RSS

Category Archives: ಈ ವಾರ

ಮಹದಾಯಿ: ದೆಹಲಿಗೆ ಹೋಗಿ ಬಂದ ನಿಯೋಗ ಸಂಕುಚಿತ ರಾಜಕೀಯ ಲಾಭವೇ ಇಲ್ಲಿನ ಕಾಳಜಿ!

ಈ ವಾರ – ಎಸ್. ವೈ.ಗುರುಶಾಂತ್

ಸಂಪುಟ 9 ಸಂಚಿಕೆ 36, 6 ಸೆಪ್ಟಂಬರ್ 2015

ಮಹದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಿಸುವ ಮತ್ತು ಕಳಸ-ಬಂಡೂರಿ ನಾಲಾ ಯೋಜನೆ ಮುಂದುವರಿಕೆ ಮತ್ತು ನೀರು ಒದಗಿಸಲು ಆಗ್ರಹಿಸಿ ಬಾಂಬೆ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆದಿರುವ ಜನರ ಚಳುವಳಿ ಮತ್ತಷ್ಟು ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕವೂ ಒಳಗೊಂಡು, ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮುಖ್ಯ ಮಂತ್ರಿಗಳ ಸಭೆಯೊಂದನ್ನು ಕರೆದು ಒಮ್ಮತದ ತೀರ್ಮಾನಕ್ಕೆ ಬರಲು ಮುತುವರ್ಜಿ ವಹಿಸಬೇಕೆಂದು ಕೋರಿ ರಾಜ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗವು ಆಗಸ್ಟ್ 24ರಂದು ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿತು. ಏನಾದರೊಂದು ಪರಿಹಾರದ ಸಾಧ್ಯತೆಯನ್ನು ನಿರೀಕ್ಷಿಸಿದ್ದ ಚಳುವಳಿ ನಿರತ ಜನತೆಗೆ ಪ್ರಧಾನಿಗಳ ಒಣ ಉಪದೇಶದ ಪ್ರತಿಕ್ರಿಯೆಯಿಂದ ತೀವ್ರ ನಿರಾಶೆ ಉಂಟಾದುದು, ಚಳುವಳಿ ತೀವ್ರ ಸ್ವರೂಪ ಪಡೆದುಕೊಳ್ಳಲು ಒಂದು ಬಹು ಮುಖ್ಯ ಕಾರಣ. ಆದ್ದರಿಂದಲೇ, ನರಗುಂದ, ನವಲಗುಂದ ಒಳಗೊಂಡು, ಸುತ್ತಲಿನ ಪ್ರದೇಶಗಳಲ್ಲಿ ರಸ್ತೆ ತಡೆ, ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ ನಡೆದವಲ್ಲದೆ, ಬಿ.ಜೆ.ಪಿ. ಯ ಮುಖಂಡರಾದ ಸಂಸದ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರವರ ಮನೆಗಳಿಗೆ ದಿಗ್ಬಂಧನ ಹಾಕಿ ಪ್ರತಿಭಟಿಸುವಂತಾಯ್ತು. ಈ ಭಾಗದ ಸಂಸದರು, ಶಾಸಕರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಗುತ್ತಿದೆ. ಕೆಲ ಮಠಾಧೀಶರಿಗೂ ಘೇರಾವೋ ಮಾಡಲಾಗಿದೆ.

ಹಾಗೆ ನೋಡಿದರೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಜವಾಬ್ದಾರಿಯುತವಾದ ಸ್ಥಾನಕ್ಕನುಗುಣವಾಗಿ ನಡೆದುಕೊಳ್ಳದೇ ಕೇವಲ ಬಿ.ಜೆ.ಪಿ. ಪಕ್ಷದ ಮುಖಂಡರಂತೆ ವರ್ತಿಸಿದರು. ಮಾತ್ರವಲ್ಲ, ಈ ನೀರಿನ ಹಂಚಿಕೆಯ ವಿದ್ಯಮಾನದಲ್ಲಿ ಸಂಕುಚಿತ ರಾಜಕೀಯ ಲಾಭದ ದೃಷ್ಟಿಯಲ್ಲಿಯೇ ವ್ಯವಹರಿಸಿದರು. ಅವರು ಈ ಪ್ರಶ್ನೆ ನ್ಯಾಯಾಧಿಕರಣದ ಮುಂದಿರುವಾಗಲೂ ಅದರ ಹೊರಗೆ ಉಭಯ ರಾಜ್ಯ ಸರ್ಕಾರಗಳ ನಡುವೆ ಒಂದು ಸಮ್ಮತಿಯ ಸಮನ್ವಯ ಸೂತ್ರವನ್ನ ರೂಪಿಸಬಹುದಾಗಿತ್ತು. ಉಳಿದ ಎರಡು ರಾಜ್ಯಗಳಲ್ಲಿ ಬಿ.ಜೆ.ಪಿ.ಯದ್ದೇ ಸರ್ಕಾರಗಳಿವೆ. ಇಂತಹ ಉತ್ತಮ ಸನ್ನಿವೇಶದಲ್ಲಿ ಒಂದು ಮಹತ್ವದ ಸಂಧಾನ ಸಾಧ್ಯತೆ ಯನ್ನ ಮೋದಿಯವರು ಸಾಧಿಸಿದ್ದರೆ, ಸಮಸ್ಯೆಯ ಪರಿಹಾರಕ್ಕೆ ಸಕಾರತ್ಮಕತೆ ಲಭಿಸುತ್ತಿತ್ತು. ಇದು ಕಳಸ-ಬಂಡೂರಿ ನಾಲಾ ಯೋಜನೆಯಲ್ಲಿನ ಕುಡಿಯುವ ನೀರಿನ ಪ್ರಶ್ನೆಗಷ್ಟೆ ಸೀಮಿತವಾಗಿದ್ದರೂ, ಉಭಯ ರಾಜ್ಯಗಳ ನಡುವಿನಲ್ಲಿ ಬೆಳೆಯುವ ಪಾರಸ್ಪರಿಕ ಸಂಬಂಧ, ಕಡು ಸಂಘರ್ಷದ ವಾತಾವರಣವನ್ನು ತಿಳಿಗೊಳಿಸುವ ಸಾಧ್ಯತೆ ಇತ್ತು. ಆದರೆ, ಪ್ರಧಾನಿಗಳು ಇದರ ಪರಿವೆಯೇ ಇಲ್ಲದವರಂತೆ ನಡೆದುಕೊಂಡರು. ಅವರು ತಾವು ವಹಿಸುವ ಮುತುವರ್ಜಿಗೆ ಪ್ರಾಧಾನ್ಯತೆ ನೀಡದೆ ಕಾಂಗ್ರೆಸ್ ಪಕ್ಷದ ನಡೆಯನ್ನ ಬಹಿರಂಗಗೊಳಿಸುವ ರಾಜಕೀಯ ತಂತ್ರದತ್ತಲೇ ತಮ್ಮ ಇರಾದೆ ತೋರಿದರು. ಅವರೇ ಹೇಳಿದಂತೆ ’ಮುಖ್ಯಮಂತ್ರಿಗಳ ಸಭೆಗಳನ್ನು ಹಲವು ಬಾರಿ ಕರೆಯಲಾಗಿದೆ, ಆದರೆ ಸಹಮತ ಮೂಡಿಲ್ಲ. ಅದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ನಾಯಕರು ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಲಿ, ಅವರಿಗೆ ಮನವರಿಕೆ ಮಾಡಿ ಕೊಟ್ಟರೆ ಮು.ಮಂ.ಗಳ ಸಭೆ ಕರೆಯಲು ಯಾವುದೇ ಅಭ್ಯಂತರವಿಲ’. ಇಲ್ಲಿ ಪ್ರಧಾನಿಯವರ ಮಧ್ಯಸ್ಥಿಕೆ ಬಯಸಿ ಹೋದ ಸರ್ವ ಪಕ್ಷಗಳು, ಮಠಾಧೀಶರು ಮತ್ತು ರೈತ ಮುಖಂಡರುಗಳ ಹೆಗಲಿಗೆ ಹೆಣ ಹೊರಿಸಿ ಮೋದಿ ಸಾಗು ಹಾಕಿದ್ದು ಜನರಲ್ಲಿ ಆಕ್ರೋಶ ಹುಟ್ಟಿಸಿದೆ. ಸಮಸ್ಯೆ ಇತ್ಯರ್ಥ ಕಾಣದಿರುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂಬ ಗುರಿಯತ್ತಲೇ  ದೃಷ್ಟಿ ಇಟ್ಟಂತಿದೆ.

ರಾಜ್ಯದ ನಿಯೋಗವೊಂದು ಕೇಂದ್ರದ ಮುಂದೆ ಹೀಗೆ ಬಂದಿರುವುದು ಉಭಯತ್ರರಲ್ಲಿ ಸಹಮತ ರೂಪಿಸಲು ಸದಾವಕಾಶ ಎಂದು ಬಯಸದೆ ಕಾಂಗ್ರೆಸಿನ ರಾಜಕೀಯ ತಂತ್ತವೆಂದಷ್ಟೆ ಮೋದಿಯವರು ತಿಳಿದದ್ದು ತೀರಾ ಸಂಕುಚಿತ ರಾಜಕೀಯ. ಹಿಂದೆಲ್ಲ ಅಂತರ ರಾಜ್ಯ ನದಿ ನೀರಿನ ಹಂಚಿಕೆಯ ಪ್ರಕರಣಗಳಲ್ಲಿ ಸಂಕುಚಿತ ರಾಜಕೀಯ ಹಿತಗಳೆ ವಿವಾದದ ಇತ್ಯರ್ಥವನ್ನು ಗೋಜಲುಗೊಳಿಸಿರುವುದು ಸುಳ್ಳೇನಲ್ಲ. ಆದರೆ, ಭಾರತದ ಒಕ್ಕೂಟ ವ್ಯವಸ್ಥೆಯೊಳಗಿನ ರಾಜ್ಯಗಳ ನಡುವೆ ಕೇಂದ್ರದ ಮುತುವರ್ಜಿಯು ಸಮಾಧಾನಕರ ಮನೋಸ್ಥಿತಿಯನ್ನು ರೂಪಿಸುವಲ್ಲಿ ಸಹಕಾರಿಯೂ ಆಗಿದೆ. ಹಿಂದೆ ಚೆನ್ನೈನ ಕುಡಿಯುವ ನೀರಿನ ಪ್ರಶ್ನೆ ಬಂದಾಗಲೂ, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಮಧ್ಯಸ್ಥಿಕೆಯು ಪರಿಹಾರವನ್ನು ನೀಡಿತ್ತು. ಈಗಲೂ ಮೋದಿಯವರು ಸಂಕಷ್ಟದಲ್ಲಿರುವ ಕರ್ನಾಟಕದ ಜನತೆಯ ಬವಣೆಗಳನ್ನ ಗಮನದಲ್ಲಿರಿಸಿ ಕೇಂದ್ರದ ಉನ್ನತ ಸ್ಥಾನದ ಪ್ರತೀಕವಾಗಬಹುದಿತ್ತು. ಅವರಿಗೆ ಇದಕ್ಕಿಂತ ಕಾಂಗ್ರೆಸಿಗೆ ತಿರುಗೇಟು ನೀಡುವುದೇ ಪ್ರಾಶಸ್ತ್ಯವೆನಿಸಿದ್ದು ಸ್ಥಾನದ ಘನತೆಯನ್ನ ಕುಬ್ಜಗೊಳಿಸಿತು. ಹೀಗಾಗಿಯೇ ಜನತೆಯ ಆಕ್ರೋಶ ಕೇಂದ್ರದ ಮೋದಿ ಮತ್ತು ಅವರ ಮನವೊಲಿಕೆ ಮಾಡದೆ, ಜೊತೆಗಿದ್ದೂ ಜೊತೆಗೂಡದ ನಿರಾಸಕ್ತರಾಗಿ, ನಕಾರಾತ್ಮಕ ಪಾತ್ರ ವಹಿಸಿದ ರಾಜ್ಯ ಬಿ.ಜೆ.ಪಿ. ನಾಯಕರ ವಿರುದ್ಧ ತಿರುಗಿದ್ದು ಗಮನಾರ್ಹ.

ಇಲ್ಲಿ ಮತ್ತೊಂದು ಸಂಗತಿಯನ್ನು ಅವಲೋಕಿಸುವುದು ಅಗತ್ಯವಿದೆ. ಜನ ಚಳುವಳಿಯ  ಈ ಹಂತದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ನಿಯೋಗ ಒಯ್ದದ್ದು ಸ್ವಾಗತಾರ್ಹ, ಆದರೆ ಕಾಂಗ್ರೆಸ್ ಪಕ್ಷಕ್ಕೂ ಸಹ ಈ ಸಮಸ್ಯೆಯ ಇತ್ಯರ್ಥದ ಬಗ್ಗೆ ನಿಜಕ್ಕೂ ಕಾಳಜಿ ಇದೆಯೇ ಎಂದು ಪರಿಶೀಲಿಸಿದರೆ, ಅದು ಕೇವಲ ತೋರಿಕೆಯದ್ದಾಗಿ ಕಂಡು ಬರುತ್ತದೆ. ದೆಹಲಿಯಿಂದ ವಾಪಾಸಾದ ಬಳಿಕ ರಾಜ್ಯ ಸರಕಾರದ ಮುಂದಿನ ಕ್ರಮವೇನು ಎಂಬುದು ಸ್ಪಷ್ಟವೇ ಆಗಿಲ್ಲ. ಕಳಸ-ಬಂಡೂರಿ ನಾಲಾ ಪ್ರಶ್ನೆಯ ಬಗ್ಗೆ ಮಧ್ಯಂತರ ಪರಿಹಾರ ಆದೇಶವನ್ನು ಕೋರಿ ನ್ಯಾಯಾಧಿಕರಣದ ಮುಂದೆ ಈ ಮೊದಲೇ ಅರ್ಜಿ ಹಾಕಬೇಕಿತ್ತು. ಆದರೆ ಎಳ್ಳಷ್ಟು ಮುತುವರ್ಜಿ ವಹಿಸಲಿಲ್ಲ. ಹಿಂದೆಯೂ ನೀರಿನ ಹಂಚಿಕೆಯ ವಿವಾದ ಉಲ್ಬಣಗೊಂಡಾಗ, ಇದೇ ಕಾಂಗ್ರೆಸಿನ ಕೇಂದ್ರ ನಾಯಕರು ಗೋವಾ ಚುನಾವಣೆಯ ಸಂದರ್ಭದಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಮತ ಸೆಳೆಯುವ ದೃಷ್ಟಿಯಲ್ಲೇ ಅತ್ಯಂತ ಸಂಕುಚಿತ ರಾಜಕೀಯ ಹಿತಾಸಕ್ತಿಯನ್ನೇ ಪ್ರತಿಪಾದಿಸಿದ್ದಾರೆ. ಈಗಲೂ ಜನ ಚಳುವಳಿಗೆ ಇಳಿದ ತಿಂಗಳಾದ ಬಳಿಕವೇ ಕೇಂದ್ರಕ್ಕೆ  ನಿಯೋಗದ ಬಗ್ಗೆ ಯೋಚಿಸಿದ್ದು. ಹೀಗೆ ಹೋಗುವಾಗಲೂ ಅಲ್ಲಿ ಬಿಜೆಪಿಯನ್ನು ಗುರಿಯಾಗಿಸುವ ತಂತ್ರವೂ ಇರದೇ ಇಲ್ಲ.

ಅಂತಿಮವಾಗಿ, ನ್ಯಾಯಾಧಿಕರಣದ ಮುಂದೆ ವಿವಾದ ಇತ್ಯರ್ಥವಾಗಬೇಕಿರುವುದು ಅನಿವಾರ್ಯ ಎಂಬುದು ನಿಜವಾದರೂ ಅದರ ಮುಂದೆ ವಾದ ಮಂಡಿಸಲು, ಈ ಪ್ರಕ್ರಿಯೆಯನ್ನೂ ತೀವ್ರಗೊಳಿಸಲು ಅಗತ್ಯ ಸಿದ್ಧತೆ, ಮುತುವರ್ಜಿ ಬೇಕು. ಕಾಂಗ್ರೆಸ್‌ನಲ್ಲಿ ಈ ಸಿದ್ಧತೆ ಕಾಣಿಸುತ್ತಿಲ್ಲ.

ಜನರ ಚಳುವಳಿ ಮುಂದುವರಿದಿದೆ. ಈ ರಾಜಕೀಯ ಪಕ್ಷಗಳು ಪರಸ್ಪರ ದೋಷಾರೋಪದಲ್ಲೇ ಮಗ್ನವಾಗಿವೆ ಮತ್ತು ತಮ್ಮ ಹುಸಿಕಾಳಜಿಯನ್ನು ತೋರಿಸುತ್ತಿವೆ. ಚಳುವಳಿಯ ನಾಯಕತ್ವವೂ ಸುಸಂಘಟಿತವಾಗಿಲ್ಲದ ಈ ಸಂದರ್ಭದಲ್ಲಿ ಹಲವು ಗೊಂದಲಗಳನ್ನೂ ಹುಟ್ಟು ಹಾಕಲಾಗುತ್ತಿದೆ. ಪಕ್ಷಾತೀತ ಎನ್ನುವ ಈ ಚಳುವಳಿಯನ್ನು ಒಡೆಯಲೂ ಕೆಲ ಪ್ರಯತ್ನಗಳು ನಡೆದಿವೆ. ಈಗೀಗ ಗೋವಾ ರಾಜ್ಯದ ಬಸ್‌ಗಳಿಗೆ ಕಲ್ಲು ತೂರಾಟ, ಬೆಂಕಿ ಹಚ್ಚುವ ಯತ್ನಗಳು ಉಭಯ ರಾಜ್ಯಗಳ ಜನತೆಯ ಒಗ್ಗಟ್ಟಿಗೆ, ಸಾಮರಸ್ಯಕ್ಕೆ ಭಂಗ ತರಲಿದ್ದು ಸಮಸ್ಯೆಯನ್ನು ಗೋಜಲಾಗಿಸುತ್ತದೆ. ಇದು ಸಲ್ಲದು. ವಿಷಯ ನ್ಯಾಯಾರೀಕರಣದ ಮುಂದೆ ಇರುವುದುರಿಂದ ಇಂತಹ ಎಲ್ಲಾ ನಡೆಗಳು ಹಾನಿಯನ್ನು ತರಬಲ್ಲುದು ಎಂಬ ಎಚ್ಚರ ಇರಬೇಕು. ಈಗಲೂ ಪ್ರಕಟಿಸಿದಂತೆ ಚಳುವಳಿಯನ್ನು ಜನರ ನಡುವೆ ವಿಸ್ತರಿಸಲು ಮತ್ತು ದೆಹಲಿಯತ್ತ ಕೊಂಡೊಯ್ಯಲು ಪ್ರಯತ್ನಿಸಬಹುದು.

 
 

Tags: , ,

ಮಹದಾಯಿ-ಕಳಸಾ-ಬಂಡೂರಿ: ಜನತೆಯ ಹಿತವೋ-ಸಂಕುಚಿತ ರಾಜಕೀಯವೋ?

 

ಎಸ್.ವೈ. ಗುರುಶಾಂತ್ – ಈ ವಾರ

ಸಂಪುಟ 9 ಸಂಚಿಕೆ 35 – 30 ಆಗಸ್ಟ್ 2015

ಸುತ್ತಮುತ್ತಲೂ ಕಣ್ಣು ಹಾಯಿಸಿದರೆ ಬೀಜ ಬಿತ್ತಲೆಂದು ಉತ್ತು ಹಸನು ಮಾಡಿದ ಹೊಲಗಳ ಸಾಲು. ಆದರೆ ಮುಂಗಾರು ಸರಿದು ಹೋದರೂ ಕೂರಿಗೆ ಹೂಡಲಿಲ್ಲ, ಹಿಡಿಯಲ್ಲಿನ ಬೀಜ ಭುವಿಯ ಒಡಲಿಗೆ ಸೇರಲಿಲ್ಲ.

’ಯಾತಕೆ ಮಳೆ ಹೋದವೋ

ಶಿವ, ಶಿವಾ

ಲೋಕ ತಲ್ಲಣಿಸ್ಯಾದೋ’ ಎಂಬ ಅರ್ತನಾದ ಮಣ್ಣಿನ ಮಕ್ಕಳ ಕೊರಳಲ್ಲಿ. ಬದುಕುವ ಸಂಕಟದಲ್ಲಿ ಒದ್ದಾಡುವ ’ನರಿಯ ಕೂಗು ಗಿರಿಗೆ ಮುಟ್ಟೀತೆ’ ಎಂಬ ಸ್ಥಿತಿ ಅವರೆಲ್ಲರದು.

ಸರಕಾರವೇನೋ ಇದೀಗ ಕರ್ನಾಟಕದ 114 ತಾಲೂಕುಗಳು ಬರಗಾಲ ಪೀಡಿತವೆಂದು ಘೋಷಿಸಿದೆ. ಕಾಲ ಸರಿದಂತೆ ಅದಕ್ಕೆ ಇನ್ನಷ್ಟೂ ಸಂಖ್ಯೆ ಸೇರಬಹುದು. ಬರದಿಂದಾಗಿ ಮೈಸೂರು ದಸರಾ ಹಬ್ಬದ ಆಚರಣೆಯನ್ನು ಸಾಂಕೇತಿಕರಿಸಿದೆ, ಶಾಸಕರು-ಸಚಿವರ ಅನವಶ್ಯಕ ಪ್ರವಾಸ ವೆಚ್ಚಗಳಿಗೆ ಕಡಿತವನ್ನೂ ಸೂಚಿಸಿದೆ. ಸಾಹಿತ್ಯ ಸಮ್ಮೇಳನವೂ ಮುಂದೂಡಲ್ಪಟ್ಟಿದೆ. ಇಷ್ಟೆಲ್ಲಾ ಆದರೂ ರೈತರ ಬವಣೆ ತಪ್ಪಿಸಲಾಗಿಲ್ಲ. ಉರುಳಿಗೆ ಕೊರಳೊಡ್ಡುವ ಹತ್ಯೆಯ ಸರಣಿ ನಿಂತಿಲ್ಲ. ಇದಕ್ಕಿರುವ ಕಾರಣಗಳೇ ಬೇರೆ, ಆಳುವವರು ತೋರುವ ಕಾಳಜಿಗಳೇ ಬೇರೆ!

ಚಳುವಳಿಯ ಕಾವು

ಇಂತಹ ಹತಾಶ ಸ್ಥಿತಿಯಲ್ಲಿ ಕಳೆದ ಒಂದು ತಿಂಗಳಿಗೂ ಅಧಿಕ ದಿನಗಳಿಂದ ಉತ್ತರ ಕರ್ನಾಟಕದಲ್ಲಿ ನಿತ್ಯವೂ ರೈತರ ಚಳುವಳಿ ನಡೆದಿದೆ. ತಮ್ಮ ನೆಲ-ಹೊಲ, ಅದ ನಂಬಿಯೇ ಜೀವಹಿಡಿದ ಜೀವಿಗಳಿಗೆ ನೀರು ಹರಿಸಿ, ಹನಿಸಿ ಎಂಬ ಕೂಗು ಮೇಲೆದ್ದಿದೆ. ಮಹದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ಹರಿಸಬೇಕೆಂಬುದು ಪ್ರಧಾನ ಆಗ್ರಹ. ಇದರ ಜೊತೆಗೆ ನಂಟಿರುವ ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಗೊಳ್ಳಲಿ ಎಂಬ ಒತ್ತಾಸೆ. ಇದು ಹಲವು ದಶಕಗಳ ಕೂಗು. ಮಲಪ್ರಭೆಯ ಆಚ್ಚುಕಟ್ಟು ಪರಿವ್ಯಾಪ್ತಿಗೆ ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ ಜಿಲ್ಲೆಗಳೂ ಬರುತ್ತವೆ. ಅವಿಭಜಿತ ಧಾರವಾಡ ಜಿಲ್ಲೆಯ ನರಗುಂದ, ನವಲಗುಂದ, ರೋಣ ತಾಲೂಕುಗಳಲ್ಲಿ ಇದರ ಕಾವು ತೀವ್ರ. ರೋಣದಲ್ಲಂತೂ ತೋಡಿದ ಕಾಲುವೆಗಳು ಶಿಥಿಲಗೊಂಡು ಕಣ್ಮರೆಯಾಗುತ್ತಿವೆ. ಅಲ್ಲಿಗೆ ಒಂದು ಹನಿ ನೀರೂ ಹರಿಯಲಿಲ್ಲ ಎಂಬುದು ಕ್ರೂರ ವಾಸ್ತವ.

ಹಲವು ಆಯಾಮಗಳು

ರಾಜ್ಯ ಸರಕಾರವೀಗ ಈ ಸಮಸ್ಯೆಯ ಕುರಿತು ಕೇಂದ್ರ ಸರಕಾರಕ್ಕೆ ಸರ್ವ ಪಕ್ಷಗಳ ನಿಯೋಗವೊಂದನ್ನು ಕೊಂಡೊಯ್ಯಲು ನಿರ್ಧರಿಸಿದೆ. ಅಷ್ಟು ಮಾತ್ರಕ್ಕೆ ಸಮಸ್ಯೆ ಬಗೆಹರಿಯುತ್ತದೆ ಎಂದು ಭಾವಿಸಲು ಕಾರಣವಿಲ್ಲ. ಈ ಪ್ರಶ್ನೆಯು ಅಂತರ್ ರಾಜ್ಯಗಳ ನದಿ ನೀರಿನ ಹಂಚಿಕೆಯಾಗಿದ್ದು ಎಲ್ಲಾ ಪ್ರಕರಣಗಳಲ್ಲಿ ಇರುವಂತೆ ಹಲವಾರು ತಾಂತ್ರಿಕ, ರಾಜಕೀಯ ಆಯಾಮಗಳ ಗೋಜಲುಗಳಿವೆ. ಮಹದಾಯಿಯಲ್ಲಂತೂ ರಾಜಕೀಯ ಅಂಶಗಳು ಸಹ ಹೆಚ್ಚಿವೆ.

ಇಂದು ಅಲ್ಲಿ ಕೇಳಿ ಬರುತ್ತಿರುವ ಪ್ರಮುಖ ಪ್ರಶ್ನೆಗಳಲ್ಲಿ ಎರಡು ಅಂಶಗಳಿವೆ. ಒಂದು ಕರ್ನಾಟಕದ ಖಾನಾಪುರದಲ್ಲಿ ಹುಟ್ಟಿ ಪಶ್ಚಿಮ ಘಟ್ಟಗಳ ಮೂಲಕ ಗೋವಾದತ್ತ ಹರಿಯುವ ಮಹದಾಯಿ ನದಿಯ ಸ್ವಲ್ಪ ನೀರನ್ನು ಮಲಪ್ರಭಾ ನದಿಗೆ ಹರಿಸಿ ನಮ್ಮ ಅವಶ್ಯಕತೆಗಳಿಗೆ ಬಳಸುವುದು. ಇನ್ನೊಂದು ನಮ್ಮ ಪ್ರದೇಶದಲ್ಲಿಯೇ ಮಳೆಗಾಲದಲ್ಲಿ ತುಂಬಿ (ಮಹದಾಯಿಯತ್ತ )ಹರಿಯುವ ಕಳಸಾ-ಬಂಡೂರಿ ನಾಲಾಗಳಿಂದ ಮಲಪ್ರಭಾಗೆ ಹರಿಸಿ ನೀರನ್ನು ಬಳಸಿಕೊಳ್ಳುವುದು. (ಕಳೆದ ಆಗಸ್ಟ್.16 ರ ಸಂಚಿಕೆಯ ಸಂಪಾದಕೀಯದಲ್ಲಿ ಸಮಸ್ಯೆಯ ಬಗ್ಗೆ ವಿಸ್ತೃತವಾಗಿ ಪ್ರಸ್ತಾಪಿಸಲಾಗಿದೆ.) ಮಹದಾಯಿಯ ನೀರಿನ ಪ್ರಶ್ನೆ ನ್ಯಾಯಾಧಿಕರಣದ ಮುಂದಿರುವುದರಿಂದ ತೀರ್ಪು ಬರದೇ ಮುಂದೆ ಸಾಗುವುದು ದುರ್ಲಭ.

ಸತತ ನಿರ್ಲಕ್ಷ್ಯ

ಇಲ್ಲಿ ನೀರನ್ನು ಪಡೆಯಲು, ಎದ್ದು ಬರುವ ಹಲವಾರು ವಿವಾದ, ಅಡ್ಡಿಗಳನ್ನು ನಿವಾರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸುವಲ್ಲಿ ರಾಜ್ಯ ಸರಕಾರವೂ ಕಾಲ, ಕಾಲದಲ್ಲೂ ವಿಫವಾಗಿದೆ. ಸುಮಾರು 2002 ರಿಂದಲೂ ಕಾಂಗ್ರೆಸ್, ಬಿಜೆಪಿ-ಜೆಡಿ ಎಸ್  ಪಕ್ಷಗಳ ಸರಕಾರಗಳು, ’ಮಣ್ಣಿನ ಮತ್ತು ನೀರಿನ ಮಕ್ಕಳೂ’ ಆದ ಹಲವು ಮುಖ್ಯಮಂತ್ರಿಗಳು ಬಂದು ಹೋದರೂ ಪೂರ್ಣ ಗಮನ ನೀಡದೇ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟ. ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಆಳ್ವಿಕೆಯಲ್ಲೂ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕ್ರಮ ವಹಿಸಿಲ್ಲ. ಕಳಸಾ-ಬಂಡೂರಿ ಪ್ರಶ್ನೆಯಲ್ಲಾಗಲಿ, ಅಲ್ಲಿನ ಕುಡಿವ ನೀರಿನ ವಿಷಯದಲ್ಲಿ ತನ್ನ ತಡೆಯಾಜ್ಞೆಯನ್ನು ಮರು ಪರಿಶೀಲಿಸಲಿಲ್ಲ. ಈಗಲೂ ಸಿದ್ಧರಾಮಯ್ಯನವರು ದೆಹಲಿಯ ’ಮೋದಿ ಸುಲ್ತಾನ’ರ ಭೇಟಿಗೆ ಸಮಯ ಕೋರಿದರೂ ಅವಕಾಶ ನೀಡಿದ್ದು ರಂಪಾಟ ಆದ ಮೇಲೆಯೇ. ಸದಾ ವಿದೇಶಗಳ ಪ್ರವಾಸದಲ್ಲಿ ಕಾರ‍್ಪೋರೇಟ್ ಕಂಪನಿಗಳ ರಾಯಭಾರಿಯಾಗಿ ಸುತ್ತುವ ಮೋದಿಯವರು ತಮಿಳುನಾಡು ಮುಖ್ಯಮಂತ್ರಿಯವರ ಮನೆಗೆ ಹೋಗಿ ಮಾತುಕತೆ ನಡೆಸಿ ಬರುತ್ತಾರೇಕೆ ಎಂಬ ಅವರ ಸಂಕುಚಿತ ರಾಜಕೀಯ ಉದ್ದೇಶಗಳನ್ನು ಜನ ಪ್ರಶ್ನಿಸಿರುವುದು ಅತಿಶಯವೇನಲ್ಲ.

ಇವೆಲ್ಲಾ ಬದಿಗಿರಿಸಿ ನೋಡಿದರೆ, ಈಗ ಸಿದ್ಧರಾಮಯ್ಯನವರ ಸರಕಾರವು ಈಗ ಕೇಂದ್ರದ ಮಧ್ಯಸ್ತಿಕೆ ಬಯಸುತ್ತಿದೆ. ಯಾಕೆಂದರೆ ಕೇಂದ್ರ್ರದಲ್ಲಿ ಮತ್ತು ಗೋವಾ ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿದ್ದು ಎರಡೂ ರಾಜ್ಯ ಸರಕಾರಗಳು ಒಪ್ಪಿದರೆ ಮಹದಾಯಿ ಅಥವಾ ಕಳಸಾ-ಬಂಡೂರಿ ಪ್ರಶ್ನೆಯಲ್ಲಿ ಪರಸ್ಪರ ಕೊಡು ಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂಬ ನಿರೀಕ್ಷೆ. ಆದರೆ ಈ ದೃಷ್ಟಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸುವ ವಿಷಯಕ್ಕಿಂತ ಅಧಿಕಾರದ ರಾಜಕೀಯ ಹಿತಗಳೇ ಮೇಲುಗೈ ಸಾಧಿಸುವುದರಿಂದ ಇದು ವಿಫಲ ಯತ್ನವಾಗಬಹುದು.

ಮಧ್ಯಂತರ ಅರ್ಜಿ ಅಗತ್ಯತೆ

ಮುಖ್ಯವಾಗಿ, ನ್ಯಾಯಾಧೀಕರಣದ ಮುಂದೆ ವಿವಾದವಿರುವುದರಿಂದ ಅಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯವೇ ಹೆಚ್ಚು ಸಂಭವ. ಆದ್ದರಿಂದ ಸಿದ್ಧರಾಮಯ್ಯ ಸರಕಾರ ತನ್ನ ರಾಜಕೀಯ ವರಸೆಗಳನ್ನು ಅದೇನೇ ಮಾಡಿದರೂ ನ್ಯಾಯಾಧೀಕರಣದ ಮುಂದೆ ನೀರಿನ ಬಳಕೆಗೆ ಮಧ್ಯಂತರ ಅದೇಶವನ್ನು ಕೋರಿ ಅರ್ಜಿ ಸಲ್ಲಿಸುವುದು ಅತ್ಯಗತ್ಯ. ಇದನ್ನು ಎಂದೋ ಈ ಮೊದಲೇ ಮಾಡಬೇಕಿತ್ತು. ಇನ್ನು ವಿಳಂಬಿಸಬಾರದು. ಹಾಗೆಯೇ ಇಡೀ ಪ್ರಕರಣದ ಬಗ್ಗೆ ವಾದ ಮಂಡಿಸುವಲ್ಲಿ ಗಂಭೀರ ಸಿದ್ಧತೆ ಅಗತ್ಯ. ಆದರೆ ಕಾಂಗ್ರೆಸ್ ಈಗಲಾದರೂ ಪ್ರಾಮಾಣಿಕವಾಗಿ ವರ್ತಿಸುವುದೇ?

ಸಂಕುಚಿತ ರಾಜಕಾರಣ

ಈ ಅಂಶಗಳು ನಮ್ಮ ಅಧಿಕಾರಸ್ಥ ರಾಜಕೀಯ ಪಕ್ಷಗಳಿಗೆ ಹೊಳೆಯದ ವಿಚಾರಗಳೇನಲ್ಲ. ಕೇಂದ್ರದಲ್ಲಿ ಅಧಿಕಾರ ನಡೆಸುವ ಬಿಜೆಪಿ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ(ಯಡ್ಯೂರಪ್ಪ, ಶೆಟ್ಟರ್, ಸದಾಗೌಡರು) ಏನೊಂದೂ ಮಾಡದೇ ಕಣ್ಣು ಮುಚ್ಚಿ ಕಾಲ ಕಳೆದು ಸಮಸ್ಯೆಯನ್ನು ಜೀವಂತವಾಗಿರಿಸಿದ್ದನ್ನು ಮರೆಯಲಾದೀತೆ? ಆದರೆ ಅವರೇ ಇಂದು ಉತ್ತರ ಕರ್ನಾಟಕದಲ್ಲಿ ನಡೆದಿರುವ ರೈತರ ಚಳುವಳಿಯಲ್ಲಿ ಮುಂದೆ ನಿಂತು ವೀರಾವೇಶದ ಮಾತನ್ನಾಡುತ್ತಾರೆ. ಇವರು ಕೇಂದ್ರದ ಮತ್ತು ತಮ್ಮ ಪಕ್ಷವಿರುವ ಗೋವಾದ ಸರಕಾರಗಳೊಂದಿಗೆ ಒತ್ತಡ ಹಾಕಿ ಒಂದು ಪರಿಹಾರ ಕಂಡುಕೊಳ್ಳಲು ಯಾಕೆ ಯತ್ನಿಸಬಾರದು? ಬಿಜೆಪಿಗೆ ಬೇಕಿರುವುದು ರಾಜ್ಯದ ಹಿತವೇನಲ್ಲ, ಜನರ ಹಿತವೂ ಅಲ್ಲ, ಅದಕ್ಕೆ ಬೇಕಿರುವುದು ಸಂಕುಚಿತ ರಾಜಕೀಯ ಹಿತ! ಮುಂದೆ ಬರುವ ಚುನಾವಣೆಗಳ ಚಿಂತೆ! ಈಗ ಎದ್ದಿರುವ ಜನರ ಅತೃಪ್ತಿಯನ್ನು ಕಾಂಗ್ರೆಸ್ ವಿರುದ್ಧ ಮತ್ತು ತನ್ನತ್ತ ಸೆಳೆಯುವುದು ಮಾತ್ರವೇ ಅದರ ಲಕ್ಷ್ಯ.

ಹಾಗೇ ಕಾಂಗ್ರೆಸ್ ಪಕ್ಷವೂ ಇಂತಹುದೇ ಕೆಲಸವನ್ನು ಮಾಡಿದೆ. ಈಗಲೂ ಅದು ಬಿಜೆಪಿಯನ್ನು ಟೀಕಿಸಲು ಬೇಕಾದಷ್ಟೇ ಉಪಚಾರದ ರಾಜಕೀಯ ಮಾಡಿದರೆ ಪ್ರಯೋಜನವಿಲ್ಲ.

ಎಚ್ಚರವಿರಬೇಕಾದ ಸಂಗತಿ

ಈ ರಾಜಕೀಯ ಮತ್ತು ಕಾನೂನಾತ್ಮಕ ಸಂಗತಿಗಳನ್ನು, ವಾಸ್ತವವನ್ನು  ಸರಿಯಾಗಿ ಜನತೆಗೆ ಈ ಎಲ್ಲಾ ಪಕ್ಷಗಳೂ ತಿಳಿಸಿ ಹೇಳಬೇಕಿತ್ತು. ಈಗಲಾದರೂ ಸದ್ಯದ ಸ್ಥಿತಿಯನ್ನು ಗಣಿಸಿ ಜನತೆ ಚಳುವಳಿಯನ್ನು ಮುಂದುವರಿಸಬೇಕಿದೆ. ಮತ್ತು ಈ ಹೋರಾಟ, ಅದರ ಪ್ರಭಾವ ದುರುಪಯೋಗ ಆಗದಂತೆ ಎಚ್ಚರವನ್ನು ವಹಿಸಬೇಕಿದೆ. ನಮ್ಮ ನೆಲ, ಜಲ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳಲು, ಅವುಗಳ ಸದುಪಯೋಗ ಪಡಿಸಿಕೊಳ್ಳಲು ಬಹುತೇಕ ಈ ಎಲ್ಲಾ ಪಕ್ಷಗಳು ಪ್ರಾಮಾಣಿಕವಾಗಿಲ್ಲ. ಕಾರ್ಷಿಕ ರಂಗದ ಅವನತಿಯನ್ನೇ ಬಯಸುತ್ತಿರುವ ಉದಾರೀಕರಣದ ಆರಾಧಕರಾದ ಈ ಪಕ್ಷಗಳು ಬೇರೇನು ಮಾಡಿಯಾವು?

ಆದ್ದರಿಂದ ಈ ಆಂದೋಲನ ಬಿಜೆಪಿ, ಕಾಂಗ್ರೆಸ್‌ನಂತಹ ಪಕ್ಷಗಳ ಸೋಗಲಾಡಿತನ, ವಂಚನೆಗಳ ವಿರುದ್ಧ ಧ್ವನಿ ಎತ್ತಬೇಕಿದೆ. ಜೊತೆಗೆ ಒಂದು ರಾಜ್ಯದ ಜನತೆಯನ್ನು ಇನ್ನೊಂದು ರಾಜ್ಯದ ಜನರ ವಿರುದ್ಧ ಎತ್ತಿಕಟ್ಟದಂತೆ, ಹಾಗೆ ಯಾರಾದರೂ ಯತ್ನಿಸಿದರೆ ವಿಫಲಗೊಳಿಸುವ ಮುತುವರ್ಜಿ, ಎಚ್ಚರಿಕೆ ವಹಿಸುವುದೂ ಅಗತ್ಯ.

 
 

Tags: , , ,

ಬಿಬಿಎಂಪಿ : ಪ್ರಣಾಳಿಕೆಗಳಲ್ಲಿ ಭರವಸೆಗಳ ಸದ್ದು: ಕಾರ್ಯದಲ್ಲಿ ಹಣ, ಆಮಿಷಗಳ ಮದ್ದು!

ಸಂಪುಟ 9, ಸಂಚಿಕೆ 34, 23 ಆಗಸ್ಟ್ 2015ಈ ವಾರ – ಎಸ್.ವೈ. ಗುರುಶಾಂತ್

ಬಿಬಿಎಂಪಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಟ್ಟು 198 ಕ್ಷೇತ್ರಗಳ ಪೈಕಿ 197 ಚುನಾವಣೆ ನಡೆಯಲಿದೆ.

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದೆ. ಕಾಂಗ್ರೆಸ್ 197, ಜೆಡಿ(ಎಸ್) ಸು. 195, ಸಿಪಿಐ(ಎಂ), ಸಿಪಿಐ ಮುಂತಾದ ಎಡಪಕ್ಷಗಳು ದಲಿತ ಹಾಗೂ ಪ್ರಗತಿಪರ, ಜಾತ್ಯಾತೀತ ಸಂಘಟನೆಗಳು ಒಡಗೂಡಿದ ’ನಾಗರೀಕರಂಗ’ 43 ಸ್ಥಾನಗಳಿಗೆ ಸ್ಫರ್ಧಿಸಿವೆ. ಮಧ್ಯಮ ವರ್ಗದ ನಡುವೆ ಬಂದಿಷ್ಟು ಸದ್ದು ಮಾಡುತ್ತಿದ್ದ ’ಆಮ್ ಆದ್ಮಿ ಪಕ್ಷ ಸ್ಪರ್ಧೆಯಿಂದ ದೂರ ನಿಂತಿದೆ. ’ಹೀಗೆ. ಇರಿ’ ಅಂತಾ ಅದರ ಹೈಕಮಾಂಡ್‌ನ ಆದೇಶವಂತೆ! ಹಾಗಿದ್ದರೂ ಟೀಕೆ ಟಿಪ್ಪಣಿಗಳಿಂದ ’ಆಟ’ದಲ್ಲಿ ಕಾಣಿಸಿಕೊಳ್ಳುವ ಪ್ರಯತ್ನ. ಇದರೊಟ್ಟಿಗೆ ಬೆಂಗಳೂರಿನ ಅಭಿವೃದ್ದಿ ಇತ್ಯಾದಿಗಳ ಬಗ್ಗೆ ತಮ್ಮದೇ ಆಶೆ ಕನಸುಗಳಿರುವ ಹಲವು ವ್ಯಕ್ತಿಗಳೂ ನಿಂತಿದ್ದಾರೆ. ಅಧಿಕಾರ ಹಿಡಿಯಬಹುದಾದ ಮತ್ತು ಗದ್ದುಗೆಗೆ ಸುತ್ತು ಹಾಕಬಹುದಾದ ಪಕ್ಷಗಳ ಹಿಂದಿದ್ದ ಅನೇಕ ಟಿಕೇಟ್ ವಂಚಿತರು ಬಂಡಾಯ ಅಭ್ಯರ್ಥಿಗಳಾಗಿಯೂ ಕಣಕ್ಕಳಿದಿದ್ದಾರೆ. ಇದರ ಬಿಸಿ ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಜಾಸ್ತಿ. ಇಂತಹವರನ್ನು ಕ್ಯಾಚ್ ಹಾಕಲು ಜೆಡಿಎಸ್‌ಗೆ ವಿಫುಲ ಅವಕಾಶ! ಶೇ. 50 ರಷ್ಟು ಮಹಿಳಾ ಮೀಸಲಾತಿಯಿರುವುದರಿಂದ ಮಹಿಳಾ ಅಭ್ಯರ್ಥಿಗಳ ಸ್ಪರ್ಧೆ ಹಿಂದೆಂದಿಗಿಂತಲೂ ಅತ್ಯಧಿಕ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಸ್ಪರ್ಧಿಗಳಲ್ಲಿ ಬಹುತೇಕರು ಭಾರೀ ಹಣವಂತರು ಭೂದಂಧೆಗಾರರು, ಅಕ್ರಮ ಆಸ್ತಿವಂತರೂ ಇದ್ದಾರೆ. ಆದರೆ ನಾಗರೀಕರಂಗದ ಅಭ್ಯರ್ಥಿಗಳು ಸರಳ ಸಜ್ಜನಿಕೆಯವರು, ಜನತೆಗಾಗಿ ಬದುಕು ಸಮರ್ಪಿಸಿಕೊಂಡವರು. ಕಪ್ಪು ಹಾಳೆಯಲ್ಲಿ ಮಿನುಗುವ ಬೆಳ್ಳಿ ರೇಖೆಯಿದು.

ಹೈದ್ರಾಬಾದ್‌ನಲ್ಲಿ ನೆಲೆಯಿರುವ ಓವೈಸಿ ಪಕ್ಷ (ಎಂ.ಇ.ಎಂ.) ಸುಮಾರು 40 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅತ್ಯಂತ ಕೋಮುದ್ವೇಷ ಪ್ರಚೋದಿಸುವ ಈ ಪಕ್ಷ ಬೆಂಗಳೂರಿನಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನಕ್ಕಿಳಿದಿರುವುದು ಅಪಾಯಕರ. ಇದರಿಂದ ಒಂದೆಡೆ  ಕೋಮುವಾದಿ ಬಿಜೆಪಿ ಮತೀಯ ಆಧಾರದಲ್ಲಿ ಮತ ಕ್ರೋಢೀಕರಿಸಲು ಅವಕಾಶ ಕಲ್ಪಿತವಾಗಿದ್ದರೆ, ಅಲ್ಪಸಂಖ್ಯಾತರ ಮತ ಸೆಳೆದು ಜಾತ್ಯತೀತ ಶಕ್ತಿಗಳ ಬಲ ಕುಗ್ಗಿಸಲೂ ಸಾಧ್ಯವಿದೆ. ಮುಖ್ಯವಾಗಿ ಮತ ಕಳೆದುಕೊಳ್ಳುವ ಆತಂಕ ಕಾಂಗ್ರೆಸ್‌ನದು. ಅಂತಿಮವಾಗಿ ಬಿಜೆಪಿಗೇ ಸಹಾಯಕವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಟ್ಟಾರೆ ಮುಸ್ಲಿಂ ಅಲ್ಪಸಂಖ್ಯಾತರ ನಡುವೆ ಮೂಲಭೂತವಾದ ಗಟ್ಟಿಗೊಳಿಸುವ ಕೆಲ ಪ್ರಯತ್ನಗಳ ಭಾಗವದು.

ಬಿಜೆಪಿ, ಕಾಂಗ್ರೆಸ್‌ಗಳು ಈ ಚುನಾವಣೆಯಲ್ಲಿನ ಗೆಲುವು ಭಾರೀ ಪ್ರತಿಷ್ಠೆ ಎಂದು ಭಾವಿಸಿವೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಬೆಂಗಳೂರಿನಲ್ಲೂ ಗೆದ್ದರೆ ಅದರಲ್ಲೂ ಸಿದ್ದರಾಮಯ್ಯನವರ ಕುರ್ಚಿ ಅಲುಗಾಟಕ್ಕೆ ಕೊಂಚ ಬ್ರೇಕ್ ಎಂದು ಭಾವಿಸಿದೆ. ಇಲ್ಲವಾದರೆ ತಲೆದಂಡದ ಒತ್ತಡ. ದುರಾಡಳಿತದಿಂದ ಹೇಸಿಗೆ ಹುಟ್ಟಿಸಿದ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಹವಣಿಕೆಯಲ್ಲಿದ್ದು, ಗೆದ್ದರೆ ಮಾಜಿ ಸಚಿವ ಆರ್. ಅಶೋಕ ಮೇಲುಗೈ ಸಾಧಿಸಿದಂತೆ ಎಂದೂ ಲೆಕ್ಕಹಾಕಿದ್ದಾರೆ. ಇದರ ವಿರುದ್ಧ ಬಿಎಸ್‌ವೈ  ಬಣದ ತಕರಾರು ಬಹಿರಂಗವಾಗಿದೆ. ಅವರಿಗೆ ಮುಂದಿನ ಸಿ.ಎಂ. ಆಗುವ ಚಿಂತೆಗಳು.

ಹೀಗಾಗಿಯೇ ಪಕ್ಷಗಳ ಚುನಾವಣೆಯ ಹಣಾಹಣಿಯ ಹಿಂದೆ ವ್ಯಕ್ತಿಗಳ ಮೇಲುಗೈ ಭರಾಟೆಯೂ ಇದೆ. ಒಟ್ಟಾರೆ ಹಣದ ಹೊಳೆ ಹರಿಯಲಿದೆ.  ಚುನಾವಣಾ ಪ್ರಣಾಳಿಕೆಗಳೂ ರೂಪುಗೊಂಡಿವೆ. ಭೂಮಿ-ಆಕಾಶ ಒಂದು ಮಾಡುವಂತಹ ಭರಪೂರ ಭರವಸೆಗಳು ಹರಿದಾಡುತ್ತಿವೆ. ಪ್ರಣಾಳಿಕೆ ಬಿಡುಗಡೆ ಮಾಡುವಲ್ಲಿ ಕಾಂಗ್ರೆಸ್ ಮುಂದು. ಜೆಡಿಎಸ್ ಎರಡನೆಯದ್ದು. ಆದರೆ ಬಿಜೆಪಿ ಇನ್ನೂ ಪ್ರಣಾಳಿಕೆ ಹೊರತಂದಿಲ್ಲ. ಬಹುಶಃ ವಂಚನೆಯ ಹೊಸ ಅಂಶಗಳಿಗೆ ತಡಕಾಡುತ್ತಿರಬೇಕು. ನಾಗರೀಕರಂಗ ಜನರಿಗಾಗಿ ಕಾಳಜಿ ಪ್ರಗತಿಗಾಗಿ ಭದ್ರತೆಯ ಪ್ರಾಯೋಗಿಕ ನಾಗರೀಕ ಕಾರ್ಯಸೂಚಿಯನ್ನೂ ಬಿಡುಗಡೆಗೊಳಿಸಿದೆ.

ಮೇಲಿನ ಅಧಿಕಾರಸ್ತ ಪಕ್ಷಗಳು ಗೆದ್ದ ಬಂದ ಮೇಲೆ ಪ್ರಣಾಳಿಕೆಯನ್ನು ಜಾರಿಗೆ ತರಬೇಕಿಲ್ಲ, ಆಗ- ತಮ್ಮದೇ ನಿಜ ಅಜೆಂಡಾ ಜಾರಿಗೆ ತರುವುದು ಎಂದೇ ನಂಬಿರುವುದರಿಂದ ಪ್ರಣಾಳಿಕೆ ಭರವಸೆಗಳ ಈಡೇರಿಕೆ ಕಾರ್ಯ ಸಾಧ್ಯವೇ ಎಂದು ಯೋಚಿಸಲು ಹೋಗಿಯೇ ಇಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ಬಿಬಿಎಂಪಿಯಲ್ಲೂ ತನ್ನದೇ ಆಡಳಿತವಿದ್ದರೆ ಪ್ರಗತಿ, ಅಭಿವೃದ್ಧಿ, ಸೀದಾ ಸಾದಾ ಸಾಧ್ಯ ಎಂಬ ಹಳಸಲು ಕಲ್ಪನೆ ಮಂಡಿಸುತ್ತಿದೆ. ಹಿಂದೆ ಎಸ್.ಎಂ. ಕೃಷ್ಣರ ಕಾಲದಲ್ಲಿ ಹೇಳುತ್ತಿದ್ದ ’ಹೈಟೆಕ್ ಸಿಟಿ’ಯಂತೆ ಈಗ ಬೆಂಗಳೂರು ಬ್ರಾಂಡ್ ಇಮೇಜ್ ತರುವುದಾಗಿ ಹೇಳಿದೆ. ಬಿಜೆಪಿಯೂ ಹೇಳಿದ್ದೆಲ್ಲಾ ಮುಗಿಯಿತೆಂದು ಅದೂ ಸಹ ’ಸುಂದರ ಬೆಂಗಳೂರು’ ಕಲ್ಪನೆ ಹರಿಯಬಿಟ್ಟಿದೆ.  ಜೆಡಿಎಸ್ ಅಂತೂ ಬೆಂಗಳೂರನ್ನು ’ಹಾಂಕಾಂಗ್ ಮಾಡುವುದಾಗಿ ಘೋಷಿಸಿದೆ. (ಸಿಂಗಾಪೂರ್ ಎಂದರೆ ಎಸ್.ಎಂ. ಕೃಷ್ಣರ ನಕಲು ಎನ್ನಬಹುದು ಅಂತಾ). ಇದೆಲ್ಲಾ ಮಧ್ಯಮ-ಮೇಲ್ ಮಧ್ಯಮ ವರ್ಗ, ಉದ್ಯಮಿಗಳಂತಹವರನ್ನು ಪ್ರಭಾವಿಸಲು ನಡೆಸಿದ ವರಸೆಗಳು. ಈ ಮೂರು ಪಕ್ಷಗಳೂ ಈ ವಿಭಾಗದ ಮತದಾರರನ್ನೂ ಸೆಳೆಯಲು ಯತ್ನಿಸಿರುವುದು ಸ್ಪಷ್ಟ. ಕಾಂಗ್ರೆಸ್ ಪಕ್ಷ ರಸ್ತೆ-ಸಾರಿಗೆ ನಿರ್ವಹಣೆಗೆ ಎಲಿವೇಟೆಡ್ ಫ್ಲೈಓವರ್‌ಗಳು, ವರ್ತುಲ ರಸ್ತೆಗಳು, ಮೆಟ್ರೋ ರೈಲು, ಸೇತುವೆಗಳ ನಿರ್ಮಾಣದ ಬಗ್ಗೆ ಹೇಳಿದೆ. 4 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 100 ರಂತೆ 5000 ವರೆಗೂ ಶೌಚಾಲಯ, ಆಸ್ಪತ್ರೆಗಳ ಸೌಲಭ್ಯ ಹೆಚ್ಚಳ, ಉದ್ಯಾನವನ. ಕ್ರೀಡಾಂಗಣ, ಕುಡಿಯುವ ನೀರಿಗೆ ಮೇಕೆದಾಟು ಯೋಜನೆ, ಆಡಳಿತ ಸುಧಾ ರಣೆ ಎನಿಲ್ಲ ಎನ್ನುವಷ್ಟು ಅಂಶಗಳಿವೆ. ಬೆಂಗಳೂರಿನ ಭಾರೀ ಸಮಸ್ಯೆಯಾಗಿರುವ ಕಸದ ವಿಲೇವಾರಿ ಬಗ್ಗೆ ಅದು ಹೇಳಿದೆಯಾದರೂ ಸೂಚನೆಗಳು ತ್ಯಾಜ್ಯ ನಿರ್ವಹಿಸುವಲ್ಲಿ ನಿಖರತೆ ಪಡೆದುಕೊಂಡಿಲ್ಲ. ಈ ಬಗ್ಗೆ ಬಿಜೆಪಿ-ಜೆಡಿಎಸ್ ಗಳೂ ಮಾತನಾಡಿವೆಯಾದರೂ ತ್ಯಾಜ್ಯ ನಿರ್ವಹಣೆಯಲ್ಲಿನ ದೋಷಗಳು, ಮಾಫಿಯಾಗಳ ಪಾತ್ರ ಗುರುತಿಸಿಲ್ಲ ಮತ್ತು ಮಟ್ಟ ಹಾಕುವ ವಿಷಯವೇ ಇಲ್ಲ. ವಿಶೇಷವೆಂದರೆ ಈ ಮೂರು ಪಕ್ಷಗಳೂ ಭೂಗಳ್ಳರ ಬಗ್ಗೆಯಾಗಲೀ ಭಾರೀ ಕುಳಗಳ ಅಕ್ರಮ ಸ್ವಾಧೀನದ ಬಗ್ಗೆ ಜೈಕಾರವನ್ನೇಎತ್ತಿಲ್ಲ. ಬೆಂಗಳೂರಿನಲ್ಲಿ ದುಡಿಯುವ ವರ್ಗದವರಿಗೆ, ಜನಸಾಮಾನ್ಯರಿಗೆ ವಸತಿ ಪ್ರಶ್ನೆ ಗಂಭೀರ. ಕಾಂಗ್ರೆಸ್ ಕೊಳಚೆ ಪ್ರದೇಶಗಳೇ ಇಲ್ಲದ ನಗರ ಮಾಡುವುದಾಗಿ ಹೇಳಿರುವುದು ಕಾಮನಬಿಲ್ಲು ಅಷ್ಟೆ. ಬಿಜೆಪಿ ನಾಯಕರ ಮಾತುಗಳಲ್ಲಿ ಈ ಪ್ರಶ್ನೆ ಇಲ್ಲ. ಇನ್ನು ಕಳೆದ ಇಡೀ ಅವಧಿಯಲ್ಲಿ ಮಹಾನಗರಪಾಲಿಕೆಯನ್ನು ಪೂರಾಪೂರಾ ಲೂಟಿ ಮಾಡಿ, ಭ್ರಷ್ಟಾಚಾರದಲ್ಲೇ  ದಾಖಲೆ ನಿರ್ಮಿಸಿದ ಬಿಜೆಪಿ ಉತ್ತಮ ಆಡಳಿತದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ, ಮಾತ್ರವಲ್ಲ ಮಾಹಾವಂಚನೆ. ಕಾಂಗ್ರೆಸ್ ಪಕ್ಷವೂ ಸಹ ತನ್ನ ಪ್ರಚಾರದಲ್ಲಿಯೂ ಬಿಜೆಪಿಯ ಕೋಮುವಾದೀ ರಾಜಕೀಯ ಹಣದ ಲೂಟಿ, ದುರಾಡಳಿತ ದಿವಾಳಿಖೋರತನಗಳನ್ನು ಮುಖ್ಯ ಅಂಶಗಳನ್ನಾಗಿಸಿ ಎದುರಿಸುತ್ತಿಲ್ಲ. ಜೆಡಿಎಸ್ ಪಕ್ಷವೂ ಅತ್ಯದ್ಬುತ ಎನಿಸುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ (ಬಡವರಿಗೆ ಅನ್ನಪೂರ್ಣ, 5 ಲಕ್ಷ ಮನೆ ನಿರ್ಮಾಣ, ಶಿಕ್ಷಣ, ವಿಶ್ವ ಮಟ್ಟದ ಬೆಂಗಳೂರು ಹಬ್ಬ, ಹಲವು ಪ್ರಾಧಿಕಾರ..) ಹೇಳಿದೆ.

ಈ ಪಕ್ಷಗಳು ಭಾರೀ ಭರವಸೆ ನೀಡಿವೆಯಾದರೂ ಇವೆಲ್ಲವುಗಳಿಗೆ ಹಣದ ಸಂಪನ್ಮೂಲ ಸಂಗ್ರಹ ಹೇಗೆ? ಎಲ್ಲಿದ ಎಂದು ಹೇಳಿಯೇ ಇಲ್ಲ. ಅಂದರೆ ಹಣವಿಲ್ಲದೇ ಭರವಸೆಗಳೂ ಗಾಳಿಯಲ್ಲಿ ಹಾರಿಸಬಹುದು ಎಂದೋ, ಇಲ್ಲವೇ ಸಾಲ ಎತ್ತಿ ಸಂಭ್ರಮಿಸಿ, ಪಾಲಿಕೆಯ ಆಸ್ತಿಗಳನ್ನು ಮಾರಿ ಮಜಾ ಮಾಡುವುದೆಂದೋ ಇರಬೇಕು. ಇಂತಹ ಸ್ಥಿತಿಯಲ್ಲಿ ’ನಾಗರೀಕ ರಂಗ’ದ ಪ್ರಣಾಳಿಕೆ ಮಹತ್ವ ಪಡೆಯುತ್ತಿದೆ. ಪರ್ಯಾಯಗಳ ಹಾದಿಯನ್ನು ತೋರಿಸುತ್ತದೆ (ವಿವರ ಮತ್ತೊಂದು ಲೇಖನದಲ್ಲಿ).

ಆದರೆ ನಮ್ಮ ಪತ್ರಿಕೆ-ಟಿ.ವಿ. ಮಾಧ್ಯಮಗಳಿಗೆ ನಿಜವಾದ ಜನಪರ ಪರ್ಯಾಯ ತೋರುವುದು ಬೇಕಾಗಿಲ್ಲ. ಜನರೆದುರು ಈ ಸಂಗತಿಗಳನ್ನು ಹೇಳದೇ ಮುಚ್ಚಿಡುವಲ್ಲಿ ಪಕ್ಷಪಾತ, ಸ್ಥಾಪಿತ ಹಿತಾಸಕ್ತಿಗಳಿವೆ. ನಾಗರೀಕ ರಂಗವನ್ನು ಮಾಧ್ಯಮಗಳು ಬೇಕೆಂದೇ ನಿರ್ಲಕ್ಷಿಸುತ್ತಿವೆ. ವಿಚಿತ್ರವೆಂದರೆ ಸ್ಪರ್ಧೆಯನ್ನೇ ಮಾಡದ ’ಆಫ್ ಬಗ್ಗೆ  ಸೀಮಿತ ಶಕ್ತಿಯಿರುವ ಲೋಕಸತ್ತಾದ ಬಗ್ಗೆ ಪ್ರಚಾರಿಸುವುದು, ತಮ್ಮದೇ ನೀತಿ ಸಂಹಿತೆಯನ್ನೂ ಪಾಲಿಸದೇ ಇರುವುದು. ಇಂತಹ ಪ್ರತಿಕೂಲಗಳ ನಡುವೆಯೂ ನಾಗರೀಕ ರಂಗದ ಅಭ್ಯರ್ಥಿಗಳು ನೇರ ಜನರನ್ನೂ ತಲುಪಿ ಮನಗೆಲ್ಲುತ್ತಿದ್ದಾರೆ.

ಬಾಲಂಗೋಚಿ :

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ವರ್ಣರಂಜಿತ ಭರವಸೆ ನೀಡಿ, ಪ್ರಣಾಳಿಕೆಗಳನ್ನೂ ಬಿಡುಗಡೆ ಮಾಡಿ, ಪ್ರಚಾರಿಸುತ್ತಿರುವುದೂ ನಿಜ. ಆದರೆ ಇದರಿಂದಲೇ ಮತ ಪಡೆಯುವ  ವಿಶ್ವಾಸ ಅವಕ್ಕೆ ಇಲ್ಲ. ಮೊನ್ನೆ ಕೆ.ಆರ್.ಪುರಂ ಪ್ರದೇಶದಲ್ಲಿ ಮತದಾರರಿಗೆ ವಿತರಿಸಲೆಂದು ತಂದಿದ್ದ 63 ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆಯಂತೆ. ಇದೇ ಆ ಪಕ್ಷಗಳ ನಿಜವಾದ ಪ್ರಣಾಳಿಕೆ ಅಲ್ಲವೇ?

 
Comments Off on ಬಿಬಿಎಂಪಿ : ಪ್ರಣಾಳಿಕೆಗಳಲ್ಲಿ ಭರವಸೆಗಳ ಸದ್ದು: ಕಾರ್ಯದಲ್ಲಿ ಹಣ, ಆಮಿಷಗಳ ಮದ್ದು!

Posted by on 18/08/2015 in ಈ ವಾರ

 

Tags: , , ,

ಬೆಳ್ತಂಗಡಿ: ಆದಿವಾಸಿಗಳ ಮೇಲೆ ಭೂಮಾಲಿಕ ಕ್ರಿಮಿನಲ್‌ಗಳ ದಬ್ಬಾಳಿಕೆ ಸುಂದರ ಮಲೆಕುಡಿಯರ ಕೊಲೆಗೆಯತ್ನ – ಹಲ್ಲೆ

 

ಎಸ್.ವೈ. ಗುರುಶಾಂತ್ – ಸಂಪುಟ-9 ಸಂಚಿಕೆ-32, 02 ಆಗಸ್ಟ್ 2015

ಸುಂದರ ಮಲೆಕುಡಿಯಾರ್

ಸುಂದರ ಮಲೆಕುಡಿಯಾರ್

ನೆರಿಯ ಎನ್ನುವ ಗ್ರಾಮ ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 20 ಕಿ.ಮಿ. ದೂರದಲ್ಲಿದೆ. ಅದು ಸುತ್ತುವರಿದ ಪಶ್ಚಿಮ ಘಟ್ಟದ ಕಾಡಿನ ನಡುವೆ. ಅಲ್ಲಿಂದ ಹಲವು ದಿಕ್ಕುಗಳೆಡೆಗೆ ಕವಲೊಡೆದ ಕಚ್ಚಾ ಹಾದಿಗಳು ಕಾಡ ಅಂತರಂಗದಲ್ಲಿ ನೆಲೆಯೂರಿದ ಜೀವ ಜಗತ್ತಿನ ಅನಾವರಣಕ್ಕೆ ಕರೆದೊಯ್ಯುತ್ತವೆ. ಈ ಹಾದಿಗಳು ಸರಸರನೇ ಹರಿದು ಹೋಗಿ ಬಿಡುವಂತಹುದಲ್ಲ. ಕಲ್ಲು ಮುಳ್ಳು  ಕೊರಕಲು ಕೆಸರು ತುಂಬಿ ಹೆಜ್ಜೆ ಹಾಕುವವರಿಗೆ ಸವಾಲು ಹಾಕುವಂತಹವು.

ಇಂತಹ ಅಣಿಯೂರಿನಿಂದ ಪರ್ಪಳಕ್ಕೆ 5 ಕಿ.ಮಿ. ದಾರಿಯೂ ಇದೆ. ಹಾಗೇ ಬಾನಡ್ಕ ದಾಟಿದರೆ ಕಾಟಾಜೆ ಪ್ರದೇಶ. ಇಲ್ಲಿ 25 ಕುಟುಂಬಗಳು ಮಲೆಕುಡಿಯ ಆದಿವಾಸಿಗಳು. 200 ಜನ ಹಾಗೂ 40 ರಷ್ಟು ಇತರೆ ಸಮುದಾಯದವರು ನೆಲೆಸಿದ್ದಾರೆ. ಇವರು ಮತ್ತು ಮಾರ್ಗದುದ್ದಕ್ಕೂ ಇರುವ ಆದಿವಾಸಿಗಳು 1950ಕ್ಕಿಂತ ಮೊದಲೇ ಇಲ್ಲಿ ಬಂದಿರಬಹುದು ಎಂದೂ ಹೇಳಲಾಗುತ್ತದೆ. ಅಂದರೆ ಆ ಸುಮಾರಿನಲ್ಲಿ ಮಂಡೇಕಲ್ ಎಸ್ಟೇಟ್ ಪ್ರದೇಶದಲ್ಲಿ ವಾಸವಾಗಿದ್ದ ಆದಿವಾಸಿಗಳನ್ನು ಅಲ್ಲಿಗೆ ಬಂದ ಕೇರಳದ ಜಮೀನ್ಧಾರರು ದೌರ್ಜನ್ಯದಿಂದ ಓಡಿಸಿದಾಗ ನಿರಾಶ್ರಿತರಾದ ಇವರಿಗೆ ಸಮಾಜ ಕಲ್ಯಾಣ ಇಲಾಖೆಯೇ ಕಾಟಾಜೆ ಪ್ರದೇಶದಲ್ಲಿ ಮನೆಕಟ್ಟಿಕೊಂಡು ನೆಲೆಸಲು ಭೂಮಿಯನ್ನು ತೋರಿಸಿತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಮನೆಗೆ ಭೇಟಿ

ಮನೆಗೆ ಭೇಟಿ

ಅಣಿಯೂರಿನಲ್ಲಿ ಮನೆ ಮಾಡಿಕೊಂಡಿರುವ ಗೋಪಾಲಕೃಷ್ಣ ಗೌಡ ಎಂಬಾತ ಅಲ್ಲಿಂದ ಪರ್ಪಳದವರೆಗೆ ಇರುವ ಭೂಮಿಯನ್ನೆಲ್ಲಾ ತನ್ನದು ಎಂದು ಹೇಳುತ್ತಾನೆ. ಮಾತ್ರವಲ್ಲ ಅಲ್ಲಿರುವ ಆದಿವಾಸಿಗಳನ್ನು ಹೆದರಿಸಿ ಅವರ ಜಮೀನನ್ನು ಕಿತ್ತುಕೊಂಡು ತೋಟ ಮಾಡಿಕೊಂಡು ಬಲಿತ ಕುಳವಾಗಿದ್ದಾನೆ. ಈತನು ಭೂದಾಹದಲ್ಲಿ ಮಾಡದ ಕೃತ್ಯಗಳಿಲ್ಲ. ಇದಕ್ಕೆಂದೇ ಬಂಧು ಬಳಗವನ್ನು ಬಳಸಿಕೊಳ್ಳುವ ಈತ ಕ್ರಿಮಿನಲ್ ಗ್ಯಾಂಗ್‌ನ್ನು ಹೊಂದಿದ್ದಾನೆ. ಎದುರು ಮಾತನಾಡಿದವರ ಹೆಣ ಅಲ್ಲಿಯೇ ಹರಿದಿರುವ ಹೊಳೆಯಲ್ಲಿ ತೇಲಿವೆ. ಮನೆಯ ಹೆಣ್ಣು ಮಗಳು ಅತ್ಯಾಚಾರಕ್ಕೆ ಇಲ್ಲವೇ ದೌರ್ಜನ್ಯಕ್ಕೆ ಈಡಾದದ್ದಿದೆ. ಅಣ್ಣಪ್ಪ ಮಲೆಕುಡಿಯ ಬೆಳ್ತಂಗಡಿಗೆ ಹೋದವರು 4 ದಿನಗಳಾದರೂ ವಾಪಸ್ ಬರಲಿಲ್ಲ. ಕೊನೆಗೆ ಹೆಣ ಹೊಳೆಯ ಬದಿ ದೊರೆಯಿತು. 6 ವರ್ಷದ ಹಿಂದೆ ಬಹಿರ್ದೆಸೆಗೆ ಅಂತ ಹೋದ ಯುವತಿ ನಾಪತ್ತೆಯಾದಳು. ಆಕೆಯ ಹೆಣವು ಅದೇ ಹೊಳೆಯಲ್ಲಿ ತೇಲಿತು. ದೂರು ನೀಡಲಾಯಿತಾದರೂ ತನಿಖೆ ಆಗಲಿಲ್ಲ. ಅಸಹಜ ಸಾವುಗಳ ಪಟ್ಟಿಯಲ್ಲಿ ಇವು ಸೇರಿ ಹೋದವು.  ಈ ಧರ್ಮರಕ್ಷಿತ ಪ್ರದೇಶದಲ್ಲಿ ಇಂತಹ ಅಸಹಜ ಸಾವುಗಳು ತೀರಾ ಸಹಜ ಅಲ್ಲವೇ..!? ಬೆಳ್ತಂಗಡಿಯ ಹಿರಿಯ ವಕೀಲರಾದ ಶಿವಕುಮಾರ್ ಎಸ್.ಎಂ. ಅವರ ಮಾಹಿತಿಯಂತೆ 2015 ರ ಜೂನ್ ವರೆಗೆ ಸುಮಾರು 75 ಅಸಹಜ ಸಾವುಗಳು ಪೊಲೀಸ್ ಇಲಾಖೆಯಲ್ಲಿ ನಮೂದಾಗಿವೆ !

ಈ ಗೋಪಾಲಕೃಷ್ಣ ಗೌಡ ಎಂಬಾತ ಸಾವಿರಾರು ಎಕರೆ ಜಮೀನು ಹೊಂದಿರುವ ದೊಡ್ಡ ಜಮೀನ್ದಾರನೇನಲ್ಲ. (ನೆರಿಯ ಹೆಬ್ಬಾರರಂತೆ ಅಲ್ಲ) ಆತನದ್ದೇ 20-25 ಎಕರೆ ಜಮೀನು ಇರಬಹುದು. ಆದರೆ ಅಕ್ರಮವಾಗಿ ನೂರಾರು ಎಕರೆ ಜಮೀನು ಸಾಗುವಳಿ ಮಾಡಿಕೊಂಡು ತನ್ನ ಕಬ್ಜದಲ್ಲಿ ಇಟ್ಟುಕೊಂಡಿದ್ದಾನೆ.

ಬಿ.ಜೆ.ಪಿ. ಕಾಂಗ್ರೆಸ್ ಪಕ್ಷಗಳ ಮುಖಂಡನಾಗಿರುವ ಈತ ಕಾಂಗ್ರೇಸ್ ಮುಖಂಡನಾಗಿ ತಾಲೂಕು ಪಂಚಾಯತ್ ಸದಸ್ಯನಾಗಿ ಮಂಡಲ ಪಂಚಾಯತ್ ಅಧ್ಯಕ್ಷನಾಗಿ ಭೂ ನ್ಯಾಯಮಂಡಳಿ ಸದಸ್ಯನಾಗಿ ಮತ್ತು ಈಗ ಬಿಜೆಪಿ ಮುಖಂಡನಾಗಿ ಬಹುಮುಖ ’ಸೇವೆಗಳಿಂದ’ ಗಟ್ಟಿ ಕುಳವಾಗಿದ್ದಾನೆ.

ಈತನ ಭೂದಾಹ ನಿಂತಿಲ್ಲ, ನಿಲ್ಲುವುದಿಲ್ಲ. ಇದೇ ಜುಲೈ 26 ರಂದು ಸಂಜೆ 5.30ರ ಸುಮಾರಿಗೆ ರಸ್ತೆ ಬದಿಯ ಕಸ ಗಿಡಗಳನ್ನು ಕತ್ತರಿಸಲೆಂದು ಮಶಿನು ಹಿಡಿದು ಗಿಡ ಕತ್ತರಿಸುತ್ತಾ ಬಂದ ಗೋಪಾಲಕೃಷ್ಣ ಗೌಡ ಕಾಟಾಜೆ ಗ್ರಾಮದಲ್ಲಿರುವ ಸುಂದರ ಮಲೆಕುಡಿಯ ಅವರ ಪಕ್ಕದ ಜಮೀನಿನ ಬಳಿಯಿಂದ ಕತ್ತರಿಸುತ್ತಾ, ಸುಂದರರವರ ಜಮೀನಿಗೆ ಬಂದಾಗ ಅವರು ಇದಕ್ಕೆ ಆಕ್ಷೇಪಿಸಿರುತ್ತಾರೆ. ಕೂಡಲೇ ಗೋಪಾಲಕೃಷ್ಣ ಗೌಡ ತನ್ನ ಗುಂಪಿನೊಂದಿಗೆ ಸುಂದರ ಮಲೆಕುಡಿಯರನ್ನು ಅವಾಚ್ಯವಾಗಿ ಬಯ್ಯುತ್ತಾ ಕಳೆ ಕೊಚ್ಚುವ ಯಂತ್ರದಿಂದ ಕುತ್ತಿಗೆಯನ್ನು ಕತ್ತರಿಸಲು ಧಾಳಿ ಮಾಡುತ್ತಾನೆ. ಇದರಿಂದ ತಪ್ಪಿಸಿಕೊಳ್ಳಲು ಕೈ ಮುಂದೆ ಮಾಡಿದಾಗ ಸುಂದರ ಮಲೆಕುಡಿಯರ ಬಲಗೈ ಬೆರಳು ತುಂಡಾಗಿ ನೆಲಕ್ಕೆ ಬೀಳುತ್ತದೆ. ಎಡಗೈ ತೋಳು ಪೂರ್ಣವಾಗಿ ಕತ್ತರಿಸಲ್ಪಟ್ಟು ನೇತಾಡುತ್ತಾ ರಕ್ತ ಸುರಿಯುತ್ತದೆ. ಈ  ಸಂದರ್ಭದಲ್ಲಿ ಇದರ ಮೇಲೆ ಹಾಗೂ ಅವರ ರಕ್ಷಣೆಗೆ ಬಂದ ಅವರ ಮಗ ಪೂರ್ಣೇಶ ಹಾಗೂ ಹೆಂಡತಿ ರೇವತಿ ಮೇಲೂ ಗೋಪಾಲಕೃಷ್ಣ ಗೌಡನ ಗುಂಪು ಮೆಣಸಿನ ಹುಡಿ ಎರಚಿ ತನ್ನ ಕ್ರೌರ್ಯವನ್ನು ಮೆರೆದಿದೆ. ಈ ಸಂದರ್ಭದಲ್ಲಿ ಘಟನೆ, ಕೂಗಾಟದಿಂದ ಜನ ಬರುವಷ್ಟರಲ್ಲಿ ಅಲ್ಲಿಂದ ಗೋಪಾಲಕೃಷ್ಣ ಗೌಡ ಮತ್ತು ಅತನ ಗುಂಪು ಓಡಿ ಹೋಗುತ್ತದೆ. ತೀವ್ರರಕ್ತ ಸ್ರಾವದಿಂದ ಕುಸಿದಿದ್ದ ಸುಂದರ ಮಲೆಕುಡಿಯನನ್ನು ಅಲ್ಲಿಯ ಹಾಡಿಯ ಜನ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಪ್ರಕರಣದ ಗಂಭಿರತೆಯಿಂದಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಪೊಲೀಸರು ಕೇಸ್‌ದಾಖಲು ಮಾಡಿಕೊಂಡು ತನಿಖೆ ಆರಂಭಿಸುವುದರೊಳಗೆ ಕ್ರಿಮಿನಲ್‌ಗಳೆಲ್ಲಾ ತಲೆಮೆರೆಸಿಕೊಂಡಿದ್ದಾರೆ.

ಪೊಲೀಸರು ಬೀಸಿದ ಬಲೆಗೆ ಇವರಿನ್ನೂ ಬಿದ್ದಿಲ್ಲ! ಆದರೆ ಅದರಲ್ಲಿ ಒಬ್ಬರನ್ನು ಅಂದರೆ ಗೋಪಾಲಕೃಷ್ಣ ಗೌಡನ ಹೆಂಡತಿಯನ್ನು ಬಂಧಿಸಲಾಗಿದೆ. ಈ ಹಿಂದೆಯೂ 1999 ರಲ್ಲಿ ಇದೇ ಗೋಪಾಲಕೃಷ್ಣ ಗೌಡನು ಸುಂದರ ಮಲೆಕುಡಿಯರ ಮನೆಮೇಲೆ ದಾಳಿ ಮಾಡಿದ್ದ.  ಆಗ ಮನೆಯಲ್ಲಿದ್ದದ್ದು ಅವರ ಪತ್ನಿ ರೇವತಿ ಮತ್ತು ಎಳೆಯ ಮಗು ಪೂರ್ಣೇಶ. ತೊಟ್ಟಿಲಲ್ಲಿ ಮಲಗಿದ್ದ ಮಗುವಿಗೆ ಮಚ್ಚು(ಕತ್ತಿ) ಎತ್ತಿ ಹೊಡೆಯಲು ಹೋದಾಗ ತೊಟ್ಟಿಲಿನ ಹಗ್ಗವನ್ನು ಮಚ್ಚಿನಿಂದ ಕತ್ತರಿಸಿದ ಅವರ ಗುಂಪು ಮಗುವಿನ ಮೇಲೆ ದಾಳಿ ಮಾಡಲು ಹೋದಾಗ ತಾಯಿ ರೇವತಿ ತಡೆ ಹಿಡಿದುದರಿಂದ ಆಕೆಯ ಕೈ ಬೆರಳು ಕತ್ತರಿಸಿ ಹೋಗಿದೆ. ಹೀಗೆ ಗೋಪಾಲಕೃಷ್ಣ ಗೌಡ 16 ವರ್ಷಗಳಿಂದ ಈ ಕುಟುಂಬದ ಜಾಗ ಕಬಳಿಸಲು ನಿರಂತರ ಪ್ರಯತ್ನಿಸುತ್ತಲೇ ಬಂದಿದ್ದಾನೆ. ಆತನ ವಾದವೆಂದರೆ ಈ ಜಮೀನು ತನ್ನ ಕುಮ್ಕಿ ಜಾಗವೆಂದು ಅದನ್ನು ಬಿಟ್ಟು ಬಿಡಬೇಕೆಂಬುದಾಗಿದೆ. ವಿಚಿತ್ರವೆಂದರೆ ಕುಮ್ಕಿ ಜಮೀನು ಕೃಷಿ ಮಾಡಲ್ಪಡುವ ಪಕ್ಕದ್ದೇ ಆಗಿರುತ್ತದೆ. ಆದರೆ ಈತನ ಮನೆ ಜಮೀನಿಗೂ ಇಲ್ಲಿಗೂ ಸುಮಾರು 3 ಕಿ.ಮಿ. ದೂರವಿದೆ. ಆತನದ್ದು ಮೊಂಡುವಾದ. ಕಳೆಗಿಡ ಕತ್ತರಿಸುವುದೂ ಕೂಡ ಸುಂದರ ಮಲೆಕುಡಿಯ ಮತ್ತು ಕುಟುಂಬವನ್ನು ಕೊಲೆಗೈಯ್ಯುವ ವ್ಯವಸ್ಥಿತ ಪ್ರಯತ್ನವೆಂಬುದು ಈ ಸಂದರ್ಭಗಳಿಂದ ತಿಳಿಯುತ್ತದೆ.

ನಮ್ಮ ನಿಯೋಗ ಆ ಪ್ರದೇಶಕ್ಕೆ, ಕಾಟಾಜೆ ಪ್ರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿಯ ಜನ ಗೋಪಾಲಕೃಷ್ಣ ಗೌಡನ ಮತ್ತು ಆತನ ಕ್ರಿಮಿನಲ್ ಗ್ಯಾಂಗ್‌ನಿಂದ ನಲುಗಿ ಹೋದ ಘಟನೆಯನ್ನು ಬಿಚ್ಚಿಟ್ಟರು. ಸರಕಾರ ಮತ್ತು ಆಡಳಿತ ಯಂತ್ರ ಇಲ್ಲಿ ನಿಷ್ಕ್ರಿಯವಾಗಿದೆ. ಭೂಮಾಲೀಕರ ಪರವಾಗಿರುವುದು ನಿಶ್ಚಲವಾಗಿದೆ. ಈ ಪ್ರದೇಶದ ಮಲೆಕುಡಿಯರು ಮತ್ತು ಕೆಲ ಅರಣ್ಯವಾಸಿಗಳು ಇತರ ಸಮುದಾಯಗಳು ತಾವು ಕೃಷಿ ಮಾಡಿಕೊಂಡಿರುವ ಜಮೀನಿಗೆ ಹಕ್ಕು ಪತ್ರಕೊಡಲು ನಿರಂತರವಾಗಿ ಸರಕಾರನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಹಿಂದೆ 1991 ರಲ್ಲಿ ಅಕ್ರಮ ಸಕ್ರಮ ನೀತಿಯನ್ನು ಸರಕಾರ ಪ್ರಕಟಿಸಿದಾಗ ಈ ಭಾಗದ ಜನರು ಅರ್ಜಿ ಹಾಕಿ ಕಾದರು. ಆದರೆ ಭೂಮಿಯ ಹಕ್ಕು ಪತ್ರ ಸಿಗಲಿಲ್ಲ. ಇದು ಅರಣ್ಯ ಭೂಮಿ ಎಂದು ಆಕ್ಷೇಪಣೆ ಎತ್ತಿ ನಿರಾಕರಿಸಿದರು. 2006ರ ಅರಣ್ಯ ಹಕ್ಕು ಕಾಯ್ದೆಯಂತೆ ಹಕ್ಕು ಪತ್ರ ಕೇಳಿ ಕ್ಲೇಮ್ ಅರ್ಜಿಯನ್ನು ಹಾಕಿ ಕಾದರು. ಗ್ರಾಮ ಪಂಚಾಯತ್ ಇವರಿಗೆ ಭೂಮಿ ಕೊಡಬೇಕೆಂಬ ಅಭಿಪ್ರಾಯಕ್ಕೆ ಬಂದು ಆಗಸ್ಟ್ 15, 2008 ರಂದು ಕೊಡುವುದಾಗಿ ಹೇಳಿತು. ಆದರೆ ಅದು ಜಾರಿಯಾಗಲಿಲ್ಲ ಎಂದು ನೊಂದು ಹೇಳುತ್ತಾರೆ ಸ್ಥಳೀಯ ನಿವಾಸಿ ಕೇಶವ. ಆಗಲೂ ಸರಕಾರ ಕೇಳಿಕೆಯನ್ನು ತಿರಸ್ಕರಿಸಿತು. ಕಾರಣ ಈ ಭೂಮಿ ಅರಣ್ಯ ಇಲಾಖೆಗೆ ಸೇರಿಲ್ಲವೆಂದು ಬಫರ್‌ಜೋನ್‌ನ ಭೂಮಿ ಎಂದು ಹೇಳಲಾಯಿತು. ಹೀಗೆ ಏನೋ ಒಂದು ನೆಪ ಹೇಳುತ್ತಲೇ ಭೂಮಿಯ, ಅವರ ಮೂಲಭೂತ ಹಕ್ಕನ್ನು ನಿರಾಕರಿಸುತ್ತಲೇ ಬರಲಾಗಿದೆ. ಇದರಲ್ಲಿ ಈ ಪ್ರದೇಶದಲ್ಲಿ ಪ್ರಭಲವಾಗಿರುವ ಗೊಪಾಲಕೃಷ್ಣ ಗೌಡನಂತಹ ಭೂಮಾಲಿಕರ ಪ್ರಭಾವವನ್ನು ನಿಖರವಾಗಿ ಜನ ಗುರುತಿಸುತ್ತಾರೆ.

ಇವರ ಅಟ್ಟಹಾಸ ಇಲ್ಲಿಗೆ ಮುಗಿಯುವುದಿಲ್ಲ. ಆ ಪ್ರದೇಶಕ್ಕೆ ರಸ್ತೆಯೇ ಇಲ್ಲ. ಜನ ಕೇಳಿ ಕೇಳಿ ಸುಸ್ತಾದ ಬಳಿಕ ಕರೆಂಟು ಕಂಬಗಳನ್ನು ನೆಡಲಾಗಿದೆ. ಈ ಪ್ರದೇಶದುದ್ದಕ್ಕೂ ಒಂದು ಹೊಳೆ ಹರಿಯುತ್ತದೆ. ಅದರ ನೀರನ್ನೂ ಕುಡಿಯಲು ಮತ್ತು ಬಳಸಲು ಹೋದಾಗ ಅದಕ್ಕೂ ತಡೆ ಹಾಕಿದ ಗೌಡ. ವಿಚಿತ್ರವೆಂದರೆ ಆ ಹೊಳೆಗೆ ’ಅಣಿಯೂರು ಹೊಳೆ’ ಎಂದು ಗೌಡರ ಮನೆಯ ಹೆಸರನ್ನು ಇಟ್ಟಿದ್ದಾರೆ.

ಇಲ್ಲಿನ ಕೃಷಿ ಅಭಿವೃದ್ದಿಗೆಂದು ’ಕಿಂಡಿ ಆಣೆಕಟ್ಟು’ ಕಟ್ಟುವ ಯೋಜನೆ ಜಾರಿಗೆ ತರಲು ಇದೇ ಗೌಡ ಬಿಡಲಿಲ್ಲ. ಕಾರಣ ನಿಲ್ಲುವ ನೀರು ಆತನ ಒಂದಿಷ್ಟು ಭೂಮಿ ಮುಳುಗಡೆಯಾಗುವುದು ಎಂದು ಐ.ಟಿ.ಡಿ.ಪಿ. ಯೋಜನೆಯಡಿ ನೀರಾವರಿಗೆಂದು 20 ಲಕ್ಷ ಖರ್ಚು ಆಯ್ತು. ಆದರೆ ಕಾಮಗಾರಿ ಪೂರ್ಣಗೊಳ್ಳಲು ಬಿಡಲಿಲ್ಲ. ರಸ್ತೆ ಕಾಮಗಾರಿಗೆಂದು 4 ಲಕ್ಷ ಖರ್ಚಾದರೂ ಅದನ್ನು ಪೂರ್ಣಗೊಳಿಸಲಿಲ್ಲ. ಇಲ್ಲಿ ಪ್ರದೇಶ ಹಿಂದುಳಿದೇ ಇರಬೇಕು ಎಂಬುದು ಪಾಳೇಗಾರಿ ಶಕ್ತಿಗಳ ಪ್ರಜ್ಞಾಪೂರ್ವಕ ಯತ್ನ. ಸರಕಾರದಿಂದ ಇದಕ್ಕೆ ಸಾಥ್.

ಬೋಬಯ್ಯ ಮಲೆಕುಡಿಯ ಎಂಬ ಒಬ್ಬ ಬಡವನಿಗೆ ಕುಡಿಯಲಿಕ್ಕಾಗಲಿ, ಕೃಷಿಗಾಗಲಿ ಸರಕಾರಿ ಭೂಮಿಯಲ್ಲಿ ಹರಿಯುವ ಕಾಲುವೆಯಿಂದ ನೀರು ತೆಗೆಯಲು ಬಿಡದೆ, ಹಲ್ಲೆ ದಬ್ಬಾಳಿಕೆಗಳು ನಡೆಸಿದಾತ ಗೋಪಾಲಕೃಷ್ಣ ಗೌಡ. ತನ್ನ ಜಮೀನಿನಲ್ಲಿ ಬೇಸಾಯ ಮಾಡಬೇಕೆಂಬ ಕನಸು ನನಸಾಗದೇ ಇದೀಗ ಮರಣ ಹೊಂದಿದ್ದಾರೆ ಆ ಬೋಬಯ್ಯನವರು.

ಈಗ ಸುಂದರ ಮಲೆಕುಡಿಯರವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವೈದ್ಯರು ತುಂಡಾದ ಕೈ ಜೋಡಿಸುವ ಪ್ರಯತ್ನ ಮಾಡಿದರಾದರೂ ಅದು ಫಲಿಸದಿರುವ ಸಂಭವವೇ ಹೆಚ್ಚು ಎಂದೂ ಸೂಚನೆ ನೀಡಿದ್ದಾರೆ. ಅವರಿಗೆ ಉನ್ನತ ಮಟ್ಟದ ಚಿಕಿತ್ಸೆ ಬೇಕು. ಅದಕ್ಕೆ ಹಣದ ಕೊರತೆ. ಇದೆಲ್ಲವನ್ನೂ ನಿಭಾಯಿಸುವಂತೆ, ಸರಕಾರವೇ ವೆಚ್ಚ ಭರಿಸಿ ಮೇಲ್ಮಟ್ಟದ ಸೌಲಭ್ಯ ಇರುವಲ್ಲಿಗೆ ದಾಖಲಿಸಲು ಸಂಘಟನೆಗಳು ಆಗ್ರಹಿಸಿವೆ. ಅಲ್ಲದೇ 25 ಲಕ್ಷ ಪರಿಹಾರ, ಮಗನಿಗೆ ಸರಕಾರಿ ಉದ್ಯೋಗ, ರಕ್ಷಣೆ,  ಎಲ್ಲರಿಗೂ ಭೂಮಿ ನೀಡಲು ಆಗ್ರಹಿಸಲಾಗಿದೆ.

ಕ್ರಿಮಿನಲ್ ಗೋಪಾಲಕೃಷ್ಣಗೌಡ ಮತ್ತು ಇತರೆ ಮೂವರು ತಲೆ ಮರೆಸಿಕೊಂಡಿದ್ದಾರೆ. ಗೌಡನ ಹೆಂಡತಿಯನ್ನು ಮಾತ್ರ ಬಂಧಿಸಲಾಗಿದೆ. ಜನರು ಪ್ರತಿಭಟಿಸುತ್ತಿದ್ದಾರೆ. ಆದರೆ ಕಾಂಗ್ರೆಸ್, ಬಿಜೆಪಿಯಂತಹ ಪಕ್ಷಗಳು ಗಾಢ ಮೌನಕ್ಕೆ ಶರಣಾಗಿ ಅವೂ ಭೂಗತವಾಗಿವೆ!.

ಈ ಘಟನೆ ನಡೆದ ಪ್ರದೇಶಕ್ಕೆ ಜುಲೈ 30ರಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಎಸ್.ವೈ. ಗುರುಶಾಂತ್, ಬೆಳ್ತಂಗಡಿಯ ಮುಖಂಡರು ಭೇಟಿ ನೀಡಿದ್ದಾರೆ. ಆಸ್ಪತ್ರೆಗೆ ಎಸ್.ವೈ.ಜಿ., ರಾಜ್ಯ ಸಹ ಸಂಚಾಲಕರಾದ ಕೃಷ್ಣಪ್ಪ ಕೊಂಚಾಡಿ, ಎಲ್. ಶೇಖರ್, ಜಯಕುಮಾರ್ ಸುಂದರ್ ಮತ್ತು ಅವರ ಪತ್ನಿಯನ್ನು ಕಂಡು ವಿಚಾರಿಸಿದ್ದಾರೆ. ಸಿಪಿಐ(ಎಂ) ತಾಲೂಕು ಸಮಿತಿ, ದ.ಕ.ಜಿಲ್ಲಾ ಸಮಿತಿಯು ದಾಳಿಯ ಕೃತ್ಯವನ್ನು ಖಂಡಿಸಿದೆ.

ಮಂಗಳೂರಿನಲ್ಲಿ ಜುಲೈ 27 ರಂದು ಕೂಡಲೇ ಬೆಳ್ತಂಗಡಿಯಲ್ಲಿ ಪ್ರತಿಭಟನೆ ಆಗಿದೆ. ಅಲ್ಲದೇ ಜುಲೈ 31 ರಂದು ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ 600ಕ್ಕೂ ಅಧಿಕ ಆದಿವಾಸಿ ಜನತೆ ಭಾಗವಹಿಸಿದ್ದಾರೆ. ಹೋರಾಟ ಮುನ್ನಡೆಸಲು ತೀರ್ಮಾನಿಸಲಾಗಿದೆ.

 
Comments Off on ಬೆಳ್ತಂಗಡಿ: ಆದಿವಾಸಿಗಳ ಮೇಲೆ ಭೂಮಾಲಿಕ ಕ್ರಿಮಿನಲ್‌ಗಳ ದಬ್ಬಾಳಿಕೆ ಸುಂದರ ಮಲೆಕುಡಿಯರ ಕೊಲೆಗೆಯತ್ನ – ಹಲ್ಲೆ

Posted by on 05/08/2015 in ಈ ವಾರ, ದಲಿತ ಲೋಕ

 

Tags: , , , ,

ಹೊಣೆಗೇಡಿ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗುಂಪುಗಾರಿಕೆ

 

ಎಸ್. ವೈ. ಗುರುಶಾಂತ್
ಸಂಪುಟ 9 – ಸಂಚಿಕೆ 31- 02 ಆಗಸ್ಟ್ 2015

SM

ಈ ವಾರ ಹಲವು ಪ್ರಮುಖ ಘಟನೆಗಳಿಂದ ತುಂಬಿ ಹೋಗಿತ್ತು. ರೈತರ ಆತ್ಮಹತ್ಯೆಗಳ ಸರಣಿ ಮುಂದುವರಿದಿರುವಾಗಲೇ ಆತ್ಮಹತ್ಯೆಗೀಡಾದ ಕುಟುಂಬಗಳತ್ತ ವಿವಿಧ ಪಕ್ಷಗಳ ನಾಯಕರು, ಮುಖ್ಯಮಂತ್ರಿ, ಸಚಿವರ ದಂಡು, ವಿರೋ ಧ ಪಕ್ಷಗಳ ಶಾಸಕರ ಭೇಟಿ ಮಾಡಿ ಸೂತಕದ ಮನೆಯಲ್ಲಿ ’ಸಾಂತ್ವನದ ರಾಜಕಾರಣ’ ನಡೆಸಿ ತಮ್ಮ ಕರ್ತವ್ಯವನ್ನು ಪೂರೈಸಿದರು! ಇತ್ತ ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವೂ ಮಂಡಿಸಲ್ಪಟ್ಟು ನಿರೀಕ್ಷೆಯಂತೆ ಬಹುಮತವೇ ಇಲ್ಲದೇ ಉಫ್ ಎಂದು ಬಿದ್ದು ಹೋಯಿತು(ಜುಲೈ 22, 2015). ಅವಿಶ್ವಾಸ ನಿರ್ಣಯ ಮಂಡಿಸಿದ ಜೆಡಿ ಎಸ್ ನ ಕುಮಾರಸ್ವಾಮಿಯವರಿಗೆ ಅದರಿಂದ ಏನು ಲಾಭವಾಯಿತೋ ಗೊತ್ತಿಲ್ಲ! ಬೆಳಗಾವಿ ಅಧಿವೇಶನದಿಂದಲೂ ಸುದ್ದಿಯ ಕೇಂದ್ರ ಸ್ಥಾನದಲ್ಲಿರಲು ಪೈಪೋಟಿ ನಡೆಸಿದ್ದ ಹೆಚ್.ಡಿ.ಕೆ ಬಿಜೆಪಿ ಜೊತೆಯಲ್ಲಿ ನಿರ್ಣಯ ಮಂಡಿಸುವ ಯತ್ನಕ್ಕಿಳಿದರು. ಆದರೆ ಆರಂಭದಲ್ಲಿ ಹೂಂ ಎಂದಿದ್ದ ಬಿಜೆಪಿ ಇದರಿಂದ ತಮಗಷ್ಟು ಲಾಭವಾಗದ ಬಗ್ಗೆ ’ಹುಶಾರಾ’ಗಿ ಹಿಂದೆ ಸರಿಯಿತು. ಆ ಬಳಿಕ ಸ್ವಪಕ್ಷೀಯರ ಗಟ್ಟಿ ಬೆಂಬಲವೂ ಇಲ್ಲದೇ ಮಂಡನೆ, ಅದರ ಮೇಲಾದ ಚರ್ಚೆಯೂ ಔಪಚಾರಿಕವಾಗಿ ಮಾರ್ಪಟ್ಟು ಗಂಭೀರ ನಡಾವಳಿಯೊಂದು ನಗಣ್ಯವಾಯಿತು. ಇಷ್ಟು ಮಾತ್ರವಲ್ಲ, ಕಾಂಗ್ರೆಸ್ ಪಕ್ಷದೊಳಗೆ ಈ ವಾರ ಆಗಿರುವ ಕೆಲ ಬೆಳವಣಿಗೆಗಳು ದೂರಗಾಮಿ ಪರಿಣಾಮ ಬೀರುವ ಸಾಧ್ಯತೆಗಳನ್ನು ತೆರೆದಿರಿಸಿದೆ.

ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದೊಳಗೆ ನಡೆದಿರುವ ತೀವ್ರ ಪೈಪೋಟಿ, ಬಣಗಳ ಬಡಿದಾಟಕ್ಕೆ ರಾಜ್ಯದಲ್ಲಿ ನಡೆದಿರುವ ರೈತರ ಆತ್ಮಹತ್ಯೆಗಳ ದುರಂತ ಘಟನೆಗಳೂ ವೇದಿಕೆಯಾದುದು ನಾಚಿಕೆಗೇಡು. ಮತ್ತೇ ರಾಜ್ಯದಲ್ಲಿ ಆರಂಭಗೊಂಡಿರುವ ರೈತರ ಆತ್ಯಹತ್ಯೆಗಳ ಸರಣಿ ಸ್ಪೋಟಕ ರೀತಿಯಲ್ಲಿ ಮುಂದುವರಿದಿರುವಾಗ ರಾಜ್ಯ ಸರಕಾರ ತನ್ನ ಪಾಲಿನಲ್ಲಿ ಮಾಡಲು ಸಾಧ್ಯವಿರುವ ಪರಿಹಾರದ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬುದು ನಿಚ್ಛಳ. ಹಾಗೇ ನೋಡಿದರೆ ದೇಶದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಅಂತಹ ನೀತಿಯೂ ಇಲ್ಲವೆಂಬುದು ಸ್ಪಷ್ಟ. ಮೇಲಾಗಿ ಈ ಪಾತಕದಲ್ಲಿ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಪಕ್ಷದ ಪಾತ್ರ ಪ್ರಧಾನವಾಗಿರುವುದು ನಿಸ್ಸಂಶಯ. ಹೀಗಿರುವಾಗ ಕೇವಲ ಸಾಂತ್ವನದ ರಾಜಕಾರಣ ಬಿಟ್ಟರೆ ಇವರಿಗೆ ಮತ್ತೇನು ನಟಿಸಲು ಸಾಧ್ಯ?

ಇಂತಹ ಸ್ಥಿತಿಯಲ್ಲಿ ದಿಕ್ಕೇ ತೋಚದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಸಂಪುಟ ಕೈಕಟ್ಟಿ ಕುಳಿತಿರುವಾಗ ಮಂಡ್ಯದ ರೈತರ ಮನೆಗಳಿಗೆ ಭೇಟಿ ನೀಡಿ ಒಂದಿಷ್ಟು ನಿಧಿಯನ್ನೂ ಕೊಟ್ಟ ಎಸ್.ಎಂ.ಕೃಷ್ಣ ಸಂದರ್ಭದ ಲಾಭ ಪಡೆಯಲು ಮುಂದಾದರು. ಸರಕಾರ ನಿಕ್ಷ್ರಿಯವಾಗಿದೆಯೆಂದೂ ತಮ್ಮ ಕಾಲದ ವೀರೇಶ್ ವರದಿಯನ್ನು ಜಾರಿಗೊಳಿಸುತ್ತಿಲ್ಲವೆಂದೂ ದೂರಿ ಸಿದ್ಧರಾಮಯ್ಯನವರ ವಿರುದ್ಧ ಪರೋಕ್ಷವಾದ ಧಾಳಿಯನ್ನು ನಡೆಸಿದರು ಎಸ್.ಎಂ.ಕೆ. ಮರು ದಿನ ಮಂಡ್ಯದ ರೈತ ಕುಟುಂಬಗಳನ್ನು ಬೇಟಿ ಮಾಡಿದ ಸಿ.ಎಂ.ರವರು ’ಕೃಷ್ಣರ ಕಾಲದಲ್ಲೇ ಆ ವರದಿ ಜಾರಿಯಾಗಲಿಲ್ಲ, ಶಿಫಾರಸುಗಳ ಬಗ್ಗೆ ಜನರ ಅಭಿಪ್ರಾಯ ಏನು ಅಂತಾ ಗೊತ್ತಿಲ್ಲವೇ, ವರದಿ ವಾಸ್ತವಿಕವಾಗಿಲ’ ಎಂದು ತಿರುಗೇಟು ನೀಡಿದರು. ಇಲ್ಲಿ ಎರಡೂ ಬಣಗಳಲ್ಲಿದ್ದ ಅಸಮಧಾನ ತೆರೆ ಮರೆಯಿಂದ ಹೊರ ಹರಿದಿದ್ದು ಗೋಚರ. ಅಂದು ರೈತರ ಭೇಟಿಗೆ ಅಣಿಯಾಗಿದ್ದ ಎಸ್.ಎಂ.ಕೃಷ್ಣರವರ ಮನೆಗೆ ಅವರ ಶಿಷ್ಯ ಸಚಿವ ಡಿ.ಕೆ.ಶಿವಕುಮಾರ್ ಹೋದಾಗ ಅವರ ನಡುವೆ ಅಸಮಧಾನ ಹೊಗೆಯಾಡುತ್ತಿರುವುದು ಬಹಿರಂಗವಾಗಿದೆ. (ಡಿಕೆಶಿಗೆ ವಹಿಸಿದ್ದ ಕೆಲಸವನ್ನು (ಸಿದ್ದು ಮೇಲೆ) ಮಾಡದೇ ಡಿಕೆಶಿ ಹೊಂದಾಣಿಕೆ ಮಾಡಿಕೊಂಡಿದ್ದಾನೆ ಎಂಬ ಮುನಿಸು ಕೃಷ್ಣರಿಗಿದೆಯಂತೆ!) ಅದೇನೇ ಇರಲಿ, ಕೃಷ್ಣರ ಭೇಟಿ ಸಿದ್ಧರಾಮಯ್ಯನವರ ಮೇಲೆ ಕೃಷ್ಣರ ಬಣಕ್ಕೆ ಇರುವ ಕೋಪದ ಪ್ರದರ್ಶನವೂ ಹೌದು. ಅಲ್ಲದೇ ಆಗಲೇ ಅಂಬರೀಶ್ ಬಣ ಸಿ.ಎಂ.ಜೊತೆ ಡಿಸಿಸಿ ಬ್ಯಾಂಕ್ ಅದ್ಯಕ್ಷರ ನೇಮಕದ ವಿಚಾರದಲ್ಲಿ ಬಹಿರಂಗ ಗುದ್ದಾಟಕ್ಕೆ ಇಳಿದಿದೆ. ಒಡೆದ ಮನೆಯಾಗಿರುವ ಮಂಡ್ಯ ಕಾಂಗ್ರೆಸ್‌ನಲ್ಲಿ ಕೃಷ್ಣರ ಭೇಟಿಯು ಗುಂಪುಗಾರಿಕೆಯನ್ನು ಕ್ರೋಢೀಕರಿಸಬಲ್ಲದು.

ಆದರೆ ಬಣದ ರಾಜಕಾರಣಕ್ಕೆ ತೀವ್ರತೆ ತಂದು ಕೊಟ್ಟಿರುವುದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹುಟ್ಟು ಹಬ್ಬ! ಈ ಸಂದರ್ಭವನ್ನು ಸಿದ್ಧರಾಮಯ್ಯನವರ ಬಣದ ಮೇಲೆ ಕಾಂಗ್ರೆಸ್ ಪಕ್ಷದೊಳಗಿನ ಎಲ್ಲಾ ಅತೃಪ್ತರನ್ನೂ ಒಂದೆಡೆ ಕ್ರೋಢೀಕರಿಸುವ ಪ್ರಯತ್ನವಾಗಿ ಬಳಕೆಯಾಗಿದೆ. ಅಂದು ಖರ್ಗೆಯವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ’ಶಾಸಕರು ಬಯಸಿದರೆ ರಾಜ್ಯದ ರಾಜಕಾರಣಕ್ಕೆ ಮರಳಲು ಸಿದ್ಧ’ ಎಂದೂ, ’ಶಾಸಕರು ಬಯಸುತ್ತಿದ್ದಾರೆ ಬನಿ’ ಎಂದವರಿಗೆ ’ಹಾಗೆ ಬಯಸುತ್ತಿರುವವರ ಪಟ್ಟಿ ಕೊಡಿ’ ಎಂದು ಹೇಳಿರುವುದು ಅನೇಕ ಅರ್ಥಗಳನ್ನು ಹೊರಡಿಸಿದೆ. ಕಾಂಗ್ರೆಸ್‌ನ ಹೈಕಮಾಂಡ್ ಹೇಳಿದಂತೆಯೇ ಚಾಚೂ ತಪ್ಪದೇ ನಡೆಯುವ ಖರ್ಗೆಯವರು ಹೀಗೆ ಬಹಿರಂಗವಾಗಿ ಹೇಳಿರುವುದು ಹೈಕಮಾಂಡ್‌ನ ಇಂಗಿತವೂ ಸಿದ್ದು ವಿರೋಧವಾಗಿದೆ, ಸಿದ್ದು ಬದಲಿಸಲು ಖರ್ಗೆಯವರಿಗೆ ನೀಡಿದ ಹಸಿರು ನಿಶಾನೆ ಎಂದೆಲ್ಲಾ ವ್ಯಾಖ್ಯಾನಿಸಲಾಗುತ್ತಿದೆ. ಇದು ಅಧಿಕಾರಕ್ಕಾಗಿ ಕಾದಿರುವವರಿಗೂ , ’ಮೂಲ’ ಕಾಂಗ್ರೆಸ್ಸಿಗರಿಗೂ ಒಟ್ಟು ಈ ಬಣದ ಗುಂಪುಗಾರಿಕೆಗೆ ಬಲ ನೀಡಿದಂತಾಗಿದೆ. ಖರ್ಗೆ ರಾಜ್ಯ ಸರಕಾರದ ಕಾರ್ಯಗಳ ಬಗ್ಗೆ ಏನೂ ಮಾತನಾಡದೇ ಇರುವುದರ ಗುಟ್ಟೇನು?

ಅತ್ತ ಕೃಷ್ಣ ತಮ್ಮ ಮಂಡ್ಯ ಭೇಟಿಯ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡಲಿರುವುದು, ಇತ್ತ ಖರ್ಗೆ ಪ್ರತಿಕ್ರಿಯೆ ಇವೆಲ್ಲಾ ಸ್ವತಃ ಹೈಕಮಾಂಡ್ ಸಿದ್ಧು ಮೇಲೆ ಮುನಿದಿದೆ ಎಂಬ ಸಂಕೇತವನ್ನು ನೀಡಿದೆ ಎಂದೂ ಅರ್ಥೈಸಲಾಗುತ್ತಿದೆ. ಇದರ ಮುಂದಿನ ಹೆಜ್ಜೆಯೆಂದರೆ ರಾಜ್ಯಕ್ಕೆ ಸಾಂತ್ವನ ಹೇಳಲು ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಾಗ ಆಗಬಹುದಾದ ವಿದ್ಯಾಮಾನಗಳ ನಿರೀಕ್ಷೆಯೂ ಇದೆ. ಅಂದರೆ ಇದೇ ಗುರುವಾರ ಆಂದ್ರಕ್ಕೆ ರಾಹುಲ್ ತೆರಳುವಾಗ ಬೆಂಗಳೂರಿನಲ್ಲಿಳಿದ ಸಂದರ್ಭದಲ್ಲಿ ಒಂದಿಬ್ಬರು ಶಾಸಕರು ಸಿದ್ದು ಮೇಲೆ ದೂರು ಸಲ್ಲಿಸಿಯೂ ಆಗಿದೆಯಂತೆ. ಸ್ಥಿರ, ಸ್ಥಳೀಯವಾಗಿ ಬಲಿಷ್ಟವಾದ ನಾಯಕತ್ವವನ್ನು ನಿರಾಕರಿಸುವ ಕಾಂಗ್ರೆಸ್ ತನ್ನದೇ ಸರಕಾರವನ್ನು ಅಸ್ಥಿರಗೊಳಿಸಿದಲ್ಲಿ ಆಶ್ಚರ್ಯವಿಲ್ಲ.

ವಿಪರ್ಯಾಸವೆಂದರೆ ರೈತರು ಸಾಲು ಸಾಲಾಗಿ ಸಾಯುತ್ತಿದ್ದರೂ ಅದರ ಬಗ್ಗೆ ನಿಜಕ್ಕೂ ಮಾನವೀಯ ಕಾಳಜಿಯೂ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ಬಣದ ಗುಂಪುಗಾರಿಕೆಯ ರಾಜಕಾರಣವೇ ಮುಖ್ಯವಾಗಿದೆ. ಬೆಳಗಾವಿಯಲ್ಲಿ ರೈತರ ಆತ್ಮಹತ್ಯೆ ಪ್ರಶ್ನೆ ಸದನದಲ್ಲಿ ತೀವ್ರ ಚರ್ಚೆಯಾಗುವಾಗಲೇ ಸಚಿವ ಅಂಬರೀಶ್ ಕ್ಯಾತೆ ತೆಗೆದರು. ಈಗ ಖರ್ಗೆಯವರ ಚಾಲನೆ ಇನ್ನೊಂದು ಬಗೆ. ಬಿಜೆಪಿ ದುರಾಡತಕ್ಕೆ ಬೇಸತ್ತು ಬದಲಿಯಾಗಿ ಕಾಂಗ್ರೆಸ್ಸನ್ನೇ ಆರಿಸಿದಾಗ ಜನರಲ್ಲಿ ಹಲವು ನಿರೀಕ್ಷೆಗಳಿದ್ದವು. ಎರಡು ವರುಷಗಳಲ್ಲಿ ಅವು ಹುಸಿಯಾಗಿವೆ. ಈ ವೈಫಲ್ಯಗಳನ್ನೇ ಕೋಮುವಾದಿ ಬಿಜೆಪಿ ಬಳಸುತ್ತಿದೆ. ಈ ಪಾತಕಗಳಲ್ಲಿ ತನ್ನ ಕೇಂದ್ರ ಸರಕಾರದ ಪಾಲು ಇರುವುದನ್ನು ಮರೆ ಮಾಚುತ್ತಿದೆ. ಇಂತಹ ಸ್ಥಿತಿಯಲ್ಲೂ ಕೇಂದ್ರವನ್ನು ಎದುರಿಸದೇ ಕಾಂಗ್ರೆಸ್ ಪಕ್ಷ ರಾಜಕೀಯ ದಿವಾಳಿಯನ್ನು ಎತ್ತಿ ತೋರಿಸುತ್ತಿದೆ. ಈ ಇಬ್ಬರ ಆಟದಲ್ಲಿ ಜನರ ಜೀವನ ತತ್ತರ.

ಸಿದ್ಧರಾಮಯ್ಯನವರಿಗೆ ಪಾಠ ಕಲಿಸುವುದಿದ್ದರೆ ಅದು ಅವರ ಆಂತರಿಕ ವಿಚಾರ, ಅಲ್ಲೇ ಹೇಳಲಿ. ಆದರೆ ಬಹಿರಂಗವಾಗಿ ಸರಕಾರವನ್ನು ಅತಂತ್ರಗೊಳಿಸುವ ಸೂಚನೆಗಳು ಅಂತಿಮವಾಗಿ ಆಡಳಿತ ವ್ಯವಸ್ಥೆಯನ್ನೇ ಶಿಥಿಲಗೊಳಿಸುತ್ತವೆ. ಜನ ಸಾಮಾನ್ಯರ ಪಾಲಿಗೆ ಈಗಾಗಲೇ ಇಲ್ಲವಾಗಿರುವ ಈ ಆಡಳಿತ ಮತ್ತಷ್ಟೂ ಅಧಿಕಾರಶಾಹಿತ್ವದಿಂದ ಮೆರೆದು ಜನರ ಜೀವ ಹಿಂಡುವುದಕ್ಕೆ ಅವಕಾಶ ಕಲ್ಪಿಸುವುದು ಅಕ್ಷಮ್ಯ ಅಪರಾಧ. ಅದಕ್ಕೆ ಕಾಂಗ್ರೆಸ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದು ನೆನಪಿರಲಿ.

 
Comments Off on ಹೊಣೆಗೇಡಿ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗುಂಪುಗಾರಿಕೆ

Posted by on 28/07/2015 in ಈ ವಾರ

 

Tags: , , , , ,

ಇವರ ನೀತಿ ಒಂದೇ, ರೀತಿಯೂ ಒಂದೇ! ಸಾಂತ್ವನದ ರಾಜಕಾರಣದಲ್ಲಿ ಮುಳುಗಿರುವ ಸಂತ್ರಸ್ತ ರಾಜಕೀಯ ಪಕ್ಷಗಳು

ಎಸ್.ವೈ. ಗುರುಶಾಂತ್

ಸಂಪುಟ  9, ಸಂಚಿಕೆ 30, 26 ಜುಲೈ  2015

’ರೈತರ ಆತ್ಮಹತ್ಯೆ ವಿಚಾರದಲ್ಲಿ ರಾಜಕೀಯ ಸಲ್ಲದು, ಯಾರಿಗೂ ಸಲ್ಲದು’ ಎಂದು ಹೇಳುವ ಆ ಎಲ್ಲಾ ಪಕ್ಷಗಳು ನಿಜಕ್ಕೂ ಮಾಡುತ್ತಿರುವುದೇನು? ಎಂಬ ಪ್ರಶ್ನೆ ಅವುಗಳು ಆಡುತ್ತಿರುವ ಆಟ, ಆರ್ಭಟಗಳನ್ನು ನೋಡಿದ ಯಾರಿಗೂ ಬರದೇ ಇರದು. ಈ ವಾರ ವಿಧಾನಸಭಾ ಅಧಿವೇಶನ ಬೆಳಗಾವಿಯಿಂದ ಬೆಂಗಳೂರಿಗೆ ವರ್ಗವಾಗಿದೆ. 24 ರವರೆಗೂ ನಡೆಯಲಿದೆ. ಅಲ್ಲಿ ಆರಂಭವಾದ ರೈತರ ಬಗೆಗಿನ ’ಕಾಳಜಿ’ ಇಲ್ಲೂ ಹರಿಯುತ್ತಿರುವುದು ಸುಳ್ಳೇನಲ್ಲ. ಆದರೆ ಪರಿಹಾರವಂತೂ ಸಿಕ್ಕಿಲ್ಲ. ಅಧಿವೇಶನದ ಮುನ್ನಾ ದಿನಗಳಲ್ಲಿ ಪುನರ್ ಆರಂಭಗೊಂಡ ಆತ್ಮಹತ್ಯೆ ಅದೀಗ ವ್ಯಾಪಕ ಸಾಂಕ್ರಾಮಿಕ ವ್ಯಾಧಿಯಂತೆ ಹಬ್ಬುತ್ತಿದೆ. ದಿನಕ್ಕೆ ಆರು-ಎಂಟು ಜನ ರೈತರು ಬಲಿಯಾಗುತ್ತಲೇ ಇದ್ದಾರೆ. ವಿಧಾನ ಸಭೆಯಲ್ಲಿ, ಹೊರಗೆ ಏನೆಲ್ಲಾ ಮಾತುಕತೆಗಳು ನಡೆದರೂ ಯಾಕೆ ನಿಲ್ಲುತ್ತಿಲ್ಲ? ಅಂದರೆ ಆಡಳಿತ-ವಿರೋಧ ಪಕ್ಷಗಳ ಬೊಬ್ಬೆ ಹೊಡೆವ ಒಣ ಕಾಳಜಿಗೆ ಏನಾದರೂ ಕಿಮ್ಮತ್ತಿದೆಯೇ?

’ರಾಜಕೀಯ ಸಲ್ಲದು’ ಎಂದು ಹೇಳುವ ಪ್ರತಿ ಪಕ್ಷವೂ ಇತರರಿಗೆ ಬೇಡ ಎಂದು ಉಪದೇಶಿಸುತ್ತಿದೆಯೇ ಹೊರತು ಬೇರೇನಲ್ಲ. ಬೆಳಗಾವಿ ಅಧಿವೇಶನ ಪ್ರಕಟನೆಗೊಂಡ ಲಾಗಾಯ್ತಿನಿಂದ ಇಲ್ಲಿಯವರೆಗೂ ನಡೆಯುತ್ತಿರುವುದು ದುರ್ಲಾಭ ಗಿಟ್ಟಿಸುವ ಒಣ ರಾಜಕೀಯ ವರಸೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿ(ಎಸ್) ಪಕ್ಷಗಳು ಯಾರಿಗೂ ಯಾರೂ ಕಮ್ಮಿಯಲ್ಲವೆಂದು ಸ್ಪರ್ಧೆಗಿಳಿದಿರುವುದು ನಗ್ನ ಸತ್ಯ.

ಕಾರ್ಖಾನೆ ಮಾಲೀಕರು (ಈ ಎಲ್ಲಾ ಪಕ್ಷಗಳಲ್ಲಿರುವ ಪ್ರತಿಷ್ಠರು) ಕಬ್ಬು ಬೆಳೆಗಾರರ ಬಾಕಿ ಹಣ ಉಳಿಸಿಕೊಂಡಿರುವ ಪ್ರಶ್ನೆಯನ್ನು ಇತ್ಯರ್ಥ ಪಡಿಸಬೇಕೆಂಬ ಆಗ್ರಹದೊಂದಿಗೆ ಅಧಿವೇಶನ ಆರಂಭಗೊಂಡಿತು. ಅಧಿವೇಶನದ ಮುಂದೆ ಹಲವು ವಿಷಯಗಳು ಇದ್ದವಾದರೂ ಇದು ಪ್ರಧಾನ ಪ್ರಶ್ನೆಯಾಗಿ ಬಿಂಬಿತವಾದುದು ಸರಿಯಾಗಿದೆ. ಆದರೆ ಇಲ್ಲಿವರೆಗೂ ಒಂದು ಗಟ್ಟಿ ಪರಿಹಾರ ರೂಪುಗೊಳ್ಳಲಿಲ್ಲ. ರೈತರನ್ನು ಆತಂಕದ ದವಡೆಯಿಂದ ರಕ್ಷಿಸಲಿಲ್ಲ. ವಿಶೇಷವಾಗಿ, ಉತ್ತರ ಕರ್ನಾಟಕದ ಈ ಭಾಗದಲ್ಲಿ, ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಈ ಸಮಸ್ಯೆ ಜ್ವಲಂತವಾಗಿರುವುದನ್ನು ಗ್ರಹಿಸಿದ ಜಾತ್ಯಾತೀತ ಜನತಾದಳ ಆ ಪ್ರಶ್ನೆಯನ್ನು ಎತ್ತಿಕೊಂಡಿತು. ಅದರ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಿಂದ ಬೆಳಗಾವಿಗೆ 4 ದಿನಗಳ ಪಾದಯಾತ್ರೆ ಕೈಗೊಂಡರು. ಬೆಳಗಾವಿಯಲ್ಲಿ ಭರ್ಜರಿಯಾಗಿ ರೈತರ ಸಮಾವೇಶವನ್ನೂ ನಡೆಸಿದ್ದು ವಿಧಾನಸಭೆಯಲ್ಲೂ ಸರಕಾರದ ಮೇಲೆ ಬೀಳುವಲ್ಲಿ ಕುಮಾರನದ್ದೇ ದೊಡ್ಡ ದನಿಯಾಯಿತು. ಆಗಲೇ ನಡೆಯುತ್ತಿದ್ದ ರೈತರ ಆತ್ಮಹತ್ಯೆಗಳು, ಇದಕ್ಕೆ ಸಾಂತ್ವನವಾಗಿ ಎಲ್ಲಾ ಜೆಡಿ(ಎಸ್) ಶಾಸಕರು ಒಂದು ತಿಂಗಳ ಸಂಬಳ ನೀಡಿಕೆ, ಸಂಕಷ್ಟದಲ್ಲಿರುವ ರೈತರಿಗೆ ತಮ್ಮದೇ ಸಹಾಯವಾಣಿಯ ಆರಂಭ, ಮುಖ್ಯವಾಗಿ ಅವಿಶ್ವಾಸ ನಿರ್ಣಯ ಮಂಡನೆ ಹೀಗೆ ಅಧಿವೇಶನದ ಸಂದರ್ಭವನ್ನು ರಾಜಕೀಯವಾಗಿ ಬಳಸಲು ಜೆಡಿ(ಎಸ್) ಆಕ್ರಮಣಕಾರಿಯಾಗಿ ತೊ ಡಗಿತು. ಇವೆಲ್ಲವೂ ಪರಿಹಾರ ಕಂಡುಕೊಳ್ಳುವಲ್ಲಿ ವ್ಯರ್ಥ ಕಸರತ್ತುಗಳಾಗಿದ್ದವು. ತೋರಿಕೆಯ ಸ್ವರೂಪದಲ್ಲಿದ್ದವು.

ಇದು ವಿರೋಧ ಪಕ್ಷವಾಗಿರುವ ಬಿಜೆಪಿಗೆ ಇರುಸು ಮುರುಸು ತಂದಿತಲ್ಲದೇ ತನ್ನ ಶೋ ಸಪ್ಪೆಯೆನ್ನಿಸಿದ್ದಿರಿಂದ ಸರಕಾರದ ಮೇಲೆ ಕಿರಿಚಾಟ ಹೆಚ್ಚಿಸಿತು. ಜೆಡಿ(ಎಸ್)ನ ತಂತ್ರ ತಡವಾಗಿ ಅರಿತ ಅಥವಾ ಮತ್ತೇನೋ ಕಾರಣದಿಂದ ಅವಿಶ್ವಾಸ ನಿರ್ಣಯ ಜಂಟಿಯಾಗಿ ಮಂಡಿಸುವ ಪ್ರಸ್ತಾವದಿಂದ ದೂರ ಉಳಿಯಿತು ಬಿಜೆಪಿ. ಈ ಎರಡೂ ಪಕ್ಷಗಳೂ ಸೇರಿದರೂ ತಮ್ಮ ಸರಕಾರ ಉರುಳಿಸಲಾಗದು ಎಂದು ಗೊತ್ತಿದ್ದರೂ ಸಿದ್ಧರಾಮಯ್ಯನವರು ’ಅಹಿಂದ’ ಸಿದ್ಧಾಂತದ ತಮ್ಮನ್ನು ಪದಚ್ಯುತಿಗೊಳಿಸಲು ಇಬ್ಬರೂ ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದು ಕೇವಲ ಪ್ರಾಥಮಿಕ ರಕ್ಷಣಾ ರಾಜಕೀಯ ತಂತ್ರ. ಒಟ್ಟಾರೆ ಇಡೀ ಅಧಿವೇಶನದ ಅವಧಿಯಲ್ಲಿ ಬಿಜೆಪಿ ತನ್ನ ಅಸ್ತಿತ್ವ ತೋರಿಸಲು ಹೆಣಗುತ್ತಿರುವುದಂತೂ ನಿಜ.

ಹೀಗಾಗಿಯೇ ಅದು ಏನಾದರೂ ದೊಡ್ಡ ಶೋ ಮಾಡದಿದ್ದರೆ ಹೇಗೆ ಎಂದು ಇದೀಗ ಜುಲೈ 18 ಮತ್ತು 19 ರಂದು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಬಿಜೆಪಿಯ ಶಾಸಕರು, ಸಂಸದರುಗಳ ದಂಡು ಆರು ತಂಡಗಳಾಗಿ ಹೋಗಿ ಅಹವಾಲು ಕೇಳಿ ಸಾಂತ್ವನ ಹೇಳುವ ಯಾತ್ರೆಯೊಂದನ್ನು ರೂಪಿಸಿದೆ. ಇಷ್ಟೆಲ್ಲಾ ಆತ್ಮಹತ್ಯೆಗಳ ಸರಣಿ ನಡೆಯುತ್ತಿದ್ದರೂ ಬಾಯಿ ಮುಚ್ಚಿಕೊಂಡಿದ್ದ ಕೇಂದ್ರದ ಬಿಜೆಪಿ ಸರಕಾರ ’ಮಳೆಯ ಸಂಕಷ್ಟ’ದಿಂದ ಪಾರು ಮಾಡಲು ರೈತರಿಗಾಗಿ ಹೊಸ ವಿಮೆ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಿರುವುದಾಗಿ ಕೇಂದ್ರದ ಹಣಕಾಸು ಮಂತ್ರಿ ಹೇಳಿಕೆ ನೀಡಿರುವುದು ಸಾಂತ್ವನ ಪ್ಯಾಕೇಜ್‌ನ ಭಾಗ! ರೈತರು ಬೃಹತ್ ಸಾಲದ ಭಾದೆಗೆ ಈಡಾಗಿರುವುದು, ಕೃಷಿ ಕ್ಷೇತ್ರಕ್ಕೆ ಅಪಾರ ಬಂಡವಾಳ ಹೂಡಬೇಕಿದೆ ಎಂಬುದು ತಮಗೆ ಗೊತ್ತಿರುವುದಾಗಿಯೂ ಜೇಟ್ಲಿ ಹೇಳಿದ್ದಾರೆ. ತಾವು ಮಾಡುವುದೇನಿಲ್ಲ ಏನಿದ್ದರೂ ಮಾತಿನ ಸಾಂತ್ವನದ ರಾಜಕಾರಣ ಎಂಬುದೇ ಬಿಜೆಪಿಯ ನೀತಿಯಾಗಿ ಬಿಟ್ಟಿದೆ.

ಎಲ್ಲರೂ ಮಾಡುತ್ತಿರುವುದೂ ತಮ್ಮ ಸರಕಾರವನ್ನು ಉರುಳಿಸುವ ರಾಜಕಾರಣ ಎಂದ್ಹೇಳುವ ಕಾಂಗ್ರೆಸ್ ಪಕ್ಷವು ಎದ್ದು ಬಂದ ಇಡೀ ಪ್ರಶ್ನೆಗಳುದ್ದಕ್ಕೂ ಪರಿಹಾರ ನೀಡದೇ ತನ್ನ ಬೇಜವಾಬ್ದಾರಿತನವನ್ನೇ ತೋರಿಸಿದೆ. ಅದು ರೈತರ ಬಾಕಿ ಹಣ ಉಳಿಸಿಕೊಂಡಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಿಲ್ಲ. ರೈತರ ಆತ್ಮಹತ್ಯೆಗಳ ಸರಣಿಯೇ ಸಾಗಿರುವಾಗಲೂ ಒಬ್ಬ ಸಚಿವರೂ ಅವರ ಮನೆಗಳಿಗೆ, ಹಳ್ಳಿಗಳಿಗೆ ಭೇಟಿ ನೀಡಲಿಲ್ಲ. ಸಮಸ್ಯೆಯ ಗಂಭೀರತೆಯನ್ನು ಅನುಸರಿಸಿ ಅಗತ್ಯ ಪರಿಹಾರವನ್ನು ಕೈಗೊಳ್ಳಲಿಲ್ಲ. ಹಲವಾರು ರೈತ ಸಂಘಗಳು, ಎಡ ರಾಜಕೀಯ ಪಕ್ಷಗಳು, ಕೃಷಿ ತಜ್ಞರ ಸಲಹೆ, ಸೂಚನೆಗಳನ್ನು ಕ್ಯಾರೆ ಎನ್ನಲಿಲ್ಲ. ಕನಿಷ್ಟ ಕೇರಳದ ಮಾದರಿ ಅನುಸರಿಸಿ ಋಣ ಮುಕ್ತಿ ಆಯೋಗ ರಚಿಸಬಹುದಿತ್ತು. ಸಾಲಗಾರರ ಕಾಟ ತಾಳದೇ ಸಾಯುತ್ತಿರುವ ಅಂಶ ಮುಚ್ಚಿಡಲಾಗದೇ ಹೋದಾಗ ನಾಲ್ಕು ಬಡ್ಡಿ ಲೇವಾದೇವಿಗಾರರ ಮೇಲೆ ಕ್ರಮ ಜರುಗಿಸುತ್ತೇವೆಂದು ಬಂಧಿಸಿದ್ದು, ಕಾನೂನು ತಿದ್ದುಪಡಿ ತರುವ ಹೇಳಿಕೆ ಬಿಟ್ಟರೆ ಪರಿಸ್ಥಿತಿ ಸುಧಾರಿಸಲೇ ಇಲ್ಲ. ಈಗಲೂ ನೋಟೀಸ್ ನೀಡಿಕೆ ಅವ್ಯಾಹತವಾಗಿ ಸಾಗಿದೆ. ಮೀಟರ್ ಬಡ್ಡಿ ಏರುತ್ತಲೇ ಇದೆ. ಸಾವುಗಳೂ ಕೂಡ.

ಇಂತಹ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳು ಎಲ್ಲಿ ಮೇಲುಗೈ ಪಡೆಯುವವೋ ಎಂದು, ಟೀಕೆಗಳಿಗೆ ಉತ್ತರ ಎಂಬಂತೆ ಈ ವಾರದ ಕೊನೆಯಲ್ಲಿ ಒಂದು ದಿನ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಯ ಕೆಲ ಹಳ್ಳಿಗಳಿಗೆ ಭೇಟಿ ನೀಡುವ ಸುದ್ದಿ ಹೊರಬಂದಿದೆ. ದೇಶದ ಎಲ್ಲೆಲ್ಲೋ ರೈತರ ಮನೆಗೆ ಹೋಗಿ ಭಾಷಣ ಹೊಡೆದ ರಾಹುಲಗಾಂಧಿ ತಮ್ಮದೇ ಆಡಳಿತವಿರುವ ಕರ್ನಾಟಕಕ್ಕೆ ಯಾಕಿನ್ನೂ ಭೇಟಿ ನೀಡಿಲ್ಲ? ಒಂದು ಮೂಲದ ಪ್ರಕಾರ ರಾಜ್ಯದ ಮುಖ್ಯಮಂತ್ರಿಯೇ, ಸಚಿವರೇ ಭೇಟಿ ನೀಡಿಲ್ಲದಿರುವಾಗ ಈ ರಾಷ್ಟ್ರೀಯ ನಾಯಕ ಬಂದು ಹೋದರೆ ಇಬ್ಬರಿಗೂ ಮಾಧ್ಯಮಗಳು ಮತ್ತು ಜನ ಉಗಿಯುತ್ತಾರೆಂಬ ಭಯ ಆವರಿಸಿದೆ! ಹಾಗಾಗಿಯೇ ಮೊದಲು ರಾಜ್ಯ ನಾಯಕ, ನಂತರ ರಾಷ್ಟ್ರ ನಾಯಕ. ಇದು ಅರೇಂಜ್‌ಮೆಂಟ್! ಆದ್ದರಿಂದಲೇ ರಾಹುಲಗಾಂಧಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ. ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರಾದ ಪರಮೇಶ್ವರರೂ ಇದುವರೆಗೆ ಭೇಟಿ ಮಾಡಲಿಲ್ಲ. ಟೀಕೆ ಬಂದ ನಂತರ ಅವರೂ ಸಹ ತಮ್ಮದೇ ಬೇರೆ ಮಾರ್ಗದಲ್ಲಿ ಪ್ರವಾಸ ಯೋಜನೆ ರೂಪಿಸುತ್ತಿರುವುದು ಪಕ್ಷದೊಳಗಿನ ಗುಂಪುಗಾರಿಕೆ, ಒಳಜಗಳದ ಪರಿಣಾಮದಿಂದ ಹೊರತೇನಲ್ಲ.

ಈ ಎಲ್ಲಾ ಸಂಗತಿಗಳನ್ನು ಗಮನಿಸುವಾಗ ಕಾಣಿಸುವ ಅಂಶವೆಂದರೆ: ಈ ಮೂರು ಪಕ್ಷಗಳಿಗೆ ನಿಜಕ್ಕೂ ರೈತರ ಬಗ್ಗೆ, ಕೃಷಿ ಬಿಕ್ಕಟ್ಟಿನ ಬಗ್ಗೆ ಯಾವುದೇ ಗಂಭೀರ ಕಾಳಜಿಯಿಲ್ಲದಿರುವುದು. ಮತ್ತು ಮೂಲಭೂತ ಪರಿಹಾರದ ಕ್ರಮಗಳನ್ನು ನೀಡಲು ಸಿದ್ಧರಿಲ್ಲದಿರುವುದು. ಕಾರಣ ಇವರೆಲ್ಲರೂ ಒಪ್ಪಿಕೊಂಡ, ಜಾರಿಗೊಳಿಸುತ್ತಲೇ ಬಂದ ಉದಾರೀಕರಣ, ಜಾಗತೀಕರಣದ ಆರ್ಥಿಕ ನೀತಿಗಳ ಪರಿಣಾಮವೇ ಈ ದುಃಸ್ಥಿತಿಗೆ ಕಾರಣ. ಆದ್ದರಿಂದಲೇ ನಿತ್ಯ ನಡೆದಿರುವ ಈ ಆತ್ಮಹತ್ಯೆಗಳೆಂಬ ಕಗ್ಗೊಲೆಗಳ ಪ್ರಧಾನ ಹೊಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೊರಲೇ ಬೇಕು.

ತಮಗೇ ಚೆನ್ನಾಗಿ ತಿಳಿದಿರುವ ಈ ವಿನಾಶಕಾರೀ ನೀತಿಗಳನ್ನು ಕೈ ಬಿಡದೇ ಹಾಗೇ ಸಾಂತ್ವನ ಹೇಳಿ ಕೈ ಮುಗಿದು ಮರೆಯಾಗುವುದು ಎಂತಹ ರಾಜಕಾರಣ? ಹೀಗೆ ಕೈ, ಮೈಗೆಲ್ಲಾ ಮೆತ್ತಿಕೊಂಡ ಈ ರಕ್ತ ಸಿಕ್ತ ಕೈಗಳಿಂದ ನಡೆಸುವ ರಾಜಕಾರಣ ವಂಚಕತನದ್ದು.

 
Comments Off on ಇವರ ನೀತಿ ಒಂದೇ, ರೀತಿಯೂ ಒಂದೇ! ಸಾಂತ್ವನದ ರಾಜಕಾರಣದಲ್ಲಿ ಮುಳುಗಿರುವ ಸಂತ್ರಸ್ತ ರಾಜಕೀಯ ಪಕ್ಷಗಳು

Posted by on 22/07/2015 in ಈ ವಾರ

 

Tags: , , ,

ಜನರ ಮರೆತ ನಾಯಕರ ಒಳ ವರಸೆಗಳು

ಎಸ್.ವೈ. ಗುರುಶಾಂತ್

ಸಂಪುಟ  9, ಸಂಚಿಕೆ 29, 19 ಜುಲೈ  2015

ಇದು ಆ ಪಕ್ಷದ ಆಂತರಿಕ ವಿಷಯವೆಂಬುದು ನಿಜ. ಆದರೆ ಜನರಿಂದ ಚುನಾಯಿತವಾದ ಶಾಸಕನಾಗಿ, ಸಚಿವನೂ ಆಗಿರುವಾಗ ಅದರಲ್ಲೂ ’ಆಂತರಿಕ’ವೆನ್ನುವ ವಿಷಯವನ್ನು ಬಹಿರಂಗವಾಗಿಯೇ ಪ್ರಕಟಿಸಿದಾಗ ಅದು ಸಾರ್ವಜನಿಕ ವಿಷಯವಾಗದೇ ಉಳಿಯುವುದಾದರೂ ಹೇಗೆ?.

ಇಂದು ಬಹುತೇಕವಾಗಿ ರಾಜ್ಯದಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್‌ನೊಳಗಿನ ವಿದ್ಯಾಮಾನಗಳು ಬೀದಿ ಬಯಲಿಗೆ ಬರುವುದು ಸಾಮಾನ್ಯವಾಗಿದೆ. ವಸತಿ ಸಚಿವರಾದ ಅಂಬರೀಶ್‌ರವರು ವಿಧಾನಸಭಾ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ವಿರುದ್ಧವೇ ಅತೃಪ್ತಿ ಪ್ರಕಟಿಸಿ ರಾಜೀನಾಮೆ ಸಲ್ಲಿಸುವ ಬೆದರಿಕೆಯನ್ನೂ ಹಾಕಿದ್ದು ಆ ಪಕ್ಷದೊಳಗೆ ಕುದಿಯುತ್ತಿರುವ ಅತೃಪ್ತಿಯ ಮುಂದುವರಿದ ಭಾಗ. ಈಗ ಸಾಂತ್ವನ ಸಿಕ್ಕಿದೆಯಾದರೂ ಅಂಬರೀಶ್ ಅತೃಪ್ತಿಗೆ ಮಂಡ್ಯದ ರಾಜಕಾರಣವೇ ಮುಖ್ಯ ವಿಷಯವಂತೆ. ತನ್ನ ಬೆಂಬಲಿಗರೊಬ್ಬರಿಗೆ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷಗಿರಿ ಸಿಗಲಿಲ್ಲ, ಅದು ತಮ್ಮ ವಿರೋಧಿ ಎಂ.ಎಸ್. ಆತ್ಮಾನಂದ ಬಣದವರಿಗೆ ಸಿಕ್ಕಿದೆ, ಇದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪಾಲು ಇದೆ ಎಂಬುದು ಅಂಬರೀಶ್‌ರ ಅಸಮಧಾನ. ಹೀಗಾಗಿ ರೈತರ ಆತ್ಮಹತ್ಯೆಗಳ ಚರ್ಚೆ ನಡೆದಿರುವಾಗಲೂ ’ಮಣ್ಣಿನ ಮಗ’ನಿಗೆ ಮಂಡ್ಯದ ಸೀಟಿನದೇ ಚಿಂತೆ! ಸಿದ್ದು ಪಾತ್ರ ಎಷ್ಟಿದೆಯೋ ಗೊತ್ತಿಲ್ಲ, ಆದರೆ ಮಂಡ್ಯ ಕಾಂಗ್ರೆಸ್ ಹಲವು ಹೋಳುಗಳಾಗಿ ಒಡೆದ ಮನೆ ಎಂಬುದು ಜಗಜ್ಜಾಹೀರಾದ ವಿಷಯ. ಇಂತಹ ಬಡಿದಾಟಗಳಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆಯಾಗಿದ್ದ ನಟಿ ರಮ್ಯಾ ಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂತು. ವಸತಿ ಸಚಿವರಾಗಿರುವ ಅಂಬರೀಶ್ ರಾಜ್ಯಕ್ಕೂ, ಮಂಡ್ಯ ಜಿಲ್ಲೆಗೂ ಮಾಡಿರುವ ’ಸೇವೆ’ಯ ಬಗ್ಗೆ ತೀವ್ರ ಅಸಮಧಾನಗಳಿವೆ.

ಕಾಂಗ್ರೆಸ್ ಪಕ್ಷದೊಳಗಿನ ಇಂತಹ ಅನೇಕ ಸಂಗತಿಗಳು ಕೇವಲ ಒಬ್ಬರಿಗೆ ಸೀಮಿತವಾದುದಲ್ಲ. ಆರಂಭದಿಂದಲೂ ಸಿದ್ಧರಾಮಯ್ಯ ಸಿ.ಎಂ.ಆದಾಗಿನಿಂದಲೂ ಗುಂಪುಗಾರಿಕೆಯು ವಲಸಿಗ ಮತ್ತು ಮೂಲ ಕಾಂಗ್ರೆಸ್ಸಿಗರು ಎಂಬ ಆಧಾರದಲ್ಲಿಯೂ ನಡೆದೇ ಬಂದಿದೆ. ಕೆಲ ಬಾರಿ ಪದಚ್ಯುತಿಯ ವಿಫಲ ಪ್ರಯತ್ನಗಳು ನಡೆದಿವೆ. ನಡೆಯುತ್ತಲೇ ಇವೆ. ಪಕ್ಷ ಮೂಲ ಕಾಂಗ್ರೆಸ್ಸಿಗರಲ್ಲಿ, ಸರಕಾರ ವಲಸಿಗರ ಕೈಯಲ್ಲಿದೆ ಎಂಬುದು ಮೇಲು ನೋಟದ ವ್ಯಾಖ್ಯಾನ. ಇಂತಹ ವಾಗ್ವಾದಗಳಿಂದ ಒಂದಿಷ್ಟು ಹುಲುಸಾಗಿ ಮೇಯಲು, ಮೆರೆಯಲು ಅವಕಾಶ ಗಿಟ್ಟಿಸಿಕೊಂಡವರೂ ಇದ್ದಾರೆ. ಪಕ್ಷದೊಳಗಿನ ಈ ಗುಂಪುಗಾರಿಕೆ ಹೈಕಮಾಂಡ್‌ನ ಮಧ್ಯಪ್ರವೇಶ, ರಾಜೀ ಸೂತ್ರಗಳ ನಡುವೆಯೂ ಅದೇನೂ ಮಾಯವಾಗಿಲ್ಲ. ಇಂದೂ ಅದು ಮುಂದುವರಿದಿರುವುದೇ ಈಗಿನ ಬೆಳವಣಿಗೆಗಳು. ಇದಕ್ಕೆ ಸಾಕ್ಷಿಯಾಗುವಂತೆ ಏಕಾಏಕಿಯಾಗಿ ಸದನ ನಡೆದಿರುವಾಗಲೇ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾದ ಪರಮೇಶ್‌ರವರು ಬಿ.ಬಿ.ಎಂ.ಪಿ. ಚುನಾವಣೆಗೆ ಮೊದಲು ಮಂತ್ರಿಮಂಡಲ ವಿಸ್ತರಣೆಯಾಗಲಿದೆ ಎಂದು ಹೇಳಿಕೆ ಕೊಟ್ಟರು. ಆದರೆ ಸಿದ್ದರಾಮಯ್ಯನವರು ಇದರ ಬಗ್ಗೆ ಉಸಿರಲೇ ಇಲ್ಲ! ಈಗಲೂ ಕಾಂಗ್ರೆಸ್ ನಾಯಕರಿಗೆ ಅಧಿಕಾರದ ಕನವರಿಕೆ ಮತ್ತು ಅಧಿಕಾರದ ಆಮಿಷಗಳು ನಿಜಕ್ಕೂ ಟಾನಿಕ್ ಇದ್ದಂತೆ! ಒಂದರ್ಥದಲ್ಲಿ ಅಧಿಕಾರ ಕೊಡುವ/ಪಡೆಯುವವರೆಗೂ ಬಿಡೋ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ಪರಮೇಶ್ವರರ ಸೂಚನೆ. ಆದರೆ ದೇಶದ ಕಾಂಗ್ರೆಸ್‌ನ ದುಸ್ಥಿತಿಯೂ ಕೂಡ ಸಿದ್ಧುಗೆ ವರದಾನವಾಗಿರುವುದು ಗೊತ್ತಿರೋದೇ.

ಇವೆಲ್ಲಕ್ಕೂ ಮುಖ್ಯವಾಗಿ ಗಮನಿಸಬೇಕಾದ್ದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರವರು ಸಮಾರಂಭವೊಂದರ ನಿಮಿತ್ತ(ನೆಪ)ದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಹಸ್ತಲಾಘವ ಮಾಡಿದ್ದು! ಇದಕ್ಕೆ ರಾಜಕೀಯ ವಿಶೇಷವಿದೆಯೆಂದೇ ಭಾವಿಸಲಾಗಿದೆ. ಅಂದರೆ ಸಿದ್ಧರಾಮಯ್ಯನವರ ವಿರುದ್ಧ, ಕಡು ವಿರೋಧಿಗಳಾದ ಈ ಇಬ್ಬರು ಕೈಜೋಡಿಸುತ್ತಿದ್ದು ಮುಂದೆ ಅದರ ಪರಿಣಾಮ ಕಾಣಲಿದೆ ಎನ್ನಲಾಗುತ್ತಿದೆ. ಕೃಷ್ಣ ಕಾಂಗ್ರೆಸ್ಸನ್ನೇನೂ ತೊರೆದಿಲ್ಲ, ಹೈಕಮಾಂಡ್ ಸಹ ಅವರ ಬಗ್ಗೆ ಉತ್ಸುಕವಾಗಿಲ್ಲ. ಒಟ್ಟಾರೆ ಕೃಷ್ಣ ಅತೃಪ್ತರು ಎಂಬುದು ನಿಜ. ಮೇಲಾಗಿ ತನ್ನ ಶಿಷ್ಯ ಡಿ.ಕೆ.ಶಿ. ಸಿದ್ಧು ಜೊತೆ ಒಂದಾಗಿರುವ ಗುಮಾನಿ ಬೇರೆ ಕಾಡುತ್ತಿದೆ. ಹೀಗಾಗಿ ಕೃ-ಗೌ ರ ಈ ಒಳಮೈತ್ರಿಯ ಸಂಕೇತ ಸಿ-ಶಿ. ಇಬ್ಬರಿಗೂ ನೀಡಿದಂತಿದೆ. ಒಂದೊಮ್ಮೆ ಕೃ-ಗೌ ರಿಬ್ಬರೂ ಒಂದಾದಲ್ಲಿ ಗಂಭೀರ ಬೆಳವಣಿಗೆಗಳಾಗಬಹುದು. ಮಾತ್ರವಲ್ಲ, ಮತ್ತೊಂದೆಡೆ ಜೆಡಿ(ಎಸ್)ನ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಾ.ಬಿ.ಎಸ್.ಯಡ್ಯೂರಪ್ಪನವರು ಪರಸ್ಪರ ಬೆನ್ನು ತಟ್ಟುತ್ತಾ, ಸಾಂತ್ವನ ಹೇಳುತ್ತಾ ಕೆಟ್ಟು ಹೋಗಿರುವ ಸಂಬಂಧಗಳನ್ನು ಸರಿಪಡಿಸಿಕೊಳ್ಳುತ್ತಿರುವುದೂ ಅನಾಹುತದ ಬೆಳವಣಿಗೆಗೆ ಕಾರಣವಾಗಲೂಬಹುದು. ಹೀಗೆ ಎರಡೂ ಮಗ್ಗಲುಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಡಾ. ಯಡ್ಯೂರಪ್ಪನವರಿಗೆ ಬಿಜೆಪಿ (ಆರೆಸ್ಸೆಸ್) ಹೈಕಮಾಂಡ್ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿ(ಎಸ್)ನ ನೆಲೆ, ಶಾಸಕರನ್ನು ಸೆಳೆಯಲು ಅದರಲ್ಲೂ ವಿಶೇಷವಾಗಿ, ಕಾಂಗ್ರೆಸ್‌ನ ಸಿದ್ದರಾಮಯ್ಯನವರ ಸರಕಾರವನ್ನು ಉರುಳಿಸಲು ಅಥವಾ ಪದಚ್ಯುತಗೊಳಿಸಲು ಬೇಕಾದ ಕೆಲಸ ಮಾಡುವ ವಿಶೇಷ ಹೊಣೆಯನ್ನು ನೀಡಿದೆ ಎಂಬ ವರದಿ ಇದೆ. ಈಗಲೇ ಯಾವುದೂ ಸ್ಪಷ್ಟ ಬೆಳವಣಿಗೆ ಎಂದು ಹೇಳಲಾಗದಿದ್ದರೂ ನಕಾರಾತ್ಮಕ ಲಕ್ಷಣಗಳನ್ನು ತೋರುತ್ತಿವೆ.

ಕಾಂಗ್ರೆಸ್ ಸರಕಾರವೂ ಜನರ ಮೂಲಭೂತ ಪ್ರಶ್ನೆಗಳತ್ತ ಗಮನ ನೀಡುತ್ತಿಲ್ಲ. ಬೆಳಗಾವಿ ಅಧಿವೇಶನದಲ್ಲಿಯೂ ಅಂತಹ ಅವಕಾಶವನ್ನು ಮತ್ತೇ ನಿರಾಕರಿಸಿದೆ. ಮಾತುಗಳ ತೋರುಗಾಣಿಕೆಯ ವರಸೆಯಲ್ಲೇ ಜನರ ಪಾಲಿಗೆ ವ್ಯರ್ಥ ಅಧಿವೇಶನವಾಗುವ ಸಾಧ್ಯತೆಗಳೇ ಕಾಣುತ್ತಿವೆ.

 
Comments Off on ಜನರ ಮರೆತ ನಾಯಕರ ಒಳ ವರಸೆಗಳು

Posted by on 11/07/2015 in ಈ ವಾರ

 

Tags:

 
Follow

Get every new post delivered to your Inbox.

Join 45 other followers

%d bloggers like this: