ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಂದುವರೆಸಲು ತೀರ್ಮಾನ

ಸಂಪುಟ: 10 ಸಂಚಿಕೆ: 23 Sunday, May 29, 2016

ಪ್ರಸ್ತುತ್ತ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೂ ಹಾಲಿ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರನ್ನು ಮುಂದಿನ 2016-17ನೇ ಶೈಕ್ಷಣಿಕ ವರ್ಷಕ್ಕೆ ಮುಂದುವರೆಸಬೇಕು. ವೇತನ ಹೆಚ್ಚಿಸಬೇಕೆಂದು ಮೇ 2ರಂದು ಉನ್ನತ ಶಿಕ್ಷಣ ಸಚಿವರಾದ ಟಿ.ಬಿ. ಜಯಚಂದ್ರರವರ ನಿವಾಸದ ಎದುರು ಅತಿಥಿ ಉಪನ್ಯಾಸಕರು ಧರಣಿ ನಡೆಸಿದರು.

ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಬಿ.ರಾಜಶೇಖರಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿ ಮಾನ್ಪಡೆ, ರಾಜ್ಯಾಧ್ಯಕ್ಷರಾದ ಶ್ರೀನಿವಾಸ ಚಾರ್, ಉಡುಪಿಯ ಜಿಲ್ಲಾಧ್ಯಕ್ಷರಾದ ರಂಜಿತ್, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಎನ್.ಟಿ.ನಾಯಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖಂಡರಾದ ಸವಿತಾ ಹಾಗೂ ತುಮಕೂರು ಜಿಲ್ಲೆಯ ಡಾ. ಮಂಜುಳ ಸೇರಿ 7 ಜನರ ನಿಯೋಗದ ಜೊತೆ ಮಾನ್ಯ ಉನ್ನತ ಶಿಕ್ಷಣ ಸಚಿವರು ವಿಕಾಸ ಸೌಧದಲ್ಲಿ ಮಾತುಕತೆಗೆ ಆಹ್ವಾನಿಸಿ ಸಭೆಯನ್ನು ನಡೆಸಿದರು.

ಸಚಿವರ ಜೊತೆ ವಾಗ್ವಾದ: ಉನ್ನತ ಶಿಕ್ಷಣ ಸಚಿವರ ಜೊತೆ ನಿಯೋಗ ಚರ್ಚೆ ಮಾಡುವ ಸಂದರ್ಭದಲ್ಲಿ ವಾಗ್ವಾದ ನಡೆದು, ತಾವು ಇಚ್ಛಾಶಕ್ತಿಯನ್ನು ವ್ಯಕ್ತಪಡಿಸುತ್ತಿದ್ದೀರಿ, ಆದರೆ ಜಾರಿಯಾಗುತ್ತಿಲ್ಲ. ನಮ್ಮನ್ನು ಮುಂದುವರೆಸುತ್ತೇವೆ ಆಥವಾ ಮುಂದುವರೆಸುವುದಿಲ್ಲ ಎಂಬ ತೀರ್ಮಾನಕ್ಕೆ ಬನ್ನಿ ಎಂದು ನಿಯೋಗ ಒತ್ತಾಯಿಸಿತು.

ಈ ಸಂಧರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಬರಮಾಡಿಕೊಂಡು ಸಭೆಯನ್ನು ಮುಂದುವರೆಸಿದ ಮಾನ್ಯ ಉನ್ನತ ಶಿಕ್ಷಣ ಸಚಿವರು, ನಮ್ಮ ಬೇಡಿಕೆಗೆ ಸ್ಪಂದಿಸಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವಷ್ಟು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಾಗ, ಪ್ರಸಕ್ತ ವರ್ಷ ಸೇವೆಯಲ್ಲಿರುವವರನ್ನು ವಯೋಮಿತಿ ಮತ್ತು ಸೇವಾ ಹಿರಿತನದ ಆಧಾರದಲ್ಲಿ ಮುಂದುವರೆಸಲಾಗುವುದು. ಇದರ ಜೊತೆಗೆ ಕಳೆದ ಜನವರಿ ತಿಂಗಳಲ್ಲಿ ಪ್ರತಿಭಟನೆ ನಿರತ ಉಪನ್ಯಾಸಕರ ವೇತನ ತಡೆಹಿಡಿದಿದ್ದನ್ನು, ನಂತರದ ದಿನಗಳಲ್ಲಿ ಪಾಠ ಪ್ರವಚನಗಳನ್ನು ಮಾಡಿ ಮುಗಿಸಿರುವ ಉಪನ್ಯಾಸಕರಿಗೆ ವೇತನ ಕೊಡಲಾಗುವುದೆಂದು ತೀರ್ಮಾನಕ್ಕೆ ಬಂದರು.

ನಂತರದಲ್ಲಿ ಧರಣಿ ನಿರತ ಅತಿಥಿ ಉಪನ್ಯಾಸಕರು ರಾಜ್ಯ ಮಟ್ಟದ ಸಭೆ ನಡೆಸಿ, ಮುಂದೆ ರಾಜ್ಯ ಸರಕಾರದ ನಡೆಯನ್ನು ನೋಡಿಕೊಂಡು ಮುಂದಿನ ಹೋರಾಟವನ್ನು ತೀರ್ಮಾನಿಸೋಣ ಎಂದು ಅಭಿಪ್ರಾಯಕ್ಕೆ ಬರಲಾಗಿದೆ.

Advertisements