ಉದ್ಯೋಗಗಳು ಎಲ್ಲಿವೆ ?!

ಸಂಪುಟ: 10ಸಂಚಿಕೆ: 20 May 8, 2016
udyoga

ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವನ್ನು ತಮ್ಮ ಪ್ರಧಾನ ಚುನಾವಣಾ ಆಶ್ವಾಸನೆಯಾಗಿ ಮಾಡಿದ್ದರು. ಮೋದಿ ಸರಕಾರದ ಎರಡು ವರ್ಷಗಳ ನಂತರ ಉದ್ಯೋಗ ರಂಗದಲ್ಲಿನ ಶೋಚನೀಯ ದಾಖಲೆ ಎದ್ದು ಕಾಣುತ್ತಿದೆ.
ನವ-ಉದಾರವಾದಿ ಬೆಳವಣಿಗೆ ಉದ್ಯೋಗಗಳನ್ನು ನಿರ್ಮಿಸುವುದಿಲ್ಲ, ಬದಲಿಗೆ ಉದ್ಯೋಗಗಳನ್ನು ಕೊಲ್ಲುತ್ತದೆ. ಧೋರಣೆಗಳಲ್ಲಿ ಮೂಲಭೂತ ಬದಲಾವಣೆ ತರದೆ ಕೇವಲ ವ್ಯವಸ್ಥೆಗೆ ಎಷ್ಟೇ ತೇಪೆ ಹಾಕಿದರೂ ನಿರುದ್ಯೋಗದ ಸಮಸ್ಯೆ ಪರಿಹಾರವಾಗುವುದಿಲ್ಲ.
ಈಗ ಬೇಕಾಗಿರುವುದು ಒಂದು ಪರ್ಯಾಯ ಬೆಳವಣಿಗೆಯ ಪಥ, ಎಲ್ಲ ವಲಯಗಳಲ್ಲೂ ಉದ್ಯೋಗಾವಕಾಶಗಳನ್ನು ನಿರ್ಮಿಸಬಲ್ಲ ದಿಕ್ಕು. ಕೃಷಿಯಲ್ಲಿ ಮತ್ತು ಮೂಲರಚನೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಏಕೆಂದರೆ ಇವೇ ಉದ್ಯೋಗಗಳನ್ನು ನಿರ್ಮಿಸುವಂತವು.

ಇತ್ತೀಚೆಗೆ ಕಾರ್ಪೊರೇಟ್ ಮಾಧ್ಯಮಗಳು ದೇಶದಲ್ಲಿ ಹೆಚ್ಚುತ್ತಿರುವ ಉದ್ಯೋಗಹೀನತೆ ಮತ್ತು ಉದ್ಯೋಗಾವಕಾಶ ಬೆಳವಣಿಗೆಯ ಕೊರತೆಯ ಸಮಸ್ಯೆಯನ್ನು ಚರ್ಚಿಸುತ್ತಿವೆ. ಬಹುಶಃ ಲೇಬರ್ ಬ್ಯೂರೊ ನಡೆಸುತ್ತಿರುವ ಎಂಟು ಹೆಚ್ಚಿನ ಉದ್ಯೋಗಾವಕಾಶಗಳು ಬೇಕಾಗುವ ಉದ್ದಿಮೆಗಳ ತ್ರೈಮಾಸಿಕ ಉದ್ಯೋಗ ಸರ್ವೆಯಿಂದ ಇದು ಸ್ಫುರಿಸಿರಬೇಕು. ಜವಳಿ, ಗಾರ್ಮೆಂಟ್, ಆಭರಣ ತಯಾರಿ, ಮಾಹಿತಿ ತಂತ್ರಜ್ಞಾನ, ಚರ್ಮ, ಕೈಮಗ್ಗ, ಲೋಹಗಳು ಮತ್ತು ವಾಹನಗಳು ಈ ಎಂಟು ಉದ್ದಿಮೆಗಳಲ್ಲಿ 2015ರಲ್ಲಿ ಕೇವಲ 1.35 ಲಕ್ಷ ಉದ್ಯೋಗಗಳು ನಿರ್ಮಾಣವಾದವು, 2014ರಲ್ಲಿ ಇದು 4.9ಲಕ್ಷ ಇತ್ತು, 2009ರಲ್ಲಿ 12.5 ಲಕ್ಷ ಇತ್ತು  ಎಂದು ಈ ಸರ್ವೆಗಳು ತೋರಿಸಿವೆ.

ಗ್ರಾಮೀಣ ಉದ್ಯೋಗಗಳಿಗೆ ಸಂಬಂಧ ಪಟ್ಟಂತೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದಲ್ಲಿ  ಕೃಷಿಯ ಪಾಲು ಇಳಿಮುಖವಾಗುತ್ತಿದೆ. ಗ್ರಾಮೀಣ ಬಡವರು ಮತ್ತು ಯುವಜನತೆಗೆ ಕೃಷಿ ಬಿಟ್ಟು ಬೇರೆ ಉದ್ಯೋಗಗಳನ್ನು ಒದಗಿಸಬಲ್ಲ ಕ್ರಮಗಳಿಲ್ಲ. ಈ ವರ್ಷದ ಮಾರ್ಚ್ ತಿಂಗಳ ಮೂರನೇ ವಾರದ ವರೆಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿದವರ ಸಂಖ್ಯೆ 8.4 ಕೋಟಿ. ಇದು ಗ್ರಾಮೀಣ ನಿರುದ್ಯೋಗ  ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ತೋರಿಸುತ್ತದೆ.

ಹುಸಿಯಾದ ಚುನಾವಣಾ ಆಶ್ವಾಸನೆ

ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವನ್ನು ತಮ್ಮ ಪ್ರಧಾನ ಚುನಾವಣಾ ಆಶ್ವಾಸನೆಯಾಗಿ ಮಾಡಿದ್ದರು. ಮೋದಿ ಸರಕಾರದ ಎರಡು ವರ್ಷಗಳ ನಂತರ ಉದ್ಯೋಗ ರಂಗದಲ್ಲಿನ ಶೋಚನೀಯ ದಾಖಲೆ ಎದ್ದು ಕಾಣುತ್ತಿದೆ. ಸರಕಾರ 7.5ಶೇ. ಜಿಡಿಪಿ ಬೆಳವಣಿಗೆಯಾಗಿದೆ ಎನ್ನುತ್ತದೆ. ಈ ದಾವೆಯೇ ನಂಬಲರ್ಹವಲ್ಲ. ಆದರೂ ಇಂತಹ ನವ-ಉದಾರವಾದಿ ಬೆಳವಣಿಗೆ ಉದ್ಯೋಗಾವಕಾಶ ಗಳನ್ನು ನಿರ್ಮಿಸಲಾರದು ಎಂಬುದು ಸ್ವಯಂವೇದ್ಯ.

ಸರಳ ಸಂಗತಿಯೆಂದರೆ ನವ-ಉದಾರವಾದಿ ಬೆಳವಣಿಗೆ ಉದ್ಯೋಗಗಳನ್ನು ನಿರ್ಮಿಸುವುದಿಲ್ಲ, ಬದಲಿಗೆ ಉದ್ಯೋಗಗಳನ್ನು ಕೊಲ್ಲುತ್ತದೆ. ಧೋರಣೆಗಳಲ್ಲಿ ಮೂಲಭೂತ ಬದಲಾವಣೆ ತರದೆ ಕೇವಲ ವ್ಯವಸ್ಥೆಗೆ ಎಷ್ಟೇ ತೇಪೆ ಹಾಕಿದರೂ ನಿರುದ್ಯೋಗದ ಸಮಸ್ಯೆ ಪರಿಹಾರವಾಗುವುದಿಲ್ಲ.

ಖಾಸಗಿ ಹೂಡಿಕೆ ಮತ್ತು ಖಾಸಗೀಕರಣವನ್ನು ಹೆಚ್ಚೆಚ್ಚು ಅವಲಂಬಿಸುವುದರಿಂದ ಉದ್ಯೋಗಾವಕಾಶಗಳೇನೂ ಹುಟ್ಟಿಕೊಳ್ಳುವುದಿಲ್ಲ. ಏಕೆಂದರೆ ನವ-ಉದಾರವಾದಿ ಅರ್ಥಶಾಸ್ತ್ರ ಹೂಡಿಕೆಗಳು ಬಂಡವಾಳ ಹೆಚ್ಚಾಗಿ ಬೇಕಾಗುವ, ಶ್ರಮ ಉಳಿಸುವ ತಂತ್ರಜ್ಞಾನವನ್ನು ಅವಲಂಬಿಸುವ, ಆಮೂಲಕ ದೊಡ್ಡ ಪ್ರಮಾಣದಲ್ಲಿ ದುಡಿಮೆಗಾರರ ಪಡೆಯ ಅಗತ್ಯವಿಲ್ಲದ ಕ್ಷೇತ್ರಗಳಿಗೆ ಹೋಗುವಂತೆ ಮಾಡುತ್ತದೆ. ಅಲ್ಲದೆ ಉದ್ಯೋಗ ಕಾಂಟ್ರಾಕ್ಟ್ ಆಧಾರದಲ್ಲಿ ಮಾತ್ರವೇ ಲಭ್ಯವಾಗುವಂತೆ ಮಾಡುತ್ತದೆ. ಆಮೂಲಕ ಉದ್ಯೋಗಗಳು ಅಭದ್ರ ಮತ್ತು ಅಲ್ಪಕಾಲದ್ದಾಗಿರುವಂತೆ ಮಾಡುತ್ತದೆ.

ಔದ್ಯೋಗೀಕರಣದ ನಾಶ

ಅನೌಪಚಾರಿಕ ವಲಯ ನಮ್ಮ ದೇಶದಲ್ಲಿ ಅತಿ ಹೆಚ್ಚು ಉದ್ಯೋಗಗಳನ್ನು ಒದಗಿಸುವ ವಲಯ. ಇಲ್ಲಿಯೂ ಕೂಡ ಉದ್ಯೋಗಾವಕಾಶಗಳು 2004-05ರಿಂದ 2011-12ರ ನಡುವೆ 6ಶೇ.ದಷ್ಟು ಇಳಿಮುಖಗೊಂಡವು.

ಹೀಗೆ ನವ-ಉದಾರವಾದಿ ಬೆಳವಣಿಗೆಯ ಆದ್ಯತೆಗಳು ಶ್ರಮ ಹೆಚ್ಚಾಗಿ ಬೇಕಾಗುವ ಉದ್ದಿಮೆಗಳೂ ಅಲ್ಲ, ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ  ಅಭಿವೃದ್ಧಿಯೂ ಅಲ್ಲ. ವ್ಯಾಪಾರ ಉದಾರೀಕರಣ ವಿದೇಶಗಳಿಂದ ಬರುವ ಕೈಗಾರಿಕಾ ಸರಕುಗಳಿಗೆ ಸುಂಕದರಗಳನ್ನು ಇಳಿಸುತ್ತಿದೆ. ಇದರಿಂದಾಗಿ ಹಲವು ವಲಯಗಳಲ್ಲಿ  ಔದ್ಯೋಗೀಕರಣ ಇಲ್ಲವಾಗುತ್ತಿದೆ.

ನವ-ಉದಾರವಾದಿ ಧೋರಣೆಗಳಲ್ಲಿ ಸರಕಾರ ದೊಡ್ಡ ಕಾರ್ಪೊರೇಟ್‍ಗಳಿಗೆ ಮತ್ತು ಶ್ರೀಮಂತ ವಲಯಗಳುಗೆ ಸಾವಿರಾರು ಕೋಟಿ ರೂ.ಗಳಷ್ಟು ಸಬ್ಸಿಡಿಗಳನ್ನು ಒದಗಿಸುತ್ತದೆ, ವರು ತೆರಬೇಕಾದ ತೆರಿಗೆಗಳನ್ನು ಬಿಟ್ಟುಕೊಡುತ್ತದೆ, ಆದರೆ ಕೈಮಗ್ಗ, ಗೇರು, ನಾರು ಮತ್ತು ಕೈಕಸಬುಗಳಂತಹ ಲಕ್ಷಾಂತರ ದುಡಿಯುವ ಗಂಡಸರು ಮತ್ತು ಹೆಂಗಸರಿಗೆ ಜೀವನಾಧಾರ ಕಲ್ಪಿಸುವ ಮತ್ತು ಉದ್ಯೋಗಗಳನ್ನು ಒದಗಿಸುವ ಪಾರಂಪರಿಕ ಉದ್ದಿಮೆಗಳಿಗೆ ಬೆಂಬಲ ಕೊಡಲು ನಿರಾಕರಿಸುತ್ತದೆ. ಕೃಷಿಯಲ್ಲಿ ಹೂಡಿಕೆಯ ಕಡಿತ ಮತ್ತು ಸಾಮಾಜಿಕ ವಲಯಗಳಿಗೆ-  ಶಿಕ್ಷಣ, ಆರೋಗ್ಯ ಮತ್ತು ಮನರೇಗ-ಹಣನೀಡಿಕೆಯಲ್ಲಿ ತೀವ್ರ ಕಡಿತ ಕೂಡ ದೇಶದಲ್ಲಿ ಉದ್ಯೋಗಾವಕಾಶ ನಿರ್ಮಾಣದ ಸಾಧ್ಯತೆಯನ್ನು ಸಂಕುಚಿತ ಗೊಳಿಸಲು ಕಾರಣವಾಗುತ್ತದೆ.

ಪರ್ಯಾಯ ದಿಕ್ಕು

ಈಗ ಬೇಕಾಗಿರುವುದು ಒಂದು ಪರ್ಯಾಯ ಬೆಳವಣಿಗೆಯ ಪಥ, ಎಲ್ಲ ವಲಯಗಳಲ್ಲೂ ಉದ್ಯೋಗಾವಕಾಶಗಳನ್ನು ನಿರ್ಮಿಸಬಲ್ಲ ದಿಕ್ಕು. ಕೃಷಿಯಲ್ಲಿ ಮತ್ತು ಮೂಲರಚನೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಏಕೆಂದರೆ ಇವೇ ಉದ್ಯೋಗಗಳನ್ನು ನಿರ್ಮಿಸುವಂತವು.

ಶ್ರಮ ಹೆಚ್ಚಾಗಿ ಬೇಕಾಗುವ ಕೈಗಾರಿಕೆಗಳು, ಸಣ್ಣ ಪ್ರಮಾಣದ ಉದ್ದಿಮೆಗಳು ಮತ್ತು ಕೃಷಿ ಸಂಸ್ಕರಣ ಉದ್ದಿಮೆಗಳಿಗೆ ಪ್ರೋತ್ಸಾಹ, ಉತ್ತೇಜಕಗಳನ್ನು  ನೀಡಬೇಕು.

ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿದರೆ ಅದರಿಂದ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳು ವಿಸ್ತರಿಸಿ, ಗುಣಾತ್ಮವಾಗಿ ಉತ್ತಮಗೊಂಡು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.

ಇದರೊಂದಿಗೆ ಯುವಜನರಿಗೆ ವೃತ್ತಿಪರವಾದ ಮತ್ತು ಕುಶಲತೆಯನ್ನು ಅಭಿವೃದ್ಧಿಗೊಳಿಸುವುದಕ್ಕೆ ಗಮನ ಕೇಂದ್ರೀಕರಿಸುವ ಕಾರ್ಯಕ್ರಮಗಳು ಹೊಸದಾಗಿ ತೆರೆದುಕೊಳ್ಳುವ ವಿಧ-ವಿಧವಾದ ಕೆಲಸಗಳನ್ನು ನಿರ್ವಹಿಸಲು ಅವರನ್ನು ಸಜ್ಜುಗೊಳಿಸುತ್ತದೆ.

– ಪ್ರಕಾಶ ಕಾರಟ್

Advertisements

ಉದ್ಯೋಗಗಳು ಎಲ್ಲಿವೆ ?!

ಸಂಪುಟ: 10 ಸಂಚಿಕೆ: 20 May 8, 2016

ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವನ್ನು ತಮ್ಮ ಪ್ರಧಾನ ಚುನಾವಣಾ ಆಶ್ವಾಸನೆಯಾಗಿ ಮಾಡಿದ್ದರು. ಮೋದಿ ಸರಕಾರದ ಎರಡು ವರ್ಷಗಳ ನಂತರ ಉದ್ಯೋಗ ರಂಗದಲ್ಲಿನ ಶೋಚನೀಯ ದಾಖಲೆ ಎದ್ದು ಕಾಣುತ್ತಿದೆ.
ನವ-ಉದಾರವಾದಿ ಬೆಳವಣಿಗೆ ಉದ್ಯೋಗಗಳನ್ನು ನಿರ್ಮಿಸುವುದಿಲ್ಲ, ಬದಲಿಗೆ ಉದ್ಯೋಗಗಳನ್ನು ಕೊಲ್ಲುತ್ತದೆ. ಧೋರಣೆಗಳಲ್ಲಿ ಮೂಲಭೂತ ಬದಲಾವಣೆ ತರದೆ ಕೇವಲ ವ್ಯವಸ್ಥೆಗೆ ಎಷ್ಟೇ ತೇಪೆ ಹಾಕಿದರೂ ನಿರುದ್ಯೋಗದ ಸಮಸ್ಯೆ ಪರಿಹಾರವಾಗುವುದಿಲ್ಲ.
ಈಗ ಬೇಕಾಗಿರುವುದು ಒಂದು ಪರ್ಯಾಯ ಬೆಳವಣಿಗೆಯ ಪಥ, ಎಲ್ಲ ವಲಯಗಳಲ್ಲೂ ಉದ್ಯೋಗಾವಕಾಶಗಳನ್ನು ನಿರ್ಮಿಸಬಲ್ಲ ದಿಕ್ಕು. ಕೃಷಿಯಲ್ಲಿ ಮತ್ತು ಮೂಲರಚನೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಏಕೆಂದರೆ ಇವೇ ಉದ್ಯೋಗಗಳನ್ನು ನಿರ್ಮಿಸುವಂತವು.

ಇತ್ತೀಚೆಗೆ ಕಾರ್ಪೊರೇಟ್ ಮಾಧ್ಯಮಗಳು ದೇಶದಲ್ಲಿ ಹೆಚ್ಚುತ್ತಿರುವ ಉದ್ಯೋಗಹೀನತೆ ಮತ್ತು ಉದ್ಯೋಗಾವಕಾಶ ಬೆಳವಣಿಗೆಯ ಕೊರತೆಯ ಸಮಸ್ಯೆಯನ್ನು ಚರ್ಚಿಸುತ್ತಿವೆ. ಬಹುಶಃ ಲೇಬರ್ ಬ್ಯೂರೊ ನಡೆಸುತ್ತಿರುವ ಎಂಟು ಹೆಚ್ಚಿನ ಉದ್ಯೋಗಾವಕಾಶಗಳು ಬೇಕಾಗುವ ಉದ್ದಿಮೆಗಳ ತ್ರೈಮಾಸಿಕ ಉದ್ಯೋಗ ಸರ್ವೆಯಿಂದ ಇದು ಸ್ಫುರಿಸಿರಬೇಕು. ಜವಳಿ, ಗಾರ್ಮೆಂಟ್, ಆಭರಣ ತಯಾರಿ, ಮಾಹಿತಿ ತಂತ್ರಜ್ಞಾನ, ಚರ್ಮ, ಕೈಮಗ್ಗ, ಲೋಹಗಳು ಮತ್ತು ವಾಹನಗಳು ಈ ಎಂಟು ಉದ್ದಿಮೆಗಳಲ್ಲಿ 2015ರಲ್ಲಿ ಕೇವಲ 1.35 ಲಕ್ಷ ಉದ್ಯೋಗಗಳು ನಿರ್ಮಾಣವಾದವು, 2014ರಲ್ಲಿ ಇದು 4.9ಲಕ್ಷ ಇತ್ತು, 2009ರಲ್ಲಿ 12.5 ಲಕ್ಷ ಇತ್ತು  ಎಂದು ಈ ಸರ್ವೆಗಳು ತೋರಿಸಿವೆ.

udyoga

ಗ್ರಾಮೀಣ ಉದ್ಯೋಗಗಳಿಗೆ ಸಂಬಂಧ ಪಟ್ಟಂತೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದಲ್ಲಿ  ಕೃಷಿಯ ಪಾಲು ಇಳಿಮುಖವಾಗುತ್ತಿದೆ. ಗ್ರಾಮೀಣ ಬಡವರು ಮತ್ತು ಯುವಜನತೆಗೆ ಕೃಷಿ ಬಿಟ್ಟು ಬೇರೆ ಉದ್ಯೋಗಗಳನ್ನು ಒದಗಿಸಬಲ್ಲ ಕ್ರಮಗಳಿಲ್ಲ. ಈ ವರ್ಷದ ಮಾರ್ಚ್ ತಿಂಗಳ ಮೂರನೇ ವಾರದ ವರೆಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿದವರ ಸಂಖ್ಯೆ 8.4 ಕೋಟಿ. ಇದು ಗ್ರಾಮೀಣ ನಿರುದ್ಯೋಗ  ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ತೋರಿಸುತ್ತದೆ.

ಹುಸಿಯಾದ ಚುನಾವಣಾ ಆಶ್ವಾಸನೆ

ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವನ್ನು ತಮ್ಮ ಪ್ರಧಾನ ಚುನಾವಣಾ ಆಶ್ವಾಸನೆಯಾಗಿ ಮಾಡಿದ್ದರು. ಮೋದಿ ಸರಕಾರದ ಎರಡು ವರ್ಷಗಳ ನಂತರ ಉದ್ಯೋಗ ರಂಗದಲ್ಲಿನ ಶೋಚನೀಯ ದಾಖಲೆ ಎದ್ದು ಕಾಣುತ್ತಿದೆ. ಸರಕಾರ 7.5ಶೇ. ಜಿಡಿಪಿ ಬೆಳವಣಿಗೆಯಾಗಿದೆ ಎನ್ನುತ್ತದೆ. ಈ ದಾವೆಯೇ ನಂಬಲರ್ಹವಲ್ಲ. ಆದರೂ ಇಂತಹ ನವ-ಉದಾರವಾದಿ ಬೆಳವಣಿಗೆ ಉದ್ಯೋಗಾವಕಾಶ ಗಳನ್ನು ನಿರ್ಮಿಸಲಾರದು ಎಂಬುದು ಸ್ವಯಂವೇದ್ಯ.

ಸರಳ ಸಂಗತಿಯೆಂದರೆ ನವ-ಉದಾರವಾದಿ ಬೆಳವಣಿಗೆ ಉದ್ಯೋಗಗಳನ್ನು ನಿರ್ಮಿಸುವುದಿಲ್ಲ, ಬದಲಿಗೆ ಉದ್ಯೋಗಗಳನ್ನು ಕೊಲ್ಲುತ್ತದೆ. ಧೋರಣೆಗಳಲ್ಲಿ ಮೂಲಭೂತ ಬದಲಾವಣೆ ತರದೆ ಕೇವಲ ವ್ಯವಸ್ಥೆಗೆ ಎಷ್ಟೇ ತೇಪೆ ಹಾಕಿದರೂ ನಿರುದ್ಯೋಗದ ಸಮಸ್ಯೆ ಪರಿಹಾರವಾಗುವುದಿಲ್ಲ.

ಖಾಸಗಿ ಹೂಡಿಕೆ ಮತ್ತು ಖಾಸಗೀಕರಣವನ್ನು ಹೆಚ್ಚೆಚ್ಚು ಅವಲಂಬಿಸುವುದರಿಂದ ಉದ್ಯೋಗಾವಕಾಶಗಳೇನೂ ಹುಟ್ಟಿಕೊಳ್ಳುವುದಿಲ್ಲ. ಏಕೆಂದರೆ ನವ-ಉದಾರವಾದಿ ಅರ್ಥಶಾಸ್ತ್ರ ಹೂಡಿಕೆಗಳು ಬಂಡವಾಳ ಹೆಚ್ಚಾಗಿ ಬೇಕಾಗುವ, ಶ್ರಮ ಉಳಿಸುವ ತಂತ್ರಜ್ಞಾನವನ್ನು ಅವಲಂಬಿಸುವ, ಆಮೂಲಕ ದೊಡ್ಡ ಪ್ರಮಾಣದಲ್ಲಿ ದುಡಿಮೆಗಾರರ ಪಡೆಯ ಅಗತ್ಯವಿಲ್ಲದ ಕ್ಷೇತ್ರಗಳಿಗೆ ಹೋಗುವಂತೆ ಮಾಡುತ್ತದೆ. ಅಲ್ಲದೆ ಉದ್ಯೋಗ ಕಾಂಟ್ರಾಕ್ಟ್ ಆಧಾರದಲ್ಲಿ ಮಾತ್ರವೇ ಲಭ್ಯವಾಗುವಂತೆ ಮಾಡುತ್ತದೆ. ಆಮೂಲಕ ಉದ್ಯೋಗಗಳು ಅಭದ್ರ ಮತ್ತು ಅಲ್ಪಕಾಲದ್ದಾಗಿರುವಂತೆ ಮಾಡುತ್ತದೆ.

ಔದ್ಯೋಗೀಕರಣದ ನಾಶ

ಅನೌಪಚಾರಿಕ ವಲಯ ನಮ್ಮ ದೇಶದಲ್ಲಿ ಅತಿ ಹೆಚ್ಚು ಉದ್ಯೋಗಗಳನ್ನು ಒದಗಿಸುವ ವಲಯ. ಇಲ್ಲಿಯೂ ಕೂಡ ಉದ್ಯೋಗಾವಕಾಶಗಳು 2004-05ರಿಂದ 2011-12ರ ನಡುವೆ 6ಶೇ.ದಷ್ಟು ಇಳಿಮುಖಗೊಂಡವು.

ಹೀಗೆ ನವ-ಉದಾರವಾದಿ ಬೆಳವಣಿಗೆಯ ಆದ್ಯತೆಗಳು ಶ್ರಮ ಹೆಚ್ಚಾಗಿ ಬೇಕಾಗುವ ಉದ್ದಿಮೆಗಳೂ ಅಲ್ಲ, ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ  ಅಭಿವೃದ್ಧಿಯೂ ಅಲ್ಲ. ವ್ಯಾಪಾರ ಉದಾರೀಕರಣ ವಿದೇಶಗಳಿಂದ ಬರುವ ಕೈಗಾರಿಕಾ ಸರಕುಗಳಿಗೆ ಸುಂಕದರಗಳನ್ನು ಇಳಿಸುತ್ತಿದೆ. ಇದರಿಂದಾಗಿ ಹಲವು ವಲಯಗಳಲ್ಲಿ  ಔದ್ಯೋಗೀಕರಣ ಇಲ್ಲವಾಗುತ್ತಿದೆ.

ನವ-ಉದಾರವಾದಿ ಧೋರಣೆಗಳಲ್ಲಿ ಸರಕಾರ ದೊಡ್ಡ ಕಾರ್ಪೊರೇಟ್‍ಗಳಿಗೆ ಮತ್ತು ಶ್ರೀಮಂತ ವಲಯಗಳುಗೆ ಸಾವಿರಾರು ಕೋಟಿ ರೂ.ಗಳಷ್ಟು ಸಬ್ಸಿಡಿಗಳನ್ನು ಒದಗಿಸುತ್ತದೆ, ವರು ತೆರಬೇಕಾದ ತೆರಿಗೆಗಳನ್ನು ಬಿಟ್ಟುಕೊಡುತ್ತದೆ, ಆದರೆ ಕೈಮಗ್ಗ, ಗೇರು, ನಾರು ಮತ್ತು ಕೈಕಸಬುಗಳಂತಹ ಲಕ್ಷಾಂತರ ದುಡಿಯುವ ಗಂಡಸರು ಮತ್ತು ಹೆಂಗಸರಿಗೆ ಜೀವನಾಧಾರ ಕಲ್ಪಿಸುವ ಮತ್ತು ಉದ್ಯೋಗಗಳನ್ನು ಒದಗಿಸುವ ಪಾರಂಪರಿಕ ಉದ್ದಿಮೆಗಳಿಗೆ ಬೆಂಬಲ ಕೊಡಲು ನಿರಾಕರಿಸುತ್ತದೆ. ಕೃಷಿಯಲ್ಲಿ ಹೂಡಿಕೆಯ ಕಡಿತ ಮತ್ತು ಸಾಮಾಜಿಕ ವಲಯಗಳಿಗೆ-  ಶಿಕ್ಷಣ, ಆರೋಗ್ಯ ಮತ್ತು ಮನರೇಗ-ಹಣನೀಡಿಕೆಯಲ್ಲಿ ತೀವ್ರ ಕಡಿತ ಕೂಡ ದೇಶದಲ್ಲಿ ಉದ್ಯೋಗಾವಕಾಶ ನಿರ್ಮಾಣದ ಸಾಧ್ಯತೆಯನ್ನು ಸಂಕುಚಿತ ಗೊಳಿಸಲು ಕಾರಣವಾಗುತ್ತದೆ.

ಪರ್ಯಾಯ ದಿಕ್ಕು

ಈಗ ಬೇಕಾಗಿರುವುದು ಒಂದು ಪರ್ಯಾಯ ಬೆಳವಣಿಗೆಯ ಪಥ, ಎಲ್ಲ ವಲಯಗಳಲ್ಲೂ ಉದ್ಯೋಗಾವಕಾಶಗಳನ್ನು ನಿರ್ಮಿಸಬಲ್ಲ ದಿಕ್ಕು. ಕೃಷಿಯಲ್ಲಿ ಮತ್ತು ಮೂಲರಚನೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಏಕೆಂದರೆ ಇವೇ ಉದ್ಯೋಗಗಳನ್ನು ನಿರ್ಮಿಸುವಂತವು.

ಶ್ರಮ ಹೆಚ್ಚಾಗಿ ಬೇಕಾಗುವ ಕೈಗಾರಿಕೆಗಳು, ಸಣ್ಣ ಪ್ರಮಾಣದ ಉದ್ದಿಮೆಗಳು ಮತ್ತು ಕೃಷಿ ಸಂಸ್ಕರಣ ಉದ್ದಿಮೆಗಳಿಗೆ ಪ್ರೋತ್ಸಾಹ, ಉತ್ತೇಜಕಗಳನ್ನು  ನೀಡಬೇಕು.

ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿದರೆ ಅದರಿಂದ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳು ವಿಸ್ತರಿಸಿ, ಗುಣಾತ್ಮವಾಗಿ ಉತ್ತಮಗೊಂಡು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.

ಇದರೊಂದಿಗೆ ಯುವಜನರಿಗೆ ವೃತ್ತಿಪರವಾದ ಮತ್ತು ಕುಶಲತೆಯನ್ನು ಅಭಿವೃದ್ಧಿಗೊಳಿಸುವುದಕ್ಕೆ ಗಮನ ಕೇಂದ್ರೀಕರಿಸುವ ಕಾರ್ಯಕ್ರಮಗಳು ಹೊಸದಾಗಿ ತೆರೆದುಕೊಳ್ಳುವ ವಿಧ-ವಿಧವಾದ ಕೆಲಸಗಳನ್ನು ನಿರ್ವಹಿಸಲು ಅವರನ್ನು ಸಜ್ಜುಗೊಳಿಸುತ್ತದೆ.

– ಪ್ರಕಾಶ ಕಾರಟ್

ಬಂಗಾಲದ ಜನತೆ ನಮಗೆ ಮತ ನೀಡುತ್ತಿದ್ದಾರೆ ಎಂಬ ಸೂಚನೆಗಳು ಸಿಗುತ್ತಿವೆ- ಯೆಚೂರಿ

ಸಂಪುಟ: 10 ಸಂಚಿಕೆ: 20 May 8, 2016

ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮತದಾನದ ಎಲ್ಲ ಹಂತಗಳು ಪೂರ್ಣಗೊಂಡಿವೆ. ಸುಮಾರಾಗಿ ಎಲ್ಲ ಹಂತಗಳಲ್ಲೂ ಮತದಾನ 80ಶೇ.ದಷ್ಟಿತ್ತು. ಮಾಧ್ಯಮ ವರದಿಗಳ ಪ್ರಕಾರ ಮತದಾನದ ಶೇಕಡಾವಾರು ಹೀಗಿದೆ:

ಹಂತ 1ಎ:80.0; 1ಬಿ:79.5; 2:79.7; 3:79.2; 4:78.1;5:81.6 ಮತ್ತು ಹಂತ 6: 84.2

ಚುನಾವಣೆ ಆರಂಭವಾಗುವ ಮೊದಲು ಟಿಎಂಸಿ ಸರಕಾರದ ಕಾರ್ಯವೈಖರಿ ಏನೇ ಇರಲಿ, ಅದು ಮತ್ತೆ ಅಧಿಕಾರಕ್ಕೆ ಬರುತ್ತದೆ, ಬಹುಶಃ ಸಂಖ್ಯಾಬಲ ತುಸು ಇಳಿಯಬಹುದು ಎಂದು ಒಪಿನಿಯನ್ ಪೋಲ್‍ಗಳು ಹೇಳುತ್ತವೆ ಎನ್ನಲಾಗುತ್ತಿತ್ತು. ಆದರೆ ಮತದಾನ ಮುಗಿಯುವ ವೇಳೆಗೆ ಚಿತ್ರ ಬದಲಾದಂತೆ ಕಾಣುತ್ತದೆ. ಮಾಧ್ಯಮಗಳು ಎಡರಂಗ ಮತ್ತು ಕಾಂಗ್ರೆಸ್ ಸರಕಾರ ರಚಿಸುವ ಬಗ್ಗೆ ಮಾತನಾಡುತ್ತಿವೆ. ಕೊಲ್ಕತಾದ ಪ್ರಮುಖ ದೈನಿಕ ‘ದಿ ಟೆಲಿಗ್ರಾಫ್’ ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರನ್ನು ಸಂದರ್ಶಿಸಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ “ನಮ್ಮ ವರದಿಗಳು ಜನರು ನಮಗೆ ಮತ ನೀಡುತ್ತಿದ್ದಾರೆ ಎಂದು ಸೂಚಿಸುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ಮಾಡುವಾಗ ಶಾರದಾ ಚಿಟ್‍ಫಂಡ್ ವಿಷಯ ಬಂದಾಗಲೆಲ್ಲ ಆಕ್ರೋಶ ವ್ಯಕ್ತವಾಗುತ್ತಿತ್ತು. ಹಳ್ಳಿಗರಿಗೆ ತಮ್ಮ ಜೀವನಪರ್ಯಂತದ ಉಳಿತಾಯಗಳನ್ನು ಕಳಕೊಳ್ಳುವುದು ಒಂದು ದೊಡ್ಡ ಸಂಗತಿಯೇ ಸರಿ. ನಾರದಾ ಕುಟುಕು ಕಾರ್ಯಾಚರಣೆದ ಪ್ರಭಾವ ಎಷ್ಟಿದೆಯೆಂದು ಹೇಳಲಾರೆ. ಆದರೆ ಶಾರಧಾ ಚಿಟ್‍ಪಂಡ್ ಒಂದು ಪ್ರಶ್ನೆಯಂತೂ ಆಗಿದೆ” ಎಂದರು.

tebhaga

ಸಿಪಿಐ(ಎಂ) ಮುಖಂಡರಾದ ಬುದ್ಧದೇಬ್ ಭಟ್ಟಾಚಾರ್ಯ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಂದೇ ವೇದಿಕೆಯಲ್ಲಿ ಪ್ರಚಾರ ನಡೆಸಿದ್ದರ ಬಗ್ಗೆ ಕೇಳಿದಾಗ “ಇದು ಮುಖ್ಯವಾಗಿ ಕೆಳಗಿನಿಂದ ಉಂಟಾದ ಪ್ರಭಾವದಿಂದಾಗಿ ಸಂಭವಿಸಿತು. ಮೇಲಿನಿಂದ ಯಾರೂ ಇದನ್ನು ಮಾಡಲಿಲ್ಲ. ಜನತೆಯಿಂದ ಎದ್ದು ಬಂದ ಭಾವನೆಗಳಿಂದಾಗಿ ಇದು ಏರ್ಪಟ್ಟಿತು. ಇಲ್ಲವಾದರೆ ಕಾಂಗ್ರೆಸ್‍ನೊಂದಿಗೆ ಬುದ್ಧದಾ ಅವರನ್ನು ಊಹಿಸಿಕೊಳ್ಳಲು ಸಾಧ್ಯವೇ” ಎಂದು ಪ್ರಶ್ನಿಸಿದರು.

ಈ ಸಭೆಯ ವೇಳೆಗೆ ಅದಾಗಲೇ 294ರಲ್ಲಿ 216 ಸ್ಥಾನಗಳಲ್ಲಿ ಚುನಾವಣೆ ಮುಗಿದಿತ್ತು. ಇದನ್ನು ಮೊದಲೇ ಮಾಡಿದ್ದರೆ ಪ್ರಭಾವ ಇನ್ನೂ ಹೆಚ್ಚಾಗುತ್ತಿತ್ತಲ್ಲವೇ ಎಂದು ಕೇಳಿದಾಗ ಯೆಚೂರಿ “ಹಾಗನ್ನುವುದು ಸರಿಯಾಗದು. ವಾಸ್ತವವಾಗಿ ಆಗಲೇ ಪ್ರಭಾವ ಉಂಟಾದ್ದರಿಂದ ಇದು ಸಂಭವಿಸಿತು, ಇದರ ಕೀರ್ತಿ ಬಂಗಾಲದ ಜನತೆಗೆ ಸಲ್ಲಬೇಕು” ಎಂದರು.

ಎಡರಂಗ ಕಾಂಗ್ರೆಸಿನೊಂದಿಗೆ ಸೇರಿ ಸರಕಾರ ರಚಿಸುವ ಬಗ್ಗೆ ಕೇಳಿದಾಗ ಅದಿನ್ನೂ ನಮ್ಮ ಅಜೆಂಡಾದಲ್ಲಿ ಚರ್ಚೆಗೆ ಬಂದಿಲ್ಲ, ನಾವು ಆ ಬಗ್ಗೆ ಯೋಚಿಸಿಲ್ಲ ಈ ಸಮರ ಮುಗಿಯಲಿ ಎಂದರು.

ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿಯ ಭಾಗವಾಗಿ ಜಮೀನು ಕಳಕೊಂಡವರಿಗೆ ಜೀವನಾಧಾರ ಕಲ್ಪಿಸಲು ಹುಟ್ಟಿಕೊಂಡ ‘ಸಿಂಡಿಕೇಟ್’ಗಳು ಈಗ ಟಿಎಂಸಿ ಆಳ್ವಿಕೆಯಲ್ಲಿ ಮಾಫಿಯಾಗಳಾಗಿ ಬಿಟ್ಟಿವೆ, ಇದರ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತಾಡಿದ್ದಾರೆ, ಪ್ರಧಾನ ಮಂತ್ರಿಗಳೂ ಮಾತಾಡಿದ್ದಾರೆ, ಸಿಪಿಐ(ಎಂ)ನ ನಿಲುವೇನು ಎಂದು ಕೇಳಿದಾಗ, ಸೀತಾರಾಮ್ ಯೆಚೂರಿಯವರು “ನಾವು ಅದನ್ನು ಎದುರಿಸಿ ನಿಲ್ಲಬೇಕಾಗಿದೆ, ಅದನ್ನು ನಿಲ್ಲಿಸಿ ಬಿಡಬೇಕಾಗಿದೆ. ಅವುಗಳ ಕಾರ್ಯಾಚರಣೆ ಈಗ ಮಾಫಿಯಾದಂತೆಯೇ ಇದೆ. ಎಡರಂಗ ಆಳ್ವಿಕೆಯ ಕೊನೆಯ ಭಾಗದ ವೇಳೆಗೆ ಈ ಪ್ರವೃತ್ತಿಗಳು ಕಾಣಲಾರಂಭಿಸಿದ್ದವು. 20ವರ್ಷಗಳ ನಮ್ಮ ಸರಕಾರದ ನಂತರ ಹಲವು ಮಂದಿ ನಮ್ಮತ್ತ ಬರಲಾರಂಭಿಸಿದ್ದರು, ನಮ್ಮ ಸಿದ್ಧಾಂತದಿಂದಾಗಿ ಅಲ್ಲ,, ಬದಲಾಗಿ, ನಾವು ಅಧಿಕಾರದಲ್ಲಿ ಇದ್ದುದರಿಂದಾಗಿ. ಅವರು ನಿಜವಾಗಿ ಏನು ಮಾಡುತ್ತಿದ್ದಾರೆ ಎಂದು ಅರಿಯಲು ಸಮಯ ಹಿಡಿಯಿತು. ಆದರೆ ಆ ವೇಳೆಗಾಗಲೇ ಕೇಡು ಉಂಟಾಗಿತ್ತು. ಅದಕ್ಕೆ ನಾವು ಬೆಲೆ ತೆತ್ತಿದ್ದೇವೆ. ಅದನ್ನು ಕೈಗೆತ್ತಿಕೊಳ್ಳಲೇಬೇಕು, ಅದೊಂದು ಮಾಫಿಯಾ ಎಂಬ ಕಾರಣಕ್ಕಷ್ಟೇ ಅಲ್ಲ, ಅದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಅತಿ ದೊಡ್ಡ ಅಂಶ ಎಂಬ ಕಾರಣಕ್ಕಾಗಿ. ಕಾನೂನು-ವ್ಯವಸ್ಥೆಯನ್ನು ಮತ್ತೆ ತರಲು ಅದನ್ನು ನೇರವಾಗಿ ಎದುರಿಸಲೇ ಬೇಕು” ಎಂದರು.

ಮತ್ತೆ ಅಧಿಕಾರಕ್ಕೆ ಬಂದರೆ ಆದ್ಯತೆಗಳೇನು ಎಂದು ಕೇಳಿದಾಗ ಕೈಗಾರಿಕೀಕರಣವಿಲ್ಲದೆ ಉದ್ಯೋಗಾವಕಾಶ ನಿರ್ಮಾಣ ಮಾಡದೆ ಮುಂನ್ನಡೆ ಸಾಧ್ಯವಿಲ್ಲ. ಅದು ಸರಿಯಾದ ಧೋರಣೆಯಾಗಿತ್ತು ಎಂದು ಭಾವಿಸುತ್ತೇನೆ, ಅದು ಹಾಗೆಯೇ ಮುಂದುವರೆಯುತ್ತದೆ ಎಂದು ಯೆಚೂರಿ ಉತ್ತರಿಸಿದರು. ಈಗ ಬಂಗಾಲದ ಭವಿಷ್ಯಕ್ಕೆ ಉದ್ಯೋಗಗಳ ಸೃಷ್ಟಿ ಬೃಹತ್ ಪ್ರಮಾಣದಲ್ಲಿ ನಡೆಯಬೇಕಾಗಿದೆ, ಬಂಗಾಲದ ಯುವಜನರಿಗೆ ಇಲ್ಲಿ ದಾರಿಗಳನ್ನು ತೆರೆದು ಕೊಡಬೇಕಾಗಿದೆ. ಮತ್ತು ಮಹಿಳೆಯರ ಸುರಕ್ಷಿತತೆಯ ಪ್ರಶ್ನೆಯೂ ಇದೆ. ತಮ್ಮ ವಿದ್ಯಾರ್ಥಿ ದೆಸೆಯ ದಿನಗಳಲ್ಲಿ ಇದೊಂದು ಸಮಸ್ಯೆಯೇ ಆಗಿರಲಿಲ್ಲ ಎಂದು ಹೇಳಿದರು.

ಅರುಣಾಚಲಪ್ರದೇಶ: ರಾಜ್ಯಪಾಲರ ಮೂಲಕ ಕಲಮು 356ರ ದುರ್ಬಳಕೆ-ಇನ್ನೊಂದು ಪ್ರಸಂಗ

janashakthi 7

ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಹೇರಿಕೆ ರಾಜ್ಯಪಾಲರುಗಳ ನೇಮಕದಲ್ಲೂ, ಕಲಮು 356ರಲ್ಲೂ ತೀವ್ರತರವಾದ ಬದಲಾವಣೆ ಮಾಡದಿದ್ದರೆ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳ ಹಕ್ಕುಗಳಿಗೆ ಬೆದರಿಕೆ ಇದ್ದೇ ಇರುತ್ತದೆ ಎಂದು ಮತ್ತೆ ನೆನಪಿಸಿದೆ. ಸುಪ್ರಿಂ ಕೋರ್ಟ್ ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಸಂವಿಧಾನಿಕ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ನಗ್ನ ಹಸ್ತಕ್ಷೇಪವನ್ನು ತಡೆಯಲು ತ್ವರಿತವಾಗಿ ಕ್ರಮ ವಹಿಸಬೇಕು. 

ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಹೇರಿಕೆ ಒಕ್ಕೂಟ ತತ್ವದ ಮೇಲೊಂದು ಪ್ರಹಾರ ಮತ್ತು ಸಂವಿಧಾನದ 356ನೇ ಕಲಮಿನ ಮತ್ತೊಂದು ದುರುಪಯೋಗ. ಈ ಇಡೀ ಪ್ರಸಂಗದಲ್ಲಿ ಕೇಂದ್ರದ ಬಿಜೆಪಿ ಸರಕಾರ ಮತ್ತು ರಾಜ್ಯದ ರಾಜ್ಯಪಾಲ ಜೆ ಪಿ ರಾಜ್‍ಖೋವ ಒಂದು ತುಚ್ಛ ಪಾತ್ರವನ್ನು ವಹಿಸಿದ್ದಾರೆ. ಕಳೆದ ವರ್ಷ ಅರುಣಾಚಲ ಪ್ರದೇಶದ ಆಳುವ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಂದು ಶಸಕರ ಗುಂಪು ಬಂಡೆದ್ದಾಗ ರಾಜಕೀಯ ಬಿಕ್ಕಟ್ಟು ಆರಂಭವಾಯಿತು. ಅವರು ವಿಧಾನ ಸಭಾಧ್ಯಕ್ಷರ ಮೇಲೆ ದೋಷಾರೋಪಣೆ  ಮಾಡಬೇಕೆಂದು ರಾಜ್ಯಪಾಲರ ಬಳಿ ಹೋದರು.

ರಾಜ್ಯಪಾಲರು ದೋಪಾರೋಪಣೆಯ ನಿಲುವಳಿಯನ್ನು ಕೈಗೆತ್ತಿಕೊಳ್ಳಲು ಡಿಸೆಂಬರ್ 15ರಂದು ವಿಧಾನಸಭೆಯ ಒಂದು ತುರ್ತು ಅಧಿವೇಶನವನ್ನು ಕರೆದರು. ವಿಧಾನ ಸಭೆಯ ಚಳಿಗಾಲ್ ಅಧಿವೇಶನವನನು ಅವಧಿಗೆ ಮೊದಲೇ ಕರೆಯುವ, ಮತ್ತು ವಿಧಾನಸಭಾಧ್ಯಕ್ಷರ ನ್ನು ತೆಗೆದು ಹಾಕಬೇಕೆನ್ನುವ ನಿರ್ಣಯದ ಮೇಲೆ ಮತದಾನ ನಡೆಯಬೇಕು ಎಮದು ನಿರ್ದೇಶನಗಳನ್ನು ನೀಡುವ ರಾಜ್ಯಪಾಲರ ಕ್ರಮ ಎಲ್ಲ ವಿಧಿವಿಧಾನಗಳ ಉಲ್ಲಂಘನೆಯಾಗಿತ್ತು. ಗುವಾಹಾಟಿ ಹೈಕೋರ್ಟ್ ರಾಜ್ಯಪಾಲರ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿತು, ಆದರೆ ನಂತರ ಅದನ್ನು ತೆರವು ಮಾಡಿತು. ವಿಧಾನಸಭಾಧ್ಯಕ್ಷರು ಸುಪ್ರಿಂ ಕೋರ್ಟಿಗೆ ಹೋದರು. ಅದು ಆ ಕೇಸನ್ನು ಒಂದು ಸಂವಿಧಾನ ಪೀಠಕ್ಕೆ ಒಪ್ಪಿಸಿತು.

ಈ ಮಧ್ಯೆ, ಒಂದು ಸಮುದಾಯ ಭವನದಲ್ಲಿ ಒಂದು ‘ವಿಶೇಷ ಅಧಿವೇಶನ’ ನಡೆಯಿತು, ಅದರಲ್ಲಿ ಬಂಡಾಯ ಕಾಂಗ್ರೆಸ್ ಶಾಸಕರು, ಬಿಜೆಪಿ ಶಾಸಕರು ಮತ್ತು ಇಬ್ಬರು ಪಕ್ಷಾತೀತರೊಂದಿಗೆ ವಿಧಾನಸಭಾಧ್ಯಕ್ಷರ ವಿರುದ್ಧ ದೊಷಾರೋಪಣೆಯ ನಿಲುವಳಿಯನ್ನು ಮತ್ತು ಮುಖ್ಯಮಂತ್ರಿಯ ವಿರುದ್ಧ ಅವಿಶ್ವಾಸ ಠರಾವನ್ನು ಅಂಗೀಕರಿಸಿದರು. ಈ ಸಂಪುರ್ನ ಕಾನೂನುಬಾಹಿರವಾದ ಸಭೆಯನ್ನು ರಾಜ್ಯಪಾಲರು ಖಂಡಿಸಲಿಲ್ಲ. ಇದಕ್ಕೆ ಪ್ರತಿಕ್ರಮವಾಗಿ ವಿಧಾನಸಭಾಧ್ಯಕ್ಷರು 14 ಬಂಡಾಯ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸುವ ಆದೇಶ ನೀಡಿದರು. ಈ ಸಂಗತಿಯೂ ಹೈಕೋರ್ಟಿಗೆ ಹೋಯಿತು, ಅನರ್ಹತೆಗೆ ತಡೆಯಾಜ್ಞೆ  ನೀಡಲಾಯಿತು. ಈ ನಿರ್ಧಾರದ ವಿರುದ್ಧವೂ ವಿಧಾನಸಭಾಧ್ಯಕ್ಷರು ಸುಪ್ರಿಂ ಕೋರ್ಟಿಗೆ ಹೋಗಿದ್ದಾರೆ.

ಇವೆಲ್ಲಾ ಅರ್ಜಿಗಳು ಸುಪ್ರಿಂ ಕೋರ್ಟಿನ ಸಂವಿಧಾನ ಪೀಠದ ಎದುರು ಇವೆ.

ಇಂತಹ ಒಂದು ಸನ್ನಿವೇಶದಲ್ಲಿ ರಾಜ್ಯಪಾಲರು ಹಿಡಿಯಬೇಕಾಗಿದ್ದ ಸರಿಯಾದ ದಾರಿಯೆಂದರೆ ಒಮದು ನಿರ್ದಿಷ್ಟ ಸಮಯದೊಳಗೆ ವಿಧಾನಸಭೆಯನ್ನು ಕರೆದು ತನ್ನ ಬಹುಮತವನ್ನು ಸಾಬೀತು ಪಡಿಸಿ ಎಂದು ಹೇಳುವುದು. ಅದರ ಬದಲು, ರಾಜ್ಯಪಾಲರು ರಾಜ್ಯದಲ್ಲಿ ಸಂವಿಧಾನಿಕ  ಸ್ಥಿತಿ ಕುಸಿದು ಬಿದ್ದಿದೆ ಎಂಬ ಹಾಸ್ಯಾಸ್ಪದ ವರದಿಗಳನ್ನು ಸಲ್ಲಿಸಿದರು. ಒಂದು ವರದಿಯಲ್ಲಿ ತನ್ನ ನಿವಾಸದ ಮುಂದೆ ಆಳುವ ಪಕ್ಷದ ಶಾಸಕರಿಂದ ‘ಗೋವಧೆ’ಯ ಪ್ರಸಂಗದ ಬಗ್ಗೆ ಹೇಳಲಾಗಿದೆ. ಅಲ್ಲಿ ಆಗಿದೆಯೆಂದ ವಧೆ ಗೋವಿನದಲ್ಲ, ಬದಲಿಗೆ ಮಿಥುನ್’ ಎಂಬ ಅದೇ ಜಾತಿಗೆ ಸೇರಿದ ಪ್ರಾಣಿಯ ವಧೆ, ಇzರ ಮಾಂಸವನ್ನು ಆ ರಾಜ್ಯದಲ್ಲಿ ಬಹಳ ಮಂದಿ ಆಹಾರವಾಗಿ ಸೇವಿಸುತ್ತಾರೆ. ಅರುಣಾಚಲ ಪ್ರದೇಶದ ರಾಜ್ಯಪಾಲರ ವರ್ತನೆ ಮೋದಿ ಸರಕಾರ ಈಶಾನ್ಯ ಪ್ರದೇಶದಲ್ಲಿ ಎಂತಹ ರಾಜ್ಯಪಾಲರುಗಳನ್ನು ನೇಮಿಸಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಹೆಚ್ಚಿನವರನ್ನು ಆರಿಸಿಕೊಂಡದ್ದು ಅವರ ಆರೆಸ್ಸೆಸ್ ಹಿನ್ನೆಲೆಗಳ ಆಧಾರದಲ್ಲಿ. ಉದಾಹರಣೆಗೆ, ತ್ರಿಪುರ ರಾಜ್ಯಪಾಲ ತಥಾಗತ ರಾಯ್, ತನ್ನ ಫೇಸ್‍ಬುಕ್  ನಲ್ಲಿ ಹಾಕುವ ಅಂಶಗಳು ಮತ್ತು ಟ್ವಿಟರ್ ಮೂಲಕ ಅತ್ಯಂತ ಉದ್ರೇಕಕಾರಿ ಕೋಮುವಾದಿ ಹೇಳಿಕೆಗಳನ್ನು ಕೊಡುತ್ತಾರೆ. ಈ ಇಡೀ ಪ್ರಸಂಗ ಸಂವಿಧಾನದ 356ನೇ ಕಲಮಿನ ಪ್ರಜಾಪ್ರಭುತ್ವ-ವಿರೋಧಿ ಮತ್ತು ಒಕ್ಕೂಟ ತತ್ವ-ವಿರೋಧಿ ಸ್ವರೂಪವನ್ನು ಮತ್ತೆ ಎತ್ತಿ ತೋರಿದೆ. 1994ರಲ್ಲಿ ಸುಪ್ರಿಂ ಕೋರ್ಟ್‍ನ ಬೊಮ್ಮಾಯಿ ತೀರ್ಪು ಅದರ ದುರುಪಯೋಗವನ್ನು ಸೀಮಿತಗೊಳಿಸುವ ಪ್ರಯತ್ನ ಮಾಡಿತ್ತು.

ಒಂದು ರಾಜ್ಯ ಸರಕಾರದ ಅದೃಷ್ಟವನ್ನು ರಾಜಭವನದಲ್ಲಿ ನಿರ್ಧರಿಸಲು ಸಾಧ್ಯವಿಲ್ಲ, ಅದನ್ನು ಕೇವಲ ವಿಧಾನ ಸಭೆಯಲ್ಲಿ ಒಂದು ಬಲಪರೀಕ್ಷೆಯ ಮೂಲಕ ಮಾತ್ರ ಮಾಡಲು ಸಾಧ್ಯ ಎಂದು ಸ್ಪಷ್ಟಪಡಿಸಿತ್ತು. ಅಲ್ಲದೆ, ಒಂದು ಸರಕಾರದ ವಜಾ ಮತ್ತು ರಾಷ್ಟ್ರಪತಿ ಆಳ್ವಿಕೆಯ  ಆಧಾರಗಳು ನ್ಯಾಯಾಂಗ ಪರಾಮರ್ಶೆಗೆ ಒಳಪಡುತ್ತದೆ ಎಂದಿತ್ತು.

ಬಿಜೆಪಿ ಸರಕಾರ ಕೂಡ ಹಿಂದಿನ ಕಾಂಗ್ರೆಸ್ ಸರಕಾರಗಳಂತೆ ಈ ಕರಾಳ ಕಲಮನ್ನು ತನ್ನ ಸಂಕುಚಿತ ರಾಜಕೀಯ ಹಿತಾಸಕ್ತಿಗಳಿಗೆ ಬಳಸಿಕೊಳ್ಳಲು ಕಾತುರವಾಗಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿ ಕೊಟ್ಟಿದೆ. ಸುಪ್ರಿಂ ಕೋರ್ಟ್ ರಾಜ್ಯಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಸಂವಿಧಾನಿಕ ಪ್ರಕ್ರಿಯೆಯಲ್ಲಿ ರಾಜ್ಯಪಾಲರ ನಗ್ನ ಹಸ್ತಕ್ಷೇಪವನ್ನು ತಡೆಯಲು ತ್ವರಿತವಾಗಿ ಕ್ರಮ ವಹಿಸಬೇಕು.

ರಾಜ್ಯಪಾಲರುಗಳ ನೇಮಕದಲ್ಲೂ, ಕಲಮು 356ರಲ್ಲೂ ತೀವ್ರತರವಾದ ಬದಲಾವಣೆ ಮಾಡದಿದ್ದರೆ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳ ಹಕ್ಕುಗಳಿಗೆ ಬೆದರಿಕೆ ಇದ್ದೇ ಇರುತ್ತದೆ. ರಾಷ್ಟ್ರಪತಿಗಳು   ಸರ್ಕಾರಿಯಾ ಆಯೋಗ ಪ್ರಸ್ತಾವಿಸಿರುವ ಮಾನದಂಡವನ್ನು ಅನುಸರಿಸಿ, ಮುಖ್ಯಮಂತ್ರಿಗಳು ಸೂಚಿಸುವ ಮೂವರು ಪ್ರತಿಷ್ಠಿತ ವ್ಯಕ್ತಿಗಳ ಪಟ್ಟಿಯಲ್ಲಿ ಒಬ್ಬರನ್ನು ರಾಜ್ಯಪಾಲರಾಗಿ ನೇಮಿಸುವಂತಿರಬೇಕು ಎಂದು ಸಿಪಿಐ(ಎಂ) ಆಗ್ರಹಿಸುತ್ತ ಬಂದಿದೆ. ಬಹಳಷ್ಟು ಪ್ರಾದೇಶಿಕ ಪಕ್ಷಗಳೂ ಈ ನಿಲುವನ್ನು ಬೆಂಬಲಿಸಿವೆ.

ಕಲಮು 356ರ ಬಗ್ಗೆ ಹೇಳುವುದಾದರೆ, ಅದನ್ನು ರಾಷ್ಟ್ರೀಯ ಐಕ್ಯತೆಗೆ, ಅಥವ ದೇಶದ ಜಾತ್ಯಾತೀತ ಹಂದರಕ್ಕೆ ಒಂದು ಗಂಭೀರ ಬೆದರಿಕೆ ಇದ್ದಾಗ ಮಾತ್ರವೇ ಬಳಸಲು ಆಗುವಂತೆ ತಿದ್ದುಪಡಿ ಮಾಡಬೇಕು. ಹಾಗೆ ಮಾಡುವ ವರೆಗೆ ಬೊಮ್ಮಾಯಿ ತೀರ್ಪು ನೀಡಿದ ಮಾರ್ಗದರ್ಶಕ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

– ಪ್ರಕಾಶ್ ಕಾರಟ್

ನೈತಿಕ ಅಧಿಕಾರ ಕಳಕೊಂಡ ಸರಕಾರ

ಸಂಪುಟ 10, ಸಂಚಿಕೆ 6 ಫೆಬ್ರವರಿ 07, 2016  ಪ್ರಕಾಶ್ ಕಾರಟ್ –  ಪಿ.ಡಿ. ಸಂಪಾದಕೀಯ

ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿ ಕೇಂದ್ರ ಸಂಪುಟದಲ್ಲಿ ಮಂತ್ರಿಗಳಾಗಿ ಮುಂದುವರೆಯುವುದಕ್ಕೆ ಅನರ್ಹರಾಗಿದ್ದಾರೆ. ತಮ್ಮ ಸರಕಾರ ಕಳಕೊಂಡಿರುವ ನೈತಿಕ ಅಧಿಕಾರವನ್ನು ಸ್ವಲ್ಪವಾದರೂ ಉಳಿಸಿಕೊಳ್ಳಬೇಕಾದರೆ ಅವರಿಬ್ಬರೂ ಹೋಗಬೇಕು ಎಂಬುದನ್ನು ಪ್ರಧಾನ ಮಂತ್ರಿಗಳು ಅರಿಯಬೇಕಾಗಿದೆ.

ಕೆಲವೊಮ್ಮೆ ಒಂದೇ ಘಟನೆ ಒಂದು ಸರಕಾರದ ನೈತಿಕ ಅಧಿಕಾರವನ್ನು ಪುಡಿಪುಡಿ ಮಾಡಬಲ್ಲುದು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲ ಸಾವು  ಇಂತಹ ಒಂದು ಘಟನೆ.

26 ವರ್ಷದ ರೋಹಿತ್ ಮತ್ತು ಇತರ ನಾಲ್ಕು ದಲಿತ ವಿದ್ಯಾರ್ಥಿಗಳನ್ನು ಕೇಂದ್ರ ಮಂತ್ರಿ -ಈತ  ಹೈದರಾಬಾದಿನಿಂದ ಆರಿಸಲ್ಪಟ್ಟ ಸಂಸತ್ ಸದಸ್ಯ-ಬಂಡಾರು ದತ್ತಾತ್ರೇಯ ಅವರಿಂದಾಗಿ ವಿಶ್ವವಿದ್ಯಾಲಯದಿಂದ ಅಮಾನತು ಮಾಡಲಾಯಿತು. ಆರಂಭದ ತನಿಖೆ ಅಂಬೇಡ್ಕರ್ ವಿದ್ಯಾರ್ಥಿ ಸಂಘ(ಎಎಸ್‍ಎ)ಕ್ಕೆ ಸೇರಿರುವ ಈ ದಲಿತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರೂ, ದತ್ತಾತ್ರೇಯ ಮಾನವ ಸಂಪನ್ಮೂಲ ಅಭಿವೃದ್ಧಿ (ಹೆಚ್‍ಆರ್‍ಡಿ)ಮಂತ್ರಿ ಸ್ಮøತಿ ಇರಾನಿಯವರಿಗೆ ಕಳಿಸಿದ ಪತ್ರದಿಂದಾಗಿ ವಿಶ್ವವಿದ್ಯಾಲಯದ ಉಪಕುಲಪತಿ ಈ ಐವರನ್ನು ಅಮಾನತು ಮಾಡುವಂತಾಯಿತು. ದತ್ತಾತ್ರೇಯ ತಮ್ಮ ಪತ್ರದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯ ‘ಜಾತಿವಾದಿ, ಉಗ್ರಗಾಮಿ ಮತ್ತು ರಾಷ್ಟ್ರ-ವಿರೋಧಿ ರಾಜಕೀಯದ ಬಿಲವಾಗಿ ಬಿಟ್ಟಿದೆ’ ಎಂದು ಬರೆದಿದ್ದರು. ಮಾನವ ಸಂಪನ್ಮೂಲ ಇಲಾಖೆ ಈ ಪತ್ರದ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಐದು ಪತ್ರಗಳನ್ನು ವಿಶ್ವವಿದ್ಯಾಲಯಕ್ಕೆ ಬರೆದಿತ್ತು.

ಹೀಗೆ ರೋಹಿತ್ ಮತ್ತು ಇತರ ನಾಲ್ವರನ್ನು ವಿ.ವಿ.ದ ಹಾಸ್ಟೆಲ್ ಮತ್ತು ಇತರ ಸೌಲಭ್ಯಗಳನ್ನು ಉಪಯೋಗಿಸದಂತೆ ನಿಷೇಧಿಸಿ, ಕೊನೆಗೆ ರೋಹಿತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಕ್ರಮಕ್ಕೆ ಈ ಇಬ್ಬರು ಮಂತ್ರಿಗಳು ಕಾರಣ ಎಂದು ಹೇಳಬಹುದು.

ಈ ವಿ.ವಿ. ಕಳೆದ ಹತ್ತು ವರ್ಷಗಳಲ್ಲಿ ಎಂಟು ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು  ಕಂಡಿದೆ. ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿವಾದ ಎಷ್ಟರ ಮಟ್ಟಿಗೆ ತಾಂಡವವಾಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ದಲಿತ ಹಿನ್ನೆಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಸಂಸ್ಥೆಗಳಿಗೆ, ಸಂಶೋಧನಾ ಕೇಂದ್ರಗಳಿಗೆ ಪ್ರವೇಶ ಪಡೆಯುವುದೇ ಅತ್ಯಂತ ಕಷ್ಟದ ಸಂಗತಿ. ಒಂದು ವೇಳೆ ಮೀಸಲಾತಿಯಿಂದ ಪ್ರವೇಶ ಪಡೆದರೂ ಅವರು ತಾರತಮ್ಯ, ಕಿರುಕುಳ ಮತ್ತು ಗುಪ್ತಗಾಮಿನಿಯಾಗಿರುವ ದಲಿತ-ವಿರೋಧಿ ಭಾವನೆಗಳನ್ನು ಎದುರಿಸಬೇಕಾಗುತ್ತದೆ.

ಇದು ಬಹು ವರ್ಷಗಳಿಂದ ಇರುವ ವಾಸ್ತವತೆಯಾದರೂ, ಬಿಜೆಪಿ ಸರಕಾರದ ಉದಯ ದಲಿತ-ವಿರೋಧಿ ಭಾವನೆಗಳಿಗೆ ಹೊಸದೊಂದು ಸೈದ್ಧಾಂತಿಕ ಮೊನಚನ್ನು ತಂದಿದೆ. ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಹಿಂದುತ್ವ ಮೌಲ್ಯಗಳಿಗೆ ದಲಿತ ವಿದ್ಯಾರ್ಥಿಗಳಿಂದ ಯಾವುದೇ ಸವಾಲು ಬರುವುದನ್ನು ಸಹಿಸಲಾರರು.

ಕಳೆದ ವರ್ಷ ಮದ್ರಾಸ್ ಐಐಟಿಯಲ್ಲಿ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್(ಎಪಿಎಸ್‍ಸಿ) ಮೇಲೆ ನಿಷೇಧ ಹಾಕಲಾಯಿತು. ಈ ಕ್ರಮಕ್ಕೂ ಅದೇ ಹೆಚ್‍ಆರ್‍ಡಿ ಇಲಾಖೆಯೇ ಕಾರಣ. ಎಪಿಎಸ್‍ಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಅವರ ಸರಕಾರದ ಧೋರಣೆಗಳನ್ನು ಟೀಕಿಸುತ್ತಿದೆ ಎಂಬ ಅನಾಮಧೇಯ  ದೂರೊಂದನ್ನು ಐಐಟಿ ಅಧಿಕಾರಿಗಳಿಗೆ ಕಳಿಸಿ ಈ ಬಗ್ಗೆ ಕ್ರಮ ತಗೊಳ್ಳುವಂತೆ ಮಾಡಿತು. ವ್ಯಾಪಕ ಪ್ರತಿಭಟನೆಗಳ ನಂತರವೇ ಎಪಿಎಸ್‍ಸಿ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡು ಅದು ಕಾರ್ಯ ನಿರ್ವಹಿಸಲು ಅವಕಾಶವಾಯಿತು. ಅನಾಮಧೆಯ ದೂರು ಕಳಿಸಿದವರು ಎಪಿಎಸ್‍ಸಿ ತಳೆದ ಸೈದ್ಧಾಂತಿಕ ನಿಲುವುಗಳಿಗೆ ಆಕ್ಷೇಪವಿದ್ದ ಕೆಲವು ಐಐಟಿ ಕ್ಯಾಂಪಸ್‍ನ ಆರೆಸ್ಸೆಸ್ ಮನಸ್ಸಿನ ಜನಗಳು.

ಹೈದರಾಬಾದ್ ವಿ.ವಿ.ಯಲ್ಲಿ ಕೂಡ ಅಂಬೇಡ್ಕರ್ ವಿದ್ಯಾರ್ಥಿ ಸಂಘ ಬಿಜೆಪಿ ಮತ್ತು ಹಿಂದುತ್ವ ವಲಯಗಳಿಗೆ ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ವಿರುದ್ಧವಾಗಿದ್ದ ಪ್ರಶ್ನೆಗಳನ್ನು ಎತ್ತಿಕೊಳ್ಳುತಿತ್ತು-ಮುಝಪ್ಪರ್‍ನಗರ್ ಹಿಂಸಾಚಾರಗಳ ಕುರಿತ ಚಿತ್ರದ ಪ್ರದರ್ಶನ ಮತ್ತು ಯಾಕೂಬ್ ಮೆಮನ್ ನೇಣಿನ ಸಂದರ್ಭದಲ್ಲಿ ಮರಣ ದಂಡನೆಯ ಬಗ್ಗೆ ಚರ್ಚೆ ಏರ್ಪಡಿಸಿತ್ತು. ಇಂತಹ ಚಟುವಟಿಕೆಗಳು ಆರೆಸ್ಸೆಸ್ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ದಾಳಿಗಳಿಗೆ ಆಹ್ವಾನವಾದವು. ಎಬಿವಿಪಿ ವಿದ್ಯಾರ್ಥಿ ಮುಖಂಡನ ಸಾಬೀತಾಗದ ದೂರಿನ ಆಧಾರದ ಮೇಲೆಯೇ ತಾನೇ ರೋಹಿತ್ ಮತ್ತು ಅತನ ಸಂಗಡಿಗರಿಗೆ ಶಿಕ್ಷೆಯಾಗುವಂತೆ ಬಿಜೆಪಿ ಮಂತ್ರಿಗಳು ಮಾಡಿರುವುದು.

ಆರೆಸ್ಸೆಸ್ ಮತ್ತು ಎಬಿವಿಪಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‍ಗಳಲ್ಲಿ ಎಲ್ಲ ಪ್ರಗತಿಪರ ಮತ್ತು ಎಡಪಂಥೀಯ ಚಟುವಟಿಕೆಗಳನ್ನು ‘ರಾಷ್ಟ್ರ-ವಿರೋಧಿ’ಎಂದು ಹಣೆಪಟ್ಟಿ ಹಚ್ಚುತ್ತಿದೆ. ಹೀಗೆ ಹೈದರಾಬಾದ್ ವಿ.ವಿ.ದಲ್ಲಿ ಕೈಗೊಂಡಿರುವ ಕ್ರಮ ವಿ.ವಿ. ಆವರಣಗಳಲ್ಲಿ ಜಾತ್ಯಾತೀತ ಪ್ರಗತಿಪರ ವಿಚಾರಗಳು ಮತ್ತು ಚಟುವಟಿಕೆಗಳ ಮೇಲೆ ಹಿಂದುತ್ವ ದಾಳಿಯ ಒಂದು ಭಾಗ.

ಹೀಗೆ ರೋಹಿತ್ ವಿ.ವಿ.ದ ಉಪಕುಲಪತಿ ಮತ್ತು ಇತರ ಅಧಿಕಾರಿಗಳ  ಅದೇ ರೀತಿಯಲ್ಲಿ ಬಿಜೆಪಿ ಮತ್ತು ಅದರ ಗುರು ಆರೆಸ್ಸೆಸ್‍ನ ದಲಿತವಿರೋಧಿ ಪೂರ್ವಾಗ್ರಹಗಳಿಗೆ ಬಲಿಯಾಗಿದ್ದಾನೆ.

ರೋಹಿತ್ ದುರಂತ ಸಾವಿನ ಸುತ್ತ  ಹೈದರಾಬಾದ್ ವಿ.ವಿ.ದಲ್ಲಿ ಮತ್ತು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ನಡೆಸುತ್ತಿರುವ ಹೋರಾಟಕ್ಕೆ ಇನ್ನೂ ವಿಶಾಲವಾದ ಅರ್ಥಗಳಿವೆ. ಅದು ಮರಣಾಸನ್ನ ಮೇಲ್ಜಾತಿ ವ್ಯವಸ್ಥೆ ಮತ್ತು ಹಿಂದುತ್ವ ಕಣ್ಣೋಟದ ಪ್ರತಿಗಾಮಿ ಕೋಮುವಾದಿ ಶಕ್ತಿಗಳ ವಿರುದ್ಧ ಜಾತ್ಯಾತೀತ ಪ್ರಜಾಪ್ರಭುತ್ವವಾದಿ ಶಕ್ತಿಗಳ ಹೋರಾಟಕ್ಕೆ ಸಂಬಂಧಪಟ್ಟದ್ದು.

ಹೆಚ್‍ಆರ್‍ಡಿ ಮಂತ್ರಿಗಳು ಮತ್ತು ಇತರ ಬಿಜೆಪಿ ಮುಖಂಡರು ರೋಹಿತ್ ವಿಚಾರದಲ್ಲಿ ತಮ್ಮ ಮೇಲೆ ಬಂದಿರುವ ಆಪಾದನೆಗಳನ್ನು ಎದುರಿಸಿರುವ ರೀತಿ ಆಘಾತಕಾರಿಯಾಗಿದ್ದು, ಅದು ಈ ವಿಷಯದಲ್ಲಿ ಅವರ ಅಪರಾಧವನ್ನು ಮತ್ತು ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಪಡೆಯಬೇಕೆಂಬ ದಲಿತರ ಆಕಾಂಕ್ಷೆಗಳ ಬಗ್ಗೆ ಅವರಿಗಿರುವ ವೈಷಮ್ಯವನ್ನು ಎತ್ತಿ ತೋರಿಸಿವೆ. ವ್ಯಾಪಕವಾದ ಆಕ್ರೋಶ ಮತ್ತು ಪ್ರತಿಭಟನೆಗಳನ್ನು ಕಂಡ  ಮೇಲೆ ಸರಕಾರ ತನ್ನ ಭಂಡ ನಿಲುವಿನಿಂದ ಹಿಂದೆ ಸರಿಯಲಾರಂಭಿಸಿತು. ಹೆಆರ್‍ಡಿ ಮಂತ್ರಿಗಳು ರೋಹಿತ್ ಸಾವಿನ ಸಂದರ್ಭಗಳ ಬಗ್ಗೆ ನ್ಯಾಯಾಂಗ ತನಿಖೆ ಮಾಡುವುದಾಗಿ ಪ್ರಕಟಿಸಿದರು. ವಿಶ್ವವಿದ್ಯಾಲಯ ಉಳಿದ ನಾಲ್ಕು ವಿದ್ಯಾರ್ಥಿಗಳ ಅಮಾನತು ಆದೇಶಗಳನ್ನು ಹಿಂತೆಗೆದುಕೊಂಡಿತು. ಲಕ್ನೌನ ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಗಳನ್ನು ಎದುರಿಸಬೇಕಾಗಿ ಬಂದ ನರೇಂದ್ರ ಮೋದಿ ಭಾರತಮಾತೆ ಒಬ್ಬ ಮಗನ್ನು ಕಳಕೊಂಡಿದ್ದಾಳೆ ಎಂದರು.

ಆದರೆ ಇವೆಲ್ಲ ಗೋಸುಂಬೆತನದ ಪ್ರದರ್ಶನಗಳಷ್ಟೇ. ಅದಿರಂದೇನೂ ಆಗುವುದಿಲ್ಲ. ವಿಶ್ವ ವಿದ್ಯಾಲಯಗಳಲ್ಲಿ ದಲಿತ ವಿದ್ಯಾರ್ಥಿಗಳ ಪರಿಸ್ಥಿತಿಗಳ ಬಗ್ಗೆ ಈಗಾಗಲೇ ನಿವೃತ್ತ ಯುಜಿಸಿ ಅಧ್ಯಕ್ಷ ಪ್ರೊ. ಸುಖದೇವ ಥೋರಟ್ ಅಧ್ಯಕ್ಷತೆಯ ಒಂದು ಸಮಿತಿಯ ವರದಿ ಈಗಾಗಲೇ ಇದೆ. ಆದ್ದರಿಂದ ಈಗ ಪ್ರಕಟಿಸಿರುವ ನ್ಯಾಯಾಂಗ ತನಿಖೆ ನಿರುಪಯುಕ್ತ. ಥೋರಟ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕಾಗಿದೆಯಷ್ಟೇ.

ಉಪಕುಪಲಪತಿ ಪಿ. ಅಪ್ಪಾರಾವ್ ದೀರ್ಘ ರಜೆಯಲ್ಲಿ ಹೋಗಿದ್ದಾರಂತೆ. ಅವರನ್ನು ತಕ್ಷಣವೇ ವಜಾ ಮಾಡಬೇಕು. ಅವರು ಮತ್ತು ಬಂಡಾರು ದತ್ತಾತ್ರೇಯ ಇಬ್ಬರನ್ನೂ ಪರಿಶಿಷ್ಟ ಜಾತಿಗಳು ಪರಿಶಿಷ್ಟ ಬುಡಕಟ್ಟುಗಳು (ಅತ್ಯಾಚಾರಗಳ ತಡೆ) ಕಾನೂನಿನ ಅಡಿಯಲ್ಲಿ ಮತ್ತು ಆತ್ಮಹತ್ಯೆಗೆ ಕಾರಣರು ಎಂದು ಆರೋಪಿ ಗಳಾಗಿಸಬೇಕಾಗಿದೆ.

ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿ ಕೇಂದ್ರ ಸಂಪುಟದಲ್ಲಿ ಮಂತ್ರಿಗಳಾಗಿ ಮುಂದುವರೆಯುವುದಕ್ಕೆ ಅನರ್ಹರಾಗಿದ್ದಾರೆ. ತಮ್ಮ ಸರಕಾರ ಕಳಕೊಂಡಿರುವ ನೈತಿಕ ಅಧಿಕಾರವನ್ನು ಸ್ವಲ್ಪವಾದರೂ ಉಳಿಸಿಕೊಳ್ಳಬೇಕಾದರೆ  ಅವರಿಬ್ಬರೂ ಹೋಗಬೇಕು ಎಂಬುದನ್ನು ಪ್ರಧಾನ ಮಂತ್ರಿ ಗಳು ಅರಿಯಬೇಕಾಗಿದೆ.

ನಮ್ಮ ಗಣತಂತ್ರ ಅಪಾಯದಲ್ಲಿದೆ

ಸಂಪುಟ 10 ಸಂಚಿಕೆ 5 ಜನವರಿ 31, 2016 – ಪ್ರಕಾಶ ಕಾರಟ್

 

 

1950_Republic_India_01

ಸಂವಿಧಾನವನ್ನು ಜಾರಿಗೊಳಿಸಿದ ಆರೂವರೆ ದಶಕಗಳಲ್ಲಿ ಪ್ರಭುತ್ವ ಅದು ನಿರೂಪಿಸಿದ ನಿರ್ದೇಶಕ ಸೂತ್ರಗಳನ್ನು ತ್ಯಜಿಸಿ ಬಿಟ್ಟಿದೆ. ಪ್ರಭುತ್ವದ ಮತ್ತು ಧೋರಣೆಗಳಲ್ಲಿನ ದಿಕ್ಕು ಸಂವಿಧಾನ ಮುಂದಿಟ್ಟ ಈ ಗುರಿಗಳಿಗೆ ವ್ಯತಿರಿಕ್ತವಾಗಿದೆ. ನಮ್ಮ ವ್ಯವಸ್ಥೆಯಲ್ಲಿನ ಬಹಳಷ್ಟು ಸಂಘರ್ಷಗಳು ಮತ್ತು ಬಿಕ್ಕಟ್ಟುಗಳು ಈ ವೈರುಧ್ಯದಿಂದಾಗಿಯೇ ಉಂಟಾಗಿವೆ.

ಈಗಂತೂ ನವ-ಉದಾರವಾದ ಮತ್ತು ಪ್ರಭುತ್ವ-ಪ್ರಾಯೋಜಿತ ಕೋಮುವಾದ ಸರ್ವಾಧಿಕಾರಶಾಹಿಗೆ ದಾರಿ ಮಾಡಿಕೊಡುತ್ತಿದೆ. ನಮ್ಮ ಗಣತಂತ್ರ ಒಂದು ಸಂವಿಧಾನಿಕ ಸರ್ವಾಧಿಕಾರಶಾಹಿಯಾಗಿ ವಿರೂಪಗೊಳ್ಳುವ ಅಪಾಯ ಉಂಟಾಗಿದೆ.

ನಮ್ಮ ಗಣತಂತ್ರದ ಪ್ರಜಾಸತ್ತಾತ್ಮಕ ಜಾತ್ಯಾತೀತ ಆಧಾರದ ಮೇಲೆ ಪ್ರತಿಯೊಂದು ದಾಳಿಯನ್ನು ಹಿಮ್ಮೆಟ್ಟಿಸಬೇಕಾಗಿದೆ. ಇದು ಈ ಗಣತಂತ್ರ ದಿನದಂದು ನಾಗರಿಕರ ದೃಢನಿರ್ಧಾರ ಆಗಬೇಕಾಗಿದೆ.

ಭಾರತ 66ನೇ ಗಣತಂತ್ರ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ನಮ್ಮ ದೇಶದ ಆಗು-ಹೋಗುಗಳ ಬಗ್ಗೆ ಒಂದು ಕಟ್ಟುನಿಟ್ಟಾದ ನೋಟ ಬೀರುವ ಅಗತ್ಯವಿದೆ. ಜನವರಿ 26, 1950ರಂದು ಗಣತಂತ್ರ ಸಂವಿಧಾನದ ಅಂಗೀಕಾರ ಸ್ವತಂತ್ರ ಭಾರತದ ಒಂದು ಪ್ರಧಾನ ಸಾಧನೆ. ಈ ಗಣತಂತ್ರ ಸಂವಿಧಾನದ ಅಡಿಯಲ್ಲಿಯೇ ಒಂದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಿರುವುದು.

ಪ್ರಜಾಪ್ರಭುತ್ವ ವ್ಯವಸ್ಥೆ, ಭಾರತೀಯ ಪ್ರಭುತ್ವದ ಬಂಡವಾಳಶಾಹಿ-ಭೂಮಾಲಕ ಸ್ವರೂಪ ಹೇರಿರುವ ಅಡೆ-ತಡೆಗಳ ನಡುವೆಯೂ ಬದುಕುಳಿದಿದ್ದರೆ, ಅದು ಸಾಧ್ಯವಾಗಿರುವುದು ಮುಖ್ಯವಾಗಿ ಭಾರತೀಯ ಜನತೆಯ ಪ್ರಜಾಸತ್ತಾತ್ಮಕ ಬದ್ಧತೆ ಮತ್ತು ಜನತೆಯ ಹೋರಾಟಗಳು ಹಾಗೂ ಪ್ರಜಾಪ್ರಭುತ್ವವಾದಿ ಆಂದೋಲನ ಗಳಿಂದಾಗಿಯೇ.

ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ನಿರ್ದೇಶಕ ಸೂತ್ರಗಳು “ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ರಾಷ್ಟ್ರೀಯ ಜೀವನದ ಎಲ್ಲ ಸಂಸ್ಥೆಗಳಲ್ಲಿ ವ್ಯಾಪಿಸಿರುವ ಒಂದು ಸಾಮಾಜಿಕ ವ್ಯವಸ್ಥೆ”ಯನ್ನು ಲಭ್ಯಗೊಳಿಸಿ ಜನತೆಯ ಕಲ್ಯಾಣವನ್ನು ಪ್ರೋತ್ಸಾಹಿಸಬೇಕು ಎಂದು ನಿರ್ದೇಶನ ನೀಡಿವೆ. “ಸಮುದಾಯದ ಭೌತಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಎಲ್ಲರ ಒಳಿತಿಗೆ ಸಲ್ಲುವಂತೆ ವಿತರಣೆಯಾಗುವಂತಹ ನಿಯಂತ್ರಣ” ಇರುವ ರೀತಿಯಲ್ಲಿ ಪ್ರಭುತ್ವ ನೋಡಿಕೊಳ್ಳಬೇಕು ಎಂದು ಅವು ಹೇಳಿವೆ. ಅಲ್ಲದೆ “ಆರ್ಥಿಕ ವ್ಯವಸ್ಥೆಯ ನಿರ್ವಹಣೆಯ ಫಲಿತಾಂಶವಾಗಿ  ಎಲ್ಲರಿಗೆ ಕೆಡುಕುಂಟು ಮಾಡುವ ರೀತಿಯಲ್ಲಿ ಸಂಪತ್ತಿನ ಮತ್ತು ಉತ್ಪಾದನಾ ಸಾಧನಗಳ ಕೇಂದ್ರೀಕರಣ”ವಾಗದಂತೆಯೂ ನೋಡಿಕೊಳ್ಳಬೇಕು ಎಂದು ಹೇಳಿರುವ ಈ ಸೂತ್ರಗಳುಆದಾಯದಲ್ಲಿನ ಅಸಮಾನತೆಗಳನ್ನು ಕನಿಷ್ಟಗೊಳಿಸುವಂತೆ ಶ್ರಮಿಸಬೇಕು ಎಂದು ಪ್ರಭುತ್ವಕ್ಕೆ ಅದು ಕರೆ ನೀಡುತ್ತವೆ.

ರಾಜಕೀಯ ಪ್ರಜಾಪ್ರಭುತ್ವ- ಆರ್ಥಿಕ ಅಸಮಾನತೆ

ವೈರುಧ್ಯ ಇರುವುದು ಇಲ್ಲಿಯೇ. ಸಂವಿಧಾನವನ್ನು ಜಾರಿಗೊಳಿಸಿದ ಆರೂವರೆ ದಶಕಗಳಲ್ಲಿ ಪ್ರಭುತ್ವ ಈ ನಿರ್ದೇಶಕ ಸೂತ್ರಗಳನ್ನು ತ್ಯಜಿಸಿ ಬಿಟ್ಟಿದೆ. ಪ್ರಭುತ್ವದ ಮತ್ತು ಧೋರಣೆಗಳಲ್ಲಿನ ದಿಕ್ಕು ಸಂವಿಧಾನ ಮುಂದಿಟ್ಟ ಈ ಗುರಿಗಳಿಗೆ ವ್ಯತಿರಿಕ್ತವಾಗಿದೆ. ನಮ್ಮ ವ್ಯವಸ್ಥೆಯಲ್ಲಿನ ಬಹಳಷ್ಟು ಸಂಘರ್ಷಗಳು ಮತ್ತು ಬಿಕ್ಕಟ್ಟುಗಳು ಈ ವೈರುಧ್ಯದಿಂದಾಗಿಯೇ- ಅಂದರೆ ಒಂದಡೆಯಲ್ಲಿ ರಾಜಕೀಯ ಪ್ರಜಾಪ್ರಭುತ್ವ, ಅದರ ಜತೆಜತೆಗೇ ಸಂಪತ್ತಿನ ಕೇಂದ್ರೀಕರಣ ಮತ್ತು ಅರ್ಥಿಕ ಅಸಮಾನತೆಗಳಿಂದಾಗಿಯೇ- ಉಂಟಾಗಿವೆ.

ನವ-ಉದಾರವಾದಿ ಬಂಡವಾಳಶಾಹಿಯ ಅಡಿಯಲ್ಲಿ ಅಸಮಾನತೆಗಳನ್ನು ಕನಿಷ್ಟಗೊಳಿಸುವ ಬದಲು ಅವನ್ನು ಪೋಷಿಸಲಾಗುತ್ತಿದೆ, ಉಲ್ಬಣಗೊಳಿಸಲಾಗುತ್ತಿದೆ. ಒಂದು ಶೇಕಡಾ ಅತ್ಯಂತ ಶ್ರೀಮಂತ ಭಾರತೀಯರು ಈಗ ದೇಶದ ಸಂಪತ್ತಿನ 53ಶೇ.ದ ಮೇಲೆ ಒಡೆತನ ಹೊಂದಿದ್ದಾರೆ. ಇನ್ನೊಂದೆಡೆಯಲ್ಲಿ ಜಗತ್ತಿನ ಒಟ್ಟು ಬಡವರಲ್ಲಿ ಐದನೇ ಒಂದು ಭಾಗದಷ್ಟು ಭಾರತದಲ್ಲಿ ವಾಸಿಸುತ್ತಿದ್ದಾರೆ. 2015ರಲ್ಲಿ ದೇಶದೆಲ್ಲೆಡೆಗಳಲ್ಲಿ ರೈತರ ಆತ್ಮಹತ್ಯೆಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚಿದವು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶ, ಮತ್ತು ಇತರ ಸ್ಥಳಗಳಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ 2015ರಲ್ಲಿ 3228 ರೈತ ಆತ್ಮಹತ್ಯೆಗಳು ದಾಖಲಾಗಿವೆ. ವಾಸ್ತವ ಸಂಖ್ಯೆ ಇನ್ನೂ ಹೆಚ್ಚಿದೆ. ಕರ್ಷಕ ಸಂಕಟ ಗ್ರಾಮೀಣ ಬಡವರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ಭಾರತೀಯ ಸಂವಿಧಾನ ಪ್ರಜಾಪ್ರಭುತ್ವ, ಜಾತ್ಯಾತೀತತೆ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವ ಈ ನಾಲ್ಕು ಬುನಾದಿ ಸೂತ್ರಗಳ ಮೇಲೆ ಸ್ಥಾಪಿಸಲ್ಪಟ್ಟಿದೆ. ನಿಜ, ಇದರೊಳಗೇ ಮಿತಿಗಳು ಅಡಕವಾಗಿವೆ ಎಂಬುದು ಬೇರೆ ಮಾತು. ಈ ನಾಲ್ಕೂ ಕಾಲು ಶತಮಾನದ ಉದಾರೀಕರಣ ಮತ್ತು ಖಾಸಗೀಕರಣದ ನಂತರ ಅಪಮೌಲ್ಯಗೊಂಡಿವೆ, ಅಂದಗೆಟ್ಟು ಕೂತಿವೆ. ಇಂದು ಅಧಿಕಾರದ ಚುಕ್ಕಾಣಿ ಹಿಡಿದವರು ಭಾರತೀಯ ಪ್ರಭುತ್ವದಲ್ಲಿ ಅಳಿದುಳಿದ ಜಾತ್ಯಾತೀತ ಸತ್ವವನ್ನೂ ಸವೆಸಿ ಬಿಡಲು ಶ್ರಮಿಸುತ್ತಿದ್ದಾರೆ. ಪ್ರಭುತ್ವದ ಮತ್ತು ಸಮಾಜದ ಜಾತ್ಯಾತೀತ ಸ್ವರೂಪವನ್ನು ಕಳಚಿ ಹಾಕುವ ಯೋಜನೆ ಈಗ ಬಿಜೆಪಿ-ಆರೆಸ್ಸೆಸ್ ಆಳ್ವಿಕೆಯ ಅಡಿಯಲ್ಲಿ ಜಾರಿಯಲ್ಲಿದೆ.

ಜಾತ್ಯಾತೀತೆಯಿಂದಲೇ ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವದ ಆಧಾರವೆಂದರೆ ಧರ್ಮ, ಲಿಂಗ, ಜಾತಿಯ ಬೇಧಭಾವವಿಲ್ಲದೆ ನಾಗರಿಕರಿಗೆ ಸಮಾನ ಹಕ್ಕುಗಳು ಇರುವುದು. ಇದನ್ನು ಒಂದು ಜಾತ್ಯಾತೀತ ಪ್ರಭುತ್ವ ಮಾತ್ರವೇ ಕೊಡಿಸಲು ಸಾಧ್ಯ. ದೇಶವನ್ನು ಈಗ ಆಳುತ್ತಿರುವವರು ಹಿಂದೂ ಅಂದರೆ ಮಾತ್ರವೇ ರಾಷ್ಟ್ರೀಯವಾದ ಮತ್ತು ಅಂತಿಮವಾಗಿ ನಾಗರಿಕತ್ವ ಎಂದು ಸಮೀಕರಿಸುವ ಒಂದು ಸಿದ್ಧಾಂತದಲ್ಲಿ ನಂಬಿಕೆಯಿರುವವರು. ‘ಹಿಂದೂರಾಷ್ಟ್ರ’ದ ಪರಿಕಲ್ಪನೆ ಇತರ ಧರ್ಮಗಳಿಗೆ ಸೇರಿದ ಜನಗಳನ್ನು ಎರಡನೇ ದರ್ಜೆಯ ನಾಗರಿಕರ ಮಟ್ಟಕ್ಕೆ ಇಳಿಸುತ್ತದೆ. ಆರೆಸ್ಸೆಸ್‍ನ ವಕ್ತಾರರು ಬಹಿರಂಗವಾಗಿಯೇ ಸಂವಿಧಾನದಲ್ಲಿ ಜಾತ್ಯಾತೀತತೆಯ ಅಗತ್ಯವನ್ನು ಪ್ರಶ್ನಿಸಿದ್ದಾರೆ.

ನಮ್ಮ ಸಂವಿಧಾನದ ಒಂದು ವಿಶಿಷ್ಟ ಲಕ್ಷಣವೆಂದರೆ ಸಾಮಾಜಿಕ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ವಿಕಲತೆಗಳನ್ನು ನಿವಾರಿಸಲು ಸಮರ್ಥಕ ಕ್ರಿಯೆಗೆ ಅವಕಾಶ ಕಲ್ಪಿಸಿರುವುದು. ಇದೊಂದು ಸಾಮಾಜಿಕ ನ್ಯಾಯದ ಪರಿಕಲ್ಪನೆ, ಅಸಮತೆಯಿಂದ ಕೂಡಿದ ಜಾತಿವ್ಯವಸ್ಥೆಯನ್ನು ಸುಧಾರಣಾವಾದಿ ರೀತಿಯಲ್ಲಿ ಎದುರಿಸುವ ಒಂದು ಪ್ರಯತ್ನ. 65 ವರ್ಷಗಳ ನಂತರವೂ ಜಾತಿ ದಮನ, ಜತೆಗೆ ಅಸ್ಪೃಶ್ಯತೆಯೆಂಬ ದುಷ್ಟ ಪದ್ಧತಿ ಕೂಡ ವಿವಿಧ ರೂಪಗಳಲ್ಲಿ ಸಮಾಜವನ್ನು ಆವರಿಸಿಕೊಂಡಿವೆ. ಈ ವಿಷಯದಲ್ಲಿ ‘ಹಿಂದುತ್ವ’ ಹಿಂದೂಶಾಸ್ತ್ರಗಳನ್ನು ಎತ್ತಿ ಹಿಡಿಯಬೇಕು ಎನ್ನುತ್ತದೆ.

ಅತಿ ದೊಡ್ಡ ವಿಫಲತೆ

ಪ್ರಭುತ್ವದ ಅತಿ ದೊಡ್ಡ ವಿಫಲತೆಯೆಂದರೆ ಸಮಾಜದಲ್ಲಿ ಅತ್ಯಂತ ಹೆಚ್ಚು ದಮನಕ್ಕೆ ಒಳಗಾಗಿರುವ ದಲಿತರಿಗೆ ನ್ಯಾಯ ಒದಗಿಸಲಾಗದಿರುವುದು. ಬಲಪಂಥೀಯ ಹಿಂದು ಸಂಕುಚಿತವಾದಿಗಳ ಉದಯದಿಂದ ಈ ದಮನ ಇನ್ನಷ್ಟು ತೀವ್ರಗೊಂಡಿದೆ. ಫರೀದಾಬಾದ್‍ನಲ್ಲಿ ಇಬ್ಬರು ದಲಿತ ಮಕ್ಕಳನ್ನು ಸುಟ್ಟು ಹಾಕಿದ ಭೀಕರ ಘಟನೆ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯಯತ್ತ ತಳ್ಳಲ್ಪಟ್ಟ  ರೋಹಿತ್ ವೆಮುಲಾರ ದುರಂತಮಯ  ಕೊನೆ ಈ ಜಾತಿ ಕಂದಾಚಾರ ಈಗಲೂ ಮುಂದುವರೆಯುತ್ತಿರುವುದರ ಕತೆ ಹೇಳುತ್ತವೆ.

ಗಣತಂತ್ರ ದಿನದ ಕೆಲವೇ ದಿನಗಳ ಮೊದಲು ಉಡುಪಿಯ ಪೇಜಾವರ ಮಠದ ಕೃಷ್ಣ ದೇವಸ್ಥಾನದಲ್ಲಿ ಒಂದು ದೊಡ್ಡ ಧಾರ್ಮಿಕ ಸಮಾರಂಭ ನಡೆದಿದೆ(ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಉತ್ಸವ-ಸಂ.) ಅಲ್ಲಿ ಈಗಲೂ ‘ಪಂಕ್ತಿಭೇದ’(ಬ್ರಾಹ್ಮಣರಿಗೆ, ಮತ್ತು ಶೂದ್ರರಿಗೆ ಪ್ರತ್ಯೇಕ ಊಟದ ಪಂಕ್ತಿಗಳು) ಮತ್ತು ‘ಮಡೆಸ್ನಾನ’(ಬ್ರಾಹ್ಮಣರ ಊಟವಾದ ಮೇಲೆ ಅವರು ಬಿಟ್ಟ ಊಟದೆಲೆಗಳ ಮೇಲೆ ಹೊರಳಾಡುವುದು) ನಡೆಯುತ್ತಿದೆ. ಈ ಸಮಾರಂಭದಲ್ಲಿ ಬಿಜೆಪಿ ಕೇಂದ್ರ ಮಂತ್ರಿಗಳು, ಆಂಧ್ರಪ್ರದೇಶದ ಮುಖ್ಯಮಂತ್ರಿ, ಕರ್ನಾಟಕದ ಮಾಜೀ ಮುಖ್ಯಮಂತ್ರಿಗಳು ಮತ್ತು ಇತರ ಮಂತ್ರಿಗಳು ಮುಂತಾದವರೆಲ್ಲ  ಭಾಗವಹಿಸಿದ್ದರು. ಅದರೆ ಯಾರೂ ಈ ನಗ್ನ ಜಾತಿ ತಾರತಮ್ಯದ ಆಚರಣೆಗಳ ವಿರುದ್ಧ ಸೊಲ್ಲೆತ್ತಲಿಲ್ಲ.

ಸಂವಿಧಾನ “ವೈಜ್ಞಾನಿಕ ಮನೋಭಾವ, ಮಾನವೀಯತೆ ಮತ್ತು ಶೋಧನೆಯ ಮತ್ತು ಸುಧಾರಣೆಯ  ಭಾವವನ್ನು ಬೆಳೆಸಿಕೊಳ್ಳಬೇಕು” ಎಂದು ನಾಗರಿಕರಿಗೆ ಹೇಳಿದ್ದರೂ, ಪ್ರಭುತ್ವ ಸಾರ್ವಜನಿಕ ಕ್ಷೇತ್ರದಲ್ಲಿ ಧರ್ಮೀಯತೆಗೇ ಪೋಷಣೆ ನೀಡುತ್ತಿದೆ, ಪ್ರೋತ್ಸಾಹ ನೀಡುತ್ತಿದೆ. ವೈಜ್ಞಾನಿಕ ಮನೋಭಾವವನ್ನು ಪ್ರೋತ್ಸಾಹಿಸುವುದಿರಲಿ, ಪ್ರಧಾನ ಮಂತ್ರಿಗಳೇ ಪ್ರಾಚೀನ ವಿಜ್ಞಾನದ ಸಾಧನೆಗಳು ಎಂದು ಹೊಗಳುತ್ತ, ಗಣೇಶನ ಆನೆಯ ತಲೆ ಆಗಿನವರಿಗೆ ಪ್ಲಾಸ್ಟಿಕ್ ಸರ್ಜರಿಯ ಜ್ಞಾನವಿತ್ತು ಎಂದು ತೋರಿಸುತ್ತದೆ ಎಂದಿದ್ದರಲ್ಲ!

ಸಂವಿಧಾನದಲ್ಲಿ ಒಂದು ಸೀಮಿತ ಸ್ವರೂಪದಲ್ಲಾದರೂ ಇರುವ  ಒಕ್ಕೂಟ ತತ್ವವನ್ನು ಕ್ರಮೇಣ ಸೊರಗಿಸಿಕೊಂಡು ಬಂದಿದ್ದು, ನವ-ಉದಾರವಾದಿ ಆಳ್ವಿಕೆಯಲ್ಲಿ ಅದರ ಬೇಗ ತೀವ್ರಗೊಂಡಿದೆ. ರಾಜ್ಯಗಳನ್ನು ಮಾರುಕಟ್ಟೆಗಳಲ್ಲಿ ಸಂಪನ್ಮೂಲಗಳು ಮತ್ತು ಬಂಡವಾಳಕ್ಕೆ ಪರಸ್ಪರ ಸ್ಪರ್ಧಿಸುವ ಮಟ್ಟಕ್ಕೆ ಇಳಿಸಲಾಗಿದೆ. ಅವುಗಳನ್ನು ಅಧಿಕಾರವಿಹೀನಗೊಳಿಸಿ, ಅವಕ್ಕೆ ಸಂಪನ್ಮೂಲಗಳು ದಕ್ಕದೆ ವಿಶೇಷ ವಿಧ ಎಂಬ ಸ್ಥಾನಮಾನ ಕೊಡಿ ಎಂದೋ, ಅಥವ ಒಂದು ಅಖಿಲ ಭಾರತ ವೈದ್ಯಕೀಯ ಸಂಸ್ಥೆ ಅಥವ ಐಐಟಿಯನ್ನು ವರವಾಗಿ ದಯಪಾಲಿಸಿ ಎಂದೋ ಕೈಚಾಚಬೇಕಾದ ಮಟ್ಟಕ್ಕೆ ಅವನ್ನು ಇಳಿಸಲಾಗಿದೆ. ಯೋಜನಾ ಆಯೋಗದ ರದ್ದತಿ ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಕಳಚಿ ಹಾಕಿ ರಾಜ್ಯಗಳನ್ನು ಇನ್ನಷ್ಟು ಕೇಂದ್ರದ ಮರ್ಜಿಗೆ ಒಳಪಡಿಸಲಾಗಿದೆ.

ನವ-ಉದಾರವಾದಿ ರಾಜಕೀಯ

ಸಂಸದೀಯ ಪ್ರಜಾಪ್ರಭುತ್ವದ ಜೀವಸತ್ವವನ್ನೇ ನವ-ಉದಾರವಾದಿ ರಾಜಕೀಯ ಹಿಂಡಿ ಹಾಕುತ್ತಿದೆ. ಹಣಬಲ ಮತ್ತು ಬಂಡವಾಳಶಾಹಿ-ರಾಜಕಾರಣಿ ದುಷ್ಟಕೂಟ ಬೂಜ್ರ್ವಾ ಪಕ್ಷಗಳಲ್ಲಿ ರಾರಾಜಿಸುತ್ತಿವೆ. ಈ ಮೂಲಕ ಯಾರೇ ಅಧಿಕಾರಕ್ಕೆ ಬಂದರೂ, ಸರಕಾರ ಬದಲಾಗಬಹುದಷ್ಟೇ, ಧೋರಣೆಗಳು ಮಾತ್ರ ಬದಲಾಗದೆ ಅವೇ ಉಳಿಯುವಂತೆ ನೋಡಿಕೊಳ್ಳಲಾಗುತ್ತಿದೆ. ಜನತೆಗೆ ಆಯ್ಕೆ ಮಾಡಿಕೊಳ್ಳಬಹುದಾದ ಅಧಿಕಾರವೇ ಇಲ್ಲದಂತೆ ಮಾಡಲಾಗುತ್ತಿದೆ. ಡಾ. ಅಂಬೇಡ್ಕರ್ ಎಚ್ಚರಿಸಿದ್ದ ರಾಜಕೀಯ ಸಮಾನತೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ನಡುವೆ ಸಂಬಂಧವೇ ಇಲ್ಲದಂತಹ ಸ್ಥಿತಿ  ಏರ್ಪಟ್ಟಿದೆ.

ಪ್ರಜಾಪ್ರಭುತ್ವವನ್ನು ಕೃಶಗೊಳಿಸುವ ಕ್ರಿಯೆ ವಿವಿಧ ರೀತಿಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ. ಕಾರ್ಮಿಕ ಸಂಘಗಳನ್ನು ಕಟ್ಟಿಕೊಳ್ಳುವುದು ಸಂವಿಧಾನ ಕೊಟ್ಟಿರುವ ಒಂದು ಮೂಲಭೂತ ಹಕ್ಕು. ಅದಕ್ಕೆ ಆವರಣ ಹಾಕಿ ಅದನ್ನು ಚಲಾಯಿಸುವುದೇ ಬಹಳ ಕಷ್ಟಕರವಾಗುವಂತೆ ಮಾಡಲಾಗಿದೆ. ಈ ಹಕ್ಕು ಕಾರ್ಮಿಕರಿಗೆ ದಕ್ಕದಂತೆ ವಂಚಿಸುವಲ್ಲಿ ಪ್ರಭುತ್ವವೂ ಶಾಮೀಲಾಗುತ್ತದೆ, ಎಸ್‍ಇಝಡ್(ವಿಶೇಷ ಆರ್ಥಿಕ ವಲಯ)ಗಳಲ್ಲಂತೂ  ಈ ಹಕ್ಕನ್ನು ವಂಚಿಸುವುದನ್ನೇ ಕಾನೂನು ಬದ್ಧಗೊಳಿಸುತ್ತದೆ. ಮುನ್ನೆಚ್ಚರಿಕೆಯ ಸ್ಥಾನಬದ್ಧತೆ ಕುರಿತಂತೆ ಸಂವಿಧಾನದಲ್ಲಿ ಇರುವ ದೋಷವನ್ನು ಮನಬಂದಂತೆ ಬಳಸಿಕೊಂಡು ವೈಯಕ್ತಿಕ ಸ್ವಾತಂತ್ರ್ಯಗಳ ಮೇಲೆ ಮಿತಿ ಹೇರುವ ಕರಾಳ ಕಾನೂನುಗಳನ್ನು ತರಲಾಗುತ್ತಿದೆ. ಈಗಿನ ಆಡಳಿತವಂತೂ ಭಿನ್ನ ಅಭಿಪ್ರಾಯಗಳು ಮತ್ತು ಅಲ್ಪಸಂಖ್ಯಾತರ ಪ್ರತಿಭಟನೆಗಳಿಗೆ  ರಾಷ್ಟ್ರ-ವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ಅವುಗಳ ವಿರುದ್ಧ ಎಗ್ಗಿಲ್ಲದೆ ದೇಶದ್ರೋಹದ ಕಾನೂನುಗಳನ್ನು ಬಳಸುತ್ತಿದೆ. ನವ-ಉದಾರವಾದ ಮತ್ತು ಪ್ರಭುತ್ವ-ಪ್ರಾಯೋಜಿತ ಕೋಮುವಾದ ಸರ್ವಾಧಿಕಾರಶಾಹಿಗೆ ದಾರಿ ಮಾಡಿಕೊಡುತ್ತಿದೆ. ನಮ್ಮ ಗಣತಂತ್ರ ಒಂದು ಸಂವಿಧಾನಿಕ ಸರ್ವಾಧಿಕಾರಶಾಹಿಯಾಗಿ ವಿರೂಪಗೊಳ್ಳುವ ಅಪಾಯ ಉಂಟಾಗಿದೆ.

ಪ್ರಜಾಪ್ರಭುತ್ವವನ್ನು ಮತ್ತು ಜಾತ್ಯಾತೀತತೆಯನ್ನು ರಕ್ಷಿಸುವ ಹೋರಾಟ ನಡೆಸಲು ನವ-ಉದಾರವಾದ ಮತ್ತು ಕೋಮುವಾದದ ವಿರುದ್ಧ ಒಟ್ಟಾಗಿ, ಏಕಕಾಲದಲ್ಲಿ ನಡೆಸುವ ಹೋರಾಟ ಅಗತ್ಯವಾಗಿದೆ. ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಹೋರಾಟ ಹಿಂದುತ್ವ ಸರ್ವಾಧಿಕಾರಶಾಹಿ ಶಕ್ತಿಗಳ ವಿರುದ್ಧ ಹೋರಾಟದ ಒಂದು ಕೀಲಿಗೈ. ನಮ್ಮ ಗಣತಂತ್ರದ ಪ್ರಜಾಸತ್ತಾತ್ಮಕ  ಜಾತ್ಯಾತೀತ ಆಧಾರದ ಮೇಲೆ ಪ್ರತಿಯೊಂದು ದಾಳಿಯನ್ನು ಹಿಮ್ಮೆಟ್ಟಿಸಬೇಕಾಗಿದೆ. ಇದು ಈ ಗಣತಂತ್ರ ದಿನದಂದು ನಾಗರಿಕರ ದೃಢನಿರ್ಧಾರ ಆಗಬೇಕಾಗಿದೆ.

ಆರ್ಥಿಕ ಪರಿಸ್ಥಿತಿ ಕಳವಳಕಾರಿ

ಸಂಪುಟ 10 ಸಂಚಿಕೆ 4 ಜನವರಿ 24 – 2016 ಪಿಡಿ ಸಂಪಾದಕೀಯ – ಪ್ರಕಾಶ್ ಕಾರಟ್

ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಇಳಿಯುತ್ತಲೇ ಇದೆ. ಅದೇ ವೇಳೆಗೆ ಚಿಲ್ಲರೆ ಬೆಲೆ ಸೂಚ್ಯಂಕ ಏರುತ್ತಲೇ ಇದೆ, ಮುಖ್ಯವಾಗಿ ಆಹಾರವಸ್ತುಗಳ ಬೆಲೆಗಳಲ್ಲಿ ಸತತ ಏರಿಕೆಗಳಿಂದಾಗಿ. ಅಲ್ಲದೆ 2016ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಲಕ್ಷಣಗಳಿವೆ. ಇಂತಹ ಸನ್ನಿವೇಶದಲ್ಲಿ ಮೋದಿ ಸರಕಾರ ತನ್ನ ದಿವಾಳಿಕೋರ ಧೋರಣೆಗಳ ವಿಮರ್ಶೆ ಮಾಡಬೇಕಾಗುತ್ತದೆ. ಆದರೆ ಶ್ರೀಮಂತ-ಪರ ಹಣಕಾಸು ನಮಬಿಕೆಗಳಿಗೆ ಬದ್ಧವಾಗಿರುವ ಈ ಸರಕಾರ ಮುಂಬರುವ ಬಜೆಟಿನಲ್ಲಿ ಇದನ್ನು ಮಾಡಬಹುದು ಎಂಬ ಸಂಕೇತಗಳೇನೂ ಇಲ್ಲ.

economy

ದೇಶದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ ಎಂಬುದು ಈಗ ಹೊರಬಂದಿರುವ ಎರಡು ಅಂಕಿ-ಅಂಶಗಳಿಂದ ಕಾಣ ಬರುತ್ತಿದೆ. ಮೊದಲನೆಯದು, ಕೈಗಾರಿಕಾ ಉತ್ಪಾದನಾ ಸೂಚ್ಯಂಕ. ಅದು ನವಂಬರ್ 2015ರಲ್ಲಿ 3.2ಶೇ.ದಷ್ಟು ಸಂಕುಚಿತಗೊಂಡಿದೆ. ಎರಡನೆಯದು, ಚಿಲ್ಲರೆ ಬೆಲೆ ಸೂಚ್ಯಂಕ. ಇದು ಡಿಸೆಂಬರ್‍ನಲ್ಲಿ 5.61ಶೇ. ಏರಿಕೆ ದಾಖಲಿಸಿದೆ.

ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಇಳಿಕೆ ಕಳವಳಕಾರಿ. ಏಕೆಂದರೆ ಸರಕುಗಳ ತಯಾರಿಕೆಯ ವಲಯದಲ್ಲಿ 4.4.ಶೇ. ಇಳಿಕೆಯಾಗಿದೆ, ಬಂಡವಾಳ ಸರಕುಗಳ ವಲಯ 24ಶೇ. ಇಳಿಕೆ ಕಂಡಿದೆ. ಇದು ಹೂಡಿಕೆಗಳು ಬರುತ್ತಿಲ್ಲ ಎಂಬುದರ ಸ್ಪಷ್ಟ ಸೂಚನೆ. ಕೈಗಾರಿಕಾ ಉತ್ಪಾದನೆ ಇಳಿಕೆ ರಫ್ತುಗಳು ಸತತವಾಗಿ ಇಳಯುತ್ತಿರುವದರಿಂದಲೂ ಆಗಿದೆ. ಡಿಸೆಂಬರ್ 2014ರ ನಂತರ ಸತತ 12ನೇ ತಿಂಗಳಲ್ಲೂ ರಫ್ತು ಇಳಿಮುಖಗೊಂಡಿದೆ, 5ಶೇ.ದಷ್ಟು ನಕಾರಾತ್ಮಕ ಬೆಳವಣಿಗೆ ತೋರಿಸುತ್ತಿದೆ. ದೇಶದೊಳಗೂ ಬೇಡಿಕೆ ಇಲ್ಲದ್ದರಿಂದ ಉತ್ಪಾದನೆಗೆ ಉತ್ತೇಜನೆ ಸಿಗುತ್ತಿಲ್ಲ.

ಜಾಗತಿಕವಾಗಿ ಕಾಣುತ್ತಿರುವ ಆರ್ಥಿಕ ನಿಧಾನಗತಿ ನಮ್ಮ ಆರ್ಥಿಕದ ಮೇಲೆ ಮತ್ತು ರಫ್ತುಗಳ ಮೇಲೆ ನೇರ ಪರಿಣಾಮ ಬೀರಿದೆ. ‘ಮೇಕ್ ಇನ್ ಇಂಡಿಯಾ’ದ ಬಗ್ಗೆ ಉದ್ದುದ್ದ ಮಾತುಗಳೆಲ್ಲ ಭಾರತಕ್ಕೆ ವಿದೇಶಿ ಬಂಡವಾಳವನ್ನು ಆಕರ್ಷಿಸುವುದರ ಮೇಲೆ ನಿಂತಿವೆ. ಆದರೆ ಜಾಗತಿಕ ಅರ್ಥಿಕ ಪರಿಸ್ತಿತಿಯನ್ನು ನೋಡಿದರೆ ಇದು ಸಾಧ್ಯವಾಗುವ ಸಂಭವ ಕಡಿಮೆ. ವಿದೇಶಿ ಹಣ ಕೇವಲ ಸಟ್ಟಾಕೋರ ಹಣಕಾಸು ವಲಯಗಳು, ಶೇರು ಮಾರುಕಟ್ಟೆಗಳು ಮತ್ತು ಕರೆನ್ಸಿ ಮಾರುಕಟ್ಟೆಗಳಿಗೆ ಮಾತ್ರ ಬರುತ್ತಿದೆ.

ಭಾರತದ್ಧು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆ ಎಂದು ಮೋದಿ ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಈ ಹಿಂದೆ ಜಿಡಿಪಿ ಬೆಳವಣಿಗೆ ದರ 8ರಿಂದ 8.5ಶೇ. ಇರುತ್ತದೆ ಎಂದು ಲೆಕ್ಕ ಹಾಕಿದ್ದನ್ನು ಸರಕಾರದ ವರ್ಷದ ಮಧ್ಯಂತರ ವಿಮರ್ಶೆಯಲ್ಲಿ 7.2ಶೇ. ಇರುತ್ತದೆ(ಬಜೆಟ್ ವೇಳೆಗೆ) ಎನ್ನಲಾಗಿದೆ. ಆದರೆ ಇದೂ ಸಂದೇಹಾಸ್ಪದ. ಏಕೆಂದರೆ ಈ ಅಂಕಿ-ಅಂಶಗಳು ಬುಡಮಟ್ಟದ ವಾಸ್ತವತೆಗಳಿಗೆ ಅನುಗುಣವಾಗಿರುವಂತೆ ಕಾಣುತ್ತಿಲ್ಲ-ಕೈಗಾರಿಕಾ ಉತ್ಪಾದನೆಯಲ್ಲೂ, ಕೃಷಿ ಉತ್ಪಾದನೆಯಲ್ಲೂ.

2016ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಲಕ್ಷಣಗಳಿರುವಾಗ, ಮೋದಿ ಸರಕಾರ ತನ್ನ ದಿವಾಳಿಕೋರ ಧೋರಣೆಗಳ ವಿಮರ್ಶೆ ಮಾಡಬೇಕಾಗುತ್ತದೆ. ಈಗ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಆದರೆ ಅದಕ್ಕೆ ಸಂಪನ್ಮೂಲ ಸಂಗ್ರಹಿಸಲು ಶ್ರೀಮಂತರ ಮೇಲೆ ತೆರಿಗೆ ಹಾಕಬೇಕಾಗುತ್ತದೆ ಮತ್ತು ಸಾರ್ವಜನಿಕ ಖರ್ಚುಗಳಲ್ಲಿ ಕಡಿತ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ. ಆದರೆ ಸಂಪ್ರದಾಯಶರಣ ಹಣಕಾಸು ನಂಬಿಕೆಗಳಿಗೆ ಬದ್ಧವಾಗಿರುವ ಈ ಸರಕಾರ ಮುಂಬರುವ ಬಜೆಟಿನಲ್ಲಿ ಇದನ್ನು ಮಾಡಬಹುದು ಎಂಬ ಸಂಕೇತಗಳೇನೂ ಇಲ್ಲ.

ಚಿಲ್ಲರೆ ಹಣದುಬ್ಬರ ಕಳೆದ ಒಂಭತ್ತು ತಿಂಗಳಲ್ಲೇ ಅತಿ ಹೆಚ್ಚು ಮಟ್ಟವನ್ನು ತಲುಪಿದೆ. ಇದು ಮುಖ್ಯವಾಗಿ ಆಹಾರದ ಬೆಲೆಗಳಲ್ಲಿ ತೀವ್ರ ಏರಿಕೆಯಿಂದಾಗಿ ಆಗಿದೆ. ಬೇಳೆಕಾಳುಗಳ ಬೆಲೆಗಳಲ್ಲಿ 46ಶೇ. ಏರಿಕೆಯಾಗಿದೆ. ಮುಂಗಾರು ಬೆಳೆಗಳ ಉತ್ಪಾದನೆ 3ಶೇ.ದಷ್ಟು ಇಳಿದಿದೆ. ಎರಡು ಸತತ ಬರದ ವರ್ಷಗಳಿಂದಾಗಿ ಈ ವರ್ಷ ಕೃಷಿ ಬೆಳವಣಿಗೆಯ ಸಂಭವವೂ ಕಡಿಮೆ. ಅಂದರೆ ಆಹಾರವಸ್ತುಗಳ ಬೆಲೆಗಳು ಸಡಿಲಗೊಳ್ಳಬಹುದು ಎಂಬ ಸಂಕೇತಗಳೂ ಇಲ್ಲ.

ಇಂತಹ ಕರ್ಷಕ ಸಂಕಟ ಮತ್ತು ಆಹಾರವಸ್ತುಗಳ ಬೆಲೆಗಳು ಏರುತ್ತಿರುವ ಸಂದರ್ಭದಲ್ಲಿ ಜನಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಅತ್ಯಂತ ಅಗತ್ಯ. ಆದರೆ ಆಹಾರ ಭದ್ರತಾ ಕಾನೂನನ್ನು ಜಾರಿ ಮಡುತ್ತಿರುವ ರೀತಿ ನೋಡಿದರೆ ಬಡಜನರ ಸ್ಥಿತಿ ಚಿಂತಾಜನಕವಾಗಿ ಕಾಣುತ್ತದೆ. ಈ ಕಾನೂನನ್ನು ಸಪ್ಟಂಬರ್ 2013ರಲ್ಲಿ ಅಂಗೀಕರಿಸಲಾಯಿತು. ಅದು ಗ್ರಾಮೀಣ ಪ್ರದೇಶಗಳಲ್ಲಿ 75ಶೇ. ಮತ್ತು ನಗರ ಪ್ರದೇಶಗಳಲ್ಲಿ 50ಶೇ., ಒಟ್ಟಾಗಿ ಸರಾಸರಿ 67ಶೇ. ಜನಸಂಖ್ಯೆಯನ್ನು ಒಳಗೊಳ್ಳುವಂತದ್ದು. ಆದರೆ ಅದನ್ನು ಇನ್ನೂ ದೇಶಾದ್ಯಂತ ಜಾರಿಗೆ ತಂದಿಲ್ಲ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅದನ್ನು ಇನ್ನು ಜಾರಿಗೆ ತರಬೇಕಾಗಿದೆಯಷ್ಟೇ. ಕೆಲವು ಕೇವಲ ಭಾಗಶಃ ಮಾಡಿವೆ. ಬಿಜೆಪಿ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯಗಳಿಗೆ ಇದರ ಜಾರಿಗೆ ಮೂರು ಬಾರಿ ದಿನಾಂಕಗಳನ್ನು ವಿಸ್ತರಿಸಲಾಗಿದೆ. ಈಗ ಇದರ ಜಾರಿಗೆ ಕೊನೆಯ ದಿನಾಂಕವನ್ನು ಎಪ್ರಿಲ್ 1, 2016ಕ್ಕೆ ಇಡಲಾಗಿದೆ. ಈ ಕಾನೂನಿನ ಅರೆಬರೆ ಜಾರಿಯಿಂದಾಗಿ ಆಹಾರ ವಸ್ತುಗಳ ವಿತರಣೆಯೂ ಸೀಮಿತಗೊಳ್ಳುತ್ತದೆ, ಅಲ್ಲದೆ ತಪ್ಪು ಅರ್ಹತಾ ಮಾನದಂಡಗಳಿಂದಾಗಿ ಹಲವರನ್ನು ಇದರಿಂದ ಹೊರಗಿಡಲಾಗುತ್ತದೆ.

ಇಂತಹ ಸಮಯದಲ್ಲಿ ಸರಿಯಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಭಾವದಿಂದಾಗಿ ಗ್ರಾಮೀಣ ಬಡವರು ತೆರಬೇಕಾದ ಬೆಲೆ ಏನೆಂಬುದಕ್ಕೆ ಉತ್ತರಪ್ರದೇಶದ ಬುಂದೇಲಖಂಡದಲ್ಲಿ ಬಡವರ ಶೋಚನೀಯ ಪರಿಸ್ಥಿತಿ ಒಂದು ಮನಕಲಕುವ ಉದಾಹರಣೆ. ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ಅತ್ಯಂತ ಕೆಟ್ಟ ಪರಿಸ್ಥಿತಿಯಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಇಲ್ಲಿ ಆಹಾರ ಪೂರೈಕೆಯಲ್ಲಿ ಬಹುಭಾಗ ಭ್ರಷ್ಟ ಅಧಿಕಾರಿಗಳು ಮತ್ತು ವ್ಯಾಪಾರಿಗಳ ಪಾಲಾಗುತ್ತದೆ. ಆಹಾರ ಭದ್ರತಾ ಕಾನೂನು ಸರಿಯಾಗಿ ಜಾರಿಯಾಗಿದ್ದರೆ ಬುಂದೇಲಖಂಡದ 80 ಶೇ. ಜನತೆ ಇದರ ವ್ಯಾಪ್ತಿಗೆ ಬರುತ್ತಿದ್ದರು. ಬದಲಾಗಿ, ಬರವನ್ನು ಎದುರಿಸುತ್ತಿರುವ ಇಲ್ಲಿನ ಬಡವರನ್ನು ಹಸಿವನ್ನು ಹಿಂಗಿಸಲು ಹುಲ್ಲು ತಿನ್ನಬೇಕಾದ ಪರಿಸ್ಥಿತಿಗೆ ಇಳಿಸಲಾಗಿದೆ.
ಮೋದಿ ಸರಕಾರ ಆಹಾರ ಭದ್ರತಾ ಕಾನೂನನ್ನು ಸರಿಯಾಗಿ ಜಾರಿಗೆ ತರಲು ಯಾವುದೇ ತುರ್ತನ್ನು ತೋರಿಲ್ಲ. ಬಹುಶಃ ಅದಕ್ಕೆ ಹಣಕಾಸು ಕೊರತೆಯನ್ನು ಕಡಿತ ಮಾಡುವ ತನ್ನ ಗೀಳಿನಿಂದಾಗಿ ಈ ಕಾನೂನು ಜಾರಿಯಾಗದೆ ಆಹಾರ ಸಬ್ಸಿಡಿಗೆಂದು ನೀಡಿರುವ ಹಣ ಖರ್ಚಾಗದೆ ಉಳಿದರೆ ಪರವಾಗಿಲ್ಲ, ಒಳ್ಳೆಯದೇ ಎಂದನಿಸಿರಬಹುದು.

ಆರ್ಥಿಕ ನಿಧಾನಗತಿಯನ್ನು ನಿಲ್ಲಿಸಿ ಬೇಡಿಕೆಗೆ ಮತ್ತೆ ಉತ್ತೇಜನೆ ದೊರೆಯುವಂತಾಗಬೇಕಾದರೆ ಮೂಲರಚನೆ ಮತ್ತು ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆ ಗಮನಾರ್ಹವಾಗಿ ಹೆಚ್ಚಬೇಕು. ಅದರೊಂದಿಗೆ ಗ್ರಾಮೀಣ ಸಂಕಟವನ್ನು ಪರಿಹರಿಸಬೇಕಾದರೆ ಸಾಮಾಜಿಕ ವಲಯದ ಖರ್ಚುಗಳಿಗೆ ಮತ್ತು ಆಹಾರ ಭದ್ರತೆಗೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನಿನ ಜಾರಿಗೆ ಹೆಚ್ಚಿನ ಹಣ ಒದಗಿಸ ಬೇಕಾಗುತ್ತದೆ.

ಕರ್ಷಕ ಸಂಕಟ ಮತ್ತು ಆಹಾರವಸ್ತುಗಳ ಬೆಲೆಗಳು ಏರುತ್ತಿರುವ ಸಂದರ್ಭದಲ್ಲಿ ಜನಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಅತ್ಯಂತ ಅಗತ್ಯ. ಆದರೆ ಆಹಾರ ಭದ್ರತಾ ಕಾನೂನನ್ನು ಜಾರಿ ಮಡುತ್ತಿರುವ ರೀತಿ ನೋಡಿದರೆ ಬಡಜನರ ಸ್ಥಿತಿ ಚಿಂತಾಜನಕವಾಗಿ ಕಾಣುತ್ತದೆ.

ಓದನ್ನು ಮುಂದುವರೆಸಿ

ಪಠಾಣಕೋಟ್ ಪಾಠ

ಸಂಪುಟ 10 ಸಂಚಿಕೆ 3 ಜನವರಿ 17, 2016 ಪಿಡಿ ಸಂಪಾದಕೀಯ – ಪ್ರಕಾಶ್ ಕಾರಟ್

New Delhi:Communist Party of India (M) general secretary Prakash Karat addressing a press conference in New Delhi on Sunday. PTI Photo by Atul Yadav(PTI9_4_2011_000039B)

ಪ್ರಕಾಶ್ ಕಾರಟ್

ಮೋದಿ ಸರಕಾರ ಎಡವಟ್ಟಾಗಿದೆ ಎಂಬುದನ್ನು ಸ್ವೀಕರಿಸಬೇಕು. ಇದು ಕೂಡ ಹಲವು ಕಳವಳಕಾರಿ ಪ್ರಶ್ನೆಗಳನ್ನು ಎತ್ತುತ್ತದೆ. ಇದನ್ನು ಪ್ರತಿಷ್ಠೆಯ ವಿಷಯವಾಗಿ ಮಾಡದೆ ಕೊರತೆಯನ್ನು ಒಪ್ಪಿಕೊಳ್ಳಬೇಕು ಮತ್ತು ಇಂತಹ ತಪ್ಪು ಇನ್ನು ಮುಂದೆ ಪುನರಾವರ್ತನೆಗೊಳ್ಳದಂತಾಗಲು ಒಂದು ಸೂಕ್ತವಾದ ತನಿಖೆ ನಡೆಸಬೇಕು.

ಇಸ್ಲಾಮಾಬಾದ್‍ಗೆ ಸುಷ್ಮಾ ಸ್ವರಾಜ್ ಅವರ ಭೇಟಿಯ ವೇಳೆಗೆ ಪಾಕಿಸ್ತಾನದೊಡನೆ ಮಾತುಕತೆಗಳು ಮತ್ತೆ ಆರಂಭಗೊಂಡಿವೆ ಎಂದು ಪ್ರಕಟಿಸಿ ನಾಲ್ಕು ವಾರಗಳೂ ಕಳೆದಿಲ್ಲ. ಅಷ್ಟರಲ್ಲೇ ಪಠಾಣಕೋಟ್‍ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಇಂತಹ ಒಂದು ದಾಳಿ ನಡೆಯಬಹುದೆಂದು ಗಡಿಯ ಆಚೆಯೂ ಈಚೆಯೂ ಹಲವು ವೀಕ್ಷಕರು ಮೊದಲೇ ಯೋಚಿಸಿದ್ದರು. ಲಾಹೋರಿಗೆ ಮೋದಿ ಭೇಟಿ ಬಹುಶಃ ದಾಳಿಯ ಯೋಜನೆಯನ್ನು ತ್ವರಿತಗೊಳಿಸಿತು.ಪಠಾಣಕೋಟ್‍ನ್ ಭಾರತೀಯ ವೈಮಾನಿಕ ಪಡೆಯ ನೆಲೆಯ ಮೇಲಿನ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆಸಿರುವ ಕಾರ್ಯಾಚರಣೆಯಲ್ಲಿ ಏಳು ರಕ್ಷಣಾ ಮತ್ತು ಭದ್ರತಾ ಸಿಬ್ಬಂದಿಯ ಸಾವು ಸಂಭವಿಸಿದೆ. ಒಳಹೊಕ್ಕ ಆರು ಸಶಸ್ತ್ರ ಮಂದಿಯನ್ನು ಹೊರಗೆಳೆದು ಮುಗಿಸಲು ಮೂರೂವರೆ ದಿನಗಳು ಬೇಕಾದವು. ಕಳೆದ ವರ್ಷದಲ್ಲಿ ಎರಡು ಬಾರಿ ಮಾತುಕತೆಗಳನ್ನು ಹಿಂದಕ್ಕೆ ತಗೊಂಡ ನಂತರ ಮಾತುಕತೆಗಳನ್ನು ಪುನರಾರಂಭಿಸುವ ನಿಲುವಿನತ್ತ ಬಂದಿರುವ ಬಿಜೆಪಿ ಸರಕಾರ ಈಗ ಈ ದಾರಿಯಲ್ಲೇ ಮುಂದುವರೆಯಬೇಕು, ಉಗ್ರಗಾಮಿ-ಜಿಹಾದಿ ಗುಂಪುಗಳ ಕೈಮೇಲಾಗಲು ಬಿಡಬಾರದು.

ನಿಜ ಹೇಳಬೇಕೆಂದರೆ, ಪಠಾಣಕೋಟ್ ಘಟನೆ ಸರಕಾರದ ಕೈಗಳನ್ನು ಬಲಪಡಿಸಿದೆ, ಮಾತುಕತೆಗಳ ಅಜೆಂಡಾದಲ್ಲಿ ಭಯೋತ್ಪಾದನೆಯ ಪ್ರಶ್ನೆಯಲ್ಲಿ ಇದನ್ನು ಎತ್ತಿಕೊಳ್ಳಬಹುದು. ಪಾಕಿಸ್ತಾನೀ ಪ್ರಭುತ್ವ ಅಲ್ಲಿನ ಬೇಹುಗಾರಿಕೆ ಮತ್ತು ಭದ್ರತಾ ವ್ಯವಸ್ಥೆಯಲ್ಲಿನ ಕೆಲವು ವಿಭಾಗಗಳ ಕೃಪಾಪೋಷಣೆ ಹೊಂದಿರುವ ಆ ಜಿಹಾದಿ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬುದನ್ನು ಈ ಘಟನೆ ಮತ್ತೆ ತೋರಿಸಿದೆ.

ಈಗಾಗಲೇ ರೂಪಿಸಿರುವ ಮಾತುಕತೆಗಳ ವೇಳಾ ಪಟ್ಟಿಗೆ ಬದ್ಧವಾಗಿರಬೇಕು. ಇದರಲ್ಲಿ ಭಯೋತ್ಪಾದನೆಯ ಪ್ರಶ್ನೆ ಆದ್ಯತೆ ಪಡೆಯುವಂತೆ ಮಾಡಬೇಕು. ಮಾತುಕತೆಗಳಿಂದ ಹಿಂದೆ ಸರಿದರೆ, ಅದು ಭಾರತದ ಸಾಮರಿಕ ಆಯ್ಕೆಗಳನ್ನು ಕುಂಠಿತಗೊಳಿಸುತ್ತದೆ ಮತ್ತು ಘರ್ಷಣೆಗಳು ಮತ್ತೆ ಆರಂಭವಾದರೆ ಅವು ಭಾರತದ ಆರ್ಥಿಕ ಚೇತರಿಕೆ ಮತ್ತು ಪ್ರಗತಿಗೆ ಬಾಧಕವಾಗುತ್ತವೆ.

ಇದು ಅಂಗೀಕರಿಸಬೇಕಾದ ಹೊರಗಣ ನಿಲುವಾದರೆ, ಈ ಭಯೋತ್ಪಾದನಾ ಕ್ರಿಯೆಗೆ ಗಲಿಬಿಲಿಯ ಮತ್ತು ನಿರ್ದಿಷ್ಟ ಗಮನವಿಲ್ಲದ ರೀತಿಯ ಪ್ರತಿಕ್ರಿಯೆಯ ವಿಮರ್ಶೆ ತುರ್ತಾಗಿ ಆಗಬೇಕಾಗಿದೆ. ಕೆಲವು ಭದ್ರತಾ ಪರಿಣಿತರು ಇದೊಂದು ಪತನ ಎಂದೇ ಹೇಳಿದ್ದಾರೆ. ಈ ಇಡೀ ಕಾರ್ಯಾಚರಣೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

ಮೊದಲನೆಯದಾಗಿ, ಈ ದಾಳಿಯ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಬಂದಿತ್ತು. ಭಯೋತ್ಪಾದಕ ತಂಡ ಒಬ್ಬ ಪೊಲೀಸ್ ಸೂಪರಿಂಟೆಂಡೆಂಟ್ ಕಾರನ್ನು ಹೈಜಾಕ್ ಮಾಡಿತ್ತು, ಆ ಎಸ್‍ಪಿ ಈ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಎಚ್ಚರಿಸಿದ್ದರು. ಇದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರ(ಎನ್‍ಎಸ್‍ಎ) ಮಟ್ಟದಲ್ಲಿ ಎತ್ತಿಕೊಳ್ಳಲು ಸಾಕಷ್ಟು ಸಮಯವಿತ್ತು. ವಾಯುನೆಲೆಯಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿ ಎನ್‍ಎಸ್‍ಎ ಅಜಿತ್ ದೋವಲ್‍ರವರ ಸೂಚನೆಯಂತೆ ಎನ್‍ಎಸ್‍ಜಿ ಕಮಾಂಡೋಗಳನ್ನು ವಿಮಾನದಲ್ಲಿ ಕರೆ ತರಲಾಯಿತು.

ಆದರೂ ಆರು ಭಯೋತ್ಪಾದಕರಿಗೆ ವಾಯುನೆಲೆಯ ಹೊರ ಆವರಣವನ್ನು ದಾಟಿ ಪ್ರವೇಶಿಲು ಸಾಧ್ಯವಾಗಿತ್ತು. ಪಠಾಣಕೋಟ್‍ನಲ್ಲಿ ಒಂದು ದೊಡ್ಡ  ಸೇನಾನೆಲೆ ಇರುವಾಗ ಭಯೋತ್ಪಾದಕರ ಪತ್ತೆ ಕಾರ್ಯಾಚರಣೆಗೆ ಅವರನ್ನೇಕೆ ಕರೆಯಲಿಲ್ಲ? ಹೊರಾವರಣದ ರಕ್ಷಣೆಯ ಕೆಲಸವನ್ನು ನಿವೃತ್ತ ಮಿಲಿಟರಿ ಸಿಬ್ಬಂದಿ ಇರುವ ರಕ್ಷಣಾ ಭದ್ರತಾ ತಂಡಕ್ಕೆ ವಹಿಸಲಾಗಿದೆ. ಈ ದಾಳಿಯಲ್ಲಿ ಅತಿ ಹೆಚ್ಚು ಸಾವು-ನೋವು ಕಂಡದ್ದು ಈ ತಂಡವೇ. ವಿವಿಧ  ಪಡೆಗಳು ಮತ್ತು ಏಜೆನ್ಸಿಗಳ ನಡುವೆ ಸರಿಯಾದ ಸಂಯೋಜನೆ ಇದ್ದಂತಿರಲಿಲ್ಲ. ಗೃಹ ಮಂತ್ರಿಗಳು ಮೊದಲ ದಿನದ ನಂತರ ಕಾರ್ಯಾಚರಣೆ ಯಶಶ್ವಿಯಾಗಿ ಮುಗಿದಿದೆ ಎಂದು ಘೋಷಿಸಿದರು. ನಂತರ ಅವರು ತನ್ನ ಈ ಟ್ವೀಟನ್ನು ಹಿಂತೆಗೆದುಕೊಳ್ಳಬೇಕಾಯಿತು. ಇದೇ ಈ ಸಮಸ್ತ ಕಾರ್ಯಾಚರಣೆಯನ್ನು ಹೇಗೆ ದಡ್ಡತನದಿಂದ ನಡೆಸಲಾಗಿದೆ ಎಂಬುದನ್ನು ತೋರಿಸುತ್ತದೆ.

ಮೋದಿ ಸರಕಾರ ಎಡವಟ್ಟಾಗಿದೆ ಎಂಬುದನ್ನು ಸ್ವೀಕರಿಸಬೇಕು, ಇದು ಕೂಡ ಹಲವು ಕಳವಳಕಾರಿ ಪ್ರಶ್ನೆಗಳನ್ನು ಎತ್ತುತ್ತದೆ. ಇದನ್ನು ಪ್ರತಿಷ್ಠೆಯ ವಿಷಯವಾಗಿ ಮಾಡದೆ ಕೊರತೆಯನ್ನು ಒಪ್ಪಿಕೊಳ್ಳಬೇಕು ಮತ್ತು ಇಂತಹ ತಪ್ಪು  ಇನ್ನು ಮುಂದೆÀ ಪುನರಾವರ್ತನೆಗೊಳ್ಳದಂತಾಗಲು ಒಂದು ಸೂಕ್ತವಾದ ತನಿಖೆ ನಡೆಸಬೇಕು..

ಪಠಾಣ್‍ಕೋಟ್ ಭಯೋತ್ಪಾದಕ ದಾಳಿ:ಸಿಪಿಐ(ಎಂ)ಖಂಡನೆ

IndiaAirbaseAttack

ಪಂಜಾಬಿನ ಪಠಾಣಕೋಟ್‍ನಲ್ಲಿರುವ ಭಾರತೀಯ ವಿಮಾನ ಪಡೆಯ ನೆಲೆಯ ಮೇಲೆ ಜನವರಿ 2ರ ಮುಂಜಾವಿನಲ್ಲಿ ಆರಂಭವಾದ ಭಯೋತ್ಪಾದಕ ದಾಳಿಯನ್ನು 36 ಗಂಟೆಗಳ ಕಾರ್ಯಾಚರಣೆಯ ನಂತರ ನಿಗ್ರಹಿಸಲಾಗಿದೆ ಎಂದು ಮಂಗಳವಾರದಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಭಯೋತ್ಪಾದಕರ ವಿರುದ್ಧದ ಈ ಕಾರ್ಯಾಚರಣೆಯಲ್ಲಿ  ಏಳು ಮಂದಿ ರಕ್ಷಣಾ ಮತ್ತು ಭದ್ರತಾ ಸಿಬ್ಬಂದಿ ಅಸು ನೀಗಿದ್ದಾರೆ. ಎಲ್ಲ ಆರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದೂ ತಿಳಿಸಲಾಗಿದೆ. ಈ ಮೊದಲು ಜನವರಿ 2ರ ರಾತ್ರಿಯ ಮೊದಲೇ ಕಾರ್ಯಾಚರಣೆ ಮುಗಿದಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಕಾರ್ಯಾಚರಣೆ ನಾಲ್ಕನೇ ದಿನದ ವರೆಗೂ ಮುಂದುವರೆಯಿತು.

ಈ ಭಯೋತ್ಪಾದಕ ದಾಳಿಯನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ ಹಾಗೂ ತಮ್ಮ ಕರ್ತವ್ಯ ನೆರವೇರಿಸುತ್ತ ಪ್ರಾಣಾರ್ಪಣೆ ಮಾಡಿದ  ಧೀರರ ಕುಟುಂಬಗಳಿಗೆ ಅದು ಹಾರ್ದಿಕ ಸಂತಾಪವನ್ನು ವ್ಯಕ್ತಪಡಿಸಿದೆ.ಪಾಕಿಸ್ತಾನದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಿರುವ ನಿರ್ಣಯ ಕೈಗೊಂಡ ಬೆನ್ನ ಹಿಂದೆಯೇ ಈ ದಾಳಿ ಹೊಮ್ಮಿ ಬಂದಿದೆ. ಸಂವಾದದ ಪ್ರಕ್ರಿಯೆಯನ್ನು ಛಿದ್ರಗೊಳಿಸುವುದೇ ಇದರ ಆಶಯ ಎಂಬುದು ಸ್ವಯಂವೇದ್ಯ ಎಂದಿರುವ ಸಿಪಿಐ(ಎಂ) ಇಂತಹ ಛಿದ್ರಕಾರಿಗಳ ಹುನ್ನಾರಗಳನ್ನು ಸೋಲಿಸಬೇಕು, ಕೇಂದ್ರ ಸರಕಾರ ಸಂವಾದದ ಹಾದಿಯಲ್ಲಿ ಮುಂದುವರೆಯಬೇಕು ಎಂದು ಅಭಿಪ್ರಾಯ ಪಟ್ಟಿದೆ.

ಈ ಭಯೋತ್ಪಾದಕ ದಾಳಿಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಈ ದಾಳಿ ಸಂಭವಿಸಬಹುದು ಎಂಬ ಬಗ್ಗೆ ಸಾಕಷ್ಟು ಗುಪ್ತಚರ ಮಾಹಿತಿಗಳನ್ನು ಒದಗಿಸಲಾಗಿತ್ತು, ಎಚ್ಚರವಾಗಿರಲೂ ಹೇಳಲಾಗಿತ್ತು ಎಂದು ತಿಳಿದು ಬಂದಿದೆ. ಆದರೂ ಭಯೋತ್ಪಾದಕ ತಂಡಕ್ಕೆ ವೈಮಾನಿಕ ನೆಲೆಯ ಆವರಣದಲ್ಲಿ ಪ್ರವೇಶಿಸುವುದು ಸಾಧ್ಯವಾಯಿತು. ಭಯೋತ್ಪಾದಕ ದಾಳಿಯನ್ನು ನಿಗ್ರಹಿಸಲು ನಾಲ್ಕು ದಿನಗಳು ಬೇಕಾದವು. ಈ ನಡುವೆ ಉನ್ನತ ಅಧಿಕಾರಸ್ಥರಿಂದ ಗೊಂದಲಕಾರಿ ಹೇಳಿಕೆಗಳು ಪರಿಸ್ಥಿತಿಯನ್ನು ಮಸುಕುಗೊಳಿಸಿದವು. ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ಆಗಬೇಕಾಗಿದೆ ಮತ್ತು ಈ ಘಟನೆಯಿಂದ ಪಾಠ ಕಲಿಯಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೋ ಹೇಳಿದೆ.

ಭಾರತವನ್ನು ಅಮೆರಿಕದ ಅಡಿಯಾಳು ಮಿಲಿಟರಿ ಮಿತ್ರನ ಮಟ್ಟಕ್ಕೆ ಇಳಿಸಬೇಕೇ?

ಸಂಪುಟ 10 ಸಂಚಿಕೆ 2 ಜನವರಿ 10-2016 ಪಿ ಡಿ ಸಂಪಾದಕೀಯ – ಪ್ರಕಾಶ ಕಾರಟ್

ಅಮೆರಿಕಾದ ಸಶಸ್ತ್ರ ಪಡೆಗಳಿಗೆ ನಮ್ಮ ನೌಕಾ ಬಂದರುಗಳನ್ನು, ವಾಯುನೆಲೆಗಳನ್ನು ಬಳಸಿಕೊಳ್ಳಲು ಅವಕಾಶ ಕೊಡುವ ಒಪ್ಪಂದ ಮತ್ತು ನಮ್ಮೆರಡು ದೇಶಗಳ ಸಶಸ್ತ್ರ ಪಡೆಗಳ ಸಂಪರ್ಕ ವ್ಯವಸ್ಥೆಗಳನ್ನು ಸಮಗ್ರೀಕರಿಸುವ ಒಪ್ಪಂದಕ್ಕೆ ಸಹಿ ಹಾಕಲು ಅಮೆರಿಕಾ ಒತ್ತಡ ಹಾಕುತ್ತಿದೆ, ಅಮೆರಿಕಾದೊಂದಿಗೆ ರಕ್ಷಣಾ ಉಪಕರಣಗಳ ಜಂಟಿ ಉತ್ಪಾದನೆಗೆ ಕಾತುರವಾಗಿರುವ ಮೋದಿ ಸರಕಾರವನ್ನು ರಾಷ್ಟ್ರೀಯ ಸಾರ್ವಭೌಮತೆ ಮತ್ತು ನಮ್ಮ ಸಶಸ್ತ್ರ ಪಡೆಗಳ ಸಮಗ್ರತೆಯನ್ನು ಬಿಟ್ಟುಕೊಡುವಂತೆ ಪುಸಲಾಯಿಸಲಾಯಿಸುತ್ತಿದೆ. ಬಿಜೆಪಿ ಸರಕಾರ ಈ ಒಪ್ಪಂದಗಳಿಗೆ ಸಹಿ ಹಾಕಿದರೆ ಭಾರತದ ಸಾರ್ವಭೌಮತೆಯನ್ನು ಬಲಿಗೊಟ್ಟು ಅದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಬ್ಬ ಅಡಿಯಾಳು ಮಿಲಿಟರಿ ಮಿತ್ರನ ಮಟ್ಟಕ್ಕೆ ಇಳಿಸಿದಂತಾಗುತ್ತದೆ.

ರಕ್ಷಣಾ ಮಂತ್ರಿ ಮನೋಹರ ಪರ್ರಿಕರ್‍ರವರ ಮೊದಲ ವಾಶಿಂಗ್ಟನ್ ಭೇಟಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳೊಂದಿಗೆ ರಕ್ಷಣಾ ಸಹಕಾರದಲ್ಲಿ ವಿವಿಧ ಹೆಜ್ಜೆಗಳಿಗೆ ದಾರಿ ಮಾಡಿ ಕೊಟ್ಟಿದೆ. ಅವುಗಳಲ್ಲಿ ಅತ್ಯಂತ ಗಂಭಿರ ಮತ್ತು ಆತಂಕಕಾರಿಯಾಗಿರುವಂತದ್ದು ಈ ಮಂತ್ರಿ ಭಾರತೀಯ ಮಿಲಿಟರಿ ನೆಲೆಗಳು ಮತ್ತು ಬಂದರುಗಳನ್ನು ಅಮೆರಿಕಾಕ್ಕೆ ಲಭ್ಯಗೊಳಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿರುವುದು. ‘ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್’ (ಎಲ್‍ಎಸ್‍ಎ-ಮಿಲಿಟರಿ ಸರಬರಾಜು ಬೆಂಬಲ ಒಪ್ಪಂದ)ದ ವಿಷಯದಲ್ಲಿ ಭಾರತದ ಸರಕಾರ ತೆರೆದ ಮನಸ್ಸು ಹೊಂದಿದೆ ಎಂದು ಪರ್ರಿಕರ್ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್‍ಗೆ ತಿಳಿಸಿರುವುದಾಗಿ ಮಾಧ್ಯಮ ವರದಿಗಳಿಂದ ತಿಳಿದು ಬರುತ್ತಿದೆ.

ಜೂನ್ 2005ರಲ್ಲಿ ‘ಭಾರತ-ಅಮೆರಿಕ ರಕ್ಷಣಾ ಚೌಕಟ್ಟು ಒಪ್ಪಂದ’ಕ್ಕೆ ಸಹಿ ಹಾಕಿದ ಮೇಲೆ ಅಮೆರಿಕಾ ಈ ಎಲ್‍ಎಸ್‍ಎ ಒಪ್ಪಂದ ಮತ್ತು ‘ಕಮ್ಯುನಿಕೇಶನ್ ಅಂಡ್ ಇನ್‍ಫಾರ್ಮೇಶನ್ ಸೆಕ್ಯುರಿಟಿ ಮೆಮೊರಂಡಂ ಅಗ್ರಿಮೆಂಟ್’(ಸಿಐಎಸ್‍ಎಂವೊಎ-ಸಂವಹನ ಮತ್ತು ಮಾಹಿತಿ ಭದ್ರತೆ ಕರಾರು ಒಪ್ಪಂದ) ಇವೆರಡಕ್ಕೆ ಭಾರತ ಸಹಿ ಹಾಕಬೇಕೆಂದು ಬೆನ್ನು ಬಿದ್ದಿತ್ತು. ಎಡಪಕ್ಷಗಳು ಮೇಲೆ ಹೇಳಿದ ಚೌಕಟ್ಟು ಒಪ್ಪಂದ ಮತ್ತು ಇವೆರಡೂ ಒಪ್ಪಂದಗಳಿಗೆ ಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದವು. ಎಲ್‍ಎಸ್‍ಎ ಒಪ್ಪಂದವಾದರೆ ಅಮೆರಿಕನ್ ಮಿಲಿಟರಿ ಪಡೆಗಳು ಭಾರತೀಯ ವಾಯುನೆಲೆಗಳು ಮತ್ತು ನೌಕಾಪಡೆಯ ಬಂದರುಗಳನ್ನು ತಮ್ಮ ಮಿಲಿಟರಿ ಕಾರ್ಯಾಚರಣೆಗಳಿಗೆ ಬಳಸಲು ಅವಕಾಶವಾಗುತ್ತಿತ್ತು. ಎರಡು ಸಶಸ್ತ್ರ ಪಡೆಗಳ ಸಂಪರ್ಕ ಜಾಲಗಳನ್ನು ಪರಸ್ಪರ ಹೊಂದಿಸಿ ಸಮಗ್ರೀಕರಿಸುವುದು ಇನ್ನೊಂದು ಒಪ್ಪಂದದ ಆಶಯ. ಈ ಎರಡು ಒಪ್ಪಂದಗಳು ಆಗಿದ್ದರೆ, ನಮ್ಮ ದೇಶ ಅಮೆರಿಕಾದ ಪೂರ್ಣ ಪ್ರಮಾಣದ ಮಿಲಿಟರಿ ಮಿತ್ರನಾಗಿ ಬಿಡುತ್ತಿತ್ತು. ರಕ್ಷಣಾ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಿದ ಯುಪಿಎ ಸರಕಾರ ಅಂತಿಮವಾಗಿ ಈ ಎರಡು ಒಪ್ಪಂದಗಳನ್ನು ಮಾಡಿಕೊಳ್ಳಲು ಮುಂದಾಗಲಿಲ್ಲ. ಆಗಿನ ರಕ್ಷಣಾ ಮಂತ್ರಿ ಎ.ಕೆ.ಆಂಟನಿ ಈ ವಿಷಯದಲ್ಲಿ ಒಂದು ಸ್ಪಷ್ಟ ನಿಲುವು ತಳೆದರು.

ಆದರೆ ಈಗ ಬಿಜೆಪಿ ಸರಕಾರ ಅಮೆರಿಕಾದ ಮಿಲಿಟರಿ ಕೂಟ ಸೇರಲು ಕಾತುರವಾಗಿರುವಂತೆ ಕಾಣುತ್ತದೆ. ಈ ದಿಕ್ಕಿನಲ್ಲಿ ಸ್ಪಷ್ಟ ಸಂಕೇತಗಳು ಕಾಣ ಬಂದಿವೆ. ಜನವರಿ 2015ರಲ್ಲಿ ಅಧ್ಯಕ್ಷ ಒಬಾಮ ಅವರ ಭಾರತ ಭೇಟಿ ಕಾಲದಲ್ಲಿ ಸಹಿ ಹಾಕಿದ ‘ಜಾಯಿಂಟ್ ವಿಶನ್ ಸ್ಟೇಟ್‍ಮೆಂಟ್’(ಜಂಟಿ ಕಣ್ಣೋಟ ಹೇಳಿಕೆ)ಭಾರತವನ್ನು ಏಶ್ಯ-ಶಾಂತಸಾಗರ ಪ್ರದೇಶದಲ್ಲಿ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಮೆರಿಕನ್ ಸಮರ ತಂತ್ರದೊಂದಿಗೆ ಹೊಂದಿಸಿಕೊಂಡಿದೆ. ಸಾಗರಯಾನ ಭದ್ರತೆಯ ಹೆಸರಿನಲ್ಲಿ ಭಾರತ ಹಿಂದೂ ಮಹಾಸಾಗರದಲ್ಲಿ ತನ್ನ ಕ್ರಿಯೆಗಳನ್ನು ಅಮೆರಿಕನ್ ನೌಕಾ ಪಡೆಯೊಂದಿಗೆ ಸಂಯೋಜಿಸುತ್ತಿದೆ. ರಕ್ಷಣಾ ಮಂತ್ರಿ ಪರ್ರಿಕರ್ ಹವಾಯಿಯಲ್ಲಿ ಅಮೆರಿಕನ್ ಶಾಂತಸಾಗರ ನೌಕಾ ಕಮಾಂಡ್‍ಗೆ ಭೇಟಿ ನೀಡಿದ ಮೊದಲ ಭಾರತೀಯ ರಕ್ಷಣಾ ಮಂತ್ರಿಗಳಾದರು. ಅಮೆರಿಕಾ ರಕ್ಷಣಾ ಸಾಮಗ್ರಿಗಳ ಅತಿ ದೊಡ್ಡ ಪೂರೈಕೆದಾರನಾಯಿತು.

‘ಭಾರತ-ಅಮೆರಿಕ ರಕ್ಷಣಾ ಚೌಕಟ್ಟು ಒಪ್ಪಂದ’ವನ್ನು ಈ ಜೂನ್ 2015ರಲ್ಲಿ ಇನ್ನೂ ಹತ್ತು ವರ್ಷಕ್ಕೆ ನವೀಕರಿಸಲಾಯಿತು. ಈ ಒಪ್ಪಂದದ ಅಡಿಯಲ್ಲೇ ಅಮೆರಿಕಾ ಮತ್ತೆ ಉಳಿದೆರಡು ಒಪ್ಪಂದಗಳಿಗೆ, ಜತೆಗೆ ‘ಬೇಸಿಕ್ ಎಕ್ಸ್‍ಚೇಂಜ್ ಅಂಡ್ ಕೋಪರೇಷನ್ ಅಗ್ರಿಮೆಂಟ್’(ಬಿಇಸಿಎ-ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ)ಗೆ ಸಹಿ ಹಾಕಬೇಕೆಂದು ಒತ್ತಡ ಹಾಕಲಾರಂಭಿಸಿದೆ. ರಕ್ಷಣಾ ಮಂತ್ರಿ ಈ ಪ್ರಶ್ನೆಯನ್ನು ಚರ್ಚಿಸಲು, ಒಂದು ತೆರೆದ ಮನಸ್ಸು ಹೊಂದಿರಲು ಒಪ್ಪಿರುವುದು ಮೋದಿ ಸರಕಾರ ಅಮೆರಿಕನ್ ಒತ್ತಡಕ್ಕೆ ಮಣಿಯುತ್ತಿದೆ ಎಂಬುದರ ಒಂದು ಅಪಾಯಕಾರಿ ಸಂಕೇತ.

ಈ ಎರಡು ಒಪ್ಪಂದಗಳಿಗೆ ಸಹಿ ಮಾಡದೆ ಉನ್ನತ ತಂತ್ರಜ್ಞಾನದ ವಿವಿಧ ಅಂಗಭಾಗಗಳನ್ನು ಭಾರತಕ್ಕೆ ಕೊಡಲು ಆಗುವುದಿಲ್ಲ ಎಂಬುದು ಅಮೆರಿಕನ್ನರ ನಿಲುವು. ಅಮೆರಿಕಾದೊಂದಿಗೆ ರಕ್ಷಣಾ ಉಪಕರಣಗಳ ಜಂಟಿ ಉತ್ಪಾದನೆಗೆ ಕಾತುರವಾಗಿರುವ ಮೋದಿ ಸರಕಾರವನ್ನು ರಾಷ್ಟ್ರೀಯ ಸಾರ್ವಭೌಮತೆ ಮತ್ತು ನಮ್ಮ ಸಶಸ್ತ್ರ ಪಡೆಗಳ ಸಮಗ್ರತೆಯನ್ನು ಬಿಟ್ಟುಕೊಡುವಂತೆ ಪುಸಲಾಯಿಸಲಾಗುತ್ತಿದೆ.

ಅಮೆರಿಕಾದ ಸಶಸ್ತ್ರ ಪಡೆಗಳಿಗೆ ನಮ್ಮ ನೌಕಾ ಬಂದರುಗಳನ್ನು, ವಾಯುನೆಲೆಗಳನ್ನು ಯುದ್ಧ ವಿಮಾನ, ಯುದ್ಧನೌಕೆಗಳ ಸರ್ವಿಸಿಂಗ್‍ಗೆ, ಇಂಧನ ತುಂಬಿಸಿಕೊಳ್ಳಲಿಕ್ಕೆ ಮತ್ತು ಮಿಲಿಟರಿ ಉಪಕರಣಗಳ ದುರಸ್ತಿಗೆ ಬಳಸಿಕೊಳ್ಳಲು ಅವಕಾಶ ಕೊಡುವುದೆಂದರೆ ನಮ್ಮ ದೇಶ ಯಾವುದೇ ಮಿಲಿಟರಿ ಕೂಟದ ಭಾಗವಾಗುವುದಿಲ್ಲ ಎಂಬ ಇದುವರೆಗಿನ ಸ್ವತಂತ್ರ ಸ್ಥಾನಮಾನವನ್ನು ತೀವ್ರವಾಗಿ ಬದಲಿಸಿದಂತಾಗುತ್ತದೆ. ಎರಡ ಸಶಸ್ತ್ರ ಪಡೆಗಳ ಸಂಪರ್ಕ ವ್ಯವಸ್ಥೆಗಳನ್ನು ಸಮಗ್ರೀಕರಿಸುವ ಪ್ರಯತ್ನಗಳು ಭಾರತೀಯ ಸಶಸ್ತ್ರ ಪಡೆಗಳನ್ನು ಅಮೆರಿಕನ್ ರಕ್ಷಣಾ ರಚನೆಗಳಿಗೆ ಬಿಗಿದು ಕಟ್ಟಿದಂತಾಗುತ್ತದೆ.

ಇದು ಭಾರತದ ಸಾರ್ವಭೌಮತೆಯನ್ನು ಸೀಮೀತಗೊಳಿಸುತ್ತದೆ, ನಮ್ಮ ಸಾಮರಿಕ ಸ್ವಾಯತ್ತೆಯನ್ನು ಕೆಡಿಸುತ್ತದೆ ಮತ್ತು ಭಾರತವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಬ್ಬ ಅಡಿಯಾಳು ಮಿಲಿಟರಿ ಮಿತ್ರನ ಮಟ್ಟಕ್ಕೆ ಇಳಿಸುತ್ತದೆ. ಇಂತಹ ಒಪ್ಪಂದಗಳಿಗೆ ಬಿಜೆಪಿ ಸಹಿ ಮಾಡಬಾರದು.

ಸಂಸತ್ತಿನ ವಿಶೇಷ ಕಲಾಪ ಒಂದು ಟೊಳ್ಳು ಗೌರವ

ಪಿ.ಡಿ. ಸಂಪಾದಕೀಯ – ಪ್ರಕಾಶ ಕಾರಟ್

ಸಂಪುಟ 9 ಸಂಚಿಕೆ 49, 06 ಡಿಸೆಂಬರ್ 2015

ಸರಕಾರ ದಲಿತರು ಜಾತಿ ದಮನದಿಂದಾಗಿ ಅನುಭವಿಸುತ್ತಲೇ ಇರುವ ಅಸಮಾನತೆ ಮತ್ತು ಅನ್ಯಾಯಗಳ ಕುರಿತಂತೆ ಒಂದು ವರದಿಯನ್ನು ಮಂಡಿಸಿ, ಮತ್ತು ಭಾರತೀಯ ಸಮಾಜದ ಈ ನಾಚಿಕೆಗೇಡಿನ ಸನ್ನಿವೇಶವನ್ನು ಬದಲಿಸಲು ಹಂತ-ಹಂತವಾಗಿ ಕೈಗೆತ್ತಿಕೊಳ್ಳಬಹುದಾದ ಕ್ರಮಗಳನ್ನು ಸೂಚಿಸಿದ್ದರೆ ಈ ಎರಡು ದಿನಗಳ ವಿಶೇಷ ಕಲಾಪ ಸಾರ್ಥಕವಾಗಬಹುದಿತ್ತು.

ಈ ಮೇಲಿನ ಯಾವುದನ್ನೂ ಕೈಗೆತ್ತಿಕೊಳ್ಳದೆ ಬಿಜೆಪಿ ಸರಕಾರ ಎರಡು ದಿನಗಳ ಕಲಾಪವನ್ನು  ಯಾವುದೇ ಮೂರ್ತ ಸಾಧನೆಗಳಿಲ್ಲದ, ಕೇವಲ ಭಾಷಣಬಾಜಿಯ ಮತ್ತು ಡಂಬಾಚಾರದ ಗೌರವ ಸಲ್ಲಿಸುವ ಟೊಳ್ಳು ಕಲಾಪವಾಗಿ ಮಾಡಿ ಬಿಟ್ಟಿದೆ.

parliament session

ಸಂಸತ್ತಿನ ಚಳಿಗಾಲದ ಅಧಿವೇಶನ ಡಾ. ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ಮತ್ತು ನವಂಬರ್ 26, 1949ರಂದು ಕರಡು ಸಂವಿಧಾನದ ಅಂಗೀಕಾರದ ಆಚರಣೆಗೆ ಎರಡು ದಿನಗಳ ವಿಶೇಷ ಕಲಾಪದೊಂದಿಗೆ ಆರಂಭವಾಗಿದೆ. ಸಾಮಾಜಿಕ ಸಮಾನತೆಯ ಪ್ರತಿಪಾದಕ ಮತ್ತು ಸಂವಿಧಾನದ ಪ್ರಮುಖ ಶಿಲ್ಪಿಗಳಲ್ಲಿ ಒಬ್ಬರಾದ ಡಾ.ಅಂಬೇಡ್ಕರ್ ಅವರ ಪರಂಪರೆಯನ್ನು ಸ್ಮರಿಸಿಕೊಳ್ಳಬೇಕು ಎಂಬುದರಲ್ಲಿ ಏನೂ ಸಂದೇಹವಿಲ್ಲ. ಆದರೆ ಅದನ್ನು ಹೇಗೆ ಮಾಡಬೇಕು ಎಂಬುದೇ ಇಲ್ಲಿರುವ ಪ್ರಶ್ನೆ.

ಸಿಪಿಐ(ಎಂ)ನ 21ನೇ ಮಹಾಧಿವೇಶನ ಈ ಜಯಂತಿ ಆಚರಣೆಗೆ ಸಂಬಂಧಪಟ್ಟಂತೆ ಅಂಗೀಕರಿಸಿದ ಒಂದು ನಿರ್ಣಯದಲ್ಲಿ ಭಾರತದಲ್ಲಿ ಪರಿಶಿಷ್ಟ ಜಾತಿಗಳ ಜನರ ಸ್ಥಾನಮಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಚರ್ಚಿಸಲು ಒಂದು ವಿಶೇಷ ಸಂಸತ್ತು ಅಧಿವೇಶನ ನಡೆಸಬೇಕು ಎಂದು ಕರೆ ನೀಡಿತ್ತು. ಈ ಅಧಿವೇಶನ ದಲಿತರ ಪ್ರಸಕ್ತ ಪರಿಸ್ಥಿತಿಗಳ ಆಳವಾದ ವಿಶ್ಲೇಷಣೆ ನಡೆಸಿ ಅವರ ಕೆಲವು ಸಮಸ್ಯೆಗಳ ಪರಿಹಾರಕ್ಕೆ ನಿರ್ದಿಷ್ಟ ಕ್ರಮಗಳನ್ನು ಅಂಗೀಕರಿಸಬಹುದಿತ್ತು.

ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಾರಿರುವ ಸಂವಿಧಾನವನ್ನು ಜಾರಿಗೊಳಿಸಿ 65 ವರ್ಷಗಳ ನಂತರವೂ ದಲಿತರ ಶೋಚನೀಯ ಪರಿಸ್ಥಿತಿಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ದಲಿತರು ಸಮಾಜದಲ್ಲಿ ವಿವಿಧ ರೀತಿಗಳ ಪಕ್ಷಪಾತವನ್ನು ಎದುರಿಸುತ್ತಲೇ ಇದ್ದಾರೆ. ಅಸ್ಪøಶ್ಯತೆ ವ್ಯಾಪಕವಾಗಿದೆ. ಹಲವು ಶಾಲೆಗಳಲ್ಲಿ ದಲಿತ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ. ಜೋಧಪುರ ಸರಕಾರೀ ಶಾಲೆಯಲ್ಲಿ ಮೇಲ್ಜಾತಿ ವಿದ್ಯಾರ್ಥಿಗಳಿಗೆಂದು ಇಟ್ಟಿರುವ ತಟ್ಟೆಯನ್ನು ಮುಟ್ಟಿದನೆಂದು 12 ವರ್ಷದ ಬಾಲಕನನ್ನು ಶಾಲಾ ಶಿಕ್ಷಕ ಥಳಿಸಿದ ಘಟನೆ ಮತ್ತು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ಒಂದು ಶಾಲೆಯಲ್ಲಿ ದಲಿತ ಅಡುಗೆಯವರು ಬೇಯಿಸಿದ ಆಹಾರವನ್ನು ಬಹಿಷ್ಕರಿಸಿದ ಇನ್ನೊಂದು ಘಟನೆ ಅಸ್ಪøಶ್ಯತೆ ಮತ್ತು ವರ್ಣಬೇಧ ಹೇಗೆ ವ್ಯಾಪಕವಾಗಿ ಆಚರಣೆಯಲ್ಲಿವೆ ಎಂಬುದರ ಕಿರುನೋಟಗಳಷ್ಟೇ. ದಲಿತರು ತಮ್ಮ ಹಕ್ಕುಗಳನ್ನು ಎತ್ತಿ ಹಿಡಿಯಲು ಮುಂದಾದಾಗಲೆಲ್ಲ ಅತ್ಯಾಚಾರಗಳಿಗೆ ಒಳಗಾಗುತ್ತಲೇ ಇದ್ದಾರೆ. ಫರಿದಾಬಾದ್ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಸುಟ್ಟು ಹಾಕಿದ್ದು ಇಂತಹ ಅತ್ಯಾಚಾರಗಳ ತೀರ ಇತ್ತೀಚಿನ ಉದಾಹರಣೆ.

ಗ್ರಾಮೀಣ ಭಾರತದಲ್ಲಿ ದಲಿತ ವಿಭಾಗಗಳಲ್ಲಿ ಬಹಳಷ್ಟು ಏನೇನೂ ಆಸ್ತಿಯಿಲ್ಲದ ಭೂಹೀನ ಕಾರ್ಮಿಕರು. ಭರ್ತಿ ಮಾಡದ ಪರಿಶಿಷ್ಟ ಜಾತಿಗಳ ಮೀಸಲಾತಿ ಹುದ್ದೆಗಳ ಸಂಖ್ಯೆ ಅಪಾರವಾಗಿದೆ. ಹೆಚ್ಚುತ್ತಿರುವ ಖಾಸಗೀಕರಣದಿಂದಾಗಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಅರ್ಥ ಕಳಕೊಳ್ಳುತ್ತಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ವಿರುದ್ಧ ಅತ್ಯಾಚಾರಗಳ ತಡೆ ಕಾಯ್ದೆ ಅಥವ ದೈಹಿಕ ಮಲ ತೆಗೆಯುವ ಕಾಯ್ದೆ ಮುಂತಾದ ಕಾನೂನು ಕ್ರಮಗಳು ಕೂಡ ಸರಿಯಾಗಿ ಜಾರಿಯಾಗುತ್ತಿಲ್ಲ. ಪರಿಶಿಷ್ಟ ಜಾತಿಗಳು/ ಬುಡಕಟ್ಟುಗಳಿಗೆಂದು ನೀಡುವ ನಿಧಿಗಳನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ.

ಸಂಸತ್ತಿನ ವಿಶೇಷ ಅಧಿವೇಶನ ಈ ಎಲ್ಲ ವಿಷಯಗಳನ್ನು ಚರ್ಚಿಸಬೇಕಾಗಿತ್ತು, ದಲಿತರ ಮೂಲಭೂತ ಹಕ್ಕುಗಳು, ಅವರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಇತರ ಮೂಲ ಸೌಕರ್ಯಗಳನ್ನು ಲಭ್ಯಗೊಳಿಸಲು ಮೂರ್ತ ಕ್ರಮಗಳನ್ನು ನಿರ್ಧರಿಸಬೇಕಾಗಿತ್ತು.

ಆದರೆ ಬಿಜೆಪಿ ಸರಕಾರ ಚಳಿಗಾಲದ ಅಧಿವೇಶನದ ಮೊದಲ ಎರಡು ದಿನಗಳನ್ನು ಅಂಬೇಡ್ಕರ್ ಜಯಂತಿ ಆಚರಣೆಗೆ ಮೀಸಲಿಡಲು ನಿರ್ಧರಿಸಿತು. ಇಂತಹ ಸನ್ನಿವೇಶದಲ್ಲಿ ಸರಕಾರ ಡಾ.ಅಂಬೇಡ್ಕರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕಣ್ಣೋಟವನ್ನು ಮುಂದೊಯ್ಯುವ ಒಂದು ನಿರ್ದಿಷ್ಟ ಶಾಸನಾತ್ಯಕ ಅಜೆಂಡಾಕ್ಕಾದರೂ ಸಿದ್ಧತೆ ಮಾಡಿಕೊಂಡು ಬರಬೇಕಾಗಿತ್ತು. ಇದನ್ನು ಆರಂಭಿಸಲು ಮೂರು ಮಹತ್ವದ ಶಾಸನಗಳನ್ನು ಕೈಗೆತ್ತಿಕೊಳ್ಳಬಹುದಾಗಿತ್ತು.

ಇವುಗಳಲ್ಲಿ ಮೊದಲನೆಯದು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಮೀಸಲಾತಿಯನ್ನು ಖಾಸಗೀ ವಲಯಕ್ಕೆ ವಿಸ್ತರಿಸುವ ಒಂದು ಶಾಸನದ ಅಂಗೀಕಾರ. ಇದು ಯುಪಿಎ ಸರಕಾರ ಅನುಸರಿಸಲು ವಿಫಲವಾದ ಈಡೇರದ ಒಂದು ಅಜೆಂಡಾ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು  ಖಾಸಗೀ ವಲಯಕ್ಕೆ ವಿಸ್ತರಿಸಿದರೆ ಮಾತ್ರವೇ ಅರ್ಥಪೂರ್ಣವಾಗಲು ಸಾಧ್ಯ.

ಎರಡನೇ ಶಾಸನವೆಂದರೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳು (ಅತ್ಯಾಚಾರಗಳ ತಡೆ) ಮಸೂದೆ, 2015. ಈಗಿರುವ ಕಾಯ್ದೆಯನ್ನು ಬಲಪಡಿಸುವುದು ಇದರ ಉದ್ದೇಶ. ಲೋಕಸಭೆ ಇದನ್ನು ಅಂಗೀಕರಿಸಿದ್ದು ಈಗ ರಾಜ್ಯಸಭೆಯ ಮುಂದಿದೆ. ಇದನ್ನು ತಕ್ಷಣವೇ ಅಂಗೀಕರಿಸಬಹುದು.

ಮೂರನೇಯದು, ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಬುಡಕಟ್ಟುಗಳ ಉಪಯೋಜನೆಗೆ ಶಾಸನಾತ್ಮಕ ಸ್ಥಾನಮಾನ ಕೊಡುವ ಒಂದು ಕಾನೂನು. ಈ ಉಪಯೋಜನೆಗೆಂದು ಇಟ್ಟ ನಿಧಿಗಳನ್ನು ಬೇರೆ ಉದ್ದೇಶಗಳತ್ತ ತಿರುಗಿಸದಂತೆ ಮಾಡಲು ಇದು ಅಗತ್ಯ.

ಸರಕಾರ ದಲಿತರು ಜಾತಿ ದಮನದಿಂದಾಗಿ ಅನುಭವಿಸುತ್ತಲೇ ಇರುವ ಅಸಮಾನತೆ ಮತ್ತು ಅನ್ಯಾಯಗಳ ಕುರಿತಂತೆ ಒಂದು ವರದಿಯನ್ನು ಮಂಡಿಸಿ, ಮತ್ತು ಭಾರತೀಯ ಸಮಾಜದ ಈ ನಾಚಿಕೆಗೇಡಿನ ಸನ್ನಿವೇಶವನ್ನು ಬದಲಿಸಲು ಹಂತ-ಹಂತವಾಗಿ ಕೈಗೆತ್ತಿಕೊಳ್ಳಬಹುದಾದ ಕ್ರಮಗಳನ್ನು ಸೂಚಿಸಿದ್ದರೆ ಈ ಎರಡು ದಿನಗಳ ವಿಶೇಷ ಕಲಾಪ ಸಾರ್ಥಕವಾಗಬಹುದಿತ್ತು.

ಈ ಮೇಲಿನ ಯಾವುದನ್ನೂ ಕೈಗೆತ್ತಿಕೊಳ್ಳದೆ ಬಿಜೆಪಿ ಸರಕಾರ ಎರಡು ದಿನಗಳ ಕಲಾಪವನ್ನು  ಯಾವುದೇ ಮೂರ್ತ ಸಾಧನೆಗಳಿಲ್ಲದ, ಕೇವಲ ಭಾಷಣಬಾಜಿಯ ಮತ್ತು ಡಂಬಾಚಾರದ ಗೌರವ ಸಲ್ಲಿಸುವ ಟೊಳ್ಳು ಕಲಾಪವಾಗಿ ಮಾಡಿ ಬಿಟ್ಟಿದೆ.

rajnath-singh_240x180_81438844542

ಏಕೆ ಈ ‘ಮೊದಲ’ ಸಂವಿಧಾನ ದಿನ?

ಸಂವಿಧಾನವನ್ನು ಹಾಡಿ ಹೊಗಳುವಂತೆ ನಟಿಸುವ ಮೂಲಕ ವಾಸ್ತವವಾಗಿ ಅದರ ಮೇಲೆ ದಾಳಿ ಮಾಡುವುದೇ ಅವರ ಉದ್ದೇಶ. ಲೋಕಸಭೆಯಲ್ಲಿ ಗೃಹಮಂತ್ರಿಗಳ ಭಾಷಣ ಕೇಳಿದ ಮೇಲೆ ಇದು ಸ್ಪಷ್ಟವಾಗಿದೆ

                             -ಸೀತಾರಾಂ ಯೆಚುರಿ

65 ವರ್ಷಗಳ ನಂತರ ಬಿಜೆಪಿ ‘ಮೊದಲ’  ಸಂವಿಧಾನ ದಿನ ಎಂಬುದನ್ನು ನವಂಬರ್ 26 ರಂದು ಏಕೆ ಆಚರಿಸಿದೆ ಎಂಬುದು ಸ್ಪಷ್ಟವಾಗಿದೆ.

ಭಾರತೀಯ ಗಣತಂತ್ರದ  ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯ ಮೇಲೆ ದಾಳಿ ಮಾಡಲೆಂದು ಮತ್ತು ಅಂಬೇಡ್ಕರ್ ಪರಂಪರೆಯನ್ನು ತಪ್ಪಾಗಿ ಚಿತ್ರಿಸಿ ಅದನ್ನು ತಮ್ಮ ವಶ ಮಾಡಿಕೊಳ್ಳಲಿಕ್ಕಾಗಿ ಮಾಡಲಾಗಿದೆ.

‘ಧರ್ಮನಿರಪೇಕ್ಷತೆ’ಎಂಬುದನ್ನು ಪ್ರಶ್ನಿಸಿ ಅದು ‘ಪಂಥ ನಿರಪೇಕ್ಷತೆ’ಏಕಾಗಬಾರದು ಎಂದು ಕೇಳಿರುವುದು ಭಾರತೀಯ ಜಾತ್ಯಾತೀತ ಪ್ರಜಾಪ್ರಭುತ್ವದ ಇತ್ಯರ್ಥಗೊಂಡಿರುವ ನೀತಿಗಳ ಮೇಲೆ ದಾಳಿ ಮಾಡಿದನ್ನು ಆರೆಸ್ಸೆಸ್ ವಿಚಾರದ ಹಿಂದೂ ರಾಷ್ಟ್ರವಾಗಿ ಪರಿವರ್ತಿಸಲಿಕ್ಕಾಗಿ ಎಂಬದು ಸ್ಪಷ್ಟ. ಇದು ಭಾರತೀಯ ಸ್ವಾತಂತ್ರ್ಯ ಹೋರಾಟ ಗಟ್ಟಿಯಾಗಿ ತಿರಸ್ಕರಿಸಿದ ವಿಚಾರ ಇದು, ಇಂದು ಕೂಡ ತಿರಸ್ಕರಿಸುತ್ತಿರುವ ವಿಚಾರ.

ಸಂವಿಧಾನ ಜಾರಿಗೊಂಡ ಗಣತಂತ್ರ ದಿನದ ಮೇಲೆ ಗಮನ ಕೇಂದ್ರೀಕರಿಸುವ ಬದಲು ಈ ದಿನವನ್ನು ಆಚರಿಸಲು ಪ್ರಯತ್ನಿಸುತ್ತಿರುವ ಉದ್ದೇಶ ಗೃಹ ಮಂತ್ರಿಗಳು ತನ್ನ ಉದ್ರೇಕಕಾರಿ ಭಾಷಣದ ಮೂಲಕ ಮಾಡಿರುವುದಕ್ಕಾಗಿಯೇ. ಅಂದರೆ ಆರೆಸ್ಸೆಸ್ ಗುರುಗಳನ್ನು ಮುಂದೊತ್ತುವುದು, ಹಳೆಯ, ಸೋತು ಹೋದ, ವಿಭಜನಕಾರೀ ವಿಚಾರಗಳನ್ನು ಎತ್ತಿ ರಾಷ್ಟ್ರದ ಶಕ್ತಿಯ ಅಪವ್ಯಯ ಮಾಡುವುದು ಮತ್ತು ಆಧುನಿಕ ಬಾರತದ ಜಾತ್ಯಾತೀತ ಪ್ರಜಾಸತ್ತಾತ್ಮಕ ಬುನಾದಿಯ ಮೇಲೆ ದಾಳಿ ಮಾಡುವುದು.

ಅವರು ಇದರಲ್ಲಿ ಯಶಸ್ವಿಯಾಗುವುದಿಲ್ಲ. ಬೆಲೆಯೇರಿಕೆ, ನಿರುದ್ಯೋಗ ಮತ್ತು ಕೃಷಿ ಸಂಕಟದ ನಿಜ ಪ್ರಶ್ನೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಸಂವಿಧಾನವನ್ನು ಹಾಡಿ ಹೊಗಳುವಂತೆ ನಟಿಸುವ ಮೂಲಕ ಅವರು ಧ್ರುವೀಕರಣ ನಡೆಸಲು ಏನೇ ಪ್ರಯತ್ನ ನಡೆಸಿದರೂ, ವಾಸ್ತವವಾಗಿ ಅವರು ಅದರ ಮೇಲೆ ದಾಳಿಯನ್ನೇ ಮಾಡುತ್ತಿದ್ದಾರೆ.