ಹೆಂಡ ಇಳಿಸುವವನ ಮಗ ಮುಖ್ಯಮಂತ್ರಿ

ಸಂಪುಟ: 10 ಸಂಚಿಕೆ: 23 Sunday, May 29, 2016

ತುರ್ತು ಪರಿಸ್ಥಿತಿಯ ಕರಾಳ ದಿನಗಳವು. ಆಗ ಶಾಸಕರಾಗಿದ್ದ ಪಿಣರಾಯಿ ವಿಜಯನ್ ಅವರನ್ನು ಕಾಂಗ್ರೆಸಿನ ಕುಖ್ಯಾತ ಗೃಹಮಂತ್ರಿ ಕರಣಾಕರನ್ ಮುಗಿಸಿ ಬಿಡಲು ಯೋಜಿಸಿದಂತಿತ್ತು. ಪಿಣರಾಯಿ ಅವರನ್ನು ಜೈಲಿನಲ್ಲಿ ಬೆತ್ತಲೆ ಮಾಡಿ ಅವರಿಗೆ ದನ ಬಡಿದಂತೆ ಬೆನ್ನ ಚರ್ಮ ಸುಲಿದು ಹೋಗುವ ವರೆಗೆ ಪ್ರಜ್ಞೆ ತಪ್ಪಿ ಹೋಗುವವರೆಗೆ ಬಡಿಯಲಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಅಚ್ಯುತ ಮೆನನ್ ಅವರನ್ನು ಇ.ಎಂ.ಎಸ್. ಮತ್ತು ಎಕೆ.ಜಿ.ಯಂತಹ ಹಿರಿಯ ನಾಯಕರು ಘೇರಾವೋ ಮಾಡಿದ ಮೇಲೆ  ಅವರು ಗೃಹಮಂತ್ರಿಗೆ ವೈಯಕ್ತಿಕವಾಗಿ ದಾಳಿ ನಿಲ್ಲಿಸುವಂತೆ ಆಜ್ಞೆ ಮಾಡುವವರೆಗೆ ವಿಜಯನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜೈಲಿನಲ್ಲಿ ರಕ್ತಸಿಕ್ತವಾಗಿದ್ದ ತಮ್ಮ ಬಟ್ಟೆಗಳನ್ನು ವಿಜಯನ್ ಜೋಪಾನವಾಗಿ ಇಟ್ಟು ಕೊಂಡಿದ್ದರು. ತುರ್ತು ಪರಿಸ್ಥಿತಿಯ ನಂತರ ವಿಧಾನಸಭೆಯ ಅಧಿವೇಶನದಲ್ಲಿ ಅವರು ಈ ಬಟ್ಟೆಗಳನ್ನು ಪ್ರದರ್ಶಿಸಿ ತುರ್ತು ಪರಿಸ್ಥಿತಿಯ ದಮನಕಾರ್ಯಗಳ ಬಗ್ಗೆ ಮಾಡಿದ ಭಾಷಣ ಚಾರಿತ್ರಿಕವೆನಿಸಿದೆ.

ವಿಜಯನ್ ಕಣ್ಣೂರಿನ ‘ಪಿಣರಾಯಿ’ ಎಂಬ ಹಳ್ಳಿಯ ಹೆಂಡ ಇಳಿಸುವ ಕುಟುಂಬದಲ್ಲಿ ಮುಂಡಾಯಿಲ್ ಕೋರನ್ ಮತ್ತು ಕಲ್ಯಾಣಿ ಅವರ ಕೊನೆಯ ಮಗನಾಗಿ 1944ರಲ್ಲಿ ಹುಟ್ಟಿದರು. ಅವರ ಹಳ್ಳಿಯ ಹೆಸರು ಜನತೆಯ ನಡುವೆ ಮತ್ತು ರಾಜಕೀಯ ವಲಯಗಳಲ್ಲಿ ಅವರ ಅನ್ವರ್ಥನಾಮ ಆಯಿತು. ರಾಜಕೀಯವಾಗಿ ಸಕ್ರಿಯವಾದ ಕಣ್ಣೂರಿನಲ್ಲಿ ವಿಜಯನ್ ಅವರ ಮೇಲೆ ಹದಿ ಹರೆಯದಲ್ಲೇ ಕಮ್ಯುನಿಸ್ಟ್ ಪ್ರಭಾವ ತಟ್ಟಿತು. ಅವರು ತಮ್ಮ ಹೈಸ್ಕೂಲು ನಂತರ ಒಂದು ವರ್ಷ ಕೈಮಗ್ಗದಲ್ಲಿ ಕೆಲಸ ಮಾಡಿದರು. ಆ ನಂತರ ಪಿಯು ಮತ್ತು ಡಿಗ್ರಿ ಶಿಕ್ಷಣ ಪಡೆಯುತ್ತಿರುವಾಗಲೇ ವಿದ್ಯಾರ್ಥಿ ರಾಜಕೀಯ ಪ್ರವೇಶಿಸಿದರು.

ಅವರ ರಾಜಕೀಯ ಜೀವನದ ಕೆಲವು ಮೇಲಿಗಲ್ಲುಗಳು ಹೀಗಿವೆ:

–    1964ರಲ್ಲಿ ಕೇರಳ ಸ್ಟುಡೆಂಟ್ಸ್ ಫೆಡರೇಶನ್ (ಎಸ್.ಎಫ್.ಐ.ಗೆ ಹಿಂದಿನ ವಿದ್ಯಾರ್ಥಿ ಸಂಘಟನೆ)ನ ಕಣ್ಣೂರು ಜಿಲ್ಲಾ ಕಾರ್ಯದರ್ಶಿ
–    1967ರಲ್ಲಿ ತಲಸೇರಿ ವಿದಾನಸಭಾ ಕ್ಷೇತ್ರದ ಸಿಪಿಐ(ಎಂ) ಕಾರ್ಯದರ್ಶಿ
–    1968ರಲ್ಲಿ ಕಣ್ಣೂರು ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ
–    1970ರಲ್ಲಿ ಕಣ್ಣೂರಿನ ಕೂತುಪರಂಬು ಕ್ಷೇತ್ರದಿಂದ ತಮ್ಮ 26ನೇ ವಯಸ್ಸಿನಲ್ಲೇ ವಿಧಾನಸಬಾ ಸದಸ್ಯ
–    1972ರಲ್ಲಿ ಕಣ್ಣೂರು ಸಿಪಿಐ(ಎಂ) ಜಿಲ್ಲಾ ಸೆಕ್ರೆಟಾರಿಯಟ್ ಸದಸ್ಯ
–    ತುರ್ತು ಪರಿಸ್ಥಿತಿಯಲ್ಲಿ (1975-77) 18 ತಿಂಗಳುಗಳಲ್ಲಿ ಜೈಲುವಾಸ
–    1977ರಲ್ಲಿ ಕೂತುಪರಂಬು ಕ್ಷೇತ್ರದಿಂದ 2ನೇ ಬಾರಿ ಶಾಸಕರಾಗಿ ಆಯ್ಕೆ
–    1996ರಲ್ಲಿ ಇ ಕೆ ನಯನಾರ್ ಮಂತ್ರಿಮಂಡಲದಲ್ಲಿ ವಿದ್ಯುತ್ ಮಂತ್ರಿ
–    1998ರಲ್ಲಿ ಕಾ. ಚಡಯನ್ ಗೋವಿಂದನ್ ಮರಣದ ನಂತರ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ
–    2002ರಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯ
–    2005, 2008, 2011ರಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಪುನಃ ಆಯ್ಕೆ
–    2016ರಲ್ಲಿ ಧರ್ಮಾಡಮ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ: ಮುಖ್ಯಮಂತ್ರಿ ಪದಗ್ರಹಣ

Advertisements