ಮೋದಿ ನೇತೃತ್ವದ ಸರಕಾರದ ಎರಡು ವರ್ಷಗಳು ಹೊಸ ‘ತ್ರಿಮೂರ್ತಿ’ಯ ಕೊಳಕು ಮುಖಗಳು

ಸಂಪುಟ: 10 ಸಂಚಿಕೆ: 23 date: Sunday, May 29, 2016

ಈ ಎರಡು ವರ್ಷಗಳು ದೇಶದ ಬಹುಪಾಲು ಜನರ ಮೇಲೆ ತೀವ್ರವಾದ ಆರ್ಥಿಕ ಹೊರೆಗಳು ಹೇರಿಕೆಯಾಗಿದ್ದನ್ನು ಕಂಡಿವೆ. ಎಲ್ಲಾ ಮೂರು ಪ್ರಧಾನ ವಿಷಯಗಳಲ್ಲಿ ಕಡೆಯಲಾಗುತ್ತಿರುವ ಈ ಹೊಸ ‘ತ್ರಿಮೂರ್ತಿ’ ಎಂದರೆ, ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಭಾರತಕ್ಕೆ ಹಿನ್ನಡೆ ಹಾಗೂ ದೇಶದ ಬಹುತೇಕ ಜನಗಳ ಜೀವನೋಪಾಯದ ಮೇಲೆ ದೊಡ್ಡ ಆಕ್ರಮಣ ಎಂಬುದು ಇಷ್ಟು ಹೊತ್ತಿಗೆ ಸುಸ್ಪಷ್ಟವಾಗುತ್ತಿದೆ. ಆದರೆ ಸರಕಾರ ಸುಪ್ರೀಂಕೋರ್ಟ್‍ನ ಛೀಮಾರಿಯ ಪರಿವೆಯೂ ಇಲ್ಲದೆ, ಆನಂದದಿಂದ ತನ್ನ ದಾರಿಯಲ್ಲೇ ಮುಂದುವರೆಯುತ್ತಿದೆ. ಸಂಭ್ರಮಾಚರಣೆಗೆ, ಜಾಹಿರಾತುಗಳು ಮತ್ತು ಮಾರ್ಕೆಟಿಂಗ್‍ಗೆ 1200 ಕೋಟಿ ರೂ. ಸುರಿಯುತ್ತಿದೆ.

ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಈ ಮೇ 26ರಂದು ಎರಡು ವರ್ಷಗಳನ್ನು ಪೂರೈಸಿದೆ. ಈ ಸರಕಾರ ಒಂದು ಹೊಸ ‘ತ್ರಿಮೂರ್ತಿ’ಯನ್ನು ಕೆತ್ತುತ್ತಿದೆ ಎಂದು ಸಿಪಿಐ (ಎಂ)ನ 21ನೇ ಮಹಾಧಿವೇಶನದ ಕೊನೆಯಲ್ಲಿ ನಾವು ಎಚ್ಚರಿಕೆ ನೀಡಿದ್ದೆವು. ಅದರ ಮೂರು ಮುಖಗಳು ಪ್ರತಿನಿಧಿಸುತ್ತಿರುವುದು:

ಮೊದಲನೆಯದು, ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಗುಣವನ್ನು ಆರ್‍ಎಸ್‍ಎಸ್ ಪ್ರಣೀತ ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ಮಾದರಿಯ ‘ಹಿಂದೂ ರಾಷ್ಟ್ರ’ವನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಕೋಮುವಾದಿ ಧ್ರುವೀಕರಣವನ್ನು ಅವ್ಯಾಹತವಾಗಿ ಆಕ್ರಮಣಕಾರಿ ರೀತಿಯಲ್ಲಿ ಅನುಸರಿಸುವುದು;

ಎರಡನೆಯದು, ಆರ್ಥಿಕ ಸುಧಾರಣೆಗಳ ನವ-ಉದಾರವಾದಿ ಪಥವನ್ನು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯುಪಿಎ ಸರಕಾರ ಅನುಸರಿಸಿದ್ದಕ್ಕಿಂತ ಇನ್ನೂ ಹೆಚ್ಚು ವೇಗವಾಗಿ ಅನುಸರಿಸುವುದು ಹಾಗೂ ವಿಶಾಲ ಜನವಿಭಾಗಗಳ ಮೇಲೆ ಅಭೂತಪೂರ್ವವಾದ ಹೊರೆಗಳನ್ನು ಹೇರುವುದು.

ಮೂರನೆಯದಾಗಿ, ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳ ಮಹತ್ವವನ್ನು ಕುಗ್ಗಿಸಿ ಹೆಚ್ಚೆಚ್ಚಾಗಿ ಸರ್ವಾಧಿಕಾರಿ ಕ್ರಮಗಳನ್ನು ಅನುಸರಿಸುವುದು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯದ ಮೇಲೆ ಸವಾರಿ ಮಾಡುವುದು.

ಈ ಎರಡು ವರ್ಷಗಳ ಆಡಳಿತದ ಅನುಭವ ಈ ಎಚ್ಚರಿಕೆ ಎಷ್ಟು ಸರಿಯಾಗಿದೆ ಎಂಬುದನ್ನು ಪುಷ್ಟೀಕರಿಸುತ್ತದೆ. ಈ ಮೂರೂ ಕ್ಷೇತ್ರಗಳಲ್ಲಿನ ಪರಿಸ್ಥಿತಿ ಹಿಂದೆಂದಿಗಿಂತಲೂ ಈಗ ತೀರಾ ಹದಗೆಟ್ಟಿದೆ.

ಕೋಮುವಾದಿ ಧ್ರುವೀಕರಣದ ಆಕ್ರಮಣ

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಕೇಂದ್ರ ಸಚಿವ ಸಂಪುಟದ ಸದಸ್ಯರು ಮತ್ತು ಬಿಜೆಪಿ ನಾಯಕರು ದ್ವೇಷಪೂರ್ಣ ಭಾಷಣಗಳ ಸುರಿಮಳೆಯನ್ನೇ ಆರಂಭಿಸಿದರು. ದ್ವೇಷದ ಭಾಷಣಗಳನ್ನು ಒಂದು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಭಾರತದ ಈಗಿನ ಕಾನೂನು ಮತ್ತು ಇಂಡಿಯನ್ ಪೀನಲ್ ಕೋಡ್‍ಗೆ ಅನುಗುಣವಾಗಿ ಆ ರೀತಿಯ ಭಾಷಣ ಮಾಡುವವರ ವಿರುದ್ಧ ನಿಮ್ಮ ಸರಕಾರ ಕ್ರಮ ಕೈಗೊಳ್ಳುವುದೇ ಎಂದು ಮೋದಿ ಪ್ರಧಾನಿಯಾಗಿ ಬಂದ ನಂತರದ ಮೊಟ್ಟಮೊದಲ ಸಂಸತ್ ಅಧಿವೇಶನದಲ್ಲಿ ಅವರನ್ನು ಪ್ರಶ್ನಿಸಲಾಗಿತ್ತು. ಕ್ರಮಕೈಗೊಳ್ಳುವುದು ಒತ್ತಟ್ಟಿಗಿರಲಿ, ಈ ಬಗ್ಗೆ ಸಂಸತ್ತಿಗೆ, ತನ್ಮೂಲಕ ದೇಶದ ಜನರಿಗೆ ಭರವಸೆ ನೀಡಲೂ ಮೋದಿ ಇದುವರೆಗೆ ನಿರಾಕರಿಸಿದ್ದಾರೆ.

ಕೋಮು ವಿಷವನ್ನು ಹರಡಲು ಸರಕಾರಿ ಆಶ್ರಯ ಮತ್ತು ಪ್ರೋತ್ಸಾಹವನ್ನು ಆರ್‍ಎಸ್‍ಎಸ್‍ನ ಎಲ್ಲಾ ಸಂಘಟನೆಗಳು ದೇಶದಾದ್ಯಂತ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿವೆ. ನರೇಂದ್ರ ಧಾಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ. ಕಲಬುರ್ಗಿ ಅವರನ್ನು ಹಾಡುಹಗಲೇ ಹತ್ಯೆ ಮಾಡಲಾಗಿದ್ದು ಅವುಗಳ ವಿರುದ್ಧ ದೇಶದಾದ್ಯಂತ ಬುದ್ಧಿಜೀವಿಗಳು, ಸಾಹಿತಿಗಳು, ವಿಜ್ಞಾನಿಗಳು, ಇತಿಹಾಸಕಾರರು ಮತ್ತಿತರರು ಅಭೂತಪೂರ್ವ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು. ಕೆಲವರಂತೂ ಈ ಹತ್ಯೆಗಳಿಗೆ ಪ್ರತಿಭಟನೆಯಾಗಿ ತಮ್ಮ ಪ್ರಶಸ್ತಿಗಳನ್ನೇ ವಾಪಸ್ ಮಾಡಿದರು. ಮೋದಿ ಸರಕಾರ ಈ ಪ್ರತಿಭಟನೆಗಳನ್ನು ಭಂಡತನದಿಂದ ಕಡೆಗಣಿಸಿತು.

ಲವ್ ಜಿಹಾದ್, ಘರ್ ವಾಪಸಿ, ಗೋಮಾಂಸ ಭಕ್ಷಣೆ ವಿರುದ್ಧ, ವಸ್ತ್ರಸಂಹಿತೆ ಹೇರಿಕೆ ಮತ್ತು (ಅ)ನೈತಿಕ ಪೊಲೀಸ್‍ಗಾರಿಕೆ- ಇವೇ ಮೊದಲಾದ ವಿವಿಧ ಕೋಮುವಾದಿ ಪ್ರಚಾರಗಳು ಧಾರ್ಮಿಕ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಹುಟ್ಟುಹಾಕಲು ತಮ್ಮದೇ ಆದ ಕೊಡುಗೆಯನ್ನು ನೀಡಿದವು. ದನದ ಮಾಂಸ ತಿಂದರೆಂಬ ಕಾರಣಕ್ಕೆ ಅತ್‍ಲಾಖ್‍ರನ್ನು ಹತ್ಯೆ ಮಾಡಿದ್ದು ಅಥವಾ ಗೋಹತ್ಯೆಗೆ ಪ್ರೋತ್ಸಾಹ ನೀಡುತ್ತಿದ್ದಾರೆಂಬ ತಲೆಬುಡವಿಲ್ಲದ ಆರೋಪದ ಮೇಲೆ ಜಾರ್ಖಂಡ್‍ನ ಲಾತೆಹರ್‍ನಲ್ಲಿ ಇಬ್ಬರು ಯುವಕರನ್ನು ಸಾರ್ವಜನಿಕವಾಗಿ ನೇಣು ಹಾಕಿದ್ದು ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವಂತೆ ಮಾಡಿದವು.

ಅದೇ ಹೊತ್ತಿಗೆ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಮತ್ತು ಅಕಾಡೆಮಿಕ್ ಸಂಶೋಧನೆಯನ್ನು ಕೋಮುವಾದೀಕರಿಸುವ ವ್ಯವಸ್ಥಿತ ಪ್ರಯತ್ನವನ್ನು ಆರಂಭಿಸಲಾಯಿತು. ಈ ಸಂಸ್ಥೆಗಳ ಪ್ರಮುಖ ಹುದ್ದೆಗಳಿಗೆ ಆರ್‍ಎಸ್‍ಎಸ್ ಪ್ರಚಾರಕರನ್ನು ನೇಮಿಸುವ ಪ್ರವೃತ್ತಿ ಮುಂದುವರಿದಿದೆ. ಶಾಲೆ-ಕಾಲೇಜುಗಳ ಪಠ್ಯಕ್ರಮವನ್ನು ಮರು-ಬರೆಸುವ ಪ್ರಯತ್ನಗಳೂ ಎಗ್ಗಿಲ್ಲದೆ ಮುಂದುವರಿದಿವೆ. ಜೆಎನ್‍ಯು, ಪುಣೆ ಫಿಲ್ಮ್ ಇನ್ಸ್‍ಟಿಟ್ಯೂಟ್, ಐಐಟಿಗಳು ಮುಂತಾದ ಪ್ರಮುಖ ಶಿಕ್ಷಣ ಸಂಸ್ಥೆಗಳು  ಹಾಗೂ ಇತರ ಪ್ರಮುಖ ಶಿಕ್ಷಣ ಕೇಂದ್ರಗಳ ಮೇಲಿನ ನಗ್ನ ದಾಳಿಗಳು ಜಾತ್ಯತೀತ ಪ್ರಗತಿಪರ ಮೌಲ್ಯಗಳ ಮೇಲಿನ ದಾಳಿ ಹಾಗೂ ವಿದ್ಯಾರ್ಥಿ ಮತ್ತು ಶಿಕ್ಷಕ ಸಮುದಾಯಕ್ಕೆ ಕಿರುಕುಳ ಕೊಟ್ಟು  ಅವರೆಲ್ಲ ವಿಷಮಯ ಹಿಂದುತ್ವ ಸಿದ್ಧಾಂತವನ್ನು ಗುಲಾಮರಂತೆ ಒಪ್ಪಿಕೊಳ್ಳುವ ವ್ಯಕ್ತಿಗಳಾಗಿ ಮಾಡುವ ಯತ್ನದ ಭಾಗವಾಗಿದೆ. ಆಧಾರರಹಿತ ಹಾಗೂ ಕೃತಕವಾಗಿ ಸೃಷ್ಟಿಸಲಾದ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆಪಾದನೆಗಳನ್ನು ಹೊರಿಸುವ ಮಟ್ಟಕ್ಕೂ ಮೋದಿ ಸರಕಾರ ಹೋಯಿತು. ಒಬ್ಬ ಉದಯೋನ್ಮುಖ ದಲಿತ ಸಂಶೋಧನಾ ವಿದ್ವಾಂಸ ರೋಹಿತ್ ವೇಮುಲ ಅವರ ದುರಂತ ಆತ್ಮಹತ್ಯೆಗೆ ಕಾರಣವಾದ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಮೇಲಿನ ದಾಳಿಯು, ಹಿಂದುತ್ವ ವ್ಯವಸ್ಥೆಯ ಮೇಲ್ಜಾತಿ ಪಕ್ಷಪಾತಕ್ಕೆ ಹಿಡಿದ ಕನ್ನಡಿಯಾಗಿದೆ.

ಭಾರತೀಯ ಗಣರಾಜ್ಯವನ್ನು ಆರ್‍ಎಸ್‍ಎಸ್ ಪ್ರಣೀತ ‘ಹಿಂದೂ ರಾಷ್ಟ್ರ’ವನ್ನಾಗಿ ಪರಿವರ್ತಿಸುವ ಪ್ರಯತ್ನದ ಭಾಗವಾಗಿ ಹಿಂದೂ ಪುರಾಣಗಳಿಗೆ ಭಾರತೀಯ ಇತಿಹಾಸದ ಹಾಗೂ ಹಿಂದೂ ಧರ್ಮಶಾಸ್ತ್ರಕ್ಕೆ ಭಾರತೀಯ ತತ್ವಶಾಸ್ತ್ರದ ಮುಖವಾಡವನ್ನು ತೊಡಿಸಲು ಮೋದಿ ಸರಕಾರ ಯತ್ನಿಸುತ್ತಿದೆ.

ಈ ಸಾಲಿನಲ್ಲಿ ಇತ್ತೀಚಿನದ್ದು ಎಂದರೆ ಹಿಂದುತ್ವ ಭಯೋತ್ಪಾದಕ ಸಂಘಟನೆಗಳ ಮುಂಚೂಣಿಯ ವ್ಯಕ್ತಿಗಳನ್ನು ದೋಷಮುಕ್ತರಾಗಿ ಮಾಡಲು ಎನ್‍ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ)ಯನ್ನು ದುರುಪಯೊಗಪಡಿಸಿಕೊಂಡು ಮಾಲೆಗಾಂವ್ ಭಯೋತ್ಪಾದನೆ ದಾಳಿಗಳ ಸಂಬಂಧ ಕಲೆಹಾಕಲಾದ ಯಾವ ದೋಷಗಳೂ ಕಾಣದ ದಾಖಲೆಗಳನ್ನು ಭಡಮತನದಿಂದ ತಿರಸ್ಕರಿಸಿರುವುದು. ಈ ಪ್ರಕರಣವು ಹಿಂದುತ್ವ ಭಯೋತ್ಪಾದನೆ ಸಂಘಟನೆಗಳಿಗೆ ಸರಕಾರದಿಂದಲೇ ಆಶ್ರಯ ಮತ್ತು ರಕ್ಷಣೆ ಸಿಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಮಾಲೆಗಾಂವ್ ಭಯೋತ್ಪಾದಕ ದಾಳಿಯು ತನಿಖೆಯ ಜಾಡು ಹೈದರಾಬಾದ್ ಮೆಕ್ಕಾ ಮಸೀದಿ, ಅಜಮೇರ್ ದರ್ಗಾ ಷರೀಫ್ ಮತ್ತು ಸಮ್‍ಝೋತಾ ಎಕ್ಸ್‍ಪ್ರೆಸ್ ಸ್ಫೋಟಗಳ ಕೊಂಡಿಗಳತ್ತ ಒಯ್ದಿತ್ತು. ಈಗ ಇವೆಲ್ಲದರ ತನಿಖೆಯ ಜಾಡನ್ನು  ದುರ್ಬಲಗೊಳಿಸಿದಂತಾಗಿದೆ.

ನಮ್ಮ ದೇಶದಿಂದ ಭಯೋತ್ಪಾದನೆ ಯನ್ನು ನಿರ್ಮೂಲ ಮಾಡಬೇಕೆಂಬ ಭಾರತದ ಹೋರಾಟವನ್ನು ಮೋದಿ ಸರಕಾರ ದುರ್ಬಲಗೊಳಿಸುತ್ತಿದೆ. ಭಾರತದಲ್ಲಿ ಭಯೋತ್ಪಾದನೆಗೆ ಧರ್ಮ, ಜಾತಿ ಅಥವಾ ಪ್ರಾಂತ್ಯದ ಮೇರೆಯಿಲ್ಲ ಎನ್ನುವುದನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾಗಿದೆ. ಯಾವುದೇ  ಭಯೋತ್ಪಾದನೆ ದಾಳಿಗಳು ಸ್ವೀಕಾರಾರ್ಹವಲ್ಲ ಮತ್ತು ಸಹನೀಯವಲ್ಲ ಎಂದು ಪರಿಗಣಿಸುವ ಬದಲು, ಮೋದಿ ಸರಕಾರ ಹಿಂದುತ್ವ ಭಯೋತ್ಪಾದನೆಯನ್ನು ಪೋಷಿಸುತ್ತಿದೆ.

ಇದೇ ರೀತಿಯ ಕೋಮು ದ್ವೇಷದ ಬಹಳಷ್ಟು ದೃಷ್ಟಾಂತಗಳು ದೇಶದಾದ್ಯಂತ ನಮ್ಮ ಮುಂದಿವೆ. ಎಲ್ಲೋ ಇವೆಲ್ಲವನ್ನೂ ದಾಖಲುಗೊಳಿಸಲಾಗುತ್ತಿದೆ ಎಂದು ಆಶಿಸೋಣ. ಆದರೆ, ನಮ್ಮ ಗಣರಾಜ್ಯದ ಬುನಾದಿ ಮೌಲ್ಯಗಳನ್ನು ನೆಚ್ಚುವ ಜಾತ್ಯತೀತ ಮನೋಧರ್ಮದ ಜನರು ದೇಶದಾದ್ಯಂತ ದನಿ ಎತ್ತುತ್ತಿದ್ದಾರೆ ಎನ್ನುವುದು ತುಂಬಾ ಮಹತ್ವದ್ದು.

ಹೆಚ್ಚುತ್ತಿರುವ ಸರ್ವಾಧಿಕಾರಶಾಹಿ

ಈ ಎರಡು ವರ್ಷಗಳ ಅವಧಿಯಲ್ಲಿ ಮೋದಿ ಸರಕಾರ ತನ್ನ ಸಂಕುಚಿತ ಉದ್ದೇಶಗಳ ಈಡೇರಿಕೆಗಾಗಿ ಸಂಸದೀಯ ಪ್ರಜಾಪ್ರಭುತ್ವದ ಸಂಸ್ಥೆಗಳ ಮಹತ್ವವನ್ನು ಕುಂದಿಸುವ ದಿಸೆಯಲ್ಲಿ ವ್ಯವಸ್ಥಿತ ಹೆಜ್ಜೆಗಳನ್ನು ಇರಿಸಿದೆ. ಬಿಜೆಪಿ ಬೆಂಬಲದಿಂದ ಸಂಸತ್ತು ಅಂಗೀಕರಿಸಿದ ಭೂ ಸ್ವಾಧೀನ ಕಾನೂನು-2013 ಅನ್ನು ಸರಣಿ ಸುಗ್ರೀವಾಜ್ಞೆಗಳ ಮೂಲಕ ತಿದ್ದುಪಡಿ ಮಾಡಲು ಸರಕಾರ ಮುಂದಾಯಿತು. ಕೃಷಿ ಬಿಕ್ಕಟ್ಟಿನಿಂದ ಈಗಾಗಲೇ ಹೈರಾಣ ಆಗಿರುವ ರೈತರ ಹಿತವನ್ನು ಬಲಿಗೊಟ್ಟು ಕಾರ್ಪೊರೇಟ್ ಕಂಪೆನಿಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿತ್ತು. ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸಿದರೂ ರಾಜ್ಯಸಭೆಯ ಅನುಮೋದನೆ ಸಿಗದಿದ್ದುದರಿಂದ ಅಂತಿಮವಾಗಿ ಮೋದಿ ಸರಕಾರ ಈ ಪ್ರಯತ್ನವನ್ನು ಕೈಬಿಡಬೇಕಾಯಿತು.

ಲೋಕಸಭೆಯಲ್ಲಿ ಭಾರೀ ಬಹುಮತ ವಿರುವುದರಿಂದ ಬಹುಮತದ ಅಹಮಿಕೆಯಿಂದ ಸಾಗುವಂತೆ ಬಹುಮತವಿಲ್ಲದ ರಾಜ್ಯಸಭೆಯನ್ನು ಮೀರಿಹೋಗುವ ಉದ್ದೇಶದಿಂದ ಮೋದಿ ಸರಕಾರ ಶಾಸಕಾಂಗ ಮಸೂದೆಗಳನ್ನು ‘ಹಣಕಾಸು ಮಸೂದೆ’ಗಳು ಎಂದು ಮಂಡಿಸುವ ಕಪಟೋಪಾಯಕ್ಕೆ ಇಳಿದಿದೆ. ‘ಹಣಕಾಸು ಮಸೂದೆ’ಗಳಿಗೆ ರಾಜ್ಯಸಭೆಯ ಅಂಗೀಕಾರ ಅಗತ್ಯವಿಲ್ಲದಿರುವುದರಿಂದ ಅದು ಈ ಹಾದಿಯನ್ನು ಬಳಸಿತು. ಅದು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ರಾಜ್ಯಸಭೆಯನ್ನು ಬದಿಗೊತ್ತಲಿಕ್ಕಾಗಿ ಸಾಂವಿಧಾನಿಕ ನಿಯಮಗಳನ್ನು ತಪ್ಪಾಗಿ ಅರ್ಥೈಸುತ್ತಿದೆ.

ಆಧಾರ್ ಮಸೂದೆ ಅಂಥ ಮಸೂದೆ ಗಳಲ್ಲೊಂದಾಗಿದೆ. ನಿದಕ್ಕೆ ಕಾನೂನು ರೂಪ ಕೊಟ್ಟಿರುವುದನ್ನು  ಹಾಗೂ ಅದನ್ನು ಒಂದು ‘ಹಣಕಾಸು ಮಸೂದೆ’ ಎಂದು ಕರೆದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಅದೀಗ ಮೂವರು ನ್ಯಾಯಾಧೀಶರ ಪೀಠದ ಮುಂದಿದೆ.

ಮೋದಿ ಸರಕಾರದ ಸರ್ವಾಧಿಕಾರಿ ಮುಖವನ್ನು ನ್ಯಾಯಸಮ್ಮತವಾಗಿ ಆಯ್ಕೆಯಾದ ಪ್ರತಿಪಕ್ಷಗಳ ಸರಕಾರಗಳನ್ನು ವಜಾ ಮಾಡಲು ಸಂವಿಧಾನದ 356ನೇ ವಿಧಿಯನ್ನು, ಪೂರ್ಣವಾಗಿ ದುರುಪಯೋಗ ಪಡಿಸಿಕೊಂಡ ರೀತಿ  ಬಯಲಿಗೆಳೆದಿದೆ. ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದ್ದರಿಂದ ಉತ್ತರಾಖಂಡ್‍ನಲ್ಲಿ ಅದರ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ.  356ನೇ ವಿಧಿಯ ದುರುಪಯೋಗಕ್ಕೆ ಯತ್ನಿಸಿದ ಕೇಂದ್ರದ ನಗ್ನ ಪ್ರಯತ್ನವನ್ನು ಸರ್ವೋನ್ನತ ನ್ಯಾಯಾಲಯ ಕಟುವಾಗಿ ಖಂಡಿಸಿದೆ. ಜನರ ಪ್ರಜಾಸತ್ತಾತ್ಮಕ ಹಕ್ಕುಗಳು, ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳ ಮೇಲಿನ ಆಕ್ರಮಣಗಳು ದೇಶದಾದ್ಯಂತ ಹೆಚ್ಚುತ್ತಿವೆ.

ಭ್ರಾಮಕ ಘೋಷಣೆಗಳು ಮತ್ತು ಸಾಧನೆಯ ಟೊಳ್ಳು ಮಾತುಗಳು

ವಿವಿಧ ಕ್ಷೇತ್ರಗಳಲ್ಲಿ ಭಾರಿ ಸಾಧನೆ ಮಾಡಲಾಗಿದೆ ಎಂದು ಮೋದಿ ಸರಕಾರ ಮಾಡುತ್ತಿರುವ  ಅಬ್ಬರದ ಪ್ರಚಾರದಲ್ಲಿ ಹುರುಳಿಲ್ಲ ಎನ್ನುವುದು ಸಾಬೀತಾಗುತ್ತಿದೆ.
ಭ್ರಷ್ಟಾಚಾರ-ಮುಕ್ತ ಸರಕಾರ ನೀಡುತ್ತೇವೆ ಎಂದು ಅದು ಆಶ್ವಾಸನೆ ನೀಡಿತ್ತು.

  • ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ವ್ಯಾಪಮ್ (ಮಧ್ಯಪ್ರದೇಶ)  ಮುಂತಾದ ಹಗರಣಗಳು ಭ್ರಷ್ಟಾಚಾರ ಕುರಿತ ಬಿಜೆಪಿ ಹೇಳಿಕೆಯನ್ನು ಠುಸ್‍ಗೊಳಿಸಿವೆ.
  • ಐಪಿಎಲ್‍ನ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ (ಭಾರತೀಯ ಕಾನೂನಿನಿಂದ ತಪ್ಪಿಸಿಕೊಂಡಿರುವ ಆರೋಪಿ) ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಬಿಜೆಪಿ ಮುಖ್ಯಮಂತ್ರಿ ರಕ್ಷಣೆ ಹಾಗೂ ಆಶ್ರಯ ನೀಡಿದ್ದ ವಿಚಾರ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಸಂಸತ್ತಿನ ಒಂದು ಅಧಿವೇಶನದಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು.

ಮೋದಿ ಸರಕಾರ ಅನುಸರಿಸುತ್ತಿರುವ ‘ಚಮಚಾ ಬಂಡವಾಳಶಾಹಿ’ ಭ್ರಷ್ಟಾಚಾರವನ್ನು ಇನ್ನಷ್ಟು ಹೆಚ್ಚಿಸಲಿದೆ. ಭ್ರಷ್ಟಾಚಾರದ ಇನ್ನಷ್ಟು ಹಗರಣಗಳು ಇಂದಲ್ಲ ನಾಳೆಯಾದರೂ ಹೊರಬೀಳಲಿವೆ. ಯುಪಿಎ ಸರಕಾರದ ಭ್ರಷ್ಟಾಚಾರದ ಹಗರಣಗಳು ಹೊರಬೀಳಲು ಆರಂಭವಾಗಲು ಆರು ವರ್ಷ ಬೇಕಾಗಿತ್ತು ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕು.  ಮುಂದಿನ ಮೂರು ವರ್ಷಗಳಲ್ಲಿ ಇನ್ನಷ್ಟು ಇಂತಹ ಪ್ರಕರಣಗಳು ಸಾರ್ವಜನಿಕ ಪರೀಕ್ಷಣೆಗೆ  ಹೊರಬರಲಿವೆ.

‘ಕನಿಷ್ಟ ಸರಕಾರ, ಗರಿಷ್ಟ ಆಡಳಿತ’ ಎಂದು ಸರಕಾರ ದೊಡ್ಡದಾಗಿ ಬಡಾಯಿ ಕೊಚ್ಚಿಕೊಂಡಿತ್ತು. ಗುಜರಾತ್‍ನಲ್ಲಿ ನಡೆಯುತ್ತಿರುವ ಪತಿದಾರ್ (ಪಟೇಲ್) ಮತ್ತು ಹರ್ಯಾಣದಲ್ಲಿ ಜಾಟ್ ಚಳವಳಿ ವೇಳೆ ಹರಿಯಬಿಟ್ಟ ಹಿಂಸಾಚಾರ ಬಿಜೆಪಿಯ ಪರಿಣಾಮಕಾರಿ ಆಡಳಿತ ಕುರಿತ ದಾವೆಗಳ ನಿಜವಾದ ಸತ್ವ ಏನೆಂಬುದನ್ನು ಬಹಿರಂಗಪಡಿಸಿವೆ.

ವಿದೇಶಾಂಗ ನೀತಿ

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಮಯದ ಒರೆಯಲ್ಲಿ ಗೆದ್ದಿರುವ ಭಾರತದ ಸ್ವತಂತ್ರ ವಿದೇಶಾಂಗ ನೀತಿಗೆ ತೀವ್ರವಾದ ಏಟು ಬಿದ್ದಿದೆ.

ವಿದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವರ್ಚಸ್ಸನ್ನು ಬೆಳೆಸುವ ಏಕೈಕ ಉದ್ದೇಶದಿಂದ, ಸರಕಾರವು ಭಾರತದ ವಿದೇಶಾಂಗ ನೀತಿಯನ್ನು ಅಮೆರಿಕ ಸಾಮ್ರಾಜ್ಯಶಾಹಿಯ  ಜಾಗತಿಕ ತಂತ್ರಗಳ ಆದ್ಯತೆಗಳಿಗೆ ಅನುಗುಣವಾಗಿ ಬದಲಾಯಿಸಿತು. ರಕ್ಷಣೆ ಮತ್ತು ಸಮರ ಸಾಗಾಣಿಕೆ ಬೆಂಬಲದ ಒಪ್ಪಂದಗಳು ಸೇರಿದಂತೆ ಅಮೆರಿಕದ ಜೊತೆ ಮಾಡಿಕೊಳ್ಳಲಾದ ಸರಣಿ ಒಡಂಬಡಿಕೆಗಳು ನಮ್ಮ ಆಂತರಿಕ ವ್ಯವಸ್ಥೆಯಲ್ಲಿ ಅಮೆರಿಕ ಸಾಮ್ರಾಜ್ಯಶಾಹಿ ಸಂಸ್ಥೆಗಳು ನುಸುಳಲು ಅನುಕೂಲ ಮಾಡಿಕೊಡುವಂತಿವೆ. ರಕ್ಷಣಾ ಪರಿಕರಗಳನ್ನು ಭಾರತಕ್ಕೆ ಮಾರಾಟ ಮಾಡುವ ಮೂಲಕ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ಶಕ್ತಿಗಳು ತಮ್ಮ ಲಾಭವನ್ನು ಗರಿಷ್ಟಗೊಳಿಸಿಕೊಳ್ಳಲಷ್ಟೇ ಅವು ಸಹಾಯಕವಾಗಿವೆ.

ದ್ವೇಷದ ಭಾಷಣಗಳನ್ನು ಒಂದು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಭಾರತದ ಈಗಿನ ಕಾನೂನು ಮತ್ತು ಇಂಡಿಯನ್ ಪೀನಲ್ ಕೋಡ್‍ಗೆ ಅನುಗುಣವಾಗಿ ಆ ರೀತಿಯ ಭಾಷಣ ಮಾಡುವವರ ವಿರುದ್ಧ ನಿಮ್ಮ ಸರಕಾರ ಕ್ರಮ ಕೈಗೊಳ್ಳುವುದೇ ಎಂದು ಮೋದಿ ಪ್ರಧಾನಿಯಾಗಿ ಬಂದ ನಂತರದ ಮೊಟ್ಟಮೊದಲ ಸಂಸತ್ ಅಧಿವೇಶನದಲ್ಲಿ ಅವರನ್ನು ಪ್ರಶ್ನಿಸಲಾಗಿತ್ತು. ಕ್ರಮಕೈಗೊಳ್ಳುವುದು ಒತ್ತಟ್ಟಿಗಿರಲಿ, ಈ ಬಗ್ಗೆ ಸಂಸತ್ತಿಗೆ, ತನ್ಮೂಲಕ ದೇಶದ ಜನರಿಗೆ ಭರವಸೆ ನೀಡಲೂ ಮೋದಿ ಇದುವರೆಗೂ ನಿರಾಕರಿಸಿದ್ದಾರೆ.

ಜಾಗತಿಕ ಪರಿಕಲ್ಪನೆಯಲ್ಲಿ ಹೇಳವುದಾದಲ್ಲಿ, ಮೋದಿ ಸರಕಾರವು ವಿದೇಶಾಂಗ ಧೋರಣೆಯ ರಾಜತಾಂತ್ರಿಕ ಚರ್ಚೆಯಲ್ಲಿ ಭಾರತದ asftitfvvnfnu ಪಾಕಿಸ್ತಾನದ ಮುಂದಿನ ಕೂಡುಗೆರೆಯ ಸಮೀಕರಣಕ್ಕೆ, ಅಂದರೆ ಸಾಮಾನ್ಯವಾಗಿ ಬಳಸುವ ‘ಭಾರತ-ಪಾಕ್’ (ಇಂಡೋ-ಪಾಕ್) ಮಟ್ಟಕ್ಕೆ ಇಳಿಸಿದೆ.

ಅಮೆರಿಕ ಸಾಮ್ರಾಜ್ಯಶಾಹಿಯ ವಿಶ್ವಾಸಾರ್ಹ ಸಹವರ್ತಿ ಎಂದು ಹೇಳಿಸಿಕೊಳ್ಳುವ ಭರದಲ್ಲಿ ಇದುವರೆಗೆ ಅಂತಾರ್ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿರೋದಿಸಿಕೊಂಡು ಬಂದಿದ್ದ ಒತ್ತಡಗಳಿಗೆ ಮೋದಿ ಸರಕಾರ ಮಣಿದಿದೆ. ಅಂಥ ಪ್ರತಿರೋಧಗಳಿಂದಾಗಿ ಅಭಿವೃದ್ಧಿಶೀಲ ದೇಶಗಳ ನಾಯಕ ಎಂಬ ಪ್ರತಿಷ್ಠೆಯನ್ನು ಭಾರತ ಗಳಿಸಿತ್ತು.

ಅಂತಾರ್ರಾಷ್ಟ್ರೀಯ ಹವಾಮಾನ ಬದಲಾವಣೆ ಬದಲಾವಣೆ ಕುರಿತ ಸಮ್ಮೇಳನಗಳಲ್ಲಿ ಇದು ಸಂಭವಿಸಿದೆ. ಇತ್ತೀಚೆಗೆ ಪ್ಯಾರಿಸ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಕರಿತ 21ನೇ ಸಮ್ಮೇಳನ(ಸಿಒಪಿ 21)ದಲ್ಲಿ ನಮ್ಮ ಸಂಸತ್ತು ಹಾಕಿಕೊಟ್ಟ ‘ಕೆಂಪು ಗೆರೆ’ಯನ್ನು ಉಲ್ಲಂಘಿಸಿ ಬೇರೆಯವರು ಹೇಳಿದ ಕಡೆ ಭಾರತ ಸಹಿ ಮಾಡಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

‘ಕನಿಷ್ಟ ಸರಕಾರ, ಗರಿಷ್ಟ ಆಡಳಿತ’ ಎಂದು ಸರಕಾರ ದೊಡ್ಡದಾಗಿ ಬಡಾಯಿ ಕೊಚ್ಚಿಕೊಂಡಿತ್ತು. ದಾವೆಗಳ ನಿಜವಾದ ಸತ್ವ ಏನೆಂಬುದನ್ನು ಗುಜರಾತ್‍ನ ಪತೀದಾರ್, ಹರಿಯಾಣದ ಜಾಟ್ ಚಳುವಳಿಗಳನ್ನು ನಿರ್ವಹಿಸಿದ ರೀತಿಯೇ ಬಹಿರಂಗಪಡಿಸಿವೆ.

ಅದೇ ರೀತಿ, ನೈರೋಬಿಯಲ್ಲಿ ನಡೆದ ಡಬ್ಲ್ಯುಟಿಓ ದೋಹಾ ಸುತ್ತಿನ ಶೃಂಗ ಮಾತುಕತೆಗಳಲ್ಲಿ ಮಣದು ಭಾರತದ ಕೃಷಿ ಮತ್ತು ಮಾರುಕಟ್ಟೆಗಳಲ್ಲಿ ಹೆಚ್ಚಿನ ವಿದೇಶಿ ಪ್ರವೇಶಕ್ಕೆ ಅವಕಾಶ ನೀಡಿತು ಹಾಗೂ ಭಾರತದ ಜನತೆಯ ಆಹಾರ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿತು.

‘ಬರಾಕ್,ನನ್ನ ಗೆಳೆಯ’ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದು ಸಾಮಾಜಿಜ ಜಾಲತಾಣದಲ್ಲಿ ಕಮೆಂಟ್‍ಗಳಿಗೆ ಒಂದು ವಿಷಯವಾಗಬಹುದು. ಆದರೆ ಅದು ಒಬಾಮಾ ಅಧ್ಯಕ್ಷತೆಯ ಅವಧಿಯಲ್ಲಿ ಅಮೆರಿಕದೊಂದಿಗೆ ತೀರಾ ಆಳವಾದ ಅಡಿಯಾಳು ಸಂಬಂಧಕ್ಕೆ  ಭಾರತವನ್ನು ಇಳಿಸಿದ್ದರ ಪ್ರಸಕ್ತ ವಾಸ್ತವದ ಸಂಕೇತವಾಗಿದೆ.

ಜನತೆಯ ಮೇಲೆ ಅವಿರತ ಆರ್ಥಿಕ ಹೊಡೆತ

ಭಾರತದ ಆಂತರಿಕ ಆರ್ಥಿಕತೆಯನ್ನು ಬಲಿಗೊಟ್ಟು ವಿದೇಶಿ ಬಂಡವಾಳಕ್ಕೆ ಗರಿಷ್ಟ ಲಾಭ ಮಾಡಿಕೊಳ್ಳಲು ಹೆಚ್ಚಿನ ಅವಕಾಶ ಕಲ್ಪಿಸಿದ್ದು ನವ-ಉದಾರವಾದಿ ಆರ್ಥಿಕ ಸುಧಾರಣೆಗಳನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸಲು ಮೋದಿ ಸರಕಾರ ಮುಂದಿಟ್ಟ ಹೆಜ್ಜೆಯ ಪ್ರಮುಖ ಕುರುಹಾಗಿದೆ.

ಆರ್ಥಿಕ ಪುನರುಜ್ಜೀವನ ಎಂಬುದು ಬಿಜೆಪಿಯ ಚುನಾವಣೆ ಪ್ರಚಾರದ ಅತ್ಯಂತ ದೊಡ್ಡ  ಆಶ್ವಾಸನೆಯಾಗಿತ್ತು. ಆ ಪಕ್ಷದ ಪ್ರತಿಗಾಮಿ ಸಾಮಾಜಿಕ ಮತ್ತು ರಾಜಕೀಯ ಅಜೆಂಡಾವನ್ನು ಅಷ್ಟಾಗಿಯೇನೂ ಒಪ್ಪದ ಅನೇಕರು ಕೂಡ ಈ ಭರವಸೆಗೆ ಮಾರುಹೋದರು. ಆದರೆ, ಅದಾದ ಎರಡು ವರ್ಷಗಳಲ್ಲಿ ಎಲ್ಲಾ ರಂಗಗಳಲ್ಲಿ ಕುಸಿಯುತ್ತಿರುವ ಆರ್ಥಿಕತೆಯನ್ನಷ್ಟೆ ನಾವು ನೋಡುತ್ತಿರುವುದು.

ಭಾರತದ ಬೆಳವಣಿಗೆ ದರ ಜಗತ್ತಿನಲ್ಲೇ ವೇಗವಾದದ್ದು ಎಂಬ ಕಪಟ ಅಂಕಿ ಅಂಶಗಳನ್ನು ಎಲ್ಲರೂ ಅಪನಂಬಿಕೆಯಿಂದಲೇ ಕಂಡಿದ್ದರು. ಸ್ವತಃ ರಿಝರ್ವ್ ಬ್ಯಾಂಕ್ ಗವರ್ನರ್ ಮತ್ತು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹೆಗಾರ ಜಿಡಿಪಿ ಬೆಳವಣಿಗೆ ದರದ ಅಂಕಿಅಂಶಗಳಿಗೂ ವಾಸ್ತವತೆಗೂ ಹೊಂದಿಕೆಯಾಗುವುದಿಲ್ಲ ಎಂದು ಅಧಿüಕೃತ ವಾಗಿಯೇ ಹೇಳಿದ್ದರು. ಹತಾಶೆಯ ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ ಭಾರತ ಅತಿ ಹೆಚ್ಚಿನ ಬೆಳವಣಿಗೆ ದರವನ್ನು ಸಾಧಿಸಿದೆ ಎಂದು ಹೇಳಿಕೊಳ್ಳುವುದು ‘ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ’ ಎನ್ನುವಂತೆ ಎಂದು ಆರ್‍ಬಿಐ ಗವರ್ನರ್ ವರ್ಣಿಸಿದ್ದರು. ಇವೆಲ್ಲದರ ಹೊರತಾಗಿಯೂ ಬಿಜೆಪಿ ಮತ್ತು ಮೋದಿ 2014ರ ಸಾರ್ವತ್ರಿಕ ಚುನಾವಣೆಗಳ ವೇಳೆ ಜನರಿಗೆ ನೀಡಿದ್ದ ಪ್ರಮುಖ ಆಶ್ವಾಸನೆಗಳತ್ತ ಹೊರಳಿ ನೋಡೋಣ.

  • ರಫ್ತು ಪ್ರಮಾಣವನ್ನು 2013-14ರಲ್ಲಿದ್ದ 465.9 ಬಿಲಿಯನ್ ಅಮೆರಿಕನ್ ಡಾಲರ್‍ನಿಂದ 2019-20ರ ಹೊತ್ತಿಗೆ ಸರಿಸುಮಾರು ದುಪ್ಪಟ್ಟು, ಅಂದರೆ 900 ಬಿಲಿಯ ಡಾಲರ್‍ಗೆ ಹೆಚ್ಚಿಸುವುದಾಗಿ ಸರಕಾರ ಭರವಸೆ ನೀಡಿತ್ತು. ವಾಸ್ತವವಾಗಿ, 17 ತಿಂಗಳ ಕಾಲ ರಫ್ತು ಒಂದೇ ಸಮನೆ ಇಳಿದಿದೆ, ಐದು ವರ್ಷಗಳಲ್ಲೇ ಅತಿ ಕಡಿಮೆ ಅಂದರೆ 261.13 ಅಮೆರಿಕ ಬಿಲಿಯನ್ ಡಾಲರ್ ರಫ್ತು ದಾಖಲಾಗಿದೆ. ಕಳೆದ 63 ವರ್ಷಗಳಲ್ಲೇ ರಫ್ತು ಕ್ಷೇತ್ರದಲ್ಲಿ ಅತ್ಯಂತ ಕೆಟ್ಟ ಕುಸಿತ ಇದಾಗಿದೆ. ಮುಂದುವರಿಯುತ್ತಿರುವ ಬಂಡವಾಶಾಹಿಯ ಜಾಗತಿಕ ಬಿಕ್ಕಟ್ಟು ಇದಕ್ಕೆ ಹೆಚ್ಚಿನ ಕಾರಣವಾದರೂ ಅದು ಈ ಪರಿಯ ಕುಸಿತಕ್ಕೆ ಸಮರ್ಥನೆ ಆಗಲಾರದು. ಭಾರತದ ರಫ್ತನ್ನು ಪ್ರೋತ್ಸಾಹಿಸುವಲ್ಲಿ ಮೋದಿ ಸರಕಾರದ ನೀತಿಗಳು ಈ ಎರಡು ವರ್ಷಗಳಲ್ಲಿ ತೀವ್ರವಾಗಿ ವಿಫಲವಾಗಿವೆ.
  • ರಫ್ತು-ಆಧಾರಿತ ಬೆಳವಣಿಗೆಯ ಎಲ್ಲಾ ಕಾರ್ಯತಂತ್ರಗಳು ಇಂದು ಕುಸಿದಿರುವುದರಿಂದ,   ಭಾರತೀಯರ ಖರೀದಿ ಶಕ್ತಿಯನ್ನು ವಿಸ್ತರಿಸಲು ಭಾರತ ಆಂತರಿಕವಾಗಿ ನೋಡಬೇಕಾಗಿದೆ ಹಾಗೂ ತನ್ಮೂಲಕ ದೇಶದೊಳಗಿನ ಒಟ್ಟು ಬೇಡಿಕೆಯನ್ನು ಹೆಚ್ಚಿಸುವಂತೆ ನೋಡಿಕೊಳ್ಳಬೇಕಾಗಿದೆ. ಆದರೆ ಅದಕ್ಕೆ ತದ್ವಿರುದ್ಧವಾದುದು ಆಗುತ್ತಿದೆ ಎನ್ನುವುದನ್ನು ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್- ಐಐಪಿ) ತೋರಿಸುತ್ತದೆ. ಈ ವರ್ಷ ಮಾರ್ಚ್‍ನಲ್ಲಿ ಐಐಪಿ ಬೆಳವಣಿಗೆ 0.1 ಶೇಕಡಾ ಆಗಿತ್ತು. ಇಡೀ 2015-16ರಲ್ಲಿ ಬೆಳವಣಿಗೆ  2.4 ಶೇಕಡಾ ಆಗಿತ್ತು. 2013-14ರಲ್ಲಿ ಇದೇ ಐಐಪಿ ಬೆಳವಣಿಗೆ 4.8 ಶೇಕಡಾ ಆಗಿತ್ತು. ಐಐಪಿಯ ವಿವರಗಳನ್ನು ನೋಡುವಾಗ ಪರಿಸ್ಥಿತಿ ಇನ್ನಷ್ಟು ಗಾಬರಿ ಉಂಟು ಮಾಡುತ್ತದೆ.  2015-16ನೇ ಆರ್ಥಿಕ ವರ್ಷದ ಮಾರ್ಚ್‍ನಲ್ಲಿ ಸರಕು ತಯಾರಿಕೆಯ ಪ್ರಮಾಣ ಸಂಕುಚಿತಗೊಂಡಿದ್ದು ಬೆಳವಣಿಗೆ ಆಗಿದ್ದು ಕೇವಲ ಎರಡು ಶೇಕಡಾ ಬೆಳವಣಿಗೆ ದಾಖಲಿಸಿದೆ.  ಇಡೀ ವರ್ಷ ಬಂಡವಾಳ ಸರಕು(ಕ್ಯಾಪಿಟಲ್ ಗೂಡ್ಸ್) ಕ್ಷೇತ್ರ ಕೂಡ ಕೇವಲ 2.9 ಶೇಕಡಾ ಬೆಳವಣಿಗೆ ದರವನ್ನು ತೋರಿಸಿತ್ತು, ಇದು ಖಾಸಗಿ ಹೂಡಿಕೆಯಲ್ಲಿ ಮಂದಗತಿಯಿರುವುದರ ಸೂಚನೆಯಾಗಿದೆ. ಪ್ರಮುಖ ಕ್ಷೇತ್ರದಲ್ಲಿನ ವಾರ್ಷಿಕ ಬೆಳವಣಿಗೆ ಒಂದು ದಶಕದಲ್ಲೇ ಅತಿ ಕಡಿಮೆ ದಾಖಲಾಗಿದ, ಅಂದರೆ ಕೇವಲ 2.7 ಶೇಕಡಾ ಆಗಿರುವುದು ಕೈಗಾರಿಕಾ ಕ್ಷೇತ್ರದಲ್ಲಿ ಮಂಕು ಕವಿದಿರುವುದರ ಸಂಕೇತವಾಗಿದೆ.

‘ಬರಾಕ್,ನನ್ನ ಗೆಳೆಯ’ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದು ಸಾಮಾಜಿಜ ಜಾಲತಾಣದಲ್ಲಿ ಕಮೆಂಟ್‍ಗಳಿಗೆ ಒಂದು ವಿಷಯವಾಗಬಹುದು. ಆದರೆ ಅದು ಒಬಾಮಾ ಅಧ್ಯಕ್ಷತೆಯ ಅವಧಿಯಲ್ಲಿ ಅಮೆರಿಕದೊಂದಿಗೆ ತೀರಾ ಆಳವಾದ ಅಡಿಯಾಳು ಸಂಬಂಧಕ್ಕೆ  ಭಾರತವನ್ನು ಇಳಿಸಿದ್ದರ ಪ್ರಸಕ್ತ ವಾಸ್ತವದ ಸಂಕೇತವಾಗಿದೆ.

  • 2014 ಮತ್ತು 2015ರ ಬಂಡವಾಳ ಹೂಡಿಕೆ ಪ್ರವೃತ್ತಿ ಕೂಡ ಅಷ್ಟೇ ದುರಂತಮಯವಾದುದಾಗಿದೆ. 2014ರಲ್ಲಿ ಹೂಡಿಕೆ ಪ್ರಸ್ತಾವನೆಗಳು ಶೇಕಡಾ 23ರಷ್ಟು ಕುಸಿಯಿತು. 2013ರಲ್ಲಿ 5.3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಪ್ರಸ್ತಾವನೆಗಳು ಬಂದಿದ್ದು 2014ರಲ್ಲಿ ಅದು 4 ಲಕ್ಷ ಕೋಟಿ ರೂಪಾಯಿಗೆ ಇಳಿಯಿತು. 2015ರಲ್ಲಿ ಕೂಡ ಅದು ಶೇಕಡಾ 23ರಷ್ಟು ಕುಸಿತ ಕಂಡು ಹೂಡಿಕೆ ಪ್ರಸ್ತಾವನೆ 3.11 ಲಕ್ಷ ಕೋಟಿ ರೂಪಾಯಿಗೆ ನಿಂತಿತ್ತು. 2016ರ ಮೊದಲ ಮೂರು ತಿಂಗಳಲ್ಲಿ 60,130 ಕೋಟಿ ರೂಪಾಯಿ ಹೂಡಿಕೆ ಪ್ರಸ್ತಾವನೆಗಳು ಬಂದಿದ್ದು, ಪ್ರವೃತ್ತಿ ಹೀಗೇ ಮುಂದುವರಿದರೆ ಈ ವರ್ಷ ಹೂಡಿಕೆ ಪ್ರಮಾಣ ಇನ್ನಷ್ಟು ಕುಸಿಯಲಿದೆ.
  • ಕೈಗಾರಿಕೆ ಇಳಿಮುಖವಾಗಿರುವುದರಿಂದ ಪ್ರತಿವರ್ಷ ಮಾರುಕಟ್ಟೆ ಪ್ರವೇಶಿಸುವ 1.4ಕೋಟಿ ಭಾರತೀಯರಿಗೆ ಉದ್ಯೋಗವಿಲ್ಲ. ಶ್ರಮ-ಪ್ರಧಾನವಾದ (ಲೇಬರ್ ಇಂಟೆನ್ಸ್) ಎಂಟು ಕೈಗಾರಿಕೆಗಳಲ್ಲಿ 2015ರಲ್ಲಿ ಕಳೆದ ಆರು ವರ್ಷಗಳಲ್ಲೇ ಅತಿಕಡಿಮೆ ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನು ಹೊಸ ಉದ್ಯೋಗಗಳಿಗೆ ಸಂಬಂಧಿಸಿದ ಸರಕಾರದ ಅಂಕಿ ಅಂಶಗಳೇ ತೋರಿಸುತ್ತವೆ. 2015ರಲ್ಲಿ ಕೇವಲ 1.35 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಕಳೆದ ವರ್ಷ ಎಪ್ರಿಲ್‍ನಿಂದ ಜೂನ್ ನಡುವೆ ವಾಸ್ತವವಾಗಿ 43,000ದಷ್ಟು ಉದ್ಯೋಗಗಳು ಕುಸಿದಿವೆ. ಅದೇ ವರ್ಷ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ  ಉದ್ಯೋಗಗಳ ಸಂಖ್ಯೆಯಲ್ಲಿ ಅತಿಹೆಚ್ಚಿನ ಕುಸಿತ ದಾಖಲಾಗಿದೆ: ಐಟಿ-ಬಿಪಿಓ ವಲಯದಲ್ಲಿ 14,000, ಆಟೋಮೊಬೈಲ್ ಕ್ಷೇತ್ರದಲ್ಲಿ 13,000, ಲೋಹಗಳಲ್ಲಿ 12,000 ಮತ್ತು ರತ್ನ ಮತ್ತು ಆಭರಣ ವ್ಯಾಪಾರದಲ್ಲಿ 8,000 ಉದ್ಯೋಗಗಳು ಇಳಿಕೆಯಾಗಿವೆ.                                       ಪ್ರತಿವರ್ಷ 2 ಕೋಟಿ  ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ಭಾರತದ ಜನಸಂಖ್ಯೆಯ ಅನುಕೂಲವನ್ನು ಜನಸಂಖ್ಯೆಯ ದುರಂತವನ್ನಾಗಿ ಪರಿವರ್ತಿಸಲು ಟೊಂಕ ಕಟ್ಟಿ ನಿಂತಂತೆ ಕಾಣುತ್ತದೆ.
  • ಕುಸಿಯುತ್ತಿರುವ ರಫ್ತು, ಉತ್ಪಾದನೆಯಲ್ಲಿ ಇಳಿಕೆ ಮತ್ತು ದುರ್ಬಲ ಬಂಡವಾಳ ಹೂಡಿಕೆ ಬೇಡಿಕೆ- ಇವೆಲ್ಲವೂ ಬ್ಯಾಂಕಿಂಗ್ ವಲಯಕ್ಕೆ ಇನ್ನಷ್ಟು ಚಿಂತೆಯ ಸನ್ನಿವೇಶವನ್ನು ಸೃಷ್ಟಿಸಲಿವೆ. ವಿವಿಧ ಸರಕಾರಗಳು ತಮಗೆ ಇಷ್ಟವಾದ ಚಮಚಾ ಬಂಡವಾಳಗಾರರನ್ನು ಬೆಳೆಸಲು ಬಳಸಿಕೊಂಡಿದ್ದರಿಂದ ಭಾರತದ ಬ್ಯಾಂಕಿಂಗ್ ಕ್ಷೇತ್ರ ಈಗಾಗಲೇ ತೀವ್ರ ಬಿಕ್ಕಟ್ಟಿನಲ್ಲಿದೆ. ಬ್ಯಾಂಕ್‍ಗಳ ಸುಸ್ತಿ ಸಾಲಗಳು(ಎನ್‍ಪಿಎ-ವಸೂಲಿ ಮಾಡಲಾಗದ ಸಾಲಗಳು) ಅಂದಾಜು 13 ಲಕ್ಷ ಕೋಟಿ ರೂಪಾಯಿ ಆಗಿದೆ. (195 ಬಿಲಿಯ ಅಮೆರಿಕನ್ ಡಾಲರ್). ನಮ್ಮ ಬ್ಯಾಂಕ್‍ಗಳಿಗೆ ಬರಬೇಕಾದ ಈ ರೀತಿಯ ಮೊತ್ತ ಮುಂದಿನ ವರ್ಷ ಇನ್ನೂ ಹೆಚ್ಚಾಗಲಿದ್ದು, ಇದು 112 ದೇಶಗಳ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಕ್ಕಿಂತ ಹೆಚ್ಚಿನದ್ದಾಗಿದೆ. ಅಷ್ಟು ಮಾತ್ರವೇ ಅಲ್ಲದೆ, ಬ್ಯಾಡ್ ಲೋನ್ ಎಂದು ಹೇಳಲಾಗುವ ಈ ರೀತಿಯ ಮೊತ್ತ ಈಗ ವಾಸ್ತವವಾಗಿ ಈ ಬ್ಯಾಂಕ್‍ಗಳ ಮಾರುಕಟ್ಟೆ ಮೌಲ್ಯವನ್ನೇ ಮೀರಿಸುತ್ತದೆ.

ಬ್ಯಾಂಕ್‍ಗಳಿಗೆ ಸಾಲ ವಾಪಸ್ ಮಾಡದವರು ಯಾರು? ಈ ರೀತಿಯ ವಂಚನೆ ಮಾಡಿ ಕೊಬ್ಬಿರುವವರಿಗೆ ಶಿಕ್ಷೆ ವಿಧಿಸುವುದು ಒತ್ತಟ್ಟಿಗಿರಲಿ, ಈ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲೇ ಸರಕಾರ ಸಿದ್ಧವಿಲ್ಲ. ಆದರೆ ಇದೇ ಮಂದಿ 5000 ರೂಪಾಯಿ ಸಾಲವನ್ನು ತೀರಿಸಲಾಗದ ಬಡ ರೈತನ ಪಾತ್ರೆ ಪಗಡೆಗಳನ್ನೂ ಹರಾಜು ಹಾಕಲು ಹಿಂದೆ ಮುಂದೆ ನೋಡುವುದಿಲ್ಲ, ಅದಕ್ಕಾಗಿ ಅವರಿಗೆ ಯಾವುದೇ ಪಶ್ಚಾತ್ತಾಪವೂ ಇರುವುದಿಲ್ಲ. ಚಮಚಾ ಬಂಡವಾಳಗಾರರಿಗೆ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ನೀಡಿದ ಈ ಸಾಲ ಜನರ ತೆರಿಗೆಯಿಂದ ಸಂಗ್ರಹವಾದ ಬಂಡವಾಳ ಎನ್ನುವುದನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕು.

ದುಡಿಯುವ ಜನರು ಕೂಡ ಸರಕಾರದ ಹೆಚ್ಚುವರಿ ತೆರಿಗೆಗಳ ಹೊರೆಯಿಂದ ತತ್ತರಿಸಿದ್ದಾರೆ. ಎಲ್ಲಾ ಹೆಚ್ಚಳಗಳನ್ನು ಪರೋಕ್ಷ ತೆರಿಗೆಗಳಲ್ಲೇ, ಅಂದರೆ ತೆರಿಗೆಗಳು, ಸೆಸ್‍ಗಳು ಮತ್ತು ಲೆವಿಗಳಲ್ಲಿಯೇ ಮಾಡಲಾಗುತ್ತಿದೆ.  ಈ ರೀತಿಯಲ್ಲಿ ಸಂಗ್ರಹವಾದ ಮೊತ್ತ 20,600 ಕೋಟಿ ರೂಪಾಯಿ. ಇದರಿಂದ ಹೆಚ್ಚಿನ ಹೊರೆ ಬೀಳುವುದು ಬಡಜನರ ಮೇಲೆಯೇ. ಅತ್ತ ನೇರ ತೆರಿಗೆಗಳನ್ನು ಇನ್ನಷ್ಟು ಕಡಿಮೆ ಮಾಡಿ ಶ್ರೀಮಂತರಿಗೆ ಅನುಕೂಲ ಮಾಡಿಕೊಡಲಾಗಿದೆ. ಅವರಿಗೆ 1,600 ಕೋಟಿ ರೂಪಾಯಿಯಷ್ಟು ನೇರ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಅಷ್ಟಾಗಿಯೂ ನಿಗದಿತ ಗುರಿಯನ್ನು ತಲುಪಲಾಗಿಲ್ಲ. ಆರು ಲಕ್ಷ ಕೋಟಿ ರೂಪಾಯಿಯಷ್ಟಿರುವ ತೆರಿಗೆ ಬಾಕಿಯನ್ನು ವಸೂಲಿ ಮಾಡಲು ಅಥವಾ ಬಜೆಟ್‍ನಲ್ಲಿ ಘೋಷಿಸಿದ ಆರು ಲಕ್ಷ ಕೋಟಿ ರೂಪಾಯಿಗಳಷ್ಟು ಇಪ್ರೋತ್ಸಾಹಕ’ಗಳೆಂದು ನೀಡಿರುವ ತೆರಿಗೆ ಸೌಲಭ್ಯವನ್ನು ತುಂಬಲು ಸರಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಇದರ ಜತೆ ಜನರಿಗೆ ಹಣದುಬ್ಬರದ ಹೊರೆ ಬೇರೆ. ಗ್ರಾಹಕ ಬೆಲೆ ಸುಚ್ಯಂಕ ಎಪ್ರಿಲ್‍ನಲ್ಲಿ ಶೇಕಡ 5.4ರಷ್ಟು ಏರಿತು ಹಾಗೂ ಗ್ರಾಮೀಣ ಹಣದುಬ್ಬರ 6.1 ಶೇಕಡಾ ಆಗಿತ್ತು. ಎಪ್ರಿಲ್‍ನಲ್ಲಿ ಆಹಾರಧಾನ್ಯಗಳ ಬೆಲೆ 6.2 ಶೇಕಡಾದಷ್ಟು ಮತ್ತು ಬೇಳೆಗಳ ಬೆಲೆ 34 ಶೇಕಡಾದಷ್ಟು  ಏರಿಕೆಯಾದವು. ಆಘಾತಕಾರಿ ಎನ್ನುವಷ್ಟು ನಿಯಮಿತವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರುತ್ತಿವೆ.  ಬಹಳಷ್ಟು ಏರಿಳಿಕೆ ಕಾಣುವ ಆಹಾರ ಮತ್ತು ಇಂಧನ ಖರ್ಚುಗಳನ್ನು ಬಿಟ್ಟ ಮೂಲ ಹಣದುಬ್ಬರದ ಪ್ರಮಾಣ ಶೇಕಡಾ 6.8 ಆಗಿದೆ.

ಕಳೆದ ವರ್ಷ ಎಪ್ರಿಲ್‍ನಿಂದ ಜೂನ್ ನಡುವೆ ವಾಸ್ತವವಾಗಿ 43,000ದಷ್ಟು ಉದ್ಯೋಗಗಳು ಕುಸಿದಿವೆ. ಅದೇ ವರ್ಷ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಉದ್ಯೋಗಗಳ ಸಂಖ್ಯೆಯಲ್ಲಿ ಅತಿಹೆಚ್ಚಿನ ಕುಸಿತ ದಾಖಲಾಗಿದೆ: ಪ್ರತಿವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ, ಭಾರತದ ಜನಸಂಖ್ಯೆಯ ಅನುಕೂಲವನ್ನು ಜನಸಂಖ್ಯೆಯ ದುರಂತವನ್ನಾಗಿ ಪರಿವರ್ತಿಸಲು ಟೊಂಕ ಕಟ್ಟಿ ನಿಂತಂತೆ ಕಾಣುತ್ತದೆ.

ನಿಜವಾದ ಅಂಕಿಸಂಖ್ಯೆಗಳನ್ನು ಮರೆಮಾಚುವ ಸರಕಾರದ ಅಂಕಿ-ಅಂಶಗಳ ಪ್ರಕಾರವೂ  ಕಳೆದ ವರ್ಷ ದೇಶದಲ್ಲಿ 2,997 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಈಗಾಗಲೇ 116 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ, ಪ್ರಧಾನಿಯವರು ವಿವಿಧ ಸಂದರ್ಭಗಳಲ್ಲಿ ಬಾಯಿ ಮಾತಿನಲ್ಲಿ ಸಹಾನೂಭೂತಿ ವ್ಯಕ್ತಪಡಿಸುವುದನ್ನು ಬಿಟ್ಟರೆ ಇನ್ನೇನನ್ನೂ ಮಾಡುತ್ತಿಲ್ಲ.  ದುರಂತವೆಂದರೆ, ಕೃಷಿ ಸಚಿವಾಲಯ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಚಾರಗಳನ್ನು ಜನಪ್ರಿಯಗೊಳಿಸಲು ಬ್ರಾಂಡ್ ರಾಯಭಾರಿ ಬೇಕು ಎಂದು ಒಂದು ಟೆಂಡರ್ ಕರೆದಿದೆ!

ಕಳೆದ ಎರಡು ವರ್ಷಗಳಲ್ಲಿ ನಿಜ ಅರ್ಥದಲ್ಲಿ ಕೂಲಿಯಲ್ಲಿ ಕುಸಿತ ಕಂಡಿರುವ ಗ್ರಾಮೀಣ ಬಡವರಿಗೆ ಇದು ದುಪ್ಪಟ್ಟು ಹೊಡೆತವೇ ಸರಿ. ರೈತರಿಗೆ ಉತ್ಪಾದನೆ ವೆಚ್ಚದ ಮೇಲೆ ಶೇಕಡಾ 50ರಷ್ಟು ಲಾಭ ಒದಗಿಸುವುದಾಗಿ ಚುನಾವಣೆ ಪ್ರಚಾರದ ವೇಳೆ ಮೋದಿ ಭರವಸೆ ನೀಡಿದ್ದರು. ಆದರೆ ಲಾಭ ಬರುವುದು ಬಿಡಿ, ಕಳೆದ ಎರಡು ವರ್ಷಗಳಿಂದ ಈ ಸರಕಾರದಡಿ ರೈತರು ಹೂಡಿದ ಬಂಡವಾಳವೇ ವಾಪಸ್ ಬರುತ್ತಿಲ್ಲ. ಹತಾಶೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಹೆಚ್ಚುತ್ತಿದೆ. ಮಳೆ ಕಡಿಮೆಯಾಗುವುದು ಮತ್ತು ಬರಗಾಲ ಯಾರ ಕೈನಲ್ಲೂ ಇಲ್ಲ. ಆದರೆ, ಅದಕ್ಕೆ ಸ್ಪಂದಿಸುವುದು ಖಂಡಿತಾ ಸರಕಾರದ ನಿಯಂತ್ರಣದಲ್ಲಿದೆ. ಗ್ರಾಮೀಣ ಭಾರತದ ಜನರು ನಲುಗುತ್ತಿರುವಾಗ, ಸುಪ್ರೀಂಕೋರ್ಟ್ ನಿರ್ದೇಶನ ನೀಡುವವರೆಗೂ ಕಳೆದ ವರ್ಷದ ಉದ್ಯೋಗ ಖಾತ್ರಿ ಯೋಜನೆಯಡಿಯ ಬಾಕಿ ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಲಿಲ್ಲ. “ಪ್ರಭುತ್ವವು ಸಂವಿಧಾನವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ” ಎಂದು ತನ್ನ ತೀರ್ಪಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, “ಭಾರತ ಸರಕಾರ ಸಾಮಾಜಿಕ ನ್ಯಾಯವನ್ನು ಕಿಟಕಿಯಾಚೆ ಎಸೆದಿದೆ” ಎಂದೂ ಹೇಳಿದೆ.

ಆದರೆ ಸರಕಾರಕ್ಕೆ ಸುಪ್ರೀಂಕೋರ್ಟ್‍ನ ಈ ಛೀಮಾರಿಯ ಪರಿವೆಯೂ ಇಲ್ಲ. ಅದು ತನ್ನದೇ ರೀತಿಯಲ್ಲಿ ಬೇಕಾಬಿಟ್ಟಿಯಾಗಿ ಕೆಲಸ ಮುಂದುವರೆಸುತ್ತಿದೆ.  ಸಂಭ್ರಮಾಚರಣೆಗೆ, ಜಾಹಿರಾತುಗಳು ಮತ್ತು ಮಾರ್ಕೆಟಿಂಗ್‍ಗೆ ಅಪಾರ ಹಣ ಸುರಿಯುತ್ತಿದೆ. ಭಾರತೀಯರು ಮಾರ್ಕೆಟಿಂಗ್ ವಿಚಾರದಲ್ಲಿ ಅಷ್ಟೇನೂ ಹುಷಾರಲ್ಲ ಎಂದು ಪ್ರಧಾನಿ ಹೇಳಬಹುದು, ಆದರೆ ಖಂಡಿತವಾಗಿಯೂ ಈ ಮಾತು ಅವರ ಸರಕಾರಕ್ಕೆ ಅನ್ವಯ ವಾಗುವುದಿಲ್ಲ. ಅವರ ಸರಕಾರ ಜಾಹಿರಾತು ಖರ್ಚನ್ನು ಶೇಕಡಾ 20ರಷ್ಟು ಹೆಚ್ಚಿಸಿದ್ದು ಆ ಮೊತ್ತ 1,200 ಕೋಟಿ ರೂಪಾಯಿ ಆಗಿದೆ.

ಈ ರೀತಿಯಾಗಿ, ಈ ಎರಡು ವರ್ಷಗಳು ದೇಶದ ಬಹುಪಾಲು ಜನರ ಮೇಲೆ ತೀವ್ರವಾದ ಆರ್ಥಿಕ ಹೊರೆಗಳು ಹೇರಿಕೆಯಾಗಿದ್ದನ್ನು ಕಂಡಿವೆ. ಎಲ್ಲಾ ಮೂರು ಪ್ರಧಾನ ವಿಷಯಗಳಲ್ಲಿ ಕಡೆಯಲಾಗುತ್ತಿರುವ ಈ ಹೊಸ ‘ತ್ರಿಮೂರ್ತಿ’ ಎಂದರೆ, ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಭಾರತಕ್ಕೆ ಹಿನ್ನಡೆ ಹಾಗೂ ದೇಶದ ಬಹುತೇಕ ಜನಗಳ ಜೀವನೋಪಾಯದ ಮೇಲೆ ದೊಡ್ಡ ಆಕ್ರಮಣ ಎಂಬುದು ಇಷ್ಟು ಹೊತ್ತಿಗೆ ಸುಸ್ಪಷ್ಟವಾಗುತ್ತಿದೆ.

ವ್ಯಾಪಕವಾದ ಪ್ರಬಲ ಜನತಾ ಹೋರಾಟಗಳ ಮೂಲಕ ಮಾತ್ರವೇ ಇಂಥ ಆಕ್ರಮಣಗಳನ್ನು ಹಿಮ್ಮೆಟ್ಟಿಸಬಹುದಾಗಿದೆ. ಹೀಗಾಗಿ, ಈ ಸರಕಾರ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಭಾರತೀಯ ಜನತೆಯ ಮುಂದಿರುವ ಕಾರ್ಯಭಾರಗಳು ಸ್ಪಷ್ಟವಾಗಿವೆ- ಜನತೆಯ ಘನತೆಯ ಬಾಳ್ವೆಯ ಹಕ್ಕಿನ ರಕ್ಷಣೆಗಾಗಿ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿತವಾಗಿರುವ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಪ್ರತಿರೋಧವನ್ನು ಹೆಚ್ಚಿಸುವುದು. ಈ ಪ್ರತಿರೋಧ, ಮುಂದಿನ ವರ್ಷಗಳಲ್ಲಿ ಸರಕಾರದ ದುರಂತಮಯ ಕ್ರಮಗಳನ್ನು ವಾಪಸ್ ತಿರುಗಿಸುವ ಹಾಗೂ ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಬುನಾದಿಯನ್ನು ನಿರಾಕರಿಸುವ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸುವ ಮಟ್ಟವನ್ನು ಮುಟ್ಟಬೇಕು

ಈ ಹಿನ್ನೆಲೆಯಲ್ಲಿ, ಆರ್‍ಎಸ್‍ಎಸ್ / ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ‘ಸಂಭ್ರಮಾಚರಣೆ’ ಒಂದು ಅವಾಸ್ತವಿಕ ಆಯಾಮವನ್ನು ಪಡೆದುಕೊಳ್ಳುತ್ತದೆ.

* ಸೀತಾರಾಮ್ ಯೆಚೂರಿ
* ಅನುವಾದ: ವಿಶ್ವ

Advertisements