ಯುಜಿಸಿಯ ಹೊಸ ಅಧಿಸೂಚನೆ-ಸಾರ್ವಜನಿಕ ಉನ್ನತ ಶಿಕ್ಷಣವನ್ನು ಕಳಚಿ ಹಾಕುವ ಹುನ್ನಾರ :ಎಸ್.ಎಫ್.ಐ

ಸಂಪುಟ: 10 ಸಂಚಿಕೆ: 23 date: Sunday, May 29, 2016

ಇತ್ತೀಚೆಗೆ ವಿಶ್ವವಿದ್ಯಾಲಯ ಧನಸಹಾಯ ಅಯೋಗ(ಯುಜಿಸಿ) 3ನೇ ತಿದ್ದುಪಡಿ, 2016ರ ಮಿಟಿಫಿಕೇಶನ್ ಬಂದಿದೆ. ಇದು ನಮ್ಮ ವಿಶ್ವದ್ಯಾಲಯಗಳಲ್ಲಿ ಬೋಧನೆ ಮತ್ತು ಕಲಿಕೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ಎಸ್.ಎಫ್.ಐ ದಿಲ್ಲಿ ರಾಜ್ಯ ಸಮಿತಿ ಖಂಡಿಸಿದೆ.

ಇದು ನೇರ ಬೋಧನಾ ಅವಧಿಯನ್ನು ಅಸಿಸ್ಟೆಂಟ್ ಫ್ರೊಫೆಸರುಗಳಿಗೆ 16ರಿಂದ 24 ಗಂಟೆಗಳಿಗೆ ಏರಿಸಿದೆ ಮತ್ತು ಅಸೋಸಿಯೇಟ್ ಪ್ರೊಫೆಸರುಗಳಿಗೆ 14ರಿಂದ 22 ಗಂಟೆಗಳಿಗೆ ಏರಿಸಿದೆ. ಎರಡು ಗಂಟೆಗಳ ಪ್ರಾಕ್ಟಿಕಲ್ ಅವಧಿಯನ್ನು ಇನ್ನು ಮುಂದೆ ಒಂದು ಗಂಟೆಯ ಪಾಠ ಎಂದು ಪರಿಗಣಿಸಲಾಗುವುದಂತೆ. ಇದರಿಂದ ಒಂದೆಡೆ ಈಗ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ನೂರಾರು ಅಧ್ಯಾಪಕರು, ತಾತ್ಕಾಲಿಕ ಬೋಧನಾ ಕೆಲಸಗಳನ್ನು ಮಾಡುತ್ತಿರುವ ಎಂಫಿಲ್ ಮತ್ತು ಪಿ.ಹೆಚ್.ಡಿ ವಿದಾರ್ಥಿಗಳೂ  ಕೆಲಸ ಕಳಕೊಳ್ಳುತ್ತಾರೆ. ಇನ್ನೊಂದೆಡೆಯಲ್ಲಿ ಇದು ವಿದ್ಯಾರ್ಥಿ:ಅಧ್ಯಾಪಕ ಅನುಪಾತವನ್ನು ಮತ್ತಷ್ಟು ಕೆಡಿಸಿ ಕಲಿಕೆಯ ಪ್ರಕ್ರಿಯೆಗೆ ಬಾಧಕವಾಗುತ್ತದೆ ಎಂದು ಎಸ್.ಎಫ್.ಐ ಅಭಿಪ್ರಾಯ ಪಟ್ಟಿದೆ.

ಈಗ ದಿಲ್ಲಿ ವಿಶ್ವವಿದ್ಯಾಲಯದಲ್ಲಿ 4000 ಅಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡದೇ ಬಿಡಲಾಗಿದೆ. ಈ ನೋಟಿಫಿಕೇಶನ್ ಮೂಲಕ ಈ ಹುದ್ದೆಗಳಲ್ಲಿ ಬಹಳಷ್ಟು ರದ್ದಾಗುತ್ತವೆ. ಇದು ಯುಜಿಸಿಗೆ ಹಣನೀಡಿಕೆಯಲ್ಲಿ 55ಶೇ.ದಷ್ಟು ಕಡಿತ ಮಾಡಿರುವ ಈ ಅಚ್ಚೇ ದಿನ್ ಸರಕಾರದ ಕ್ರಮದ ದುಷ್ಪರಿಣಾಮ. ಈ ಹುದ್ದೆಗಳನ್ನು ರದ್ದುಗೊಳಿಸುವುದೇ ಈ ಸರಕಾರದ ಉದ್ದೇಶವಿರುವಂತೆ ಕಾಣುತ್ತದೆ ಎಂಬುದು ವಿದ್ಯಾರ್ಥಿಗಳ ಆತಂಕ.

ದಿಲ್ಲಿ ವಿಶ್ವವಿದ್ಯಾಲಯ ಹಿಂದುಳಿದ ಸಾಮಾಜಿಕ ವಿಭಾಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಬೋಧನೆಯ ಕೊರತೆಗಳನ್ನು ತುಂಬಲು ವಿಶೇಷ ಟ್ಯುಟೋರಿಯಲ್ ತರಗತಿಗಳನ್ನು ನಡೆಸುತ್ತಿತ್ತು. ಈ ಆಧಿಸೂಚನೆ ಆ ಕ್ರಮವನ್ನೂ ದುರ್ಬಲಗೊಳಿಸಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯಲ್ಲಿ ದಲಿತ ವಿಭಾಗಗಳ ಸಮಸ್ಯೆಗಳನ್ನು ಪರಿಶೀಲಿಸಿದ ಥೋರಟ್ ಸಮಿತಿ ಕೂಡ ಇಂತಹ ವಿಶೇಷ ತರಗತಿಗಳ ಶಿಫಾರಸು ಮಾಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಮೊದಲು ಮೋದಿ ಸರಕಾರ ಎರಡು ವರ್ಷಗಳನ್ನು ಪೂರೈಸುವ ವೇಳೆಗೆ ಹೊಸ ಶಿಕ್ಷಣ ನೀತಿಯನ್ನು ಪ್ರಕಟಿಸುವುದಾಗಿ ತಿಳಿಸಲಾಗಿತ್ತು. ಬಹುಶಃ ಈ ಅಧಿಸೂಚನೆ ಅದರ ಮುನ್ಸೂಚನೆಯಿರಬಹುದೇ? ಸಾರ್ವಜನಿಕ ಉನ್ನತ ಶಿಕ್ಷಣವನ್ನು ಕಳಚಿ ಹಾಕಿ ಉನ್ನತ ಶಿಕ್ಷಣವನ್ನು ಉಳ್ಳವರಿಗೇ ಸೀಮಿತಗೊಳಿಸುವ ಖಾಸಗಿ ವಿವಿಗಳಿಗೆ ‘ಅಚ್ಚೇ ದಿನ್’ ತರುವ ಹುನ್ನಾರ ಇದರ ಹಿಂದಿದೆಯೇ ಎಂಬುದು ದಲಿತ, ಹಿಂದುಳಿದ ವಿಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳ ಭಯ. ಹೈದರಾಬಾದ್ ಕೇಂದ್ರೀಯ ವಿವಿ, ಜೆ.ಎನ್.ಯು. ಯುಜಿಸಿ ಫೆಲೋಶಿಫ್ ಗಳಲ್ಲಿ ಅಡೆ-ತಡೆಗಳು ಇವೆಲ್ಲ ಈ ಭಯ ನಿರಾಧಾರವೇನೂ ಅಲ್ಲ ಎಂದು ಸೂಚಿಸುತ್ತವೆ.

ಈ ಎಲ್ಲ ಕ್ರಮಗಳನ್ನು ಶಿಕ್ಷಕರ ಸಂಘಟನೆಗಳೊಡನೆ ಚರ್ಚಿಸದೆ ಏಕಪಕ್ಷೀಯವಾಗಿ ಶೈಕ್ಷಣಿಕ ಸುಧಾರಣೆಯ ಹೆಸರಿನಲ್ಲಿ ಜಾರಿಗೆ ತರಲಾಗುತ್ತಿದೆ. ಇದನ್ನು ದಿಲ್ಲಿ ವಿಶ್ವವಿದ್ಯಾಲಯ ಅಧ್ಯಾಪಕರ ಸಂಘ ಬಲವಾಗಿ ಪ್ರತಿಭಟಿಸಿದೆ, ಪ್ರತಿಭಟನಾರ್ಥ ಪರೀಕ್ಷಾ ಮೌಲ್ಯಮಾಪನವನ್ನು ಬಹಿಷ್ಕರಿಸಬೇಕೆಂದು ನಿರ್ಧರಿಸಿದೆ.

ವೇದರಾಜ್ .ಎನ್.ಕೆ

Advertisements