ರಾಜಸ್ತಾನ : ಕನ್ಹೈಯ ಕುಮಾರ್ ಗಳು ಹುಟ್ಟದಂತೆ ಮಾಡುವ ಪಠ್ಯಕ್ರಮ!

ಸಂಪುಟ: 10 ಸಂಚಿಕೆ: 21 date: Sunday, May 15, 2016

ರಾಜಸ್ತಾನದ ‘ಮಾದರಿ’ ಶಿಕ್ಷಣ ಮಂತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ. ‘ಈ ರಾಜ್ಯದಲ್ಲಿ ಕನ್ಹೈಯ ಕುಮಾರ್‍ಗಳು ಹುಟ್ಟದಂತೆ ಮಾಡುವ ಪಠ್ಯಕ್ರಮವನ್ನು ತರುತ್ತೇವೆ’ ಎಂದು ಅವರು ಈ ಹಿಂದೆ ಹೇಳಿದ್ದು ನಮ್ಮ ಓದುಗರಿಗೆ ನೆನಪಿರಬಹುದು. ಅದನ್ನೀಗ ಜಾರಿಗಪಳಸುತ್ತಿರುವಂತೆ ಕಾಣುತ್ತದೆ.

ಅದಕ್ಕೆ ಒಂದು ಉದಾಹರಣೆ ಆಗಲೇ ಜನಜನಿತವಾಗಿ ಬಿಟ್ಟಿದೆ. ಅವರ ಪ್ರಕಾರ ‘ಪುನರ್ರಚಿಸಿದ’ ಎಂಟನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕ ಈ ವಾರ ಎಲ್ಲ ಮಾಧ್ಯಮಗಳಲ್ಲಿ ಸುದ್ದಿ ಮಾಡಿದೆ. ಅದರಲ್ಲಿ ಜವಹರಲಾಲ್ ನೆಹರೂ ಅವರ ಹೆಸರು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿಯೂ ಇಲ್ಲವಂತೆ, ಅವರು ದೇಶದ ಮೊದಲ ಪ್ರಧಾನ ಮಂತ್ರಿ  ಎಂಬ ಪ್ರಸ್ತಾಪವೂ ಆ ಪುಸ್ತಕದಲ್ಲಿ ಎಲ್ಲೂ ಇಲ್ಲವಂತೆ.

ಮಹಾತ್ಮ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದ ಎಂಬ ಸಂಗತಿಯೂ ಈ ಪಠ್ಯಪುಸ್ತಕದಲ್ಲಿ ಇಲ್ಲವಂತೆ. ಅದಕ್ಕೆ ಆಶ್ಚರ್ಯವೇನೂ ಪಡಬೇಕಾಗಿಲ್ಲ, ಏಕೆಂದರೆ ಕನ್ಹೈಯ ಕುಮಾರ್ ಗಳು ಹುಟ್ಟದಿರಬೇಕಾದರೆ ಈ ರೀತಿ ಇತಿಹಾಸವನ್ನು ಹುಸಿಗೊಳಿಸಲೇ ಬೇಕು ತಾನೇ?

ಆದರೆ ಅದೇಕೋ ಈ ಮಂತ್ರಿಗೆ ಇವನ್ನು ಸಮರ್ಥಿಸಿಕೊಳ್ಳುವ ಭಂಡತನ ಪ್ರದರ್ಶಿಸುವ ಧೈರ್ಯವಾಗಿಲ್ಲ. ಈ ಹೊಸ ಪಠ್ಯಪುಸ್ತಕಗಳನ್ನು ಪರಿಣಿತರು ಸಿದ್ಧಪಡಿಸಿದ್ದು, ಇದರಲ್ಲಿ ಸರಕಾರದ ಪಾತ್ರವೇನೂ ಇಲ್ಲ ಎಂದು ನುಸುಳಿಕೊಳ್ಳಬೇಕೆಂದು ಅವರಿಗೆ ಏಕೋ ಅನಿಸಿದೆ. ಆದರೆ ಅದನ್ನು ಯಾರೂ ನಂಬದಿದ್ದಾಗ ಯಾವ ಹೊಸ ಪುಸ್ತಕದಲ್ಲಿ ಎಷ್ಟು ಬಾರಿ ನೆಹರೂ ಹೆಸರು ಬಂದಿದೆ ಎಂದು ಲೆಕ್ಕ ಮಾಡಲು ಕೂತಂತೆ ಕಾಣುತ್ತದೆ.

ಪುಟ 91ರಲ್ಲಿ(ಸಂವಿಧಾನದ ಗುರಿಗಳ ಕುರಿತ ನಿರ್ಣಯವನ್ನು ಮಂಡಿಸಿದವರು ಎಂದು) ಮತ್ತು 177ರಲ್ಲಿ(ರಾಜಸ್ತಾನದ ಏಕೀಕರಣದ ದಾರಿಯಲ್ಲಿ ಒಂದು ಹೆಜ್ಜೆಯನ್ನು ಉದ್ಘಾಟಿಸಿದವರು ಎಂದು) ಅವರ ಹೆಸರು ಬಂದಿದೆ ಎಂದರು. ನಂತರ ಒಂದು ಹೇಳಿಕೆಯನ್ನೇ ಕೊಟ್ಟು 7, 9 ಮತ್ತು 11ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿ ನೆಹರೂ ಅವರ ಹೆಸರು ‘ಕನಿಷ್ಟ 15’ ಕಡೆ ಬಂದಿದೆ ಎಂದು ಲೆಕ್ಕ ಕೊಟ್ಟಿದ್ದಾರೆ. ಆದರೆ ಇವುಗಳಲ್ಲಿ ಕನಿಷ್ಟ 13 ಕೇವಲ ಲೆಕ್ಕಕ್ಕೆ ಸೇರಿಸಿದಂತಿದೆ ಎಂದು ಟೈಂಸ್ ಆಫ್ ಇಂಡಿಯಾ ವರದಿಗಾರರು ಹೇಳಿದ್ದಾರೆ.

ಇದಕ್ಕಿಂತ ಮುಖ್ಯವಾಗಿ ಬಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ  ನೆಹರೂ ಅವರ 1947ರ ಅಗಸ್ಟ್ 14-15ಮಧ್ಯರಾತ್ರಿಯ ಐತಿಹಾಸಿಕ ಭಾಷಣ ‘ಭವಿಷ್ಯದೊಂದಿಗೆ ಸಮಾಗಮ’ವನ್ನು ಹೊಸ  ಪುಸ್ತಕದಲ್ಲಿ ತೆಗೆದು ಹಾಕಲಾಗಿದೆಯಂತೆ. ಹನ್ನೊಂದನೇ ತರಗತಿಯ ಹಿಂದಿ ಸಾಹಿತ್ಯದ ಪಠ್ಯಪುಸ್ತಕದಲ್ಲಿದ್ದ ‘ಭಾರತ್ ಮಾತಾ’ ಎಂಬ ಅವರ ಲೇಖನವನ್ನೂ  ತೆಗೆದು ಹಾಕಲಾಗಿದೆಯಂತೆ. ಕನ್ಹೈಯ ಕುಮಾರ್‍ಗಳು ಹುಟ್ಟದಂತೆ ಮಾಡಲು ಇವೆರಡಂತೂ ಅತ್ಯಗತ್ಯ!

‘ಅಚ್ಚೇ ದಿನ್’ ರೂವಾರಿ ಗುಜರಾತ್ ಬಿಟ್ಟು ದಿಲ್ಲಿಗೆ ಹೋದ ಮೇಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 10 ನೇ ಸ್ಥಾನದಲ್ಲಿರುವ ಅವರ ಗುಜರಾತ್ ಮಾದರಿಯ ಸ್ಥಾನವನ್ನು, ಇನ್ನೂ ಕೆಳಗೆ, ಭಾರತದ ಸರಾಸರಿಗಿಂತಲೂ ಕೆಳಗೆ, 12ನೇ ಸ್ಥಾನದಲ್ಲಿರುವ ‘ರಾಜಸ್ತಾನ ಮಾದರಿ’ ಪಡೆಯುತ್ತಿರುವಂತೆ ಕಾಣುತ್ತದೆ-ಕಾರ್ಮಿಕ ಹಕ್ಕುಗಳ ರಂಗದಲ್ಲಿ, ಶೈಕ್ಷಣಿಕ ರಂಗದಲ್ಲಿ ಮತ್ತು ಚಮಚಾ ಬಂಡವಾಳಶಾಹಿಯ ರಂಗದಲ್ಲೂ!

ಈ ನಡುವೆ ಈ ಶಿಕ್ಷಣ ಮಂತ್ರಿಗೆ ಆರೆಸ್ಸೆಸ್ ಕಚೇರಿಯಿಂದ ಬುಲಾವ್ ಬಂದಿದೆಯಂತೆ. ಏಕೆ ನೆಹರೂ ಪ್ರಸ್ತಾಪಗಳನ್ನು ತೆಗೆದಿದ್ದೀರಿ ಎಂದು ಕೇಳಲಿಕ್ಕಂತೂ ಅಲ್ಲ. ಆದರೆ ಕೇಸರೀಕರಣ ಮಾಡುವಾಗಲೂ ವಹಿಸಬೇಕಾದ ‘ಜಾಗರೂಕತೆ’ಯನ್ನು ವಹಿಸಿಲ್ಲ ಎಂದು ತರಾಟೆಗೆ ತೆದುಕೊಳ್ಳಲು ಎಂದು ಟೈಂಸ್ ಆಫ್ ಇಂಡಿಯಾ (ಮೇ12) ವರದಿ ಮಾಡಿದೆ. ನೆಹರೂರವರಿಗೆ ಕೊಕ್ ಕೊಡುವ ಭರದಲ್ಲಿ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಿಗೆ ಸ್ಫೂರ್ತಿ ತುಂಬಿದ್ದ ರಾಂಪ್ರಸಾದ್ ಬಿಸ್ಮಿಲ್ ಅವರ ‘ಸರ್‍ಫರೋಶೀ ಕೀ ತಮನ್ನಾ..’(ಕಟುಕನ ಕೈಗಳಿಗೆ ತಲೆ ಕೊಡುವ ಹುಮ್ಮಸ್ಸಿದೆ, ಕಟುಕನ ಬಾಹುಗಳಲ್ಲಿ ಶಕ್ತಿಯೆಷ್ಟಿದೆ ನೋಡಬೇಕಾಗಿದೆ) ಎಂಬ ಉರ್ದು ಕವನವನ್ನು ಮತ್ತು ಹಿಂದಿಯ ಪ್ರಖ್ಯಾತ ಕವಯಿತ್ರಿ ಮತ್ತು ಆ ರಾಜ್ಯದಲ್ಲಿ ಗಾಂಧೀಜಿಯ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಮೊದಲ ಮಹಿಳೆ ಸುಭದ್ರಾ ಕುಮಾರಿ ಅವರ ಪ್ರಖ್ಯಾತ ‘ಝಾನ್ಸೀ ಕೀ ರಾನಿ’ ಕವನವನ್ನೂ ಕೈಬಿಡಲಾಗಿದೆಯಂತೆ. ಏನು ಮಾಡುವುದು, ಸಂಘ ಪರಿವಾರದ ಸಿದ್ಧಾಂತಗಳನ್ನು ಅಕ್ಷರಶಃ ಪಾಲಿಸ ಬೇಕೆಂದು ಹೊರಡುವವರಿಂದ ಇಂತಹ ‘ತಪ್ಪು’ಗಳು ಆಗುತ್ತಿವೆ. ದಿಲ್ಲಿಯ ಶಿವಸೇನೆಯವರು ಅಮೆರಿಕಾದ ಅಧ್ಯಕ್ಷ ಸ್ಥಾನದ ರಿಪಬ್ಲಿಕನ್ ಅಭ್ಯರ್ಥಿ ಗೆಲ್ಲಲಿ ಎಂದು ವಿಶೇಷ ಹವನ ಮಾಡಿಸಿದಂತೆ, ಜೆಎನ್‍ಯು ಪ್ರಕರಣದಲ್ಲಿ ಗೃಹಮಂತ್ರಿಗಳೇ ಟ್ವೀಟ್ ಮಾಡಿ ಬೇಸ್ತು ಬಿದ್ದಂತೆ, ಕೇಂದ್ರ ಹಣಕಾಸು ಮಂತ್ರಿಗಳು ಪಿಎಫ್ ವಿಷಯದಲ್ಲಿ ಎರಡು ತಿಂಗಳಲ್ಲಿ ಮೂರು ಬಾರಿ ತಿಪ್ಪರಲಾಗ ಹಾಕಿದಂತೆ, ಎಲ್ಲಕ್ಕೂ ಮಿಗಿಲಾಗಿ ಬಿಜೆಪಿಯ ಅತಿರಥ -ಮಹಾರಥರೇ ಉತ್ತರಾಖಂಡದಲ್ಲಿ ಹೆಜ್ಜೆ-ಹೆಜ್ಜೆಗೂ ಹೈಕೋರ್ಟ್-ಸುಪ್ರಿಂ ಕೋರ್ಟ್ ತರಾಟೆಗೆ ಗುರಿಯಾಗುವಂತಹ ಪ್ರದರ್ಶನ ನೀಡಿದಂತೆ!

ವೇದರಾಜ್ ಎನ್. ಕೆ.

Advertisements