ಬಂಗಾಲದ ಜನತೆ ನಮಗೆ ಮತ ನೀಡುತ್ತಿದ್ದಾರೆ ಎಂಬ ಸೂಚನೆಗಳು ಸಿಗುತ್ತಿವೆ- ಯೆಚೂರಿ

ಸಂಪುಟ: 10 ಸಂಚಿಕೆ: 20 Sunday, May 8, 2016

ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮತದಾನದ ಎಲ್ಲ ಹಂತಗಳು ಪೂರ್ಣಗೊಂಡಿವೆ. ಸುಮಾರಾಗಿ ಎಲ್ಲ ಹಂತಗಳಲ್ಲೂ ಮತದಾನ 80ಶೇ.ದಷ್ಟಿತ್ತು. ಮಾಧ್ಯಮ ವರದಿಗಳ ಪ್ರಕಾರ ಮತದಾನದ ಶೇಕಡಾವಾರು ಹೀಗಿದೆ:

ಹಂತ 1ಎ:80.0; 1ಬಿ:79.5; 2:79.7; 3:79.2; 4:78.1;5:81.6 ಮತ್ತು ಹಂತ 6: 84.2

ಚುನಾವಣೆ ಆರಂಭವಾಗುವ ಮೊದಲು ಟಿಎಂಸಿ ಸರಕಾರದ ಕಾರ್ಯವೈಖರಿ ಏನೇ ಇರಲಿ, ಅದು ಮತ್ತೆ ಅಧಿಕಾರಕ್ಕೆ ಬರುತ್ತದೆ, ಬಹುಶಃ ಸಂಖ್ಯಾಬಲ ತುಸು ಇಳಿಯಬಹುದು ಎಂದು ಒಪಿನಿಯನ್ ಪೋಲ್‍ಗಳು ಹೇಳುತ್ತವೆ ಎನ್ನಲಾಗುತ್ತಿತ್ತು. ಆದರೆ ಮತದಾನ ಮುಗಿಯುವ ವೇಳೆಗೆ ಚಿತ್ರ ಬದಲಾದಂತೆ ಕಾಣುತ್ತದೆ. ಮಾಧ್ಯಮಗಳು ಎಡರಂಗ ಮತ್ತು ಕಾಂಗ್ರೆಸ್ ಸರಕಾರ ರಚಿಸುವ ಬಗ್ಗೆ ಮಾತನಾಡುತ್ತಿವೆ. ಕೊಲ್ಕತಾದ ಪ್ರಮುಖ ದೈನಿಕ ‘ದಿ ಟೆಲಿಗ್ರಾಫ್’ ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರನ್ನು ಸಂದರ್ಶಿಸಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ “ನಮ್ಮ ವರದಿಗಳು ಜನರು ನಮಗೆ ಮತ ನೀಡುತ್ತಿದ್ದಾರೆ ಎಂದು ಸೂಚಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಮಾಡುವಾಗ ಶಾರದಾ ಚಿಟ್‍ಫಂಡ್ ವಿಷಯ ಬಂದಾಗಲೆಲ್ಲ ಆಕ್ರೋಶ ವ್ಯಕ್ತವಾಗುತ್ತಿತ್ತು. ಹಳ್ಳಿಗರಿಗೆ ತಮ್ಮ ಜೀವನಪರ್ಯಂತದ ಉಳಿತಾಯಗಳನ್ನು ಕಳಕೊಳ್ಳುವುದು ಒಂದು ದೊಡ್ಡ ಸಂಗತಿಯೇ ಸರಿ. ನಾರದಾ ಕುಟುಕು ಕಾರ್ಯಾಚರಣೆದ ಪ್ರಭಾವ ಎಷ್ಟಿದೆಯೆಂದು ಹೇಳಲಾರೆ. ಆದರೆ ಶಾರಧಾ ಚಿಟ್‍ಪಂಡ್ ಒಂದು ಪ್ರಶ್ನೆಯಂತೂ ಆಗಿದೆ” ಎಂದರು.

ಸಿಪಿಐ(ಎಂ) ಮುಖಂಡರಾದ ಬುದ್ಧದೇಬ್ ಭಟ್ಟಾಚಾರ್ಯ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಂದೇ ವೇದಿಕೆಯಲ್ಲಿ ಪ್ರಚಾರ ನಡೆಸಿದ್ದರ ಬಗ್ಗೆ ಕೇಳಿದಾಗ “ಇದು ಮುಖ್ಯವಾಗಿ ಕೆಳಗಿನಿಂದ ಉಂಟಾದ ಪ್ರಭಾವದಿಂದಾಗಿ ಸಂಭವಿಸಿತು. ಮೇಲಿನಿಂದ ಯಾರೂ ಇದನ್ನು ಮಾಡಲಿಲ್ಲ. ಜನತೆಯಿಂದ ಎದ್ದು ಬಂದ ಭಾವನೆಗಳಿಂದಾಗಿ ಇದು ಏರ್ಪಟ್ಟಿತು. ಇಲ್ಲವಾದರೆ ಕಾಂಗ್ರೆಸ್‍ನೊಂದಿಗೆ ಬುದ್ಧದಾ ಅವರನ್ನು ಊಹಿಸಿಕೊಳ್ಳಲು ಸಾಧ್ಯವೇ” ಎಂದು ಪ್ರಶ್ನಿಸಿದರು.

ಈ ಸಭೆಯ ವೇಳೆಗೆ ಅದಾಗಲೇ 294ರಲ್ಲಿ 216 ಸ್ಥಾನಗಳಲ್ಲಿ ಚುನಾವಣೆ ಮುಗಿದಿತ್ತು. ಇದನ್ನು ಮೊದಲೇ ಮಾಡಿದ್ದರೆ ಪ್ರಭಾವ ಇನ್ನೂ ಹೆಚ್ಚಾಗುತ್ತಿತ್ತಲ್ಲವೇ ಎಂದು ಕೇಳಿದಾಗ ಯೆಚೂರಿ “ಹಾಗನ್ನುವುದು ಸರಿಯಾಗದು. ವಾಸ್ತವವಾಗಿ ಆಗಲೇ ಪ್ರಭಾವ ಉಂಟಾದ್ದರಿಂದ ಇದು ಸಂಭವಿಸಿತು, ಇದರ ಕೀರ್ತಿ ಬಂಗಾಲದ ಜನತೆಗೆ ಸಲ್ಲಬೇಕು” ಎಂದರು.

ಎಡರಂಗ ಕಾಂಗ್ರೆಸಿನೊಂದಿಗೆ ಸೇರಿ ಸರಕಾರ ರಚಿಸುವ ಬಗ್ಗೆ ಕೇಳಿದಾಗ ಅದಿನ್ನೂ ನಮ್ಮ ಅಜೆಂಡಾದಲ್ಲಿ ಚರ್ಚೆಗೆ ಬಂದಿಲ್ಲ, ನಾವು ಆ ಬಗ್ಗೆ ಯೋಚಿಸಿಲ್ಲ ಈ ಸಮರ ಮುಗಿಯಲಿ ಎಂದರು.

ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿಯ ಭಾಗವಾಗಿ ಜಮೀನು ಕಳಕೊಂಡವರಿಗೆ ಜೀವನಾಧಾರ ಕಲ್ಪಿಸಲು ಹುಟ್ಟಿಕೊಂಡ ‘ಸಿಂಡಿಕೇಟ್’ಗಳು ಈಗ ಟಿಎಂಸಿ ಆಳ್ವಿಕೆಯಲ್ಲಿ ಮಾಫಿಯಾಗಳಾಗಿ ಬಿಟ್ಟಿವೆ, ಇದರ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತಾಡಿದ್ದಾರೆ, ಪ್ರಧಾನ ಮಂತ್ರಿಗಳೂ ಮಾತಾಡಿದ್ದಾರೆ, ಸಿಪಿಐ(ಎಂ)ನ ನಿಲುವೇನು ಎಂದು ಕೇಳಿದಾಗ, ಸೀತಾರಾಮ್ ಯೆಚೂರಿಯವರು “ನಾವು ಅದನ್ನು ಎದುರಿಸಿ ನಿಲ್ಲಬೇಕಾಗಿದೆ, ಅದನ್ನು ನಿಲ್ಲಿಸಿ ಬಿಡಬೇಕಾಗಿದೆ. ಅವುಗಳ ಕಾರ್ಯಾಚರಣೆ ಈಗ ಮಾಫಿಯಾದಂತೆಯೇ ಇದೆ. ಎಡರಂಗ ಆಳ್ವಿಕೆಯ ಕೊನೆಯ ಭಾಗದ ವೇಳೆಗೆ ಈ ಪ್ರವೃತ್ತಿಗಳು ಕಾಣಲಾರಂಭಿಸಿದ್ದವು. 20ವರ್ಷಗಳ ನಮ್ಮ ಸರಕಾರದ ನಂತರ ಹಲವು ಮಂದಿ ನಮ್ಮತ್ತ ಬರಲಾರಂಭಿಸಿದ್ದರು, ನಮ್ಮ ಸಿದ್ಧಾಂತದಿಂದಾಗಿ ಅಲ್ಲ,, ಬದಲಾಗಿ, ನಾವು ಅಧಿಕಾರದಲ್ಲಿ ಇದ್ದುದರಿಂದಾಗಿ. ಅವರು ನಿಜವಾಗಿ ಏನು ಮಾಡುತ್ತಿದ್ದಾರೆ ಎಂದು ಅರಿಯಲು ಸಮಯ ಹಿಡಿಯಿತು. ಆದರೆ ಆ ವೇಳೆಗಾಗಲೇ ಕೇಡು ಉಂಟಾಗಿತ್ತು. ಅದಕ್ಕೆ ನಾವು ಬೆಲೆ ತೆತ್ತಿದ್ದೇವೆ. ಅದನ್ನು ಕೈಗೆತ್ತಿಕೊಳ್ಳಲೇಬೇಕು, ಅದೊಂದು ಮಾಫಿಯಾ ಎಂಬ ಕಾರಣಕ್ಕಷ್ಟೇ ಅಲ್ಲ, ಅದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಅತಿ ದೊಡ್ಡ ಅಂಶ ಎಂಬ ಕಾರಣಕ್ಕಾಗಿ. ಕಾನೂನು-ವ್ಯವಸ್ಥೆಯನ್ನು ಮತ್ತೆ ತರಲು ಅದನ್ನು ನೇರವಾಗಿ ಎದುರಿಸಲೇ ಬೇಕು” ಎಂದರು.

ಮತ್ತೆ ಅಧಿಕಾರಕ್ಕೆ ಬಂದರೆ ಆದ್ಯತೆಗಳೇನು ಎಂದು ಕೇಳಿದಾಗ ಕೈಗಾರಿಕೀಕರಣವಿಲ್ಲದೆ ಉದ್ಯೋಗಾವಕಾಶ ನಿರ್ಮಾಣ ಮಾಡದೆ ಮುಂನ್ನಡೆ ಸಾಧ್ಯವಿಲ್ಲ. ಅದು ಸರಿಯಾದ ಧೋರಣೆಯಾಗಿತ್ತು ಎಂದು ಭಾವಿಸುತ್ತೇನೆ, ಅದು ಹಾಗೆಯೇ ಮುಂದುವರೆಯುತ್ತದೆ ಎಂದು ಯೆಚೂರಿ ಉತ್ತರಿಸಿದರು. ಈಗ ಬಂಗಾಲದ ಭವಿಷ್ಯಕ್ಕೆ ಉದ್ಯೋಗಗಳ ಸೃಷ್ಟಿ ಬೃಹತ್ ಪ್ರಮಾಣದಲ್ಲಿ ನಡೆಯಬೇಕಾಗಿದೆ, ಬಂಗಾಲದ ಯುವಜನರಿಗೆ ಇಲ್ಲಿ ದಾರಿಗಳನ್ನು ತೆರೆದು ಕೊಡಬೇಕಾಗಿದೆ. ಮತ್ತು ಮಹಿಳೆಯರ ಸುರಕ್ಷಿತತೆಯ ಪ್ರಶ್ನೆಯೂ ಇದೆ. ತಮ್ಮ ವಿದ್ಯಾರ್ಥಿ ದೆಸೆಯ ದಿನಗಳಲ್ಲಿ ಇದೊಂದು ಸಮಸ್ಯೆಯೇ ಆಗಿರಲಿಲ್ಲ ಎಂದು ಹೇಳಿದರು.

Advertisements