ರಾಜ್ಯಸಭಾ ಚುನಾವಣೆ: ಅನಾರೋಗ್ಯಕರ ಪ್ರವೃತ್ತಿಗಳು

ಸಂಪುಟ: 10 ಸಂಚಿಕೆ: 23 Sunday, May 29, 2016
ಹೊರ ರಾಜ್ಯದ ರಾಜಕಾರಣಿಗಳಿಗೆ ಮತ್ತು ಉದ್ಯಮಿಗಳಿಗೆ ಸೀಟು ಕೊಡುವ ಪ್ರವೃತ್ತಿ ಬಗ್ಗೆ ರಾಜ್ಯದಲ್ಲಿ ಚರ್ಚೆ ಎದ್ದಿದೆ. ಉದ್ಯಮಿಗಳಿಗೆ ಸೀಟು ಕೊಡುವ ಬಗ್ಗೆ ಚರ್ಚೆ ಆಗಬೇಕಾದ್ದು ಬರಿಯ ಅವರ ಮೂಲ ನೆಲೆಯ ಬಗ್ಗೆ ಮಾತ್ರವಲ್ಲ. ಅವರು ಎಷ್ಟರ ಮಟ್ಟಿಗೆ ರಾಜ್ಯದ ಜನತೆಯ ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಕಾಳಜಿ, ಪರಿಣತಿ ಹೊಂದಿದವರು ಎಂಬುದು ಮುಖ್ಯ ಚರ್ಚೆಯಾಗಬೇಕು. ಇಂತಹ ಹೆಚ್ಚಿನ ಉದ್ಯಮಿಗಳು (ರಾಜ್ಯದವರಿರಲಿ ಅಥವಾ ಹೊರ ರಾಜ್ಯದವರಿರಲಿ) ತಮ್ಮ ಉದ್ಯಮದ ಹಿತಾಸಕ್ತಿಗಳನ್ನು ಕಾಪಾಡಲು, ತಮಗೆ ಅನುಕೂಲಕರವಾದ ನೀತಿ ರೂಪಿಸಲು, ತಮ್ಮ ಕಾನೂನುಬಾಹಿರ ಅಕ್ರಮಗಳ ವಿರುದ್ಧ ಸರಕಾರಿ ಕ್ರಮಗಳಿಂದ ರಕ್ಷಣೆ ಪಡೆಯಲು ಪಾರ್ಲಿಮೆಂಟು ಪ್ರವೇಶ ಪಡೆಯ ಬಯಸುತ್ತಾರೆ. ಇದು ಪ್ರಮುಖ ಚರ್ಚೆಯ ವಿಷಯ ಆಗಬೇಕು.

ರಾಜ್ಯಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಕರ್ನಾಟಕದಿಂದ 13 ರಾಜ್ಯಸಭಾ ಸದಸ್ಯರಿದ್ದು ಅವರ ಅವಧಿ 6 ವರ್ಷಗಳು. ಪ್ರತಿ 2 ವರ್ಷಕ್ಕೊಮ್ಮೆ ಅವರಲ್ಲಿ ಮೂರನೇ ಒಂದರಷ್ಟು (ಅಂದರೆ 4) ಸದಸ್ಯರು ನಿವೃತ್ತರಾಗಿ, 4 ಹೊಸ ಸದ್ಯರು ಆಯ್ಕೆಯಾಗುತ್ತಾರೆ. ರಾಜ್ಯದ ವಿಧಾನಸಭೆ ರಾಜ್ಯಸಭಾ ಸದಸ್ಯರನ್ನು ಚುನಾಯಿಸುತ್ತದೆ. ಈ ಚುನಾವಣೆ ಪ್ರಮಾಣಾತ್ಕಕ ಪ್ರಾತಿನಿಧ್ಯದ ಆಧಾರದ ಮೇಲೆ ನಡೆಯುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಯ 45 ಸದಸ್ಯರ ಮತ ಗಳಿಸಿದ ಅಭ್ಯರ್ಥಿ ರಾಜ್ಯಸಭೆಗೆ ಚುನಾಯಿತರಾಗುತ್ತಾರೆ. ಕರ್ನಾಟಕದಿಂದ ನಡೆಯುವ ರಾಜ್ಯಸಭಾ ಚುನಾವಣೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಅನಾರೋಗ್ಯಕರ ಪ್ರವೃತ್ತಿಗಳು ತಲೆದೋರಿವೆ.

ಕೇಂದ್ರದಲ್ಲಿ ರಾಜ್ಯಗಳ ಆರ್ಥಿಕ ರಾಜಕೀಯ ಸಾಮಾಜಿಕ ಅಭಿಪ್ರಾಯಗಳನ್ನು ಪ್ರತಿನಿಧಿಸುವ ಮತ್ತು ಅವುಗಳ ದನಿ ಕೇಳುವಂತೆ ಮಾಡುವ ವೇದಿಕೆಯಾಗಿ ರಾಜ್ಯಸಭೆಯನ್ನು ಪಾರ್ಲಿಮೆಂಟಿನ ಮೆಲ್ಸದನವಾಗಿ ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ. ರಾಜ್ಯಸಭೆ ನಮ್ಮ ಫೆಡರಲ್ ಸ್ವರೂಪದ ಸರಕಾರದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯಸಭೆ ‘ಶಾಶ್ವತ’ ಸದನವಾಗಿದ್ದು ಇಡಿಯಾಗಿ ಒಮ್ಮೆಲೇ ಬದಲಾಗುವುದಿಲ್ಲ. ಪ್ರತಿ ವರ್ಷ ಮೂರನೇ ಒಂದು ಭಾಗದ ಸದಸ್ಯರು ನಿವೃತ್ತರಾಗಿ, ಹೊಸ ಸದಸ್ಯರು ಆಯ್ಕೆಯಾಗುತ್ತಾರೆ.   ಇದು ಲೋಕಸಭೆಯಲ್ಲಿ ಭಾರೀ ಬಹುಮತ ಪಡೆದ ಪಕ್ಷವೊಂದು ಬೇರೆ ರಾಜಕೀಯ ಅಭಿಪ್ರಾಯವನ್ನು ತುಳಿಯುವ ಅಥವಾ ನಿರ್ಲಕ್ಷ ಮಾಡುವ ಅಪಾಯವನ್ನೂ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇಂತಹ ರಾಜ್ಯಸಭೆಗೆ ಅಭ್ಯರ್ಥಿಯಾಗಿರುವವರಿಗೆ ರಾಜ್ಯದ ಆರ್ಥಿಕ ರಾಜಕೀಯ ಸಾಮಾಜಿಕ ಅಭಿಪ್ರಾಯಗಳ ಬಗ್ಗೆ ಆಳವಾದ ಜ್ಞಾನ ಇದ್ದು ಅವನ್ನು ಸದನದಲ್ಲಿ ಸಮರ್ಥವಾಗಿ ಮಂಡಿಸುವ ಸಾಮಥ್ರ್ಯ ಇರಬೇಕು. ಇವೆಲ್ಲವನ್ನು ಮಾಡಲು ಆಯಾ ರಾಜ್ಯದಲ್ಲಿ ಕೆಲಸ ಮಾಡಿ ದೀರ್ಘ ಅನುಭವ ಇರುವವರು ಬೇಕಾಗುತ್ತಾರೆ. ಹಿಂದೆ ರಾಜ್ಯಸಭೆಯ ಅಭ್ಯರ್ಥಿಗಳು ರಾಜ್ಯದಲ್ಲಿ ವಾಸ ಇದ್ದು ಅಲ್ಲಿನ ಮತದಾರರಾಗಿರಬೇಕೆಂಬ ನಿಯಮ ಇತ್ತು. ಆಸ್ಸಾಮಿನಿಂದ ಡಾ. ಮನಮೋಹನ ಸಿಂಗ್ ಅವರ ರಾಜ್ಯಸಭಾ ಸದಸ್ಯತ್ವ ಕೋರ್ಟಿನಲ್ಲಿ ಪ್ರಶ್ನಿಸಲ್ಪಟ್ಟಾಗ ಈ ನಿಯಮವನ್ನು ಬದಲಿಸಲಾಯಿತು. ಅದು ಏನೇ ಇದ್ದರೂ ರಾಜ್ಯವನ್ನು ಪ್ರತಿನಿಧಿಸಲು ರಾಜ್ಯದ ಬಗ್ಗೆ ದೀರ್ಘ ಅನುಭವ ಇರಬೇಕೆಂಬುದು ಸ್ವಯಂವಿದಿತ.

ಕರ್ನಾಟಕದಿಂದ ನಡೆಯುವ ರಾಜ್ಯಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಆರಿಸುವಲ್ಲಿ ಮೂರೂ ಪ್ರಮುಖ ರಾಜಕೀಯ (ಕಾಂಗ್ರೆಸ್, ಬಿಜೆಪಿ, ಜೆಡಿ-ಎಸ್) ಪಕ್ಷಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರು ಪ್ರಮುಖ ಅನಾರೋಗ್ಯಕರ ಪ್ರವೃತ್ತಿಗಳು ತಲೆದೋರಿವೆ. ಮೊದಲನೆಯದಾಗಿ ಲೋಕಸಭೆಯಲ್ಲಿ ಸೋತ ರಾಜ್ಯದ ಅಥವಾ (ಹೆಚ್ಚಾಗಿ) ಇತರ ರಾಜ್ಯಗಳ ರಾಷ್ಟ್ರ ಮಟ್ಟದ ನಾಯಕರಿಗೆ ಪಾರ್ಲಿಮೆಂಟ್ ಪ್ರವೇಶಿಸಲು ಸುರಕ್ಷಿತ ವಿಧಾನವಾಗಿದೆ. ಹೆಚ್ಚಾಗಿ ಇವರಿಗೆ ರಾಜ್ಯದ ಬಗ್ಗೆ ಏನೂ ತಿಳಿದಿರುವುದಿಲ್ಲ. ಮಾತ್ರವಲ್ಲ ನೆರೆ ರಾಜ್ಯದವರಾಗಿದ್ದಾಗ ಮತ್ತು ನೆರೆ ರಾಜ್ಯಗಳ ಜತೆ ವಿವಾದ ಇದ್ದಾಗ ರಾಜ್ಯದ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದು ಬಿಟ್ಟು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು. ರಾಜ್ಯಸಬಾ ಅಭ್ಯರ್ಥಿಗಳಾಗಿ ಹೆಸರು ಕೇಳಿ ಬರುತ್ತಿರುವ ಆಂಧ್ರದ ಬಿಜೆಪಿಯ ವೆಂಕಯ್ಯ ನಾಯುಡು, ಕಾಂಗ್ರೆಸಿನ ಜೈರಾಮ್ ರಮೇಶ್, ತಮಿಳುನಾಡಿನ ಕಾಂಗ್ರೆಸಿನ ಪಿ ಚಿದಂಬರಂ ಅವರು ಈ ಸಾಲಿಗೆ ಸೇರಿರುವವರು. ಬಿಜೆಪಿಯ ವೆಂಕಯ್ಯ ನಾಯುಡು ಅವರನ್ನು ಬಿಜೆಪಿ 4ನೇ ಬಾರಿಗೆ ಕರ್ನಾಟಕದಿಂದ ಕಣಕ್ಕಿಳಿಸಲಿದೆ.

ಎರಡನೆಯದು ಈ ಪಕ್ಷಗಳಲ್ಲಿ (ರಾಜ್ಯ, ಕೇಂದ್ರಗಳಲ್ಲಿ ಯಾವುದೇ ಸ್ಥಾನ ಪಡೆಯಲಾಗದ ಮುಂತಾದ) ವಿವಿಧ ಕಾರಣಗಳಗೆ ಅತೃಪ್ತ ರಾದವರನ್ನೂಗುಂಪುಗಾರಿಕೆ ಶಮನಗೊಳಿಸಲೂ ರಾಜ್ಯಸಭಾ ಅಭ್ಯರ್ಥಿಗಳಾಗಿ ಆಯ್ಕೆ ಮಾಡುವುದು. ಇದರ ಜತೆಗೆ ರಾಜ್ಯದ ಅಥವಾ ದೇಶದ ಯಾವುದೇ ವಿದ್ಯಮಾನಗಳ ಬಗ್ಗೆ ಅರಿವು ಇಲ್ಲದ ಯಾವುದೇ ಪರಿಣತಿ ಇಲ್ಲದ ಆದರೆ ಪಕ್ಷದ ಪ್ರಚಾರಕ್ಕೆ ಮಾತ್ರ ಪ್ರಯೋಜನಕಾರಿಯಾದವರನ್ನು ಸಮಾಧಾನ ಪಡಿಸಲು ಅಭ್ಯರ್ಥಿಯಾಗಿಸುವುದು. ಹೇಮಮಾಲಿನಿಯಂತಹ ನಟ/ನಟಿಯರು ಇದಕ್ಕೆ ಉದಾಹರಣೆ.

ಮೂರನೇಯ ಮತ್ತು ಅತ್ಯಂತ ಅಪಾಯಕಾರಿ ಅನಾರೋಗ್ಯಕರ ಪ್ರವೃತ್ತಿ ಎಂದರೆ ರಾಜ್ಯಸಭಾ ಸೀಟುಗಳನ್ನು ಉದ್ಯಮಿಗಳು ಸ್ಥಾಪಿತ ಹಿತಾಸಕ್ತಿಗಳಿಗೆ ‘ಮಾರಾಟ’ ಮಾಡುವುದು ಅಥವಾ ಅವರು ಸ್ಪರ್ಧಿಸಿದಾಗ ಅವರಿಗೆ ಪರೋಕ್ಷ ಬೆಂಬಲ ನೀಡುವುದು. ಕೆಲವೊಮ್ಮೆ ಪಕ್ಷಗಳು ಇಡಿಯಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನಿಡದಿದ್ದಾಗಲೂ, ಈ ಪಕ್ಷಗಳ ಸದಸ್ಯರಿಂದ ತಮ್ಮ ಮತವನ್ನು ಈ ಪ್ರಭಾವಿ ಉದ್ಯಮಿಗಳು ‘ಕೊಂಡುಕೊಳ್ಳುವುದು’ ಕಂಡು ಬಂದಿದೆ. ಈ ಪ್ರವೃತ್ತಿ ಮೂರೂ ಪಕ್ಷಗಳಲ್ಲೂ ಕಂಡು ಬಂದಿದೆ. ಆದರೆ ಜೆಡಿ-ಎಸ್ ಇದನ್ನು ಒಂದು (ಅ)‘ನೀತಿ’ಯಾಗಿ ಅಂಗೀಕರಿಸಿದೆಯೋ ಎಂಬಂತೆ ಸತತವಾಗಿ ಪಾಲಿಸುತ್ತಿದೆ.  ಇದಕ್ಕೆ ‘ಅತ್ಯುತ್ಮಮ’ ಉದಾಹರಣೆ ವಿಜಯ ಮಲ್ಯ. ರಾಜ್ಯ ಮೂಲದ ವ್ಯಕ್ತಿಯಾಗಿದ್ದರೂ ಈತ ರಾಜ್ಯದ ವಿದ್ಯಮಾನಗಳ ಬಗ್ಗೆ ಅರಿವು ಇದ್ದವರೂ ಅಲ್ಲ. ಅದರ ಬಗ್ಗೆ ತಲೆ ಕೆಡಿಸಿಕೊಂಡವರೂ ಅಲ್ಲ. ತನ್ನ ಮತ್ತು ತನ್ನ ಉದ್ಯಮದ ಹಿತಾಸಕ್ತಿಯನ್ನು ಕಾಪಾಡಲು, ತನ್ನ ಕಾನೂನುಬಾಹಿರ ಭಾನಗಡಿಗಳನ್ನು ರಾಜಾರೋಷವಾಗಿ ಮುಂದುವರೆಸಲು ಸರಕಾರಗಳ ಪ್ರಮುಖ ಪಕ್ಷಗಳ ಪ್ರಭಾವ ಬಳಸಿಕೊಳ್ಳಲಷ್ಟೇ ಈ ಸದಸ್ಯತ್ವವನ್ನು ಬಳಸುವವರು. ಮೊದಲ ಬಾರಿಗೆ ಮಲ್ಯರನ್ನು ಕಾಂಗ್ರೆಸ್ ಮತ್ತು ಜೆಡಿ-ಎಸ್ ಬೆಂಬಲಿಸಿದರೆ, ಎರಡನೇ ಬಾರಿ ಅವರು ಬಿಜೆಪಿ ಮತ್ತು ಜೆಡಿ-ಎಸ್ ಬೆಂಬಲ ಪಡೆದುಕೊಂಡರು. ಮಲ್ಯರ ಭಾನಗಡಿಗಳು ಹೊಸದಲ್ಲದಿದ್ದರೂ ಆತ ದೇಶ ಬಿಟ್ಟು ಪರಾರಿಯಾಗಿ ಸುದ್ದಿಯಾದದ್ದರಿಂದ ಮತ್ತು ರಾಜಿನಾಮೆ ಕೊಡಬೇಕಾಗಿದ್ದರಿಂದಷ್ಟೇ ಈ ಪಕ್ಷಗಳು ಸುಮ್ಮನಿವೆ. ಇವೆಲ್ಲ ಇಲ್ಲದಿದ್ದರೆ ಮಲ್ಯ ರಾಜ್ಯಸಭೆಗೆ ಪುನರಾಯ್ಕೆ ಆಗಿದ್ದರೆ ಏನೂ ಆಶ್ಚರ್ಯ ಪಡಬೇಕಾಗಿಲ್ಲ. ಅದೇ ರೀತಿ ತಮಿಳುನಾಡಿನ ಉದ್ಯಮಿ ಎಂ.ಎ.ಎಂ. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿದ್ದರು.

ಈ ಬಾರಿಯೂ ಹಲವು ರಾಜ್ಯದ ಹಾಗೂ ಹೊರ ರಾಜ್ಯದ ಉದ್ಯಮಿಗಳ ರೀಯಲ್ ಎಸ್ಟೇಟ್ ಕುಳಗಳ ಹೆಸರುಗಳು ಕೇಳಿ ಬರುತ್ತಿವೆ. ಜೆಡಿ-ಎಸ್ ಉದ್ಯಮಿಗಳಿಗೆ ಸೀಟು ಕೊಡುವ ತನ್ನ ‘ನೀತಿ’ ಮುಂದುವರೆಸಲಿದೆಯೆಂದು ಹೇಳಿದೆ. ಹೊರ ರಾಜ್ಯದ ರಾಜಕಾರಣಿಗಳಿಗೆ ಮತ್ತು ಉದ್ಯಮಿಗಳಿಗೆ ಸೀಟು ಕೊಡುವ ಪ್ರವೃತ್ತಿ ಬಗ್ಗೆ ರಾಜ್ಯದಲ್ಲಿ ಚರ್ಚೆ ಎದ್ದಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಇದನ್ನು ಕೇರ್ ಮಾಡದೆ ಜೈರಾಮ್ ರಮೇಶ್ ಮತ್ತು ವೆಂಕಯ್ಯ ನಾಯುಡು ಅವರಿಗೆ ಸೀಟು ಕೊಡುವುದು ಖಚಿತವಾಗಿದೆ. ಜೆಡಿ-ಎಸ್ (ಮತ್ತು ಬಹುಮಟ್ಟಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಕೂಡಾ) ಉದ್ಯಮಿಗಳಿಗೆ ಸೀಟು ಕೊಡುವುದಾದರೆ ರಾಜ್ಯ ಮೂಲದ ಕುಳಗಳಿಗೆ ಮಾತ್ರ ಸೀಟು ಕೊಡುವ ಇಂಗಿತ ವ್ಯಕ್ತಪಡಿಸಿವೆ. ಉದ್ಯಮಿಗಳಿಗೆ ಸೀಟು ಕೊಡುವ ಬಗ್ಗೆ ಚರ್ಚೆ ಆಗಬೇಕಾದ್ದು ಬರಿಯ ಅವರ ಮೂಲ ನೆಲೆಯ ಬಗ್ಗೆ ಮಾತ್ರವಲ್ಲ. ಅವರು ಎಷ್ಟರ ಮಟ್ಟಿಗೆ ರಾಜ್ಯದ ಜನತೆಯ ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಕಾಳಜಿ, ಪರಿಣತಿ ಹೊಂದಿದವರು ಎಂಬುದು ಮುಖ್ಯ ಚರ್ಚೆಯಾಗಬೇಕು. ಇಂತಹ ಹೆಚ್ಚಿನ ಉದ್ಯಮಿಗಳು (ರಾಜ್ಯದವರಿರಲಿ ಅಥವಾ ಹೊರ ರಾಜ್ಯದವರಿರಲಿ) ತಮ್ಮ ಉದ್ಯಮದ ಹಿತಾಸಕ್ತಿಗಳನ್ನು ಕಾಪಾಡಲು, ತಮಗೆ ಅನುಕೂಲಕರವಾದ ನೀತಿ ರೂಪಿಸಲು, ತಮ್ಮ ಕಾನೂನುಬಾಹಿರ ಅಕ್ರಮಗಳ ವಿರುದ್ಧ ಸರಕಾರಿ ಕ್ರಮಗಳಿಂದ ರಕ್ಷಣೆ ಪಡೆಯಲು ಪಾರ್ಲಿಮೆಂಟು ಪ್ರವೇಶ ಪಡೆಯ ಬಯಸುತ್ತಾರೆ. ಇದು ಪ್ರಮುಖ ಚರ್ಚೆಯ ವಿಷಯ ಆಗಬೇಕು.

ರಾಜ್ಯಸಭೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಮೂಡಿಬರುತ್ತಿರುವ ಈ ಮೂರು ಅನಾರೋಗ್ಯಕರ ಅಪಾಯಕಾರಿ ಪ್ರವೃತ್ತಿಗಳ ವಿರುದ್ಧ ರಾಜಕೀಯ ಎಚ್ಚರ ಮೂಡಿಸುವ ಪ್ರಚಾರಾಂದೋಲನ ಅಗತ್ಯ.

Advertisements

ಉದ್ಯೋಗಗಳು ಎಲ್ಲಿವೆ ?!

ಸಂಪುಟ: 10 ಸಂಚಿಕೆ:  20 date: Sunday, May 8, 2016

ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವನ್ನು ತಮ್ಮ ಪ್ರಧಾನ ಚುನಾವಣಾ ಆಶ್ವಾಸನೆಯಾಗಿ ಮಾಡಿದ್ದರು. ಮೋದಿ ಸರಕಾರದ ಎರಡು ವರ್ಷಗಳ ನಂತರ ಉದ್ಯೋಗ ರಂಗದಲ್ಲಿನ ಶೋಚನೀಯ ದಾಖಲೆ ಎದ್ದು ಕಾಣುತ್ತಿದೆ.
ನವ-ಉದಾರವಾದಿ ಬೆಳವಣಿಗೆ ಉದ್ಯೋಗಗಳನ್ನು ನಿರ್ಮಿಸುವುದಿಲ್ಲ, ಬದಲಿಗೆ ಉದ್ಯೋಗಗಳನ್ನು ಕೊಲ್ಲುತ್ತದೆ. ಧೋರಣೆಗಳಲ್ಲಿ ಮೂಲಭೂತ ಬದಲಾವಣೆ ತರದೆ ಕೇವಲ ವ್ಯವಸ್ಥೆಗೆ ಎಷ್ಟೇ ತೇಪೆ ಹಾಕಿದರೂ ನಿರುದ್ಯೋಗದ ಸಮಸ್ಯೆ ಪರಿಹಾರವಾಗುವುದಿಲ್ಲ.
ಈಗ ಬೇಕಾಗಿರುವುದು ಒಂದು ಪರ್ಯಾಯ ಬೆಳವಣಿಗೆಯ ಪಥ, ಎಲ್ಲ ವಲಯಗಳಲ್ಲೂ ಉದ್ಯೋಗಾವಕಾಶಗಳನ್ನು ನಿರ್ಮಿಸಬಲ್ಲ ದಿಕ್ಕು. ಕೃಷಿಯಲ್ಲಿ ಮತ್ತು ಮೂಲರಚನೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಏಕೆಂದರೆ ಇವೇ ಉದ್ಯೋಗಗಳನ್ನು ನಿರ್ಮಿಸುವಂತವು.

ಇತ್ತೀಚೆಗೆ ಕಾರ್ಪೊರೇಟ್ ಮಾಧ್ಯಮಗಳು ದೇಶದಲ್ಲಿ ಹೆಚ್ಚುತ್ತಿರುವ ಉದ್ಯೋಗಹೀನತೆ ಮತ್ತು ಉದ್ಯೋಗಾವಕಾಶ ಬೆಳವಣಿಗೆಯ ಕೊರತೆಯ ಸಮಸ್ಯೆಯನ್ನು ಚರ್ಚಿಸುತ್ತಿವೆ. ಬಹುಶಃ ಲೇಬರ್ ಬ್ಯೂರೊ ನಡೆಸುತ್ತಿರುವ ಎಂಟು ಹೆಚ್ಚಿನ ಉದ್ಯೋಗಾವಕಾಶಗಳು ಬೇಕಾಗುವ ಉದ್ದಿಮೆಗಳ ತ್ರೈಮಾಸಿಕ ಉದ್ಯೋಗ ಸರ್ವೆಯಿಂದ ಇದು ಸ್ಫುರಿಸಿರಬೇಕು. ಜವಳಿ, ಗಾರ್ಮೆಂಟ್, ಆಭರಣ ತಯಾರಿ, ಮಾಹಿತಿ ತಂತ್ರಜ್ಞಾನ, ಚರ್ಮ, ಕೈಮಗ್ಗ, ಲೋಹಗಳು ಮತ್ತು ವಾಹನಗಳು ಈ ಎಂಟು ಉದ್ದಿಮೆಗಳಲ್ಲಿ 2015ರಲ್ಲಿ ಕೇವಲ 1.35 ಲಕ್ಷ ಉದ್ಯೋಗಗಳು ನಿರ್ಮಾಣವಾದವು, 2014ರಲ್ಲಿ ಇದು 4.9ಲಕ್ಷ ಇತ್ತು, 2009ರಲ್ಲಿ 12.5 ಲಕ್ಷ ಇತ್ತು  ಎಂದು ಈ ಸರ್ವೆಗಳು ತೋರಿಸಿವೆ.

ಗ್ರಾಮೀಣ ಉದ್ಯೋಗಗಳಿಗೆ ಸಂಬಂಧ ಪಟ್ಟಂತೆ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದಲ್ಲಿ  ಕೃಷಿಯ ಪಾಲು ಇಳಿಮುಖವಾಗುತ್ತಿದೆ. ಗ್ರಾಮೀಣ ಬಡವರು ಮತ್ತು ಯುವಜನತೆಗೆ ಕೃಷಿ ಬಿಟ್ಟು ಬೇರೆ ಉದ್ಯೋಗಗಳನ್ನು ಒದಗಿಸಬಲ್ಲ ಕ್ರಮಗಳಿಲ್ಲ. ಈ ವರ್ಷದ ಮಾರ್ಚ್ ತಿಂಗಳ ಮೂರನೇ ವಾರದ ವರೆಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿದವರ ಸಂಖ್ಯೆ 8.4 ಕೋಟಿ. ಇದು ಗ್ರಾಮೀಣ ನಿರುದ್ಯೋಗ  ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ತೋರಿಸುತ್ತದೆ.

ಹುಸಿಯಾದ ಚುನಾವಣಾ ಆಶ್ವಾಸನೆ

ಲೋಕಸಭಾ ಚುನಾವಣೆಗಳಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಿರ್ಮಾಣವನ್ನು ತಮ್ಮ ಪ್ರಧಾನ ಚುನಾವಣಾ ಆಶ್ವಾಸನೆಯಾಗಿ ಮಾಡಿದ್ದರು. ಮೋದಿ ಸರಕಾರದ ಎರಡು ವರ್ಷಗಳ ನಂತರ ಉದ್ಯೋಗ ರಂಗದಲ್ಲಿನ ಶೋಚನೀಯ ದಾಖಲೆ ಎದ್ದು ಕಾಣುತ್ತಿದೆ. ಸರಕಾರ 7.5ಶೇ. ಜಿಡಿಪಿ ಬೆಳವಣಿಗೆಯಾಗಿದೆ ಎನ್ನುತ್ತದೆ. ಈ ದಾವೆಯೇ ನಂಬಲರ್ಹವಲ್ಲ. ಆದರೂ ಇಂತಹ ನವ-ಉದಾರವಾದಿ ಬೆಳವಣಿಗೆ ಉದ್ಯೋಗಾವಕಾಶ ಗಳನ್ನು ನಿರ್ಮಿಸಲಾರದು ಎಂಬುದು ಸ್ವಯಂವೇದ್ಯ.

ಸರಳ ಸಂಗತಿಯೆಂದರೆ ನವ-ಉದಾರವಾದಿ ಬೆಳವಣಿಗೆ ಉದ್ಯೋಗಗಳನ್ನು ನಿರ್ಮಿಸುವುದಿಲ್ಲ, ಬದಲಿಗೆ ಉದ್ಯೋಗಗಳನ್ನು ಕೊಲ್ಲುತ್ತದೆ. ಧೋರಣೆಗಳಲ್ಲಿ ಮೂಲಭೂತ ಬದಲಾವಣೆ ತರದೆ ಕೇವಲ ವ್ಯವಸ್ಥೆಗೆ ಎಷ್ಟೇ ತೇಪೆ ಹಾಕಿದರೂ ನಿರುದ್ಯೋಗದ ಸಮಸ್ಯೆ ಪರಿಹಾರವಾಗುವುದಿಲ್ಲ.

ಖಾಸಗಿ ಹೂಡಿಕೆ ಮತ್ತು ಖಾಸಗೀಕರಣವನ್ನು ಹೆಚ್ಚೆಚ್ಚು ಅವಲಂಬಿಸುವುದರಿಂದ ಉದ್ಯೋಗಾವಕಾಶಗಳೇನೂ ಹುಟ್ಟಿಕೊಳ್ಳುವುದಿಲ್ಲ. ಏಕೆಂದರೆ ನವ-ಉದಾರವಾದಿ ಅರ್ಥಶಾಸ್ತ್ರ ಹೂಡಿಕೆಗಳು ಬಂಡವಾಳ ಹೆಚ್ಚಾಗಿ ಬೇಕಾಗುವ, ಶ್ರಮ ಉಳಿಸುವ ತಂತ್ರಜ್ಞಾನವನ್ನು ಅವಲಂಬಿಸುವ, ಆಮೂಲಕ ದೊಡ್ಡ ಪ್ರಮಾಣದಲ್ಲಿ ದುಡಿಮೆಗಾರರ ಪಡೆಯ ಅಗತ್ಯವಿಲ್ಲದ ಕ್ಷೇತ್ರಗಳಿಗೆ ಹೋಗುವಂತೆ ಮಾಡುತ್ತದೆ. ಅಲ್ಲದೆ ಉದ್ಯೋಗ ಕಾಂಟ್ರಾಕ್ಟ್ ಆಧಾರದಲ್ಲಿ ಮಾತ್ರವೇ ಲಭ್ಯವಾಗುವಂತೆ ಮಾಡುತ್ತದೆ. ಆಮೂಲಕ ಉದ್ಯೋಗಗಳು ಅಭದ್ರ ಮತ್ತು ಅಲ್ಪಕಾಲದ್ದಾಗಿರುವಂತೆ ಮಾಡುತ್ತದೆ.

ಔದ್ಯೋಗೀಕರಣದ ನಾಶ

ಅನೌಪಚಾರಿಕ ವಲಯ ನಮ್ಮ ದೇಶದಲ್ಲಿ ಅತಿ ಹೆಚ್ಚು ಉದ್ಯೋಗಗಳನ್ನು ಒದಗಿಸುವ ವಲಯ. ಇಲ್ಲಿಯೂ ಕೂಡ ಉದ್ಯೋಗಾವಕಾಶಗಳು 2004-05ರಿಂದ 2011-12ರ ನಡುವೆ 6ಶೇ.ದಷ್ಟು ಇಳಿಮುಖಗೊಂಡವು.

ಹೀಗೆ ನವ-ಉದಾರವಾದಿ ಬೆಳವಣಿಗೆಯ ಆದ್ಯತೆಗಳು ಶ್ರಮ ಹೆಚ್ಚಾಗಿ ಬೇಕಾಗುವ ಉದ್ದಿಮೆಗಳೂ ಅಲ್ಲ, ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ  ಅಭಿವೃದ್ಧಿಯೂ ಅಲ್ಲ. ವ್ಯಾಪಾರ ಉದಾರೀಕರಣ ವಿದೇಶಗಳಿಂದ ಬರುವ ಕೈಗಾರಿಕಾ ಸರಕುಗಳಿಗೆ ಸುಂಕದರಗಳನ್ನು ಇಳಿಸುತ್ತಿದೆ. ಇದರಿಂದಾಗಿ ಹಲವು ವಲಯಗಳಲ್ಲಿ  ಔದ್ಯೋಗೀಕರಣ ಇಲ್ಲವಾಗುತ್ತಿದೆ.

ನವ-ಉದಾರವಾದಿ ಧೋರಣೆಗಳಲ್ಲಿ ಸರಕಾರ ದೊಡ್ಡ ಕಾರ್ಪೊರೇಟ್‍ಗಳಿಗೆ ಮತ್ತು ಶ್ರೀಮಂತ ವಲಯಗಳುಗೆ ಸಾವಿರಾರು ಕೋಟಿ ರೂ.ಗಳಷ್ಟು ಸಬ್ಸಿಡಿಗಳನ್ನು ಒದಗಿಸುತ್ತದೆ, ವರು ತೆರಬೇಕಾದ ತೆರಿಗೆಗಳನ್ನು ಬಿಟ್ಟುಕೊಡುತ್ತದೆ, ಆದರೆ ಕೈಮಗ್ಗ, ಗೇರು, ನಾರು ಮತ್ತು ಕೈಕಸಬುಗಳಂತಹ ಲಕ್ಷಾಂತರ ದುಡಿಯುವ ಗಂಡಸರು ಮತ್ತು ಹೆಂಗಸರಿಗೆ ಜೀವನಾಧಾರ ಕಲ್ಪಿಸುವ ಮತ್ತು ಉದ್ಯೋಗಗಳನ್ನು ಒದಗಿಸುವ ಪಾರಂಪರಿಕ ಉದ್ದಿಮೆಗಳಿಗೆ ಬೆಂಬಲ ಕೊಡಲು ನಿರಾಕರಿಸುತ್ತದೆ. ಕೃಷಿಯಲ್ಲಿ ಹೂಡಿಕೆಯ ಕಡಿತ ಮತ್ತು ಸಾಮಾಜಿಕ ವಲಯಗಳಿಗೆ-  ಶಿಕ್ಷಣ, ಆರೋಗ್ಯ ಮತ್ತು ಮನರೇಗ-ಹಣನೀಡಿಕೆಯಲ್ಲಿ ತೀವ್ರ ಕಡಿತ ಕೂಡ ದೇಶದಲ್ಲಿ ಉದ್ಯೋಗಾವಕಾಶ ನಿರ್ಮಾಣದ ಸಾಧ್ಯತೆಯನ್ನು ಸಂಕುಚಿತ ಗೊಳಿಸಲು ಕಾರಣವಾಗುತ್ತದೆ.

ಪರ್ಯಾಯ ದಿಕ್ಕು

ಈಗ ಬೇಕಾಗಿರುವುದು ಒಂದು ಪರ್ಯಾಯ ಬೆಳವಣಿಗೆಯ ಪಥ, ಎಲ್ಲ ವಲಯಗಳಲ್ಲೂ ಉದ್ಯೋಗಾವಕಾಶಗಳನ್ನು ನಿರ್ಮಿಸಬಲ್ಲ ದಿಕ್ಕು. ಕೃಷಿಯಲ್ಲಿ ಮತ್ತು ಮೂಲರಚನೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಏಕೆಂದರೆ ಇವೇ ಉದ್ಯೋಗಗಳನ್ನು ನಿರ್ಮಿಸುವಂತವು.

ಶ್ರಮ ಹೆಚ್ಚಾಗಿ ಬೇಕಾಗುವ ಕೈಗಾರಿಕೆಗಳು, ಸಣ್ಣ ಪ್ರಮಾಣದ ಉದ್ದಿಮೆಗಳು ಮತ್ತು ಕೃಷಿ ಸಂಸ್ಕರಣ ಉದ್ದಿಮೆಗಳಿಗೆ ಪ್ರೋತ್ಸಾಹ, ಉತ್ತೇಜಕಗಳನ್ನು  ನೀಡಬೇಕು.

ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿದರೆ ಅದರಿಂದ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳು ವಿಸ್ತರಿಸಿ, ಗುಣಾತ್ಮವಾಗಿ ಉತ್ತಮಗೊಂಡು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.

ಇದರೊಂದಿಗೆ ಯುವಜನರಿಗೆ ವೃತ್ತಿಪರವಾದ ಮತ್ತು ಕುಶಲತೆಯನ್ನು ಅಭಿವೃದ್ಧಿಗೊಳಿಸುವುದಕ್ಕೆ ಗಮನ ಕೇಂದ್ರೀಕರಿಸುವ ಕಾರ್ಯಕ್ರಮಗಳು ಹೊಸದಾಗಿ ತೆರೆದುಕೊಳ್ಳುವ ವಿಧ-ವಿಧವಾದ ಕೆಲಸಗಳನ್ನು ನಿರ್ವಹಿಸಲು ಅವರನ್ನು ಸಜ್ಜುಗೊಳಿಸುತ್ತದೆ.

– ಪ್ರಕಾಶ ಕಾರಟ್

‘ಲೋಕಾಯುಕ್ತ’ತಕ್ಕೆ ಇನ್ನೊಂದು ಕಂಟಕ

ಸಂಪುಟ: 10 ಸಂಚಿಕೆ: 20 May 8, 2016

ಲೋಕಾಯುಕ್ತದ ಮೂಲಕ ಭ್ರಷ್ಟಾಚಾರದ (ಅದರಲ್ಲೂ ಉನ್ನತ ವಲಯದ ಭ್ರಷ್ಟಾಚಾರದ) ವಿರುದ್ಧ ಕ್ರಮಗಳಿಗೆ ಉತ್ತಮ ವ್ಯವಸ್ಥೆ ಸ್ಥಾಪಿಸಿ ಮುಖ್ಯಮಂತ್ರಿಯನ್ನು ಜೈಲಿಗೆ ಕಳಿಸಿದ ಕರ್ನಾಟಕ ಈಚಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಅಡಿಗಡಿಗೂ ಎಡವುತ್ತಿದೆ. ಆ ವ್ಯವಸ್ಥೆಯನ್ನು ನಾಶ ಮಾಡುವತ್ತ ಸಾಗಿದೆ. ನ್ಯಾ. ಸಂತೋಷ ಹೆಗಡೆ ಅವರ ಪರಿಣಾಮಕಾರಿ ಅವಧಿಯ ನಂತರ ಸೂಕ್ತ ಲೋಕಾಯುಕ್ತರನ್ನು ನೇಮಿಸುವುದರಲ್ಲಿ ಸತತವಾಗಿ ಎಡವುತ್ತಿದೆ. ಲೋಕಾಯುಕ್ತ ವ್ಯವಸ್ಥೆಗೆ ಒಂದರ ಮೇಲೊಂದು ಕಂಟಕಗಳು ಬರುತ್ತಿವೆ. ವಿವಿಧ ಸರಕಾರಗಳು/ಮುಖ್ಯಮಂತ್ರಿಗಳು ಸೂಚಿಸಿದ ವ್ಯಕ್ತಿಗಳ ಮೇಲೆ ವಿವಿಧ ಆಪಾದನೆಗಳು ಬರುತ್ತಿದ್ದು, ಅವರು ಅಥವಾ ಸರಕಾರ ಹಿಂಜರಿಯುವ ಮೂಲಕ ಲೋಕಾಯುಕ್ತರ ನೇಮಕದಲ್ಲಿ ವಿಳಂಬ ಆಗುತ್ತಿದೆ. ನ್ಯಾ. ಭಾಸ್ಕರ ರಾವ್ ಅವರನ್ನು ಲೋಕಾಯುಕ್ತರಾಗಿ ನೇಮಿಸಿದ ನಂತರ ಅವರ ಮಗನಿಂಧ ಅವರ ಸ್ಥಾನದ ದುರುಪಯೋಗ ಲೋಕಾಯುಕ್ತ ವ್ಯವಸ್ಥೆಯನ್ನು ಒಳಗಿನಿಂದಲೇ ಕೊರೆಯಲು ಆರಂಭವಾಗಿತ್ತು. ಆ ಪ್ರಕರಣದಲ್ಲಿ ನ್ಯಾ. ಭಾಸ್ಕರ ರಾವ್ ರಾಜೀನಾಮೆಯ ನಂತರ, ಹೊಸ ಲೋಕಾಯುಕ್ತ ನೇಮಕದಲ್ಲಿ ವಿಳಂಬ, ಸಾಲದ್ದಕ್ಕೆ  ಉಪಲೋಕಾಯುಕ್ರ ಅಡಿ ಅವರ ವಿರುದ್ಧ ದೋಷಾರೋಪಣೆ ಇಡೀ ವ್ಯವಸ್ಥೆಯನ್ನೇ ಅತಂತ್ರವಾಗಿಸಿತ್ತು. ಅದು ಸಾಲದೆಂಬಂತೆ ಆ ನಂತರ, ಲೋಕಾಯುಕ್ತಕ್ಕೆ ಬದಲಿಯಾಗಿ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆ ಭ್ರಷ್ಟಾಚಾರ-ವಿರೋಧಿ ಕ್ರಮದ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.

lok-inn

ಇವೆಲ್ಲದರ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಲೋಕಾಯುಕ್ತ ಹುದ್ದೆಗೆ ಹಲವು ವಿವಾದಗಳ ನಡುವೆ ನ್ಯಾ. ಎಸ್. ಆರ್. ನಾಯಕ್ ಅವರ ಹೆಸರನ್ನು ಸೂಚಿಸಿ ರಾಜ್ಯಪಾಲರಿಗೆ ಕಳಿಸಿತ್ತು. ರಾಜ್ಯಪಾಲರು ನ್ಯಾ. ನಾಯಕ್ ಅವರ ಹೆಸರನ್ನು ತಿರಸ್ಕರಿಸಿ ಹಿಂದೆ ಕಳಿಸುವ ಮೂಲಕ ಲೋಕಾಯುಕ್ತ ವ್ಯವಸ್ಥೆಗೆ ಇನ್ನೊಂದು ಕಂಟಕ ಎದುರಾಗಿದೆ. ಭಾರತದ ಸಂವಿಧಾನದ ಪ್ರಕಾರ ರಾಜ್ಯಪಾಲರು ಸಾಮಾನ್ಯವಾಗಿ ಚುನಾಯಿತ ಸರಕಾರದ ಶಿಫಾರಸುಗಳನ್ನು ಮನ್ನಿಸಬೇಕು. ಸರಕಾರ ಸಂವಿಧಾನ ಉಲ್ಲಂಘಿಸಿದ ಅಥವಾ ಅದರ ಸಂವಿಧಾನ-ವಿರೋಧಿ ಕೃತ್ಯಗಳ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಅವರು ಸರಕಾರದ ಶಿಫಾರಸುಗಳನ್ನು ತಿರಸ್ಕರಿಸಬಹುದು. ಈ ದೃಷ್ಟಿಯಿಂದ ನ್ಯಾ. ಎಸ್. ಆರ್. ನಾಯಕ್ ಅವರ ಸೂಚನೆಯ ಸಾಧಕ-ಬಾಧಕಗಳು ಏನೇ ಇರಲಿ, ರಾಜ್ಯಪಾಲರ ಕ್ರಮ ಸರಿಯಲ್ಲ. ರಾಜ್ಯಪಾಲರು ಎಂದಿನಂತೆ ಕೇಂದ್ರದಲ್ಲಿ ಆಳುವ ಸರಕಾರದ ರಾಜಕೀಯ ಪ್ರತಿನಿಧಿಯಂತೆ ಈ ಕ್ರಮ ಕೈಗೊಂಡಿದ್ದಾರೆ.

ಲೋಕಾಯುಕ್ತ ವ್ಯವಸ್ಥೆಯಿಂದ ಜೈಲುವಾಸ ಕಂಡ ಯೆಡಿಯೂರಪ್ಪನವರನ್ನು ರಾಜ್ಯ ಪಕ್ಷದ ಅಧ್ಯಕ್ಷರನ್ನಾಗಿ ಆರಿಸಿದ ಬಿಜೆಪಿ ಪಕ್ಷ ಲೋಕಾಯುಕ್ತ ವ್ಯವಸ್ಥೆ ಗಟ್ಟಿಗೊಳಿಸುವ ಬಗ್ಗೆ ಎಷ್ಟು ಬದ್ಧವಾಗಿದೆ ಅಥವಾ ಪ್ರಾಮಾಣಿಕವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇದೇ ರಾಜ್ಯಪಾಲರು ಮಾಜಿ ಮುಖ್ಯಮಂತ್ರಿಗಳ ಮೇಲೆ ಕೇಸು ಹಾಕಲು ಬೇಕಾದ ಅನುಮತಿಯನ್ನು ಹಿಂತೆಗೆಯುವ ಮೂಲಕ ಲೋಕಾಯುಕ್ತ ವ್ಯವಸ್ಥೆಯ ಪ್ರಮುಖ ಪರಿಣಾಮಕಾರಿ ಕ್ರಮದ ಒಂದು ಉದಾಹರಣೆಯನ್ನು ಹೊಸಕಿ ಹಾಕಿದ್ದರು ಎಂದು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಆದ್ದರಿಂದ ರಾಜ್ಯಪಾಲರ ಈ ಕ್ರಮ ಕಳಂಕರಹಿತರು ಲೋಕಾಯುಕ್ತರಾಗಿರಬೇಕು ಎಂಬ ಕಾಳಜಿಯಿಂದ ತೆಗೆದುಕೊಂಡದ್ದಲ್ಲ. ಒಂದು ಕಡೆ ತಾನು ಲೋಕಾಯುಕ್ತ ವ್ಯವಸ್ಥೆ ಪರ ಎಂದು ಪೋಸು ಕೊಡುತ್ತಾ, ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಯನ್ನು ಭ್ರಷ್ಟರೆಂದು ‘ಬದನಾಮ್’ ಮಾಡುತ್ತಾ, ಇನ್ನೊಂದು ಕಡೆ ಲೋಕಾಯುಕ್ತ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವುದರಲ್ಲಿ ಕಾಂಗ್ರೆಸ್ ಜತೆ ಶಾಮೀಲಾಗುವ ಬಿಜೆಪಿಯ ತಂತ್ರವನ್ನು ಜಾರಿ ಮಾಡಲು ರಾಜ್ಯಪಾಲರ ಅಧಿಕಾರವನ್ನು ಬಳಸಲಾಗಿದೆ. 2014 ಚುನಾವಣೆಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಕೇಂದ್ರದಲ್ಲಿ ಲೋಕಪಾಲ್ ವ್ಯವಸ್ಥೆ ಬಗ್ಗೆ ಎರಡು ವರ್ಷವಾದರೂ ಉಸಿರೆತ್ತಿಲ್ಲ.  ಬಿಜೆಪಿ ಸರಕಾರ ಇರುವ ಹೆಚ್ಚಿನ ರಾಜ್ಯಗಳಲ್ಲೂ ಲೋಕಾಯುಕ್ತದಂತಹ ವ್ಯವಸ್ಥೆ ಜಾರಿಗೆ ತಂದಿಲ್ಲ.

ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಆಡಳಿತ ಕೊಟ್ಟ ಬಿಜೆಪಿ ಸರಕಾರದಿಂದ ಬೇಸತ್ತ ಜನ ಆರಿಸಿದ ಕಾಂಗ್ರೆಸ್ ಸರಕಾರ ಸಹ ಲೋಕಾಯುಕ್ತ ವ್ಯವಸ್ಥೆಯನ್ನು ಗಟ್ಟಿ ಗೊಳಿಸುವ ಬದಲು ಕಿತ್ತು ಹಾಕುವ ಸರಣಿ ಕ್ರಮಗಳನ್ನು ಕೈಗೊಂಡಿದೆ. ಲೋಕಾಯುಕ್ತ ಹುದ್ದೆಗೆ ಸೂಕ್ತರಾದ ಕಳಂಕರಹಿತ ನ್ಯಾಯಮೂರ್ತಿಗಳು ಲಭ್ಯವಿಲ್ಲ ಎಂದೇನಿಲ್ಲ. ನ್ಯಾ. ನಾಯಕ್ ಅವರನ್ನು ಸೂಚಿಸಿದರೆ ರಾಜ್ಯಪಾಲರು ಅದನ್ನು ತಿರಸ್ಕರಿಸುತ್ತಾರೆ. ಈಗಾಗಲೇ ಹಲ್ಲು ಕಿತ್ತಿರುವ ಲೋಕಾಯುಕ್ತ ವ್ಯವಸ್ಥೆ ಇನ್ನಷ್ಟು ಕಾಲ ಅತಂತ್ರವಾಗಿ ಮುಂದುವರೆಯುತ್ತದೆ ಎಂಬ ಲೆಕ್ಕಾಚಾರದ ಮೇಲೆನೇ ಅವರ ನೇಮಕಕ್ಕೆ ಪಟ್ಟು ಹಿಡಿದಿದ್ದರೂ ಆಶ್ಚರ್ಯವಿಲ್ಲ. ಹೀಗೆ ಲೋಕಾಯುಕ್ತ ವ್ಯವಸ್ಥೆ ಕಾಂಗ್ರೆಸ್-ಬಿಜೆಪಿಗಳ ಸಾರ್ವಜನಿಕ ಪೋಸು ಮತ್ತು ಒಳಹುನ್ನಾರಗಳ ಆಟಕ್ಕೆ ಬಲಿಯಾಗಿದೆ. ಸೂಕ್ತ ಲೋಕಾಯುಕ್ತರನ್ನು ನೇಮಿಸುವ, ಆ ವ್ಯವಸ್ಥೆಯನ್ನು ಗಟ್ಟಿ ಗೊಳಿಸಲು ಸಾರ್ವಜನಿಕ ಒತ್ತಡ ಹೇರಬೇಕಾಗಿದೆ.

ಅದೇ ಸಮಯದಲ್ಲಿ ಮೂಲತಃ ಭ್ರಷ್ಟ ವ್ಯವಸ್ಥೆಯಾಗಿರುವ ಬಂಡವಾಳಶಾಹಿ (ಅದರಲ್ಲೂ ಈಗಿನ ನವ-ಉದಾರವಾದಿ ಹಂತದಲ್ಲಿ) ವ್ಯವಸ್ಥೆಯನ್ನು ಬದಲಾಯಿಸದೆ ಭ್ರಷ್ಟಾಚಾರವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಬಂಡವಾಳಶಾಹಿ ಆಳ್ವಿಕೆಯ ಮೂರೂ ಅಂಗಗಳನ್ನು ಆವರಿಸಿರುವ ಭ್ರಷ್ಟಾಚಾರವನ್ನು ಒಂದು ಕಳಂಕರಹಿತ ಲೋಕಾಯುಕ್ತ ತೊಡೆದು ಹಾಕಬಹುದು ಎಂಬುದು ಒಂದು ಭ್ರಮೆ ಎಂದು ತಿಳಿದುಕೊಳ್ಳಬೇಕು. ಆದ್ದರಿಂದ ಭ್ರಷ್ಟಾಚಾರವನ್ನು ನಿಗ್ರಹಿಸಲು ಹತೋಟಿಗೆ ತರಲು ಲೋಕಾಯುಕ್ತ ವ್ಯವಸ್ಥೆ ಸ್ಥಾಪಿಸಲು ಹೋರಾಟವನ್ನು, ಭ್ರಷ್ಟ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಟದ ಜತೆ ಸಮ್ಮಿಳಿತಗೊಳಿಸುವುದು ದುಡಿಯುವ ವರ್ಗದ ಚಳುವಳಿಯ ಕರ್ತವ್ಯ.

ವಾಚು ಕನ್ನಡಕಗಳ, ಆಪಾದನೆಗಳ ರಾಜಕೀಯ ಸಾಕು!

ಸಂಪುಟ: 10 ಸಂಚಿಕೆ:8 ಫೆಬ್ರವರಿ 21, 2016

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಚು, ಕನ್ನಡಕಗಳ ಮೇಲೆ ಕುಮಾರಸ್ವಾಮಿಯವರ ಕಣ್ಣು ಬಿದ್ದಿದೆ. ವಾಚು 50 ಲಕ್ಷಕ್ಕಂತಲೂ ಹೆಚ್ಚು ಬೆಲೆ ಬಾಳುತ್ತದೆ. ಕನ್ನಡಕ ಸಹ ಲಕ್ಷಾಂತರ ಬೆಲೆ ಬಾಳುವಂತಹುದು. ಇವು ಎಲ್ಲಿಂದ ಬಂದವು ಎಂದು ಅವರು ಪ್ರಶ್ನಿಸಿ ವಿವಾದ ಎಬ್ಬಿಸಿದ್ದಾರೆ. ವಾಚು ಬೇಕಾದರೆ ಕುಮಾರಸ್ವಾಮಿಯವರಿಗೆ 5 ಲಕ್ಷಕ್ಕೆÀ್ಷ ಕೊಟ್ಟು ಬಿಡುತ್ತೇನೆ. ಕುಮಾರಸ್ವಾಮಿಯವರ ಮಗನ ಕಾರು ಕೋಟಿಗಟ್ಟಲೆ ಬೆಲೆಯದ್ದು. ಅದಕ್ಕೆ ಹಣ ಎಲ್ಲಿಂದ ಬಂತು? ಅವನು ಸಂಪಾದಿಸಿದ್ದಾನಾ? ಸಿನಿಮಾ ಮಾಡಲು ಕೋಟಿಗಟ್ಟಲೆ ಖರ್ಚು ಮಾಡುತ್ತಿರುವುದು ಯಾರು? ಎಂದು ಸಿದ್ದರಾಮಮಯ್ಯ ಮರುಸವಾಲು ಹಾಕಿದ್ದಾರೆ.

ವಾಚು ಸ್ನೇಹಿತರು ಕೊಟ್ಟ ಉಡುಗೊರೆ ಎಂದೂ ಉತ್ತರಿಸಿದ್ದಾರೆ. ಕಳೆದ ವಾರದ ರಾಜಕೀಯ ಚರ್ಚೆ ಮುಖ್ಯಮಂತ್ರಿಗಳ ವಾಚು, ಕನ್ನಡಕಗಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಮಾಧ್ಯಮಗಳು ಈ ವಿವಾದವನ್ನು ಎತ್ತಿಕೊಂಡಿದ್ದು ಈ ವಾಚು, ಕನ್ನಡಕಗಳ ಬ್ರಾಂಡು ಯಾವುದು? ಅದಕ್ಕೆ ಎಷ್ಟು ಬೆಲೆ? ಅದು ಎಲ್ಲಿಂದ ಖರೀದಿಸಿರಬಹುದು? ಯಾರು ಉಡುಗೊರೆ ಕೊಟ್ಟಿರಬಹುದು? ಅವರು ಪ್ರತಿಯಾಗಿ ಏನೂ ನಿರೀಕ್ಷಿಸಿರಬಹುದು? ಉಡುಗೊರೆ ಕೊಟ್ಟಿದ್ದರೆ ಮುಖ್ಯಮಂತ್ರಿಗಳು ಯಾವ ಕಾನೂನಿನ ತೊಡಕಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ? ಎಂದೆಲ್ಲಾ ತನಿಖೆ ಚರ್ಚೆ ಆರಂಭಿಸಿವೆ.

ಕರ್ನಾಟಕದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳು ಯಾವುವು? ಜಿಲ್ಲಾ ಮತ್ತು ತಾಲೂಕು ಪಂಚಾಯತುಗಳು ಜನರ ಈ ನೂರೆಂಟು ಸಮಸ್ಯೆಗಳನ್ನು ತುರ್ತಾಗಿ ಸಮರ್ಪಕವಾಗಿ ಏಕೆ ಪರಿಹರಿಸಲು ಸಾಧ್ಯವಾಗಿಲ್ಲ? ಅವುಗಳಿಗೆ ಅಧಿಕಾರ ಮತ್ತು ಸಂಪನ್ಮೂಲಗಳ ಕೊರತೆ ಇದೆಯೆ? ಇದ್ದ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಅವು ಬಳಸಿಕೊಳ್ಳುತ್ತಿವೆಯೇ? ಅದಕಾಗಿ ಅವುಗಳಿಗೆ ಬೇಕಾದಷ್ಟು ಸಿಬ್ಬಂದಿ ಇದೆಯೇ? ಇತ್ತೀಚೆಗೆ ತಿದ್ದುಪಡಿಯಾದ ಪಂಚಾಯತ್ ಕಾನೂನು ಈ ವಿಷಯಗಳನ್ನು ಎಷ್ಟರ ಮಟ್ಟಿಗೆ ಪರಿಹರಿಸಿದೆ? ಇವು ಈ ವಾರದ ರಾಜಕೀಯ ಚರ್ಚೆಯ ಪ್ರಧಾನ ವಿಷಯಗಳಾಗಬೇಕಿತ್ತು. ಇವಲ್ಲದೆ ರಾಜ್ಯದ ಜನತೆ ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ.

ಕೇಂದ್ರ ಸರಕಾರ ಕೊಟ್ಟಿರುವ ಬರ ಪರಿಹಾರ ಪೂರ್ತಿಯಾಗಿ ಜನತೆಗೆ ತಲುಪುತ್ತಿಲ್ಲ ಎಂಬ ತೀವ್ರ ಆಪಾದನೆಗಳು ಕೇಳಿ ಬಂದಿವೆ. ರೈತರ ಆತ್ಮಹತ್ಯೆಗಳು ಮುಂದುವರೆಯುತ್ತಿವೆ. ಇನ್ನಷ್ಟು ಬೆಳೆಗಳನ್ನು ಬೆಳೆಯುವ ರೈತರು ಆತ್ಮಹತ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇವೂ ರಾಜಕೀಯ ಸಂವಾದ-ವಿವಾದಗಳ ವಿಷಯಗಳಾಗಬೇಕಿತ್ತು.

ಬದಲಾಗಿ ಮುಖ್ಯಂತ್ರಿಗಳ ವಾಚು, ಕನ್ನಡಕಗಳು ರಾಜಕೀಯ ಚರ್ಚೆಯ ಪ್ರಧಾನ ವಿಷಯವಾಗಿರುವುದು ಆಳುವ ಮತ್ತು ವಿರೋಧಿ ಪಕ್ಷಗಳ ರಾಜಕೀಯ ದೀವಾಳಿತನ ತೋರಿಸುತ್ತಿವೆ. ಮುಖ್ಯಮಂತ್ರಿಗಳು ಮತ್ತು ಇತರ ಮಂತ್ರಿಗಳು ದುಬಾರಿ ಅಲ್ಲದ ಶೋಕಿ ಇಲ್ಲದ ಸರಳ ಕಳಂಕ ರಹಿತ ಜೀವನ ಸಾಗಿಸಬೇಕು. ಅವರ ಜೀವನಶೈಲಿ, ಅವರು ಬಳಸುವ ವಸ್ತುಗಳು, ಅವನ್ನು ಖರೀದಿಸಲು ಹಣ ಎಲ್ಲಿಂದ ಬಂತು? ಇಂತಹ ಉಡುಗೊರೆಗಳನ್ನು ಕೊಟ್ಟವರು ಯಾರು? ಅವರು ಬರಿಯ ಸ್ನೇಹಕ್ಕಾಗಿಯೇ ಉಡುಗೊರೆ ಕೊಟ್ಟರೇ? – ಇವೆಲ್ಲವೂ ಸಾರ್ವಜನಿಕ ರಾಜಕೀಯ ಚರ್ಚೆಯ ವಿಷಯ ಆಗಬಾರದೆಂದೇನಿಲ್ಲ.

ಆದರೆ ಅವೇ ಪ್ರಧಾನ ಅಥವಾ ಏಕಮಾತ್ರ ವಿಷಯವಾಗುವುದು ರಾಜಕೀಯ ದೀವಾಳಿತನವನ್ನು ಪ್ರತಿನಿಧಿಸುತ್ತದೆ ಅಷ್ಟೇ. ಅಲ್ಲದೆ ಮುಖ್ಯಮಂತ್ರಿಗಳಿಗಿಂತಲೂ ಎಷ್ಟೋ ಪಟ್ಟು ಹೆಚ್ಚಿನ ದುಬಾರಿ ಶೋಕಿಯ ಜೀವನಶೈಲಿ ಹೊಂದಿರುವ ಕುಮಾರಸ್ವಾಮಿ ಇಂತಹ ಆಪಾದನೆ ಮಾಡುವುದು, ನೈಸ್ ಅಪಖ್ಯಾತಿಯ ಖೇಣಿ ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುವುದು ಇನ್ನಷ್ಟು ಹಾಸ್ಯಾಸ್ಪದವಾಗಿದೆ

ವಾಚು, ಕನ್ನಡಕ ವಿವಾದ ಮಾತ್ರವಲ್ಲ, ಈ ವಾರದ ಇತರ ರಾಜಕೀಯ ಚರ್ಚೆಗೆ ಒಳಗಾದ ಇತರ ವಿಷಯಗಳಲ್ಲೂ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಇದೇ ದೀವಾಳಿತನ ಪ್ರದರ್ಶಿಸಿವೆ. ಚುನಾವಣೆಗಳ ಸಮಯದಲ್ಲಿ ಹಿಂದೆಯೂ ಆದಂತೆ ಹಿರಿಯ ಕಾಂಗ್ರೆಸ್ ನಾಯಕರ ಸರಕಾರದ ಕಾರ್ಯ ವೈಖರಿ ಬಗ್ಗೆ ಬಹಿರಂಗ ಟೀಕೆ ರಾಜಕೀಯ ಸಂವಾದವನ್ನು ಇನ್ನಷ್ಟು ದಿಕ್ಕು ತಪ್ಪಿಸಿದೆ. ಮಾಜಿ ಮುಖ್ಯಮಂತ್ರಿ ಕೃಷ್ಣ ಸಿದ್ಧರಾಮಯ್ಯ ಮಂತ್ರಿಮಂಡಲದಲ್ಲಿ ‘ತೂಕದ ವ್ಯಕ್ತಿತ್ವದವರು ಇಲ್ಲ’ ಎನ್ನುವುದು, ಹಿರಿಯ ಕಾಂಗ್ರೆಸ್ ನಾಯಕ  ಜನಾರ್ಧನ ಪೂಜಾರಿ ‘ಸಚಿವರು ಮುಖ್ಯಮಂತ್ರಿಯ ಮಾತುಗಳನ್ನು ಕೇಳುತ್ತಿಲ್ಲ ಮತ್ತು ಕಾರ್ಯಕರ್ತರಿಗೆ ಸ್ಪಂದಿಸುತ್ತಿಲ್ಲ’ ಎಂಬ ಆಪಾದನೆಯನ್ನು ಮಾಡುವುದು ‘ಮೂಲ ಕಾಂಗ್ರೆಸಿಗರು’ ಮತ್ತು ‘ವಲಸೆ ಬಂದವರ’ ನಡುವಿನ ಘರ್ಷಣೆಯನ್ನು ಇನ್ನೊಮ್ಮೆ ಮುನ್ನೆಲೆಗೆ ತಂದಿದೆ.

ಹೆಬ್ಬಾಳದ ಮರುಚುನಾವಣೆಯ ಅಭ್ಯರ್ಥಿಯ ಆಯ್ಕೆಯಲ್ಲಿ ಜಾಫರ್ ಶರೀಫ್ ಮತ್ತು ಸಿದ್ಧರಾಮಯ್ಯ ಅವರ ನಡುವಿನ ಮುಸುಕಿನೊಳಗಿನ ಸಮರ ಇನ್ನೂ ಹಸಿಯಾಗಿದೆ.  ಕೇರಳದ ಚುನಾವಣೆಗಳ ಸಂದರ್ಭದಲ್ಲಿ ‘ಕಾಂಗ್ರೆಸಿಗರು ಮಾತ್ರ ಕಾಂಗ್ರೆಸಿಗರನ್ನು ಸೋಲಿಸಲು ಸಾಧ್ಯ’ ಎಂಬ ರಾಹುಲ್ ಗಾಂಧಿ ಅವರ ಉದ್ಧಟ ಹೇಳಿಕೆ ಸ್ವಲ್ಪ ಬದಲಾವಣೆಯೊಂದಿಗೆ (‘ಕಾಂಗ್ರೆಸಿಗರನ್ನು ಸೋಲಿಸಲು ಕಾಂಗ್ರೆಸಿಗರೇ ಸಾಕು’) ಕರ್ನಾಟಕಕ್ಕಂತೂ ಚೆನ್ನಾಗಿ ಒಪ್ಪುತ್ತದೆ!

ಕರ್ನಾಟಕದ ಪ್ರಮುಖ ವಿರೋಧ ಪಕ್ಷವಾದ ಜೆಡಿ(ಎಸ್) ಒಳಗೆ ಸಹ ಎಲ್ಲವೂ ಸರಿಯಾಗಿಲ್ಲ. ದೇವೇಗೌಡರಂತಹ ಹಿರಿಯ ನಾಯಕರು ಪ್ರಧಾನಿಯಾಗಿದ್ದವರು ತಮ್ಮದೇ ಪಕ್ಷದ ಅಲ್ಪಸಂಖ್ಯಾತ ಶಾಸಕನೊಬ್ಬನನ್ನು ‘ಮೀರ್ ಸಾದಿಕ್’ ಎಂದು ಸಾರ್ವಜನಿಕವಾಗಿ ಹೀಯಾಳಿಸುವುದರೊಂದಿಗೆ ರಾಜಕೀಯ ಸಂವಾದವನ್ನು ಇನ್ನಷ್ಟು ಕೀಳುಮಟ್ಟಕ್ಕೆ ಒಯ್ದಿದ್ದಾರೆ. ಈ ಬಗ್ಗೆ ಅಲ್ಪಸಂಖ್ಯಾತರ ಪ್ರತಿಭಟನೆಯೂ ವ್ಯಕ್ತವಾಗಿದೆ.

ಜಿಲ್ಲಾ/ತಾಲೂಕು ಪಂಚಾಯತ್ ಚುನಾವಣೆಗಳು ಮತ್ತು ಮೂರು ವಿಧಾನಸಭಾ ಮರು ಚುನಾವಣೆಗಳಲ್ಲಿ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ರಾಜಕಾರಣದ ವೈಖರಿ ಇನ್ನೊಮ್ಮೆ ಬಯಲಾಗಿದೆ. ಟಿಕೆಟ್ ಕೊಡಿಸುವುದರಲ್ಲಿ ಕುಟುಂಬ ರಾಜಕಾರಣ, ಬಣಗಳ ಒಳಜಗಳ, ಟಿಕೆಟ್ ಅಂತಿಮವಾದ ನಂತರ ಹಿಂತೆಗೆಯಲು ವಿರೋಧಿ ಅಭ್ಯರ್ಥಿಗಳಿಗೆ ಬೆದರಿಕೆ/ಓಲೈಕೆ, ಪಕ್ಷಗಳ ಗಡಿಬೇಧಗಳನ್ನು ಮೀರಿ ಜಾತಿ ಮುಂತಾದ ಹಿತಾಸಕ್ತಿಗಳಿಗಾಗಿ ಒಳ ಒಪ್ಪಂದಗಳು – ಇವೇ ಚುನಾವಣಾ ರಾಜಕಾರಣ ಎಂದು ಮೂರೂ ಪಕ್ಷಗಳು ಮತ್ತೆ ತೋರಿಸಿವೆ.

ತಮ್ಮ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಒತ್ತಿ ಹೇಳುತ್ತಿವೆ. ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ಸೀರೆ, ಹಣ, ಹೆಂಡ, ಉಡುಗೊರೆಗಳ ಹೊಳೆ ಹರಿಸುವುದರಲ್ಲೂ ಒಂದು ಪಕ್ಷ ಇನ್ನೊಂದು ಪಕ್ಷದೊಂದಿಗೆ ಸ್ಪರ್ಧೆಯಲ್ಲಿದೆ. ಜಿಲ್ಲಾ/ತಾಲೂಕು ಪಂಚಾಯತ್ ಚುನಾವಣೆಗಳಲ್ಲೂ 2-4 ಕೋಟಿ ರೂ. ಖರ್ಚು ಮಾಡದೆ ಯಾವುದೇ ಪಕ್ಷದ ಅಭ್ಯರ್ಥಿ ಗೆಲ್ಲಲಾರ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಚುನಾವಣಾ ಅಕ್ರಮಗಳು ನಡೆಯುತ್ತಿದ್ದರೂ ಕೆಲವು ನಾಮ್-ಕಾ-ವಾಸ್ತೆ ಕ್ರಮಗಳನ್ನು ಬಿಟ್ಟರೆ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಚುನಾವಣಾ ಅಕ್ರಮಗಳು, ಅವನ್ನು ತಡೆಯುವುದು ಹೇಗೆ ಎಂಬ ಬಗ್ಗೆ ರಾಜಕೀಯ ಸಂವಾದ ನಡೆಯಬೇಕಿತ್ತು.

ಮೂರು ಬೂಜ್ರ್ವಾ-ಭೂಮಾಲಕ ಆಳುವ ವರ್ಗದ ಪಕ್ಷಗಳ ಈ ಚಿಲ್ಲರೆ ರಾಜಕಾರಣವನ್ನು ಮೀರಿ, ನಿಜವಾದ ಜನರ ನಿಜವಾದ ಕಾಳಜಿಯ ವಿಷಯಗಳನ್ನು ಚುನಾವಣೆಯ (ಮತ್ತು ಇತರ) ಸಂದರ್ಭದಲ್ಲೂ ರಾಜಕೀಯ ಚರ್ಚೆಯ ಮುನ್ನೆಲೆಗೆ ತರುವುದು ಸಿಪಿಐ(ಎಂ) ಮತ್ತು ಎಡ ಪಕ್ಷಗಳ ರಾಜಕೀಯ ಜವಾಬ್ದಾರಿಯಾಗಿದೆ.

ಬಂಡವಾಳ ಹೂಡಿಕೆ ಸಮಾವೇಶ = ಭೂಕಸಿತ = ಕೈಗಾರಿಕೀಕರಣ ಇಲ್ಲದ ವಿನಾಶ

ಸಂಪುಟ 10 ಸಂಚಿಕೆ 7 ಫೆಬ್ರವರಿ 14, 2016

Invest karnataka

ಬೆಂಗಳೂರಿನಲ್ಲಿ ‘ಇನ್‍ವೆಸ್ಟ್ ಕರ್ನಾಟಕ-2016’ ಭರಾಟೆ ನಡೆದಿದೆ. ಪುನಃ ಲಕ್ಷಗಟ್ಟಲೆ ಕೋಟಿ ಕೋಟಿ ಬಂಡವಾಳ ಹೂಡಿಕೆ ಹಾಗೂ ಲಕ್ಷಾಂತರ ಉದ್ಯೋಗಗಳ ಕನಸು ಬಿತ್ತಲಾಗುತ್ತಿದೆ. ಹೂಡಿಕೆದಾರರ ಕಣ್ಣಿಗೆ ಬೆಂಗಳೂರಿನ ‘ಟ್ರಾಫಿಕ್ ಜಾಮ್’ ಬೀಳದಂತೆ ಬಸ್ಸುಗಳನ್ನು ಲಾರಿಗಳನ್ನು ನಗರದೊಳಗೆ ಬಿಡುತ್ತಿಲ್ಲ. ಪ್ರಮುಖ ರಸ್ತೆಗಳು ಚೊಕ್ಕವಾಗಿ ಕಾಣುವಂತೆ, ಪಂಚತಾರಾ ಹೊಟಲುಗಳ ಸುತ್ತ ಕಸ, ಒಳಗೆ ಜಿರಲೆಗಳು ಕಾಣದಿರುವಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಆದರೂ ಸಮಾವೇಶ ನಡೆಯುವಾಗಲೇ ಆಫ್ರಿಕನ್ ಮಹಿಳೆಯ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯ ನಡೆದರೂ ಅದು ‘ಜನಾಂಗೀಯ ದ್ವೇಷ ಕೃತ್ಯ ಅಲ್ಲ’ ಎಂದು ಗೃಹಮಂತ್ರಿಗಳು ಅಪ್ಪಣೆ ಕೊಡಿಸಿದ್ದಾರೆ.

ಹೂಡಿಕೆದಾರರು ಗಾಬರಿಯಾದರೇ ಎಂದಿರಬಹುದು. ಆದರೆ ಹೂಡಿಕೆದಾರರ ಮತ್ತು ದೌರ್ಜನ್ಯಕ್ಕೆ ಒಳಗಾದವರ ‘ವರ್ಣ’ದಿಂದಾಗಿಯೋ ಏನೋ ಅವರೂ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ‘ಬೆಂಗಳೂರು-ಕರ್ನಾಟಕ ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ಜಾಗ’ ಎಂದು ಯಾವಾಗಲೂ ಕೋಳಿಜಗಳದಲ್ಲಿ ತೊಡಗಿರುವ ಕೇಂದ್ರ/ರಾಜ್ಯ ಸರಕಾರಗಳ ಬಿಜೆಪಿ/ಕಾಂಗ್ರೆಸ್ ಮಂತ್ರಿಗಳು ಅಧಿಕಾರಿಗಳು ಸಮಾವೇಶದಲ್ಲಿ ಒಂದೇ ರಾಗದಲ್ಲಿ ಹಾಡಿದ್ದಾರೆ.

ಈ ಪತ್ರಿಕೆಯ ಕಳೆದ ಸಂಚಿಕೆಯ ಪ್ರಧಾನ ಲೇಖನದಲ್ಲಿ ಇಂತಹ ಸಮಾವೇಶ ಬಿತ್ತಿದ ಭ್ರಮೆ ಮತ್ತು ವಾಸ್ತವಗಳ ನಡುವಿನ ಅಗಾಧ ಅಂತರವನ್ನು ನಿರೂಪಿಸಲಾಗಿತ್ತು. “ಹಿಂದಿನ ಮೂರು ಜಿಮ್ ಸಮಾವೇಶಗಳಲ್ಲಿ ಅನುಮೋದನೆಯಾಗಿವೆ ಎಂದು ಘೋಷಣೆಯಾದ ಪ್ರತಿ 8 ಯೋಜನೆಗಳಲ್ಲಿ, ಕೇವಲ ಎರಡು ಘಟಕಗಳು ಅನುಷ್ಟಾನದ ಹಂತಕ್ಕೆ ಬಂದಿವೆ. ಅದರಲ್ಲಿ ಒಂದು ಘಟಕ ಮಾತ್ರ ಆರಂಭವಾಗಿದೆ. ಘೋಷಿತ ಬಂಡವಾಳದ ಕೇವಲ 10ರಲ್ಲಿ ಒಂದು ಭಾಗ ವಾಸ್ತವವಾಗಿ ಹೂಡಿಕೆಯಾಗಿದೆ. ಆದರೆ ಆರಂಭವಾಗದ ಅರ್ಧದಷ್ಟು ಘಟಕಗಳು ಸುಮಾರು ಶೇ. 70ರಷ್ಟು ಭೂಮಿಯನ್ನು ಇಟ್ಟುಕೊಂಡಿವೆ!  ಎಷ್ಟು ಉದ್ಯೋಗಗಳನ್ನು ವಾಸ್ತವವಾಗಿ ಸೃಷ್ಟಿಸಿವೆ ಎಂಬುದಕ್ಕೆ ದಾಖಲೆಗಳಿಲ್ಲ.” ಇದು ಆ ನಿರೂಪಣೆಯ ಸಾರಾಂಶವಾಗಿತ್ತು.

ಜಿಮ್ 2010ರ ಮತ್ತು ಬಳ್ಳಾರಿಯ ನಿರ್ದಿಷ್ಟ ಅನುಭವ ತೆಗೆದುಕೊಂಡರೆ, ಭರವಸೆ 1.39 ಲಕ್ಷ ಕೋಟಿ ರೂ. ಹೂಡಿಕೆ, 35 ಕೈಗಾರಿಕೆಗಳು, 79 ಸಾವಿರ ಉದ್ಯೋಗಗಳು. ಕಳೆದ ಐದು ವರ್ಷಗಳಲ್ಲಿ ವಾಸ್ತವವಾಗಿ ಬಂದಿದ್ದು 15 ಕೈಗಾರಿಕೆಗಳು, 16.4 ಸಾವಿರ ಕೋಟಿ ರೂ. ಹೂಡಿಕೆ ಮತ್ತು ಉದ್ಯೋಗಗಳು ಕೇವಲ 9,229. ಹೂಡಿಕೆ ಸಮಾವೇಶದಲ್ಲಿ ಮಾತ್ರವಲ್ಲ, ಸಾಮಾನ್ಯ (ಉನ್ನತ ಮಟ್ಟದ ಒಪ್ಪಿಗೆ ಸಮಿತಿಯ ಪರಿಶೀಲನೆ) ಪ್ರಕ್ರಿಯೆಯಲ್ಲಿ ಮತ್ತು ಸಮಾವೇಶದಲ್ಲಿ ಅನುಮೋದನೆಯಾದ ಹೂಡಿಕೆ ಯೋಜನೆಗಳನ್ನು ಒಟ್ಟಾಗಿ ತೆಗೆದುಕೊಂಡರೂ ಪರಿಸ್ಥಿತಿಯೂ ಇದೇ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಕಳೆದ 7 ವರ್ಷಗಳಲ್ಲಿ 3063 ಒಟ್ಟು ಅನುಮೋದಿತ ಯೋಜನೆಗಳಲ್ಲಿ ಕೇವಲ 323 ಆರಂಭವಾಗಿವೆ.

ಆದ್ದರಿಂದಲೋ ಏನೋ ಈ ಸಮಾವೇಶದ ನಂತರ ಎಷ್ಟು ಹೂಡಿಕೆ ಆಗಲಿದೆ, ಎಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಬಗ್ಗೆ ಸರಕಾರದ ಅಧಿಕೃತ ವಕ್ತಾರರು ಏನೂ ಹೇಳುತ್ತಿಲ್ಲ. ಇದು ಯಾರೂ ಅದನ್ನು ನಂಬುವುದಿಲ್ಲ ಅಂತ ಇರಬಹುದು ಅಥವಾ ಇನ್ನೇನಾದರೂ ಕಾರಣ ಇದೆಯೇ? ಆದರೂ 2 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಭರವಸೆ ಬಗ್ಗೆ ಅನಧಿಕೃತವಾಗಿ ಹೇಳಲಾಗುತ್ತಿದೆ. ಉದ್ಯೋಗಗಳ ಬಗ್ಗೆ ಇಂತಹ ಊಹಾಪೋಹವೂ ಇಲ್ಲ. ಈ ಬರಹ ಪ್ರಿಂಟಿಗೆ ಹೋಗುವವರೆಗೆ ಸಮಾವೇಶ ಇನ್ನು ನಡೆಯುತ್ತಿದೆ. ಅಂತಿಮ ಹೂಡಿಕೆಯ ಭರವಸೆ ಎಷ್ಟು ಎಂದು ಗೊತ್ತಾಗಿಲ್ಲ.

ಆದರೆ ಇದಕ್ಕಿಂತ ಕೇಳಬೇಕಾದ ಮುಖ್ಯ ಪ್ರಶ್ನೆ – ಈ ಸಮಾವೇಶಗಳ ನಿಜವಾದ ಉದ್ದೇಶ ಏನು? ‘ಕೈಗಾರಿಕೀಕರಣ ಅಥವಾ ವಿನಾಶ’ ಎಂಬ ವಿಶ್ವೇಶ್ವರಯ್ಯ ಅವರ ಬಹುಶ್ರುತ ಹೇಳಿಕೆಯನ್ನು ಸಮಾವೇಶದಲ್ಲಿ ನೆನಪಿಸಿಕೊಂಡು, ಪ್ರಮುಖ ಉದ್ದೇಶ ಕೈಗಾರಿಕೀಕರಣ ಅಥವಾ ಕೈಗಾರಿಕೀಕರಣದ ಮೂಲಕ ಅಭಿವೃದ್ಧಿ ಎಂದು ಸಾರಲಾಯಿತು. ಅದೇ ಉಸಿರಿನಲ್ಲಿ ‘ಭೂಮಿಯ ಲಭ್ಯತೆ ಬಗ್ಗೆ ಚಿಂತೆ ಬೇಡ. ನೀವು ಭೂಮಿ ಗುರುತಿಸಿ ಸರ್ವೇ ನಂಬರ್ ಹೇಳಿ. ಅದನ್ನು ಕೊಡಿಸುವುದು ನಮ್ಮ ಜವಾಬ್ದಾರಿ’ ಎಂದು ಹೂಡಿಕೆದಾರರಿಗೆ ಓಪನ್ ಚೆಕ್ ಕೊಡಲಾಗಿದೆ.

ಕೈಗಾರಿಕೀಕರಣ ಅವರ ಉದ್ದೇಶ ಎಂದು ಒಪ್ಪಿಕೊಂಡರೂ, ಸಮಾವೇಶದ ಹಿಂದಿರುವ “ಅಭಿವೃದ್ಧಿ = ಕೈಗಾರಿಕೀಕರಣ = ಬಂಡವಾಳ ಹೂಡಿಕೆ = ಭೂಸ್ವಾಧೀನ” ಎಂಬ ಫಾರ್ಮುಲಾ ಒಪ್ಪಿಕೊಳ್ಳುವುದು ಖಂಡಿತಾ ಕಷ್ಟ.  ಅಭಿವೃದ್ಧಿಗೆ ಕೈಗಾರಿಕೀಕರಣ ಖಂಡಿತ ಅಗತ್ಯ. ಆದರೆ ನಿಜವಾದ ಅಭಿವೃದ್ಧಿಗೆ – ಪರಿಸರ ಮಾಲಿನ್ಯ-ನಾಶ ಮಾಡದ,  ಪರಿಸರ ತಾಳಿಕೊಳ್ಳುವ, ಪ್ರಾಕೃತಿಕ ಸಂಪನ್ಮೂಲಗಳ ದಕ್ಷ ಬಳಕೆ ಮಾಡುವ, ಉದ್ಯೋಗ ಸೃಷ್ಟಿಸುವ, ಮನುಷ್ಯರ ನಿಜವಾದ ಅಗತ್ಯಗಳನ್ನು ಪೂರೈಸುವ ಸರಕು-ಸೇವೆಗಳ ಉತ್ಪಾದನೆ ಮಾಡುವ, ಈಗ ಇರುವ ಕೃಷಿ-ಕೈಗಾರಿಕೆಗಳಿಗೆ ಪೂರಕವಾಗಿರುವ – ಕೈಗಾರಿಕೀಕರಣ ಬೇಕು.

ಆದ್ದರಿಂದ ಯಾವ ರೀತಿಯ ಕೈಗಾರಿಕೆ ಬೇಕು ಎಂಬುದನ್ನು ಬಂಡವಾಳ ಹೂಡಿಕೆದಾರರ ಆಯ್ಕೆಗೆ (ಖಯಾಲಿ, ಆಸಕ್ತಿ ಅಥವಾ ಲಾಭದಾಸೆ) ಬಿಡಲು ಸಾಧ್ಯವಿಲ್ಲ. ಅದನ್ನು ಯೋಜಿತವಾಗಿ ನಿರ್ಧರಿಸಬೇಕು. ಇದೇ ರೀತಿ ಯಾವ ಕೈಗಾರಿಕೆಗೆ ಎಷ್ಟು ಭೂಮಿ ಮತ್ತು ಇತರ ಪ್ರಾಕೃತಿಕ ಸಂಪನ್ಮೂಲ ಬೇಕು, ಎಲ್ಲಿ ಎಂಬುದನ್ನೂ ಸಹ ವೈಜ್ಞಾನಿಕವಾಗಿ ಕೈಗಾರಿಕೆಯ ಸ್ವರೂಪದ ಮೇಲೆ ನಿರ್ಧರಿಸಬೇಕು. ಆಹಾರ ಉತ್ಪಾದನೆ-ಭದ್ರತೆ, ಈಗಿರುವ ಕೃಷಿ-ಕೈಗಾರಿಕೆಗಳ ರಕ್ಷಣೆ ಮುಂತಾದ ಅಭಿವೃದ್ಧಿಯ ಅಗತ್ಯಗಳ ಒಟ್ಟಾರೆ ಅಂದಾಜಿನ ಮೇಲೆ ಇದನ್ನೂ ನಿರ್ಧರಿಸಬೇಕು.

ಆದರೆ ಹಿಂದಿನ ಸಮಾವೇಶಗಳ ಮತ್ತು ಇತರ ಅನುಮೋದಿತ ಯೋಜನೆಗಳ ಒಟ್ಟು ಅನುಭವ ನೋಡಿದರೆ, ‘ಹೂಡಿಕೆದಾರ’ರ ಉದ್ದೇಶ  ಕೈಗಾರಿಕೀಕರಣವೂ ಅಲ್ಲ. ಉದ್ಯೋಗ ಸೃಷ್ಟಿಯೂ ಅಲ್ಲ. ಭೂಮಿ ಅಥವಾ ಇತರ ಸಾರ್ವಜನಿಕ ಪ್ರಾಕೃತಿಕ ಸಂಪನ್ಮೂಲಗಳನ್ನು ಬಿಟ್ಟಿಯಾಗಿ ಅಥವಾ ಮೂರು ಕಾಸಿಗೆ, ಇತರ ಹಣಕಾಸಿನ ಮತ್ತಿತರ ಸಬ್ಸಿಡಿಗಳನ್ನು ದೋಚುವುದು. ಅದನ್ನು ಕೈಗಾರಿಕೀರಣದ ಬದಲು ಕಡಿಮೆ ರಿಸ್ಕ್ ನಲ್ಲಿ ಸೂಪರ್ ಲಾಭ ಗಳಿಸುವ ಇತರ (ರೀಯಲ್ ಎಸ್ಟೇಟ್ ನಂತಹ) ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು -ಎ ಎಂಬುದು ಸ್ಪಷ್ಟವಾಗುತ್ತದೆ. ಬೇರೆ ಯಾವ ರೀತಿಯಲ್ಲಿ – “ಘೋಷಿತ ಬಂಡವಾಳದ ಕೇವಲ 10ರಲ್ಲಿ ಒಂದು ಭಾಗ ವಾಸ್ತವವಾಗಿ ಹೂಡಿಕೆಯಾಗಿದೆ. ಆದರೆ ಆರಂಭವಾಗದ ಅರ್ಧದಷ್ಟು ಘಟಕಗಳು ಸುಮಾರು ಶೇ. 70ರಷ್ಟು ಭೂಮಿಯನ್ನು ಇಟ್ಟುಕೊಂಡಿವೆ!” – ಭ್ರಮೆ-ವಾಸ್ತವಗಳ ಈ ಅಂತರವನ್ನು ಅರ್ಥ ಮಾಡಿಕೊಳ್ಳಬಹುದು? ಜಿಮ್ 2010ರಲ್ಲಿ ಬಳ್ಳಾರಿಗೆ ಕಬ್ಬಿಣ-ಉಕ್ಕು ಕೈಗಾರಿಕೆಗಳ ಹೂಡಿಕೆಯ ಘೊಷಣೆ ಅದರ ಜತೆ ದೀರ್ಘ ಗಣಿ ಲೀಸ್ ಕೊಡಲಾಗುತ್ತದೆ ಎಂಬ ನಿರೀಕ್ಷೆಯಿಂದ ಆಗಿತ್ತು.

ಕಬ್ಬಿಣ-ಉಕ್ಕು ಕಾರ್ಖಾನೆ ಸ್ಥಾಪಿಸುವುದಕ್ಕಿಂತ ಕಚ್ಚಾ ಅದಿರಿ£ ರಫ್ತು ಕಡಿಮೆ ರಿಸ್ಕಿನ ಸೂಪರ್ ಲಾಭದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಗಣಿ ಹಗರಣದಿಂದ ಇದು ಸಾಧ್ಯವಿಲ್ಲದಾದಾಗ ಈ ಹೂಡಿಕೆಗಳನ್ನು ತಡೆ ಹಿಡಿಯಲಾಯಿತು. ಸರಕಾರದ (ರಾಜಕಾರಣಿಗಳು ಅಥವಾ ಅಧಿಕಾರಿಗಳ ಸಹ) ಉದ್ದೇಶ ಸಹ ಕೈಗಾರಿಕೀಕರಣವೂ ಅಲ್ಲ. ಉದ್ಯೋಗ ಸೃಷ್ಟಿಯೂ ಅಲ್ಲ. ಭೂಮಿ ಮತ್ತು ಇತರ ಪ್ರಾಕೃತಿಕ ಸಂಪನ್ಮೂಲಗಳ ಲೂಟಿಯಲ್ಲಿ ಹೂಡಿಕೆದಾರರ ಜತೆ ಶಾಮೀಲಾಗಿ ಅದರಲ್ಲಿ ಈಗಾಗಲೇ ಪಾಲುದಾರರಾಗಿರುವುದು ಅಥವಾ ಮುಂದೆ ಪಾಲುದಾರರಾಗಲು ಸಿದ್ಧತೆ ಮಾಡುವುದು.

ಇದರರ್ಥ ಕೈಗಾರಿಕೀಕರಣ ಬೇಡವೆಂದೇ? ಖಂಡಿತ ಅಲ್ಲ. ಕೈಗಾರಿಕೀಕರಣ ದೀರ್ಘವಾದ ಸಂಕೀರ್ಣ ಪ್ರಕ್ರಿಯೆ.  ಬಂಡವಾಳ, ಪ್ರಾಕೃತಿಕ ಸಂಪನ್ಮೂಲಗಳ ಜತೆಗೆ ಅಗತ್ಯ ವಸ್ತುಗಳ ಉತ್ಪಾದನೆಗೆ ಶ್ರಮದ ಕೌಶಲ್ಯ, ಸೃಜನಶೀಲತೆ, ವಿಜ್ಞಾನ-ತಂತ್ರಜ್ಞಾನಗಳನ್ನು ಬೆಳೆಸುವ; ಅವನ್ನು ಶಿಕ್ಷಣ, ಸಮಾಜದ ಇತರ ಬೆಳವಣಿಗೆಗಳ ಜತೆಗೆ ತಳುಕು ಹಾಕುವ; – ದೀರ್ಘವಾದ ಸಂಕೀರ್ಣ ಪ್ರಕ್ರಿಯೆ.  ಕರ್ನಾಟಕಕ್ಕೆ ಭಾರತಕ್ಕೆ ಇದು ಗೊತ್ತಿಲ್ಲದ್ದೂ ಅಲ್ಲ. ಹೊಸದೂ ಅಲ್ಲ. ಮೈಸೂರು ಪ್ರಾಂತ್ಯದ ‘ವಿಶ್ವೇಶ್ವರಯ್ಯ ಮಾದರಿ’, ಸ್ವಾತಂತ್ರ್ಯ ನಂತರದ ‘ನೆಹರೂ ಮಾದರಿ’, ಈ ಎರಡು ಮಾದರಿಗಳ ಫಲವಾಗಿ 1980ರ ದಶಕದ ಸಣ್ಣ-ಮಧ್ಯಮ ಕೈಗಾರಿಕೆಗಳ ಬೆಳವಣಿಗೆ, 1990ರ ದಶಕದ ಐಟಿ ಕ್ಷೇತ್ರದ ಬೆಳವಣಿಗೆಯ ಅನುಭವ ನಮ್ಮ ಮುಂದಿದೆ. ಇವೆಲ್ಲವೂ ಪೂರ್ಣ ಸಕಾರಾತ್ಮಕ ಅನುಭವಗಳಲ್ಲ. ಅವುಗಳ ಸಫಲತೆ ಮತ್ತು ವೈಫಲ್ಯಗಳಿಂದಲೂ ಪಾಠ ಕಲಿತು ಈಗಿನ ಸನ್ನಿವೇಶಕ್ಕೆ ಹೊಂದುವ ಕೈಗಾರಿಕೀಕರಣದ ನೀತಿ ರೂಪಿಸಬೇಕಿದೆ.

ಸಾರ್ವಜನಿಕ ಸಂಪನ್ಮೂಲಗಳಿಂದ ಸಾರ್ವಜನಿಕ ಒಡೆತನದಲ್ಲಿ ಮೂಲ ಸೌಕರ್ಯಗಳನ್ನು ಸೃಷ್ಟಿಸುವುದು, ಸಾರ್ವಜನಿಕ ಕ್ಷೇತ್ರದಲ್ಲಿ ವಿಜ್ಞಾನ-ತಂತ್ರಜ್ಞಾನದ ಶಿಕ್ಷಣ-ಸಂಶೋಧನೆ, ಆಯಕಟ್ಟಿನ ಕ್ಷೇತ್ರಗಳಲ್ಲಿ ಸಾರ್ವಜನಿಕ ಒಡೆತನದ ಕೈಗಾರಿಕೆಗಳ ಸ್ಥಾಪನೆ, ರಾಜ್ಯ ಸರಕಾರದ ಒಡೆತನದ ಉದ್ಯಮಗಳ ಪುನರುಜ್ಜೀವನ, ಸಣ್ಣ-ಮಧ್ಯಮ ಉದ್ಯಮಗಳಿಗೆ ಉತ್ತೇಜನ (ಸಮಾವೇಶದಲ್ಲಿ ಸರಕಾರದ ಬಗ್ಗೆ ಸಣ್ಣ-ಮಧ್ಯಮ ಉದ್ಯಮಿಗಳು ಗರಂ ಆಗಿದ್ದರು ಎಂದು ವರದಿಯಾಗಿದೆ), ನಿಜವಾದ ‘ಮೇಡ್-ಇನ್-ಇಂಡಿಯಾ’ ಅಥವಾ ‘ಮೇಡ್-ಇನ್-ಕರ್ನಾಟಕ’ಕ್ಕೆ ಉತ್ತೇಜನ – ಇಂತಹ ನೀತಿಯ ಆವಶ್ಯಕ ಅಂಶಗಳು.   ‘ಇನ್‍ವೆಸ್ಟ್ ಕರ್ನಾಟಕ-2016’ದಂತಹÀ ಸಮಾವೇಶಗಳಿಂದಂತೂ ನಿಜವಾದ ಕೈಗಾರಿಕೀಕರಣ ಸಾಧ್ಯವಿಲ್ಲ. ಇಂತಹ ಸಮಾವೇಶಗಳು ಸಾಧಿಸುವುದು ‘ಕೈಗಾರಿಕೀಕರಣ ಇಲ್ಲದ ವಿನಾಶ’ವನ್ನು. ಈ ಸಮಾವೇಶಗಳ ನಿಜವಾದ ಫಾರ್ಮುಲಾ ಹೀಗಿದೆ:

ಬಂಡವಾಳ ಹೂಡಿಕೆದಾರರ ಸಮಾವೇಶ = ಭೂಕಸಿತ = ಕೈಗಾರಿಕೀಕರಣ ಇಲ್ಲದ ವಿನಾಶ.

ಪಂಚಾಯತ್ ಚುನಾವಣೆಗಳಲ್ಲಿ ಎಡಪಕ್ಷಗಳನ್ನು ಗೆಲ್ಲಿಸಿ!

ಸಂಪುಟ 10, ಸಂಚಿಕೆ 6 ಫೆಬ್ರವರಿ 07, 2016 – ಸಂಪಾದಕೀಯ

ಫೆಬ್ರವರಿ 13 ಮತ್ತು 20ರಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕ ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದೆ. ಸ್ವಾತಂತ್ರ್ಯಾ ನಂತರ ಬಹಳ ವರ್ಷಗಳ ಕಾಲ ಕೇಂದ್ರ ಸರಕಾರದ ಮತ್ತು ಒಂದು ಮಿತಿಯೊಳಗೆ ರಾಜ್ಯ ಸರ್ಕಾರಗಳಲ್ಲೇ ಅಧಿಕಾರ ಮತ್ತು ಸಂಪನ್ಮೂಲಗಳು ಕೇಂದ್ರೀಕೃತಗೊಂಡಿತ್ತು. ಆದ್ದರಿಂದ ಗ್ರಾಮೀಣಾಭಿವೃದ್ದಿಯಲ್ಲಿ ಜನಗಳು ನೈಜವಾದ ಪಾತ್ರವಹಿಸಲಾಗದೇ ಗ್ರಾಮೀಣಾಭಿವೃಧ್ದಿಗೆ ತೊಡಕಾಗಿತ್ತು. ದೇಶದಾದ್ಯಂತ ಬೆಳೆದು ಬಂದ ಹೋರಾಟದ ಮೇರೆಗೆ ಸಂವಿಧಾನಕ್ಕೆ ತಿದ್ದುಪಡಿ ತಂದ ನಂತರ ಕರ್ನಾಟಕ ರಾಜ್ಯ 1983 ಮತ್ತು ನಂತರ 1993ರಲ್ಲಿ ಗ್ರಾಮೀಣಾಭಿವೃದ್ದಿಯಲ್ಲಿ ಇನ್ನಷ್ಟು ಹೆಚ್ಚು ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕೆಂಬ ಉದ್ದೇಶದಿಂದ ಮೂರು ಹಂತಗಳ ಜಿಲ್ಲಾ ಮತ್ತು ತಾಲೂಕಾ/ ಗ್ರಾಮ ಪಂಚಾಯತ್‍ಗಳನ್ನು ರಚಿಸಿತು. ಇತ್ತೀಚೆಗೆ ಈ ಕಾನೂನಿನಲ್ಲಿ ಇನ್ನಷ್ಟು ಬದಲಾವಣೆಗಳನ್ನು ತರಲಾಗಿದೆ.

ಆದರೆ ಪಂಚಾಯತುಗಳು ವಾಸ್ತವದಲ್ಲಿ ಗ್ರಾಮೀಣ ಪ್ರದೇಶದಭಿವೃಧ್ದಿಗೆ ಪೂರಕವಾದ ನೀತಿ ನಿರೂಪಣೆ ಮಾಡುವುದಾಗಲೀ ಮತ್ತು ಇರುವ ಅಲ್ಪ ಅಧಿಕಾರವನ್ನು ಚಲಾಯಿಸಲು ಅಗತ್ಯ ಸಂಪನ್ಮೂಲಗಳನ್ನಾಗಲೀ ಹೊಂದಿರಲಿಲ್ಲ. ಈಗಲೂ ಗ್ರಾಮೀಣ ಅಭಿವೃದ್ದಿಗೆ ಒಳಗೊಳ್ಳಬಹುದಾದ ಬಹುತೇಕ ಅಧಿಕಾರಗಳನ್ನು ಮತ್ತು ಸಂಪನ್ಮೂಲಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಹೊಂದಿವೆ. ಹೀಗಾಗಿ ಜಿಲ್ಲಾ ಹಾಗೂ ತಾಲೂಕ ಪಂಚಾಯತ್‍ಗಳು ಗ್ರಾಮೀಣಾಭಿವೃದ್ದಿಯಲ್ಲಿ ನಾಮಕಾ-ವಾಸ್ತೆ ಪಾತ್ರ ವಹಿಸುವಂತಾಗಿದೆ.  ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀತಿ ನಿರೂಪಿಸಿ ಅವುಗಳನ್ನು ಇಲಾಖೆಗಳ ಮೂಲಕ ಜಾರಿಮಾಡುವ ಕಾರ್ಯತಂತ್ರ ಹಾಗೂ ಸಂಪನ್ಮೂಲಗಳನ್ನು ನಿಗದಿ ಪಡಿಸುತ್ತವೆ. ಆ ಮಿತಿಯೊಳಗೆ ಜಿಲ್ಲಾ ಹಾಗೂ ತಾಲೂಕ ಪಂಚಾಯತ್‍ಗಳು ತಮ್ಮ ವ್ಯಾಪ್ತಿಯಲ್ಲಿ ಜಾರಿ ಮಾಡುವ ಕಾರ್ಯ ಭಾರವನ್ನಷ್ಠೇ ಮಾಡುವಂತಹವುಗಳಾಗಿವೆ.

ಶಿಕ್ಷಣ, ನೈರ್ಮಲ್ಯ ಹಾಗೂ ಆರೋಗ್ಯ ಕಾಪಾಡುವ, ಉತ್ತಮ ಕುಡಿಯುವ ನೀರು ಒದಗಿಸುವ, ಪಶು ಸಂಗೋಪನೆ, ಕೃಷಿ ಉತ್ಪಾದನೆಗಳ ಹೆಚ್ಚಳ ಹಾಗೂ ಭೂ ಸಾರ ಸಂರಕ್ಷಣೆ, ಗುಡಿ ಕೈಗಾರಿಕೆ, ಕೈಗಾರಿಕೆ ಮತ್ತು ಅರಣ್ಯ ಬೆಳವಣಿಗೆ, ರಸ್ತೆ ಮತ್ತು ಅಂತರ್ಜಲದ ಅಭಿವೃದ್ದಿ ಮುಂತಾದ ಹೊಣೆಗಾರಿಕೆಗಳನ್ನು ನೀಡಲಾಗಿದೆಯಾಗಿದೆ. ಆದರೆ ಈಗಲೂ, ಇವುಗಳಿಗೂ ಕೂಡ ಅಗತ್ಯ ಸಂಪನ್ಮೂಲ ದೊರೆಯುತ್ತಿಲ್ಲ. ಇರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಲಾಗುತ್ತಿಲ್ಲ. ಆದ್ದರಿಂದಲೇ ಕಳೆದ 22 ವರ್ಷಗಳಲ್ಲಿ ಕನಿಷ್ಠ ಬೆಳವಣಿಗೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕಾಣಲಾಗುತ್ತಿಲ್ಲ. ಇರುವ ಬಹುತೇಕ ಅಭಿವೃಧ್ಧಿ ಕಾರ್ಯಕ್ರಮಗಳು ಪೇಪರ್‍ಗಳಲ್ಲಿ ಮಾತ್ರವೇ ಆಗುತ್ತಿರುವುದು ಮತ್ತು ಸಂಪನ್ಮೂಲಗಳೆಲ್ಲಾ ಬಹುತೇಕ ಗುಳುಂ ಆಗುತ್ತಿರುವುದು ಗುಟ್ಟಾದ ವಿಚಾರವಾಗಿಯೇನು ಉಳಿದಿಲ್ಲ. ಆದ್ದರಿಂದ ಗ್ರಾಮೀಣ ಪ್ರದೇಶಗಳು ಕುಡಿಯುವ ಶುದ್ಧ ನೀರಿನ ಕೊರತೆ, ತೀವ್ರ ಕೃಷಿಯ ಬಿಕ್ಕಟ್ಟು, ನೈರ್ಮಲ್ಯದ ಅಭಾವ, ಸಾಂಕ್ರಾಮಿಕ ರೋಗಗಳು,  ಪರಿಸರ ಮಾಲಿನ್ಯ ಮುಂತಾದ ಸಮಸ್ಯೆಗಳ ಗೂಡಾಗಿ ಹೋಗಿವೆ.

ಇದ್ದ ಬದ್ದ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಗ್ರಾಮಪಂಚಾಯತ್‍ಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಅಲ್ಲಿ ಪಂಚಾಯತ್‍ಗಳಲ್ಲಿ ಕಾರ್ಯ ನಿರ್ವಹಿಸುವ ಚುನಾಯಿತ ಪ್ರತಿನಿಧಿಗಳಿಗಾಗಲೀ ಮತ್ತು ಅಲ್ಲಿ ಸೇವೆಯಲ್ಲಿ ತೊಡಗಿದ ಬಹುತೇಕ ಸಿಬ್ಬಂದಿಗಾಗಲೀ ಕನಿಷ್ಟ ವೇತನವೂ ಇಲ್ಲಾ! ಕೊನೆಯ ಪಕ್ಷ ಇವುಗಳಿಗೆ ಬೀದಿ ದೀಪಗಳ ಬಿಲ್ ಗಳನ್ನು ಪಾವತಿಸಲಾಗುತ್ತಿಲ್ಲ. ಹೆಚ್ಚಿನ ಅಧಿಕಾರ ದೂರದ ಮಾತಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೂರು ಹಂತದ ಪಂಚಾಯತುಗಳಿಗೆ ಅಧಿಕಾರ ಮತ್ತು ಸಂಪನ್ಮೂಲ ವಿಕೇಂದ್ರೀಕರಣಕ್ಕೆ ಗಮನಹರಿಸಿ ಗ್ರಾಮೀಣಾಭಿವೃದ್ದಿಗೆ ಪೂರಕವಾಗುವ ನೀತಿಗಳನ್ನು ಜಾರಿಗೆ ತರುವ ಬದಲು ವ್ಯತಿರಿಕ್ತ ನಡೆಯನ್ನು ಅನುಸರಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಾಗತೀಕರಣದ ನೀತಿಗಳಿಂದ ಮತ್ತು ಜಿಲ್ಲ್ಲಾ/ತಾಲೂಕಾ/ಗ್ರಾಮ ಪಂಚಾಯತ್‍ಗಳ ಸೀಮಿತ ಸಂಪನ್ಮೂಲಗಳ ಲೂಟಿಯಿಂದ ಗ್ರಾಮೀಣ ಪ್ರದೇಶ ತೀವ್ರ ಬಿಕ್ಕಟ್ಟಿನಿಂದ ಬಳಲುತ್ತಿದೆ.

ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕೊಬ್ಬಿದ ಕೈಬೆರಳೆಣಿಕೆಯ ಸಣ್ಣ ಸಂಖ್ಯೆಯ ಶ್ರೀಮಂತ ವಿಭಾಗವೊಂದು ಬಲವಾಗಿ ಬೇರೂರಿರುವಾಗಲೇ ಶೇ 95ರಷ್ಟು ಗ್ರಾಮೀಣ ಜನತೆ ದಿವಾಳಿಯಾಗಿದೆ. ಈ ಸಣ್ಣ ಸಂಖ್ಯೆಯ ಶ್ರೀಮಂತ ವಿಭಾಗ ಗ್ರಾಮೀಣ ಪ್ರಧೇಶದ ಸರ್ವಾಧಿಕಾರಿಯಾಗಿ ಜನಗಳ ಮೇಲೆ ದೌರ್ಜನ್ಯವನ್ನು ಹರಿಬಿಟ್ಟಿರುವುದಲ್ಲದೇ ದೇಶದ ಐಕ್ಯತೆಗೆ ಧಕ್ಕೆ ತರುವ ಜನತೆಯನ್ನು ಒಡೆದಾಳಲು ಮತ್ತು ತಮ್ಮ ಅಧಿಕಾರವನ್ನು ನಿರಂತರವಾಗಿ ಮುನ್ನಡೆಸಲು ಜಾತಿವಾದ ಮತ್ತು ಕೋಮುವಾದಕ್ಕೆ ಕುಮ್ಮಕ್ಕು ನೀಡುತ್ತಿದೆ. ಗ್ರಾಮೀಣ ಶ್ರೀಮಂತರ (ಭೂಮಾಲಕ, ಲೇವಾದೇವಿಗಾರರ, ಕಂಟ್ರಾಕ್ಟರುಗಳ) ದುಷ್ಟ ಕೂಟವೇ ಅವರನ್ನು ಪ್ರತಿನಿಧಿಸುವ ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್) ನಂತಹ ಬೂಜ್ರ್ವಾ-ಭೂಮಾಲಕ ಪಕ್ಷಗಳ ಮೂಲಕ ಪಂಚಾಯತುಗಳ ಮೂರು ಹಂತಗಳಲ್ಲಿಯೂ ಅಧಿಕಾರ ನಡೆಸುತ್ತಿವೆ.

ಆದ್ದರಿಂದ ಇಂತಹ ವಾತಾವರಣವನ್ನು ಪ್ರಶ್ನಿಸುವ ಯಾವುದೇ ಕೆಲಸವನ್ನು ಕೂಡಾ ಜಿಲ್ಲಾ/ತಾಲೂಕ ಪಂಚಾಯ್ತಿಗಳು ಮಾಡುತ್ತಿಲ್ಲ. ಅಲ್ಲಿನ ಬಹುತೇಕ ಸದಸ್ಯರಿಗೆ ಸಮಸ್ಯೆಗಳ ಪರಿಹಾರಕ್ಕಿಂತ, ಅವರ ವೈಯ್ಯಕ್ತಿಕ ಆದಾಯವೇ ಮುಖ್ಯವಾಗುತ್ತಿದೆ. ಹೀಗಾಗಿ, ಈ ಚುನಾವಣೆಯಲ್ಲಿಯೂ ಕೂಡಾ ಬಹುತೇಕರು ಜನತೆಯ ನೈಜ ಸಮಸ್ಯೆಗಳನ್ನು ಮತ್ತು ಅಧಿಕಾರ ಹಾಗೂ ಸಂಪನ್ಮೂಲಗಳ ವಿಕೇಂದ್ರೀಕರಣದ ಪ್ರಶ್ನೆಗಳನ್ನು ಮುಂದು ಮಾಡಿ ಚುನಾವಣೆಯಲ್ಲಿ ತೊಡಗುತ್ತಿಲ್ಲ. ಬದಲಾಗಿ, ಮತದಾರರನ್ನು ಅವುಗಳಿಂದ ದಾರಿತಪ್ಪಿಸಿ ಜಾತಿ, ಧರ್ಮ ಮತ್ತು ಹಣ ಹೆಂಡದ ಹಾಗೂ ತೋಳ್ಬಲದ ಆಧಾರದಲ್ಲಿ ಮತದಾನವನ್ನು ನಡೆಸಲು ಮುಂದಾಗುತ್ತಿದ್ದಾರೆ. ಹೀಗಾಗಿ ಮತದಾರರು ಗ್ರಾಮೀಣಾಭಿವೃಧ್ದಿಯ ಈ ಅಧೋಗತಿಯನ್ನು ಗಮನಿಸಿ, ಇದುವರೆಗೆ ಕೇಂದ್ರ ಹಾಗೂ ರಾಜ್ಯ ಮತ್ತು ಜಿಲ್ಲಾ/ ತಾಲೂಕಾ ಪಂಚಾಯತ್‍ಗಳಲ್ಲಿ ಅಧಿಕಾರದಲ್ಲಿ ತೊಡಗಿರುವ ಮುಖ್ಯವಾಗಿ ಗ್ರಾಮೀಣ ಪ್ರದೇಶದ ನೈಜ ಅಭಿವೃಧ್ಧಿಯ ವಿರೋಧಿಯಾಗಿರುವ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ನೀತಿಗಳ ಮೂಲಕ ಈ ಪರಿಸ್ಥಿತಿಗೆ ಕಾರಣವಾಗಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸುವ ಅಗತ್ಯ ಇದೆ.

ಗ್ರಾಮೀಣ ಸಮಸ್ಯೆಗಳ ಪರಿಹಾರ ಆಗಬೇಕಾದರೆ, ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಅಧಿಕಾರ ಮತ್ತು ಸಂಪನ್ಮೂಲಗಳ ನೈಜ ವಿಕೇಂದ್ರೀಕರಣ ಆಗಬೇಕಾಗಿದೆ.  ಇದಕ್ಕೆ ಬದಲಿ ನೀತಿಗಳ ಬದಲಿ ರಾಜಕೀಯ ಶಕ್ತಿಗಳನ್ನು ಬಲಪಡಿಸುವ ಅಗತ್ಯ ಇದೆ. ಒಂದು ಸೀಮಿತ ರಾಜ್ಯಗಳ ಅಧಿಕಾರ ಮತ್ತು ಸಂಪನ್ಮೂಲಗಳಲ್ಲೂ ಹೆಚ್ಚಿನ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಗ್ರಾಮೀಣಾಭಿವೃಧ್ದಿಗೆ ಪಂಚಾಯತ್ ಸಂಸ್ಥೆಗಳ ಮೂಲಕ ಮಾದರಿ ಕೆಲಸ ನಿರ್ವಹಿಸಿದ ಎಡ ಪಕ್ಷಗಳು ಮಾತ್ರ ಇದನ್ನು ಮಾಡಲು ಸಾಧ್ಯ. ಕೇರಳ, ಪ.ಬಂಗಾಳ ಮತ್ತು ತ್ರಿಪುರಾಗಳಲ್ಲಿ ಎಡಪಕ್ಷಗಳು ಈಗಾಗಲೇ ಇದನ್ನು ಸಾಧಿಸಿ ತೋರಿಸಿವೆ. ದೇಶದಾದ್ಯಂತ ಇಂತಹ ಅಧಿಕಾರ ವಿಕೇಂದ್ರೀಕರಣಕ್ಕಾಗಿ ಮತ್ತು ಎಲ್ಲಾ ದುಡಿಯುವ ಜನರ ಹಿತರಕ್ಷಣೆಗಾಗಿ ಎಡಪಕ್ಷಗಳು ನಿರಂತರ ಹೋರಾಟದಲ್ಲಿ ತೊಡಗಿವೆ. ಕರ್ನಾಟಕದಲ್ಲೂ ಅಧಿಕಾರ ವಿಕೇಂದ್ರೀಕರಣಕ್ಕಾಗಿ ಹಾಗೂ ಸಂಪನ್ಮೂಲಗಳ ಲೂಟಿಯನ್ನು ಪರಿಣಾಮಕಾರಿಯಾಗಿ ತಡೆಯಲು ಚಳುವಳಿಯಲ್ಲಿ ಎಡಪಕ್ಷಗಳು ಸಕ್ರಿಯವಾಗಿವೆ. ಆದ್ದರಿಂದ ಎಡ ಪಕ್ಷಗಳಾದ ಸಿಪಿಐ, ಸಿಪಿಐ(ಎಂ), ಎಸ್.ಯು.ಸಿ.ಐ., ಸಿಪಿಐ(ಎಂ.ಎಲ್.), ಫಾರ್ವರ್ಡ್ ಬ್ಲಾಕ್ ಅರ್ಭರ್ಥಿಗಳನ್ನು ಅವರು ಸ್ಪರ್ಧಿಸಿದ ಕಡೆ ಗೆಲ್ಲಿಸಬೇಕಾಗಿದೆ. ಉಳಿದೆಡೆ ಜಾತ್ಯತೀತ ಪ್ರಗತಿಪರ ಅಭ್ಯರ್ಥಿಗಳಿಗೆ ಮತನೀಡಿ ಗೆಲ್ಲಿಸಬೇಕಾಗಿದೆ. ಬಿಜೆಪಿ, ಕಾಂಗ್ರೆಸ್‍ಗಳನ್ನು ನಿರ್ಣಾಯಕವಾಗಿ ಸೋಲಿಸಬೇಕಾಗಿದೆ.

108 ನೌಕರರ ಮೇಲೆ ‘ಎಸ್ಮಾ’ ಬೆದರಿಕೆ ನಿಲ್ಲಿಸಿ!

ಸಂಪುಟ 10 ಸಂಚಿಕೆ 5 ಜನವರಿ 31, 2016 

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿರುವ ‘108’ ಅಂಬೂಲೆನ್ಸ್ ಸಿಬ್ಬಂದಿಗಳ ವಿರುದ್ದ ‘ಎಸ್ಮಾ’ ಜಾರಿಗೊಳಿಸುವ ಬೆದರಿಕೆಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಬೆದರಿಕೆ ಹಾಕಿದ್ದಾರೆ. ಈ ನೌಕರ ವಿರೋಧಿ ಕಾಯ್ದೆಯು ರಾಜ್ಯದಲ್ಲಿ ಸುಮಾರು 10 ವರ್ಷಗಳ ಕಾಲ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. 2008 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಇದನ್ನು ಕಾರ್ಮಿಕ ಹಾಗೂ ನೌಕರ ವರ್ಗದ ವಿರೋಧದ ನಡುವೆಯೂ ವಿಧಾನ ಮಂಡಲದಲ್ಲಿ ಅಂಗೀಕರಿಸಿ ರಾಷ್ಟ್ರಪತಿ ಒಪ್ಪಿಗೆಗೆ ಕಳಿಸಿತ್ತು. ಆದರೆ ಬಿಜೆಪಿಯೊಳಗೆ ಭುಗಿಲೆದ್ದ ಅಧಿಕಾರದ ಕಚ್ಚಾಟ ಮತ್ತು ಆಂತರಿಕ ಒಳಜಗಳದಿಂದಾಗಿಯೇ ಕೊನೆಗೆ ಅಧಿಕಾರದ ಅವಧಿಯೇ ಕೊನೆಗೊಂಡು ವಿಧಾನಸಭೆ ವಿಸರ್ಜನೆಯಾಯಿತು. ಇದರಿಂದ ಸಹಜವಾಗಿಯೇ ರಾಷ್ಟ್ರಪತಿಗೆ ಕಳಿಸಲಾದ ಆ ಮಸೂದೆ ತನ್ನ ಅಸ್ತಿತ್ವ ಕಳೆದುಕೊಂಡಿತ್ತು.

ಆದರೆ ಬಿಜೆಪಿ ದುರಾಡಳಿತದ ಲಾಭಪಡೆದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಂಡವಾಳಿಗರು ಹಾಗೂ ಉದ್ಯಮಪತಿಗಳನ್ನು ಒಲೈಸಲು ಮತ್ತೆ ‘ಎಸ್ಮಾ’ ಕಾನೂನನ್ನು ಜಾರಿಗೊಳಿಸಿತು. ಈ ಸಂದರ್ಭದಲ್ಲಿ ಸಿಐಟಿಯು ವಿಶೇಷವಾಗಿ ಎಸ್. ಪ್ರಸನ್ನಕುಮಾರ್ ಅವರ ಮುತುವರ್ಜಿಯಿಂದ ಎಲ್ಲಾ ಕೇಂದ್ರ ಕಾರ್ಮಿಕ ಸಂಘಗಳು ಹಾಗೂ ನೌಕರರ ಸಂಘಗಳನ್ನು ಒಂದೆಡೆ ಸೇರಿಸಿ ದುಂಡು ಮೇಜಿನ ಸಭೆಯನ್ನು ನಡೆಸಿ ಈ ಕರಾಳ ಮಸೂದೆಯ ವಿರುದ್ದ ಪ್ರಬಲ ವಿರೋಧ ವ್ಯಕ್ತಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಕಾರ್ಮಿಕ ಸಂಘಗಳು ಮತ್ತು ನೌಕರರ ವರ್ಗ ಒಟ್ಟಾರೆಯಾಗಿ ಹೇಳಿದ್ದೇನೆಂದರೆ ‘ರಾಜ್ಯದಲ್ಲಿ ಈ ಹಿಂದೆ ಹತ್ತು ವರ್ಷಗಳ ಕಾಲ ‘ಎಸ್ಮಾ’ ಕಾನೂನು ಜಾರಿ ಇಲ್ಲದಿದ್ದಾಗ್ಯೂ ಆ ಅವಧಿಯಲ್ಲಿ ನಡೆದ ಸಾರಿಗೆ, ಆರೋಗ್ಯ ಹಾಗೂ ಇತರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿಯೂ ಕಾರ್ಮಿಕರು ಮತ್ತು ನೌಕರರು ನಡೆಸಲಾದ ಮುಷ್ಕರಗಳು ದ್ವಿಪಕ್ಷೀಯ ಹಾಗೂ ತ್ರಿಪಕ್ಷೀಯ ಸಂಧಾನಗಳ ಮೂಲಕ ಯಶಸ್ವಿಯಾಗಿ ಇತ್ಯರ್ಥಗೊಂಡಿವೆ. ಇಂತಹ ಸನ್ನಿವೇಶದಲ್ಲಿ ಯಾವುದೇ ಅಹಿತಕರ ಘಟನೆಗಳಿಗೂ ಆಸ್ಪದವಾಗಿಲ್ಲ. ಹೀಗಿರುವಾಗ ಈ ‘ಎಸ್ಮಾ’ ಕಾನೂನಿನ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದವು. ಅಂದಿನ ಆ ಸಭೆಯಲ್ಲಿ ಸಿಐಟಿಯು ರಾಜ್ಯ ಅಧ್ಯಕ್ಷರಾದ ವಿಜೆಕೆ ನಾಯರ್ ಮಾತನಾಡಿ ಸಾಧ್ಯವಾದರೆ ಈ ಮಸೂದೆ ಜಾರಿಯ ವಿರುದ್ದ ಇಡೀ ಕರ್ನಾಟಕವನ್ನೇ ಬಂದ್ ಮಾಡಿದರೂ ತಪ್ಪಿಲ್ಲ ಎನ್ನುವ ಅವರ ಹೇಳಿಕೆಯಿಂದ ಈ ಕಾನೂನು ಎಂತಹ ಭೀಕರತೆಯಿಂದ ಕೂಡಿದ್ದು ಎನ್ನುವುದು ಅರಿವಾಗುತ್ತದೆ. ಆದರೆ ಅದನ್ನು ಸರಕಾರ ಕಿವಿಗೆ ಹಾಕಿಕೊಳ್ಳದೇ ಅದಕ್ಕೆ ರಾಷ್ಟ್ರಪತಿ ಒಪ್ಪಿಗೆಯನ್ನು ತನ್ನ ಕಾರ್ಮಿಕ ವಿರೋಧಿತನವನ್ನು ಪ್ರದರ್ಶಿಸಿತು.

ಕಳೆದ ಹತ್ತಾರು ವರ್ಷಗಳಿಂದಲೂ ಬಂಡವಾಳಗರನ್ನು ಆಕರ್ಷಿಸಲು ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಗಳು ಹಲವು ಕಸರತ್ತುಗಳನ್ನು ನಡೆಸುತ್ತಿವೆ. ಆದರೆ ಬಂಡವಾಳ ಹರಿದು ಬಂದಿದ್ದು ಅಷ್ಟಕಷ್ಟೇ. ಇದೀಗ ಮತ್ತೆ ಕಾಂಗ್ರೆಸ್ ಸರಕಾರ ರಾಜ್ಯಕ್ಕೆ ವಿದೇಶಿ ಬಂಡವಾಳ ಆಕರ್ಷಿಸುವ ಸಲುವಾಗಿ ಬಂಡವಾಳಿಗರ ಸಮಾವೇಶ ನಡೆಸಲು ಮುಂದಾಗಿದೆ. ಬಂಡವಾಳಿಗರ ಹೂಡಿಕೆಗೆ ಉತ್ತಮವಾದ ವಾತವರಣವಿದೆ ಎಂದು ಬಿಂಬಿಸುವ ಸಲುವಾಗಿ ಕಾರ್ಮಿಕ ಕಾನೂನುಗಳನ್ನು ಸುಧಾರಣೆಯ ಹೆಸರಲ್ಲಿ ಉದ್ಯಮಪತಿಗಳ ಪರವಾಗಿ ತಿದ್ದುಪಡಿ ಮಾಡಲು ಮುಂದಾಗಿದೆ. ಸಾಲದೆಂಬಂತೆ ಅನಗತ್ಯವಾಗಿ ಕಾರ್ಮಿಕ ವರ್ಗದ ಧರಣಿ, ಪ್ರತಿಭಟನೆ ಹಾಗೂ ಮೆರವಣಿಗೆಗಳಿಗೆ ಈಗಾಗಲೇ ಹಲವು ಅಡ್ಡಿಗಳನ್ನು ಮಾಡುತ್ತಿದೆ. ಅದರ ಭಾಗವಾಗಿ ಮತ್ತೆ ಭುಸುಗುಡುತ್ತಿರುವುದೇ ಈ ‘ಎಸ್ಮಾ’ ಎನ್ನುವ ಕಾನೂನಿನ ಭೂತ.

ಆಂಧ್ರ ಮೂಲದ ಜಿ.ವಿ.ಕೆ.ಇ.ಎಂ.ಆರ್.ಐ. ಖಾಸಗೀ ಕಂಪನಿ ಈ 108 ಅಂಬೂಲೆನ್ಸ್ ಸೇವೆಯನ್ನು ನೀಡಲು ಹಲವು ವರ್ಷಗಳಿಂದ ರಾಜ್ಯ ಸರಕಾರದಿಂದ ಗುತ್ತಿಗೆ ಪಡೆದಿದೆ. ರಾಜ್ಯದಲ್ಲಿ ಸುಮಾರು ನಾಲ್ಕು ಸಾವಿರ 108 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ನಿಗದಿತ ಕೆಲಸದ ಅವಧಿ ಇಲ್ಲ, ಯಾವುದೇ ಕೆಲಸದ ಹಾಗೂ ಸೇವಾ ಭದ್ರತೆ ಇಲ್ಲ. ಈ ಬೇಡಿಕೆಗಳಿಗಾಗಿ ಈ ಹಿಂದೆಯೂ ಹಲವು ಬಾರಿ ಹೋರಾಟಗಳನ್ನು ಅವರು ನಡೆಸಿದ್ದಾರೆ. ಸಿಐಟಿಯು ರಾಜ್ಯ ಸಮಿತಿ ಅವರ ಹೋರಾಟಕ್ಕೆ ಸ್ವತಃ ಭಾಗವಹಿಸಿ ಬೆಂಬಲ ನೀಡಿತ್ತು. ಆದರೆ ಮುಷ್ಕರ ನಡೆಸಿದಾಗಲೆಲ್ಲಾ ಸುಳ್ಳು ಭರವಸೆಗಳನ್ನು ನೀಡಿ ಅವರ ಮುಷ್ಕರ ನಿಲ್ಲಿಸಲು ಯಶಸ್ವಿಯಾಗಿದ್ದರು. ಆದರೆ ಭರವಸೆಗಳು ಮಾತ್ರ ಹಾಗೆ ಉಳಿದವು. ಈ ಹಿನ್ನಲೆಯಲ್ಲಿ ಪುನಃ ಅವರು ಇದೇ ಜನವರಿ 24 ರಿಂದ ಮುಷ್ಕರಕ್ಕೆ ಹೋಗುವ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ ಹಲವು ಸಂಕಷ್ಟಗಳ ನಡುವೆಯೂ ಆನಾರೋಗ್ಯ ಪೀಡಿತ ಹಾಗೂ ಅಪಘಾತಕ್ಕೊಳಗಾಗುವ ಜನರಿಗೆ ತುರ್ತು ಚಿಕಿತ್ಸೆ ನೀಡಲು ಶ್ರಮಿಸುವ ಈ ನೌಕರರಿಗೆ ಮಾತ್ರ ಜೀವನ ಭದ್ರತೆ ಎಂಬುದಿಲ್ಲ. ಇದನ್ನು ಖಾತ್ರಿಗೊಳಿಸಬೇಕಾದ ಕಂಪನಿಯ ಆಡಳಿತ ಮತ್ತು ಸರಕಾರಗಳನ್ನು ‘ಎಸ್ಮಾ’ ಕಾನೂನನ್ನು ಮುಂದು ಮಾಡಿ ಅವರ ನ್ಯಾಯಬದ್ದ ಹಕ್ಕುಗಳನ್ನು ದಮನಿಸಲು ಹೊರಟಿವೆ. ಆದ್ದರಿಂದ ಸರಕಾರದ ಈ ನಡೆ ಖಂಡನಾರ್ಹ. 108 ಸಿಬ್ಬಂದಿ ಮುಷ್ಕರ ಹೂಡಿದರೆ ಕಂಪನಿಯ ಕಾಂಟ್ರಾಕ್ಟನನು ರದ್ದು ಮಾಡುವುದಾಗಿಯೂ ಸಚಿವರು ಬೆದರಿಸಿದ್ದಾರೆ ಎಂದು ವರದಿಯಾಗಿದೆ. ಇದು ಸ್ವತಃ ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕಾದ ಸರಕಾರ ಖಾಸಗಿ ಕಂಪನಿಯೊಂದನ್ನು ಕಾರ್ಮಿಕ-ವಿರೋಧಿ ಕ್ರಮ ಕೈಗೊಳ್ಳಲು ಒತ್ತಡ ಹೇರುತ್ತಿರುವುದು ವಿಪರ್ಯಾಸ. ಸರಕಾರ ಕಾರ್ಮಿಕರಿಗೆ ಮತ್ತು ಕಂಪನಿಗೆ ಬೆದರಿಕೆ ಹಾಕುವುದನ್ನು ಬಿಟ್ಟು ಕಾರ್ಮಿಕರ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶ ಮಾಡಬೇಕು.

ಇದು ಬರಿಯ 108 ಸೇವಾ ಕಾರ್ಮಿಕರ ಪ್ರಶ್ನೆ ಮಾತ್ರವಲ್ಲ. ಎಲ್ಲ ಕಾರ್ಮಿಕ ಸಂಘಗಳು ಒಗ್ಗಟ್ಟಾಗಿ ‘ಎಸ್ಮಾ’ ಕ್ರಮದ ಬಳಕೆಯನ್ನು ವಿರೋಧಿಸಬೇಕಿದೆ. ಒಂದು ವೇಳೆ ಯಾವುದೇ ನೌಕರರ ಚಳವಳಿಗಳ ಮೇಲೆ ರಾಜ್ಯ ಸರಕಾರ ‘ಎಸ್ಮಾ’ವನ್ನು ಕಾನೂನನ್ನು ಪ್ರಯೋಗಿಸಲು ಮುಂದಾದರೆ ತೀವ್ರ ಪ್ರತಿರೋಧವನ್ನು ತೋರಬೇಕಿದೆ.

108 workers strike

ಅಡಿಗಡಿಗೂ ಎಡವುತ್ತಿರುವ ಸರಕಾರ

ಸಂಪುಟ 10 ಸಂಚಿಕೆ 4 ಜನವರಿ 24, 2016 – ಸಂಪಾದಕೀಯ

ಸರಕಾರಗಳು ಅವುಗಳ ಮುಂದಿರುವ ಸಂಕೀರ್ಣ ಕಾರ್ಯಭಾರಗಳ ದೆಸೆಯಿಂದ ಆಗೊಮ್ಮೆ ಈಗೊಮ್ಮೆ ಎಡವುದು ಸಹಜ. ಆದರೆ ಕರ್ನಾಟಕ ಸರಕಾರ ಹೆಜ್ಜೆ ಹೆಜ್ಜೆಗೂ ಎಡವುತ್ತಿರುವುದು, ತಡವರಸಿಕೊಂಡು ಏಳುವುದು, ಪುನಃ ಎಡವುದರಲ್ಲಿ ರೆಕಾರ್ಡು ಮಾಡಿದೆ ಎಂದು ಹೇಳದೆ ವಿಧಿಯಿಲ್ಲ. ಉಪ ಲೋಕಾಯುಕ್ತ ಅಡಿ ಅವರ ಪದಚ್ಯುತಿ ನಿರ್ಣಯದ ಬಗ್ಗೆ ಇನ್ನೊಂದು ಯೂ-ಟರ್ನ್, ಲೋಕಾಯುಕ್ತ ನೇಮಕ ಪ್ರಕ್ರಿಯೆಯಲ್ಲಿ ನಿರ್ಣಾಯಕ ತ್ವರಿತ ಕ್ರಮದ ಅಭಾವ, ಇಲಾಖೆಗಳ ಅನುದಾನದ ಬಳಕೆಯಲ್ಲಿ ಅತ್ಯಂತ ಕೆಟ್ಟ ಪ್ರಗತಿ, ಸೂಕ್ತ ಕ್ರಮಗಳ ಅಭಾವದಿಂದ ರೈತ ಆತ್ಮಹತ್ಯೆಗಳು ಸಾವಿರ ದಾಟಿರುವುದು – ಈ ವಾರ ಬೆಳಕಿಗೆ ಬಂದ ಸರಕಾರ ಎಡವಿರುವ ಉದಾಹರಣೆಗಳು.

ಉಪ ಲೋಕಾಯುಕ್ತ ನ್ಯಾ. ಅಡಿ ಅವರ ವಿರುದ್ಧ ಪದಚ್ಯುತಿ ನಿರ್ಣಯ ಮಂಡನೆ ಆಗಿದೆ. ಆದರೆ ಅಂಗೀಕೃತವಾಗಿಲ್ಲ ಎಂದು ಹೇಳಿ ಇಡೀ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲು ಕೆಲವೇ ದಿನಗಳ ಹಿಂದೆ ಪ್ರಯತ್ನಿಸಿದ ಸರಕಾರ ಇನ್ನೊಂದು ಯೂ-ಟರ್ನ್ ಮಾಡಿದೆ. ಈಗ ನ್ಯಾ. ಅಡಿ ಅವರ ವಿರುದ್ಧ ಸಾಕ್ಷ್ಯಾಧಾರಗಳು ಇವೆ. ಅದನ್ನು ಸದ್ಯದಲ್ಲೇ ಸ್ಪೀಕರ್ ಮುಖ್ಯ ನ್ಯಾಯಾಧೀಶರಿಗೆ ಮಂಡಿಸಲಿದ್ದಾರೆ ಎಂದು ಕಾಂಗ್ರೆಸ್ ವಲಯಗಳಿಂದ ಕೇಳಿ ಬರುತ್ತಿರುವುದು ಎಂಬುದು ತೀರಾ ಎಡವಟ್ಟಿನ ಬೆಳವಣಿಗೆ. ಸರಕಾರ ಪದಚ್ಯುತಿ ಪ್ರಕ್ರಿಯೆಯನ್ನು ಹಿಂದಕ್ಕೆ ತೆಗೆದುಕೊಳ್ಳಬಯಸುತ್ತದೆಯೇ ಇಲ್ಲವೇ ಮುಂದೆ ಒಯ್ಯಬಯಸುತ್ತದೆಯೇ ಎಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು.

ಲೋಕಾಯುಕ್ತ ನೇಮಕದಲ್ಲೂ ಅಷ್ಟೇ. ನಿರ್ಣಾಯಕ ತ್ವರಿತ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ, ಕಳಂಕ ರಹಿತ ವ್ಯಕ್ತಿಯ ನೇಮಕ ಮಾಡಲು ಮುತುವರ್ಜಿ ವಹಿಸಬೇಕು. ಈ ಎರಡೂ ವಿಷಯಗಳ ಬಗೆಗೂ ನಿರ್ಣಯ ತೆಗೆದುಕೊಳ್ಳುವಾಗ ಲೋಕಾಯುಕ್ತ ಸಂಸ್ಥೆಯ, ಸರಕಾರದ ಘನತೆ, ವಿಶ್ವಾಸಾರ್ಹತೆ ಕಡಿಮೆ ಮಾಡುವ ಯಾವುದೇ ಧೋರಣೆ, ಕ್ರಮಗಳಿಗೆ ಮುಂದಾಗಬಾರದು. ಅದನ್ನು ರಾಜಕೀಯಕರಣಗೊಳಿಸಬಾರದು. ಅದು ಬೀದಿ ಜಗಳದ ವಿಷಯವಾಗಬಾರದು. ಪ್ರಮುಖ ವಿರೋಧ ಪಕ್ಷ ಸಹ ಇದಕ್ಕೆ ಬದ್ಧವಾಗಿರಬೇಕು. ಆದರೆ ಆಳುವ ಮತ್ತು ಪ್ರಮುಖ ವಿರೋಧ ಪಕ್ಷಗಳೆರಡೂ ಲೋಕಾಯುಕ್ತ ಸಂಸ್ಥೆಯ ವಿಷಯಗಳಲ್ಲಿ ತರುತ್ತಿರುವ ಕೀಳುಮಟ್ಟದ ರಾಜಕೀಯಕರಣ ಈ ಎರಡೂ ಪಕ್ಷಗಳ ಮತ್ತು ಪಾರ್ಲಿಮೆಂಟರಿ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯ ದೃಷ್ಟಿಯಿಂದಲೂ ತೀರಾ ಅಪಾಯಕಾರಿ. ಅದನ್ನು ತಕ್ಷಣವೇ ನಿಲ್ಲಿಸಬೇಕು.

ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಅಭಿವೃದ್ಧಿ ಉಪಯೋಜನೆ ಅನುದಾನ ಬಳಕೆಯಾಗಿರುವುದು ಒಂಬತ್ತು ತಿಂಗಳು ಕಳೆದ ನಂತರವೂ ಕೇವಲ ಶೇ. 40 ಎನ್ನುವುದು ತೀರಾ ಆತಂಕಕಾರಿ ಮತ್ತು ಸರಕಾರಕ್ಕೆ ನಾಚಿಕೆಗೇಡಿನ ವಿಷಯ. ಪರಿಶಿಷ್ಟ ಜಾತಿ ಉಪಯೋಜನೆಯ ಅನುದಾನದ ಬಳಕೆ ಕೇವಲ ಶೇ. 39.21. ಪರಿಶಿಷ್ಟ ಬುಡಕಟ್ಟು ಅಭಿವೃದ್ಧಿ ಉಪಯೋಜನೆ ಅನುದಾನ ಬಳಕೆ ಹಂಚಿಕೆಯಾದ ಅನುದಾನದ ಕೇವಲ ಶೇ. 42.59 ರಷ್ಟಿದೆ. ಕೆಲವು ಇಲಾಖೆಗಳು ಶೇ 10 ರಷ್ಟು ಸಹ (ಉದಾ: ಮೀನುಗಾರಿಕೆ 17 ರಲ್ಲಿ ಬರಿಯ 2 ಕೋಟಿ ರೂ., ಜಲಸಂಪನ್ಮೂಲ 1709ರಲ್ಲಿ ಬರಿಯ 91 ಕೋಟಿ ರೂ.), ಹೆಚ್ಚಿನ ಇಲಾಖೆಗಳು ಶೆ. 30 ರಷ್ಟು (ಉದಾ: ಲೋಕೋಪಯೋಗಿ 582ರಲ್ಲಿ 77 ಕೋಟಿ ರೂ., ಸಮಾಜ ಕಲ್ಯಾಣ 2935ರಲ್ಲಿ 1140 ಕೋಟಿ ರೂ.) ಸಹ ಖರ್ಚು ಮಾಡಿಲ್ಲ. ಇದು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಮುಖ್ಯ ಮಂತ್ರಿಗಳ ಪ್ರಗತಿ ಪರಿಶಿಲನೆಯ ಸಂದರ್ಭದಲ್ಲಿ ತಿಳಿದು ಬಂದಿದೆ.

ಅನುದಾನದ ಹಂಚಿಕೆಯ ಸುಮಾರು ಶೇ. 54 ರಷ್ಟು ಮಾತ್ರ ಬಿಡುಗಡೆಯಾಗಿದೆ ಎಂಬುದು ಸಹ ತಿಳಿದು ಬಂದಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶೇ, 7 ರಷ್ಟು ಮಾತ್ರ ಆರೋಪಿಗಳಿಗೆ ಶಿಕ್ಷೆ ಆಗಿರುವ ಬಗ್ಗೆಯೂ ಚರ್ಚೆ ನಡೆಯಿತು ಎಂದು ವರದಿಯಾಗಿದೆ. ಮುಖ್ಯ ಮಂತ್ರಿ ಈ ಬಗ್ಗೆ ಸಮಾಜ ಕಲ್ಯಾಣ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾರ್ಚಿನೊಳಗೆ ಇಡಿಯ ಅನುದಾನದ ಬಳಕೆಯಾಗಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದರು. ಆದರೆ ಇದು ಸರಕಾರ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಲ್ಲೂ ಎಡವುತ್ತಿರುವುದಕ್ಕೆ ಹಿಡಿದ ಕನ್ನಡಿ ಎನ್ನಲೇಬೇಕಾಗಿದೆ.

ಕಂದಾಯ ಇಲಾಖೆಯ ವರದಿಯ ಪ್ರಕಾರ ಕರ್ನಾಟಕದಲ್ಲಿ 18.6.2015 ರಿಂದ ಜನವರಿ 12, 2016 ರ ವರೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಒಂದು ಸಾವಿರ ದಾಟಿದೆ. ಅಂದರೆ ಜೂನ್ ಸುಮಾರಿಗೆ ಆರಂಭವಾದ ರೈತರ ಸರಣಿ ಆತ್ಮಹತ್ಯೆಗಳು ಇನ್ನೂ ನಿಂತಿಲ್ಲ. ಈ ಬಗ್ಗೆ ಸರಕಾರ ಯಾವುದೇ ತುರ್ತಿನ ಕ್ರಮಗಳನ್ನು ಕೈಗೊಂಡಿಲ್ಲ. ಕೈಗೊಂಡ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂದೇ ಇದರರ್ಥ. ಕಬ್ಬು, ಭತ್ತ, ತೊಗರಿ, ಹತ್ತಿ ಮುಂತಾದ ಬೆಳೆಗಳಿಗೆ ನಿರ್ದಿಷ್ಟವಾದ ಹಾಗೂ ಎಲ್ಲಕ್ಕೂ ಸಾಮಾನ್ಯವಾದ ಯಾವುದೇ ಕ್ರಮವನ್ನು ಕೈಗೊಳ್ಳುವಲ್ಲಿ ಸರಕಾರ ಅಡಿಗಡಿಗೂ ಎಡವುತ್ತಿದೆ. ಈ ಪ್ರಶ್ನೆಗಳನ್ನು ವಿಶ್ಲೇಷಿಸಿ ಇದಕ್ಕೆ ಪರಿಹಾರ ಸೂಚಿಸುವ ಲೇಖನಮಾಲೆ ಈ ವಾರದ ಸಂಚಿಕೆಯಿಂದ ಆರಂಭವಾಗಿದೆ. ಈ ಪ್ರಶ್ನೆಯನ್ನು ಪರಿಶೀಲಿಸುವ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಇವು ಆತ್ಮಹತ್ಯೆಗಳಲ್ಲ, ಸರ್ಕಾರೀ ಪ್ರಾಯೋಜಿತ ಕಗ್ಗೊಲೆಗಳು ಎನ್ನುತ್ತಾರೆ. ಈ ಲೇಖನಮಾಲೆಯಲ್ಲ್ಲಿ ಸೂಚಿಸಲಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕದಲ್ಲಿ ಈ ಸರಕಾರ ‘ರೈತರ ಸರಣಿ ಆತ್ಮಹತ್ಯೆಗಳ’ ಸರಕಾರ ಎಂದು ಕುಖ್ಯಾತವಾಗುತ್ತದೆ ಎಂದು ಎಚ್ಚರಿಸಬೇಕಾದ ಕಾಲ ಬಂದಿದೆ.

ಹಾಲು ದರ ಏರಿಕೆ ಹಿಂತೆಗೆದುಕೊಳ್ಳಿ !

ಸಂಪುಟ 10 ಸಂಚಿಕೆ 3 ಜನವರಿ 17, 2016 – ಸಂಪಾದಕೀಯ

ರಾಜ್ಯ ಸರಕಾರ ಮತ್ತು ಕರ್ನಾಟಕ ಹಾಲು ಒಕ್ಕೂಟಗಳು ಹಾಲಿನ ದರವನ್ನು ಜನವರಿ 5ರಿಂದ ಲೀಟರಿಗೆ ರೂ. 4 ಮತ್ತು ಮೊಸರಿನ ದರವನ್ನು ರೂ. 2 ರಂತೆ ಏರಿಸಿದೆ. ಎಲ್ಲಾ ಸರಕು ಸೇವೆಗಳ ಬೆಲೆ ಏರಿದೆ. ಆದ್ದರಿಂದ ಹಾಲಿನ ಉತ್ಪಾದನಾ ವೆಚ್ಚ ಏರಿದೆ. ನೀರಿನ ಬೆಲೆ ಒಂದು ಬಾಟಲಿಗೆ ರೂ.14 ರಿಂದ 25 ಇದೆ. ಹಾಗಿರುವಾಗ ಹಾಲಿನ ಬೆಲೆ ಏರಿಕೆಗೆ ಗೊಣಗುವುದು ಸರಿಯಲ್ಲ. ಇತರ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ಬೆಲೆ ಏರಿಕೆಯಲ್ಲಿ ದೊಡ್ಡ ಪಾಲು ಹಾಲು ಉತ್ಪಾದಕ ರೈತರಿಗೆ ಹೋಗುತ್ತದೆ, ಎಂದೆಲ್ಲಾ ಸರಕಾರ ಮತ್ತು ಒಕ್ಕೂಟದ ವಕ್ತಾರರು ವಿವಿಧ ರೀತಿಯಲ್ಲಿ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಲಿನ ದರ ಏರಿಕೆಗೆ ಟೀಕೆ ಬಂದಾಗಲೆಲ್ಲ ರೈತರನ್ನು ಗುರಾಣಿಯಾಗಿ ಬಳಸಲಾಗುತ್ತದೆ. ಬಳಕೆದಾರರನ್ನು ಮರೆತು ಬಿಡಲಾಗುತ್ತದೆ. ಹಾಲು ಬೆಲೆ ಏರಿದರೆ ಹೆಚ್ಚು ಕಡಿಮೆ ಎಲ್ಲರೂ ಸೇವಿಸುವ ಚಾ, ಕಾಫಿ, ಹಾಲಿನ ಉತ್ಪನ್ನಗಳ ಬೆಲೆ ಏರುತ್ತದೆ. ಹಾಲು ಮತ್ತು ಅದರ ಉತ್ಪನ್ನಗಳು ಮಕ್ಕಳ, ಶ್ರೀಸಾಮಾನ್ಯನ ಪೌಷ್ಟಿಕ ಆಹಾರದ ಒಂದು ಪ್ರಮುಖ ಅಂಗ. ಅದರ ಬೆಲೆ ಏರಿಕೆ ವ್ಯಾಪಕ ಪರಿಣಾಮ ಬೀರುತ್ತದೆ.

ಆದರೆ ಹಾಲು ಬೆಲೆ ಏರಿಕೆ ನಿಜವಾಗಿಯೂ ರೈತರ ಪರವಾದ ಕ್ರಮವೇ? ಹಲವರು ಆಪಾದಿಸಿರುವಂತೆ ಇದು ಪಂಚಾಯತ್ ಚುನಾವಣೆಗಳಲ್ಲಿ ರೈತರನ್ನು ‘ಸಂಪ್ರೀತಗೊಳಿಸಲು’ ಎಂಬುದು ನಿಜವೇ? ಇದು ಖಂಡಿತ ರೈತ-ಪರ ಕ್ರಮ ಅಲ್ಲ ಎನ್ನುತ್ತದೆ ಕರ್ನಾಟಕ ಪ್ರಾಂತ ರೈತ ಸಂಘದ(ಕೆ.ಪಿ.ಆರ್.ಎಸ್.)ಪತ್ರಿಕಾ ಹೇಳಿಕೆ. ಕಳೆದ ಜುಲೈಯಲ್ಲಷ್ಟೇ ಸರಕಾರ ಹಾಲು ಗುಣಮಟ್ಟ ನಿಯಂತ್ರಿಸುವ ಹೆಸರಲ್ಲಿ ಬೆಲೆ ಕಡಿಮೆ ಮಾಡುವ, ಪ್ರತಿ ಲೀಟರಿಗೆ 4 ರೂ. ಪ್ರೋತ್ಸಾಹ ಕಡಿತ ಮಾಡುವ ಸುತ್ತೋಲೆ ಹೊರಡಿಸಿದೆ. ಆಹಾರ ಮತ್ತು ಗುಣಮಟ್ಟ ನಿಯಂತ್ರಣ ಕಾಯಿದೆಯನ್ನು ಹಾಲಿಗೆ ಅಳವಡಿಸುವ ಭಾಗವಾಗಿ, ಕೊಬ್ಬು ಮತ್ತು ಎಸ್.ಎನ್.ಎಫ್. ಪ್ರಮಾಣವನ್ನು ನಿರ್ಧರಿಸಿದೆ. ಈ ಪ್ರಮಾಣ ಮುಟ್ಟದಿದ್ದರೆ ಕಡಿಮೆ ಬೆಲೆ ಕೊಡುವ, ಪ್ರೋತ್ಸಾಹಧನ ಕಡಿತ ಮಾಡುವ ಕ್ರಮದ ಬಗ್ಗೆ ಸುತ್ತೋಲೆ ಹೇಳುತ್ತದೆ. ಹಾಲಿನ ಗುಣಮಟ್ಟ ನಿರ್ಧರಿಸುವ ಎಲ್ಲಾ ಅಂಶಗಳು ರೈತರ ನಿಯಂತ್ರಣದಲ್ಲಿ ಇಲ್ಲ. ಹಾಲಿನ ಗುಣಮಟ್ಟದ ಬಗ್ಗೆ ರೈತರಿಗೆ ಅರಿವು ಇಲ್ಲ. ಆದ್ದರಿಂದ ಇದನ್ನು ಜಾರಿ ಮಾಡಲು ಕಾಲಾವಕಾಶ ಕೋಡಬೇಕು ಎಂದು ರಾಜ್ಯವ್ಯಾಪಿಯಾಗಿ ಹಾಲು ಉತ್ಪಾದಕ ರೈತರು ಪ್ರತಿಭಟಿಸಿದರೂ ಲೆಕ್ಕಿಸಿಲ್ಲ. ಈಗಾಗಲೇ ನಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.

ಪ್ರತಿ ಲೀಟರಿಗೆ ಮುಂಚೆ ಸಿಗುತ್ತಿದ್ದ ಬೆಲೆಗಳಲ್ಲಿ ರೂ 5-6 ಕಡಿತ ಮಾಡುವ ಕ್ರಮ ಕೈಗೊಂಡು, ರೂ. 4 ಬೆಲೆ ಏರಿಸಿ ರೂ. 2 ಉತ್ಪಾದಕರಿಗೆ ಕೊಡಲಾಗುವುದು ಎಂದು ಹೇಳುವುದು ಹಾಸ್ಯಾಸ್ಪದ. ಇದು ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಹಕರು ಮತ್ತು ರೈತರಿಬ್ಬರನ್ನೂ ಮರುಳು ಮಾಡುವ ತಂತ್ರ. ಎಂದು ಕೆ.ಪಿ.ಆರ್.ಎಸ್. ಹೇಳಿದೆ. ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚ ಭರಿಸಲು ಮಾತ್ರ ಈ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಯಾವ ಪ್ರಯೋಜವೂ ಆಗುವುದಿಲ್ಲ. ಹಾಲು ಉತ್ಪಾದಕರ ಉತ್ಪಾದನಾ ವೆಚ್ಚ ವೈಜ್ಞಾನಿಕವಾಗಿ ನಿರ್ಧರಿಸಲಿ ಎಂದು ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ರೈತರ ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಅವರಿಗೆ ನಷ್ಟವಾಗುತ್ತಿದೆ. ಅವರಿಗೆ ಹೆಚ್ಚಿನ ಬೆಲೆ ಕೊಟ್ಟರೆ ಹಾಲಿನ ಬೆಲೆ ಹೆಚ್ಚಿಸಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ತೊಂದರೆ ಆಗುತ್ತದೆ. ಹಾಗಾದರೆ ಇದಕ್ಕೆ ಏನು ಪರಿಹಾರ? ರೈತರ ಮತ್ತು ಗ್ರಾಹಕರ ಬಗ್ಗೆ ಸರಕಾರಕ್ಕೆ ನಿಜವಾದ ಕಾಳಜಿ ಇದ್ದರೆ, ಹಾಲಿನ ಗುಣಮಟ್ಟ ಕಾಪಾಡದಿದ್ದರೆ, ಬೆಲೆ/ಪ್ರೋತ್ಸಾಹ ಧನಕಡಿತ ಮಾಡುವ ಬಗ್ಗೆ ಹೊರಡಿಸಿರುವ ಸುತ್ತೋಲೆ ಹಿಂತೆಗೆದುಕೊಳ್ಳಲಿ. ಪ್ರೋತ್ಸಾಹಧನವನ್ನು ರೂ. 15ಕ್ಕೆ ಹೆಚ್ಚಿಸಲಿ. ಆಗ ರೈತರಿಗೆ ನಷ್ಟವಾಗುವುದಿಲ್ಲ. ಗ್ರಾಹಕರಿಗೂ ತೊಂದರೆಯಾಗುವುದಿಲ್ಲ. ಇದನ್ನು ಮಾಡಿದರೆ ಹಾಲಿನ ಮಾರುಕಟ್ಟೆ ಸಹ ವಿಸ್ತಾರ ಆಗಿ, ರೈತರೂ ಮತ್ತು ಹಾಲಿನ ಸಹಕಾರಿ ಸಂಘಗಳೂ ಉಳಿಯಬಹುದು ಎಂದು ಕೆ.ಪಿ.ಆರ್.ಎಸ್ ಸಲಹೆ ಮಾಡಿದೆ.

ಒಂದು ಲೀಟರ್ ಹಾಲಿನ ಉತ್ಪಾದನಾ ವೆಚ್ಚ ಸುಮಾರು ರೂ. 31 ರಿಂದ 35 ಇದೆ. ವೆಚ್ಚದ ಅರ್ಧ ಲಾಭಾಂಶ ಇರಬೇಕೆಂಬ ಡಾ. ಸ್ವಾಮಿನಾಥನ್ ಕಮಿಶನ್ ಶಿಫಾರಸಿನ ಪ್ರಕಾರ ಲೀಟರ್ ಹಾಲಿನ ಬೆಲೆ ರೂ. 45 ರಿಂದ 48 ಆಗುತ್ತದೆ. ಆದರೆ ರೈತ ಸಂಘ ಹಾಲಿನ ಬೆಲೆ ಏರಿಕೆಯ ಬೇಡಿಕೆ ಇಡುತ್ತಿಲ್ಲ. ಬದಲಾಗಿ ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಅದರ ಅರ್ಧದಷ್ಟು ಪ್ರೋತ್ಸಾಹಧನ ನೀಡಬೇಕೆಂದು ಕೇಳುತ್ತಿದೆ. ಇದರಿಂದ ಬಡವರು, ದಲಿತರು ಮಾತ್ರವಲ್ಲ ಹಾಲು ಉತ್ಪಾದಕ ರೈತರು ಸಹ ಹಾಲು ಬಳಸುವಂತಾಗುವುದು ಎಂದು ಕೆ.ಪಿ.ಆರ್.ಎಸ್ ಸಲಹೆ ಮಾಡಿದೆ.

ಆದರೆ ಸರಕಾರ ಈ ಕ್ರಮ ಕೈಗೊಳ್ಳುವುದೇ? ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಸರಕಾರ ಬೆಲೆ ಏರಿಕೆಗೆ ಸಹಕಾರಿ ಮತ್ತು ಸಣ್ಣ ಹಾಲು ಉತ್ಪಾದಕರನ್ನು ದುರ್ಬಲಗೊಳಿಸುವ ಉದ್ದೇಶ ಇದ್ದ ಹಾಗೆ ಕಾಣುತ್ತದೆ. ಹೈನುಗಾರಿಕೆ ಕ್ಷೇತ್ರದಲ್ಲಿ ಮೇಘಾದಂತಹ ಖಾಸಗಿ ಡೈರಿಗಳಿಗೆ ಮಾರುಕಟ್ಟೆ ಒದಗಿಸುವ ಮತ್ತು ಅವರ ಲಾಭ ಹೆಚ್ಚಿಸುವ ಉದ್ದೇಶ ಕಾಣುತ್ತದೆ. ಹಾಲಿನ ಗುಣಮಟ್ಟದ ಸುತ್ತೋಲೆ, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸಂಬಂಧಿಸಿದ ಕಾನೂನಿಗೆ ತರುತ್ತಿರುವ ತಿದ್ದುಪಡಿಗಳು ಇಂತಹ ಸೂಚನೆ ನೀಡುತ್ತಿವೆ. ಒಂದು ಹಾಲಿನ ಸೊಸೈಟಿ ಇರುವ ವ್ಯಾಪ್ತಿಯಲ್ಲಿ ಮತ್ತೊಂದು ಸಂಸ್ಥೆಗೆ ಕೆಲಸ ಮಾಡಲು ಇದುವರೆಗೆ ಅವಕಾಶ ಇರಲಿಲ್ಲ. ಈಗ ಖಾಸಗಿ ಕಂಪನಿಗಳಿಗೆ ಅಂತಹ ಅವಕಾಶ ಮಾಡಿಕೊಡಲಾಗುತ್ತಿದೆ. ಖಾಸಗಿ ಡೈರಿಗಳ ಮತ್ತು ಕಂಪನಿಗಳ ಲಾಬಿ ಸಹಕಾರ ಆಧಾರಿತ ಡೈರಿ ವ್ಯವಸ್ಥೆಯನ್ನೇ ಅಲುಗಾಡಿಸಲು ಹೊರಟಿದೆ. ಇದು ಹಲವು ಕಾರಣಗಳಿಗೆ ಸರಕಾರದ ಅತ್ಯಂತ ಅಪಾಯಕಾರಿ ನಡೆ.

ಕೃಷಿ ರಂಗದಲ್ಲಿ ಹಲವು ಬೆಳೆಗಳು ಬಿಕ್ಕಟ್ಟಿಗೆ ಸಿಕ್ಕಿದ್ದು ಈ ವರೆಗೆ ಸಹಕಾರಿ ರಂಗದ ಹೈನುಗಾರಿಕೆ ಉದ್ಯಮ ಹಲವು ನ್ಯೂನ್ಯತೆಗಳ ನಡುವೆಯೂ ಸಾಕಷ್ಟು ಉತ್ತಮವಾಗಿ ಕೆಲಸ ಮಾಡುತ್ತಾ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಜೀವನಾಧಾರವಾಗಿತ್ತು. ರಾಜ್ಯದಲ್ಲಿ ಒಟ್ಟು 14 ಜಿಲ್ಲಾ (ಕೆಲವು ನೆರೆಯ ಜಿಲ್ಲೆಗಳನ್ನು ಒಳಗೊಂಡು)ಹಾಲಿನ ಒಕ್ಕೂಟಗಳು ಇವೆ. ಸುಮಾರು 13 ಸಾವಿರ ಗ್ರಾಮ ಮಟ್ಟದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಇವುಗಳಡಿ ಸುಮಾರು 23 ಲಕ್ಷ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದು ಸುಮಾರು 70 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದೇಶಧಲ್ಲಿ ಜನಜೀವನದ ಒಂದು ಪ್ರಮುಖ ಅಗತ್ಯವಾದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ದೊಡ್ಡ ಹೆಚ್ಚುತ್ತಿರುವ ಮಾರುಕಟ್ಟೆ ಇದೆ. ಅದರ ಮೇಲೆ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕಾರ್ಪೊರೆಟ್‍ಗಳ ಕಣ್ಣು ಬಿದ್ದಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ಸಹಕಾರಿ ರಂಗವನ್ನು ದುರ್ಬಲಗೊಳಿಸಿ ಸಣ್ಣ ಉತ್ಪಾದಕರನ್ನು ಓಡಿಸಿ ಆ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಹುನ್ನಾರ ಸಹ ಈ ಬೆಲೆ ಏರಿಕೆಯ ಹಿಂದೆ ಇದೆ.ಇದನ್ನು ಆಗಗೊಟ್ಟರೆ ಗ್ರಾಮೀಣ ಸಂಕಟವನ್ನು ಇದು ಇನ್ನಷ್ಟು ಹೆಚ್ಚಿಸುವ ತೀವ್ರ ಅಪಾಯಇದೆ. ಇದನ್ನು ವಿರೋಧಿಸಬೇಕಾಗಿದೆ.

ಆದ್ದರಿಂದ ಹಾಲಿನ ಬೆಲೆ ಏರಿಕೆ ಹಿಂತೆಗೆದುಕೊಳ್ಳಲು ಮತ್ತು ಡಾ. ಸ್ವಾಮಿನಾಥನ್ ಕಮಿಶನಿನ ಶಿಫಾರಸುಗಳನ್ನು ಹಾಲು ಉತ್ಪಾದಕರಿಗೆ ಅನ್ವಯಿಸಬೇಕೆಂಬ ಒತ್ತಾಯವನ್ನು ಬೆಂಬಲಿಸಿ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ.

ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಅರ್ಥ ಏನು?

ಸಂಪುಟ 10 ಸಂಚಿಕೆ 2 ಜನವರಿ 10-2015

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಪಕ್ಷಗಳ ಬಲಾಬಲ ದೃಷ್ಟಿಯಿಂದ ಹೆಚ್ಚು ಕಡಿಮೆ ಯಥಾಸ್ಥಿತಿ ಮುಂದುವರೆದಿದೆ. ಚುನಾವಣೆ ನಡೆದ 25 ಸ್ಥಾನಗಳಲ್ಲಿ ಕಾಂಗ್ರೆಸ್ ವಿಜೇತರ ಸಂಖ್ಯೆ 12 ರಿಂದ 13 ಕ್ಕೇರಿದೆ. ಆದರೆ ಚಿತ್ರದುರ್ಗದ ಪಕ್ಷೇತರ ಸದಸ್ಯ ರಘು ಆಚಾರ್ ಈ ಬಾರಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದಿರುವುದರಿಂದ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಉಳಿಸಿಕೊಂಡಿದೆ ಎಂದಷ್ಟೇ ಹೇಳಬಹುದು. ಬಿಜೆಪಿ, ಜೆಡಿ(ಎಸ್)ಗಳು ತಲಾ ಒಂದು ಸ್ಥಾನ ಕಳೆದುಕೊಂಡು ಅನುಕ್ರಮವಾಗಿ 6 ಮತ್ತು 4 ಸ್ಥಾನ ಪಡೆದುಕೊಂಡಿವೆ. ಪಕ್ಷೇತರರ ಸಂಖ್ಯೆ 1 ರಿಂದ 2 ಕ್ಕೇರಿದೆ. ಪಕ್ಷೇತರರಲ್ಲಿ ಬಿಜಾಪುರದ ಯತ್ನಾಳ್ ಬಿಜೆಪಿ ಬಂಡಾಯ ಅಭ್ಯರ್ಥಿ. ಬೆಳಗಾವಿಯ ವಿವೇಕರಾವ್ ಪಾಟೀಲ್ ಗೆದ್ದ ಇನ್ನೊಬ್ಬ ಪಕ್ಷೇತರ.

ಬಿಜೆಪಿ ಮತ್ತು ಜೆಡಿ(ಎಸ್)ಗಳು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸೀಟು ಗಳಿಸಿದ್ದು ಮಾತ್ರವಲ್ಲ, ಹಿರಿಯ ನಾಯಕರ ಭದ್ರಕೋಟೆ ಎಂದು ಹೇಳಲಾದ ಪ್ರಮುಖ ಕ್ಷೇತ್ರಗಳಲ್ಲಿ ಮುಖಭಂಗ ಅನುಭವಿಸಿವೆ. ಬಿಜೆಪಿ ಅಭ್ಯರ್ಥಿ ಶಿವಮೊಗ್ಗದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರಿಗೂ ತೀವ್ರ ಮುಖಭಂಗವಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ಉಚ್ಚಾಟಿತ ಯತ್ನಾಳ್ ಜಯ ಸಹ ಪಕ್ಷಕ್ಕೆ ತೀವ್ರ ಮುಖಭಂಗ. 15 ಸೀಟು ಗಳಿಸುತ್ತೇವೆ ಎಂದಿದ್ದ ಜಗದೀಶ ಶೆಟ್ಟರ್, ಕಾಂಗ್ರೆಸಿಗಿಂತ ಹೆಚ್ಚು ಸೀಟು ಗಳಿಸುತ್ತೇವೆ ಎಂದಿದ್ದ ಯಡಿಯೂರಪ್ಪ ತಮ್ಮ ಮಾತು ನುಂಗಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಬಿಜೆಪಿಗಿಂತ ಒಂದು ಸ್ಥಾನ ಹೆಚ್ಚು ಗಳಿಸಿದರೂ ಕೂಡಾ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದ್ದ ಈಶ್ವರಪ್ಪ ಅಂತೂ ಮುಖಭಂಗ ಮಾತ್ರವಲ್ಲ, ತೀವ್ರ ಲೇವಡಿಗೆ ಒಳಗಾಗಿದ್ದಾರೆ.

ಜೆಡಿ(ಎಸ್) ಭದ್ರಕೋಟೆ ಹಾಗೂ ಅಜೇಯ ರೆಕಾರ್ಡು ಇದ್ದ ಹಾಸನದಲ್ಲಿ ಸೋತಿದ್ದು ದೇವೆಗೌಡ ಕುಟಂಬಕ್ಕೆ ದೊಡ್ಡ ಮುಖಭಂಗ. ಇನ್ನೊಂದು ಗಟ್ಟಿ ನೆಲೆಯಾಗಿದ್ದ ಬೆಂಗಳೂರು ಗ್ರಾಮೀಣದಲ್ಲೂ ಕುಮಾರಸ್ವಾಮಿಯವರಿಗೆ ಮುಖಭಂಗ. ಮುಖಭಂಗಕ್ಕೆ ಒಳಗಾದವರು ಬಿಜೆಪಿ ಮತ್ತು ಜೆಡಿ(ಎಸ್)ಗಳು ಮಾತ್ರವಲ್ಲ, ಕಾಂಗ್ರೆಸ್‍ನ ಹಲವು ಪ್ರಮುಖ ನಾಯಕರು ಸ್ವಕ್ಷೇತ್ರಗಳಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದೆ ಮುಖಭಂಗ ಎದುರಿಸಿದ್ದಾರೆ. ಕಲಬುರ್ಗಿಯಲ್ಲಿ ಖರ್ಗೆ, ತುಮಕೂರಿನಲ್ಲಿ ಡಾ.ಪರಮೇಶ್ವರ್, ಕೋಲಾರದಲ್ಲಿ ಮೊಯ್ಲಿ-ಮುನಿಯಪ್ಪ ಇವರಿಗೂ ಕಾಂಗ್ರೆಸ್ ಸೋಲಿನಿಂದ ಮುಖಭಂಗವಾಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಯಾರೂ ಗೆದ್ದಿಲ್ಲ ಎಂಬುದಷ್ಟೇ ಕಾಂಗ್ರೆಸಿಗೆ ಸಮಾಧಾನದ ವಿಷಯ.

ಹೀಗೆ ಮೂರೂ ಪ್ರಮುಖ ಪಕ್ಷಗಳಿಗೂ, ಪ್ರಮುಖ ನಾಯಕರಿಗೂ ಮುಖಭಂಗ ಆಗುವುದರ ಅರ್ಥ ಏನು? ಒಟ್ಟಾರೆಯಾಗಿ ವಿಧಾನ ಪರಿಷತ್ ಚುನಾವಣೆ ಫಲಿತಾಂಶಗಳ ರಾಜಕೀಯ ಅರ್ಥ ಏನು? ಈ ಪ್ರಶ್ನೆಗಳಿಗೆ ಉತ್ತರ ಕೊಡಲು ಪ್ರಯತ್ನಿಸುವ ಮೊದಲು ಇದಕ್ಕೆ ರಾಜಕೀಯ ಅರ್ಥ ಇದೆಯೆ? ವಿಧಾನ ಪರಿಷತ್ತಿಗೆ ಅರ್ಥ ಇದೆಯೇ? ಎಂಬ ಪ್ರಶ್ನೆ ಸಹ ಏಳುತ್ತದೆ.

ವಿಧಾನ ಪರಿಷತ್ ನೇರವಾಗಿ ಜನರಿಂದ ಚುನಾಯಿತವಾದದ್ದಲ್ಲ. ಪರೋಕ್ಷವಾಗಿ ಕೆಲವು ವಿಶಿಷ್ಟ ‘ಕ್ಷೇತ್ರ’ಗಳಿಂದ ಆಯ್ಕೆಯಾದ ಸದಸ್ಯರಿಂದ ಆದದ್ದು. ಇದರಲ್ಲಿ ಮೂರನೇ ಒಂದು ಭಾಗ ವಿಧಾನ ಸಭೆ, ಮೂರನೇ ಒಂದು ಭಾಗ ಸ್ಥಳೀಯ ಸಂಸ್ಥೆಗಳಿಂದ ಮತ್ತು ಉಳಿದ ಮೂರನೇ ಒಂದು ಭಾಗ ಶಿಕ್ಷಕರ, ಪದವೀಧರರ ಕ್ಷೇತ್ರಗಳಿಂದ ಚುನಾಯಿತವಾದದ್ದು ಹಾಗೂ ನಾಮನಿರ್ದೇಶನದಿಂದ ತುಂಬಿದ್ದು. ಸಂವಿಧಾನದಲ್ಲೇ ಇದನ್ನು ರಾಜ್ಯದ ಇಚ್ಛೆಗೆ ಬಿಡಲಾಗಿದೆ. ಬಹುಸಂಖ್ಯಾತ ರಾಜ್ಯಗಳಲ್ಲಿ ವಿದಾನ ಪರಿಷತ್ತು ಅಸ್ತಿತ್ವದಲ್ಲಿ ಇಲ್ಲ. ಈಗ ಕೇವಲ ಏಳು ರಾಜ್ಯಗಳಲ್ಲಿ ವಿಧಾನ ಪರಿಷತ್ತು ಇದೆ. ಹಲವು ರಾಜ್ಯಗಳಲ್ಲಿ 1967ರ ಹೊತ್ತಿಗೆ ಇದ್ದಿದ್ದ ವಿಧಾನ ಪರಿಷತ್ತುಗಳನ್ನು ಕೊನೆಗೊಳಿಸಲಾಯಿತು. ಎರಡು ರಾಜ್ಯಗಳಲ್ಲಿ ವಿಧಾನ ಪರಿಷತ್ತು ಪುನಃ ಅಸ್ತಿತ್ವಕ್ಕೆ ತರುವ ಪ್ರಯತ್ನ ನಡೆದಿದೆ. ಪರೋಕ್ಷವಾಗಿ ಚುನಾಯಿತವಾದ ವಿಧಾನ ಪರಿಷತ್ತಿನ ಅಗತ್ಯ ಇಲ್ಲ. ಅವು ಅನಗತ್ಯ ಸಾರ್ವಜನಿಕ ಹಣ ಪೋಲು ಮಾಡುತ್ತವೆ. ಆಳುವ ವರ್ಗದ ಪಕ್ಷಗಳ ಸೋತ, ನಿವೃತ್ತ ಮತ್ತು ಪ್ರಭಾವಿ ಸದಸ್ಯರಿಗೆ ಹಿಂದಿನ ಬಾಗಿಲಿನಿಂದ ಶಾಸಕರ ಸ್ಥಾನ ಕೊಡುವ ಪ್ರಯತ್ನ. ಇದು ಸಿಪಿಐ(ಎಂ) ಮತ್ತು ಹೆಚ್ಚಿನ ಎಡ ಪಕ್ಷಗಳ ನಿಲುವು.

ಈ ಹಿನ್ನೆಲೆಯಲ್ಲಿ ಈಗಿನ ವಿಧಾನ ಪರಿಷತ್ತಿನ ಚುನಾವಣೆಗಳ ಫಲಿತಾಂಶವನ್ನು ಗಮನಿಸಬೇಕು. ಸ್ಥಳೀಯ ಸಂಸ್ಥೆಗಳ (ಗ್ರಾಮ ಪಂಚಾಯತ್ ಸದಸ್ಯರು ಬಹುಸಂಖ್ಯಾತರಾಗಿರುವ) ಸದಸ್ಯರು ಮತದಾರರಾಗಿರುವ ವಿಧಾನ ಪರಿಷತ್ತಿನ (ಮೂರನೇ ಒಂದು ಭಾಗದ) ಈ ಚುನಾವಣೆ ಜನರ ಅಭಿಪ್ರಾಯವನ್ನು ಪ್ರತಿನಿಧಿಸುವುದಕ್ಕೆ ಇದ್ದಿದ್ದರಲ್ಲಿ ಹೆಚ್ಚು ಹತ್ತಿರ ಬರುವಂತಹುದು. ಆದರೆ ಚುನಾವಣೆಯಲ್ಲಿ ಧಾರಾಳವಾಗಿ (ಹಿಂದೆಂದಿಗಿಂತಲೂ ಹೆಚ್ಚು – ಪ್ರತಿಯೊಬ್ಬರಿಗೆ 1 ಲಕ್ಷದ ವರೆಗೆ!) ಹಣ, ಚಿನ್ನ, ಬಾಂಡುಗಳು, ಉಡುಗೊರೆಗಳು ಮುಂತಾದ ‘ಹಾರ್ಡ್ ಪವರ್’ ಮಾತ್ರವಲ್ಲ, ಆಣೆ-ಭಾಷೆಗಳಂತಹ ‘ಸಾಫ್ಟ್-ಪವರ್’ಗಳನ್ನೂ ಬಳಸಲಾಗಿದೆ ಎಂದು ಹೇಳಲಾಗಿದೆ. ಇದು ಆಳುವ ಕಾಂಗ್ರೆಸ್ ಬಗ್ಗೆ ಬಿಜೆಪಿ, ಜೆಡಿ(ಎಸ್)ಗಳ ಆಪಾದನೆ ಮಾತ್ರವಲ್ಲ, ಮೂರೂ ಪಕ್ಷಗಳು ಭ್ರಷ್ಟ ವಿಧಾನಗಳಲ್ಲಿ ತೊಡಗಿವೆ ಎಂದು ಇತರ ಮೂಲಗಳಿಂದ ವರದಿಗಳು ಬಂದಿವೆ. ಸ್ಥಳೀಯ ಸಂಸ್ಥೆ ಸದಸ್ಯರೇ ಇಂತಹ ವಿಧಾನ ಬಳಸಿ ಆಯ್ಕೆಯಾದವರೇ ಹೆಚ್ಚು ಎಂದು ನೆನಪಿಸಿಕೊಂಡು ಇದು ಎಷ್ಟು ಪ್ರಾತಿನಿಧಿಕ ಎಂದು ಅಂದಾಜು ಮಾಡಬೇಕು. ಸ್ಥಳೀಯ ಸಂಸ್ಥೆಗಳ ಸದಸ್ಯರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಸದಸ್ಯರಿದ್ದೂ 8 ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬ ಮಹಿಳೆ ಸಹ ಗೆದ್ದಿಲ್ಲ ಎಂಬುದೇ ಸಾಕು.

ಆದರೂ ಈ ಫಲಿತಾಂಶಗಳು ಸೀಮಿತ ರೀತಿಯಲ್ಲಾದರೂ ಏನು ಹೇಳುತ್ತಿವೆ ಎಂದು ನೋಡಬಹುದು. ಬಿಜೆಪಿ ಬಗ್ಗೆ 2014ರ ಲೋಕಸಭಾ ಚುನಾವಣೆಯಲ್ಲಿ ಕಂಡು ಬಂದ ಉತ್ಸಾಹ, ‘ಹವಾ’ ಇಲ್ಲ ಅಥವಾ ಪೂರ್ತಿ ಇಳಿದು ಹೋಗಿದೆ. ಕೊಡಗು, ಚಿಕ್ಕಮಗಳೂರು ಮುಂತಾದ ಕಡೆ ಬಿಜೆಪಿಯ ‘ಧ್ರುವೀಕರಣ’ದ ಹಳೆಯ ಫಾರ್ಮುಲಾ ‘ಕ್ಲಿಕ್’ ಆಗದಿದ್ದರೆ ಬಹುಶಃ ಬಿಜೆಪಿ ಇನ್ನಷ್ಟು ಹಿನ್ನಡೆ ಕಾಣುತ್ತಿತ್ತು. ಜೆಡಿ(ಎಸ್) ಬಗೆಗೂ ಜನಕ್ಕೆ ತೀವ್ರ ಭ್ರಮ ನಿರಸನ ಆಗುತ್ತಿದೆ. ಕಾಂಗ್ರೆಸ್ ಆಳ್ವಿಕೆಯ ಬಗೆಗೂ ಭಾರಿ ಉತ್ಸಾಹ, ಭರವಸೆಗಳೂ ಕಂಡು ಬರುತ್ತಿಲ್ಲ ಎಂದು ಹೇಳಬಹುದೇನೋ?

ಮೂರೂ ಪಕ್ಷಗಳ ಪ್ರಮುಖ ಸೋಲುಗಳನ್ನು (ಗೆಲುವುಗಳಲ್ಲ) ಗಮನಿಸಿದರೆ ತೀವ್ರ ಆಂತರಿಕ ಕಲಹಗಳು, ವ್ಯಕ್ತಿಗತ ಪೈಪೋಟಿಗಳನ್ನು ನೋಡಬಹುದು. ಹಲವು ಕಡೆ ಇದು ಪಕ್ಷದ ಗಡಿಗಳನ್ನು ಮೀರಿ ‘ನನ್ನ ವೈರಿಯ ವೈರಿ ಮಿತ್ರ’ ಎಂಬ ಫಾರ್ಮುಲಾಗೂ ಕಾರಣವಾಗಿದೆ. ಬೆಳಗಾವಿ ಪಕ್ಷೇತರನ ಜಯಭೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳ ಒಂದು ಬಣ ಮಹತ್ವದ ಪಾತ್ರ ವಹಿಸಿದೆ ಎಂಬುದು ಗಮನಾರ್ಹ. ಐದು ದ್ವಿ-ಸದಸ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಕಡೆ ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಅಭ್ಯರ್ಥಿ ಹಾಕಿದ ‘ರಕ್ಷಣಾ ಆಟ’ದ ಹಿಂದೆ ಇದ್ದಿದ್ದೂ ಇದೇ ಅಂಶ. ಮೂರೂ ಪಕ್ಷಗಳಲ್ಲಿ ಗೆದ್ದವರು ಅದೇ ಶಿಕ್ಷಣ, ರೀಯಲ್ ಎಸ್ಟೇಟ್, ಮತ್ತು ಕೈಗಾರಿಕಾ ಉದ್ಯಮಿಗಳು ಅಥವಾ ಅವರ ಪ್ರತಿನಿಧಿಗಳು. ಪಕ್ಷಗಳ ನೀತಿ, ಸಿದ್ಧಾಂತಗಳಿಗಿಂತ ಈ ವ್ಯಕ್ತಿಗಳ, ಶಕ್ತಿಗಳ ಹಿತಾಸಕ್ತಿಗಳೇ ಮುಖ್ಯವಾಗಿವೆ. ಪರಿಷತ್ತು ಇರುವುದು ವಿವಿಧ ಕ್ಷೇತ್ರಗಳ ಪರಿಣತರ, ಅನುಭವಿಗಳ, ಮೇಧಾವಿಗಳ, ಹಿರಿಯರ ಮೌಲಿಕ ಸಲಹೆಗಾಗಿ ಎಂಬ ಸಂವಿಧಾನದ ಸದಾಶಯ, ಈ ಬಾರಿಯ ಚುನಾಯಿತರ ಹಿನ್ನೆಲೆ ನೋಡಿದರೆ ಕೈಗೂಡಲಾರದ್ದು, ಆದ್ದರಿಂದ ಪರಿಷತ್ತು ಮುಂದುವರೆಸುವುದು ಅರ್ಥಹೀನ ಎಂದನಿಸುತ್ತದೆ.

ಇದರರ್ಥ ರಾಜ್ಯದ ರಾಜಕೀಯದಲ್ಲಿ ಈ ಫಲಿತಾಂಶಕ್ಕೆ ಮಹತ್ವವಿಲ್ಲ, ಅದರ ಪರಿಣಾಮವಿಲ್ಲ ಎಂದಲ್ಲ. ವಿಧಾನ ಪರಿಷತ್ತಿನಲ್ಲಿ ಪಕ್ಷಗಳ ಬಲಾಬಲ ಗಮನಾರ್ಹವಾಗಿ ಬದಲಾಗದ್ದರಿಂದ, ಮತ್ತು ನಿಕಟ ಭವಿಷ್ಯದಲ್ಲಿ ಬದಲಾಗುವ ಸಾಧ್ಯತೆ ಇಲ್ಲದ್ದರಿಂದ ಕಾಂಗ್ರೆಸ್ ಸರಕಾರ ವಿರೋಧ ಪಕ್ಷಗಳನ್ನು ನಿರ್ಲಕ್ಷಿಸುವಂತಿಲ್ಲ. ಕಾಂಗ್ರೆಸ್ ಒಳಗಿನ ಹಗ್ಗ ಜಗ್ಗಾಟದಲ್ಲಿಯೂ ಸಿದ್ದರಾಮಯ್ಯನವರಿಗೆ ತಾತ್ಕಾಲಿಕವಾದರೂ ವಿರಾಮ ದೊರಕಿದೆ. ಮುಂಬರುವ ಪಂಚಾಯತ್ ಚುನಾವಣೆಗಳಲ್ಲಿ ಯಾವ ಪಕ್ಷವೂ (ಪಕ್ಷದ ಯಾವ ಬಣವೂ!) ಭಾರೀ ಅತ್ಮವಿಶ್ವಾಸ ಅಥವಾ ಭರವಸೆಯಿಂದ ಬೀಗುತ್ತಾ ಜನರ ಬಳಿಗೆ ಹೋಗುವಂತಿಲ್ಲ. ಅಷ್ಟರ ಮಟ್ಟಿಗೆ ಈ ಫಲಿತಾಂಶ ಅರ್ಥಪೂರ್ಣವೇ!