ಟರ್ಕಿಯಲ್ಲಿ ಎಕೆಪಿ ವಿಜಯಕ್ಕೆ ‘ಭಯೋತ್ಪಾದಕತೆ’ ಕಾರಣವೇ?

ಜಗದಗಲ – ಶರತ್‍ಚಂದ್ರ
ಸಂಪುಟ 9 ಸಂಚಿಕೆ 46, 15 ನವೆಂಬರ್ 2015

turkey_post election violence

ನವೆಂಬರ್ 1 ರಂದು ಟರ್ಕಿಯ ಚುನಾವಣೆಗಳಲ್ಲಿ ಇಸ್ಲಾಮಿಕ್ ಆಳುವ ಪಕ್ಷ ಎಕೆಪಿ ನಿಚ್ಚಳ ಬಹುಮತ ಗಳಿಸಿದೆ. ಪಾರ್ಲಿಮೆಂಟಿನ 550 ಸೀಟುಗಳಿಗೆ ನಡೆದ ಚುನಾವಣೆಯಲ್ಲಿ 317 ಸೀಟುಗಳನ್ನು ಗಳಿಸಿದೆ. ಆದರೆ ಎಕೆಪಿ ಪಕ್ಷದ ನಾಯಕ ಮತ್ತು ಈಗಿನ ಅಧ್ಯಕ್ಷ ಎರ್ಡೊಗನ್ ಬಯಸಿದ್ದ ಮೂರನೇ ಎರಡು ಬಹುಮತ (350 ಸೀಟುಗಳು) ಗಳಿಸಿಲ್ಲ. ಚುನಾವಣೆಯ ಮೊದಲು ಮತ್ತು ಫಲಿತಾಂಶದ ನಂತರ ನಡೆದ ಗಂಭೀರ ಹಿಂಸಾಚಾರದ ಘಟನಾವಳಿ ನೋಡಿದರೆ ಟರ್ಕಿಯ ರಾಜಕಾರಣ (ಆಂತರಿಕ ಮತ್ತು ಬಾಹ್ಯ ಎರಡೂ ನೀತಿಗಳು) ಬಹಳ ಬದಲಾಗುವಂತೆ ಮತ್ತು ಹೆಚ್ಚು ಆತಂಕಕಾರಿ ತಿರುವು ತೆಗೆದುಕೊಳ್ಳುವಂತೆ ಕಾಣುತ್ತಿದೆ.

ಇದೇ ಜೂನ್‍ನಲ್ಲಿ ನಡೆದ ಚುನಾವಣೆಯಲ್ಲಿ ಎಕೆಪಿಗೆ ಬಹುಮತ ಬಾರದೆ, ಬೇರೆ ಯಾವುದೇ ಪಕ್ಷ ಅದರ ಜತೆ ಸರಕಾರ ಮಾಡಲು ತಯಾರಿಲ್ಲದೆ (ಅದೇ ಪಕ್ಷದವರಾದ) ಅಧ್ಯಕ್ಷ ಎರ್ಡೊಗನ್ ಮರು ಚುನಾವಣೆಗೆ ಆಜ್ಞೆ ಮಾಡಿದ್ದರು. ಕಳೆದ ಚುನಾವಣೆಯಲ್ಲಿ ಮೂರನೇ ಎರಡು ಬಹುಮತ ಕೊಟ್ಟು ಅಧ್ಯಕ್ಷೀಯ ಪದ್ಧತಿಗೆ ಸಂವಿಧಾನ ಬದಲಾಯಿಸುವುದು ಮುಖ್ಯ ಚುನಾವಣಾ ವಿಷಯ ಮಾಡಿದ್ದರು. ಆದರೆ ಸಾಮಾಜಿಕ-ಧಾರ್ಮಿಕ ಸಂಪ್ರದಾಯವಾದಿ ಧೋರಣೆ, ದೇಶದ ಹೊರಗೂ ಒಳಗೂ ಆಕ್ರಾಮಕತೆ-ಸಂಘರ್ಷದ ಹಾದಿ, ಮತ್ತು ವಿಪರೀತ ಭಷ್ಟಾಚಾರದಿಂದಾಗಿ ರೋಸಿ ಹೋಗಿದ್ದ ಜನತೆ ಎಕೆಪಿಗೆ ಸರಳ ಬಹುಮತ ಸಹ ಕೊಟ್ಟಿರಲಿಲ್ಲ – ಎಂದು ಇಲ್ಲಿ ನೆನಪಿಸಿಕೊಳ್ಳಬಹುದು.

2 ಚುನಾವಣೆಗಳ ನಡುವೆ 2 ಬಾಂಬ್ ದಾಳಿಗಳು

ಈ ಚುನಾವಣೆಯಲ್ಲಿ ಎಡ ಒಲವಿನ ಮತ್ತು ಕುರ್ದಿಶ್ ಅಲ್ಪ ಸಂಖ್ಯಾತರ ವ್ಯಾಪಕ ಬೆಂಬಲವಿರುವ ಎಚ್.ಡಿ.ಪಿ. ಶೇ. 2.37 ಮತ ಕಳೆದುಕೊಂಡಿದೆ. ಟರ್ಕಿಯ ಅನುಪಾತದ ಚುನಾವಣಾ ಪದ್ಧತಿಯ ಪ್ರಕಾರ ಪಾರ್ಲಿಮೆಂಟು ಪ್ರವೇಶಿಸಲು ಬೇಕಾಗಿರುವ ಶೇ. 10 ಮತದ ಗಡಿ ಸ್ವಲ್ಪದರಲ್ಲೇ ದಾಟಿ ಶೆ. 10.75 ಮತಗಳಿಸಿದೆ. ಜೂನ್ ಚುನಾವಣೆಗಳಲ್ಲಿ ಈ ಪಕ್ಷ ಶೇ. 10ರ ಗಡಿ ದಾಟಿ ಮೊದಲ ಬಾರಿಗೆ ಪಾರ್ಲಿಮೆಂಟು ಪ್ರವೇಶಿಸಿತ್ತು. ಕಳೆದ ಬಾರಿ 80 ಸೀಟು ಪಡೆದಿದ್ದ ಎಚ್.ಡಿ.ಪಿ. ಪಕ್ಷ ಈ ಬಾರಿ ಸೀಟು ಗಳಿಕೆ 59ಕ್ಕೆ ಇಳಿದಿದೆ. ಅದೇ ರೀತಿ ಉಗ್ರ ಬಲಪಂಥೀಯ ಪಕ್ಷ ಎಂಎಚ್.ಪಿ. ಶೇ.4.4 ಮತ ಕಳೆದುಕೊಂಡು 40 ಸೀಟುಗಳಿಗೆ ಕುಸಿದಿದೆ. ನಡು-ಎಡಪಂಥೀಯ ಪಕ್ಷ ಸಿ.ಎಚ್.ಪಿ. ಸೀಟು ಮತ್ತು ಮತಗಳಿಕೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಅಂದರೆ ಎಕೆಪಿ ಪಕ್ಷ ಎಚ್.ಡಿ.ಪಿ. ಮತ್ತು ಎಂಎಚ್.ಪಿ.ಗಳಿಂದ ಮತ ಕಸಿದುಕೊಂಡಿದೆ. ಇದು ಹೇಗೆ ಸಾಧ್ಯವಾಯಿತು?

ಜೂನ್ ಚುನಾವಣೆಯ ನಂತರ ಎರಡು ಭೀಕರ ಬಾಂಬ್ ದಾಳಿಗಳಲ್ಲಿ ನೂರಕ್ಕೂ ಹೆಚ್ಚು ನಾಗರಿಕರು ಸತ್ತಿದ್ದರು. ಎರಡರಲ್ಲೂ ಸರಕಾರ ಐಸಿಸ್ ಭಯೋತ್ಪಾದಕರನ್ನು ಆಪಾದಿಸಿತು. ಎರಡನೆಯ ಮತ್ತು ಚುನಾವಣೆಯ ಸ್ವಲ್ಪ ಮೊದಲು ನಡೆದ ಬಾಂಬ್ ದಾಳಿ ರಾಜಧಾನಿಯ ಕೇಂದ್ರ ಭಾಗದಲ್ಲಿ ನಡೆದಿತ್ತು. ಆದರೆ ಗೂಢಚಾರರು ಮತ್ತು ಭದ್ರತಾ ಪಡೆಗಳು ಹದ್ದಿನ ಕಣ್ಣು ಇಟ್ಟಿರುವ ರಾಜಧಾನಿಯ ಕೇಂದ್ರದಲ್ಲಿ ಐಸಿಸ್ ಈ ಬಾಂಬ್ ದಾಳಿ ನಡೆಸಬಹುದು ಎಂಬುದು ಅಷ್ಟು ನಂಬಲರ್ಹ ಸಂಗತಿ ಅಲ್ಲ ಎನ್ನಲಾಗಿತ್ತು. ಇದರ ಜತೆ ಸರಕಾರ ಐಸಿಸ್ ಪಡೆಗಳ ಮೇಲೆ ಭಾರೀ ಬಾಂಬ್ ದಾಳಿ ನಡೆಸಿತ್ತು. ಕುರ್ದಿಶ್ ಗೆರಿಲ್ಲಾಗಳ ಜತೆ ಇದ್ದ ಕದನವಿರಾಮ ಮುರಿದು ಅವರ ಮೇಲೆ ಭಾರೀ ವಿಮಾನ ದಾಳಿ ನಡೆಸಿತ್ತು. ಐಸಿಸ್ ಮತ್ತು ಕುರ್ದಿಶ್ ಗೆರಿಲ್ಲಾಗಳ ಬೆಂಬಲಿಗರು ಎಂಬ ನೆಪದಲ್ಲಿ ಹಲವಾರು ವಿರೋಧಿ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಬಂಧಿಸಿತ್ತು. ಎಕೆಪಿ ಪಕ್ಷ ವಿರೋಧಿಸುವ ಎಲ್ಲಾ ಮಾಧ್ಯಮಗಳ ಮೇಲೂ ವಿವಿಧ ನೆಪ ಹೇಳಿ ಸರಕಾರ ದಾಳಿ ಮಾಡುತ್ತಿತ್ತು.

ಚುನಾವಣಾ ಹಿಂಸಾಚಾರ/ಅಕ್ರಮಗಳು

ಚುನಾವಣೆ ಪ್ರಕ್ರಿಯೆ ಶುರುವಾದ ಮೇಲಂತೂ ಎಚ್.ಡಿ.ಪಿ. ಕಾರ್ಯಕರ್ತರ ಮೇಲೆ ಎಕೆಪಿ ಕಾರ್ಯಕರ್ತರು ದಾಳಿ ಮಾಡಿ ಘರ್ಷಣೆಗಳು ನಡೆಯುತ್ತಿದ್ದವು. ಈ ಘರ್ಷಣೆಗಳಲ್ಲಿ ಎಚ್.ಡಿ.ಪಿ. ಕಾರ್ಯಕರ್ತರು ಸಾಯುತ್ತಿದ್ದರು ಇಲ್ಲವೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರುತ್ತಿದ್ದರು. ಇಲ್ಲವೆ ಪೊಲೀಸರು ಮಧ್ಯಪ್ರವೇಶ ಮಾಡಿ ಎಚ್.ಡಿ.ಪಿ. ಕಾರ್ಯಕರ್ತರನ್ನು ಬಂಧಿಸುತ್ತಿದ್ದರು. ಎಚ್.ಡಿ.ಪಿ. ಹಿಂದೆ ಸಕ್ರಿಯವಾಗಿದ್ದು ನಿಷೇಧಿತ ಎಡಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಧಾರೆಗೆ ಬಂದ ಕುರ್ದಿಶ್ ಪಕ್ಷಗಳ ಸಮಾಗಮದಿಂದ ಆದ ಪಕ್ಷ. ಕುರ್ದಿಶ್ ಮತ್ತು ದುಡಿಯುವ ಜನರ ನಡುವೆ ಬೆಂಬಲ ಹೆಚ್ಚಿಸಿಕೊಳ್ಳುತ್ತಿದ್ದು ಎಚ್.ಡಿ.ಪಿ. ಶಾಂತಿಗಾಗಿ ರಾಜಕೀಯ ಪ್ರಚಾರ ನಡೆಸುತ್ತಿದ್ದುದರಿಂದ ಅದು ಜೂನ್ ಚುನಾವಣೆಯಲ್ಲಿ ಮೊದಲ ಬಾರಿಗೆ ಪಾರ್ಲಿಮೆಂಟು ಪ್ರವೇಶಿಸಿತ್ತು.

ಅದರ ರಾಜಕೀಯ ಬೆಂಬಲ ಕಡಿಮೆ ಮಾಡಲು ಆಂತರಿಕ (ಕುರ್ದಿಶ್ ಗೆರಿಲ್ಲಾಗಳ) ಮತ್ತು ಬಾಹ್ಯ (ಐಸಿಸ್) ‘ಭಯೋತ್ಪಾದಕ ಶಕ್ತಿಗಳ ಬೆದರಿಕೆ’ಯ ಭಯದ ವಾತಾವರಣವನ್ನು ಎಕೆಪಿ ಸರಕಾರ ಉಂಟು ಮಾಡಲು ಪ್ರಯತ್ನಿಸಿತು. ಈ ಎರಡು ಚುನಾವಣೆಗಳ ನಡುವೆ ನಡೆದ ಎರಡು ಭೀಕರ ಬಾಂಬು ದಾಳಿಗಳನ್ನು (ಅದನ್ನು ಯಾರೇ ಮಾಡಿರಲಿ) ಅದಕ್ಕಾಗಿ ಬಳಸಿಕೊಂಡಿತ್ತು. ದೇಶದ ‘ಭದ್ರತೆ’ಗೆ ಅತಿ ದೊಡ್ಡ ಪಕ್ಷವಾದ ಎಕೆಪಿಗೆ ಬಹುಮತ ಕೊಡುವುದು ಕ್ಷೇಮ. ಇನ್ನೊಂದು ಬಾರಿ ಸಣ್ಣ ಪಕ್ಷಗಳಿಗೆ ಮತ ನೀಡಿ ‘ರಾಜಕೀಯ ಅನಿಶ್ಚಿತತೆ’ ತರುವುದು ಬೇಡ ಎಂಬ ರಾಜಕೀಯ ಪ್ರಚಾರ ಮಾಡಿತು. ಎಕೆಪಿ ಹರಸಾಹಸ ಮಾಡಿ ಹುಟಿಸಿದ ‘ಭಯೋತ್ಪಾದಕ ಶಕ್ತಿಗಳ ಬೆದರಿಕೆ’ಯ ಭಯ ಈ ರೀತಿಯ ಚುನಾವಣಾ ಫಲಿತಾಂಶÀಕ್ಕೆ ಕಾರಣವಾಯಿತು. ನಿಜವಾಗಿಯೂ ಎಕೆಪಿಯ ಜನಪ್ರಿಯತೆ ಹೆಚ್ಚಾಗಿಲ್ಲ.

ಇದಲ್ಲದೆ ಚುನಾವಣಾ ದಿನದಂದು – ಮತಗಟ್ಟೆಗೆ ಬರುವಾಗ, ಕುರ್ದಿಶ್ ಪ್ರದೇಶಗಳಲ್ಲಿ ಮತಗಟ್ಟೆಗಳಲ್ಲಿ ವಿದ್ಯುತ್ ಖೋತಾ ಮತ್ತು ಮತ ಹಾಕದಂತೆ ಹಿಂಸಾತ್ಮಕ ದಾಳಿಗಳು, ಮತ ಎಣಿಕೆಯಲ್ಲಿ ಅಕ್ರಮಗಳು, ಎಕೆಪಿಗೆ ಮತ ಹಾಕಲು ಹಣ, ಚುನಾವಣಾ ಅಕ್ರಮಗಳನ್ನು ಮಾಧ್ಯಮಗಳು ವರದಿ ಮಾಡದಂತೆ ಪತ್ರಕರ್ತರ ವಿದೇಶೀ ವೀಕ್ಷಕರ ಮೇಲೆ ಆಕ್ರಮಣಗಳು – ಹೀಗೆ ಹತ್ತು ಹಲವು ಗಂಭೀರ ಚುನಾವಣಾ ಅಕ್ರಮಗಳು ನಡೆದಿವೆ ಎನ್ನಲಾಗಿದೆ. ಚುನಾವಣೆಗಳು ಜೂನ್‍ನಷ್ಟೂ ಶಾಂತಿಯುತವಾಗಲಿ ನ್ಯಾಯಯುತವಾಗಲಿ ಇರಲಿಲ್ಲ ಎನ್ನಲಾಗಿದೆ. ಚುನಾವಣೆಗಳ ಫಲಿತಾಂಶ ಬರುತ್ತಿದ್ದಂತೆ ಹಲವು ಕುರ್ದಿಶ್ ಪ್ರದೇಶಗಳಲ್ಲಿ ದೊಂಬಿಗಳು ಆಗಿವೆ. ಪೊಲೀಸರ ಮತ್ತು ಎಚ್.ಡಿ.ಪಿ. ಕಾರ್ಯಕರ್ತರ ನಡುವೆ ಘರ್ಷಣೆಗಳಾಗಿವೆ. ಟರ್ಕಿಯ ರಾಜಕಾರಣ (ಆಂತರಿಕ ಮತ್ತು ಬಾಹ್ಯ ಎರಡೂ ನೀತಿಗಳು) ಬಹಳ ಬದಲಾಗುವಂತೆ ಮತ್ತು ಹೆಚ್ಚು ಆತಂಕಕಾರಿ ತಿರುವು ತೆಗೆದುಕೊಳ್ಳುವಂತೆ ಕಾಣುತ್ತಿದೆ.

ಸ್ನೋಡೆನ್ ವಿರುದ್ಧ ಕೇಸು ಬಿಡಲು ಯುರೋ-ಪಾರ್ಲಿಮೆಂಟು ನಿರ್ಣಯ

ವಿಕಿಲೀಕ್ಸ್ ಸ್ಥಾಪಕ ಎಡ್ವರ್ಡ್ ಸ್ನೋಡೆನ್ ಮೇಲಿರುವ ಕ್ರಿಮಿನಲ್ ಕೇಸುಗಳನ್ನು ವಾಪಸು ತೆಗೆದುಕೊಳ್ಳಲು ಯುರೋ ಸರಕಾರಗಳನ್ನು ಕೇಳುವ ನಿರ್ಣಯ ಪಾಸು ಮಾಡಿದೆ. ಅಮೆರಿಕದ ಸರಕಾರದ ಕಂಪನಿಗಳ ಗೂಢಚರ್ಯೆಯ ಕೃತ್ಯಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದಿರುವ ಸ್ನೋಡೆನ್ ಅವರನ್ನು ‘ವಿಸಲ್ ಬ್ಲೋವರ್’ ಮತ್ತು ‘ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರ’ ಎಂದು ಪರಿಗಣಿಸಿ, ಅವರಿಗೆ ಅಗತ್ಯ ರಕ್ಷಣೆ ಕೊಡಬೇಕು. ಅವರನ್ನು ಮೂರನೇ ದೇಶಕ್ಕೆ ಹಸ್ತಾಂತರಿಸಬಾರದು ಎಂದು ನಿರ್ಣಯ ಹೇಳಿದೆ. ಅತ್ಯಾಚಾರದ ಮೊಕದ್ದಮೆ ಸೇರಿದಂತೆ ಕೆಲವು ಯುರೋ ಕೂಟದ ದೇಶಗಳು (ಸ್ವೀಡನ್, ಬ್ರಿಟನ್ ಇತ್ಯಾದಿ) ಹಲವು ಕೇಸುಗಳನ್ನು ದಾಖಲಿಸಿವೆ. ಅಮೆರಿಕ ಅವರ ಮೇಲೆ ಮೊಕದ್ದಮೆ ಹೂಡಿ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕು ಎಂದು ಯುರೋ ದೇಶಗಳನ್ನು ಒತ್ತಾಯಿಸುತ್ತಿದೆ. ಇದರಿಂದಾಗಿ ಈಗ ಹಲವು ವರ್ಷಗಳಿಂದ ಸ್ನೋಡೆನ್ ಲಂಡನಿನಲ್ಲಿರುವ ಇಕ್ವಡೊರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.

ಇದಲ್ಲದೆ ಯುರೋ ಪಾರ್ಲಿಮೆಂಟು ಸೇಫ್ ಹಾರ್ಬರ್ ಒಪ್ಪಂದವನ್ನು ಯುರೋಕೂಟದ ಕೋರ್ಟು ಕಾನೂನುಬಾಹಿರ ಎಂದು ತಳ್ಳಿ ಹಾಕಿದ ತೀರ್ಪನ್ನು ಸ್ವಾಗತಿಸಿದೆ. ಈ ಸೇಫ್ ಹಾರ್ಬರ್ ಒಪ್ಪಂದ 2000ರಿಂದ ಜಾರಿಯಲ್ಲಿದ್ದು ಯುರೋಪಿನಲ್ಲಿರುವ ಮಾಹಿತಿಯನ್ನು ಅಮೆರಿಕನ್ ಕಂಪನಿಗಳು ಅಮೆರಿಕಕ್ಕೆ ಹಸ್ತಾಂತರಿಸುವುದನ್ನು ಸಾಧ್ಯ ಮಾಡುತ್ತದೆ. ಇನ್ನೊಂದು ನಿರ್ಣಯದಲ್ಲಿ ಯುರೋಪಿನ ನಾಗರಿಕರ ಮೇಲೆ ಸಾಮೂಹಿಕ ಗೂಢಚರ್ಯೆಯನ್ನು ತಡೆದು ಅವರ ಖಾಸಗಿತನ ರಕ್ಷಿಸುವ ಬಗ್ಗೆ ಪಾರ್ಲಿಮೆಂಟು 2014ರಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಜಾರಿ ಮಾಡುವುದರಲ್ಲಿ ಯುರೋ ಕಮಿಶನ್ ಮತ್ತು ಸರಕಾರಗಳು ತೆಗೆದುಕೊಂಡಿರುವ ಕ್ರಮಗಳು ತೀರಾ ಅತೃಪ್ತಿಕರವಾಗಿವೆ ಎಂದು ಖಂಡಿಸಲಾಗಿದೆ.

‘ಐಸಿಸ್ ಹುಟ್ಟಿಗೆ ಜವಾಬ್ದಾರ’ : ಟೊನಿ ಬ್ಲೇರ್ ಪಾಪ ನಿವೇದನೆ

ಇರಾಕ್ ಯುದ್ಧ ಆರಂಭಿಸಿ, ಆ ಮೇಲೆ ಪಶ್ಚಿಮ ಏಶ್ಯಾ ಮತ್ತು ಅರಬ್ ಜಗತ್ತು ಸದಾ ಯುದ್ಧ-ಅಂತಃಕಲಹ-ಭಯೋತ್ಪಾದಕತೆಯಲ್ಲಿ ಸುಡುತ್ತಾ ಬೇಯುವಂತೆ ಮಾಡಿದ ಇಬ್ಬರು ಪಾತಕಿಗಳು ಎಂದರೆ ಆಗಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ಮತ್ತು ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್. ಅವರು ಇರಾಕ್ ಯುದ್ಧಕ್ಕೆ ಕೊಟ್ಟ ಮೂರೂ ಕಾರಣಗಳು ಹಸಿ ಸುಳ್ಳು ಎಂದು ಆ ಮೇಲೆ ಸಾಬೀತಾಗಿದೆ. ಆ ಮೂರು ಕಾರಣಗಳೆಂದರೆ – ಇರಾಕಿನ ಸದ್ದಾಂ ಬಳಿ ಸಾಮೂಹಿಕ ನಾಶದ ರಾಸಾಯನಿಕ/ಅಣು ಅಸ್ತ್ರಗಳಿವೆ, ಅದನ್ನು ಬ್ರಿಟನ್ ಸೇರಿದಂತೆ ಹಲವು ದೇಶಗಳ ಮೇಲೆ ಹಾಕುವ ಕ್ಷಮತೆ ಮತ್ತು ಯೋಜನೆ ಇದೆ, ಸದ್ದಾಂ ಹುಸೇನ್ ಒಸಾಮ ಬಿನ್ ಲಾಡೆನ್ ಜತೆ ಸೇರಿ ‘ಪಶ್ಷಿಮ’ದ ಮೇಲೆ ಯುದ್ಧ ಹೂಡಲಿದ್ದಾರೆ. ಆದರೆ ಈ ಇಬ್ಬರೂ ಇರಾಕ್ ಯುದ್ಧ ತಪ್ಪು ಎಂದು ಒಪ್ಪಿಕೊಳ್ಳುವುದಾಗಲಿ, ಅದಕ್ಕೆ ಕ್ಷಮೆ ಕೇಳುವುದಾಗಿ ಮಾಡಿರಲಿಲ್ಲ. ಇವರಿಬ್ಬರನ್ನೂ ಬಂಧಿಸಿ ಯುದ್ಧ ಅಪರಾಧಿಗಳು ಎಂದು ಪರಿಗಣಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ವಿಶ್ವಶಾಂತಿ ಚಳುವಳಿ ಒತ್ತಾಯಿಸುತ್ತಾ ಬಂದಿದೆ.

12 ವರ್ಷಗಳ ನಂತರ ಮಾಜಿ ಬ್ರಿಟಿಶ್ ಪ್ರ ಧಾನಿ ಟೋನಿ ಬ್ಲೇರ್ ಕನಿಷ್ಟ ಸಿ.ಎನ್.ಎನ್. ಜತೆ ಸಂದರ್ಶನದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸದ್ದಾಂ ಹುಸೇನ್ ಯೋಜನೆಗಳ ಬಗ್ಗೆ ಬಂದ ಗೂಢಚಾರ ವರದಿಗಳು ತಪ್ಪಾಗಿದ್ದವು. ಸದ್ದಾಂ ಸರಕಾರ ಉರುಳಿಸದ್ದರ ಪರಿಣಾಮ ಏನಾಗುತ್ತದೆ ಎಂದು ಅರ್ಥ ಮಾಡಿಕೊಳ್ಳುವುದರಲ್ಲಿ ತಪ್ಪಿದ್ದೇವೆ. ಇರಾಕ್ ಯುದ್ಧ, ಸದ್ದಾಂ ಪತನ ಮತ್ತು ಅದರ ನಂತರ ‘ಪಶ್ಚಿಮದ’ ದೇಶಗಳು ವ್ಯವಹರಿಸಿದ ರೀತಿಯಿಂದ ಐಸಿಸ್ ಹುಟ್ಟಿಕೊಂಡಿದೆ. 2015ರ ಇಂದಿನ ದುಸ್ಥಿತಿಗೆ ಕಾರಣವಾಗಿದೆ. ಇದಕ್ಕೆ ‘ಪಶ್ಚಿಮದ’ ನಾವೆಲ್ಲ ಜವಾಬ್ದಾರರು. ‘ಯುದ್ಧ ಅಪರಾಧಿ’ ಎಂದು ಕಾಲ ನಿರ್ಣಯಿಸಿದರೆ ನಾನು ಅದಕ್ಕೆ ತಲೆಬಾಗುತ್ತೇನೆ ಎಂದು ಬ್ಲೇರ್ ಸಂದರ್ಶನದಲ್ಲಿ ‘ಪಾಪ ನಿವೇದನೆ’ ಮಾಡಿದ್ದಾರೆ. ಆದರೂ ಸದ್ದಾಂ ಹುಸೆನ್ ಸರಕಾರವನ್ನು ಉರುಳಿಸಿದ್ದು ಸರಿಯಾಗಿತ್ತು ಎಂದಿದ್ದಾರೆ!

ಬಿದ್ಯಾ ದೇವಿ ಮೊದಲ ನೇಪಾಳಿ ಅಧ್ಯಕ್ಷೆ

ಕಮ್ಯುನಿಸ್ಟ್ ನಾಯಕಿ ಬಿದ್ಯಾ ದೇವಿ ಭಂಡಾರಿ ನೇಪಾಳದ ಹೊಸ ಸಂವಿಧಾನದಂತೆ ಚುನಾಯಿತರಾದ ಮೊದಲ ಮತ್ತು ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದಾರೆ. ಅವರು ಕಮ್ಯುನಿಸ್ಟ್ ಪಕ್ಷ ಮತ್ತು ಅಖಿಲ ನೇಪಾಳಿ ಮಹಿಳಾ ಸಂಘಟನೆಯ ಕಾರ್ಯಕರ್ತೆಯಾಗಿ ಬೆಳೆದು ಬಂದಿದ್ದು ಈಗ ಅವರೆಡರದ್ದೂ – ಕಮ್ಯುನಿಸ್ಟ್ ಪಕ್ಷದ ಉಪ ನಾಯಕಿ ಮತ್ತು ಮಹಿಳಾ ಸಂಘಟನೆಯ ಅಧ್ಯಕ್ಷೆ – ಹಿರಿಯ ನಾಯಕಿಯಾಗಿದ್ದರು. ಅವರು 2009ರಿಂದ 2011ರವರೆಗೆ ಸಮ್ಮಿಶ್ರ ಸರಕಾರದಲ್ಲಿ ರಕ್ಷಣಾ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಈಗ ಅಧ್ಯಕ್ಷೆಯಾಗಿ ನೇಪಾಳಿ ಪ್ರಜಾಸತ್ತಾತ್ಮಕ ಗಣತಂತ್ರದ ಸೈನ್ಯದ ಸುಪ್ರೀಂ ಕಮಾಂಡರ್ ಆಗಿರುತ್ತಾರೆ.

ದೇಶದ ಅಧ್ಯಕ್ಷ ಸ್ಥಾನಕ್ಕ ನಡೆದ ಚುನಾವಣೆಯಲ್ಲಿ ಪಾರ್ಲಿಮೆಂಟಿನಲ್ಲಿ ಅವರು 327-214 ಮತಗಳಿಂದ ನೇಪಾಳೀ ಕಾಮಗ್ರೆಸ್ ಅಭ್ಯರ್ಥಿ ಕುಲ್ ಬಹಾದುರ್ ಗುರುಂಗ್ ಅವರನ್ನು ಸೋಲಿಸಿದ್ದರು. ನೇಪಾಳಿ ಪಾರ್ಲಿಮೆಂಟಿನ ಸ್ಪೀಕರ್ ಆಗಿ ಇನ್ನೊಬ್ಬ ಮಹಿಳೆ ಒನ್ಸಾರಿ ಗಾರ್ತಿ ಅವರು ಆಯ್ಕೆಯಾಗಿದ್ದಾರೆ. ನೇಪಾಳ ಅಂಗೀಕರಿಸಿರುವ ಹೊಸ ಸಂವಿಧಾನದ ಪ್ರಕಾರ ಮೂರನೇ ಒಂದರಷ್ಟು ಸೀಟುಗಳನ್ನು ಮಹಿಳೆಯರಿಗೆ ಕಾದಿರಿಸಲಾಗಿದೆ. ಸಂವಿಧಾನದ ಪ್ರಕಾರ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಗಳಲ್ಲಿ ಒಂದು ಮಹಿಳೆಯರಿಗೆ ಕೊಡಬೇಕು.

bidhyadevibhandari

Advertisements

ದಕ್ಷಿಣ ಆಫ್ರಿಕಾ ವಿದ್ಯಾರ್ಥಿಗಳ ಜಯ

ಜಗದಗಲ – ಶರತ್‌ಚಂದ್ರ

ಸಂಪುಟ 9 ಸಂಚಿಕೆ 44 – ನವೆಂಬರ್ 01, 2015

student_sa win

ದಕ್ಷಿಣ ಆಫ್ರಿಕಾದ ವಿದ್ಯಾರ್ಥಿಗಳ ಒಂದು ವಾರದ ಸತತ ಹೋರಾಠಕ್ಕೆ ಜಯ ಸಂದಿದೆ. ಸರಕಾರ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಶುಲ್ಕ ಹೆಚ್ಚು ಮಾಡದಿರಲು ನಿರ್ಧರಿಸಿದೆ. ಅ ಧ್ಯಕ್ಷ ಝೂಮಾ ಟಿವಿ ಭಾಷಣವೊಂದರಲ್ಲಿ ಈ ನಿರ್ಧಾರ ಪ್ರಕಟಿಸಿದರು. ಸರಕಾರ ವಿಶ್ವವಿದ್ಯಾಲಯಗಳಲ್ಲಿ ಶುಲ್ಕ ಶೇ. 10 ರಷ್ಟು ಹೆಚ್ಚಿಸಿತ್ತು. ವಿದ್ಯಾರ್ಥಿಗಳು ಅದಕ್ಕೆ ಪ್ರತಿಭಟಿಸಿದಾಗ ಅದನ್ನು ಶೇ. 6 ಕ್ಕೆ ಇಳಿಸಿತ್ತು. ಅದಕ್ಕೂ ಒಪ್ಪದ ವಿದ್ಯಾರ್ಥಿಗಳು ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ತೀವ್ರ ಪ್ರತಿಭಟನೆಗೆ ಮುಂದಾಗಿದ್ದರು. ಹಲವು ಕ್ಯಾಂಪಸುಗಳಲ್ಲಿ ವಿದ್ಯಾರ್ಥಿಗಳನ್ನು ತಡೆಯಲು ಬಂದ ಪೋಲಿಸರೊಂದಿಗೆ ಘರ್ಷಣೆ ನಡೆದು ತೀವ್ರ ಹಿಂಸಾಚಾರವೂ ನಡೆದಿತ್ತು. 22 ವಿದ್ಯಾರ್ಥಿಗಳ ಮೇಲೆ ಕೇಸುಗಳನ್ನು ದಾಖಲೆ ಮಾಡಲಾಗಿದೆ. ಈಗಿನ ಬೆಲೆ ಏರಿಕೆಯ ದುಬಾರಿ ಜೀವನ ವೆಚ್ಚಗಳ ಸನ್ನಿವೇಶದಲ್ಲಿ ಶುಲ್ಕಏರಿಕೆ ಮುಖ್ಯವಾಗಿ ಬಡ ಕರಿಯ ವಿದ್ಯಾರ್ಥಿಗಳನ್ನು ಉಚ್ಛ ಶಿಕ್ಷಣದಿಂದ ಹೊರ ತಳ್ಳುತ್ತದೆ. ಶಿಕ್ಷಣದಲ್ಲೂ ವ್ಯಾಪಕವಾಗಿ 1994ರ ವರೆಗೆ ಇದ್ದ ವರ್ಣಭೇಧ ನೀತಿಯ ದಿನಗಳಿಗೆ ವಾಪಸಾಗುತ್ತದೆ ಎಂದು ವಿದ್ಯಾರ್ಥಿಗಳ ವಾದವಾಗಿತ್ತು.

ಟರ್ಕಿಯಲ್ಲಿ ಚುನಾವಣೆಗಾಗಿ ಭಯೋತ್ಪಾದಕ ದಾಳಿ!

ಜಗದಗಲ – ಶರತ್‌ಚಂದ್ರ

ಸಂಪುಟ 9 ಸಂಚಿಕೆ 44 – ನವೆಂಬರ್ 01, 2015

ಅಕ್ಟೋಬರ್ 10 ರಂದು ಟರ್ಕಿ ರಾಜಧಾನಿ ಅಂಕಾರಾದಲ್ಲಿ ಎರಡು ಕೇಂದ್ರೀಯ ಟ್ರೇಡ್ ಯೂನಿಯನುಗಳು – ಕೆಸ್ಕ್ ಮತ್ತು ಡಿಸ್ಕ್ – ಒಂದು ರ‍್ಯಾಲಿಯನ್ನು ಸಂಯೋಜಿಸಿದ್ದವು. ರ‍್ಯಾಲಿಯ ಘೋಷಣೆ ’ಕಾರ್ಮಿಕರು, ಶಾಂತಿ ಮತ್ತು ಪ್ರಜಾಪ್ರಭುತ್ವ ಎಂದಿತ್ತು. ರ‍್ಯಾಲಿ ನಗರ ಕೇಂದ್ರದ ಹತ್ತಿರ ಬರುತ್ತಿದ್ದಂತೆ ಎರಡು ಪ್ರಬಲ ಬಾಂಬುಗಳು ಸಿಡಿದವು. ನೂರಕ್ಕೂ ಹೆಚ್ಚು ಜನ ಸತ್ತರು. ಆರು ನೂರಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡರು. ಇದು ಟರ್ಕಿಯ ಇತ್ತೀಚಿನ ಚರಿತ್ರೆಯಲ್ಲೇ ಅತಿ ದೊಡ್ಡ ಭಯೋತ್ಪಾದಕ ಕೃತ್ಯ. ಈ ಭೀಕರ ಕೃತ್ಯದ ವಿರುದ್ಧ ಮರುದಿನ ದೇಶದ ತುಂಬಾ ಸಾವಿರಾರು ಜನ ಭಾಗವಹಿಸಿ ಪ್ರತಿಭಟಿಸಿದರು. ಇದು ಐಸಿಸ್ ಭಯೋತ್ಪಾದಕರ ಕೃತ್ಯ ಎಂದು ಸರಕಾರ ಹೇಳಿಕೆ ನೀಡಿತು. ಆದರೆ ಗೂಢಚಾರರು ಮತ್ತು ಭದ್ರತಾ ಪಡೆಗಳು ಹದ್ದಿನ ಕಣ್ಣು ಇಟ್ಟಿರುವ ರಾಜಧಾನಿಯ ಕೇಂದ್ರದಲ್ಲಿ ಇದು ಅಷ್ಟು ನಂಬಲರ್ಹ ಸಂಗತಿ ಅಲ್ಲ. ಅಲ್ಲದೆ ಕಾರ್ಮಿಕರ ರ‍್ಯಾಲಿಯ ಮೇಲೆ ಬಾಂಬು ಸಿಡಿಸಿ ಐಸಿಸ್‌ಗೆ ಏನು ಸಿಗುತ್ತದೆ. ಟರ್ಕಿ ರಾಜಧಾನಿಯ ಕೇಂದ್ರದಲ್ಲಿ ಇಂತಹ ಭಯೋತ್ಪಾದಕ ಕೃತ್ಯ ಮಾಡುವ ಸಾಮರ್ಥ್ಯ ಇದ್ದರೆ ಐಸಿಸ್ ಅದನ್ನು ಸರಕಾರಿ/ಮಿಲಿಟರಿ ಕಟ್ಟಡ ಅಥವಾ ವ್ಯಕ್ತಿಗಳ ಮೇಲೆ ಪ್ರಯೋಗಿಸಿದರೆ ಅವರಿಗೆ ರಾಜಕೀಯ/ಮಿಲಿಟರಿ ಪ್ರಚಾರ ಸಿಗುವುದಿಲ್ಲವೇ? ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಇಲ್ಲ.

Turkey Blast

ಅಲ್ಲದೆ ರ‍್ಯಾಲಿಯ ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ನೋಡಿದರೆ ಸಹ ಬೇರೆಯೇ ಕಾರಣ ಮತ್ತು ಬಹುಶಃ ಕರ್ತೃ ಸಹ ಕಂಡು ಬರುತ್ತದೆ. ದೇಶದ ದಕ್ಷಿಣ-ಪೂರ್ವ ಭಾಗದಲ್ಲಿ ಪಿ.ಕೆ.ಕೆ. (ಕುರ್ದಿಶ್ ಪೀಪಲ್ಸ್ ಪಾರ್ಟಿ) ಮತ್ತು ಟರ್ಕಿ ಸರಕಾರದ ನಡುವೆ ನಡೆಯುತ್ತಿರುವ ಮಿಲಿಟರಿ ಘರ್ಷಣೆಯಲ್ಲಿ ಕದನ ವಿರಾಮ ಬರಬೇಕೆಂದು ರ‍್ಯಾಲಿಯ ಆಶಯವಾಗಿತ್ತು. ಪಿ.ಕೆ.ಕೆ. ಸದ್ಯದಲ್ಲೇ ಸರಕಾರದ ಜತೆ ಮಾತುಕತೆ ನಡೆಸಿ ಕದನ ವಿರಾಮದ ಪ್ರಸ್ತಾವ ಇಡುತ್ತದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಈ ಬೆಳವಣಿಗೆಯನ್ನು ಬುಡಮೇಲು ಮಾಡಲು ಈ ಕೃತ್ಯ ನಡೆದಿದೆ. ಈ ಕೃತ್ಯದ ನಂತರ ಪಿ.ಕೆ.ಕೆ. ಕದನ ವಿರಾಮದ ಪ್ರಸ್ತಾವ ಇಡುವುದಿಲ್ಲ ಎಂದು ನಿರೀಕ್ಷೆ ಇತ್ತು ಅಂತ ಕಾಣುತ್ತದೆ. ಈ ಕದನ ವಿರಾಮ ಯಾರಿಗೆ ಬೇಡವಾಗಿರಲಿಲ್ಲ. ಐಸಿಸ್ ಗಿಂತ ಹೆಚ್ಚು ವಿಮಾನದಾಳಿ ಐಸಿಸ್ ವಿರುದ್ಧ ಹೋರಾಡುತ್ತಿರುವ ಪಿ.ಕೆ.ಕೆ. ಮೇಲೆ ಮಾಡುತ್ತಿದ್ದ ಟರ್ಕಿ ಸರಕಾರವನ್ನು ನಡೆಸುತ್ತಿರುವ ಇಸ್ಲಾಮಿಕ್ ಪಕ್ಷ ಎಕೆಪಿಗೆ ಅದು ಬೇಕಾಗಿರಲಿಲ್ಲ. ಆದರೂ ಪಿ.ಕೆ.ಕೆ. ಕದನ ವಿರಾಮದ ಪ್ರಸ್ತಾವ ಇಟ್ಟಿತ್ತು. ಅದನ್ನು ನಿರ್ಲಕ್ಷ ಮಾಡಿ ಪಿ.ಕೆ.ಕೆ. ಪಡೆಗಳ ಮೇಲೆ ವಿಮಾನದಾಳಿ ಮುಂದುವರೆಸಿ ಇದಕ್ಕೆ ಪುರಾವೆ ಒದಗಿಸಿದೆ. ಆದ್ದರಿಂದ ಈ ಭಯೋತ್ಪಾದಕ ಕೃತ್ಯ ಟರ್ಕಿ ಸರಕಾರದ ಕೃಪಾಪೋಷಿತ ಗೆರಿಲ್ಲಾಗಳು ಮಾಡಿದ್ದು ಅಥವಾ ಯಾರಾದರೂ ಮಾಡಿದ್ದರೂ ಅದನ್ನು ಬೇಕೆಂತಲೇ ನಿರ್ಲಕ್ಷಿಸಿ ಆಗಲು ಬಿಟ್ಟರು ಅಂತಾರೆ ಹಲವು ಟರ್ಕಿಯ ರಾಜಕೀಯ ವೀಕ್ಷಕರು.

ಆದರೆ ಈ ಕೃತ್ಯದ ಹಿಂದೆ ಇನ್ನೊಂದು ಬಲವಾದ ಕಾರಣವಿದೆ. ಅದು ನವೆಂಬರ್ 1 ರಂದು ಟರ್ಕಿಯಲ್ಲಿ ಬರುತ್ತಿರುವ ಮರುಚುನಾವಣೆಗಳು. ಜೂನಿನಲ್ಲಿ ನಡೆದ ಚುನಾವಣೆಯಲ್ಲಿ ಎಕೆಪಿಗೆ ಬಹುಮತ ಸಿಗದ್ದರಿಂದ ಮತ್ತು ಇತರ ಯಾವುದೇ ಪಕ್ಷಗಳು ಅದರ ಜತೆ ಸರಕಾರ ಮಾಡಲು ಸಿದ್ಧವಿಲ್ಲದ್ದರಿಂದ ಮರುಚುನಾವಣೆಗಳು ನಡೆಯುತ್ತಿವೆ. ಜೂನ್ ಚುನಾವಣೆಯಲ್ಲಿ ಉಗ್ರ ಬಲಪಂಥೀಯ ಎಂ.ಎಚ್.ಪಿ. ಮತ್ತು ಎಡಪಂಥೀಯ ಎಚ್.ಡಿ.ಪಿ. ತಮ್ಮ ಮತಗಳಿಕೆ ಗಮನಾರ್ಹವಾಗಿ ಹೆಚ್ಚಿಸಿಕೊಂಡಿದ್ದರಿಂದ ಎಕೆಪಿಗೆ ಆ ಪರಿಸ್ಥಿತಿ ಬಂದಿತ್ತು. ಎಚ್.ಡಿ.ಪಿ. ಹಿಂದೆ ಸಕ್ರಿಯವಾಗಿದ್ದು ನಿಷೇಧಿತ ಎಡಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಧಾರೆಗೆ ಬಂದ ಕುರ್ದಿಶ್ ಪಕ್ಷಗಳ ಸಮಾಗಮದಿಂದ ಆದ ಪಕ್ಷ. ಕುರ್ದಿಶ್ ಮತ್ತು ದುಡಿಯುವ ಜನರ ನಡುವೆ ಬೆಂಬಲ ಹೆಚ್ಚಿಸಿಕೊಳ್ಳುತ್ತಿರುವ ಎಚ್.ಡಿ.ಪಿ. ಶಾಂತಿಗಾಗಿ ರಾಜಕೀಯ ಪ್ರಚಾರ ನಡೆಸುತ್ತಿದೆ, ಅದಕ್ಕೆ ಒಳ್ಳೆಯ ಜನಸ್ಪಂದನ ಸಿಗುತ್ತಿದೆ. ಸಿರಿಯಾ ಯುದ್ಧದಲ್ಲಿ ಅನಗತ್ಯವಾಗಿ ಮಧ್ಯಪ್ರವೇಶ ಮಾಡಿ, ಐಸಿಸ್ ಎಂಬ ಪೆಡಂಭೂತ ಹುಟ್ಟು ಹಾಕಿ ಅದರ ಜತೆ ಕಾದಾಟ, ಆಂತರಿಕವಾಗಿ ಕುರ್ದಿಶ್ ಗೆರಿಲ್ಲಾಗಳ ಜತೆ ಸತತ ಕಾದಾಟ ನಿಲ್ಲಬೇಕು ಎಂದು ಜನರ ಇಚ್ಛೆ. ಆಂತರಿಕ ಮತ್ತು ಬಾಹ್ಯ ಎರಡೂ ರಂಗಗಳಲ್ಲಿ ಘರ್ಷಣೆಗೆ ಹೊರಟಿರುವ ಎಕೆಪಿ ನೀತಿ ಜನತೆಗೆ ಇಷ್ಟವಿಲ್ಲ. ಆದರೆ ಆಂತರಿಕ ಮತ್ತು ಬಾಹ್ಯ ದುಷ್ಟ ಶಕ್ತಿಗಳ ಭಯದ ವಾತಾವರಣ ಹುಟ್ಟಿಸಿ ಭದ್ರತೆಗೆ ಅತಿ ದೊಡ್ಡ ಪಕ್ಷವಾದ ಎಕೆಪಿಗೆ ಬಹುಮತ ಕೊಡುವುದು ಕ್ಷೇಮ ಎಂಬ ಸನ್ನಿವೇಶ ಮೂಡಿಸುವ ಭರದಲ್ಲಿ ಎಕೆಪಿ ಸರಕಾರ ಇದೆ. ಈ ಬಾಂಬ್ ದಾಳಿ ಅದರ ಭಾಗ ಎಂದು ವ್ಯಾಪಕವಾಗಿ ವಿಶ್ಲೇಷಿಸಲಾಗಿದೆ. ಇದು ಕೆಲಸ ಮಾಡುತ್ತಾ ಎಂದು ಚುನಾವಣೆ ಫಲಿತಾಂಶ ಬಂದ ಮೇಲೆ ತಿಳಿಯುವುದು.

ಪೋರ್ಚುಗಲ್‌ನಲ್ಲಿ ಚಾರಿತ್ರಿಕ ಎಡ ಬಹುಮತ-ಆದರೆ ಎಡ ಸರಕಾರ ಇಲ್ಲ !

ಜಗದಗಲ – ಶರತ್‌ಚಂದ್ರ

ಸಂಪುಟ 9 ಸಂಚಿಕೆ 44 – ನವೆಂಬರ್ 01, 2015

ಪೋರ್ಚುಗಲ್‌ನಲ್ಲಿ ಪಾರ್ಲಿಮೆಂಟರಿ ಚುನಾವಣೆಗಳು ನಡೆದಿದ್ದು ಆಳುತ್ತಿದ್ದ ಬಲ-ನಡುಪಂಥೀಯ ರಂಗ ಅತಿ ಹೆಚ್ಚು ಮತ/ಸೀಟು ಗಳಿಸಿದ ಚುನಾವಣಾ-ಪೂರ್ವ ರಂಗವಾಗಿದ್ದರೂ ಬಹುಮತ ಕಳೆದುಕೊಂಡಿದೆ. ಸೋಶಲಿಸ್ಟ್, ಕಮ್ಯುನಿಸ್ಟ್ ಮತ್ತು ಎಡ ಬ್ಲಾಕ್ ಸೇರಿ ಶೇ. 50.8 ಮತ ಮತ್ತು ಸೀಟುಗಳಲ್ಲೂ (230 ರಲ್ಲಿ 122) ಬಹುಮತ ಗಳಿಸಿವೆ. ಕಮ್ಯುನಿಸ್ಟ್ ಮತ್ತು ಎಡ ಬ್ಲಾಕ್ ಜಂಟಿಯಾಗಿ, ಅಂಟೊನಿಯೊ ಕೋಸ್ಟಾ ನಾಯಕತ್ವದ ಸೋಶಲಿಸ್ಟ್ ಸರ್ಕಾರವನ್ನು ಬೆಂಬಲಿಸುವುದಾಗಿ ಹೇಳಿವೆ. ಆದರೂ ಪೋರ್ಚುಗಲ್ ಅಧ್ಯಕ್ಷ ಅನಿಬಲ್ ಸಿಲ್ವ ಬಲ-ನಡುಪಂಥೀಯ ರಂಗದ ನಾಯಕ ಪೆದ್ರೊ ಕೊಯೆಲೊ ಅವರನ್ನು ಅಲ್ಪಸಂಖ್ಯಾತ ಸರ್ಕಾರ ರಚಿಸಲು ಆಹ್ವಾನಿಸಿದ್ದಾರೆ. ಅವರಿಗೆ ಸರ್ಕಾರ ರಚಿಸಿದ ನಂತರ ತಮ್ಮ ಬಹುಮತ ರುಜುವಾತು ಮಾಡಲು 10 ದಿನಗಳೂ ಇವೆ. ಆದರೆ ಸೋಶಲಿಸ್ಟ್, ಕಮ್ಯುನಿಸ್ಟ್ ಮತ್ತು ಎಡ ಬ್ಲಾಕ್ ಸೇರಿ ಪೆದ್ರೊ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಬೀಳಿಸುವುದಾಗಿ ಹೇಳಿವೆ.

ಇವೆಲ್ಲ ಗೊತ್ತಿದ್ದೂ ಅಧ್ಯಕ್ಷ ಅನಿಬಲ್ ಸಿಲ್ವ ಕಮ್ಯುನಿಸ್ಟ್ ಮತ್ತು ಎಡ ಬ್ಲಾಕ್ ಬೆಂಬಲದ ಮೇಲೆ ಅವಲಂಬಿಸಿರುವ ಸರಕಾರವನ್ನು ನೇಮಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಳೆದ 40 ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸರಕಾರ ಯುರೋಕೂಟ-ವಿರೋಧಿ ರಾಜಕೀಯ ಪಕ್ಷಗಳ ಬೆಂಬಲದ ಮೇಲೆ ಅವಲಂಬಿಸಿರಲಿಲ್ಲ. ಲಿಸ್ಬನ್ ಒಪ್ಪಂದ ಮತ್ತು ಮಿತವ್ಯಯಕ್ಕೆ ಸಂಬಂಧಪಟ್ಟ ಇತ್ತೀಚಿನ ಒಪ್ಪಂದಗಳನ್ನು ವಿರೋಧಿಸಿದ, ದೇಶವನ್ನು ಯುರೋ ನಾಣ್ಯ ವ್ಯವಸ್ಥೆಯಿಂದ ಹೊರಗೆ ಒಯ್ಯುವ, ನಾಟೋ ವಿಸರ್ಜಿಸಲು ರಾಜಕೀಯ ಪ್ರಚಾರ ನಡೆಸುವ ಕಮ್ಯುನಿಸ್ಟ್ ಮತ್ತು ಎಡ ಬ್ಲಾಕ್ ಬೆಂಬಲದ ಮೇಲೆ ಸರಕಾರ ಅವಲಂಬಿಸಿದರೆ ಅದು ಹಣಕಾಸು ಸಂಸ್ಥೆಗಳಿಗೆ, ಹೂಡಿಕೆದಾರರು, ಮಾರುಕಟ್ಟೆಗಳಿಗೆ ತಪ್ಪು ಸಂದೇಶ ರವಾನಿಸುತ್ತದೆ.  ಮಾತ್ರವಲ್ಲ, ಈ ಪಕ್ಷಗಳಿಗೆ ಜನಾದೇಶವಿಲ್ಲ. ಇದು ಅಧ್ಯಕ್ಷ ಸಿಲ್ವ ಕೊಡುವ ಕಾರಣ!

PCP leader Jeronimo Dsouza

ಮಿ. ಸಿಲ್ವ! ಬರಿಯ ಈ ಎರಡು ಪಕ್ಷಗಳಿಗೆ ಜನಾದೇಶವಿಲ್ಲ. ನಿಜ! ಆದರೆ ತಡೆಯಿರಿ..ನೀವು ಆಹ್ವಾನಿಸುತ್ತಿರುವ ಪೆದ್ರೊ ಅವರ ರಂಗಕ್ಕೂ ಜನಾದೇಶವಿಲ್ಲ! ಈಗಿನ ಸೀಟುಗಳು ಮತ್ತು ಮತ ಗಳಿಕೆ ಮತ್ತು ಕಳೆದ ಚುನಾವಣೆಗಳಿಂದ ಬದಲಾವಣೆ ನೋಡಿದರೆ ಮೂರು ಎಡ ಪಕ್ಷಗಳಿಗೆ ಸೇರಿ ಸರಕಾರ ರಚಿಸಲೇ ಜನಾದೇಶ ಇರುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರಿಯ ಜನತೆ ಕೊಟ್ಟ ಮತ ಮತ್ತು ಸೀಟುಗಳ ಬಲಾಬಲ ಮಾತ್ರ ಜನಾದೇಶ ನಿರ್ಧರಿಸುವುದು. ಹೌದು! ಈಗ ಯುರೋಕೂಟದ ದೇಶಗಳಲ್ಲಿ ಹಣಕಾಸು ಸಂಸ್ಥೆಗಳು, ಹೂಡಿಕೆದಾರರು, ಮಾರುಕಟ್ಟೆಗಳು ಸರಕಾರದ ನೀತಿಗಳನ್ನು ನಿರ್ಧರಿಸುತ್ತಿವೆ. ಇದು ಯುರೋ ವ್ಯವಸ್ಥೆ ಇರಬಹುದು. ಆದರೆ ಖಂಡಿತ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಅದಕ್ಕಾಗಿಯೇ ಈ ಪಕ್ಷಗಳು ಈ ವ್ಯವಸ್ಥೆ ಬಿಟ್ಟು ಹೊರ ಬರಬೇಕೆಂದು ಹೇಳುತ್ತಿರುವುದು.

ಚುನಾವಣೆಗಳ ಮತಗಳಿಕೆ, ಸೀಟುಗಳ ಸಂಖ್ಯೆ, ಕಳೆದ ಚುನಾವಣೆಗಳಿಂದ ಬದಲಾವಣೆ ಇವುಗಳ ವಿವರ ವಿಶ್ಲೇಷಿಸಿದರೆ ಜನಾದೇಶ ಏನು ಎಂಬುದು ಸ್ಪಷ್ಟವಾಗುತ್ತದೆ. ಪಿ.ಎ..ಎಫ್. ಎಂದು ಕರೆಯಲಾಗುವ ಆಳುತ್ತಿದ್ದ ಬಲ-ನಡುಪಂಥೀಯ ರಂಗ 38.6 ಶೇ. ಮತ ಗಳಿಸಿ 107 ಸೀಟುಗಳಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಶೇ. 12 ಮತ ಮತ್ತು 25 ಸೀಟುಗಳನ್ನು ಕಳೆದುಕೊಂಡಿದೆ. ಯುರೋ-ತ್ರಿವಳಿಗಳ ಜತೆ ಬೈಲ್-ಔಟ್ ಒಪ್ಪಂದ ಮಾಡಿಕೊಂಡು ಜನತೆಯ ಸವಲತ್ತುಗಳ ತೀವ್ರ ಕಡಿತದ ಮಿತವ್ಯಯದ ನೀತಿಗಳನ್ನು ಅನುಸರಿಸಿದ್ದರಿಂದ ಅದು ತನ್ನ ಬಹುಮತ ಕಳೆದುಕೊಂಡಿದೆ ಎಂಬುದು ಸ್ಪಷ್ಟ. 230 ಸೀಟುಗಳ ಪಾರ್ಲಿಮೆಂಟಿನಲ್ಲಿ ಅದಕ್ಕೆ ಬಹುಮತಕ್ಕೆ 8 ಸೀಟುಗಳ ಕೊರತೆ ಇದೆ. ಸಮೀಕ್ಷೆಗಳ ಪ್ರಕಾರ ಬಹುಮತ ಪಡೆಯಬೇಕಾಗಿದ್ದ ಸೋಶಲಿಸ್ಟ್ ಪಕ್ಷ ಶೇ. 32.3 ಮತ ಗಳಿಸಿ 86 ಸೀಟು ಗಳಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಶೇ. 4.3 ರಷ್ಟು ಮತ ಮತ್ತು 12 ಸೀಟು ಹೆಚ್ಚಿಸಿಕೊಂಡಿದೆ. ಮಿತವ್ಯಯಕ್ಕೆ ತೀವ್ರ ವಿರೋಧಿಯಾದ ಎಡ ಬ್ಲಾಕ್ ತನ್ನ ಮತ ಇಮ್ಮಡಿಗೊಳಿಸಿಕೊಂಡು ಶೇ. 10.2 ಮತ ಗಳಿಸಿ 19 ಸೀಟು ಗಳಿಸಿದೆ. ಕಮ್ಯನಿಸ್ಟ್ ಪಕ್ಷ ಶೇ. 8.3 ಮತ ಗಳಿಸಿ 17 ಸೀಟು ಪಡೆದುಕೊಂಡಿದೆ.

 

ಮಕ್ಕಳ ಪ್ರಾಣ ತೆಗೆಯುವ ಆಟ

ಜಗದಗಲ – ಶರತ್‌ಚಂದ್ರ

ಸಂಪುಟ 9 ಸಂಚಿಕೆ 43, 25 ಅಕ್ಟೋಬರ್ 2015

135378197

4 ವರ್ಷದ ಕೆಳಗಿನ ಮಕ್ಕಳು ಗನ್ ಬಳಸಿ ತಮ್ಮದೇ ಅಥವಾ ಇತರರ ಕೊಲೆ ಮಾಡುವ ಪ್ರಕರಣಗಳು ವಾರಕ್ಕೆ ಒಂದರಂತೆ ವರದಿಯಾಗುತ್ತಿವೆ. ಇಂತಹ ಆಕಸ್ಮಿಕ ಘಟನೆಗಳಲ್ಲಿ 4 ರಲ್ಲಿ 3ರಲ್ಲಿ ಮಕ್ಕಳು ಸ್ವತಃ ಗುರಿಯಾಗಿದ್ದರು. 43 ಇಂತಹ ಪ್ರಕರಣಗಳಲ್ಲಿ 13 ಮಕ್ಕಳು ಸತ್ತಿದ್ದಾರೆ. 18ರಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. 10ರಲ್ಲಿ ಇತರರು (ಸಾಮಾನ್ಯವಾಗಿ ಸೋದರ/ಸೋದರಿ, ಪಾಲಕರು ಇತ್ಯಾದಿ) ತೀವ್ರವಾಗಿ ಗಾಯಗೊಂಡಿದ್ದಾರೆ. 2 ಇತರರು ಸತ್ತಿದ್ದಾರೆ.

ಇವೆಲ್ಲಾ ಗನ್ ಲೈಸೆನ್ಸ್ ಡ್ರೈವಿಂಗ್ ಲೈಸೆನ್ಸ್ ಸುಲಭವಾಗಿ ಸಿಗುವ ಅಮೆರಿಕದಲ್ಲಿ ಎಂದು ಬೇರೆ ಹೇಳಬೇಕಾಗಿಲ್ಲವಲ್ಲ. ಒಂದು ಸಮೀಕ್ಷೆಯ ಪ್ರಕಾರ ಅಮೆರಿಕದ ಮೂರರಲ್ಲಿ ಒಂದು ಕುಟುಂಬಗಳಲ್ಲಿ ಗನ್ ಮತ್ತು ಮಗು ಇವೆ. ಗನ್ ಮಕ್ಕಳ ಕೈಗೆ ಸಿಗಬಾರದು ಎಂಬುದರ ಬಗ್ಗೆ ನಿರ್ಲಕ್ಷ ಇಂತಹ ದುರಂತಗಳಿಗೆ ಮುಖ್ಯ ಕಾರಣ ಎನ್ನಲಾಗಿದೆ. ಗನ್‌ನ್ನು ಮಕ್ಕಳಿಗೆ ಸಿಗದ ಹಾಗೆ ಅಥವಾ ಅನ್‌ಲೋಡ್ ಮಾಡಿ ಇಡುವ ಕನಿಷ್ಟ ಜಾಗ್ರತೆ ವಹಿಸಿದ್ದರೆ ಶೇ.70 ಪ್ರಕರಣಗಳನ್ನು ತಡೆಯಬಹುದಿತ್ತು ಎಂದಿದೆ ಸಮೀಕ್ಷೆ.

ಕಮ್ಯುನಿಸ್ಟ್ ಕೆ.ಪಿ.ಒಲಿ ನೇಪಾಳದ ಪ್ರಧಾನಿ

ಜಗದಗಲಶರತ್ಚಂದ್ರ

ಸಂಪುಟ 9 ಸಂಚಿಕೆ 43, 25 ಅಕ್ಟೋಬರ್ 2015

ನೇಪಾಳಿ ಕಮ್ಯುನಿಸ್ಟ್ ಪಕ್ಷದ ನಾಯಕ ಖಡಗ್ ಪ್ರಸಾದ್ (ಕೆ.ಪಿ.) ಒಲಿ ನೇಪಾಳದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರು ನೇಪಾಳಿ ಕಾಂಗ್ರೆಸಿನ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರನ್ನು ಸೋಲಿಸಿ ಆಯ್ಕೆಯಾಗಿದ್ದಾರೆ. ಪಾರ್ಲಿಮೆಂಟ್ ಸದಸ್ಯರು ಮತದಾನ ಮಾಡುವ ಚುನಾವಣೆಯಲ್ಲಿ ಹಲವು ಆತಂಕದ ಕ್ಷಣಗಳು ಎದುರಾಗಿದ್ದವು. ಯಾವುದೇ ಸದಸ್ಯ ತಟಸ್ಥರಾಗಿ ಇರುವ ಆಯ್ಕೆ ಇಲ್ಲದ್ದರಿಂದ ಮಾದೇಸಿ ಪಕ್ಷಗಳ ಸದಸ್ಯರು ಚುನಾವಣೆ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದರು.

ಮಾದೇಸಿ ಪಕ್ಷ ತೆರಾಯ್ ಪ್ರದೇಶದಲ್ಲೂ ರಾಜಧಾನಿಯಲ್ಲೂ ರಾಸ್ತಾ ರೊಕೊಗೆ ಕರೆ ಕೊಟ್ಟಿತ್ತು. ಆದರೆ ಕೊನೆಗೆ ಕೆಲವು ಮಾದೇಸಿ ಸದಸ್ಯರು ಮತದಾನದಲ್ಲಿ ಭಾಗವಹಿಸಿ ಒಲಿ ಅವರಿಗೆ ಮತ ಕೊಡುವುದರೊಂದಿಗೆ ಮುಕ್ತಾಯವಾಯಿತು. ಆದರೆ ಮಾದೇಸಿ ಪಕ್ಷಗಳ ಪ್ರತಿಭಟನೆ ಮುಂದುವರೆದಿದ್ದು ಅದನ್ನು ಪರಿಹರಿಸುವುದು ಹೊಸ ಪ್ರಧಾನಿಯ ಮೊದಲ ಆದ್ಯತೆಯಾಗಲಿದೆ.

KP-Oli

ಅಮೆರಿಕನ್ ಯುದ್ಧಾಪರಾಧ: ಅಫ್ಘಾನ್ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ

ಜಗದಗಲ – ಶರತ್‌ಚಂದ್ರ

ಸಂಪುಟ 9 ಸಂಚಿಕೆ 43, 25 ಅಕ್ಟೋಬರ್ 2015

MSF-hospital-bombing

ಅಫ್ಘಾನಿಸ್ತಾನದ ಕುಂಡುಜ ಪ್ರದೇಶದಲ್ಲಿರುವ ’ಗಡಿ-ರಹಿತ ಡಾಕ್ಟರುಗಳು’ (ಎಂ.ಎಸ್.ಎಫ್.) ಎಂಬ ಅಂತರ್ರಾಷ್ಟ್ರೀಯ ಸಂಸ್ಥೆ ನಡೆಸುತ್ತಿರುವ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ನಡೆಸಿ ಅಮೆರಿಕ ಯುದ್ಧ-ಅಪರಾಧದ ಆಪಾದನೆಗೆ ಗುರಿಯಾಗಿದೆ. ಎಂ.ಎಸ್.ಎಫ್. ಅಂತರ್ರಾಷ್ಟ್ರೀಯ ಘರ್ಷಣೆಗಳ ಪ್ರದೇಶಗಳಲ್ಲಿ ಅಸ್ಪತ್ರೆಗಳನ್ನು ನಡೆಸಿ ಗಾಯಾಳುಗಳಿಗೆ ವೈದ್ಯಕೀಯ ಸೇವೆ ಒದಗಿಸುತ್ತದೆ. ಹೀಗೆ ಮಾಡುವಾಗ ಎಂ.ಎಸ್.ಎಫ್. ಆಸ್ಪತ್ರೆ ಇರುವ ಸ್ಥಳದ ನಿಖರ ಮಾಹಿತಿಯನ್ನು ಘರ್ಷಣೆಯಲ್ಲಿ ತೊಡಗಿರುವ ಎರಡೂ ಪಕ್ಷಗಳಿಗೆ ಕೊಡುತ್ತದೆ. ಜೀನಿವಾ ಅಂತರ್ರಾಷ್ಟ್ರೀಯ ಒಪ್ಪಂದದ ಪ್ರಕಾರ ಇಂತಹ ಸಂಸ್ಥೆಗಳ ಮೇಲೆ ವಿಮಾನದಾಳಿ ನಡೆಸುವುದು ಯುದ್ಧ ಅಪರಾಧ.

ಆದರೆ ಅಮೆರಿಕದ ಯುದ್ಧ ವಿಮಾನಗಳು ಅಕ್ಟೋಬರ್ 3 ಬೆಳಿಗ್ಗೆ 2 ಗಂಟೆಗೆ ಅಫ್ಘಾನಿಸ್ತಾನದ ಕುಂಡುಜ್ ಪ್ರದೇಶದಲ್ಲಿರುವ ಆಸ್ಪತ್ರೆ ಮೇಲೆ ಮಾಡಿವೆ. ಮೊದಲ ವಿಮಾನ ದಾಳಿ ನಡೆದ ಕೂಡಲೇ ಎಂ.ಎಸ್.ಎಫ್. ಸಿಬ್ಬಂದಿ ಅಮೆರಿಕನ್ ಏರ್ ಕಮಾಂಡಿಗೆ ಫೋನ್ ಮಾಡಿ ದಾಳಿಯ ಬಗ್ಗೆ ತಿಳಿಸಿದ್ದಾರೆ. ಆದರೂ 15 ನಿಮಿಷಗಳ ಅಂತರದಲ್ಲಿ 3.15 ರವರೆಗೆ ವಿಮಾನದಾಳಿ ಮುಂದುವರೆದಿದೆ. ಗಾಯಾಳುಗಳು, ರೋಗಿಗಳು, ಡಾಕ್ಟರುಗಳು, ಇತರ ವೈದ್ಯಕೀಯ ಸಿಬ್ಬಂದಿ ಮತ್ತು 2 ಮಕ್ಕಳನ್ನು ಸೇರಿದಂತೆ 22 ಜನ ಈ ವಿಮಾನದಾಳಿಗಳಲ್ಲಿ ಸತ್ತಿದ್ದಾರೆ.

ಈ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಇದರ ಕಾರಣದ ಬಗ್ಗೆ ಅಮೆರಿಕದ ಮಿಲಿಟರಿ 4 ಬಾರಿ ತನ್ನ ಹೇಳಿಕೆ ಬದಲಾಯಿಸಿದೆ. ಆಸ್ಪತ್ರೆಯ ಒಳಗಿಂದ ವಿರೋಧಿ ದಾಳಿ, ಪಕ್ಕದ ಪ್ರದೇಶದ ದಾಳಿಯಲ್ಲಿ ಅಕಾಸ್ಮಾತ್ತಾಗಿ ಆದ ಹಾನಿ, ಅಫ್ಘಾನ್ ವಿಮಾನದಳದ ಮಾಹಿತಿ ಪ್ರಕಾರ ಬಾಂಬ್ – ಈ ಸುಳ್ಳುಗಳನ್ನು ಯಾರೂ ನಂಬದಾಗ ಅಮೆರಿಕನ್ ಹೈ ಕಮಾಂಡ್ ಆಜ್ಞೆಯ ಮೇಲೆ ದಾಳಿ ನಡೆದಿದೆ. ಇದು ತಪ್ಪು ಎಂದು ಒಪ್ಪಿಕೊಂಡಿದೆ. ಈ ದಾಳಿಗೆ ಸ್ವತಃ ಅ ಧ್ಯಕ್ಷ ಒಬಾಮ ಎಂ.ಎಸ್.ಎಫ್. ಕ್ಷಮೆ ಕೇಳಿದ್ದಾರೆ. ಪೆಂಟಗಾನ್, ಅಮೆರಿಕ-ಅಫ್ಘಾನ್ ಜಂಟಿ ಪಡೆ ಮತ್ತು ನಾಟೋದಿಂದ ಪ್ರಕರಣದ ತನಿಖೆಗೆ ಆಜ್ಞೆ ಮಾಡಲಾಗಿದೆ. ಆದರೆ ಎಂ.ಎಸ್.ಎಫ್. ಜಿನಿವಾ ಒಪ್ಪಂದದ ಪ್ರಕಾರ ಸ್ವತಂತ್ರ ಅಂತರ್ರಾಷ್ಟ್ರೀಯ ತನಿಖೆಗೆ ಒತ್ತಾಯಿಸಿದೆ.

ಅಮೆರಿಕ ಇಂತಹ ಹಲವು ಯುದ್ಧ ಅಪರಾಧಗಳನ್ನು ಕಳೆದ 2-3 ದಶಕಗಳಲ್ಲಿ ಎಸಗಿದೆ. ಅಫ್ಘಾನಿಸ್ತಾನ ಒಂದರಲ್ಲೇ 2001 ಮತ್ತು 2012ರ ನಡುವೆ 6481 ನಾಗರಿಕರ ಹತ್ಯೆ ನಡೆಸಿದೆ. ಜಿನಿವಾ ಒಪ್ಪಂದದ ಪ್ರಕಾರ ಇದೂ ಯುದ್ಧಾಪರಾಧವೇ. ಆದರೂ ಈ ವರೆಗೆ ಅದನ್ನು ಒಪ್ಪಿಕೊಂಡೂ ಇರಲಿಲ್ಲ. ಎಂ.ಎಸ್.ಎಫ್. ಒಂದು ಪಾಶ್ಚಿಮಾತ್ಯ ಸಂಸ್ಥೆ ಮತ್ತು ಅದರಿಂದ ಮಾಧ್ಯಮದ ಗಮನ ಸೆಳೆದಿದ್ದರಿಂದ ಒಬಾಮ ಕ್ಷಮೆ ಕೇಳಬೇಕಾಗಿ ಬಂದಿದೆ.

ಟಿಟಿಐಪಿ ವಿರುದ್ಧ ಬೀದಿಗಳಿದ 2.5 ಲಕ್ಷ ಜರ್ಮನರು

ಜಗದಗಲ – ಶರತ್‌ಚಂದ್ರ

ಸಂಪುಟ 9 ಸಂಚಿಕೆ 43, 25 ಅಕ್ಟೋಬರ್ 2015

march against TTIP pic1

ಅಮೆರಿಕ-ಯುರೋಕೂಟಗಳ ನಡುವೆ ಆಗಲಿರುವ ’ಮುಕ್ತ-ವ್ಯಾಪಾರ’ ಒಪ್ಪಂದ ಪ್ರತಿಭಟಿಸಿ ಜರ್ಮನಿಯ ರಾಜಧಾನಿ ಬರ್ಲಿನಿನಲ್ಲಿ 2.5 ಲಕ್ಷ ಅಭೂತಪೂರ್ವ ರೀತಿಯಲ್ಲಿ ಬೀದಿಗಿಳಿದು ಪ್ರತಿಭಟಿಸಿದರು. ಇದು ಹಲವು ವರ್ಷಗಳಲ್ಲಿ ಜರ್ಮನಿಯಲ್ಲಿ ನಡೆದ ಅತ್ಯಂತ ದೊಡ್ಡ ರ‍್ಯಾಲಿಯೆನ್ನಲಾಗಿದೆ. ಮರ್ಕೆಲಾ ಸರಕಾರವನ್ನು ದಂಗು ಬಡಿಸಿದ್ದು ಮಾತ್ರವಲ್ಲ, ರ‍್ಯಾಲಿಯ ಸಂಘಟಕರನ್ನೂ ಚಕಿತಗೊಳಿಸಿತ್ತು. ಅಮೆರಿಕ ಮತ್ತು ಯುರೋಕೂಟಗಳ ನಡುವೆ ಈಗ ಗುಟ್ಟಾಗಿ ಚರ್ಚೆಯಾಗುತ್ತಿರುವ ವ್ಯಾಪಾರ ಒಪ್ಪಂದ-ಟಿಟಿಐಪಿ(ಟ್ರಾನ್ಸ್-ಅಟ್ಲಾಂಟಿಕ್ ಟ್ರೇಡ್ ಅಂಡ್ ಇನ್ವೆಸ್ಟ್‌ಮೆಂಟ್ ಪಾರ್ಟ್‌ನರ್‌ಶಿಪ್-ಅಟ್ಲಾಂಟಿಕ್ ಆಚೆಗಿನ ವ್ಯಾಪಾರ ಮತ್ತು ಹೂಡಿಕೆ ಪಾಲುದಾರಿಕೆ) ಯನ್ನು ವಿರೋಧಿಸಿ ಹಲವು ಪರಿಸರವಾದಿ, ಟ್ರೇಡ್ ಯೂನಿಯನುಗಳು, ರಾಜಕೀಯ ಪಕ್ಷಗಳ ಕೂಟ ಈ ಪ್ರತಿಭಟನೆಯನ್ನು ಸಂಘಟಿಸಿದ್ದವು. ರಾಜಕೀಯ ಪಕ್ಷಗಳಲ್ಲಿ ಗ್ರೀನ್ ಮತ್ತು ಎಡ ಪಕ್ಷಗಳು ಪ್ರಧಾನ ಪಾತ್ರ ವಹಿಸಿದ್ದವು.

ಗುಟ್ಟಾಗಿ 2013ರಿಂದ ಚರ್ಚೆಯಾಗುತ್ತಿರುವ ಈ ಒಪ್ಪಂದ ಮುಂದಿನ ವರ್ಷ ಜಾರಿಗೆ ಬರಲಿದೆ. ಎರಡನೇ ಮಹಾಯುದ್ಧ ನಂತರ ಅಮೆರಿಕ ಮಾಡಿಕೊಂಡ ಯಾವುದೇ ’ಮುಕ್ತ-ವ್ಯಾಪಾರ’ ನಿಜವಾಗಿಯೂ ಮುಕ್ತವಾಗಿರಲಿಲ್ಲ. ಈ ಒಪ್ಪಂದ ಮಾಡಿಕೊಂಡ ದೇಶಗಳ ಮೇಲೆ ಹಲವು ವಾಣಿಜ್ಯೇತರ ಶರತ್ತುಗಳನ್ನು ಹೇರಿತ್ತು. ಆ ದೇಶದಲ್ಲಿ ಕೈಗಾರಿಕೆ-ಕೃಷಿಯ ನಾಶ, ಪರಿಸರ ನಾಶ, ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ನಡೆಸಿತ್ತು. ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳನ್ನು ಇನ್ನಷ್ಟು ಬಲ ಪಡಿಸಿತ್ತು. ಟಿಟಿಐಪಿ ಒಪ್ಪಂದದಲ್ಲೂ ಇದೇ ಆಗಲಿದೆ.

ಯುರೋ ಕೂಟದಲ್ಲಿ ಈಗ ಜಾರಿಯಲ್ಲಿರುವ ಉನ್ನತ ಮಟ್ಟದ ಕಾರ್ಮಿಕ ಹಕ್ಕುಗಳು, ಪರಿಸರ ನಿಬಂಧನೆಗಳನ್ನು, ಆಹಾರ ಸುಭದ್ರತೆ ಇವೆಲ್ಲ ಕೆಳಮಟ್ಟದಲ್ಲಿರುವ ಅಮೆರಿಕದ ಮಟ್ಟಕ್ಕೆ ಕುಸಿಯುತ್ತವೆ ಎಂಬುದು ವ್ಯಾಪಕವಾದ ಆತಂಕ. ಚುನಾಯಿತ ಜರ್ಮನಿಯ ಮತ್ತು ಯುರೋ ಸರಕಾರಗಳು ಯಾವುದೇ ಕಾನೂನುಗಳನ್ನು ನಿಬಂಧನೆಗಳನ್ನು ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ಒಪ್ಪಂದದ ಗುಟ್ಟಾಗಿರುವ ಕಲಮುಗಳ ಪ್ರಕಾರ ಯಾವುದೇ ಸರಕಾರದ ನಿರ್ಧಾರಗಳು ಯಾವುದೇ ಕಂಪನಿಯ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ಅದನ್ನು ಟ್ರಿಬ್ಯುನಲ್ ಮುಂದೆ ಎಳೆಯುವ ಅಧಿಕಾರ ಕಂಪನಿಗಳಿಗೆ ಇರುತ್ತದೆ. ಇಂತಹ ಟ್ರಿಬ್ಯುನಲ್‌ನ ತೀರ್ಪಿಗೆ ಸರಕಾರಗಳು ಬಾಧ್ಯವಾಗಿರಬೇಕಾಗುತ್ತದೆ. ಅಂದರೆ ಬಹುರಾಷ್ಟ್ರೀಯ ಕಂಪನಿಗಳ ಪ್ರಾಬಲ್ಯ ಟಿಟಿಐಪಿ ಯೊಂದಿಗೆ ವಿಪರೀತವಾಗಿ ಹೆಚ್ಚುತ್ತದೆ. ಅದೇ ಈ ಒಪ್ಪಂದದ ಉದ್ದೇಶ ಕೂಡಾ ಎಂಬುದು ಪ್ರತಿಭಟನಾಕಾರರ ಆತಂಕ. ಸರಕಾರ ಈ ಒಪ್ಪಂದದ ಕರಡನ್ನು ಬಹಿರಂಗ ಪಡಿಸಬೇಕು. ಅದರ ಬಗ್ಗೆ ಸಾರ್ವಜನಿಕ ಚರ್ಚೆ ಏರ್ಪಡಿಸಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು.

ಎಲ್ಲಾ ಅಂಶಗಳಲ್ಲೂ ಸಮಾನ ಮಟ್ಟ ತರುವುದರಿಂದ ತೊಡಕುಗಳು ನಿವಾರಣೆ ಆಗುವ ಮೂಲಕ ವ್ಯಾಪಾರ ಮತ್ತು ಹೂಡಿಕೆಗಳು ಹೆಚ್ಚುತ್ತವೆ. ಇದು 80 ಕೋಟಿ ಬಳಕೆದಾರರಿರುವ ದೈತ್ಯ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಎಲ್ಲಾ ದೇಶಗಳ ಸಮೃದ್ಧಿಯನ್ನು ಹೆಚ್ಚಿಸುತ್ತವೆ ಎಂಬುದು ಈ ಒಪ್ಪಂದದ ಚರ್ಚೆಯಲ್ಲಿರುವ ಅಮೆರಿಕ ಮತ್ತು ಯುರೋಕೂಟದ ಸರಕಾರಗಳ ಸಮಜಾಯಿಷಿ. ಇದು ಬೊಗಳೆ. ಅಮೆರಿಕ ಮತ್ತು ಯುರೋಕೂಟ ಇವರೆಡೂ ಕಡೆ  ಕಾರ್ಮಿಕ ವರ್ಗ ಮತ್ತು ಪರಿಸರ ನಷ್ಟಕ್ಕೊಳಗಾಗುತ್ತವೆ. ಪ್ರಬಲಗೊಳ್ಳುವುದು ಬಹುರಾಷ್ಟ್ರೀಯ ಕಂಪನಿಗಳು ಮಾತ್ರ. ಇದು ಬಹುರಾಷ್ಟ್ರೀಯ ಕಂಪನಿಗಳ ಸರ್ವಾಧಿಕಾರದ ನೀಲನಕ್ಷೆ, ಇದನ್ನು ನಂಬಬೇಡಿ ಎಂದರು ಕೆನಡಾದ ಕೇಂದ್ರೀಯ ಟ್ರೇಡ್ ಯೂನಿಯನಿನ ನಾಯಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ. ಇತ್ತೀಚೆಗೆ ಅಂತಿಮಗೊಳಿಸಿದ ಟಿಟಿಪಿ(ಟ್ರಾನ್ಸ್-ಪೆಸಿಫಿಕ್ ಟ್ರೇಡ್ ಪಾರ್ಟ್‌ನರ್‌ಶಿಪ್- ಪೆಸಿಫಿಕ್ ಆಚೆಗಿನ ವ್ಯಾಪಾರ ಪಾಲುದಾರಿಕೆ) ಏಶ್ಯಾ-ಪೆಸಿಫಿಕ್ ದೇಶಗಳ ಜತೆ ಸಹ ಇಂತಹುದೇ ಒಪ್ಪಂದ. ಇವರೆಡೂ ಒಪ್ಪಂದಗಳುಜಾರಿಯಾದರೆ ಅಮೆರಿಕಕ್ಕೆ ಚೀನಾದ ಮಾರುಕಟ್ಟೆ ಮತ್ತು ಆರ್ಥಿಕ ಶಕ್ತಿಗೆ ಸೆಡ್ಡು ಹೊಡೆಯುವ ಬಲ ಬರುತ್ತದೆ ಎಂಬುದು ಅಮೆರಿಕದ ನಿಜವಾದ ಲೆಕ್ಕಾಚಾರ ಮತ್ತು ಉದ್ದೇಶ.

`ಹ್ಯಾಪಿ ಬರ್ತ್ ಡೇ’ಮೇಲೆ ಇನ್ನು ಕಾಪಿರೈಟ್ ಇಲ್ಲ!

ಜಗದಗಲ್ – ಶರತ್ ಚಂದ್ರ

ಸಂಪುಟ 9 ಸಂಚಿಕೆ 42, 18 ಅಕ್ಟೋಬರ್ 2015

ಇನ್ನು ಮೇಲೆ ನಿಮ್ಮ ಮಕ್ಕಳ, ಸ್ನೇಹಿತರ ಹುಟ್ಟು ಹಬ್ಬದಲ್ಲಿ ’ಹ್ಯಾಪಿ ಬರ್ತ್ ಡೇ’ಹಾಡು ಆರಾಮಾಗಿ ಹೇಳಬಹುದು. ಯಾರಿಗೂ ರಾಯಲ್ಟಿ ಕೊಡಬೇಕಾಗಿಲ್ಲವಂತೆ. ಹಾಗಂತ ಅಮೆರಿಕದ ಕೋರ್ಟೊಂದು ತೀರ್ಪಿತ್ತಿದೆ. ಈ ವರೆಗೆ ’ಹ್ಯಾಪಿ ಬರ್ತ್ ಡೇ’ಯ ಕಮರ್ಶಿಯಲ್ ಬಳಕೆ (ಇದು ಹೇಗೆ ಯಾರು ನಿರ್ಧರಿಸುವುದೋ?) ಮೇಲೆ ಪ್ರತಿ ವರ್ಷ ವಾರ್ನರ್ ಬ್ರದರ್ಸ್ 20 ಲಕ್ಷ ಡಾಲರು ಸಂಪಾದಿಸುತ್ತಿತ್ತಂತೆ. ಇದು ಕಳೆದ 80 ವರ್ಷಗಳಿಂದ ನಡೆಯುತ್ತಿತ್ತಂತೆ. ಇದರ ವಿರುದ್ಧ ಹಲವು ಕಲಾವಿದರು ಕೋರ್ಟು ಮೆಟ್ಟಲು ಹತ್ತಿದ್ದರಂತೆ. ಯಾವುದಕ್ಕೂ ಕಾಪಿರೈಟ್ ಮಾಡಬಹುದು, ಪೇಟೆಂಟ್ ತೆಗೆದುಕೊಳ್ಳಬಹುದು ಎನ್ನುವ ತಿಕ್ಕಲು ಅಮೆರಿಕನ್ ಕಾನೂನುಗಳನ್ನು ಕೋರ್ಟು ತಳ್ಳಿ ಹಾಕಿಲ್ಲ. ಬದಲಾಗಿ ಆ ಕಂಪನಿ ಈ ಹಾಡಿನ ಹಕ್ಕುಗಳನ್ನು ಖರೀದಿಸಿದ್ದಕ್ಕೆ ಪುರಾವೆ ಇಲ್ಲ ಅಂತ ಅಷ್ಟೇ!

ಕರಾಳ ಟಿ.ಪಿ.ಪಿ.ಗೆ ಒಪ್ಪಿಗೆ

ಐದು ದಿನಗಳ ಬಿರುಸಿನ ಮಾತುಕತೆಗಳ ನಂತರ ಅಮೆರಿಕ ಮತ್ತು 11 ಏಶ್ಯಾ-ಪೆಸಿಫಿಕ್ ದೇಶಗಳ ವಾಣಿಜ್ಯ ಮಂತ್ರಿಗಳು ಟಿ.ಪಿ.ಪಿ. (ಟ್ರಾನ್ಸ್-ಪೆಸಿಫಿಕ್ ಪಾರ್ಟ್‌ನರ್‌ಶಿಪ್) ಒಪ್ಪಂದವನ್ನು ಅಂತಿಮಗೊಳಿಸಿವೆ. ಇದು ಜಗತ್ತಿನ ಬಡದೇಶಗಳ ಮೇಲೆ ಪ್ರತಿಕೂಲಕರ ಬಹು-ಪಕ್ಷೀಯ ಒಪ್ಪಂದವನ್ನು ಬೋಧಿಸಿ ಹೊರಿಸಿ ತಾನೇ ಆ ಒಪ್ಪಂದದಿಂದ ಹೊರನಡೆದಿದೆ. ತನಗೆ ಅನುಕೂಲಕರವಾದ ದ್ವಿ-ಪಕ್ಷೀಯ ಅಥವಾ ಪ್ರಾದೇಶಿಕ ಒಪ್ಪಂದ ಮಾಡಿಕೊಂಡಿದೆ. ಕಾರ್ಪೊರೆಟ್ ಮಾಧ್ಯಮಗಳು ಇದು ಜಗತ್ತಿನ ಈ ವರೆಗಿನ ಅತ್ಯಂತ ದೊಡ್ಡ ವ್ಯಾಪಕ ’ಮುಕ್ತ-ವ್ಯಾಪಾರ’ಎಂದಿವೆ. ಆದರೆ ನಿಜವಾಗಲೂ ಈ ಒಪ್ಪಂದದಿಂದ ಹೊರಗಿಡಲ್ಪಟ್ಟ ಚೀನಾದ ವಿರುದ್ಧ ಮಿಲಿಟರಿ-ವ್ಯೂಹಾತ್ಮಕ ’ಏಶ್ಯಾದ ತಿರುಗಣೆ’ಯೋಜನೆಯ ಆರ್ಥಿಕ ಉಪಕರಣ.

ಆರ್ಥಿಕ ಬಲದೊಂದಿಗೆ ಜಗತ್ತಿನ ಮೇಲೆ ತನ್ನ ಯಜಮಾನಿಕೆ ಸಹ ಸಡಿಲವಾಗುತ್ತಿರುವ ಬಗ್ಗೆ ಆತಂಕಗೊಂಡಿರುವ ಅಮೆರಿಕ ತನ್ನ ಯಜಮಾನಿಕೆ ಪುನಃ ಸ್ಥಾಪಿಸುವ ಪ್ರಯತ್ನದ ಭಾಗ. ಇದರಲ್ಲಿ ಅಮೆರಿಕ, ಜಪಾನ್ ಅಲ್ಲದೆ ಇರುವ 10 ಏಶ್ಯಾ-ಪೆಸಿಫಿಕ್ ದೇಶಗಳೆಂದರೆ-ಆಸ್ಟ್ರೇಲಿಯಾ, ನ್ಯೂಝಿಲಂಡ್, ಬ್ರೂನೈ, ಕೆನಡಾ, ಚಿಲಿ, ಮಲೇಶ್ಯಾ, ಮೆಕ್ಸಿಕೊ, ಪೆರು, ಸಿಂಗಾಪರ, ವಿಯೇಟ್ನಾಂ.

ಟಿ.ಪಿ.ಪಿ. ಒಪ್ಪಂದದ ಕರಡಿಗೆ ಒಪ್ಪಿಗೆ ಸೂಚಿಸುವಂತೆ ಅಧ್ಯಕ್ಷ ಒಬಾಮ ಈ ದೇಶಗಳ ಮೇಲೆ ಭಾರೀ ಒತ್ತಡ ಹಾಕಿದ್ದರು. ’ನಮ್ಮ ಉತ್ಪನ್ನಗಳ ಶೇ. 95 ಮಾರುಕಟ್ಟೆ ನಮ್ಮ ದೇಶದ ಹೊರಗಿರುವಾಗ ಏಶ್ಯಾ-ಪೆಸಿಫಿಕ್ ಮಾತ್ರವಲ್ಲ ಜಾಗತಿಕ ವಾಣಿಜ್ಯದ ನಿಯಮಗಳನ್ನು ನಾವು ನಿರ್ದೇಶಿಸಬೇಕು, ಚೀನಾವಲ್ಲ ಎಂದು ಒಬಾಮ ನೇರವಾಗೇ ಹೇಳಿದ್ದಾರೆ. ಈ ಒಪ್ಪಂದದ ಕರಡು ಸಾರ್ವಜನಿಕವಾಗಿ ಬಿಡುಗಡೆ ಮಾಡದೆ ದೇಶಗಳ ಜನತೆಯ ಬೆನ್ನ ಹಿಂದೆ ಗುಪ್ತ ಮಾತುಕತೆಗಳಲ್ಲಿ ಅದಕ್ಕೆ ಒಪ್ಪಿಗೆ ಸಹ ಕೊಡಲಾಗಿದೆ.

ಟಿ.ಪಿ.ಪಿ. ಒಪ್ಪಂದದ ಶರತ್ತುಗಳನ್ನು ಬಿಡುಗಡೆ ಮಾಡಲಾಗಿಲ್ಲ. ಆದರೂ ಅದರ ಒತ್ತು ಸ್ಪಷ್ಟವಿದೆ. ಜಗತ್ತಿನ ಸುಮಾರು ಶೇ. 40 ಜಿಡಿಪಿ ಹೊಂದಿರುವ ಈ 12 ದೇಶಗಳಲ್ಲಿ ಅಮೆರಿಕ ಕಂಪನಿಗಳು ಮತ್ತು ಅವುಗಳ ಉತ್ಪನ್ನಗಳ ಆಮದಿಗೆ ಇರುವ ಎಲ್ಲಾ ಅಡೆತಡೆಗಳನ್ನೂ ನಿಬಂಧನೆಗಳನ್ನು ತೆಗೆಯುವುದು ಅದರ ಮುಖ್ಯ ಉದ್ದೇಶ. ಅದರಲ್ಲೂ ಮುಖ್ಯವಾಗಿ ಬ್ಯಾಂಕಿಂಗ್, ಹಣಕಾಸು, ವಿಮೆ, ಚಿಲ್ಲರೆ ವ್ಯಾಪಾರ, ಐಟಿ, ಮಾಧ್ಯಮ, ಮನೋರಂಜನೆ ಮತ್ತು ಔಷಧಿಗಳ ಕ್ಷೇತ್ರಗಳಲ್ಲಿ ಅಡೆತಡೆಗಳನ್ನೂ ನಿಬಂಧನೆಗಳನ್ನು ತೆಗೆಯುವುದು ಅದರ ಒತ್ತು.

ಈ ದೇಶಗಳಲ್ಲಿ ಔಷಧಿಗಳ ಬೆಲೆಯನ್ನು ಏರಿಸುವ, ಬೌದ್ಧಿಕ ಹಕ್ಕುಗಳನ್ನು ಬದಲಾಯಿಸುವ ಅಜೆಂಡಾ ಹೊಂದಿದೆ. ಇಂತಹುದೇ ಟಿ.ಟಿ.ಐ.ಪಿ. ಒಪ್ಪಂದದ ಬಗ್ಗೆ ಯುರೋ ಕೂಟದ ಜತೆಗೆ ಮಾತುಕತೆಗಳು ನಡೆಯುತ್ತಿವೆ. ಇವೆರಡು ಒಪ್ಪಂದಗಳು ಜಾರಿಗೆ ಬಂದರೆ ಅಮೆರಿಕನ್ ಮತ್ತಿತರ ಬಹುರಾಷ್ಟ್ರೀಯ ಕಂಪನಿಗಳ ಬಲ ಅಗಾಧವಾಗಿ ಹೆಚ್ಚಿ ಯಾವುದೇ ಸರಕಾರ ಯಾವುದೆ ಮಾರುಕಟ್ಟೆ ನಿಬಂಧನೆಗಳನ್ನು ಹಾಕದ ಅಸಹಾಯ ಸ್ಥಿತಿಯಲ್ಲಿ ಇರುತ್ತದೆ.

ಸೌದಿ ಮಾನವ ಹಕ್ಕು ಕಮಿಶನ್ ಮುಖ್ಯಸ್ಥ – ಕ್ರೂರ ಜೋಕ್!

ಜಗದಗಲ್ – ಶರತ್ ಚಂದ್ರ

ಸಂಪುಟ 9 ಸಂಚಿಕೆ 42, 18 ಅಕ್ಟೋಬರ್ 2015

ಪ್ರಶ್ನೆಗಳಿವೆಯೇನ್ರೀ....? ಯಾರಿಗಾದರೂ.....?

ಪ್ರಶ್ನೆಗಳಿವೆಯೇನ್ರೀ….? ಯಾರಿಗಾದರೂ…..?

 

ಸೌದಿ ಅರೇಬಿಯಾ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಶನಿನ ಮುಖ್ಯಸ್ಥ ದೇಶವಾಗಿ ಆಯ್ಕೆಯಾಗಿದೆ. ಇದಕ್ಕಿಂತ ಹೆಚ್ಚಿನ ಕ್ರೂರ ವ್ಯಂಗ್ಯ ಮತ್ತು ಜೋಕ್ ಬೇರೆ ಇರಲಿಕ್ಕಿಲ್ಲ. ಸೌದಿ ಅರೇಬಿಯಾ ಜಗತ್ತಿನಲ್ಲೇ ಅತ್ಯಂತ ಕೆಟ್ಟ ಮಾನವ ಹಕ್ಕುಗಳ ರೆಕಾರ್ಡು ಹೊಂದಿದೆ. ಈ ವರ್ಷವೇ ಅದು ಈಗಾಗಲೇ 100ಕ್ಕಿಂತಲೂ ಹೆಚ್ಚು ರುಂಡ ಹಾರಿಸುವ ಮೂಲಕ ಮರಣ ದಂಡನೆ ವಿಧಿಸಿದೆ. ಈ ಸಂಖ್ಯೆ ಇದೇ ಅವಧಿಯಲ್ಲಿ ಐಸಿಸ್ ವಿಧಿಸಿದ ಮರಣದಂಡನೆಗಳಿಗಿಂತಲೂ ಹೆಚ್ಚು. ಇವರಲ್ಲಿ ಸೌದಿ ಸರಕಾರದ ರಾಜಕೀಯ ವಿರೋಧಿ 21 ವರ್ಷದ ಯುವಕನೂ ಸೇರಿದ್ದಾನೆ.. ಆತನ ’ಘೋರ ಅಪರಾಧ’ವೆಂದರೆ 17 ವರ್ಷದವನಿರುವಾಗ (ಅಂದರೆ ವಯಸ್ಕ ಅಲ್ಲದಿರುವಾಗ) ’ಅರಬ್ ವಸಂತ’ದ ಪ್ರದರ್ಶನಗಳಳಲ್ಲಿ ಭಾಗವಹಿಸಿದ್ದು, ಇತರರನ್ನು ಅದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದು ಮತ್ತು ಅವರಿಗೆ ’ಪ್ರಥಮ-ಚಿಕಿತ್ಸೆ’ಕಲಿಸಿದ್ದು. ಈ ಮರಣ ದಂಡನೆ ಅಂತರ್ರಾಷ್ಟ್ರೀಯ ಕಾನೂನು-ಬಾಹಿರವಾದ್ದು.

ಕಳೆದ ವರ್ಷ ಸೌದಿಯಲ್ಲಿ 175 ಅಂದರೆ 2 ದಿನಕ್ಕೆ ಒಂದರಂತೆ ಮರಣ ದಂಡನೆ ವಿಧಿಸಲಾಗಿದೆ. ಕಳೆದ 30 ವರ್ಷಗಳಲ್ಲಿ 2208 ಮರಣ ದಂಡನೆ ವಿಧಿಸಲಾಗಿದೆ. ಇವನ್ನು ಹೆಚ್ಚಾಗಿ ಗಂಭೀರ ಅಪರಾಧವಲ್ಲದ ಚಿಕ್ಕ ಕಳ್ಳತನ, ವ್ಯಭಿಚಾರ, ಮಾಟ ಮುಂತಾದವುಗಳಿಗೆ ಕೊಡಲಾಗಿದೆ. ಮಕ್ಕಳು, ಮಾನಸಿಕ ರೋಗಿಗಳಿಗೂ ಮರಣ ದಂಡನೆ ಕೊಡಲಾಗಿದೆ. ಅಲ್ಲದೆ ಎಲ್ಲಾ ಮರಣ ದಂಡನೆ ಶಿಕ್ಷೆಗಳನ್ನು ಅತ್ಯಂತ ಕ್ರೂರ ರೀತಿಯಲ್ಲಿ ಸಾರ್ವಜನಿಕವಾಗಿ ಕೊಡಲಾಗುತ್ತದೆ. ಸಾರ್ವಜನಿಕ ಮರಣದಂಡನೆಯನ್ನು ವಿಶ್ವಸಂಸ್ಥೆ ನಿಷೇಧಿಸಿದೆ. ಇದೇ ಮಾರ್ಚಿನಿಂದ ಯೆಮೆನ್ ಮೇಲೆ ಕಾನೂನು-ಬಾಹಿರವಾಗಿ ಬಾಂಬ್ ದಾಳಿ ಮಾಡುತ್ತಿದ್ದು 4 ಸಾವಿರ ನಾಗರಿಕರ ಸಾವಿಗೆ ಕಾರಣವಾಗಿದೆ. ಲಕ್ಷಾಂತರ ಜನ ನಿರಾಶ್ರಿತ ರಾಗಿದ್ದಾರೆ. ಈ ಬಾಂಬ್ ದಾಳಿಗಳಲ್ಲಿ 2008ರಿಂದ ನಿಷೇಧಿತವಾಗಿರುವ ಕ್ಲಸ್ಟರ್ ಬಾಂಬುಗಳನ್ನು ಬಳಸಿದೆ. ಅಮೆರಿಕದ ಅತ್ಯಂತ ನಿಕಟ ಮಿತ್ರ ಎಂಬುದನ್ನು ಬಿಟ್ಟರೆ ವಿಶ್ವ ಮಾನವ ಹಕ್ಕು ಕಮಿಶನ್ ಮುಖ್ಯಸ್ಥನಾಗಿ ಆಯ್ಕೆ ಆಗುವ ಯಾವುದೇ ಹಕ್ಕು ಸೌದಿ ಅರೇಬಿಯಾಕ್ಕೆ ಇಲ್ಲ. ಅದು ದರೋಡೆಕೋರನನ್ನು ನಾಯಾಧೀಶನಾಗಿ ನೇಮಿಸಿದಂತೆ.