ಈ ಬಾರಿಯ ಅಮೆರಿಕಾ ಭೇಟಿ: ಹೊಸ ಪೇಟೆಂಟ್ ಧೋರಣೆಯ ಉಡುಗೊರೆ ಮತ್ತು ಕೃಷಿ ಮಂತ್ರಾಲಯದಲ್ಲೂ ಒಂದು ತಿಪ್ಪರಲಾಗ

ಸಂಪುಟ: 10 ಸಂಚಿಕೆ: 23 date: Sunday, May 29, 2016
ಮೇ 12ರಂದು ‘ಅಚ್ಛೇ ದಿನ್’ ಸಂಪುಟ ‘ರಾಷ್ಟ್ರೀಯ ಬೌದ್ಧಿಕ ಹಕ್ಕುಗಳ ಧೋರಣೆ’ಗೆ ಮಂಜೂರಾತಿ ನೀಡಿದೆ. ‘ಸೃಜನಾತ್ಮಕ ಭಾರತ, ನವೀನತೆಯ ಭಾರತ’ ಎಂಬುದು ಇದರ ಘೋಷವಾಕ್ಯ. ಸಾಮಥ್ರ್ಯಗಳನ್ನು, ಸಂಸ್ಥೆಗಳನ್ನು ಮತ್ತು ಜಾಗೃತಿಯನ್ನು ಬೆಳೆಸುವ ಕಣ್ಣೊಟ ಹೊಂದಿರುವ, ಸಂಶೋಧನೆ ಮತ್ತು ಅಭಿವೃದ್ಧಿಗೆ, ನವೀನ ಶೋಧಗಳಿಗೆ ಪ್ರೋತ್ಸಾಹ ಕೊಡುವ ಹಾಗೂ ಪಾರಂಪರಿಕ ಜ್ಞಾನದತ್ತವೂ ನೋಡುವ ಈ ಧೋರಣೆ ಭಾರತದ ಮುನ್ನಡೆಗೆ ಒಂದು ಮಹಾನ್ ಹೆಜ್ಜೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಗಳು ವರ್ಣಿಸಿದ್ದಾರೆ. ಆದರೆ ಈ ರಂಗದ ಪರಿಣಿತರಿಗೆ ಈ ಬಗ್ಗೆ ಹಲವು ಸಂದೇಹಗಳಿವೆ. ಪ್ರಧಾನಿಗಳ ಮತ್ತೊಂದು ಅಮೆರಿಕಾ ಭೇಟಿಯ ಮುನ್ನಾದಿನ ಇದನ್ನು ಪ್ರಕಟಿಸಿರುವುದು ಈ ಸಂದೇಹಗಳನ್ನು ಗಟ್ಟಿಗೊಳಿಸಿದೆ.

ಔಷಧಿಗಳ ಲಭ್ಯತೆಯ ಕ್ಷೇತ್ರದ ಸಂಶೋಧಕರಾದ ಅಚಲ್ ಪ್ರಭಾಲ ಮತ್ತು ಅಜೀಂ ಪ್ರೇಮ್ ಜಿ  ವಿಶ್ವದ್ಯಾಲಯದ ಪ್ರಾಧ್ಯಾಪಕ ಸುಧೀರ್ ಕೃಷ್ಣಸ್ವಾಮಿ ಇದು ಭಾರತ ತನ್ನ ಪೇಟೆಂಟ್(ಬೌದ್ಧಿಕ ಹಕ್ಕುಗಳ) ಕಾನೂನುಗಳನ್ನು  ಬದಲಿಸುವದಿಲ್ಲ ಎಂಬ ಅಚ್ಚುಕಟ್ಟಾದ ಘೋಷಣೆಯನ್ನು ಅಮೆರಿಕಾ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ನೆಮ್ಮದಿ ಮತ್ತು ಸಂತೋಷ ನೀಡುವ ಬೆಟ್ಟದಷ್ಟು ತಂಪನೆಯ ಗಾಳಿಯ ನಡುವೆ ತೂರಿಸಿಟ್ಟಿದೆ ಎಂದು ಇದನ್ನು ವರ್ಣಿಸಿದ್ದಾರೆ (ದಿ ಹಿಂದು, ಮೇ 25). ಇದು ‘ಸೋಗಿನ ಒಂದು ಮಹಾ ಕಸರತ್ತು’  ಎನ್ನುವುದನ್ನು ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

ಈ ದಸ್ತಾವೇಜಿನಲ್ಲಿ ‘ಅವೇರ್ ನೆಸ್’(ಜಾಗೃತಿ) ಎಂಬ ಪದ ಕನಿಷ್ಟ 20 ಬಾರಿ ಬಂದಿದೆ ಹಾಗೂ ‘ಟ್ರೆಡಿಶನಲ್ ನಾಲೆಡ್ಜ್’(ಸಾಂಪ್ರದಾಯಿಕ ಜ್ಞಾನ) ಎಂಬ ಪದ 22 ಬಾರಿ ಬಂದಿದೆ ಎನ್ನುವ ಅವರು ಹೆಚ್ಚೆಚ್ಚು ಬೌದ್ಧಿಕ ಹಕ್ಕು ಎಂದರೆ ಹೆಚ್ಚೆಚ್ಚು ನವೀನ ಶೋಧನೆಗಳು ಎಂಬ ಪಾಶ್ಚಿಮಾತ್ಯ ಕಟ್ಟುಕತೆಯ ಗಿಳಿಪಾಠ ಒಪ್ಪಿಸುತ್ತ, ಸ್ಥಳೀಯ ಜ್ಞಾನದ ಖಾಸಗೀಕರಣಕ್ಕೆ ಅರ್ಥಹೀನವಾದ ಪ್ರೋತ್ಸಾಹ  ಕೊಡುತ್ತ ಈ ಧೋರಣೆ ಒಂದು ಉತ್ತಮ ಅವಕಾಶವನ್ನು ಕಳಕೊಂಡಿದೆ ಎನ್ನುತ್ತಾರೆ. ಇದು ಪಾಶ್ಚಿಮಾತ್ಯ ನವ-ಉದಾರವಾದ ಮತ್ತು ದೇಶೀ ಕೋಮುವಾದದ ಸ್ಫೋಟಕ ಮಿಶ್ರಣದ ಇನ್ನೊಂದು ಮಾದರಿ ಎಂದರೆ ತಪ್ಪಾಗುತ್ತದೆಯೇ?

ಈಗಿರುವ ಭಾರತದ ಪೇಟೆಂಟ್ ಕಾನೂನು ನವೀನತೆಯನ್ನು ಬೆಂಬಲಿಸುತ್ತಲೇ ಕೈಗೆಟಕುವ ಬೆಲೆಗಳಲ್ಲಿ ಔಷಧಿಗಳ ಲಭ್ಯತೆಗೂ ಅವಕಾಶ ಕಲ್ಪಿಸಿದ್ದು ಕಾನೂನು ರೂಪಿಸುವಲ್ಲಿ ಒಂದು ನವೀನತೆಯನ್ನು ತಂದಿತ್ತು. ದಕ್ಷಿಣ ಆಫ್ರಿಕಾ ಮತ್ತು ಬ್ರೆಝಿಲ್ ಇದರಿಂದ  ಪ್ರೇರಿತರಾಗಿದ್ದು ತಮ್ಮ ದೇಶದಲ್ಲಿ ಇಂತಹ ಪೇಟೆಂಟ್ ಕಾನೂನುಗಳನ್ನು ತರಲು ಮುಂದಾದವು.  ನಮ್ಮ ಪ್ರಧಾನಿಗಳ ವಿದೇಶಿ ಪ್ರವಾಸಗಳು ಭಾರತದ ಹೆಮ್ಮೆಯನ್ನು ವರ್ಧಿಸಿವೆ ಎನ್ನುತ್ತಾರೆ ಸಂಘ ಪರಿವಾರದ ಮಂದಿ. ಆದರೆ  ಪೇಟೆಂಟ್ ರಂಗದಲ್ಲಿ ನಿಜವಾಗಿಯೂ ಈಗಾಗಲೇ ಗಳಿಸಿರುವ ಭಾರತದ ನೇತೃತ್ವದ ಸ್ಥಾನವನ್ನು ಗಟ್ಟಿಗೊಳಿಸುವ ಅವಕಾಶವನ್ನು ಈ ಹೊಸ ಧೋರಣೆ ಕಳಕೊಂಡಿದೆ ಎಂದು ಈ ಇಬ್ಬರು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತದ ಪೇಟೆಂಟ್ ಕಾನೂನಿನ ಮೇಲೆ ಅಮೆರಿಕಾ ತನ್ನ ಸೂಪರ್ 301 ಕಾನೂನಿನ ಮೂಲಕ ಒತ್ತಡ ಹಾಕುತ್ತಿದೆ. ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ಯ ಸದಸ್ಯತ್ವ ಪಡೆಯಲು ಭಾರತ ತನ್ನ ಪೇಟೆಂಟ್ ಕಾನೂನನ್ನು ಅದರ ‘ಟ್ರಿಪ್ಸ್’ ಸಂಧಿಗೆ ಅನುಗುಣವಾಗುವಂತೆ ಬದಲಿಸಿತ್ತು. ಆದರೆ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಅದರಿಂದಲೂ ತೃಪ್ತಿಯಿಲ್ಲ. ಅವು ನಮ್ಮ ಪೇಟೆಂಟ್ ಕಾನೂನುಗಳನ್ನು ಇನ್ನಷ್ಟು ಬಲಪಡಿಸಬೇಕು, ಅಂದರೆ ಅವುಗಳ ಪೇಟೆಂಟ್ ಹುನ್ನಾರಗಳಿಗೆ ಮತ್ತಷ್ಟು ಅವಕಾಶ ಮಾಡಿಕೊಡುವಂತೆ ಇರಬೇಕು ಎಂದು ಒತ್ತಾಯಿಸುತ್ತಲೇ ಇವೆ. ಮೇ 12ರಂದು ಮೋದಿ ಸಂಪುಟ ಮಂಜೂರು ಮಾಡಿರುವ ಈ ಧೋರಣೆ ಆ ದಿಕ್ಕಿನಲ್ಲಿರುವಂತದ್ದು ಎಂದು ಈ ರಂಗದ ಇನ್ನೊಬ್ಬ ತಜ್ಞ ಡಾ. ದಿನೇಶ್ ಅಬ್ರೋಲ್ ಹೇಳುತ್ತಾರೆ(ಪೀಪಲ್ಸ್ ಡೆಮಾಕ್ರಸಿ, ಮೇ 22).

ಜೂನ್ 7-8ರಂದು ಪ್ರಧಾನಿಗಳು ಅಮೆರಿಕಾಕ್ಕೆ ಎರಡು ವರ್ಷಗಳಲ್ಲಿ ನಾಲ್ಕನೇ ಭೇಟಿಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಈ ಹೊಸ ಪೇಟೆಂಟ್ ಧೋರಣೆಯನ್ನು ಪ್ರಕಟಿಸಿರುವುದು ಬಹಳ ಮಹತ್ವದ್ದು ಎನ್ನುತ್ತಾರೆ ಡಾ.ಅಬ್ರೋಲ್. ಈ ಧೋರಣೆ ಪೇಟೆಂಟ್ ಕಾನೂನು, ಟ್ರೇಡ್ ಮಾಕ್ರ್ಸ್ ಕಾನೂನು, ಡಿಸೈನ್ ಕಾನೂನು, ಸರಕುಗಳ ಭೌಗೋಳಿಕ ಸೂಚಕಗಳ ಕಾನೂನು, ಕಾಪಿರೈಟ್ ಕಾನೂನು, ಸಸ್ಯ ವೈವಿಧ್ಯ ರಕ್ಷಣೆ ಕಾನೂನು, ರೈತರ ಹಕ್ಕುಗಳ ಕಾನೂನು, ಸೆಮಿಕಂಡಕ್ಟರ್ ಐಸಿ ಡಿಸೈನ್ ಕಾನೂನು ಮತ್ತು ಜೀವಶಾಸ್ತ್ರೀಯ ವೈವಿಧ್ಯತೆಯ ಕಾನೂನು ಇವನ್ನೆಲ್ಲ ನಿರ್ವಹಿಸುವಂತದ್ದು. ಇದರಿಂದ ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾದರೆ, ಭಾರತೀಯ ಜನತೆ ದೇಶೀಯ ತಂತ್ರಜ್ಞಾನ ಮತ್ತು ಕೈಗಾರಿಕಾ ಸಾಮಥ್ರ್ಯದ ಅಭಿವೃದ್ಧಿಗೆ ಹಲವಾರು ಕಂಟಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಬ್ರೋಲ್ ಹೇಳುತ್ತಾರೆ.

ಮುಖ್ಯವಾಗಿ ಔಷಧಿಗಳು, ಆಹಾರ, ಪರಿಸರ ರಕ್ಷಣೆ ಮುಂತಾದವುಗಳಲ್ಲಿ ಭಾರತದ ಜನತೆ, ವಿಶೇಷವಾಗಿ ರೈತರು ಅಮೆರಿಕನ್ ಮತ್ತು ಯುರೋಪಿಯನ್ ಗುತ್ತೇದಾರಿಗಳ ಅಟಾಟೋಪಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕಾ ಭೇಟಿಯಲ್ಲಿ ಒಂದು ಉಡುಗೊರೆಯನ್ನು ನಮ್ಮ ಪ್ರಧಾನಿಗಳು ಕೊಂಡೊಯ್ಯಬೇಕಾಗಿತ್ತು. ಅದು ಈ ಬೌದ್ಧಿಕ ಹಕ್ಕುಗಳ ಧೋರಣೆ ಎನ್ನುತ್ತಾರೆ ದಿನೇಶ್ ಅಬ್ರೋಲ್.

‘ಅಚ್ಛೇದಿನ್’ ಸರಕಾರ ಎರಡು ವರ್ಷಗಳನ್ನು ಪೂರೈಸುವ ವೇಳೆಗೆ ನಮ್ಮ ಧೀರ ಪ್ರಧಾನಿ ಭಾರತದ ಜನತೆಯ ಹಿತಗಳನ್ನು ಬಲಿಗೊಟ್ಟು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಗೆ ‘ಅಚ್ಛೇದಿನ್’ಗಳ ಉಡುಗೊರೆಯನ್ನು ಹೊತ್ತು ಅಮೆರಿಕಾಕ್ಕೆ ಹೋಗುತ್ತಿದ್ದಾರೆ ಎಂಬುದು ಈ ಮೂವರು ತಜ್ಞರ ವಿಶ್ಲೇಷಣೆಗಳಿಂದ ಕಂಡು ಬರುವ ಸಂಗತಿ.

ಇನ್ನೊಂದು ತಿಪ್ಪರಲಾಗ-ಜಿಎಂ ಬೀಜಗಳ ರಾಯಲ್ಟಿಯಲ್ಲಿ ಮಾನ್ಸೆಂಟೋಗೆ ರಿಯಾಯ್ತಿ!

ಇತ್ತೀಚೆಗೆ ಮೋದಿ ಸರಕಾರದ ಕೃಷಿ ಮಂತ್ರಾಲಯ ಕೃಷಿ ತಂತ್ರಜ್ಞಾನದ ಕಂಪನಿಗಳಿಗೆ ಅವರ ತಳಿ ಮಾರ್ಪಾಡಿನ(ಜಿಎಂ) ಬೀಜಗಳಿಗೆ ಕೊಡುವ ರಾಯಧನ(ರಾಯಲ್ಟಿ)ವನ್ನು ಮೊದಲ 5ವರ್ಷಗಳಲ್ಲಿ 10ಶೇ.ಕ್ಕೆ ಮತ್ತು ನಂತರ ಪ್ರತಿವರ್ಷ 10ಶೇ. ಕಡಿತ ಮಾಡಲಾಗುವುದು, ಈ ಬಗ್ಗೆ ಈಗಾಗಲೇ ನೀಡಲಾಗಿರುವ ಲೈಸೆನ್ಸ್ ಗಳು ರದ್ದಾಗುತ್ತವೆ, 30ದಿನಗಳೊಳಗೆ ಈ ಬಗ್ಗೆ ಕಂಪನಿಗಳು ಸರಕಾರದೊಂದಿಗೆ ಮರು ಮಾತುಕತೆ ನಡೆಸಬೇಕು ಎಂದು ಆದೇಶ ಹೊರಡಿಸಿತ್ತು.

ಆದರೆ ಈಗ ಆ ಆದೇಶವನ್ನು ತಡೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಈ ಆದೇಶದಿಂದ ಮುಖ್ಯವಾಗಿ ಇಂತಹ ಬೀಜಗಳ ಗುತ್ತೇದಾರಿಕೆ ಹೊಂದಿರುವ ಅಮೆರಿಕಾದ ಮಾನ್ಸೆಂಟೋ ಕಂಪನಿಗೆ ಬಹಳ ತೊಂದರೆಯಾಗುತ್ತಿತ್ತು. ಪ್ರಧಾನ ಮಂತ್ರಿಗಳ ಕಚೇರಿಯ ಮಧ್ಯಪ್ರವೇಶದಿಂದಾಗಿ, ಹಣಕಾಸಿನ ಮಂತ್ರಿಗಳ ಇತ್ತೀಚಿನ ಮೂರು ತಿಪ್ಪರಲಾಗಗಳ ನಂತರ  ಕೃಷಿ ಕ್ಷೇತ್ರದ ಈ ತಿಪ್ಪರಲಾಗ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆರೆಸ್ಸೆ ಸನ ಒಂದು ಸಂಘಟನೆಯ ಒತ್ತಡದಿಂದ ಹೊರಬಂದ ಈ ಆದೇಶವನ್ನು ಪ್ರಧಾನ ಮಂತ್ರಿಗಳ ಕಚೇರಿಯ ಒತ್ತಡದಿಂದಾಗಿ ಹಿಂತೆಗೆದುಕೊಳ್ಳಲಾಗಿದೆಯಂತೆ. ನಾಲ್ಕನೇ ಅಮೆರಿಕಾ ಭೇಟಿ ಕಾಲದಲ್ಲಿ ಪ್ರಧಾನಿಗಳಿಗೆ ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಂದ ಕಿರಿಕಿರಿಯಾಗದಿರಲಿ ಎಂದಷ್ಟೇ ಈ ತಿಪ್ಪರಲಾಗ ಇರಬಹುದೇ ಎಂದು ಕೃಷಿ ಮಂತ್ರಾಲಯದ ಮೂಲ ಆದೇಶದಿಂದ ಕಿಡಿಕಿಡಿಯಾಗಿರುವ ನವ-ಉದಾರವಾದಿಗಳಿಗೂ ಸಂದೇಹ. ಅಮೆರಿಕಾ ಭೇಟಿಯಿಂದ ಹಿಂದಿರುಗಿದಾಗ ಮತ್ತೆ 56 ಅಂಗುಲ ಎದೆಯ ನೆನಪಾಗಬಹುದೇ ಎಂಬ ಆತಂಕ ಅವರಿಗೆ!

ವೇದರಾಜ್ ಎನ.ಕೆ.

Advertisements