ಈ ಬಾರಿಯ ಅಮೆರಿಕಾ ಭೇಟಿ: ಹೊಸ ಪೇಟೆಂಟ್ ಧೋರಣೆಯ ಉಡುಗೊರೆ ಮತ್ತು ಕೃಷಿ ಮಂತ್ರಾಲಯದಲ್ಲೂ ಒಂದು ತಿಪ್ಪರಲಾಗ

ಸಂಪುಟ: 10 ಸಂಚಿಕೆ: 23 date: Sunday, May 29, 2016
ಮೇ 12ರಂದು ‘ಅಚ್ಛೇ ದಿನ್’ ಸಂಪುಟ ‘ರಾಷ್ಟ್ರೀಯ ಬೌದ್ಧಿಕ ಹಕ್ಕುಗಳ ಧೋರಣೆ’ಗೆ ಮಂಜೂರಾತಿ ನೀಡಿದೆ. ‘ಸೃಜನಾತ್ಮಕ ಭಾರತ, ನವೀನತೆಯ ಭಾರತ’ ಎಂಬುದು ಇದರ ಘೋಷವಾಕ್ಯ. ಸಾಮಥ್ರ್ಯಗಳನ್ನು, ಸಂಸ್ಥೆಗಳನ್ನು ಮತ್ತು ಜಾಗೃತಿಯನ್ನು ಬೆಳೆಸುವ ಕಣ್ಣೊಟ ಹೊಂದಿರುವ, ಸಂಶೋಧನೆ ಮತ್ತು ಅಭಿವೃದ್ಧಿಗೆ, ನವೀನ ಶೋಧಗಳಿಗೆ ಪ್ರೋತ್ಸಾಹ ಕೊಡುವ ಹಾಗೂ ಪಾರಂಪರಿಕ ಜ್ಞಾನದತ್ತವೂ ನೋಡುವ ಈ ಧೋರಣೆ ಭಾರತದ ಮುನ್ನಡೆಗೆ ಒಂದು ಮಹಾನ್ ಹೆಜ್ಜೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಗಳು ವರ್ಣಿಸಿದ್ದಾರೆ. ಆದರೆ ಈ ರಂಗದ ಪರಿಣಿತರಿಗೆ ಈ ಬಗ್ಗೆ ಹಲವು ಸಂದೇಹಗಳಿವೆ. ಪ್ರಧಾನಿಗಳ ಮತ್ತೊಂದು ಅಮೆರಿಕಾ ಭೇಟಿಯ ಮುನ್ನಾದಿನ ಇದನ್ನು ಪ್ರಕಟಿಸಿರುವುದು ಈ ಸಂದೇಹಗಳನ್ನು ಗಟ್ಟಿಗೊಳಿಸಿದೆ.

ಔಷಧಿಗಳ ಲಭ್ಯತೆಯ ಕ್ಷೇತ್ರದ ಸಂಶೋಧಕರಾದ ಅಚಲ್ ಪ್ರಭಾಲ ಮತ್ತು ಅಜೀಂ ಪ್ರೇಮ್ ಜಿ  ವಿಶ್ವದ್ಯಾಲಯದ ಪ್ರಾಧ್ಯಾಪಕ ಸುಧೀರ್ ಕೃಷ್ಣಸ್ವಾಮಿ ಇದು ಭಾರತ ತನ್ನ ಪೇಟೆಂಟ್(ಬೌದ್ಧಿಕ ಹಕ್ಕುಗಳ) ಕಾನೂನುಗಳನ್ನು  ಬದಲಿಸುವದಿಲ್ಲ ಎಂಬ ಅಚ್ಚುಕಟ್ಟಾದ ಘೋಷಣೆಯನ್ನು ಅಮೆರಿಕಾ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ನೆಮ್ಮದಿ ಮತ್ತು ಸಂತೋಷ ನೀಡುವ ಬೆಟ್ಟದಷ್ಟು ತಂಪನೆಯ ಗಾಳಿಯ ನಡುವೆ ತೂರಿಸಿಟ್ಟಿದೆ ಎಂದು ಇದನ್ನು ವರ್ಣಿಸಿದ್ದಾರೆ (ದಿ ಹಿಂದು, ಮೇ 25). ಇದು ‘ಸೋಗಿನ ಒಂದು ಮಹಾ ಕಸರತ್ತು’  ಎನ್ನುವುದನ್ನು ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

ಈ ದಸ್ತಾವೇಜಿನಲ್ಲಿ ‘ಅವೇರ್ ನೆಸ್’(ಜಾಗೃತಿ) ಎಂಬ ಪದ ಕನಿಷ್ಟ 20 ಬಾರಿ ಬಂದಿದೆ ಹಾಗೂ ‘ಟ್ರೆಡಿಶನಲ್ ನಾಲೆಡ್ಜ್’(ಸಾಂಪ್ರದಾಯಿಕ ಜ್ಞಾನ) ಎಂಬ ಪದ 22 ಬಾರಿ ಬಂದಿದೆ ಎನ್ನುವ ಅವರು ಹೆಚ್ಚೆಚ್ಚು ಬೌದ್ಧಿಕ ಹಕ್ಕು ಎಂದರೆ ಹೆಚ್ಚೆಚ್ಚು ನವೀನ ಶೋಧನೆಗಳು ಎಂಬ ಪಾಶ್ಚಿಮಾತ್ಯ ಕಟ್ಟುಕತೆಯ ಗಿಳಿಪಾಠ ಒಪ್ಪಿಸುತ್ತ, ಸ್ಥಳೀಯ ಜ್ಞಾನದ ಖಾಸಗೀಕರಣಕ್ಕೆ ಅರ್ಥಹೀನವಾದ ಪ್ರೋತ್ಸಾಹ  ಕೊಡುತ್ತ ಈ ಧೋರಣೆ ಒಂದು ಉತ್ತಮ ಅವಕಾಶವನ್ನು ಕಳಕೊಂಡಿದೆ ಎನ್ನುತ್ತಾರೆ. ಇದು ಪಾಶ್ಚಿಮಾತ್ಯ ನವ-ಉದಾರವಾದ ಮತ್ತು ದೇಶೀ ಕೋಮುವಾದದ ಸ್ಫೋಟಕ ಮಿಶ್ರಣದ ಇನ್ನೊಂದು ಮಾದರಿ ಎಂದರೆ ತಪ್ಪಾಗುತ್ತದೆಯೇ?

ಈಗಿರುವ ಭಾರತದ ಪೇಟೆಂಟ್ ಕಾನೂನು ನವೀನತೆಯನ್ನು ಬೆಂಬಲಿಸುತ್ತಲೇ ಕೈಗೆಟಕುವ ಬೆಲೆಗಳಲ್ಲಿ ಔಷಧಿಗಳ ಲಭ್ಯತೆಗೂ ಅವಕಾಶ ಕಲ್ಪಿಸಿದ್ದು ಕಾನೂನು ರೂಪಿಸುವಲ್ಲಿ ಒಂದು ನವೀನತೆಯನ್ನು ತಂದಿತ್ತು. ದಕ್ಷಿಣ ಆಫ್ರಿಕಾ ಮತ್ತು ಬ್ರೆಝಿಲ್ ಇದರಿಂದ  ಪ್ರೇರಿತರಾಗಿದ್ದು ತಮ್ಮ ದೇಶದಲ್ಲಿ ಇಂತಹ ಪೇಟೆಂಟ್ ಕಾನೂನುಗಳನ್ನು ತರಲು ಮುಂದಾದವು.  ನಮ್ಮ ಪ್ರಧಾನಿಗಳ ವಿದೇಶಿ ಪ್ರವಾಸಗಳು ಭಾರತದ ಹೆಮ್ಮೆಯನ್ನು ವರ್ಧಿಸಿವೆ ಎನ್ನುತ್ತಾರೆ ಸಂಘ ಪರಿವಾರದ ಮಂದಿ. ಆದರೆ  ಪೇಟೆಂಟ್ ರಂಗದಲ್ಲಿ ನಿಜವಾಗಿಯೂ ಈಗಾಗಲೇ ಗಳಿಸಿರುವ ಭಾರತದ ನೇತೃತ್ವದ ಸ್ಥಾನವನ್ನು ಗಟ್ಟಿಗೊಳಿಸುವ ಅವಕಾಶವನ್ನು ಈ ಹೊಸ ಧೋರಣೆ ಕಳಕೊಂಡಿದೆ ಎಂದು ಈ ಇಬ್ಬರು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತದ ಪೇಟೆಂಟ್ ಕಾನೂನಿನ ಮೇಲೆ ಅಮೆರಿಕಾ ತನ್ನ ಸೂಪರ್ 301 ಕಾನೂನಿನ ಮೂಲಕ ಒತ್ತಡ ಹಾಕುತ್ತಿದೆ. ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ಯ ಸದಸ್ಯತ್ವ ಪಡೆಯಲು ಭಾರತ ತನ್ನ ಪೇಟೆಂಟ್ ಕಾನೂನನ್ನು ಅದರ ‘ಟ್ರಿಪ್ಸ್’ ಸಂಧಿಗೆ ಅನುಗುಣವಾಗುವಂತೆ ಬದಲಿಸಿತ್ತು. ಆದರೆ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಅದರಿಂದಲೂ ತೃಪ್ತಿಯಿಲ್ಲ. ಅವು ನಮ್ಮ ಪೇಟೆಂಟ್ ಕಾನೂನುಗಳನ್ನು ಇನ್ನಷ್ಟು ಬಲಪಡಿಸಬೇಕು, ಅಂದರೆ ಅವುಗಳ ಪೇಟೆಂಟ್ ಹುನ್ನಾರಗಳಿಗೆ ಮತ್ತಷ್ಟು ಅವಕಾಶ ಮಾಡಿಕೊಡುವಂತೆ ಇರಬೇಕು ಎಂದು ಒತ್ತಾಯಿಸುತ್ತಲೇ ಇವೆ. ಮೇ 12ರಂದು ಮೋದಿ ಸಂಪುಟ ಮಂಜೂರು ಮಾಡಿರುವ ಈ ಧೋರಣೆ ಆ ದಿಕ್ಕಿನಲ್ಲಿರುವಂತದ್ದು ಎಂದು ಈ ರಂಗದ ಇನ್ನೊಬ್ಬ ತಜ್ಞ ಡಾ. ದಿನೇಶ್ ಅಬ್ರೋಲ್ ಹೇಳುತ್ತಾರೆ(ಪೀಪಲ್ಸ್ ಡೆಮಾಕ್ರಸಿ, ಮೇ 22).

ಜೂನ್ 7-8ರಂದು ಪ್ರಧಾನಿಗಳು ಅಮೆರಿಕಾಕ್ಕೆ ಎರಡು ವರ್ಷಗಳಲ್ಲಿ ನಾಲ್ಕನೇ ಭೇಟಿಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಈ ಹೊಸ ಪೇಟೆಂಟ್ ಧೋರಣೆಯನ್ನು ಪ್ರಕಟಿಸಿರುವುದು ಬಹಳ ಮಹತ್ವದ್ದು ಎನ್ನುತ್ತಾರೆ ಡಾ.ಅಬ್ರೋಲ್. ಈ ಧೋರಣೆ ಪೇಟೆಂಟ್ ಕಾನೂನು, ಟ್ರೇಡ್ ಮಾಕ್ರ್ಸ್ ಕಾನೂನು, ಡಿಸೈನ್ ಕಾನೂನು, ಸರಕುಗಳ ಭೌಗೋಳಿಕ ಸೂಚಕಗಳ ಕಾನೂನು, ಕಾಪಿರೈಟ್ ಕಾನೂನು, ಸಸ್ಯ ವೈವಿಧ್ಯ ರಕ್ಷಣೆ ಕಾನೂನು, ರೈತರ ಹಕ್ಕುಗಳ ಕಾನೂನು, ಸೆಮಿಕಂಡಕ್ಟರ್ ಐಸಿ ಡಿಸೈನ್ ಕಾನೂನು ಮತ್ತು ಜೀವಶಾಸ್ತ್ರೀಯ ವೈವಿಧ್ಯತೆಯ ಕಾನೂನು ಇವನ್ನೆಲ್ಲ ನಿರ್ವಹಿಸುವಂತದ್ದು. ಇದರಿಂದ ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾದರೆ, ಭಾರತೀಯ ಜನತೆ ದೇಶೀಯ ತಂತ್ರಜ್ಞಾನ ಮತ್ತು ಕೈಗಾರಿಕಾ ಸಾಮಥ್ರ್ಯದ ಅಭಿವೃದ್ಧಿಗೆ ಹಲವಾರು ಕಂಟಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಬ್ರೋಲ್ ಹೇಳುತ್ತಾರೆ.

ಮುಖ್ಯವಾಗಿ ಔಷಧಿಗಳು, ಆಹಾರ, ಪರಿಸರ ರಕ್ಷಣೆ ಮುಂತಾದವುಗಳಲ್ಲಿ ಭಾರತದ ಜನತೆ, ವಿಶೇಷವಾಗಿ ರೈತರು ಅಮೆರಿಕನ್ ಮತ್ತು ಯುರೋಪಿಯನ್ ಗುತ್ತೇದಾರಿಗಳ ಅಟಾಟೋಪಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕಾ ಭೇಟಿಯಲ್ಲಿ ಒಂದು ಉಡುಗೊರೆಯನ್ನು ನಮ್ಮ ಪ್ರಧಾನಿಗಳು ಕೊಂಡೊಯ್ಯಬೇಕಾಗಿತ್ತು. ಅದು ಈ ಬೌದ್ಧಿಕ ಹಕ್ಕುಗಳ ಧೋರಣೆ ಎನ್ನುತ್ತಾರೆ ದಿನೇಶ್ ಅಬ್ರೋಲ್.

‘ಅಚ್ಛೇದಿನ್’ ಸರಕಾರ ಎರಡು ವರ್ಷಗಳನ್ನು ಪೂರೈಸುವ ವೇಳೆಗೆ ನಮ್ಮ ಧೀರ ಪ್ರಧಾನಿ ಭಾರತದ ಜನತೆಯ ಹಿತಗಳನ್ನು ಬಲಿಗೊಟ್ಟು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಗೆ ‘ಅಚ್ಛೇದಿನ್’ಗಳ ಉಡುಗೊರೆಯನ್ನು ಹೊತ್ತು ಅಮೆರಿಕಾಕ್ಕೆ ಹೋಗುತ್ತಿದ್ದಾರೆ ಎಂಬುದು ಈ ಮೂವರು ತಜ್ಞರ ವಿಶ್ಲೇಷಣೆಗಳಿಂದ ಕಂಡು ಬರುವ ಸಂಗತಿ.

ಇನ್ನೊಂದು ತಿಪ್ಪರಲಾಗ-ಜಿಎಂ ಬೀಜಗಳ ರಾಯಲ್ಟಿಯಲ್ಲಿ ಮಾನ್ಸೆಂಟೋಗೆ ರಿಯಾಯ್ತಿ!

ಇತ್ತೀಚೆಗೆ ಮೋದಿ ಸರಕಾರದ ಕೃಷಿ ಮಂತ್ರಾಲಯ ಕೃಷಿ ತಂತ್ರಜ್ಞಾನದ ಕಂಪನಿಗಳಿಗೆ ಅವರ ತಳಿ ಮಾರ್ಪಾಡಿನ(ಜಿಎಂ) ಬೀಜಗಳಿಗೆ ಕೊಡುವ ರಾಯಧನ(ರಾಯಲ್ಟಿ)ವನ್ನು ಮೊದಲ 5ವರ್ಷಗಳಲ್ಲಿ 10ಶೇ.ಕ್ಕೆ ಮತ್ತು ನಂತರ ಪ್ರತಿವರ್ಷ 10ಶೇ. ಕಡಿತ ಮಾಡಲಾಗುವುದು, ಈ ಬಗ್ಗೆ ಈಗಾಗಲೇ ನೀಡಲಾಗಿರುವ ಲೈಸೆನ್ಸ್ ಗಳು ರದ್ದಾಗುತ್ತವೆ, 30ದಿನಗಳೊಳಗೆ ಈ ಬಗ್ಗೆ ಕಂಪನಿಗಳು ಸರಕಾರದೊಂದಿಗೆ ಮರು ಮಾತುಕತೆ ನಡೆಸಬೇಕು ಎಂದು ಆದೇಶ ಹೊರಡಿಸಿತ್ತು.

ಆದರೆ ಈಗ ಆ ಆದೇಶವನ್ನು ತಡೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಈ ಆದೇಶದಿಂದ ಮುಖ್ಯವಾಗಿ ಇಂತಹ ಬೀಜಗಳ ಗುತ್ತೇದಾರಿಕೆ ಹೊಂದಿರುವ ಅಮೆರಿಕಾದ ಮಾನ್ಸೆಂಟೋ ಕಂಪನಿಗೆ ಬಹಳ ತೊಂದರೆಯಾಗುತ್ತಿತ್ತು. ಪ್ರಧಾನ ಮಂತ್ರಿಗಳ ಕಚೇರಿಯ ಮಧ್ಯಪ್ರವೇಶದಿಂದಾಗಿ, ಹಣಕಾಸಿನ ಮಂತ್ರಿಗಳ ಇತ್ತೀಚಿನ ಮೂರು ತಿಪ್ಪರಲಾಗಗಳ ನಂತರ  ಕೃಷಿ ಕ್ಷೇತ್ರದ ಈ ತಿಪ್ಪರಲಾಗ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆರೆಸ್ಸೆ ಸನ ಒಂದು ಸಂಘಟನೆಯ ಒತ್ತಡದಿಂದ ಹೊರಬಂದ ಈ ಆದೇಶವನ್ನು ಪ್ರಧಾನ ಮಂತ್ರಿಗಳ ಕಚೇರಿಯ ಒತ್ತಡದಿಂದಾಗಿ ಹಿಂತೆಗೆದುಕೊಳ್ಳಲಾಗಿದೆಯಂತೆ. ನಾಲ್ಕನೇ ಅಮೆರಿಕಾ ಭೇಟಿ ಕಾಲದಲ್ಲಿ ಪ್ರಧಾನಿಗಳಿಗೆ ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಂದ ಕಿರಿಕಿರಿಯಾಗದಿರಲಿ ಎಂದಷ್ಟೇ ಈ ತಿಪ್ಪರಲಾಗ ಇರಬಹುದೇ ಎಂದು ಕೃಷಿ ಮಂತ್ರಾಲಯದ ಮೂಲ ಆದೇಶದಿಂದ ಕಿಡಿಕಿಡಿಯಾಗಿರುವ ನವ-ಉದಾರವಾದಿಗಳಿಗೂ ಸಂದೇಹ. ಅಮೆರಿಕಾ ಭೇಟಿಯಿಂದ ಹಿಂದಿರುಗಿದಾಗ ಮತ್ತೆ 56 ಅಂಗುಲ ಎದೆಯ ನೆನಪಾಗಬಹುದೇ ಎಂಬ ಆತಂಕ ಅವರಿಗೆ!

ವೇದರಾಜ್ ಎನ.ಕೆ.

Advertisements

ಯುಜಿಸಿಯ ಹೊಸ ಅಧಿಸೂಚನೆ-ಸಾರ್ವಜನಿಕ ಉನ್ನತ ಶಿಕ್ಷಣವನ್ನು ಕಳಚಿ ಹಾಕುವ ಹುನ್ನಾರ :ಎಸ್.ಎಫ್.ಐ

ಸಂಪುಟ: 10 ಸಂಚಿಕೆ: 23 date: Sunday, May 29, 2016

ಇತ್ತೀಚೆಗೆ ವಿಶ್ವವಿದ್ಯಾಲಯ ಧನಸಹಾಯ ಅಯೋಗ(ಯುಜಿಸಿ) 3ನೇ ತಿದ್ದುಪಡಿ, 2016ರ ಮಿಟಿಫಿಕೇಶನ್ ಬಂದಿದೆ. ಇದು ನಮ್ಮ ವಿಶ್ವದ್ಯಾಲಯಗಳಲ್ಲಿ ಬೋಧನೆ ಮತ್ತು ಕಲಿಕೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ಎಸ್.ಎಫ್.ಐ ದಿಲ್ಲಿ ರಾಜ್ಯ ಸಮಿತಿ ಖಂಡಿಸಿದೆ.

ಇದು ನೇರ ಬೋಧನಾ ಅವಧಿಯನ್ನು ಅಸಿಸ್ಟೆಂಟ್ ಫ್ರೊಫೆಸರುಗಳಿಗೆ 16ರಿಂದ 24 ಗಂಟೆಗಳಿಗೆ ಏರಿಸಿದೆ ಮತ್ತು ಅಸೋಸಿಯೇಟ್ ಪ್ರೊಫೆಸರುಗಳಿಗೆ 14ರಿಂದ 22 ಗಂಟೆಗಳಿಗೆ ಏರಿಸಿದೆ. ಎರಡು ಗಂಟೆಗಳ ಪ್ರಾಕ್ಟಿಕಲ್ ಅವಧಿಯನ್ನು ಇನ್ನು ಮುಂದೆ ಒಂದು ಗಂಟೆಯ ಪಾಠ ಎಂದು ಪರಿಗಣಿಸಲಾಗುವುದಂತೆ. ಇದರಿಂದ ಒಂದೆಡೆ ಈಗ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ನೂರಾರು ಅಧ್ಯಾಪಕರು, ತಾತ್ಕಾಲಿಕ ಬೋಧನಾ ಕೆಲಸಗಳನ್ನು ಮಾಡುತ್ತಿರುವ ಎಂಫಿಲ್ ಮತ್ತು ಪಿ.ಹೆಚ್.ಡಿ ವಿದಾರ್ಥಿಗಳೂ  ಕೆಲಸ ಕಳಕೊಳ್ಳುತ್ತಾರೆ. ಇನ್ನೊಂದೆಡೆಯಲ್ಲಿ ಇದು ವಿದ್ಯಾರ್ಥಿ:ಅಧ್ಯಾಪಕ ಅನುಪಾತವನ್ನು ಮತ್ತಷ್ಟು ಕೆಡಿಸಿ ಕಲಿಕೆಯ ಪ್ರಕ್ರಿಯೆಗೆ ಬಾಧಕವಾಗುತ್ತದೆ ಎಂದು ಎಸ್.ಎಫ್.ಐ ಅಭಿಪ್ರಾಯ ಪಟ್ಟಿದೆ.

ಈಗ ದಿಲ್ಲಿ ವಿಶ್ವವಿದ್ಯಾಲಯದಲ್ಲಿ 4000 ಅಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡದೇ ಬಿಡಲಾಗಿದೆ. ಈ ನೋಟಿಫಿಕೇಶನ್ ಮೂಲಕ ಈ ಹುದ್ದೆಗಳಲ್ಲಿ ಬಹಳಷ್ಟು ರದ್ದಾಗುತ್ತವೆ. ಇದು ಯುಜಿಸಿಗೆ ಹಣನೀಡಿಕೆಯಲ್ಲಿ 55ಶೇ.ದಷ್ಟು ಕಡಿತ ಮಾಡಿರುವ ಈ ಅಚ್ಚೇ ದಿನ್ ಸರಕಾರದ ಕ್ರಮದ ದುಷ್ಪರಿಣಾಮ. ಈ ಹುದ್ದೆಗಳನ್ನು ರದ್ದುಗೊಳಿಸುವುದೇ ಈ ಸರಕಾರದ ಉದ್ದೇಶವಿರುವಂತೆ ಕಾಣುತ್ತದೆ ಎಂಬುದು ವಿದ್ಯಾರ್ಥಿಗಳ ಆತಂಕ.

ದಿಲ್ಲಿ ವಿಶ್ವವಿದ್ಯಾಲಯ ಹಿಂದುಳಿದ ಸಾಮಾಜಿಕ ವಿಭಾಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಬೋಧನೆಯ ಕೊರತೆಗಳನ್ನು ತುಂಬಲು ವಿಶೇಷ ಟ್ಯುಟೋರಿಯಲ್ ತರಗತಿಗಳನ್ನು ನಡೆಸುತ್ತಿತ್ತು. ಈ ಆಧಿಸೂಚನೆ ಆ ಕ್ರಮವನ್ನೂ ದುರ್ಬಲಗೊಳಿಸಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯಲ್ಲಿ ದಲಿತ ವಿಭಾಗಗಳ ಸಮಸ್ಯೆಗಳನ್ನು ಪರಿಶೀಲಿಸಿದ ಥೋರಟ್ ಸಮಿತಿ ಕೂಡ ಇಂತಹ ವಿಶೇಷ ತರಗತಿಗಳ ಶಿಫಾರಸು ಮಾಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಮೊದಲು ಮೋದಿ ಸರಕಾರ ಎರಡು ವರ್ಷಗಳನ್ನು ಪೂರೈಸುವ ವೇಳೆಗೆ ಹೊಸ ಶಿಕ್ಷಣ ನೀತಿಯನ್ನು ಪ್ರಕಟಿಸುವುದಾಗಿ ತಿಳಿಸಲಾಗಿತ್ತು. ಬಹುಶಃ ಈ ಅಧಿಸೂಚನೆ ಅದರ ಮುನ್ಸೂಚನೆಯಿರಬಹುದೇ? ಸಾರ್ವಜನಿಕ ಉನ್ನತ ಶಿಕ್ಷಣವನ್ನು ಕಳಚಿ ಹಾಕಿ ಉನ್ನತ ಶಿಕ್ಷಣವನ್ನು ಉಳ್ಳವರಿಗೇ ಸೀಮಿತಗೊಳಿಸುವ ಖಾಸಗಿ ವಿವಿಗಳಿಗೆ ‘ಅಚ್ಚೇ ದಿನ್’ ತರುವ ಹುನ್ನಾರ ಇದರ ಹಿಂದಿದೆಯೇ ಎಂಬುದು ದಲಿತ, ಹಿಂದುಳಿದ ವಿಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳ ಭಯ. ಹೈದರಾಬಾದ್ ಕೇಂದ್ರೀಯ ವಿವಿ, ಜೆ.ಎನ್.ಯು. ಯುಜಿಸಿ ಫೆಲೋಶಿಫ್ ಗಳಲ್ಲಿ ಅಡೆ-ತಡೆಗಳು ಇವೆಲ್ಲ ಈ ಭಯ ನಿರಾಧಾರವೇನೂ ಅಲ್ಲ ಎಂದು ಸೂಚಿಸುತ್ತವೆ.

ಈ ಎಲ್ಲ ಕ್ರಮಗಳನ್ನು ಶಿಕ್ಷಕರ ಸಂಘಟನೆಗಳೊಡನೆ ಚರ್ಚಿಸದೆ ಏಕಪಕ್ಷೀಯವಾಗಿ ಶೈಕ್ಷಣಿಕ ಸುಧಾರಣೆಯ ಹೆಸರಿನಲ್ಲಿ ಜಾರಿಗೆ ತರಲಾಗುತ್ತಿದೆ. ಇದನ್ನು ದಿಲ್ಲಿ ವಿಶ್ವವಿದ್ಯಾಲಯ ಅಧ್ಯಾಪಕರ ಸಂಘ ಬಲವಾಗಿ ಪ್ರತಿಭಟಿಸಿದೆ, ಪ್ರತಿಭಟನಾರ್ಥ ಪರೀಕ್ಷಾ ಮೌಲ್ಯಮಾಪನವನ್ನು ಬಹಿಷ್ಕರಿಸಬೇಕೆಂದು ನಿರ್ಧರಿಸಿದೆ.

ವೇದರಾಜ್ .ಎನ್.ಕೆ

“ಯಾರಾದರೂ ಹೇಳುವರೇ….ನನ್ನ ತಪ್ಪೇನೆಂದು?”

ಸಂಪುಟ: 10 ಸಂಚಿಕೆ: 23 date: Sunday, May 29, 2016

ದಿಲ್ಲಿಯಲ್ಲಿ ಆಫ್ರಿಕಾ ದಿನದಂದು ಕವಿತೆಯ ಮೂಲಕ ಆಪ್ರಿಕಾದ ನೋವು ತೋಡಿಕೊಂಡ ಘಾನಾ ಹೈಕಮಿಶನರ್

ಭಾರತ ಮತ್ತು ಆಫ್ರಿಕಾದ ದೇಶಗಳ ನಡುವೆ ದೀರ್ಘಕಾಲದ ಸೌಹಾರ್ದದ ನಂಟಿಗೆ ಈ ಬಾರಿ ಕುತ್ತು ಬಂದಂತೆ ಕಾಣುತ್ತದೆ. ದಿಲ್ಲಿಯಲ್ಲಿ ಭಾರತದ ವಿದೇಶಾಂಗ ಇಲಾಖೆ ಏರ್ಪಡಿಸುವ ‘ಆಫ್ರಿಕಾದಿನ’ದ ಆಚರಣೆಯನ್ನು ಮುಂದೂಡುವಂತೆ ಹಲವು ಆಫ್ರಿಕನ್ ದೇಶಗಳು ಒತ್ತಾಯಿಸಿದ್ದವು. ಇದು ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಕೊನೆಗೂ ಆಫ್ರಿಕಾದ ರಾಯಭಾರಿಗಳ ಮನ ಒಲಿಸಿ ದಿನಾಚರಣೆ ನಡೆದಿದೆ.

ಕಳೆದ ವಾರ ದೇಶದ ರಾಜಧಾನಿಯ ಬೀದಿಯಲ್ಲಿ ಕಾಂಗೋ ಮೂಲದ ಸ್ನಾತಕೋತ್ತರ ವಿದ್ಯಾರ್ಥಿ ಮಾಸುಂದ ಕಿತಾಡ ಓಲಿವರ್‍ನನ್ನು ಬಡಿದು ಸಾಯಿಸಿದ್ದು ಆಫ್ರಿಕಾದ ರಾಯಭಾರಿಗಳ ದುಗುಡಕ್ಕೆ ಕಾರಣ.

ಈ ಸಮಾರಂಭದಲ್ಲಿ ಘಾನಾದ ಹೈಕಮಿಶನರ್ ಸ್ವರಚಿತ ಕವನದ ಮೂಲಕ ಈ ದುಗುಡಕ್ಕೆ ಅಭಿವ್ಯಕ್ತಿ ನೀಡಿದರು-ನನ್ನ ಬಿಸಿ ಆಫ್ರಿಕನ್ ರಕ್ತ ಇದ್ದಕಿದ್ದಂತೆ ತಣ್ಣಗಾಗಿದೆ. ಯಾರಾದರೂ ಹೇಳಬೇಕು ನನ್ನ ತಪ್ಪೇನೆಂದು” ಎಂದು ಆರಂಭವಾಗುವ ಈ ಕವನ ಆಫ್ರಿಕಾದ ಮಹಾ ನದಿಗಳು, ನೈಲ್, ಗ್ರೇಟ್ ಕಾಂಗೊ, ಟಾಂಗಾನಿಕಾ, ವೋಲ್ಟಾ ಗಂಗೆಯಿಂದ ನನ್ನ ನೆತ್ತರನ್ನು ಪಡೆಯಲಿ” ಎಂದು ಕೊನೆಗೊಳ್ಳುತ್ತದೆ.

ಹೀಗೇಕೆ ಆಗುತ್ತಿದೆ? ಮೋದಿ ಸರಕಾರ ಎಚ್ಚೆತ್ತುಕೊಳ್ಳಲು ಆಫ್ರಿಕನ್ ದೇಶಗಳ ಬಹಿಷ್ಕಾರದ ಕರೆಯ ವರೆಗೆ ಕಾಯಬೇಕಿತ್ತೇ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಕೇಳುತ್ತಾರೆ. ಕಳೆದ ವಾರ ಬಿಹಾರದಲ್ಲಿ ‘ಜಂಗಲ್ ರಾಜ್’ಎಂದು ಟೀಕಿಸುತ್ತಿದ್ದರು. ದೇಶದ ರಾಜಧಾನಿಯಲ್ಲಿ ಯಾರ ರಾಜ್ಯವಿದೆ ಎಂಬ ಪ್ರಶ್ನೆಯನ್ನು ಈಗ ಎಲ್ಲರೂ ಕೇಳುತ್ತಿದ್ದಾರೆ. ಕೇಜ್ರಿವಾಲ್  ಸರಕಾರಕ್ಕಂತೂ ಇಲ್ಲಿಯ ಕಾನೂನು ವ್ಯವಸ್ಥೆ ಒಳಪಟ್ಟಿಲ್ಲವಲ್ಲ!

ವೇದರಾಜ್ ಎನ್.ಕೆ.

ಕಪ್ಪು ಹಣದ ಮೊತ್ತದ ಅಧಿಕೃತ ಅಂದಾಜು ಸಾಧ್ಯವಿಲ್ಲ ಎಂದರೆ ‘ಅಚ್ಚೇದಿನ್’ ಗತಿ?

ಸಂಪುಟ: 10 ಸಂಚಿಕೆ: 21 date:  Sunday, May 15, 2016

ಭಾರತದ ವ್ಯಕ್ತಿಗಳು ವಿದೇಶಗಳಿಗೆ ಎಷ್ಟು ಕಪ್ಪು ಹಣ ಕಳಿಸಿದ್ದಾರೆ ಎಂಬುದರ ಅಧಿಕೃತ ಅಂದಾಜು ಇಲ್ಲ ಎಂದು ಮೋದಿ ಸರಕಾರದ ಹಣಕಾಸು ರಾಜ್ಯಮಂತ್ರಿಗಳು ರಾಜ್ಯಸಭೆಗೆ ನೀಡಿದ ಉತ್ತರದಲ್ಲಿ ಹೇಳಿದ್ದಾರೆ.(ಪಿಟಿಐ, ಮೇ 3)

“ಭಾರತೀಯ ವ್ಯಕ್ತಿಗಳು ಹೊರಗಿನ ದೇಶಗಳಿಗೆ ಕಳಿಸಿರುವ ಕಪ್ಪು ಹಣ ಎಷ್ಟೆಂದು ರ್ನಿರಿಸುವುದು ಒಂದು ತನಿಖೆಯ ಸಂಗತಿ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಇತ್ಯಾದಿ ಸಂಬಂಧಪಟ್ಟ ಕಾನೂನು ಜ್ಯಾರಿ ಸಂಸ್ಥೆಗಳಿಂದ ಫಾಲೋ-ಅಪ್ ಕ್ರಿಯೆಗಳು ನಡೆಯುತ್ತಿವೆ. ಆದರೆ ಇಂತಹ ಪ್ರಕರಣಗಳಲ್ಲಿ ಇರುವ ಮೊತ್ತಗಳ ವಿವರಗಳನ್ನು ಕೇಂದ್ರೀಯವಾಗಿ ಇಡುವುದಿಲ್ಲ” ಇದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಸರಕಾರದಿಂದ ಬಂದಿರುವ ಉತ್ತರ. ಅಂದರೆ ಬಳಿ ಲೆಕ್ಕ ಇಲ್ಲ.

ಬ್ಯಾಂಕ್ ಆಫ್ ಇಟೆಲಿಯ ಆರ್ಥಿಕ ತಜ್ಞರ ಇತ್ತೀಚಿನ ಲೆಕ್ಕಾಚಾರಗಳ ಪ್ರಕಾರ ಜಗತ್ತಿನಾದ್ಯಂತ ತೆರಿಗೆಮುಕ್ತಧಾಮಗಳಲ್ಲಿ ಗುಡ್ಡೆ ಹಾಕಿರುವ ಕಪ್ಪು ಹಣದಲ್ಲಿ ಭಾರತದ ಪಾಲು 152ರಿಂದ 181 ಬಿಲಿಯ ಡಾಲರುಗಳು, ಅಂದರೆ ಸುಮಾರು 10 ರಿಂದ 12 ಲಕ್ಷ ಕೋಟಿ ರೂ.ಗಳು. ಈ ಮಾಹಿತಿ ಬಗ್ಗೆ ಸರಕಾರ ಏನನ್ನುತ್ತದೆ ಎಂದು ಕೇಳಿದಾಗ ಇದು ಕೆಲವು ಅನುಮಾನಗಳ ಆಧಾರದಲ್ಲಿ ಮಾಡಿರುವ ಲೆಕ್ಕಾಚಾರ, ಇದಕ್ಕೆ ಸಾಕ್ಷಿಗಳೇನೂ ಇದ್ದ ಹಾಗೆ ಕಾಣುವುದಿಲ್ಲ ಎಂಬುದು ಸರಕಾರದ ಉತ್ತರ.

ಇನ್ನೊಂದು ಲೆಕ್ಕಾಚಾರದ ಪ್ರಕಾರ ಕಪ್ಪು ಹಣದ ಮೊತ್ತದಲ್ಲಿ ಭಾರತದ ಪಾಲು 4ರಿಂದ 5 ಬಿಲಿಯ ಡಾಲರ್ ಗಳು, ಅಂದರೆ 26ರಿಂದ 33 ಸಾವಿರ ಕೋಟಿ ರೂ.ಗಳು ಎಂದು ಹೇಳಿದ ಹಣಕಾಸು ರಾಜ್ಯಮಂತ್ರಿಗಳು ಇಂತಹ ವಿಭಿನ್ನ ಅಂದಾಜುಗಳ ಸಂರ್ಭದಲ್ಲಿ ಇವನ್ನು ಬಹಳ ಜಾಗರೂಕತೆಯಿಂದ ನೋಡಬೇಕಾಗುತ್ತದೆ, ಈ ಬಗ್ಗೆ ದೃಢ ಮಾಹಿತಿ ಯಾವ ರೀತಿಯಲ್ಲೂ ಸಿಗುವುದಿಲ್ಲ ಎಂಬುದು ಮೋದಿ ಸರಕಾರದ ಕಿರಿಯ ಹಣಕಾಸು ಮಂತ್ರಿಗಳು ಎರಡು ವರ್ಷಗಳ ಆಳ್ವಿಕೆಯ ನಂತರ ಕೊಟ್ಟಿರುವ ಉತ್ತರ.

ಹಾಗಿದ್ದರೆ 2014ರಲ್ಲಿ ಚುನಾವಣಾ ಪ್ರಚಾರದಲ್ಲಿ ಆಗಿನ ಪ್ರಧಾನಿ ಪಟ್ಟಾಕಾಂಕ್ಷಿ ಮೋದಿಯವರು ವಿದೇಶಗಳಲ್ಲಿ ಭಾರತದ 80ಲಕ್ಷ ಕೋಟಿ ರೂ.ಗಳಷ್ಟು ಕಪ್ಪು ಹಣ ರಾಶಿ ಬಿದ್ದಿದೆ ಎಂದು ಯಾವ ಆಧಾರದಲ್ಲಿ ಹೇಳಿದರು ಎಂಬ ಪ್ರಶ್ನೆ ಸಹಜ. ಅವರ ನೆಚ್ಚಿನ ಬೆಂಬಲಿಗ ಬಾಬಾ ರಾಂದೇವ್ ಇನ್ನೂ ಮುಂದೆ ಹೋಗಿ 400 ಕೋಟಿ ಲಕ್ಷ ರೂ. ಅಂದರು. ಬಿಜೆಪಿಯ ಟಾಸ್ಕ್ ಫೋರ್ಸ್ 11 ರಿಂದ 22.5 ಲಕ್ಷ ಕೋಟಿ ರೂ. ಎಂದು ಲೆಕ್ಕ ಹಾಕಿತ್ತು.

ಕಪ್ಪು ಹಣದ ಲೆಕ್ಕ ಸಿಗುವುದೇ ಇಲ್ಲ ಎಂದಿರುವಾಗ ಇವೆಲ್ಲ ಕೇವಲ ಚುನಾವಣಾ ಬುರುಡೆಗಳು, ಮತದಾರರಲ್ಲಿ ಪ್ರತಿಯೊಬ್ಬರ ಖಾತೆಗೆ 15 ರಿಂದ 20 ಲಕ್ಷ ರೂ,ಗಳು ಬಂದು ಬೀಳುವ ವಚನವೂ ಕೇವಲ ಬುರುಡೆಯೇ? ಮತದಾರರು ಇದನ್ನು ತಿಳಿಯಲು ಈ ಎರಡು ವರ್ಷಗಳ ಕಾಲ ಕಾಯಬೇಕಾಗಿತ್ತೇ?

ಬಿಜೆಪಿಯ ಟಾಸ್ಕ್ ಪೋರ್ಸ್ ನ ಅಂದಾಜು ಸುಮಾರಾಗಿ ಬ್ಯಾಂಕ್ ಆಫ್ ಇಟೆಲಿಯ ಆರ್ಥಿಕ ತಜ್ಞರ ಅಂದಾಜಿನ ಹತ್ತಿರಕ್ಕೆ ಬರುತ್ತದೆ. ಆದರೆ ಈ ಬಗ್ಗೆ ‘ಹೆಮ್ಮೆ’ ಪ್ರದರ್ಶಿಸುವ ಧೈರ್ಯವೂ ಈಗ  ಆಳುವ ಪಕ್ಷವಾಗಿರುವ ಅದಕ್ಕೆ ಇದ್ದಂತಿಲ್ಲ. ಏಕೆಂದರೆ ಆಗ ಪ್ರತಿಯೊಬ್ಬರ ಖಾತೆಗೆ 15-20ಲಕ್ಷ ರೂ. ಯಾವಾಗ ಬರುತ್ತದೆ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿರುತ್ತದೆ.

ವೇದರಾಜ್ ಎನ್.ಕೆ.

ರಾಜಸ್ತಾನ : ಕನ್ಹೈಯ ಕುಮಾರ್ ಗಳು ಹುಟ್ಟದಂತೆ ಮಾಡುವ ಪಠ್ಯಕ್ರಮ!

ಸಂಪುಟ: 10 ಸಂಚಿಕೆ: 21 date: Sunday, May 15, 2016

ರಾಜಸ್ತಾನದ ‘ಮಾದರಿ’ ಶಿಕ್ಷಣ ಮಂತ್ರಿ ಮತ್ತೆ ಸುದ್ದಿಯಲ್ಲಿದ್ದಾರೆ. ‘ಈ ರಾಜ್ಯದಲ್ಲಿ ಕನ್ಹೈಯ ಕುಮಾರ್‍ಗಳು ಹುಟ್ಟದಂತೆ ಮಾಡುವ ಪಠ್ಯಕ್ರಮವನ್ನು ತರುತ್ತೇವೆ’ ಎಂದು ಅವರು ಈ ಹಿಂದೆ ಹೇಳಿದ್ದು ನಮ್ಮ ಓದುಗರಿಗೆ ನೆನಪಿರಬಹುದು. ಅದನ್ನೀಗ ಜಾರಿಗಪಳಸುತ್ತಿರುವಂತೆ ಕಾಣುತ್ತದೆ.

ಅದಕ್ಕೆ ಒಂದು ಉದಾಹರಣೆ ಆಗಲೇ ಜನಜನಿತವಾಗಿ ಬಿಟ್ಟಿದೆ. ಅವರ ಪ್ರಕಾರ ‘ಪುನರ್ರಚಿಸಿದ’ ಎಂಟನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕ ಈ ವಾರ ಎಲ್ಲ ಮಾಧ್ಯಮಗಳಲ್ಲಿ ಸುದ್ದಿ ಮಾಡಿದೆ. ಅದರಲ್ಲಿ ಜವಹರಲಾಲ್ ನೆಹರೂ ಅವರ ಹೆಸರು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿಯೂ ಇಲ್ಲವಂತೆ, ಅವರು ದೇಶದ ಮೊದಲ ಪ್ರಧಾನ ಮಂತ್ರಿ  ಎಂಬ ಪ್ರಸ್ತಾಪವೂ ಆ ಪುಸ್ತಕದಲ್ಲಿ ಎಲ್ಲೂ ಇಲ್ಲವಂತೆ.

ಮಹಾತ್ಮ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಕೊಂದ ಎಂಬ ಸಂಗತಿಯೂ ಈ ಪಠ್ಯಪುಸ್ತಕದಲ್ಲಿ ಇಲ್ಲವಂತೆ. ಅದಕ್ಕೆ ಆಶ್ಚರ್ಯವೇನೂ ಪಡಬೇಕಾಗಿಲ್ಲ, ಏಕೆಂದರೆ ಕನ್ಹೈಯ ಕುಮಾರ್ ಗಳು ಹುಟ್ಟದಿರಬೇಕಾದರೆ ಈ ರೀತಿ ಇತಿಹಾಸವನ್ನು ಹುಸಿಗೊಳಿಸಲೇ ಬೇಕು ತಾನೇ?

ಆದರೆ ಅದೇಕೋ ಈ ಮಂತ್ರಿಗೆ ಇವನ್ನು ಸಮರ್ಥಿಸಿಕೊಳ್ಳುವ ಭಂಡತನ ಪ್ರದರ್ಶಿಸುವ ಧೈರ್ಯವಾಗಿಲ್ಲ. ಈ ಹೊಸ ಪಠ್ಯಪುಸ್ತಕಗಳನ್ನು ಪರಿಣಿತರು ಸಿದ್ಧಪಡಿಸಿದ್ದು, ಇದರಲ್ಲಿ ಸರಕಾರದ ಪಾತ್ರವೇನೂ ಇಲ್ಲ ಎಂದು ನುಸುಳಿಕೊಳ್ಳಬೇಕೆಂದು ಅವರಿಗೆ ಏಕೋ ಅನಿಸಿದೆ. ಆದರೆ ಅದನ್ನು ಯಾರೂ ನಂಬದಿದ್ದಾಗ ಯಾವ ಹೊಸ ಪುಸ್ತಕದಲ್ಲಿ ಎಷ್ಟು ಬಾರಿ ನೆಹರೂ ಹೆಸರು ಬಂದಿದೆ ಎಂದು ಲೆಕ್ಕ ಮಾಡಲು ಕೂತಂತೆ ಕಾಣುತ್ತದೆ.

ಪುಟ 91ರಲ್ಲಿ(ಸಂವಿಧಾನದ ಗುರಿಗಳ ಕುರಿತ ನಿರ್ಣಯವನ್ನು ಮಂಡಿಸಿದವರು ಎಂದು) ಮತ್ತು 177ರಲ್ಲಿ(ರಾಜಸ್ತಾನದ ಏಕೀಕರಣದ ದಾರಿಯಲ್ಲಿ ಒಂದು ಹೆಜ್ಜೆಯನ್ನು ಉದ್ಘಾಟಿಸಿದವರು ಎಂದು) ಅವರ ಹೆಸರು ಬಂದಿದೆ ಎಂದರು. ನಂತರ ಒಂದು ಹೇಳಿಕೆಯನ್ನೇ ಕೊಟ್ಟು 7, 9 ಮತ್ತು 11ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿ ನೆಹರೂ ಅವರ ಹೆಸರು ‘ಕನಿಷ್ಟ 15’ ಕಡೆ ಬಂದಿದೆ ಎಂದು ಲೆಕ್ಕ ಕೊಟ್ಟಿದ್ದಾರೆ. ಆದರೆ ಇವುಗಳಲ್ಲಿ ಕನಿಷ್ಟ 13 ಕೇವಲ ಲೆಕ್ಕಕ್ಕೆ ಸೇರಿಸಿದಂತಿದೆ ಎಂದು ಟೈಂಸ್ ಆಫ್ ಇಂಡಿಯಾ ವರದಿಗಾರರು ಹೇಳಿದ್ದಾರೆ.

ಇದಕ್ಕಿಂತ ಮುಖ್ಯವಾಗಿ ಬಂಭತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ  ನೆಹರೂ ಅವರ 1947ರ ಅಗಸ್ಟ್ 14-15ಮಧ್ಯರಾತ್ರಿಯ ಐತಿಹಾಸಿಕ ಭಾಷಣ ‘ಭವಿಷ್ಯದೊಂದಿಗೆ ಸಮಾಗಮ’ವನ್ನು ಹೊಸ  ಪುಸ್ತಕದಲ್ಲಿ ತೆಗೆದು ಹಾಕಲಾಗಿದೆಯಂತೆ. ಹನ್ನೊಂದನೇ ತರಗತಿಯ ಹಿಂದಿ ಸಾಹಿತ್ಯದ ಪಠ್ಯಪುಸ್ತಕದಲ್ಲಿದ್ದ ‘ಭಾರತ್ ಮಾತಾ’ ಎಂಬ ಅವರ ಲೇಖನವನ್ನೂ  ತೆಗೆದು ಹಾಕಲಾಗಿದೆಯಂತೆ. ಕನ್ಹೈಯ ಕುಮಾರ್‍ಗಳು ಹುಟ್ಟದಂತೆ ಮಾಡಲು ಇವೆರಡಂತೂ ಅತ್ಯಗತ್ಯ!

‘ಅಚ್ಚೇ ದಿನ್’ ರೂವಾರಿ ಗುಜರಾತ್ ಬಿಟ್ಟು ದಿಲ್ಲಿಗೆ ಹೋದ ಮೇಲೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 10 ನೇ ಸ್ಥಾನದಲ್ಲಿರುವ ಅವರ ಗುಜರಾತ್ ಮಾದರಿಯ ಸ್ಥಾನವನ್ನು, ಇನ್ನೂ ಕೆಳಗೆ, ಭಾರತದ ಸರಾಸರಿಗಿಂತಲೂ ಕೆಳಗೆ, 12ನೇ ಸ್ಥಾನದಲ್ಲಿರುವ ‘ರಾಜಸ್ತಾನ ಮಾದರಿ’ ಪಡೆಯುತ್ತಿರುವಂತೆ ಕಾಣುತ್ತದೆ-ಕಾರ್ಮಿಕ ಹಕ್ಕುಗಳ ರಂಗದಲ್ಲಿ, ಶೈಕ್ಷಣಿಕ ರಂಗದಲ್ಲಿ ಮತ್ತು ಚಮಚಾ ಬಂಡವಾಳಶಾಹಿಯ ರಂಗದಲ್ಲೂ!

ಈ ನಡುವೆ ಈ ಶಿಕ್ಷಣ ಮಂತ್ರಿಗೆ ಆರೆಸ್ಸೆಸ್ ಕಚೇರಿಯಿಂದ ಬುಲಾವ್ ಬಂದಿದೆಯಂತೆ. ಏಕೆ ನೆಹರೂ ಪ್ರಸ್ತಾಪಗಳನ್ನು ತೆಗೆದಿದ್ದೀರಿ ಎಂದು ಕೇಳಲಿಕ್ಕಂತೂ ಅಲ್ಲ. ಆದರೆ ಕೇಸರೀಕರಣ ಮಾಡುವಾಗಲೂ ವಹಿಸಬೇಕಾದ ‘ಜಾಗರೂಕತೆ’ಯನ್ನು ವಹಿಸಿಲ್ಲ ಎಂದು ತರಾಟೆಗೆ ತೆದುಕೊಳ್ಳಲು ಎಂದು ಟೈಂಸ್ ಆಫ್ ಇಂಡಿಯಾ (ಮೇ12) ವರದಿ ಮಾಡಿದೆ. ನೆಹರೂರವರಿಗೆ ಕೊಕ್ ಕೊಡುವ ಭರದಲ್ಲಿ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಿಗೆ ಸ್ಫೂರ್ತಿ ತುಂಬಿದ್ದ ರಾಂಪ್ರಸಾದ್ ಬಿಸ್ಮಿಲ್ ಅವರ ‘ಸರ್‍ಫರೋಶೀ ಕೀ ತಮನ್ನಾ..’(ಕಟುಕನ ಕೈಗಳಿಗೆ ತಲೆ ಕೊಡುವ ಹುಮ್ಮಸ್ಸಿದೆ, ಕಟುಕನ ಬಾಹುಗಳಲ್ಲಿ ಶಕ್ತಿಯೆಷ್ಟಿದೆ ನೋಡಬೇಕಾಗಿದೆ) ಎಂಬ ಉರ್ದು ಕವನವನ್ನು ಮತ್ತು ಹಿಂದಿಯ ಪ್ರಖ್ಯಾತ ಕವಯಿತ್ರಿ ಮತ್ತು ಆ ರಾಜ್ಯದಲ್ಲಿ ಗಾಂಧೀಜಿಯ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಮೊದಲ ಮಹಿಳೆ ಸುಭದ್ರಾ ಕುಮಾರಿ ಅವರ ಪ್ರಖ್ಯಾತ ‘ಝಾನ್ಸೀ ಕೀ ರಾನಿ’ ಕವನವನ್ನೂ ಕೈಬಿಡಲಾಗಿದೆಯಂತೆ. ಏನು ಮಾಡುವುದು, ಸಂಘ ಪರಿವಾರದ ಸಿದ್ಧಾಂತಗಳನ್ನು ಅಕ್ಷರಶಃ ಪಾಲಿಸ ಬೇಕೆಂದು ಹೊರಡುವವರಿಂದ ಇಂತಹ ‘ತಪ್ಪು’ಗಳು ಆಗುತ್ತಿವೆ. ದಿಲ್ಲಿಯ ಶಿವಸೇನೆಯವರು ಅಮೆರಿಕಾದ ಅಧ್ಯಕ್ಷ ಸ್ಥಾನದ ರಿಪಬ್ಲಿಕನ್ ಅಭ್ಯರ್ಥಿ ಗೆಲ್ಲಲಿ ಎಂದು ವಿಶೇಷ ಹವನ ಮಾಡಿಸಿದಂತೆ, ಜೆಎನ್‍ಯು ಪ್ರಕರಣದಲ್ಲಿ ಗೃಹಮಂತ್ರಿಗಳೇ ಟ್ವೀಟ್ ಮಾಡಿ ಬೇಸ್ತು ಬಿದ್ದಂತೆ, ಕೇಂದ್ರ ಹಣಕಾಸು ಮಂತ್ರಿಗಳು ಪಿಎಫ್ ವಿಷಯದಲ್ಲಿ ಎರಡು ತಿಂಗಳಲ್ಲಿ ಮೂರು ಬಾರಿ ತಿಪ್ಪರಲಾಗ ಹಾಕಿದಂತೆ, ಎಲ್ಲಕ್ಕೂ ಮಿಗಿಲಾಗಿ ಬಿಜೆಪಿಯ ಅತಿರಥ -ಮಹಾರಥರೇ ಉತ್ತರಾಖಂಡದಲ್ಲಿ ಹೆಜ್ಜೆ-ಹೆಜ್ಜೆಗೂ ಹೈಕೋರ್ಟ್-ಸುಪ್ರಿಂ ಕೋರ್ಟ್ ತರಾಟೆಗೆ ಗುರಿಯಾಗುವಂತಹ ಪ್ರದರ್ಶನ ನೀಡಿದಂತೆ!

ವೇದರಾಜ್ ಎನ್. ಕೆ.

‘ತಗೊಳ್ಳಿ ನಮ್ಮ 5ರೂ’-ರೇಗ ಕಾರ್ಮಿಕರು ‘…ಮತ್ತು ನಮ್ಮ 7ರೂ’-ಪಿಂಚಣಿದಾರರು 2 ವರ್ಷಗಳಾಗುತ್ತಿರುವಂತೆ ‘ವಂತಿಗೆ’ಗಳ ಮಹಾಪೂರ!

ಸಂಪುಟ: 10 ಸಂಚಿಕೆ: 21 date: Sunday, May 15, 2016

ಅಯ್ಯೋ ಪಾಪ, ಉದ್ಯಮಿಗಳಿಗೆ ಇನ್ನಷ್ಟು ರಿಯಾಯ್ತಿಗಳನ್ನು ಕೊಡಲು ಮೋದಿ ಸರಕಾರದ ಬಳಿ ದುಡ್ಡಿಲ್ಲ ಎಂದುಕೊಂಡು ಮೊನ್ನೆ ಮೇ ದಿನದಂದು ಝಾರ್ಖಂಡ್ ನ ನೂರಾರು ರೇಗ ಕಾರ್ಮಿಕರು ಪ್ರಧಾನ ಮಂತ್ರಿಗಳಿಗೆ ತಮಗೆ ಈ ವರ್ಷ ಕೊಟ್ಟ 5 ರೂ. ಕೂಲಿ ಹೆಚ್ಚಳವನ್ನು ಹಿಂದಿರುಗಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ನಂತರ ಮೇ 5 ರಂದು ಪಿಂಚಣಿದಾರರ ‘ಚಲೋದಿಲ್ಲಿ’ಗೆ ಬಂದ ರಾಜಸ್ತಾನದ ಗ್ರಾಮೀಣ ಪಿಂಚಣಿದಾರರು ತಮ್ಮ ಒಂದು ದಿನದ ಪಿಂಚಣಿ 7ರೂ.ಗಳನ್ನು ಇದೇ ರೀತಿ ‘ಅಯ್ಯೋ ಪಾಪ’ ಎನ್ನುತ್ತ ಪ್ರಧಾನ ಮಂತ್ರಿಗಳಿಗೆ ಕಳಿಸಿದ್ದಾರೆ ಎಂದು ಸ್ಕ್ರಾಲ್.ಇನ್ ವರದಿ ಮಾಡಿದೆ.

ಎರಡು ವರ್ಷಗಳ ‘ಅಚ್ಚೇ ದಿನ್’ಗಳು ಅದರ ರೂವಾರಿಯ ಬಗ್ಗೆ ಮೂಡಿಸಿದ ವಿಶ್ವಾಸದ ಪ್ರತೀಕ ಇದು.

ರೇಗ ಅಥವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಒಂದು ಹಕ್ಕು ಆಧಾರಿತ ಯೋಜನೆ, ಇದರ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಕೇಳುವವರಿಗೆ ವರ್ಷಕ್ಕೆ ಕನಿಷ್ಟ 100ದಿನಗಳ ಉದ್ಯೋಗಗಳನ್ನು ಇಲ್ಲವೇ ಭತ್ಯೆಯನ್ನು ಒದಗಿಸಲು ಸರಕಾರ ಬಾಧ್ಯವಾಗಿದೆ ಈ ವರ್ಷ ಎಪ್ರಿಲ್‍ನಲ್ಲಿ ಈ ಹಕ್ಕು-ಆಧಾರಿತ ಸ್ಕೀಮಿಗೆ ಕನಿಷ್ಟ ಕೂಲಿಯನ್ನು ಕೇವಲ 5ರೂ.ಗಳಷ್ಟು ಹೆಚ್ಚಿಸಿತು. ಇದನ್ನು ಪ್ರತಿಭಟಿಸಿ ಝಾರ್ಖಂಡ್ ನಲ್ಲಿ ಮಾಣಿಕ ಎಂಬ ಹಳ್ಳಿಯ ನೂರಾರು ಕೆಲಸಗಾರರು ಈ ಅಲ್ಪ ಹೆಚ್ಚಳವನ್ನು ಪ್ರಧಾನ ಮಂತ್ರಿಗಳಿಗೆ ನೀವೇ ಇಟ್ಟುಕೊಳ್ಳಿ ಎಂದು ಕಳಿಸಿದ್ದಾರೆ. 100ದಿನಗಳ ಕೆಲಸವಂತೂ ಕೊಡುವುದಿಲ್ಲ, ಮಾಡಿಸಿಕೊಂಡ ಕೆಲಸಕ್ಕೆ ಕೂಲಿ ಕೂಡ ಸಮಯಕ್ಕೆ ಸರಿಯಾಗಿ ಕೊಡುವುದಿಲ್ಲ, ಕೂಲಿ ಕೊಟ್ಟರೂ ಅದು ಕನಿಷ್ಟ ಕೂಲಿಗಿಂತ ಕಡಿಮೆಯಿರುತ್ತದೆ. ಝಾರ್ಖಂಡ್ ನಲ್ಲಿ ಕನಿಷ್ಟ ದಿನ ಕೂಲಿ 212ರೂ. ಎಂಬುದನ್ನು ಗಮನಿಸಬೇಕು. ಇದೀಗ ‘ಒಳ್ಳೆಯ ದಿನ’ಗಳ ಪ್ರಾಮಾಣಿಕತೆ!

ಇನ್ನು ಗ್ರಾಮೀಣ ಪ್ರದೇಶದ ಬಡ ಪಿಂಚಣಿದಾರರ ಪಿಂಚಣಿಯನ್ನು 2006ರಿಂದ ಪರಿಷ್ಕರಿಸಿಲ್ಲ. ರಾಜಸ್ತಾನದ ತಾರಾಗರ್ ನಿಂದ ಬಂದ 76 ವರ್ಷದ ಛಾಗ್ನಿ ದೇವಿಗೆ ಸಿಗುವ ಪಿಂಚಣಿ ತಿಂಗಳಿಗೆ 200ರೂ. ಅಂದ ರೆ ದಿನಕ್ಕೆ 7ರೂ.ಗಳಷ್ಟೂ ಇಲ್ಲ! ಇದನ್ನು ರಾಜಸ್ತಾನ ಪಿಂಚಣಿದಾರರು ಪ್ರಧಾನ ಮಂತ್ರಿಗಳಿಗೆ ಕಳಿಸಿದ್ದಾರೆ, ಅವರಿಗಂತೂ ಪ್ರಯೋಜನವಾದೀತು ಎಂದು!

‘#ಪೋ ಮೋನೆ ಮೋದಿ’ ಟ್ವಿಟರ್ ರ

ಎರಡು ವರ್ಷಗಳ ಆಳ್ವಿಕೆ ರೇಗಾ ಕಾರ್ಮಿಕರಿಂದ, ಪಿಂಚಣಿದಾರರಿಂದ ‘ವಂತಿಗೆ’ಗಳ ಪ್ರತಿಭಟನೆಗಳನ್ನು ಕೊಡಿಸಿದರೆ ಕೇರಳದಲ್ಲಿ ಪ್ರಧಾನಿಗಳ ಚುನಾವಣಾ ಭಾಷಣಗಳು ಅವರಿಗೆ ಟ್ವಿಟರ್ ವ್ಯಂಗ್ಯಗಳ ಮಾಲೆಯನ್ನೇ ತಂದು ಕೊಟ್ಟಿದೆ. ಕೇರಳದಲ್ಲಿ ಪರಿಶಿಷ್ಟ ವರ್ಗಗಳಲ್ಲಿ ಶಿಶು ಮರಣ ದರ ಸೋಮಾಲಿಯಾಕ್ಕಿಂತಲೂ ಕೆಟ್ಟದಾಗಿದೆ ಎಂಬ ಅಣಿಮುತ್ತು ಉದುರಿಸಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳಲು(ಅಥವ ಸೆಲ್ಫಿ ತಗೊಳ್ಳಲು) ಅಣಿಯಾಗುತ್ತಿರುವಂತೆ  ರಾಜ್ಯದಲ್ಲಿರುವ ಮತ್ತು ಹೊರಗೂ ಇರುವ ಕೇರಳೀಯರ ಆಕ್ರೋಶದ ಸರಮಾಲೆ ಅವರನ್ನು ಸುತ್ತಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಂತೂ ‘#ಪೋ ಮೋನೆ ಮೋದಿ’ ಮತ್ತು “#ಸೊಮಾಲಿಯ’ ಎಂಬ ಟ್ವಿಟರ್ ಗಳಲ್ಲಿ ಭಾರತದಂತಹ ದೇಶದ ಪ್ರಧಾನಿಗೆ ತಕ್ಕುದಲ್ಲದ ಹತ್ತಾರು ಸಾವಿರ ಗೇಲಿ ಮಾತುಗಳನ್ನು  ಎದುರಿಸಬೇಕಾಗಿ ಬಂದಿದೆ ಎಂದು ವರದಿಯಾಗಿದೆ.

– ವೇದರಾಜ್ ಎನ್.ಕೆ.

ಎರಡು ವರ್ಷಗಳ ಸಾಧನೆ! ಸದನದಲ್ಲಿ ಬಿಜೆಪಿ ಎಂಪಿಗಳಿಂದಲೇ ಟೀಕೆ

ಸಂಪುಟ: 10 ಸಂಚಿಕೆ: 20 date: Sunday, May 8, 2016
ಮೇ 3 ರಂದು ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನ ಮಂತ್ರಿಗಳು ತಮ್ಮ ಸರಕಾರದ ಸಾಧನೆಗಳನ್ನು ಬಿಜೆಪಿ ಸಂಸತ್ ಸದಸ್ಯರು ಜನಗಳ ಬಳಿಗೆ ಒಯ್ಯುವಲ್ಲಿ ವಿಫಲರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರಂತೆ. ಮುದ್ರಾ ಬ್ಯಾಂಕ್ ಮೂರು ಕೋಟಿ ಜನರಿಗೆ ಪ್ರಯೋಜನ ತಂದಿದೆ, ಎಲ್‍ಪಿಜಿ ಸಂಪರ್ಕಗಳಿಂದಲೂ ಅಷ್ಟು ಜನಕ್ಕೆ ಪ್ರಯೋಜನವಾಗಿದೆ, ವಿದ್ಯುದೀಕರಣ ಮತ್ತೊಂದು ದೊಡ್ಡ ಸಾಧನೆ-ಇವುಗಳ ಬಗ್ಗೆ ನೀವು ಮಾತಾಡ್ತೀರಾ ಎಂದು ಹೆಡ್ ಮಾಸ್ತರರಂತೆ ಕೇಳಿದರಂತೆ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಬೇಕು ಎಂದು ತಾಕೀತು ಮಾಡಿದರಂತೆ.

ಅದರ ಪರಿಣಾಮ? ನಂತರ ನಡೆದ ಲೋಕಸಭೆಯ ಕಲಾಪಗಳಲ್ಲಿ ಕನಿಷ್ಟ ಇಬ್ಬರು ಬಿಜೆಪಿ ಎಂಪಿಗಳು ನಿರ್ದಿಷ್ಟ ವಿಷಯಗಳ ಮೇಲೆ ಅತೃಪ್ತಿ ವ್ಯಕ್ತಪಡಿಸಿದರು, ಸಾಲದ್ದಕ್ಕೆ ಇತರ ಬಿಜೆಪಿ ಎಂಪಿಗಳಿಂದಲೂ ಅವರ ಟೀಕೆಗೆ ಬೆಂಬಲ ವ್ಯಕ್ತವಾಯಿತು! ಹೀಗೆಂದು ‘ದಿ ಟೆಲಿಗ್ರಾಫ್(ಮೇ4) ವರದಿ ಮಾಡಿದೆ.

ಈರುಳ್ಳ್ಳಿ ಬೆಳೆಗಾರರನ್ನು ಉಳಿಸಿ ಎಂದು ಬಿಜೆಪಿ ಎಂಪಿ ಸುಮೇಧಾನಂದ ಸರಸ್ವತಿಯವರ ಕೋರಿಕೆಗೆ ಉತ್ತರಿಸುತ್ತ ಕೃಷಿ ಮಂತ್ರಿಗಳು ಇ-ವ್ಯಾಪಾರದ ಸೌಲಭ್ಯ ಒದಗಿಸಿದ್ದೇವೆ ಎಂದಾಗ ತೃಪ್ತರಾಗದ ಇನ್ನೊಬ್ಬ ಬಿಜೆಪಿ ಸದಸ್ಯ ಹುಕುಂ ಸಿಂಗ್ “ನೀವೇನೋ ಒಂದು ವಿವರವಾದ ಉತ್ತರ ಕೊಟ್ಟಿದ್ದೀರಿ. ಆದರೆ ಸಮಸ್ಯೆ ಮಾತ್ರ ಹಾಗೆಯೇ ಇದೆ. ಬೇಳೆಗಳ ಬೆಲೆಗಳು ಕೆಳಬರುತ್ತಿಲ್ಲ, ಈರುಳ್ಳಿ ಬೆಲೆಗಳು ಮೇಲೇರುತ್ತಿಲ್ಲ” ಎಂದರಂತೆ. “ರೈತರು ಕೆಜಿಗೆ 2ರೂ.ಗೆ, 1ರೂ.ಗೆ ಈರುಳ್ಳಿ ಮಾರಬೇಕಾಗಿರುವಾಗ ನಿಮ್ಮ ಇ-ವ್ಯಾಪಾರದಿಂದೇನು ಪ್ರಯೋಜನ ಎಂದು ಅವರು ಕೇಳಿದಾಗ ಪ್ರತಿಪಕ್ಷಗಳ ಸದಸ್ಯರು ಮುಸಿ-ಮುಸಿ ನಗುವಂತಾಯಿತಂತೆ.

ಇನ್ನೊಬ್ಬ ಬಿಜೆಪಿ ಸದಸ್ಯ ಗೃಹಮಂತ್ರಿಗಳನ್ನೇ ಇಕ್ಕಟ್ಟಿಗೆ ಸಿಲುಕಿಸಿದರು. ಕೇಂದ್ರದ ಪೋಲೀಸ್ ಆಧುನೀಕರಣ ಸ್ಕೀಮ್‍ನಲ್ಲಿ ಎಂದೂ ವಸತಿಯ ಅಂಶ ಇರಲೇ ಇಲ್ಲ ಎಂದು ಅವರು ಹೇಳಿದಾಗ ಆರ್.ಕೆ.ಸಿಂಗ್ ಎದ್ದು ನಿಂತು “ವಸತಿಯ ಅಂಶ ಇತ್ತು, ರಾಜ್ಯಗಳಿಗೆ ತೆರಿಗೆಯ ಪಾಲು ಹೆಚ್ಚಿಸಿದ ನಂತರ  ಅದನ್ನು  ನಿಲ್ಲಿಸಲಾಯಿತು” ಎಂದರು. ಈತ ಬಿಜೆಪಿಗೆ ಸೇರುವ ಮೊದಲು ಗೃಹ ಕಾರ್ಯದರ್ಶಿಯಾಗಿ ನಿವೃತ್ತರಾದವರು. ಆದ್ದರಿಂದ ಗೃಹಮಂತ್ರಿಗಳು ಸುಮ್ಮನಿದ್ದರು. ಆದರೆ ಅವರ ಕಿರಿಯ ಮಂತ್ರಿ ‘ಏನಿದು?’ ಎಂದು ಚಡಪಡಿಸಿದರಂತೆ. ಇತರ ಹಲವು ಬಿಜೆಪಿ ಸದಸ್ಯರೇ ಮುಸಿ-ಮುಸಿ ನಗುತ್ತಿದ್ದುದು ಕಂಡುಬಂತಂತೆ. ಏಕೆಂದರೆ ಇದಕ್ಕೆ ಮೊದಲು ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಇದನ್ನೇ ಹೇಳಿದಾಗ ಗೃಹಮಂತ್ರಿಗಳು ಅದನ್ನು ಬಲವಾಗಿ ನಿರಾಕರಿಸಿದ್ದರು!.

ಇದರ ಹಿಂದಿನ ದಿನ ಬಿಹಾರದಿಂದ ಚುನಾಯಿತರಾದ ಬಿಜೆಪಿ ಸದಸ್ಯ ಭೋಲಾ ಸಿಂಗ್ ಈ ಸರಕಾರವೂ ಹಿಂದಿನ ಸರಕಾರದಂತೆ ಕಾರ್ಪೊರೇಟ್ ಗುಂಪುಗಳ ಒತ್ತಡಕ್ಕೆ, ವಿಶೇಷವಾಗಿ ತೈಲ ಮತ್ತು ನೈಸರ್ಗಿಕ ಅನಿಲ ವಲಯಗಳಲ್ಲಿ, ಒಳಗಾಗಿದೆಯೇ ಎಂಬ ಸಂದೇಹದಿಂದ “ಸರಕಾರದ ಮೇಲಿನ ಒತ್ತಾಯ ಏನು ಎಂದು ನಾವು ತಿಳಿಯಬೇಕಾಗಿದೆ” ಎಂದರು. ಕುಪಿತಗೊಂಡ ತೈಲ ಮಂತ್ರಿ ಧರ್ಮೇಂದ್ರ ಪ್ರಧಾನ್ “ನಮ್ಮ ಮೇಲೇನೂ ಒತ್ತಾಯವಿಲ್ಲ, ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಗಳು ಎಂಬುದನ್ನು ದಯವಿಟ್ಟು ನೆನಪಿಟ್ಟುಕೊಳ್ಳಿ” ಎಂದರು. ಪ್ರತ್ಯುತ್ತರವಾಗಿ ಭೋಲಾ ಸಿಂಗ್ ಅದು ತನಗೂ ಗೊತ್ತಿದೆ ಎನ್ನುತ್ತ “ನನಗೆ ನಿಮ್ಮ ಮೇಲೂ ನಂಬಿಕೆಯಿದೆ, ಎಷ್ಟೆಂದರೂ ನೀವು ಧರ್ಮೇಂದ್ರ, ಸಾಲದ್ದಕ್ಕೆ ಪ್ರಧಾನರೂ ಹೌದು” ಎಂದಾಗ ಸದನದಲ್ಲಿ ನಗೆ ಸಹಜ ತಾನೇ?

– ವೇದರಾಜ್ ಎನ್.ಕೆ

“ಪ್ರೊ. ಬಿಪನ್‍ಚಂದ್ರರ ಪುಸ್ತಕದ ಬಗ್ಗೆ ಕಿರಿಚಾಡುವವರು ತಮ್ಮ ಅಜ್ಞಾನವನ್ನು ಜಗತ್ತಿಗೆ ಸಾರುತ್ತಿದ್ದಾರೆ”- ನೂರಕ್ಕೂ ಹೆಚ್ಚು ಪರಿಣಿತರ ಹೇಳಿಕೆ

ಸಂಪುಟ: 10 ಸಂಚಿಕೆ:20 date: Sunday, May 8, 2016
ಪ್ರಖ್ಯಾತ ಇತಿಹಾಸಕಾರ ಪ್ರೊ. ಬಿಪನ್ ಚಂದ್ರ ಮತ್ತು ಅವರ ಸಹಯೋಗಿಗಳು ರಚಿಸಿದ, 28 ವರ್ಷಗಳ ಹಿಂದೆ ಪ್ರಕಟವಾದ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಾದ ಪುಸ್ತಕದಲ್ಲಿ ಭಗತ್ ಸಿಂಗ್ ಅವರನ್ನು `ಕ್ರಾಂತಿಕಾರಿ ಭಯೋತ್ಪಾದಕರು’ ಎಂದು ಹೇಳಿ ಅವಮಾನಿಸಲಾಗಿದೆ, ಈ ಪುಸ್ತಕವನ್ನು ನಿಷೇಧಿಸಬೇಕು, ಅದನ್ನು ಬರೆದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದೆಲ್ಲ  ಬೊಬ್ಬೆ ಇತ್ತೀಚೆಗೆ ಎದ್ದಿದೆ.

ಇದು ಇತ್ತಿಚೆಗಷ್ಟೇ `ರಾಷ್ಟ್ರೀಯವಾದ’ ಎಂಬ ಪದದ ಪರಿಚಯವಾದವರು, ತಮ್ಮ ದೇಶಪ್ರೇಮವನ್ನು ಪ್ರದರ್ಶಿಸಲು ಯಾವುದೇ ಅರ್ಥಹೀನವಾದ ವಿಚ್ಛಿದ್ರಕಾರಿ ಪ್ರಶ್ನೆಗಳನ್ನು ಎತ್ತುವುದು ಒಂದು ಹವ್ಯಾಸವಾಗಿ ಬಿಟ್ಟಿರುವವರು ತಮ್ಮ ಅಜ್ಞಾನವನ್ನು ಜಗತ್ತಿಗೆ ಸಾರುತ್ತಿರುವ ಪರಿ ಎಂದು ಸಹಮತ್ ನೀಡಿರುವ ಹೇಳಿಕೆ ವರ್ಣಿಸಿದೆ, ಈ ಹೇಳಿಕೆಗೆ ನೂರಕ್ಕೂ ಹೆಚ್ಚು ಇತಿಹಾಸಜ್ಞರು, ಸಮಾಜ ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಮತ್ತು ಇತರ ಪರಿಣಿತರು ಸಹಿ ಮಾಡಿದ್ದಾರೆ.

ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ತಮ್ಮನ್ನು `ಕ್ರಾಂತಿಕಾರಿ ಭಯೋತ್ಪಾದಕರು’ ಎಂದೇ ಕರೆದುಕೊಂಡಿದ್ದರು ಎಂಬುದು ಈ ಮಂದಿಗೆ ತಿಳಿದಂತಿಲ್ಲ. ಅವರೆಲ್ಲರೂ ಸದಸ್ಯರಾಗಿದ್ದ ಹಿಂದುಸ್ತಾನ್ ಸೋಶಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (ಹೆಚ್.ಎಸ್.ಆರ್.ಎ) ತನ್ನ ಪ್ರಣಾಳಿಕೆಯಲ್ಲಿ `ನಮ್ಮ ಭಯೋತ್ಪಾದಕ ಧೋರಣೆಯ ಬಗ್ಗೆ ನಮ್ಮನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ನಿಸ್ಸಂದೇಹವಾಗಿಯೂ, ಭಯೋತ್ಪಾದನೆಗೆ ಇಳಿಯುವ ಮೂಲಕ ಮಾತ್ರವೇ ಒಂದು ಅತ್ಯಂತ ಪರಿಣಾಮಕಾರಿ ಪ್ರತೀಕಾರದ ಸಾಧನ  ಕಂಡುಕೊಳ್ಳಲು ಸಾಧ್ಯ ಎಂದು ಕ್ರಾಂತಿಕಾರಿಗಳು ಯೋಚಿಸುತ್ತಾರೆ, ಸರಿಯಾಗಿಯೇ ಯೋಚಿಸುತ್ತಾರೆ..’ ಎಂದಿತ್ತು.

`ಬಾಂಬಿನ ಪಂಥ’ ಎಂಬ ಗಾಂಧೀಜಿಯ ಟೀಕೆಯ ಲೇಖನಕ್ಕೆ ಉತ್ತರವಾಗಿ ಹೆಚ್.ಎಸ್.ಆರ್.ಎ ಪರವಾಗಿ ಪ್ರಕಟಿಸಿದ `ಬಾಂಬಿನ ತತ್ವಶಾಸ್ತ್ರ’ ಎಂಬ ಲೇಖನದಲ್ಲಿ ಬ್ರಿಟಿಶರ ದಮನದಿಂದಾಗಿ ಭಯೋತ್ಪಾದನೆ ಹುಟ್ಟಿಕೊಂಡಿದೆ, ಅದೊಂದು ಘಟ್ಟ, ಕ್ರಾಂತಿಯ ಒಂದು ಅನಿವಾರ್ಯ ಘಟ್ಟ, ಭಯೋತ್ಪಾದನೆ ಎಂಬುದೇನೂ ಸಂಪೂರ್ಣ ಕ್ರಾಂತಿಯಲ್ಲ, ಆದರೆ ಅದಿಲ್ಲದೆ ಕ್ರಾಂತಿ ಪೂರ್ಣವಾಗುವುದಿಲ್ಲ ಎನ್ನಲಾಗಿತ್ತು ಎಂಬ ಸಂಗತಿಯತ್ತ ಈ ಹೇಳಿಕೆ ಗಮನ ಸೆಳೆದಿದೆ.

ಆದರೆ ಲೆನಿನ್ ಕೃತಿಗಳನ್ನು ಓದಲಾರಂಭಿಸಿದ ನಂತರ ವೈಯಕ್ತಿಕ ಭಯೋತ್ಪಾದಕತೆಯ ನಿರರ್ಥಕತೆಯನ್ನು ಮನಗಂಡ ಭಗತ್ ಸಿಂಗ್ `ನಾನು ಭಯೋತ್ಪಾದಕನಂತೆ ವರ್ತಿಸಿದಂತೆ ಕಾಣುತ್ತದೆ. ಆದರೆ ನಾನು ಭಯೋತ್ಪಾದಕನಲ್ಲ’ ಎಂದಿದ್ದರು.

ಈಗ ಕಳೆದ 2-3 ದಶಕಗಳಲ್ಲಿ `ಭಯೋತ್ಪಾದನೆ’ ಎಂಬುದು ಜಗತ್ತಿನಾದ್ಯಂತ ಅಮಾಯಕ ಮಂದಿಯನ್ನು ಕೊಲ್ಲುವುದು ಎಂಬ ಕೆಟ್ಟ ಅರ್ಥ ಪಡೆದುಕೊಂಡಿದೆ. ಆದ್ದರಿಂದಲೇ ನಮ್ಮ ರಾಷ್ಟ್ರೀಯ ವೀರಾಗ್ರಣಿಗಳನ್ನು ಭಯೋತ್ಪಾದಕರು ಎಂದು ಕರೆಯಲು ನಾವು ಇಷ್ಟಪಡುವುದಿಲ್ಲ. ಆದರೆ ನಾವು ನಮ್ಮನ್ನು ರಾಷ್ಟ್ರೀಯವಾದಿಗಳು ಎಂದು ಹೇಳಿಕೊಳ್ಳುವದಾದರೆ ನಮ್ಮ ರಾಷ್ಟ್ರೀಯ ಆಂದೋಲನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಾಗಿದೆ, `ಕ್ರಾಂತಿಕಾರಿ ಭಯೋತ್ಪಾದಕರು’ ಎಂದು ಹೆಮ್ಮೆ ಪಡುತ್ತಿದ್ದ ಕಾಲವೊಂದಿತ್ತು ಎಂಬುದನ್ನು ಮರೆಯುವಂತಿಲ್ಲ ಎಂದಿರುವ ಹೇಳಿಕೆ ಇಂತಹ ಕಿರಿಚಾಟಗಳನ್ನು  ನಿಲ್ಲಿಸೋಣ ಎಂದು ಕರೆ ನೀಡಿದೆ.

ಪ್ರೊ. ಬಿಪನ್ ಚಂದ್ರ ಈಗಿಲ್ಲ. ಆದರೆ ಈ ಕೃತಿಯನ್ನು ಸಿದ್ಧಪಡಿಸುವಲ್ಲಿ ಅವರೊಂದಿಗೆ ದುಡಿದ ಮೃದುಲಾ ಮುಖರ್ಜಿ, ಆದಿತ್ಯ ಮುಖರ್ಜಿ,ಮತ್ತು ಸುಚೇತ ಮಹಾಜನ್ ಲೋಕಸಭೆಯಲ್ಲಿ ಬಿಜೆಪಿ ಎಂಪಿ ಅನುರಾಗ್ ಠಾಕುರ್ ಮತ್ತು ಮಾಧ್ಯಮಗಳ ಒಂದು ವಿಭಾಗದಲ್ಲಿ ಮಾಡುತ್ತಿರುವ ಟೀಕೆಗಳಿಗೆ ಉತ್ತರ ನೀಡುತ್ತ ಈ ಪದ ಬಳಕೆ ಮೇಲೆ ಹೇಳಿದಂತೆ ಬೈಗುಳವಾಗಿ ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತ, ಬಿಪನ್ ಚಂದ್ರ ಅವರೇ ನಂತರದ ಬರವಣಿಗೆಗಳಲ್ಲಿ ಈ ಪದ ಬಳಕೆಯನ್ನು ನಿಲ್ಲಿಸಿದ್ದರು, `ಭಗತ್ ಸಿಂಗ್ ಭಾರತದ ಅತ್ಯಂತ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿ ಸಮಾಜವಾದಿಗಳ ಮಾತ್ರವೇ ಅಲ್ಲ, ಈ ದೇಶದ ಆರಂಭದ ಮಾರ್ಕ್ಸ್ ವಾದಿ ಚಿಂತಕರು ಮತ್ತು ಸಿದ್ಧಾಂತಿಗಳಲ್ಲಿ ಒಬ್ಬರು ಎಂಬ ಸಂಗತಿ, ದುರದೃಷ್ಟವಶಾತ್ ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ಅದರ ಫಲಿತಾಂಶವೆಂದರೆ ಎಲ್ಲ ರೀತಿಯ ಪ್ರತಿಗಾಮಿಗಳು, ಕುರುಡು ಸಂಪ್ರದಾಯವಾದಿಗಳು ಮತ್ತು ಕೋಮುವಾದಿಗಳು ಭಗತ್ ಸಿಂಗ್ ಮತ್ತು ಚಂದ್ರಶೇಖರ ಆಝಾದ್ ಮುಂತಾದ ಆತನ ಸಂಗಾತಿಗಳನ್ನು ತಮ್ಮ ರಾಜಕೀಯ ಮತ್ತು ಸಿದ್ಧಾಂತಗಳಿಗೆ ತಪ್ಪಾಗಿ, ಅಪ್ರಾಮಾಣಿಕವಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದಿದ್ದರು ಎಂಬ ಸಂಗತಿಯತ್ತ ಗಮನ ಸೆಳೆದಿದ್ದಾರೆ.

ಈಗ ಪ್ರೊ. ಬಿಪನ್ ಚಂದ್ರ ಅವರ ವಿರುದ್ಧದ ಕಿರಿಚಾಟದಲ್ಲೂ ಕೂಡ ಪ್ರದರ್ಶನಗೊಳ್ಳುತ್ತಿರುವುದು ಅಂತಹುದೇ ಅಪ್ರಾಮಾಣಿಕತೆ ಎನ್ನುತ್ತಾರೆ ಇತಿಹಾಸಜ್ಞರು..ಇದೀಗ ಸಾಮಾನ್ಯವಾಗಿರುವ ಅಚ್ಛೇದಿನ್ ಸಂಸ್ಕೃತಿ!

-ವೇದರಾಜ್ ಎನ್.ಕೆ.

‘ಅಲ್ಪಸಂಖ್ಯಾತರ ಸಂಸ್ಥೆಗಳು’ ಅಲ್ಲ ಎನ್ನುವಾಗ ಜಾತ್ಯಾತೀತ ಸಂವಿಧಾನದ ನೆನಪು!

ಸಂಪುಟ 10 ಸಂಚಿಕೆ 8 ಫೆಬ್ರವರಿ 14, 2016

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು  ಜಾಮಿಯ ಮಿಲಿಯ ‘ಅಲ್ಪಸಂಖ್ಯಾತರ ಸಂಸ್ಥೆಗಳು’ ಅಲ್ಲ ಎನ್ನುವಾಗ ಜಾತ್ಯಾತೀತ ಸಂವಿಧಾನದ ನೆನಪು!

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ದಿಲ್ಲಿಯ ಜಾಮಿಯ ಮಿಲಿಯ ಇಸ್ಲಾಮಿಯ ಸಂಸತ್ತಿನ ಶಾಸನದ ಪ್ರಕಾರ ರಚಿಸಲ್ಪಟ್ಟವುಗಳು, ಅವುಗಳನ್ನು ‘ಅಲ್ಪಸಂಖ್ಯಾತರ ಸಂಸ್ಥೆಗಳು’ ಎಂದು ಪರಿಗಣಿಸುವಂತಿಲ್ಲ, ಏಕೆಂದರೆ ಭಾರತದ ಜಾತ್ಯತೀತ ಸಂವಿಧಾನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ, ಅದರಲ್ಲೂ ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಸಂಸ್ಕøತಿಯ ಪ್ರೋತ್ಸಾಹಕ್ಕೆ ಸರಕಾರ ನಿಧಿಗಳನ್ನು ಕೊಡುವುದಕ್ಕಾಗಲೀ, ಅವನ್ನು ರಚಿಸಲು ಕೂಡ ಅನುಮತಿ ಕೊಡುವುದಿಲ್ಲ ಎಂದು ಮೋದಿ ಸರಕಾರದ ಪರವಾಗಿ ವಾದಿಸುತ್ತ ಅಟೊರ್ನಿ ಜನರಲ್ ಅವರು ಸುಪ್ರಿಂ ಕೋರ್ಟ್‍ನಲ್ಲಿ ವಾದ ಮಂಡಿಸಿದ್ದಾರೆ. ಅಂದರೆ ಭಾರತದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ಆಧುನೀಕರಣಕ್ಕಾಗಿಯೆಂದೇ ಸ್ಥಾಪನೆಗೊಂಡ ಈ ಶಿಕ್ಷಣ ಸಂಸ್ಥೆಗಳು ಸರಕಾರದಿಂದ ಏನೂ ಸಹಾಯ ನಿರೀಕ್ಷಿಸಬಾರದು, ಇಲ್ಲವೇ ‘ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು’ ಎಂಬ ತಮ್ಮ ವೈಶಿಷ್ಟ್ಯವನ್ನು ಬಿಟ್ಟುಕೊಡಬೇಕು ಎಂಬುದು ‘ಒಳ್ಳೆಯ ದಿನ’ಗಳ ಮಂದಿಯ ವಾದ.

ಕಳೆದ ವರ್ಷ ಜನವರಿ 15 ರಂದು ಭಾರತದ ಸರ್ವೋಚ್ಚ ನ್ಯಾಯಾಲಯ “ಒಂದು ಸಂಸ್ಥೆಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವ ಅಧಿಕಾರ ಸಂಪೂರ್ಣವಾಗಿ ಕೇಂದ್ರ ಸರಕಾರಕ್ಕೆ ಸೇರಿದ್ದು. ಅದು ಸಂಬಂಧಪಟ್ಟ ಮಾಹಿತಿಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಬಹುದು” ಎಂದಿತ್ತು. .ಮೋದಿ ಸರಕಾರ ಈ ಎರಡು ಸಂಸ್ಥೆಗಳಿಗೆ ಆ ಸ್ಥಾನಮನ ಕೊಡಬಾರದು ಎಂದು ನಿರ್ಧರಿಸಿದೆ. ಆದರೆ ಅದಕ್ಕೆ ಆಧಾರ ಈ ಸಂಸ್ಥೆಗಳಿಗೆ ಸಂಬಂಧಪಟ್ಟ ವಿಷಯಗಳಲ್ಲ, ನಮ್ಮ ಸಂವಿಧಾನ ಜಾತ್ಯಾತೀತ ಎಂಬ ಕಾರಣಕ್ಕೆ!

ಈ ಎರಡು ಶಿಕ್ಷಣ ಸಂಸ್ಥೆಗಳು ಬ್ರಿಟಿಶರ  ವಸಾಹತುಶಾಹೀ ಆಳ್ವಿಕೆಯ ವಿಶೇಷ ಚಾರಿತ್ರಿಕ ಸಂದರ್ಭದಲ್ಲಿ ಸ್ಥಾಪನೆಯಾದವುಗಳು. ಸ್ವತಂತ್ರ ಭಾರತದ ಸಂವಿಧಾನದ ಕಲಮು 30  ಎಲ್ಲ ಅಲ್ಪಸಂಖ್ಯಾತರು ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸಥಪಿಸಬಹುದು, ಅವಕ್ಕೆ ಭಾರತದ ಪ್ರಭುತವ ಹಣ ಸಹಾಯ ನೀಡುತ್ತದೆ ಎಂದಿದೆ ಎಂಬ ಸಂಗತಿಯತ್ತ ಪರಿಣಿತರು ಗಮನ ಸೆಳೆದಿದ್ದಾರೆ.

ಅದಿರಲಿ, ಮೋದಿ ಸರಕಾರ ನಮ್ಮದು ಜಾತ್ಯಾತೀತ ಸಂವಿಧಾನವಾದ್ದರಿಂದ ಧಾರ್ಮಿಕ ಅಧಾರದಲ್ಲಿ ವರ್ತಿಸಲು ಸಾಧ್ಯವಿಲ್ಲ ಎಂದು ನಿಜವಾಗಿಯೂ ನಂಬಿದೆಯೇ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.

ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದಲ್ಲಿ ಸಂಪೂರ್ಣವಾಗಿ ಸರಕಾರದ ಬೊಕ್ಕಸದಿಂದಲೇ ನಡೆಯುವ ಶಾಲೆಗಳಲ್ಲಿ ‘ಸೂರ್ಯ ನಮಸ್ಕಾರ’ , ‘ಗಾಯತ್ರಿ ಮಂತ್ ರಪಠನ’ ಮತ್ತು ‘ಓಂ’ ಪಠಣವನ್ನು ಕಡ್ಡಾಯ ಗೊಳಿಸಿದೆ. ಛತ್ತೀಸ್‍ಗಡದ ಬಿಜೆಪಿ ಸರಕಾರ ಕ್ರಿಶ್ಚಿಯನ್ ಮಿಶನರಿ ಶಾಲೆಗಳಲ್ಲಿ ವಿದ್ಯಾರ್ತಿಗಳು ತಮ್ಮ ಪ್ರಿನ್ಸಿಪಾಲರನ್ನು ‘ಫಾದರ್’ ಎಂದು ಸಂಬೋಧಿಸಬಾರದು, ‘ಆಚಾರ್ಯ’ ಎನ್ನಬೇಕು ಎಂದು ವಿಧಿಸಿದೆ ಎಂಬ ಸಂಗತಿಯತ್ತ ಶಿಕ್ಷಣವೇತ್ತ ಸಿ.ಪಿ.ಬಾಂಬ್ರುಯವರು ಗಮನ ಸೆಳೆದಿದ್ದಾರೆ. ಇಂತಹ ಹಲವು ಉದಾಹರಣೆಗಳನ್ನು ಕೊಡಬಹುದು ಎಂದು ಅವರು ಹೇಳುತ್ತಾರೆ. ಈ ಸರಕಾರಗಳನ್ನು ನಡೆಸುವ ಬಿಜೆಪಿ ಮಂದಿಗೆ ಭಾರತದ್ದು ಜಾತ್ಯಾತೀತ ಸಂವಿಧಾನ ಎಂದು ತಿಳಿದಿರಲಿಕ್ಕಿಲ್ಲವೇ?

ಸ್ವತಃ ಪ್ರಧಾನ ಮಂತ್ರಿಗಳೇ ಮುಖ್ಯಸ್ಥರಾಗಿರುವ ಉನ್ನತ ಅಧಿಕಾರದ ಸಮಿತಿ ಶಾಲಾ, ಕಾಲೇಜು ಮತ್ತು ವಿಶ್ವವಿದ್ಯಾಲಯದಗಳಲ್ಲಿ ‘ಯೋಗ ಕಲೆ ಮತ್ತು ವಿಜ್ಞಾನ’ವನ್ನು ಕಲಿಸಲು ನಿರ್ಧರಿಸಿದೆಯಂತೆ, ಇದರ ಪಠ್ಯಕ್ರಮವನ್ನು ಪ್ರಧಾನ ಮಂತ್ರಿಗಳ ಯೋಗ ಶಿಕ್ಷಕರೇ ರೂಪಿಸುತ್ತಿದ್ದಾರೆ ಎಂದು ವರದಿಯಾಗಿದೆ.  ಬಹುಶಃ ಇದು ‘ಜಾತ್ಯಾತೀತ’ ಕ್ರಮ ಎಂದು ‘ಅಚ್ಛೇ ದಿನ್’ವಾಲಾಗೂ ವಾದಿಸಬಹುದು. ಆದರೆ ಧಾರ್ಮಿಕ ಅಲ್ಪಸಂಖ್ಯಾತರಿಗೆ, ಮುಸ್ಲಿಮರಿಗೂ, ಕ್ರೈಸ್ತರಿಗೂ ಇದು ಶಿಕ್ಷಣ ವ್ಯವಸ್ಥೆಯ ಮೂಲಕ ‘ಹೀಮದೂಕರಣ’ದ ಪ್ರಯತ್ನ, ತಮ್ಮ ಸಾಂಸ್ಕøತಿಕ ವೈಶಿಷ್ಟ್ಯತೆಯನ್ನು ನಿರಾಕರಿಸುವ ಕ್ರಮ ಎಂದು ಅನಿಸಿದರೆ ಆಸ್ಚರ್ಯವೇನಿಲ್ಲ. ಈ ಹಿನ್ನೆಲೆಯಲ್ಲಿ ಅಲಿಗಡ ವಿಶ್ವವಿದ್ಯಾಲಯ ಮತ್ತು ಜಾಮಿಯ ಮಿಲಿಯ ‘ಅಲ್ಪಸಂಖ್ಯಾತ ಸಂಸ್ಥೆಗಳು ‘ಅಲಲ್ ಎಂಬ ಮೋದಿ ಸರಕಾರದ ವಾದ ಅವರಲ್ಲಿ ಭೀತಿ ಹುಟ್ಟಿಸುವುದು ಸಹಜ.

ಇಂತಹ ಭೀತಿ, ಸಂದೇಹ ಮೋದಿ ಸರಕಾರದ ಅಟೊರ್ನಿ ಜನರಲ್ ಅವರೇ ಹೇಳಿದಂತೆ ಜಾತ್ಯಾತೀತ ಸಂವಿಧಾನವನ್ನು ಹೊಂದಿರುವ ಭಾರತದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಪ್ರಜಾಪ್ರಭುತ್ವವಾದಿಗಳ ಆತಂಕ. ಏಕೆಂದರೆ ತಮ್ಮ ಭಾಷೆ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಒಂದು ಪ್ರಜಾಪ್ರಭುತ್ವ ನೀಡುತ್ತದೆ, ಮತೀಯ ಪ್ರಭುತ್ವದಲ್ಲಿ ಮಾತ್ರ ಆ ಹಕ್ಕನ್ನು ನಿರಾಕರಿಸಲಾಗುತ್ತದೆ.

ಈ ವಿದ್ಯಮಾನದ ಸಾರಾಂಶವೆಂದರೆ ಕೇಂದ್ರದ ಸರಕಾರದ ‘ಪ್ರಸ್ತುತ’ ಸೈದ್ಧಾಂತಿಕ ನಂಬಿಕೆಗಳನ್ನು ಈಡೇರಿಸಲು ಇತಿಹಾಸದ ಸಂಗತಿಗಳನ್ನು ಉಪೇಕ್ಷಿಸಲಾಗುತ್ತಿದೆ ಎಂದು ಸಿ.ಪಿ. ಬಾಂಬ್ರಿಯವರು ಅಭಿಪ್ರಾಯ ಪಡುತ್ತಾರೆ.

– ವೇದರಾಜ್ ಎನ್.ಕೆ.

ಮಾಲೆಗಾಂವ್ ಸ್ಫೋಟ ಕೇಸನ್ನೂ ಹುಸಿಗೊಳಿಸುವ ಹುನ್ನಾರ?

ಸಂಪುಟ 10 ಸಂಚಿಕೆ 08 ಫೆಬ್ರವರಿ 14, 2016

ಫೆಬ್ರುವರಿ 3ರಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) 2008ರ ಮಾಲೇಗಾಂವ್ ಸ್ಫೋಟಗಳ ಹನ್ನೊಂದು ಆಪಾದಿತರ ವಿರುದ್ಧ ಆಪಾದನೆಗಳನ್ನು ಪಟ್ಟಿ ಮಾಡುವುದನ್ನು ಮಹಾರಾಷ್ಟ್ರ ಸಂಘಟಿತ ಅಪರಾಧ ಹತೋಟಿ ಕಾಯ್ದೆ(ಎಂಕೊಕ)ಯ ಅಡಿಯಲ್ಲಿ ಆಪಾದನೆಗಳನ್ನು ಕೈಬಿಡಬಹುದೇ ಎಂದು ಅಟೊರ್ನಿ ಜನರಲ್ ಅವರ ಅಭಿಪ್ರಾಯ ಬರುವ ವರೆಗೆ ಮುಂದೂಡಬೇಕು ಎಂದು ವಿಶೇಷ ನ್ಯಾಯಾಲಯವನ್ನು ಕೇಳಿಕೊಂಡಿದೆಯಂತೆ.

ಆದರೆ ಅಟೊರ್ನಿ ಜನರಲ್‍ಗೂ ಈ ಕೇಸಿಗೂ ಏನು ಸಂಬಂಧ? ಇದೆಲ್ಲ ಕೇವಲ ರಾಜಕೀಯ, ಅವರು ಪ್ರತಿಯೊಬ್ಬರಿಗೂ ಮೋಸ ಮಾಡುತ್ತಿದ್ದಾರೆ ಎಂದು ಈ ಕೇಸಿನಲ್ಲಿ ಎನ್‍ಐಎ ಪರ ವಕೀಲರಾಗಿದ್ದ ರೋಹಿಣಿ ಸಾಲ್ಯಾನ್ ಹೇಳಿದ್ದಾರೆ.

ಕೇಂದ್ರದಲ್ಲಿ ಮೋದಿ ಸರಕಾರ ಬಂದ ಮೇಲೆ ಇವರನ್ನು ಈ ಕೇಸಿನಲ್ಲಿ ನಿಧಾನವಾಗಿ ಸಾಗಿ ಎಂದು ಹೇಳಲಾಗಿತ್ತು, ಅದಕ್ಕೆ ಒಪ್ಪದ ಅವರು ಈ ಕೇಸಿನಿಂದ ಹಿಂದೆ ಸರಿದಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ಆಗ ಎನ್‍ಐಎ ಹಾಗೇನೂ ಹೇಳಿಲ್ಲ ಎಂದು ಹೇಳಿತ್ತು. ಆದರೆ ಈಗ ಎಂಕೋಕದ ಅಡಿಯಲ್ಲಿ ಆಪಾದನೆಗಳನ್ನು ಹಿಂತೆಗೆದುಕೊಳ್ಳುವ ಸೂಚನೆ ರೋಹಿಣಿ ಸಾಲ್ಯಾನ್ ಹೇಳಿದ್ದು ನಿಜ ಎಂಬುದನ್ನು ಸಾಬೀತು ಮಾಡಿದೆ. ಸಾಧ್ವಿ ಪ್ರಜ್ಞಾ ಸಿಂಗ್ ಠಾಕುರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ ಪುರೋಹಿತ್ ಕೂಡ ಈ ಕೇಸಿನ ಹನ್ನೊಂದು ಆಪಾದಿತರಲ್ಲಿ ಸೇರಿದ್ದಾರೆ.

ಎಂಕೋಕ ಒ್ರಂದು ಕಠಿಣವಾದ ಕಾಯ್ದೆ. ಅದರ ಅಡಿಯಲ್ಲಿ ಆಪಾದನೆಗಳನ್ನು ಕೈಬಿಟ್ಟರೂ ಈ ಕೇಸ್ ಕುಸಿಯುವುದಿಲ್ಲ, ಸಾಕ್ಷಿಗಳು ಹೇಳಿರುವ ವಿವಿಧ ಪಿತೂರಿ ಸಭೆಗಳ ಮೇಲೂ ನಾಲ್ವರನ್ನು ಬಲಿ ತೆಗೆದುಕೊಂಡು 70ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದ ಸ್ಫೋಟದ ಈ ಕೇಸ್ ನಿಲ್ಲುತ್ತದೆ ಎಂದು ಮುಂದುವರೆದು ರೋಹಿಣಿ ಸಾಲ್ಯಾನ್ ಹೇಳುತ್ತಾರೆ.

ಆದರೆ ಆಪಾದತರ ಪರವಾದ ವಕೀಲರು ಹಾಗೆ ಭಾವಿಸುತ್ತಿಲ್ಲ. ಈ ಕೇಸನ್ನು ಮೊದಲಿಗೆ ಹೇಮಂತ ಕರ್ಕರೆ ನೇತೃತ್ವದ ಮಹಾರಾಷ್ಟ್ರ ಭಯೋತ್ಪಾದನಾ-ನಿರೋಧಕ ತಂಡ ಕೈಗೆತ್ತಿಕೊಂಡಾಗ ತನಿಖೆ ಸಾಧ್ವಿ ಪ್ರಜ್ಞಾ ಠಾಕುರ್‍ಳತ್ತ ಒಯ್ಯಿತು. ನಂತರ ಕರ್ನಲ್ ಪುರೋಹಿತ್ ಈ ಸ್ಫೋಟಗಳಿಗೆ ಆರ್‍ಡಿಎಕ್ಸ್ ಒದಗಿಸಿದ್ದ ಎಂಬ ಆಪಾದನೆ ಬಂತು. ಎಪ್ರಿಲ್ 13, 2011ರಲ್ಲಿ ಕೇಂದ್ರ ಗ್ರಹ ಮತ್ರಾಲಯದ ನಿರ್ದೇಶನದ ಮೇರೆಗೆ ಈ ಕೇಸನ್ನು ಎನ್‍ಐಎಗೆ ವಹಿಸಲಾಯಿತು.

ಮೋದಿ ಸರಕಾರ ಬಂದ ಮೇಲೆ ‘ಹಿಂದುತ್ವ ಭಯೋತ್ಪಾದಕರು’ ನಡೆಸಿದರೆನ್ನಲಾದ ಇನ್ನೆರಡು ಸ್ಫೋಟಗಳ ಕೇಸ್‍ಗಳಲ್ಲಿ,  2007ರ ಅಜ್ಮೇರ್ ಮತ್ತು ಸಮಝೌತ ಎಕ್ಸ್ ಪ್ರೆಸ್ ಸ್ಫೋಟ ಕೇಸ್‍ಗಳಲ್ಲಿ ಸಾಕ್ಷಿಗಳು ಹಿಂದೇಟು ಹಾಕಿ ಕೇಸ್‍ಗಳು ದುರ್ಬಲಗೊಂಡವು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ‘ಕನಿಷ್ಟ ಸರಕಾರ, ಗರಿಷ್ಟ ಆಳ್ವಿಕೆ’ ಎಂಬುದರ ನಿಜವಾದ ಅರ್ಥ ಇದೇ ಇರಬಹುದೇ?

 – ವೇದರಾಜ್ ಎನ್.ಕೆ.