ಬಿಜೆಪಿ ಅಲೆಯೂ ಇಲ್ಲ, ಕಾಂಗ್ರೆಸ್-ಎಡ ಪಕ್ಷಗಳ ಪತನವೂ ಅಲ್ಲ

ಸಂಪುಟ: 10 ಸಂಚಿಕೆ: 23 Sunday, May 29, 2016

ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶಗಳ ಬಗೆಗೆ ಮಾಧ್ಯಮಗಳಲ್ಲಿ ಕೇಳಿ ಬಂದ ಸಾಮಾನ್ಯ ಅಂಶವೆಂದರೆ – ಬಿಜೆಪಿ ದೇಶವ್ಯಾಪಿ ನೆಲೆಯಿರುವ ಪಕ್ಷವಾಗಿ ವಿಸ್ತರಿಸಿದೆ, ಕಾಂಗ್ರೆಸ್-ಎಡ ಪಕ್ಷಗಳು ನೆಲ ಕಚ್ಚಿವೆ ಇನ್ನೆಂದೂ ಚೇತರಿಸಕೊಳ್ಳಲಿಕ್ಕಿಲ್ಲ. ಇದು  ಮಾಧ್ಯಮ-ಪ್ರಣೀತ ವಾಸ್ತವವೇ ?

ಚುನಾವಣೆಯ ಫಲಿತಾಂಶಗಳ ಅಂಕೆಸಂಖ್ಯೆಗಳು ಏನನ್ನು ಹೇಳುತ್ತವೆ? ಐದು ರಾಜ್ಯಗಳಲ್ಲಿ ಎರಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರ ಉಳಿಸಿಕೊಂಡಿವೆ. ಕಾಂಗ್ರೆಸ್ 3 ರಲ್ಲಿ 1 ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿದೆ. ಎಡ ಪಕ್ಷಗಳು ಒಂದು ರಾಜ್ಯವನ್ನು ಗೆದ್ದುಕೊಂಡಿವೆ. ಬಿಜೆಪಿ 5 ರಾಜ್ಯಗಳಲ್ಲಿ 1 ರಲ್ಲಿ ಮಾತ್ರ ಗೆದ್ದು ಅಧಿಕಾರ ಪಡೆದಿದೆ. ಎರಡು ರಾಜ್ಯಗಳಲ್ಲಿ ಕೇವಲ 5 ಸೀಟು ಪಡೆದಿದೆ. ಎರಡು ರಾಜ್ಯಗಳಲ್ಲಿ ಯಾವುದೇ ಸೀಟು ಪಡೆದಿಲ್ಲ.

ರಾಷ್ಟ್ರೀಯ ಪಕ್ಷಗಳು – ಬಿಜೆಪಿ, ಕಾಂಗ್ರೆಸ್, ಎಡ ಪಕ್ಷಗಳು – ಸ್ಪರ್ಧಿಸಿದ ಸೀಟುಗಳು, ಗೆದ್ದ ಸೀಟುಗಳ ಪ್ರಮಾಣ ಕೆಳಗಿನ ಕೋಷ್ಟಕದಲ್ಲಿದೆ. ಈ ಅಂಕೆ ಸಂಖ್ಯೆಗಳ ಪ್ರಕಾರ ಬಿಜೆಪಿಯ ಗೆಲುವಿನ ‘ಹಿಟ್ ರೇಟ್’ ಅತ್ಯಂತ ಕಡಿಮೆ.

ಪಕ್ಷ ಬಿಜೆಪಿ  ಎಡಪಕ್ಷಗಳು ಕಾಂಗ್ರೆಸ್
ಸ್ಪರ್ಧಿಸಿದ ಸೀಟುಗಳು 696 452 363
ಗೆದ್ದ ಸೀಟುಗಳು 64 124 115
‘ಹಿಟ್ ರೇಟ್’  9.1 % 27.4% 31.6%

ಮತಗಳಿಕೆಯಲ್ಲೂ ಅಷ್ಟೇ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಒಂದು ರಾಜ್ಯ (ಕೇರಳ) ಬಿಟ್ಟರೆ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಯ ಶೇಕಡಾ ಮತಗಳಿಕೆ ಕಡಿಮೆ ಆಗಿದೆ. ಕಾಂಗ್ರೆಸ್ ಶೇಕಡಾ ಮತಗಳಿಕೆ ಒಂದು ರಾಜ್ಯ (ಕೇರಳ) ಬಿಟ್ಟರೆ ಇತರ ಎಲ್ಲಾ ರಾಜ್ಯಗಳಲ್ಲೂ ಹೆಚ್ಚಾಗಿದೆ.

ಕೇರಳದಲ್ಲಿ ಎಡ ಪಕ್ಷಗಳು 2011 ವಿಧಾನಸಭೆ ಮತ್ತು 2014 ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ತಮ್ಮ ಮತಗಳಿಕೆ ಹೆಚ್ಚಿಸಿಕೊಂಡಿವೆ.

‘ಬಿಜೆಪಿ ವಿಸ್ತರಿಸಿದೆ, ಕಾಂಗ್ರೆಸ್-ಎಡ ಪಕ್ಷಗಳು ನೆಲ ಕಚ್ಚಿವೆ’ ಎಂಬ ಮಾಧ್ಯಮ-ಪ್ರಣೀತ ಹುಸಿ ವಾಸ್ತವಕ್ಕೆ ಈ ಅಂಕೆಸಂಖ್ಯೆಗಳು ‘ಫಿಟ್’ ಆಗುವುದಿಲ್ಲವಲ್ಲ?

ರಾಜ್ಯ ಕಾಂಗ್ರೆಸ್ ಮತಗಳಿಕೆ ಶೇ. ಬಿಜೆಪಿ ಮತಗಳಿಕೆ ಶೇ.
2014ಲೋ.ಸ. 2016 ವಿ.ಸ. 2014ಲೋ.ಸ. 2016 ವಿ.ಸ.
ಆಸ್ಸಾಮ್   29.5 31.0 36.6 29.5
ಕೇರಳ 31.1 23.7 10.3 10.7
ತಮಿಳುನಾಡು 4.3 6.6 5.5 2.8
ಪಶ್ಚಿಮ ಬಂಗಾಳ 9.6 12.3 16.8 10.2
ಪುದುಚೇರಿ 26.4 30.6
Advertisements

ಮಾಧ್ಯಮ ದೊರೆಯನ್ನು ಸೋಲಿಸಿದ ಹಾಲು ಮಾರುವವ

ಸಂಪುಟ: 10 ಸಂಚಿಕೆ: 23 Sunday, May 29, 2016

ಈತ ಹಾಲು ಮಾರುವವ. ಬೆಳಗ್ಗೆನೇ ಬರಿಗಾಲಲ್ಲಿ ಹಾಲು ಮಾರುತ್ತಾ ಕಲಪೆಟ್ಟ (ವಾಯ್ನಾಡು ಜಿಲ್ಲೆಯ ಸಣ್ಣಪಟ್ಟಣ) ಇಡೀ ಸುತ್ತುತ್ತಾನೆ. ತನ್ನ ಸಣ್ಣ ತುಂಡು ಭೂಮಿಯಲ್ಲಿ ಕೃಷಿಯನ್ನು ಮಾಡುತ್ತಾನೆ. ಆದರೆ ತನ್ನ ಉಳಿದ ಸಮಯವೆಲ್ಲ ಜನರಿಗೇ ಮಿಸಲು. ಈತ ಜನರಿಗೆ ಚಿರಪರಿಚಿತ. ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಈತನ ಹವ್ಯಾಸ. ಬಿ.ಎ. ಪದವೀಧರನಾದ ಈತ ಸಿಪಿಐ(ಎಂ) ವಾಯ್ನಾಡು ಜಿಲ್ಲಾ ಕಾರ್ಯದರ್ಶಿ- ಕಳೆದ ಮೂರು ಅವಧಿಗಳಿಂದ. ಈತ ಸಿಪಿಐ(ಎಂ) ಅಭ್ಯರ್ಥಿ. ಈತನ ಹೆಸರು ಸಸೀಂದ್ರನ್.ಈ

ತನ ಕಾಂಗ್ರೆಸ್ ಪ್ರತಿಸ್ಪರ್ಧಿ ಶ್ರೇಯಂಕುಮಾರ್ ಮಾತೃಭೂಮಿ ಮಾಧ್ಯಮ ಗುಂಪಿನ ಒಡೆಯ. ಈ ಪ್ರದೇಶದಲ್ಲಿ ಈತನ ಒಡೆತನದ ಟೀ ಎಸ್ಟೇಟ್ ಇದೆ. ಕಳೆದ ಎರಡು ಬಾರಿ ವಿಧಾನಸಭೆಗೆ ಚುನಾಯಿತನಾಗಿದ್ದಾನೆ. 2011 ರಲ್ಲಿ 18 ಸಾವಿರ ಅಂತರದಿಂದ.

ಆದರೆ ಈ ಬಾರಿ? ಸಸೀಂದ್ರನ್ 13 ಸಾವಿರ ಅಂತರದಿಂದ ಗೆದ್ದಿದ್ದಾನೆ. ಮಾಧ್ಯಮ ದೊರೆ ಸೋತಿದ್ದಾನೆ.

ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಂದುವರೆಸಲು ತೀರ್ಮಾನ

ಸಂಪುಟ: 10 ಸಂಚಿಕೆ: 23 Sunday, May 29, 2016

ಪ್ರಸ್ತುತ್ತ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೂ ಹಾಲಿ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರನ್ನು ಮುಂದಿನ 2016-17ನೇ ಶೈಕ್ಷಣಿಕ ವರ್ಷಕ್ಕೆ ಮುಂದುವರೆಸಬೇಕು. ವೇತನ ಹೆಚ್ಚಿಸಬೇಕೆಂದು ಮೇ 2ರಂದು ಉನ್ನತ ಶಿಕ್ಷಣ ಸಚಿವರಾದ ಟಿ.ಬಿ. ಜಯಚಂದ್ರರವರ ನಿವಾಸದ ಎದುರು ಅತಿಥಿ ಉಪನ್ಯಾಸಕರು ಧರಣಿ ನಡೆಸಿದರು.

ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಬಿ.ರಾಜಶೇಖರಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಿ ಮಾನ್ಪಡೆ, ರಾಜ್ಯಾಧ್ಯಕ್ಷರಾದ ಶ್ರೀನಿವಾಸ ಚಾರ್, ಉಡುಪಿಯ ಜಿಲ್ಲಾಧ್ಯಕ್ಷರಾದ ರಂಜಿತ್, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಎನ್.ಟಿ.ನಾಯಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಖಂಡರಾದ ಸವಿತಾ ಹಾಗೂ ತುಮಕೂರು ಜಿಲ್ಲೆಯ ಡಾ. ಮಂಜುಳ ಸೇರಿ 7 ಜನರ ನಿಯೋಗದ ಜೊತೆ ಮಾನ್ಯ ಉನ್ನತ ಶಿಕ್ಷಣ ಸಚಿವರು ವಿಕಾಸ ಸೌಧದಲ್ಲಿ ಮಾತುಕತೆಗೆ ಆಹ್ವಾನಿಸಿ ಸಭೆಯನ್ನು ನಡೆಸಿದರು.

ಸಚಿವರ ಜೊತೆ ವಾಗ್ವಾದ: ಉನ್ನತ ಶಿಕ್ಷಣ ಸಚಿವರ ಜೊತೆ ನಿಯೋಗ ಚರ್ಚೆ ಮಾಡುವ ಸಂದರ್ಭದಲ್ಲಿ ವಾಗ್ವಾದ ನಡೆದು, ತಾವು ಇಚ್ಛಾಶಕ್ತಿಯನ್ನು ವ್ಯಕ್ತಪಡಿಸುತ್ತಿದ್ದೀರಿ, ಆದರೆ ಜಾರಿಯಾಗುತ್ತಿಲ್ಲ. ನಮ್ಮನ್ನು ಮುಂದುವರೆಸುತ್ತೇವೆ ಆಥವಾ ಮುಂದುವರೆಸುವುದಿಲ್ಲ ಎಂಬ ತೀರ್ಮಾನಕ್ಕೆ ಬನ್ನಿ ಎಂದು ನಿಯೋಗ ಒತ್ತಾಯಿಸಿತು.

ಈ ಸಂಧರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಬರಮಾಡಿಕೊಂಡು ಸಭೆಯನ್ನು ಮುಂದುವರೆಸಿದ ಮಾನ್ಯ ಉನ್ನತ ಶಿಕ್ಷಣ ಸಚಿವರು, ನಮ್ಮ ಬೇಡಿಕೆಗೆ ಸ್ಪಂದಿಸಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವಷ್ಟು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಾಗ, ಪ್ರಸಕ್ತ ವರ್ಷ ಸೇವೆಯಲ್ಲಿರುವವರನ್ನು ವಯೋಮಿತಿ ಮತ್ತು ಸೇವಾ ಹಿರಿತನದ ಆಧಾರದಲ್ಲಿ ಮುಂದುವರೆಸಲಾಗುವುದು. ಇದರ ಜೊತೆಗೆ ಕಳೆದ ಜನವರಿ ತಿಂಗಳಲ್ಲಿ ಪ್ರತಿಭಟನೆ ನಿರತ ಉಪನ್ಯಾಸಕರ ವೇತನ ತಡೆಹಿಡಿದಿದ್ದನ್ನು, ನಂತರದ ದಿನಗಳಲ್ಲಿ ಪಾಠ ಪ್ರವಚನಗಳನ್ನು ಮಾಡಿ ಮುಗಿಸಿರುವ ಉಪನ್ಯಾಸಕರಿಗೆ ವೇತನ ಕೊಡಲಾಗುವುದೆಂದು ತೀರ್ಮಾನಕ್ಕೆ ಬಂದರು.

ನಂತರದಲ್ಲಿ ಧರಣಿ ನಿರತ ಅತಿಥಿ ಉಪನ್ಯಾಸಕರು ರಾಜ್ಯ ಮಟ್ಟದ ಸಭೆ ನಡೆಸಿ, ಮುಂದೆ ರಾಜ್ಯ ಸರಕಾರದ ನಡೆಯನ್ನು ನೋಡಿಕೊಂಡು ಮುಂದಿನ ಹೋರಾಟವನ್ನು ತೀರ್ಮಾನಿಸೋಣ ಎಂದು ಅಭಿಪ್ರಾಯಕ್ಕೆ ಬರಲಾಗಿದೆ.

ಈ ಬಾರಿಯ ಅಮೆರಿಕಾ ಭೇಟಿ: ಹೊಸ ಪೇಟೆಂಟ್ ಧೋರಣೆಯ ಉಡುಗೊರೆ ಮತ್ತು ಕೃಷಿ ಮಂತ್ರಾಲಯದಲ್ಲೂ ಒಂದು ತಿಪ್ಪರಲಾಗ

ಸಂಪುಟ: 10 ಸಂಚಿಕೆ: 23 date: Sunday, May 29, 2016
ಮೇ 12ರಂದು ‘ಅಚ್ಛೇ ದಿನ್’ ಸಂಪುಟ ‘ರಾಷ್ಟ್ರೀಯ ಬೌದ್ಧಿಕ ಹಕ್ಕುಗಳ ಧೋರಣೆ’ಗೆ ಮಂಜೂರಾತಿ ನೀಡಿದೆ. ‘ಸೃಜನಾತ್ಮಕ ಭಾರತ, ನವೀನತೆಯ ಭಾರತ’ ಎಂಬುದು ಇದರ ಘೋಷವಾಕ್ಯ. ಸಾಮಥ್ರ್ಯಗಳನ್ನು, ಸಂಸ್ಥೆಗಳನ್ನು ಮತ್ತು ಜಾಗೃತಿಯನ್ನು ಬೆಳೆಸುವ ಕಣ್ಣೊಟ ಹೊಂದಿರುವ, ಸಂಶೋಧನೆ ಮತ್ತು ಅಭಿವೃದ್ಧಿಗೆ, ನವೀನ ಶೋಧಗಳಿಗೆ ಪ್ರೋತ್ಸಾಹ ಕೊಡುವ ಹಾಗೂ ಪಾರಂಪರಿಕ ಜ್ಞಾನದತ್ತವೂ ನೋಡುವ ಈ ಧೋರಣೆ ಭಾರತದ ಮುನ್ನಡೆಗೆ ಒಂದು ಮಹಾನ್ ಹೆಜ್ಜೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಗಳು ವರ್ಣಿಸಿದ್ದಾರೆ. ಆದರೆ ಈ ರಂಗದ ಪರಿಣಿತರಿಗೆ ಈ ಬಗ್ಗೆ ಹಲವು ಸಂದೇಹಗಳಿವೆ. ಪ್ರಧಾನಿಗಳ ಮತ್ತೊಂದು ಅಮೆರಿಕಾ ಭೇಟಿಯ ಮುನ್ನಾದಿನ ಇದನ್ನು ಪ್ರಕಟಿಸಿರುವುದು ಈ ಸಂದೇಹಗಳನ್ನು ಗಟ್ಟಿಗೊಳಿಸಿದೆ.

ಔಷಧಿಗಳ ಲಭ್ಯತೆಯ ಕ್ಷೇತ್ರದ ಸಂಶೋಧಕರಾದ ಅಚಲ್ ಪ್ರಭಾಲ ಮತ್ತು ಅಜೀಂ ಪ್ರೇಮ್ ಜಿ  ವಿಶ್ವದ್ಯಾಲಯದ ಪ್ರಾಧ್ಯಾಪಕ ಸುಧೀರ್ ಕೃಷ್ಣಸ್ವಾಮಿ ಇದು ಭಾರತ ತನ್ನ ಪೇಟೆಂಟ್(ಬೌದ್ಧಿಕ ಹಕ್ಕುಗಳ) ಕಾನೂನುಗಳನ್ನು  ಬದಲಿಸುವದಿಲ್ಲ ಎಂಬ ಅಚ್ಚುಕಟ್ಟಾದ ಘೋಷಣೆಯನ್ನು ಅಮೆರಿಕಾ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ನೆಮ್ಮದಿ ಮತ್ತು ಸಂತೋಷ ನೀಡುವ ಬೆಟ್ಟದಷ್ಟು ತಂಪನೆಯ ಗಾಳಿಯ ನಡುವೆ ತೂರಿಸಿಟ್ಟಿದೆ ಎಂದು ಇದನ್ನು ವರ್ಣಿಸಿದ್ದಾರೆ (ದಿ ಹಿಂದು, ಮೇ 25). ಇದು ‘ಸೋಗಿನ ಒಂದು ಮಹಾ ಕಸರತ್ತು’  ಎನ್ನುವುದನ್ನು ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.

ಈ ದಸ್ತಾವೇಜಿನಲ್ಲಿ ‘ಅವೇರ್ ನೆಸ್’(ಜಾಗೃತಿ) ಎಂಬ ಪದ ಕನಿಷ್ಟ 20 ಬಾರಿ ಬಂದಿದೆ ಹಾಗೂ ‘ಟ್ರೆಡಿಶನಲ್ ನಾಲೆಡ್ಜ್’(ಸಾಂಪ್ರದಾಯಿಕ ಜ್ಞಾನ) ಎಂಬ ಪದ 22 ಬಾರಿ ಬಂದಿದೆ ಎನ್ನುವ ಅವರು ಹೆಚ್ಚೆಚ್ಚು ಬೌದ್ಧಿಕ ಹಕ್ಕು ಎಂದರೆ ಹೆಚ್ಚೆಚ್ಚು ನವೀನ ಶೋಧನೆಗಳು ಎಂಬ ಪಾಶ್ಚಿಮಾತ್ಯ ಕಟ್ಟುಕತೆಯ ಗಿಳಿಪಾಠ ಒಪ್ಪಿಸುತ್ತ, ಸ್ಥಳೀಯ ಜ್ಞಾನದ ಖಾಸಗೀಕರಣಕ್ಕೆ ಅರ್ಥಹೀನವಾದ ಪ್ರೋತ್ಸಾಹ  ಕೊಡುತ್ತ ಈ ಧೋರಣೆ ಒಂದು ಉತ್ತಮ ಅವಕಾಶವನ್ನು ಕಳಕೊಂಡಿದೆ ಎನ್ನುತ್ತಾರೆ. ಇದು ಪಾಶ್ಚಿಮಾತ್ಯ ನವ-ಉದಾರವಾದ ಮತ್ತು ದೇಶೀ ಕೋಮುವಾದದ ಸ್ಫೋಟಕ ಮಿಶ್ರಣದ ಇನ್ನೊಂದು ಮಾದರಿ ಎಂದರೆ ತಪ್ಪಾಗುತ್ತದೆಯೇ?

ಈಗಿರುವ ಭಾರತದ ಪೇಟೆಂಟ್ ಕಾನೂನು ನವೀನತೆಯನ್ನು ಬೆಂಬಲಿಸುತ್ತಲೇ ಕೈಗೆಟಕುವ ಬೆಲೆಗಳಲ್ಲಿ ಔಷಧಿಗಳ ಲಭ್ಯತೆಗೂ ಅವಕಾಶ ಕಲ್ಪಿಸಿದ್ದು ಕಾನೂನು ರೂಪಿಸುವಲ್ಲಿ ಒಂದು ನವೀನತೆಯನ್ನು ತಂದಿತ್ತು. ದಕ್ಷಿಣ ಆಫ್ರಿಕಾ ಮತ್ತು ಬ್ರೆಝಿಲ್ ಇದರಿಂದ  ಪ್ರೇರಿತರಾಗಿದ್ದು ತಮ್ಮ ದೇಶದಲ್ಲಿ ಇಂತಹ ಪೇಟೆಂಟ್ ಕಾನೂನುಗಳನ್ನು ತರಲು ಮುಂದಾದವು.  ನಮ್ಮ ಪ್ರಧಾನಿಗಳ ವಿದೇಶಿ ಪ್ರವಾಸಗಳು ಭಾರತದ ಹೆಮ್ಮೆಯನ್ನು ವರ್ಧಿಸಿವೆ ಎನ್ನುತ್ತಾರೆ ಸಂಘ ಪರಿವಾರದ ಮಂದಿ. ಆದರೆ  ಪೇಟೆಂಟ್ ರಂಗದಲ್ಲಿ ನಿಜವಾಗಿಯೂ ಈಗಾಗಲೇ ಗಳಿಸಿರುವ ಭಾರತದ ನೇತೃತ್ವದ ಸ್ಥಾನವನ್ನು ಗಟ್ಟಿಗೊಳಿಸುವ ಅವಕಾಶವನ್ನು ಈ ಹೊಸ ಧೋರಣೆ ಕಳಕೊಂಡಿದೆ ಎಂದು ಈ ಇಬ್ಬರು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತದ ಪೇಟೆಂಟ್ ಕಾನೂನಿನ ಮೇಲೆ ಅಮೆರಿಕಾ ತನ್ನ ಸೂಪರ್ 301 ಕಾನೂನಿನ ಮೂಲಕ ಒತ್ತಡ ಹಾಕುತ್ತಿದೆ. ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ)ಯ ಸದಸ್ಯತ್ವ ಪಡೆಯಲು ಭಾರತ ತನ್ನ ಪೇಟೆಂಟ್ ಕಾನೂನನ್ನು ಅದರ ‘ಟ್ರಿಪ್ಸ್’ ಸಂಧಿಗೆ ಅನುಗುಣವಾಗುವಂತೆ ಬದಲಿಸಿತ್ತು. ಆದರೆ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಅದರಿಂದಲೂ ತೃಪ್ತಿಯಿಲ್ಲ. ಅವು ನಮ್ಮ ಪೇಟೆಂಟ್ ಕಾನೂನುಗಳನ್ನು ಇನ್ನಷ್ಟು ಬಲಪಡಿಸಬೇಕು, ಅಂದರೆ ಅವುಗಳ ಪೇಟೆಂಟ್ ಹುನ್ನಾರಗಳಿಗೆ ಮತ್ತಷ್ಟು ಅವಕಾಶ ಮಾಡಿಕೊಡುವಂತೆ ಇರಬೇಕು ಎಂದು ಒತ್ತಾಯಿಸುತ್ತಲೇ ಇವೆ. ಮೇ 12ರಂದು ಮೋದಿ ಸಂಪುಟ ಮಂಜೂರು ಮಾಡಿರುವ ಈ ಧೋರಣೆ ಆ ದಿಕ್ಕಿನಲ್ಲಿರುವಂತದ್ದು ಎಂದು ಈ ರಂಗದ ಇನ್ನೊಬ್ಬ ತಜ್ಞ ಡಾ. ದಿನೇಶ್ ಅಬ್ರೋಲ್ ಹೇಳುತ್ತಾರೆ(ಪೀಪಲ್ಸ್ ಡೆಮಾಕ್ರಸಿ, ಮೇ 22).

ಜೂನ್ 7-8ರಂದು ಪ್ರಧಾನಿಗಳು ಅಮೆರಿಕಾಕ್ಕೆ ಎರಡು ವರ್ಷಗಳಲ್ಲಿ ನಾಲ್ಕನೇ ಭೇಟಿಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಈ ಹೊಸ ಪೇಟೆಂಟ್ ಧೋರಣೆಯನ್ನು ಪ್ರಕಟಿಸಿರುವುದು ಬಹಳ ಮಹತ್ವದ್ದು ಎನ್ನುತ್ತಾರೆ ಡಾ.ಅಬ್ರೋಲ್. ಈ ಧೋರಣೆ ಪೇಟೆಂಟ್ ಕಾನೂನು, ಟ್ರೇಡ್ ಮಾಕ್ರ್ಸ್ ಕಾನೂನು, ಡಿಸೈನ್ ಕಾನೂನು, ಸರಕುಗಳ ಭೌಗೋಳಿಕ ಸೂಚಕಗಳ ಕಾನೂನು, ಕಾಪಿರೈಟ್ ಕಾನೂನು, ಸಸ್ಯ ವೈವಿಧ್ಯ ರಕ್ಷಣೆ ಕಾನೂನು, ರೈತರ ಹಕ್ಕುಗಳ ಕಾನೂನು, ಸೆಮಿಕಂಡಕ್ಟರ್ ಐಸಿ ಡಿಸೈನ್ ಕಾನೂನು ಮತ್ತು ಜೀವಶಾಸ್ತ್ರೀಯ ವೈವಿಧ್ಯತೆಯ ಕಾನೂನು ಇವನ್ನೆಲ್ಲ ನಿರ್ವಹಿಸುವಂತದ್ದು. ಇದರಿಂದ ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾದರೆ, ಭಾರತೀಯ ಜನತೆ ದೇಶೀಯ ತಂತ್ರಜ್ಞಾನ ಮತ್ತು ಕೈಗಾರಿಕಾ ಸಾಮಥ್ರ್ಯದ ಅಭಿವೃದ್ಧಿಗೆ ಹಲವಾರು ಕಂಟಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಬ್ರೋಲ್ ಹೇಳುತ್ತಾರೆ.

ಮುಖ್ಯವಾಗಿ ಔಷಧಿಗಳು, ಆಹಾರ, ಪರಿಸರ ರಕ್ಷಣೆ ಮುಂತಾದವುಗಳಲ್ಲಿ ಭಾರತದ ಜನತೆ, ವಿಶೇಷವಾಗಿ ರೈತರು ಅಮೆರಿಕನ್ ಮತ್ತು ಯುರೋಪಿಯನ್ ಗುತ್ತೇದಾರಿಗಳ ಅಟಾಟೋಪಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕಾ ಭೇಟಿಯಲ್ಲಿ ಒಂದು ಉಡುಗೊರೆಯನ್ನು ನಮ್ಮ ಪ್ರಧಾನಿಗಳು ಕೊಂಡೊಯ್ಯಬೇಕಾಗಿತ್ತು. ಅದು ಈ ಬೌದ್ಧಿಕ ಹಕ್ಕುಗಳ ಧೋರಣೆ ಎನ್ನುತ್ತಾರೆ ದಿನೇಶ್ ಅಬ್ರೋಲ್.

‘ಅಚ್ಛೇದಿನ್’ ಸರಕಾರ ಎರಡು ವರ್ಷಗಳನ್ನು ಪೂರೈಸುವ ವೇಳೆಗೆ ನಮ್ಮ ಧೀರ ಪ್ರಧಾನಿ ಭಾರತದ ಜನತೆಯ ಹಿತಗಳನ್ನು ಬಲಿಗೊಟ್ಟು ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಗೆ ‘ಅಚ್ಛೇದಿನ್’ಗಳ ಉಡುಗೊರೆಯನ್ನು ಹೊತ್ತು ಅಮೆರಿಕಾಕ್ಕೆ ಹೋಗುತ್ತಿದ್ದಾರೆ ಎಂಬುದು ಈ ಮೂವರು ತಜ್ಞರ ವಿಶ್ಲೇಷಣೆಗಳಿಂದ ಕಂಡು ಬರುವ ಸಂಗತಿ.

ಇನ್ನೊಂದು ತಿಪ್ಪರಲಾಗ-ಜಿಎಂ ಬೀಜಗಳ ರಾಯಲ್ಟಿಯಲ್ಲಿ ಮಾನ್ಸೆಂಟೋಗೆ ರಿಯಾಯ್ತಿ!

ಇತ್ತೀಚೆಗೆ ಮೋದಿ ಸರಕಾರದ ಕೃಷಿ ಮಂತ್ರಾಲಯ ಕೃಷಿ ತಂತ್ರಜ್ಞಾನದ ಕಂಪನಿಗಳಿಗೆ ಅವರ ತಳಿ ಮಾರ್ಪಾಡಿನ(ಜಿಎಂ) ಬೀಜಗಳಿಗೆ ಕೊಡುವ ರಾಯಧನ(ರಾಯಲ್ಟಿ)ವನ್ನು ಮೊದಲ 5ವರ್ಷಗಳಲ್ಲಿ 10ಶೇ.ಕ್ಕೆ ಮತ್ತು ನಂತರ ಪ್ರತಿವರ್ಷ 10ಶೇ. ಕಡಿತ ಮಾಡಲಾಗುವುದು, ಈ ಬಗ್ಗೆ ಈಗಾಗಲೇ ನೀಡಲಾಗಿರುವ ಲೈಸೆನ್ಸ್ ಗಳು ರದ್ದಾಗುತ್ತವೆ, 30ದಿನಗಳೊಳಗೆ ಈ ಬಗ್ಗೆ ಕಂಪನಿಗಳು ಸರಕಾರದೊಂದಿಗೆ ಮರು ಮಾತುಕತೆ ನಡೆಸಬೇಕು ಎಂದು ಆದೇಶ ಹೊರಡಿಸಿತ್ತು.

ಆದರೆ ಈಗ ಆ ಆದೇಶವನ್ನು ತಡೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಈ ಆದೇಶದಿಂದ ಮುಖ್ಯವಾಗಿ ಇಂತಹ ಬೀಜಗಳ ಗುತ್ತೇದಾರಿಕೆ ಹೊಂದಿರುವ ಅಮೆರಿಕಾದ ಮಾನ್ಸೆಂಟೋ ಕಂಪನಿಗೆ ಬಹಳ ತೊಂದರೆಯಾಗುತ್ತಿತ್ತು. ಪ್ರಧಾನ ಮಂತ್ರಿಗಳ ಕಚೇರಿಯ ಮಧ್ಯಪ್ರವೇಶದಿಂದಾಗಿ, ಹಣಕಾಸಿನ ಮಂತ್ರಿಗಳ ಇತ್ತೀಚಿನ ಮೂರು ತಿಪ್ಪರಲಾಗಗಳ ನಂತರ  ಕೃಷಿ ಕ್ಷೇತ್ರದ ಈ ತಿಪ್ಪರಲಾಗ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆರೆಸ್ಸೆ ಸನ ಒಂದು ಸಂಘಟನೆಯ ಒತ್ತಡದಿಂದ ಹೊರಬಂದ ಈ ಆದೇಶವನ್ನು ಪ್ರಧಾನ ಮಂತ್ರಿಗಳ ಕಚೇರಿಯ ಒತ್ತಡದಿಂದಾಗಿ ಹಿಂತೆಗೆದುಕೊಳ್ಳಲಾಗಿದೆಯಂತೆ. ನಾಲ್ಕನೇ ಅಮೆರಿಕಾ ಭೇಟಿ ಕಾಲದಲ್ಲಿ ಪ್ರಧಾನಿಗಳಿಗೆ ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳಿಂದ ಕಿರಿಕಿರಿಯಾಗದಿರಲಿ ಎಂದಷ್ಟೇ ಈ ತಿಪ್ಪರಲಾಗ ಇರಬಹುದೇ ಎಂದು ಕೃಷಿ ಮಂತ್ರಾಲಯದ ಮೂಲ ಆದೇಶದಿಂದ ಕಿಡಿಕಿಡಿಯಾಗಿರುವ ನವ-ಉದಾರವಾದಿಗಳಿಗೂ ಸಂದೇಹ. ಅಮೆರಿಕಾ ಭೇಟಿಯಿಂದ ಹಿಂದಿರುಗಿದಾಗ ಮತ್ತೆ 56 ಅಂಗುಲ ಎದೆಯ ನೆನಪಾಗಬಹುದೇ ಎಂಬ ಆತಂಕ ಅವರಿಗೆ!

ವೇದರಾಜ್ ಎನ.ಕೆ.

ಯುಜಿಸಿಯ ಹೊಸ ಅಧಿಸೂಚನೆ-ಸಾರ್ವಜನಿಕ ಉನ್ನತ ಶಿಕ್ಷಣವನ್ನು ಕಳಚಿ ಹಾಕುವ ಹುನ್ನಾರ :ಎಸ್.ಎಫ್.ಐ

ಸಂಪುಟ: 10 ಸಂಚಿಕೆ: 23 date: Sunday, May 29, 2016

ಇತ್ತೀಚೆಗೆ ವಿಶ್ವವಿದ್ಯಾಲಯ ಧನಸಹಾಯ ಅಯೋಗ(ಯುಜಿಸಿ) 3ನೇ ತಿದ್ದುಪಡಿ, 2016ರ ಮಿಟಿಫಿಕೇಶನ್ ಬಂದಿದೆ. ಇದು ನಮ್ಮ ವಿಶ್ವದ್ಯಾಲಯಗಳಲ್ಲಿ ಬೋಧನೆ ಮತ್ತು ಕಲಿಕೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ ಎಂದು ಎಸ್.ಎಫ್.ಐ ದಿಲ್ಲಿ ರಾಜ್ಯ ಸಮಿತಿ ಖಂಡಿಸಿದೆ.

ಇದು ನೇರ ಬೋಧನಾ ಅವಧಿಯನ್ನು ಅಸಿಸ್ಟೆಂಟ್ ಫ್ರೊಫೆಸರುಗಳಿಗೆ 16ರಿಂದ 24 ಗಂಟೆಗಳಿಗೆ ಏರಿಸಿದೆ ಮತ್ತು ಅಸೋಸಿಯೇಟ್ ಪ್ರೊಫೆಸರುಗಳಿಗೆ 14ರಿಂದ 22 ಗಂಟೆಗಳಿಗೆ ಏರಿಸಿದೆ. ಎರಡು ಗಂಟೆಗಳ ಪ್ರಾಕ್ಟಿಕಲ್ ಅವಧಿಯನ್ನು ಇನ್ನು ಮುಂದೆ ಒಂದು ಗಂಟೆಯ ಪಾಠ ಎಂದು ಪರಿಗಣಿಸಲಾಗುವುದಂತೆ. ಇದರಿಂದ ಒಂದೆಡೆ ಈಗ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ನೂರಾರು ಅಧ್ಯಾಪಕರು, ತಾತ್ಕಾಲಿಕ ಬೋಧನಾ ಕೆಲಸಗಳನ್ನು ಮಾಡುತ್ತಿರುವ ಎಂಫಿಲ್ ಮತ್ತು ಪಿ.ಹೆಚ್.ಡಿ ವಿದಾರ್ಥಿಗಳೂ  ಕೆಲಸ ಕಳಕೊಳ್ಳುತ್ತಾರೆ. ಇನ್ನೊಂದೆಡೆಯಲ್ಲಿ ಇದು ವಿದ್ಯಾರ್ಥಿ:ಅಧ್ಯಾಪಕ ಅನುಪಾತವನ್ನು ಮತ್ತಷ್ಟು ಕೆಡಿಸಿ ಕಲಿಕೆಯ ಪ್ರಕ್ರಿಯೆಗೆ ಬಾಧಕವಾಗುತ್ತದೆ ಎಂದು ಎಸ್.ಎಫ್.ಐ ಅಭಿಪ್ರಾಯ ಪಟ್ಟಿದೆ.

ಈಗ ದಿಲ್ಲಿ ವಿಶ್ವವಿದ್ಯಾಲಯದಲ್ಲಿ 4000 ಅಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡದೇ ಬಿಡಲಾಗಿದೆ. ಈ ನೋಟಿಫಿಕೇಶನ್ ಮೂಲಕ ಈ ಹುದ್ದೆಗಳಲ್ಲಿ ಬಹಳಷ್ಟು ರದ್ದಾಗುತ್ತವೆ. ಇದು ಯುಜಿಸಿಗೆ ಹಣನೀಡಿಕೆಯಲ್ಲಿ 55ಶೇ.ದಷ್ಟು ಕಡಿತ ಮಾಡಿರುವ ಈ ಅಚ್ಚೇ ದಿನ್ ಸರಕಾರದ ಕ್ರಮದ ದುಷ್ಪರಿಣಾಮ. ಈ ಹುದ್ದೆಗಳನ್ನು ರದ್ದುಗೊಳಿಸುವುದೇ ಈ ಸರಕಾರದ ಉದ್ದೇಶವಿರುವಂತೆ ಕಾಣುತ್ತದೆ ಎಂಬುದು ವಿದ್ಯಾರ್ಥಿಗಳ ಆತಂಕ.

ದಿಲ್ಲಿ ವಿಶ್ವವಿದ್ಯಾಲಯ ಹಿಂದುಳಿದ ಸಾಮಾಜಿಕ ವಿಭಾಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಬೋಧನೆಯ ಕೊರತೆಗಳನ್ನು ತುಂಬಲು ವಿಶೇಷ ಟ್ಯುಟೋರಿಯಲ್ ತರಗತಿಗಳನ್ನು ನಡೆಸುತ್ತಿತ್ತು. ಈ ಆಧಿಸೂಚನೆ ಆ ಕ್ರಮವನ್ನೂ ದುರ್ಬಲಗೊಳಿಸಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯಲ್ಲಿ ದಲಿತ ವಿಭಾಗಗಳ ಸಮಸ್ಯೆಗಳನ್ನು ಪರಿಶೀಲಿಸಿದ ಥೋರಟ್ ಸಮಿತಿ ಕೂಡ ಇಂತಹ ವಿಶೇಷ ತರಗತಿಗಳ ಶಿಫಾರಸು ಮಾಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಮೊದಲು ಮೋದಿ ಸರಕಾರ ಎರಡು ವರ್ಷಗಳನ್ನು ಪೂರೈಸುವ ವೇಳೆಗೆ ಹೊಸ ಶಿಕ್ಷಣ ನೀತಿಯನ್ನು ಪ್ರಕಟಿಸುವುದಾಗಿ ತಿಳಿಸಲಾಗಿತ್ತು. ಬಹುಶಃ ಈ ಅಧಿಸೂಚನೆ ಅದರ ಮುನ್ಸೂಚನೆಯಿರಬಹುದೇ? ಸಾರ್ವಜನಿಕ ಉನ್ನತ ಶಿಕ್ಷಣವನ್ನು ಕಳಚಿ ಹಾಕಿ ಉನ್ನತ ಶಿಕ್ಷಣವನ್ನು ಉಳ್ಳವರಿಗೇ ಸೀಮಿತಗೊಳಿಸುವ ಖಾಸಗಿ ವಿವಿಗಳಿಗೆ ‘ಅಚ್ಚೇ ದಿನ್’ ತರುವ ಹುನ್ನಾರ ಇದರ ಹಿಂದಿದೆಯೇ ಎಂಬುದು ದಲಿತ, ಹಿಂದುಳಿದ ವಿಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳ ಭಯ. ಹೈದರಾಬಾದ್ ಕೇಂದ್ರೀಯ ವಿವಿ, ಜೆ.ಎನ್.ಯು. ಯುಜಿಸಿ ಫೆಲೋಶಿಫ್ ಗಳಲ್ಲಿ ಅಡೆ-ತಡೆಗಳು ಇವೆಲ್ಲ ಈ ಭಯ ನಿರಾಧಾರವೇನೂ ಅಲ್ಲ ಎಂದು ಸೂಚಿಸುತ್ತವೆ.

ಈ ಎಲ್ಲ ಕ್ರಮಗಳನ್ನು ಶಿಕ್ಷಕರ ಸಂಘಟನೆಗಳೊಡನೆ ಚರ್ಚಿಸದೆ ಏಕಪಕ್ಷೀಯವಾಗಿ ಶೈಕ್ಷಣಿಕ ಸುಧಾರಣೆಯ ಹೆಸರಿನಲ್ಲಿ ಜಾರಿಗೆ ತರಲಾಗುತ್ತಿದೆ. ಇದನ್ನು ದಿಲ್ಲಿ ವಿಶ್ವವಿದ್ಯಾಲಯ ಅಧ್ಯಾಪಕರ ಸಂಘ ಬಲವಾಗಿ ಪ್ರತಿಭಟಿಸಿದೆ, ಪ್ರತಿಭಟನಾರ್ಥ ಪರೀಕ್ಷಾ ಮೌಲ್ಯಮಾಪನವನ್ನು ಬಹಿಷ್ಕರಿಸಬೇಕೆಂದು ನಿರ್ಧರಿಸಿದೆ.

ವೇದರಾಜ್ .ಎನ್.ಕೆ

“ಯಾರಾದರೂ ಹೇಳುವರೇ….ನನ್ನ ತಪ್ಪೇನೆಂದು?”

ಸಂಪುಟ: 10 ಸಂಚಿಕೆ: 23 date: Sunday, May 29, 2016

ದಿಲ್ಲಿಯಲ್ಲಿ ಆಫ್ರಿಕಾ ದಿನದಂದು ಕವಿತೆಯ ಮೂಲಕ ಆಪ್ರಿಕಾದ ನೋವು ತೋಡಿಕೊಂಡ ಘಾನಾ ಹೈಕಮಿಶನರ್

ಭಾರತ ಮತ್ತು ಆಫ್ರಿಕಾದ ದೇಶಗಳ ನಡುವೆ ದೀರ್ಘಕಾಲದ ಸೌಹಾರ್ದದ ನಂಟಿಗೆ ಈ ಬಾರಿ ಕುತ್ತು ಬಂದಂತೆ ಕಾಣುತ್ತದೆ. ದಿಲ್ಲಿಯಲ್ಲಿ ಭಾರತದ ವಿದೇಶಾಂಗ ಇಲಾಖೆ ಏರ್ಪಡಿಸುವ ‘ಆಫ್ರಿಕಾದಿನ’ದ ಆಚರಣೆಯನ್ನು ಮುಂದೂಡುವಂತೆ ಹಲವು ಆಫ್ರಿಕನ್ ದೇಶಗಳು ಒತ್ತಾಯಿಸಿದ್ದವು. ಇದು ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಕೊನೆಗೂ ಆಫ್ರಿಕಾದ ರಾಯಭಾರಿಗಳ ಮನ ಒಲಿಸಿ ದಿನಾಚರಣೆ ನಡೆದಿದೆ.

ಕಳೆದ ವಾರ ದೇಶದ ರಾಜಧಾನಿಯ ಬೀದಿಯಲ್ಲಿ ಕಾಂಗೋ ಮೂಲದ ಸ್ನಾತಕೋತ್ತರ ವಿದ್ಯಾರ್ಥಿ ಮಾಸುಂದ ಕಿತಾಡ ಓಲಿವರ್‍ನನ್ನು ಬಡಿದು ಸಾಯಿಸಿದ್ದು ಆಫ್ರಿಕಾದ ರಾಯಭಾರಿಗಳ ದುಗುಡಕ್ಕೆ ಕಾರಣ.

ಈ ಸಮಾರಂಭದಲ್ಲಿ ಘಾನಾದ ಹೈಕಮಿಶನರ್ ಸ್ವರಚಿತ ಕವನದ ಮೂಲಕ ಈ ದುಗುಡಕ್ಕೆ ಅಭಿವ್ಯಕ್ತಿ ನೀಡಿದರು-ನನ್ನ ಬಿಸಿ ಆಫ್ರಿಕನ್ ರಕ್ತ ಇದ್ದಕಿದ್ದಂತೆ ತಣ್ಣಗಾಗಿದೆ. ಯಾರಾದರೂ ಹೇಳಬೇಕು ನನ್ನ ತಪ್ಪೇನೆಂದು” ಎಂದು ಆರಂಭವಾಗುವ ಈ ಕವನ ಆಫ್ರಿಕಾದ ಮಹಾ ನದಿಗಳು, ನೈಲ್, ಗ್ರೇಟ್ ಕಾಂಗೊ, ಟಾಂಗಾನಿಕಾ, ವೋಲ್ಟಾ ಗಂಗೆಯಿಂದ ನನ್ನ ನೆತ್ತರನ್ನು ಪಡೆಯಲಿ” ಎಂದು ಕೊನೆಗೊಳ್ಳುತ್ತದೆ.

ಹೀಗೇಕೆ ಆಗುತ್ತಿದೆ? ಮೋದಿ ಸರಕಾರ ಎಚ್ಚೆತ್ತುಕೊಳ್ಳಲು ಆಫ್ರಿಕನ್ ದೇಶಗಳ ಬಹಿಷ್ಕಾರದ ಕರೆಯ ವರೆಗೆ ಕಾಯಬೇಕಿತ್ತೇ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಕೇಳುತ್ತಾರೆ. ಕಳೆದ ವಾರ ಬಿಹಾರದಲ್ಲಿ ‘ಜಂಗಲ್ ರಾಜ್’ಎಂದು ಟೀಕಿಸುತ್ತಿದ್ದರು. ದೇಶದ ರಾಜಧಾನಿಯಲ್ಲಿ ಯಾರ ರಾಜ್ಯವಿದೆ ಎಂಬ ಪ್ರಶ್ನೆಯನ್ನು ಈಗ ಎಲ್ಲರೂ ಕೇಳುತ್ತಿದ್ದಾರೆ. ಕೇಜ್ರಿವಾಲ್  ಸರಕಾರಕ್ಕಂತೂ ಇಲ್ಲಿಯ ಕಾನೂನು ವ್ಯವಸ್ಥೆ ಒಳಪಟ್ಟಿಲ್ಲವಲ್ಲ!

ವೇದರಾಜ್ ಎನ್.ಕೆ.

ಹೆಂಡ ಇಳಿಸುವವನ ಮಗ ಮುಖ್ಯಮಂತ್ರಿ

ಸಂಪುಟ: 10 ಸಂಚಿಕೆ: 23 Sunday, May 29, 2016

ತುರ್ತು ಪರಿಸ್ಥಿತಿಯ ಕರಾಳ ದಿನಗಳವು. ಆಗ ಶಾಸಕರಾಗಿದ್ದ ಪಿಣರಾಯಿ ವಿಜಯನ್ ಅವರನ್ನು ಕಾಂಗ್ರೆಸಿನ ಕುಖ್ಯಾತ ಗೃಹಮಂತ್ರಿ ಕರಣಾಕರನ್ ಮುಗಿಸಿ ಬಿಡಲು ಯೋಜಿಸಿದಂತಿತ್ತು. ಪಿಣರಾಯಿ ಅವರನ್ನು ಜೈಲಿನಲ್ಲಿ ಬೆತ್ತಲೆ ಮಾಡಿ ಅವರಿಗೆ ದನ ಬಡಿದಂತೆ ಬೆನ್ನ ಚರ್ಮ ಸುಲಿದು ಹೋಗುವ ವರೆಗೆ ಪ್ರಜ್ಞೆ ತಪ್ಪಿ ಹೋಗುವವರೆಗೆ ಬಡಿಯಲಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಅಚ್ಯುತ ಮೆನನ್ ಅವರನ್ನು ಇ.ಎಂ.ಎಸ್. ಮತ್ತು ಎಕೆ.ಜಿ.ಯಂತಹ ಹಿರಿಯ ನಾಯಕರು ಘೇರಾವೋ ಮಾಡಿದ ಮೇಲೆ  ಅವರು ಗೃಹಮಂತ್ರಿಗೆ ವೈಯಕ್ತಿಕವಾಗಿ ದಾಳಿ ನಿಲ್ಲಿಸುವಂತೆ ಆಜ್ಞೆ ಮಾಡುವವರೆಗೆ ವಿಜಯನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜೈಲಿನಲ್ಲಿ ರಕ್ತಸಿಕ್ತವಾಗಿದ್ದ ತಮ್ಮ ಬಟ್ಟೆಗಳನ್ನು ವಿಜಯನ್ ಜೋಪಾನವಾಗಿ ಇಟ್ಟು ಕೊಂಡಿದ್ದರು. ತುರ್ತು ಪರಿಸ್ಥಿತಿಯ ನಂತರ ವಿಧಾನಸಭೆಯ ಅಧಿವೇಶನದಲ್ಲಿ ಅವರು ಈ ಬಟ್ಟೆಗಳನ್ನು ಪ್ರದರ್ಶಿಸಿ ತುರ್ತು ಪರಿಸ್ಥಿತಿಯ ದಮನಕಾರ್ಯಗಳ ಬಗ್ಗೆ ಮಾಡಿದ ಭಾಷಣ ಚಾರಿತ್ರಿಕವೆನಿಸಿದೆ.

ವಿಜಯನ್ ಕಣ್ಣೂರಿನ ‘ಪಿಣರಾಯಿ’ ಎಂಬ ಹಳ್ಳಿಯ ಹೆಂಡ ಇಳಿಸುವ ಕುಟುಂಬದಲ್ಲಿ ಮುಂಡಾಯಿಲ್ ಕೋರನ್ ಮತ್ತು ಕಲ್ಯಾಣಿ ಅವರ ಕೊನೆಯ ಮಗನಾಗಿ 1944ರಲ್ಲಿ ಹುಟ್ಟಿದರು. ಅವರ ಹಳ್ಳಿಯ ಹೆಸರು ಜನತೆಯ ನಡುವೆ ಮತ್ತು ರಾಜಕೀಯ ವಲಯಗಳಲ್ಲಿ ಅವರ ಅನ್ವರ್ಥನಾಮ ಆಯಿತು. ರಾಜಕೀಯವಾಗಿ ಸಕ್ರಿಯವಾದ ಕಣ್ಣೂರಿನಲ್ಲಿ ವಿಜಯನ್ ಅವರ ಮೇಲೆ ಹದಿ ಹರೆಯದಲ್ಲೇ ಕಮ್ಯುನಿಸ್ಟ್ ಪ್ರಭಾವ ತಟ್ಟಿತು. ಅವರು ತಮ್ಮ ಹೈಸ್ಕೂಲು ನಂತರ ಒಂದು ವರ್ಷ ಕೈಮಗ್ಗದಲ್ಲಿ ಕೆಲಸ ಮಾಡಿದರು. ಆ ನಂತರ ಪಿಯು ಮತ್ತು ಡಿಗ್ರಿ ಶಿಕ್ಷಣ ಪಡೆಯುತ್ತಿರುವಾಗಲೇ ವಿದ್ಯಾರ್ಥಿ ರಾಜಕೀಯ ಪ್ರವೇಶಿಸಿದರು.

ಅವರ ರಾಜಕೀಯ ಜೀವನದ ಕೆಲವು ಮೇಲಿಗಲ್ಲುಗಳು ಹೀಗಿವೆ:

–    1964ರಲ್ಲಿ ಕೇರಳ ಸ್ಟುಡೆಂಟ್ಸ್ ಫೆಡರೇಶನ್ (ಎಸ್.ಎಫ್.ಐ.ಗೆ ಹಿಂದಿನ ವಿದ್ಯಾರ್ಥಿ ಸಂಘಟನೆ)ನ ಕಣ್ಣೂರು ಜಿಲ್ಲಾ ಕಾರ್ಯದರ್ಶಿ
–    1967ರಲ್ಲಿ ತಲಸೇರಿ ವಿದಾನಸಭಾ ಕ್ಷೇತ್ರದ ಸಿಪಿಐ(ಎಂ) ಕಾರ್ಯದರ್ಶಿ
–    1968ರಲ್ಲಿ ಕಣ್ಣೂರು ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ
–    1970ರಲ್ಲಿ ಕಣ್ಣೂರಿನ ಕೂತುಪರಂಬು ಕ್ಷೇತ್ರದಿಂದ ತಮ್ಮ 26ನೇ ವಯಸ್ಸಿನಲ್ಲೇ ವಿಧಾನಸಬಾ ಸದಸ್ಯ
–    1972ರಲ್ಲಿ ಕಣ್ಣೂರು ಸಿಪಿಐ(ಎಂ) ಜಿಲ್ಲಾ ಸೆಕ್ರೆಟಾರಿಯಟ್ ಸದಸ್ಯ
–    ತುರ್ತು ಪರಿಸ್ಥಿತಿಯಲ್ಲಿ (1975-77) 18 ತಿಂಗಳುಗಳಲ್ಲಿ ಜೈಲುವಾಸ
–    1977ರಲ್ಲಿ ಕೂತುಪರಂಬು ಕ್ಷೇತ್ರದಿಂದ 2ನೇ ಬಾರಿ ಶಾಸಕರಾಗಿ ಆಯ್ಕೆ
–    1996ರಲ್ಲಿ ಇ ಕೆ ನಯನಾರ್ ಮಂತ್ರಿಮಂಡಲದಲ್ಲಿ ವಿದ್ಯುತ್ ಮಂತ್ರಿ
–    1998ರಲ್ಲಿ ಕಾ. ಚಡಯನ್ ಗೋವಿಂದನ್ ಮರಣದ ನಂತರ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ
–    2002ರಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯ
–    2005, 2008, 2011ರಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಪುನಃ ಆಯ್ಕೆ
–    2016ರಲ್ಲಿ ಧರ್ಮಾಡಮ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ: ಮುಖ್ಯಮಂತ್ರಿ ಪದಗ್ರಹಣ

ಕೇರಳ ಹೊಸ ಬೆಳಗಿನತ್ತ

ಸಂಪುಟ: 10 ಸಂಚಿಕೆ: 23 Sunday, May 29, 2016

ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ 18 ಮಂತ್ರಿಗಳ ಮಂತ್ರಿ ಮಂಡಲ, ತಿರುವನಂತಪುರದ ಕೇಂದ್ರೀಯ ಸ್ಟೆಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದೆ. 30 ಸಾವಿರಕ್ಕೂ ಹೆಚ್ಚು ಜನ ಇದನ್ನು ನೋಡಲು ಹಾಜರಿದ್ದರು. ಇವರಲ್ಲಿ 13 ಜನ ಹೊಸಬರು, ಮೊದಲ ಬಾರಿಗೆ ಮಂತ್ರಿಗಳಾಗುತ್ತಿರುವವರು. ಇಬ್ಬರು ಮಹಿಳೆಯರು. ಮಂತ್ರಿಮಂಡಲದಲ್ಲಿ 12 ಸಿಪಿಐ(ಎಂ), 3 ಸಿಪಿಐ, ತಲಾ 1 ಜೆಡಿ(ಎಸ್), ಎನ್.ಸಿ.ಪಿ., ಕೇರಳ ಕಾಂಗ್ರೆಸ್(ಬಿ) ಗಳಿಗೆ ಸೇರಿದವರು. 18 ಮಂತ್ರಿಗಳ ಪಟ್ಟಿ ಹೀಗಿದೆ:

ಇವರು ಎಲ್.ಡಿ.ಎಫ್. ಮಂತ್ರಿಗಳು

ಪಿಣರಾಯಿ ವಿಜಯನ್              : ಮುಖ್ಯಮಂತ್ರಿ, ಗೃಹ ಖಾತೆ
ಥೋಮಸ್ ಐಸಾಕ್                  : ಹಣಕಾಸು (2ನೇ ಬಾರಿ ಅದೇ ಖಾತೆಗೆ)
ಪಿ ತಿಲೋತ್ತಮನ್                    : ಸಾರ್ವಜನಿಕ ಹಂಚಿಕೆ (3ನೇ ಬಾರಿ ಶಾಸಕ, ಮೊದಲ ಬಾರಿ ಮಂತ್ರಿ)
ವಿ.ಎಸ್.ಸುನೀಲ್‍ಕುಮಾರ್          : ಕೃಷಿ (3ನೇ ಬಾರಿ ಶಾಸಕ, ಮೊದಲ ಬಾರಿ ಮಂತ್ರಿ)
ಜಿ ಸುಧಾಕರನ್                       : ಸಾರ್ವಜನಿಕ ಕಾಮಗಾರಿ (4ನೇ ಬಾರಿ ಶಾಸಕ, 2ನೇ ಬಾರಿ ಮಂತ್ರಿ)
ಕೆ ಕೆ ಶೈಲಜಾ                         : ಆರೋಗ್ಯ, ಸಮಾಜ ಕಲ್ಯಾಣ (3ನೇ ಬಾರಿ ಶಾಸಕಿ, ಮೊದಲ ಬಾರಿ ಮಂತ್ರಿ)
ಸಿ ರವೀಂದ್ರನಾಥ್                    : ಶಿಕ್ಷಣ (3ನೇ ಬಾರಿ ಶಾಸಕ)
ಟಿ.ಪಿ.ರಾಮಕೃಷ್ಣನ್                   : ಅಬಕಾರಿ ಮತ್ತು ಕಾರ್ಮಿಕ (2ನೇ ಬಾರಿ ಶಾಸಕ, ಮೊದಲ ಬಾರಿ ಮಂತ್ರಿ)
ಕೆ. ರಾಜು                               : ಅರಣ್ಯ, ವನ್ಯಮೃಗ ಮತ್ತು ಪರಿಸರ
ಎ ಸಿ ಮೊಯಿದ್ದೀನ್                    : ಪ್ರವಾಸೋದ್ಯಮ, ಸಹಕಾರ (3ನೇ ಬಾರಿ ಶಾಸಕ, ಮೊದಲ ಬಾರಿ ಮಂತ್ರಿ)
ಜೆ ಮರ್ಸಿಕುಟ್ಟಿ ಅಮ್ಮ                 : ಮೀನುಗಾರಿಕೆ (3ನೇ ಬಾರಿ ಶಾಸಕಿ, ಮೊದಲ ಬಾರಿ ಮಂತ್ರಿ)
ಕಡಕಂಪಲ್ಲಿ ಸುರೇಂದ್ರನ್             : ವಿದ್ಯುತ್ ಮತ್ತು ದೇವಸ್ಥಾನಗಳು
ಇ ಪಿ ಜಯರಾಜನ್                    : ಕೈಗಾರಿಕೆ ಮತ್ತು ಕ್ರೀಡೆಗಳು
ಕೆ ಟಿ ಜಲೀಲ್                           : ಸ್ಥಳೀಯ ಸರಕಾರಗಳು (ಮೊದಲ ಬಾರಿ ಮಂತ್ರಿ)
ಎ ಕೆ ಬಾಲನ್                          : ಸಂಸ್ಕೃತಿ, ಹಿಂದುಳಿದ ವರ್ಗಗಳು (2ನೇ ಬಾರಿ ಮಂತ್ರಿ)
ಕದನಪಲ್ಲಿ ರಾಮಚಂದ್ರನ್            : ಬಂದರು, ಮ್ಯೂಸಿಯಂ, ಮೃಗಾಲಯ
ಪಿ ಥೋಮಸ್                           : ನೀರು ಪೂರೈಕೆ (2ನೇ ಬಾರಿ ಮಂತ್ರಿ)
ಎ.ಕೆ.ಸಸೀಂದ್ರನ್                      : ಸಾರಿಗೆ
ಇ ಚಂದ್ರಶೇಖರನ್                     : ರೆವಿನ್ಯೂ

ಎಲ್.ಡಿ.ಎಫ್. ಸರಕಾರದ ತುರ್ತು ಕ್ರಮಗಳು

ಪ್ರಮಾಣ ವಚನ ಸ್ವೀಕರಿಸಿದ ನಂತರ ಸಭೆ ಸೇರಿದ ಮಂತ್ರಿಮಂಡಲ ಕೆಲವು ತುರ್ತು ನಿರ್ಣಯಗಳನ್ನು ತೆಗೆದುಕೊಂಡಿತು. ಅವು ಈ ಕೆಳಗಿನಂತಿವೆ :

  1. ಜಿಶಾ ಅತ್ಯಾಚಾರ ಪ್ರಕರಣದಲ್ಲಿ ಎಡಿಜಿಪಿ ಬಿ. ಸಂಧ್ಯಾ ನೇತೃತ್ವದಲ್ಲಿ ಹೊಸ ತಂಡ ರಚನೆ; ಜಿಶಾ ತಾಯಿಗೆ ರೂ. 5 ಸಾವಿರ ಮಾಸಿಕ ಪೆನ್ಶನ್, ಸೋದರಿಗೆ ಸರಕಾರಿ ಕೆಲಸ; 45 ದಿನಗಳಲ್ಲಿ ಕುಟುಂಬಕ್ಕೆ ಮನೆ
  2. ಯು.ಡಿ.ಎಫ್. ವಿಧಿಸಿದ್ದ ಸರಕಾರಿ ಉದ್ಯೋಗಗಳ ಮೆಲೆ ನಿಷೇಧ ಕೊನೆಗಾಣಿಸುವತ್ತ, ಈಗ ಇರುವ ಖಾಲಿ ಹುದ್ದೆಗಳ ಪಟ್ಟಿ 10 ದಿನಗಳಲ್ಲಿ
  3. ಸಾರ್ವಜನಿಕ ಹಂಚಿಕೆ ಬಲಪಡಿಸಲು, ಅದನ್ನು ವಹಿಸುತ್ತಿರುವ ಸಪ್ಲೈಕೊ ಅನುದಾನ 75 ಕೋಟಿಯಿಂದ 150 ಕೋಟಿ ರೂ.ಗೆ ಇಮ್ಮಡಿ;
  4. ಸಾಮಾಜಿಕ ಭದ್ರತೆ ಪೆನ್ಶನ್ ರೂ. 1000ಕ್ಕೆ ಏರಿಸಲಾಗುವುದು ಮತ್ತು ತಕ್ಷಣ ಎಲ್ಲಾ ಬಾಕಿ ಪಾವತಿ; ಹಿರಿಯ ನಾಗರಿಕರಿಗೆ ಮನೆಗೆ ಪೆನ್ಶನ್ ತಲುಪಿಸಲು ವಿಧಾನ ರೂಪಿಸಲು ನಿರ್ದೇಶನ
  5. ರಾಜ್ಯ ಯೋಜನಾ  ಆಯೋಗ ಮತ್ತು ಯೋಜನಾ ಪ್ರಕ್ರಿಯೆ ಮುಂದುವರಿಕೆ
  6. ಮಳೆಗಾಲದ ಮೊದಲು ಸ್ವಚ್ಛತಾ ವ್ಯವಸ್ಥೆ ತ್ವರಿತಗೊಳಿಸುವುದು;
  7. ಜನವರಿ 2016ರ ನಂತರ ಹಿಂದಿನ ಸರಕಾರ ತೆಗೆದುಕೊಂಡ ನಿರ್ಣಯಗಳ ಪುನರ್ವಿಮರ್ಶೆಗೆ ಎ ಕೆ ಬಾಲನ್ ನೇತೃತ್ವದಲ್ಲಿ ಸಂಪುಟ ಉಪ-ಸಮಿತಿ
  8. ಮಂತ್ರಿಗಳ ಸನ್ಮಾನ ಸಮಾರಂಭದಲ್ಲಿ ಮಹಿಳೆಯರು ಮತ್ತು ಮಕ್ಕಳು ‘ತಾಲಪ್ಪೊಲಿ’ ಹಿಡಿಯುವ ಪದ್ಧತಿ ನಿಲ್ಲಿಸಲು ಸಲಹೆ.

ಸೋಲಿನಿಂದ ಪಾಠ ಕಲಿಯಲು ನಿರಾಕರಿಸುವ ಕಾಂಗ್ರೆಸ್‍ಗೆ ಸರ್ಜರಿ ಮಾಡುವವರಾರು?

ಸಂಪುಟ: 10 ಸಂಚಿಕೆ: 23 date: Sunday, May 29, 2016

ಇತ್ತೀಚೆಗಿನ ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ನೂತನ ಸರಕಾರಗಳ ಸಚಿವ ಸಂಪುಟಗಳು ಅಸ್ತಿತ್ವಕ್ಕೆ ಬಂದಾಗಿದೆ. ಫಲಿತಾಂಶಗಳು ಪ್ರಕಟಗೊಂಡ ಲಾಗಾಯ್ತಿನಿಂದಲೂ ಇಲ್ಲಿಯವರೆಗೂ ‘ಭಾರತ ಕಾಂಗ್ರೆಸ್ ಮುಕ್ತ’ವಾಗಲಿದೆಯೇ ಎಂಬ ಚರ್ಚೆ ನಿಂತಿಲ್ಲ.

ಬಿಜೆಪಿ ಭಾಗಿತ್ವದ ಎನ್.ಡಿ.ಎ. ಸರಕಾರಗಳು ಇರುವುದು 13 ರಾಜ್ಯಗಳಲ್ಲಿ. ಆದರೆ ಇಡೀ ದೇಶವನ್ನೇ ಕಾಂಗ್ರೆಸ್ ಮುಕ್ತ ಅರ್ಥಾತ್ ಎಡ ಶಕ್ತಿಗಳನ್ನೂ ಒಳಗೊಂಡು ಇತರೆ ಯಾವುದೇ ವಿರೋಧ ಪಕ್ಷಗಳ ಸರಕಾರಗಳೇ ಇಲ್ಲದಂತೆ ನಿರ್ನಾಮ ಮಾಡುವ ಸರ್ವಾಧಿಕಾರತ್ವದ ಬೆದರಿಕೆಯ ದುರಹಂಕಾರದ ಮಾತುಗಳಿಗೆ ಕೊನೆಯಿಲ್ಲ. ಇಂತಹ ಚರ್ಚೆಗಳು ಬಿಜೆಪಿಯ ರಾಜಕೀಯ ಅಜೆಂಡಾವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನಗಳು ಎಂಬುದರಲ್ಲಿ ಅನುಮಾನವಿಲ್ಲ. ಅಂತಹವರಿಗೆ ದೇಶದ ಪ್ರಜಾಪ್ರಭುತ್ವದ ಇತಿಹಾಸವಾಗಲೀ, ಜನ ಪರಂಪರೆಯಾಗಲೀ ಗೊತ್ತಿಲ್ಲವೆಂದೇ ಎಚ್ಚರಿಸಬೇಕಾಗುತ್ತದೆ.

ಹಾಗೆಯೇ, ಈ ಸುತ್ತಿನ ಚುನಾವಣೆಯಲ್ಲಿ ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್‍ನ್ನು ಜನತೆ ಸೋಲಿಸಿದ್ದಾರೆ. ಇದೂ ಕೂಡ ರಾಜಕೀಯ ವಲಯಗಳಲ್ಲಿ ಛಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಇದರಿಂದಾಗಿ ದೇಶದಲ್ಲಿ ಕಾಂಗ್ರೆಸ್ ಕೇವಲ 6 ರಾಜ್ಯಗಳಲ್ಲಿ ಅಧಿಕಾರದಲ್ಲಿ ಮಾತ್ರ ಉಳಿದಂತೆ ಆಗಿದೆ. ಅದರಲ್ಲಿಯೂ ಕರ್ನಾಟಕವೊಂದೇ ರಾಜಕೀಯವಾಗಿ ಮತ್ತು ‘ಸಂಪನ್ಮೂಲ’ಗಳ ಲೆಕ್ಕದಲ್ಲಿಯೂ ಅವರಿಗೆ ದೊಡ್ಡ ರಾಜ್ಯ. ಕರ್ನಾಟಕದಲ್ಲಿಯೂ ಮೂರು ವರುಷಗಳನ್ನು ಪೂರೈಸಿರುವ, ಮುಂದಿನ ಚುನಾವಣೆ ಎದುರಿಸಬೇಕಿರುವ ಕಾಂಗ್ರೆಸ್‍ಗೆ ಇದು ಸವಾಲಿನ ಸಂದರ್ಭವಾಗಿಯೂ ಇದೆ. ಒಟ್ಟಾರೆ ಕಾಂಗ್ರೆಸ್ ಪುನಶ್ಚೇತನಗೊಳ್ಳುವುದೇ? ಈ ಕುಸಿತ ಮತ್ತಷ್ಟು ಪ್ರಪಾತಕ್ಕೆ ಹೋಗದಂತೆ ತಡೆಯಬಹುದೇ? ಆ ಸಾಮಥ್ರ್ಯ ನಾಯಕತ್ವಕ್ಕೆ ಇದೆಯೇ? ಹೀಗೆ ಪ್ರಶ್ನೆಗಳನ್ನು ವ್ಯಕ್ತಿನಿಷ್ಠಗೊಳಿಸುತ್ತಲೂ ಗೋಜಲಿನ ಸ್ಥಿತಿಯೂ ಎದುರಾಗಿವೆ. ಅಂದರೆ ಒಟ್ಟಾರೆ ಪ್ರಮುಖ ಅಂಶವೆಂದರೆ ಕಾಂಗ್ರೆಸ್ ಈ ಸೋಲುಗಳಿಂದ ಪಾಠ ಕಲಿಯುವುದೇ? ಎಂಬುದು.

‘ಸೋಲಿನ ಕುರಿತು ಪರಾಮರ್ಶೆ ಮಾಡುತ್ತೇವೆ. ಜನ ಸೇವೆಯಲ್ಲಿ ತೊಡಗುತ್ತೇವೆ’ ಎಂದು ಕಾಂಗ್ರೆಸ್ ಅದ್ಯಕ್ಷೆ ಸೋನಿಯಾಗಾಂಧಿ ಮುಂತಾದ ನಾಯಕರು ಹೇಳಿದರು. ಪ್ರಶ್ನೆಯೆಂದರೆ ಕಾಂಗ್ರೆಸ್ ಪಕ್ಷ ನಿಜಕ್ಕೂ ಸೋಲಿನಿಂದ ಪಾಠ ಕಲಿಯುವುದೇ? ಕಲಿತಿದೆಯೇ? ಹಾಗೆ ಕಲಿತ ಇತಿಹಾಸ ಕಾಂಗ್ರೆಸ್ಸಿಗೆ ಇಲ್ಲ. ಅದು ಬೇಕಾಗಿಯೂ ಇಲ್ಲ. ಜನತೆಯ ತೀರ್ಪನ್ನು ಗೌರವಿಸಿ ಬಂಡವಾಳಗಾರರ, ಭೂಮಾಲಕರ ಪರವಾದ, ಜನದ್ರೋಹಿ ದುರಾಡಳಿತ ನೀತಿಗಳನ್ನು ಅದು ಎಂದೂ ಕೈ ಬಿಡಲೇ ಇಲ್ಲ. ಈಗಲೂ ಇಂದು ಹೈಕಮಾಂಡ್‍ನ ಕೇಂಧ್ರದ ಸಭೆ ಸೋಲಿನ ಪರಾಮರ್ಶೆಗೆಂದು ದೆಹಲಿಯಲ್ಲಿ ಸೇರುತ್ತಿದೆ. ಅಲ್ಲೂ ಖಂಡಿತ ಅದೇ ತೇಲು ರಾಗ. ಬೀಸೋ ದೊಣ್ಣೆ ತಪ್ಪಿದರೆ ನೂರು ವರುಷಗಳ ಆಯುಷ್ಯ ಎಂಬ ತತ್ವದಲ್ಲೇ ಅದಕ್ಕೆ ನಂಬಿಕೆ.

ನಿಜಕ್ಕೂ ಹಾಗೆ ನೋಡಿದರೆ ಈ ಚುನಾವಣಾ ಫಲಿತಾಂಶದ ಬಳಿಕ ಕರ್ನಾಟಕದ ಕಾಂಗ್ರೆಸ್ ನಾಯಕರು ಹೆಚ್ಚು ಮಾತನಾಡ ತೊಡಗಿದ್ದಾರೆ. ಮೂರು ವರುಷಗಳ ಆಡಳಿತ ಇಲ್ಲಿಯವರೆಗೂ ಅಹಿಂದ ಮಂತ್ರದ ಮಂಕುಬೂದಿ ಎರಚುತ್ತಾ ಸಾಗಿಸಿದ್ದಾಯ್ತು, ಮುಂದೇನು? ರಾಜ್ಯದಲ್ಲಿ ಹಲವು ಗುಂಪುಗಳಾಗಿ, ಅಧಿಕಾರ ವಂಚಿತರ ಅತೃಪ್ತಿ ಬಹಿರಂಗ ಆಕ್ರೋಶವಾಗಿ ಹರಿದಿರುವ ಕಾಂಗ್ರೆಸ್‍ನಲ್ಲಿಯೂ ವಿಭಿನ್ನ ಪ್ರತಿಕ್ರಿಯೆಗಳನ್ನು ಹೊರಡಿಸಿದೆ. ಈ ರಾಜ್ಯಗಳ ಚುನಾವಣಾ ಫಲಿತಾಂಶದ ಸೋಲು ಹಾಗೂ ಕರ್ನಾಟಕ ಸರಕಾರದ ಭವಿಷ್ಯದ ಮೇಲೆ ಪರಿಣಾಮ ಕುರಿತು ಪ್ರತಿಕ್ರಿಯಿಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಮಾತುಗಳು ಗಮನಾರ್ಹ. ‘ಸರಿಯಾಗಿ ರಿಪೇರಿ ಮಾಡಬೇಕಿದೆ’ ಎಂದದ್ದು. ಇದು ರಾಜ್ಯದ ವಿದ್ಯಾಮಾನಗಳನ್ನೇ ಆಧರಿಸಿದೆ ಎಂಬ ವ್ಯಾಖ್ಯಾನವೂ ಇದೆ. ರಿಪೇರಿ ಅಂದರೆ ಏನನ್ನು? ಎಲ್ಲಿ? ಎಂಬ ಕುತೂಹಲ ಹುಟ್ಟಿಸಿದೆ. ಹಾಗೆಯೇ ದಿಗ್ವಿಜಯ್ ಸಿಂಗ್ ಸಹ ಕಾಂಗ್ರೆಸ್‍ನಲ್ಲಿ ತಳದಿಂದಲೇ ಮೇಲಿನ ವರೆಗೆ ಬದಲಾವಣೆ ಮಾಡಬೇಕಾದ ಅಗತ್ಯವನ್ನು ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ಸೋಲು ನಿರೀಕ್ಷಿತ.  ಇದು ಸಾಮಾನ್ಯ ವಿಷಯ. ಅಸ್ಸಾಂನಲ್ಲಿ 15 ವರ್ಷಗಳ ಆಡಳಿತದ ಬಳಿಕ ಅಧಿಕಾರ ವಿರೋಧಿ ಮನೋಭಾವದಿಂಧ ಸೋತಿದ್ದರೆ ಕೇರಳದಲ್ಲಿ ಐದು ವರುಷಗಳಿಗೆ ಒಮ್ಮೆ ಬದಲಾಗುವ ಸಹಜ ಪ್ರಕ್ರಿಯೆಯಂತೆ ಆಗಿದೆ. ಪರಾಮರ್ಶೇ ಮಾಡುವೆವು’ ಎಂದು ತಣ್ಣಗೆ ಹೇಳಿ ‘ಸೋಲು ಅದರ ಪರಿಣಾಮ ತಮಗೇನೂ ಅನ್ವಯಿಸುವುದಿಲ್ಲ’ ಎನ್ನುವ ಇಂಗಿತ ನೀಡಿದ್ದಾರೆ. ಜನರ ತೀರ್ಪಿನಿಂದ ಕಲಿಯುವುದು ಅಂತಹುದೇನೂ ಇಲ್ಲವೆನ್ನುವಂತೆ ಮಾತು ಮುಗಿಸಿದ್ದಾರೆ.

ವಿಮರ್ಶೆ ಮಾಡಿಕೊಳ್ಳುವುದು, ಕಲಿಯುವುದು-ಬಿಡುವುದು ಅವರಿಗೆ, ಅವರ ಪಕ್ಷಕ್ಕೆ ಬಿಟ್ಟ ವಿಷಯ. ಮುಖ್ಯ ವಿಷಯ ಈ ಸೋಲಿನ ಬಳಿಕ ರಾಜ್ಯದ ಕಾಂಗ್ರೆಸ್ ಸರಿದಾರಿಗೆ ಬರಬಹುದೇ ಇಲ್ಲ ಒಳ ಜಗಳ, ಗುಂಪುಗಾರಿಕೆ, ಬದಲಾಗದ ನೀತಿಗಳ ಶಿಥಿಲ ಆಡಳಿತ ಮುಂದುವರಿಯುವುದೇ ಎಂಬುದಾಗಿದೆ. ಖರ್ಗೆಯವರ ಮಾತುಗಳನ್ನು ಕೇಳಿದರೆ ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಹೆಪ್ಪುಗಟ್ಟಿರುವ ಅತೃಪ್ತಿ, ಭಿನ್ನಮತಗಳು ಮತ್ತೇ ಭುಗಿಲೇಳಬಹುದು. ಹೈಕಮಾಂಡ್ ಏನನ್ನಾದರೂ ಮಾಡಬಹುದು. ಆಗಲೇ ಸಿದ್ಧರಾಮಯ್ಯನವರ ಅಧಿಕಾರದ ಅವಧಿ ಮುಗಿದಾಗಿದೆ! ಜಾಗ ಖಾಲಿ ಮಾಡಿ ಎಂಬ ಬೇಡಿಕೆಗೆ ಮತ್ತಷ್ಟೂ ಚಾಲನೆ ಪಡೆಯಬಹುದು. ಮೇಲಾಗಿ ಮಂತ್ರಿ ಮಂಡಲದ ವಿಸ್ತರಣೆಗೆ ಮುಹೂರ್ತಗಳನ್ನು ತೋರಿಸುತ್ತಲೇ ಕಾಲ ತಳ್ಳಲಾಗುತ್ತಿದೆ ಹೊರತು ಖಚಿತ ಕ್ರಮ ಸಾಧ್ಯವೇ ಆಗುತ್ತಿಲ್ಲ. ಈ ಬಗ್ಗೆ ಹಾಲಿ ಮತ್ತು ಸಚಿವಾಕಾಂಕ್ಷಿಗಳ ನಡುವೆ ತೀವ್ರ ಅತೃಪ್ತಿಯೂ ಹೆಚ್ಚುತ್ತಿದೆ. ಕೆಲವು ಸಚಿವರ ಹೇಳಿಕೆಗಳೂ ಅನಿಯಂತ್ರಿತವೆಂಬಂತೆ, ಅದಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುವುದು, ಹಿರಿಯ ನಾಯಕರು ಸಹ ತಮ್ಮ ಅತೃಪ್ತಿಗಳು, ಸರಕಾರದ ಬಗೆಗಿನ  ಟೀಕೆಗಳನ್ನು ಸಾರ್ವಜನಿಕವಾಗಿಯೇ ಎಗ್ಗಿಲ್ಲದೇ ಮಾಡುತ್ತಿದ್ದಾರೆ. ಹೈಕಮಾಂಡ್ ವರ್ತನೆಗಳು ಸಹ ಇಂತಹವುಗಳಿಗೆ ಕುಮ್ಮಕ್ಕು ನೀಡುತ್ತಿವೆ. ರಾಜ್ಯ ಸಭೆಗೆ ಅಭ್ಯರ್ಥಿಗಳ ಆಯ್ಕೆಯೂ ಈ ಕದನವನ್ನು ಇಲ್ಲವೇ ಅಂತರವನ್ನು ಹೆಚ್ಚಿಸಲೂ ಬಹುದು.

ಕಾಂಗ್ರೆಸ್ ಸರಕಾರದ ವೈಫಲ್ಯದ ವಿರುದ್ಧ ಬಿಜೆಪಿ-ಸಂಘಪರಿವಾರ ನಿತ್ಯವೂ ಹತ್ತು ರೂಪಗಳಲ್ಲಿ ದಾಳಿ ನಡೆಸುತ್ತಾ ತನ್ನ ರಾಜಕೀಯ, ಸಂಘಟನಾ ಬಲವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಮಗ್ನವಾಗಿದೆ. ಮೂರನೆಯ ಸೆಕ್ಯುಲರ್ ಶಕ್ತಿಗಳ ದುರ್ಬಲತೆಗಳನ್ನೇ ಬಿಜೆಪಿ ಬಳಸಿ ತಾನೇ ಪರ್ಯಾಯವೆಂದೂ ಬಿಂಬಿಸಿಕೊಳ್ಳುತ್ತಿದೆ. ಇದು ರಾಜ್ಯದಲ್ಲಿ ಮೂಲ ನೆಲೆಯಲ್ಲಿ ಗಂಭೀರ ರಾಜಕೀಯ ಬೆಳವಣಿಗೆಗಳನ್ನು ಕಾಣುತ್ತಿರುವ ಸಮಯ. ಇವಾವುಗಳ ಪರಿವೆಯೇ ಇಲ್ಲದೇ ಕಾಂಗ್ರೆಸ್ ನಾಯಕರ ವರ್ತನೆ ಹೊಣೆಗೇಡಿತನದ್ದು ಎಂಬುದರಲ್ಲಿ ಅನುಮಾನವಿಲ್ಲ. ಇದರಲ್ಲಿ ಬಲಿಯಾಗುವುದು ಸಾಮಾನ್ಯ ಜನತೆ. ಅಸ್ಸಾಂನಲ್ಲಾದಂತೆ ಇಲ್ಲಿಯೂ ಆದರೆ ಗತಿಯೇನು?

ಕಾಂಗ್ರೆಸ್‍ನ ಒಟ್ಟು ಸ್ಥಿತಿಯು ರಾಜ್ಯದಲ್ಲಿ ಕೆಲವು ಬಲಿಷ್ಠ ನಾಯಕರ ಬಲದ ರಾಜಕಾರಣವನ್ನು ಬಲಗೊಳಿಸಬಹುದು. ಖರ್ಗೆಯವರು ಹೇಳಿದಂತೆ ಮೇಜರ್ ಸರ್ಜರಿ ಆಗಬೇಕು ನಿಜ. ಆದರೆ ಎಲ್ಲಿ? ಯಾರಿಗೆ? ಅದನ್ನು ಮಾಡುವವರು ಯಾರು? ಶಸ್ತ್ರಚಿಕಿತ್ಸಕನಿಗೇ ಚಿಕಿತ್ಸೆ ಮಾಡಬೇಕಾಗಿರುವಾಗ! ಎಂಬ ಪ್ರಶ್ನೆ ಹಾಗೇ ಉಳಿಯುತ್ತದೆ.
ಇನ್ನಾದರೂ ರಾಜ್ಯದ ಕಾಂಗ್ರೆಸ್ ಸರಕಾರ ಮುಂದಿನ ಅವಧಿಯಲ್ಲಾದರೂ ಜನತೆಯ ಬವಣೆಗಳನ್ನು ನೀಗುವತ್ತ ಕ್ರಮಗಳನ್ನು ವಹಿಸಲಿ. ಈಗಲೂ ಪಾಠ ಕಲಿಯದಿದ್ದರೆ ಜನ ಪಾಠ ಕಲಿಸುವುದು ಖಂಡಿತ. ಆದರೆ ಕರ್ನಾಟಕ ಅಸ್ಸಾಂ ಆಗುವುದು ಬೇಡ.

ಎಸ್.ವೈ.ಗುರುಶಾಂತ್

ಪೋಲಿಸ್ – ಜೂನ್ 4 ಪ್ರತಿಭಟನೆಗೆ ಸಿಪಿಐ(ಎಂ) ಬೆಂಬಲ

ಸಂಪುಟ: 10 ಸಂಚಿಕೆ: 23 Sunday, May 29, 2016
        ವೇತನ ತಾರತಮ್ಯ, ರಜೆ ಸೌಲಭ್ಯ, ಹಿರಿಯ ಅಧಿಕಾರಿಗಳ ದುರ್ವರ್ತನೆ ಗೃಹ ಕೃತ್ಯಗಳಿಗೆ ಬಳಕೆ ಮುಂತಾದ ವಿಷಯಗಳ ಬಗ್ಗೆ ಪ್ರತಿಭಟಿಸಿ, ತನ್ನ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ಪೋಲೀಸ್ ಮಹಾ ಸಂಘ ಜೂನ್ 4 ರಂದು ಸಾರ್ವತ್ರಿಕ ಸಿ.ಎಲ್. ರಜೆ ಪಡೆಯುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲು ನಿರ್ಧರಿಸಿದೆ. ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಪ್ರತಿಭಟಿಸುವುದು ಪೋಲೀಸರ ಮೂಲಭೂತ ಹಕ್ಕು. ಅವರ ಈ ಕ್ರಮಕ್ಕೆ ಸಿಪಿಐ(ಎಂ) ರಾಜ್ಯ ಸಮಿತಿ ಬೆಂಬಲಿಸಿದೆ. ರಾಜ್ಯ ಸರ್ಕಾರವು ತಕ್ಷಣವೇ ಮಧ್ಯ ಪ್ರವೇಶಿಸಿ ಪೋಲೀಸರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದೆ.
ಪ್ರೊ. ಕೆ.ಎಸ್. ಭಗವಾನ್ ಗೆ ಬೆಂಬಲ

     ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಪ್ರೊ. ಕೆ.ಎಸ್. ಭಗವಾನ್‍ರವರು ಸ್ಪರ್ಧಿಸುತ್ತಿದ್ದಾರೆ. ಸಿಪಿಐ(ಎಂ) ರಾಜ್ಯ ಸಮಿತಿ ಅವರಿಗೆ ಬೆಂಬಲ ಸೂಚಿಸಿ ಅವರನ್ನು ಗೆಲ್ಲಿಸಲು ತನ್ನ ಘಟಕಗಳಿಗೆ ಹಾಗೂ ಎಡ-ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಕರೆ ನೀಡಿದೆ.