ದಿವ್ಯಾಂಗಜನ ಎಂಬ ಹೆಸರು ಬದಲಾವಣೆ ಬೇಡ, ದೈವತ್ವದ ಅನುಗ್ರಹ ಬೇಡ

ಸಂಪುಟ: 10 ಸಂಚಿಕೆ: 23 Sunday, May 29, 2016

ಸಮಾನ ಹಕ್ಕುಳ್ಳವರು ಎಂಬ ಘನತೆಯ ಬದುಕಿನ ಮಾನ್ಯತೆ ಬೇಕು
ಪ್ರಧಾನಿಗಳಿಗೆ ರಾಷ್ಟ್ರೀಯ ವಿಕಲಾಂಗರ ಹಕ್ಕುಗಳ ವೇದಿಕೆಯ ಆಗ್ರಹ

ಕಳೆದ ವರ್ಷ ಡಿಸೆಂಬರ್ 27 ರ ‘ಮನ್ ಕೀ ಬಾತ್’ ಭಾಷಣದಲ್ಲಿ ಪ್ರಧಾನಿಗಳು ವಿಕಲಾಂಗ ವ್ಯಕ್ತಿಗಳು ‘ದಿವ್ಯಾಂಗ’ರು, ಏಕೆಂದರೆ ಅವರಲ್ಲಿ ‘ದೈವತ್ವ’ ಇದೆ ಎಂದಿದ್ದರು. ಮೂಲ ಸಮಸ್ಯೆಯನ್ನು ಮಾತಿನ ಮಂಟದಲ್ಲಿ ಮುಳುಗಿಸಿ ತೇಲಿಸಿ ಬಿಡುವವರಿಗೆ ಇದು ಒಂದು ಹೊಸ ಅವಕಾಶವಾಗಿ ಕಂಡಿತ್ತು. ಎಲ್ಲರೂ ‘ದಿವ್ಯಾಂಗ’ದ ಮಂತ್ರವನ್ನೇ ಪಠಿಸಲಾರಂಭಿಸಿದರು. ಇದನ್ನು ಗಮನಿಸಿದ ರಾಷ್ಟ್ರೀಯ ವಿಕಲಾಂಗರ ಹಕ್ಕುಗಳ ವೇದಿಕೆ ಪ್ರಧಾನಿಗಳಿಗೆ ಪತ್ರ ಬರೆದು ಅಂಗವಿಕಲತೆ ದೈವದತ್ತ ಕೊಡುಗೆ ಅಲ್ಲ, ದೈವತ್ವವನ್ನು ಆರೋಪಿಸುವುದರಿಂದ ಹೊಸ ಮಿಥ್ಯೆಗಳು ಸೃಷ್ಟಿಯಾಗುತ್ತವೆಯೇ ಹೊರತು ಈ ವ್ಯಕ್ತಿಗಳಿಗೆ ಸಮಾಜ ಹಚ್ಚಿರುವ ಕಳಂಕ, ತೋರುತ್ತಿರುವ ಪಕ್ಷಪಾತದ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ, ಅವರಿಗೆ ನಿಜವಾಗಿ ಬೇಕಿರುವುದು ದೈವತ್ವವನ್ನು ದಯಪಾಲಿಸುವ ಕರುಣೆಯಲ್ಲ, ಸಮಾನ ಹಕ್ಕುಗಳನ್ನು ಹೊಂದಿರುವ ನಾಗರಿಕರೆಂಬ ಮಾನ್ಯತೆ, ಆದ್ದರಿಂದ ಇಂತಹ ಅನುಗ್ರಹದ ಪದಗಳನ್ನು ಬಳಕೆಗೆ ತರಬೇಡಿ ಎಂದು ಸೂಚಿಸಿತ್ತು. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರ ಹಲವು ಸಂಘಟನೆಗಳೂ ಈ ಪದಬಳಕೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದವು.

ಆದರೂ ಮೇ 17ರಂದು ‘ಅಂವಿಕಲತೆಯಿರುವ ವ್ಯಕ್ತಿಗಳ ಸಬಲೀಕರಣದ ಇಲಾಖೆ’ ಎಂಬ ಹೆಸರನ್ನು ‘ಅಂವಿಕಲತೆಯಿರುವ ವ್ಯಕ್ತಿಗಳ ಸಬಲೀಕರಣದ ಇಲಾಖೆ(ದಿವ್ಯಾಂಗಜನ)’ ಎಂದು ಬದಲಿಸುವ ನೋಟಿಫಿಕೇಶನ್ ಮೇ 17ರಂದು ಹೊರ ಬಿದ್ದಿದೆ. ಇದನ್ನು ಪ್ರತಿಭಟಿಸಿರುವ ರಾಷ್ಟ್ರೀಯ ವಿಕಲಾಂಗರ ಹಕ್ಕುಗಳ ವೇದಿಕೆ ಮೇ 25ರಂದು ಪ್ರಧಾನ ಮಂತ್ರಿಗಳಿಗೆ ಮತ್ತೆ ಪತ್ರ ಬರೆದು ಈ ವಿಷಯವನ್ನು ಮತ್ತೆ ಅವರಿಗೆ ನೆನಪಿಸುತ್ತ ಈ ನೋಟಿಫಿಕೇಶನನ್ನು ಹಿಂತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದೆ.

Advertisements