ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ

ಸಂಪುಟ: 10 ಸಂಚಿಕೆ: 23 date: Sunday, May 29, 2016

ಕರ್ನಾಟಕದ 14 ಜಿಲ್ಲೆಗಳ ಮಾನವ ಅಭಿವೃದ್ದಿ ಸೂಚ್ಯಂಕವು 0.5ಕ್ಕಿಂತ ಅಧಿಕವಾಗಿದ್ದು ಮುಂದುವರಿದ ಸ್ಥಿತಿಯಲ್ಲಿದ್ದರೆ ಉಳಿದ 16 ಜಿಲ್ಲೆಗಳ ಸೂಚ್ಯಂಕ 0.5ಕ್ಕಿಂತ ಕೆಳಮಟ್ಟದಲ್ಲಿದ್ದು ಹಿಂದುಳಿದ ಸ್ಥಿತಿಯಲ್ಲಿವೆ. ಮುಂದುವರಿದ ಜಿಲ್ಲೆಗಳ ಪೈಕಿ 12 ದಕ್ಷಿಣ ಕರ್ನಾಟಕ ಪ್ರದೇಶಕ್ಕೆ ಸೇರಿದ್ದರೆ 2 ಮಾತ್ರ ಉತ್ತರ ಕರ್ನಾಟಕ ಪ್ರದೇಶಕ್ಕೆ ಸೇರಿವೆ. ಇದಕ್ಕೆ ಪ್ರತಿಯಾಗಿ ಹಿಂದುಳಿದ 16 ಜಿಲ್ಲೆಗಳ ಪೈಕಿ 5 ದಕ್ಷಿಣ ಕರ್ನಾಟಕ ಪ್ರದೇಶಕ್ಕೆ ಸೇರಿದ್ದರೆ 11 ಉತ್ತರ ಕರ್ನಾಟಕ ಪ್ರದೇಶಕ್ಕೆ ಸೇರಿವೆ. ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿಯೂ ದಲಿತ ಅಭಿವೃದ್ಧಿ ಸೂಚ್ಯಂಕದ ಮೌಲ್ಯ 0.3 ಮೀರಿಲ್ಲ. ಈ ಸೂಚ್ಯಂಕದಲ್ಲಿ 1.00 ಅಭಿವೃದ್ಧಿಯ ಪೂರ್ಣ ಮೌಲ್ಯವಾದರೆ ಅದಕ್ಕಿಂತ ಕಡಿಮೆ ಮೌಲ್ಯವು ದಲಿತರ ಬದುಕಿನ ದುಸ್ಥಿತಿಯನ್ನು ತೋರಿಸುತ್ತವೆ. ಒಟ್ಟಾರೆ ಕರ್ನಾಟಕವು ಪ್ರಕಟಿಸಿರುವ 30 ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳು ಜಿಲ್ಲೆ ಮತ್ತು ತಾಲ್ಲೂಕ ಮಟ್ಟದಲ್ಲಿ ಮಾನವ ಅಭಿವೃದ್ಧಿ ಸೂಚಿಗಳಾದ ಸಾಕ್ಷರತೆ, ಆರೋಗ್ಯ, ಆಹಾರ ಭದ್ರತೆ, ಮಕ್ಕಳ ಅಭಿವೃದ್ಧಿ, ಲಿಂಗ ಅಸಮಾನತೆ ಮುಂತಾದ ಸಂಗತಿಗಳ ಸ್ಥಿತಿಗತಿ ಯಾವ ಮಟ್ಟದಲ್ಲಿದೆ ಎಂಬುದನ್ನು ತೋರಿಸುತ್ತವೆ. ಈ ವರದಿಗಳನ್ನು ಆಧಾರವಾಗಿಟ್ಟುಕೊಂಡು ಜಿಲ್ಲಾ ಪಂಚಾಯತಿಗಳು ತಮ್ಮ ಜಿಲ್ಲೆಯ ಅಭಿವೃದ್ಧಿ ಯೋಜನೆಯನ್ನು ರೂಪಿಸುವಂತಾಗಬೇಕು. ಈ ವರದಿಗಳ ಬಗ್ಗೆ ಚರ್ಚೆ ನಡೆಯಬೇಕು. ಇವುಗಳನ್ನು ಅಧ್ಯಯನ ಮಾಡಿ ಜನ ಚಳುವಳಿಗಳು ಸರಕಾರದ ಅಭಿವೃದ್ಧಿ ನೀತಿಗಳ ವಿಶ್ಲೇಷಣೆಗೆ, ವಿಮರ್ಶೆಗೆ ಮತ್ತು ತಮ್ಮ ಹೋರಾಟಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು.

‘ಕೇರಳ ರಾಜ್ಯದ ಬುಡಕಟ್ಟು ಸಮುದಾಯದಲ್ಲಿನ ಶಿಶು ಮರಣ ಪ್ರಮಾಣ ಸೋಮಾಲಿಯಾಕ್ಕಿಂತ ಅಧಿಕವಾಗಿದೆ’ ಎಂಬ ಒಂದು ಹೇಳಿಕೆಯ ಬಗ್ಗೆ ಇಂದು ದೇಶಾದ್ಯಂತ ತೀವ್ರ ಚರ್ಚೆ ನಡೆದಿದೆ. ಇಲ್ಲಿ ಎರಡು ಸಂಗತಿಗಳಿವೆ. ಮೊದಲನೆಯದಾಗಿ ಶಿಶು ಮರಣ ಪ್ರಮಾಣ ಅನ್ನುವ ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿಯು ಅಭಿವೃದ್ಧಿ ಸೂಚಿ ಎಂಬುದನ್ನು ಒಪ್ಪಿಕೊಂಡಿದ್ದರಿಂದ ಇದೊಂದು ಸಕಾರಾತ್ಮಕ ಸಂಗತಿಯಾಗಿದೆ. ಎರಡನೆಯದಾಗಿ ಮಾನವ ಅಭಿವೃದ್ಧಿ ಸೂಚಿಗಳಲ್ಲಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಉತ್ತಮ ಸ್ಥಾನದಲ್ಲಿರುವ ಕೇರಳವನ್ನು ಸೋಮಾಲಿಯಾಕ್ಕೆ ಹೋಲಿಸಿದ್ದು ನಕಾರಾತ್ಮಕ ಸಂಗತಿಯಾಗಿದೆ. ಮಾನವ ಅಭಿವೃದ್ಧಿಯ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ಭಾರತದಲ್ಲಿ ಮೊದಲನೆಯ ಸ್ಥಾನದಲ್ಲಿರುವ ಕೇರಳವನ್ನು ಮೀರಿಸುವುದು ಗುಜರಾತನ್ನೂ ಸೇರಿಸಿಕೊಂಡು ದೇಶದ ಯಾವ ರಾಜ್ಯಕ್ಕೂ ಸಾಧ್ಯವಾಗಿಲ್ಲ. ಏನೇ ಆಗಲಿ ಮೇಲಿನ ಹೇಳಿಕೆಯಿಂದಾಗಿ ಇಂದು ಮಾನವ ಅಭಿವೃದ್ಧಿ ಪ್ರಣಾಳಿಕೆಯ ಬಗೆಗಿನ ಚರ್ಚೆ ಮುಂಚೂಣಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜಿಲ್ಲೆಗಳು ಮತ್ತು ತಾಲ್ಲೂಕುಗಳಿಗೆ ಸಂಬಂಧಿಸಿದ ಮಾನವ ಅಭಿವೃದ್ಧಿ ಕುರಿತಂತೆ ಚರ್ಚಿಸುವುದು ಪ್ರಸ್ತುತವಾಗಿದೆ. ನಮ್ಮ ದೇಶದಲ್ಲಿ ರಾಜ್ಯವೊಂದು ತನ್ನ ಎಲ್ಲ ಜಿಲ್ಲೆಗಳ ಮತ್ತು ತಾಲ್ಲೂಕುಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಒಳಗೊಂಡ ಮೂವತ್ತು ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳನ್ನು ಏಕಕಾಲದಲ್ಲಿ ಪ್ರಕಟಿಸಿದ ಕೀರ್ತಿಯು ಕರ್ನಾಟಕ್ಕೆ ಸಲ್ಲುತ್ತದೆ. ಈ ಎಲ್ಲ ವರದಿಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ದೊರೆಯುತ್ತವೆ.

ಮಾನವ ಅಭಿವೃದ್ಧಿಯ ಮಹತ್ವ

ಮಾನವ ಅಭಿವೃದ್ಧಿ ಪ್ರಣಾಳಿಕೆಯ ಆಗಮನದೊಂದಿಗೆ ಅಭಿವೃದ್ಧಿಯನ್ನು ಕುರಿತ ಚರ್ಚೆಯ ವಿನ್ಯಾಸ ಜಗತ್ತಿನಲ್ಲಿ ಬದಲಾಗಿದೆ. ಅಭಿವೃದ್ಧಿಯನ್ನು ಲಾಗಾಯ್ತಿನಿಂದ ವರಮಾನದ ಏರಿಕೆಗೆ(ಜಿಡಿಪಿ) ಸಂವಾದಿಯನ್ನಾಗಿ ಮಾಡಿಕೊಂಡು ಬರಲಾಗಿತ್ತು. ನಮ್ಮ ಹಣಕಾಸು ಮಂತ್ರಿಯವರು ಜಿಡಿಪಿ ಬೆಳವಣಿಗೆ ಬಗ್ಗೆ ವ್ಯಸನದಂತೆ ಮಾತನಾಡುತ್ತಿದ್ದಾರೆ. ಮಾನವ ಅಭಿವೃದ್ಧಿ ಪ್ರಣಾಳಿಕೆಯ ರೂವಾರಿಗಳಾದ ಮೆಹಬೂಬ್ ಉಲ್ ಹಕ್ ಮತ್ತು ಅಮತ್ರ್ಯ ಸೆನ್ ಮತ್ತೆ ಮತ್ತೆ ಪ್ರತಿಪಾದಿಸಿದಂತೆ ವರಮಾನವೇ ಜನರ ಬದುಕಿನ ಮೊತ್ತವಲ್ಲ. ಅವರ ಪ್ರಕಾರ ಅಭಿವೃದ್ಧಿಯಲ್ಲಿ ಜನರ ಬದುಕಿನ ಸಮೃದ್ಧತೆ ಉತ್ತಮವಾಗುವುದು ಮುಖ್ಯವೇ ವಿನಾ ಆರ್ಥಿಕತೆಯ ಸಮೃದ್ಧತೆಯು ಉತ್ತಮವಾಗುವುದಲ್ಲ. ಅಭಿವೃದ್ಧಿಯಲ್ಲಿ ವರಮಾನದ ಏರಿಕೆಯೇ ಅಂತಿಮ ಗಂತವ್ಯವಲ್ಲ. ಅಭಿವೃದ್ಧಿಗೆ ವರಮಾನದಲ್ಲಿ ಏರಿಕೆ ಮುಖ್ಯ. ಆದರೇ ಅದೇ ಅಭಿವೃದ್ಧಿಯಲ್ಲ.

ಉದಾಹರಣೆಗೆ ಕರ್ನಾಟಕದಲ್ಲಿ ವರಮಾನದ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆಯು ರಾಜ್ಯದ 30 ಜಿಲ್ಲೆಗಳ ಪೈಕಿ ಜೀವನಾಧಾರ(ವರಮಾನ, ಉತ್ಪಾದನೆ ಇತ್ಯಾದಿ ಸಂಗತಿಗಳ ಸಂಯುಕ್ತ ಸೂಚಿ) ಸೂಚಿಯಲ್ಲಿ 11ನೆಯ ಸ್ಥಾನದಲ್ಲಿದೆ. ಆದರೆ ಶಿಕ್ಷಣ ಮತ್ತು ಆರೋಗ್ಯ ಸೂಚಿಗಳನ್ನು ತೆಗೆದುಕೊಂಡರೆ ಅದರ ಸ್ಥಾನ ಕ್ರಮವಾಗಿ 26 ಮತ್ತು 28. ಇದಕ್ಕೆ ಪ್ರತಿಯಾಗಿ ಹಾಸನ ಜಿಲ್ಲೆಯು ಜೀವನಾಧಾರದಲ್ಲಿ 15ನೆಯ ಸ್ಥಾನದಲ್ಲಿದ್ದರೆ ಶಿಕ್ಷಣ ಮತ್ತು ಆರೋಗ್ಯಗಳಲ್ಲಿ ಅದು ಕ್ರಮವಾಗಿ 9 ಮತ್ತು 4ನೆಯ ಸ್ಥಾನದಲ್ಲಿದೆ.  ಅದೇ ರೀತಿಯಲ್ಲಿ ಮೈಸೂರು ಜಿಲ್ಲೆಯು ಜೀವನಾಧಾರದಲ್ಲಿ 5ನೆಯ ಸ್ಥಾನದಲ್ಲಿದ್ದರೆ ಶಿಕ್ಷಣ ಮತ್ತು ಆರೋಗ್ಯ ಸೂಚಿಗಳಲ್ಲಿ ಅದರ ಸ್ಥಾನ ಕ್ರಮವಾಗಿ 21 ಮತ್ತು 20. ಇದಕ್ಕೆ ಪ್ರತಿಯಾಗಿ ಉತ್ತರ ಕನ್ನಡ ಜಿಲ್ಲೆಯು ಜೀವನಾಧರ ಸೂಚಿಯಲ್ಲಿ 14ನೆಯ ಸ್ಥಾನದಲ್ಲಿದ್ದರೆ ಶಿಕ್ಷಣದಲ್ಲಿ 12ನೆಯ ಸ್ಥಾನದಲ್ಲಿ ಮತ್ತು ಆರೋಗ್ಯದಲ್ಲಿ 6ನೆಯ ಸ್ಥಾನದಲ್ಲಿದೆ.

ಇವೆಲ್ಲ ಏನನ್ನು ಸೂಚಿಸುತ್ತವೆ? ಅಭಿವೃದ್ಧಿಯಲ್ಲಿ ವರಮಾನ, ಉತ್ಪಾದನೆ, ಬಂಡವಾಳ ಮುಂತಾದವು ‘ಸಾಧನ’ಗಳೇ ವಿನಾ ಅವೇ ಅಭಿವೃದ್ಧಿಯಲ್ಲ. ಅಭಿವೃದ್ಧಿಯಲ್ಲಿ ಜನರು, ಮಹಿಳೆಯರನ್ನು ಸೇರಿಸಿಕೊಂಡು ಜನರ ಬದುಕು ಮುಖ್ಯ. ಜನರ ಬದುಕು ಸಮೃದ್ಧವಾಗ ಬೇಕಾದರೆ ವರಮಾನದ ಜೊತೆಯಲ್ಲಿ ಅಕ್ಷರ ಸಂಸ್ಕøತಿ, ಆರೋಗ್ಯ, ಮಹಿಳೆಯರ ಬದುಕಿನ ಸ್ಥಿತಿಗತಿ, ಕುಡಿಯುವ ನೀರಿನ ಲಭ್ಯತೆ, ಆಹಾರ, ವಸತಿ ಮುಂತಾದವು ಮುಖ್ಯವಾಗುತ್ತವೆ. ಅಭಿವೃದ್ಧಿ ಅನ್ನುವುದು ಜನರು ಅನುಭವಿಸಬೇಕಾದ ಒಂದು ಸಂಗತಿ. ಅದು ಕೇವಲ ಅಂಕಿಅಂಶಗಳ ಕೋಶವಲ್ಲ. ಅಭಿವೃದ್ಧಿಯನ್ನು ಅನುಭವಿಸುವುದಕ್ಕೆ ಜನರ ಧಾರಣ ಸಾಮಥ್ರ್ಯ ಉತ್ತಮವಾಗಿರಬೇಕು. ಜನರ ಧಾರಣಾ ಸಾಮಥ್ರ್ಯವು ವರಮಾನವನ್ನು ಸೇರಿಸಿಕೊಂಡು ಶಿಕ್ಷಣ, ಆರೋಗ್ಯ, ಆಹಾರ, ಪರಿಸರ ಸಮತೋಲನ ಮುಂತಾದವುಗಳನ್ನು ಅವಲಂಬಿಸಿದೆ.

ಮಾನವ ಅಭಿವೃದ್ದಿಯಲ್ಲಿನ ಸಾಧನೆ ಬಗ್ಗೆ ನಮ್ಮ ದೇಶದಲ್ಲಿ ಕೇರಳದ ಉದಾಹರಣೆಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಏಕೆಂದರೆ ಅದರ ತಲಾ ವರಮಾನವು ಹರಿಯಾಣ, ಪಂಜಾಬ್, ಮಹಾರಾಷ್ಟ್ರ ಮುಂತಾದ ‘ಮುಂದುವರಿದ’ ರಾಜ್ಯಗಳಲ್ಲಿನ ತಲಾ ವರಮಾನಕ್ಕಿಂತ ಕೆಳಮಟ್ಟದಲ್ಲಿದೆ. ಆದರೆ ಆರೋಗ್ಯ(ಜೀವನಾಯುಷ್ಯ, ಶಿಶು ಮರಣ ಪ್ರಮಾಣ, ತಾಯಂದಿರ ಮರಣ ಪ್ರಮಾಣ ಇತ್ಯಾದಿ ಸೂಚಿಗಳು), ಶಿಕ್ಷಣ(ಸಾಕ್ಷರತಾ ಪ್ರಮಾಣ, ಮಕ್ಕಳ ಶಾಲಾ ದಾಖಲಾತಿ ಇತ್ಯಾದಿ ಸೂಚಿಗಳು), ಆಹಾರ ಭದ್ರತೆ, ಲಿಂಗ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮುಂತಾದ ಸೂಚಿಗಳಲ್ಲಿ ಕೇರಳವು ಅತ್ಯಂತ ಉನ್ನತ ಸ್ಥಾನದಲ್ಲಿದೆ. ಕೇರಳದ ಈ ವಿಶಿಷ್ಟ ಸಾಧನೆ ಈವತ್ತಿನ ಸಂಗತಿಯಲ್ಲ. ಅದು ಕಳೆದ ಮೂರು ದಶಕಗಳಿಂದ ಮಾನವ ಅಭಿವೃದ್ಧಿಯಲ್ಲಿ ಉನ್ನತ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಈ ಕಾರಣಕ್ಕೆ ‘ಕೇರಳ ಅಭಿವೃದ್ದಿ ಮಾದರಿ’ಯು ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅತ್ಯಂತ ದುರದೃಷ್ಟದ ಸಂಗತಿಯೆಂದರೆ ನಮ್ಮ ದೇಶದಲ್ಲಿ ಕಳೆದ ಹತ್ತಾರು ವರ್ಷಗಳಿಂದ ವರಮಾನದಲ್ಲಿ ಉತ್ತಮ ಸಾಧನೆ ಮಾಡಿರುವ ಗುಜರಾತ್ ಮಾದರಿಯ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಚರ್ಚೆ ಮಾಡಲಾಗುತ್ತಿದೆಯೇ ವಿನಾ ಜನರ ಬದುಕುನ್ನು ಸಮೃದ್ಧಗೊಳಿಸಿರುವ ಕೇರಳ ಸಾಧನೆಯ ಬಗ್ಗೆ ಮಾತುಗಳನ್ನಾಡುತ್ತಿಲ್ಲ.

ಮಾನವ ಅಭಿವೃದ್ಧಿಯಲ್ಲಿ ಕರ್ನಾಟಕದ ಸಾಧನೆ

ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕವು ದೇಶದಲ್ಲಿ ಮಧ್ಯಮಗತಿ ಆರ್ಥಿಕತೆಯ ಸ್ಥಾನ ಪಡೆದಿದೆ. ಅದು ಹರಿಯಾಣ, ಪಂಜಾಬ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಂತೆ ಅತ್ಯಂತ ಮುಂದುವರಿದ ರಾಜ್ಯವೂ ಅಲ್ಲ ಅಥವಾ ಬಿಹಾರ, ಜಾರ್ಖಂಡ, ಒರಿಸ್ಸಾ, ಮಧ್ಯ ಪ್ರದೇಶಗಳಂತೆ ಅತ್ಯಂತ ಹಿಂದುಳಿದ ರಾಜ್ಯವೂ ಅಲ್ಲ. ಅದರ ಅಭಿವೃದ್ಧಿಯು ಮಧ್ಯಮಗತಿಯಲ್ಲಿ ನಡೆದಿದೆ. ಕರ್ನಾಟಕದ ಜಿಲ್ಲೆಗಳ ಮಾನವ ಅಭಿವೃದ್ಧಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಎದ್ಧು ಕಾಣುವ ಸಂಗತಿಯೆಂದರೆ ಪ್ರಾದೇಶಿಕ ಅಸಮಾನತೆ. ಕರ್ನಾಟಕದ 14 ಜಿಲ್ಲೆಗಳ ಮಾನವ ಅಭಿವೃದ್ದಿ ಸೂಚ್ಯಂಕವು 0.5ಕ್ಕಿಂತ ಅಧಿಕವಾಗಿದ್ದು ಮುಂದುವರಿದ ಸ್ಥಿತಿಯಲ್ಲಿದ್ದರೆ ಉಳಿದ 16 ಜಿಲ್ಲೆಗಳ ಸೂಚ್ಯಂಕ 0.5ಕ್ಕಿಂತ ಕೆಳಮಟ್ಟದಲ್ಲಿದ್ದು ಹಿಂದುಳಿದ ಸ್ಥಿತಿಯಲ್ಲಿವೆ. ಮುಂದುವರಿದ ಜಿಲ್ಲೆಗಳ ಪೈಕಿ 12 ದಕ್ಷಿಣ ಕರ್ನಾಟಕ ಪ್ರದೇಶಕ್ಕೆ ಸೇರಿದ್ದರೆ 2 ಮಾತ್ರ ಉತ್ತರ ಕರ್ನಾಟಕ ಪ್ರದೇಶಕ್ಕೆ ಸೇರಿವೆ. ಇದಕ್ಕೆ ಪ್ರತಿಯಾಗಿ ಹಿಂದುಳಿದ 16 ಜಿಲ್ಲೆಗಳ ಪೈಕಿ 5 ದಕ್ಷಿಣ ಕರ್ನಾಟಕ ಪ್ರದೇಶಕ್ಕೆ ಸೇರಿದ್ದರೆ 11 ಉತ್ತರ ಕರ್ನಾಟಕ ಪ್ರದೇಶಕ್ಕೆ ಸೇರಿವೆ. ಕಲಬುರಗಿ ವಿಭಾಗದ ಎಲ್ಲ ಆರು ಜಿಲ್ಲೆಗಳು ಹಿಂದುಳಿದ ವರ್ಗಕ್ಕೆ ಸೇರುತ್ತವೆ. ಅದರಲ್ಲೂ ಕೊಪ್ಪಳ, ಯಾದಗೀರ್ ಮತ್ತು ರಾಯಚೂರು ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕ 0.3ಕ್ಕಿಂತ ಕೆಳಮಟ್ಟದಲ್ಲಿದೆ. ಈ ಮೂರು ಜಿಲ್ಲೆಗಳು ರಾಜ್ಯದಲ್ಲಿ ಕ್ರಮವಾಗಿ 28, 29 ಮತ್ತು 30ನೆಯ ಸ್ಥಾನ ಪಡೆದಿವೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡಪಿ ಜಿಲ್ಲೆಗಳು ಕ್ರಮವಾಗಿ 0.928, 0.691 ಮತ್ತು 0.675 ಸೂಚ್ಯಂಕ ಮೌಲ್ಯಗಳ ಮೂಲಕ ಮೊದಲ ಮೂರು ಸ್ಥಾನಗಳಲ್ಲಿವೆ.

ಲಿಂಗ ಅಸಮಾನತೆ ಸೂಚ್ಯಂಕ

ಸಾಂಪ್ರದಾಯಿಕ ಅಭಿವೃದ್ಧಿ ಪ್ರಣಾಳಿಕೆ ಮತ್ತು ಮಾನವ ಅಭಿವೃದ್ಧಿ ಪ್ರಣಾಳಿಕೆಗಳ ನಡುವಿನ ಒಂದು ಪ್ರಮುಖ ಭಿನ್ನತೆಯೆಂದರೆ ಮೊದಲನೆಯದು ಲಿಂಗ ನಿರಪೇಕ್ಷವಾಗಿದ್ದರೆ ಎರಡನೆಯದು ಲಿಂಗ ಸ್ಪಂದಿ ಸಿದ್ಧಾಂತವಾಗಿದೆ. ಅಭಿವೃದ್ಧಿಯಲ್ಲಿ ಮಹಿಳೆಯರನ್ನು ಕೇವಲ ಅನುಭೋಗಿಗಳೆಂದು ಪರಿಗಣಿಸಿಕೊಂಡು ಬರಲಾಗಿತ್ತು. ಆದರೆ ಮಾನವ ಅಭಿವೃದ್ಧಿ ಪ್ರಣಾಳಿಕೆಯು ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ ಅನ್ನುವುದನ್ನು ಸೋದಾಹರಣವಾಗಿ ತೋರಿಸಿಕೊಟ್ಟಿತು. ವಿಶ್ವಬ್ಯಾಂಕು ತನ್ನ 2012ನೆಯ ವಿಶ್ವ ಅಭಿವೃದ್ದಿ ವರದಿಯಲ್ಲಿ ಲಿಂಗ ಸಮಾನತೆಯನ್ನು ‘ಸ್ಮಾರ್ಟ್ ಎಕನಾಮಿಕ್ಸ್’ ಎಂದು ಘೋಷಿಸಿತು. ಮಹಿಳೆಯರು ನಿರ್ವಹಿಸುವ ಮನೆವಾರ್ತೆ, ಸ್ವಂತ ಹೊಲ-ಗದ್ದೆ-ತೋಟಗಳಲ್ಲಿ ಮಾಡುವ ದುಡಿಮೆ ಮುಂತಾದವು ಕೂಡ ಉತ್ಪಾದನೆ ಚಟುವಟಿಕೆ ಎಂದು ಪರಿಗಣಿಸಬೇಕೆಂದು ಅಮತ್ರ್ಯ ಸೆನ್ ಪ್ರತಿಪಾದಿಸುತ್ತಿದ್ದಾರೆ. ಆದರೆ ಅವರು ಅನೇಕ ಬಗೆಯ ಅಸಮಾನತೆಯನ್ನು ಎದುರಿಸಬೇಕಾಗಿದೆ. ಇದರಿಂದಾಗಿ ಅವರ ಕರ್ತೃತ್ವಶಕ್ತಿಯು ಅಭಿವೃದ್ಧಿಗೆ ಪೂರ್ಣವಾಗಿ ಲಭಿಸುತ್ತಿಲ್ಲ. ಈ ಸಂಗತಿಯನ್ನು ಕರ್ನಾಟಕದ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳು ತೋರಿಸಿಕೊಟ್ಟಿವೆ. ನಮ್ಮ ರಾಜ್ಯದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಅಪೌಷ್ಟಿಕತೆ-ಅನಿಮಿಯಾ ಪ್ರಮಾಣವನ್ನು ಇಲ್ಲಿ ಮಾಪನ ಮಾಡಲಾಗಿದೆ. ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಲಿಂಗ ಅಸಮಾನತೆಯು ಹಿಂದುಳಿದ ಜಿಲ್ಲೆಗಳಲ್ಲಿ ಮುಂದುವರಿಗೆ ಜಿಲ್ಲೆಗಳಲ್ಲಿಗಿಂತ ಅಧಿಕವಾಗಿದೆ. ಹಿಂದುಳಿದ ಜಿಲ್ಲೆಗಳಲ್ಲಿ ದುಡಿಮೆ ವರ್ಗದಲ್ಲಿರುವ ಮಹಿಳೆಯರ ಪ್ರಮಾಣವೂ ಅಧಿಕ. ಈ ವರದಿಗಳು ರಾಜ್ಯದಲ್ಲಿ ಮಹಿಳೆಯರು ಎದುರಿಸುತ್ತಿರುವ ಎಲ್ಲ ಬಗೆಯ ತಾರತಮ್ಯ, ಅಸಮಾನತೆ, ಶೋಷಣೆ ಬಗ್ಗೆ ಬೆಳಕು ಚೆಲ್ಲುತ್ತವೆ. ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು ಶೇ50ರಷ್ಟಿರುವ, ಮತದಾರರಲ್ಲಿ ಶೇ50ರಷ್ಟಿರುವ ಮತ್ತು ದುಡಿಮೆಗಾರರಲ್ಲಿ ಶೇ35ರಷ್ಟಿರುವ ಮಹಿಳೆಯರ ಪಾತ್ರ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಿದೆ.

ದಲಿತ ಅಭಿವೃದ್ಧಿ ಸೂಚ್ಯಂಕ

ನಮ್ಮ ರಾಜ್ಯದಲ್ಲಿ ಪ್ರಥಮ ಬಾರಿಗೆ ದಲಿತರ ಅಭಿವೃದ್ದಿಗೆ ಸಂಬಂಧಿಸಿದಂತೆ ಡಾ. ಎಂ. ಚಂದ್ರ ಪೂಜಾರಿ ಅವರು ರೂಪಿಸಿರುವ ದಲಿತ ಅಭಿವೃದ್ಧಿ ಸೂಚ್ಯಂಕವನ್ನು ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳಲ್ಲಿ ಬಳಸಿ ಮಾಪನ ಮಾಡಲಾಗಿದೆ. ಈ ಸೂಚ್ಯಂಕಕ್ಕೆ ಆನುಷಂಗಿಕ ದತ್ತಾಂಶಗಳು ಲಭ್ಯವಿಲ್ಲದುದರಿಂದ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು 50 ದಲಿತ ಕುಟುಂಬ ಘಟಕಗಳನ್ನು ಸಮೀಕ್ಷೆ ಮಾಡಿ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ 30 ಜಿಲ್ಲೆಗಳಿಗೆ ದಲಿತ ಅಭಿವೃದ್ಧಿ ಸೂಚ್ಯಂಕವನ್ನು ಅಳತೆ ಮಾಡಲಾಗಿದೆ. ಅದರ ಪ್ರಕಾರ ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿಯೂ ಸದರಿ ಸೂಚ್ಯಂಕದ ಮೌಲ್ಯ 0.3 ಮೀರಿಲ್ಲ. ಈ ಸೂಚ್ಯಂಕದಲ್ಲಿ 1.00 ಅಭಿವೃದ್ಧಿಯ ಪೂರ್ಣ ಮೌಲ್ಯವಾದರೆ ಅದಕ್ಕಿಂತ ಕಡಿಮೆ ಮೌಲ್ಯವು ದಲಿತರ ಬದುಕಿನ ದುಸ್ಥಿತಿಯನ್ನು ತೋರಿಸುತ್ತವೆ. ಕರ್ನಾಟಕದ ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳ ಮಹತ್ವದ ಕೊಡುಗೆ ಇದಾಗಿದೆ. ಸೂಚ್ಯಂಕ ಮೌಲ್ಯ 0.3 ಅನ್ನುವುದು ಒಂದು ಅಖಂಡ ಚಿತ್ರವನ್ನು ಮಾತ್ರ ನೀಡುತ್ತದೆ. ಆದರೆ ಈ ವರದಿಗಳಲ್ಲಿ ದಲಿತರು ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ದುಸ್ಥಿತಿ ಅನುಭವಿಸುತ್ತಿದ್ದಾರೆ ಎಂಬುದನ್ನು ತೋರಿಸಲಾಗಿದೆ. ಈ ಸೂಚ್ಯಂಕವು ಸರ್ಕಾರಕ್ಕೆ ದಲಿತರ ಅಭಿವೃದ್ಧಿ ನೀತಿಯನ್ನು ರೂಪಿಸುವುದಕ್ಕೆ ಉಪಯುಕ್ತವಾಗಿದೆ. ದಲಿತರ ಹಿಂದುಳಿದಿರುವಿಕೆಯ ಮೂಲದಲ್ಲಿ ಸಾಮಾಜಿಕ ತಾರತಮ್ಯದ ಪಾತ್ರ ಆಯಕಟ್ಟಿನದಾಗಿದೆ. ಒಂದು ವೇಳೆ ಸಾಮಾಜಿಕ ತಾರತಮ್ಯ ಅನ್ನುವುದು ಇಲ್ಲದೇ ಹೋಗಿದ್ದರೆ ದಲಿತರ ಅಭಿವೃದ್ಧಿ ಸ್ಥಿತಿಗತಿಯು ಉಳಿದವರ ಸ್ಥಿತಿಗತಿಗೆ ಸಮನಾಗಿರಬೇಕಾಗಿತ್ತು. ಉದಾಹರಣೆಗೆ ರಾಜ್ಯದಲ್ಲಿ ಒಟ್ಟು ಸಾಕ್ಷರತಾ ಪ್ರಮಾಣ ಶೇ75ರಷ್ಟಿದ್ದರೆ ದಲಿತರ ಸಾಕ್ಷರತಾ ಪ್ರಮಾಣ ಶೇ 55ರಷ್ಟಿದೆ. ಇಲ್ಲಿನ ಶೇ20ರಷ್ಟು ಅಂತರವು ತಾರತಮ್ಯದ ಮಾಪನವಾಗಿದೆ. ಎಲ್ಲಿಯವರೆಗೆ ಸಾಮಾಜಿಕ ತಾರತಮ್ಯವನ್ನು ತೊಡೆದು ಹಾಕುವುದು ನಮಗೆ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ದಲಿತರ ದುಸ್ಥಿತಿಯನ್ನು ನಿವಾರಿಸುವುದು ಕಷ್ಟದಾಯಕವಾಗುತ್ತದೆ.

ಒಟ್ಟಾರೆ ಕರ್ನಾಟಕವು ಪ್ರಕಟಿಸಿರುವ 30 ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳು ಜಿಲ್ಲೆ ಮತ್ತು ತಾಲ್ಲೂಕ ಮಟ್ಟದಲ್ಲಿ ಮಾನವ ಅಭಿವೃದ್ಧಿ ಸೂಚಿಗಳಾದ ಸಾಕ್ಷರತೆ, ಆರೋಗ್ಯ, ಆಹಾರ ಭದ್ರತೆ, ಮಕ್ಕಳ ಅಭಿವೃದ್ಧಿ, ಲಿಂಗ ಅಸಮಾನತೆ ಮುಂತಾದ ಸಂಗತಿಗಳ ಸ್ಥಿತಿಗತಿ ಯಾವ ಮಟ್ಟದಲ್ಲಿದೆ ಎಂಬುದನ್ನು ತೋರಿಸುತ್ತವೆ. ಈ ವರದಿಗಳನ್ನು ಆಧಾರವಾಗಿಟ್ಟುಕೊಂಡು ಜಿಲ್ಲಾ ಪಂಚಾಯತಿಗಳು ತಮ್ಮ ಜಿಲ್ಲೆಯ ಅಭಿವೃದ್ಧಿ ಯೋಜನೆಯನ್ನು ರೂಪಿಸುವಂತಾಗಬೇಕು. ಈ ವರದಿಗಳ ಬಗ್ಗೆ ಚರ್ಚೆ ನಡೆಯಬೇಕು. ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಅವು ಪ್ರಕಟವಾಗಿವೆ ಎಂಬುದರ ಬಗ್ಗೆ ಜನರಿಗೆ ಮಾಹಿತಿಯಿಲ್ಲ. ಸರ್ಕಾರವು ಸದರಿ ವರದಿಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಗಾರಗಳನ್ನು ಏರ್ಪಡಿಸಿ ಜನರಲ್ಲಿ ಅಭಿವೃದ್ಧಿ ಅನ್ನುವುದು ವರಮಾನವನ್ನು ಸೇರಿಸಿಕೊಂಡು ಜನರ ಧಾರಣಾ ಸಾಮಥ್ರ್ಯಕ್ಕೆ ಸಂಬಂಧಿಸಿದ ಸಂಗತಿ ಅನ್ನುವುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ವರದಿಗಳು ಕೇವಲ ಪ್ರಕಟವಾಗಿ ಬಿಟ್ಟರೆ ಸಾಕಾಗುವುದಿಲ್ಲ. ಅವುಗಳನ್ನು ಅಭಿವೃದ್ಧಿ ಯೋಜನೆ ರೂಪಿಸುವಾಗ ಬಳಸಬೇಕು. ಇವುಗಳನ್ನು ಅಧ್ಯಯನ ಮಾಡಿ ಜನ ಚಳುವಳಿಗಳು ಸರಕಾರದ ಅಭಿವೃದ್ಧಿ ನೀತಿಗಳ ವಿಶ್ಲೇಷಣೆಗೆ, ವಿಮರ್ಶೆಗೆ ಮತ್ತು ತಮ್ಮ ಹೋರಾಟಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು.

ಮೋದಿ ಅವರ ‘ಸೋಮಾಲಿಯಾ’ ಕಮೆಂಟಿನಿಂದ ಮಾನವ ಅಭಿವೃದ್ಧಿ ಪ್ರಣಾಳಿಕೆಯ ಬಗೆಗಿನ ಚರ್ಚೆ ಮುಂಚೂಣಿಗೆ ಬಂದಿದೆ. ನಮ್ಮ ದೇಶದಲ್ಲಿ ರಾಜ್ಯವೊಂದು ತನ್ನ ಎಲ್ಲ ಜಿಲ್ಲೆಗಳ ಮತ್ತು ತಾಲ್ಲೂಕುಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಒಳಗೊಂಡ ಮೂವತ್ತು ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳನ್ನು ಏಕಕಾಲದಲ್ಲಿ ಪ್ರಕಟಿಸಿದ ಕೀರ್ತಿಯು ಕರ್ನಾಟಕ್ಕೆ ಸಲ್ಲುತ್ತದೆ. ಈ ಎಲ್ಲ ವರದಿಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ದೊರೆಯುತ್ತವೆ.

ಇದು ಕೆಳಕಂಡ ಕರ್ನಾಟಕ ಸರಕಾರದ ಯೋಜನಾ ವಿಭಾಗದ ವೆಬ್ ತಾಣದಲ್ಲಿ ದೊರೆಯುತ್ತವೆ ಮತ್ತು ಇವನ್ನು ಡೌನ್ ಲೋಡ್ ಮಾಡಬಹುದು
http://planning.kar.nic.in/hdr-karnataka.html

ಪ್ರೊ. ಟಿ.ಆರ್. ಚಂದ್ರಶೇಖರ

Advertisements