ಬೆಟ್ಟದಿಂದ ಬಟ್ಟಲಿಗೆ ಕಾಫಿ-ಟೀ ತರುವ ಕಾರ್ಮಿಕರ ಯೂನಿಯನಿನ 60 ವರ್ಷಗಳ ರೋಚಕ ಇತಿಹಾಸ

ಸಂಪುಟ: 10 ಸಂಚಿಕೆ: 23 Sunday, May 29, 2016

ಕಾಫಿಯನ್ನು ಬೆಟ್ಟದಿಂದ ಬಟ್ಟಲಿಗಿಳಿಸುವುದರ ಹಿಂದೆ ಲಕ್ಷಾಂತರ ಕಾರ್ಮಿಕರ ಶ್ರಮ ಅಡಗಿದೆ. ಇಂತಹ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಪ್ರೊವಿನ್ಷ್ ಯಲ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಪ್ರಾರಂಭವಾಗಿ 2016ರ ಮೇ ತಿಂಗಳಿಗೆ 60 ವರ್ಷಗಳನ್ನು ಪೂರೈಸಿದೆ. 1956 ಮೇ 17 ರಂದು ನೋಂದಣಿಯಾದ ಈ ಕಾರ್ಮಿಕ ಸಂಘವು ರಾಜ್ಯದಲ್ಲಿ ಹಿರಿಯದಾದ ಕೆಲವೇ ಕಾರ್ಮಿಕ ಸಂಘಗಳಲ್ಲಿ ಇದೂ ಕೂಡ ಒಂದು. ಈ ಯೂನಿಯನಿನ ನೇತೃತ್ವದಲ್ಲಿ ಪ್ಲಾಂಟೇಶನ್ ಕಾರ್ಮಿಕರ ಹೋರಾಟದ ರೋಚಕ ಇತಿಹಾಸದ ಒಂದು ಝಲಕ್ ಇಲ್ಲಿದೆ. ಇದೇ ಮೇ 30ರಂದು ಸಕಲೇಶಪುರದಲ್ಲಿ ಈ ಸಂಘದ ವಜ್ರಮಹೋತ್ಸವವನ್ನು ವಿಶೇಷ ಸಮಾವೇಶ ನಡೆಸುವುದರೊಂದಿಗೆ ಆಚರಿಸಲಾಗುತ್ತಿದೆ.

ಬಹುತೇಕ ಜನರ ದಿನಚರಿ ಆರಂಭವಾಗುವುದೇ ಬೆಳಗಿನ ಕಾಫಿ ಸೇವನೆಯಿಂದ. ಇನ್ನು ಈ ಕಾಫಿ ಎಷ್ಟರ ಮಟ್ಟಿಗೆ ನಮ್ಮನ್ನು ಆವರಿಸಿದೆ ಎಂದರೆ ಮಾತುಗಳು ಕಾಫಿ ಅಥವಾ ಟೀ ಜೊತೆಗೆ ಆರಂಭವಾಗುವುದು. ಒಂದು ಹಳ್ಳಿಯಲ್ಲಿ ಸಣ್ಣ ಗೂಡಂಗಡಿಯಿಂದ ದೊಡ್ಡ ದೊಡ್ಡ ನಗರಗಳಲ್ಲಿ ಐಶಾರಾಮಿ ಕಾಫಿಡೇ ಗಳವರೆಗೆ ಎಲ್ಲಾ ರೀತಿಯಲ್ಲೂ ಎಲ್ಲರಿಗೂ ಕಾಫಿ ಪ್ರಿಯವಾದದ್ದು. ಇದು ದೇಶಗ ಗಡಿಗಳನ್ನು ದಾಟಿ ಎಲ್ಲಾ ರೀತಿಯ ಸಂಸ್ಕೃತಿಯೊಳಗೂ ಬೆರೆತು ಹೋಗಿದೆ. ಇಂತಹ ಕಾಫಿಯನ್ನು ಬೆಟ್ಟದಿಂದ ಬಟ್ಟಲಿಗಿಳಿಸುವುದರ ಹಿಂದೆ ಲಕ್ಷಾಂತರ ಕಾರ್ಮಿಕರ ಶ್ರಮ ಅಡಗಿದೆ.

ಕಾಫಿ ಒಂದು ತೋಟಗಾರಿಕಾ ಬೆಳೆ. ಇದನ್ನು ಬೆಳೆಯಲು ಮೆಲೆನಾಡಿನ ಬೆಟ್ಟಗಳ ಪ್ರದೇಶ ಮತ್ತು ಅಲ್ಲಿನ ವಾತಾವರಣ ಉತ್ತಮವಾದದ್ದು. ಎಲ್ಲರ ಮನೆಗಳ ಡಬ್ಬಗಳಲ್ಲಿ ಸೇರಿರುವ ಕಾಫಿಯನ್ನು ಬೆಳೆಯುವ ಕಾಫಿ ತೋಟಗಳಲ್ಲಿ (ಪ್ಲಾಂಟೇಷನ್) ಕೆಲಸ ಮಾಡುವ ಕಾರ್ಮಿಕರ ಬದುಕು-ಬವಣೆ ಹೇಳತೀರದು ಮತ್ತು ಅವರು ಈ ಕಾಫಿಯನ್ನು ಬೆಳೆದು ನಮ್ಮ ಕೈಗಿಡುವವರೆಗಿನ ಅವರ ಶ್ರಮ ಅಗಾದವಾದದ್ದು. ಕರ್ನಾಟಕದಲ್ಲಿ ಕಾಫಿ ಬೆಳೆಯನ್ನು ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಈ ಮೂರು ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ಈ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ನಡೆಸಿಕೊಂಡು ಬರುತ್ತಿರುವ ಕರ್ನಾಟಕ ಪ್ರೊವಿನ್ಷ್ ಯಲ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಪ್ರಾರಂಭವಾಗಿ 2016ರ ಮೇ ತಿಂಗಳಿಗೆ 60 ವರ್ಷಗಳನ್ನು ಪೂರೈಸಿದೆ. 1956 ಮೇ 17 ರಂದು ನೋಂದಣಿಯಾದ ಈ ಕಾರ್ಮಿಕ ಸಂಘವು ರಾಜ್ಯದಲ್ಲಿ ಹಿರಿಯದಾದ ಕೆಲವೇ ಕಾರ್ಮಿಕ ಸಂಘಗಳಲ್ಲಿ ಒಂದು.

ಬ್ರಿಟೀಷರು ಮತ್ತು ನಂತರದ ಕಾಲಘಟ್ಟಗಳಲ್ಲಿ ತೋಟಗಳನ್ನು ಅಭಿವೃದ್ಧಿಪಡಿಸಲು ಮಾಲೀಕರು ಜನರನ್ನು ಬೇರೆಡೆಗಳಿಂದ ಕರೆತರುತ್ತಿದ್ದರು. ಉದಾ: ಕರ್ನಾಟಕದ ತೋಟ ಮಾಲೀಕರು ಕೆಲಸಗಳಿಗೆ ಕಾರ್ಮಿಕರನ್ನು ತಮಿಳುನಾಡು, ಕೇರಳ ಮತ್ತು ಮಂಗಳೂರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತರುತ್ತಿದ್ದರು. ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಂಡರೆ ವಿಪರೀತ ಶೋಷಣೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದೇ ಇದರ ಮುಖ್ಯ ಉದ್ದೇಶವಾಗಿತ್ತು. ಬೇರೆಡೆಗಳಿಂದ ಕರೆತಂದ ಜನಗಳನ್ನು ಜೀತದಾಳುಗಳಂತೆ ಯಾವುದೇ ಕೂಲಿ ನೀಡದೆ ಬದುಕಲು ಅಗತ್ಯವಿರುವಷ್ಟು ಆಹಾರ ನೀಡುತ್ತಾ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಂತರ ಇವರು ಜಾಗೃತರಾಗಿ ಕಾರ್ಮಿಕ ಸಂಘವನ್ನು ಕಟ್ಟಿಕೊಂಡು ಅವರ ಹಕ್ಕುಗಳನ್ನು ಕೇಳಲು ಪ್ರಾರಂಭಿಸಿ ಕಾರ್ಮಿಕರ ಒಗ್ಗಟ್ಟನ್ನು ಪ್ರದರ್ಶಿಸಲು ಪ್ರಾರಂಭಿಸಿದರು.

ಕರ್ನಾಟಕದ ಕಾಫಿ ತೋಟಗಳಲ್ಲಿ ‘ಕಂಗಾಣಿ’ ಪದ್ದತಿ ಅನುಷ್ಠಾನದಲ್ಲಿದ್ದಿತು. ಬಹುತೇಕ ಪ್ಲಾಂಟರುಗಳು ತಮಗೆ ಬೇಕಾದ ಕೆಲಸಗಾರರನ್ನು ಕಂಗಾಣಿಗಳ ಅಂದರೆ ಮೇಸ್ರ್ತೀಗಳ ಅಥವಾ ದಳ್ಳಾಳಿಗಳ ಮೂಲಕ ತೆಗೆದುಕೊಳ್ಳುತ್ತಿದ್ದರು. ಈ ಪದ್ದತಿಯಿಂದ ಪ್ಲಾಂಟರಿಗೂ ಕಾರ್ಮಿಕರಿಗೂ ಸಂಬಂಧವೇ ಇರುತ್ತಿರಲಿಲ್ಲ. ಕೆಲಸಗಾರರನ್ನು ತರುವ, ಅವರನ್ನು ಹೇಗೆಂದರೆ ಹಾಗೆ ನಡೆಸಿಕೊಳ್ಳುವ ಕೆಲಸ ಕಂಗಾಣಿಯದು. ಈ ಪದ್ದತಿಗೆ ಕಾಲಕ್ರಮೇಣ ಬಹಳ ವಿರೋಧ ಬಂದಿತು. ಕಂಗಾಣಿ ಪದ್ದತಿಯನ್ನು ತಪ್ಪಿಸಲು ಭಾರತ ಸರ್ಕಾರವು 1951ರಲಿ ಕೆಲವು ನಿಯಮಗಳನ್ನು ಜಾರಿಗೆ ತಂದಿತು. ಕಂಗಾಣಿ ಪದ್ದತಿಯನ್ನು ಹೋಗಲಾಡಿಸುವ ಕೆಲಸ 1958ರ ವೇಳೆಗೆ ಸಂಪೂರ್ಣವಾಯಿತು. ಪ್ಲಾಂಟರುಗಳು ತಮಗೆ ಬೇಕಾದ ಕಾರ್ಮಿಕರನ್ನು ನೇರವಾಗಿ ನೇಮಿಸಿಕೊಳ್ಳುವ ಪದ್ದತಿ ಬಂದಿತು.

ಅರವತ್ತು ವರ್ಷಗಳ ಹಿಂದೆ ತೋಟ ಕೆಲಸಗಾರರಿಗೆ ಸಿಕ್ಕುತ್ತಿದ್ದ ಕೂಲಿ ಗಂಡಿಗೆ ದಿವಸಕ್ಕೆ ಒಂದು ರೂಪಾಯಿ, ಹೆಣ್ಣಿಗೆ ಒಂಬತ್ತಾಣೆ, ಸಣ್ಣವರಿಗೆ ಆರಾಣೆ. ಬೋನಸ್, ಗ್ರಾಚುಟಿ ಮೊದಲಾದ ಯಾವ ಸೌಲಭ್ಯಗಳೂ ತೋಟ ಕಾರ್ಮಿಕರಿಗೆ ಸಿಕ್ಕುತ್ತಿರಲಿಲ್ಲ. ಮನರಂಜನಾ ಸಾಧನಗಳು ತೀರಾ ಕಡಿಮೆಯಾಗಿತ್ತು, ಚಲನಚಿತ್ರ ಮಂದಿರಗಳು, ಟೆಂಟ್ ಸಿನಿಮಾಗಳು ಮಲೆನಾಡಿನಲ್ಲಿ ಅಪರೂಪವಾಗಿದ್ದವು, ಆಗ ಟ್ರಾನ್‍ಸಿಸ್ಟರ್ ರೇಡಿಯೋ ಇರಲಿಲ್ಲ. ಓದು ಬರಹ ಕಲಿಯುವ ಅವಕಾಶಗಳು ತೋಟ ಕಾರ್ಮಿಕರಿಗೆ, ಅವರ ಮಕ್ಕಳಿಗೆ ಏನೇನೂ ಇರಲಿಲ್ಲವೆಂದರೆ ಅತಿಶಯವಾಗಲಾರದು. ತೋಟ ಕೆಲಸಗಾರರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿತ್ತು, ಸಣ್ಣ ಪುಟ್ಟ ಕಾರಣಗಳಿಗೆಲ್ಲಾ ಹಿಂದೆ ಪ್ಲಾಂಟರುಗಳು, ರೈಟರುಗಳು ಕೆಲಸಗಾರರನ್ನು ಹೊಡೆಯುತ್ತಿದ್ದರು, ಒದೆಯುತ್ತಿದ್ದರು, ಕಂಬಕ್ಕೆ ಇಲ್ಲವೇ ಮರಕ್ಕೆ ಕಟ್ಟಿ ಹಾಕಿ ಬಾಸುಂಡೆ ಬರುವಂತೆ ಬಾರಿಸುತ್ತಿದ್ದರು. ತೋಟಗಳಲ್ಲಿ ಕೆಲಸ ಮಾಡುವವರು ಬಹುತೇಕ ದಲಿತ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು ಈಗಲೂ ಅದೇ ಪರಿಸ್ಥಿತಿ ಮುಂದುವರೆದಿದೆ.

ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಸ್ಥಾಪನೆ

ಇಂತಹ ಪರಿಸ್ಥಿತಿಯಲ್ಲಿ ಕೆಂಬಾವುಟದಡಿಯಲ್ಲಿ ತೋಟ ಕಾರ್ಮಿಕರ ಸಂಘಟನೆ 1946ರ ವೇಳೆಗೆ ಕೊಡಗಿನಲ್ಲಿಯೂ 1956ರ ವೇಳಗೆ ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿಯೂ ಪ್ರಾರಂಭವಾಯಿತು. ಹಾಸನ ಜಿಲ್ಲೆಯ ಮಂಜ್ರಾಬಾದ್ ತಾಲೂಕಿನಲ್ಲಿರುವ (ಈಗಿನ ಸಕಲೇಶಪುರ ತಾಲ್ಲೂಕು) ಕಾಡುಮನೆ ಟೀ ತೋಟ ಕರ್ನಾಟಕದಲ್ಲಿರುವ ಪ್ಲಾಂಟೇಷನ್‍ಗಳ ಪೈಕಿ ಅತಿ ದೊಡ್ಡ ತೋಟ. ಆಗ ಸುಮಾರು ಎರಡು ಸಾವಿರ ಕಾರ್ಮಿಕರು ಆ ತೋಟದಲ್ಲಿ ದುಡಿಯುತ್ತಿದ್ದರು. ಕಾಡುಮನೆ ಎಸ್ಟೇಟಿನ ತಮಿಳು ಕಾರ್ಮಿಕರಲ್ಲಿ ಕೆಲವರಿಗೆ ಸಂಘ ಬೇಕೆನಿಸಿತು. ತಮ್ಮ ಜೀವನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಒಗ್ಗಟ್ಟಾಗಬೇಕು, ಸಂಘವನ್ನು ಕಟ್ಟಬೇಕು ಎನಿಸಿತು. ಅವರಲ್ಲಿ ಕೆಲವರು ಕಮ್ಯುನಿಸ್ಟ್ ಶಾಸಕ ಕೆ.ಎಸ್.ವಾಸನ್‍ರನ್ನು ಹುಡುಕಿಕೊಂಡು ಹೋದರು. ಪರಸ್ಪರÀ ಸಮಾಲೋಚನೆ, ಯೋಜನೆಗಳ ಪರಿಣಾಮವಾಗಿ ಕರ್ನಾಟಕ ಪ್ರೋವಿನ್ಷಿಯಲ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಸ್ಥಾಪನೆಯಾಯಿತು. ಈ ಕಾರ್ಮಿಕ ಸಂಘವು 1956ರ ಮೇ 17ರಂದು ರಿಜಿಸ್ಟರ್ ಆಯಿತು. ಕೆ,ಎಸ್.ವಾಸನ್ ಈ ಸಂಘದ ಸಂಸ್ಥಾಪಕ ಅದ್ಯಕ್ಷರಾದರು. 1952 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂದಿನ ಮೈಸೂರು ರಾಜ್ಯದ ವಿಧಾನ ಸಭೆಗೆ ಕೋಲಾರ ಜಿಲ್ಲೆಯ ಚಿನ್ನದಗಣಿ ಕ್ಷೇತ್ರದಿಂದ ಕಮ್ಯುನಿಸ್ಟ್ ಪಕ್ಷದ ಉಮೇದುವಾರ ಕೆ.ಎಸ್.ವಾಸನ್ ಚುನಾಯಿತರಾಗಿದ್ದರು.

ಕಾರೈಕುರ್ಚಿಲ್ ಎಸ್ಟೇಟ್ ಹೋರಾಟ

1951ರಲ್ಲಿ ಭಾರತ ಸರ್ಕಾರವು ಪ್ಲಾಂಟೇಷನ್ಸ್ ಲೇಬರ್ ಆಕ್ಟ್ ಎಂಬ ಕಾಯಿದೆಯನ್ನು ಮಾಡಿತು. ಈ ಕಾಯಿದೆಯ ಅಡಿಯಲ್ಲಿ ರಾಜ್ಯ ಸರ್ಕಾರಗಳು ನಿಯಮಗಳನ್ನು (ರೂಲ್ಸ್) ರಚಿಸಬೇಕಾಗಿದ್ದಿತು. ನಿಯಮಗಳ ರಚನೆಯಾದರೆ ಮಾತ್ರ ಕಾಯಿದೆಯ ಪ್ರಕಾರ ಕಾರ್ಮಿಕರು ಸೌಲಭ್ಯಗಳನ್ನು ಕೇಳಬಹುದಾಗಿದ್ದಿತು. ಸಂಸತ್ತು ಕಾಯಿದೆ ಮಾಡಿ ಐದು ವರ್ಷಗಳಾದರೂ ಸಹ ಮೈಸೂರು ರಾಜ್ಯ ಸರ್ಕಾರವು ನಿಯಮಗಳನ್ನು ರಚಿಸಿರಲಿಲ್ಲ. ಕೆಂಬಾವುಟದ ಕರ್ನಾಟಕ ಪ್ರೋವಿನ್ಷಿಯನ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಸ್ಥಾಪನೆಯಾದ ಸ್ವಲ್ಪ ಕಾಲದಲ್ಲಿಯೇ ಮೈಸೂರು ಸರ್ಕಾರವು ರೂಲ್ಸ್ ಮಾಡಿತು. ಮೈಸೂರು ಪ್ಲಾಂಟೇಷಿಯನ್ ಲೇಬರ್ ರೂಲ್ಸ್ 1956ರಲ್ಲಿ ಜಾರಿಗೆ ಬಂದಿತು.

ಕರ್ನಾಟಕ ಪ್ರೋವಿನ್ಷಿಯಲ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ರಚನೆಯಾದ ಸ್ವಲ್ಪ ಕಾಲದಲ್ಲಿಯೇ ನಡೆದ ಹೋರಾಟ ಪ್ರಖ್ಯಾತವಾದ ಕಾರೈಕುರ್ಚಿಲ್ ಎಸ್ಟೇಟ್ ಕಾರ್ಮಿಕರ ಹೋರಾಟ, ಕಾರೈಕುರ್ಚಿಲ್‍ಎಸ್ಟೇಟ್ ಚಿಕ್ಕಮಗಳೂರು ತಾಲ್ಲೂಕಿ ನಲ್ಲಿ ಬಾಬಾಬುಡನ್‍ಗಿರಿಯ ಮೇಲಿದೆ. ಅಂದು ಆ ತೋಟದಲ್ಲಿ ನೂರೈವತ್ತು ಕಾರ್ಮಿಕರು ದುಡಿಯುತ್ತಿದ್ದರು. ಆ ತೋಟದ ಅಂದಿನ ಮಾಲೀಕರು ಜಿಲ್ಲೆಯ ದೊಡ್ಡ ಶ್ರೀಮಂತರು, ಪ್ರತಿಷ್ಠಿತರು ಮತ್ತು ಸರ್ಕಾರದಲ್ಲಿ ವರ್ಚಸ್ಸಿದ್ದವರು. ತಮಗೆ ಸಿಗುತ್ತಿದ್ದ ಕೂಲಿ ಜೀವನಕ್ಕೆ ಸಾಲದೆಂದು ಹೆಚ್ಚು ಕೂಲಿಯ ಬೇಡಿಕೆಗಾಗಿ ಕಾರೈಕುರ್ಚಿಲ್ ಕಾರ್ಮಿಕರು ಮುಷ್ಕರವನ್ನು ಪ್ರಾರಂಭಿಸಿದರು. ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ನಡೆದ ಚಾರಿತ್ರಿಕ ಮುಷ್ಕರವಾಗಿ ದಾಖಲಾಯಿತು. ಪ್ಲಾಂಟರ್‍ಗಳ ಹಿತರಕ್ಷಣೆ ಮಾಡಲು ಬಂದಿದ್ದ ಪೋಲೀಸರು ಮತ್ತು ತಮ್ಮ ನ್ಯಾಯ ಸಮ್ಮತವಾದ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದ ಕಾರೈಕುರ್ಚಿಲ್ ಎಸ್ಟೇಟಿನ ಕಾರ್ಮಿಕರಿಗೂ ಘರ್ಷಣೆಗಳಾದವು. ಪೋಲೀಸರು ಹೊಡೆದಿದ್ದು ಮಾತ್ರವೇ ಅಲ್ಲ, ಐವತ್ತಕ್ಕೂ ಹೆಚ್ಚು ಕಾರ್ಮಿಕರ ಮೇಲೆ ಮೊಕದ್ದಮೆ ಹೂಡಿದರು, ತಮ್ಮ ಬೇಡಿಕೆಗಳಿಗಾಗಿ, ತಮ್ಮ ಮೇಲಾದ ದೌರ್ಜನ್ಯವನ್ನು ಪ್ರತಿಭಟಿಸಿ ಚಿಕ್ಕಮಗಳೂರು ನಗರದಲ್ಲಿ ಪ್ಲಾಂಟರ್ಸ್ ಆಫೀಸಿನ ಮುಂದೆ ಸಾಮೂಹಿಕ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಕಾರೈಕುರ್ಚಿಲ್ ಕಾರ್ಮಿಕರನ್ನು ಪೋಲೀಸರು ಬಂಧಿಸಿ ಜೈಲಿಗೆ ಹಾಕಿದರು. ಹೋರಾಟ ಮುಕ್ತಾಯವಾದ ಮೇಲೆ ಆ ಕಾರ್ಮಿಕರು ಅದೇ ತೋಟದಲ್ಲಿ ಮುಂದುವರೆಯುವಂತಾದರೂ ಒಂದು ವರ್ಷದ ನಂತರ ಕೂಲಿ ಹೆಚ್ಚಳವಾಯಿತು. ರಾಜ್ಯದ ಎಲ್ಲಾ ತೋಟ ಕಾರ್ಮಿಕರ ನಡುವೆ ಕಾರೈಕುರ್ಚಿಲ್ ಹೋರಾಟ ಮನೆ ಮಾತಾಯಿತು. ಕರ್ನಾಟಕ ಪ್ರೋವಿನ್ಷಿಯನ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಸದಸ್ಯತ್ವವು  ಬೆಳೆಯಲಾರಂಭಿಸಿತು. ಈ ಸಂಘದ ಹೆಸರು ಮತ್ತು ಪ್ರಭಾವ ಚಿಕ್ಕಮಗಳೂರು ಮತ್ತು ಹಾಸನ  ಜಿಲ್ಲೆಗಳ ತೋಟಗಳಲ್ಲಿ ವ್ಯಾಪಕವಾಗಿ ಹರಡಿತು.

ಕಾರೈಕುರ್ಚಿಲ್ ಹೋರಾಟ ನಡೆಯುವವರೆಗೆ ಕರ್ನಾಟಕದಲ್ಲಿ ತೋಟ ಕೈಗಾರಿಕೆಯಲ್ಲಿ ಕೂಲಿಯ ವಿಷಯದಲ್ಲಾಗಲೀ ಅಥವಾ ಕಾರ್ಮಿಕರಿಗೆ ಸಿಕ್ಕುವ ಯಾವುದೇ ಸೌಲಭ್ಯದ ವಿಷಯದಲ್ಲಾಗಲೀ ಕೈಗಾರಿಕಾವಾರು ಮಾತುಕತೆ ನಡೆಯುತ್ತಿರಲಿಲ್ಲ, ಕೈಗಾರಿಕವಾರು ಒಪ್ಪಂದಗಳಾಗುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕಾದ ಅಂಶ. ಕರ್ನಾಟಕ ಪ್ರೋವಿನ್ಷಿಯನ್ ಪಾಂಟೇಷನ್ ವರ್ಕರ್ಸ್ ಯೂನಿಯನ್ನಿನ ಮತ್ತು ಕಾರೈಕುರ್ಚಿಲ್ ಹೋರಾಟದ ವೇಳೆಗೆ ಮಾಲೀಕರ ಸಂಘ ರೂಪುಗೊಂಡಿತು.  ಅದೇ ಮೈಸೂರು ಸ್ಟೇಟ್ ಪ್ಲಾಂಟರ್ಸ್ ಅಸೋಸಿಯೇಷನ್ (ಎಂ.ಎಸ್.ಪಿ.ಎ)

ಬೋನಸ್ ಹೋರಾಟ 1959

1959ರಲ್ಲಿ ಬೋನಸ್ಸಿಗಾಗಿ ಕರ್ನಾಟಕ ಪ್ರೋವಿನ್ಷಿಯನ್ ಪಾಂಟೇಷನ್ ವರ್ಕರ್ಸ್ ಯೂನಿಯನ್ನಿನ ನೇತೃತ್ವದಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ವ್ಯಾಪಕವಾದ ಮುಷ್ಕರ ಹೋರಾಟ ನಡೆಯಿತು. ಆ ಹೋರಾಟದ ನಂತರ 1962 ರಲ್ಲಿ ಮೈಸೂರು ಅಸಿಸ್ಟಂಟ್ ಲೇಬರ್ ಕಮೀಷನರ್ ಮುಂದೆ ಒಂದು ಬೋನಸ್ ಒಪ್ಪಂದವಾಗಿ ತೋಟ ಕಾರ್ಮಿಕರಿಗೆ ಬೋನಸ್ ಸಿಕ್ಕಲಾರಂಬಿಸಿತು. 1963ರವರೆಗೆ ಚಿಕ್ಕಮಗಳೂರು ಹಾಸನ ಜಿಲ್ಲೆಗಳಲ್ಲಿ ಪ್ಲಾಂಟೇಷನ್ ಕೈಗಾರಿಕೆಯಲ್ಲಿ ಕರ್ನಾಟಕ ಪ್ರೋವಿನ್ಷಿಯನ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಮತ್ತು ಸಿಬ್ಬಂದಿಗಳ ಸಂಘವೂ ಸೇರಿ ನಾಲ್ಕು ಕಾರ್ಮಿಕರ ಸಂಘಗಳು ಮಾತ್ರ ಇದ್ದವು. ಈ ನಾಲ್ಕು ಕಾರ್ಮಿಕರ ಸಂಘಗಳು ಈ ಅವಧಿಯಲ್ಲಿ ಪ್ರಮುಖ ಮುಷ್ಕರವನ್ನು ನಡೆಸಿದುವು. 1956ರಿಂದ ನಡೆಯುತ್ತಿದ್ದ ಪ್ಲಾಂಟೇಷನ್ ಕಾರ್ಮಿಕರ ಚಳುವಳಿ ಪ್ಲಾಂಟರುಗಳ ಮೇಲೆ ಪ್ರಭಾವವನ್ನು ಬೀರಿತು. ತೋಟ ಕಾರ್ಮಿಕರು ತಮ್ಮ ಕೂಲಿ, ಬೋನಸ್ಸಿಗಾಗಿ, ತಮ್ಮ ಜೀವನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಹೋರಾಟ ಮಾಡುವುದರ ಜತೆಗೆ ಅವರ ತಿಳುವಳಿಕೆ ಹೆಚ್ಚುತ್ತದೆ, ಅವರಿಗೆ ವರ್ಗರಾಜಕೀಯ ಪ್ರಜ್ಞೆ ಬೆಳೆಯುತ್ತದೆ ಎಂಬ ವಿಷಯ ಅವರನ್ನು ಕಾಡತೊಡಗಿತು, ಪ್ಲಾಂಟರುಗಳು ಒಬ್ಬೊಬ್ಬರಾಗಿ ಬೆಂಗಳೂರಿನಲ್ಲಿ ಮನೆ ಮಾಡಲಾರಂಭಿಸಿದರು. ಇದು ಕೆಲವರಿಗೆ ಅವರ ಮಕ್ಕಳ ಶಿಕ್ಷಣಕ್ಕೂ ಉಪಯೋಗವಾಯಿತು. ಪ್ಲಾಂಟರುಗಳ ಮಕ್ಕಳು ಚಿಕ್ಕಮಗಳೂರು, ಹಾಸನಗಳಲ್ಲಿರುವ ದರವೇಸಿ ಕಾಲೇಜುಗಳಲ್ಲಿ ಕಲಿಯುವುದು ಹೇಗೆ? ಅವರಿಗೇನಿದ್ದರೂ ಕಿಂಗ್ ಜಾರ್ಜ್‍ಸ್ಕೂಲ್‍ನಂತಹ ರೆಸಿಡೆನ್ಷಿಯಲ್ ಸ್ಕೂಲುಗಳು ಬೇಕು. ಬೆಳೆಯುತ್ತಿರುವ ತೋಟಕಾರ್ಮಿಕರ ಸಂಘಟನೆ, ಐಕ್ಯ ಚಳುವಳಿಗಳನ್ನು ತಡೆಯಲು ಅವರು ಒಂದು ತಂತ್ರವನ್ನು ಮಾಡಿದರು. 1963 ರಿಂದೀಚೆ ಅವರೇ ತೆರೆಯ ಮರೆಯಲ್ಲಿದ್ದು ಹಲವಾರು ತೋಟಕಾರ್ಮಿಕರ ಸಂಘಗಳನ್ನು ಹುಟ್ಟುಹಾಕಿದರು. ಕೂಲಿ, ಬೋನಸ್ ಇತ್ಯಾದಿಗಳನ್ನು ಕೊಡಿಸುವ ಹೊಸÀ ಸಂಘಗಳು ಹುಟ್ಟಿಕೊಂಡುವು. ಈ ಸಂಘಗಳ ಮೂಲಕ ಕರ್ನಾಟಕ ಪ್ರೋವಿನ್ಷಿಯನ್ ಪಾಂಟೇಷನ್ ವರ್ಕರ್ಸ್ ಯೂನಿಯನ್ನನ್ನು ಒಡೆದು ಛಿದ್ರ ಮಾಡುವ ಕೆಲಸ ಪ್ರಾರಂಭವಾಯಿತು, ಈ ಕೆಲಸದಲ್ಲಿ ಭಾಷೆಯನ್ನು ಯಥೇಚ್ಚವಾಗಿ ಬಳಸಲಾಯಿತು. ಟೀ ತೋಟಗಳಲ್ಲಿ ದೀರ್ಘಕಾಲದಿಂದ ನೆಲೆಸಿದ್ದ ತಮಿಳು ಕಾರ್ಮಿಕರನ್ನು ಇದಕ್ಕೆ ನೆಲೆಯಾಗಿ ಉಪಯೋಗಿಸಲಾಯಿತು. ಆ ತರುವಾಯ 1964ರಲ್ಲಿ ಒಂದು ಕೈಗಾರಿಕಾವಾರು ಒಪ್ಪಂದವಾಗಿ ಏಳು ವರ್ಷಗಳ ಸೇವೆ ಸಲ್ಲಿಸಿದ್ದ ಕಾಮಿಕರು ಕೆಲಸಕ್ಕೆ ರಾಜೀನಾಮೆ ಕೊಟ್ಟು ತೋಟ ಬಿಟ್ಟು ಹೋಗುವುದಾದರೆ ಅವರಿಗೆ ಗ್ರಾಚುಟಿ ಸಿಗುವಂತಾಯಿತು. ಅನೇಕ ಕಡೆ ಕಾರ್ಮಿಕರ ಏಳು ವರ್ಷ ಆದ ಕೂಡಲೇ ರಾಜಿನಾಮೆ ಕೊಟ್ಟು ಗ್ರಾಚುಟಿ ತೆಗೆದುಕೊಂಡು ಹೋಗಲಾರಂಭಿಸಿದರು.

ಪ್ಲಾಂಟೇಷನ್ ಕೈಗಾರಿಕೆಯಲ್ಲಿ ಯಾವುದೇ ಸಂಘಕ್ಕೆ ಹೋಲಿಸಿ ನೋಡಿದರೆ ಪೋಲೀಸರು ಅತ್ಯಂತ ಹೆಚ್ಚು ಕ್ರಿಮಿನಲ್ ಕೇಸುಗನ್ನು ಹಾಕಿರುವುದು ಕರ್ನಾಟಕ ಪ್ರೋವಿನ್ಷಿಯನ್ ಪಾಂಟೇಷನ್ ವರ್ಕರ್ಸ್ ಯೂನಿಯನ್ನಿನ ಸದಸ್ಯರು, ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಮೇಲೆ 1959ರಲ್ಲಿ ಸಂಘದ ಉಪಾಧ್ಯಕ್ಷರೊಬ್ಬರ ಮೇಲೆ ಕೊಲೆ ಮೊಕ್ಕದ್ದಮ್ಮೆಯನ್ನು ಹೂಡಿ ಜೈಲಿನಲ್ಲಿಡಲಾಯಿತು. ನಂತರ ನ್ಯಾಯಾಲಯದಲ್ಲಿ ಕೇಸು ಖುಲಾಸೆಯಾಗಿ ಬಿಡುಗಡೆಯಾಯಿತು. 1965 ರಲ್ಲಿ ಸಂಘದ ಖಜಾಂಚಿ ಮತ್ತು ನಂತರ ಸಂಘದ ಕಾರ್ಯದರ್ಶಿಗಳಾಗಿದ್ದ ಸಿ.ನಂಜುಂಡಪ್ಪ, ಅವರ ತಂದೆ ಮತ್ತು ತಮ್ಮನವರ ಮೇಲೆ ಕೊಲೆ ಮೊಕದ್ದಮೆಯಾಗಿ ಶಿಕ್ಷೆಯಾಯಿತು.

ಹಾರಮಕ್ಕಿ ಎಸ್ಟೇಟ್ ಹೋರಾಟ

1970 ರಲ್ಲಿ ಹಾರಮಕ್ಕಿ ಎಸ್ಟೇಟ್ ಕಾರ್ಮಿಕರು ಕರ್ನಾಟಕ ಪ್ರೋವಿನ್ಷಿಯನ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್‍ನ ಸದಸ್ಯರಾಗಿ ತಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಮುನ್ನವೇ ಮಾಲೀಕರು ಮತ್ತು ಪೋಲೀಸರು ತೀವ್ರ ದಬ್ಬಾಳಿಕೆಯನ್ನು ನಡೆಸಿ ಮೂವತ್ತು ಮಂದಿ ಕಾರ್ಮಿಕರನ್ನು ರಾತ್ರೊರಾತ್ರಿ ದೂರದ ಪ್ರದೇಶಕ್ಕೆ ಸಾಗಿಸಿದರು. ನಡು ರಾತ್ರಿಯಲ್ಲಿ ಕಾರ್ಮಿಕರ ಮನೆಗಳಿಗೆ ನುಗ್ಗಿ ಹೊಡೆದು ಬೆದರಿಸಿ ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವ ಪತ್ರಕ್ಕೆ ಬಲಾತ್ಕಾರದಿಂದ ಸಹಿ ಮಾಡಿಸಿ, ಹೆಬ್ಬೆಟ್ಟು ಗುರುತು ಹಾಕಿಸಿದರು. ಸಂಘದ ಕಾರ್ಯದರ್ಶಿಯಾಗಿದ್ದ ಸಿ.ನಂಜುಂಡಪ್ಪನವರ ಮೇಲೆ ಕ್ರಿಮಿನಲ್ ಕೇಸನ್ನು ಹಾಕಲಾಯಿತು.

1973ರ ಮುಷ್ಕರ

1973 ಡಿಸೆಂಬರ್ 27 ರಂದು ಕೂಲಿಯ ಪುನರ್‍ವಿಮರ್ಶೆ ಮಾಡಿ ಕೂಲಿಯನ್ನು ಹೆಚ್ಚಿಸಲು ಒತ್ತಾಯಿಸಿ ಮತ್ತು ಇತರೆ ಬೇಡಿಕೆಗಳಿಗಾಗಿ ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಕಾಫಿ, ಟೀ ತೋಟಗಳಲ್ಲಿ ದಕ್ಷಿಣ ಕನ್ನಡ ಜಿಲೆಯ, ಸುಳ್ಯ ಪುತ್ತೂರುಗಳ ರಬ್ಬರ್ ತೋಟಗಳಲ್ಲಿ ಮುಷ್ಕರ ನಡೆಯಿತು. ಈ ಮುಷ್ಕರದಲ್ಲಿ ಸುಮಾರು 48 ಸಾವಿರ ಪ್ಲಾಂಟೇಶನ್ ಕಾರ್ಮಿಕರು ಪಾಲ್ಗೊಂಡಿದ್ದರು.

ವೇತನ ಸ್ತಂಬನ ವಿರೋಧಿ ಸಮಾವೇಶ

1974 ರಲ್ಲಿ ಇಂದಿರಾಗಾಂಧಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಕಾರ್ಮಿಕರ ಕೂಲಿ ಸಂಬಳಗಳು ಹೆಚ್ಚಾದರೆ ಪೂರ್ತಿಯಾಗಿಯೂ, ತುಟ್ಟಿಭತ್ಯೆ ಹೆಚ್ಚಾದರೆ ಹೆಚ್ಚಳದ ಅರ್ಧದಷ್ಟನ್ನು ಸರ್ಕಾರದಲ್ಲಿ ಕಡ್ಡಾಯವಾಗಿ ಠೇವಣಿ ಇಡಬೇಕೆಂದು ಸುಗ್ರೀವಾಜ್ಞೆ ಹೊರಡಿಸಲಾಯಿತು. ಇದರ ವಿರುದ್ಧ ಚಿಕ್ಕಮಗಳೂರಿನಲ್ಲಿ 1974 ನವೆಂಬರ್ 10,11 ರಂದು ವೇತನ ಸ್ತಂಬನ ವಿರೋಧಿ ಪ್ರಾದೇಶಿಕ ಸಮಾವೇಶವನ್ನು ನಡೆಸಲಾಯಿತು. ಸಿಐಟಿಯುವಿನ ತೋಟಕಾರ್ಮಿಕರ ಜೊತೆಗೆ ಬ್ಯಾಂಕ್, ಜೀವವಿಮೆ, ಅಂಚೆ – ತಂತಿ, ಪೌರ ಕಾರ್ಮಿಕರು, ರಾಜ್ಯ ಸರ್ಕಾರಿ ನೌಕರರು ಜಂಟಿಯಾಗಿ ನಡೆಸಿದ ಈ ಸಮಾವೇಶದಲ್ಲಿ ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 11 ರಂದು ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಲು ಕಳಸ, ಗಿರಿ, ಹೊಸಪೇಟೆ, ಸಕಲೇಶಪುರಗಳಿಂದ ತೋಟ ಕಾರ್ಮಿಕರು ಪಾದಯಾತ್ರೆಯಲ್ಲಿ ಬಂದಿದ್ದರು.

1975 ರ ಫೆಬ್ರವರಿಯಲ್ಲಿ ಅಖಿಲ ಭಾರತ ಪ್ಲಾಂಟೇಷನ್ ಕಾರ್ಮಿಕರ ಫೆಡರೇಷನ್‍ನ ಕಾರ್ಯದರ್ಶಿಗಳಾಗಿದ್ದ ವಿಮಲ ರಣದಿವೆಯವರು ಚಿಕ್ಕಮಗಳೂರಿಗೆ ಬಂದು ಚಂದ್ರಾಪುರ ಎಸ್ಟೇಟ್ ಮತ್ತು ಹೆಗ್ಗುಡ್ಲು ಎಸ್ಟೇಟ್‍ಗಳಿಗೆ ಭೇಟಿ ನೀಡಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ್ದರು.

ತುರ್ತುಪರಿಸ್ಥಿತಿ ಇದ್ದಾಗ ಯೂನಿಯನ್ ಮುರಿಯಲು ಹಲವು ತಂತ್ರಗಳನ್ನು ಬಳಸಲಾಯಿತು. ತೊಗರಿ ಹಂಕಲು ಬಳಿಯಿದ್ದ ತೋಟ ಒಂದರಲ್ಲಿ ಕಾನೂನಿನ ಪ್ರಕಾರ ವಾಸದ ಮನೆ, ಕಕ್ಕಸ್ಸು ಮನೆ ಮೊದಲಾದವುಗಳಿರಲಿಲ್ಲ. ಈ ವಿಷಯದ ಕುರಿತು ದೂರು ನೀಡಿದ ಮೇಲೆ ಲೇಬರ್ ಇನ್ಸ್‍ಪೆಕ್ಟರ್ ತೋಟವನ್ನು ವೀಕ್ಷಿಸಿ ಮಾಲೀಕರ ಮೇಲೆ ಕೇಸು ದಾಖಲಿಸಲು ಸಿದ್ಧತೆ ನಡೆಸಿದ್ದರು. ಪ್ಲಾಂಟರು ಹಾಸನ ಜಿಲ್ಲೆಯಲ್ಲಿ ಸಂಘವನ್ನು ಮುರಿಯಲು ಕೊಡವ ಮೇನೇಜರನ್ನು ತಂದರು. ಈ ಯೋಜನೆಯ ಅಂಗವಾಗಿ 1976 ರಲ್ಲಿ ಆಂತರಿಕ ತುರ್ತುಪರಿಸ್ಥಿತಿ ಇದ್ದಾಗ ಮುಂಜಾನೆಯ ನಸುಕಿನಲ್ಲಿ ಸಂಘದ ಸದಸ್ಯ ರಾಜುವನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪೋಲೀಸರಿಗೆ ಮಾಡಬೇಕಾದದ್ದನ್ನು ಮಾಡಿ ಪ್ರಾಸಿಕ್ಯೂಷನ್ ಕೇಸ್ ಬಲಹೀನವಾಗಿ ಮಾಡಲಾಯಿತು. ಕೊಲೆಗಾರನ ಕುಲಾಸೆಯೂ ಆಯಿತು.

ಸಂಸೆ ಟೀ ಪ್ಲಾಂಟೇಷನ್ ಕಾರ್ಮಿಕರ ಹೋರಾಟ

ಚಿಕ್ಕಮಗಳೂರು ಜಿಲ್ಲೆಯ ಕಳಸ ಟೀ ಅಂಡ್ ಪ್ರೊಡ್ಯೂಸರ್ ಕಂಪನಿಗೆ ಸೇರಿದ ಗುಮ್ಮನಕಾಡು ಮತ್ತು ಸಂಸೆ ಟೀ ತೋಟಗಳಲ್ಲಿ ಕೆಲಸ ಮಾಡುತ್ತಿದ ಎಸ್ಟೇಟ್ ಸಮಿತಿಯ ಅಧ್ಯಕ್ಷರೂ ಸೇರಿದಂತೆ ನಾಲ್ವರು ಕಾರ್ಮಿಕರನ್ನು 17.03.1980 ರಲ್ಲಿ ಕೆಲಸದಿಂದ ವಜಾ ಮಾಡಲಾಗಿತ್ತು. ಇವರನ್ನು ಪುನರ್‍ನೇಮಕ ಮಾಡಿಕೊಳ್ಳಬೇಕೆಂಬ ಬೇಡಿಕೆಗಾಗಿ 600 ಕಾರ್ಮಿಕರು 60 ದಿನಗಳ ಚಾರಿತ್ರಿಕ ಮುಷ್ಕರವನ್ನು ನಡೆಸಿದರು. ಇದು ಆರ್ಥಿಕ ಬೇಡಿಕೆಗಾಗಿ ನಡೆದ ಮುಷ್ಕರವಾಗಿರದೆ ಕಾರ್ಮಿಕರನ್ನು ಕೆಲಸದಿಂದ ತೆಗೆದುದರ ವಿರುದ್ಧ ಮತ್ತು ಕೆಲಸದ ಭದ್ರತೆಗಾಗಿ ನಡೆದ ಹೋರಾಟವಾಗಿದ್ದು ರಾಜ್ಯದ ಪ್ಲಾಂಟೇಷನ್ ಕಾರ್ಮಿಕರ ಚಳುವಳಿಯ ಇತಿಹಾಸದಲ್ಲಿ ಅತ್ಯಂತ ದೀರ್ಘವಾದ ಮುಷ್ಕರ ಇದಾಗಿತ್ತು.

ಪ್ಲಾಂಟೇಶನ್ ಕಾರ್ಮಿಕರ ನಾಯಕತ್ವ

ಕರ್ನಾಟಕ ಪ್ರೊವಿನ್ಷಿಯಲ್ ಪ್ಲಾಂಟೇಷನ್ ಕಾರ್ಮಿಕರ ಸಂಘದ ಸಂಸ್ಥಾಪಕರಾಗಿ ಕಮ್ಯೂನಿಸ್ಟ್ ಶಾಸಕರಾಗಿದ್ದ ಕೆ.ಎಸ್.ವಾಸನ್ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೆ ಕೆ.ಎಸ್. ವಾಸನ್, ಬಿ.ವಿ.ಕಕ್ಕಿಲಾಯ, ಎಂ.ವಿ. ಭಾಸ್ಕರನ್, ಎಂ.ಸಿ.ನರಸಿಂಹನ್, ಪಿ.ರಾಮಚಂದ್ರರಾವ್, ಸಿ.ನಂಜುಂಡಪ್ಪ, ವಿ.ಸುಕುಮಾರ್, ಎ.ಕೆ.ವಿಶ್ವನಾಥ್, ರಾಘುಶೆಟ್ಟಿ ಕೃಷ್ಣಪ್ಪ, ಚಿನ್ನಪ್ಪ, ರಂತಹವರು ಕೆಲಸ ಮಾಡಿದ್ದಾರೆ ವಿಶೇಷವಾಗಿ ಅದರಲ್ಲೂ ಸಿ.ನಂಜುಂಡಪ್ಪ ಅವರು 2-3 ದಶಕಗಳ ಕಾಲ ಮತ್ತು ವಿ.ಸುಕುಮಾರ್‍ರಂತಹ ನಾಯಕರು ಕಳೆದ 50 ವರ್ಷಗಳಿಂದಲೂ ಈ ಚಳುವಳಿಯನ್ನು ಮುನ್ನೆಡೆಸಿರುವುದೇ ಒಂದು ಇತಿಹಾಸ. ಇಷ್ಟು ದೀರ್ಘ ಅವಧಿಯಲ್ಲಿ ಪ್ಲಾಂಟೇಷನ್ ಕಾರ್ಮಿಕರ ನಡುವೆ ಮತ್ತು ಹಾಸನ ಚಿಕ್ಕಮಗಳೂರು ಜಿಲ್ಲೆಯಲ್ಲಿ ದುಡಿಯುವ ವರ್ಗದ ಚಳುವಳಿಯನ್ನು ಕಟ್ಟಿ ಬೆಳೆಸಲು ಇವರ ಪರಿಶ್ರಮ ಅಪಾರವಾದುದು. ಇಂತಹ ಹತ್ತು ಹಲವಾರು ಹಿರಿಯ ಕಾರ್ಮಿಕ ಮುಖಂಡರು ಪ್ರಮುಖರು. ಇವರೆಲ್ಲರ ಜೊತೆಗೆ ನೂರಾರು ಕಾರ್ಯಕರ್ತರು ಹಾಗೂ ಸಾವಿರಾರು ಕಾರ್ಮಿಕರು ಈ ಚಳುವಳಿಯೊಂದಿಗೆ ಗುರುತಿಸಿಕೊಂಡು ಈ ಪ್ರದೇಶದಲ್ಲಿ ಒಂದು ಪ್ರಬಲ ಕಾರ್ಮಿಕ ಚಳುವಳಿಯನ್ನು ರೂಪಿಸುವಲ್ಲಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಅಭಿನಂದನಾರ್ಹ.

ಪ್ಲಾಂಟೇಷನ್‍ನ ಇಂದಿನ ಪರಿಸ್ಥಿತಿ

ಕಾಫಿ ಪ್ಲಾಂಟೇಷನ್ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕ್ರಮೇಣ ಖಾಯಂ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿ ಚಂಗುಲಿ (ಗುತ್ತಿಗೆ ಮತ್ತು ಸೀಸನ್‍ಗಳಲ್ಲಿ ಮಾತ್ರ ಬಂದು ಕೆಲಸ ಮಾಡುವುದು) ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಇವರಿಗೆ ಯಾವುದೇ ಕೆಲಸದ ಭದ್ರತೆಯಾಗಲಿ ಮತ್ತು ಸವಲತ್ತುಗಳಾಗಲಿ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಕೇರಳ ತಮಿಳುನಾಡಿನಿಂದ ಬರುವ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದ್ದು ಅಸ್ಸಾಂ, ಪಶ್ಚಿಮಬಂಗಾಳ, ರಾಜಸ್ಥಾನ್ ರಾಜ್ಯಗಳ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ ಮತ್ತು ಸ್ಥಳೀಯ ಗ್ರಾಮಗಳಿಂದ ಚಂಗುಲಿ ಆಧಾರದ ಮೇಲೆ ಕೆಲಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇವರುಗಳು ಒಂದು ಕಡೆ ಸಿಗುವುದಿಲ್ಲ. ಆದ್ದರಿಂದ ಬದಲಾದ ಪರಿಸ್ಥಿತಿಗೆ ತಕ್ಕಂತೆ ಗ್ರಾಮಗಳಿಂದ ಬರುವ ಕಾರ್ಮಿಕರನ್ನು ಅಲ್ಲಿಯೇ ಸಂಘಟಿಸುವ ವಿಶೇಷ ಗಮನ ನೀಡಬೇಕಾಗಿದೆ.

ತೋಟಗಳು ಇರುವವರೆಗೂ ಕಾರ್ಮಿಕರು ಬೇಕಾಗುತ್ತಾರೆ ಆದರೆ ಅವರನ್ನು ನೇಮಕ ಮಾಡಿಕೊಳ್ಳುವ ವಿಧಾನ ಅವರಿಂದ ಕೆಲಸ ಮಾಡಿಸಿಕೊಳ್ಳುವ ವಿಧಾನಗಳು ಮತ್ತು ಅವರಿಗೆ ನೀಡುವ ಸೌಲಭ್ಯಗಳು ಸಂಪೂರ್ಣ ಬದಲಾಗಿವೆ. ಖಾಸಗಿ ವ್ಯಕ್ತಿಗಳ ಒಡೆತನದಿಂದ ತೋಟಗಳು ಕಂಪನಿಗಳ ಏಕಸ್ವಾಮ್ಯಕ್ಕೆ ಬದಲಾಗುತ್ತಿವೆ. ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಇನ್ನೂ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ. ಕಾರ್ಮಿಕರ ವಾಸಸ್ಥಳಗಳು ಹಂದಿಗೂಡಿಗಿಂತಲೂ ಕಡೆಯಾಗಿವೆ. ಅದೇ ತೋಟದಲ್ಲಿ ಕೆಲಸ ಮಾಡುವ ಮೇಸ್ತ್ರಿ, ಸೂಪರ್‍ವೈಸರ್, ಮ್ಯಾನೆಜರ್‍ಗಳ ಮನೆಗಳು ಎಲ್ಲಾ ಸೌಲತ್ತುಗಳನ್ನು ಹೊಂದಿದ್ದು ಸುಸಜ್ಜಿತವಾಗಿವೆ. ಒಂದೇ ತೋಟದಲ್ಲಿ ಕಾರ್ಮಿಕ ವರ್ಗದ ಸ್ಥಿತಿ ಮತ್ತು ಮಾಲೀಕ ವರ್ಗದ ಸ್ಥಿತಿಯ ಸ್ಪಷ್ಟ ಚಿತ್ರಣ ಕಣ್ಣಿಗೆ ರಾಚುವಂತೆ ಕಾಣುತ್ತದೆ. ಬೆಟ್ಟದಿಂದ ಬಟ್ಟಲಿಗೆ ರುಚಿಯಾದ ಕಾಫಿಯನ್ನೊ ಅಥವಾ ಟೀ ಅನ್ನೋ ನೀಡುವ ಹಿಂದೆ ಇರುವ ಲಕ್ಷಾಂತರ ಕಾರ್ಮಿಕರ ಶ್ರಮವನ್ನು ಕಾಫಿ ಕುಡಿಯುವಾಗ ಒಮ್ಮೆಯಾದರೂ ನೆನಪಿಸಿಕೊಂಡು ಶ್ರಮ ಸಂಸ್ಕøತಿಯನ್ನು ಗೌರವಿಸಬೇಕಾಗಿದೆ. ಆ ಮೂಲಕ ಕಾರ್ಮಿಕರ ಬದುಕು ಹಸನು ಮಾಡುವ ಚಳುವಳಿಗಳಿಗೆ ಬೆಂಬಲವನ್ನು ನೀಡಬೇಕಾಗಿದೆ.

ಎಚ್.ಆರ್. ನವೀನ್‍ಕುಮಾರ್

Advertisements