ಎಂ.ಆರ್.ಪಿ.ಯಲ್ ನಂತಹ ಕಂಪೆನಿಗಳು ನೇತ್ರಾವತಿ ನೀರು ಕಬಳಿಸುವುದನ್ನು ಜನ ವಿರೋಧಿಸದಂತೆ ಮಾಡಲು ಈ ನಾಟಕ ಆಡಲಾಗುತ್ತಿದೆ.

ಸಾಂಪ್ರದಾಯಿಕ ಹೊಲಗದ್ದೆಗಳು ಈಗ ಇಲ್ಲದಾಗಿದ್ದು ನೀರಿಂಗಿಸುವ ಬಗ್ಗೆ ಬದಲಿ ವ್ಯವಸ್ಥೆ ಮಾಡಬೇಕಾದ ಸರಕಾರ ಅಕ್ರಮ ಮರಳು ಸಾಗಾಟಕ್ಕೆ ಬೆಂಬಲ ನೀಡುತ್ತಿದೆ. ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವ ಬದಲು ನದಿ ತೀರದಿಂದ ಪ್ರತಿದಿನ ಸಾವಿರಾರು ಟನ್ ಮರಳನ್ನು ಯಂತ್ರಗಳ ಮೂಲಕ ತೆಗೆದು ಲೂಟಿ ಮಾಡಲಾಗುತ್ತಿದೆ. ಇದು ಜಿಲ್ಲೆಯ ನೀರಿನ ಬರ ಹೆಚ್ಚಲು ಕಾರಣವಾಗಿದ್ದರೂ, ಮರಳು ಲಾಬಿಯವರ ವಿರುದ್ದ ಯಾರೂ ಜಿಲ್ಲಾ ಬಂದಿಗೆ ಕರೆ ನೀಡುವುದಿಲ್ಲ. ಮರಳು ಅಕ್ರಮ ಸಾಗಾಣಿಕೆಯಿಂದ ನೀರಿನ ಬರ ಬರುವುದೆಂದೂ ಕೂಡಾ ಜನ ಗಮನಿಸದೇ ಇರಲು ಎತ್ತಿನಹೊಳೆಯನ್ನು ಜನರ ಶತ್ರುವನ್ನಾಗಿ ಬಿಂಬಿಸಲಾಗುತ್ತಿದೆ.

ಜಿಲ್ಲೆಯ ನೀರಿನ ಬರ ಎತ್ತಿನಹೊಳೆ ಯೋಜನೆ ಜಾರಿಯಾಗುವ ಮೊದಲೇ ಇತ್ತು ಹಾಗೂ ಈಗ ಎದುರಾಗಿರುವ ಬರ ಎತ್ತಿನಹೊಳೆಗೆ ಸಂಭಂದಿಸಿರದ ಜಿಲ್ಲೆಗಳಲ್ಲೂ ಇದೆ. ದ.ಕ. ಜಿಲ್ಲೆ ಹಿಂದೆ ಗದ್ದೆ ಬೇಸಾಯಗಳಿಂದ ಕಂಗೊಳಿಸುತ್ತಿದ್ದು, ಬಿದ್ದ ಮಳೆಯ ನೀರು ಕೂಡಾ ಭೂಮಿಯ ಒಳಗೆ ಇಂಗುತ್ತಿತ್ತು. ಆದರೆ ಜಿಲ್ಲೆಯಲ್ಲಿ ಭತ್ತದ ಬೇಸಾಯ ಲಾಭದಾಯಕವಲ್ಲದ ಕಾರಣ ಅನಿವಾರ್ಯವಾಗಿ ಅಡಿಕೆ, ರಬ್ಬರ್ ಬೆಳೆಗಳಿಗೆ ಶರಣಾಗಿ ಹೊಲಗದ್ದೆಗಳೆಲ್ಲಾ ನಾಶವಾಯಿತು. ಇದರಿಂದ ಜಿಲ್ಲೆಯ ಜನ ಆರ್ಥಿಕವಾಗಿ ಸಬಲರಾದರೂ ನೀರಿಗೆ ಬರ ಬರತೊಡಗಿತು. ಇದರಿಂದ ಮಳೆ ನೀರೆಲ್ಲಾ ಸಮುದ್ರ ಪಾಲಾಗುವಂತಾಯಿತು. ಇಂತಹ ಸಮಯ ಜಿಲ್ಲೆಯ ನೀರಿನ ಒಸರು ಹೆಚ್ಚಲು ಕ್ರಮ ಕೈಗೊಳ್ಳಲು ಒತ್ತಾಯಿಸಿ ಯಾರೂ ಜಿಲ್ಲಾ ಬಂದ್‍ಗೆ ಕರೆ ನೀಡಿರಲಿಲ್ಲ ಯಾಕೆ ? ನೀರಿಗಾಗಿ ಸಿಪಿಐ(ಎಂ) ಹೋರಾಡುತ್ತಾ ಇರುವುದನ್ನೂ ಬೆಂಬಲಿಸಲಿಲ್ಲ ಯಾಕೆ ? ನದಿಯನ್ನೇ ಖಾಸಗೀಕರಣ ಮಾಡಲು ಹೊರಟಾಗ ಹೋರಾಡಿ ಲಾಠಿಏಟು, ಜೈಲು ವಾಸ ಅನುಭವಿಸಿದ್ದು, ಸಿಪಿಐ(ಎಂ) ಪಕ್ಷದ ಸದಸ್ಯರು ಮಾತ್ರ ಎಂಬುದು ಜಿಲ್ಲೆಯ ಚರಿತ್ರೆ.

ಈ ಎಲ್ಲಾ ನೈಜ ಸಮಸ್ಯೆಗಳನ್ನು ಬದಿಗೊತ್ತಿ ಎತ್ತಿನಹೊಳೆ ಯೋಜನೆಯನ್ನು ಜನರ ಶತ್ರುವನ್ನಾಗಿ ಮಾಡಿ ರಾಜಕೀಯ ನಡೆಸುವುದನ್ನು ಸಿಪಿಐ(ಎಂ) ಖಂಡಿಸುತ್ತದೆ. ಜನರು ಇದನ್ನು ಅರ್ಥ ಮಾಡಿಕೊಂಡು ಜಿಲ್ಲೆಯ ಉಳಿವಿಗೆ ಸಿಪಿಐ(ಎಂ) ದಾರಿಯನ್ನು ಅನುಸರಿಸಿದರೆ ಉತ್ತಮ. ಜನ ಈ ನೀರಿನ ಸಮಸ್ಯೆಗಳ ವಿರುದ್ದ ಸರಕಾರ ನಡೆಸುವ ಪಕ್ಷಗಳ ವಿರುದ್ದ ಹೋರಾಡದೆ ಇರಲು, ರಾಜಕೀಯೇತರವಾಗಿ ಹೋರಾಡಿ ತಮ್ಮ ಅಸ್ತಿತ್ವವನ್ನು ಉಳಿಸುವ ಹತಾಶ ಪ್ರಯತ್ನವೇ ಎತ್ತಿನಹೊಳೆ ವಿರೋಧಿ ಹೇಳಿಕೆಗಳು ಮತ್ತು ಹೋರಾಟಗಳು. ಸರಕಾರದ ಜನ ವಿರೋಧಿ ಆಡಳಿತದಿಂದ  ಸರಕಾರದ ವಿರುದ್ದ ಜನರ ರೋಷ ಉಕ್ಕಿ ಹೋರಾಡದಂತೆ ತಡೆಯಲು, ಹಿಂದುಗಳ ಅಭಿವೃದ್ದಿ ಆಗದಿರಲು ಮುಸ್ಲಿಂನವರು ಕಾರಣ ಎಂದು ಬಿಂಬಿಸಿ ಕೋಮುಗಲಬೆ ಬೆಳೆಸಿದಂತೆ, ಇದನ್ನು ಕೂಡಾ ಭಾವನಾತ್ಮಕ ವಿಚಾರವನ್ನಾಗಿಸಿ ಜನರು ನೈಜ ಸಮಸ್ಯೆಗಳ ವಿರುದ್ದ ಹೋರಾಡದಂತೆ ಮಾಡುವುದಷ್ಟೇ ಈ ಜಿಲ್ಲಾ ಬಂದಿನ ಉದ್ದೇಶವಾಗುತ್ತದಷ್ಟೇ.

ನಾವು ಜಿಲ್ಲೆಯ ಜನರ ಬದುಕನ್ನು ಉಳಿಸುವತ್ತ ಗಮನ ನಿಡಬೇಕಾಗಿದೆ. ಬೀಡಿ ಉದ್ಯಮ ಉಳಿಸಲು, ಕಸ್ತೂರಿರಂಗನ್ ವರದಿ ತಿರಸ್ಕರಿಸಲು, ಮಳೆ ನೀರನ್ನು ನೀರಿಂಗಿಸಲು, ಅಕ್ರಮ ಮರಳುಗಾರಿಕೆ ತಡೆಯಲು, ಕಿಂಡಿಅಣೆಕಟ್ಟು ನಿರ್ಮಿಸಲು ಹೋರಾಡಿ ಜನರ ಬದುಕನ್ನು ಉಳಿಸಿದರೆ ಈ ಜಿಲ್ಲೆಯು ಜೀವಂತ ಇರುತ್ತದೆ. ಈ ರೈತ-ಕಾರ್ಮಿಕರನ್ನು ಉಳಿಸಿದರೆ ಮಾತ್ರ ಹಿಂದು ಧರ್ಮ ಎನ್ನಲು, ಮುಸ್ಲಿಂ ಧರ್ಮ ಎನ್ನಲು, ಕ್ರಿಶ್ಚಿಯನ್ ಧರ್ಮ ಎನ್ನಲು, ಆ ಜಾತಿ, ಈ ಜಾತಿ ಎನ್ನಲು ಜನ ಇರುತ್ತಾರೆ. ಜನರ ಬದುಕಿಗೆ ಗಮನ ನೀಡಿದರೆ ಮಾತ್ರ ಎಲ್ಲವು ಉಳಿಯಲು ಸಾದ್ಯ. ಧರ್ಮೋಧ್ದಾರಕರು, ನದಿ ಉಳಿಸೋರು, ಪ್ರತ್ಯೇಕ ರಾಜ್ಯ ಕಟ್ಟುತ್ತೇವೆ ಎನ್ನೋರು ಮೊದಲು ಮನುಷ್ಯರನ್ನು ಉಳಿಸುವ, ನೆಮ್ಮದಿ ಜೀವನ ದೊರಕಿಸುವ ಕಡೆ ಗಮನ ನೀಡಬೇಕಾಗಿದೆ. ಟಾಟಾ ಬಿರ್ಲಾರಿಗೆ ಕಷ್ಟ ಬಂದಿದೆ ಎಂದು ಸಂಕಟ ಪಡುವ ರಾಜಕಾರಣಿಗಳಿಗೆ ಎಲ್ಲರನ್ನು ಬದುಕುಳಿಯುವಂತೆ ಮಾಡುವ ನಡೆದಾಡುವ ದೇವರು ಅನ್ನದಾತನಾದ ರೈತರ ಸಂಕಷ್ಟಗಳು ಅರ್ಥವಾಗುವುದೇ ಇಲ್ಲವಲ್ಲ. ಟಾಟಾ ಉತ್ಪಾದಿಸುವ ಸೊತ್ತುಗಳಿಲ್ಲದಿದ್ದರೂ ಬದುಕಬಹುದು, ರೈತ ಉತ್ಪಾದಿಸುವ ಅನ್ನ ಇಲ್ಲದಿದ್ದರೆ ಬದುಕಲಾರೆವು ತಿಳಿಯಿರಿ.

ಸಿಪಿಐ(ಎಂ) ಪಕ್ಷವು ಜಿಲ್ಲೆಯ ನೀರಿನ ಸಮಸ್ಯ ಪರಿಹರಕ್ಕಾಗಿ, ಹೋರಾಟ ಮುಂದುವರಿಸಲಿದೆ. ಜಿಲ್ಲೆಯ ಎಲ್ಲಾ ನದಿಗಳಿಗೂ ಕಿಂಡಿಅಣಕಟ್ಟು ಕಟ್ಟಲು ಒತ್ತಾಯಿಸಿ, ಜಿಲ್ಲಾದ್ಯಂತ ಇಂಗು ಗುಂಡಿ ನಿರ್ಮಿಸಿ ನೀರಿಂಗಿಸಲು ಆಗ್ರಹಿಸಿ, ಅಕ್ರಮ ಮರಳುಗಾರಿಕೆಯನ್ನು ವಿರೋಧಿಸಿ, ದ.ಕ.ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿಸಲು ಮಾಡಬೇಕಾದ ಅಗತ್ಯ ಕೆಲಸಗಳಿಗಾಗಿ ಒತ್ತಾಯಿಸಿ ಸಿಪಿಐ(ಎಂ) ಹೋರಾಟವನ್ನುತೀವ್ರ ರೀತಿಯಲ್ಲಿ ಮುನ್ನಡೆಸಲಿದೆ. ಜಿಲ್ಲೆಯ ಜನ ಈ ಹೋರಾಟವನ್ನು ಬೆಂಬಲಿಸಿ ಜಿಲ್ಲೆಯ ಉಳಿವಿಗೆ ನೈಜ ಹೋರಾಟದತ್ತ ಸಾಗಬೇಕೆಂದು ಬಿ.ಎಂ.ಭಟ್ ಜಿಲ್ಲೆಯ ಜನತೆಯನ್ನು ವಿನಂತಿಸಿದ್ದಾರೆ. ರೈತರ ಭೂಮಿಯ ಪ್ರಶ್ನೆ, ಹಾಗೂ ರೈತರ ಬದುಕಿನ ರಕ್ಷಣೆಗಾಗಿ, ಬೀಡಿ ಕಾರ್ಮಿಕರ ಬದುಕಿನ ಉಳಿವಿಗಾಗಿ ಹೋರಾಡುತ್ತಿರುವ ಸಿಪಿಐ(ಎಂ)ಗೆ ಜಿಲ್ಲೆಯ ಭವಿಷ್ಯದ ಬಗ್ಗೆಯೂ ಕಾಳಜಿ ಇದೆ. ಅದು ಸರಿಯಾದ ದಾರಿಯಲ್ಲಿ ಸಾಗಿ ಸರಿಯಾದ ಪರಿಹಾರ ಕಂಡುಕೊಳ್ಳುವುದಾಗಿದೆ.

Advertisements