‘ಮೇಕ್ ಇನ್ ಇಂಡಿಯಾ’ ನಡುವೆಯೇ ಭಾರತದ ಕೈಗಾರಿಕಾ ಸ್ಥಗಿತತೆ-ಏಕೆ?

ಸಂಪುಟ: 10 ಸಂಚಿಕೆ: 23 date: Sunday, May 29, 2016

ಇತ್ತೀಚೆಗೆ ಪ್ರಕಟವಾದ ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಪ್ರಕಾರ 2015-16ರಲ್ಲಿ ಕೈಗಾರಿಕಾ ವಲಯದ ಬೆಳವಣಿಗೆಯ ದರವು ಶೇ.2.4ರಷ್ಟು ಕೆಳಮಟ್ಟದಲ್ಲಿದೆ. ಇದು ಇದ್ದಕ್ಕಿದ್ದಂತೆ ಆದದ್ದಲ್ಲ. ಕಳೆದ ನಾಲ್ಕು ವರ್ಷಗಳಿಂದಲೂ ಹಗೆ ಸಾಧಿಸುವ ರೀತಿಯಲ್ಲಿ ಬೆಳವಣಿಗೆಯ ದರ ಕುಸಿದಿದೆ. ಉದಾರೀಕರಣದ ಇಡೀ ಅವಧಿಯಲ್ಲಿ ನಿಧಾನ ಗತಿಯಲ್ಲಿ ಸಾಗುತ್ತಿದ್ದ ಕೈಗಾರಿಕಾ ಬೆಳವಣಿಗೆ ಈಗ ಸ್ಥಗಿತಗೊಳ್ಳುತ್ತಿದೆ. ಉದಾರೀಕರಣದ ಹಿಂದಿನ ದಶಕದಲ್ಲಿ (ಅಂದರೆ, 1980-81 ಮತ್ತು 1990-91ರ ನಡುವೆ) ಕೈಗಾರಿಕಾ ಉತ್ಪಾದನಾ ಬೆಳವಣಿಗೆಯ ದರ ಶೇ.7.83 ಇತ್ತು. ಅದಕ್ಕೆ ಪ್ರತಿಯಾಗಿ 1990-91 ರಿಂದ 2011-12ರವರೆಗಿನ 21 ವರ್ಷಗಳ ಉದಾರೀಕರಣದ ಅವಧಿಯಲ್ಲಿ (ಅಂದರೆ, ಈಗಿನ ಸ್ಥಗಿತತೆಯ ಆರಂಭಕ್ಕಿಂತ ಮೊದಲಿನ ಅವಧಿ) ಬೆಳವಣಿಗೆಯ ದರ ಶೇ.6.28ರಷ್ಟಿತ್ತು. ಹಾಗಾಗಿ, ಉದಾರೀಕರಣದ ಅವಧಿಯಲ್ಲಿ ಬೆಳವಣಿಗೆ ನಿಧಾನ ಗತಿಯಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಉದಾರೀಕರಣದ ಮುಂಚಿನ ಅವಧಿ, ಅಂದರೆ, ಸರ್ಕಾರವು ಆರ್ಥಿಕ ನೀತಿಗಳನ್ನು ನಿಯಂತ್ರಿಸುತ್ತಿದ್ದ ಕಾಲದಲ್ಲಿ (1950-51ರಿಂದ 1990-91ರವರೆಗಿನ ನಲವತ್ತು ವರ್ಷಗಳು) ಕೈಗಾರಿಕಾ ಬೆಳವಣಿಗೆಯ ದರ ಶೇ.6.32ರಷ್ಟಿತ್ತು. ಅದಕ್ಕೆ ಪ್ರತಿಯಾಗಿ, ಉದಾರೀಕರಣದ ಅವಧಿಯಲ್ಲಿ ಬೆಳವಣಿಗೆಯ ದರ ಶೇ.6.28ರಷ್ಟು ಕಡಿಮೆ ಮಟ್ಟದಲ್ಲಿತ್ತು. ಅಂದರೆ, ಉದಾರೀಕರಣದ ಪರಿಣಾಮ ಏನೂ ಇಲ್ಲ ಎಂದಾಗುತ್ತದೆ.

ಮೂಗಿಗಿಂತ ದೊಡ್ಡದಾಗಿರುವ ಮೂಗುತಿ

ಉದಾರೀಕರಣದ ಅವಧಿಯಲ್ಲಿ, ಅದರ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಕೃಷಿ ಉತ್ಪಾದನೆಯ ದರವೂ ಇಳಿದಿದೆ. ಹಾಗೆಯೇ, ಹಿಂದಿದ್ದ ನಿಯಂತ್ರಣ ನೀತಿಯ ಅವಧಿಗೆ ಹೋಲಿಸಿದರೆ, ಎಲ್ಲಾ ಸರಕುಗಳ ಉತ್ಪಾದನೆಯ ಬೆಳವಣಿಗೆಯ ದರವೂ ಉದಾರೀಕರಣದ ಅವಧಿಯಲ್ಲಿ ಕಡಿಮೆಯಾಗಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಉದಾರೀಕರಣ ನೀತಿಗಳನ್ನು ಅನುಸರಿಸು ತ್ತಿರುವುರಿಂದಾಗಿಯೇ ಜಿಡಿಪಿ ಬಹಳ ವೇಗವಾಗಿ ಬೆಳೆಯುತ್ತಿದೆ ಎಂಬ ಕಹಳೆ ಸದ್ದಿನ ಕೀರ್ತಿ ಏಕಮಾತ್ರವಾಗಿ ಸೇವಾ ವಲಯಕ್ಕೆ ಸಲ್ಲುತ್ತದೆ. ಅಂದರೆ ಬೇಳವಣಿಗೆಯಾಗುತ್ತಿರುವುದು ಸೇವಾ ವಲಯದಲ್ಲಿ ಮಾತ್ರ.

ಆದರೆ, ಸೇವಾ ವಲಯವನ್ನು ಜಿಡಿಪಿಯ ಗಣನೆಗೆ ತೆಗೆದುಕೊಳ್ಳುವ ಬಗ್ಗೆಯೇ ವಾದ-ವಿವಾದಗಳಿವೆ. ಏಕೆಂದರೆ, ಸೇವಾ ವ್ಯವಹಾರಗಳ ಪರಿಕಲ್ಪನೆ ಮತ್ತು ಅವುಗಳನ್ನು ಲೆಕ್ಕ ಹಾಕುವ ಬಗ್ಗೆಯೇ ಸಾಕಷ್ಟು ಸಮಸ್ಯೆಗಳಿವೆ. ಒಂದು ಉದಾಹರಣೆಯ ಮೂಲಕ ಈ ಸಮಸ್ಯೆಯನ್ನು ವಿವರಿಸಬಹುದು.

ಒಂದು ತೀರ ಸರಳ ಆರ್ಥವ್ಯವಸ್ಥೆಯಲ್ಲಿ ಕೇವಲ 100 ಯೂನಿಟ್ ಜೋಳ ಬಿಟ್ಟು ಬೇರೆ ಏನನ್ನೂ ಬೆಳೆಯುವುದಿಲ್ಲ ಎಂದಿಟ್ಟುಕೊಳ್ಳೋಣ. ಅದರಲ್ಲಿ ಜಮೀನ್ದಾರನ ಪಾಲು 50 ಯೂನಿಟ್. ತನಗೆ ದೊರೆತ ಆ 50 ಯೂನಿಟ್ ಪಾಲಿನಲ್ಲಿ ಆ ಜಮೀನ್ದಾರ ಏನನ್ನೂ ತನ್ನ ಸ್ವಂತ ಬಳಕೆಗೆ ಉಪಯೋಗಿಸಿಕೊಳ್ಳುವುದಿಲ್ಲ. ಬದಲಿಗೆ, ರೈತರನ್ನು ಬೆದರಿಸುವ ಸಲುವಾಗಿ 50 ಗೂಂಡಾಗಳನ್ನು ಸಾಕಲು ಆ 50 ಯೂನಿಟ್‍ಗಳನ್ನು ಬಳಸುತ್ತಾನೆ. ಈಗ ಆ ಆರ್ಥವ್ಯವಸ್ಥೆಯ ಜಿಡಿಪಿಯ ಲೆಕ್ಕ ಹಾಕಲಾಗಿ ಅದು 150 ಆಗುತ್ತದೆ- ಜೋಳದ ಉತ್ಪಾದನೆಯಿಂದ 100 ಮತ್ತು ಸೇವಾಕ್ಷೇತ್ರದ ಉತ್ಪತ್ತಿ 50 (ಒಬ್ಬೊಬ್ಬರಿಗೆ ಒಂದು ಯೂನಿಟ್‍ನಂತೆ 50 ಗೂಂಡಾಗಳ ಸಂಬಳ).
ಈ ಉದಾಹರಣೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ನೋಡೋಣ. ಈಗ, ರೈತರು ಬೆಳೆದ 100 ಯೂನಿಟ್ ಜೋಳದಲ್ಲಿ, ಜಮೀನ್ದಾರ 70 ಯೂನಿಟ್ ಪಾಲು ಪಡೆಯುತ್ತಾನೆ ಮತ್ತು ಗೂಂಡಾಗಳಿಗೆ ತಲಾ 1.4 ಯೂನಿಟ್ ಸಂಬಳ (1.4*50=70)ಕೊಡುತ್ತಾನೆ. ಈಗ ಜಿಡಿಪಿಯು 150ರ ಬದಲಿಗೆ 170 ಆಗುತ್ತದೆ! ಈ ವಿದ್ಯಮಾನವನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ, ಮಿಗುತಾಯದ ಮೇಲೆ ಬದುಕುತ್ತಿರುವವನೂ ಉತ್ಪಾದನೆಯಲ್ಲಿ ತೊಡಗಿರುವನೆಂಬ ಊಹೆಯ ಜೊತೆಗೆ ನೈಜ ಉತ್ಪಾದಕನ(ರೈತ) ಮೇಲೆ ಹೆಚ್ಚಿದ ಶೋಷಣೆಯೂ ಜಿಡಿಪಿಯ ಹೆಚ್ಚಳದಲ್ಲಿ ಸೇರಿಕೊಳ್ಳುತ್ತದೆ.

ಸೇವಾ ವಲಯದ ಉತ್ಪತ್ತಿಯ ಪರಿಕಲ್ಪನೆಯು ಇಂತಹ ಅಸಂಬದ್ಧತೆಗಳಿಂದ ಕೂಡಿದೆ ಎಂಬ ಕಾರಣದಿಂದಾಗಿ ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಇತರ ಸಮಾಜವಾದಿ ದೇಶಗಳು ಅದನ್ನು ತಮ್ಮ ರಾಷ್ಟ್ರೀಯ ವರಮಾನದ ಅಂದಾಜಿನಲ್ಲಿ ಸೇರಿಸುತ್ತಿರಲಿಲ್ಲ. ಜಿಡಿಪಿ ಲೆಕ್ಕ ಹಾಕಲು ಸರಕುಗಳ ಉತ್ಪಾದನೆಯನ್ನು ಮಾತ್ತ ಪರಿಗಣಿಸುತ್ತಿದ್ದರು. ಈ ರೀತಿಯ ಅಳತೆಯಲ್ಲಿ, ಭಾರತದಲ್ಲಿ, ನಿಯಂತ್ರಣ ನೀತಿಯ ಅವಧಿಗೆ ಹೋಲಿಸಿದರೆ, ಉದಾರೀಕರಣದ ಅವಧಿಯಲ್ಲಿ ಜಿಡಿಪಿಯ ಬೆಳವಣಿಗೆಯ ದರ ಕಡಿಮೆಯಾಗುತ್ತದೆ.

ಹಿಂದಿನ ಮತ್ತು ಇಂದಿನ ಸ್ಥಗಿತತೆಯ ವ್ಯತ್ಯಾಸ 

ಈ ವರೆಗಿನ ಜಿಡಿಪಿಯ ಬೆಳವಣಿಗೆಯ ದರ ಹೆಚ್ಚಾಗಿತ್ತೊ ಕಡಿಮೆಯಾಗಿತ್ತೊ ಎನ್ನುವುದಕ್ಕಿಂತ ಮುಖ್ಯವಾದ ವಿಷಯ ಈಗ ಅದು ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂಬುದು. ಭಾರತದಲ್ಲಿ ಕೈಗಾರಿಕಾ ಸ್ಥಗಿತತೆ ಹೊಸದಲ್ಲ. ಹಿಂದೆಯೂ ಉಂಟಾಗಿದೆ. ಆದರೆ ಹಿಂದಿನ ಸ್ಥಗಿತತೆಗೂ ಮತ್ತು ಪ್ರಸಕ್ತ ಸ್ಥಗಿತತೆಗೂ ಒಂದು ವ್ಯತ್ಯಾಸವಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆಯಾದ ಕಾರಣದಿಂದ ಅರುವತ್ತರ ದಶಕದಲ್ಲಿ ಕೈಗಾರಿಕಾ ಸ್ಥಗಿತತೆ ಉಂಟಾಗಿತ್ತು. ಆಗ ಬಿಹಾರದಲ್ಲಿ ಬರಗಾಲವೂ ಉಂಟಾಗಿತ್ತು.

ನಿಯಂತ್ರಣ ನೀತಿಯ ಅವಧಿಯಲ್ಲಿ, ಕೈಗಾರಿಕಾ ಉತ್ಪಾದನೆಯ ಏರಿಳಿತಗಳಿಗೂ ಮತ್ತು ಕೃಷಿ ಉತ್ಪಾದನೆಯ ಏರಿಳಿತಗಳಿಗೂ ಸಂಬಂಧವಿತ್ತು. ಫಸಲು ಕಡಿಮೆಯಾದ ವರ್ಷದಲ್ಲಿ ರೈತರ ವರಮಾನ ಇಳಿಯುತ್ತಿತ್ತು. ಆದರೆ, ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುತ್ತಿತ್ತು. ಧಾನ್ಯಗಳನ್ನು ಕೊಳ್ಳುವವರು ಹೆಚ್ಚಿನ ಬೆಲೆ ತೆರಬೇಕಾಗುತ್ತಿತ್ತು. ಹಾಗಾಗಿ, ಉತ್ಪಾದಕರು ಮತ್ತು ಬಳಕೆದಾರರು ಇಬ್ಬರ ಬಳಿಯೂ ಕೊಳ್ಳುವ ಸಾಮಥ್ರ್ಯ ಕಡಿಮೆಯಾಗುತ್ತಿತ್ತು. ಕಾರ್ಮಿಕರು ಮತ್ತು ವೇತನದಾರರಿಗೆ ಕೈಗಾರಿಕಾ ಉತ್ಪನ್ನಗಳನ್ನು ಕೊಳ್ಳುವ ಸಾಮಥ್ರ್ಯ ಕಡಿಮೆಯಾಗುತ್ತಿತ್ತು. ಅದರ ಜೊತೆಯಲ್ಲಿ, ಬೆಲೆ ಏರಿಕೆಯಿಂದ ಉಂಟಾಗುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ತನ್ನ ಖರ್ಚುಗಳನ್ನು ಕಡಿಮೆಮಾಡುತ್ತಿತ್ತು. ಹಾಗಾಗಿ, ಕೈಗಾರಿಕಾ ಉತ್ಪತ್ತಿಯ ಮೇಲಿನ ಬೇಡಿಕೆಗಳಿಗೂ ಮತ್ತು ಕೃಷಿ ವಲಯದ ಆಗು ಹೋಗುಗಳಿಗೂ ನೇರ ಸಂಬಂಧವಿತ್ತು.

ಆದರೆ, ಈಗ ಆಗುತ್ತಿರುವುದೇ ಬೇರೆ. ಪ್ರಸಕ್ತ ಸ್ಥಗಿತತೆ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾದ ಕಾರಣದಿಂದ ಉಂಟಾಗಿಲ್ಲ ಎಂಬ ಅಂಶ ಗಮನಾರ್ಹವಾಗಿದೆ. 2011-12 ಮತ್ತು 2013-14ರ ವರ್ಷಗಳಲ್ಲಿ ಕೃಷಿ ಉತ್ಪಾದನೆ ಉತ್ತಮವಾಗಿತ್ತು. ಆದ್ದರಿಂದ, ನಂತರದ ಎರಡು ವರ್ಷಗಳಲ್ಲಿ ಉನ್ನತ ಮಟ್ಟದ ಕೈಗಾರಿಕಾ ಉತ್ಪತ್ತಿಯಾಗಬೇಕಿತ್ತು. ಅದರ ಬದಲಿಗೆ ನಗಣ್ಯ ಎನ್ನುವಷ್ಟು ಕಡಿಮೆ ಮಟ್ಟದ ಕೈಗಾರಿಕಾ ಉತ್ಪಾದನೆಯಾಗಿದೆ. ಅಂದರೆ, ಹಿಂದೆ ಕೈಗಾರಿಕಾ ಉತ್ಪತ್ತಿಯನ್ನು ಜನರು ಕೊಳ್ಳುವ ಶಕ್ತಿಯು ಕೃಷಿ ವಲಯದ ಉತ್ಪತ್ತಿಯ ಮೇಲೆ ಅವಲಂಬಿಸಿತ್ತು. ಈಗ ಅಂತಹ ಅವಲಂಬನೆ ಕಡಿಮೆಯಾಗಿದೆ. ಅದನ್ನೇ ಬೇರೆ ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕೃಷಿ ಉತ್ಪತ್ತಿಯ ಮೇಲೆ ಅವಲಂಬಿಸಿದ್ದ ಆಂತರಿಕ ಮಾರುಕಟ್ಟೆಯು ಈಗ ಮೇಲ್ವರ್ಗಗಳ ಮಂದಿಯ ಮೇಲೆ ಮತ್ತು ರಫ್ತಿನ ಮೇಲೆ ನಿಂತಿದೆ. ಜಾಗತಿಕ ಬಂಡವಾಳಶಾಹಿಯು ಬಿಕ್ಕಟ್ಟಿಗೆ ಒಳಗಾಗಿರುವುದರಿಂದ ಈ ಮಾರುಕಟ್ಟೆಗೆ ಈಗ ಹೊಡೆತ ಬಿದ್ದಿದೆ. ನಿಯಂತ್ರಣ ಕಾಲದಲ್ಲಿದ್ದ ಪರಿಸ್ಥಿತಿಯಂತಲ್ಲದೆ ಭಾರತದ ಅರ್ಥವ್ಯವಸ್ಥೆಯು ಈಗ ವಿಶ್ವ ಬಂಡವಾಳಶಾಹಿ ಅರ್ಥವ್ಯವಸ್ಥೆಯೊಂದಿಗೆ ಏಕೀಕರಣಗೊಂಡಿದೆ. ಆದ್ದರಿಂದ, ಭಾರತದ ಕೈಗಾರಿಕಾ ಸ್ಥಗಿತತೆಯ ಬಗೆಗಿನ ವಿವರಣೆಯು ವಿಶ್ವ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸ್ಥಿತಿ-ಗತಿಗಳಿಗೆ ಸಂಬಂಧಿಸುತ್ತದೆ.

ಹದಗೆಡುತ್ತಿರುವ ಕೈಗಾರಿಕಾ ವಲಯ

ಮುಖ್ಯ ಕೈಗಾರಿಕೆಗಳ ವಲಯದ (core sector) ಬೆಳವಣಿಗೆ ದರ ಶೇ.6.4 ಮಟ್ಟ ತಲುಪಿರುವುದು ಕೈಗಾರಿಕೆಗಳು ಚೇತರಿಕೆಯ ಹಾದಿಯಲ್ಲಿರುವ ಸೂಚನೆಯಾಗಿದೆ ಎಂದು ಕೆಲವು ದಿನಗಳ ಹಿಂದೆ ಮಾಧ್ಯಮಗಳು ಜೋರಾಗಿ ವರದಿಮಾಡಿದ್ದವು. ಆದರೆ, ನಂತರ ಹೊರಬಂದ ಮಾರ್ಚ್ 2016ರ ಒಟ್ಟಾರೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಶೇ. 0.05 ಬೆಳವಣಿಗೆ ತೋರಿಸುತ್ತದೆ. ಇದು ಚೇತರಿಕೆಯ ಬದಲು, ಇತರ ವಲಯಗಳು ಕುಗ್ಗುತ್ತಿವೆ ಎಂಬುದನ್ನು ಸೂಚಿಸುತ್ತದೆ. ಮುಖ್ಯ ವಲಯದ ಕೈಗಾರಿಕೆಗಳ (core sector) ಬಹುಪಾಲು ಒಡೆತನ ಸರ್ಕಾರದ ಬಳಿ ಇದೆ ಮತ್ತು ಇತರ ವಲಯವು (non-core sector) ಖಾಸಗಿಯವರ ಬಳಿ ಇದೆ. ಹಾಗಾಗಿ, ಈ ಕುಗ್ಗುವಿಕೆ ಖಾಸಗಿ ಕ್ಷೇತ್ರವನ್ನು ಬಹಳವಾಗಿ ತಟ್ಟಿದೆ. ಆದ್ದರಿಂದ ಇದು ಖಾಸಗಿಯವರು ತಮ್ಮ ಹೂಡಿಕೆಯನ್ನು ತಡೆ ಹಿಡಿಯುವಂತೆ ಮಾಡುತ್ತದೆ. ಪರಿಣಾಮವಾಗಿ, ಮೂಲ ಸರಕುಗಳ (ಸರಕುಗಳನ್ನು ತಯಾರಿಸುವ ಯಂತ್ರಗಳು-capital goods)ಉತ್ಪಾದನೆ ತಗ್ಗುತ್ತದೆ.ಇದು, ಬರಲಿರುವ ದಿನಗಳಲ್ಲಿ ಕೈಗಾರಿಕಾ ಕ್ಷೇತ್ರ ಹದಗೆಡುವುದರ ಸೂಚನೆ.

ಈಗಾಗಲೇ ಮೂಲ ಸರಕುಗಳ (capital goods) ಉತ್ಪಾದನೆ ಶೇ.9.5ರಷ್ಟು ತಗ್ಗಿದೆ ಎಂದು ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಮಾರ್ಚ್ 2016) ತಿಳಿಸುತ್ತದೆ. ಇದರ ಪರಿಣಾಮವಾಗಿ, ಮಾರ್ಚ್ ತಿಂಗಳಲ್ಲಿ ಒಟ್ಟು ತಯಾರಿಕೆಗಳು ಶೇ.1.2ರಷ್ಟು ಕುಸಿದಿವೆ. ಎಪ್ರಿಲ್ 2016ರಲ್ಲಿ ಮೂಲ ಸರಕುಗಳ ಉತ್ಪಾದನೆ ಶೇ.15.4ರಷ್ಟು ಕುಗ್ಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.

ಬಂಡವಾಳಶಾಹಿ ಜಗತ್ತಿನ ಎಲ್ಲೆಡೆಯಲ್ಲೂ ನಡೆಯುತ್ತಿರುವ ಈ ವಿದ್ಯಮಾನವು ಅದರ ಗುರುತಿನ ಚಿನ್ಹೆಯಾಗಿದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಒಂದು ಕೈಗಾರಿಕಾ ಮಂದಗತಿಯ ಸಮಯದಲ್ಲಿ, ಬಳಕೆಯ ಸರಕುಗಳ (consumer goods) ಉತ್ಪತ್ತಿಯು ಮೂಲ ಸರಕುಗಳ ಉತ್ಪತ್ತಿಗಿಂತಲೂ ಕಡಿಮೆಯಾಗುತ್ತದೆ.

ಈ ವಿದ್ಯಮಾನವನ್ನು ಹೀಗೆ ವಿವರಿಸಬಹುದು: ಬಳಕೆಯ ಸರಕುಗಳ ಉತ್ಪಾದನಾ ವಲಯದ ಬೆಳವಣಿಗೆಯ ದರ ಸೊನ್ನೆ ಎಂದಿಟ್ಟುಕೊಳ್ಳೋಣ. ಅಂತಹ ಪರಿಸ್ಥಿತಿಯಲ್ಲಿ, ಬಂಡವಾಳಗಾರರು ಆ ವಲಯದ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಲು ಯಾವುದೇ ಹೂಡಿಕೆ ಮಾಡುವುದಿಲ್ಲ. ಆದ್ದರಿಂದ, ಅರ್ಥವ್ಯವಸ್ಥೆಯಲ್ಲಿ ಆಗುವ ಹೂಡಿಕೆ ಸೊನ್ನೆ. ಹಾಗಾಗಿ, ಮೂಲ ಸರಕುಗಳ ಉತ್ಪತ್ತಿಯೂ ಸೊನ್ನೆ.

ಬಳಕೆಯ ಸರಕುಗಳ ವಲಯದಲ್ಲಿ ಬೆಳವಣಿಗೆಯ ದರ ಸೊನ್ನೆಗೆ ಇಳಿದಾಗ ಅದು ಮೂಲ ಸರಕುಗಳ ಸೊನ್ನೆ ಉತ್ಪತ್ತಿಗೆ ಕಾರಣವಾಗುತ್ತದೆ ಎಂಬುದನ್ನು ಈ ಸರಳ ಉದಾಹರಣೆ ತಿಳಿಸುತ್ತದೆ. ಒಂದು ಬಿಕ್ಕಟ್ಟು ಉಂಟಾದಾಗ, ಮೂಲ ಸರಕುಗಳ ಉತ್ಪಾದನೆಯ ಮಟ್ಟವು ಬಳಕೆಯ ಸರಕುಗಳ ಉತ್ಪಾದನೆಯ ಮಟ್ಟಕ್ಕಿಂತಲೂ ಬಹಳವಾಗಿ ಕುಗ್ಗುತ್ತದೆ. ಅದೇ ರೀತಿಯಲ್ಲಿ, ಮೂಲ ಸರಕುಗಳ ಉತ್ಪಾದನಾ ದರ ಹೆಚ್ಚುತ್ತಾ ಹೋದಂತೆ ಮತ್ತು ಆ ವಲಯದ ಉತ್ಪಾದನಾ ಸಾಮಥ್ರ್ಯದ ಬಳಕೆ ಹೆಚ್ಚುತ್ತಾ ಹೋದಂತೆ ನೈಜ ಚೇತರಿಕೆಯೂ ಆಗುತ್ತದೆ. ಆಗ ಬಂಡವಾಳಗಾರರು ಹೂಡಿಕೆಗೆ ಮುಂದಾಗುತ್ತಾರೆ. ಇಂತಹ ಒಂದು ಪ್ರಕ್ರಿಯೆ ಎಲ್ಲಿಯೂ ಜರುಗುತ್ತಿಲ್ಲ. ಹಾಗಾಗಿ, ಇದು ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟು ಮುಂದುವರಿಯುತ್ತಿದೆ ಎಂಬುದನ್ನು ಒತ್ತಿ ಹೇಳುತ್ತದೆ.

ವಿಶ್ವದ ಎಲ್ಲ ದೇಶದ ಎಲ್ಲ ಬಂಡವಾಳಗಾರರು ಯಾವುದೇ ಹೂಡಿಕೆ ಮಾಡಲು ಹಿಂಜರಿಯುತ್ತಿರುವ ಸಮಯದಲ್ಲಿ ಮೋದಿ ಸರ್ಕಾರದ “ಮೇಕ್ ಇನ್ ಇಂಡಿಯಾ” (ಭಾರತದಲ್ಲಿ ಹೂಡಿಕೆ ಮಾಡಿ) ಕರೆಗೆ ಯಾರೂ ಸೊಪ್ಪು ಹಾಕುತ್ತಿಲ್ಲ. ಈ ಕಾರ್ಯಕ್ರಮವು ಭಾರತದ ಹದಗೆಟ್ಟಿರುವ ಅರ್ಥವ್ಯವಸ್ಥೆಯನ್ನು ಮೊದಲಿನ ಆರೋಗ್ಯಕ್ಕೆ ತರುವ ಒಂದು ಮೂಲೆಗಲ್ಲಾಗುತ್ತದೆ ಎಂದು ಭಾವಿಸಿರುವುದು ಮೋದಿ ಸರ್ಕಾರದ ಬುದ್ದಿಗೇಡಿತನವನ್ನು ಸೂಚಿಸುತ್ತದೆ. “ಮೇಕ್ ಇನ್ ಇಂಡಿಯಾ” ಘೋಷಣೆ ಮಾಡಿದ ಬಳಿಕ ಬಂಡವಾಳಗಾರರಿಗೆ ಅನೇಕ ರಿಯಾಯ್ತಿಗಳನ್ನು ನೀಡಿದ ನಂತರವೂ ಕೈಗಾರಿಕಾ ಸ್ಥಗಿತತೆ ಉಂಟಾಗಿರುವುದು ಮತ್ತು ಇಡೀ ಅರ್ಥವ್ಯವಸ್ಥೆ ಮುಗ್ಗರಿಸುತ್ತಿರುವುದು ಸರ್ಕಾರದ ನೀತಿಗಳ ವಿಚಾರಹೀನತೆಗೆ ಸಾಕ್ಷಿಯಾಗಿದೆ.

(ಇದು ‘ಪೀಪಲ್ಸ್ ಡೆಮಾಕ್ರಸಿ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರೊ. ಪ್ರಭಾತ್ ಪಟ್ನಾಯಕ್ ಅವರ India’s Industrial Stagnation ಲೇಖನದ ಭಾವಾನುವಾದ)

Advertisements