“ಮಾನ್ಯ ರವಿಶಂಕರ ಪ್ರಸಾದ್‍ರವರೇ, ನಿಮ್ಮ ಭಾಷೆ ಒಬ್ಬ ಕೇಂದ್ರ ಮಂತ್ರಿಗೆ ತಕ್ಕುದಾಗಿದೆಯೇ?” ಕೇಂದ್ರ ಮಂತ್ರಿಗಳಿಗೆ ಬೃಂದಾ ಕಾರಟ್ ಪ್ರಶ್ನೆ

ಸಂಪುಟ: 10 ಸಂಚಿಕೆ: 23 Sunday, May 29, 2016

ಹಿಂದಿನ ವಾರ ‘ಪೋ ಮೋನೆ ಮೋದಿ’ (ಮನೆಗ್ಹೋಗು ಮಗನೇ) ಎಂಬ ಸಂದೇಶ ಕೇರಳ ರಾಜ್ಯದಾದ್ಯಂತ ಅನುರಣನಗೊಂಡ ನಂತರ, ಕಳೆದ ವಾರ ಮೇ 19ರಂದು ಕೇರಳದಲ್ಲಿ ಚುನಾವಣಾ ಫಲಿತಾಂಶಗಳನ್ನು ಕಂಡು ಹತಾಶರಾದ ಆರೆಸ್ಸೆಸ್-ಬಿಜೆಪಿ ಮಂದಿ ಹಲವೆಡೆ ಸಿಪಿಐ(ಎಂ) ಮೇಲೆ ದಾಳಿ ನಡೆಸಿದರು. ಈಗ ಕೇರಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಪಿಣರಾಯಿ ವಿಜಯನ್ ಅವರ ಊರು ಪಿಣರಾಯಿಯಲ್ಲಿ ಎಲ್‍ಡಿಎಫ್ ವಿಜಯ ರಾಲಿಯ ಮೇಲೆ ಎಸೆದ ಬಾಂಬಿಗೆ  ಸಿ.ವಿ. ರವೀಂದ್ರನ್ ಎಂಬ ಸಿಪಿಐ(ಎಂ) ಕಾರ್ಯಕರ್ತರು ಬಲಿಯಾಗಿದ್ದಾರೆ. ಅವರ ಮಗ ಜಿಶಿನ್ ಮತ್ತು ಇತರ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಪೋಲೀಸರು ಎಫ್.ಐ.ಆರ್.ನಲ್ಲಿ ಹೆಸರಿಸಿದ 18 ಮಂದಿ ಆರೆಸ್ಸೆಸ್ ನವರು.

ಮಟ್ಟನೂರ್ ನಲ್ಲಿ ಸಿಪಿಐ(ಎಂ) ರಾಲಿಯ ಮೇಲೆ ಎಸೆದ ಬಾಂಬಿನಿಂದ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯ ಕಾಂಙಂಗಾಡ್ ಕ್ಷೇತ್ರದಲ್ಲಿ ಗೆದ್ದ ಸಿಪಿಐ ಅಭ್ಯರ್ಥಿ ಅವರ ವಿಜಯದ ಮೆರವಣಿಗೆಯ ಮೇಲ ನಡೆಸಿದ ದಾಳಿಯಲ್ಲಿ ಸ್ವತಃ ಹೊಸದಾಗಿ ಚುನಾಯಿತರಾದ ಇ. ಚಂದ್ರಶೇಖರನ್ ಸೇರಿದಂತೆ ಹಲವರ ಕೈಮುರಿದು ಆಸ್ಪ್ರತೆಗೆ ಸೇರಿಸಬೇಕಾಗಿ ಬಂದಿದೆ.

ಬಿಜೆಪಿ ಗೆದ್ದ ಏಕೈಕ ಕ್ಷೇತ್ರ ನೆಮಂನಲ್ಲಿ ಬಿಜೆಪಿ ಕಾರ್ಯಕರ್ತರು ಸಿಪಿಐ(ಎಂ) ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.

ಆದರೂ ಕೇರಳದಲ್ಲಿ ಸಿಪಿಐ(ಎಂ) ಬಿಜೆಪಿಯ ಮೇಲೆ ದಾಳಿ ಮಾಡುತ್ತಿದೆ ಎಂದು ದಿಲ್ಲಿಯಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿ ಮುಂದೆ ಬಿಜೆಪಿ ಮಂದಿ ಧಾಂಧಲೆ ನಡೆಸಿದರು. ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್ ಅವರು ರಾಷ್ಟ್ರೀಯ ಟೆಲಿವಿಶನ್‍ನಲ್ಲಿ ಬೆದರಿಸಿದರು-”ನಾವು ಅವರನ್ನು ಬೀದಿಯಲ್ಲಿ ಎದುರಿಸುತ್ತೇವೆ, ಭಾರತವನ್ನು ಆಳುತ್ತಿರುವುದು ಬಿಜೆಪಿ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು”!

ಇದಕ್ಕೆ ಉತ್ತರಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯೆ ಬೃಂದಾ ಕಾರಟ್ “ನಿಮ್ಮ ಭಾಷೆ ಒಬ್ಬ ಕೇಂದ್ರ ಮಂತ್ರಿಗೆ ತಕ್ಕುದಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ.
“ಪ್ರಿಯ ಶ್ರೀಯುತ ರವಿಶಂಕರ್ ಪ್ರಸಾದ್ ಅವರೇ, ಒಬ್ಬ  ಕೇಂದ್ರ ಮಂತ್ರಿಯಂತೆ ಮಾತಾಡಿ, ಒಬ್ಬ ಆರೆಸ್ಸೆಸ್ ಶಾಖೆಯ ಸದಸ್ಯನಂತಲ್ಲ. ಸಿಪಿಐ(ಎಂ) ಕೇಂದ್ರ ಕಚೇರಿ ಎದುರು ಮತಪ್ರದರ್ಶನ ಏರ್ಪಡಿಸುವ ಮತ್ತು ನಿಮ್ಮ ಮಂದಿ ಧಾಂಧಲೆಗಳನ್ನು ನಡೆಸಲು ಪ್ರೋತ್ಸಾಹಿಸುವ ಮೊದಲು ಸತ್ಯಾಂಶಗಳನ್ನು ತಿಳಿದುಕೊಳ್ಳಿ” ಎಂದು ಅವರು ಈ ಕೇಂದ್ರ ಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ.

ಎರಡು ವಿರುದ್ಧ ರಾಜಕೀಯ ಶಕ್ತಿಗಳಿಗೆ ಸೇರಿದವರಂತೆ ಕಾಣುವ ಹಿರಿಯ ಮುಖಂಡರು, ಒಂದೆಡೆ ಆರೆಸ್ಸೆಸ್-ಬಿಜೆಪಿ ಕೂಟದ  ರವಿಶಂಕರ ಪ್ರಸಾದ್ ಮತ್ತು ಅತ್ತ ಬಂಗಾಲದ ಮುಖ್ಯಮಂತ್ರಿ ಮತ್ತು ತೃಣಮೂಲ ಕ್ಯಾಂಗ್ರೆಸಿನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಎಷ್ಟು ಸುಲಭವಾಗಿ ವಿರೋಧಿ ದನಿಗಳನ್ನು ಹಿಂಸಾಚಾರದಿಂದ ಅಡಗಿಸುವ ತಂಡದೊಳಕ್ಕೆ ಜಾರಿ ಬೀಳುತ್ತಾರೆ ಎಂಬುದೊಂದು ವಿಚಿತ್ರ ಸಂಗತಿ,  ಗೆಲ್ಲಲಿ, ಸೋಲಲಿ, ನಾವೇ  ಪರಮಪ್ರಭುಗಳು ಎಂಬುದನ್ನು ಒಪ್ಪಿಕೊಳ್ಳಿ ಎಂಬುದು ಅವರ ಆಟದ ಹೆಸರು ಎನ್ನುತ್ತಾರೆ ಬೃಂದಾ ಕಾರಟ್.

ಇಲ್ಲಿ ಜನರು ತಿರಸ್ಕರಿಸಿದವರ ಹತಾಶೆಯ ಪ್ರದರ್ಶನ ನಡೆದರೆ, ಅತ್ತ ಪಶ್ಚಿಮ ಬಂಗಾಲದಲ್ಲಿ ವಿಜೇತರ ಅಟಾಟೋಪ ನಡೆದಿದೆ. ದೇಶವನ್ನು ಆಳುತ್ತಿದ್ದೇವೆ ಎಂದು ಮೆರೆಯುವ  ಪಕ್ಷದ ಪ್ರಮುಖ ರಾಜ್ಯ ಮುಖಂಡರೂ ಮತ್ತು ಚಿತ್ರ ಕಲಾವಿದೆಯೂ ಆದ ರೂಪಾ ಗಂಗೂಲಿಯವರ ಕಾರಿನ ಮೇಲೆಯೇ ಟಿಎಂಸಿ ಗೂಂಡಾಗಳು ದಾಳಿ ಮಾಡಿದರೂ ಆ ಬಗ್ಗೆ ಈ ಮಂತ್ರಿಗಳಾಗಲೀ, ದಿಲ್ಲಿಯಲ್ಲಿರುವ ಬೇರಾವ ಅವರ ರಾಷ್ಟ್ರೀಯ ಮುಖಂಡರೇ ಆಗಲಿ ತುಟಿ ಪಿಟಕ್ಕೆನ್ನಲಿಲ್ಲ ಏಕೆ, ಏಕೆಂದರೆ ದಿಲ್ಲಿಯಲ್ಲಿ ಅವರಿಗೆ ಮಮತಾ ಬ್ಯಾನರ್ಜಿ ಬೆಂಬಲ ಬೇಕಾಗಿದೆ ಎಂದು  ಬೃಂದಾ ಕಾರಟ್ ನೆನಪಿಸುತ್ತಾರೆ.

ಇದರ ಹಿಂದೆ ಇನ್ನೂ ಆಳವಾದ ಸಂಗತಿ ಇದೆ, ಸರ್ವಾಧಿಕಾರಶಾಹಿ ಮತ್ತು ಪ್ರಜಾಪ್ರಭುತ್ವದ ಬಗ್ಗೆ ತುಚ್ಛೀಕಾರ ಈ ಎರಡು ರಾಜಕೀಯ ಶಕ್ತಿಗಳನ್ನು ಮತ್ತು ಇಬ್ಬರು ಉನ್ನತ ಮುಖಂಡರನ್ನು ಒಟ್ಟಿಗೆ ಬೆಸೆಯುವ ಸಂಗತಿ. ಹೀಗಿರುವಾಗ ಬಹುಶಃ ಎರಡು ವಿರುದ್ಧ ರಾಜಕೀಯ ಶಕ್ತಿಗಳಿಗೆ ಸೇರಿದವರಂತೆ ಕಾಣುವ ಹಿರಿಯ ಮುಖಂಡರು, ಎಷ್ಟು ಸುಲಭವಾಗಿ ವಿರೋಧಿ ದನಿಗಳನ್ನು ಹಿಂಸಾಚಾರದಿಂದ ಅಡಗಿಸುವ ತಂಡದೊಳಕ್ಕೆ ಜಾರಿ ಬೀಳುತ್ತಾರೆ ಎಂಬುದು ವಿಚಿತ್ರ ಸಂಗತಿಯಾಗಿ ಕಾಣುವುದಿಲ್ಲ ಎನ್ನುತ್ತಾರೆ ಬೃಂದಾ ಕಾರಟ್.

Advertisements