ಸಾಮಥ್ರ್ಯವಿದ್ದರೆ `ಕೇರಳ ಮಾದರಿ ಅಭಿವೃದ್ಧಿ’ಯನ್ನು ಗುಜರಾತ್‍ನಲ್ಲಿ ಜಾರಿ ಮಾಡಿ – ಯೆಚೂರಿ ಸವಾಲು

ಸಂಪುಟ: 10 ಸಂಚಿಕೆ: 21 Sunday, May 15, 2016

ಕೇರಳದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಚುನಾವಣಾ ಪ್ರಚಾರವೂ ತೀವ್ರವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರದಲ್ಲಿ ಮಾತನ್ನಾಡುತ್ತಾ `ಬಿಜೆಪಿ ಕೂಟ’ವನ್ನು ಗೆಲ್ಲಿಸಿದರೆ ಕೇರಳವನ್ನು `ಗುಜರಾತ್ ಮಾದರಿ’ಯಲ್ಲಿ ಅಭಿವೃದ್ಧಿ ಮಾಡುವುದಾಗಿ ಕೇರಳದ ಜನತೆಗೆ ಭರವಸೆ ಕೊಡುತ್ತಿದ್ದಾರೆ. ಮೋದಿಯವರ ಈ ಮಾತು ಕೇಳಿ ಕೇರಳದ ಪ್ರಜ್ಞಾವಂತ ಜನತೆಯಂತೂ ಮನಸಾರೆ ನಕ್ಕಿರುತ್ತಾರೆ.

ಎಲ್ಲಿಯ ಕೇರಳ? ಎಲ್ಲಿಯ ಗುಜರಾತ್ !! ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರು ಈ ಹೇಳಿಕೆಗೆ ಸೂಕ್ತ ಉತ್ತರ ನೀಡಿದ್ದಾರೆ. ಅವರು `ಕೇರಳವು ತನ್ನ ಮಾದರಿಯಲ್ಲೆ ಸಂತೋಷವಾಗಿದೆ. ಸಾಮಥ್ರ್ಯವಿದ್ದರೆ ಕೇರಳ ಮಾದರಿಯನ್ನು ಗುಜರಾತ್‍ನಲ್ಲಿ ಜಾರಿಮಾಡಿ’ ಎಂದು ಸವಾಲು ಹಾಕಿದ್ದಾರೆ.  ಈ ಸವಾಲಿಗೆ ಆಧಾರವಾದ ಅಂಶಗಳಲ್ಲಿ ಕೆಲವನ್ನು ಪರಿಶೀಲಿಸೋಣ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳವು ದೇಶಕ್ಕೆ ಮೊತ್ತ ಮೊದಲ ಸ್ಥಾನದಲ್ಲಿದೆ. ಗುಜರಾತ್ ಈ ಸಾಲಿನಲ್ಲಿ 12 ನೇ ಸ್ಥಾನದಲ್ಲಿದೆ. ಇದು ಒಟ್ಟಾರೆ ಅಭಿವೃದ್ಧಿಯ ಪ್ರಶ್ನೆ. ಬಿಡಿ ಬಿಡಿಯಾಗಿಯೂ ಅಭಿವೃದ್ಧಿಯ ಹಲವು ಆಯಾಮಗಳನ್ನು ಪರಿಶೀಲಿಸಬಹುದು. ಸಾಕ್ಷರತೆಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ 18 ನೇ ಸ್ಥಾನದಲ್ಲಿದೆ. ಮನುಷ್ಯನ ಸರಾಸರಿ ಜೀವಿತಾವಧಿಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ 9 ನೇ ಸ್ಥಾನದಲ್ಲಿದೆ. ಗಂಡು-ಹೆಣ್ಣುಗಳ ಉತ್ತಮ ಅನುಪಾತದಲ್ಲಿ ಸಹ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ ಕಡೆ ಕಡೆಯ 25 ನೇ ಸ್ಥಾನದಲ್ಲಿದೆ. ಶಿಶು ಮರಣ ನಿಯಂತ್ರಿಸುವಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 21 ನೇ ಸ್ಥಾನದಲ್ಲಿದೆ. ಜನಾರೋಗ್ಯ ಸಾಧನೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 20 ನೇ ಸ್ಥಾನದಲ್ಲಿದೆ. ಬಡತನ ನಿವಾರಣೆಯಲ್ಲಿ ಕೇರಳ 2 ನೇ ಸ್ಥಾನದಲ್ಲಿದ್ದರೆ ಗುಜರಾತ್ 14 ನೇ ಸ್ಥಾನದಲ್ಲಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಕೇರಳ ಮೂರನೇ ಸ್ಥಾನದಲ್ಲಿದ್ದರೆ ಗುಜರಾತ್ 9 ಸ್ಥಾನದಲ್ಲಿದೆ. ಮನೆಗಳ ವಿದ್ಯುದೀಕರಣದಲ್ಲಿ ಕೇರಳ 5 ಸ್ಥಾನದಲ್ಲಿದ್ದರೆ ಗುಜರಾತ್ 11 ನೇ ಸ್ಥಾನದಲ್ಲಿದೆ. ಸ್ವಚ್ಛತೆಯ ವಿಷಯದಲ್ಲಿ ಕೇರಳ ದೇಶಕ್ಕೆ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 16 ನೇ ಸ್ಥಾನದಲ್ಲಿದೆ. ಜನನ ನಿಯಂತ್ರಣದಲ್ಲಿ ಕೇರಳ ಎರಡನೇ ಸ್ಥಾನದಲ್ಲಿದ್ದರೆ, ಗುಜರಾತ್ 17ನೇ ಸ್ಥಾನದಲ್ಲಿದೆ.

ಪರಿಸ್ಥಿತಿ ಹೀಗಿರುವಾಗ ಯಾರು ಯಾವುದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾದ ಪರಿಸ್ಥಿತಿ ಇದೆ. ಸಂಘಪರಿವಾರ ಇಂತಹ ಯೋಚನೆ ಮಾಡದಿದ್ದರೂ ಕೇರಳದ  ಜನರಂತೂ ಈ ಬಗೆಗೆ ತೀರ್ಮಾನಿಸುತ್ತಾರೆ.

ಎಲ್‍ಡಿಎಫ್ ಪ್ರಚಾರ ಸಾಮಾಗ್ರಿಗೆ ಬೆಂಕಿ

ಧರ್ಮಾದಮ್ ಒಂದು ವಿಧಾನ ಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್ ಅಭ್ಯರ್ಥಿ. ಮೂರು ಜನ ಅರೆಸ್ಸೆಸಿಗರ ತಂಡ ರಾತ್ರೋ ರಾತ್ರಿ ಪಿಣರಾಯಿ ವಿಜಯನ್ ಅವರ ಪ್ರಚಾರ ಸಾಮಾಗ್ರಿಗಳಿಗೆ ಬೆಂಕಿ ಇಟ್ಟಿದೆ. ಪ್ರಚಾರ ಸಾಮಾಗ್ರಿಗಳನ್ನು ಸುಡಬಹುದು. ಜನರ ಮನಸ್ಸಿನಲ್ಲಿ ಸಿಪಿಐ(ಎಂ) ಬಗೆಗೆ ಮತ್ತು ಎಲ್‍ಡಿಎಫ್ ಬಗೆಗೆ ಇರುವ ಒಲವನ್ನು ಸುಡಲಾಗದು ಎಂಬುದು ಪಾಪ ಅವರಿಗೆ ಗೊತ್ತಿಲ್ಲ.

`ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಹೊಂದಿದ, ಜಾತ್ಯತೀತ ಕೇರಳ’ಕ್ಕಾಗಿ

ಕೇರಳದಲ್ಲಿ ಇಲ್ಲಿಯವರೆಗೆ ಖಾತೆ ತೆರೆಯಲು ವಿಫಲವಾಗಿರುವ ಭಾರತೀಯ ಜನತಾ ಪಾರ್ಟಿ- ಬಿಜೆಪಿಯ ಮುಖಂಡರು ಕೇರಳದಲ್ಲಿ ಸ್ಫರ್ಧೆ ಇರುವುದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಕೂಟದ ನಡುವೆ ಎಂದೂ, ಬಿಜೆಪಿ ನೇತೃತ್ವದ ರಂಗ ಅಧಿಕಾರಕ್ಕೆ ಬರಲಿದೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಈ ಬಗೆಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಮುಖಂಡ ಪಿಣರಾಯಿ ವಿಜಯನ್ `ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಹೊಂದಿದ, ಜಾತ್ಯತೀತ ಕೇರಳ’ಕ್ಕಾಗಿ ಜನತೆ ಎಲ್‍ಡಿಎಫ್ ಅನ್ನು ಆರಿಸಿ ತರಲಿದ್ದಾರೆ. ಕಾಂಗ್ರೆಸ್, ಬಿಜೆಪಿಗಳ ಸ್ಪರ್ಧೆ ಏನಿದ್ದರೂ ಎರಡನೇ ಸ್ಥಾನಕ್ಕಾಗಿ ಎಂದು ತಿರುಗೇಟು ನೀಡಿದ್ದಾರೆ. ಇದಲ್ಲದೇ ಯುಡಿಎಫ್ ಮತ್ತು ಬಿಜೆಪಿ ನಡುವ ರಹಸ್ಯ ಒಪ್ಪಂದ-ಮ್ಯಾಚ್ ಫಿಕ್ಸಿಂಗ್ ಏರ್ಪಟ್ಟಿದೆ ಎಂದೂ ಹೇಳಿದ್ದಾರೆ.

ನಾನಾ ಗಣ್ಯರ ಪ್ರಚಾರ

ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಸೇರಿದಂತೆ  ಚುನಾವಣೆಯಲ್ಲಿ  ಸಿಪಿಐ(ಎಂ) ಪಕ್ಷದ ನಾನಾ ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಪಟ್ಟಣತಿಟ್ಟ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಪ್ರಕಾಶ್ ಕಾರಟ್ ಪ್ರಚಾರ ಕೈಗೊಂಡಿದ್ದಾರೆ. ತ್ರಿಪುರದ ಮುಖ್ಯಮಂತ್ರಿ ಹಾಗೂ ಪಾಲಿಟ್ ಬ್ಯೂರೋ ಸದಸ್ಯರಾದ ಮಾಣಿಕ್ ಸರಕಾರ್ ಸೇರಿದಂತೆ  ಪಾಲಿಟ್ ಬ್ಯೂರೋ ಸದಸ್ಯರುಗಳಾದ ಬೃಂದಾ ಕಾರಟ್ ಕೋಜಿಕ್ಕೋಡ್ ನಲ್ಲಿ, ಸುಭಾಷಿಣಿ ಆಲಿ ಅಲಪುಜದಲ್ಲಿ, ತಿರುವನಂತಪುರದಲ್ಲಿ ಬಿ.ವಿ. ರಾಘವುಲು, ಪ್ರಚಾರ ಭಾಷಣಗಳನ್ನು ಮಾಡಿದ್ದಾರೆ. ಕೋಡಿಯೇರಿ ಬಾಲಕೃಷ್ಣನ್ ಅವರಲ್ಲದೇ ವರದರಾಜನ್ ಅವರು ಜೊತೆಗೂಡಿದ್ದಾರೆ.

ಬಿ.ವಿ. ರಾಘವುಲು ಅವರು ಮಾನತಾಡುತ್ತಾ ಎಲ್‍ಡಿಎಫ್ ನದು ಜನಪರ ಅಭಿವೃದ್ಧಿಯ ಕಣ್ಣೋಟ, ಆದರೆ ಯುಡಿಎಫ್ ನದು ಕಾರ್ಪೋರೇಟ್ ಪರವಾದ ಅಭಿವೃದ್ಧಿಯ ಕಣ್ಣೋಟ ಎಂದು ತೀವ್ರವಾಗಿ ಟೀಕಿಸಿದ್ದಾರೆ.

-ಆರ್. ರಾಮಕೃಷ್ಣ

Advertisements