ಒಣಗಿದ ಭೂಮಿ, ಈಡೇರದ ಭರವಸೆಗಳು….

ಸಂಪುಟ: 10 ಸಂಚಿಕೆ: 20 Sunday, May 8, 2016

ಮಹಾರಾಷ್ಟ್ರದ ಬರಪೀಡಿತ ಮರಾಠವಾಡಾ ಪ್ರದೇಶದಲ್ಲಿ ಕಿಸಾನ್ ಸಭಾ ವಿಪರೀತ ಕರ್ಷಕ ಸಂಕಟದ ಪ್ರಶ್ನೆಯ ಮೇಲೆ ನಡೆಸುತ್ತಿರುವ ಪ್ರಚಾರಾಂದೋಲನದಲ್ಲಿ ಭಾಗವಹಿಸಲು ಹೋಗಿದ್ದ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯೆ ಬೃಂದಾ ಕಾರಟ್ 15-20 ಹಳ್ಳಿಗಳಲ್ಲಿ ಸಂಚರಿಸಿದರು, ಔರಂಗಾಬಾದ್, ಬೀಡ್ ಮತ್ತು ಜಾಲ್ನಾ ಜಿಲ್ಲೆಗಳಲ್ಲಿ ರೈತರನ್ನು ಮತ್ತು ರೇಗಾ ಕಾರ್ಮಿರಕನ್ನು ಭೇಟಿಯಾದರು. ನಂತರ ಸಿಪಿಐ(ಎಂ) ಕೇಂದ್ರ ಕಾರ್ಯಕಾರಿ ಮಂಡಳಿಯ ಸದಸ್ಯ ಅಶೋಕ ಧವಳೆ ಮತ್ತಿತರ ಮುಖಂಡರೊಂದಿಗೆ ಔರಂಗಾಬಾದ್ ಜಿಲ್ಲಾ ಕಮಿಶನರ್ ಅವರನ್ನು ಭೇಟಿ ಮಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ವೇಳೆ ಪ್ರಧಾನಿ ನರೇಂದ್ರ ಮೋದಿ ಮರಾಠವಾಡ ರೈತರು ಮತ್ತು ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಅವುಗಳಲ್ಲ್ಲಿ ಯಾವುದೂ ಈಡೇರಿಲ್ಲ. ಮೋದಿಯವರು ವಿದೇಶ ಪ್ರವಾಸಕ್ಕೆ ಸ್ವಲ್ಪ ಬಿಡುವು ಕೊಟ್ಟು ಇಲ್ಲಿನ ಪರಿಸ್ಥಿತಿಯ ಅಧ್ಯಯನಕ್ಕಾಗಿ ಇಲ್ಲಿಗೆ ಭೇಟಿ ಕೊಡುವುದು ಅಗತ್ಯ. ಸರಕಾರದ ಹೇಳಿಕೆಗಳು ಅಪ್ಪಟ ಸುಳ್ಳು ಎಂದು ಜನಾಬಾಯಿ ಮತ್ತು ಭುಮ್ರೆ ಯಾಕೆ ಹೇಳುತ್ತಾರೆ ಎನ್ನುವುದನ್ನು ತಿಳಿಯಲು ಮೋದಿಯವರಿಗೆ ಇದು ನೆರವಾಗುತ್ತದೆ ಎನ್ನುತ್ತಾರೆ ಬೃಂದಾ ಕಾರಟ್ ಈ ಭೇಟಿಯ ಆಧಾರದಲ್ಲಿ ಬರೆದಿರುವ ಈ ಲೇಖನದಲ್ಲಿ. 

ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಹರಡಿರುವ 257 ಜಿಲ್ಲೆಗಳಲ್ಲಿನ ಗಂಭೀರ ಬರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರ ಸಾಧ್ಯವಾದುದೆಲ್ಲವನ್ನೂ ಮಾಡುತ್ತಿದೆ ಎಂದು ರಾಜ್ಯಸಭೆಯಲ್ಲಿ ಸರಕಾರ ಹೇಳಿರುವುದಕ್ಕೆ ಜನಾಬಾಯಿ ಕೊರ್ಡೆ ಅಥವಾ ಪ್ರಭಾಕರ ಭುನ್ರೆ ಹೇಗೆ ಪ್ರತಿಕ್ರಿಯಿಸಬಹುದು? ಈ ಇಬ್ಬರೂ ಮಹಾರಾಷ್ಟ್ರದ ಮರಾಠವಾಡಾ ಪ್ರದೇಶದ ಬೀಡ್ ಮತ್ತು ಜಾಲ್ನಾದ ನಿವಾಸಿಗಳು. ಈ ಪ್ರದೇಶದಲ್ಲಿ ಎಂಟು ಜಿಲ್ಲೆಗಳಿದ್ದು ಅಲ್ಲಿ ಕಳೆದ ಮೂರು ವರ್ಷಗಳಿಂದ ತಾಂಡವವಾಡುತ್ತಿರುವ ಬರಗಾಲ ಇದೀಗ ಪರಾಕಾಷ್ಠೆ ಮುಟ್ಟಿದೆ.

ಜನಾಬಾಯಿ ಕೊರ್ಡೆ ಬೀಡ್‍ನ ಒಂದು ಗ್ರಾಮದ ಸರಪಂಚರು. ಮರಾಠವಾಡ ಪ್ರದೇಶದಲ್ಲಿ ಕಿಸಾನ್ ಸಭಾದ ಪ್ರಚಾರಾಂದೋಲನದ ವೇಳೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ರೇಗಾ) ಕೆಲಸದ ಸ್ಥಳಗಳಲ್ಲಿ ಕಾರ್ಮಿಕರೊಂದಿಗೆ ಸಂವಾದಿಸುತ್ತಿದ್ದಾಗ ನಮ್ಮ ತಂಡ ಜನಾಬಾಯಿ ಅವರನ್ನು ಭೇಟಿ ಮಾಡಿತ್ತು. ಕೃಷಿ ಸಂಬಂಧಿ ಕೆಲಸಗಳು ಪೂರ್ಣ ಸ್ಥಗಿತ ಗೊಂಡಿರುವುದರಿಂದ ಇಲ್ಲಿ ರೇಗಾ ಒಂದೇ ಉಳಿದಿರುವ ಜೀವನ ಮಾರ್ಗವಾಗಿದೆ. ಎಲ್ಲಾ ಬರಪೀಡಿತ ಪ್ರದೇಶಗಳಲ್ಲಿ ರೇಗಾ ಕೆಲಸದ ಅವಧಿಯನ್ನು ನೂರು ದಿನಗಳಿಂದ 150 ದಿನಗಳಿಗೆ ವಿಸ್ತರಿಸುವುದಾಗಿ ಕೇಂದ್ರ ಸರಕಾರ ಘೊಷಿಸಿದೆ. ಆದರೆ ಅದು ಇನ್ನೂ ಜಾರಿಯಾಗಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ವೆಬ್ ಸೈಟ್‍ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ 2015-16ರಲ್ಲಿ ಮರಾಠವಾಡ ಪ್ರದೇಶದ ಎಂಟು ಜಿಲ್ಲೆಗಳ ಪೈಕಿ ಐದರಲ್ಲಿ-ಔರಂಗಾಬಾದ್, ಜಾಲ್ನಾ, ನಾಂದೇಡ್, ಒಸ್ಮಾನಾಬಾದ್ ಮತ್ತು ಹಿಂಗೋಲಿ-ಪ್ರತಿ ಜಿಲ್ಲೆಯಲ್ಲಿ ಸರಾಸರಿ ಕೆಲಸದ ದಿನಗಳು ಕೇವಲ 47 ದಿನಗಳು ಅಥವಾ ಅದಕ್ಕಿಂತಲೂ ಕಡಿಮೆ ಆಗಿದ್ದವು. ಲಾತುರ್‍ನಲ್ಲಿ 72 ದಿನಗಳು ಹಾಗೂ ಬೀಡ್‍ನಲ್ಲಿ 81 ದಿನಗಳು.

ಉದ್ಯೋಗ ಖಾತರಿ ಯೋಜನೆಗೆ ಕಡಿಮೆ ಹಣ

ಲಕ್ಷಾಂತರ ಭೂರಹಿತ ಕೃಷಿ ಕಾರ್ಮಿಕರು, ಕಬ್ಬು ಕಟಾವು ಮಾಡುವವರು ಮತ್ತು ಸಣ್ಣ ರೈತರು ಕೆಲಸಕ್ಕಾಗಿ ಹತಾಶೆಯೊಂದ ಎದುರು ನೋಡುತ್ತಿದ್ದರೂ ಪ್ರತಿ ಜಿಲ್ಲೆಯಲ್ಲಿ ಕಳೆದ ವರ್ಷ ರೇಗಾದಡಿ ಕೆಲಸ ಸಿಕ್ಕಿದ್ದು  70000 ಜನರಿಗೆ ಮಾತ್ರ. ಬೀಡ್ ಮಾತ್ರ ಇದಕ್ಕೆ ಅಪವಾದವಾಗಿದ್ದು ಅಲ್ಲಿ 1.19 ಲಕ್ಷ ಜನರಿಗೆ ಉದ್ಯೋಗ ಸಿಕ್ಕಿದೆ. ಇದೀಗ ಬೇಡಿಕೆ ಪರಾಕಾಷ್ಠೆ ಮುಟ್ಟಿರುವ ಈ ತಿಂಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಸಿಕ್ಕಿರುವವರ ಸರಾಸರಿ ಸಂಖ್ಯೆ ಕೇವಲ 4000. ಸಾಕಷ್ಟು ಹಣ ಬಿಡುಗಡೆ ಮಾಡಲು ಕೇಂದ್ರ ಸರಕಾರ ನಿರಾಕರಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಅಧಿಕಾರಿಗಳು ಅನಧಿಕೃತವಾಗಿ ಹೇಳುತ್ತಾರೆ. ಇಡೀ ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿ ಹೇಳುವುದಾದರೆ, ಬರಗಾಲ-ಪೂರ್ವ ವರ್ಷವಾದ 2012-13ರಲ್ಲಿ ರೇಗಾಕ್ಕೆ ಕೇಂದ್ರ ಮಂಜೂರು ಮಾಡಿದ್ದಕ್ಕಿಂತ 212 ಕೋಟಿ ರೂಪಾಯಿಯಷ್ಟು ಕಡಿಮೆ ಹಣವನ್ನು 2015-16ರಲ್ಲಿ ಮಂಜೂರು ಮಾಡಲಾಗಿದೆ.

ಇನ್ನೂ ಆಘಾತಕರ ಸಂಗತಿಯೆಂದರೆ, ಕೆಲಸ ಸಿಕ್ಕಿದರೂ ಅನೇಕ ಜನರಿಗೆ ಕೂಲಿಯೇ ಸಿಗುವುದಿಲ್ಲ. ಕೆಲಸ ಒದಗಿಸುವಲ್ಲಿ ತುಲನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿರುವ ಬೀಡ್ ಜಿಲ್ಲೆ, ಕೂಲಿ ವಿತರಿಸುವಲ್ಲಿ ತೀರಾ ಕೆಟ್ಟ ಸ್ಥಿತಿಯಲ್ಲಿದೆ. ಕಳೆದ ವರ್ಷ ಈ ಜಿಲ್ಲೆಯಲ್ಲಿ ಸರಕಾರ ರೇಗಾ ಕಾರ್ಮಿಕರಿಗೆ ಕೊಡಬೇಕಾದ ಬಾಕಿ ಕೂಲಿ ಹಣ 5.58 ಕೋಟಿ ರೂಪಾಯಿಗಳು. ನಾವು ಜನಾಬಾಯಿ ಅವರನ್ನು ಭೇಟಿ ಮಾಡಿದ ಆಕೆಯ ಗ್ರಾಮ ತಕರ್ವಾನ್‍ನಲ್ಲಿ ಒಂದುವರೆ ತಿಂಗಳ ಹಿಂದೆ ಕೆಲಸ ಆರಂಭವಾದರೂ ಇದುವರೆಗೂ 150 ಕಾರ್ಮಿಕರಿಗೆ ಒಂದು ಪೈಸೆ ಕೂಲಿಯನ್ನೂ ಕೊಟ್ಟಿಲ್ಲ. ಸುಡು ಬಿಸಿಲಿನಲ್ಲಿ, ಕುಡಿಯಲು ಸಾಕಷ್ಟು ನೀರು ಕೂಡ ಇಲ್ಲದ ಸ್ಥಿತಿಯಲ್ಲಿ ಮಹಿಳೆಯರು ಎಂಟು ಗಂಟೆಗಳ ಒಂದು ಕೆಲಸದ ದಿನದಲ್ಲಿ ನೆಲ ಅಗೆದು 5000 ಕೆಜಿ ಮಣ್ಣನ್ನು ಹೊರಬೇಕು. ಇದಕ್ಕಿಂತ ಅಮಾನವೀಯವಾದ ಕೆಲಸದ ನಿಯಮ ಬೇರೆ ಯಾವುದಾದರೂ ಇದ್ದೀತೇ? ಇದೊಂದು ಅಸಾಧ್ಯ ಕೆಲಸ.

ಬರಗಾಲದಿಂದಾಗಿ ಮಣ್ಣು ಗಟ್ಟಿಯಾಗಿದೆ ಹಾಗೂ ಕಲ್ಲಿನಂತಾಗಿದೆ ಎಂದು ಅಧಿಕಾರಿಗಳೇ ಒಪ್ಪುತ್ತಾರೆ. ಆದರೆ ಕೂಲಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದರ ಪರಿಣಾಮವಾಗಿ ಕಾರ್ಮಿಕರು ಪಡೆಯಬೇಕಾದ ಕನಿಷ್ಟ ಕೂಲಿಗಿಂತ ಶೇಕಡಾ 30ರಷ್ಟು ಕಡಿಮೆ ಕೂಲಿ ಪಡೆಯುವಂತಾಗಿದೆ. ಅವರು 11ರಿಂದ 12 ಗಂಟೆ ಕಾಲ ದುಡಿದರೆ ಮಾತ್ರ ದಿನದ ಕನಿಷ್ಟ ಕೂಲಿ ಸಿಗುತ್ತದೆ. ಜನಾಬಾಯಿ ಈ ಕಾರ್ಮಿಕರ ಪರವಾಗಿ ಹೋರಾಡುತ್ತಿದ್ದಾರೆ. ನಿರ್ಣಾಯಕವಾದ ಆಹಾರ ಭದ್ರತೆ ವಿಷಯವನ್ನೂ ಅವರು ಕೈಗೆತ್ತಿಕೊಂಡಿದ್ದಾರೆ. ಸಾರ್ವಜನಿಕ ವಿತರಣೆ ವ್ಯವಸ್ಥೆ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದೂ ಜನಾಬಾಯಿ ಹೇಳುತ್ತಾರೆ. ಆದರೆ ಅವರ ಮಾತನ್ನು ಕೇಳುವವರಾರು?.
ದಲಿತರೇ ಹೆಚ್ಚಾಗಿರುವ ಭೂರಹಿತರು ಮತ್ತು ಕೃಷಿಕೂಲಿಗಾರರು ನಿಸ್ಸಂಶಯವಾಗಿಯೂ ಹೆಚ್ಚು ಬಾಧಿತರಾಗಿದ್ದು ರೈತರ ಪರಿಸ್ಥಿತಿ ಕೂಡ ಭಿನ್ನವಾಗಿಯೇನೂ ಇಲ್ಲ.

ರೈತರ ಹತಾಶೆ

ಪ್ರಭಾಕರ ಭುಮ್ರೆ ಜಾಲ್ನಾ ಜಿಲ್ಲೆಯ ಒಬ್ಬ ರೈತ. ಇಲ್ಲಿನ ಅನೇಕ ಜನರಂತೆ ಆತ ಕೂಡ ಹಣ್ಣು ಬೆಳೆಗಾರನಾಗಿದ್ದು 400 ಕಿತ್ತಳೆ ಮರಗಳನ್ನು ಬೆಳೆದಿದ್ದಾನೆ. ಆತ ಕಳೆದ ಎರಡು ವರ್ಷಗಳಲ್ಲಿ ಎರಡು ಲಕ್ಷ ರೂಪಾಯಿ ಸಾಲ ಪಡೆದಿದ್ದ. ನೀರು ಸರಬರಾಜಿಗಾಗಿ ಖಾಸಗಿ ಕಂಪೆನಿಗಳಿಗೆ ಆತ ತುಂಬಾ ಹಣ ನೀಡಿದ್ದರೂ ತನ್ನ ಕಿತ್ತಳೆ ಮರಗಳನ್ನು ಉಳಿಸಿಕೊಳ್ಳಲು ಭುಮ್ರೆಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಆತ ಆ ಮರಗಳನ್ನು ಕಡಿದು ಹಾಕಿದ. ಇದು ಈ ರೀತಿಯ ಒಂದೇ ಪ್ರಕರಣವಲ್ಲ. ಜಾಲ್ನಾ ಜಿಲ್ಲೆಯಲ್ಲಿ ಕಿತ್ತಳೆ ಮರ ಬೆಳೆಯಲಾಗುವ ಒಟ್ಟು ಪ್ರದೇಶದಲ್ಲಿ ಸುಮಾರು ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಅಂದರೆ 9000 ಹೆಕ್ಟೇರ್ ಪ್ರದೇಶದಲ್ಲಿನ ಕಿತ್ತಳೆ ಮರಗಳನ್ನು ಕಡಿದುರುಳಿಸಲಾಗಿದೆ. ಆದರೆ ಈ ರೈತರಿಗೆ ಸರಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಬಹುತೇಕ ಕಿತ್ತಳೆ ಬೆಳೆಗಾರರಿಗೆ ಯಾವುದೇ ಪರಿಹಾರವೂ ಸಿಕ್ಕಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಸಾಲ ಮರುಪಾವತಿ ಮಾಡುವಂತೆ ಭುಮ್ರೆ ಅವರಂಥ ರೈತರಿಗೆ ಬ್ಯಾಂಕ್‍ಗಳು ನೋಟಿಸ್ ಕಳಿಸುತ್ತಿವೆ. ರೈತರ ಹತಾಶೆ ಎದ್ದು ಕಾಣುತ್ತಿದ್ದು ಈ ಪ್ರದೇಶದಲ್ಲಿ ಇದೇ ವರ್ಷದ ಜನವರಿಯಿಂದೀಚೆಗೆ 325 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಔರಂಗಾಬಾದ್‍ನ ಪಚೋಡ್‍ನಲ್ಲಿನ ದನಗಳ ಸಂತೆಯಲ್ಲಿ ನಾವು ಭುಮ್ರೆಯನ್ನು ಭೇಟಿ ಮಾಡಿದೆವು. ಅಲ್ಲಿ ಆತ ತನ್ನ ಎರಡು ಎತ್ತುಗಳನ್ನು ಮಾರಿದ್ದ. ಹತಾಶರಾದ ರೈತರ ಗುಂಪಿನಲ್ಲಿ ಕುಳಿತಿದ್ದ ಭುಮ್ರೆ ಇನ್ನೇನು ಕಣ್ಣೀರು ಹಾಕುವುದರಲ್ಲಿದ್ದ. ಸುಮಾರು ಒಂದು ವರ್ಷದ ಹಿಂದೆ ಒಂದು ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದ ತನ್ನ ಪ್ರಾಣಿಗಳನ್ನು ಆತ ಕೇವಲ 20000 ರೂಪಾಯಿಗಳಿಗೆ ಮಾರಿದ್ದ. ಇನ್ನೊಬ್ಬ ರೈತ ಸಾಲಾರ್ ಖಾನ್ ಕತೆಯೂ ಅದೇ ರೀತಿ ಇತ್ತು. ಆತನೂ ಎತ್ತಿನ ಜೋಡಿಯನ್ನು ಖರೀದಿಸಿದ್ದಕ್ಕಿಂತ ಅರ್ಧ ಬೆಲೆಗೆ ಮಾರಾಟ ಮಾಡಿದ್ದ. 90000 ರೂಪಾಯಿ ಸಾಲ ಹೊಂದಿರುವ ಆತನ ಹೆಣ್ಣುಮಕ್ಕಳು ಶಾಲೆಯನ್ನು ತೊರೆಯಬೇಕಾಯಿತು. ಭಾರತೀಯ ಜನತಾ ಪಕ್ಷದ ಸರಕಾರ ಗೋಹತ್ಯೆ ಮೇಲೆ ನಿಷೇಧ ಹೇರಿದ್ದರಿಂದ ರಾಜ್ಯದಾದ್ಯಂತ ಈ ಪ್ರಾಣಿಗಳ ಬೆಲೆ ಪಾತಾಳಕ್ಕೆ ಕುಸಿದಿದೆ. ಮರಾಠವಾಡ ಪ್ರದೇಶದಲ್ಲಿ ಸಾಕಾಣಿಕೆ ವೆಚ್ಚ ಹೆಚ್ಚಿರುವುದರಿಂದ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ದನಗಳ ಸಂತೆಗೆ ಸುಮಾರು 3000 ದನ-ಎತ್ತುಗಳನ್ನು ತರಲಾಗಿತ್ತು. ಹತಾಶೆಯಿಂದ ಸಿಕ್ಕಿದ ಬೆಲೆಗೆ ಮಾರಾಟ ಮಾಡುವುದು ಬದುಕುಳಿಯುವ ಕಟ್ಟಕಡೆಯ ಕಾರ್ಯತಂತ್ರವಾಗಿದೆ. ಅವರಿಗೆ ಅದು ಬಿಟ್ಟು ಅನ್ಯ ಮಾರ್ಗವಿಲ್ಲ.

ಸರಕಾರದ ಯೋಜನೆಯಡಿ ಗೋಶಾಲೆಗಳನ್ನು ನಿರ್ಮಿಸಿದ್ದರೆ ಸ್ವಲ್ಪ ಪರಿಹಾರ ಸಿಗಬಹುದಿತ್ತು. ಆದರೆ ಸರಕಾರ ಅವುಗಳನ್ನು ವಿವಿಧ ನೊಂದಾಯಿತ ಸಹಕಾರಿ ಸಂಘಗಳಿಗೆ ಹೊರಗುತ್ತಿಗೆ ನೀಡಿದೆ. ಬಿಜೆಪಿಯ ದಿವಂಗತ ನಾಯಕ ಗೋಪಿನಾಥ ಮುಂಡೆ ಅವರ ಇಬ್ಬರು ಪುತ್ರಿಯರು ಚುನಾವಣೆಗಳಲ್ಲಿ ಗೆದ್ದು ಹೋಗಿರುವ ಬೀಡ್ ಜಿಲ್ಲೆಯಲ್ಲಿ, ಈ ರೀತಿಯ 137 ಗೋಶಾಲೆಗಳಿವೆ. ಈ ಪ್ರದೇಶದಲ್ಲೇ ಇದು ಹೆಚ್ಚು ಗೋಶಾಲೆಗಳು. ಕೇಜ್ ನಲ್ಲಿರುವ ಒಂದು ಅತಿದೊಡ್ಡ ಗೋಶಾಲೆಯಲ್ಲಿ 1400 ಪ್ರಾಣಿಗಳಿವೆ. ಈ ಗೋಶಾಲೆಯನ್ನು ಜೈ ಬಜರಂಗ ಬಲಿ ಸಂಘ ನಡೆಸುತ್ತಿದೆ. ಮಾರ್ಚ್ ನಲ್ಲಿ ಗೋಶಾಲೆ ಆರಂಭಿಸಿದಾಗಿನಿಂದಲೂ ಸಂಘಕ್ಕೆ ಯಾವುದೇ ಧನಸಹಾಯ ಸಿಕ್ಕಿಲ್ಲ. ಗೋಶಾಲೆಯ ದಿನದ ವೆಚ್ಚ ಸುಮಾರು ಒಂದು ಲಕ್ಷ ರೂಪಾಯಿ ಆಗುತ್ತದೆ ಎಂದು ಸಂಘದ ಸುಪರ್ ವೈಸರ್ ಹೇಳಿದರು. ಹಾಗಾದರೆ ಅದನ್ನು ಹೇಗೆ ನಡೆಸುತ್ತೀರಾ ಎಂಬ ನಮ್ಮ ಪ್ರಶ್ನೆಗೆ ಇನ್ನಷ್ಟು ಸಾಲ ಮಾಡುವ ಮೂಲಕ ಎಂಬ ಉತ್ತರ ದೊರಕಿತು. ಆದರೆ ಬೇರೆ ಕೆಲವರು ಹೇಳುವ ಪ್ರಕಾರ ಈ ನೊಂದಾಯಿತ ಸಂಘಗಳು ರೈತರಿಗೆ ಮೇವಿಗಾಗಿ ಸಿಗಬೇಕಾದ  ನಿಜವಾದ ಮೊತ್ತವನ್ನು ಕೊಡುವುದಿಲ್ಲ. ಸರಕಾರದ ಸಬ್ಸಿಡಿ ವಸ್ತು ರೂಪದಲ್ಲಿರಬೇಕಾಗಿದ್ದು ಮೇವು ಮತ್ತು ನೀರಿಗೆಂದು ದೊಡ್ಡ ಹಸುಗಳಿಗೆ ದಿನಕ್ಕೆ 70 ರೂಪಾಯಿ ಹಾಗೂ ಚಿಕ್ಕ ಹಸುಗಳಿಗೆ 31 ರೂಪಾಯಿ ಎಂದು ನಿಗದಿಪಡಿಸಲಾಗಿದೆ.

ಬಹುತೇಕ ಜಿಲ್ಲೆಗಳಲ್ಲಿ ಗೋಶಾಲೆ ಯೋಜನೆ ಆರಂಭವಾಗಿಲ್ಲ. ಸರಕಾರವೇ ನಿರ್ದಿಷ್ಟ ಸಮಯದ ವರೆಗೆ ದೊಡ್ಡ ಸಂಖ್ಯೆಯಲ್ಲಿ ಗೋಶಾಲೆಗಳನ್ನು ನಡೆಸಬೇಕು ಹಾಗೂ ಕೇಂದ್ರ ಸರಕಾರ ಇದಕ್ಕೆ ನೆರವು ನೀಡಬೇಕು. ಸಂಸತ್ತಿನ ಚರ್ಚೆಯ ವೇಳೆ ಈ ಬಗ್ಗೆ ಯಾವುದೇ ಆಶ್ವಾಸನೆ ನೀಡಲಾಗಿಲ್ಲ.

ನೀರಿನ ರಾಜಕೀಯ

ಲಾತೂರ್‍ಗೆ ಟ್ರೇನ್ ಮೂಲಕ ನೀರನ್ನು ಸಾಗಿಸಿದ್ದು ಭಾರೀ ಪ್ರಚಾರ ಗಿಟ್ಟಿಸಿಕೊಂಡಿತು. ಆದರೆ ಈ ಪ್ರದೇಶಕ್ಕೆ ಪೂರೈಸಿದ 3000 ಟ್ಯಾಂಕರ್ ನೀರು ಏನೇನೂ ಸಾಲದು ಎನ್ನುವುದು ಕಟುವಾಸ್ತವವಾಗಿದೆ. ಖಾಸಗಿ ಕಂಪೆನಿಗಳು ನೀರಿಗೆ ವಿಧಿಸುವ ದರದ ಮೇಲೆ ಯಾವುದೇ ನಿಯಂತ್ರಣವಿಲ್ಲ. 3000 ಲೀಟರ್ ಟ್ಯಾಂಕರ್‍ಗೆ 1000 ರೂಪಾಯಿ ವಿಧಿಸಲಾಗುತ್ತಿದೆ. ಇದು ದೆಹಲಿಯಲ್ಲಿನ ದರಕ್ಕಿಂತ ದುಪ್ಪಟ್ಟು ಆಗಿದೆ. ಈ ಖಾಸಗಿ ನೀರಿನ ಕಂಪೆನಿಗಳ ಪೈಕಿ ಅನೇಕ ಕಂಪೆನಿಗಳು ಈ ಪ್ರದೇಶದ ವಿವಿಧ ರಾಜಕೀಯ ಪಕ್ಷಗಳ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿವೆ ಎನ್ನುವುದು ಬಹಿರಂಗ ರಹಸ್ಯವಾಗಿದೆ. ಈ ಕಾರಣಕ್ಕಾಗಿಯೇ ಈ ಕಂಪೆನಿಗಳನ್ನು ಪ್ರಶ್ನಿಸಲು ಯಾರೂ ಹೋಗುವುದಿಲ್ಲ.

ಬಿಜೆಪಿ ನೇತೃತ್ವದ ಸರಕಾರದ ಆದ್ಯತೆಗಳು ಬೇರೆಲ್ಲೋ ಇವೆ. ಮದ್ಯ ತಯಾರಿಸುವ ಬ್ರೂವರಿಗಳು ಮತ್ತು ಡಿಸ್ಟಿಲರಿಗಳಿಗೆ ಸರಬರಾಜು ಮಾಡುವ ನೀರಿನ ಪ್ರಮಾಣವನ್ನು ಕಡಿತಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠ ಎಪ್ರಿಲ್ 24ರಂದು ಆಲಿಸಿತು. ಔರಂಗಾಬಾದ್ ಬೀರ್ ತಯಾರಿಕೆಯ ಒಂದು ಪ್ರಮುಖ ಕೇಂದ್ರ. ಈ ಘಟಕಗಳಿಗೆ ಪ್ರತಿದಿನ ಐದು ಮಿಲಿಯ ಲೀಟರ್ ಗಿಂತ ಹೆಚ್ಚಿನ ನೀರು ಬೇಕಾಗುತ್ತದೆ. ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾವವಾದಾಗ, ಈ ಘಟಕಗಳಿಗೆ ನೀರು ಸರಬರಾಜು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವೆ ಪಂಕಜಾ ಮುಂಡೆ ಹೇಳಿದರು. ಪಂಕಜಾ ನಿರ್ದೇಶಕರಾಗಿರುವ ಕಂಪೆನಿಯೊಂದು ಡಿಸ್ಟಿಲರಿ ನಡೆಸುತ್ತಿದ್ದು ಜನರ ಹಿತಕ್ಕಿಂತ ಆ ಕಂಪೆನಿಯ ಹಿತವೇ ಅವರಿಗೆ ಮುಖ್ಯವಾಯಿತು ಎಂಬ ಆರೋಪ ಕೇಳಿ ಬಂದಿದೆ. ಜನರಿಗೆ ಕುಡಿಯುವ ನೀರು ಸರಬಾರಜು ಮಾಡಲು ಆದ್ಯತೆ ಕೊಡಬೇಕೆಂದು ಸರಕಾರಕ್ಕೆ  ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸಲು ಯಾವುದೇ ತುರ್ತುಕ್ರಮಗಳಿಗೆ ಮುಂದಾಗದಿರುವುದು ಎದ್ದು ಕಾಣುತ್ತದೆ.

ಸಾಲ ಮನ್ನಾ, ಬೆಳೆ ನಷ್ಟಕ್ಕೆ ಪರಿಹಾರ, ಕುಡಿಯುವ ನೀರು ಮತ್ತು ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ … ಈ ರೀತಿಯಾಗಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ವೇಳೆ ಪ್ರಧಾನಿ ನರೇಂದ್ರ ಮೋದಿ ಮರಾಠವಾಡ ರೈತರು ಮತ್ತು ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ)ದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಈ ಪ್ರದೇಶದ ಎಂಟು ಲೋಕಸಭೆ ಸ್ಥಾನಗಳ ಪೈಕಿ ಆರರಲ್ಲಿ ಬಿಜೆಪಿ ಜಯಿಸಿತು. ಅದೇ ರೀತಿ ಅಲ್ಲಿನ ಒಟ್ಟು 46 ವಿಧಾನಸಭೆ ಸ್ಥಾನಗಳಲ್ಲಿ 15ರಲ್ಲಿ ಗೆದ್ದಿತು; ಅದಕ್ಕೂ ಮುನ್ನ ಅದಕ್ಕಿದ್ದಿದ್ದು ಎರಡು ಸ್ಥಾನ ಮಾತ್ರ. ಆದರೆ ಈಗ ಈ ಆಶ್ವಾಸನೆಗಳಲ್ಲಿ ಯಾವುದೂ ಈಡೇರಿಲ್ಲ. ಮೋದಿಯವರು ವಿದೇಶ ಪ್ರವಾಸಕ್ಕೆ ಸ್ವಲ್ಪ ಬಿಡುವು ಕೊಟ್ಟು ಇಲ್ಲಿನ ಪರಿಸ್ಥಿತಿಯ ಅಧ್ಯಯನಕ್ಕಾಗಿ ಇಲ್ಲಿಗೆ ಭೇಟಿ ಕೊಡುವುದು ಅಗತ್ಯ. ಕನಿಷ್ಟ ಪಕ್ಷ ಅಲ್ಪಾವಧಿಯ ಕ್ರಮಗಳಾದರೂ  ಸರಕಾರದ ಹೇಳಿಕೆಗಳು ಅಪ್ಪಟ ಸುಳ್ಳು ಎಂದು ಜನಾಬಾಯಿ ಮತ್ತು ಭುಮ್ರೆ ಯಾಕೆ ಹೇಳುತ್ತಾರೆ ಎನ್ನುವುದನ್ನು ತಿಳಿಯಲು ಮೋದಿಯವರಿಗೆ ಇದು ನೆರವಾಗುತ್ತದೆ.

ಅನು: ವಿಶ್ವ, ಕೋಲಾರ

Advertisements