“ನಾಯಕರು ಬದಲಾದರೇ ಸಾಲದು, ನೀತಿಗಳು ಬದಲಾಗಬೇಕು”

ಸಂಪುಟ: 10 ಸಂಚಿಕೆ: 23 Sunday, May 29, 2016

ಅಭಿವೃದ್ಧಿಯ ಹೆಸರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರ್ಕಾರ ಬಹುಸಂಸ್ಕøತಿಯ ನಾಡಿನಲ್ಲಿ ಜನರ ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದೆ. ಕೇವಲ ನಾಯಕ ಬದಲಾದರೇ ಸಾಲದು. ಇಂದು ದೇಶದ ಜನತೆಯ ತೀವ್ರ ಸಂಕಷ್ಟಕ್ಕೆ ಕಾರಣವಾಗಿರುವ ಸರಕಾರದ ಜನವಿರೋಧಿ ನೀತಿಗಳು ಬದಲಾಗಬೇಕು. ಪರ್ಯಾಯ ನೀತಿಗಳಿಗಾಗಿ ದೇಶದ ಎಡಪಕ್ಷಗಳು ಒಂದಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ಸಿಪಿಐ(ಎಂ)ನ ರಾಜ್ಯ ಸಮಿತಿ ಸದಸ್ಯ ಎಸ್. ವೈ ಗುರುಶಾಂತ ಕರೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ, ಸಿಪಿಐ(ಎಂ), ಸಿಪಿಐ, ಹಾಗೂ ಎಸ್‍ಯುಸಿಐ(ಸಿ) ಪಕ್ಷಗಳು ಜಂಟಿಯಾಗಿ ಧಾರವಾಡದ ನಿವೃತ್ತ ನೌಕರರ ಭವನದಲ್ಲಿ ಮೇ 17ರಂದು ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಬಿ.ಎಸ್ ಸೊಪ್ಪಿನ ಮಾತನಾಡಿ ಬರಗಾಲ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಇನ್ನಿತರ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರಬಲ ಜನ ಹೋರಾಟಗಳನ್ನು ಬೆಳೆಸುತ್ತಿರುವ ಎಡ ಪ್ರಗತಿಪರ ಸಂಘಟನಾ ಶಕ್ತಿಗಳನ್ನು ತುಳಿಯುವ ಪ್ರಯತ್ನ ನಡೆದಿದೆ. ಜನಪರ ಹೋರಾಟಗಳ ನಿರಂತರತೆಯೇ ಇದಕ್ಕೆ ಪರಿಹಾರ ಎಂದು ಅಭಿಪ್ರಾಯಪಟ್ಟರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಸ್‍ಯುಸಿಐ(ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಸೀರ ಮುದೋಳ, ಮಹೇಶ ಪತ್ತಾರ, ಆರ್.ಎಚ್ ಆಯಿ, ಡಿ.ಎಚ್ ಕರಿಯಣ್ಣವರ್, ಬಿ.ಎನ್.ಪೂಜಾರಿ, ಕೆ.ಎಚ್.ಪಾಟೀಲ, ಬಿ.ಐ.ಈಳಿಗೇರ, ಎಚ್.ಜಿ ದೇಸಾಯಿ, ಲಕ್ಷ್ಮಣ ಜಡಗನ್ನವರ ಸೇರಿದಂತೆ ಎಡಪಕ್ಷಗಳ ನೂರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪ್ರಚಾರಾಂದೋಲನ: ಕೇಂದ್ರ-ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಎಡಪಕ್ಷದ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಮೇ-25 ರಂದು ಧಾರವಾಡದಲ್ಲಿ, ಮೇ-27 ರಂದು ಹುಬ್ಬಳ್ಳಿಯಲ್ಲಿ ಪ್ರಚಾರಾಂದೋಲನ ಹಾಗೂ ಪ್ರತಿಭಟನಾ ಸಭೆ ನಡೆಸಲಾಯಿತು.

ಅವಳಿ ನಗರದಲ್ಲಿ ವಿವಿಧ ಮಾರ್ಗವಾಗಿ ಜನರಿಗೆ ಕರಪತ್ರಗಳನ್ನು ವಿತರಿಸಿ ನಂತರ ಧಾರವಾಡದ ವಿವೇಕಾನಂದ ಸರ್ಕಲ್‍ನಲ್ಲಿ ಹಾಗೂ ಹುಬ್ಬಳ್ಳಿಯ ದುರ್ಗದಬೈಲ ವೃತ್ತದಲ್ಲಿ ಸೇರಿದ ಎಡಡಪಕ್ಷಗಳ ಕಾರ್ಯಕರ್ತರು ಸಭೆಗಳನ್ನು ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡ ಆರ್.ಎಚ್.ಆಯಿ ಎಸ್‍ಯುಸಿಐ(ಸಿ) ಜಿಲ್ಲಾ ಮುಖಂಡ ಎಚ್.ಜಿ.ದೇಸಾಯಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಸೀರ ಮುಧೋಳ ಮಾತನಾಡಿದರು. ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಮಹೇಶ ಪತ್ತಾರ

ರಾಜ್ಯದ ವಿವಿದೆಡೆ ನಡೆದ ಎಡ ಪಕ್ಷಗಳ ಸಮಾವೇಶ

ದಾವಣಗೆರೆ:

ಪ್ರಧಾನಿಯಾದ ನಂತರ 37 ಬಾರಿ ವಿದೇಶಗಳಿಗೆ ಬೇಟಿ ಕೊಟ್ಟು, ದೇಶದಲ್ಲಿ 219 ಮತ್ತು ವಿದೇಶದಲ್ಲಿ 140 ಕ್ಕೂ ಅಧಿಕ ಭಾಷಣ ಮಾಡಿದ ಪ್ರಧಾನಿ ಮೋದಿಯವರಿಗೆ 250ಕ್ಕೂ ಹೆಚ್ಚಿನ ಬರಗಾಲ ಪೀಡಿತ ಜಿಲ್ಲೆಗಳಲ್ಲಿ ಒಂದೂ ಜಿಲ್ಲೆಗೆ ಭೇಟಿ ಮಾಡಿಲ್ಲ, ಬರ ಪೀಡಿತ ಜನರ ಬಗ್ಗೆ ಭಾಷಣ ಮಾಡಿಲ್ಲ. ಇದು ಮೋದಿಯವರ ವಿಕಾಸ ಪರ್ವ. ರಾಜ್ಯದಲ್ಲಿ 30 ಕೆ.ಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ರೇಷನ್ ಕಡಿತ ಮಾಡಿದೆ. ಲೋಕಾಯುಕ್ತವನ್ನು ಬಲಗೊಳಿಸುವ ಬದಲು ಭ್ರಷ್ಟ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಹಿತವಾಗುವ ಎ.ಸಿ.ಬಿ ರಚನೆ ಮಾಡಿರುವುದು ಖಂಡನೀಯ ಸಿ.ಪಿ.ಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಕಾಂ||ಕೆ.ಮಹಾಂತೇಶ್ ಹೇಳಿದರು.

ಅವರು ಮೇ 25ರಂದು ಎಡಪಕ್ಷಗಳ ಜನಾಂದೋಲನ ಹಾಗೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನ ಜಾರಿಗೆ ಮತ್ತು ಬರ ನಿರ್ವಹಣೆಗೆ ತಾತ್ಸಾರ ಮಾಡಿದ ಬಗ್ಗೆ ಸರ್ವೋಚ್ಚ ನ್ಯಾಯಲಾಯದಿಂದ ತಪರಾಕಿ ಹಾಕಿಸಿಕೊಂಡಿರುವುದು ಮೋದಿ ಸರ್ಕಾರದ ವಿನಾಶ ಪರ್ವದ 2 ವರ್ಷಗಳ ಸಾಧನೆ. ಚುನಾವಣೆ ಬಂದಾಗ ಬಿ.ಜೆ.ಪಿ ಸೋಲಿಸಲು ಎಡ ಪಕ್ಷಗಳ ಬೆಂಬಲ ಬಯಸುವ ಕಾಂಗ್ರೆಸ್ ಪಕ್ಷವು ಜನ ಪರ ನೀತಿಗಳನ್ನು ಜಾರಿಗೆ ತಾರದೆ ಇರುವುದು ಸರಿಯಲ್ಲ ಎಂದು ಸಿ.ಪಿ.ಐ ಪಕ್ಷದ ಮುಖಂಡರಾದ ಡಾ|| ಸಿದ್ದನಗೌಡ ಪಟೀಲ್ ತಿಳಿಸಿದರು.

ಸಮಾವೇಶವನ್ನು ಉದ್ದೇಶಿಸಿ ಎಸ್.ಯು.ಸಿ.ಐ(ಸಿ) ಪಕ್ಷದ ರಾಜ್ಯ ಮುಖಂಡರಾದ ಕಾಂ|| ಸೋಮಶೇಖರ್ ಮತ್ತು ಸಿ.ಪಿ.ಐ-ಎಂ.ಎಲ್ ಪಕ್ಷದ ಕಾಂ|| ಮಾರುತಿ ಸಭೆಯಲ್ಲಿ ಮಾತನಾಡಿದರು ಸಭೆಯ ಅಧ್ಯಕ್ಷತೆಯನ್ನು ಸಿ.ಪಿ.ಐ ಪಕ್ಷದ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಕಾಂ||ಹೆಚ್.ಕೆ. ರಾಮಚಂದ್ರಪ್ಪ ವಹಿಸಿದ್ದರು.

ಆರಂಭದಲ್ಲಿ ಸಿ.ಪಿ.ಐ ನ ಕಾಂ||ಅವರಗೆರೆ ಚಂದ್ರು ಸ್ವಾಗತ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಸಿ.ಪಿ.ಐ(ಎಂ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಲ್.ಭಟ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ವೇದಿಕೆಯಲ್ಲಿ ಸಿ.ಪಿ.ಐ ನ ನಗರಪಾಲಿಕೆ ಸದಸ್ಯ ಕಾಂ|| ಹೆಚ್.ಜಿ. ಉಮೇಶ್, ಕಾಂ|| ಆನಂದ್‍ರಾಜ್, ಎಸ್.ಯು.ಸಿ.ಐ.ನ ಕಾಂ|| ಮಂಜುನಾಥ್ ಕೈದಾಳೆ ಮತ್ತು ಸಿ.ಪಿ.ಐ (ಎಂ.ಎಲ್) ನ ಇದ್ಲಿ ರಾಮಪ್ಪ ಇವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಕಟ್ಟಡ ಕಾರ್ಮಿಕರು, ಬಿಸಿಯೂಟ-ಅಂಗನವಾಡಿ ಕಾರ್ಯಕರ್ತೆಯರು, ಆಟೋ ರಿಕ್ಷಾ ಸಂಘದ ಸದಸ್ಯರು, ಕೆ.ಪಿ.ಆರ್.ಎಸ್- ಡಿ.ವೈ.ಎಫ್.ಐ ಕಾರ್ಯಕರ್ತರು, ಕೊಳಚೆಪ್ರದೇಶ ನಿವಾಸಿಗಳು ಸೇರಿದಂತೆ ಸುಮಾರು 200 ಜನ ಸಭೆಯಲ್ಲಿ ಭಾಗವಹಿಸಿದ್ದರು.

ಚಿತ್ರದುರ್ಗ :

ಮೇ 24ರಂದು ಜಿಲ್ಲೆಯ ಎಡಪಕ್ಷಗಳ ನೇತೃತ್ವದಲ್ಲಿ ಜಿಲ್ಲಾ ಸಮಾವೇಶವು ಪತ್ರಕರ್ತರ ಸಭಾಂಗಣದಲ್ಲಿ ನಡೆಯಿತು. ಸಮಾವೇಶದಲ್ಲಿ ಸಿಪಿಐ ರಾಜ್ಯ ಮುಖಂಡರಾದ ಎಚ್.ಕೆ.ರಾಮಚಂದ್ರಪ್ಪ, ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಕೆ.ಮಹಾಂತೇಶ, ಎಸ್.ಯು.ಸಿ.ಐ.(ಸಿ) ಮುಖಂಡರಾದ ಡಾ.ಸುನೀತಕುಮಾರರವರು ಮಾತನಾಡಿದರು. ಸಮಾವೇಶದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಭಟ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶಿವರುದ್ರಪ್ಪ, ಎಸ್.ಯು.ಸಿ.ಐ ಮುಖಂಡರಾದ ರವಿಕುಮಾರ, ಸಿಪಿಐ(ಎಂ) ಮುಖಂಡರಾದ ಡಿ.ಎಂ.ಮಲಿಯಪ್ಪ, ತಿಪ್ಪೇಸ್ವಾಮಿ, ವೀರಭದ್ರಪ್ಪ, ನಿಂಗಣ್ಣ, ಗೌಸಫೀರ ಮೊದಲಾದವರು ಭಾಗವಹಿಸಿದ್ದರು.

ಮೈಸೂರು :

ಜಿಲ್ಲೆಯ ಟಿ.ನರಸಿಪುರ ತಾಲ್ಲೂಕಿನಲ್ಲಿ ಎಡಪಕ್ಷಗಳ ನೇತೃತ್ವದಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು. ಸಿಪಿಐ, ಸಿಪಿಐ(ಎಂ), ಎಸ್‍ಯುಸಿಐ(ಸಿ), ಸಿಪಿಐ(ಎಂಎಲ್) ಲಿಬರೇಷನ್ ವತಿಯಿಂದ ಮುಖಂಡರು ಮಾತನಾಡಿದರು.

Advertisements