ಮಾನವ ಡಿಎನ್‍ಎ ಮಾಹಿತಿ ಸಂಗ್ರಹಿಸುವ ಮಸೂದೆ ಜನತೆಯ ಮೇಲೆ ಬೇಹುಗಾರಿಕೆಗಾಗಿ ಮತೀಯ ಶಕ್ತಿಗಳ ಹೊಸ ಅಸ್ತ್ರ

 ಸಂಪುಟ 10 ಸಂಚಿಕೆ 3 ಜನವರಿ 17, 2016 – ಹರ್ಷ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಮಾನವ ಡಿಎನ್‍ಎ ವಿವರಗಳನ್ನು ಶೇಖರಿಸುವ ಮಸೂದೆ’ಯನ್ನು ಜಾರಿಗೆ ತರಲು ಪ್ರಯತ್ನ ನಡೆಸಿದೆ. ಸಾಮಾನ್ಯವಾಗಿ ಕ್ರಿಮಿನಲ್ ಅಪರಾಧ ಎಸಗಿರದ ವ್ಯಕ್ತಿಯೊಬ್ಬರ ಡಿಎನ್‍ಎ ಮಾದರಿಗಳನ್ನು ಅವರ ಒಪ್ಪಿಗೆ ಪಡೆದೇ ಪೊಲೀಸರು ಸಂಗ್ರಹಿಸಬೇಕು. ವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ಈ ಹೊಸ ಮಸೂದೆಯನ್ನು ಜಾರಿಗೆ ತಂದಲ್ಲಿ ಕ್ರಿಮಿನಲ್ ಅಪರಾಧಗಳಲ್ಲದೇ ಟ್ರಾಫಿಕ್ ಸಿಗ್ನಲ್ ಉಲ್ಲಂಘನೆಯಂಥಹ ಸಿವಿಲ್ ವ್ಯಾಜ್ಯ/ ಪ್ರಕರಣಗಳಲ್ಲೂ ಸಹ ಅಪರಾಧ ಎಸಗದಿದ್ದರೂ ಸಂಶಯಾಸ್ಪದ/ ಸಾಕ್ಷಿ ಎಂಬ ಕಾರಣಕ್ಕೆ ಅಂತಹ ವ್ಯಕ್ತಿಯ ಒಪ್ಪಿಗೆ ಪಡೆಯದೆ ಡಿಎನ್‍ಎ ಮಾದರಿ ಸಂಗ್ರಹಿಸುವ ಅಧಿಕಾರ ಪೊಲೀಸರಿಗೆ ಬರುತ್ತದೆ.

ಹಲವಾರು ಸಂದರ್ಭಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನೂ ಸಹ ಸರ್ಕಾರಗಳು ಕಾನೂನುಬಾಹಿರ ಎಂದು ಘೋಷಿಸುವುದನ್ನು ನೋಡಿದ್ದೇವೆ. ಅಂತಹ ಸಂದರ್ಭಗಳಲ್ಲಿ ರಾಜಕೀಯ ಕಾರ್ಯಕರ್ತರನ್ನು ಬಂಧಿಸಿದಾಗ ಅವರ ಡಿಎನ್‍ಎ ಮಾದರಿಯನ್ನು ಶೇಖರಿಸಿಡಬಹುದು. ಹೀಗೆ ಬೃಹತ್ ದತ್ತಾಂಶ ಯೋಜನೆಯನ್ನು ಸರ್ಕಾರವು ಹಮ್ಮಿಕೊಳ್ಳಲು ಹವಣಿಸಿದೆ. ‘ರಾಷ್ಟ್ರೀಯ ಡಿಎನ್‍ಎ ದತ್ತಾಂಶ ಬ್ಯಾಂಕ್’ ಎಂದು ಕರೆಯಲಾಗುವ ದತ್ತಾಂಶ ಕೋಶದಲ್ಲಿ ಭಾರತೀಯ ಪ್ರಜೆಗಳ ಡಿಎನ್‍ಎ ಮಾಹಿತಿಯನ್ನು ಶೇಖರಿಸುವುದಿದ್ದು, ಇದು ಅಪರಾಧ ಎಸಗುವವರನ್ನು ಗುರುತಿಸಲು ಸಹಾಯಕವಾಗುತ್ತದೆಂದು ಸರ್ಕಾರ ಹೇಳಿಕೊಳ್ಳುತ್ತಿದೆ. ವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಇಂತಹ ಮಸೂದೆ ಜಾರಿಗೆ ಬಂದಲ್ಲಿ ಭಾರತವೂ ಕೂಡ ಪ್ರಜೆಗಳ ಮೇಲೆ ಬೇಹುಗಾರಿಕೆ ನಡೆಸುವಂತಹ ಅಮೇರಿಕಾ ಮತ್ತು ಬ್ರಿಟನ್ ದೇಶಗಳ ಸಾಲಿಗೆ ಸೇರುತ್ತದೆ.

ಕೋಟ್ಯಾಂತರ ವ್ಯಕ್ತಿಗಳ ಕುರಿತಾದ ಮಾಹಿತಿಯನ್ನು ನಿರಂತರವಾಗಿ ಅಮೇರಿಕಾ ಸರ್ಕಾರವು ಹೇಗೆ ಕಲೆಹಾಕುತ್ತಿದ್ದೆಂಬುದನ್ನು ಪ್ರಸಿದ್ದ ಮಾಹಿತಿ ಸೋರಿಕೆದಾರ ಎಡ್ವರ್ಡ್ ಸ್ನೋಡನ್ 2013ರಲ್ಲಿ ಬಹಿರಂಗಪಡಿಸಿದ್ದರು. ಮೊಬೈಲ್ ಪೋನ್ ಬಳಕೆಯಿಂದ ಆರಂಭಿಸಿ ಬಳಕೆದಾರರ ಇಂಟರ್‍ನೆಟ್ ಛಾಟ್ ಗಳನ್ನು ಆಧರಿಸಿ ಅವರ ನೆಲೆ ಗುರುತಿಸಿ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಯೊಂದು ಮಾಹಿತಿ ಮತ್ತು ಕಾರ್ಯದ ನಿಗಾ ಇಟ್ಟು ಅನುಸರಣೆ ಮಾಡುವಂಥಹ ಅತ್ಯಂತ ಶಕ್ತಿಯುತ ತಂತ್ರಜ್ಞಾನಗಳನ್ನು ಅಮೇರಿಕಾ ಮತ್ತು ಬ್ರಿಟನ್ ಸರ್ಕಾರಗಳು ಬಳಸುತ್ತಿರುವುದನ್ನು ಸ್ನೋಡನ್ ಜಗತ್ತಿಗೇ ಬಹಿರಂಗ ಪಡಿಸಿ ಎಚ್ಚರಿಸಿದ್ದರು. ಪ್ರತಿಯೊಬ್ಬ ವ್ಯಕ್ತಿಯ ಡಿಎನ್‍ಎ ವಿವರ ಕಲೆಹಾಕುವ ಕಾರ್ಯವು ಇದಕ್ಕಿಂತಲೂ ಆಘಾತಕಾರಿಯಾಗಿದೆ. ವ್ಯಕ್ತಿಯ ಡಿಎನ್‍ಎ ಅಂಶವು ಸಾಯುವ ತನಕ ಅಥವಾ ಸತ್ತ ನಂತರವೂ ಆ ವ್ಯಕ್ತಿಯಲ್ಲಿಯೇ ಉಳಿದಿರುತ್ತದೆ. ಡಿಎನ್‍ಎ ಒಂದು ಶಾಶ್ವತ ಜೈವಿಕ ಅಂಶವಾಗಿರುವುದರಿಂದ ಒಂದೇ ಒಂದು ಸಲ ವ್ಯಕ್ತಿಯೊಬ್ಬರ ಮಾದರಿ ಸಂಗ್ರಹಿಸಿ ಬೇಹುಗಾರಿಕೆ ಡಾಟಾಬೇಸ್ ನಲ್ಲಿ ಶೇಖರಿಸಿದರೆ ಸಾಕು ಜೀವನಪರ್ಯಂತ ಆ ವ್ಯಕ್ತಿ ಡಾಟಾಬೇಸ್ ಗುರುತಿನಲ್ಲಿರುವಂತಾಗುತ್ತದೆ. ಸರ್ಕಾರದ ಬಳಿ ನಮ್ಮ ವಿಳಾಸ ಸಹಿತ ವ್ಯವಹಾರಿಕ ವಿವರಗಳೆಲ್ಲ ಇರುವಂತೆಯೇ ಶರೀರದ ಒಳಗಿನ ವಿವರಗಳೂ ಸರ್ಕಾರದ ಕೈಸೇರುತ್ತವೆ. ಈ ಕಾಯಿದೆಯ ಕರಡನ್ನು 2012ರಲ್ಲಿ ಯುಪಿಎ ಸರ್ಕಾರವು ಸಿದ್ದಪಡಿಸಿದ್ದರೆ, ಇದನ್ನು ಜಾರಿಗೆ ತರಲು ಪ್ರಸಕ್ತ ಎನ್‍ಡಿಎ ಸರ್ಕಾರವು ವಿಶೇಷ ಆಸ್ಥೆ ವಹಿಸುತ್ತಿದೆ. ಬೃಹತ್ ಮಟ್ಟದಲ್ಲಿ ನಾಗರೀಕರ ಕುರಿತಾದ ಮಾಹಿತಿ ದತ್ತಾಂಶ ಕಲೆಹಾಕಲು ಸರ್ಕಾರಗಳು ವಿಜ್ಞಾನದ ಆವಿಷ್ಕಾರಗಳನ್ನು ಬಳಸಿಕೊಳ್ಳುತ್ತಿವೆ.

ಡಿಎನ್‍ಎ ವಿಜ್ಞಾನ :

ನಮ್ಮ ದೇಹದ ಎಲ್ಲ ಜೀವಕೋಶಗಳಲ್ಲೂ ಅಡಕವಾಗಿರುವ ಮೂಲ ಜೈವಿಕ ಮಾಹಿತಿಯ ಇಟ್ಟಿಗೆಯೇ ಡಿಎನ್‍ಎ ಅರ್ಥಾತ್ ಡಿ ಆಕ್ಸಿ ರೈಬೋ ನ್ಯೂಕ್ಲಿಯಿಕ್ ಆಸಿಡ್ ಎನ್ನಬಹುದು. ಇವು ಪೀಳಿಗೆಯಿಂದ ಪೀಳಿಗೆಗೆ ಗುಣಲಕ್ಷಣಗಳನ್ನು ವರ್ಗಾಯಿಸುವ ವಂಶವಾಹಿ ಜೀವತಂತುಗಳು. ಪ್ರತಿಯೊಬ್ಬ ಮನುಷ್ಯನಲ್ಲಿ ತನ್ನದೇ ವಿಭಿನ್ನ ಗುಣಲಕ್ಷಣಗಳುಳ್ಳ ಡಿಎನ್‍ಎ ಇರುತ್ತದೆ. ಡಿಎನ್‍ಎ ಅಣುಗಳು ನ್ಯೂಕ್ಲಿಯೋಟೈಡ್ ಎಂಬ ರಾಸಾಯನಿಕಗಳಿಂದಾಗಿದ್ದು ನಿರ್ದಿಷ್ಟ ವ್ಯಕ್ತಿಯ ಗುಣಲಕ್ಷಣಗಳನ್ನು ನಿರ್ಧರಿಸುತ್ತವೆ. ಡಿಎನ್‍ಎ ಮಾಹಿತಿಯು ವ್ಯಕ್ತಿಯಿಂದ ವ್ಯಕ್ತಿಗೆ ಸಣ್ಣ ಬದಲಾವಣೆ ಹೊಂದಿರುತ್ತದೆಯಾದ್ದರಿಂದ ಪ್ರತಿ ವ್ಯಕ್ತಿಯಲ್ಲೂ ವಿಭಿನ್ನ ಡಿಎನ್‍ಎ ಮಾಹಿತಿಯಿರುತ್ತದೆ. ಇದರಿಂದಾಗಿಯೇ ಡಿಎನ್‍ಎ ವಿವರವನ್ನು ಡಿಎನ್‍ಎ ಫಿಂಗರ್ ಪ್ರಿಂಟ್ ಎಂದೂ ಕರೆಯುತ್ತಾರೆ. ನ್ಯೂಕ್ಲಿಯೋಟೈಡ್ ಎಂಬ ರಾಸಾಯನಿಕಗಳ ಸರಳ ಸರಣಿಗಳನ್ನು ದಾಖಲು ಮಾಡುವ ಮೂಲಕ ವ್ಯಕ್ತಿಯೊಬ್ಬರ ಡಿಎನ್‍ಎ ಪ್ರೊಫೈಲ್ ಸಿದ್ದಪಡಿಸಲಾಗುತ್ತದೆ.

ಇತ್ತೀಚಿನ ವಿಧಾನದಲ್ಲಿ ವ್ಯಕ್ತಿಯೊಬ್ಬರ ಡಿಎನ್‍ಎ ನಲ್ಲಿ 17 ನಿರ್ದಿಷ್ಟ ನೆಲೆಗಳನ್ನು ಗುರುತಿಸಿ, ಪ್ರತಿಯೊಂದು ಭಾಗದಲ್ಲೂ ನ್ಯೂಕ್ಲಿಯೋಟೈಡ್ ಸರಣಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಇವಿಷ್ಟೂ ನೆಲೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಸಂಪೂರ್ಣ ಭಿನ್ನವಿರುವುದರಿಂದ ಇಬ್ಬರು ವ್ಯಕ್ತಿಗಳ ಒಂದೇ ಸರಣಿಯನ್ನು ಹೊಂದಿರುವ ಸಾ ಧ್ಯತೆ ಒಂದು ಲಕ್ಷ ಕೋಟಿಯಲ್ಲಿ ಒಂದು ಪ್ರಕರಣ ಮಾತ್ರ! ಅಪರಾಧ ನಡೆದ ಸ್ಥಳದಲ್ಲಿ ಅಪರಾಧಿಗಳು ಬಿಟ್ಟು ಹೋಗಿರಬಹುದಾದ ಚರ್ಮ, ರಕ್ತದ ಕಲೆ, ಕೂದಲು, ಜೊಲ್ಲು, ವೀರ್ಯ, ಇತ್ಯಾದಿ ಮಾದರಿಗಳಲ್ಲಿನ ಡಿಎನ್‍ಎ ಯನ್ನು ಅಪರಾಧಿಗಳ ಡಿಎನ್‍ಎ ಜೊತೆ ಹೋಲಿಸಿ ಅಪರಾಧಿಗಳ ಪತ್ತೆ ಹಚ್ಚಲು ಡಿಎನ್‍ಎ ಪ್ರೊಫೈಲಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಯಿತು.

ಈ ತಂತ್ರಜ್ಞಾನದ ದುರ್ಬಳಕೆ ಮತ್ತು ದೋಷಗಳು:

ಡಿಎನ್‍ಎ ಪ್ರೊಫೈಲಿಂಗ್ ತಂತ್ರಜ್ಞಾನದಲ್ಲಿ ದೋಷವಿಲ್ಲದಿದ್ದರೂ, ಈ ತಂತ್ರಜ್ಞಾನವನ್ನು ಬಳಸುವಾಗ ದೋಷಗಳು ಸಂಭವಿಸುವ ಸಾಧ್ಯತೆಗಳಿವೆ. ಮೊದಲಿಗೆ ಡಿಎನ್‍ಎ ಮಾದರಿ ಕಲೆಹಾಕುವಾಗ ಅಪರಾಧಿಗಳ ಡಿಎನ್‍ಎ ಮಾದರಿಗಳು ಮಾತ್ರವೇ ಇರುತ್ತವೆಂದು ಹೇಳಲಾಗದು. ಏಕೆಂದರೆ, ಪ್ರತಿಯೊಂದು ಚಟುವಟಿಕೆಯಲ್ಲೂ ನಾವು ಕೂದಲು, ಉಗುಳು, ಗಾಯದಿಂದಾಗಿ ರಕ್ತ, ಇತ್ಯಾದಿಗಳನ್ನು ಹೊರಚೆಲ್ಲಿತ್ತಿರುತ್ತೇವೆ. ಇದು ನಮ್ಮ ಅರಿವಿಗೇ ಬಾರದೆ ನಡೆಯುತ್ತಿರುತ್ತದೆ. ಅಪರಾಧ ಸ್ಥಳದಲ್ಲಿ ಸಂಶಯ ಪಡುವವರ ಡಿಎನ್‍ಎ ಮಾದರಿಯೂ ಇರಬಹುದು, ಜೊತೆಗೆ ಈ ಘಟನೆಗೆ ಸಂಬಂಧಿಸದೇ ಇರುವವರ ಮಾದರಿಯೂ ಕೂಡ ಇರಬಹುದು. ಹೀಗಾಗಿ ಮಾದರಿ ಕಲೆಹಾಕುವ ಹಂತದಲ್ಲೇ ಮಾದರಿಯು ದೋಷ ಪೂರಿತ ವಾಗಿರುತ್ತದೆ.

ಡಿಎನ್‍ಎ ಸಾಕ್ಷ್ಯವು ದೋಷಪೂರಿತ ಮಾದರಿಯಿಂದಾಗಿ ಹಳಿತಪ್ಪುವ ಸಂಭವವೂ ಇರುವುದನ್ನು ಕೆಲಪ್ರಕರಣಗಳು ತೋರಿಸಿವೆ. ಕಳ್ಳತನ ಮತ್ತು ಕೊಲೆಯಂಥಹ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆನ್ನಬಹುದಾದ ಡಿಎನ್‍ಎ ಪರಿಶೀಲಿಸಿದಾಗ ಸಂಶಯಾಸ್ಪದ ಅಪರಾಧಿಗಳು ಮತ್ತೊಂದು ದೇಶದಲ್ಲಿ ಇರುವುದರ ಕುರಿತು ಆಸ್ಟ್ರಿಯಾ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳ ಪತ್ತೆದಾರಿಗಳು ಒಂದೊಮ್ಮೆ ತಲೆಕೆಡಿಸಿಕೊಂಡಿದ್ದರು. ಆದರೆ ನಂತರ ತಿಳಿದದ್ದು, ಫ್ರಾನ್ಸ್ ದೇಶದ ಹತ್ತಿ ತಯಾರಿಕಾ ಕಾರ್ಖಾನೆಯಿಂದ ಕಾರ್ಮಿಕನ ಡಿಎನ್‍ಎ ಮಾದರಿಯು ಹತ್ತಿಯೊಂದಿಗೆ ಕಲೆತು ಆಸ್ಟ್ರಿಯಾದಲ್ಲಿ ಅಪರಾಧ ನಡೆದ ಸ್ಥಳದಲ್ಲಿ ದೊರೆತು ತನಿಖೆಯನ್ನು ನಿಗೂಢಗೊಳಿಸಿತ್ತು!

ಡಿಎನ್‍ಎ ಮಾದರಿ ಶೇಖರಿಸುವ ಕಾರ್ಯವನ್ನು ಕೇವಲ ಸೀಮಿತ ಪ್ರಕರಣಗಳಲ್ಲಿ ಮಾತ್ರವೇ ಮಾಡದೇ ಇಡೀ ದೇಶದ ಕೋಟ್ಯಾಂತರ ಜನರಿಗೆಲ್ಲ ಅನ್ವಯಿಸಿದಾಗ ತಪ್ಪುಗಳು/ ದೋಷಗಳು ಅಗಾಧ ಸಂಖ್ಯೆಯಲ್ಲಿ ದ್ವಿಗುಣಗೊಳ್ಳುತ್ತವೆ.

ಡಿಎನ್‍ಎ ಮಾದರಿ ಸಂಗ್ರಹಣೆಯ ಉಪಯೋಗ:

ಹೊಸ ಕಾಯಿಲೆಗಳನ್ನು ಕಂಡುಹಿಡಿಯಲು ಡಿಎನ್‍ಎ ಮಾದರಿಗಳ ವಿಶ್ಲೇಷಣೆ ಸಹಾಯಕವಾಗುತ್ತದೆ ನಿಜ. ಉದಾಹರಣೆಗೆ, ಕೆಲವು ಕ್ಯಾನ್ಸರ್‍ಗಳು ಏಕೆ ಬರುತ್ತವೆಂದು ಇನ್ನು ತಿಳಿಯಲಾಗಿಲ್ಲ. ಇದನ್ನು ಪತ್ತೆ ಹಚ್ಚಲು ರೋಗಿಗಳ ಮತ್ತು ಸಂಬಂಧಿಕರ ಡಿಎನ್‍ಎ ವಿಶ್ಲೇಷಣೆ ಮತ್ತು ಸಂಶೋಧನೆ ಅತ್ಯವಶ್ಯ. ಆದರೆ ಪ್ರಸ್ತುತ ಮಸೂದೆಯನ್ನು ಆರೋಗ್ಯ ಸಂಶೋಧನೆಗಾಗಿ ಬಳಸುತ್ತಿಲ್ಲವೆಂಬುದನ್ನು ಗಮನಿಸಬೇಕು.

ಬೇಹುಗಾರಿಕೆ ನಡೆಸಲು ಡಿಎನ್‍ಎ ಪ್ರೊಫೈಲಿಂಗ್ ದುರ್ಬಳಕೆ :

ಡಿಎನ್‍ಎ ಪ್ರೊಫೈಲಿಂಗ್ ತಂತ್ರಜ್ಞಾನವು ವ್ಯಕ್ತಿ ಅಥವಾ ಗುಂಪಿನ ವಿರುದ್ದ ತಾರತಮ್ಯ ಎಸಗಲು ಆಸ್ಪದ ನೀಡದ್ದರಿಂದ ಅದು ತಟಸ್ಥ ವಿಧಾನವೆನಿಸಿದೆ. ಆದರೆ, ಡಿಎನ್‍ಎ ಮಾದರಿಗಳನ್ನು ಸಂಗ್ರಹಿಸುವ ಏಜೆನ್ಸಿಗಳು ಮತ್ತು ಡಿಎನ್‍ಎ ಡಾಟಾಬೇಸ್ ಬಳಸುವವರು ನಿಷ್ಪಕ್ಷಪಾತಿಗಳೇನಲ್ಲ. ಅಪರಾಧ ನಿಯಂತ್ರಿಸುವ ಏಜೆನ್ಸಿಗಳು ಸಾಮಾನ್ಯವಾಗಿ ಪ್ರಭುತ್ವದ ಅಂಗಗಳೇ ಆಗಿವೆ. ಇವು ವರ್ಗ, ಜಾತಿ, ಲಿಂಗ, ಲೈಂಗಿಕತೆ, ಬುಡಕಟ್ಟು, ಇತ್ಯಾದಿ ಆಧಾರದಲ್ಲಿ ಜನತೆಯ ವಿವಿಧ ವಿಭಾಗಗಳ ಮೇಲೆ ಪ್ರಭುತ್ವದ ಪಕ್ಷಪಾತವನ್ನೇ ಅನುಸರಿಸುತ್ತವೆ. ಹೀಗಾಗಿ ಶ್ರೀಮಂತ ಸ್ತರಕ್ಕೆ ಸೇರದ ಸಾಮಾನ್ಯರು ಮತ್ತು ಅತಿಬಡವರ ಮೇಲೆ ಇದನ್ನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಇದರ ಜೊತೆಗೆ ವಿಧಾನದಲ್ಲಿನ ತಪ್ಪುಗಳೂ ಸೇರಿಕೊಂಡರೇ ಅಮಾಯಕರಿಗೆ ಬದುಕು ಸವೆಸುವುದು ಕತ್ತಿಯಂಚಿನ ದಾರಿಯಾಗುತ್ತದೆ.

ಪ್ರಸ್ತುತ ಕೇಂದ್ರ ಸರ್ಕಾರವು ಜಾರಿತರಲು ಉದ್ದೇಶಿಸಿರುವ ಮಸೂದೆಯಲ್ಲಿ ಧರ್ಮ ಮತ್ತು ಜಾತಿಯ ಹಿನ್ನೆಲೆಯನ್ನೂ ಕೂಡ ಕಲೆಹಾಕುವ ಪ್ರಸ್ತಾಪವಿದೆ. ಅಪರಾಧಿಗಳನ್ನು ಪತ್ತೆ ಹಚ್ಚಲು ಡಿಎನ್‍ಎ ಮಾದರಿಗಳು ಮಾತ್ರ ಸಾಕಲ್ಲವೇ? ಕೆಲ ಧರ್ಮ ಮತ್ತು ಜಾತಿಯ ಜನತೆ ಅಪರಾಧಿ ಕೃತ್ಯಗಳಲ್ಲಿ ಹೆಚ್ಚು ಭಾಗಿಯಾಗುತ್ತಾರೆಂದು ಸರ್ಕಾರ ಆಲೋಚಿಸುತ್ತಿದೆಯೇ? ಎಂಬ ಪ್ರಶ್ನೆಗಳು ಮೂಡುವುದು ಸಹಜವೇ.

ಅಲ್ಲದೇ, ಅಪರಾಧ ಸ್ಥಳಗಳಲ್ಲಿ ದೊರೆತ ಡಿಎನ್‍ಎ ಮಾದರಿಗೆ ಹೋಲಿಕೆಯಾಗುವ ಡಿಎನ್‍ಎ ಹೊಂದಿರುವ ವ್ಯಕ್ತಿ ಡಾಟಾಬೇಸ್ ನಲ್ಲಿ ಸಿಗದಿದ್ದಲ್ಲಿ ಅದಕ್ಕೆ ಹತ್ತಿರವಿರುವ ಡಿಎನ್‍ಎ ಹೊಂದಿರುವ ವ್ಯಕ್ತಿಗಳನ್ನು ಅಂದರೆ ಸಂಬಂಧಿಗಳನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಇದಕ್ಕೆ ಮುಂದುವರೆದ ದೇಶಗಳಲ್ಲಿ ‘ಕೌಟುಂಬಿಕ ಡಿಎನ್‍ಎ ಶೋಧನೆ’ ಎನ್ನುತ್ತಾರೆ. ಅಪರಾಧ ಘಟನೆಗೆ ಸಂಬಂಧಪಡದೇ ಇದ್ದರೂ ಪೊಲೀಸರು ವಿಚಾರಣೆ ನಡೆಸುವ, ಕಿರುಕುಳ ನೀಡುವ ಸನ್ನಿವೇಶ ನಿರ್ಮಾಣ ಮಾಡುವುದರಿಂದ ಇದು ಬಡವರು ಮತ್ತು ದಮನಿತರನ್ನು ಹಿಂಸಿಸಲು ಸಹಜವಾಗಿ ಹಾದಿ ಮಾಡಿಕೊಡುತ್ತದೆ.

ಡಾಟಾಬೇಸ್ ನಲ್ಲಿ ಎಲ್ಲರನ್ನೂ ಒಳಗೊಳ್ಳಲು ವ್ಯಾಪಕ ಬಲೆ:

ಈ ಕಾಯಿದೆಯ ವ್ಯಾಪ್ತಿಯು ಕೇವಲ ಅಪರಾಧ ಕಾಯಿದೆಗಳಲ್ಲಿ ಬಂಧಿತರಾಗಿರುವವರ ಡಿಎನ್‍ಎ ಮಾದರಿಗಳನ್ನು ಮಾತ್ರವೇ ಕಲೆಹಾಕಲು ಸೀಮಿತವಾಗಿಲ್ಲ. ಇಡೀ ಜನತೆಯ ಮೇಲೆ ಇದನ್ನು ಪ್ರಯೋಗಿಸಲು ಉದ್ದೇಶಿಸಿರುವುದನ್ನು ಕಾಣಬಹುದಾಗಿದೆ. ಮೊದಲಿಗೆ ಐಪಿಸಿ ದಂಡ ಸಂಹಿತೆ ಮತ್ತು ಕೆಲವು ವಿಶೇಷ ಕಾಯಿದೆಗಳ ಉಲ್ಲಂಘನೆಗಳಿಗೆ ಅನ್ವಯಿಸುತ್ತದೆಂದು ಹೇಳಲಾಗು ತ್ತದೆಯಾದರೂ ಅಂತಿಮವಾಗಿ ವಿಶಾಲ ಜನಸಮೂಹವನ್ನು ಒಳಗೊಳ್ಳುವ ಉದ್ದೇಶವನ್ನು ಈ ಪಟ್ಟಿಯೇ ಹೇಳುತ್ತದೆ: ಅ) ಅನೈತಿಕ ಸಾಗಣೆ (ತಡೆಯುವುದು) ಕಾಯಿದೆ, 1956 ಆ) ಗರ್ಭಿಣಿಯ ವೈದ್ಯಕೀಯ  ಕಾಯಿದೆ, 1971 ಇ) ಪ್ರಸವ-ಪೂರ್ವ ಮತ್ತು ಗರ್ಭ ತಪಾಸಣೆ ವಿಧಾನಗಳು (ಲಿಂಗ ನಿರ್ಧರಣೆ ನಿಷೇಧ) ಕಾಯಿದೆ, 1994 ಈ) ಕೌಟುಂಬಿಕ ಹಿಂಸೆಯಿಂದ ಮಹಿಳೆಯರಿಗೆ ರಕ್ಷಣೆ ಕಾಯಿದೆ, 2005 ಉ) ನಾಗರೀಕ ಹಕ್ಕುಗಳ ರಕ್ಷಣೆ ಕಾಯಿದೆ, 1955 ಊ) ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳನ್ನು ತಡೆಯುವುದು) ಕಾಯಿದೆ, 1989 ಎ) ಮೋಟಾರು ವಾಹನಗಳ ಕಾಯಿದೆ, 1988 ಏ) ಮಂಡಳಿಯು ಸೂಚಿಸಬಹುದಾದ ಇನ್ನಾವುದೇ ಇತರೆ ಕಾಯಿದೆಗಳನ್ನು ಇದರಡಿ ತರಬಹುದಾಗಿದೆ.

ಮಾನವ ಹಕ್ಕುಗಳ ಮೇಲೆ ಧಾಳಿ:

ಇತ್ತೀಚೆಗೆ ಆಧಾರ್ ಕಾರ್ಡ್‍ನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಧೋರಣೆ ಕುರಿತು ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ‘ಖಾಸಗಿ ಸ್ವಾತಂತ್ರ್ಯವು ಪ್ರಜೆಗಳ ಮೂಲಭೂತ ಹಕ್ಕಲ್ಲ’ ಎಂದು ಕೇಂದ್ರ ಸರ್ಕಾರ ತಿಳಿಸಿರುವುದನ್ನು ನೆನಪಿಸಿಕೊಳ್ಳಬಹುದು. ಡಿಎನ್‍ಎ ಮಾದರಿಗಳು ಸೆಕ್ಯುರಿಟಿ ಏಜೆನ್ಸಿಗಳ ಕೈತಲುಪುವುದರಿಂದ, ಇದು ಸೋರಿಕೆಯಾಗಿ ದುರ್ಬಳಕೆಯಾಗುವ ಸಾಧ್ಯತೆಗಳಿರುತ್ತವೆ. ಅಪರಾಧ ಶೋಧನೆಯಲ್ಲದೆ ಇದರ ವ್ಯಾಪ್ತಿ ವಿಶಾಲವಾಗಿದೆ: ಅಪಘಾತ ಅಥವಾ ದುರ್ಘಟನೆಗೀಡಾದ ಗಾಯಾಳುಗಳನ್ನು ಕಂಡುಹಿಡಿಯಲು, ಕಾಣೆಯಾದ ವ್ಯಕ್ತಿಗಳನ್ನು ಗುರುತಿಸಲು, ಮತ್ತು ಸಿವಿಲ್ ವ್ಯಾಜ್ಯ ಮತ್ತು ಇತರೆ ಉಲ್ಲಂಘನೆಗಳು. ಡಿಎನ್‍ಎ ಮಾಹಿತಿಯನ್ನು ಜನತೆಯ ಅಂಕಿಅಂಶಗಳನ್ನು ಸಿದ್ದಪಡಿಸಲು, ಸಂಶೋಧನೆ, ತಂದೆತಾಯಿ ವ್ಯಾಜ್ಯ, ಪುನರ್-ಉತ್ಪಾದನಾ ತಂತ್ರಜ್ಞಾನ ಮತ್ತು ವಲಸೆ, ಇತ್ಯಾದಿಗಳಲ್ಲಿ ಬಳಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಉದ್ದೇಶಿತ ಡಾಟಾಬೇಸ್ ಕೇವಲ ಅಪರಾಧವನ್ನು ಹತ್ತಿಕ್ಕಲು ಬಳಸುವ ಮುಗ್ಧ ಸಾಧನವೇನು ಅಲ್ಲ. ಇದು ನಾಗರೀಕರ ಮಾನವ ಹಕ್ಕುಗಳು ಮತ್ತು ಖಾಸಗಿ ಸ್ವಾತಂತ್ರ್ಯವನ್ನು ದಮನ ಮಾಡುವ ಬೇಹುಗಾರಿಕೆ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದಾಗಿದೆ.

ಬೇಹುಗಾರಿಕೆಗಾಗಿ ಪರಿಣಾಮಕಾರಿ ಅಸ್ತ್ರ:

ಇತ್ತೀಚಿನ ವರ್ಷಗಳಲ್ಲಿ ಜನತೆಯ ಮೇಲೆ ಬೇಹುಗಾರಿಕೆ ನಡೆಸಲು ಭಾರತ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ದೊರೆತರೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗೀತನದ ಹಕ್ಕನ್ನು ದಮನ ಮಾಡಲು ಸರ್ಕಾರದ ಬತ್ತಳಿಕೆಯಲ್ಲಿ ಈ ಕಾಯಿದೆಯು ಪರಿಣಾಮಕಾರಿ ಅಸ್ತ್ರವಾಗಲಿದೆ. ಈ ಕುರಿತು ಅಮೇರಿಕಾದ ಜವಾಬ್ದಾರಿಯುತ ತಳಿಶಾಸ್ತ್ರ ಪರಿಷತ್ತು ಸಂಸ್ಥೆಯ ಅಧ್ಯಕ್ಷರಾದ ಜೆರೆಮಿ ಗ್ರುಬರ್ ಹೇಳುತ್ತಾರೆ: “ಭಾರತ ಹೊರತುಪಡಿಸಿದರೆ, ಯಾವುದೇ ದೇಶವು ಮುಗ್ಧ ಪ್ರಜೆಗಳ ಡಿಎನ್‍ಎ ದತ್ತಾಂಶವನ್ನು ಇತರೆ ಕಾನೂನುಗಳ ಪಾಲನೆ ಜೊತೆಗೆ ಮಿಶ್ರಣಗೊಳಿಸ ಹೊರಟಿಲ್ಲ. ಕೇವಲ ಕೆಲವೇ ಸಂಖ್ಯೆಯ ಅಪರಾಧಗಳಲ್ಲಿ ಡಿಎನ್‍ಎ ತಪಾಸಣೆ ಅವಶ್ಯವಿರುವುದರಿಂದ, ಅವಶ್ಯವಿಲ್ಲದ ಅಪರಾಧ ಪ್ರಕರಣಗಳಲ್ಲೂ ಭಾರತ ಸರ್ಕಾರ ಡಿಎನ್‍ಎ ಸಾಕ್ಷ್ಯ ಸಂಗ್ರಹಿಸಿದರೆ ಜನತೆಗೆ ಸುರಕ್ಷತೆ ಇರುವುದಿಲ್ಲ – ಅದರ ಪ್ರಮುಖ ಉದ್ದೇಶ ಬೇಹುಗಾರಿಕೆ ನಡೆಸುವುದಾಗಿದೆ.”

ತಜ್ಞರ ಸಮಿತಿಯ ಸದಸ್ಯರಿಂದಲೇ ಮಸೂದೆ ವಿರೋಧ :

ಮಾನವ ಡಿಎನ್‍ಎ ಪ್ರೊಪೈಲಿಂಗ್ ಮಸೂದೆ ಯನ್ನು ಪರಾಮರ್ಶಿಸಲು ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯಲ್ಲಿ ಕಾನೂನು ತಜ್ಞರಾದ ಉಷಾ ರಾಮನಾಥನ್ ರವರು ಇನ್ನು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ; “ಡಿಎನ್‍ಎ ಪ್ರೊಫೈಲಿಂಗ್ ಮಂಡಳಿ ರಚನೆಯಲ್ಲಿ ಕಾನೂನು ಜಾರಿಗೊಳಿಸುವ ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳು, ವಿಜ್ಞಾನಿಗಳು ಮತ್ತು ಡಾಟಾಬೇಸ್ ಬಳಸುವ ಸಂಸ್ಥೆಗಳ ಪ್ರತಿನಿಧಿಗಳೇ ತುಂಬಿ ಹೋಗಿದ್ದಾರೆ. ಇದರಿಂದಾಚೆಗೆ ಬೇರೆಯವರಿಗೆ ಪ್ರಾತಿನಿಧ್ಯವೇ ಇಲ್ಲ. ಅಲ್ಲದೇ, ಹೈದರಾಬಾದಿನ ಫಿಂಗರ್‍ಪ್ರಿಂಟಿಂಗ್ ಮತ್ತು ತಪಾಸಣಾ ಕೇಂದ್ರವನ್ನು ಈ ಕಾಯಿದೆಯಡಿ ನಿಯಂತ್ರಣ ಸಂಸ್ಥೆಯೆಂದು ಗುರುತಿಸಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಿದೆ” ಎನ್ನುತ್ತಾರೆ.

Advertisements

‘ಫ್ರೀಬೇಸಿಕ್’: `ಫ್ರೀ’ನ್ನೂ ಇಲ್ಲ, `ಬೇಸಿಕ್’ ಕೂಡ ಇಲ್ಲ ಫೇಸ್‍ಬುಕ್‍ನ ದಿಕ್ಕುತಪ್ಪಿಸುವ ಜಾಹೀರಾತುಗಳು :

ಸಂಪುಟ 10 ಸಂಚಿಕೆ 2 ಜನವರಿ 10 – 2016    – ಹರ್ಷ

‘ಗಣೇಶ್ ಎಂಬ ಬಡ ರೈತ ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಒಳ್ಳೆಯ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’

‘ರಾಹುಲ್ ಎಂಬ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯು ಉಚಿತ ಇಂಟರ್‍ನೆಟ್ ಸೌಲಭ್ಯ ಪಡೆದದ್ದರಿಂದ ಉತ್ತಮ ಸಂಶೋಧಕನಾಗುತ್ತಿದ್ದಾನೆ. ಆದ್ದರಿಂದ ಫೇಸ್‍ಬುಕ್ ಕಂಪನಿಯ ಫ್ರೀಬೇಸಿಕ್ ನ್ನು ಬೆಂಬಲಿಸಿ’

jpg

ಇಂತಹ ಫೇಸ್‍ಬುಕ್ ಕಂಪನಿಯ ಹತ್ತಲವು ಜಾಹೀರಾತುಗಳು ಜನತೆಯ ಕಣ್ಣು ಕಿವಿಗಳ ಮೇಲೆ ದಾಂಗುಡಿಯಿಡುತ್ತಿವೆ. ಮತ್ತೊಂದೆಡೆ, ಫ್ರೀಬೇಸಿಕ್ ಯೋಜನೆಯು ಬಡ ರೈತರನ್ನು ಉದ್ದಾರ ಮಾಡುವುದಿರಲಿ, ಅದೊಂದು ಡಿಜಿಟಲ್ ಆತ್ಮಹತ್ಯೆಗೆ ಕಾರಣವಾಗುತ್ತದೆಂದು ನೆಟ್ ಬಳಕೆದಾರರು ಫೇಸ್‍ಬುಕ್ ಕಂಪನಿಯ ಹುನ್ನಾರದ ವಿರುದ್ದ ಆನ್‍ಲೈನ್ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ವಿಶ್ವದ ಅತಿ ದೊಡ್ಡ ಜಾಲತಾಣಗಳ ಕಂಪನಿಗಳ ಪೈಕಿ ಫೇಸ್‍ಬುಕ್ ಕೂಡ ಒಂದು. ಇತ್ತೀಚೆಗೆ ಈ ಕಂಪನಿ ದೇಶದ ಇಂಗ್ಲೀಷ್ ಮತ್ತು ಎಲ್ಲ ರಾಜ್ಯದ ಭಾಷೆಗಳ ದಿನಪತ್ರಿಕೆಗಳಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡಿ ಜಾಹೀರಾತುಗಳನ್ನು ಪ್ರಕಟಿಸಿ ಜನರ ಗಮನಸೆಳೆಯುತ್ತಿದೆ. ಅದು ಜನರ ದಿಕ್ಕುತಪ್ಪಿಸುತ್ತಿದೆ ಎಂದು ಹೇಳುವುದು ಸರಿಯಾಗುತ್ತದೆ! ತಾನು ‘ಫ್ರೀಬೇಸಿಕ್’ ಹೆಸರಿನಲ್ಲಿ ಭಾರತ ದೇಶದ ಬಡವರಿಗೆ ಇಂಟರ್‍ನೆಟ್ ಸೌಲಭ್ಯವನ್ನು ಉಚಿತವಾಗಿ ಕೊಡಲು ಸಿದ್ದವಿರುವುದಾಗಿಯೂ, ಇದಕ್ಕೆ ಎಲ್ಲರೂ ಬೆಂಬಲ ಕೊಡಬೇಕೆಂದು ಜಾಹೀರಾತಿನಲ್ಲಿ ಕೋರಿಕೊಂಡಿದೆ. ಅಲ್ಲದೇ, ಜಾಲದಲ್ಲಿ ಸಮಾನತೆ ಪರವಾಗಿರುವ ಹೋರಾಟಗಾರರು ಇದನ್ನು ವಿರೋಧಿಸುತ್ತಿದ್ದು, ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆಂದೂ ಹೇಳಿಕೊಳ್ಳುತ್ತಿದೆ. ಫೇಸ್‍ಬುಕ್ ಕಂಪನಿಯ ಜಾಹೀರಾತಿಗೆ ದೇಶದ ಸಾಮಾನ್ಯ ವಿದ್ಯಾವಂತರಷ್ಟೇ ಅಲ್ಲ ವಿಶ್ವವಿದ್ಯಾನಿಲಯದ ಉಪಕುಲಪತಿಗಳಂತಹ ವ್ಯಕ್ತಿಗಳೇ ಮರುಳಾಗಿ ಬೆಂಬಲ ನೀಡಿದ್ದಾರೆ!

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಫೇಸ್‍ಬುಕ್ ಕಂಪನಿಯ ಯೋಜನೆಗೆ ಅಸ್ತು ಎನ್ನಬೇಕಾದರೆ, ಆನ್‍ಲೈನ್ ಮೂಲಕ ನೆಟ್ ಬಳಕೆದಾರರು ಗರಿಷ್ಟ ಇ-ಮೇಲ್ ಗಳನ್ನು ಕಳುಹಿಸಿ ಬೆಂಬಲ ಪಡೆಯಬೇಕೆಂದು ಹೇಳಿದೆ. ಇದಕ್ಕಾಗಿ ಫೇಸ್‍ಬುಕ್ ಕಂಪನಿಯು ಕೋಟ್ಯಾಂತರ ಹಣ ವೆಚ್ಚ ಮಾಡಿ ಜನಸಾಮಾನ್ಯರನ್ನು ದಿಕ್ಕುತಪ್ಪಿಸಿ ಬೆಂಬಲ ಪಡೆಯುತ್ತಿದೆ. ಇದೇ ವೇಳೆ ಫ್ರೀ ಸಾಫ್ಟ್‍ವೇರ್ ಮೂವ್‍ಮೆಂಟ್ ಇಂಡಿಯಾ ದಂತಹ ಅನೇಕ ಸಂಘಟನೆಗಳು ಫೇಸ್‍ಬುಕ್ ಕಂಪನಿಯ ಯೋಜನೆಗೆ ಬೆಂಬಲ ನೀಡಬಾರದೆಂದು ದೇಶವ್ಯಾಪಿ ಆನ್‍ಲೈನ್ ಆಂದೋಲನ ನಡೆಸಿದ್ದಾರೆ. ಅಲ್ಲದೇ, ಹೈದರಾಬಾದ್, ಚೆನ್ನೈ, ಬೆಂಗಳೂರು ಇತ್ಯಾದಿ ನಗರಗಳಲ್ಲಿ ಧರಣಿ, ಪ್ರತಿಭಟನೆ ನಡೆಸಿದ್ದಾರೆ.

ಫ್ರೀ ಬೇಸಿಕ್ಸ್ ಯೋಜನೆ ಕಪಟತನ:

ಹೀಗಾಗಿ ಫೇಸ್‍ಬುಕ್ ನ ಕಪಟತನವನ್ನು ಅರಿಯಲು, ಮೊದಲಿಗೆ ಇಂಟರ್‍ನೆಟ್ ಅಥವಾ ಅಂತರ್ಜಾಲ ಕಾರ್ಯನಿರ್ವಹಿಸುವ ಬಗೆಯನ್ನು ಅರಿಯಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಂತೇ ಇಂಟರ್‍ನೆಟ್ ಕೂಡ ಒಂದು ರೀತಿ ಡಿಜಿಟಲ್ ಹೈವೇ. ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಬೇಕಾದರೆ (ಅದು ಕಾರು, ಸ್ಕೂಟರ್, ಬಸ್ಸು, ಏನೇ ಇರಲಿ) ನಾವು ಟೋಲ್ ಶುಲ್ಕ ಪಾವತಿಸಿ ಪಯಣಿಸುತ್ತೇವೆ. ಹೆದ್ದಾರಿಯನ್ನು ಪ್ರವೇಶಿಸಿದ ಮೇಲೆ ನಾವು ಯಾವುದೇ ಸ್ಥಳಕ್ಕಾಗಲಿ, ಹೋಟೆಲ್ಲಿಗಾಗಲಿ, ಊರಿಗಾಗಲಿ, ಹೋಗಲು ಸ್ವತಂತ್ರರು. ಆದರೆ, ಫೇಸ್ ಬುಕ್ ಕಂಪನಿಯು ಇಂಟರ್‍ನೆಟ್ ವಿಷಯದಲ್ಲಿ ಮಾಡಹೊರಟಿರುವುದೇನೆಂದರೆ, ಪ್ರಯಾಣಿಕರು ಯಾವ ಸ್ಥಳ, ಹೋಟೆಲ್, ಅಥವಾ ಊರಿಗೆ ಹೋಗಬೇಕೆಂದು ತಾನೇ ನಿರ್ಧರಿಸಲು ಹೊರಟಿರುವುದು. ಇಂಟರ್‍ನೆಟ್ ಸೌಲಭ್ಯಕ್ಕೆ ಅಗತ್ಯವಿರುವ ಹಣವನ್ನು (ಅಂದರೆ ಟೋಲ್ ಶುಲ್ಕ ಎಂದಿಟ್ಟುಕೊಳ್ಳಿ) ತಾನೇ ಪಾವತಿಸುತ್ತೇನೆ, ಆಮೂಲಕ ಐದಾರು ಅಂತರ್ಜಾಲ ತಾಣಗಳನ್ನು ಮಾತ್ರ ಬಳಸುವ ಸೌಲಭ್ಯವನ್ನು ತಾನು ನೀಡುತ್ತೇನೆ ಎನ್ನುತ್ತಿದೆ ಫೇಸ್‍ಬುಕ್. ಇದರಿಂದ ಇಂಟರ್‍ನೆಟ್ ಎಂದರೆ ಕೇವಲ ಐದಾರು ಅಂತರ್ಜಾಲ ತಾಣಗಳು ಮಾತ್ರವೇ, ತನ್ನ ಕಂಪನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವ ತಾಣಗಳು ಮಾತ್ರವೇ ಆಗಿಬಿಡುವ ಅಪಾಯವಿದೆ.

ಆದರೆ, ಇಂಟರ್‍ನೆಟ್‍ನ ಪೂರ್ಣ ಸಾಮಥ್ರ್ಯ ಇರುವುದು: ಕಂಪ್ಯೂಟರ್ ಮತ್ತು ಇಂಟರ್‍ನೆಟ್ ಸೌಲಭ್ಯ ಹೊಂದಿರುವ ಯಾರೇ ಆಗಲಿ ಕೇವಲ ಗ್ರಾಹಕರಾಗದೇ, ಸುದ್ದಿ ಮತ್ತು ಅನಿಸಿಕೆಗಳನ್ನು ಉತ್ಪಾದಿಸಲು ಇಂಟರ್‍ನೆಟ್ ಅವಕಾಶ ಕಲ್ಪಿಸುತ್ತದೆ. ಉದಾಹರಣೆಗೆ, ಯೂಟ್ಯೂಬ್ ಮತ್ತು ವೀಡಿಯೋ ಕ್ಯಾಮೆರಾವನ್ನು ಬಳಸಿಕೊಂಡು ಒಂದು ಟೆಲಿವಿಷನ್ ಸ್ಟೇಷನ್ ಶುರು ಮಾಡಬಹುದು! ಇಂಟರ್‍ನೆಟ್‍ನಲ್ಲಿ ಸುಮಾರು 100 ಕೋಟಿ ಜಾಲತಾಣಗಳಿದ್ದು, ಅದರಲ್ಲಿ 8.50 ಲಕ್ಷ ಕ್ರಿಯಾಶೀಲತೆಯಿಂದಿವೆ. ಇವೆಲ್ಲಾ ಜಾಲತಾಣಗಳ ವೇಗವನ್ನು ಕಡಿಮೆಗೊಳಿಸಿ, ಜನಸಾಮಾನ್ಯರನ್ನು ಕೇವಲ ಐದಾರು ಜಾಲತಾಣಗಳ ದಾಸರನ್ನಾಗಿ ಮಾಡುವ ಹುನ್ನಾರ ಫೇಸ್‍ಬುಕ್ ನದು. ಎಲ್ಲರಿಗೂ ಬೇಕಾಗಿರುವ ‘ಪ್ರಾಥಮಿಕ’ (‘ಬೇಸಿಕ್ಸ್’) ಜಾಲತಾಣಗಳು ಇವೆಯೇ? ಒಬ್ಬ ರೈತ, ವಿದ್ಯಾರ್ಥಿ, ಮಹಿಳೆಗೆ ಬೇಕಾದ ‘ಪ್ರಾಥಮಿಕ’ (‘ಬೇಸಿಕ್ಸ್’) ಜಾಲತಾಣಗಳು ಒಂದೆಯೇ? ಇದರ ನಿರ್ಣಯವನ್ನು ಫೇಸ್ ಬುಕ್ ಗೆ ಮಾತ್ರವಲ್ಲ ಯಾರಿಗೂ ಬಿಡಲು ಕೂಡದು. ಅದು ಅವರ ವೈಯಕ್ತಿಕ ನಿರ್ಣಯ ಆಗಬೇಕು.

‘ಫ್ರೀ ಬೇಸಿಕ್ಸ್’ನಲ್ಲಿರುವ ‘ಫ್ರೀ” (ಉಚಿತ)ವೂ ನಿಜವಲ್ಲ. ಫೇಸ್ ಬುಕ್ ಗ್ರಾಹಕರಿಗೆ ‘ಫ್ರೀ’ ಕೊಟ್ಟು ನಷ್ಟ ಮಾಡಿಕೊಳ್ಳುತ್ತಿಲ್ಲ. ಫೇಸ್ ಬುಕ್ ಜಾಹಿರಾತುಗಳ ಆದಾಯ ಮಾತ್ರವಲ್ಲ, ಅದು ಆಯ್ಕೆ ಮಾಡುವ ಐದಾರು ಜಾಲತಾಣಗಳಿಂದಲೂ ಹಣ ವಸೂಲಿ ಮಾಡುತ್ತದೆ. ಗ್ರಾಹಕರು ಸಹ ಅವರು ಕೊಡುವ ‘ಪ್ರಾಥಮಿಕ’ ಜಾಲತಾಣಗಳು ಸಾಕಾಗದೆ ದುಬಾರಿ ಬೆಲೆ ಕೊಟ್ಟು ಬೇರೆ ಜಾಲತಾಣಗಳನ್ನು ನೋಡುತ್ತಾರೆ.
ಹೀಗೆ ಫೇಸ್ ಬುಕ್ ನ ‘ಫ್ರೀ ಬೇಸಿಕ್ಸ್’ ‘ಫ್ರೀ”ನೂ ಅಲ್ಲ. ‘ಬೇಸಿಕ್ಕೂ’ ಅಲ್ಲ.

‘ಜಾಲದಲ್ಲಿ ಸಮಾನತೆ’ಯ ಪ್ರಾಮುಖ್ಯತೆ:

‘ಜಾಲದಲ್ಲಿ ಸಮಾನತೆ’ ಅಥವಾ ‘Net Neutrality’ ಸಮಸ್ಯೆಯು ಬಹಳ ಸಂಕೀರ್ಣ ವಿಷಯದಂತೆಯೂ, ಕೇವಲ ನೆಟ್ ಬಳಕೆದಾರರಿಗೆ ಮಾತ್ರವೇ ಸಂಬಂಧಿಸಿರುವಂತೆಯೂ ಮೇಲ್ನೋಟಕ್ಕೆ ಕಾಣುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇಂಟರ್ ನೆಟ್ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಕಾಳಗದ ರಣಭೂಮಿಯೇ ‘ಜಾಲದಲ್ಲಿ ಸಮಾನತೆ’ ಎಂಬ ಪರಿಕಲ್ಪನೆ. ಅಂದರೆ, ಭೌತಿಕ ನೆಟ್‍ವರ್ಕ್‍ಗಳ ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ನೆಟ್‍ವರ್ಕ್‍ಗಳ ಮೇಲೆ ಹರಿಯುವ ಇಂಟರ್‍ನೆಟ್ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು. ಇದು ತಾರತಮ್ಯ-ರಹಿತ ತತ್ವವಾಗಿದ್ದು, ತಂತಿಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಟೆಲಿಕಾಂ ಕಂಪನಿಗಳು ಅಥವಾ ತರಂಗಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಮೊಬೈಲ್ ಕಂಪನಿಗಳು ಬಳಕೆದಾರರದಿಂದ ಅಗಾಧ ಪ್ರಮಾಣದ ಶುಲ್ಕ ವಿಧಿಸುವುದನ್ನು ತಡೆಯುತ್ತದೆ. ಇದಕ್ಕಾಗಿ: ಎಲ್ಲಾ ಜಾಲ ತಾಣ ಬಳಸುವುದಕ್ಕೂ ಸಮಾನ ಅವಕಾಶ, ಒಂದೇ ತೆರನಾದ ವೇಗ, ಮತ್ತು ಒಂದೇ ದತ್ತಾಂಶ ವೆಚ್ಚ ಇರಬೇಕು. ಜಾಲದಲ್ಲಿ ಸಮಾನತೆ ಎಂದರೆ, ಟೆಲಿಕಾಂ ಕಂಪನಿಗಳಿಗೆ ವೆಬ್ ಸೈಟ್ ಹೊಂದಿರುವ ಕಂಪನಿಗಳು ಹಣ ನೀಡಲಿ ಅಥವಾ ನೀಡದಿರಲಿ, ಎಲ್ಲ ವೆಬ್ ಸೈಟ್ ಡೌನ್ ಲೋಡ್ ವೇಗ ಒಂದೇ ಇರಬೇಕು.

ಈ ಹಿನ್ನೆಲೆಯಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್ ನೆಟ್ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್ ನೆಟ್ ಸೇವೆಗಳು ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.

ಅಂತರ್ಜಾಲದಲ್ಲಿ ಸಮಾನತೆಗಾಗಿ ನೆಟ್ ಬಳಕೆದಾರರು & ದೈತ್ಯ ಕಂಪನಿಗಳ ನಡುವೆ ಹಣಾಹಣಿ

 

ಜ್ಞಾನ ವಿಜ್ಞಾನ – ಜಯ, ಪುಟ-9 ಸಂಚಿಕೆ-32, 02 ಆಗಸ್ಟ್ 2015

This slideshow requires JavaScript.

ಹಲವಾರು ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಮಾತ್ರವಲ್ಲದೇ ಸಮವಸ್ತ್ರ, ಪ್ರತ್ಯೇಕ ಟ್ಯೂಷನ್, ಕ್ರೀಡಾ ತರಬೇತಿ, ಇತ್ಯಾದಿ ಗಳಿಗೆಲ್ಲ ಪ್ರತ್ಯೇಕ ಶುಲ್ಕಗಳಿವೆ. ಆ ಶುಲ್ಕವನ್ನು ಕಟ್ಟಲು ಒಪ್ಪುವವರಿಗೆ ಮಾತ್ರವೇ ಪ್ರವೇಶ ನೀಡುತ್ತವೆ. ಇಲ್ಲದಿದ್ದಲ್ಲಿ, ಪ್ರವೇಶ ನಿರಾಕರಿಸುವುದು ಸರ್ವೇ ಸಾಮಾನ್ಯವಾಗಿದೆ.

ಇಂಥಹ ಪರಿಸ್ಥಿತಿ, ಜಾಲದಲ್ಲಿ ಸಮಾನತೆ ಇಲ್ಲವಾದಾಗ ನೆಟ್ ಬಳಕೆದಾರರಿಗೂ ಬರುವ ದಿನಗಳು ದೂರವಿಲ್ಲ. ಇದರ ಪ್ರಾಮುಖ್ಯತೆ ಬಗ್ಗೆ ಹೇಳುತ್ತಾ ’ಜಾಲದಲ್ಲಿ ಸಮಾನತೆ’ಗಾಗಿ ನಡೆಸುವ ಹೋರಾಟವು ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಯುದ್ದಗಳಲ್ಲೇ ಪ್ರಮುಖವಾದದ್ದು ಎನ್ನುತ್ತಾನೆ ಅಮೇರಿಕಾದ ಪ್ರಸಿದ್ದ ಮಾಧ್ಯಮ ಚಿಂತಕ ರಾಬರ್ಟ್ ಮ್ಯಾಚೆಸ್ನಿ.

’ಏರ್‌ಟೆಲ್ ಝೀರೋ’ ಎಂಬ ಯೋಜನೆಯಡಿ ಬಳಕೆದಾರರಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ಒದಗಿಸುವುದಾಗಿ ಮತ್ತು ದತ್ತಾಂಶ ವರ್ಗಾವಣೆಗಾಗಿ ವೆಚ್ಚವನ್ನು ಇಂಟರ್ನೆಟ್ ಕಂಪನಿಗಳಿಂದ ಪಡೆಯುವುದಾಗಿ ಇತ್ತೀಚೆಗೆ ಏರ್‌ಟೆಲ್ ಕಂಪನಿಯು ಹೆಜ್ಜೆ ಹಾಕಿತ್ತು! ಇದು ಮೇಲ್ನೋಟಕ್ಕೆ ಉಚಿತ ಸೇವೆಯಂತೆ ಕಾಣುವುದರಲ್ಲಿ ಸಂದೇಹವೇನು ಇಲ್ಲ. ಆದರೆ, ಏರ್‌ಟೆಲ್ ನಂತಹ ಟೆಲಿಕಾಂ ಕಂಪನಿಗಳು ದೈತ್ಯ ಇಂಟರ್ನೆಟ್ ಕಂಪನಿಗಳ ಜೊತೆ ಸೇರಿ ಲಾಭಕ್ಕಾಗಿ ಇಂಟರ್ನೆಟ್ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳುವುದರ ವಿರುದ್ದ ಲಕ್ಷಾಂತರ ಇಂಟರ್ನೆಟ್ ಬಳಕೆದಾರರು ಮತ್ತು ಸ್ವಾತಂತ್ರ್ಯ ಪ್ರೇಮಿಗಳು ಇದನ್ನು ಪ್ರತಿಭಟಿಸಿದರು. ಲಕ್ಷಾಂತರ ಬಳಕೆದಾರರು ಟೆಲಿಕಾಂ ಪ್ರಾಧಿಕಾರಕ್ಕೆ ಇ-ಮೇಲ್ ನಲ್ಲಿ ಆಕ್ಷೇಪಣೆ ಕಳುಹಿಸಿದರು. ಇದರಿಂದ ಸದ್ಯಕ್ಕೆ ಏರ್‌ಟೆಲ್ ಕಂಪನಿಯು ನಿಧಾನವಾಗಿ ಹಿಂದೆ ಸರಿದಂತೆ ಮಾಡಿದೆ.

’ಜಾಲದಲ್ಲಿ ಸಮಾನತೆ’ ಅಥವಾ ‘Net Neutrality’ ಸಮಸ್ಯೆಯು ಬಹಳ ಸಂಕೀರ್ಣ ವಿಷಯದಂತೆಯೂ, ಕೇವಲ ನೆಟ್ ಬಳಕೆದಾರರಿಗೆ ಮಾತ್ರವೇ ಸಂಬಂಧಿಸಿರುವಂತೆಯೂ ಮೇಲ್ನೋಟಕ್ಕೆ ಕಾಣುತ್ತಿದೆ. ಇಲ್ಲಿ ಗಮನಿಸಬೇಕಾದ  ಅಂಶವೆಂದರೆ, ಇಂಟರ್ ನೆಟ್ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಕಾಳಗದ ರಣಭೂಮಿಯೇ ’ಜಾಲದಲ್ಲಿ ಸಮಾನತೆ’ ಎಂಬ ಪರಿಕಲ್ಪನೆ. ಅಂದರೆ, ಭೌತಿಕ ನೆಟ್‌ವರ್ಕ್‌ಗಳ ಮಾಲೀಕತ್ವ ಹೊಂದಿರುವವರು ಅಥವಾ ನಿಯಂತ್ರಿಸುತ್ತಿರುವವರು, ಆ ನೆಟ್‌ವರ್ಕ್‌ಗಳ ಮೇಲೆ ಹರಿಯುವ ಇಂಟರ್‌ನೆಟ್ ಮುಖೇನಾ ಒದಗಿಸಲಾಗುವ ವಿವಿಧ ರೀತಿಯ ಸೇವೆಗಳು ಅಥವಾ ಜಾಲತಾಣಗಳ ನಡುವೆ ತಾರತಮ್ಯ ಮಾಡಬಾರದು. ಇದು ತಾರತಮ್ಯ-ರಹಿತ ತತ್ವವಾಗಿದ್ದು, ತಂತಿಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಟೆಲಿಕಾಂ ಕಂಪನಿಗಳು ಅಥವಾ ತರಂಗಗಳ ಮೇಲೆ ಏಕಸ್ವಾಮ್ಯ ಹೊಂದಿರುವ ಮೊಬೈಲ್ ಕಂಪನಿಗಳು ಬಳಕೆದಾರರದಿಂದ ಅಗಾಧ ಪ್ರಮಾಣದ ಶುಲ್ಕ ವಿಧಿಸುವುದನ್ನು ತಡೆಯುತ್ತದೆ.

ಇಂಟರ್‌ನೆಟ್ ಎಂದರೆ ಪರಸ್ಪರ ಸಂಪರ್ಕದಲ್ಲಿರುವ ಕಂಪ್ಯೂಟರುಗಳ ಜಾಲದ ಮುಖೇನಾ ಹರಿವ ದತ್ತಾಂಶ ಸಂವಹನ ವ್ಯವಸ್ಥೆ. ಕಂಪ್ಯೂಟರುಗಳ ನಡುವಿನ ಜಾಲವನ್ನು ಆಪ್ಟಿಕಲ್ ಫೈಬರ್‌ನಿಂದ ಸಂಪರ್ಕ ಕಲ್ಪಿಸಲಾಗುತ್ತದೆ. ತಂತುರಹಿತ ವ್ಯವಸ್ಥೆಯಲ್ಲಿ ತರಂಗಗಳ ಮೂಲಕ ಸಾಧ್ಯವಾಗುತ್ತದೆ. ಜಾಲ ವ್ಯವಸ್ಥೆಯ ಮೂಲಸೌಲಭ್ಯವನ್ನು ಬಿಎಸ್‌ಎನ್‌ಎಲ್, ಏರ್‌ಟೆಲ್ ನಂತಹ ಟೆಲಿಕಾಂ ಕಂಪನಿಗಳು ನಿರ್ವಹಿಸಿದರೆ, ಈ ಜಾಲದಲ್ಲಿ ಹರಿದಾಡುವ ದತ್ತಾಂಶವನ್ನು ಸೃಷ್ಟಿಸಿ ನಿರ್ವಹಿಸುವವರು ಗೂಗಲ್, ಫೇಸ್‌ಬುಕ್‌ನಂಥ ದೈತ್ಯ ಕಂಪನಿಗಳು. ದತ್ತಾಂಶ ಸೃಷ್ಟಿಯಲ್ಲಿ ಜಾಲತಾಣಗಳ ಮೂಲಕ ಜನ ಸಾಮಾನ್ಯರೂ ದೊಡ್ಡ ಪ್ರಮಾಣದಲ್ಲಿ ತೊಡಗಿದ್ದಾರೆ.

ಜಾಲದಲ್ಲಿ ಸಮಾನತೆ ಎಂದರೇನು?

ಟೆಲಿಕಾಂ ಆಪರೇಟರ್‌ಗಳು ಮತ್ತು ಇಂಟರ್ ನೆಟ್ ಸೇವಾ ಪೂರೈಕೆದಾರ ಕಂಪನಿಗಳು ನಿಮಗೆ ಇಂಟರ್‌ನೆಟ್ ಪ್ರವೇಶಾವಕಾಶ ಒದಗಿಸುತ್ತವೆ. ಹಾಗೆಯೇ ಎಷ್ಟರಮಟ್ಟಿಗೆ ನಿಮಗೆ ಪ್ರವೇಶಾವಕಾಶ ನೀಡಬಹುದು, ನೀವು ಎಷ್ಟು ವೇಗವಾಗಿ ಪ್ರವೇಶಾವಕಾಶ ಪಡೆಯಬಹುದು ಮತ್ತು ಅಂತರ್ಜಾಲದ ವಿಷಯ ಮತ್ತು ಸೇವೆಗಳಿಗೆ ಪ್ರವೇಶಾವಕಾಶ ಪಡೆಯಲು ನೀವೆಷ್ಟು ಪಾವತಿಸಬೇಕು ಎಂಬುದನ್ನು ಈ ಕಂಪನಿಗಳು ನಿಯಂತ್ರಿಸುತ್ತವೆ. ಜ್ಞಾನ ಎಲ್ಲೆಡೆ ಪಸರಿಸಲು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಖಾತರಿಪಡಿಸಲು ಇಂಟರ್ ನೆಟ್ ಸೇವೆಯು ಸಮಾನತೆ ಹೊಂದಿರಬೇಕಾಗಿರುತ್ತದೆ. ಇದಕ್ಕಾಗಿ: ಎಲ್ಲಾ ಜಾಲ ತಾಣ ಬಳಸುವುದಕ್ಕೂ ಸಮಾನ ಅವಕಾಶ, ಒಂದೇ ತೆರನಾದ ವೇಗ, ಮತ್ತು ಒಂದೇ ದತ್ತಾಂಶ ವೆಚ್ಚ ಇರಬೇಕು. ಜಾಲದಲ್ಲಿ ಸಮಾನತೆ ಎಂದರೆ, ಟೆಲಿಕಾಂ ಕಂಪನಿಗಳಿಗೆ ವೆಬ್ ಸೈಟ್ ಹೊಂದಿರುವ ಕಂಪನಿಗಳು ಹಣ ನೀಡಲಿ ಅಥವಾ ನೀಡದಿರಲಿ, ಎಲ್ಲ ವೆಬ್ ಸೈಟ್ ಡೌನ್ ಲೋಡ್ ವೇಗ ಒಂದೇ ಇರಬೇಕು.

ಜಾಲದಲ್ಲಿ ಸಮಾನತೆಯನ್ನು ಕಳಕೊಂಡರೆ, ನಮ್ಮ ಇಂಟರ್‌ನೆಟ್ ಪ್ರವೇಶಾವಕಾಶವನ್ನು ನಿಯಂತ್ರಿಸುತ್ತಿರುವ ಟೆಲಿಕಾಂ ಕಂಪನಿಗಳು ನಾವು ಏನನ್ನು, ಎಷ್ಟನ್ನು ನೋಡಬೇಕು ಎಂದು ನಿರ್ಧರಿಸುತ್ತವೆ. ಸಣ್ಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿಪರ ಮಾಧ್ಯಮಗಳು ತಮ್ಮ ಜಾಲತಾಣಗಳು ಎಲ್ಲೆಡೆ ಕಾಣಸಿಗುವಂತಾಗಲೆಂದು ವಿಶ್ವದ ಪ್ರತಿಯೊಂದು ಟೆಲಿಕಾಂ ಕಂಪನಿಗಳಿಗೆ ಹಣ ನೀಡಲಾರದೆ ಸಾಯುತ್ತವೆ.

ವಿಕೇಂದ್ರೀಕೃತ, ವಾಣಿಜ್ಯ-ರಹಿತ ಜಾಲದಿಂದ ಕೇಂದ್ರೀಕೃತ ಏಕಸ್ವಾಮ್ಯದೆಡೆಗೆ :

ಇಂಟರ್‌ನೆಟ್ ಜನ್ಮತಾಳಿದ್ದು ಅಮೇರಿಕಾ ಸರ್ಕಾರವು ಸ್ಥಾಪಿಸಿದ್ದ ರಕ್ಷಣಾ ಜಾಲಬಂಧ DARPANET ನಿಂದ. ಅಮೇರಿಕಾ ಸರ್ಕಾರವು ಶೈಶಾವಸ್ಥೆಯಲ್ಲಿದ್ದ ಇಂಟರ್‌ನೆಟ್‌ನ್ನು ಎಟಿ&ಟಿ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದು, ಅದರಲ್ಲಿ ವ್ಯಾಪಾರಿ ಮೌಲ್ಯ ಇಲ್ಲದ್ದರಿಂದ ಕಂಪನಿಯು ಅದನ್ನು ಕೊಳ್ಳಲು ನಿರಾಕರಿಸಿತ್ತು! ನಂತರದಲ್ಲಿ ಸಂವಹನ ಜಾಲವಾಗಿ ಅದರ ಯಶಸ್ಸಿನಿಂದ ಜಾಗೃತಗೊಂಡ ಅಮೇರಿಕಾ ಸರ್ಕಾರ ಮತ್ತು ದೊಡ್ಡ ಕಂಪನಿಗಳು ಅದರ ವಾಣಿಜ್ಯ ಸಾಮರ್ಥ್ಯವನ್ನು ಮನಗಂಡವು.

ಇಂಟರ್ ನೆಟ್ ಶಕ್ತಿ:

ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯ ಹೊಂದಿರುವ ಯಾರೇ ಆಗಲಿ ಕೇವಲ ಗ್ರಾಹಕರಾಗದೇ, ಸುದ್ದಿ ಮತ್ತು ಅನಿಸಿಕೆಗಳನ್ನು ಉತ್ಪಾದಿಸಲು ಇಂಟರ್‌ನೆಟ್ ಅವಕಾಶ ಕಲ್ಪಿಸುತ್ತದೆ. ಯೂಟ್ಯೂಬ್ ಮತ್ತು ವೀಡಿಯೋ ಕ್ಯಾಮೆರಾವನ್ನು ಬಳಸಿಕೊಂಡು ಒಂದು ಟೆಲಿವಿಷನ್ ಸ್ಟೇಷನ್ ಶುರು ಮಾಡಬಹುದು! ಇಂಟರ್‌ನೆಟ್‌ನಲ್ಲಿ ಸುಮಾರು ೧೦೦ ಕೋಟಿ ಜಾಲತಾಣಗಳಿದ್ದು, ಅದರಲ್ಲಿ ೮.೫೦ ಲಕ್ಷ ಕ್ರಿಯಾಶೀಲತೆಯಿಂದಿವೆ. ಆದರೂ ಇಂಟರ್‌ನೆಟ್ ಕಂಪನಿಗಳು ದೈತ್ಯಾಕಾರವಾಗಿ ಬೆಳೆದಿವೆ. ಅಮೇರಿಕಾದಲ್ಲಿ ೨೦೧೦ರ ಹೊತ್ತಿಗೆ, ಒಟ್ಟಾರೆ ವೀಕ್ಷಣೆಯಾದ ಜಾಲಪುಟಗಳ ಪೈಕಿ ಶೇ. ೭೫ರಷ್ಟು ಜಾಲಪುಟಗಳು ಟಾಪ್ ೧೦ ಇಂಟರ್‌ನೆಟ್ ಕಂಪನಿಗಳಿಗೆ ಸೇರಿದ್ದವು. ಚೀನಾ ಹೊರತುಪಡಿಸಿ, ಇಡೀ ಜಾಗತಿಕ ಇಂಟರ್ ನೆಟ್ ನಲ್ಲಿ ಅಮೇರಿಕಾದ ಕಂಪನಿಗಳೂ ಯಜಮಾನಿಕೆ ಹೊಂದಿವೆ. ಚೀನಾದಲ್ಲಿ ಕೆಲವು ಸಂರಕ್ಷಣ ನೀತಿಗಳನ್ನು ಅಳವಡಿಸಿಕೊಂಡಿರುವ ಜೊತೆಗೆ ಚೀನೀ ಭಾಷೆಯ ಸಂಕೀರ್ಣತೆಯಿಂದಾಗಿ ಅಲ್ಲಿ ಅಮೇರಿಕಾದ ಕಂಪನಿಗಳು ಪ್ರಾಬಲ್ಯ ಸಾಧಿಸಲಾಗಿಲ್ಲ.

ಇಂಟರ್‌ನೆಟ್‌ನ ಪ್ರಜಾಸತ್ತಾತ್ಮಕ ಸಾಮರ್ಥ್ಯ ದಿಂದಾಗಿ ಮುಖ್ಯವಾಹಿನಿಯ ಮಾಧ್ಯಮಗಳು ತಮಗೆ ’ಇಚ್ಛಿಸದ ಸುದ್ದಿ’ಗಳನ್ನು ಬು ಟ್ಟಿಗೆ ಎಸೆಯಲು ಸಾಧ್ಯವಾಗದ ಸ್ಥಿತಿಯಂತೂ ನಿರ್ಮಾಣವಾಗಿದೆ. ಈ ಕಾರಣದಿಂದಾಗಿಯೇ ಸುದ್ದಿ ಮತ್ತು ಅನಿಸಿಕೆಗಳನ್ನು ನೇರವಾಗಿ ಸೆನ್ಸಾರ್‌ಶಿಪ್ ಮಾಡುವ ಬದಲಿಗೆ ’ಒಮ್ಮತದ ಉತ್ಪಾದನೆ’ (manufacturing of consent) ಮಾಡುವುದು ಬಂಡವಾಳದ ಪ್ರಾಥಮಿಕ ಸಾಧನವಾಗಿದೆ.

’ಜಾಲದಲ್ಲಿ, ಸಮಾನತೆಗಾಗಿ’ ಯುದ್ದಗಳು

ಇಂಟರ್‌ನೆಟ್ ಕಂಪನಿಗಳು ಹಸುಳೆಗಳಾಗಿದ್ದಾಗ ಟೆಲಿಕಾಂ ಕಂಪನಿಗಳು ದೈತ್ಯ ಉರಗಗಳಾಗಿದ್ದವು. ಟೆಲಿಕಾಂ ಕಂಪನಿಗಳ ಮೂಲಸೌಲಭ್ಯದ ಮೂಲಕವೇ ಇಂಟರ್‌ನೆಟ್ ಕಂಪನಿಗಳು ಮತ್ತು ಬಳಕೆದಾರರು ಸಂಪರ್ಕ ಸಾಧಿಸಬೇಕಿತ್ತು! ಯಾರಾದರೂ ದತ್ತಾಂಶವನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಿ ಅಥವಾ ಸರ್ವರ್‌ನಲ್ಲಿ ಸಂಗ್ರಹಿಸಿಡಲಿ ಅಥವಾ ಇನ್ನಾರೊಬ್ಬರು ಅದನ್ನು ವೀಕ್ಷಿಸಲಿ, ಅವೆಲ್ಲವೂ ಟೆಲಿಕಾಂ ಜಾಲಗಳ ಮೂಲಕವೇ ಸಾಗಿ ಹೋಗಬೇಕು. ಇಂಥಹ ಸಂದರ್ಭದಲ್ಲಿ, ಟೆಲಿಕಾಂ ಕಂಪನಿಗಳು ಗೇಟ್ ಕೀಪರ್ ಕೆಲಸ ಮಾಡುವುದರಿಂದ ಇಂಟರ್‌ನೆಟ್ ಕಂಪನಿಗಳಿಂದ ಅಥವಾ ಗ್ರಾಹಕರಿಂದ ಪ್ರವೇಶ ತೆರಿಗೆಯನ್ನು ಅವು ವಿಧಿಸುತ್ತವೆ.

ಇಂಟರ್ ನೆಟ್ – ಟೆಲಿಕಾಂ ಕಂಪನಿಗಳ ಐಕ್ಯಕೂಟ:

ಜಾಲದಲ್ಲಿ ಸಮಾನತೆಯನ್ನು ತೆಗೆದುಹಾಕಲು ಟೆಲಿಕಾಂ ಕಂಪನಿಗಳು ಪ್ರತಿ ದೇಶದಲ್ಲೂ ಪ್ರತಿ ವಲಯದಲ್ಲೂ ಹಣಾಹಣಿ ನಡೆಸಿವೆ. ಟೆಲಿಕಾಂ ಕಂಪನಿಗಳು ಆಯೋಗದ ತೀರ್ಮಾನವನ್ನು ಬುಡಮೇಲು ಮಾಡಲು ಅಮೇರಿಕಾದ ಸಂಸತ್ತಿನಲ್ಲಿ ಲಾಬಿ ನಡೆಸಿವೆ.

ಇಂದು ಜಾಗತಿಕ ಇಂಟರ್ ನೆಟ್ ಕಂಪನಿಗಳು ಮಾರುಕಟ್ಟೆ ಮೌಲ್ಯದಲ್ಲಿ ಹೇಳುವುದಾದರೆ ಟೆಲಿಕಾಂ ಕಂಪನಿಗಳಿಗಿಂತ ದೊಡ್ಡದಾಗಿವೆ.

ಇದರಿಂದ ಇಂಟರ್ ನೆಟ್ ಕಂಪನಿಗಳು ಇಂದು ಟೆಲಿಕಾಂ ಕಂಪನಿಗಳ ಮರ್ಜಿಯಲ್ಲೇನೂ ಇಲ್ಲವೆಂಬುದು ತಿಳಿಯುತ್ತದೆ. ಅಲ್ಲದೆ, ದೊಡ್ಡ ಇಂಟರ್ ನೆಟ್ ಕಂಪನಿಗಳ ಏಳಿಗೆಯಿಂದಾಗಿ ಟೆಲಿಕಾಂ ಕಂಪನಿಗಳು ಮತ್ತು ನೆಟ್ ಕಂಪನಿಗಳ ನಡುವೆ ಐಕ್ಯಕೂಟ (ಕಾರ್ಟೆಲ್) ಏರ್ಪಡುವ ಸ್ಥಿತಿಯುಂಟಾಗಿದೆ. ಇದರಿಂದಾಗಿ ಸಣ್ಣ ನೆಟ್ ಕಂಪನಿಗಳು ಮಾರುಕಟ್ಟೆಯಿಂದ ಹೊರದಬ್ಬಲ್ಪಟ್ಟು, ಗ್ರಾಹಕರು ದೊಡ್ಡ ನೆಟ್ ಕಂಪನಿಗಳು ಒದಗಿಸುವ ಕೆಲವೇ ಕೆಲವು ನೆಟ್ ಸೇವೆಗಳೊಂದಿಗೆ ಲಾಕ್ ಆಗಬೇಕಾಗುತ್ತದೆ.

ಭಾರತದಲ್ಲಿ ಜಾಲದಲ್ಲಿ ಸಮಾನತೆ ಕುರಿತ ಪರಿಸ್ಥಿತಿ:

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್ ನೆಟ್ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಟ್ರಾಯ್ ಸಂಸ್ಥೆಯ ವಾದವನ್ನೇನಾದರೂ ಒಪ್ಪಿಕೊಂಡಲ್ಲಿ ಇಂಟರ್ ನೆಟ್ ಬಳಸಿಕೊಂಡು ನಡೆಯುತ್ತಿರುವ ಯಾವುದೇ ವ್ಯಾಪಾರ – ಇ-ರಿಟೈಲ್, ಮಾಧ್ಯಮ ಅಥವಾ ಆರೋಗ್ಯ ರಕ್ಷಣೆ – ಗಳನ್ನು ಅದೊಂದು ಹೆಚ್ಚುವರಿ ಸೇವೆಗಳು (ಒಟಿಟಿ) ಎಂದು ಟ್ರಾಯ್ ನಿಯಂತ್ರಿಸತೊಡಗಬೇಕಾಗುತ್ತದೆ. ಇದು ದೊಡ್ಡ ಮಟ್ಟದಲ್ಲಿ ನೆಟ್ ನಿಯಂತ್ರಣ ಸಾಧಿಸುವ ಹೆಜ್ಜೆಯಾಗಿದೆ. ಒಟಿಟಿ ಸೇವೆಗಳಿಗೆ ಉದಾಹರಣೆ: ವಾಟ್ಸ್ ಆಪ್, ವೈಬರ್, ಸ್ಕೈಪ್, ಒಲಾ, ಇತ್ಯಾದಿ..

ಇದರಿಂದ ಮುಂದೊಮ್ಮೆ ಟ್ರಾಯ್ ಸಂಸ್ಥೆಯು ಸ್ಕೈಪ್ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ಗಳು ತಮ್ಮ ಆನ್ ಲೈನ್ ಸೇವೆಗಳಿಗೆ ತನ್ನಿಂದ ಪರವಾನಗಿ ಪಡೆಯಬೇಕು ಎಂದು ನಿಲುವು ತಳೆಯಬಹುದು. ಪ್ರಸ್ತುತ ಸ್ಕೈಪ್ ಮತ್ತು ವಾಟ್ಸ್ ಆಪ್ ಅಪ್ಲಿಕೇಷನ್ ಗಳು ಉಚಿತವಾಗಿ ಧ್ವನಿ ಮತ್ತು ಎಸ್.ಎಂ.ಎಸ್ ಸೌಲಭ್ಯವನ್ನು ಒದಗಿಸುತ್ತಿದ್ದು, ಟೆಲಿಕಾಂ ಕಂಪನಿಗಳು ಈ ಸೌಲಭ್ಯಕ್ಕೆ ಅಧಿಕ ದರ ವಿಧಿಸುತ್ತಿವೆ.

ಈ ಹಿನ್ನೆಲೆಯಲ್ಲಿ  ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಟೆಲಿಕಾಂ ಕಂಪನಿಗಳು ಮತ್ತು ಅತಿದೊಡ್ಡ ನೆಟ್ ಕಂಪನಿಗಳ ಲಾಬಿಗೆ ಮಣಿಯದೇ ಜಾಲದಲ್ಲಿ ಸಮಾನತೆ ಕಾಯುವ ನಿಟ್ಟಿನಲ್ಲಿ ಬಲಿಷ್ಟ ನಿಯಮಗಳನ್ನು ರೂಪಿಸಬೇಕು. ಇದಕ್ಕಾಗಿ ಎಲ್ಲ ಸಣ್ಣ & ಮಧ್ಯಮ ಇಂಟರ್ ನೆಟ್ ಕಂಪನಿಗಳು, ನೆಟ್ ಬಳಕೆದಾರರು, ಕಂಪ್ಯೂಟರ್ ಬಳಕೆದಾರರು, ಮತ್ತು ಜನ ಸಾಮಾನ್ಯರು ಇಂಟರ್ ನೆಟ್ ಸೇವೆಗಳು ಸರಕಾಗದಂತೆ ಪ್ರಜ್ಞಾವಂತಿಕೆಯಿಂದ ಒತ್ತಾಯ ತರಬೇಕು.

Untitled-2

ಸಮಾಜವಾದಿ ಕ್ಯೂಬಾದಲ್ಲಿ ವೈದ್ಯಕೀಯ ಕ್ರಾಂತಿ : ಜಗತ್ತಿಗೇ ಒಂದು ಜನಪರ ಮಾದರಿ

ಜ್ಞಾನ ವಿಜ್ಞಾನ – ಜಯ

ಸಂಪುಟ  9, ಸಂಚಿಕೆ 29, 19 ಜುಲೈ  2015

ಹೆಚ್.ಐ.ವಿ. ರೋಗವಿರುವ ಗರ್ಭಿಣಿಯಿಂದ ಆ ರೋಗ ಮಗುವಿಗೆ ಬರುವ ಸಾಧ್ಯತೆ ಎಷ್ಟು? ಅಮೇರಿಕಾ ಸೇರಿದಂತೆ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಶೇ. 80 ರಿಂದ 85 ರಷ್ಟು ಪ್ರಕರಣಗಳಲ್ಲಿ ಮಾತ್ರ ಏಡ್ಸ್ ವರ್ಗಾವಣೆ ತಡೆ ಸಾಧ್ಯವಾಗುತ್ತಿದೆ. ಶೇ 15-20 ರಷ್ಟು ಗರ್ಭಿಣಿಯರಲ್ಲಿ ಇದು ಮಗುವಿಗೆ ವರ್ಗಾವಣೆ ಆಗುವುದನ್ನು ತಪ್ಪಿಸಲಾಗುತ್ತಿಲ್ಲ. ಆದರೆ ಕ್ಯೂಬಾ ಇದನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ.

ಬೆಂಗಳೂರಿನಷ್ಟು ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಕ್ಯೂಬಾ ವೈದ್ಯಕೀಯ ರಂಗದಲ್ಲಿ ಮಾಡುತ್ತಿರುವ ಹೊಸ ಆವಿಷ್ಕಾರಗಳು ಮತ್ತು ಅದರ ವಿಶಿಷ್ಟ ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆ ಪ್ರತಿದಿನ ಸುದ್ದಿಯಲ್ಲಿವೆ. ಅಲ್ಲಿಯ ಜನರ ಜೀವಿತಾವಧಿ ಸುಮಾರು 78 ವರ್ಷ ಮತ್ತು ಅಲ್ಲಿನ ಹಲವು ಆರೋಗ್ಯ ಸೂಚ್ಯಂಕಗಳು ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟದಲ್ಲಿದೆ. ಭೂಕಂಪ, ಚಂಡಮಾರುತ, ಇತ್ಯಾದಿ ವಿಪತ್ತಿನ ಕಾಲದಲ್ಲಿಯಂತೂ ವಿಶ್ವದಾದ್ಯಂತ ಕ್ಯೂಬಾದ ವೈದ್ಯರು ತಮ್ಮ ಅನುಪಮ ಸೇವೆಯಿಂದ ಮೇಲ್ಪಂಕ್ತಿಯಲ್ಲಿದ್ದಾರೆ. ಮಿಷನ್ ಐ ಹೆಸರಿನ ಕಾರ್ಯಕ್ರಮದಡಿ ಇತರೆ ದೇಶಗಳಲ್ಲಿ ಸುಮಾರು 35 ಲಕ್ಷ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಜಿ 5 ರಾಷ್ಟ್ರಗಳು ಜಗತ್ತಿನೆಲ್ಲೆಡೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿ ಲಾಭಗಳಿಸುತ್ತಿದ್ದರೆ, ಪುಟ್ಟ ಕ್ಯೂಬಾ ವಿಶ್ವದ ಬಡವರಿಗೆ ಆರೋಗ್ಯವನ್ನು ರಫ್ತು ಮಾಡುತ್ತಿದೆ.

ಹೊಸ ಔಷಧಿಗಳ ಆವಿಷ್ಕಾರದಲ್ಲಿ ಮುಂದು:

ಕಳೆದ ವರ್ಷ ಕ್ಯೂಬಾ ಸರ್ಕಾರದ ಹವಾನಾ ನಗರದ ಅಣು ರೋಗ ನಿರೋಧಕ ಸಂಸ್ಥೆಯು ಗಂಭೀರ ಹಂತದ ತಲುಪಿರುವ ಶ್ವಾಸಕೋಶದ ಕ್ಯಾನ್ಸರ್ ನಿಯಂತ್ರಣಕ್ಕಾಗಿ ನಾಲ್ಕು ತರಹದ ವ್ಯಾಕ್ಸೀನುಗಳನ್ನು ಆವಿಷ್ಕಾರ ಮಾಡಿತ್ತು. ಸಿಮಾವ್ಯಾಕ್ಸ್ ಇಜಿಎಫ್ ಮತ್ತು ರ‍್ಯಾಕೋಟ್ಯುಮೋಮ್ಯಾಬ್ ಎಂಬ ಹೆಸರಿನ ಈ ಔಷಧಗಳು ಸುಮಾರು 86 ದೇಶಗಳಲ್ಲಿ ಕ್ಲಿನಿಕಲ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿದ್ದು, ಇವು ಕ್ಯಾನ್ಸರ್ ಗಡ್ಡೆ ಬೆಳೆಯದಂತೆ ತಡೆಗಟ್ಟಬಲ್ಲವೆಂದು ಸಾಬೀತಾಗಿದೆ. ಅಲ್ಲದೆ, ಮಧುಮೇಹ ರೋಗ ಉಲ್ಬಣಗೊಂಡು ಕಾಲಿನಲ್ಲಿ ಗಾಯವುಂಟಾಗಿ ಗ್ಯಾಂಗ್ರೀನ್ ಹಂತ ತಲುಪಿದಾಗ ಕಾಲನ್ನೇ ತೆಗೆಯುವುದು ಸಾಮಾನ್ಯ. ಇದಕ್ಕೂ ಕೂಡ ಕ್ಯೂಬಾ ದೇಶ ಹೆಬರ್‌ಪ್ರೊಟ್ ಪಿ ಎಂಬ ಔಷಧ ಶೋಧಿಸಿದ್ದು, ಇದರಲ್ಲಿ ಚರ್ಮವನ್ನು ಮತ್ತೆ ಬೆಳೆಸುವ ಅಂಶವಿರುವುದು ವರವಾಗಿ ಪರಿಣಮಿಸಿದೆ.

ಸಮಾಜವಾದಿ ಸಿದ್ದಾಂತವನ್ನು ಅಪ್ಪಿಕೊಂಡು ಮಗ್ಗುಲ ಮುಳ್ಳಾಗಿರುವ ಕ್ಯೂಬಾ ತನ್ನ ಹಿತ್ತಲಲ್ಲಿ ತಲೆಎತ್ತಬಾರದೆಂದು ಅದನ್ನು ಹೊಸಕಿ ಹಾಕಲು ಅಮೇರಿಕಾ ಅದೇನೆಲ್ಲಾ ಪ್ರಯತ್ನಗಳನ್ನು ನಡೆಸಿತು. ಕಳೆದ ವರ್ಷದವರೆಗೂ ಸುಮಾರು 60 ವರ್ಷಕ್ಕೂ ಹೆಚ್ಚು ಕಾಲ ಕ್ಯೂಬಾ ವಿರುದ್ದ ಅಮೇರಿಕಾ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿತ್ತು. ಇದರಿಂದಾಗಿ ಕ್ಯೂಬಾ ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದರೂ ಸ್ವಾವಲಂಬನೆಯ ಹಾದಿಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಕ್ಯೂಬಾ ಬೆಳೆದುನಿಂತಿರುವುದು ಆಶ್ಚರ್ಯ ಮತ್ತು ಸ್ಫೂರ್ತಿಯ ಸೆಲೆಯೇ ಸರಿ.

ಮೆದುಳಿನ ರೋಗಗಳಿಗೆ ಸಂಬಂಧಿಸಿದಂತೆ ಬ್ರೈನ್ ಮ್ಯಾಪಿಂಗ್ ಮಾಡಲು ಅಮೇರಿಕಾದ ದುಬಾರಿ ಬೆಲೆಯ ಮ್ಯಾಗ್ನೆಟಿಕ್ ರೆಸೊನೆನ್ಸ್ ಉಪಕರಣಗಳು ಕ್ಯೂಬಾ ತಲುಪದೇ ದಿಢೀರನೇ ನಿಂತುಹೋದವು. ಇದಕ್ಕೆ ಪರ್ಯಾಯ ಶೋಧನೆ ನಡೆಸಿದ ಕ್ಯೂಬಾದ ವೈದ್ಯಕೀಯ ತಜ್ಞರು ಕಡಿಮೆಯ ಬೆಲೆಯ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಉನ್ನತ ಮಟ್ಟದ ಅಲ್ಗೊರಿದಮ್‌ಗಳನ್ನು ಬರೆದು ಪರಿಹಾರ ಕಂಡುಕೊಂಡರು.

ಅಲ್ಲದೇ, ಮೆದುಳು ರೋಗ, ಹೆಪಾಟಿಟಿಸ್ ಬಿ, ಡೆಂಗೆ, ಇತ್ಯಾದಿ ರೋಗಗಳಿಗೆ ಯಶಸ್ವಿ ಲಸಿಕೆಗಳನ್ನು ಅವರು ಕಂಡು ಹಿಡಿದಿದ್ದಾರೆ. ಇವೆಲ್ಲ ಔಷಧಗಳು ಕ್ಯೂಬಾದಲ್ಲಿ ಜನತೆಗೆ ಉಚಿತವಾಗಿ ದೊರೆಯುತ್ತವೆ. ಇಡೀ ತೃತೀಯ ರಾಷ್ಟ್ರಗಳನ್ನು ಆಗಾಗ್ಗೆ ಬಾಧಿಸುವ ಸಾಮಾನ್ಯ ಕಾಯಿಲೆಗಳಾದ ಡಿಫ್ತೀರಿಯಾ, ಪೋಲಿಯೋ, ಸಿಡುಬು, ಕ್ಷಯ, ಮಲೇರಿಯಾ, ಹೆಚ್.ಐ.ವಿ, ಕೆಮ್ಮು, ಇತ್ಯಾದಿ ಕಾಯಿಲೆಗಳನ್ನು ಸಂಪೂರ್ಣವಾಗಿ ಅಲ್ಲಿ ನಿರ್ಮೂಲನೆ ಮಾಡಲಾಗಿದೆ. ಅಮೇರಿಕಾ ಮತ್ತು ಯೂರೋಪ್ ಖಂಡದ ಬಹುರಾಷ್ಟ್ರೀಯ ಕಂಪನಿಗಳು ಜೀವವುಳಿಸುವ ಔಷಧಗಳನ್ನು ಆವಿಷ್ಕಾರ ಮಾಡಿ, ಪೇಟೆಂಟ್ ಮೂಲಕ ದುಬಾರಿ ವೆಚ್ಚಕ್ಕೆ ಮಾರಿ ಲಾಭ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಕ್ಯೂಬಾ ಮಾದರಿಯೇ ಸರಿ.

ಕ್ಯೂಬಾದ ಜನಾರೋಗ್ಯ ವ್ಯವಸ್ಥೆಯ ಹಿಂದಿರುವ ರಹಸ್ಯ:

ಆರ್ಥಿಕ ದಿಗ್ಬಂಧನದ ಹೊಡೆತಗಳಿಗೆ ಜಗ್ಗದೆ ಪರಿಣಾಮಕಾರಿ ಜನಾರೋಗ್ಯ ವ್ಯವಸ್ಥೆಯನ್ನು ಕ್ಯೂಬಾ ಹೇಗೆ ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಯಿತು? ಸಮುದಾಯ ಆರೋಗ್ಯ ವ್ಯವಸ್ಥೆಗೆ ಒತ್ತು ನೀಡುವ ಕ್ಯೂಬಾದ ವೈದ್ಯಕೀಯ ವ್ಯವಸ್ಥೆಯು ಮೊದಲಿಗೆ ಆರೋಗ್ಯವನ್ನು ಸರಕನ್ನಾಗಿ ಪರಿಗಣಿಸದೇ ಮಾನವೀಯ ಸೇವೆ ಎಂದು ಅಕ್ಷರಶ: ಅಂಗೀಕರಿಸಿರುವುದು. ಎರಡನೆಯದಾಗಿ, ಆ ದೇಶದ ಪ್ರತಿಯೊಬ್ಬರಿಗೂ ಡಾಕ್ಟರ್, ನರ್ಸ್, ತಜ್ಞ ವೈದ್ಯ ಮತ್ತು ಔಷಧಗಳು ಲಭ್ಯವಿವೆ. ಮೂರನೆಯದಾಗಿ, ಕ್ಯೂಬಾದ ಆರೋಗ್ಯ ವ್ಯವಸ್ಥೆಯಲ್ಲಿ ವ್ಯಕ್ತಿಯ ರೋಗಕ್ಕೆ ಮಾತ್ರವೇ ಚಿಕಿತ್ಸೆ ನೀಡುವ ಬದಲಿಗೆ, ಆ ಕುಟುಂಬಕ್ಕೆ ತೆರಳಿ ಕುಟುಂಬದ ಆರೋಗ್ಯ ಹಿನ್ನೆಲೆ ಹಾಗೂ ಸುತ್ತಮುತ್ತಲಿನವರ ಆರೋಗ್ಯ ಸ್ಥಿತಿಗತಿ ಅರಿಯುವ ಮೂಲಕ ರೋಗಿಯ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ರೋಗ ನಿಯಂತ್ರಣಕ್ಕಿಂತ ಅದ ಬರುವುದಕ್ಕೆ ಮುಂಚೆ ಅದನ್ನು ತಡೆಗಟ್ಟಲು ನಿಗಾವಹಿಸಲಾಗುತ್ತದೆ. ಅಲ್ಲಿನ ಜೈವಿಕ ತಂತ್ರಜ್ಞಾನ, ಜೀವ ಔಷಧಶಾಸ್ತ್ರ, ವೈದ್ಯಕೀಯ ರಂಗದ ಸಂಶೋಧನಾ ಅಭಿವೃದ್ಧಿಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಇದರಿಂದಾಗಿ ಸಂಶೋಧನೆಯ ಲಾಭ ಜನತೆಯ ಆರೋಗ್ಯಕ್ಕೆ ಸುಲಭವಾಗಿ ದಕ್ಕುತ್ತಿದೆ.

ಕ್ಯೂಬಾದಲ್ಲಿ ಸಮಾಜವಾದಿ ಕ್ರಾಂತಿಯ ನಂತರ ಸಾರ್ವಜನಿಕ ಆರೋಗ್ಯ ಅಭಿವೃದ್ಧಿಯ ಭಾಗವಾಗಿ ನೈರ್ಮಲ್ಯ, ಲಸಿಕೆ ಕಾರ್ಯಕ್ರಮ ಮತ್ತು ಗ್ರಾಮೀಣ ಭಾಗದ ಆರೋಗ್ಯಕ್ಕೆ ಒತ್ತು ನೀಡುವುದು, ಇವೇ ಪ್ರಾಥಮಿಕ ಹೆಜ್ಜೆಗಳಾಗಿದ್ದವು. 1990 ರ ಹೊತ್ತಿಗೆ, ಪ್ರತಿ ವಾರ್ಡ್‌ನಲ್ಲಿ ಡಾಕ್ಟರ್ ಮತ್ತು ನರ್ಸ್ ಲಭ್ಯವಿದ್ದು, 120 ರಿಂದ 160 ಕುಟುಂಬಗಳ ಆರೋಗ್ಯ ಸೇವೆಗೆ ಬುನಾದಿಯಾಗಿದ್ದರು. ಸದ್ಯಕ್ಕೆ ಕ್ಯೂಬಾದಲ್ಲಿ ಪ್ರತಿ 170 ಜನರಿಗೆ ಒಬ್ಬ ಡಾಕ್ಟರ್ ಲಭ್ಯವಿದ್ದಾರೆ. ಜೊತೆಗೆ ಪಾಲಿಕ್ಲಿನಿಕ್‌ಗಳು ವಿಶೇಷ ತಜ್ಞರು, ಹೊರರೋಗಿಗಳ ಶಸ್ತ್ರಚಿಕಿತ್ಸೆ, ಫಿಸಿಯೋಥೆರಪಿ, ಪ್ರಯೋಗಾಲಯ, ಪುನಶ್ಚೇತನ ಇತ್ಯಾದಿ ಸೇವೆಗಳನ್ನು ಒದಗಿಸುತ್ತವೆ.

ಕ್ಯೂಬಾದ ಅಂತರಾಷ್ಟ್ರೀಯ ವೈದ್ಯಕೀಯ ಸೇವೆ:

1998ರಲ್ಲಿ ಅಮೇರಿಕಾ ದೇಶದ ಹಲವು ನಗರಗಳು ಭೀಕರ ಚಂಡಮಾರುತಕ್ಕೆ ಸಿಕ್ಕಿ ಜನತೆ ನರಳುತ್ತಿದ್ದಾಗ ಕ್ಯೂಬಾ ದೇಶ ಸಾವಿರಾರು ಸಂಖ್ಯೆಯಲ್ಲಿ ತನ್ನ ವೈದ್ಯಕೀಯ ಸಿಬ್ಬಂದಿಗಳನ್ನು ಕಳುಹಿಸಿ ನೆರವು ನೀಡಿತ್ತು. ಅಲ್ಲದೆ, ಇಲಾಮ್ ಎಂಬ ಹೆಸರಿನ ಹವಾನಾ ಮೂಲದ ಲ್ಯಾಟೀನ್ ಅಮೇರಿಕಾ ವೈದ್ಯಕೀಯ ಶಾಲೆಯನ್ನು ಕ್ಯೂಬಾ ತೆರೆದಿದ್ದು ವೈದ್ಯಕೀಯ ತರಬೇತಿಗಾಗಿ ಸುಮಾರು 10,000 ಅಂತರಾಷ್ಟ್ರೀಯ ಶಿಷ್ಯವೇತನಗಳನ್ನು ನೀಡುತ್ತಿದೆ. ಸದ್ಯಕ್ಕೆ ಅಮೇರಿಕಾ, ಆಫ್ರಿಕಾ, ಏಷ್ಯಾ, ಕೆರಿಬೀಯನ್, ಲ್ಯಾಟಿನ್ ಅಮೇರಿಕಾದ 30 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 22,000 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಶಿಷ್ಯವೇತನದಿಂದ ತರಬೇತಿ ಪಾಠದ ಶುಲ್ಕ, ಊಟ ಮತ್ತು ವಸತಿ ಶುಲ್ಕ, ಪುಸ್ತಕ ಮತ್ತು ವೈದ್ಯಕೀಯ ವೆಚ್ಚ ಇತ್ಯಾದಿಗಳು ಸಿಗುವುದರಿಂದ ಬೊಲಿವಿಯಾದ ಆದಿವಾಸಿಯ ಮಕ್ಕಳು, ಹೊಂಡುರಾಸ್‌ನ ರೈತರ ಮಕ್ಕಳು, ಗ್ಯಾಂಬಿಯಾದ ಬೀದಿ ವ್ಯಾಪಾರಿ ಮಕ್ಕಳು ತಾವು ವೈದ್ಯರಾಗುವ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಇದಕ್ಕೆ ಪ್ರತಿಫಲವಾಗಿ ಈ ಯೋಜನೆಯಡಿ ವೈದ್ಯರಾದವರು ತಂತಮ್ಮ ದೇಶಗಳಲ್ಲಿ ಬಡಜನತೆಗೆ ಆರೋಗ್ಯ ಸೇವೆ ನೀಡುವ ಬದ್ದತೆಗೆ ಒಳಗಾಗಬೇಕಾಗುತ್ತದೆ.

ವೈದ್ಯಕೀಯ ರಂಗದಲ್ಲಿನ ತನ್ನೆಲ್ಲಾ ಸಾಧನೆಗಳಿಗೆ ಕ್ಯೂಬಾ ತಾನು ಅನುಸರಿಸುತ್ತಿರುವ ಪ್ರತಿಯೊಬ್ಬರಿಗೂ ಸಮಾನವಿರುವ ಮತ್ತು ಲಭ್ಯವಿರುವ ಸಾರ್ವತ್ರಿಕ ವೈದ್ಯಕೀಯ ನೀತಿಯೇ ಕಾರಣ ಎಂದು ಹೇಳಿರುವುದನ್ನು ನಮ್ಮನ್ನು ಆಳುತ್ತಿರುವವರು ಅರ್ಥಮಾಡಿಕೊಳ್ಳಬಲ್ಲರೇ?

ಮನುಕುಲವನ್ನು ಉಳಿಸುವ ಮಹಾನ್ ಕಾರ್ಯದಲ್ಲಿ ಕೊಡುಗೆ. ಭಯಾನಕ ಎಬೋಲ ಸೋಂಕಿನ ವಿರುದ್ಧ ಸಮರದ ಮುಂಚೂಣಿಯಲ್ಲಿ ಕ್ಯೂಬಾದ ವೈದ್ಯರು.....
ಮನುಕುಲವನ್ನು ಉಳಿಸುವ ಮಹಾನ್ ಕಾರ್ಯದಲ್ಲಿ ಕೊಡುಗೆ. ಭಯಾನಕ ಎಬೋಲ ಸೋಂಕಿನ ವಿರುದ್ಧ ಸಮರದ ಮುಂಚೂಣಿಯಲ್ಲಿ ಕ್ಯೂಬಾದ ವೈದ್ಯರು…..

ಬುಧ ಗ್ರಹದಲ್ಲಿ ‘ದೇವದೂತ’ನ ‘ಕೊಲೆ’ !

ಜ್ಞಾನ ವಿಜ್ಞಾನ – ಜಯ
ಸಂಪುಟ ೯ ಸಂಚಿಕೆ ೧೯, ೧೦ ಮೇ ೨೦೧೫

ಸುಮಾರು ೧೧ ವರ್ಷಗಳ ಕಾಲ ದೀರ್ಘ ಪಯಣ ನಡೆಸಿರುವ ’ಮೆಸ್ಸೆಂಜರ್’ ಗಗನನೌಕೆಯು ಇಷ್ಟರಲ್ಲೇ ಬುಧಗ್ರಹವನ್ನು ಅಪ್ಪಳಿಸಲಿದೆ. ಅಮೇರಿಕಾದ ಬಾಹ್ಯಾಕಾಶ ನೌಕೆ ’ಮೆಸ್ಸೆಂಜರ್’ ನ್ನು ೨೦೦೪ರಲ್ಲಿ ಹಾರಿಬಿಡಲಾಗಿತ್ತು. ಸೂರ್ಯನಿಗೆ ಸಮೀಪದಲ್ಲಿರುವ ಬುಧ ಗ್ರಹದ ಮೇಲ್ಮೈ, ಪರಿಸರ, ಭೌಗೋಳಿಕ-ರಸಾಯನಿಕ ಮಾಹಿತಿ, ಇತ್ಯಾದಿ ವಿವರಗಳನ್ನು ಅಧ್ಯಯನ ಮಾಡಲು ಇದನ್ನು ಕಳುಹಿಸಲಾಗಿತ್ತು. ಏಪ್ರಿಲ್ ೩೦ರ ಹೊತ್ತಿಗೆ ಗಗನನೌಕೆಯ ಪೂರ್ತಿ ಇಂಧನ ಖಾಲಿಯಾಗಲಿದ್ದು, ಬುಧ ಗ್ರಹದ ಮೇಲೆ ಅಪ್ಪಳಿಸಿ ಅಂತ್ಯ ಕಾಣಲಿದೆ. ಭೂಮಿಗೆ ವಿರುದ್ದ ದಿಕ್ಕಿನಲ್ಲಿರುವ ಬುಧ ಗ್ರಹವು ಸೆಕೆಂಡಿಗೆ ೩.೯೧ ಕಿ.ಮೀ ವೇಗದಲ್ಲಿದ್ದು, ಗಗನನೌಕೆಯು ಘಂಟೆಗೆ ೧೪,೦೮೦ ಕಿ.ಮೀ ವೇಗದಲ್ಲಿ ಸಾಗಿ ಗ್ರಹದ ಮೇಲ್ಮೈನ್ನು ಅಪ್ಪಳಿಸಲಿದೆ.

ಹೀಗೆ ಅಪ್ಪಳಿಸುವುದರಿಂದ ಗ್ರಹದ ಮೇಲೆ ಸುಮಾರು ೧೬ ಮೀಟರ್ ಆಳದ ಕುಳಿ ಉಂಟಾಗಲಿದೆ. ಈ ದೊಡ್ಡ ಕುಳಿಯ ಕುರಿತು ಭೂಮಿಯ ಮೇಲಿನ ಉಪಕರಣಗಳಿಂದ ಮಾಹಿತಿ ಪಡೆಯಲು ಸಾಧ್ಯವಿಲ್ಲವಾದರೂ, ೨೦೧೭ರಲ್ಲಿ ಉಡಾವಣೆಯಾಗಲಿರುವ ಮತ್ತೊಂದು ಗಗನನೌಕೆ ’ಬೆಪಿಕೊಲಂಬೊ ಬುಧ ಶೋಧನೆ’ ಯಿಂದ ವಿವರಗಳು ತಿಳಿಯಲಿವೆ. ಬೆಪಿಕೊಲಂಬೊ ಗಗನನೌಕೆಯು ಯೂರೋಪಿಯನ್-ಜಪಾನೀಯರ ಜಂಟಿ ಯೋಜನೆಯಾಗಿದ್ದು, ೨೦೨೪ಕ್ಕೆ ಬುಧಗ್ರಹ ತಲುಪಲಿದೆ.

ಬುಧ ಗ್ರಹ ಭೂಮಿಗೆ ಹತ್ತಿರದಲ್ಲಿರುವ ಗ್ರಹವಾಗಿದ್ದರೂ, ಅದರ ಕುರಿತು ಅಷ್ಟಾಗಿ ತಿಳಿದಿರಲಿಲ್ಲ. ಬುಧ ಗ್ರಹದ ಕಕ್ಷೆಯನ್ನು ಸೇರುವ ಮೊದಲು ಮೆಸ್ಸೆಂಜರ್ ಗಗನನೌಕೆಯು ಸುಮಾರು ಆರೂವರೆ ವರ್ಷ ಕಾಲ ಪ್ರಯಾಣ ಮಾಡಿದೆ, ನಂತರ ಬುಧ ಗ್ರಹದ ಕಕ್ಷೆಯನ್ನು ಸೇರಿದ ಮೇಲೆ ನಾಲ್ಕೂವರೆ ವರ್ಷ ಸುತ್ತು ಹಾಕಿದೆ. ಗಗನನೌಕೆಯು ಕಳುಹಿಸಿದ ಮಾಹಿತಿಯಿಂದಾಗಿ ಬುಧ ಗ್ರಹದಲ್ಲಿ ಶೀತಲೀಕರಿಸಿದ ನೀರು ಮತ್ತು ಇತರೆ ಹತ್ತಿಕೊಂಡು ಉರಿಯಬಲ್ಲ ವಸ್ತುಗಳಿವೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

ಭೂಮಿಗೆ ಹತ್ತಿರದಲ್ಲಿರುವ ಬುಧ ಗ್ರಹವನ್ನು ತಲುಪುಲು ಮೆಸ್ಸೆಂಜರ್ ಗಗನನೌಕೆಯು ೭ ವರ್ಷ ತೆಗೆದುಕೊಂಡಿರುವುದಕ್ಕೆ ಕಾರಣ ಈ ಯೋಜನೆಗೆ ಆದಷ್ಟು ಕಡಿಮೆ ಹಣ ವ್ಯಯ ಮಾಡುವ ಸಲುವಾಗಿ ಕಡಿಮೆ ಇಂಧನ ಬಳಸುವುದಾಗಿದೆ. ಇದರಿಂದಾಗಿ ಭೂಮಿಯ ಬಳಿ ಒಂದು ಬಾರಿ, ಶುಕ್ರ ಗ್ರಹದ ಬಳಿ ಎರಡು ಬಾರಿ ಮತ್ತು ಬುಧ ಗ್ರಹದ ಬಳಿ ೩ ಬಾರಿ ಹಾದು ಹೋಗಿದ್ದು, ಇದೀಗ ಬುಧ ಗ್ರಹವನ್ನು ಅಪ್ಪಳಿಸಲಿದೆ. ಗ್ರಹಗಳ ಸಮೀಪದಲ್ಲಿ ಗಗನನೌಕೆಯು ಚಲಿಸುವಾಗ ಗ್ರಹಗಳ ಗುರುತ್ವ ಶಕ್ತಿಯನ್ನು ಬಳಸಿಕೊಂಡು ಹೆಚ್ಚು ಇಂಧನ ವ್ಯಯವಿಲ್ಲದೆ ಮೆಸ್ಸೆಂಜರ್ ನೌಕೆಯು ಒಟ್ಟಾರೆ ಸುಮಾರು ೭.೯ ಶತಕೋಟಿ ಕಿ.ಮೀ.ದೂರ ಕ್ರಮಿಸಿದೆ. ಈ ಯೋಜನೆಯ ವೆಚ್ಚ ಒಟ್ಟು ರೂ. ೨,೭೦೦ ಕೋಟಿ.

ಬುಧ ಗ್ರಹದತ್ತ ಪಯಣಿಸಿದ ಗಗನನೌಕೆಗಳು :

ಬುಧ ಗ್ರಹಕ್ಕೆ ಲಗ್ಗೆಯಿಟ್ಟಿರುವ ಗಗನನೌಕೆಗಳ ಪೈಕಿ ಮೆಸ್ಸೆಂಜರ್ ಎರಡನೆಯದು. ಈ ಮೊದಲು ೧೯೭೪ ಮತ್ತು ೧೯೭೫ ರ ನಡುವೆ ’ಮೆರೀನರ್’ ಎಂಬ ಗಗನ ನೌಕೆಯು ೩ ಸಲ ಬುಧ ಗ್ರಹದತ್ತ ತೆರಳಿ ಆ ಗ್ರಹದ ಚಿತ್ರಗಳನ್ನು ಕಳುಹಿಸಿಕೊಟ್ಟಿತ್ತು.

‘ದೇವದೂತ’ ಬುಧ ಗ್ರಹ:

ರೋಮ್‌ನ ಇತಿಹಾಸದಲ್ಲಿ ಈ ಗ್ರಹವನ್ನು ದೇವತೆಗಳ ಸಂದೇಶವಾಹಕ ಎಂದೇ ಕರೆಯಲಾಗಿದೆ. ಆದ್ದರಿಂದ ಗಗನನೌಕೆಗೂ ’ಮೆಸ್ಸೆಂಜರ್’ ಎಂದು ಹೆಸರಿಡಲಾಗಿದೆ. ಬುಧಗ್ರಹವು ಸೌರವ್ಯೂಹದ ಅತಿ ಚಿಕ್ಕ ಗ್ರಹ. ಇದು ಭೂಮಿಗಿಂತ ಎರಡೂವರೆ ಪಟ್ಟು ಚಿಕ್ಕದು. ಬುಧ ಗ್ರಹವು ಕಬ್ಬಿಣ-ನಿಕ್ಕಲ್ ಲೋಹಗಳಿಂದ ಕೂಡಿದೆ. ಇದರಿಂದ ಆಯಸ್ಕಾಂತ ಕ್ಷೇತ್ರ ಸುತ್ತುವರಿದಿದೆ ಎನ್ನಲಾಗಿದೆ. ಬುಧ ಗ್ರಹದ ಮೇಲ್ಮೈ ವಿಸ್ತೀರ್ಣ ಒಟ್ಟಾರೆ ನಮ್ಮ ಏಷ್ಯಾ ಖಂಡದಷ್ಟಿದೆ. ಬುಧ್ರ ಗ್ರಹದ ಗುರುತ್ವಶಕ್ತಿ ಭೂಮಿಗಿಂತ ಕಡಿಮೆ, ಅಂತೆಯೇ ಭೂಮಿಯ ಮೇಲೆ ೧೦೦ ಕೆ.ಜಿ. ತೂಗುವ ಮನುಷ್ಯ ಬುಧ ಗ್ರಹದಲ್ಲಿ ೩೮ ಕೆ.ಜಿ. ತೂಗುತ್ತಾನೆ/ಳೆ.

ಬೆಂಗಳೂರು ನಗರದ (೨೫ ಡಿಗ್ರಿ ಸಿ) ಸರಾಸರಿ ಉಷ್ಣಾಂಶಕ್ಕೆ ಹೋಲಿಸಿದರೆ ಬುಧ ಗ್ರಹ ಹಗಲು ವೇಳೆಯಲ್ಲಿ ೧೭ ಪಟ್ಟು (೪೨೭ ಡಿಗ್ರಿ ಸಿ) ಉಷ್ಣಾಂಶ ಹೊಂದಿರುತ್ತದೆ. ಆದರೆ ಅದಕ್ಕೆ ಉಷ್ಣಾಂಶ ಹಿಡಿದಿಡುವ ವಾತಾವರಣ ಇಲ್ಲದ್ದರಿಂದ ರಾತ್ರಿ ವೇಳೆ ಬೆಂಗಳೂರು ನಗರಕ್ಕಿಂತ ಏಳೂವರೆ ಪಟ್ಟು ಕಡಿಮೆ ಉಷ್ಣಾಂಶ ಇರುತ್ತದೆ. ಭೂಮಿಯು ತನ್ನ ಸುತ್ತ ಒಂದು ಸುತ್ತು ಹಾಕುವ ಕಾಲವನ್ನು ನಾವು ಒಂದು ದಿನ ಎನ್ನುತ್ತೇವೆ. ಅಂತೆಯೇ ಬುಧ ಗ್ರಹದ ಒಂದು ದಿನ ಭೂಮಿಯ ೫೯ ದಿನಗಳು. ಆದರೆ, ಬುಧ ಗ್ರಹವು ಸೂರ್ಯನ ಸುತ್ತ ಒಂದು ಸುತ್ತು ಹಾಕಲು ೮೮ ದಿನಗಳನ್ನು ತೆಗೆದುಕೊಳ್ಳುತ್ತದೆ. ನಮ್ಮ ಚಂದ್ರನಲ್ಲಿರುವ ತರಹದ್ದೇ ದೊಡ್ಡ ದೊಡ್ಡ ಕುಳಿಗಳು ಬುಧನಲ್ಲೂ ಇವೆ. ಬುಧನ ವಾತಾವರಣವು ಆಮ್ಲಜನಕ, ಸೋಡಿಯಂ, ಜಲಜನಕ, ಹೀಲಿಯಂ, ಪೊಟಾಷಿಯಂಗಳಿಂದ ಕೂಡಿದೆ. ಬುಧ ಗ್ರಹದ ದೊಡ್ಡ ಕುಳಿಗಳು ಮತ್ತು ಗುಡ್ಡಗಳಿಂದಾಗಿ ಅವುಗಳ ಮರೆಯಲ್ಲಿ ರಕ್ಷಣೆ ಪಡೆದು ಗ್ರಹದ ಧ್ರುವಗಳಲ್ಲಿ ಮಂಜುಗಡ್ಡೆ ಇದೆಯೆಂದು ಅಧ್ಯಯನ ತಿಳಿಸಿಕೊಟ್ಟಿದೆ.

ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ೧೫ನೇ ಅಖಿಲ ಭಾರತ ಜನವಿಜ್ಞಾನ ಸಮ್ಮೇಳನ – ’ಸಮಾಜ ಬದಲಾವಣೆಗಾಗಿ ವಿಜ್ಞಾನ’

(ಮೇ ೨೨-೨೫, ೨೦೧೫)

ಸಂಪುಟ ೯, ಸಂಚಿಕೆ ೧೬, ೧೯ ಏಪ್ರಿಲ್ ೨೦೧೫

ಒಂದೆಡೆ ನಮ್ಮ ದೇಶ ವಿಶ್ವ ಸಾಮಾಜಿಕ ಪ್ರಗತಿ ಸೂಚ್ಯಂಕ ಪಟ್ಟಿಯಲ್ಲಿ ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಿಗಿಂತ ಕೆಳಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ೧೩೫ನೇ ಸ್ಥಾನದಲ್ಲಿದೆ. ಪ್ರಪಂಚದ ಅತೀ ಹೆಚ್ಚು ಹಸಿವು, ಬಡತನ, ಅನಕ್ಷರತೆ, ನಿರುದ್ಯೋಗ, ಸಮಾಜದಲ್ಲಿ ಅಂಧಕಾರ ಇರುವ ದೇಶಗಳಲ್ಲಿ ಭಾರತವು ಒಂದು. ಮತ್ತೊಂದೆಡೆ, ಪುರಾಣವನ್ನೇ ಇತಿಹಾಸ ಮತ್ತು ವಿಜ್ಞಾನವೆಂದು ಪ್ರಚುರಪಡಿಸಲಾಗುತ್ತಿದೆ. ಇತಿಹಾಸ ಮತ್ತು ವಿಜ್ಞಾನವನ್ನು ಜನಸಮುದಾಯಗಳ ನಡುವೆ ತಿಕ್ಕಾಟ, ಘರ್ಷಣೆ, ಜಾತಿ ಕಲಹಗಳ ಮೂಲಕ ಐಕ್ಯತೆಯನ್ನು ಒಡೆಯಲು ಆಮೂಲಕ ಅಧಿಕಾರ ಹಿಡಿಯುವ ಸಾಧನವಾಗಿ ಬಳಸಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತ ಹಿಂದುಳಿದಿದ್ದರೂ ಇಂದಿನ ಅತ್ಯಾಧುನಿಕ ಸಂಶೋಧನೆಗಳೆಲ್ಲ ನಮ್ಮ ಪುರಾತನ ಕಾಲದಲ್ಲೇ ಅಭಿವೃದ್ಧಿಪಡಿಸಿದ್ದೆವೆಂದು ದಿಕ್ಕುತಪ್ಪಿಸಲಾಗುತ್ತಿದೆ.

ವಿಜ್ಞಾನ ಮತ್ತು ತಂತ್ರಜ್ಞಾನವು ಬಹುಸಂಖ್ಯಾತ ಜನತೆಯ ಹಸಿವು, ಬಡತನ, ಅನಕ್ಷರತೆ, ನಿರುದ್ಯೋಗ, ಮೌಢ್ಯತೆ, ಆರೋಗ್ಯ, ವಸತಿ, ಇತ್ಯಾದಿ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸುವ ಸಾಧನವಾಗಬೇಕಿತ್ತು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನವು ಉಳ್ಳವರ ಹಿಡಿತದಲ್ಲಿ ಲಾಭಕೋರತನ, ಪರಿಸರದ ಲೂಟಿ ಮತ್ತು ಶೋಷಣೆಯ ಅಸ್ತ್ರಗಳಾಗಿವೆ.

ಓದನ್ನು ಮುಂದುವರೆಸಿ

ಅರೇಬಿಯಾದ ವಿಜ್ಞಾನಿ ಅಲ್ ಹೇಥಮ್ ನೆನಪಿನಲ್ಲಿ ಅಂತರಾಷ್ಟ್ರೀಯ ಬೆಳಕಿನ ವರ್ಷ – ೨೦೧೫

ಜ್ಞಾನ-ವಿಜ್ಞಾನ – ಜಯ
ಸಂಪುಟ ೯ – ಸಂಚಿಕೆ ೧೩ – ೨೯ ಮಾರ್ಚ್ ೨೦೧೫

ಸತ್ಯ ಶೋಧನೆಯೇ ವಿಜ್ಞಾನಿಯ ಗುರಿಯಾಗಬೇಕಾದಲ್ಲಿ, ಆತ ತಾನು ಓದಿರುವ ಎಲ್ಲದರ ಶತ್ರುವಾಗಲೇ ಬೇಕು, ಅವೆಲ್ಲವುಗಳನ್ನು ಪ್ರಯೋಗದ ಒರೆಗೆ ಹಚ್ಚಲೇ ಬೇಕು.” -ಅಲ್ ಹೇಥಮ್

img-1

ಈ ವರ್ಷವನ್ನು ’ಅಂತರಾಷ್ಟ್ರೀಯ ಬೆಳಕು ಮತ್ತು ಬೆಳಕು-ಆಧಾರಿತ ತಂತ್ರಜ್ಞಾನದ ವರ್ಷ’ ಎಂದು ಯುನೆಸ್ಕೋ ಘೋಷಿಸಿದೆ. ನಿಸರ್ಗದತ್ತವಾದ ಬೆಳಕಿನ ಶಕ್ತಿಯನ್ನು ಬಳಸಿಕೊಂಡು ಹಲವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ. ಈ ಕುರಿತು ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ವಿಜ್ಞಾನ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುತ್ತಿವೆ.

ಓದನ್ನು ಮುಂದುವರೆಸಿ

ಸೂರ್ಯನ ಭವಿಷ್ಯ

ಸಂಪುಟ 9, ಸಂಚಿಕೆ 7, 15 ಫೆಬ್ರವರಿ 2015

ಜ್ಞಾನ – ವಿಜ್ಞಾನ – ಪಾಲಹಳ್ಳಿ ವಿಶ್ವನಾಥ್

    ೧೦ ಬಿಲಿಯ ವರ್ಷಗಳು ಅಯಸ್ಸಿರುವ ಸೂರ್ಯನ ಜೀವನದಲ್ಲಿ ೧ ಲಕ್ಷ ವರ್ಷಗಳು ಒಂದು ಕ್ಷಣ ಮಾತ್ರ.! ಆದರೂ ಕಳೆದ ಲಕ್ಷ ವರ್ಷಗಳಂತೆಯೇ ಮುಂದಿನ ಒಂದು ಲಕ್ಷ ವರ್ಷಗಳಲ್ಲೂ ಸೂರ್ಯನ ಪ್ರಕಾಶದಲ್ಲಿ ಎನೂ ಬದಲಾವಣೆಗಳಾಗುವುದಿಲ್ಲ ಎಂದು ಹೊಸ ಪ್ರಯೋಗವೊಂದು ತೋರಿಸಿರುವುದು ಸಮಾಧಾನಕರ ವಿಷಯವೇ! ಅದಲ್ಲದೆ ನಕ್ಷತ್ರಗಳ ಪ್ರಕಾಶಕ್ಕೆ ಬೆಸುಗೆ (ಫ್ಯೂಷನ್) ಪ್ರಕ್ರಿಯೆಯೇ ಕಾರಣ ಎನ್ನುವುದಕ್ಕೂ ಈ ಪ್ರಯೋಗ ಖಚಿತ ಸಾಕ್ಷಿ ಒದಗಿಸಿದೆ.

   ಎಲ್ಲ ಸಂಸ್ಕೃತಿಗಳಲ್ಲೂ ಸೂರ್ಯ ಬದುಕಿಗೆ ಮುಖ್ಯ ಎಂಬ ಅಸ್ಪಷ್ಟ ಅರಿವು ಇದ್ದಿತು. ಸೂರ್ಯನ ಸುತ್ತ ಗ್ರಹಗಳ ಚಲನೆಗಳನ್ನು ಕೋಪರ್ನಿಕಸ್, ಕೆಪ್ಲರ್ ಮತ್ತು ನ್ಯೂಟನ್ ಅರ್ಥಮಾಡಿಸಿದರೂ ಸೂರ್ಯ ಒಂದು ನಕ್ಷತ್ರ ಎಂಬ ಅರಿವು ಬರಲು ಸಮಯವಾಯಿತು. ಸೂರ್ಯ ಒಂದು ಅಗಾಧ ಅನಿಲಗಳ ಅಗರ ಎಂಬ ನಂಬಿಕೆ ಇದ್ದರೂ ಅದರಿಂದ ಪ್ರಕಾಶ ಹೇಗೆ ಉತ್ಪತ್ತಿಯಾಗುತ್ತಿದೆ ಎಂಬುದರ ಬಗ್ಗೆ ಗೊಂದಲಗಳಿದ್ದವು. ಗುರುತ್ವಾಕರ್ಷಣೆಯೇ ಸೂರ್ಯನ ಪ್ರಕಾಶಕ್ಕೆ ಮೂಲ ಎಂದು ೧೯ನೆಯ ಶತಮಾನದಲ್ಲಿ ಭೌತ ವಿಜ್ಞಾನಿಗಳು ಪ್ರತಿಪಾದಿಸಿ, ಸೂರ್ಯನ ವಯಸ್ಸು ೩೦ ದಶಲಕ್ಷ(ಮಿಲಿಯನ್) ವರ್ಷಗಳೆಂದು ನಿರ್ಧರಿಸಿದ್ದರು. ಆದರೆ ಚಾರ್ಲ್ಸ್ ಡಾರ್ವಿನರ ಪ್ರಕಾರ ಸೂಕ್ಷ್ಮಾಣುಗಳು ಹುಟ್ಟಿ ವಿಕಾಸ ನಡೆದು ಈ ಘಟ್ಟವನ್ನು ತಲುಪಲು ೩೦೦ ದಶಲಕ್ಷ ವರ್ಷಗಳಾದರೂ ಬೇಕಿದ್ದಿತು. ೨೦ನೆಯ ಶತಮಾನದ ಅದಿಯಲ್ಲಿ ವಿಕಿರಣಶೀಲ ಪ್ರಕ್ರಿಯೆಗಳ ಸಂಶೋಧನೆಗಳು ನಡೆದ ನಂತರ ಈ ಸಮಸ್ಯೆ ಬಗೆಹರಿದು ಭೂಮಿ ಹುಟ್ಟಿ ಕಡೆಯ ಪಕ್ಷ ೩೭೦ ಕೋಟಿ ವರ್ಷಗಳಾದರೂ ಆಗಿರಬೇಕು ಎಂದು ತಿಳಿಯಿತು. ಅಂತೂ ವಿವಿಧ ವಿಜ್ಞಾನಗಳು (ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ, ಖಗೋಳಶಾಸ್ತ್ರ) ಒಟ್ಟಿಗೆ ಬಂದು ಈ ರಹಸ್ಯವನ್ನು ಬಿಡಿಸಬೇಕಾಯಿತು.

   ಸೂರ್ಯನ ಪ್ರಕಾಶವನ್ನು ಅರ್ಥಮಾಡಿಕೊಳ್ಳಲು ಹಲವಾರು (ಮೊದಲು ಸಂಬಂಧ ವಿಲ್ಲದಂತೆ ಕಂಡ) ಆವಿಷ್ಕಾರಗಳು ಬೇಕಾದವು. ೧. ನಕ್ಷತ್ರಗಳ ಪ್ರಕಾಶಕ್ಕೆ ಅಗಾಧ ಉಷ್ಣತೆ ಬೇಕಾಗುತ್ತದೆ ಎಂದು ಅಮೆರಿಕದ ರಸೆಲ್ ಗುರುತಿಸಿದರು. ೨. ತಮ್ಮ ಖ್ಯಾತ ಸಮೀಕರಣದಿಂದ ದ್ರವ್ಯರಾಶಿ ಅಗಾಧಶಕ್ತಿಯ ಮೂಲ ಎಂದು ಐಸ್ಟೈನ್ ಪ್ರತಿಪಾದಿಸಿದರು. ೩. ನಾಲ್ಕು ಪ್ರೋಟಾನ್ ಕಣಗಳ ಒಟ್ಟು ದ್ರವ್ಯರಾಶಿ ಒಂದು ಹಿಲೀಯಮ್ ನ್ಯೂಕ್ಲಿಯಸ್‌ಗಿಂತ ಹೆಚ್ಚು ಎಂದು ಇಂಗ್ಲೆಂಡಿನ ಆಷ್ಟನ್ ತೋರಿಸಿದರು. ಇವೆಲ್ಲವನ್ನೂ ಉಪಯೋಗಿಸಿಕೊಂಡು ಇಂಗ್ಲೆಂಡಿನ ಖ್ಯಾತ ಖಗೋಳ ತಜ್ಞ ಎಡ್ಡಿಂಗ್‌ಟನ್ ನಕ್ಷತ್ರ ಒಂದು ಕುಲುಮೆಯಂತಿದ್ದು ಕೇಂದ್ರದಲ್ಲಿ ಅಗಾಧ ಉಷ್ಣತೆಯಿಂದ ನಾಲ್ಕು ಹೈಡ್ರೋಜೆನ್ ಪರಮಾಣುಗಳು ಒಟ್ಟಿಗೆ ಬಂದು ಹಿಲೀಯಮ್ ಪರಮಾಣು ನಿರ್ಮಾಣವಾದಾಗ ಉಳಿಯುವ ಶಕ್ತಿ ಪ್ರಕಾಶವಾಗಿ ಹೊರಬರುತ್ತದೆ ಎಂದು ಪ್ರತಿಪಾದಿಸಿದರು. ಮುಂದೆ ಕ್ವಾಟಂ ಚಲನಶಾಸ್ತ್ರದ ಪ್ರಗತಿಯಾಗುತ್ತಾ ಒಂದೇ ವಿದ್ಯುದಾಂಶದ ಪ್ರೋಟಾನ್ ಕಣಗಳು ತಮ್ಮ ವಿಕರ್ಷಣೆಯನ್ನು ಮೆಟ್ಟಿ ಹೇಗೆ ಸುರಂಗ ಪ್ರಕ್ರಿಯೆಯಿಂದ ಒಟ್ಟಿಗೆ ಬರಲು ಸಾಧ್ಯ ಎಂದು ಜಾರ್ಜ್ ಗ್ಯಾಮೋವ್ ಮತ್ತು ಇತರರು ತೋರಿಸಿದರು. ೧೯೩೮ರಲ್ಲಿ ಖ್ಯಾತ ಬೈಜಿಕ ವಿಜ್ಞಾನಿ ಹಾನ್ಸ್ ಬೆಟಾ (hಚಿಟಿs beಣhe ೧೯೦೬-೨೦೦೫) ನಕ್ಷತ್ರಗಳಲ್ಲಿ ಜಲಜನಕದಿಂದ ಬೈಜಿಕ ಬೆಸುಗೆ ಪ್ರಕ್ರಿಯೆಗಳು ಹೇಗೆ ಹೆಚ್ಚು ದ್ರವ್ಯರಾಶಿಯ ಪರಮಾಣುಗಳನ್ನು ತಯಾರಿಸುವುದಲ್ಲದೆ ಪ್ರಕಾಶವನ್ನೂ ಕೊಡುತ್ತವೆ ಎಂದು ತೋರಿಸಿದರು. ಎರಡು ವಿಧಗಳ ಬೆಸುಗೆಯ ಪ್ರಕ್ರಿಯೆಗಳನ್ನು ಬೆಟಾ ಪ್ರತಿಪಾದಿಸಿದರು. ಸೂರ್ಯನಂತಹ ಚಿಕ್ಕ ನಕ್ಷತ್ರಗಳಲ್ಲಿ ಪ್ರೋಟಾನ್-ಪ್ರೋಟಾನ್ ಸರಪಳಿಕ್ರಿಯೆ ಹಲವು ಘಟ್ಟಗಳಲ್ಲಿ ನಡೆಯುತ್ತವೆ, ಜಲಜನಕದಿಂದ ಹಿಲೀಯಮ್ ನಂತರ ಲಿಥಿಯಮ್, ಬೋರಾನ್ ಇತ್ಯಾದಿ ತಯಾರಾಗುತ್ತವೆ. ನಕ್ಷತ್ರ ದೊಡ್ಡದಿದ್ದಲ್ಲಿ ಪ್ರಕ್ರಿಯೆಗೆ ಇಂಗಾಲ-ಸಾರಜನಕ-ಆಮ್ಲಜನಕಗಳ ಸರಪಳಿ ಎಂಬ ಹೆಸರು. ಇದರಲ್ಲಿ ಕಬ್ಬಿಣದ ತನಕ ಕೂಡ ಮೂಲಧಾತುಗಳು ತಯಾರಾಗುತ್ತವೆ. ಈ ಮಹತ್ತರ ಆವಿಷ್ಕಾರಕ್ಕೆ ೧೯೬೭ರಲ್ಲಿ ಬೆಟಾ ಅವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿತು. ಕಬ್ಬಿಣಕ್ಕಿಂತ ಹೆಚ್ಚು ದ್ರವ್ಯರಾಶಿಯ ಮೂಲಧಾತುಗಳು ಸೂಪರ್‌ನೊವಾ ವಿದ್ಯಮಾನದಲ್ಲಿ ತಯಾರಾಗುತ್ತವೆ ಎಂದು ಫ್ರೆಡ್ ಹಾಯಲ್ ಮತು ಇತರರು ಅನಂತರ ತೋರಿಸಿದರು. ಬೆಟಾ ಪ್ರತಿಪಾದಿಸಿದ ಪ್ರಕ್ರಿಯೆಗಳಲ್ಲಿ ಮೊದಲ ದ್ರವ್ಯರಾಶಿಯ ೭% ಭಾಗ ಕಡೆಯಲ್ಲಿ ಶಕ್ತಿಯಾಗಿ ಹೊರಬರುತ್ತದೆ.

   ಈ ಪ್ರಕ್ರಿಯೆಗಳಿಂದ ಪ್ರಕಾಶ ಹೇಗೆ ಹುಟ್ಟುವುದೆಂದು ನೋಡೋಣ. ಬಿಡುಗಡೆಯಾಗುವ ಶಕ್ತಿ ಗ್ಯಾಮಾ ಕಣಗಳ ರೂಪದಲ್ಲಿ ಹೊರಬರುತ್ತದೆ. ಗ್ಯಾಮಾ ಕಣವನ್ನು ಹೆಚ್ಚು ಶಕ್ತಿಯ ಫೋಟಾನ್ ಕಣವೆಂದು ಪರಿಗಣಿಸಬಹುದು. ಸಾಧಾರಣವಾಗಿ ತರಂಗರೂಪವಿರುವ ಬೆಳಕಿನ ಮತ್ತೊಂದು ಸ್ವರೂಪ ಫೋಟಾನ್ ಕಣ ಎಂದು ೧೯೦೫ರಲ್ಲಿ ಐಸ್ಟೈನ್ ಪ್ರತಿಪಾದಿಸಿ ಕಣದ ಶಕ್ತಿಗೂ ಬೆಳಕಿನ ತರಂಗಾಂತರಕ್ಕೂ ಸಂಬಂಧವನ್ನು ತೋರಿಸಿದ್ದರು. ಈ ಗ್ಯಾಮಾ ಫೋಟಾನ್‌ಗಳು ಸೂರ್ಯನ ಕೇಂದ್ರದಲ್ಲಿ ಉತ್ಪ್ಪತ್ತಿಯಾಗಿದ್ದು ಸೂರ್ಯನ ಒಳಗಿನ ಪದರಗಳಲ್ಲಿ ಅಲ್ಲಿ ಇಲ್ಲಿ ಚಲಿಸಿ ಚದುರಿ ನಿಧಾನವಾಗಿ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಹಾಗೆ ಉತ್ಪತ್ತಿಯಾದ ಒಂದು ಲಕ್ಷ ವರ್ಷಗಳ ನಂತರ ಸೂರ್ಯನ ಮೇಲ್ಮೈಯನ್ನು ತಲುಪುತ್ತದೆ. ಆಗ ಅದಕ್ಕೆ ಸಾಮಾನ್ಯ ಬೆಳಕಿನ ಶಕ್ತಿ ಇದ್ದು ಅದೇ ನಕ್ಷತ್ರದ ಪ್ರಕಾಶವೆನಿಸಿಕೊಳ್ಳುತ್ತದೆ. ಹೀಗೆ ಇಂದು ನೋಡುವ ಬೆಳಕು ಉತ್ಪನ್ನವಾಗಿದ್ದು ಲಕ್ಷವರ್ಷಗಳ ಹಿಂದೆ!

   ಈ ಪ್ರಕ್ರಿಯೆಗಳಲ್ಲಿ ಮತ್ತೊಂದು ಕಣವೂ ಉತ್ಪತ್ತಿಯಾಗುತ್ತದೆ. ಅದರ ಹೆಸರು ನ್ಯೂಟ್ರಿನೊ. ಇದು ಅತಿ ಕಡಿಮೆ ದ್ರವ್ಯರಾಶಿಯ ಶೂನ್ಯ ವಿದ್ಯುದಾಂಶದ ಕಣವಾಗಿದ್ದು ನಮಗೆ ಸುಪರಿಚಿತ ಪ್ರೋಟಾನ್, ಎಲೆಕ್ಟ್ರಾನ್ ಕಣಗಳಂತೆ ಬೇರೆ ಕಣಗಳ ಜೊತೆ ಹೆಚ್ಚು ವ್ಯವಹರಿಸುವುದಿಲ್ಲ. ಈ ಸಂಕೋಚ ಪ್ರವೃತ್ತಿಯ ಕಣವನ್ನು ೧೯೩೦ರ ಆದಿಯಲ್ಲಿ ಪ್ರತಿಪಾದಿಸಲಾಗಿತ್ತು. ಈ ಕಣಗಳು ಸೂರ್ಯನಿಂದಲ್ಲದೇ ವಿವಿಧ ಮೂಲಗಳಿಂದಲೂ ಉತ್ಪತ್ತಿಯಾಗುತ್ತವೆ : ಗ್ಯಾಲಕ್ಸಿಗಳು, ನಕ್ಷತ್ರಗಳು, ವಿಶ್ವಕಿರಣಗಳು, ಭೂಗರ್ಭದಲ್ಲಿ ನಡೆಯುವ ವಿಕಿರಣಶೀಲ ಪ್ರಕ್ರಿಯೆಗಳು, ಸೂಪರ್ನೋವಾಗಳು, ಇತ್ಯಾದಿ. ಇದಲ್ಲದೆ ಮಾನವ ನಿರ್ಮಿತ ಯಂತ್ರಗಳಲ್ಲೂ – ಬೈಜಿಕ ಕ್ರಿಯಾಕಾರಿ (ರಿಯಾಕ್ಟರು)ಗಳು, ಕಣಗಳ ಚಲನಶಕ್ತಿ ಹೆಚ್ಚು ಮಾಡಲು ಉಪಯೋಗಿಸುವ ವೇಗವರ್ಧಕ (ಆಕ್ಸಿಲರೇಟರ್ರ್) ಯಂತ್ರಗಳು ಇತ್ಯಾದಿ ತಯಾರಾಗುತ್ತವೆ. ಈ ಕಣವನ್ನು ಮೊತ್ತ ಮೊದಲು ೧೯೫೫ರಲ್ಲಿ ಬೈಜಿಕ ಕ್ರಿಯಾಕಾರಿಯ ಬಳಿ ಕಂಡು ಹಿಡಿಯಲಾಯಿತು. ಅನಂತರ ಮೊದಲ ಪ್ರಾಕೃತಿಕ ನ್ಯೂಟ್ರಿನೊ ಕಣಗಳನ್ನು ೧೯೬೦ರ ದಶಕದಲ್ಲಿ ಬೆಂಗಳೂರಿನ ಹತ್ತಿರದ ಕೆ.ಜಿ.ಎಫ್. ಗಣಿಯಲ್ಲಿ ಕಂಡುಹಿಡಿಯಲಾಗಿತ್ತು.

   ಸೂರ್ಯನಲ್ಲಿ ನಡೆಯುತ್ತಿರುವ ಬೆಸುಗೆ ಪ್ರಕ್ರಿಯೆಗಳಿಗೆ ಸಾಕ್ಷಿಯಾಗಿ ಸೂರ್ಯನಿಂದ ಬರುವ ಈ ನ್ಯೂಟ್ರಿನೊ ಕಣಗಳನ್ನು ಕಂಡು ಹಿಡಿಯುವ ಪ್ರಯತ್ನಗಳು ೧೯೭೦ರ ದಶಕದಲ್ಲಿ ಪ್ರಾರಂಭವಾದವು. ಸೆಕೆಂಡಿಗೆ ೪೦೦ ಬಿಲಿಯನ್ ನ್ಯೂಟ್ರಿನೋಗಳು ಭೂಮಿಯ ಪ್ರತಿ ಚದುರ ಇಂಚು ಜಾಗದ ಮೂಲಕ ಹಾಯ್ದು ಹೋದರೂ ಅವುಗಳು ಹೆಚ್ಚು ವರ್ತಿಸದ ಕಣಗಳಾದ್ದರಿಂದ ಅವುಗಳನ್ನು ಕಂಡುಹಿಡಿಯಲು ದೈತ್ಯ ಗಾತ್ರದ ಉಪಕರಣಗಳು ಬೇಕಾದವು. ಈ ಪ್ರಯೋಗಗಳು ಅಮೆರಿಕ ಮತ್ತು ಜಪಾನಿನಲ್ಲಿ ಶುರುವಾಗಿ ಸುಮಾರು ೩೦ ವರ್ಷಗಳ ನಂತರ ಈ ಕಣಗಳು ಸೂರ್ಯನಿಂದ ಹೊರಬರುವುದನ್ನು ಕಂಡುಹಿಡಿಯಾಲಾಯಿತು. ಇದರಿಂದ ಬೈಜಿಕ ಸಂಲಯನ ಅಥವಾ ಬೆಸುಗೆ ಪ್ರಕ್ರಿಯೆಗಳೇ ನಕ್ಷತ್ರಗಳ ಪ್ರಕಾಶಕ್ಕೆ ಕಾರಣವೆಂಬ ಪುರಾವೆ ಸಿಕ್ಕಿತು. ಈ ಸೌರ ನ್ಯೂಟ್ರಿನೋಗಳನ್ನು ಕಂಡು ಹಿಡಿದಿದ್ದಕ್ಕೆ ಈ ಪ್ರಯೋಗಗಳನ್ನು ನಡೆಸಿದ ವಿಜ್ಞಾನಿಗಳಿಗೆ ೨೦೦೨ರಲ್ಲಿ ನೊಬೆಲ್ ಪ್ರಶಸ್ತಿ ಬಂದಿತು. ಇದರ ಹಿಂದೆ ನ್ಯೂಟ್ರಿನೋ ಕಣಗಳ ಇತರ ಸಂಶೋಧನೆಗಳಿಗೆ ೨ ಬಾರಿ (೧೯೮೮ ಮತ್ತು ೧೯೯೫) ಈ ಪ್ರಶಸ್ತಿ ಬಂದಿತು.

   ಆದರೆ ಈ ಪ್ರಯೋಗಗಳು ಬೆಸುಗೆ ಪ್ರಕ್ರಿಯೆಗಳ ಅನಂತರದ ಘಟ್ಟಗಳಲ್ಲಿ ಹುಟ್ಟುವ ಹೆಚ್ಚಿನ ಶಕ್ತಿಯ ನ್ಯೂಟ್ರಿನೋ ಕಣಗಳನ್ನು ಕಂಡು ಹಿಡಿದಿದ್ದವು. ಆದರೆ ಮೊತ್ತ ಮೊದಲ ಘಟ್ಟದಲ್ಲಿ ಎರಡು ಪ್ರೋಟಾನ್ ಕಣಗಳು ಒಟ್ಟಿಗೆ ಬಂದು ಜಲಜನಕಕ್ಕಿಂತ ಸ್ವಲ್ಪ ಹೆಚ್ಚು ತೂಕದ ಡ್ಯುಟೀರಿಯಮ್ ಪರಮಾಣುವನ್ನು ಸೃಷ್ಟಿಸಿದಾಗ ಅತಿ ಕಡಿಮೆ ಶಕ್ತಿಯ ನ್ಯೂಟ್ರಿನೋಗಳೂ ತಯಾರಾಗುತ್ತವೆ. ಇದುವರೆವಿಗೆ ಈ ಮೂಲ ಬೆಸುಗೆ ಪ್ರಕ್ರಿಯೆಯಿಂದ ಉತ್ಪತಿಯಾಗುವ ನ್ಯೂಟ್ರಿನೊ ಕಣಗಳನ್ನು ಕಂಡುಹಿಡಿದಿರಲಿಲ್ಲ,. ಇದಕ್ಕೋಸ್ಕರ ಇಟಲಿಯ ೧೪೦೦ ಮೀಟರ್ ಕೆಳಗಿರುವ ಪ್ರಯೋಗಶಾಲೆಯಲ್ಲಿ ದೊಡ್ಡ ಗಾತ್ರದ ಉಪಕರಣವನ್ನು. ಅಮೆರಿಕ, ಯೂರೋಪ್ ಮತ್ತು ರಷ್ಯದ ವಿಜ್ಞಾನಿಗಳು ೨೦೦೭ರಲ್ಲಿ ಸ್ಥಾಪಿಸಿದರು. ಬೇರೆಯ ಹಿನ್ನೆಲೆ ಕಣಗಳನ್ನು ತಡೆಯಲು ಈ ಉಪಕರಣದ ಸುತ್ತ ೧,೦೦೦ ಟನ್ ನೀರನ್ನು ಉಪಯೋಗಿಸಲಾಗಿದ್ದಿತು. ಹಲವಾರು ವರ್ಷಗಳ ಪರಿಶ್ರಮದಿಂದಾಗಿ ಈ ಉಪಕರಣದಲ್ಲಿ ಅತಿ ಕಡಿಮೆ ಶಕ್ತಿಯ ನ್ಯೂಟ್ರಿನೋಗಳನ್ನು ಕಂಡುಹಿಡಿಯಲಾಗಿದೆ ಎಂದು ಎರಡು ತಿಂಗಳುಗಳ ಹಿಂದೆ ವಿಜ್ಞಾನಿಗಳು ಪ್ರತಿಷ್ಟಿತ ನಿಯತಕಾಲಿಕ ನೇಚರ್ ಪತ್ರಿಕೆಯಲ್ಲಿ ಪ್ರಕಟಿಸಿದರು. ಇವುಗಳ ಶಕ್ತಿ ೪೦೦ ಕಿಲೋ ಎಲೆಟ್ರಾನ್ ವೋಲ್ಟ್ (ಇದು ಶಕ್ತಿಯ ಒಂದು ಅಳತೆ)ಗಳಾಗಿದ್ದು, ಹಿಂದೆ ಕಂಡು ಹಿಡಿದಿದ್ದು ಇದಕ್ಕಿಂತ ೩ರಷ್ಟು ಹೆಚ್ಚು ಶಕ್ತಿ ಹೊಂದಿದ್ದವು. ಈ ಪ್ರಯೋಗದಿಂದ ನಕ್ಷತ್ರಗಳಲ್ಲಿ ನಡೆಯುವ ಬೆಸುಗೆ ಪ್ರಕ್ರಿಯೆಗಳಿಗೆ ನೇರ ಮತ್ತು ಖಚಿತ ಸಾಕ್ಷಿ ಸಿಕ್ಕಿದೆ ಎಂದು ಹೇಳಬಹುದು.

   ಬೆಳಕಿಗೆ ಹೋಲಿಸಿದರೆ ನ್ಯೂಟ್ರಿನೋಗಳು ಕೆಲವೇ ಸೆಕೆಂಡುಗಳ ಹಿಂದೆ ಉತ್ಪತ್ತಿಯಾದ ಕಣಗಳು. ಸೂರ್ಯನನ್ನು ಬಿಟ್ಟನಂತರ ಬೆಳಕಾಗಲೀ ನ್ಯೂಟ್ರಿನೋಗಳಾಗಲೀ ಭೂಮಿಗೆ ಬರಲು ೮ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸೂರ್ಯನಿಂದ ಬಿಡುಗಡೆಯಾಗುವ ಶಕ್ತಿಯನ್ನು ಎರಡು ವಿಧಗಳಲ್ಲಿ ಬೆಳಕಿನಿಂದ ಮತ್ತು ನ್ಯೂಟ್ರಿನೊಗಳಿಂದ ನಿರ್ಧರಿಸಬಹುದು. ಈ ಪ್ರಯೋಗದ ಪ್ರಕಾರ ಆ ಶಕ್ತಿಯ ಎರಡು ಮೌಲ್ಯಗಳೂ ಒಂದೇ ಎಂದು ಕಂಡು ಬಂದಿದೆ. ಅದ್ದರಿಂದ ಒಂದು ಲಕ್ಷ ವರ್ಷಗಳಲ್ಲಿ ಸೂರ್ಯನ ಪ್ರಕಾಶ ಕುಂದಿಲ್ಲ ಎಂದು ನಿರ್ಧರಿಸಬಹುದು. ಅದಲ್ಲದೆ ಈಗ ನ್ಯೂಟ್ರಿನೋಗಳಿಂದ ನಿರ್ಧರಿಸಿದ ಶಕ್ತಿಯ ಮೌಲ್ಯದಿಂದ ಮುಂದಿನ ಲಕ್ಷ ವರ್ಷಗಳವರೆವಿಗೆ ಸೂರ್ಯನ ಪ್ರಕಾಶ ಹೀಗೇ ಇರುತ್ತದೆ ಎಂದೂ ಹೇಳಬಹುದು.

   ಇನ್ನು ೧೦೦ ಕೋಟಿ ವರ್ಷಗಳಲ್ಲಿ ಸೂರ್ಯನ ಪ್ರಕಾಶ ೧೦% ಹೆಚ್ಚಾಗಲಿದ್ದು ಭೂಮಿಯ ಉಷ್ಣತೆ ೭೦ ಡಿಗ್ರಿ (ಸೆಲ್ಸಿಯಸ್) ಮುಟ್ಟಿ ಸಾಗರಗಳ ನೀರೆಲ್ಲಾ ಆವಿಯಾಗಿ ಹೋಗುತ್ತದೆ ಎಂಬ ಊಹೆಗಳಿವೆ. ಅನಂತರ ೪೦೦/೫೦೦ ಕೋಟಿ ವರ್ಷಗಳಲ್ಲಿ ಸೂರ್ಯ ಉಬ್ಬುತಾ ಹೋಗಿ ಕೆಂಪು ದೈತ್ಯ ಘಟ್ಟವನ್ನು ತಲುಪಿ ಭೂಮಿ ಅವನ ತೆಕ್ಕೆಗೆ ಸೇರಿರುತ್ತದೆ. ಅದಲ್ಲದೆ ಆಗಾಗ್ಗೆ ಮಧ್ಯೆ ತಾತ್ಕಾಲಿಕ ಬದಲಾವಣೆಗಳು ಇದ್ದೇ ಇರುತ್ತವೆ. ಈ ಮಧ್ಯವಯಸ್ಕ ನಕ್ಷತ್ರಕ್ಕೆ ಅಂತ್ಯದ ಸಮಯ ಬಹಳ ದೂರವಿದ್ದು ಈ ನ್ಯೂಟ್ರಿನೋ ಪ್ರಯೋಗಗಳು ಮುಂದಿನ ಶತಮಾನಗಳಲ್ಲಿ ಸೂರ್ಯನ ಪ್ರಕಾಶದ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಇರುತ್ತವೆ.

ರಾಮನ್ ಪರಿಣಾಮ: ಇದು ಬರೀ ಬೆಳಕಲ್ಲೋ ಅಣ್ಣಾ!

( ಸಂಪುಟ 9, ಸಂಚಿಕೆ 5, 1 ಫೆಬ್ರವರಿ 2015 )
ಜ್ಞಾನ-ವಿಜ್ಞಾನ – ಜಯ

2

   ಫೆಬ್ರುವರಿ 28 ರಂದು ದೇಶದಾದ್ಯಂತ ವಿಜ್ಞಾನದ ದಿನವನ್ನಾಗಿ ಆಚರಿಸುತ್ತೇವೆ. ಅಂದು ಡಾ: ಸರ್. ಸಿ.ವಿ. ರಾಮನ್ ರವರು ‘ರಾಮನ್ ಪರಿಣಾಮ’ ಎಂಬ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ನಿರೂಪಿಸಿ ತೋರಿಸಿದ ದಿನ.

ರಾಮನ್ ಪರಿಣಾಮದ ಮಹತ್ವ :

   ಇಂದು `ರಾಮನ್ ಪರಿಣಾಮ’ ದ್ರವ್ಯದ ಅಣುರಚನೆಯನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಮೈಕ್ರೋವೇವ್, ಲೇಸರ್, ಇನ್ಫ್ರಾರೆಡ್, ಅಲ್ಟ್ರಾ ವಯೋಲೆಟ್, ಮತ್ತು ಕ್ಷ-ಕಿರಣ ರಾಮನ್ ಸ್ಪೆಕ್ಟ್ರೋಸ್ಕೋಪಿ ಇಂದು ಮುಂಚೂಣಿಯಲ್ಲಿರುವ ಸಂಶೋಧನಾ ಕ್ಷೇತ್ರಗಳು. ಭೌತ, ಜೀವ, ರಸಾಯನ ಮತ್ತು ಖಗೋಳ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಹಲವು ವಿಭಾಗಗಳಲ್ಲಿ ಇದರ ಪರಿಣಾಮವಿದೆ.

   ರಾಮನ್ ಪರಿಣಾಮ ಕುರಿತು ಆಲ್ಬರ್ಟ್ ಐನ್ಸ್ಟೀನ್ ಸರಳವಾಗಿ ಈ ರೀತಿ ಹೇಳಿದ್ದಾರೆ: “ವಸ್ತುವಿನಲ್ಲಿ ಬೆಳಕಿನ ಚದುರುವಿಕೆಯಿಂದ ಬೆಳಕಿನ ಶಕ್ತಿಯಲ್ಲಾಗುವ ಬದಲಾವಣೆಯನ್ನು ಗುರುತಿಸಿದವರಲ್ಲಿ ರಾಮನ್ ಮೊದಲಿಗರು. ನನಗಿನ್ನೂ ಸ್ಪಷ್ಟವಾಗಿ ನೆನಪಿದೆ – ಬರ್ಲಿನ್ನಿನ ಭೌತಶಾಸ್ತ್ರ ಗೋಷ್ಟಿಯಲ್ಲಿ ಭಾಗವಹಿಸಿದ ನಮ್ಮೆಲ್ಲರ ಮೇಲೆ ಈ ಆವಿಷ್ಕಾರ ಗಾಢ ಪರಿಣಾಮ ಬೀರಿತ್ತು”.

   ಇಂದಿನ ದುರಂತವೆಂದರೆ, ‘ರಾಮನ್ ಪರಿಣಾಮ’ ವನ್ನು ಈ ದೇಶದಲ್ಲಿಯೇ ಆವಿಷ್ಕರಿಸಿದ್ದರೂ ಕೂಡ, ಈ ಪರಿಣಾಮದ ಆಧಾರದಲ್ಲಿ ಕಾರ್ಯನಿರ್ವಹಿಸುವ ಲೇಸರ್ ಉಪಕರಣಗಳನ್ನು ತಯಾರಿಸಲಾಗದೇ ಇಂದಿಗೂ ಆಮದು ಮಾಡಿಕೊಳ್ಳುತ್ತಿದ್ದೇವೆ.

ಸ್ವಾವಲಂಬಿ ಸಂಶೋಧನಾಲಯಗಳ ಸ್ಥಾಪನೆ :

   ಬಂಗಾಳದಲ್ಲಿ ರಾಜ್ಯ ವಿಭಜನೆ ವಿರುದ್ದ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟಗಳು ತೀವ್ರಗೊಂಡಿದ್ದ ಕಾಲವದು. ಇದರಿಂದಾಗಿ ಪ್ರತಿಷ್ಟಿತ ವಿಜ್ಞಾನ ಸಂಸ್ಥೆಗಳಲ್ಲಿ ಭಾರತೀಯರೇ ಹುದ್ದೆ ಅಲಂಕರಿಸಬೇಕೆಂದು ಕೋಲ್ಕತ್ತಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಇದರಿಂದಾಗಿ ಪ್ರತಿಭಾನ್ವಿತ ರಾಮನ್ರವರು ತಾವು ಕೆಲಸ ಮಾಡುತ್ತಿದ್ದ ಐಸಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಪ್ರೊಫೆಸರ್ ಹುದ್ದೆಗೆ ವಿಶ್ವವಿದ್ಯಾಲಯ ಸೇರಿದರು.

   1921 ರಲ್ಲಿ ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನದಲ್ಲಿ ಭಾಗವಹಿಸಿ ಹಡಗಿನಲ್ಲಿ ಭಾರತಕ್ಕೆ ರಾಮನ್ ಪ್ರಯಾಣಿಸುತ್ತಿದ್ದರು. ಆಗವರು ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿದ್ದರು. ಅಷ್ಟರಲ್ಲಾಗಲೇ ಅವರು ದೃಗ್ವಿಜ್ಞಾನ ಮತ್ತು ಧ್ವನಿ ವಿಜ್ಞಾನಗಳ ಅಧ್ಯಯನದಲ್ಲಿ ನಡೆಸಿರುವ ಸಂಶೋಧನೆ ಕುರಿತು ಇಂಗ್ಲೆಂಡ್ನ ಜೆ.ಜೆ. ಥಾಮ್ಸನ್ ಮತ್ತು ಲಾರ್ಡ್ ರುದರ್ಫರ್ಡ್ ರಂಥಹ ವಿಜ್ಞಾನಿಗಳ ಗಮನ ಸೆಳೆದಿದ್ದರು.

   ಹಡಗಿನ ಪಯಣದಲ್ಲಿ ಸಾಗರದ ಶುಭ್ರ ನೀಲಿ ಬಣ್ಣವನ್ನು ಕಂಡು ವಿಸ್ಮಯಗೊಂಡರು. ಆಗಸದ ನೀಲಿ ಬಣ್ಣಕ್ಕೆ ಕಾರಣವೇನೆಂದು ಲಾರ್ಡ್ ರಾಲೆ ಎಂಬ ವಿಜ್ಞಾನಿ ಅದಾಗಲೇ ವಿವರಣೆ ನೀಡಿ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದ್ದ. ವಾಯುಮಂಡಲದಲ್ಲಿರುವ ಧೂಳಿನ ಕಣಗಳು ಮತ್ತು ವಿವಿಧ ಅನಿಲಗಳು ಬೆಳಕನ್ನು ಚದುರಿಸುವುದರಿಂದ ಬೆಳಕಿನಲ್ಲಿರುವ ನೀಲಿ ಬಣ್ಣ ಹೆಚ್ಚು ಚದುರುತ್ತದೆ, ಹಾಗಾಗಿ ಬಾನಿನ ಬಣ್ಣ ನೀಲಿ ಎಂದು ವಿವರಿಸಿದ್ದ. ಆದರೆ ಸಮುದ್ರದ ಬಣ್ಣಕ್ಕೆ ಕಾರಣ ಕೊಡಲು ಸಾಧ್ಯವಾಗಿರಲಿಲ್ಲ.

   ರಾಮನ್ ಕಣ್ಣ ಮುಂದೆ ನೀಲಿ ಬಣ್ಣ ಹೊದ್ದ ನೀರು ಕಂಗೊಳಿಸುತ್ತಿತ್ತು. ಮೈ ಮನವೆಲ್ಲ ಬೆಳಕಿನ ಚದುರುವಿಕೆಯ ವಿಷಯದಲ್ಲಿ ಲೀನವಾಗಿತ್ತು. ನೀರಿನ ಅಣುಗಳು ಬೆಳಕಿನಲ್ಲಿರುವ ನೀಲಿ ಬಣ್ಣವನ್ನು ಹೆಚ್ಚಿನ ಪ್ರಮಾಣದಲ್ಲಿ ಚದುರಿಸುವುದೇ ಈ ನೀಲಿಗೆ ಕಾರಣವೆಂದು ಆಲೋಚಿಸತೊಡಗಿದರು. ಸಮುದ್ರದ ನೀರನ್ನು ಅಲ್ಲಿಯೇ ಪಾತ್ರೆಗಳಲ್ಲಿ ಸಂಗ್ರಹಿಸಿ ರೋಹಿತ ದರ್ಶಕ ಬಳಸಿ ಹಡಗಿನಲ್ಲಿಯೇ ಪ್ರಯೋಗ ಮಾಡತೊಡಗಿದರು. ಹಡಗು ಮುಂಬೈ ಬಂದರು ತಲುಪುವ ಹೊತ್ತಿಗೆ ಅವರ ಪ್ರಯೋಗ ಫಲಿತಾಂಶಗಳು ಸಂಶೋಧನ ಲೇಖನವಾಗಿದ್ದವು. ಶೀಘ್ರದಲ್ಲೇ ಪ್ರಸಿದ್ದ “ನೇಚರ್” ಪತ್ರಿಕೆಯಲ್ಲಿ ಪ್ರಕಟವಾದವು.

ಬೆಳಕಿನ ಚದುರುವಿಕೆ ಕುರಿತು ಸಂಶೋಧನೆ

   ವಿಜ್ಞಾನದಲ್ಲಿ ಸಂಶೋಧನೆಗಳು ಬಹುಮಟ್ಟಿಗೆ ಏಕ ವ್ಯಕ್ತಿಯ ಸಾಹಸಗಾಥೆಗಳಲ್ಲ, ಬದಲಿಗೆ ಹಲವು ದಿಗ್ಗಜರ ಸಾಂಘಿಕ ಪ್ರಯತ್ನ. ರಾಮನ್ ರವರಿಗೆ ಸಹಾಯಕ ಸಂಶೋಧಕರಾಗಿದ್ದ ಕೆ.ಆರ್. ರಾಮನಾಥನ್ರವರು ಇಂದು ‘ರಾಮನ್ ರೇಖೆಗಳು’ ಎಂದು ಕರೆಯಲಾಗುವುದನ್ನು 1921ರಲ್ಲಿಯೇ ಗುರುತಿಸಿದ್ದರಾದರೂ, ಅವುಗಳು ದ್ರವದಲ್ಲಿನ ಅಶುದ್ದತೆಯಿಂದಾಗಿ ಕಾಣುವ ರೇಖೆಗಳು ಎಂದು ತಪ್ಪು ತಿಳಿಯಲಾಯಿತು. ತದನಂತರ ಬೆಳಕಿನ ಚದುರುವಿಕೆಯನ್ನು ಪ್ರಾಯೋಗಿಕವಾಗಿ ಸ್ಪಷ್ಟಪಡಿಸಲು ರಾಮನ್ ತನ್ನ ಶಿಷ್ಯಂದಿರೊಂದಿಗೆ ತೊಡಗಿದರು. ಇವರಲ್ಲಿ ಬಡತನದ ಮಧ್ಯೆಯೂ ಸಂಶೋಧಕನಾಗಿ ರೂಪುಗೊಳ್ಳುತ್ತಿದ್ದ ಕೆ.ಎಸ್. ಕೃಷ್ಣನ್ ಬಹು ಪ್ರಮುಖರು. 1927 ರ ಹೊತ್ತಿಗೆ ಅಮೇರಿಕಾದ ಡೆನಿಸ್ ಕಾಂಪ್ಟನ್ ರವರಿಗೆ `ಕಾಂಪ್ಟನ್ ಪರಿಣಾಮ’ದ ಆವಿಷ್ಕಾರಕ್ಕಾಗಿ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಘನ ದ್ರವ್ಯಗಳಲ್ಲಿ ಕ್ಷ-ಕಿರಣಗಳ ಚದುರುವಿಕೆಯನ್ನು ಮತ್ತು ಆ ಮೂಲಕ ಅವುಗಳ ಅಲೆಯುದ್ದ ಹೆಚ್ಚುವ ವಿಶಿಷ್ಟ ವಿದ್ಯಮಾನವನ್ನು ಕಾಂಪ್ಟನ್ ವಿವರಿಸಿದ್ದರು. ಅಲ್ಲದೆ, ಅಷ್ಟರಲ್ಲಾಗಲೇ ಬೆಳಕು ಯಾವುದೇ ಮಾಧ್ಯಮದ ಮೂಲಕ ಚಲಿಸುವಾಗ ಉಂಟಾಗುವ ಪರಿಣಾಮದ ಕುರಿತು ಸೈದ್ದಾಂತಿಕ ಹೊಳಹುಗಳು ದೊರೆತಿದ್ದವು. 1923ರಲ್ಲಿ ಜರ್ಮನಿಯ ಭೌತವಿಜ್ಞಾನಿಗಳಾದ ಸ್ಮೆಕೆಲ್, ಬಾರ್ನ್, ಹೈಸೆನ್ಬರ್ಗ್, ಕ್ರಾಮರ್ ಹಾಗೂ 1927ರಲ್ಲಿ ಡಿರಾಕ್ ಎಂಬ ವಿಜ್ಞಾನಿಗಳು, ಬೆಳಕಿನ ಕಿರಣವು ಯಾವುದೇ ಪದಾರ್ಥದ ಮೂಲಕ ಹಾದುಹೋಗುವಾಗ ಚದುರುವಿಕೆಯಿಂದ ಕಿರಣದ ಅಲೆಯುದ್ದದಲ್ಲಿ ವ್ಯತ್ಯಾಸವಾಗುತ್ತದೆಂದು ಊಹಿಸಿದ್ದರು. ಇದನ್ನು ಪ್ರಾಯೋಗಿಕವಾಗಿ ನಿರೂಪಿಸಲು ಹಲವು ವಿಜ್ಞಾನಿಗಳ ತಂಡ ಪೈಪೋಟಿ ನಡೆಸಿತ್ತು.

ರಾಮನ್ ಪರಿಣಾಮ ಎಂದರೇನು?

   1928ರ ಫೆಬ್ರುವರಿ 28ರಂದು ತಮ್ಮ ಪ್ರಯೋಗದಲ್ಲಿ ರಾಮನ್ ಮತ್ತು ಕೃಷ್ಣನ್ ಮೊದಲ ಯಶಸ್ಸು ಕಂಡರು. ದ್ರವ ಮಾಧ್ಯಮದಲ್ಲಿ ಬೆಳಕಿನ ಅಲೆಗಳನ್ನು ದ್ರವದ ಅಣುಗಳು ಚದುರಿಸುವ ಮೂಲಕ ಬೆಳಕಿನ ರೋಹಿತ ರೇಖೆಯ ಅಲೆಯುದ್ದ ವ್ಯತ್ಯಾಸವಾಗಿ ಹೊಸ ರೇಖೆಗಳು ಪ್ರಕಟವಾಗುವ ಹೊಸ ವಿದ್ಯಮಾನವನ್ನು ಅಂದು ಅವರಿಬ್ಬರು ಕಂಡರು.

   ಸೂಕ್ಷ್ಮ ಕಣ (ಕ್ವಾಂಟಂ) ಸಿದ್ದಾಂತ ಬೆಳೆದು ಬರುತ್ತಿದ್ದ ಕಾಲವದು. ಬೆಳಕಿನ ಕಿರಣ ಅಸಂಖ್ಯಾತ ಶಕ್ತಿಯ ಪ್ಯಾಕೆಟ್ ಅಥವಾ ಪೋಟಾನುಗಳ ಪ್ರವಾಹ ಎಂದು ಇದು ಹೇಳುತ್ತದೆ. ಇದನ್ನು ರಾಮನ್ ಬಳಸಿಕೊಂಡು ತನ್ನ ಆವಿಷ್ಕಾರವನ್ನು ವಿವರಿಸಿದರು. ಮಾಧ್ಯಮದ ಮೂಲಕ ಬೆಳಕು ಹಾದು ಹೋಗುವಾಗ ಬೆಳಕಿನ ಕಿರಣದಲ್ಲಿರುವ ಪೋಟಾನುಗಳು ಮತ್ತು ಮಾಧ್ಯಮದ ಅಣುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಇಲ್ಲಿ ಮೂರು ಸಾಧ್ಯತೆಗಳಿವೆ: ಮೊದಲನೆಯ ಸಾಧ್ಯತೆ, ಡಿಕ್ಕಿ ಹೊಡೆದ ಪೋಟಾನು ಅಥವಾ ಅಣುಗಳು ಹಿಗ್ಗುವಂತವಾಗಿದ್ದರೆ, ಡಿಕ್ಕಿ ಹೊಡೆದ ನಂತರದಲ್ಲಿ ಅವುಗಳಲ್ಲಿನ ಶಕ್ತಿಯಲ್ಲಿ ಏರುಪೇರು ಆಗಿರುವುದಿಲ್ಲ. ಇಂಥಹ ಹಿಗ್ಗುವ ಸ್ವಭಾವದ ಚದುರುವಿಕೆಯನ್ನು ರಾಲೆ ಚದುರುವಿಕೆ ಎನ್ನುತ್ತಾರೆ. ಎರಡನೆಯ ಸಾಧ್ಯತೆ, ಡಿಕ್ಕಿ ಹೊಡೆದಾಗ ಮಾಧ್ಯಮ ಅಣುಗಳು ಮೂಲ ಬೆಳಕಿನ ಕಿರಣದಿಂದ ಸ್ವಲ್ಪಾಂಶ ಶಕ್ತಿಯನ್ನು ಹೀರಿದ ಪರಿಣಾಮವಾಗಿ ಚದುರಿಸಲ್ಪಟ್ಟ ಬೆಳಕಿನ ಶಕ್ತಿ ಕಡಿಮೆಯಾಗಿ ಅದರ ಅಲೆಯುದ್ದ ಹೆಚ್ಚುವುದು. ಮತ್ತೊಂದು ಸಾಧ್ಯತೆ, ಸ್ವಯಂ ಅಣುಗಳು ಬೆಳಕಿನ ಕಿರಣಗಳಿಗೆ ಶಕ್ತಿಯನ್ನು ನೀಡುವ ಮೂಲಕ ಚದುರಿಸಲ್ಪಟ್ಟ ಕಿರಣದ ಶಕ್ತಿ ಹೆಚ್ಚಿ ಅಲೆಯುದ್ದ ಕಡಿಮೆಯಾಗುವುದು. ಕೊನೆಯ ಇವೆರಡೂ ಸಾಧ್ಯತೆಗಳಲ್ಲಿ, ಅಂದರೆ ಡಿಕ್ಕಿ ಹೊಡೆದ ಸ್ವಲ್ಪಾಂಶ ಬೆಳಕಿನ ಕಿರಣಗಳಲ್ಲಿನ ಅಲೆಯುದ್ದ ಬದಲಾಗಿ, ಆ ಕಿರಣದ ಬಣ್ಣವೂ ಬದಲಾಗುತ್ತದೆ. ಪರಿಣಾಮವಾಗಿ ಮೂಲ ರೋಹಿತ ರೇಖೆಯ ಇಕ್ಕೆಲೆಗಳಲ್ಲಿ ನೂತನ ರೇಖೆಗಳು ಪ್ರಕಟವಾಗುತ್ತವೆ. ಅವುಗಳ ಅಲೆಯುದ್ದ, ತೀವ್ರತೆ ಮಾಧ್ಯಮದ ಅಣುಗಳ ರಚನೆಯನ್ನು ಅವಲಂಬಿಸಿದೆ. ಡಿಕ್ಕಿ ಹೊಡೆದು ಚದುರಿದ 10 ಲಕ್ಷ ಬೆಳಕಿನ ಕಣಗಳು ಅಥವಾ ಪೋಟಾನ್ಗಳ ಪೈಕಿ ಕೇವಲ ಒಂದು ಮಾತ್ರವೇ ವಿದ್ಯಮಾನಕ್ಕೆ ಒಳಗಾಗುತ್ತವೆ. ಹೀಗೆ ಬೆಳಕಿನ ಚದುರುವಿಕೆಯ ವಿದ್ಯಮಾನಕ್ಕೆ ರಾಮನ್ ಪರಿಣಾಮ ಎನ್ನುತ್ತೇವೆ.

ರಾಮನ್ ಪರಿಣಾಮದಲ್ಲಿ ಕೃಷ್ಣನ್ ಪಾತ್ರ :

   ರಾಮನ್ ನಿರೀಕ್ಷೆಯಂತೆ 1930ರಲ್ಲಿ ನೊಬೆಲ್ ಒಲಿಯಿತು. ನೊಬೆಲ್ ಪ್ರಶಸ್ತಿ ವಿಜೇತ ಎಸ್. ಚಂದ್ರಶೇಖರ್ ಹೇಳುವಂತೆ “ನನ್ನ ವೈಯುಕ್ತಿಕ ಅಭಿಪ್ರಾಯವೆಂದರೆ ಇಬ್ಬರು ಶ್ರೇಷ್ಟ ವಿಜ್ಞಾನಿಗಳಾದ ರಾಮನ್ ಮತ್ತು ಕೃಷ್ಣನ್ ನಡುವಿನ ಪರಸ್ಪರ ಸಹಕಾರ ಮತ್ತು ಉತ್ತೇಜನದಿಂದ ರಾಮನ್ ಪರಿಣಾಮದ ಆವಿಷ್ಕಾರವಾಯಿತು”. ರಾಮನ್ ಕೂಡ ಈ ಆವಿಷ್ಕಾರದಲ್ಲಿ ಕೃಷ್ಣನ್ ರವರ ಕೊಡುಗೆಯನ್ನು ಅರ್ಥವತ್ತಾಗಿ ಈ ರೀತಿ ಹೇಳಿದ್ದಾರೆ: “ನೊಬೆಲ್ ಪ್ರಶಸ್ತಿಯನ್ನು 1921 ರಿಂದ ಕೋಲ್ಕತ್ತಾದಲ್ಲಿ ಬೆಳಕಿನ ಚದುರುವಿಕೆ ಬಗ್ಗೆ ನಡೆಸಿದ ಸಂಶೋಧನೆಗಳ ಬದಲಿಗೆ 1928ರ ಸಂಶೋಧನೆಯನ್ನಷ್ಟೇ ಗಮನಿಸಿ ನೀಡಿದ್ದಾದರೆ, ಕೃಷ್ಣನ್ ಅವರಿಗೂ ಇದು ಅರ್ಹವಾಗಿಯೇ ಸಲ್ಲಬೇಕು”.

10.7 ವರ್ಷಗಳ ಕಾಲ 600 ಕೋಟಿ ಕಿ.ಮೀ. ದೂರ ಕ್ರಮಿಸಿದ ರೋಸೆಟ್ಟಾ ಗಗನನೌಕೆ

( ಸಂಪುಟ 8, ಸಂಚಿಕೆ 47, 23 ನವೆಂಬರ್ 2014 )

ಜ್ಞಾನ – ವಿಜ್ಞಾನ = ಜಯ

ಧೂಮಕೇತುವಿನ ಮೇಲೆ ಪಾದರ್ಪಣೆ ಮಾಡಿದ ಉಪಗ್ರಹ  

ರೋಸೆಟ್ಟಾ ಗಗನನೌಕೆಯ ದೀರ್ಘ ಪಯಣ

 

 

   ರೋಸೆಟ್ಟಾ ಎಂಬ ಗಗನನೌಕೆಯು ಸುಮಾರು 10.7 ವರ್ಷಗಳ ಕಾಲ 600 ಕೋಟಿ ದೂರವನ್ನು ಗಗನದಲ್ಲಿ ಕ್ರಮಿಸಿ, ಮೊದಲಬಾರಿಗೆ ಮೊನ್ನೆಯಷ್ಟೇ ಧೂಮಕೇತುವಿನ ಅತಿ ಸನಿಹಕ್ಕೆ ತಲುಪಿತು. ತನ್ನಲ್ಲಿದ್ದ ಫಿಲೈ ಎಂಬ ರೋಬೋಟ್ ಲ್ಯಾಂಡರ್‌ನ್ನು ಹೊರಬಿಚ್ಚಿದಾಕ್ಷಣ ಅದು ಆ ಧೂಮಕೇತುವಿನ ಚಿತ್ರಗಳನ್ನು ಚಕಚಕನೆ ಕ್ಲಿಕ್ಕಿಸಿ ಭೂಮಿಯಲ್ಲಿನ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿಕೊಟ್ಟಿತು. ನಂತರ ಕೆಲವೇ ಕ್ಷಣಗಳಲ್ಲಿ ಈ ಲ್ಯಾಂಡರ್ ಧೂಮಕೇತುವಿನ ಮೇಲೆ ಪಾದರ್ಪಣೆ ಮಾಡಿತು. ಪ್ರಥಮ ಬಾರಿಗೆ ಧೂಮಕೇತುವಿನ ಮೇಲೆ ಪಾದರ್ಪಣೆ ಮಾಡಿದ ಲ್ಯಾಂಡರ್ ಇದು. ಧೂಮಕೇತುವು ಘಂಟೆಗೆ 35,000 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದರೆ, ಗಗನನೌಕೆಯು ಘಂಟೆಗೆ 1.35 ಲಕ್ಷ ಕಿ.ಮೀ. ವೇಗದಲ್ಲಿ ಅದನ್ನು ಬೆಂಬತ್ತಿ ತಲುಪಿದೆ.

   67ಪಿ ಎಂಬ ಹೆಸರಿನ ಈ ಧೂಮಕೇತುವನ್ನು ಮೊದಲಿಗೆ 1969ರಲ್ಲಿ ಸೋವಿಯತ್ ವಿಜ್ಞಾನಿಗಳಾದ ಚ್ಯುರಿಮೊವ್ ಮತ್ತು ಗೆರೆಸಿಮೆಂಕೋರವರು ಪತ್ತೆ ಹಚ್ಚಿದರು. ಇದರ ಅಧ್ಯಯನಕ್ಕಾಗಿ ಯೂರೋಪ್ ಬಾಹ್ಯಾಕಾಶ ಸಂಸ್ಥೆಯು 2004ರ ಮಾರ್ಚ್ ತಿಂಗಳಲ್ಲಿ ರೋಸೆಟ್ಟಾ ಎಂಬ ಗಗನನೌಕೆಯನ್ನು ಫಿಲೈ ಎಂಬ ರೋಬೋಟ್ ಲ್ಯಾಂಡರ್ ನೊಂದಿಗೆ ಸುಮಾರು 11 ಇತರೆ ಉಪಕರಣಗಳ ಸಮೇತ ಉಡಾವಣೆ ಮಾಡಿತ್ತು. ಮೊನ್ನೆಯಷ್ಟೇ ಅಂದರೆ ಸುಮಾರು 10.7  ವರ್ಷಗಳ ಸುದೀರ್ಘ ಪಯಣದ ನಂತರ ಇವುಗಳು ಧೂಮಕೇತುವನ್ನು ತಲುಪಿವೆ.  ಗಗನನೌಕೆ ಮತ್ತು ಉಪಗ್ರಹಗಳ ನಿಯಂತ್ರಣ ಕಾರ್ಯವನ್ನು ಜರ್ಮನಿಯಲ್ಲಿರುವ ಯೂರೋಪ್ ಬಾಹ್ಯಾಕಾಶ ಸಂಸ್ಥೆಯ ನಿಯಂತ್ರಣ ಕೇಂದ್ರದಿಂದ ನಿರ್ವಹಿಸಲಾಗುತ್ತಿದೆ. ರೋಸೆಟ್ಟಾ ಗಗನನೌಕೆಗೆ ಅದರಲ್ಲಿರುವ 1500 ವ್ಯಾಟ್ ಸಾಮರ್ಥ್ಯದ ಸೌರ ಪ್ಯಾನೆಲ್‌ಗಳಿಂದ ವಿದ್ಯುತ್ ಪೂರೈಕೆಯಾಗುತ್ತದೆ. ಗಗನನೌಕೆಯನ್ನು ಹೊತ್ತಿದ್ದ ರಾಕೆಟ್ ಸುಮಾರು 1,670 ಕೆ.ಜಿ. ಇಂಧನವನ್ನು ಕೊಂಡೊಯ್ದಿತ್ತು. ಫಿಲೈ ಲ್ಯಾಂಡರ್ ಸುಮಾರು 100 ಕೆಜಿ ತೂಕವಿದೆ.

ಗಗನನೌಕೆಯ ಉದ್ದೇಶ :

   ರೋಸೆಟ್ಟಾ-ಫಿಲೈ ಗಗನನೌಕೆ ಉಪಗ್ರಹಗಳ ಉದ್ದೇಶ ನಮ್ಮ ಸೌರವ್ಯೂಹ ಇತಿಹಾಸ ಕುರಿತ ದೊಡ್ಡ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು. ಮೊದಲಿಗೆ ಸೂರ್ಯನಿಂದ 80 ಕೋಟಿ ಕಿ.ಮೀ. ದೂರ ಕ್ರಮಿಸಿದ ಈ ಗಗನನೌಕೆಯು ಎರಡು ಕ್ಷುದ್ರಗಹಗಳನ್ನು ಬೆಂಬತ್ತುವ ಕಾರ್ಯ ನಿಮಿತ್ತ ಗುರುಗ್ರಹದ ಕಕ್ಷೆಯನ್ನು ದಾಟಿ ಭೂಮಿಯನ್ನು ಮೂರು ಸಲ ಮಂಗಳ ಗ್ರಹ ಕಕ್ಷೆಯನ್ನು ಒಂದು ಬಾರಿ ದಾಟಿದೆ.

ಧೂಮಕೇತುಗಳ ಅಧ್ಯಯನದ ಪ್ರಾಮುಖ್ಯತೆ : 

   ಧೂಮಕೇತುಗಳೆಂದರೆ ಅತಿ ಭಯಪಡುತ್ತಿದ್ದ ಕಾಲವೊಂದಿತ್ತು. ಧೂಮಕೇತುಗಳು ಅನ್ಯ ಗ್ರಹ ಜೀವಿಗಳೆಂದೂ, ಅವು ಭೂಗ್ರಹದ ಜೀವಿಗಳ ಮೇಲೆ ಧಾಳಿ ಇಡುತ್ತವೆಂದೂ, ಅವು ಅಪಶಕುನಗಳ ಸಂಕೇತವೆಂದೂ, ಇತ್ಯಾದಿ ನಂಬಿಕೆಗಳಿದ್ದವು. ಆದರೆ ಧೂಮಕೇತುಗಳು ನಮ್ಮ ಸೌರವ್ಯೂಹದಲ್ಲಿನ ಅತಿ ಶೀತಲ ಪ್ರದೇಶದಲ್ಲಿ ರೂಪುಗೊಂಡ ವಸ್ತುಗಳು. ಅವುಗಳು ಮಂಜುಗಡ್ಡೆ, ನೀರು ಮತ್ತು ಧೂಳಿನಿಂದ ಕೂಡಿದ್ದು, ಅವುಗಳು ಭೂಮಿಯ ಮೇಲೆ ಬಿದ್ದ ಕಾರಣ ಕೋಟ್ಯಾನುಕೋಟಿ ವರ್ಷಗಳ ಹಿಂದೆ ಭೂಮಿಯ ವಿಕಾಸದಲ್ಲಿ ಮತ್ತು ಹಲವು ಮೂಲಧಾತುಗಳನ್ನು ಭೂಮಿಗೆ ನೀಡಿರುವುದರಲ್ಲಿ ಮಹತ್ತರ ಪಾತ್ರ ವಹಿಸಿವೆ ಎನ್ನಲಾಗುತ್ತದೆ. ಇಂದಿಗೆ ಸುಮಾರು 5200 ಧೂಮಕೇತುಗಳನ್ನು ಗುರುತಿಸಲಾಗಿದೆ. ಧೂಮಕೇತುಗಳ ಅಧ್ಯಯನ ನಡೆಸಲು ಅವುಗಳು ಕಾಣಿಸಿಕೊಂಡಾಕ್ಷಣ ಅವುಗಳ ಚಿತ್ರಗಳು, ಅವುಗಳು ಹೊಂದಿರುವ ವಸ್ತುಗಳ ಸ್ಯಾಂಪಲ್ ಮಾದರಿಗಳನ್ನು ಕಲೆಹಾಕಿ ಖಗೋಳವಿಜ್ಞಾನಿಗಳು ವಿಶ್ಲೇಷಣೆ ಮಾಡುತ್ತಾ ಬಂದಿದ್ದಾರೆ.

   460 ಕೋಟಿ ವರ್ಷಗಳ ಹಿಂದೆ ಸೌರವ್ಯೂಹವು ರೂಪುಗೊಂಡ ಸಂದರ್ಭಕ್ಕೂ ಮುಂಚಿನ ಸೌರ-ಗರ್ಭಾವಸ್ಥೆಯ ಸಂರಚನೆಯನ್ನು ಈ ಧೂಮಕೇತುಗಳು ಹೊಂದಿವೆ. ಇದರಿಂದ ನಮ್ಮ ಸೌರವ್ಯೂಹ ಮತ್ತು ಭೂಮಿಯ ವಿಕಾಸದ ಕುರಿತು ಮಾಹಿತಿಗಳಿಗಾಗಿ ಧೂಮಕೇತುಗಳ ಅಧ್ಯಯನ ಪ್ರಾಮುಖ್ಯತೆ ಪಡೆದಿದೆ. ಇದಕ್ಕೂ ಮುನ್ನವೇ ಸೌರವ್ಯೂಹವು ಉಗಮಗೊಂಡ ಬಾಲ್ಯಾವಸ್ಥೆಯಲ್ಲಿ ಯಾವ ರೀತಿಯ ಪರಿಸ್ಥಿತಿ ಇದ್ದವು? ಸೌರವ್ಯೂಹ ವಿಕಾಸದಲ್ಲಿ ಧೂಮಕೇತುಗಳ ಪಾತ್ರವೇನು? ಧೂಮಕೇತುಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಎಂಬುದು ಸಂಶೋಧನೆಯ ವಿಷಯವಾಗಿದೆ.