ಪಶ್ಚಿಮ ಬಂಗಾಳ : ತೃಣಮೂಲಿಗರ ಚುನಾವಣೋತ್ತರ ಹಿಂಸಾಚಾರ

ಸಂಪುಟ: 10 ಸಂಚಿಕೆ: 21 Sunday, May 15, 2016

ಜನರಲ್ಲಿ ಜಾಗೃತಿ ಮತ್ತು ಪ್ರತಿರೋ ಧ, ಚುನಾವಣಾ ಆಯೋಗದ ಬಿಗಿಯಾದ ಕ್ರಮಗಳು ಇತ್ಯಾದಿಗಳಿಂದ ತಾವು ಯೋಜಿಸಿದಷ್ಟು ಚುನಾವಣಾ ಅಕ್ರಮಗಳನ್ನು ನಡೆಸಲು ಸಾಧ್ಯವಾಗದ ತೃಣಮೂಲ ಕಾಂಗ್ರೆಸ್ ಚುನಾವಣೆ ಮುಗಿದ ಮೇಲೆ ಹಲ್ಲೆ ಹಿಂಸೆಗಳನ್ನು ನಡೆಸುತ್ತಿದೆ.

ಚುನಾವಣೆಗಳು ಮುಗಿದ ಕೂಡಲೇ ಕೇಂದ್ರ ಮೀಸಲು ಪಡೆಯ ಯೋಧರು ಮತ್ತು ಪೋಲಿಸ್ ಕಾವಲನ್ನು ತೆಗೆಯಲಾಗುತ್ತದೆ. ಆಗ ಎಡರಂಗದ ಪರವಾಗಿ ಬೂತ್ ಏಜೆಂಟರಾಗಿ ಕೆಲಸ ಮಾಡಿದವರನ್ನು ಹುಡುಕಿ ಹಲ್ಲೆ ಮಾಡುವುದು, ಸಿಪಿಐ(ಎಂ) ಮತ್ತು ಎಡರಂಗಕ್ಕಾಗಿ ದುಡಿದವರನ್ನು ಹುಡುಕಿ ಹಿಂಸೆ ನೀಡುವುದು ನಡೆಯುತ್ತಿವೆ. ಈ ಬಾರಿ ಹಿಂಸಾಚಾರ ಮತ್ತೊಂದು ಘಟ್ಟವನ್ನು ಮುಟ್ಟಿದೆ.

ಎಡರಂಗಕ್ಕಾಗಿ ಕೆಲಸ ಮಾಡಿದವರನ್ನು ಹುಡುಕಿ ಹಲ್ಲೆ ನಡೆಸುವುದಲ್ಲದೇ ಅವರ ಮನೆಯ ಸದಸ್ಯರ ಮೇಲೆ, ಅದೂ ಮಕ್ಕಳ ಮೇಲೆ ಹಲ್ಲೆಗಳು ನಡೆದಿವೆ. ಹೆಣ್ಣು ಮಕ್ಕಳು ಎಂಬ ಅಂಶವನ್ನೂ ಸಹ ಲೆಕ್ಕಕ್ಕೆ ತೆಗೆದುಕೊಳ್ಳದೇ ಮಕ್ಕಳ ಮೇಲೆ ಕ್ರೂರ ಹಲ್ಲೆಗಳನ್ನು ನಡೆಸಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಡೋಮ್ಕಾಲ್ ಮತಗಟ್ಟೆಯಲ್ಲಿ ಸಿಪಿಐ(ಎಂ) ಪರ ಏಜೆಂಟ್ ಆಗಿದ್ದ ತಹಿದುಲ್ ಇಸ್ಲಾಂ ಅನ್ನು ಟಿಎಂಸಿ ಗೂಂಡಾಗಳು ಕೊಂದುಹಾಕಿದ್ದಾರೆ. ಬಧ್ರ್ವಾನ್ ಜಿಲ್ಲೆಯಲ್ಲಿ ಸಿಪಿಐ(ಎಂ) ಏಜೆಂಟ್ ಆಗಿ ಕೆಲಸ ಮಾಡಿ ವಾಪಸ್ ಬರುವಾಗ ಟಿಎಂಸಿ ಗೂಂಡಾಗಳು ಎಸ್.ಕೆ. ಫಜಲ್ ಹಕ್ವೆ ಮೇಲೆರಗಿ ಕೊಂದು ಹಾಕಿದ್ದಾರೆ. ತನ್ನ ಮಗನನ್ನು ಸಿಪಿಐ(ಎಂ) ಪರವಾಗಿ ಬೂತ್ ಏಜೆಂಟ್ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ 48 ವರ್ಷದ ದೂಖ್ರಿರಾಮ್ ದಾಲ್ ಅವರನ್ನು ಕಗ್ಗೊಲೆ ಮಾಡಲಾಗಿದೆ. ಇದೇ ಬಧ್ರ್ವಾನ್ ಜಿಲ್ಲೆಯಲ್ಲೆ ಕಾಂಡಕೋಶ್‍ನಲ್ಲಿ ಖಾಂಡಕರ್ ಆಲಿ ಹುಸೇನ್ ಎಂಬ ಕಾಂಗ್ರೆಸ್ ಕಾರ್ಯಕರ್ತರನ್ನು ಟಿಎಂಸಿ ಗೂಂಡಾಗಳು ಕೊಂದು ಹಾಕಿದ್ದಾರೆ.

ಇದು ನಡೆದದ್ದು ಬೆಹಲ(ಪೂರ್ವ)ಹರಿದೇವ್ ಪುರ್ ದಲ್ಲಿ; ಮತ ಚಲಾಯಿಸಬಾರದು ಎಂದು ಟಿಎಂಸಿ ಗೂಂಡಾಗಳು ನೀಡಿದ್ದ ಎಚ್ಚರಿಕೆ ಮೀರಿ ತಾತ ಚಲಾಯಿಸಿದ. ರಾತ್ರಿ ಹುಡುಕಿಕೊಂಡು ಬಂದ ಗೂಂಡಾಗಳು ಆತ ಮನೆಯಲ್ಲಿ ಇಲ್ಲದಿದ್ದಾಗ ಏಳು ವರ್ಷದ ಮುಗ್ಧ ಮಗು ಪ್ರೀತಿ ಮೇಲೆ ಹೀನಾಯ ಹಲ್ಲೆ ಮಾಡಿದರು. 24 ಪರಗಣ ಜಿಲ್ಲೆಯ ಸದ್ಗಚಿಯಾದಲ್ಲಿ ಟಿಎಂಸಿ ಗೂಂಡಾಗಳು ಮೂರು ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಗುವಿನ ಕಿವಿಗೆ ಪೆಟ್ಟು ಬಿದ್ದು ಗಾಯವಾಗಿದೆ. ಇಂತಹ ಅಮಾನವೀಯ ಪ್ರಕರಣಗಳ ದೊಡ್ಡ ಪಟ್ಟಿಯೇ ಸಿಗುತ್ತದೆ.

ಎಡರಂಗದ ಪರವಾಗಿ ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮತ್ತು  ಫಲಿತಾಂಶದ ಹಂತದವರೆಗೆ ಅಗತ್ಯ ಭಧ್ರತೆಯ ಕ್ರಮಗಳನ್ನು ಮುಂದುವರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಜನ ಸಮುದಾಯದ ಬಲದಿಂದ ಜನಶಕ್ತಿಯ  ಬಲದಿಂದ ತೃಣಮೂಲಿಗರ ಗೂಂಡಾಗಿರಿಯನ್ನು ಎದುರಿಸಲು ಗಮನ ನೀಡಲಾಗುತ್ತಿದೆ.

Advertisements