ರೇಗಾ ಮತ್ತು ಬರ

ಸಂಪುಟ: 10 ಸಂಚಿಕೆ: 20 May 8, 2016

ಈ ವರ್ಷ ಬರಗಾಲವು ಇನ್ನಷ್ಟು ಭೀಕರವಾಗಿರುವುದರಿಂದ ನಮ್ಮ ಕೆಲಸ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವೆವು. ನೀರಿನ ಅಂತರ್ಜಲಮಟ್ಟ ಕುಸಿದಿರುವುದರಿಂದ ನಾವು ದುಡಿವ ಜನರ ಕೈಗೆ ಕೆಲಸ, ಮಾಡಿದ ಕೆಲಸಕ್ಕೆ ಕೂಲಿ ಮತ್ತು ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುವುದು. ಹೀಗೆ ಮುಖ್ಯ ಗುರಿಯನ್ನಿಟ್ಟುಕೊಂಡು ಕೆಲಸ ಮಾಡಲು ನಿರ್ಣಯಿಸಿದೆವು. ಕೆರೆಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಹಳ್ಳಿಗಳ ಜನರತ್ತ ನಮ್ಮ ನಡಿಗೆ ಎಂದು ನಿರ್ಧರಿಸಿ ಕಳೆದ ಒಂದುವರೆ ತಿಂಗಳಿಂದ ಕೆರೆ ಕೇಂದ್ರೀಕರಿಸಿ ಕೆಲಸ ಆರಂಭಿಸಿದ್ದೇವೆ. ಇದರ ಪ್ರತಿ ಫಲವಾಗಿ ಮಾರ್ಚ್ 26ರಂದು ಆಳಂದ ತಾಲ್ಲೂಕಿನ ನರೋಣ ಕ್ಷೇತ್ರ ಪಾಳ್ಯದಲ್ಲಿ ಸುಮಾರು ಮೂರುವರೆ ಸಾವಿರಕ್ಕೂ ಅಧಿಕ  ಮಹಿಳೆಯರು ಅಂತರರಾಷ್ಟ್ರೀಯ ದಿನವನ್ನು ‘ಕೆಲಸದ ಹಕ್ಕಿಗಾಗಿ ಮತ್ತು ನೀರು ಸಂರಕ್ಷಣೆ’ ಗಾಗಿ ಆಚರಿಸಿದರು. ಈಗ ನಮ್ಮ ಸಂಘಟನೆಯ ಶ್ರಮದ ಭಾಗವಾಗಿ ಎಂಟು ಕೆರೆಗಳಲ್ಲಿ ಕಾಮಗಾರಿ ಆರಂಭವಾಗಿದೆ. ಸರಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ.

regha

ಹೌದು. ನಾವು ಹೀಗೆ ಕೆಲಸ ಮಾಡಲು ಮನಸು ಮಾಡಿದೆವು. ದಿನಗಳೆದಂತೆ ಎಲ್ಲವನ್ನೂ ಆಪೋಷನಗೈಯುವಂತೆ ರಾಚುವ ಬೆಂಕಿ ಬಿಸಿಲು. ನಗರಗಳಲ್ಲಿ ಬಿಕೋ ಎನ್ನುವ ರಸ್ತೆಗಳು. ಹಳ್ಳಿಗಳಲ್ಲಿ ಹರಕು ರಸ್ತೆಗಳು ಬಿಕೋ ಅಂದರೂ ಪ್ರತಿ ಮನೆ ಗುಡಿಸಲುಗಳಲ್ಲಿ ಸಂಕಟದ ಮೌನ. ಊಟಕ್ಕೆ ಒದಗಿ ಬರುವ ದವಸ ಧಾನ್ಯಗಳು ದಿನಸಿಗಳು ಖಾಲಿಯಾಗುತ್ತಿದ್ದು, ಮುಂದೇನು? ಎನ್ನುವಂಥ ಆಳದ ಚಿಂತೆ, ಒಳ-ಒಳಗೆ ಬಿಕ್ಕುವ ಮನಸು ಕ್ರಮೇಣ ಹತಾಶೆಯ ಪಾಶದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿತ್ತು.. ಏನು ಮಾಡುವುದು? ಯಾವ ರಸ್ತೆಗೆ ಹೊಲಗದ್ದೆ ಪಕ್ಕದಿಂದ ಹಾದರೂ ಎರಡೆರಡು ಕೊಡಹೊತ್ತ ಹೆಂಗಸರು ಮಕ್ಕಳು ಉಸ್ಸೆನ್ನುತ್ತ ಹಾದಿ ಸವೆಸುತ್ತಿರುವರು. ಕೈಯ್ಯಲ್ಲಿ ಕೆಲಸವಿಲ್ಲ. ಹಿಂದೆಲ್ಲ ಮಾಡಿದ ಕೆಲಸಕ್ಕೆ ಕೂಲಿ ಕೊಡದ ಉದ್ಯೋಗ ಖಾತ್ರಿಯ ಮೇಲೆ ವಿಶ್ವಾಸವೇ ಇಲ್ಲದಂತಹ ಪರಿಸ್ಥಿತಿ.

ಎಷ್ಟೊ ಹಳ್ಳಿಗಳಲ್ಲಿ ಸಾವಿರಾರು ಉದ್ಯೋಗ ಚೀಟಿಗಳು ಗೆದ್ದವರ ಇದ್ದವರ ಕೈ ಸೇರಿ ವರ್ಷಗಳೇ ಆಗಿವೆ. ‘ನಮ್ಮ ರೊಕ್ಕ ನಿಮ್ಮ ಅಕೌಂಟಿಗೆ ಬರ್ತದೆ. ಐದು ನೂರು ಇಟ್ಕೊಂಡು ಉಳಿದಿದ್ದು ವಾಪಸ್ ಕೊಡ್ರಿ…’ ಎಂದು ಮುಗ್ಧ ಜನರನ್ನು ಯಾಮಾರಿಸಿ ಅವರ ಕೈಯಿಂದಲೇ ಅವರದೇ ಹೆಸರಿನ ಹಣವನ್ನು ನುಂಗಿ ನೀರು ಕುಡಿದವರು ಕಟ್ಟೆಯ ಮೇಲೆ ಇಸ್ಪೇಟಾಡುತ್ತ ಕುಳಿತಿರುವರು. ರೇಗಾದಡಿಯಲ್ಲಿ ಜನರ ಅಕೌಂಟಿಗೆ ಎನ್ ಎಂ ಆರ್ ತೆಗೆದು ಕೆಲಸ ಮಾಡಿರುವರೆಂದು ಸುಳ್ಳು ಬಿಲ್ಲು ಮಾಡಿಸಿ ಅವರ ಅಕೌಂಟಿಗೆ ಬಂದ ಹಣವನ್ನು ಸುಳ್ಳು ಹೇಳಿಯೇ ಲೂಟಿ ಮಾಡಿರುವರು.ಇದು ಹಗಲು ದರೋಡೆ. ತನ್ಮೂಲಕ ಜನರನ್ನು ಕರಪ್ಟ್ ಮಾಡಿರುವರು. ಈಗಲೂ ಸಾಮಾನ್ಯ ಜನರಿಗೆ ಕೆಲಸ ಸಿಗದಂತೆ ಮಾಡಿ ಉದ್ಯೋಗ ಚೀಟಿಯನ್ನು ತಮ್ಮಲ್ಲಿಯೇ ಇಟ್ಟುಕೊಂಡವರು ಸಾವಿರಗಟ್ಟಲೆ ಜನರು ಪ್ರತಿ ತಾಲ್ಲೂಕಿನಲ್ಲಿ ಸಿಗುವರು. ಬರಗಾಲದ ಹೊತ್ತಿನಲ್ಲಿಯೂ ಕರುಣೆಯಿಲ್ಲದ ಈ ಕಟುಕರು ಶ್ರಮಿಕರ ಸಂಕಟ ಕಂಡು ಅಟ್ಟಹಾಸ ಮಾಡುತ್ತಿರುವಂತೆ ಭಾಸವಾಗುವುದು.

ಇನ್ನು ಸರಕಾರದ ಸಿಬ್ಬಂದಿಗಳಿಗೆ ಈ 45-47 ಡಿಗ್ರಿ ಬಿಸಿಲಿನಲ್ಲಿ ಹಳ್ಳಿ ಸುತ್ತಾಡಿ ಜನರ ಕೈಗೆ ಕೆಲಸ ಕೊಡುವುದು ಬೇಕಿಲ್ಲ. ಸರಿ ಏನು ಮಾಡುವುದು? ಈ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯು ಆರಂಭವಾದ ವರ್ಷ 2005-6ರ ಹೊತ್ತಿನಲ್ಲಿ ಬೀದರ ಜಿಲ್ಲೆಯಲ್ಲಿ ಹೀಗೆ ಹುಚ್ಚು ಹಿಡಿದವರಂತೆ ಹಳ್ಳಿಗಳನ್ನು ಸುತ್ತಾಡಿ ಕೆಲಸ ಮಾಡಿದ್ದೆವು. ನಿರಂತರ ಹೋರಾಟ, ಸಮಾವೇಶ, ಜಾಗೃತಿ ಜಾತಾ, ಅನೇಕ ಘೇರಾವ್, ಪಂಚಾಯತ್ ಕಚೇರಿಗಳಿಗೆ ಕೀಲಿ ಜಡಿಯುವಂತಹ ಸಂಘರ್ಷಗಳ ಜೊತೆಗೆ ಸಾವಿರಾರು ಕೂಲಿ ಕಾರ್ಮಿಕರು, ಬಡರೈತರು ಉದ್ಯೋಗ ಖಾತ್ರಿಯ ನೆರವಿನೊಂದಿಗೆ ಕೊಂಚ ನೆಮ್ಮದಿಯ ಬದುಕು ಕಂಡಿದ್ದು ನನಗೀಗಲು ನೆನಪಾಗುವುದು. ಬರೆದರೆ ದೊಡ್ಡ ಗ್ರಂಥವೇ ಆಗುವಂತಹ ಹೋರಾಟದ ಗಾಥೆಯದು. ಸತತ ಮೂರು ವರ್ಷ ಬೆನ್ನು ಹತ್ತಿದ್ದಾಯ್ತು…

ಅರಳಿ ನಿಂತ ಆಜಾದಪುರ ಕೆರೆ

ಕಳೆದ ವರ್ಷವೂ ಬರವಿತ್ತು. ಆದರೆ ನಾವಾಗ ಮೈಕ್ರೊ ಸಿಸ್ಟಮ್ ಕೆಲಸ ಮಾಡುವ ಪ್ರಯೋಗಕ್ಕೆ ಒಡ್ಡಿಕೊಳ್ಳಲು ತೀರ್ಮಾನ ಮಾಡಿದ್ದೇವು. ಹೀಗಾಗಿ ಕಲಬುರಗಿ ನಗರದ ಹತ್ತಿರವಿರುವ ಕುಸನೂರು ಗ್ರಾಮಪಂಚಾಯತಿಯ ಆಜಾದಪುರ ಗ್ರಾಮದ ಕೆರೆಯಲ್ಲಿ ಸುಮಾರು ಮುನ್ನೂರರಷ್ಟು ಕೃಷಿ ಕೂಲಿ ಕಾರ್ಮಿಕರು ಮತ್ತು ಬಡರೈತರಿಗೆ ರೇಗಾ ಅಡಿಯಲ್ಲಿ ಸತತ ನೂರು ದಿನ ಕೆಲಸ ಕೊಡಿಸಲು ಸಾಧ್ಯವಾಗಿತ್ತು. ಅಂತೆಯೇ ಪುಟ್ಟ ಕೆರೆಯೊಂದು ಇಂದು ಅರಳಿ ನಿಂತಿದೆ. ಕೆರೆ ಪೂರ್ತಿ ಕಟ್ಟಬೇಕೆಂದು ಅನೇಕ ಬಾರಿ ಹೋರಾಟವೂ ನಡೆಸಿದೆವು.

ಆದರೆ ಈ ವರ್ಷ ಬರಗಾಲವು ಇನ್ನಷ್ಟು ಭೀಕರವಾಗಿರುವುದರಿಂದ ನಮ್ಮ ಕೆಲಸ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವೆವು. ನೀರಿನ ಅಂತರ್ಜಲಮಟ್ಟ ಕುಸಿದಿರುವುದರಿಂದ ನಾವು ದುಡಿವ ಜನರ ಕೈಗೆ ಕೆಲಸ, ಮಾಡಿದ ಕೆಲಸಕ್ಕೆ ಕೂಲಿ ಮತ್ತು ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುವುದು. ಹೀಗೆ ಮುಖ್ಯ ಗುರಿಯನ್ನಿಟ್ಟುಕೊಂಡು ಕೆಲಸ ಮಾಡಲು ನಿರ್ಣಯಿಸಿದೆವು. ನೀರಿಲ್ಲವೆಂದರೆ ನಾಳೆಯಿಲ್ಲ. ನಿಜಾಮ ಆಳ್ವಿಕೆಯ ಪ್ರದೇಶದಲ್ಲಿ ಕೆರೆ ಮತ್ತು ಬಾವಿಗಳು ಹೇರಳವಾಗಿವೆ. ಇದಕ್ಕಾಗಿ ನಿಜಾಮನಿಗೆ ಧನ್ಯವಾದ ಹೇಳಲೇಬೇಕು. 1972 ರ ಹೊತ್ತಿಗೆ ಬಿದ್ದ ಭೀಕರ ಬರದ ಹೊತ್ತಿನಲ್ಲಿ ಪ್ರತಿ ಹಳ್ಳಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡು ಜನರ ಕೈಗೆ ಕೆಲಸ ಕೊಡಲಾಗಿತ್ತು. ಅಂದಿಗೆ ಹೂಳೆತ್ತಲ್ಪಟ್ಟ ಕೆರೆಗಳು ಹೂಳು ತುಂಬಿಕೊಂಡು ನೆಲಸಮವಾಗಿವೆ. ರೇಗಾ ಅಡಿಯಲ್ಲಿ ಅವುಗಳ ಹೂಳು ತೆಗೆಸಬೇಕಿತ್ತು. ಸರಕಾರವಾಗಲಿ ಸರಕಾರಿ ಯಂತ್ರವಾಗಲಿ ಇದಕ್ಕೆ ಮನಸು ಮಾಡಲೇಯಿಲ್ಲ. ಈ ಕಾರಣದಿಂದಲೂ ನೀರಿನ ಅಂತರ್ಜಲಮಟ್ಟ ಕುಸಿದಿದೆ.

ನಾವೀಗ ಎಚ್ಚೆತ್ತುಕೊಳ್ಳದಿದ್ದರೆ ಇನ್ನು ಸಂಕಟದ ದಿನಗಳು ನಮ್ಮ ಮುಂದಿವೆ ಎಂದು ನಮಗೆ ಅನಿಸಿತು. ಇಷ್ಟಕ್ಕೂ ಹಳ್ಳಿಯಲ್ಲಿ ಜನರು ಬರದ ಬೆಂಕಿಯಲ್ಲಿ ಬೇಯುವಾಗ ಕೂದಲು ಸೀಳುವ ತರ್ಕಕ್ಕೆ ಅಕ್ಷರಗಳನ್ನು ನಲುಗಿಸುತ ಕೂಡಿವುದರಲ್ಲಿ ಅರ್ಥವಿಲ್ಲ ಎನಿಸಿತು. ಎಂದಿನಂತೆ ಮತ್ತೆ ಹಳ್ಳಿಗಳತ್ತ ಹೊರಡಲು ತೀರ್ಮಾನಿಸಿದೆವು. ಕಳೆದ ವರ್ಷ ಐದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೇಗಾ ಪ್ರಚಾರ ಮಾಡಿದ್ದೆವು. ಮತ್ತು ಪಾಳಾ ಕೆರೆಯಲ್ಲಿ ಕೆಲಸ ಆರಂಭಿಸಿದ್ದೆವು. ಮೂರು ಥಾಂಡಾ ಮತ್ತು ಒಂದು ಹಳ್ಳಿಯ ಜನರು ಕೆರೆಯಲ್ಲಿ ಕೆಲಸ ಮಾಡಿರುವರು.

ಕೆರೆಗಳತ್ತ ನಮ್ಮ ನಡಿಗೆ

ಆದರೀಗ ಕೆರೆಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಹಳ್ಳಿಗಳ ಜನರತ್ತ ನಮ್ಮ ನಡಿಗೆ ಎಂದು ನಿರ್ಧರಿಸಿ ಕಳೆದ ಒಂದುವರೆ ತಿಂಗಳಿಂದ ಕೆರೆ ಕೇಂದ್ರೀಕರಿಸಿ ಕೆಲಸ ಆರಂಭಿಸಿದ್ದೇವೆ. ಇದರ ಪ್ರತಿ ಫಲವಾಗಿ ಮಾರ್ಚ್ 26ರಂದು ಆಳಂದ ತಾಲ್ಲೂಕಿನ ನರೋಣ ಕ್ಷೇತ್ರ ಪಾಳ್ಯದಲ್ಲಿ ಸುಮಾರು ಮೂರುವರೆ ಸಾವಿರಕ್ಕೂ ಅಧಿಕ  ಮಹಿಳೆಯರು ಅಂತರರಾಷ್ಟ್ರೀಯ ದಿನವನ್ನು ‘ಕೆಲಸದ ಹಕ್ಕಿಗಾಗಿ ಮತ್ತು ನೀರು ಸಂರಕ್ಷಣೆ’ ಗಾಗಿ ಆಚರಿಸಿದರು. ಈಗ ನಮ್ಮ ಸಂಘಟನೆಯ ಶ್ರಮದ ಭಾಗವಾಗಿ ಎಂಟು ಕೆರೆಗಳಲ್ಲಿ ಕಾಮಗಾರಿ ಆರಂಭವಾಗಿದೆ. ಸರಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ.

ಕ್ರಮೇಣ ಈ ಕೆಲಸಕ್ಕೆ ಕೈ ಜೋಡಿಸಿದವರು ಕಲಬುರಗಿಯ ವ್ಹಿ.ಜಿ.ಮಹಿಳಾ ಮಹಾವಿದ್ಯಾಲಯ, ರಜೆಯ ದಿನಗಳಲ್ಲಿ ಮಸ್ತಿ-ಮೋಜಿಗೆ ಹೋಗದೆ ಹಳ್ಳಿಗಳ ಜನತೆಯೊಂದಿಗೆ ನಾವಿದ್ದೇವೆ ಎಂದು ಆದರ್ಶ ಶಿಕ್ಷಕರಾಗಿರುವ ನಿಂಗಣ್ಣ ಮುಂಗೊಂಡಿ ನೇತೃತ್ವದಲ್ಲಿ ಆರು ಜನ ಶಿಕ್ಷಕರು ಹಳ್ಳಿಗಳಿಗೆ ಪಯಣ ಹೊರಟಿದ್ದಾರೆ. ಸಿದ್ದಲಿಂಗ ಸಿ ಸುಣಗಾರ, ಮಲ್ಲಿಕಾರ್ಜುನ ಜಿ ಓಕಳಿ, ಶಂಭುಲಿಂಗ, ರವೀಂದ್ರ ರುದ್ರವಾಡಿ ಮತ್ತು ಅಪ್ಪಾಸಾಹೇಬ ತೀರ್ಥ ಎಂಬುವವರೇ ಈ ಆರು ಜನ ಶಿಕ್ಷಕರು ಸೂಟಿಯ ದಿನಗಳನ್ನು ಹಳ್ಳಿಗರ ಸಂಕಟ ನಿವಾರಣೆಗಾಗಿ ಮೀಸಲಿಟ್ಟಿದ್ದಾರೆ. ಕೇಂದ್ರೀಯ ವಿಶ್ವ ವಿದ್ಯಾಲಯದ ಎಂ.ಎಸ್.ಡಬ್ಲು.ಡಿ. ವಿದ್ಯಾರ್ಥಿಗಳನ್ನು ತೊಡಗಿಸುವುದಾಗಿ ಆಶ್ವಾಸನೆ ಬಂದಿದೆ. ಈಗಾಗಲೇ ಮಾರ್ಚ್ 26ರಂದು ಮಹಿಳಾ ದಿನಾಚರಣೆಗೆ ಬಂದು ಕಾರ್ಮಿಕರಿಗೆ ಅರ್ಜಿ ತುಂಬಿಸುವಲ್ಲಿ ಈ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ನಿಭಾಯಿಸಿರುವರು. ಮುಂದೆಯೂ ಜೊತೆ ಬರುವ ಭರವಸೆ ನೀಡಿರುವರು. ಅಕ್ಷರ ಲೋಕದಲ್ಲಿ ಲೀನವಾದ ಜನತೆ ಒಂದೆಡೆ, ಬುದ್ಧ, ಬಸವ, ಅಂಬೇಡ್ಕರ್, ಮಾಕ್ರ್ಸ್, ಲೆನಿನ್, ಗಾಂಧಿ ಮುಂತಾದವರನ್ನು ಹಂಚಿಕೊಳ್ಳಲು ದಿನವೂ ತರ್ಕದ ಬೆನ್ನೇರಿದವರು ಇನ್ನೊಂದೆಡೆ ಇವರ ಇವರುಗಳ ಮದ್ಯದಲ್ಲಿಯೇ ಒಂದಿಷ್ಟು ಜನರು ಹಳ್ಳಿಗಳತ್ತ ಹೆಜ್ಜೆ ಹಾಕಿದ್ದು ನಮಗಂತೂ ಹಿಡಿಸಲಾರದ ಹಿಗ್ಗು ಅಭಿಮಾನ ತಂದಿದೆ. ಅರ್ಜಿ ತುಂಬುವುದರಿಂದ ಹಿಡಿದು ಕೆಲಸ ದೊರಕಿಸುವವರೆಗೆ ಬಿರು ಬಿಸಿಲಿನಲ್ಲಿ ನಡೆದಾಡುವ ನಿಂಗಪ್ಪ ಮಾಸ್ತರ್‍ರ ಛಲ ನಮ್ಮ ಶಕ್ತಿಯೇ ಹೌದು. ಅವರ ಬಾಳ ಸಂಗಾತಿ ನಂದಾ ಮನೆಗೆಲಸ ಮುಗಿಸಿಕೊಂಡು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಓಡಾಡಿ ಶ್ರಮಿಕರ ಋಣ ತೀರಿಸುವ ಪರಿಗೆ ಬೆರಗಾಗಿದ್ದೇವೆ. ಇವರ ಸಾಗರದಂತ ಬದ್ಧತೆಯ ಮುಂದೆ ಕೊಂಚವಾದರೂ ಸಾರ್ಥಕವಾಗುವಂಥ ಕೆಲಸ ಎಡೆಬಿಡದೆ ಮಾಡುವ ದಿಕ್ಕಿನತ್ತ ಎಲ್ಲರೂ ತೊಡಗಿಸಿಕೊಂಡಿದ್ದೇವೆ. ಇದೇ ರೀತಿಯ ಇನ್ನಷ್ಟು ಮನಸುಗಳು ಎಲ್ಲ ಹಳ್ಳಿಗಳಿಗೆ ನುಗ್ಗಲಿ ಮತ್ತು ಬರದ ಬೇಗೆಯಲ್ಲಿ ಬೇಯುತ್ತಿರುವ ಜನತೆಗೆ ಕೆಲಸ ದೊರಕಿಸಲು ನೆರವಾಗಲೆಂದು ಬಯಸುತ್ತೇವೆ.

ಹಾಂ ಬಿಸಿಲಿದೆ. ಏನು ಮಾಡುವುದು…? ಸೂರ್ಯನೊಂದಿಗೂ ಕದನ ಹೂಡುತ್ತ ಹಳ್ಳಿ ತಾಂಡಾಗಳಲ್ಲಿ ಸುತ್ತಾಡುತ್ತಿದ್ದೇವೆ. ಜನತೆಯ ಮುಗ್ಧತೆ, ತಾಯ್ತನದಂತಹ ಹೃದಯಕ್ಕೆ ಶರಣಾಗಿದ್ದೇವೆ. ಇದೊಂದು ಹುಚ್ಚೇ ಅನ್ನಬಹುದು. ಹುಚ್ಚಿಲ್ಲದಿದ್ದರೆ ಕೆಲಸದಲ್ಲಿ ಆನಂದ ಸಿಗಲಾರದು. ಈ ಆನಂದದಲ್ಲಿ ಪಾಲ್ಗೊಳ್ಳುವವರ ಪಟ್ಟಿ ಬೆಳೆಯಲೆನಿಸುವುದು. ಮುನ್ನಳ್ಳಿಯ ವಿಜಯಲಕ್ಷ್ಮಿ, ಸುದೇವಿ ತಮ್ಮೂರಲ್ಲದೆ ಸುತ್ತೆಲ್ಲ ಹಳ್ಳಿಗಳಿಗೂ ಸುತ್ತಾಡಿ ಜನರ ಕೈಗೆ ಕೆಲಸ ದೊರಕಿಸಲು ಶ್ರಮಿಸುತ್ತಿರುವರು…. ನಮ್ಮ ದೇವದಾಸಿ ಅಕ್ಕಂದಿರರು ಕೆಲವು ಹಳ್ಳಿಗಳ ಪಟ್ಟಿ ಮಾಡಿಕೊಂಡು ಅಲ್ಲೆಲ್ಲ ತಮ್ಮ ಶ್ರಮ ಹಾಕುತ್ತಿರುವರು..

ವಿದ್ಯಾರ್ಥಿಗಳೂ ಅಧಿಕಾರಿಗಳೂ ಬೆಂಬಲಕ್ಕೆ

ವಿದ್ಯಾರ್ಥಿಗಳೂ ಈ ಹೊತ್ತಿನಲ್ಲಿ ಹಳ್ಳಿಗಳತ್ತ ಬರಲಿ…ಕೆರೆ ಬಾವಿ ಚೆಕ್ ಡ್ಯಾಮ್, ಗೋಕಟ್ಟಾ, ಕೃಷಿಹೊಂಡಾ ನಿರ್ಮಾಣವಾದರೆ, ಹೂಳೆತ್ತಿದರೆ ಬರುವ ಮಳೆಗಾಲದಲ್ಲಿ ನೀರು ತುಂಬಿಕೊಳ್ಳಲು ಸಾಧ್ಯವಿದೆ. ಸುರಿದ ಮಳೆನೀರು ಹಿಡಿದಿಟ್ಟುಕೊಳ್ಳಲು ಏನೂ ಇಲ್ಲದಿದ್ದರೆ ಹರಿದು ಹೋಗುವುದು ಖಾತ್ರಿ. ಏನು ಪ್ರಯೋಜನ? ಹೀಗಾಗಿ ಕೆರೆ ಹೂಳೆತ್ತಿಸೋಣ, ಈ ಕೆಲಸಕ್ಕೆ ರೇಗಾ ಅಡಿಯಲ್ಲಿ ದಿನಕ್ಕೆ ರೂ.234 ಕೂಲಿ ಇದೆ. (ರೂ.224 ಕೂಲಿ, ರೂ10 ಬುಟ್ಟಿ ಸಲಿಗೆ, ಗುದ್ದಲಿಯ ಬಾಡಿಗೆ) ಜನರ ಕೈಗೆ ಕೆಲಸವಾಯ್ತು, ಕೆರೆ ಹೂಳೆತ್ತಿದ್ದಕ್ಕೆ ಮುಂದಕ್ಕೆ ಮಳೆ ನೀರು ತುಂಬಿಕೊಂಡು ನೀರಿನ ಅಂತರ್ಜಲಮಟ್ಟ ಹೆಚ್ಚಲು ಕಾರಣವೂ ಆಯ್ತು… ಮತ್ತು ಕೆಲಸವಿಲ್ಲದ್ದಕ್ಕಾಗಿ ಗುಳೆ ಹೋಗುವ ಜನರು ತಮ್ಮೂರಲ್ಲಿಯೇ ಉಳಿದು ಕೆಲಸ ಪಡೆಯಲು ಸಾಧ್ಯವಾಗುವುದು .

ಇನ್ನೊಂದು ಮಾತು ಇಲ್ಲಿ ಹೇಳಲೇಬೇಕು.. ನಮ್ಮ ಈ ಕೆಲಸಕ್ಕೆ ಸಾಮಾನ್ಯವಾಗಿ ಅಧಿಕಾರಿಗಳು ಕೈ ಜೋಡಿಸುವುದು ಕಡಿಮೆ. ಬೆಂಬಲಿಸಿದರೂ ಕಾಟಾಚಾರಕ್ಕೆ. ಆದರೆ ಕಲಬುರಗಿ ಜಿಲ್ಲೆಯ ಜಿಲ್ಲಾ ಪಂಚಾಯತ್‍ನ ಕಾರ್ಯ ನಿರ್ವಾಹಕ ಅಧಿಕಾರಿಯಾದ ಅನಿರುದ್ಧ ಶ್ರವಣ ಅಂತರಂಗ ಸಾಕ್ಷಿಯಾಗಿ ದುಡಿಯುವ ಜನತೆಯ ಪರ ಬದ್ಧತೆಯಿಂದ ನಿಂತು ಮನರೇಗಾ ಜಾರಿಗಾಗಿ ಶ್ರಮಿಸುತ್ತಿರುವುದು ಮತ್ತು ನಮ್ಮ ಹುಚ್ಚಿಗೆ ಇಂಬಾಗಿ ನಿಂತಿರುವುದು ಹೆಮ್ಮೆಯ ಸಂಗತಿಯೇ..

ಆದರೆ ಸಂಕಟದ ಮಾತೊಂದು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು… ಕೆಲಸವೇನೋ ದೊರಕಿಸಬಹುದು, ಆದರೆ ಕಡೆ ಪಕ್ಷ ಹದಿನೈದು ದಿನಕ್ಕೊಮ್ಮೆ ಕೂಲಿ ಪಾವತಿಯಾಗುತ್ತಿಲ್ಲ. ಇದರಿಂದ ತುಂಬ ಸಮಸ್ಯೆಯಾಗಿದೆ. ಇದಕ್ಕೆ ಕಾರಣವೇನು ಗೊತ್ತೇ? ಕೇಂದ್ರ ಸರಕಾರವು ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಎಂದು ಹೊಸ ಪದ್ಧತಿಯೊಂದು ಪರಿಚಯಿಸಿದೆ. ತಾನೇ ನೇವಾಗಿ  ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುವ ಕೇಂದ್ರೀಕರಣ ವ್ಯವಸ್ಥೆಯೊಂದು ತಂದಿದೆ. ಆದರೆ ಈ ಹೊಸ ಪದ್ಧತಿಯು ಕೂಲಿ ಪಾವತಿಸುವಲ್ಲಿ ಪೂರ್ತಿ ತಾಂತ್ರಿಕ ಸಮಸ್ಯೆಯಾಗಿ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಕೆಲಸ ಮಾಡಿದ ಕೂಲಿ ಕಾರ್ಮಿಕರ ಕೂಲಿ ರೂ.246 ಕೋಟಿ ರೂಪಾಯಿ ಬಾಕಿ ಇದೆ. ಬರಗಾಲದಂತಹ ಸಂದರ್ಭದಲ್ಲಿಯೂ ಹೀಗೆ ತಿಂಗಳಾನುಗಟ್ಟಲೆಕೂಲಿ ಬಾಕಿ ಉಳಿಸಿಕೊಳ್ಳುವುದು ಕಟುಕತನವಲ್ಲದೆ ಮತ್ತೇನು? ತಾಂತ್ರಿಕದೋಷ ಸರಿಪಡಿಸುವವರೆಗೆ ಜನರು ಉಪವಾಸ ಇರಲು ಸಾಧ್ಯವೇ? ಕೇಂದ್ರ ಸರಕಾರವಾಗಲಿ ರಾಜ್ಯ ಸರಕಾರವಾಗಲಿ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡುವ ಜವಾಬ್ದಾರಿ ಹೊರಬೇಕಲ್ಲವೇ? ರಾಜ್ಯ ಸರಕಾರವೇನೋ ತಾನು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದೆ. ಈ ಹಿಂದೆಯೂ ರೂ.700 ಕೋಟಿಯಷ್ಟು ಹಣ ಕೊಟ್ಟಿದೆ. ಆದರೆ ಬರಗಾಲದಲ್ಲಿ ಜನರು ಎಲ್ಲ ರೀತಿಯ ಸಂಕಟ ಸಮಸ್ಯೆಗಳನ್ನು ಎದುರಿಸುವಾಗ ಕೂಡಲೇ ಪರಿಹಾರೋಪಾಯ ಕಲ್ಪಿಸಬೇಕು. …. ಇಂದಿಗೆ ಇಷ್ಟು ಬರೆದಿರುವೆವು… ಗ್ರಾಮಗಳಲ್ಲಿನ ಇನ್ನಷ್ಟು ಅನುಭವಗಳನ್ನು ಮತ್ತೆ ನಿಮ್ಮೊಂದಿಗೆ ಹಂಚಿಕೊಳ್ಳುವೆವು..

-ನೀಲಾ ಕೆ., ಡಾ.ಮೀನಾಕ್ಷಿ ಬಾಳಿ, ಡಾ. ಪ್ರಭು ಖಾನಾಪುರೆಮ ಗಣಪತಿ ಕೋಡ್ಲೆ

Advertisements