ರಾಜ್ಯಸಭಾ ಚುನಾವಣೆ: ಅನಾರೋಗ್ಯಕರ ಪ್ರವೃತ್ತಿಗಳು

ಸಂಪುಟ: 10 ಸಂಚಿಕೆ: 23 Sunday, May 29, 2016
ಹೊರ ರಾಜ್ಯದ ರಾಜಕಾರಣಿಗಳಿಗೆ ಮತ್ತು ಉದ್ಯಮಿಗಳಿಗೆ ಸೀಟು ಕೊಡುವ ಪ್ರವೃತ್ತಿ ಬಗ್ಗೆ ರಾಜ್ಯದಲ್ಲಿ ಚರ್ಚೆ ಎದ್ದಿದೆ. ಉದ್ಯಮಿಗಳಿಗೆ ಸೀಟು ಕೊಡುವ ಬಗ್ಗೆ ಚರ್ಚೆ ಆಗಬೇಕಾದ್ದು ಬರಿಯ ಅವರ ಮೂಲ ನೆಲೆಯ ಬಗ್ಗೆ ಮಾತ್ರವಲ್ಲ. ಅವರು ಎಷ್ಟರ ಮಟ್ಟಿಗೆ ರಾಜ್ಯದ ಜನತೆಯ ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಕಾಳಜಿ, ಪರಿಣತಿ ಹೊಂದಿದವರು ಎಂಬುದು ಮುಖ್ಯ ಚರ್ಚೆಯಾಗಬೇಕು. ಇಂತಹ ಹೆಚ್ಚಿನ ಉದ್ಯಮಿಗಳು (ರಾಜ್ಯದವರಿರಲಿ ಅಥವಾ ಹೊರ ರಾಜ್ಯದವರಿರಲಿ) ತಮ್ಮ ಉದ್ಯಮದ ಹಿತಾಸಕ್ತಿಗಳನ್ನು ಕಾಪಾಡಲು, ತಮಗೆ ಅನುಕೂಲಕರವಾದ ನೀತಿ ರೂಪಿಸಲು, ತಮ್ಮ ಕಾನೂನುಬಾಹಿರ ಅಕ್ರಮಗಳ ವಿರುದ್ಧ ಸರಕಾರಿ ಕ್ರಮಗಳಿಂದ ರಕ್ಷಣೆ ಪಡೆಯಲು ಪಾರ್ಲಿಮೆಂಟು ಪ್ರವೇಶ ಪಡೆಯ ಬಯಸುತ್ತಾರೆ. ಇದು ಪ್ರಮುಖ ಚರ್ಚೆಯ ವಿಷಯ ಆಗಬೇಕು.

ರಾಜ್ಯಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಕರ್ನಾಟಕದಿಂದ 13 ರಾಜ್ಯಸಭಾ ಸದಸ್ಯರಿದ್ದು ಅವರ ಅವಧಿ 6 ವರ್ಷಗಳು. ಪ್ರತಿ 2 ವರ್ಷಕ್ಕೊಮ್ಮೆ ಅವರಲ್ಲಿ ಮೂರನೇ ಒಂದರಷ್ಟು (ಅಂದರೆ 4) ಸದಸ್ಯರು ನಿವೃತ್ತರಾಗಿ, 4 ಹೊಸ ಸದ್ಯರು ಆಯ್ಕೆಯಾಗುತ್ತಾರೆ. ರಾಜ್ಯದ ವಿಧಾನಸಭೆ ರಾಜ್ಯಸಭಾ ಸದಸ್ಯರನ್ನು ಚುನಾಯಿಸುತ್ತದೆ. ಈ ಚುನಾವಣೆ ಪ್ರಮಾಣಾತ್ಕಕ ಪ್ರಾತಿನಿಧ್ಯದ ಆಧಾರದ ಮೇಲೆ ನಡೆಯುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಯ 45 ಸದಸ್ಯರ ಮತ ಗಳಿಸಿದ ಅಭ್ಯರ್ಥಿ ರಾಜ್ಯಸಭೆಗೆ ಚುನಾಯಿತರಾಗುತ್ತಾರೆ. ಕರ್ನಾಟಕದಿಂದ ನಡೆಯುವ ರಾಜ್ಯಸಭಾ ಚುನಾವಣೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಅನಾರೋಗ್ಯಕರ ಪ್ರವೃತ್ತಿಗಳು ತಲೆದೋರಿವೆ.

ಕೇಂದ್ರದಲ್ಲಿ ರಾಜ್ಯಗಳ ಆರ್ಥಿಕ ರಾಜಕೀಯ ಸಾಮಾಜಿಕ ಅಭಿಪ್ರಾಯಗಳನ್ನು ಪ್ರತಿನಿಧಿಸುವ ಮತ್ತು ಅವುಗಳ ದನಿ ಕೇಳುವಂತೆ ಮಾಡುವ ವೇದಿಕೆಯಾಗಿ ರಾಜ್ಯಸಭೆಯನ್ನು ಪಾರ್ಲಿಮೆಂಟಿನ ಮೆಲ್ಸದನವಾಗಿ ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ. ರಾಜ್ಯಸಭೆ ನಮ್ಮ ಫೆಡರಲ್ ಸ್ವರೂಪದ ಸರಕಾರದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯಸಭೆ ‘ಶಾಶ್ವತ’ ಸದನವಾಗಿದ್ದು ಇಡಿಯಾಗಿ ಒಮ್ಮೆಲೇ ಬದಲಾಗುವುದಿಲ್ಲ. ಪ್ರತಿ ವರ್ಷ ಮೂರನೇ ಒಂದು ಭಾಗದ ಸದಸ್ಯರು ನಿವೃತ್ತರಾಗಿ, ಹೊಸ ಸದಸ್ಯರು ಆಯ್ಕೆಯಾಗುತ್ತಾರೆ.   ಇದು ಲೋಕಸಭೆಯಲ್ಲಿ ಭಾರೀ ಬಹುಮತ ಪಡೆದ ಪಕ್ಷವೊಂದು ಬೇರೆ ರಾಜಕೀಯ ಅಭಿಪ್ರಾಯವನ್ನು ತುಳಿಯುವ ಅಥವಾ ನಿರ್ಲಕ್ಷ ಮಾಡುವ ಅಪಾಯವನ್ನೂ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇಂತಹ ರಾಜ್ಯಸಭೆಗೆ ಅಭ್ಯರ್ಥಿಯಾಗಿರುವವರಿಗೆ ರಾಜ್ಯದ ಆರ್ಥಿಕ ರಾಜಕೀಯ ಸಾಮಾಜಿಕ ಅಭಿಪ್ರಾಯಗಳ ಬಗ್ಗೆ ಆಳವಾದ ಜ್ಞಾನ ಇದ್ದು ಅವನ್ನು ಸದನದಲ್ಲಿ ಸಮರ್ಥವಾಗಿ ಮಂಡಿಸುವ ಸಾಮಥ್ರ್ಯ ಇರಬೇಕು. ಇವೆಲ್ಲವನ್ನು ಮಾಡಲು ಆಯಾ ರಾಜ್ಯದಲ್ಲಿ ಕೆಲಸ ಮಾಡಿ ದೀರ್ಘ ಅನುಭವ ಇರುವವರು ಬೇಕಾಗುತ್ತಾರೆ. ಹಿಂದೆ ರಾಜ್ಯಸಭೆಯ ಅಭ್ಯರ್ಥಿಗಳು ರಾಜ್ಯದಲ್ಲಿ ವಾಸ ಇದ್ದು ಅಲ್ಲಿನ ಮತದಾರರಾಗಿರಬೇಕೆಂಬ ನಿಯಮ ಇತ್ತು. ಆಸ್ಸಾಮಿನಿಂದ ಡಾ. ಮನಮೋಹನ ಸಿಂಗ್ ಅವರ ರಾಜ್ಯಸಭಾ ಸದಸ್ಯತ್ವ ಕೋರ್ಟಿನಲ್ಲಿ ಪ್ರಶ್ನಿಸಲ್ಪಟ್ಟಾಗ ಈ ನಿಯಮವನ್ನು ಬದಲಿಸಲಾಯಿತು. ಅದು ಏನೇ ಇದ್ದರೂ ರಾಜ್ಯವನ್ನು ಪ್ರತಿನಿಧಿಸಲು ರಾಜ್ಯದ ಬಗ್ಗೆ ದೀರ್ಘ ಅನುಭವ ಇರಬೇಕೆಂಬುದು ಸ್ವಯಂವಿದಿತ.

ಕರ್ನಾಟಕದಿಂದ ನಡೆಯುವ ರಾಜ್ಯಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಆರಿಸುವಲ್ಲಿ ಮೂರೂ ಪ್ರಮುಖ ರಾಜಕೀಯ (ಕಾಂಗ್ರೆಸ್, ಬಿಜೆಪಿ, ಜೆಡಿ-ಎಸ್) ಪಕ್ಷಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರು ಪ್ರಮುಖ ಅನಾರೋಗ್ಯಕರ ಪ್ರವೃತ್ತಿಗಳು ತಲೆದೋರಿವೆ. ಮೊದಲನೆಯದಾಗಿ ಲೋಕಸಭೆಯಲ್ಲಿ ಸೋತ ರಾಜ್ಯದ ಅಥವಾ (ಹೆಚ್ಚಾಗಿ) ಇತರ ರಾಜ್ಯಗಳ ರಾಷ್ಟ್ರ ಮಟ್ಟದ ನಾಯಕರಿಗೆ ಪಾರ್ಲಿಮೆಂಟ್ ಪ್ರವೇಶಿಸಲು ಸುರಕ್ಷಿತ ವಿಧಾನವಾಗಿದೆ. ಹೆಚ್ಚಾಗಿ ಇವರಿಗೆ ರಾಜ್ಯದ ಬಗ್ಗೆ ಏನೂ ತಿಳಿದಿರುವುದಿಲ್ಲ. ಮಾತ್ರವಲ್ಲ ನೆರೆ ರಾಜ್ಯದವರಾಗಿದ್ದಾಗ ಮತ್ತು ನೆರೆ ರಾಜ್ಯಗಳ ಜತೆ ವಿವಾದ ಇದ್ದಾಗ ರಾಜ್ಯದ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದು ಬಿಟ್ಟು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು. ರಾಜ್ಯಸಬಾ ಅಭ್ಯರ್ಥಿಗಳಾಗಿ ಹೆಸರು ಕೇಳಿ ಬರುತ್ತಿರುವ ಆಂಧ್ರದ ಬಿಜೆಪಿಯ ವೆಂಕಯ್ಯ ನಾಯುಡು, ಕಾಂಗ್ರೆಸಿನ ಜೈರಾಮ್ ರಮೇಶ್, ತಮಿಳುನಾಡಿನ ಕಾಂಗ್ರೆಸಿನ ಪಿ ಚಿದಂಬರಂ ಅವರು ಈ ಸಾಲಿಗೆ ಸೇರಿರುವವರು. ಬಿಜೆಪಿಯ ವೆಂಕಯ್ಯ ನಾಯುಡು ಅವರನ್ನು ಬಿಜೆಪಿ 4ನೇ ಬಾರಿಗೆ ಕರ್ನಾಟಕದಿಂದ ಕಣಕ್ಕಿಳಿಸಲಿದೆ.

ಎರಡನೆಯದು ಈ ಪಕ್ಷಗಳಲ್ಲಿ (ರಾಜ್ಯ, ಕೇಂದ್ರಗಳಲ್ಲಿ ಯಾವುದೇ ಸ್ಥಾನ ಪಡೆಯಲಾಗದ ಮುಂತಾದ) ವಿವಿಧ ಕಾರಣಗಳಗೆ ಅತೃಪ್ತ ರಾದವರನ್ನೂಗುಂಪುಗಾರಿಕೆ ಶಮನಗೊಳಿಸಲೂ ರಾಜ್ಯಸಭಾ ಅಭ್ಯರ್ಥಿಗಳಾಗಿ ಆಯ್ಕೆ ಮಾಡುವುದು. ಇದರ ಜತೆಗೆ ರಾಜ್ಯದ ಅಥವಾ ದೇಶದ ಯಾವುದೇ ವಿದ್ಯಮಾನಗಳ ಬಗ್ಗೆ ಅರಿವು ಇಲ್ಲದ ಯಾವುದೇ ಪರಿಣತಿ ಇಲ್ಲದ ಆದರೆ ಪಕ್ಷದ ಪ್ರಚಾರಕ್ಕೆ ಮಾತ್ರ ಪ್ರಯೋಜನಕಾರಿಯಾದವರನ್ನು ಸಮಾಧಾನ ಪಡಿಸಲು ಅಭ್ಯರ್ಥಿಯಾಗಿಸುವುದು. ಹೇಮಮಾಲಿನಿಯಂತಹ ನಟ/ನಟಿಯರು ಇದಕ್ಕೆ ಉದಾಹರಣೆ.

ಮೂರನೇಯ ಮತ್ತು ಅತ್ಯಂತ ಅಪಾಯಕಾರಿ ಅನಾರೋಗ್ಯಕರ ಪ್ರವೃತ್ತಿ ಎಂದರೆ ರಾಜ್ಯಸಭಾ ಸೀಟುಗಳನ್ನು ಉದ್ಯಮಿಗಳು ಸ್ಥಾಪಿತ ಹಿತಾಸಕ್ತಿಗಳಿಗೆ ‘ಮಾರಾಟ’ ಮಾಡುವುದು ಅಥವಾ ಅವರು ಸ್ಪರ್ಧಿಸಿದಾಗ ಅವರಿಗೆ ಪರೋಕ್ಷ ಬೆಂಬಲ ನೀಡುವುದು. ಕೆಲವೊಮ್ಮೆ ಪಕ್ಷಗಳು ಇಡಿಯಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನಿಡದಿದ್ದಾಗಲೂ, ಈ ಪಕ್ಷಗಳ ಸದಸ್ಯರಿಂದ ತಮ್ಮ ಮತವನ್ನು ಈ ಪ್ರಭಾವಿ ಉದ್ಯಮಿಗಳು ‘ಕೊಂಡುಕೊಳ್ಳುವುದು’ ಕಂಡು ಬಂದಿದೆ. ಈ ಪ್ರವೃತ್ತಿ ಮೂರೂ ಪಕ್ಷಗಳಲ್ಲೂ ಕಂಡು ಬಂದಿದೆ. ಆದರೆ ಜೆಡಿ-ಎಸ್ ಇದನ್ನು ಒಂದು (ಅ)‘ನೀತಿ’ಯಾಗಿ ಅಂಗೀಕರಿಸಿದೆಯೋ ಎಂಬಂತೆ ಸತತವಾಗಿ ಪಾಲಿಸುತ್ತಿದೆ.  ಇದಕ್ಕೆ ‘ಅತ್ಯುತ್ಮಮ’ ಉದಾಹರಣೆ ವಿಜಯ ಮಲ್ಯ. ರಾಜ್ಯ ಮೂಲದ ವ್ಯಕ್ತಿಯಾಗಿದ್ದರೂ ಈತ ರಾಜ್ಯದ ವಿದ್ಯಮಾನಗಳ ಬಗ್ಗೆ ಅರಿವು ಇದ್ದವರೂ ಅಲ್ಲ. ಅದರ ಬಗ್ಗೆ ತಲೆ ಕೆಡಿಸಿಕೊಂಡವರೂ ಅಲ್ಲ. ತನ್ನ ಮತ್ತು ತನ್ನ ಉದ್ಯಮದ ಹಿತಾಸಕ್ತಿಯನ್ನು ಕಾಪಾಡಲು, ತನ್ನ ಕಾನೂನುಬಾಹಿರ ಭಾನಗಡಿಗಳನ್ನು ರಾಜಾರೋಷವಾಗಿ ಮುಂದುವರೆಸಲು ಸರಕಾರಗಳ ಪ್ರಮುಖ ಪಕ್ಷಗಳ ಪ್ರಭಾವ ಬಳಸಿಕೊಳ್ಳಲಷ್ಟೇ ಈ ಸದಸ್ಯತ್ವವನ್ನು ಬಳಸುವವರು. ಮೊದಲ ಬಾರಿಗೆ ಮಲ್ಯರನ್ನು ಕಾಂಗ್ರೆಸ್ ಮತ್ತು ಜೆಡಿ-ಎಸ್ ಬೆಂಬಲಿಸಿದರೆ, ಎರಡನೇ ಬಾರಿ ಅವರು ಬಿಜೆಪಿ ಮತ್ತು ಜೆಡಿ-ಎಸ್ ಬೆಂಬಲ ಪಡೆದುಕೊಂಡರು. ಮಲ್ಯರ ಭಾನಗಡಿಗಳು ಹೊಸದಲ್ಲದಿದ್ದರೂ ಆತ ದೇಶ ಬಿಟ್ಟು ಪರಾರಿಯಾಗಿ ಸುದ್ದಿಯಾದದ್ದರಿಂದ ಮತ್ತು ರಾಜಿನಾಮೆ ಕೊಡಬೇಕಾಗಿದ್ದರಿಂದಷ್ಟೇ ಈ ಪಕ್ಷಗಳು ಸುಮ್ಮನಿವೆ. ಇವೆಲ್ಲ ಇಲ್ಲದಿದ್ದರೆ ಮಲ್ಯ ರಾಜ್ಯಸಭೆಗೆ ಪುನರಾಯ್ಕೆ ಆಗಿದ್ದರೆ ಏನೂ ಆಶ್ಚರ್ಯ ಪಡಬೇಕಾಗಿಲ್ಲ. ಅದೇ ರೀತಿ ತಮಿಳುನಾಡಿನ ಉದ್ಯಮಿ ಎಂ.ಎ.ಎಂ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದರು.

ಈ ಬಾರಿಯೂ ಹಲವು ರಾಜ್ಯದ ಹಾಗೂ ಹೊರ ರಾಜ್ಯದ ಉದ್ಯಮಿಗಳ ರೀಯಲ್ ಎಸ್ಟೇಟ್ ಕುಳಗಳ ಹೆಸರುಗಳು ಕೇಳಿ ಬರುತ್ತಿವೆ. ಜೆಡಿ-ಎಸ್ ಉದ್ಯಮಿಗಳಿಗೆ ಸೀಟು ಕೊಡುವ ತನ್ನ ‘ನೀತಿ’ ಮುಂದುವರೆಸಲಿದೆಯೆಂದು ಹೇಳಿದೆ. ಹೊರ ರಾಜ್ಯದ ರಾಜಕಾರಣಿಗಳಿಗೆ ಮತ್ತು ಉದ್ಯಮಿಗಳಿಗೆ ಸೀಟು ಕೊಡುವ ಪ್ರವೃತ್ತಿ ಬಗ್ಗೆ ರಾಜ್ಯದಲ್ಲಿ ಚರ್ಚೆ ಎದ್ದಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಇದನ್ನು ಕೇರ್ ಮಾಡದೆ ಜೈರಾಮ್ ರಮೇಶ್ ಮತ್ತು ವೆಂಕಯ್ಯ ನಾಯುಡು ಅವರಿಗೆ ಸೀಟು ಕೊಡುವುದು ಖಚಿತವಾಗಿದೆ. ಜೆಡಿ-ಎಸ್ (ಮತ್ತು ಬಹುಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಕೂಡಾ) ಉದ್ಯಮಿಗಳಿಗೆ ಸೀಟು ಕೊಡುವುದಾದರೆ ರಾಜ್ಯ ಮೂಲದ ಕುಳಗಳಿಗೆ ಮಾತ್ರ ಸೀಟು ಕೊಡುವ ಇಂಗಿತ ವ್ಯಕ್ತಪಡಿಸಿವೆ. ಉದ್ಯಮಿಗಳಿಗೆ ಸೀಟು ಕೊಡುವ ಬಗ್ಗೆ ಚರ್ಚೆ ಆಗಬೇಕಾದ್ದು ಬರಿಯ ಅವರ ಮೂಲ ನೆಲೆಯ ಬಗ್ಗೆ ಮಾತ್ರವಲ್ಲ. ಅವರು ಎಷ್ಟರ ಮಟ್ಟಿಗೆ ರಾಜ್ಯದ ಜನತೆಯ ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಕಾಳಜಿ, ಪರಿಣತಿ ಹೊಂದಿದವರು ಎಂಬುದು ಮುಖ್ಯ ಚರ್ಚೆಯಾಗಬೇಕು. ಇಂತಹ ಹೆಚ್ಚಿನ ಉದ್ಯಮಿಗಳು (ರಾಜ್ಯದವರಿರಲಿ ಅಥವಾ ಹೊರ ರಾಜ್ಯದವರಿರಲಿ) ತಮ್ಮ ಉದ್ಯಮದ ಹಿತಾಸಕ್ತಿಗಳನ್ನು ಕಾಪಾಡಲು, ತಮಗೆ ಅನುಕೂಲಕರವಾದ ನೀತಿ ರೂಪಿಸಲು, ತಮ್ಮ ಕಾನೂನುಬಾಹಿರ ಅಕ್ರಮಗಳ ವಿರುದ್ಧ ಸರಕಾರಿ ಕ್ರಮಗಳಿಂದ ರಕ್ಷಣೆ ಪಡೆಯಲು ಪಾರ್ಲಿಮೆಂಟು ಪ್ರವೇಶ ಪಡೆಯ ಬಯಸುತ್ತಾರೆ. ಇದು ಪ್ರಮುಖ ಚರ್ಚೆಯ ವಿಷಯ ಆಗಬೇಕು.

ರಾಜ್ಯಸಭೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಮೂಡಿಬರುತ್ತಿರುವ ಈ ಮೂರು ಅನಾರೋಗ್ಯಕರ ಅಪಾಯಕಾರಿ ಪ್ರವೃತ್ತಿಗಳ ವಿರುದ್ಧ ರಾಜಕೀಯ ಎಚ್ಚರ ಮೂಡಿಸುವ ಪ್ರಚಾರಾಂದೋಲನ ಅಗತ್ಯ.

Advertisements