“ಭಾಗ್ ವಿಸಿ ಭಾಗ್”!

ಸಂಪುಟ: 10 ಸಂಚಿಕೆ: 21 Sunday, May 15, 2016

ಮೇ 10ರಂದು ಅಪರಾಹ್ನ 2.30ಕ್ಕೆ  ಜೆಎನ್‍ಯು ಅಕಡೆಮಿಕ್ ಕೌನ್ಸಿಲ್ ಸಭೆ ಆರಂಭವಾದಾಗ ಉಪಕುಲಪತಿಗಳು ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಗಳ ಚರ್ಚೆಯನ್ನು ಮೊದಲು ಎತ್ತಿಕೊಳ್ಳಬೇಕು ಎಂಬ ವಿದ್ಯಾರ್ಥಿಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯ ಜಂಟಿ ಆಗ್ರಹವನ್ನು ತಿರಸ್ಕರಿಸಿದರು. ಆದರೆ ಹಲವು ಡೀನ್‍ಗಳು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರೂ ಈ ಬೇಡಿಕೆಯನ್ನು ಬೆಂಬಲಿಸಿದಾಗ ಕೊನೆಗೂ ಚರ್ಚೆಗೆ ಎತ್ತಿಕೊಳ್ಳಬೇಕಾಯಿತು. ಒಂದು ಗಂಟೆ ಚರ್ಚೆ ನಡೆದರೂ ಉಪಕುಲಪತಿಗಳು ಯಾವುದೇ ಭರವಸೆ ನೀಡಲಿಲ್ಲ. ಸುಮಾರು ಒಂದು ಗಂಟೆಯ ಚರ್ಚೆಯ ನಂತರ ಉಪಕುಲಪತಿಗಳು ಇದ್ದಕ್ಕಿದ್ದಂತೆ ಸಭೆಯನ್ನು ಬರ್ಖಾಸ್ತು ಮಾಡಿ ಎದ್ದು ನಡೆದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶೆಹಲಾ ರಶೀದ್ “ಸರ್, ನೀವು ಹಾಗೆ ಹೋಗುವಂತಿಲ್ಲ. ಈ ಮುಷ್ಕರದಲ್ಲಿ ಪ್ರಾಣ ಕಳಕೊಳ್ಳಬಹುದಾದ ವಿದ್ಯಾರ್ಥಿಗಳ ರಕ್ತ ನಿಮ್ಮ ಕೈಗಂಟುತ್ತದೆ” ಎಂದರೂ ಕೇಳದೆ ಹೊರನಡೆದರು.
ಆದರೆ ಹೊರಗೆ ಉಪವಾಸ ನಿರತ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಭಟಿಸುತ್ತಿದ್ದ ಸುಮಾರು 200 ವಿದ್ಯಾರ್ಥಿಗಳು ಎದುರಾದರು. ಇದನ್ನು ಕಂಡ ಉಪಕುಲಪತಿಗಳು 250 ಮೀಟರ್ ದೂರದಲ್ಲಿದ್ದ ಆಡಳಿತ ಕಟ್ಟಡದತ್ತ ಓಡಲಾರಂಭಿಸಿದರು. ಕೈ-ಕೈ ಹಿಡಿದು ಮಾನವ ಸರಪಣಿ ಹೆಣೆದಿದ್ದ ವಿದ್ಯಾರ್ಥಿಗಳು “ಭಗೋಡಾ ವಿಸಿ ವಾಪಸ್ ಆವೊ” (ಓಡಿ ಹೋಗುವ ಉಪಕುಲಪತಿ, ಹಿಂದಿರುಗಿ ಬಾ) ಎಂದು ಕೂಗಲಾರಂಭಿಸಿದ.

ಓಟ ಕಿತ್ತ ಉಪಕುಲಪತಿಗಳು ಆಡಳಿತ ಕಟ್ಟಡವನ್ನು ಸೇರಿಕೊಂಡ ಮೇಲೆ ಬಾಗಿಲು ಹಾಕಲಾಯಿತು. ವಿದ್ಯಾರ್ಥಿಗಳು ಮುಚ್ಚಿದ ಬಾಗಿಲ ಹೊರಗಿನಿಂದಲೇ ಘೋಷಣೆ ಮುಂದುವರೆಸಿದರು.

ನಂತರ ವಿವಿ ಆಡಳಿತ ನೀಡಿದ ಹೇಳಿಕೆಯಲ್ಲಿ ವಿಸಿಯವರನ್ನು ಅಡ್ಡಗಟ್ಟಿದ ವಿದ್ಯಾರ್ಥಿಗಳಲ್ಲಿ ಕೆಲವರು ಅವರ ಶರ್ಟ್ ಎಳೆದು ನಿಲ್ಲಿಸಲು ಪ್ರಯತ್ನಿಸಿದರು  ಎನ್ನಲಾಗಿದೆ.

ಇದನ್ನು ನಿರಾಕರಿಸಿರುವ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯ ಕುಮಾರ್, ವಿದ್ಯಾರ್ಥಿಗಳ ಶಾಂತಿಯುತ ಘೋಷಣೆಗಳು ಮತ್ತು ಹಾಡುಗಳ ನಡುವೆ ವಿಸಿಯವರನ್ನು ಹತ್ತಾರು ಭದ್ರತಾ ಸಿಬ್ಬಂದಿ ಕರೆದುಕೊಂಡು ಹೋಗುತ್ತಿರುವುದನ್ನು ವೀಡಿಯೋಗ್ರಾಫ್ ಮಾಡಲಾಗಿದೆ ಎಂದಿದ್ದಾರೆ.

ಜೆಎನ್ ಯು ಅಧ್ಯಾಪಕರ ಸಂಘ ನೀಡಿರುವ ಪತ್ರಿಕಾ ಹೇಳಿಕೆಯೂ ಉಪಕುಲಪತಿಗಳ ವರ್ತನೆಯನ್ನು ಖಂಡಿಸಿದೆ. ಹಲವಾರು ಡೀನ್ ಗಳು ಮತ್ತೆ-ಮತ್ತೆ ಮಾಡಿದ ಮನವಿಯಿಂದಾಗಿ ಚರ್ಚೆ ಕೊನೆಗೂ ಆರಂಭವಾಗಿ ಅದರಲ್ಲಿ ಮಾತಾಡಿದ ಹನ್ನೆರಡು ಮಂದಿ ಅಕಡೆಮಿಕ್ ಕೌನ್ಸಿಲ್ ಸದಸ್ಯರೂ ಶಿಕ್ಷೆಗಳು ವಿಪರೀತವಾಗಿವೆ, ಅವನ್ನು ಕೈಬಿಡಬೇಕು ಎಂದು ವಿನಂತಿಸುವುದನ್ನು ಕಂಡ ವಿಸಿ ಇದ್ದಕ್ಕಿದ್ದಂತೆ ಸಭೆಯನ್ನು ಮುಂದೂಡಿ ಹೊರಟದ್ದು ಕಂಡ ಎಲ್ಲರೂ ವಿಸ್ಮಿತರಾದರು ಎಂದು ಆ ಹೇಳಿಕೆ ತಿಳಿಸಿದೆ.

ಈ ನಡುವೆ ಅಕಡೆಮಿಕ್ ಕೌನ್ಸಿಲ್ ಸಭೆಗೆ ಹಾಜರಾಗಿದ್ದ ಸದಸ್ಯರಲ್ಲಿ ಬಹುಸಂಖ್ಯಾತರು (53ಮಂದಿ) ವಿವಿ ಆಢಳಿತ ವಿಧಿಸಿದ ದಂಡಗಳನ್ನು ರದ್ದು ಮಾಡಬೇಕೆಂಬ ಒಂದು ನಿರ್ಣಯವನ್ನು ಅಂಗೀಕರಿಸಿದರು.

“ಈ ಸಭೆಯಲ್ಲಿ ವ್ಯಕ್ತವಾಗಿರುವ ಬಹು ಮಂದಿಯ ಭಾವನೆಗಳ ಮೇರೆಗೆ ವಿದ್ಯಾರ್ಥಿಗಳಿಗೆ ವಿಧಿಸಿರುವ ವಜಾ, ಅಮಾನತು, ಕ್ಯಾಂಪಸ್ ಪ್ರವೇಶಕ್ಕೆ ನಿಷೇಧ, ವಿಪರೀತ ದಂಡ ಇತ್ಯಾದಿ ಕಠಿಣತಮ ಶಿಕ್ಷೆಗಳನ್ನು ತಕ್ಷಣವೇ ರದ್ದು ಮಾಡಬೇಕು” ಎಂದ ಈ ನಿರ್ಣಯ “ಸಭೆಯ ಅಧ್ಯಕ್ಷತೆ ವಹಿಸಿದವರು ಅಕಡೆಮಿಕ್ ಕೌನ್ಸಿಲ್ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಏನೊಂದು ಗೌರವ ತೋರದೆ ಇದ್ದಕ್ಕಿದ್ದಂತೆ, ಕಾರಣವಿಲ್ಲದೆ ಮುಂದೂಡಿದ್ದನ್ನು ಕಂಡು ಬೇಸರವಾಗಿದೆ. ನಾವು, ಅಕಡೆಮಿಕ್ ಕೌನ್ಸಿಲ್‍ನ ಸದಸ್ಯರು ಫೆಬ್ರುವರಿ 9ರ ಘಟನೆಯ ಕಾರಣ ವಿಧಿಸಿದ್ದ ಎಲ್ಲ ನಿಷ್ಕಾರಣ ಶಿಕ್ಷೆಗಳನ್ನು ರದ್ದು ಮಾಡುವುದಾಗಿ ನಿರ್ಧರಿಸುತ್ತೇವೆ. ಉಪಕುಲಪತಿಗಳು ತಕ್ಷಣವೇ ಇದನ್ನು ಜಾರಿ ಮಾಡಬೇಕು ಎಂದು ನಿರ್ಧರಿಸುತ್ತೇವೆ” ಎಂದಿದೆ. ಸಭೆಯನ್ನು ಮುಂದೂಡಿ ಹೋದ ಉಪಕುಲಪತಿಗಳು ಇದಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ದೂರಿರುವುದರ ಬಗ್ಗೆ ಆಘಾತವನ್ನೂ ಈ ನಿರ್ಣಯ ವ್ಯಕ್ತಪಡಿಸಿದೆ.

ಅಂದೇ ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಿರತ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಎಐಡಿಡಬ್ಲ್ಯುಎ, ಎಐಎಲ್‍ಯು, ಎಐಪಿಡಬ್ಯುಎ, ಎನ್.ಎಫ್.ಐ.ಡಬ್ಲ್ಯು,, ಎಸ್.ಎಫ್.ಐ, ಡಿ.ವೈ.ಎಫ್.ಐ, ಜನವಾದಿ ಲೇಖಕ ಸಂಘ, ಜನನಾಟ್ಯ ಮಂಚ್, ಜನಸಂಸ್ಕøತಿ ಇತ್ಯಾದಿ 44 ಲೇಖಕರು, ಕಲಾವಿದರು, ಮಾನವ ಹಕ್ಕು ಕಾರ್ಯಕರ್ತರು, ಮಹಿಳಾ, ವಿದ್ಯಾರ್ಥಿ, ಯುವಜನ, ಕಾರ್ಮಿಕರ ಸಂಘಟನೆಗಳು 4 ಗಂಟೆಗಳ ಧರಣಿ ಕಾರ್ಯಕ್ರಮ ನಡೆಸಿದರು.

ಮರುದಿನ ಈ ಸಂಘಟನೆಗಳ ಮುಖಂಡರು ರಾಷ್ಟ್ರಪತಿಗಳಿಗೆ ರಾಷ್ಟ್ರದ ಮುಖ್ಯಸ್ಥರಾಗಿ ಮತ್ತು ಈ ವಿಶ್ವವಿದ್ಯಾಲಯದ ಸಂದರ್ಶಕರಾಗಿ ತುರ್ತಾಗಿ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳಿಗೆ ವಿಧಿಸಿರುವ ಕಠಿಣ ದಂಡಗಳನ್ನು ರದ್ದು ಮಾಡಬೇಕು ಎಂದು ಕೋರುವ ಮನವಿ ಪತ್ರವನ್ನು ಸಲ್ಲಿಸಿದರು.

ಕರ್ನಾಟಕ ಸೇರಿದಂತೆ ದೇಶದ ಹಲವೆಡೆಗಳಲ್ಲಿ ಜೆಎನ್ ಯು ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹಗಳನ್ನು ನಡೆಸಲಾಗಿದೆ.

Advertisements