‘ತಗೊಳ್ಳಿ ನಮ್ಮ 5ರೂ’-ರೇಗ ಕಾರ್ಮಿಕರು ‘…ಮತ್ತು ನಮ್ಮ 7ರೂ’-ಪಿಂಚಣಿದಾರರು 2 ವರ್ಷಗಳಾಗುತ್ತಿರುವಂತೆ ‘ವಂತಿಗೆ’ಗಳ ಮಹಾಪೂರ!

ಸಂಪುಟ: 10 ಸಂಚಿಕೆ: 21 date: Sunday, May 15, 2016

ಅಯ್ಯೋ ಪಾಪ, ಉದ್ಯಮಿಗಳಿಗೆ ಇನ್ನಷ್ಟು ರಿಯಾಯ್ತಿಗಳನ್ನು ಕೊಡಲು ಮೋದಿ ಸರಕಾರದ ಬಳಿ ದುಡ್ಡಿಲ್ಲ ಎಂದುಕೊಂಡು ಮೊನ್ನೆ ಮೇ ದಿನದಂದು ಝಾರ್ಖಂಡ್ ನ ನೂರಾರು ರೇಗ ಕಾರ್ಮಿಕರು ಪ್ರಧಾನ ಮಂತ್ರಿಗಳಿಗೆ ತಮಗೆ ಈ ವರ್ಷ ಕೊಟ್ಟ 5 ರೂ. ಕೂಲಿ ಹೆಚ್ಚಳವನ್ನು ಹಿಂದಿರುಗಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ನಂತರ ಮೇ 5 ರಂದು ಪಿಂಚಣಿದಾರರ ‘ಚಲೋದಿಲ್ಲಿ’ಗೆ ಬಂದ ರಾಜಸ್ತಾನದ ಗ್ರಾಮೀಣ ಪಿಂಚಣಿದಾರರು ತಮ್ಮ ಒಂದು ದಿನದ ಪಿಂಚಣಿ 7ರೂ.ಗಳನ್ನು ಇದೇ ರೀತಿ ‘ಅಯ್ಯೋ ಪಾಪ’ ಎನ್ನುತ್ತ ಪ್ರಧಾನ ಮಂತ್ರಿಗಳಿಗೆ ಕಳಿಸಿದ್ದಾರೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.

ಎರಡು ವರ್ಷಗಳ ‘ಅಚ್ಚೇ ದಿನ್’ಗಳು ಅದರ ರೂವಾರಿಯ ಬಗ್ಗೆ ಮೂಡಿಸಿದ ವಿಶ್ವಾಸದ ಪ್ರತೀಕ ಇದು.

ರೇಗ ಅಥವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಂದು ಹಕ್ಕು ಆಧಾರಿತ ಯೋಜನೆ, ಇದರ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಕೇಳುವವರಿಗೆ ವರ್ಷಕ್ಕೆ ಕನಿಷ್ಟ 100ದಿನಗಳ ಉದ್ಯೋಗಗಳನ್ನು ಇಲ್ಲವೇ ಭತ್ಯೆಯನ್ನು ಒದಗಿಸಲು ಸರಕಾರ ಬಾಧ್ಯವಾಗಿದೆ ಈ ವರ್ಷ ಎಪ್ರಿಲ್‍ನಲ್ಲಿ ಈ ಹಕ್ಕು-ಆಧಾರಿತ ಸ್ಕೀಮಿಗೆ ಕನಿಷ್ಟ ಕೂಲಿಯನ್ನು ಕೇವಲ 5ರೂ.ಗಳಷ್ಟು ಹೆಚ್ಚಿಸಿತು. ಇದನ್ನು ಪ್ರತಿಭಟಿಸಿ ಝಾರ್ಖಂಡ್ ನಲ್ಲಿ ಮಾಣಿಕ ಎಂಬ ಹಳ್ಳಿಯ ನೂರಾರು ಕೆಲಸಗಾರರು ಈ ಅಲ್ಪ ಹೆಚ್ಚಳವನ್ನು ಪ್ರಧಾನ ಮಂತ್ರಿಗಳಿಗೆ ನೀವೇ ಇಟ್ಟುಕೊಳ್ಳಿ ಎಂದು ಕಳಿಸಿದ್ದಾರೆ. 100ದಿನಗಳ ಕೆಲಸವಂತೂ ಕೊಡುವುದಿಲ್ಲ, ಮಾಡಿಸಿಕೊಂಡ ಕೆಲಸಕ್ಕೆ ಕೂಲಿ ಕೂಡ ಸಮಯಕ್ಕೆ ಸರಿಯಾಗಿ ಕೊಡುವುದಿಲ್ಲ, ಕೂಲಿ ಕೊಟ್ಟರೂ ಅದು ಕನಿಷ್ಟ ಕೂಲಿಗಿಂತ ಕಡಿಮೆಯಿರುತ್ತದೆ. ಝಾರ್ಖಂಡ್ ನಲ್ಲಿ ಕನಿಷ್ಟ ದಿನ ಕೂಲಿ 212ರೂ. ಎಂಬುದನ್ನು ಗಮನಿಸಬೇಕು. ಇದೀಗ ‘ಒಳ್ಳೆಯ ದಿನ’ಗಳ ಪ್ರಾಮಾಣಿಕತೆ!

ಇನ್ನು ಗ್ರಾಮೀಣ ಪ್ರದೇಶದ ಬಡ ಪಿಂಚಣಿದಾರರ ಪಿಂಚಣಿಯನ್ನು 2006ರಿಂದ ಪರಿಷ್ಕರಿಸಿಲ್ಲ. ರಾಜಸ್ತಾನದ ತಾರಾಗರ್ ನಿಂದ ಬಂದ 76 ವರ್ಷದ ಛಾಗ್ನಿ ದೇವಿಗೆ ಸಿಗುವ ಪಿಂಚಣಿ ತಿಂಗಳಿಗೆ 200ರೂ. ಅಂದ ರೆ ದಿನಕ್ಕೆ 7ರೂ.ಗಳಷ್ಟೂ ಇಲ್ಲ! ಇದನ್ನು ರಾಜಸ್ತಾನ ಪಿಂಚಣಿದಾರರು ಪ್ರಧಾನ ಮಂತ್ರಿಗಳಿಗೆ ಕಳಿಸಿದ್ದಾರೆ, ಅವರಿಗಂತೂ ಪ್ರಯೋಜನವಾದೀತು ಎಂದು!

‘#ಪೋ ಮೋನೆ ಮೋದಿ’ ಟ್ವಿಟರ್ ರ

ಎರಡು ವರ್ಷಗಳ ಆಳ್ವಿಕೆ ರೇಗಾ ಕಾರ್ಮಿಕರಿಂದ, ಪಿಂಚಣಿದಾರರಿಂದ ‘ವಂತಿಗೆ’ಗಳ ಪ್ರತಿಭಟನೆಗಳನ್ನು ಕೊಡಿಸಿದರೆ ಕೇರಳದಲ್ಲಿ ಪ್ರಧಾನಿಗಳ ಚುನಾವಣಾ ಭಾಷಣಗಳು ಅವರಿಗೆ ಟ್ವಿಟರ್ ವ್ಯಂಗ್ಯಗಳ ಮಾಲೆಯನ್ನೇ ತಂದು ಕೊಟ್ಟಿದೆ. ಕೇರಳದಲ್ಲಿ ಪರಿಶಿಷ್ಟ ವರ್ಗಗಳಲ್ಲಿ ಶಿಶು ಮರಣ ದರ ಸೋಮಾಲಿಯಾಕ್ಕಿಂತಲೂ ಕೆಟ್ಟದಾಗಿದೆ ಎಂಬ ಅಣಿಮುತ್ತು ಉದುರಿಸಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳಲು(ಅಥವ ಸೆಲ್ಫಿ ತಗೊಳ್ಳಲು) ಅಣಿಯಾಗುತ್ತಿರುವಂತೆ  ರಾಜ್ಯದಲ್ಲಿರುವ ಮತ್ತು ಹೊರಗೂ ಇರುವ ಕೇರಳೀಯರ ಆಕ್ರೋಶದ ಸರಮಾಲೆ ಅವರನ್ನು ಸುತ್ತಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಂತೂ ‘#ಪೋ ಮೋನೆ ಮೋದಿ’ ಮತ್ತು “#ಸೊಮಾಲಿಯ’ ಎಂಬ ಟ್ವಿಟರ್ ಗಳಲ್ಲಿ ಭಾರತದಂತಹ ದೇಶದ ಪ್ರಧಾನಿಗೆ ತಕ್ಕುದಲ್ಲದ ಹತ್ತಾರು ಸಾವಿರ ಗೇಲಿ ಮಾತುಗಳನ್ನು  ಎದುರಿಸಬೇಕಾಗಿ ಬಂದಿದೆ ಎಂದು ವರದಿಯಾಗಿದೆ.

– ವೇದರಾಜ್ ಎನ್.ಕೆ.

Advertisements