‘ಬಂಡವಾಳಶಾಹಿಯಿಂದ ಆಜಾದಿ’ ಮೊಳಗಿಸಿದ ಮೇ ದಿನ

ಸಂಪುಟ:  10 ಸಂಚಿಕೆ: 20 Sunday, May 8, 2016

‘ವಾರಕ್ಕೆ 35 ಗಂಟೆ, ದಿನಕ್ಕೆ 4 ಪಾಳಿ ಕೆಲಸಕ್ಕಾಗಿ’

ಬೆಂಗಳೂರು:

ಟೌನ್ ಹಾಲ್ ನಿಂದ ಪ್ರಾರಂಭವಾದ ಸಾವಿರಾರು ಕಾರ್ಮಿಕರ ಆಕರ್ಷಕ ಕೆಂಬಾವುಟದ ಮೆರವಣಿಗೆ ನಡೆದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡಿತು. ಪ್ರತಿದಿನ ನಾಲ್ಕು ಪಾಳಿ ಕೆಲಸಕ್ಕಾಗಿ, ಕಾರ್ಮಿಕ ಕೆಲಸವನ್ನು ವಾರಕ್ಕೆ 35 ಗಂಟೆಗೆ ಸೀಮಿತಗೊಳಿಸಬೇಕೆಂದು ಒತ್ತಾಯಿಸುವ ದಿನವನ್ನಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಕನಿಷ್ಟ ಕೂಲಿ ರೂ.18 ಸಾವಿರಕ್ಕೆ ಏರಿಸಬೇಕೆಂದು, ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕೆಂದು ಆಗ್ರಹಿಸಲಾಯಿತು. ಸಭೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿಗಳಾದ ಮೀನಾಕ್ಷಿ ಸುಂದರಂ, ಕೆ.ಎನ್.ಉಮೇಶ್, ಟಿ.ಲೀಲಾವತಿ, ಬೆಂ.ಉತ್ತರ ಜಿಲ್ಲಾ ಅಧ್ಯಕ್ಷರಾದ ಹೆಚ್.ಎನ್.ಗೋಪಾಲಗೌಡ, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಸಿಂಹ, ಬೆಂ.ದಕ್ಷಿಣ ಜಿಲ್ಲಾ ಉಪಾಧ್ಯಕ್ಷರಾದ ಕೆ.ಪ್ರಕಾಶ್, ಕಾರ್ಮಿಕ ಮುಖಂಡರಾದ ಕೆ.ಎಸ್.ಸುಬ್ರಮಣಿ, ಮುನಿರಾಜು, ಹನುಮಂತರಾವ್ ಹವಾಲ್ದಾರ್, ರಮೇಶ್, ಹೆಚ್.ಡಿ.ರೇವಪ್ಪ ಮುಂತಾದ ಮುಖಂಡರು ಹಾಜರಿದ್ದರು. ಭೂಮ್ತಾಯಿ ಬಳಗದವರು ಹೋರಾಟದ ಹಾಡುಗಳನ್ನು ಸ್ಫೂರ್ತಿದಾಯಕವಾಗಿ ಹಾಡಿದರು.

‘ಕಾರ್ಮಿಕರ ಒಗ್ಗಟ್ಟು ಒಡೆಯುವ ಪ್ರಯತ್ನ ಹೆಚ್ಚುತ್ತಿದೆ’ – ಚಿಕ್ಕಬಳ್ಳಾಪುರ:

ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿರವರು ಮಾತನಾಡಿ, “ಬಂಡವಾಳಶಾಹಿಗಳು ವಿಶ್ವರ ಮೇಲೆ ಹಿಡಿತ ಸಾಧಿಸುತ್ತಿರುವ ಜತೆಗೆ ಕಾರ್ಮಿಕರ ಹಕ್ಕು ಮತ್ತು ಸೌಲಭ್ಯಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸಿದ್ದಾರೆ. ಕಾರ್ಮಿಕರು ನಿತ್ಯವು ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಅವರ ಬದುಕು ಇನ್ನಷ್ಟು ಅಸಹನೀಯ ಮತ್ತು ಆತಂತ್ರಗೊಳ್ಳುತ್ತಿದೆ” ಎಂದು ತಿಳಿಸಿದರು.

ವಿವಿಧ ರೀತಿಯ ನೀತಿ, ನಿಯಮಗಳಿಂದ ಕಾರ್ಮಿಕರಲ್ಲಿ ಒಂದೆಡೆ ಆತಂಕ ಮತ್ತು ಭಯ ಕಾಡುತ್ತಿದ್ದರೆ, ಮತ್ತೊಂದೆಡೆ ಕೋಮುವಾದಿ, ಜಾತಿವಾದಿ ಸಂಘಟನೆಗಳ ಮೂಲಕ ಕಾರ್ಮಿಕರ ಶಕ್ತಿ ಒಡೆಯುವ ಪ್ರಯತ್ನ ನಡೆದಿದೆ. ಕಾರ್ಮಿಕರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ, ಮುನ್ನಡೆಯಬೇಕೆಂದು ಕರೆ ನೀಡಿದರು.

ಮುಖಂಡರಾದ ಎಂ.ಪಿ.ಮುನಿವೆಂಕಟಪ್ಪ, ಸಿದ್ಧಗಂಗಪ್ಪ, ಬಿ.ಎನ್.ಮುನಿಕೃಷ್ಣಪ್ಪ, ಲಕ್ಷ್ಮಿದೇವಮ್ಮ, ಮುಸ್ತಫಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಹೊರಾಟದಿಂದ ಮಾತ್ರ ಬೇಡಿಕೆಗೆ ಮನ್ನಣೆ’

ಉಡುಪಿ:

ಬೈಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ.ಎಸ್.ವರಲಕ್ಷ್ಮಿ ಮಾತನಾಡಿ “1896 ರಲ್ಲಿ ಕಾರ್ಮಿಕರು ನಡೆಸಿದ ಮೊದಲ ಹೋರಾಟದ ದಿನವನ್ನು ಮೇ ದಿನ ಆಚರಿಸಲಾಗುತ್ತಿದೆ. ಅಂದಿನಿಂದ ಇಂದಿನವರೆಗೂ ದುಡಿಯುವ ವರ್ಗ ತನ್ನ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಲೆ ಬಂದಿದೆ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷರಾದ ಕೆ.ಶಂಕರ್, ತಾಲ್ಲೂಕು ಕಾರ್ಯದರ್ಶಿ ಸುರೇಶ ಕಲ್ಲಾಗರ, ಮಾತನಾಡಿದರು. ಗಣೇಶ ತೊಂಡಿಮಕ್ಕಿ ಸ್ವಾಗತಿಸಿದರು. ವೆಂಕಟೇಶ್ ಕೋಣಿ ನಿರೂಪಿಸಿ ವಂದನಾರ್ಪಣೆ ಮಾಡಿದರು. ಮುಖಂಡರಾದ ದಾಸ ಭಂಡಾರಿ, ಶೀಲಾವತಿ, ಗಣೇಶ ಮೊಗವೀರ, ರಾಧಾಕೃಷ್ಣ, ಸುಶೀಲಾ ನಾಡ, ಜಯಶ್ರೀ, ನಾಗರತ್ನ ನಾಡ, ಶಾರದಾ ಬೈಂದೂರು, ಮಂಜು ಪೂಜಾರಿ ಮುಂತಾದ ಮುಖಂಡರು ಇದ್ದರು.

ಬ್ರಹ್ಮಾವರದಲ್ಲಿ ನಿವೃತ್ತ ಪ್ರಾಧ್ಯ್ಯಾಪಕರಾದ ಭಾಸ್ಕರ್ ಮಯ್ಯ, ಕಾರ್ಮಿಕ ಮುಖಂಡರಾಧ ಸುಭಾಷ್ ನಾಯಕ್, ವಿಠಲ ಪೂಜಾರಿ, ಉದಯಕುಮಾರ್, ಹರಿಪ್ರಸಾದ್, ರಾಮ ಕಾರ್ಕಡ, ಭವಾನಿ ಪೂಜಾರಿ, ಶಂಕರ್ ಕುನಾಲ್ ಸಾಸ್ತಾನ, ಸದಾಶಿವ ಪೂಜಾರಿ, ಕೃಷ್ಣ ಹಿಲಿಯಾಣ, ಭವಾನಿ, ಮುಂತಾದವರು ಭಾಗವಹಿಸಿದ್ದರು.
‘ಆರ್ಥಿಕ ಅವಿವೇಕ ದೇಶವನ್ನು ಆಳುತ್ತಿದೆ’

ತುಮಕೂರು:

ನಗರದ ಟೌನ್‍ಹಾಲ್ ನಲ್ಲಿ ಮೇ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯ ಸಾಹಿತಿ, ನಾಡೋಜ ಡಾ||ಬರಗೂರು ರಾಮಚಂದ್ರಪ್ಪ ನವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಇಪ್ಪತ್ತೇನೆಯ ಶತಮಾನದ ವಿವೇಕ ಮತ್ತು ಧಾರ್ಮಿಕ ಸಾಮರಸ್ಯವನ್ನು ಇಪ್ಪತೊಂದನೆ ಶತಮಾನದಲ್ಲಿ ಧಾರ್ಮಿಕ ಸಂಘರ್ಷ ಮತ್ತು ಆರ್ಥಿಕ ಅವಿವೇಕ ನಾಶಮಾಡಿದೆ. 20ನೇ ಶತಮಾನ ಆತ್ಮವಿಶ್ವಾಸದ ಶತಮಾನವಾಗಿತ್ತು. 21ನೇ ಶತಮಾನ ಅಸಹಾಯಕತೆಗೆ ದಾರಿ ಮಾಡಿಕೊಟ್ಟಿದೆ. ಸಮಾಜದಲ್ಲಿ ತಲೆ ತಗ್ಗಿಸುವಂತಹ ಕೆಲಸಗಳೇ ಹೆಚ್ಚು ನಡೆಯುತ್ತಿದೆ. ಆತ್ಯಾಚಾರ, ಆತ್ಮಹತ್ಯೆ, ಅಸಹಾಯಕತೆ ವೇಗವಾಗಿ ಬೆಳೆಯುತ್ತಿದೆ. ಆರ್ಥಿಕ ಅವಿಕೇಕ ದೇಶವನ್ನು ಆಳುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗುಲ್ಜರ್ ಬಾನು, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಎ.ನರಸಿಂಹಮೂರ್ತಿ, ಕಟ್ಟಡ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಿ ಉಮೇಶ್, ಜೀವ ವಿಮಾ ನೌಕರರ ಸಂಘದ ಜಗನ್ನಾಥ್, ಅಂಚೆ ನೌಕರರ ಸಂಘದ ಕಾಂತರಾಜು, ಪೌರಕಾರ್ಮಿಕ ಸಂಘದ ನರಸಿಂಹರಾಜು, ಮುಖಂಡರಾದ ಟಿ.ಜಿ.ಶಿವಲಿಂಗಯ್ಯ, ಪುಟ್ಟೇಗೌಡ, ಷಣ್ಮುಗಪ್ಪ, ನಾಗೇಶ್ ಹಾಜರಿದ್ದರು.

ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಿಂದ ಆಕರ್ಷಕವಾದ ರಾಲಿ ನಡೆಸಿದರು. ಕಾರ್ಮಿಕ ಮುಖಂಡರಾದ ನೌಷಾದ್ ಸೆಹಗಲ್ ಮತ್ತು ಲಕ್ಷ್ಮಣ್ ಸಂಗಡಿಗರು ಕ್ರಾಂತಿಗೀತಿಗಳನ್ನು ಹಾಡಿದರು.

‘ಮತ್ತೊಂದು ಮಹಾ ಮುಷ್ಕರ ಯಶಸ್ವಿಗೊಳಿಸಿ’ – ಹುಬ್ಬಳ್ಳಿ: 

ಕಾರ್ಮಿಕ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ ಸಭೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ  ಸರಕಾರಕ್ಕೆ ಸಲ್ಲಿಸಿದ 12 ಅಂಶದ ಬೇಡಿಕೆಗಳ ಕುರಿತು ಮೋದಿ ಸರಕಾರ ಯಾವುದೇ ಕಾಳಜಿ ವಹಿಸುತ್ತಿಲ್ಲ ಬದಲಾಗಿ ಅದಕ್ಕೆ ವ್ಯತಿರಿಕ್ತವಾಗಿ ಕಾರ್ಮಿಕ ಹಕ್ಕುಗಳ ಮೇಲೆ ತೀವ್ರತರವಾದ ದಾಳಿ ನಡೆಸುತ್ತಿದೆ. ಕೇಂದ್ರ ಸರಕಾರದ ಈ ಕಾರ್ಮಿಕ-ವಿರೋಧಿ ನೀತಿಗಳನ್ನು ವಿರೋಧಿಸಿ 2016 ಸೆಪ್ಟೆಂಬರ್ 2ರಂದು ಮತ್ತೊಂದು ಕಾರ್ಮಿಕರ ಮಹಾಮುಷ್ಕರ ನಡೆಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ತಿರ್ಮಾನಿಸಿವೆ. ಮೇ-ದಿನದ ಸ್ಪೂರ್ತಿಯೊಂದಿಗೆ ಮುಷ್ಕರವನ್ನು ಯಶಸ್ವಿಗೊಳಿಸಲು ಮುಂದಾಗೋಣವೆಂದು

ಜವಳಿ ವರ್ತಕರ ಸಂಘದ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮೇ ದಿನ ಪ್ರಣಾಳಿಕೆ-2016ರ ಕುರಿತು ಕಾಂ.ಬಿ.ಎನ್.ಪೂಜಾರಿ ಮಾತನಾಡಿದರು, ವಿಜಯ ಗುಂಟ್ರಾಳ, ಡಾ.ಇಸಾಬೆಲ್ಲಾ ಝೇವಿಯರ್, ದಾಸ ಮಾತನಾಡಿದರು. ಬಿ.ಐ.ಈಳಿಗೇರ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮೊದಲು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.

ಧಾರವಾಡ ಜಿಲ್ಲಾ ಎಸ್.ಸಿ./ಎಸ್.ಟಿ. ಪೌರ ಕಾರ್ಮಿಕರ ಹಾಗೂ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು. ಅಂಬೇಡ್ಕರ್ ವೃತ್ತದಿಂದ ಚೆನ್ನಮ್ಮ ವೃತ್ತದವರೆಗೆ ಮೆರವಣಿಗೆ ನಡೆಯಿತು. ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಮಹೇಶ್ ಪತ್ತಾರ, ಎಐಟಿಯುಸಿ ಮುಖಂಡರಾದ ದೇವಾನಂದ ಜಗಾಪುರ, ದಲಿತ ಮುಖಂಡ ಪಿತಾಂಬ್ರಪ್ಪ ಭಿಳಾರದ ಮುಂತಾದವರು ಮಾತನಾಡಿದರು.

ಹಾಸನ:

ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಕಾರ್ಮಿಕರು ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಮಹಾರಾಜ ಪಾರ್ಕ್ ನಲ್ಲಿ ಮೇ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾರ್ಮಿಕ ಮುಖಂಡರಾದ ಎಂ.ಸಿ.ಡೋಂಗ್ರ ವಹಿಸಿದ್ದರು. ಪ್ರಸ್ಥಾವಿಕವಾಗಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್ ಮಾತನಾಡಿದರು.

ಮುಖ್ಯ ಅಥಿತಿಗಳಾಗಿ ಹಾಸನ ನಗರ ಸಭಾ ಅಧ್ಯಕ್ಷರಾದ ಎಚ್.ಎಸ್.ಅನಿಲ್ ಕುಮಾರ್, ಬ್ಯಾಂಕ್ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪರಮಶಿವಯ್ಯ, ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಡಿ.ಟಿ. ಶಿವಣ್ಣ, ಗ್ರಾಮೀಣ ಅಂಚೆ ನೌಕರರ ಸಂಘದ ಮುಖಂಡ ಜಗದೀಶ್, ವಿಮಾ ನೌಕರರ ಸಂಘದ ಮಂಜುನಾಥ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ನವೀನ್ ಕುಮಾರ್, ದಲಿತ ಮುಖಂಡರಾದ ಮರಿಜೋಸೆಫ್, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಂ.ಬಿ.ಪುಷ್ಪ, ಅಂಗನವಾಡಿ ನೌಕರರ ಸಂಘದ ಚನ್ನಮ್ಮ, ಸಿಐಟಿಯು ಜಿಲ್ಲಾ ಖಜಾಂಚಿ ಜಿ.ಪಿ.ಸತ್ಯನಾರಾಯಣ ಭಾಗವಹಿಸಿದ್ದರು. ಸಿಐಟಿಯು ಹಾಸನ ತಾಲ್ಲೂಕು ಕಾರ್ಯದರ್ಶಿ ಅರವಿಂದ್ ಕಾರ್ಯಕ್ರಮವನ್ನು ನಿರೂಪಿಸಿದರು, ಶಾವೆಲ್ ಹಮೀದ್ ವಂದಿಸಿದರು.

ಬೆಳಗಾವಿ:

ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಜಿಲ್ಲೆಯ ಸಾಧಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸ್ವಾತಂತ್ರ ಹೋರಾಟಗಾರ, ಕಮ್ಯೂನಿಸ್ಟ್ ಪಕ್ಷದ ಹಿರಿಯ ಸಂಗಾತಿ ನರಗುಂದ ಬಂಡಾಯ ಮುಂಚೂಣಿ ನಾಯಕ ಎಸ್.ಎಚ್. ಕಪ್ಪಣ, ಕರ್ನಾಟಕ ಶಾಸನ ಸಭೆಯಲ್ಲಿ ಶಾಸಕರಾಗಿದ್ದ ಸವೋದಯ ನಾಯಕ ಸದಾಶಿವ ಬೋಸ್ಲೇ, ಕೆಎಲ್ ಇ ಸಾಮ್ರಾಜ್ಯದ ವಿರುದ್ಧ ಹೋರಾಟ ಮಾಡುತ್ತಿರುವ ಶ್ರೀಮತಿ ಸಾಯಿಪಾಟೀಲ, ಪರಿಸರ ಹೋರಾಟಗಾರ ಶಿವಾಜಿ ಕಾಂಗೇಣೇಕರ, ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಬಿ.ಎಲ್.ಪಾಟೀಲ ಹಾಗೂ ಮೌಢ್ಯಾಚರಣೆ ವಿರುದ್ಧ ಹೋರಾಡುತ್ತಿರುವ ಅಶೋಕ ಅಯ್ಯ ಸೇರಿದಂತೆ ಹಲವು ಸಾಧಕರಿದೆ ಸನ್ಮಾನ ಮಾಡುವ ಮೂಲಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಂಚೆ ಆಕರ್ಷಕವಾದ ಮೆರವಣಿಗೆ ನಡೆಯಿತು. ಮುಖ್ಯ ಭಾಷಣಕಾರರಾಗಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕಾರ್ಮಿಕ ಮಖಂಡರಾದ ವಿ.ಪಿ. ಕುಲಕರ್ಣಿ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಗೈಬು ಜೈನೇಖಾನ ನಿರೂಪಿಸಿದರು.

ಉತ್ತರ ಕನ್ನಡ:

ಜಿಲ್ಲೆಯಲ್ಲಿ ಹಲವು ಸಭೆಗಳನ್ನು ನಡೆಸಲಾಯಿತು. ಲೇಖಕ ಎಂ.ಎ.ಖತೀಬ ಮೇ ಡೇ ಹುತಾತ್ಮರಿಗೆ ಗೌರವ ಸಲ್ಲಿಸಿ ಮಾತನಾಡಿದರು.

ಕಲಬುರಗಿ:

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸಿಐಟಿಯು ರಾಜ್ಯ ಅಧ್ಯಕ್ಷರಾದ ಕಾಂ||ವಿಜೆಕೆ ನಾಯರ್ ಸಭೆಯನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಂತಾ ಘಂಟೆ, ಮುಖ್ಯ ಅತಿಥಿಗಳಾಗಿ ಮಾರುತಿ ಮಾನ್ಪಡೆ ಭಾಗವಹಿಸಿದ್ದರು. ಸಜ್ಜನ್ ರವರು ನಿರೂಪಣೆ ಮಾಡಿದರು.

ದಕ್ಷಿಣ ಕನ್ನಡ, ಮೈಸೂರು, ಬಳ್ಳಾರಿ, ಮಂಡ್ಯ, ಕೋಲಾರ, ಕೊಪ್ಪಳ, ಗದಗ, ಬೆಳ್ತಂಗಡಿ, ಚಿಕ್ಕೋಡಿ, ಚನ್ನರಾಯನಪಟ್ಟಣ, ಶ್ರೀನಿವಾಸಪುರ, ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘಟನೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ, ಅಂಗನವಾಡಿ, ಅಕ್ಷರ ದಾಸೋಹ, ಆಶಾ, ಹಮಾಲಿ, ಬೀಡಿ ಕಾರ್ಮಿಕ ಸಂಘಟನೆಗಳು, ಸಾರಿಗೆ ನೌಕರರು, ಆಟೋ ರಿಕ್ಷಾ ಚಾಲಕರು ಸೇರಿದಂತೆ ಹಲವು ಸಂಘಟನೆಗಳಿಂದ ಜಿಲ್ಲಾ ತಾಲ್ಲೂಕುಗಳಲ್ಲಿ ಮೇ ದಿನದ ಆಜಾದಿ ರಾಲಿ ನಡೆದ ಹಲವು ವರದಿಗಳು ಬಂದಿವೆ.

Advertisements