ಪ್ರೊ.ಪ್ರಭಾತ್ ಪಟ್ನಾಯಕ್

ಮಂತ್ರಗಳ ಬಲದಿಂದಲೇ ಅರ್ಥವ್ಯವಸ್ಥೆಯನ್ನು ಅದರ ಮೊದಲಿನ ಆರೋಗ್ಯದ ಸ್ಥಿತಿಗೆ ಮರಳಿಸಬಹುದು ಎಂದು ಬಿಜೆಪಿ ನಂಬಿದೆ. ಆದರೆ ಜಿಡಿಪಿಯು ಬಜೆಟ್ ನಿರೀಕ್ಷಿಸುವಂತೆ ವಾಸ್ತವವಾಗಿ ಶೇ. 10.5ರಷ್ಟು ಏರಿಕೆಯಾದರೂ ಸಹ, ಅಷ್ಟು ಬೃಹತ್ ಪ್ರಮಾಣದ ಉತ್ಪಾದನೆಯನ್ನು ಕೊಳ್ಳಲು ಸಾಕಾಗುವಷ್ಟು ಬೇಡಿಕೆ ಅರ್ಥವ್ಯವಸ್ಥೆಯಲ್ಲಿಲ್ಲ. ಅಂದರೆ, ಉತ್ಪಾದನೆಯ ಪ್ರಮಾಣವು ದೊಡ್ಡದಿರುವುದಿಲ್ಲ. ಇದು ಜನರ ಬಳಕೆಯ ಮಟ್ಟ ಇಳಿದಿದೆ ಎಂಬುದನ್ನು ತಿಳಿಸುತ್ತದೆ. ಇಂತಹ ಸನ್ನಿವೇಶದಲ್ಲಿ, ಭಾರತದ ಅರ್ಥವ್ಯವಸ್ಥೆಯಲ್ಲಿ v-ಆಕಾರದ ಚೇತರಿಕೆ ಸಂಭವಿಸುತ್ತದೆ ಎಂದು ನಂಬಲು ಕಾರಣಗಳೇ ಇಲ್ಲ. ಆದರೂ ಸಹ, ಈ ಬಜೆಟ್ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಮಾಡುತ್ತದೆ ಎಂದು ಅನೇಕರು ಹೇಳುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಬಜೆಟ್ ಭಾಷಣವನ್ನು ಹೊಗಳುವ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಚಿಮ್ಮುವ ವಾಕ್ಚಾತುರ್ಯದ ಮಿಂಚಿನಲ್ಲಿ ಮತ್ತು ಶಬ್ದಗಳ ದುರ್ನಾತದಲ್ಲಿ ಒಟ್ಟಾರೆ ಅರ್ಥವ್ಯವಸ್ಥೆಯ ಚಿತ್ರಣವೇ ಕಾಣೆಯಾಗುತ್ತದೆ.

“ಮಂತ್ರಿಸಿ ಒಬ್ಬ ಮನುಷ್ಯನನ್ನು ಕೊಲ್ಲಬಹುದು. ಆದರೆ, ಮಂತ್ರದ ಜೊತೆಗೆ ಸ್ವಲ್ಪ ವಿಷವನ್ನೂ ಕೊಡಬೇಕಾಗುತ್ತದೆ” ಎಂಬುದಾಗಿ ವೋಲ್ಟೇರ್, ಮಾಟ-ಮಂತ್ರಗಳ ಬಗ್ಗೆ ಲೇವಡಿ ಮಾಡಿದ್ದರು. ವೋಲ್ಟೇರ್ ಅಂತೂ ಒಬ್ಬ ವಿಚಾರವಾದಿಯಾಗಿದ್ದರು; ಆದರೆ ಬಿಜೆಪಿ ಸರ್ಕಾರ ಅಲ್ಲವಲ್ಲ. ಮಂತ್ರಗಳ ಬಲದಿಂದಲೇ ಅರ್ಥವ್ಯವಸ್ಥೆಯನ್ನು ಅದರ ಮೊದಲಿನ ಆರೋಗ್ಯದ ಸ್ಥಿತಿಗೆ ಮರಳಿಸಬಹುದು ಎಂದು ಬಿಜೆಪಿ ನಂಬಿದೆ. ವಿತ್ತ ಸಚಿವರ ನಂಬಿಕೆಯೂ ಇಂಥಹದ್ದೇ. ನಿರ್ಮಲಾ ಸೀತಾರಾಮನ್ ಕೆಲವು ದಿನಗಳ ಹಿಂದೆ ಮಂಡಿಸಿದ 2021-22ರ ಬಜೆಟ್ ಭಾಷಣದಲ್ಲಿ ತಮ್ಮ ಬಜೆಟ್ ಪ್ರಸ್ತಾವನೆಗಳು ಭಾರತದ ಆರ್ಥಿಕತೆಗೆ ಹೊಸ ಚೈತನ್ಯ ತುಂಬುತ್ತವೆ ಎಂದು ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ, ಭಾರತದ ಅರ್ಥವ್ಯವಸ್ಥೆಯು 2020-21ರ ಆರ್ಥಿಕ ವರ್ಷದಲ್ಲಿ, ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ.7.7ರಷ್ಟು ಕುಸಿತ ಕಂಡಿದೆ ಮತ್ತು 2020-21 ಆರ್ಥಿಕ ವರ್ಷಕ್ಕೆ ಹೋಲಿಸಿದರೆ, 2021-22ರಲ್ಲಿ ಶೇ.10.5ರಷ್ಟು ವೃದ್ಧಿಸಲಿದೆ. ಆದರೆ, ಸರ್ಕಾರದ ಆರ್ಥಿಕ ಸಮೀಕ್ಷೆಯ ಪ್ರಕಾರ 2021-22ರ ಜಿಡಿಪಿಯು ತುಸು ಹೆಚ್ಚಿನ ಶೇ.11 ದರದಲ್ಲಿ ಬೆಳೆಯಲಿದೆ ಎಂದು ಹೇಳಿದೆ. ಈ ಎರಡು ವರದಿಗಳ ನಡುವಿನ ವ್ಯತ್ಯಾಸವನ್ನು ಅಲಕ್ಷಿಸಿ, ಬೆಳವಣಿಗೆಯು ಶೇ.11 ದರದಲ್ಲೇ ಇರಲಿದೆ ಎಂದೇ ಊಹಿಸಿಕೊಂಡು ಈ ಕೆಳಗಿನ ವಾದವನ್ನು ಮಂಡಿಸಲಾಗಿದೆ.

2021-22ರ ಜಿಡಿಪಿಯು ಸುಮಾರು 2019-20ರಲ್ಲಿದ್ದಷ್ಟೇ ಮಟ್ಟಕ್ಕೆ ಮರಳಲಿದೆ ಎಂಬ ಆಶಾಭಾವನೆಯನ್ನು ಆಧರಿಸಿ, ಸರ್ಕಾರದ ವಕ್ತಾರರು ಒಂದು V-ಆಕಾರದ ಚೇತರಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅಂದರೆ, ಅರ್ಥವ್ಯವಸ್ಥೆಯು ಕೊಳ್ಳಕ್ಕೆ ಬೀಳುವುದಕ್ಕೆ ಮುಂಚೆ ಜಿಡಿಪಿಯ ಬೆಳವಣಿಗೆಯ ದರವು ಯಾವ ಮಟ್ಟದಲ್ಲಿತ್ತೋ, ತುಸು ಹೆಚ್ಚು ಕಡಿಮೆ, ಅದೇ ಮಟ್ಟಕ್ಕೆ ಏರಲಿದೆ.

ದೇಶದ ಆಂತರಿಕ ಒಟ್ಟು ಉತ್ಪನ್ನ ಅಥವಾ ಜಿಡಿಪಿಯನ್ನು ಸರಳವಾಗಿ ವಿವರಿಸುವುದಾದರೆ, ದೇಶದ ಒಟ್ಟು ಬಳಕೆ (ಬ) ಮತ್ತು ಹೂಡಿಕೆ (ಹೂ) ಮತ್ತು ಸರ್ಕಾರದ ವೆಚ್ಚಗಳು (ಸ) ಮತ್ತು ನಿವ್ವಳ ರಫ್ತು (ರ-ಆ)ಇವುಗಳ ಒಟ್ಟು ಮೊತ್ತವೇ ಜಿಡಿಪಿ. ಅದು ಬಿದ್ದಿರುವ ಕೊಳ್ಳದ ತಳದಿಂದ, 2021-22ರಲ್ಲಿ ಶೇ.10.5 ದರದಲ್ಲಿ ಮೇಲೇರುತ್ತದೆ ಎಂದಾದರೆ, ಜಿಡಿಪಿಯು (ಬ+ಹೂ+ ಸ+ರ-ಆ) 2020-21ರ ಮಟ್ಟಕ್ಕಿಂತ ಶೇ.10.5 ರಷ್ಟು ಹೆಚ್ಚಬೇಕಾಗುತ್ತದೆ.

ಮೂರು ಘಟ್ಟಗಳ ‘ಪ್ರಯೋಗ’ಗಳ  ನಂತರ ಕೊನೆಗೂ ಲಸಿಕೆ ಬಂತೆ! ಮೂರು ಬಜೆಟ್‌ಗಳ ನಂತರ ನಾಲ್ಕನೇ ಬಜೆಟ್‌ನಿಂದ ಚೇತರಿಕೆ? ವ್ಯಂಗ್ಯಚಿತ್ರ: ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ

ಮುಂದಿನ ವರ್ಷ ರಫ್ತುಗಳು ಹೆಚ್ಚುತ್ತವೆಯೋ ಇಲ್ಲವೋ ಎಂಬುದನ್ನು ನಿಖರವಾಗಿ ಈಗಲೇ ಹೇಳಲು ಯಾರಿಗೂ ಸಾಧ್ಯವಿಲ್ಲ. ಮತ್ತು, V-ಆಕಾರದ ಚೇತರಿಕೆಯ ಬಗ್ಗೆ ಸರ್ಕಾರದ ಹೇಳಿಕೆಯು  ರಫ್ತುಗಳು ಉನ್ನತವಾಗಿರುತ್ತವೆ ಎಂಬ ಊಹೆಯನ್ನು ಆಧರಿಸಿಲ್ಲ ಎಂಬುದೇನೋ ಸರಿಯೇ. ಆದ್ದರಿಂದ, ರಫ್ತುಗಳನ್ನು ನಮ್ಮ ಲೆಕ್ಕಾಚಾರದಿಂದ ಹೊರಗಿಟ್ಟು, ಬಜೆಟ್‌ನಲ್ಲಿ ಘೋಷಿಸಿದ ನೀತಿಗಳು ಮತ್ತು ಉಪಕ್ರಮಗಳು ಬಳಕೆಯನ್ನು(ಬ), ಹೂಡಿಕೆಯನ್ನು(ಹೂ) ಮತ್ತು ಸರ್ಕಾರದ ವೆಚ್ಚಗಳನ್ನು (ಸ) ನಿಜಕ್ಕೂ ಸುಮಾರು ಶೇ.10 ರಷ್ಟನ್ನಾದರೂ ಹೆಚ್ಚಿಸುತ್ತವೆಯೇ ಎಂಬುದನ್ನು ನೋಡೋಣ.

2020-21ನೇ ಸಾಲಿನಲ್ಲಿದ್ದ 34.503 ಲಕ್ಷ ಕೋಟಿ ರೂ.ಗಳಷ್ಟಿದ್ದ (ಪರಿಷ್ಕೃತ ಅಂದಾಜು) ಸರ್ಕಾರದ ಒಟ್ಟು ವೆಚ್ಚವು 2021-22ರ ಸಾಲಿನಲ್ಲಿ 34.832 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಅಂದರೆ, ಹಣದ ಲೆಕ್ಕದಲ್ಲಿ 1% ಏರಿಕೆಯಾಗಿದ್ದರೂ ಸಹ, ಬೆಲೆ ಏರಿಕೆ (ಹಣದುಬ್ಬರ) ಪರಿಗಣನೆಯ ಲೆಕ್ಕಾಚಾರದಲ್ಲಿ ಸರ್ಕಾರದ ಖರ್ಚುಗಳು ಕಡಿಮೆಯಾಗಿರುತ್ತವೆ. ಮುಂಬರುವ ವರ್ಷದ ಸರ್ಕಾರಿ ವೆಚ್ಚಗಳಲ್ಲಿ ಯಾವ ಯಾವ ಹೊಸ ಖರ್ಚುಗಳು ಸೇರ್ಪಡೆಯಾಗುತ್ತವೆ ಎಂಬುದು ಕೊರೊನಾ ಪೀಡಿತ ವರ್ಷಕ್ಕಿಂತ ಭಿನ್ನವಾಗಿರಬಹುದು. ಆದರೆ, ಸ್ಥೂಲ-ಆರ್ಥಿಕ ಪರಿಭಾಷೆಯಲ್ಲಿ, ಅಂದರೆ, ಅರ್ಥವ್ಯವಸ್ಥೆಯ ಬೇಡಿಕೆ ಪಾರ್ಶ್ವದ ಒಂದು ಮಹತ್ವದ ಅಂಶವಾಗಿರುವ ಸರ್ಕಾರಿ ವೆಚ್ಚಗಳು ಕೊರೊನಾ ಪೀಡಿತ ವರ್ಷದ ಖರ್ಚುಗಳಿಗೆ ಹೋಲಿಸಿದರೆ, 2021-22ರ ಸಾಲಿನಲ್ಲಿ ಕಡಿಮೆಯೇ ಇರುತ್ತವೆ. 

ಬಹಳ ಧಾರಾಳವಾಗಿ ಹೇಳುವುದಾದರೆ, ಬಳಕೆಯು(ಬ), ಹೆಚ್ಚೆಂದರೆ, ಜಿಡಿಪಿಯು ಬೆಳೆದ ಪ್ರಮಾಣದಷ್ಟೇ ಹೆಚ್ಚಬಹುದು. ಸ್ವಲ್ಪ ಕಠೋರವಾಗಿ ಹೇಳುವುದಾದರೆ, ಮುಂಬರುವ ವರ್ಷದಲ್ಲಿ, ಬಳಕೆಯು ಅಷ್ಟು ಮಟ್ಟಿಗೂ ಹೆಚ್ಚುವ ಸಂಭವವಿಲ್ಲ. ಬಳಕೆಯ ಬೆಳವಣಿಗೆಯು ಜಿಡಿಪಿಯ ಬೆಳವಣಿಗೆಗಿಂತ ಕಡಿಮೆ ಇರಲಿದೆ ಎಂದು ಹೇಳಲು ಕಾರಣಗಳಿವೆ. ಹೀಗಾಗಲು ಕಾರಣವೇನೆಂದರೆ, ಬಹಳ ಮಂದಿ ದುಡಿಯುವ ಜನರು ತಮ್ಮ ಉಪಭೋಗದ ಮಟ್ಟವನ್ನು (ಜೀವನ ಮಟ್ಟವನ್ನು) ಕಾಪಾಡಿಕೊಳ್ಳುವ ಸಲುವಾಗಿ ಸಾಲ ಮಾಡಿದ್ದರು. ಇದ್ದಕ್ಕಿದ್ದಂತೆಯೇ ಘೋಷಣೆ ಮಾಡಿದ ಲಾಕ್‌ಡೌನ್ ಕಾರಣದಿಂದಾಗಿ, ದುಡಿಯುವ ಜನರ ಆದಾಯದ ಮೂಲವೇ ಹಠಾತ್ತಾಗಿ ಬಂದ್ ಆಯಿತು ಮತ್ತು ವರಮಾನಗಳು ಹಠಾತ್ತಾಗಿ ನಿಂತು ಹೋದವು. ಈಗ ದುಡಿಯುವ ಜನರಿಗೆ ಹೆಚ್ಚು ಆದಾಯ ಬರುತ್ತಿದ್ದರೂ ಸಹ, ಹಳೆಯ ಸಾಲವನ್ನು ತೀರಿಸಬೇಕಾದ ಅನಿವಾರ್ಯ ಕಾರಣದಿಂದ, ಅವರು ಖರ್ಚು ಮಾಡುವಾಗ ಕೈ ಬಿಗಿಹಿಡಿಯುತ್ತಾರೆ. ಆದ್ದರಿಂದ, ಜಿಡಿಪಿಯ ಪ್ರತಿ 1ಶೇ. ಹೆಚ್ಚಳದೊಂದಿಗೆ ಬಳಕೆಯ ಶೇಕಡಾವಾರು ಹೆಚ್ಚಳದ ಪ್ರಮಾಣವು 1ಶೇ.ಕ್ಕಿಂತ ಕಡಿಮೆಯೇ ಆಗಲಿದೆ. ಅಂದರೆ, ನೈಜ ಅರ್ಥದಲ್ಲಿ, ಜಿಡಿಪಿಯು ಭಾವಿಸಿಕೊಂಡ ರೀತಿಯಲ್ಲೇ 10.5% ವೃದ್ಧಿಸಿದರೂ ಸಹ, ಬಳಕೆಯ ಹೆಚ್ಚಳವು 10.5%ಗಿಂತಲೂ ಕಡಿಮೆಯೇ ಇರಲಿದೆ. 

ಇನ್ನು ಉಳಿದದ್ದು ಹೂಡಿಕೆ. ಖಾಸಗಿ ವಲಯದ ಹೂಡಿಕೆ ಮತ್ತು ಬಜೆಟ್ ಹೊರಗಿನ ಸಾರ್ವಜನಿಕ ವಲಯದ ಉದ್ಯಮಗಳು ಮಾಡುವ ಹೂಡಿಕೆಗಳ ಬಗ್ಗೆ ಗಮನ ಹರಿಸೋಣ. ಸಾಂಕ್ರಾಮಿಕದ ಅವಧಿಯಲ್ಲಿ (ವರ್ಷದಲ್ಲಿ) ಹಠಾತ್ತನೆ ಸ್ಥಗಿತಗೊಳಿಸಬೇಕಾಗಿ ಬಂದ ಅನೇಕ ಯೋಜನೆಗಳ ಕಾಮಗಾರಿಗಳು ಲಾಕ್‌ಡೌನ್ ತೆರವಿನ ನಂತರ ಅರ್ಧಂಬರ್ಧಗೊಂಡಿದ್ದ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಹೂಡಿಕೆ ಬಾಬ್ತು ವೆಚ್ಚಗಳು ಆತುರಾತುರವಾಗಿ ಹೆಚ್ಚಿದವು. 2021-22 ಹಣಕಾಸು ವರ್ಷದಲ್ಲಿ ಕೈಗೊಳ್ಳಬಹುದಾದ ಹೂಡಿಕೆಯ ವೆಚ್ಚಗಳು ಕಳೆದ/ಹಿಂದಿನ ವರ್ಷ ತೆಗೆದುಕೊಂಡ  ಹೂಡಿಕೆಯ ನಿರ್ಧಾರಗಳ ಮೇಲೆ ನಿಂತಿರುತ್ತವೆ. ಅಂದರೆ, ಅಪೂರ್ಣ ಯೋಜನೆಗಳ ಬಾಬ್ತು ವೆಚ್ಚಗಳನ್ನು ಬದಿಗೆ ತೆಗೆದಿಟ್ಟು, ಉಳಿದ ಹಣ ಎಷ್ಟು ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ. ಆದರೆ, ಕಳೆದ ವರ್ಷವು ಕೊರೊನಾ ಪೀಡಿತ ವರ್ಷವಾಗಿತ್ತು. ಹಾಗಾಗಿ, ಉತ್ಪತ್ತಿಯು ಕುಗ್ಗಿತ್ತು. ಆ ಪರಿಸ್ಥಿತಿಯಿಂದ ಹೊರಬಂದು ಮುಂದಕ್ಕೆ ನೋಡುವುದಾದರೆ, ಮುಂದಿನ ವರ್ಷ, ಅಂದರೆ 2021-22ರಲ್ಲಿ, ಕೊರೊನಾ-ಪೂರ್ವದ ಉತ್ಪಾದನೆಯ ಮಟ್ಟ ತಲುಪುವುದೇ ಗುರಿಯಾಗಿತ್ತು. ಆ ಮಟ್ಟದ ಉತ್ಪಾದನಾ ಸಾಮರ್ಥ್ಯವು ಈಗಾಗಲೇ ದೇಶದಲ್ಲಿದೆ. ಹೊಸ ಹೂಡಿಕೆಯನ್ನು ಕೈಗೊಳ್ಳುವ ನಿರ್ಧಾರವು 2020-21 ವರ್ಷದಲ್ಲೇ ಕುಂಠಿತಗೊಂಡಿತ್ತು. ಆದ್ದರಿಂದ, 2021-22ರ ಆದಾಯ ಮತ್ತು ಹೂಡಿಕೆಯ ಅನುಪಾತವು 2020-21ರಲ್ಲಿ ಇದ್ದುದಕ್ಕಿಂತ ಕಡಿಮೆಯೇ ಆಗುತ್ತದೆ. 

ನಾವು ನಿಖರವಾಗಿ ಅಂದಾಜು ಮಾಡಲು ಸಾಧ್ಯವಾಗದಂತಹ ಭವಿಷ್ಯದ ರಫ್ತಗಳನ್ನು ಬದಿಗಿಟ್ಟು ನೋಡಿದರೆ, ಜಿಡಿಪಿಯು ಒಟ್ಟಾರೆಯಾಗಿ ಶೇ.10.5ರಷ್ಟು ಏರಿಕೆಯಾದರೂ ಸಹ, ಅದರ ಪ್ರತಿಯೊಂದು ಅಂಗಾಂಶದ ಏರಿಕೆಯು ಶೇ.10.5ಕ್ಕಿಂತ ಕಡಿಮೆ ಇರುತ್ತದೆ ಎಂಬುದನ್ನು ಗ್ರಹಿಸಬಹುದು. ಅಂದರೆ, ಜಿಡಿಪಿಯು ವಾಸ್ತವವಾಗಿ ಶೇ. 10.5ರಷ್ಟು ಏರಿಕೆಯಾದರೂ ಸಹ, ಅಷ್ಟು ಬೃಹತ್ ಪ್ರಮಾಣದ ಉತ್ಪಾದನೆಯನ್ನು ಕೊಳ್ಳಲು ಸಾಕಾಗುವಷ್ಟು ಬೇಡಿಕೆಯೂ ಅರ್ಥವ್ಯವಸ್ಥೆಯಲ್ಲಿಲ್ಲ. ಇದರ ಅರ್ಥವೇನೆಂದರೆ, ಉತ್ಪಾದನೆಯ ಪ್ರಮಾಣವು ದೊಡ್ಡದಿರುವುದಿಲ್ಲ.

ಇಂತಿಷ್ಟು ಆಗಲೇಬೇಕು ಎಂದು ಭಾವಿಸಿಕೊಂಡಿದ್ದ ಮಟ್ಟಕ್ಕಿಂತ ಕೆಳಗಿನ ಉತ್ಪಾದನೆಯು, ಜನರ ಬಳಕೆಯ ಮಟ್ಟ ಇಳಿದಿದೆ ಎಂಬುದನ್ನು ತಿಳಿಸುತ್ತದೆ. ಜೊತೆಗೆ, ಬೆಳವಣಿಗೆ ದರದ ಆರಂಭಿಕ ಇಳಿಕೆಯು ಗುಣಕದ ಪರಿಣಾಮವನ್ನು ಹೊಂದಿರುತ್ತದೆ.

ಇಂತಹ ಸನ್ನಿವೇಶದಲ್ಲಿ, ಭಾರತದ ಅರ್ಥವ್ಯವಸ್ಥೆಯಲ್ಲಿ V-ಆಕಾರದ ಚೇತರಿಕೆ ಸಂಭವಿಸುತ್ತದೆ ಎಂದು ನಂಬಲು ಕಾರಣಗಳೇ ಇಲ್ಲ. ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುವಂತಹ ಅವಕಾಶಗಳನ್ನು ಬಜೆಟ್ ಕಲ್ಪಿಸಲಿಲ್ಲ. ಶೇ.10.5ರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಬೇಕಾದರೆ, ಸರ್ಕಾರದ ಖರ್ಚು-ವೆಚ್ಚಗಳನ್ನು ಕೊನೆಯ ಪಕ್ಷ ಶೇ.10.5ರಷ್ಟನ್ನಾದರೂ ಏರಿಸಲೇಬೇಕಾಗುತ್ತಿತ್ತು. ಆದರೆ, ಬಜೆಟ್‌ನಲ್ಲಿ ಸರ್ಕಾರದ ಖರ್ಚು-ವೆಚ್ಚಗಳ ಹೆಚ್ಚಳದ ಮಾತೇ ಇಲ್ಲ. ಪ್ರತಿಯಾಗಿ, ಬಜೆಟ್ ಸರ್ಕಾರದ ಒಟ್ಟು ಖರ್ಚು-ವೆಚ್ಚಗಳನ್ನು ನೈಜ ಅರ್ಥದಲ್ಲಿ ಕುಗ್ಗಿಸಿದೆ.

ಇಷ್ಟೇ ಅಲ್ಲದೆ, ಗಮನಿಸಲೇಬೇಕಾದ ಇನ್ನೂ ಒಂದು ಅಂಶವಿದೆ. ವಿತ್ತೀಯ ಕೊರತೆಯ ಪ್ರಮಾಣವನ್ನು 2020-21 ಸಾಲಿನಲ್ಲಿದ್ದ ಶೇ.9.5ರಿಂದ 2021-22 ಸಾಲಿನಲ್ಲಿ ಶೇ.6.8ಕ್ಕೆ ಇಳಿಸಲಾಗಿದೆ. ಇದೊಂದು ಚಮತ್ಕಾರವೇ. ಏಕೆಂದರೆ, ಸರಕಾರಿ ವೆಚ್ಚಗಳಲ್ಲಿ ಯಾವುದೇ ಹೆಚ್ಚಳ/ಬದಲಾವಣೆ ಇಲ್ಲದಿದ್ದರೂ, ಜಿಡಿಪಿಯು ಶೇ.10.5ರಷ್ಟು ಹೆಚ್ಚಳವಾಗುವ ನಿರೀಕ್ಷೆ ಮೇಲೆ ತೆರಿಗೆ ಆದಾಯವೂ ಹೆಚ್ಚುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಒಂದು ವೇಳೆ ಜಿಡಿಪಿಯ ಬೆಳವಣಿಗೆಯು ಬಜೆಟ್‌ನಲ್ಲಿ ಅಂದಾಜು ಮಾಡಿದ್ದಕ್ಕಿಂತಲೂ ಕಡಿಮೆಯಾದರೆ, ಆಗ, ಬಜೆಟ್‌ನಲ್ಲಿ ಹೇಳಿದ್ದಷ್ಟೂ ವೆಚ್ಚಗಳನ್ನು ಮಾಡಲಾಗಿದೆ ಎಂದುಕೊಂಡರೂ ಸಹ, ವಿತ್ತೀಯ ಕೊರತೆಯ ಗಾತ್ರವು ಬಜೆಟ್‌ನಲ್ಲಿ ತೋರಿಸಿದ್ದಕ್ಕಿಂತಲೂ ದೊಡ್ಡದಾಗಿರುತ್ತದೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಸರ್ಕಾರವು ತನ್ನ ವೆಚ್ಚಗಳನ್ನು ಕಡಿತಗೊಳಿಸಿದರೆ, ಜಿಡಿಪಿಯ ಬೆಳವಣಿಗೆಯ ದರವು ಇನ್ನೂ ಕೆಳಗಿಳಿಯಲಿದೆ.

ಈ ಎಲ್ಲ ಅಂಶಗಳಿಂದ ತಿಳಿದುಬರುವುದು ಏನೆಂದರೆ, ಈ ಬಜೆಟ್ ಭಾರತದ ಅರ್ಥವ್ಯವಸ್ಥೆಯ ಚೇತರಿಕೆಗೆ ಒಂದು ಸಾಧನವಾಗುವುದಿಲ್ಲ. ಕಳೆದ ಹಲವು ವರ್ಷಗಳಿಂದ ಭಾರತದ ಅರ್ಥವ್ಯವಸ್ಥೆಯನ್ನು ಬಾಧಿಸುತ್ತಿರುವ ನಿರುದ್ಯೋಗವು, ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕದ ವರ್ಷದಲ್ಲಿ ತೀವ್ರವಾಗಿ ಬಾಧಿಸಿದ ನಿರುದ್ಯೋಗವು ಒಂದು ತೀವ್ರ ಸಮಸ್ಯೆಯಾಗಿಯೇ ಮುಂದುವರೆಯುತ್ತದೆ. ಬಜೆಟ್ ಹೊಂದಿರುವ ದೃಷ್ಟಿಯ ಪ್ರಕಾರವಾಗಿ ಅರ್ಥವ್ಯವಸ್ಥೆಯು ಚೇತರಿಸಿಕೊಂಡರೂ ಸಹ, ನಿರುದ್ಯೋಗ ಸಮಸ್ಯೆಯು ಇನ್ನೂ ತೀವ್ರವಾಗಿಯೇ ಇರುತ್ತದೆ. ಏಕೆಂದರೆ, ಬೇರೆ ಬೇರೆ ವಲಯಗಳಲ್ಲಿ ಕಾಣುವ ಬೆಳವಣಿಗೆಯು ಕಿರು ಉತ್ಪಾದನಾ ವಲಯಗಳಲ್ಲಿ ಇರುವುದೇ ಇಲ್ಲ. ಏಕೆಂದರೆ, ಕೊರೊನಾ ಸಂಬಂಧಿತ ಲಾಕ್‌ಡೌನ್ ಕಾರಣದಿಂದಾಗಿ ಈ ವಲಯವು ನೆಲಸಮವಾಯಿತು. ಅದಕ್ಕೂ ಮೊದಲೇ ಮೋದಿ ಸರಕಾರವು ಜಾರಿಗೆ ತಂದ ನೋಟು ರದ್ದತಿಯ ಕಾರಣದಿಂದ ಈ ವಲಯವು ನೆಲ ಕಚ್ಚಿತ್ತು. ಲಾಕ್‌ಡೌನ್, ಈ ವಲಯವನ್ನು ನಾಶಪಡಿಸಿತು. ಹಾಗಾಗಿ, ಈ ವಲಯವು ಚೇತರಿಕೆಯ ಮಾರ್ಗವಾಗಿ ದೊರೆಯುವ ಲಾಭವನ್ನು ಪಡೆಯಲಾಗದ ಸ್ಥಿತಿಯಲ್ಲಿದೆ. ಈ ವಲಯದಲ್ಲಿ ಬೇರೆ ಬೇರೆ ವಲಯಗಳಿಗಿಂತ ಹೆಚ್ಚು ಉದ್ಯೋಗಗಳು ಇರುವುದರಿಂದ, ಮತ್ತು ಈ ವಲಯವು ಕಾರ್ಯಪ್ರವೃತ್ತವಾಗಲು ಸಾಧ್ಯವಾಗದ ಕಾರಣದಿಂದ, ಮತ್ತು, ಚೇತರಿಕೆಯ ಇಡೀ ಪ್ರಕ್ರಿಯಯೇ ಕುಂಠಿತವಾಗಿ ಸಾಗುತ್ತಿರುವುದರಿಂದ, ನಿರುದ್ಯೋಗವು ಒಂದು ತೀವ್ರ ಸಮಸ್ಯೆಯಾಗಿಯೇ ಮುಂದುವರೆಯುತ್ತಿದೆ.

ಇದೊಂದು ಸಂಪ್ರದಾಶರಣ ಬಜೆಟ್. ದೇಶದ ಅಗತ್ಯ ಏನಿತ್ತೋ ಅದಕ್ಕೆ ವಿರುದ್ಧವಾಗಿದೆ, ಈ ಬಜೆಟ್. ಆದರೂ ಸಹ, ಈ ಬಜೆಟ್ ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಮಾಡುತ್ತದೆ ಎಂದು ಅನೇಕರು ಹೇಳುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಬಜೆಟ್ ಭಾಷಣವನ್ನು ಹೊಗಳುವ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಚಿಮ್ಮುವ ವಾಕ್ಚಾತುರ್ಯದ ಮಿಂಚಿನಲ್ಲಿ ಮತ್ತು ಶಬ್ದಗಳ ದುರ್ನಾತದಲ್ಲಿ ಒಟ್ಟಾರೆ ಅರ್ಥವ್ಯವಸ್ಥೆಯ ಚಿತ್ರಣವೇ ಕಾಣೆಯಾಗುತ್ತದೆ.

ಅನು: ಕೆ.ಎಂ.ನಾಗರಾಜ್