ಸೋಲಿನಿಂದ ಪಾಠ ಕಲಿಯಲು ನಿರಾಕರಿಸುವ ಕಾಂಗ್ರೆಸ್‍ಗೆ ಸರ್ಜರಿ ಮಾಡುವವರಾರು?

ಸಂಪುಟ: 10 ಸಂಚಿಕೆ: 23 date: Sunday, May 29, 2016

ಇತ್ತೀಚೆಗಿನ ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ನೂತನ ಸರಕಾರಗಳ ಸಚಿವ ಸಂಪುಟಗಳು ಅಸ್ತಿತ್ವಕ್ಕೆ ಬಂದಾಗಿದೆ. ಫಲಿತಾಂಶಗಳು ಪ್ರಕಟಗೊಂಡ ಲಾಗಾಯ್ತಿನಿಂದಲೂ ಇಲ್ಲಿಯವರೆಗೂ ‘ಭಾರತ ಕಾಂಗ್ರೆಸ್ ಮುಕ್ತ’ವಾಗಲಿದೆಯೇ ಎಂಬ ಚರ್ಚೆ ನಿಂತಿಲ್ಲ.

ಬಿಜೆಪಿ ಭಾಗಿತ್ವದ ಎನ್.ಡಿ.ಎ. ಸರಕಾರಗಳು ಇರುವುದು 13 ರಾಜ್ಯಗಳಲ್ಲಿ. ಆದರೆ ಇಡೀ ದೇಶವನ್ನೇ ಕಾಂಗ್ರೆಸ್ ಮುಕ್ತ ಅರ್ಥಾತ್ ಎಡ ಶಕ್ತಿಗಳನ್ನೂ ಒಳಗೊಂಡು ಇತರೆ ಯಾವುದೇ ವಿರೋಧ ಪಕ್ಷಗಳ ಸರಕಾರಗಳೇ ಇಲ್ಲದಂತೆ ನಿರ್ನಾಮ ಮಾಡುವ ಸರ್ವಾಧಿಕಾರತ್ವದ ಬೆದರಿಕೆಯ ದುರಹಂಕಾರದ ಮಾತುಗಳಿಗೆ ಕೊನೆಯಿಲ್ಲ. ಇಂತಹ ಚರ್ಚೆಗಳು ಬಿಜೆಪಿಯ ರಾಜಕೀಯ ಅಜೆಂಡಾವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನಗಳು ಎಂಬುದರಲ್ಲಿ ಅನುಮಾನವಿಲ್ಲ. ಅಂತಹವರಿಗೆ ದೇಶದ ಪ್ರಜಾಪ್ರಭುತ್ವದ ಇತಿಹಾಸವಾಗಲೀ, ಜನ ಪರಂಪರೆಯಾಗಲೀ ಗೊತ್ತಿಲ್ಲವೆಂದೇ ಎಚ್ಚರಿಸಬೇಕಾಗುತ್ತದೆ.

ಹಾಗೆಯೇ, ಈ ಸುತ್ತಿನ ಚುನಾವಣೆಯಲ್ಲಿ ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್‍ನ್ನು ಜನತೆ ಸೋಲಿಸಿದ್ದಾರೆ. ಇದೂ ಕೂಡ ರಾಜಕೀಯ ವಲಯಗಳಲ್ಲಿ ಛಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಇದರಿಂದಾಗಿ ದೇಶದಲ್ಲಿ ಕಾಂಗ್ರೆಸ್ ಕೇವಲ 6 ರಾಜ್ಯಗಳಲ್ಲಿ ಅಧಿಕಾರದಲ್ಲಿ ಮಾತ್ರ ಉಳಿದಂತೆ ಆಗಿದೆ. ಅದರಲ್ಲಿಯೂ ಕರ್ನಾಟಕವೊಂದೇ ರಾಜಕೀಯವಾಗಿ ಮತ್ತು ‘ಸಂಪನ್ಮೂಲ’ಗಳ ಲೆಕ್ಕದಲ್ಲಿಯೂ ಅವರಿಗೆ ದೊಡ್ಡ ರಾಜ್ಯ. ಕರ್ನಾಟಕದಲ್ಲಿಯೂ ಮೂರು ವರುಷಗಳನ್ನು ಪೂರೈಸಿರುವ, ಮುಂದಿನ ಚುನಾವಣೆ ಎದುರಿಸಬೇಕಿರುವ ಕಾಂಗ್ರೆಸ್‍ಗೆ ಇದು ಸವಾಲಿನ ಸಂದರ್ಭವಾಗಿಯೂ ಇದೆ. ಒಟ್ಟಾರೆ ಕಾಂಗ್ರೆಸ್ ಪುನಶ್ಚೇತನಗೊಳ್ಳುವುದೇ? ಈ ಕುಸಿತ ಮತ್ತಷ್ಟು ಪ್ರಪಾತಕ್ಕೆ ಹೋಗದಂತೆ ತಡೆಯಬಹುದೇ? ಆ ಸಾಮಥ್ರ್ಯ ನಾಯಕತ್ವಕ್ಕೆ ಇದೆಯೇ? ಹೀಗೆ ಪ್ರಶ್ನೆಗಳನ್ನು ವ್ಯಕ್ತಿನಿಷ್ಠಗೊಳಿಸುತ್ತಲೂ ಗೋಜಲಿನ ಸ್ಥಿತಿಯೂ ಎದುರಾಗಿವೆ. ಅಂದರೆ ಒಟ್ಟಾರೆ ಪ್ರಮುಖ ಅಂಶವೆಂದರೆ ಕಾಂಗ್ರೆಸ್ ಈ ಸೋಲುಗಳಿಂದ ಪಾಠ ಕಲಿಯುವುದೇ? ಎಂಬುದು.

‘ಸೋಲಿನ ಕುರಿತು ಪರಾಮರ್ಶೆ ಮಾಡುತ್ತೇವೆ. ಜನ ಸೇವೆಯಲ್ಲಿ ತೊಡಗುತ್ತೇವೆ’ ಎಂದು ಕಾಂಗ್ರೆಸ್ ಅದ್ಯಕ್ಷೆ ಸೋನಿಯಾಗಾಂಧಿ ಮುಂತಾದ ನಾಯಕರು ಹೇಳಿದರು. ಪ್ರಶ್ನೆಯೆಂದರೆ ಕಾಂಗ್ರೆಸ್ ಪಕ್ಷ ನಿಜಕ್ಕೂ ಸೋಲಿನಿಂದ ಪಾಠ ಕಲಿಯುವುದೇ? ಕಲಿತಿದೆಯೇ? ಹಾಗೆ ಕಲಿತ ಇತಿಹಾಸ ಕಾಂಗ್ರೆಸ್ಸಿಗೆ ಇಲ್ಲ. ಅದು ಬೇಕಾಗಿಯೂ ಇಲ್ಲ. ಜನತೆಯ ತೀರ್ಪನ್ನು ಗೌರವಿಸಿ ಬಂಡವಾಳಗಾರರ, ಭೂಮಾಲಕರ ಪರವಾದ, ಜನದ್ರೋಹಿ ದುರಾಡಳಿತ ನೀತಿಗಳನ್ನು ಅದು ಎಂದೂ ಕೈ ಬಿಡಲೇ ಇಲ್ಲ. ಈಗಲೂ ಇಂದು ಹೈಕಮಾಂಡ್‍ನ ಕೇಂಧ್ರದ ಸಭೆ ಸೋಲಿನ ಪರಾಮರ್ಶೆಗೆಂದು ದೆಹಲಿಯಲ್ಲಿ ಸೇರುತ್ತಿದೆ. ಅಲ್ಲೂ ಖಂಡಿತ ಅದೇ ತೇಲು ರಾಗ. ಬೀಸೋ ದೊಣ್ಣೆ ತಪ್ಪಿದರೆ ನೂರು ವರುಷಗಳ ಆಯುಷ್ಯ ಎಂಬ ತತ್ವದಲ್ಲೇ ಅದಕ್ಕೆ ನಂಬಿಕೆ.

ನಿಜಕ್ಕೂ ಹಾಗೆ ನೋಡಿದರೆ ಈ ಚುನಾವಣಾ ಫಲಿತಾಂಶದ ಬಳಿಕ ಕರ್ನಾಟಕದ ಕಾಂಗ್ರೆಸ್ ನಾಯಕರು ಹೆಚ್ಚು ಮಾತನಾಡ ತೊಡಗಿದ್ದಾರೆ. ಮೂರು ವರುಷಗಳ ಆಡಳಿತ ಇಲ್ಲಿಯವರೆಗೂ ಅಹಿಂದ ಮಂತ್ರದ ಮಂಕುಬೂದಿ ಎರಚುತ್ತಾ ಸಾಗಿಸಿದ್ದಾಯ್ತು, ಮುಂದೇನು? ರಾಜ್ಯದಲ್ಲಿ ಹಲವು ಗುಂಪುಗಳಾಗಿ, ಅಧಿಕಾರ ವಂಚಿತರ ಅತೃಪ್ತಿ ಬಹಿರಂಗ ಆಕ್ರೋಶವಾಗಿ ಹರಿದಿರುವ ಕಾಂಗ್ರೆಸ್‍ನಲ್ಲಿಯೂ ವಿಭಿನ್ನ ಪ್ರತಿಕ್ರಿಯೆಗಳನ್ನು ಹೊರಡಿಸಿದೆ. ಈ ರಾಜ್ಯಗಳ ಚುನಾವಣಾ ಫಲಿತಾಂಶದ ಸೋಲು ಹಾಗೂ ಕರ್ನಾಟಕ ಸರಕಾರದ ಭವಿಷ್ಯದ ಮೇಲೆ ಪರಿಣಾಮ ಕುರಿತು ಪ್ರತಿಕ್ರಿಯಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಮಾತುಗಳು ಗಮನಾರ್ಹ. ‘ಸರಿಯಾಗಿ ರಿಪೇರಿ ಮಾಡಬೇಕಿದೆ’ ಎಂದದ್ದು. ಇದು ರಾಜ್ಯದ ವಿದ್ಯಾಮಾನಗಳನ್ನೇ ಆಧರಿಸಿದೆ ಎಂಬ ವ್ಯಾಖ್ಯಾನವೂ ಇದೆ. ರಿಪೇರಿ ಅಂದರೆ ಏನನ್ನು? ಎಲ್ಲಿ? ಎಂಬ ಕುತೂಹಲ ಹುಟ್ಟಿಸಿದೆ. ಹಾಗೆಯೇ ದಿಗ್ವಿಜಯ್ ಸಿಂಗ್ ಸಹ ಕಾಂಗ್ರೆಸ್‍ನಲ್ಲಿ ತಳದಿಂದಲೇ ಮೇಲಿನ ವರೆಗೆ ಬದಲಾವಣೆ ಮಾಡಬೇಕಾದ ಅಗತ್ಯವನ್ನು ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ಸೋಲು ನಿರೀಕ್ಷಿತ.  ಇದು ಸಾಮಾನ್ಯ ವಿಷಯ. ಅಸ್ಸಾಂನಲ್ಲಿ 15 ವರ್ಷಗಳ ಆಡಳಿತದ ಬಳಿಕ ಅಧಿಕಾರ ವಿರೋಧಿ ಮನೋಭಾವದಿಂಧ ಸೋತಿದ್ದರೆ ಕೇರಳದಲ್ಲಿ ಐದು ವರುಷಗಳಿಗೆ ಒಮ್ಮೆ ಬದಲಾಗುವ ಸಹಜ ಪ್ರಕ್ರಿಯೆಯಂತೆ ಆಗಿದೆ. ಪರಾಮರ್ಶೇ ಮಾಡುವೆವು’ ಎಂದು ತಣ್ಣಗೆ ಹೇಳಿ ‘ಸೋಲು ಅದರ ಪರಿಣಾಮ ತಮಗೇನೂ ಅನ್ವಯಿಸುವುದಿಲ್ಲ’ ಎನ್ನುವ ಇಂಗಿತ ನೀಡಿದ್ದಾರೆ. ಜನರ ತೀರ್ಪಿನಿಂದ ಕಲಿಯುವುದು ಅಂತಹುದೇನೂ ಇಲ್ಲವೆನ್ನುವಂತೆ ಮಾತು ಮುಗಿಸಿದ್ದಾರೆ.

ವಿಮರ್ಶೆ ಮಾಡಿಕೊಳ್ಳುವುದು, ಕಲಿಯುವುದು-ಬಿಡುವುದು ಅವರಿಗೆ, ಅವರ ಪಕ್ಷಕ್ಕೆ ಬಿಟ್ಟ ವಿಷಯ. ಮುಖ್ಯ ವಿಷಯ ಈ ಸೋಲಿನ ಬಳಿಕ ರಾಜ್ಯದ ಕಾಂಗ್ರೆಸ್ ಸರಿದಾರಿಗೆ ಬರಬಹುದೇ ಇಲ್ಲ ಒಳ ಜಗಳ, ಗುಂಪುಗಾರಿಕೆ, ಬದಲಾಗದ ನೀತಿಗಳ ಶಿಥಿಲ ಆಡಳಿತ ಮುಂದುವರಿಯುವುದೇ ಎಂಬುದಾಗಿದೆ. ಖರ್ಗೆಯವರ ಮಾತುಗಳನ್ನು ಕೇಳಿದರೆ ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಹೆಪ್ಪುಗಟ್ಟಿರುವ ಅತೃಪ್ತಿ, ಭಿನ್ನಮತಗಳು ಮತ್ತೇ ಭುಗಿಲೇಳಬಹುದು. ಹೈಕಮಾಂಡ್ ಏನನ್ನಾದರೂ ಮಾಡಬಹುದು. ಆಗಲೇ ಸಿದ್ಧರಾಮಯ್ಯನವರ ಅಧಿಕಾರದ ಅವಧಿ ಮುಗಿದಾಗಿದೆ! ಜಾಗ ಖಾಲಿ ಮಾಡಿ ಎಂಬ ಬೇಡಿಕೆಗೆ ಮತ್ತಷ್ಟೂ ಚಾಲನೆ ಪಡೆಯಬಹುದು. ಮೇಲಾಗಿ ಮಂತ್ರಿ ಮಂಡಲದ ವಿಸ್ತರಣೆಗೆ ಮುಹೂರ್ತಗಳನ್ನು ತೋರಿಸುತ್ತಲೇ ಕಾಲ ತಳ್ಳಲಾಗುತ್ತಿದೆ ಹೊರತು ಖಚಿತ ಕ್ರಮ ಸಾಧ್ಯವೇ ಆಗುತ್ತಿಲ್ಲ. ಈ ಬಗ್ಗೆ ಹಾಲಿ ಮತ್ತು ಸಚಿವಾಕಾಂಕ್ಷಿಗಳ ನಡುವೆ ತೀವ್ರ ಅತೃಪ್ತಿಯೂ ಹೆಚ್ಚುತ್ತಿದೆ. ಕೆಲವು ಸಚಿವರ ಹೇಳಿಕೆಗಳೂ ಅನಿಯಂತ್ರಿತವೆಂಬಂತೆ, ಅದಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುವುದು, ಹಿರಿಯ ನಾಯಕರು ಸಹ ತಮ್ಮ ಅತೃಪ್ತಿಗಳು, ಸರಕಾರದ ಬಗೆಗಿನ  ಟೀಕೆಗಳನ್ನು ಸಾರ್ವಜನಿಕವಾಗಿಯೇ ಎಗ್ಗಿಲ್ಲದೇ ಮಾಡುತ್ತಿದ್ದಾರೆ. ಹೈಕಮಾಂಡ್ ವರ್ತನೆಗಳು ಸಹ ಇಂತಹವುಗಳಿಗೆ ಕುಮ್ಮಕ್ಕು ನೀಡುತ್ತಿವೆ. ರಾಜ್ಯ ಸಭೆಗೆ ಅಭ್ಯರ್ಥಿಗಳ ಆಯ್ಕೆಯೂ ಈ ಕದನವನ್ನು ಇಲ್ಲವೇ ಅಂತರವನ್ನು ಹೆಚ್ಚಿಸಲೂ ಬಹುದು.

ಕಾಂಗ್ರೆಸ್ ಸರಕಾರದ ವೈಫಲ್ಯದ ವಿರುದ್ಧ ಬಿಜೆಪಿ-ಸಂಘಪರಿವಾರ ನಿತ್ಯವೂ ಹತ್ತು ರೂಪಗಳಲ್ಲಿ ದಾಳಿ ನಡೆಸುತ್ತಾ ತನ್ನ ರಾಜಕೀಯ, ಸಂಘಟನಾ ಬಲವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಮಗ್ನವಾಗಿದೆ. ಮೂರನೆಯ ಸೆಕ್ಯುಲರ್ ಶಕ್ತಿಗಳ ದುರ್ಬಲತೆಗಳನ್ನೇ ಬಿಜೆಪಿ ಬಳಸಿ ತಾನೇ ಪರ್ಯಾಯವೆಂದೂ ಬಿಂಬಿಸಿಕೊಳ್ಳುತ್ತಿದೆ. ಇದು ರಾಜ್ಯದಲ್ಲಿ ಮೂಲ ನೆಲೆಯಲ್ಲಿ ಗಂಭೀರ ರಾಜಕೀಯ ಬೆಳವಣಿಗೆಗಳನ್ನು ಕಾಣುತ್ತಿರುವ ಸಮಯ. ಇವಾವುಗಳ ಪರಿವೆಯೇ ಇಲ್ಲದೇ ಕಾಂಗ್ರೆಸ್ ನಾಯಕರ ವರ್ತನೆ ಹೊಣೆಗೇಡಿತನದ್ದು ಎಂಬುದರಲ್ಲಿ ಅನುಮಾನವಿಲ್ಲ. ಇದರಲ್ಲಿ ಬಲಿಯಾಗುವುದು ಸಾಮಾನ್ಯ ಜನತೆ. ಅಸ್ಸಾಂನಲ್ಲಾದಂತೆ ಇಲ್ಲಿಯೂ ಆದರೆ ಗತಿಯೇನು?

ಕಾಂಗ್ರೆಸ್‍ನ ಒಟ್ಟು ಸ್ಥಿತಿಯು ರಾಜ್ಯದಲ್ಲಿ ಕೆಲವು ಬಲಿಷ್ಠ ನಾಯಕರ ಬಲದ ರಾಜಕಾರಣವನ್ನು ಬಲಗೊಳಿಸಬಹುದು. ಖರ್ಗೆಯವರು ಹೇಳಿದಂತೆ ಮೇಜರ್ ಸರ್ಜರಿ ಆಗಬೇಕು ನಿಜ. ಆದರೆ ಎಲ್ಲಿ? ಯಾರಿಗೆ? ಅದನ್ನು ಮಾಡುವವರು ಯಾರು? ಶಸ್ತ್ರಚಿಕಿತ್ಸಕನಿಗೇ ಚಿಕಿತ್ಸೆ ಮಾಡಬೇಕಾಗಿರುವಾಗ! ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ.
ಇನ್ನಾದರೂ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಿನ ಅವಧಿಯಲ್ಲಾದರೂ ಜನತೆಯ ಬವಣೆಗಳನ್ನು ನೀಗುವತ್ತ ಕ್ರಮಗಳನ್ನು ವಹಿಸಲಿ. ಈಗಲೂ ಪಾಠ ಕಲಿಯದಿದ್ದರೆ ಜನ ಪಾಠ ಕಲಿಸುವುದು ಖಂಡಿತ. ಆದರೆ ಕರ್ನಾಟಕ ಅಸ್ಸಾಂ ಆಗುವುದು ಬೇಡ.

ಎಸ್.ವೈ.ಗುರುಶಾಂತ್

Advertisements