ಜೂಜುಕೋರ ಬಂಡವಾಳಿಗರ ಹಿತ ಕಾಯುವ ನೀತಿ ಹಿಮ್ಮೆಟ್ಟಿಸಿ ಸಮಗ್ರ ಪರ್ಯಾಯ ರೂಪಿಸಬೇಕು

ಸಂಪುಟ: 10 ಸಂಚಿಕೆ: 28 Sunday, July 3, 2016

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ :

ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ನ್ಯಾಯಬದ್ದ ಬೆಲೆ ಒದಗಿಸುವ ಪ್ರಶ್ನೆಯ ಹಿನ್ನೆಲೆಯಲ್ಲಿ ಕನಿಷ್ಟ ಬೆಂಬಲ ಬೆಲೆಯ ಸೂತ್ರ ಬಂದಿದ್ದು ಈಗ ನವ-ಉದಾರವಾದದ ಅಡಿಯಲ್ಲಿ ಅದು ಮಾರುಕಟ್ಟೆಯನ್ನು ‘ವಿರೂಪ’ಗೊಳಿಸುವ ಅಂಶ ಎಂಬ ಪರಿಕಲ್ಪನೆ ಯನ್ನು ತರಲಾಗಿದೆ. ಕೃಷಿಯ ಕಂಪನೀಕರಣಕ್ಕೆ ಪೂರಕವಾಗಿ ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳದ ಹುಚ್ಚು ಹರಿದಾಟಕ್ಕೆ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ರೈತ ವಿರೋಧಿಯಾದ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ  ರೈತ ಚಳುವಳಿಗಳಲ್ಲದೇ ರಾಜ್ಯ ಸರಕಾರಗಳೂ ರಾಜಕೀಯ ಹೋರಾಟಕ್ಕೆ ಮುಂದಾಗಬೇಕು ಎನ್ನುತ್ತಾರೆ  ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾದ ಜಿ.ಸಿ. ಬಯ್ಯಾರೆಡ್ಡಿಯವರು. ‘ಜನಶಕ್ತಿ’ಯ ಪರವಾಗಿ ಈ ಸಂದರ್ಶನ ನಡೆಸಿದವರು ಟಿ.ಯಶವಂತ.

ಜನಶಕ್ತಿ: ರೈತರ ಆತ್ಮಹತ್ಯೆಗಳ ಕಾರಣಗಳಲ್ಲಿ  ಬೆಳೆಯ ಬೆಲೆ ಕುಸಿತ ಒಂದು ಸಾಮಾನ್ಯ ಅಂಶವಾಗಿರುವಾಗ ಸರಕಾರಗಳ ಮುಂದೆ ರೈತ ಚಳುವಳಿಯಾಗಿ ನೀವು  ಇಡುತ್ತಿರುವ ಅಜೆಂಡಾ ಏನು ?

ಜಿ.ಸಿ. ಬಯ್ಯಾರೆಡ್ಡಿ: ರಾಷ್ಟ್ರದ ರೈತ ಚಳುವಳಿಯ ಶಿಫಾರಸ್ಸುಗಳು, ಹಲವು ಇತರ ಅಧ್ಯಯನಗಳು ಹಾಗೂ ಇದೆಲ್ಲವುಗಳ ಜೊತೆಗೆ ಡಾ. ಸ್ವಾಮಿನಾಥನ್ ಆಯೋಗದ ಸೂತ್ರ ಇವೆಲ್ಲವೂ ಸ್ಪಷ್ಟವಾಗಿ ದೃಢಪಡಿಸಿದ ಅಂಶ ಈ ಬೆಳೆಗೆ ನ್ಯಾಯಬದ್ದ ಬೆಲೆಯ ಪ್ರಶ್ನೆ.

`ಸಿ2+50%’ ಸೂತ್ರ

`ಸಿ2+50%’ ಎಂದರೆ ಬೆಳೆಯ ಉತ್ಪಾದನಾ ವೆಚ್ಚ ಮತ್ತು ಅದರ ಮೇಲೆ ಶೇ. 50 ಲಾಭ ಬರುವಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಇದು ಒಂದು ವೈಜ್ಞಾನಿಕ ಅಧ್ಯಯನದ ಆಧಾರದಲ್ಲಿ ಮೂಡಿಬಂದಿರುವ ಸೂತ್ರ. ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಈ ಶಿಫಾರಸ್ಸುಗಳು ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತವೆ.
ಇದು ರೈತರನ್ನು ರಕ್ಷಿಸುವ ಪ್ರಧಾನ ಸೂತ್ರ. ರೈತ ಚಳುವಳಿಗಳು ದೇಶದೆಲ್ಲೆಡೆ ವೈಜ್ಞಾನಿಕವಾಗಿ ತಾವೇ ಉತ್ಪಾದನಾ ವೆಚ್ಚವನ್ನು ಲೆಕ್ಕಾಚಾರ ಮಾಡುವಂತಾಗಬೇಕು. ರೈತರಿಗೆ ಈ ಬಗೆಗೆ ಮನನ ಮಾಡಿಸುವುದು ಮತ್ತೊಂದು ಪ್ರಮುಖ ಅಂಶ. 2014 ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಕೃಷಿ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಾದ  `ಸಿ2+50 ಶೇ.’ ಸೂತ್ರದಂತೆ ಬೆಂಬಲ ಬೆಲೆ ಕೊಡುವುದಾಗಿ ಪ್ರಚಾರ ಭಾಷಣಗಳಲ್ಲಿ ಸಾರಿ ಸಾರಿ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಈ ಸಂಬಂಧ ಕೊಟ್ಟ ಭರವಸೆಗೆ ವಿರುದ್ದವಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿ ಕೃಷಿ ಕ್ಷೇತ್ರವು ಮಾರುಕಟ್ಟೆ ನಿಯಮದಂತೆ ನಡೆಯಲು ಬಿಡಬೇಕು. ಕೃಷಿಗೆ ಬೆಂಬಲ ಬೆಲೆ ನೀಡಿಕೆಗೂ ಒಂದು ಮಿತಿ ಇರಬೇಕು ಎಂದಿದ್ದಾರೆ.

ಜನಶಕ್ತಿ: ಈಗ ಚಾಲ್ತಿಯಲ್ಲಿರುವ ಬೆಂಬಲ ಬೆಲೆಯ ಸ್ವರೂಪ ಏನು? ಇದು ರೈತರಿಗೆ ಅನುಕೂಲಕರವಾಗಿದೆಯೇ? ರೈತರ ಮೇಲಿನ ಪರಿಣಾಮಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಜಿ.ಸಿ. ಬಯ್ಯಾರೆಡ್ಡಿ: ಬಹಳಷ್ಟು ರೈತರಿಗೆ ಉತ್ಪಾದನಾ ವೆಚ್ಚವನ್ನು ಲೆಕ್ಕಾಚಾರ ಮಾಡುವ ವಿಧಾನ ಗೊತ್ತಿಲ್ಲ. ಅವರು ಉತ್ಪಾದನಾ ವೆಚ್ಚದಲ್ಲಿ ಕೇವಲ ಬೀಜ, ಗೊಬ್ಬರ, ಕೀಟನಾಶಕ ಮುಂತಾದವುಗಳನ್ನಷ್ಟೆ ಲೆಕ್ಕ ಹಾಕುತ್ತಾರೆ. ಹೊಲ-ಗದ್ದೆಗಳಲ್ಲಿ  ಕುಟುಂಬ ಸದಸ್ಯರ ದುಡಿಮೆ, ಕೊಟ್ಟಿಗೆ ಗೊಬ್ಬರದ ಬೆಲೆ, ಕೃಷಿ ಸಾಧನ, ಸಲಕರಣೆಗಳ ಮೇಲಿನ ಹೂಡಿಕೆ ಮತ್ತು ಅವುಗಳ ಸವಕಳಿ ವೆಚ್ಚ, ಕೃಷಿಯಲ್ಲಿ ಪ್ರಾಣಿಗಳ ಬಳಕೆ  ಇಂಥವುಗಳನ್ನೆಲ್ಲಾ ಅವರು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕ ಹಾಕಿ ಅದರ ಮೇಲೆ ಶೇ. 50 ರಷ್ಟು ಲಾಭವಾಗಿ ಸಿಗಬೇಕೆಂಬ ಅಂಶ ಮೊದಲು ರೈತರಿಗೆ ಮನನ ಆಗಬೇಕು. ರೈತರು ಕೃಷಿ ಉತ್ಪನ್ನಗಳಿಗೆ ಬೆಲೆಯನ್ನು ವೈಜ್ಞಾನಿಕವಾಗಿ ತಾವು ಅನುಭವಿಸಿ ಆ ಮೂಲಕ ದೃಢವಾಗಿ ಕೇಳುವಂತಾಗಬೇಕು.

ರಾಜ್ಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲೆ ಸಮಿತಿಯ ಮೂಲಕ ಇತ್ತೀಚೆಗೆ  ಕೃಷಿ ಉತ್ಪನ್ನಗಳ ವೆಚ್ಚವನ್ನು ರೈತರೇ ಲೆಕ್ಕ ಮಾಡುವ ಪ್ರಯೋಗಗಳು ನಡೆದಿದ್ದು ರಾಗಿ, ಭತ್ತ, ಟೆಮೊಟೋ, ರೇಷ್ಮೆ ಇತ್ಯಾದಿ ಬೆಳೆಗಳಿಗೆ ರೈತರು ಬೆಂಬಲ ಬೆಲೆ ನಿಗದಿ ಮಾಡಿದ ವಿಧಾನವನ್ನು ಕರ್ನಾಟಕ ಕೃಷಿ ಬೆಲೆ ಅಯೋಗವು ಮೆಚ್ಚಿಕೊಂಡಿದೆ. ಆಯೋಗದ ಅಧ್ಯಕ್ಷರು ಆಯೋಗದ ಕೆಲಸ ಶೇ. 90 ರಷ್ಟು ಸರಾಗವಾಗಿದೆ ಎಂದು ಹೇಳಿ ಅದರಂತೆ ಕೃಷಿಬೆಲೆ ಶಿಫಾರಸ್ಸು ಮಾಡಿದ್ದಾರೆ. ಲೆಕ್ಕಾಚಾರ ಮಾಡಿದ ರೈತರಿಗೂ ಇದು ಒಂದು ಹೊಸ ಜ್ಞಾನೋದಯದಂತೆ ಕಂಡು ಬಂದಿದೆ. ಆದರೆ ಇದು ಜಾರಿಯಾಗಬೇಕು.

ಬೆಂಬಲ ಬೆಲೆಯ ಪ್ರಶ್ನೆಯಲ್ಲಿ ಕೇಂದ್ರ ಸರಕಾರದ್ದೇ ಶೇ. 80 ರಷ್ಟು ಪಾತ್ರ. ವೈಜ್ಞಾನಿಕ ಬೆಲೆಯನ್ನು ಒಂದು ಹಕ್ಕಾಗಿ ರೈತರು ಕೇಳುವಂತಾಗಬೇಕು. ಕೃಷಿ ಮಾರುಕಟ್ಟೆಯಲ್ಲಿ ಬಂಡವಾಳಶಾಹಿ ಹಿತಾಸಕ್ತಿಗಳು ಮಧ್ಯಪ್ರವೇಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಹಕಾರಿ ಚಳುವಳಿಯನ್ನು ಬಲಪಡಿಸುವ ಕೆಲಸಕ್ಕೂ ಒತ್ತು ಸಿಗಬೇಕಿದೆ. ಇಂತಹ ಬಂಡವಾಳಶಾಹಿ ಮಾರುಕಟ್ಟೆ ನಡುವೆ ರೈತರ ಹಿತ ಕಾಯುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದು.

ಗ್ರಾಹಕರು ಕೃಷಿ ಉತ್ಪನ್ನಗಳಿಗೆ ತಾವು ಕೊಡುವ ಮೌಲ್ಯದ ಶೇ.35 ಮಾತ್ರ ರೈತರಿಗೆ ತಲುಪುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಸಹಕಾರಿ ಕ್ಷೇತ್ರವು ಬಲವಾಗಿರುವ ಕಡೆ ಕೃಷಿ ಉತ್ಪನ್ನ ಮಾರಾಟವಾಗುವ ದರದ ಶೇ. 60-70 ರಷ್ಟು ಮೌಲ್ಯವು ರೈತರಿಗೆ ಸಿಗುತ್ತಿದೆ. ಹೈನುಗಾರಿಕೆಯಲ್ಲಿ ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೆ ಕೆಲಸ ನಿರ್ವಹಿಸುತ್ತಿರುವ ಸಹಕಾರಿ ರಂಗ ಇದಕ್ಕೊಂದು ಉತ್ತಮ ಉದಾಹರಣೆ.  ದೋಷ-ಕೊರತೆಗಳ ನಡುವೆಯೂ ಶೇ. 65-70 ರಷ್ಟು ಪಾಲು ರೈತರಿಗೆ ದೊರೆಯುತ್ತಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ನಿಯಂತ್ರಣ ಆಗಬೇಕಿದೆ.

ಚಾಲ್ತಿ ಇರುವ ಬೆಂಬಲ ಬೆಲೆ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಗಳಿವೆ. ಕೇಂದ್ರ ಸರಕಾರದ `ಕೃಷಿ ಉತ್ಪನ್ನಗಳ ಬೆಲೆ ಆಯೋಗ’(ಸಿಎಸಿಪಿ)ವು ಕೃಷಿ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆ ನಿಗದಿ ಮಾಡುತ್ತದೆ.  ಇದರ ಉದ್ದೇಶ `ಮಾರುಕಟ್ಟೆ ವ್ಯವಸ್ಥೆ’ ಕೆಲಸ ಮಾಡಲು ಬಿಡಬೇಕು ಎಂಬುದು.  ಇದು ಅತ್ಯಂತ ದೋಷಪೂರಿತ, ಅವೈಜ್ಞಾನಿಕ, ಅನ್ಯಾಯುತ ಬೆಲೆ ನಿಗದಿ ಪದ್ದತಿ. ಇದರಿಂದ ರೈತರಿಗೆ ಯಾವ ಅನುಕೂಲವೂ ಇಲ್ಲ. ಈ ಪದ್ದತಿ ಹೋಗಬೇಕು. ಇಂತಹ ಕೆಟ್ಟ ಮಾರುಕಟ್ಟೆಯ ವ್ಯವಸ್ಥೆಯಿಂದಾಗಿಯೇ 3.5 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗಳಿಗೆ ಗುರಿಯಾಗಿರುವುದು.

ದರ ನಿಗದಿ ಮಾತ್ರವಲ್ಲ, ಸಕಾಲದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದು ಮುಖ್ಯ. ಕೃಷಿ ಮಾರುಕಟ್ಟೆಯಲ್ಲಿ ಸರಕಾರಗಳು ಸರಿಯಾದ ಸಮಯದಲ್ಲಿ ಮಧ್ಯಪ್ರವೇಶ ಮಾಡಬೇಕು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳಿಗೆ ಈಗ ರೈತರು ಬೆಳೆದ ಕೃಷಿ ಉತ್ಪನ್ನಗಳು ಬರುತ್ತಿರುವುದು ಕೇವಲ ಶೇ. 50 ರಷ್ಟು ಮಾತ್ರ. ಉಳಿದವರು ಬೆಳೆ ಇಡುವಾಗಲೇ ಬೆಳೆಯನ್ನು ನಿಮಗೇ ಕೊಡುತ್ತೇವೆಂದು ಹಣವಂತರಿಗೆ ಮಾತು ಕೊಟ್ಟಿರುತ್ತಾರೆ.

ಸರಕಾರಗಳು ಸುಗ್ಗಿಯ ಕಾಲದಲ್ಲಿ ಮಧ್ಯಪ್ರವೇಶ ಮಾಡುವುದರಲ್ಲಿ ತಡ ಮಾಡುತ್ತವೆ. ಬೆಳೆದ ಬೆಳೆಯನ್ನು ತಮ್ಮ ಬಳಿ ಹೆಚ್ಚು ದಿನ ಇಟ್ಟುಕೊಳ್ಳಲು ಶಕ್ತಿಯಿಲ್ಲದ ಬಡ ರೈತರು, ಗೇಣೀದಾರರು ಸುಗ್ಗಿಯ ಕಾಲದಲ್ಲಿ ಕೃಷಿ ಮಾರುಕಟ್ಟೆಗೆ ಬರುತ್ತಾರೆ.  ಇವರುಗಳು ಮಾರುಕಟ್ಟೆಗೆ ಬಂದಾಗ ಕೃಷಿ ಉತ್ಪನ್ನಗಳ ಬೆಲೆ ಕುಸಿದು ಹೋಗಿರುತ್ತದೆ. ಒಟ್ಟು ರೈತರಲ್ಲಿ ಸರಿಸುಮಾರು 80 ಶೇ. ರಷ್ಟು ಸಣ್ಣ ರೈತರೇ ಇದ್ದಾರೆ. ಇವರು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಬೆಳೆಯನ್ನು ಮಾರುವಂತಾಗುತ್ತದೆ.

ಸರಕಾರ ತಡವಾಗಿ ಮಧ್ಯಪ್ರವೇಶ ಮಾಡಿದಾಗ ವ್ಯಾಪಾರಸ್ಥರು ರೈತರ ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವುದು ಸಹ ಇದೆ. ಸುಗ್ಗಿಗೆ ಮೊದಲೇ ಸರಕಾರದ ಖರೀದಿ ಕೇಂದ್ರಗಳು ಶುರುವಾಗಿರಬೇಕು. ಮತ್ತು ಸರಕಾರಗಳು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿರಬೇಕು. ಕೃಷಿಬೆಲೆ ಆಯೋಗ ಬೆಲೆ ನಿಗದಿ ಮಾಡುವುದು, ನಂತರ `ಎಫ್ಸಿಐ’, `ಎಪಿಎಂಸಿ’ಗಳಿಗೆ ತಿಳಿಸುವುದು. ಆಮೇಲೆ ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶ….. ಈಗ ಇರುವ ಈ ಸ್ವರೂಪವು ಅವೈಜ್ಞಾನಿಕವಾಗಿದೆ. ಇದು ರೈತರಿಗೆ ಅನುಕೂಲಕರವಲ್ಲ. ಈ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆ ಬೇಕು.

ರಾಜ್ಯದಲ್ಲಿ ರೇಷ್ಮೆ ಗೂಡಿಗೆ ಸಂಬಂಧಿಸಿ ಡಾ. ಬಸವರಾಜ್ ಸಮಿತಿಯು ತನ್ನ ವರದಿಯನ್ನು ನೀಡಿದೆ.  ಆದರೆ ಬೆಲೆ ನಿಗದಿಯಲ್ಲಿ ಕೃಷಿ ಉತ್ಪನ್ನಗಳ ಒಟ್ಟು ಮೌಲ್ಯದ ಶೇ. 50 ಲಾಭವಾಗಿ ಸಿಗಬೇಕು ಎಂಬ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ತಪ್ಪಾಗಿ ಅರ್ಥೈಸಿಕೊಂಡು ವರ್ಷಕ್ಕೆ 5 ಬೆಳೆ ತೆಗೆಯುವುದರಿಂದ ಒಂದು ಬೆಳೆಯಲ್ಲಿ ರೈತರಿಗೆ ಶೇ. 10 ರಷ್ಟು ಲಾಭ ಎಂದು ಬೆಲೆ ನಿಗದಿ ಮಾಡಿದೆ. ಈ ತಪ್ಪು ನೀತಿಯನ್ನು ಸರಿಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ರೈತರ ಲಾಭಾಂಶದ ಕುರಿತ ಈ ಪರಿಕಲ್ಪನೆಯನ್ನು ಒಪ್ಪಲಾಗದು.

ಜನಶಕ್ತಿ: ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದ ಬೆಂಬಲ ಬೆಲೆ ಕ್ರಮದ ಮೇಲೆ ಎಂತಹ ಪರಿಣಾಮ ಉಂಟಾಗುತ್ತಿದೆ.?

ಜಿ.ಸಿ. ಬಯ್ಯಾರೆಡ್ಡಿ: ನಮ್ಮ ರಾಜ್ಯದ ರೈತರಲ್ಲಿ ಶೇ. 85 ರಷ್ಟು ಸಣ್ಣ ರೈತರು.  ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ಈ ರೈತರ ಹಿತಾಸಕ್ತಿಗೆ ಮಾರಕವಾಗಿದೆ. ಈ ತನಕ ಕೃಷಿ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಸರಕಾರದ ಮಧ್ಯಪ್ರವೇಶ ಇರುತ್ತಿತ್ತು. ಹೊಸ ತಿದ್ದುಪಡಿಯಿಂದಾಗಿ ಖಾಸಗಿ  ಕೃಷಿ ಮಾರುಕಟ್ಟೆಗೆ ಅವಕಾಶವಾಗಿದೆ. ಇಲ್ಲಿಯವರೆಗೆ ಎಪಿಎಂಸಿಗಳಲ್ಲಿ ತೂಕ, ಪಾವತಿ ಇತ್ಯಾದಿಗಳು ಇದ್ದುದರಲ್ಲಿ ಪಾರದರ್ಶಕವಾಗಿದ್ದವು. ಗುತ್ತಿಗೆ ಕೃಷಿಗಾಗಿ ಕೃಷಿ ನೀತಿಯಲ್ಲಿ ಬದಲಾವಣೆ ತರಲಾಗಿದೆ. ಕೃಷಿಯಲ್ಲಿ ವಿದೇಶಿ ಬಂಡವಾಳ ತರಬೇಕು, ಕೃಷಿಯ ಕಂಪನೀಕರಣವಾಗಬೇಕು.. ಇತ್ಯಾದಿ ಜಾಗತೀಕರಣದ ನೀತಿಗಳ ಭಾಗವಾಗಿ ಈ ತಿದ್ದುಪಡಿ ತರಲಾಗಿದೆ.

ಕೃಷಿ ಮಾರುಕಟ್ಟೆಯಲ್ಲಿ ಇ-ಟ್ರೇಡ್ ಶುರುವಾಗಿದೆ. ಕೃಷಿಯಲ್ಲಿ ಬಂಡವಾಳಗಾರರ ಮಧ್ಯಪ್ರವೇಶಕ್ಕೆ ಮತ್ತು ಈ ಶಕ್ತಿಗಳ ಜೂಜುಕೋರತನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಎಪಿಎಂಸಿ ಎಂಬುದು ರೈತರ ಪಾಲಿಗೆ ಒಂದು ಹಂತದವರೆಗೆ ರಕ್ಷಣಾತ್ಮಕವಾದ ವ್ಯವಸ್ಥೆಯಾಗಿತ್ತು. ಈಗ ಖಾಸಗಿ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡುತ್ತಿರುವುದರಿಂದ ಎಪಿಎಂಸಿ ವ್ಯವಸ್ಥೆ ವ್ಯರ್ಥವಾಗಿ ಅಪ್ರಸ್ತುತ ಎನಿಸಿಕೊಳ್ಳುತ್ತದೆ.

ಹಿಂದೆ ಕೃಷಿ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈಗ ಅವಕಾಶ ಮಾಡಿಕೊಡಲಾಗಿದೆ. ತೋಟದಿಂದ ನೇರ ಮಾಲ್ಗಳಿಗೆ ಕೃಷಿ ಉತ್ಪನ್ನಗಳು ಬರುವ ವ್ಯವಸ್ಥೆಯಾಗಿದೆ.

ಕೃಷಿ ಕ್ಷೇತ್ರದಲ್ಲಿ ಬಡರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಕೃಷಿ ಹೂಡಿಕೆ ದುಬಾರಿಯಾಗಿದೆ. ನಿಗದಿತ ಮಾರುಕಟ್ಟೆ ಇಲ್ಲವಾಗಿದೆ. ಇದರಿಂದಾಗಿ ಸಣ್ಣ ರೈತರು, ಬಡ ರೈತರು ತಮ್ಮ ತುಂಡು ಭೂಮಿಯನ್ನು ಶ್ರೀಮಂತರ ಕೈಗೆ ಒಪ್ಪಿಸಬೇಕಾದ ದುರಂತ ಸ್ಥಿತಿ ಬಂದಿದೆ. ಅಂದರೆ ಸಣ್ಣ ಮತ್ತು ಮಧ್ಯಮ ರೈತರಿಗೆ ಎಲ್ಲ ರೀತಿಯ ನೆರವು ನೀಡಿ ಕೃಷಿ ಅಭಿವೃದ್ದಿ ಪಡಿಸುವ ಬದಲಿಗೆ ಕೃಷಿಯನ್ನೇ ಕಂಪನೀಕರಣ ಮಾಡಲು ಸರಕಾರ ಹೊರಟಿದೆ. ಬಹುತೇಕ ರಾಜ್ಯ ಸರಕಾರಗಳು ಸಹ ಇದೇ ಹಾದಿ ಹಿಡಿದಿವೆ. ದೇವರಾಜ ಅರಸು ಅವರು ತಂದ ಭೂಸುಧಾರಣಾ ಕಾಯ್ದೆಯಲ್ಲಿ ಗೇಣಿ ಪದ್ದತಿಯನ್ನು ರದ್ದುಪಡಿಸಲಾಗಿದೆ.

ಕಾನೂನು ದೃಷ್ಟಿಯಿಂದ ನೋಡಿದಲ್ಲಿ ರಾಜ್ಯದಲ್ಲಿ ಗೇಣಿ ಪದ್ದತಿ ಇಲ್ಲ.

ಆದರೆ ಎಡರಂಗ ಸರಕಾರ ಬಂದಾಗ ಪಶ್ಚಿಮ ಬಂಗಾಳದಲ್ಲಿ ಗೇಣಿದಾರರನ್ನು ಗುರುತಿಸಿ ಗೇಣಿ ಹಕ್ಕನ್ನು ವಂಶಪಾರಂಪರ್ಯವಾಗಿ ಪಡೆಯುವಂತೆ ಕಾನೂನು ತರಲಾಯಿತು. ಇತ್ತೀಚೆಗೆ ರೈತ ಚಳುವಳಿಯ ಒತ್ತಾಯದಿಂದ ಆಂಧ್ರಪ್ರದೇಶದಲ್ಲಿಯೂ ಗೇಣಿ ಹಕ್ಕನ್ನು ನೀಡುವ ಕಾನೂನು ತಿದ್ದುಪಡಿ ತರಲಾಗಿದೆ. ಕರ್ನಾಟಕದಲ್ಲಿ ಹಾಗೂ ದೇಶದಲ್ಲಿಯೂ ಬೇರೆ ಬೇರೆ ತರಹದ ಗೇಣಿ ಪದ್ದತಿಗಳಿವೆ. ಅದನ್ನು ಗುರುತಿಸಬೇಕು.

ಭೂಮಿಯ ಒಡೆತನದ ಪಹಣಿ ಹಕ್ಕನ್ನು ರೈತರಿಗೆ ಉಳಿಸಿ `ಭೂಮಿಯ ಸ್ವಾಧೀನ’ದ ಪ್ರಶ್ನೆಯಲ್ಲಿ ಗೇಣಿದಾರರ ಹೆಸರನ್ನು ದಾಖಲಿಸಬೇಕು. ಅಂದರೆ ಗೇಣಿ ಇರುವುದು ವಾಸ್ತವ ಎಂದು ಒಪ್ಪಿಕೊಳ್ಳಬೇಕು.

ಹೀಗಾದಲ್ಲಿ ರೈತರಿಗೆ ಗೇಣಿ ಹಕ್ಕು ದೊರೆಯುತ್ತದೆ. ಬ್ಯಾಂಕ್ ಸಾಲ, ಬೆಳೆ ನಷ್ಟವಾದಾಗ ಪರಿಹಾರ ಇತ್ಯಾದಿಗಳನ್ನು ಪಡೆದುಕೊಳ್ಳಲು ಗೇಣಿದಾರರಿಗೂ ಹಕ್ಕು ದೊರೆಯುತ್ತದೆ. ಪಶ್ಚಿಮ ಬಂಗಾಳದಲ್ಲಿ ಭೂಸುಧಾರಣೆ ತರುವ ಮೊದಲು ಗೇಣಿದಾರರ ನೋಂದಣಿಯನ್ನು ನಡೆಸಲಾಯಿತು. ನಂತರ ಭೂಸುಧಾರಣೆ ಜಾರಿಗೆ ತರಲಾಯಿತು. ಆದರೆ ಕರ್ನಾಟಕದಲ್ಲಿ ಗೇಣಿದಾರರನ್ನು ದಾಖಲಿಸದೇ ಹೋದದ್ದರಿಂದ ಭೂಮಾಲಕರು ಸರಿ ಸುಮಾರು ಶೇ. 80 ರಷ್ಟು ಬಡ ಗೇಣಿದಾರರನ್ನು ಒಕ್ಕಲೆಬ್ಬಿಸಿ ಭೂಮಿಯ ಮೇಲಿನ ಹಿಡಿತವನ್ನು ಭಧ್ರ ಪಡಿಸಿಕೊಂಡರು. ಈಗಲಾದರೂ ನಿಜಕ್ಕೂ ವ್ಯವಸಾಯ ಮಾಡುವ ಗೇಣಿದಾರರನ್ನು ದಾಖಲಿಸುವ ಕೆಲಸ ಆಗಬೇಕು. ಈ ಸಂಬಂಧ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ಗೇಣಿ ಹೋರಾಟದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಮತ್ತು ಇತರ ಕಡೆಗಳಲ್ಲೂ ಚಳುವಳಿ ನಡೆಸಬೇಕಾದ ಅಗತ್ಯವಿದೆ.

ಜನಶಕ್ತಿ: ಕೇಂದ್ರ ಸರಕಾರ ನಿಗದಿ ಮಾಡಿರುವ ಬೆಂಬಲ ಬೆಲೆಗಿಂತ ಹೆಚ್ಚಿನ ದರವನ್ನು ಬೆಂಬಲ ಬೆಲೆಯಾಗಿ ನಿಗದಿ ಮಾಡಬಾರದು ಎಂದು ರಾಜ್ಯಗಳ ಮೇಲೆ ಕೇಂದ್ರ ಯಾಕೆ ಒತ್ತಡ ಹಾಕುತ್ತಿದೆ.? ಈ ಸಂಬಂಧ ರಾಜ್ಯ ಸರಕಾರದ ನಿಲುವು ಹಾಗೂ ರೈತರ ಮೇಲಿನ ಪರಿಣಾಮವೇನು?   

ಜಿ.ಸಿ. ಬಯ್ಯಾರೆಡ್ಡಿ: ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಪತ್ರ ಬರೆದು ಕೃಷಿ ಉತ್ಪನ್ನಗಳಿಗೆ ಸಿಎಸಿಪಿ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ದರವನ್ನು ನೀಡಬಾರದು ಎಂದು ಒತ್ತಾಯ ಮಾಡಿದೆ. “ಮಾರುಕಟ್ಟೆಯನ್ನು ನಾಶ ಮಾಡುತ್ತದೆ.. ಖಾಸಗೀ ಖರೀದಿದಾರರು ಹೊರ ಹೋಗುತ್ತಾರೆ..’’ ಎಂಬ ಕಾರಣಗಳನ್ನು ಕೇಂದ್ರ ಸರಕಾರ ಹೇಳುತ್ತಿದೆ.

ಇದಲ್ಲದೇ “ಕನಿಷ್ಟ ಬೆಂಬಲ ಬೆಲೆ ಆಧಾರದಲ್ಲಿ ಪಡಿತರ ವ್ಯವಸ್ಥೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿ ಮಾಡಿ. ಅದಕ್ಕಿಂತ ಹೆಚ್ಚು ಖರೀದಿ ಮಾಡಿದರೆ ಅದು ರಾಜ್ಯ ಸರಕಾರಗಳ ಹೊಣೆ.’’ ಎಂದೂ “ರಾಜ್ಯ ಸರಕಾರವು ಬೆಂಬಲ ಬೆಲೆಯಲ್ಲಿ ರೈತರಿಗೆ ಬೋನಸ್ ಕೊಟ್ಟರೆ ಎಫ್ಸಿಐ ಅಂತಹ ಕಡೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದಿಲ್ಲ’’ ಎಂದೂ ಬೆದರಿಸಲಾಗುತ್ತಿದೆ.

ದೇಶ  ವಿಶಾಲ ವಾದದ್ದು, ಪಂಜಾಬ್ ಕರ್ನಾಟಕ ಎರಡೂ ಒಂದೇ ಅಲ್ಲ. ಇಡೀ ದೇಶಕ್ಕೆ ಒಂದೇ ದರ ಎಂಬುವುದು ಆಗುವುದಿಲ್ಲ. “ರಾಜ್ಯ ಸರಕಾರ ಬೋನಸ್ ನೀಡಿದರೆ ಕೃಷಿ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಇರಿಸಲು ಅವಕಾಶ ನೀಡುವುದಿಲ್ಲ. ಹಣಕಾಸು ಹೊಣೆಯನ್ನು ರಾಜ್ಯವೇ ಹೊರಬೇಕು.’’ ಎಂದೂ “ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ನೀಡುವ ವಿವಿಧ ಅನುದಾನಗಳನ್ನು ಕಡಿತ ಮಾಡಲಾಗುವುದು.’’ ಎಂದು ಬೆದರಿಕೆ ಹಾಕಲಾಗುತ್ತಿದೆ.

ಕೃಷಿಯ ಕಂಪನೀಕರಣಕ್ಕೆ ಪೂರಕವಾಗಿ ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಬಂಡವಾಳದ ಹುಚ್ಚು ಹರಿದಾಟಕ್ಕೆ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ರೈತ ವಿರೋಧಿಯಾದ ನೀತಿಯನ್ನು ಜಾರಿಗೆ ತರಲಾಗುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ರೈತ ಚಳುವಳಿಗಳಲ್ಲದೇ ರಾಜ್ಯ ಸರಕಾರಗಳೂ ರಾಜಕೀಯ ಹೋರಾಟಕ್ಕೆ ಮುಂದಾಗಬೇಕು.  ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳಾಗಿ ಜ್ಯೋತಿಬಸು, ಕೇರಳ, ತ್ರಿಪುರದ ಮುಖ್ಯಮಂತ್ರಿಗಳು, ಆಂಧ್ರದ ಮುಖ್ಯಮಂತ್ರಿಗಳಾಗಿ ಎನ್.ಟಿ. ರಾಮರಾವ್, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಮುಂತಾದವರು ಮುಖ್ಯಮಂತ್ರಿಗಳ ಸಭೆಗಳಲ್ಲಿ ಇಂತಹ ನೀತಿಗಳ ವಿರುದ್ದ,  ರಾಜ್ಯ ಸರಕಾರಗಳಿಗೆ ಬೆಂಬಲ ಬೆಲೆ ನಿಗದಿ ಅಧಿಕಾರ ಬೇಕೆಂದು ದೃಢವಾಗಿ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದರು. ಆದರೆ ದುರದೃಷ್ಟವಶಾತ್ ಇಂತಹ ಹೋರಾಗಳು ಇತ್ತೀಚೆಗೆ ನಡೆಯುತ್ತಿಲ್ಲ. ವಿವಿಧ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಬಹುತೇಕ ಪ್ರಾದೇಶಿಕ ಪಕ್ಷಗಳು ಸಹ ಖಾಸಗಿ ಮಾರುಕಟ್ಟೆ ನೀತಿಗಳನ್ನೇ ಒಪ್ಪಿ ಜಾರಿ ಮಾಡುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಈ ಪರಿಸ್ಥಿತಿ ಬದಲಾಗಬೇಕು. ರಾಜ್ಯ ಸರಕಾರಗಳ ಕಡೆಯಿಂದ ಈಗಲೂ ಅಂತಹ ಹೋರಾಟ ಅಗತ್ಯವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಸನ್ನಿವೇಶದಲ್ಲಿ ಜನಚಳುವಳಿಯೇ ಇದಕ್ಕೆ ಪರಿಹಾರ. ಈ ದೆಸೆಯಲ್ಲಿ ಪ್ರಬಲ ಚಳುವಳಿ ಕಟ್ಟಬೇಕಾದ ತುರ್ತು ಅವಶ್ಯಕತೆ ಇದೆ.

Advertisements

ಕರ್ನಾಟಕದ ಹೊಸ ಭೂಸ್ವಾಧೀನ ಆದೇಶ 1894ರ ಕರಾಳ ಭೂಸ್ವಾಧೀನ ಕಾಯ್ದೆಯ ಪಡಿಯಚ್ಚು?

ಸಂಪುಟ: 10 ಸಂಚಿಕೆ: 28 Sunday, July 3, 2016

ದೇಶದ ಜನತೆಯ ಒತ್ತಾಯದ ಮೇರೆಗೆ, ತನಗೆ ಇಷ್ಟವಿಲ್ಲದಿದ್ದರೂ, ಸ್ವಲ್ಪವಾದರೂ ಜನತೆಗೆ ನೆರವಾಗಬಲ್ಲ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದ ಇದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕಾಯ್ದೆಯನ್ನು ಅದೇ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರ ಬುಡಮೇಲು ಮಾಡಿದೆ. ನರೇಂದ್ರ ಮೋದಿ ನೇತೃತ್ವದ NDA ಸರಕಾರ ಭೂಸ್ವಾಧೀನ ಕಾಯ್ದೆ- 2013ನ್ನು ಬುಡಮೇಲು ಮಾಡಿ, ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸಿ ಅದನ್ನು ಮರಳಿ ಕರಾಳ ಕಾಯ್ದೆಯನ್ನಾಗಿಸಲು ಶತಾಯ ಗತಾಯ ವಿಫಲ ಪ್ರಯತ್ನ ಮಾಡಿದ ಕ್ರಮಗಳ ಮುಂದುವರೆದ ಭಾಗವಾಗಿಯೇ ಇದು ಬಂದಿದೆ. ಈ ಮೂಲಕ ಭೂಸಂತ್ರಸ್ತರ ಬಗ್ಗೆ ಕಾಂಗ್ರೆಸ್ನ ಕಾಳಜಿ ಎಷ್ಟು ಹುಸಿ ಎಂಬುದು  ಮತ್ತೊಮ್ಮೆ ಬಯಲಾಗಿದೆ.

ಕರ್ನಾಟಕ ರಾಜ್ಯ ಸರಕಾರ ಮೇ 31, 2016ರಂದು ವಸತಿ, ಸ್ಮಶಾನ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಉಪವಿದ್ಯುತ್ ಕೇಂದ್ರಗಳ ನಿರ್ಮಾಣ, ಒಳಚರಂಡಿ, ರಸ್ತೆ ನಿರ್ಮಾಣ ಮತ್ತು ಅಗಲೀಕರಣ, ರೈಲ್ವೇ ಮಾರ್ಗ ನಿರ್ಮಾಣ, ರೈಲ್ವೇ ಕೆಳಸೇತುವೆ ಮತ್ತು ಮೇಲು ಸೇತುವೆ, ಬಂದರು, ವಿಮಾನ ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಉಪಯುಕ್ತತೆಯುಳ್ಳ ಸರ್ಕಾರದ ಯೋಜನೆಗಳಿಗೆ ಗರಿಷ್ಠ 100 ಎಕರೆಗೆ ಮೀರದಂತೆ ಭೂಕೋರಿಕೆ ಇಲಾಖೆ/ಫಲಾನುಭವಿ ಸಂಸ್ಥೆಗಳು ಖಾಸಗೀ ಜಮೀನನ್ನು ಭೂಮಾಲೀಕರಿಂದ ನೇರವಾಗಿ ಖರೀದಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ.

ಈಗಾಗಲೇ ದೇಶದಾದ್ಯಂತ ಭೂಸ್ವಾಧೀನ ಪ್ರಕ್ರಿಯೆಗೆ ನೆರವಾಗಲು ಕೇಂದ್ರ ಸರಕಾರ 2014ರಿಂದ ಜಾರಿಗೆ ಬರುವಂತೆ “ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ – 2013” ಇದ್ದಾಗಲೂ, ಈ ಹೊಸ ಆದೇಶವನ್ನು ಸರಕಾರ ಹೊರಡಿಸಿರುವುದು ವಿಶೇಷವಾಗಿದೆ. ಸದರಿ ಆದೇಶವನ್ನು, ಸದರಿ ಭೂಸ್ವಾಧೀನ ಕಾಯ್ದೆ-2013ನ್ನು ಮತ್ತು ಇದರ ಜಾರಿಗಾಗಿ “ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ (ಕರ್ನಾಟಕ) ನಿಯಮಗಳು- 2015”ದ ನಿಯಮ 31ನ್ನು ಬಳಸಿಯೇ ಕರ್ನಾಟಕ ಸರಕಾರ ಆದೇಶಿಸಿರುವುದು ಇನ್ನೊಂದು ವಿಶೇಷ. ಇದರ ಅಗತ್ಯವಿತ್ತೇ ಎಂಬ ಪ್ರಶ್ನೆಯನ್ನು ನೀವು ಎತ್ತಿದರೆ, ಕರ್ನಾಟಕ ಸರಕಾರ ಖಂಡಿತಾ ಹೌದು ಎನ್ನುತ್ತದೆ ಮತ್ತು ಈ ಆದೇಶದ ಹಿನ್ನೆಲೆಯಲ್ಲಿಯೇ ಅಂದರೆ ಪ್ರಸ್ತಾವನೆಯಲ್ಲಿ ಈ ಕುರಿತು ತನ್ನ ಉತ್ತರ ನೀಡಿದೆ.

ಸಾರ್ವಜನಿಕರಿಗೆ ಅಗತ್ಯವಾದ, ಮೇಲೆ ಸೂಚಿಸಲಾದ ವಸತಿ ಮತ್ತಿತರೇ ಮೂಲ ಸೌಕರ್ಯಗಳಿಗೆ ಜಮೀನನ್ನು ತ್ವರಿತವಾಗಿ ಪಡೆಯಲು ಮತ್ತು ಅಂತಹ ಜಮೀನನ್ನು ತ್ವರಿತವಾಗಿ ಪಡೆಯಲಾಗದ ಕಾರಣದಿಂದಾಗಿ, ಯೋಜನೆಯ ಅನುಷ್ಠಾನದ ವಿಳಂಬಗೊಂಡು ಸರ್ಕಾರಕ್ಕೆ ಉಂಟಾಗುವ ಹೆಚ್ಚಿನ ಆರ್ಥಿಕ ಹೊರೆಯನ್ನು ತಡೆಯುವ ಈ ಎರಡು ಪ್ರಮುಖ ಕಾರಣಗಳಿಗಾಗಿ ಈ ಆದೇಶದ ಅಗತ್ಯವಿತ್ತು ಎಂದು ರಾಜ್ಯ ಸರಕಾರ ವಿವರಿಸಿದೆ. ಭೂಸ್ವಾಧೀನ ಕಾಯ್ದೆ- 2013 ರಂತೆ ಇಂತಹ ಸೌಕರ್ಯಗಳಿಗೆ ಭೂಮಿಯನ್ನು ಪಡೆಯುವುದು, ಒಂದೆಡೆ ರೈತರ ಅಥವಾ ಜಮೀನಿನ ಒಡೆಯರ ಒಪ್ಪಿಗೆಯನ್ನು ಪಡೆಯುವ ಮತ್ತು ಇನ್ನೊಂದೆಡೆ ಸ್ವಾಧೀನದಿಂದಾಗುವ ಸಾಮಾಜಿಕ ಹಾಗೂ ಪರಿಸರದ ಮೇಲಿನ ಪರಿಣಾಮ ಗುರುತಿಸುವ ಪ್ರಕ್ರಿಯೆಯ ಕಾರಣಗಳಿಂದಾಗಿ, ಯೋಜನೆಯ ಅನುಷ್ಠಾನದ ಪ್ರಗತಿಯಲ್ಲಿ ವಿಳಂಬವಾಗುವ ಪ್ರಕ್ರಿಯೆಯ ಅಂಶವನ್ನು ಇದು ಎತ್ತಿತೋರಿದೆ. ಅದೇ ರೀತಿ, 1894ರ ಕಾಯ್ದೆಯ ಒಪ್ಪಂದದ ದರದ ಮೂಲಕ ಸರ್ಕಾರದ ಯೋಜನೆಗಳಿಗೆ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅವಕಾಶ ಈ ಹೊಸ ಭೂಸ್ವಾಧೀನ ಕಾಯ್ದೆಯಲ್ಲಿ ಇಲ್ಲವೆಂಬ ಇನ್ನೊಂದು ಅಂಶವÀನ್ನು ನೆನಪಿಸಿ, ತ್ವರಿತ ಭೂಸ್ವಾಧೀನದ ಪ್ರಕ್ರಿಯೆಗೆ ಅದರ ಅಗತ್ಯದ ಕುರಿತು ಮಾತನಾಡಿದೆ.

ನಿಜ, ಮೇಲೆ ತಿಳಿಸಲಾದ ಮೂಲ ಸೌಕರ್ಯ ಮತ್ತಿತರೇ ಸಾರ್ವಜನಿಕ ಉಪಯುಕ್ತತೆಯುಳ್ಳ ಸರ್ಕಾರದ ಯೋಜನೆಗಳಿಗೆ, ತ್ವರಿತವಾಗಿ ಜಮೀನು ಸಿಗಬೇಕು ಮತ್ತು ಅಂತಹ ವಿಳಂಬದಿಂದಾಗುವ ಆರ್ಥಿಕ ಹೊರೆಯನ್ನು ತಡೆಯಬೇಕು ಎಂಬ ಸರಕಾರದ ವಿಚಾರ ಒಪ್ಪಬಹುದಾದುದೇ ಆಗಿದೆ.

ಆದರೆ, ರಾಜ್ಯ ಸರಕಾರ ಈ ಕಾರಣದಿಂದಾಗಿ ಸಾಮಾಜಿಕ ಹಾಗೂ ಪರಿಸರದ ಮೇಲಾಗುವ ಪರಿಣಾಮದ ಕುರಿತ ಅಧ್ಯಯನ ಮತ್ತು ಅದರ ಮೇಲೆ ಕ್ರಮವಹಿಸುವುದನ್ನು ತಡೆಯಲು ಮುಂದಾಗಿರುವುದು ಆಶ್ಚರ್ಯಕರವಾಗಿದೆ. ಇದನ್ನು ತಡೆಯುವ ಬದಲು, ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಿಕೊಳ್ಳುತ್ತಲೇ ಈ ಕುರಿತು ಕ್ರಮವಹಿಸಬಹುದಾಗಿತ್ತು, ಆದರೆ ಸರಕಾರ ಅದನ್ಯಾಕೆ ಒಪ್ಪುತ್ತಿಲ್ಲ? ಅದೇ ರೀತಿ. ಯಾವುದರಿಂದಾಗಿ ರೈತರ ಜಮೀನುಗಳಿಗೆ ಸರಿಯಾದ ಮಾರುಕಟ್ಟೆ ದರ ದೊರೆಯದೇ ನಷ್ಟ ಅಥವ ಅನ್ಯಾಯ ಉಂಟಾಗುತ್ತಿತ್ತೆನ್ನಲಾಗಿದೆಯೋ ಹಾಗೂ ಆ ರೀತಿಯ ದರ ನಿಗದಿಗೆ ಯಾವುದೇ ಸಮರ್ಪಕ ಮಾನದಂಡಗಳಿರಲಿಲ್ಲವೆನ್ನಲಾಗಿದೆಯೋ, ಅಂತಹ ದರದ ಕುರಿತ ಕ್ರಮವನ್ನು ಭೂಸ್ವಾಧೀನ ಕಾಯ್ದೆ-2013ರ ಅಂಗೀಕಾರದ ಸಂದರ್ಭದಲ್ಲಿ ಪಾರ್ಲಿಮೆಂಟ್ ಒಪ್ಪದೇ ತಿರಸ್ಕರಿಸಿದೆ. ರೈತರಿಗೆ ಹಿಂದಿನ 1894ರ ಕರಾಳ ಹಾಗೂ ಬಲವಂತದ ಭೂಸ್ವಾಧೀನ ಕಾಯ್ದೆ ಜಾರಿಯಲ್ಲಿದ್ದ ಪರಿಸ್ಥಿತಿಗೆ ಹೋಲಿಸಿದರೆ, ಕೊಂಚವಾದರೂ ಪರವಾ ಇಲ್ಲಾ ಎಂಬಂತಹ ದರ ನಿಗದಿಗೆ ಅವಕಾಶ ನೀಡಿರುವ ಭೂಸ್ವಾಧೀನ ಕಾಯ್ದೆ-2013ರ ದರ ನಿಗದಿಯ ಪ್ರಸ್ತಾಪವನ್ನು ಕೂಡಾ, ಮರಳಿ ರಾಜ್ಯ ಸರಕಾರ ತಿರಸ್ಕರಿಸಿ, ಈ ‘ಒಪ್ಪಂದದ ದರ’ವನ್ನೇ ಯಾಕೆ  ಈ ಮೂಲಕ ಪ್ರತಿಪಾದಿಸುತ್ತಿದೆ? ಇದರ ಉದ್ದೇಶವೇನು? ಎಂಬ ಎರಡು ಪ್ರಶ್ನೆಗಳು ಮತ್ತು ಅದೇ ರೀತಿ, ಭೂಸ್ವಾಧೀನ ಕಾಯ್ದೆ-2013 ರ ಕಲಂ 46ನ್ನು ಬಳಸಿ ಈ ಆದೇಶ ಹೊರಡಿಸಿದುದರ ಹಿಂದಿನ ಔಚಿತ್ಯವೇನು ಎಂಬುದು ಸೇರಿದಂತೆ,  ಈ ಎಲ್ಲ ಪ್ರಶ್ನೆಗಳು ರಾಜ್ಯದ ರೈತರನ್ನು, ನಮ್ಮೆಲ್ಲರನ್ನು ಮರಳಿ ಕಾಡುತ್ತಿವೆ.

ಸಾಮಾಜಿಕ ಪರಿಣಾಮ ಗುರುತಿಸುವುದೇಕೆ ಬೇಡ!

ಭೂ ಸ್ವಾಧೀನ ಕಾಯ್ದೆ-2013 ಭೂಸ್ವಾಧೀನ ದಿಂದಾಗುವ ಸಾಮಾಜಿಕ ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಗುರುತಿಸಲು ಮತ್ತು ಅಂತಹ ವರದಿಯನ್ನಾಧರಿಸಿ ಸೂಕ್ತ ಕ್ರಮಗಳನ್ನು ತಗೆದುಕೊಳ್ಳುವುದನ್ನು ಅಗತ್ಯವೆಂದು ಭಾವಿಸಿ ಆ ಕುರಿತು ಕ್ರಮವಹಿಸುವುದನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಡ್ಡಾಯಗೊಳಿಸಿದೆ. ಆದರೇ ರಾಜ್ಯ ಸರಕಾರ ಭೂ ಸ್ವಾಧೀನದ ಹೊಸ ಆದೇಶದಲ್ಲಿ ಅದನ್ನು ಕೈಬಿಟ್ಟಿದೆ. ಸಾಮಾನ್ಯವಾಗಿ, ಈ ಹೊಸ ಆದೇಶವು, ಕೈಗಾರಿಕೆ ಸ್ಥಾಪನೆ ಕುರಿತು ಮಾತನಾಡುವುದಿಲ್ಲ ಆದಾಗಲೂ, ಮೂಲ ಸೌಕರ್ಯಗಳ ಯೋಜನೆಯಲ್ಲಿ, ಅಂತಹ ಸಾಮಾಜಿಕ ಹಾಗೂ ಪರಿಸರದ ಮೇಲೆ ಭೂ ಸ್ವಾಧೀನದ ಪರಿಣಾಮಗಳು ಗಂಭಿರವಾಗಿಯೇನು ಇರುವುದಿಲ್ಲವೆಂಬ ಅಭಿಪ್ರಾಯದಿಂದಲೇನಾದರೂ, ಸಾಮಾಜಿಕ ಹಾಗೂ ಪರಿಸರದ ಮೇಲಿನ ಪರಿಣಾಮಗಳ ಕುರಿತ ಅಧ್ಯಯನವನ್ನು ಕೈಬಿಟ್ಟಿರಬಹುದೇ? ಒಂದು ವೇಳೆ, ಅದೇ ಉದ್ದೇಶವನ್ನು ಹೊಂದಿದ್ದರೂ, ಅದು ಸರಿಯಾದ ಕ್ರಮವಾಗಿಲ್ಲ! ಭೂಸ್ವಾಧೀನದ ಸಾಮಾಜಿಕ ಹಾಗೂ ಪರಿಸರದ ಪರಿಣಾಮ ಅದೆಷ್ಠೇ ಪ್ರಮಾಣದಿದ್ದರೂ ಅದರಿಂದಾಗುವ ಬಾ ಧೆಗೆ ಪರಿಹಾರ ಒದಗಿಸಬೇಕಾಗುತ್ತದೆ. ಮೇಲಾಗಿ, ಇದು ಕೇವಲ ಒಂದು ಪ್ರದೇಶದ 100 ಎಕರೆಯ ಪ್ರಶ್ನೆ ಮಾತ್ರವಾಗಿಲ್ಲ, ರಾಜ್ಯದಾದ್ಯಂತ ಎಲ್ಲಾ ತಾಲೂಕುಗಳಲ್ಲೂ ಮೂಲ ಸೌಕರ್ಯಕ್ಕಾಗಿ ಭೂ ಸ್ವಾಧೀನ ಮಾಡುವಾಗ ಅದರ ಪ್ರಮಾಣ ಅಗಾಧವಾದುದು ಮತ್ತು ಗಂಭೀರವಾದುದೇ ಆಗಿರುತ್ತದೆ. ಮಾತ್ರವಲ್ಲ, ಈ ಆದೇಶದ ಪ್ರಶ್ನೆ ಮಾತ್ರವೇ ಅಲ್ಲ, ಈ ಆದೇಶ ಹೊರಡಿಸಿದ “ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ (ಕರ್ನಾಟಕ) ನಿಯಮಗಳು- 2015”ರ ನಿಯಮ 31, ಕೈಗಾರಿಕಾ ಉದ್ದೇಶಕ್ಕಾಗಿ ಗರಿಷ್ಠ 500 ಎಕರೆವರೆಗೂ ಸ್ವಾಧೀನ ಮಾಡಿಕೊಳ್ಳಬಹುದಾದ ಜಮೀನಿಗೂ ಈ ವಿಚಾರದಲ್ಲಿ ರಿಯಾಯಿತಿ ನೀಡಿರುವುದನ್ನು ಗಮನಿಸಿದರೆ ಅದರ ಅಗಾಧತೆ ಅರ್ಥವಾಗಬಹುದಾಗಿದೆ.

ಗೋಸುಂಬೆ ಭೂದರ

ಈ ಆದೇಶವು ಭೂದರ ನಿಗದಿಗೆ ಸೂಚಿಸುವ ಮಾರ್ಗಸೂಚಿಯ 5ನೇ ಅಂಶವೂ, ಸದರಿ ಆದೇಶÀದಂತೆ ಸ್ವಾಧೀನ ಪಡಿಸಿಕೊಳ್ಳುವ ಜಮೀನುಗಳ ದರವೂ ಯಾವುದೇ ಕಾರಣಕ್ಕೆ  “ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣಕಾಯ್ದೆ – 2013”ರ ಕಲಂ 26ರಡಿ ನಿಗದಿಪಡಿಸುವ ಭೂ ಮೌಲ್ಯದ ಗರಿಷ್ಠ ಮಿತಿಯನ್ನು ಮೀರುತ್ತಿಲ್ಲವೆಂಬುದನ್ನು ದರ ನಿರ್ಧರಣಾ ಸಲಹಾ ಸಮಿತಿಯು ಖಚಿತ ಪಡಿಸಿಕೊಂಡು ನಿಗದಿಸಲು ಸೂಚಿಸುತ್ತದೆ. ಇದು ಬಹಳ ಸ್ಪಷ್ಠವಾಗಿ, ಭೂ ಸ್ವಾಧೀನ ಕಾಯ್ದೆ-2013 ರಂತೆ ಸ್ವಲ್ಪವಾದರೂ ಪರವಾ ಇಲ್ಲಾವೆಂಬ ಭೂಬೆಲೆ ಭೂಸಂತ್ರಸ್ತರಿಗೆ ಸಿಗದಂತೆ ನೋಡಿಕೊಳ್ಳುತ್ತಿರುವುದನ್ನು ಖಚಿತಪಡಿಸುತ್ತಿದೆ.

ಒಪ್ಪಂದದ ದರ ಹೇಗೆ ನಿಗದಿಸಲಾಗುತ್ತದೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಮಿತ್ತಲ್, ಜಿಂದಾಲ್ ಹಾಗೂ ಭ್ರಾಹ್ಮಿಣಿ ಸ್ಟೀಲ್ಸ ಕಂಪೆನಿಗಳಿಗಾಗಿ ಭೂಬೆಲೆ ನಿಗದಿಸುವಾಗ ಅಲ್ಲಿನ ತಾಲೂಕ ಆಡಳಿತ ಮತ್ತು ಭೂ ನೊಂದಣಾಧಿಕಾರಿಗಳು ಆಯಾ ಪ್ರದೇಶದಲ್ಲಿ ಮಾರಾಟವಾಗುವ ಜಮೀನುಗಳಿಗೆ ನಿಗದಿಸಿದ ಕನಿಷ್ಠ ಮಾರ್ಗಸೂಚಿ ಬೆಲೆಗಿಂತಲೂ, ಕಡಿಮೆ ಬೆಲೆಯನ್ನು ಭೂ ಬೆಲೆಯೆಂದು ನಿಗದಿಸಿರುವುದನ್ನು ನೋಡಿದ್ದೇವೆ. ಉದಾಹರಣೆಗೆ, ಭ್ರಾಹ್ಮಿಣಿ ಸ್ಟೀಲ್ಸಗಾಗಿ ಸ್ವಾಧೀನ ಪಡಿಸಿಕೊಂಡ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ಕನಿಷ್ಠ ಮಾರ್ಗಸೂಚಿ ಬೆಲೆ 12 ಲಕ್ಷ ರೂಗಳೆಂದಿದ್ದರೂ, ಅಲ್ಲಿ ಕೇವಲ 05,06,08ಲಕ್ಷ ರೂಗಳೆಂದು ಮೂರು ರೀತಿಯಲ್ಲಿ ಕಡಿಮೆ ಭೂ ಬೆಲೆ ನಿಗದಿಸಿ ವಂಚಿಸಲಾಗಿದೆ. ಸಾಮಾನ್ಯವಾಗಿ ರೈತರು ಮತ್ತಿತರರು ತಮಗೆ ಜಮೀನು/ನಿವೇಶನ ಖರೀದಿಸಿ ನೊಂದಣಿ ಮಾಡಿಸುವಾಗ ಅಲ್ಲಿ ಮಾರ್ಗಸೂಚಿ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಿದ್ದರೂ ಉಪನೊಂದಣಾಧಿಕಾರಿಗಳು ಅಲ್ಲಿನ ಮಾರ್ಗಸೂಚಿ ಬೆಲೆಗಿಂತ ಕಡಿಮೆ ಬೆಲೆಗೆ ನೊಂದಣಿ ಮಾಡಲು ಒಪ್ಪುವುದಿಲ್ಲ. ಮಾತ್ರವಲ್ಲ ಮಾರ್ಗಸೂಚಿ ಬೆಲೆಗೆ ನೊಂದಣಿ ಮಾಡುತ್ತಾರೆ. ವಾಸ್ತವ ಸ್ಥಿತಿ ಹೀಗಿರುವಾಗ, ಅದಕ್ಕಿಂತಲೂ ಕಡಿಮೆ ಬೆಲೆ ನಿಗದಿಸುವುದು ಅದು ಯಾವ ರೀತಿಯ ಒಪ್ಪಂದದ ದರವಾದಿತು? ಇದು ಒಪ್ಪಂದದ ದರವಲ್ಲ, ಬದಲಿಗೆ ಮಾಲೀಕರೊಂದಿಗೆ ಶಾಮೀಲಾದ ರೈತರು ಮತ್ತು ಭೂಸಂತ್ರಸ್ತರನ್ನು ಲೂಟಿ ಮಾಡುವ ಲೂಟಿಕೋರ ದರವಾಗದೇ?!

ನಿಜ, ಈ ವಿಚಾರದಲ್ಲಿ ಖರೀದಿಸುವುದು ಇಲ್ಲಿ ಸರಕಾರವೇ ಆಗಿರಬಹುದಾದುರಿಂದ ಅಂತಹ ಪರಿಸ್ತಿತಿ ಉದ್ಭವಿಸದೆಂದರೂ ಕೂಡಾ, ಇಲ್ಲಿ ಭೂಬೆಲೆ ನಿಗದಿಗೆ ಅಗತ್ಯ ಸಮರ್ಪಕ ಮಾನದಂಡಗಳಿಲ್ಲದೇ ಇರುವುದರಿಂದ ಬೆಲೆ ನಿಗದಿಯು ಅಧಿಕಾರಿಗಳ ಮರ್ಜಿಯಲ್ಲಿರುವುದರಿಂದ, ಬೆಲೆಗಾಗಿ ರೈತರು ಅಥವಾ ಭೂ ಸಂತ್ರಸ್ಥರು ಭೂಸ್ವಾಧೀನಾದಿಕಾರಿಗಳಿಗೆ ಗರಿಷ್ಠ ಕಮಿಷನ್ ಅಥವಾ ಲಂಚ ನೀಡಬೇಕಾದ ಒತ್ತಡ ಬರಲಿದೆ. ಇದರಿಂದ ಒಂದೆಡೆ ಭೂ ಸಂತ್ರಸ್ತರಿಗೆ, ಇನ್ನೊಂದೆಡೆ ಸರಕಾರಕ್ಕೆ ಅಥವಾ ಇಲಾಖೆಗಳ ಜೇಬಿಗೆ ಕತ್ತರಿ ಬೀಳಲಿದೆ ಮತ್ತು ಭ್ರಷ್ಠಾಚಾರಕ್ಕೆ ಕುಮ್ಮಕ್ಕಾಗಲಿದೆ. ಅದೇ ರೀತಿ, ಈ ಒಪ್ಪಂದದ ದರವೆಂಬ ಹೆಸರಿನ ಗೋಸುಂಬೆ ದರವೂ ಏನೇ ಆದರೂ ಭೂಸ್ವಾಧೀನ ಕಾಯ್ದೆ-2015ರ ದರ ನಿಗದಿಯ ನಿಯಮಗಳಂತೆ ನಿಗದಿಸುವ ಬೆಲೆಗೆ ಸರಿದೂಗದಾಗಿದೆ. ಈ ಕಾಯ್ದೆಯ ಪ್ರಕಾರ, ಕೊನೆಯ ಪಕ್ಷ ಕನಿಷ್ಟ ಮಾರ್ಗ ಸೂಚಿ ಬೆಲೆಯ ನಾಲ್ಕರಷ್ಟು ಗ್ರಾಮೀಣ ಪ್ರದೇಶದ ಜಮೀನುಗಳಿಗೆ ಮತ್ತು ನಗರಗಳ ಜಮೀನುಗಳಿಗೆ ಮೂರರಷ್ಟು ಗರಿಷ್ಠ ಬೆಲೆಯನ್ನು ನೀಡಬೇಕಾಗುತ್ತದೆ. ಈ ಬೆಲೆಯೂ ಕೂಡಾ ಈ ಹೊಸ ಆದೇಶದಲ್ಲಿ ಭೂ ಸಂತ್ರಸ್ತರಿಗೆ ಸಿಗದಾಗಿದೆ.

ಪುನರ್ವಸತಿ ಮತ್ತು ಪುನರ್ ನಿರ್ಮಾಣ ಸೌಲಭ್ಯಗಳೂ ಇದರಲ್ಲಿಲ್ಲ

ಅದೇ ರೀತಿ, ಸರಕಾರ ಭೂಸ್ವಾಧೀನ ಕಾಯ್ದೆ-2013 ರ ಕಲಂ 46ನ್ನು ಬಳಸಿ ಆದೇಶ ಹೊರಡಿಸಿದ ಔಚಿತ್ಯವನ್ನು ಗಮನಿಸುದಾದರೆ, ಈ ಕಾಯ್ದೆಯ ಕಲಂ 46 ಸದರಿ ಸಂಸ್ಥೆಗಳಿಗೆ, ಭೂ ಸ್ವಾಧೀನ ಕಾಯ್ದೆಯಿಂದ ನುಣುಚಿಕೊಳ್ಳಲು ಅವಕಾಶ ನೀಡುವ ಕಳ್ಳಗಿಂಡಿಯಾಗಿದೆ. ಅದೇ ರೀತಿ, ಈ ಕಾಯ್ದೆಯ ಜಾರಿಗೆ ರೂಪಿಸಲಾದ  “ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣದ (ಕರ್ನಾಟಕ) ನಿಯಮಗಳು- 2015ರ ನಿಯಮ 31 ಕೂಡಾ ಸಂಸ್ಥೆಗಳಿಗೆ ನುಣುಚಿಕೊಳ್ಳಲು ಅವಕಾಶ ನೀಡುವ ಕಳ್ಳಗಿಂಡಿಯ ಪಾರು ರಾಜಮಾರ್ಗವಾಗಿದೆ. ಇದು ಅದಾಗಲೇ ಮೇಲೆ ವಿಮರ್ಶಿಸಲಾದ ಹೊಣೆಗಾರಿಕೆಗಳಿಂದ ಸರಕಾರ ಮತ್ತು ಸಂಸ್ಥೆಗಳು ನುಣುಚಿಕೊಳ್ಳಲು ಅವಕಾಶ ನೀಡುವುದು ಮಾತ್ರವೇ ಅಲ್ಲ, ಭೂ ಸ್ವಾಧೀನ ಕಾಯ್ದೆ ವಿಧಿಸುವ ಭೂ ಸಂತ್ರಸ್ತರಿಗೆ ನೀಡಬೇಕಾದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಸೌಲಭ್ಯಗಳಿಂದ ರಿಯಾಯಿತಿ ಕೊಡುವ ಮೂಲಕ ಮತ್ತೊಂದು, ಸಾಮಾಜಿಕ ಹಾಗೂ ಸಾರ್ವಜನಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನೆರವು ನೀಡಲಿದೆ.

ಭೂ ಸ್ವಾಧೀನ ಕಾಯ್ದೆ-2013ರ ಅಧ್ಯಾಯ-05 ಪುನಶ್ಚೇತನ ಮತ್ತು ಪುನರವಸತಿಯು, ಯೋಜನೆಯಿಂದ ನಿರಾಶ್ರಿತರಾದವರಿಗೆ ಮತ್ತು ಭೂಮಿ ಕಳೆದುಕೊಂಡವರಿಗೆ  ನೆರವಾಗಿದೆ. ಸಂತ್ರಸ್ತ ಕುಟುಂಬಗಳಿಗೆ 12 ತಿಂಗಳ ಕಾಲ ಮಾಸಿಕ 3000 ರೂಗಳಂತೆ ಜೀವನ ನಿರ್ವಣೆಯ ಪರಿಹಾರ ನೀಡಬೇಕೆನ್ನುತ್ತದೆ. ಮಾತ್ರವಲ್ಲ, ಸಂತ್ರಸ್ತ ಕುಟುಂಬಕ್ಕೆ ಯೋಜನೆಯಲ್ಲಿ ಒಂದು ಉದ್ಯೋಗ ಕೊಡುವುದನ್ನು ಶಾಸನಬದ್ದಗೊಳಿಸಿದೆ ಅಥವಾ 05 ಲಕ್ಷ ರೂಗಳ ಪರಿಹಾರ ಅಥವಾ ಸಂತ್ರಸ್ತ ಕುಟುಂಬಕ್ಕೆ ಪ್ರತಿ ತಿಂಗಳ 2000 ರೂಗಳಂತೆ 20 ವರ್ಷಗಳ ಕಾಲ ವೇತನದಂತೆ ಪಡೆಯಲು ಅವಕಾಶ ಒದಗಿಸಿದೆ.

ಅದೇ ರೀತಿ, ಮನೆಯನ್ನು ಕಳೆದುಕೊಂಡು ನಿರ್ವಸಿತರಾದ ಕುಟುಂಬಕ್ಕೆ ಇಂದಿರಾ ಆವಾಸ್ ಮಾದರಿಯಲ್ಲಿ ಮನೆಯನ್ನು ನಿರ್ಮಿಸಿಕೊಡಲು ಸೂಚಿಸುತ್ತದೆ ಹಾಗೂ ನೀರಾವರಿ ಯೋಜನೆಗಳಿಗಾಗಿ ಜಮೀನು ಕಳೆದು ಕೊಂಡಿದ್ದಲ್ಲಿ, ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಎಕರೆ ನೀರಾವರಿ ಜಮೀನು ನೀಡಲು ಹೇಳುತ್ತದೆ. ಹಾಗೇ ನಿರ್ವಸಿತ ಪ್ರದೇಶದಿಂದ ಹೊರ ನಡೆಯಲು ಅಥವ ಪುನರ್ ವಸತಿ ಪ್ರದೇಶಕ್ಕೆ ಸಾಗಲು 50 ಸಾವಿರ ರೂಗಳ ಸಾಗಾಣೆ ವೆಚ್ಚ ನೀಡಲು ಹೇಳಿದೆ. ಒಂದು ಬಾರಿಯ ಪುನರ್ ವಸತಿಯ ವೇತನವಾಗಿ 50 ಸಾವಿರ ನೀಡಲು ಹೇಳಿದೆ.

ಹಾಗೇನೇ, ಪರಿಶಿಷ್ಠ ಜಾತಿ ಹಾಗೂ ಪಂಗಡದವರಿಗೆ ಪುನಶ್ಚೇತನ ಮತ್ತು ಪುನರ್ವಸತಿ ಅನುಕೂಲಗಳ ಜೊತೆ ಇತರೇ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಯಾವುದೇ ಭೂಸ್ವಾಧೀನದಲ್ಲಿ ಭೂಮಿ ಕಳೆದು ಕೊಂಡ ಈ ಕುಟುಂಬಗಳಿಗೆ ಪರಿಹಾರವಾಗಿ ಭೂಮಿಯನ್ನು ನೀಡಬೇಕು. ಅದೇ ರೀತಿ, ಒಂದು ಬಾರಿಯ ಪರಿಹಾರವಾಗಿ 50,000ರೂಗಳನ್ನು ಕೊಡಬೇಕು. ಹಾಗೇ ಜಿಲ್ಲೆಯಿಂದ ಹೊರಗೆ ಹೋಗಬೇಕಾಗಿ ಬಂದಲ್ಲಿ ಪುನಶ್ಛೇತನ ಮತ್ತು ಪುನರ್ ವಸತಿಯ ಅನೂಕೂಲಗಳನ್ನು ಶೇ 25ರಷ್ಠು ಹೆಚ್ಚುವರಿಯಾಗಿ ನೀಡಬೇಕು ಮುಂತಾದ ಅಂಶಗಳು ಒಳಗೊಂಡಿವೆ. ಇಂತಹ ಯಾವುದೇ ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳಲು ಸರಕಾರ ಮತ್ತು ಇಲಾಖೆಗಳಿಗೆ ಮತ್ತು ಸಂಸ್ಥೆಗಳಿಗೆ ಈ ಹೊಸ ಆದೇಶ ಅನುಕೂಲ ಮಾಡಿಕೊಟ್ಟಿದೆ.

ಮತ್ತೊಮ್ಮೆ ಬೆತ್ತಲಾದ ಕಾಂಗ್ರೆಸ್:

ಒಟ್ಟಾರೆ, ಕರ್ನಾಟಕ ಸರಕಾರದ ಮೂಲ ಸೌಕರ್ಯದಂತಹ  ಸೂಚಿತ ಯೋಜನೆಗಳಿಗೆ ತ್ವರಿತವಾಗಿ ಜಮೀನು ಒದಗಿಸುವ ಮೂಲ ಸೌಕರ್ಯ ಬಲಪಡಿಸಲು ತುಡಿತ ತೋರಿಸುವಾಗಲೇ, ಯೋಜನೆಗಳಿಗೆ ತಮ್ಮ ಆಸ್ತಿಪಾಸ್ತಿಗಳನ್ನು ಬಿಟ್ಟುಕೊಡುವ ಮತ್ತು ಅದರಿಂದ ಬಾಧಿತರಾಗುವ  ರೈತರು ಅಥವಾ ಭೂ ಸಂತ್ರಸ್ತರ ಅಗತ್ಯವಾದ ಅವರ ಹಕ್ಕುಗಳನ್ನು ಕಾಪಾಡುವ ಮತ್ತು ನೆರವಾಗುವ ಇಚ್ಛಾಶಕ್ತಿಯನ್ನು ತೋರದಿರುವುದು ಹಾಗೂ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವುದು ಇದರಿಂದ ಬಯಲಾಗುತ್ತಿದೆ. ಇದೊಂದು ನಾಚಿಕೆಗೇಡಿನ ವಿಚಾರವಾಗಿದೆ, ಆದರೆ ಆಶ್ಚರ್ಯಕರವಾದುದೇನಾಗಿಲ್ಲ. ಬದಲಿಗೆ, ಅದರ ದುಡಿಯುವ ಜನಗಳಿಗೆ ವಿರುದ್ಧವಾದ ಹಾಗೂ ಬಹುರಾಷ್ಠ್ರೀಯ ಸಂಸ್ಥೆಗಳ ಪರವಾದ ನೀತಿಯ ಭಾಗವೇ ಆಗಿದೆ. ತ್ವರಿತವಾಗಿ ಜಮೀನುಗಳನ್ನು ಒದಗಿಸುವ ಉದ್ದೇಶದೊಂದಿಗೆ ಜಾರಿಗೆ ತರುತ್ತಿರುವ ಈ ಹೊಸ ಆದೇಶವು, ಬಹುತೇಕ 1894 ರ ಭೂಸ್ವಾಧೀನ ಕರಾಳ ಕಾಯ್ದೆಯ ಪಡಿಯಚ್ಚೇ ಆಗಿದೆಯೆಂಬುದನ್ನು ಈ ವಿಶ್ಲೇಷಣೆ ಬಿಚ್ಚಿಡುತ್ತದೆ. ನರೇಂದ್ರಮೋದಿ ನೇತೃತ್ವದ ಎನ್ಡಿಏ ಸರಕಾರ ಭೂಸ್ವಾಧೀನ ಕಾಯ್ದೆ- 2013ನ್ನು ಬುಡಮೇಲು ಮಾಡಿ, ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸಿ  ಅದನ್ನು ಮರಳಿ ಕರಾಳ ಕಾಯ್ದೆಯನ್ನಾಗಿಸಲು ಶತಾಯ ಗತಾಯ ವಿಫಲ ಪ್ರಯತ್ನ ಮಾಡಿದ ಕ್ರಮಗಳ ಮುಂದುವರೆದ ಭಾಗವಾಗಿಯೇ ಇದು ಬಂದಿದೆ. ನರೇಂದ್ರ ಮೋದಿಯವರ ಸುಗ್ರೀವಾಜ್ಞೆಯ ಮೂಲಕ ಮಾಡಲಾದ ತಿದ್ದುಪಡಿಗಳಿಗೆ ಆಗ ಈ ರಾಜ್ಯ ಸರಕಾರ ಬೆಂಬಲಿಸಿದುದನ್ನು ಇಲ್ಲಿ ಸಕಾರಣವಾಗಿಯೇ ನೆನಪಿಸಿ ಕೊಳ್ಳಬಹುದಾಗಿದೆ. ದೇಶದ ಜನತೆಯ ಒತ್ತಾಯದ ಮೇರೆಗೆ, ತನಗೆ ಇಷ್ಟವಿಲ್ಲದಿದ್ದರೂ, ಸ್ವಲ್ಪವಾದರೂ ಜನತೆಗೆ ನೆರವಾಗಬಲ್ಲ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದ ಇದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಕಾಯ್ದೆಯನ್ನು ಅದೇ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರ ಬುಡಮೇಲು ಮಾಡಿದೆ. ಈ ಮೂಲಕ ಭೂಸಂತ್ರಸ್ತರ ಕುರಿತ ಕಾಂಗ್ರೆಸ್ನ ಹುಸಿ ಕಾಳಜಿಯನ್ನು ಇದು ಮತ್ತೊಮ್ಮೆ ಬಯಲುಗೊಳಿಸಿದೆ.

ರೈತರು, ಪ್ರಗತಿಪರರು, ಸಂಘ ಸಂಸ್ಥೆಗಳು ನಾಗರೀಕರು ಮತ್ತು ಭೂಸಂತ್ರಸ್ತರ ವಿರೋಧಿಯಾದ ಈ ಆದೇಶವನ್ನು ತಕ್ಷಣವೇ ವಾಪಾಸು ಪಡೆಯುವಂತೆ ಮತ್ತು  ಸರಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವಂತೆ ಒತ್ತಾಯಿಸಿ, ಬಲವಾದ ಐಕ್ಯ ಚಳುವಳಿಯಲ್ಲಿ ತೊಡಗಿ ಯಶಸ್ವಿಯಾಗುವುದೊಂದೆ ಇದರ ಅಪಾಯದಿಂದ ತಪ್ಪಿಸಿಕೊಳ್ಳಲಿರುವ ಏಕೈಕ ದಾರಿಯಾಗಿದೆ. ಅದಾಗದಿದ್ದಲ್ಲಿ ಲಕ್ಷಾಂತರ ಕುಟುಂಬಗಳು ಅಭಿವೃದ್ಧಿಯ ಹೆಸರಿನ ಈ ದಾಳಿಗೊಳಗಾಗ ಬೇಕಾಗುತ್ತದೆ.

ಯು.ಬಸವರಾಜ
ಪ್ರಧಾನ ಕಾರ್ಯದರ್ಶಿ, ಕೆಪಿಆರ್ ಎಸ್