ಕಪ್ಪು ಹಣದ ಮೊತ್ತದ ಅಧಿಕೃತ ಅಂದಾಜು ಸಾಧ್ಯವಿಲ್ಲ ಎಂದರೆ ‘ಅಚ್ಚೇದಿನ್’ ಗತಿ?

ಸಂಪುಟ: 10 ಸಂಚಿಕೆ: 21 date:  Sunday, May 15, 2016

ಭಾರತದ ವ್ಯಕ್ತಿಗಳು ವಿದೇಶಗಳಿಗೆ ಎಷ್ಟು ಕಪ್ಪು ಹಣ ಕಳಿಸಿದ್ದಾರೆ ಎಂಬುದರ ಅಧಿಕೃತ ಅಂದಾಜು ಇಲ್ಲ ಎಂದು ಮೋದಿ ಸರಕಾರದ ಹಣಕಾಸು ರಾಜ್ಯಮಂತ್ರಿಗಳು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ಹೇಳಿದ್ದಾರೆ.(ಪಿಟಿಐ, ಮೇ 3)

“ಭಾರತೀಯ ವ್ಯಕ್ತಿಗಳು ಹೊರಗಿನ ದೇಶಗಳಿಗೆ ಕಳಿಸಿರುವ ಕಪ್ಪು ಹಣ ಎಷ್ಟೆಂದು ರ್ನಿರಿಸುವುದು ಒಂದು ತನಿಖೆಯ ಸಂಗತಿ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಇತ್ಯಾದಿ ಸಂಬಂಧಪಟ್ಟ ಕಾನೂನು ಜ್ಯಾರಿ ಸಂಸ್ಥೆಗಳಿಂದ ಫಾಲೋ-ಅಪ್ ಕ್ರಿಯೆಗಳು ನಡೆಯುತ್ತಿವೆ. ಆದರೆ ಇಂತಹ ಪ್ರಕರಣಗಳಲ್ಲಿ ಇರುವ ಮೊತ್ತಗಳ ವಿವರಗಳನ್ನು ಕೇಂದ್ರೀಯವಾಗಿ ಇಡುವುದಿಲ್ಲ” ಇದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸರಕಾರದಿಂದ ಬಂದಿರುವ ಉತ್ತರ. ಅಂದರೆ ಬಳಿ ಲೆಕ್ಕ ಇಲ್ಲ.

ಬ್ಯಾಂಕ್ ಆಫ್ ಇಟೆಲಿಯ ಆರ್ಥಿಕ ತಜ್ಞರ ಇತ್ತೀಚಿನ ಲೆಕ್ಕಾಚಾರಗಳ ಪ್ರಕಾರ ಜಗತ್ತಿನಾದ್ಯಂತ ತೆರಿಗೆಮುಕ್ತಧಾಮಗಳಲ್ಲಿ ಗುಡ್ಡೆ ಹಾಕಿರುವ ಕಪ್ಪು ಹಣದಲ್ಲಿ ಭಾರತದ ಪಾಲು 152ರಿಂದ 181 ಬಿಲಿಯ ಡಾಲರುಗಳು, ಅಂದರೆ ಸುಮಾರು 10 ರಿಂದ 12 ಲಕ್ಷ ಕೋಟಿ ರೂ.ಗಳು. ಈ ಮಾಹಿತಿ ಬಗ್ಗೆ ಸರಕಾರ ಏನನ್ನುತ್ತದೆ ಎಂದು ಕೇಳಿದಾಗ ಇದು ಕೆಲವು ಅನುಮಾನಗಳ ಆಧಾರದಲ್ಲಿ ಮಾಡಿರುವ ಲೆಕ್ಕಾಚಾರ, ಇದಕ್ಕೆ ಸಾಕ್ಷಿಗಳೇನೂ ಇದ್ದ ಹಾಗೆ ಕಾಣುವುದಿಲ್ಲ ಎಂಬುದು ಸರಕಾರದ ಉತ್ತರ.

ಇನ್ನೊಂದು ಲೆಕ್ಕಾಚಾರದ ಪ್ರಕಾರ ಕಪ್ಪು ಹಣದ ಮೊತ್ತದಲ್ಲಿ ಭಾರತದ ಪಾಲು 4ರಿಂದ 5 ಬಿಲಿಯ ಡಾಲರ್ ಗಳು, ಅಂದರೆ 26ರಿಂದ 33 ಸಾವಿರ ಕೋಟಿ ರೂ.ಗಳು ಎಂದು ಹೇಳಿದ ಹಣಕಾಸು ರಾಜ್ಯಮಂತ್ರಿಗಳು ಇಂತಹ ವಿಭಿನ್ನ ಅಂದಾಜುಗಳ ಸಂರ್ಭದಲ್ಲಿ ಇವನ್ನು ಬಹಳ ಜಾಗರೂಕತೆಯಿಂದ ನೋಡಬೇಕಾಗುತ್ತದೆ, ಈ ಬಗ್ಗೆ ದೃಢ ಮಾಹಿತಿ ಯಾವ ರೀತಿಯಲ್ಲೂ ಸಿಗುವುದಿಲ್ಲ ಎಂಬುದು ಮೋದಿ ಸರಕಾರದ ಕಿರಿಯ ಹಣಕಾಸು ಮಂತ್ರಿಗಳು ಎರಡು ವರ್ಷಗಳ ಆಳ್ವಿಕೆಯ ನಂತರ ಕೊಟ್ಟಿರುವ ಉತ್ತರ.

ಹಾಗಿದ್ದರೆ 2014ರಲ್ಲಿ ಚುನಾವಣಾ ಪ್ರಚಾರದಲ್ಲಿ ಆಗಿನ ಪ್ರಧಾನಿ ಪಟ್ಟಾಕಾಂಕ್ಷಿ ಮೋದಿಯವರು ವಿದೇಶಗಳಲ್ಲಿ ಭಾರತದ 80ಲಕ್ಷ ಕೋಟಿ ರೂ.ಗಳಷ್ಟು ಕಪ್ಪು ಹಣ ರಾಶಿ ಬಿದ್ದಿದೆ ಎಂದು ಯಾವ ಆಧಾರದಲ್ಲಿ ಹೇಳಿದರು ಎಂಬ ಪ್ರಶ್ನೆ ಸಹಜ. ಅವರ ನೆಚ್ಚಿನ ಬೆಂಬಲಿಗ ಬಾಬಾ ರಾಂದೇವ್ ಇನ್ನೂ ಮುಂದೆ ಹೋಗಿ 400 ಕೋಟಿ ಲಕ್ಷ ರೂ. ಅಂದರು. ಬಿಜೆಪಿಯ ಟಾಸ್ಕ್ ಫೋರ್ಸ್ 11 ರಿಂದ 22.5 ಲಕ್ಷ ಕೋಟಿ ರೂ. ಎಂದು ಲೆಕ್ಕ ಹಾಕಿತ್ತು.

ಕಪ್ಪು ಹಣದ ಲೆಕ್ಕ ಸಿಗುವುದೇ ಇಲ್ಲ ಎಂದಿರುವಾಗ ಇವೆಲ್ಲ ಕೇವಲ ಚುನಾವಣಾ ಬುರುಡೆಗಳು, ಮತದಾರರಲ್ಲಿ ಪ್ರತಿಯೊಬ್ಬರ ಖಾತೆಗೆ 15 ರಿಂದ 20 ಲಕ್ಷ ರೂ,ಗಳು ಬಂದು ಬೀಳುವ ವಚನವೂ ಕೇವಲ ಬುರುಡೆಯೇ? ಮತದಾರರು ಇದನ್ನು ತಿಳಿಯಲು ಈ ಎರಡು ವರ್ಷಗಳ ಕಾಲ ಕಾಯಬೇಕಾಗಿತ್ತೇ?

ಬಿಜೆಪಿಯ ಟಾಸ್ಕ್ ಪೋರ್ಸ್ ನ ಅಂದಾಜು ಸುಮಾರಾಗಿ ಬ್ಯಾಂಕ್ ಆಫ್ ಇಟೆಲಿಯ ಆರ್ಥಿಕ ತಜ್ಞರ ಅಂದಾಜಿನ ಹತ್ತಿರಕ್ಕೆ ಬರುತ್ತದೆ. ಆದರೆ ಈ ಬಗ್ಗೆ ‘ಹೆಮ್ಮೆ’ ಪ್ರದರ್ಶಿಸುವ ಧೈರ್ಯವೂ ಈಗ  ಆಳುವ ಪಕ್ಷವಾಗಿರುವ ಅದಕ್ಕೆ ಇದ್ದಂತಿಲ್ಲ. ಏಕೆಂದರೆ ಆಗ ಪ್ರತಿಯೊಬ್ಬರ ಖಾತೆಗೆ 15-20ಲಕ್ಷ ರೂ. ಯಾವಾಗ ಬರುತ್ತದೆ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿರುತ್ತದೆ.

ವೇದರಾಜ್ ಎನ್.ಕೆ.

Advertisements