ಪಶ್ಚಿಮ ಬಂಗಾಲದಲ್ಲಿ ನಡೆದಿದೆ ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳ ಮೇಲೆ ಸರ್ವವ್ಯಾಪಿ ದಾಳಿ

ಸಂಪುಟ: 10ಸಂಚಿಕೆ: 23 date: Sunday, May 29, 2016

ಪಶ್ಚಿಮ ಬಂಗಾಲ ಇಂದು ಒಂದು ಕಾನೂನುರಹಿತ ರಾಜ್ಯವಾಗಿದೆ. ಪೋಲೀಸರು ಒಂದೋ ಮೂಕಪ್ರೇಕ್ಷಕ ರಾಗಿದ್ದಾರೆ, ಇಲ್ಲವೇ, ದಾಳಿಗೆ ಬಲಿಯಾದವರ ಮೇಲೆಯೇ ಸುಳ್ಳು ಕೇಸುಗಳನ್ನು ಹಾಕುತ್ತಿದ್ದಾರೆ. ಈ ಟಿಎಂಸಿ ಧಾಂಧಲೆಗಳ ಒಂದು ಅಸಹ್ಯ ಲಕ್ಷಣ ಎಂದರೆ ಮಹಿಳಾ ಕಾರ್ಯಕರ್ತೆಯರು ಮತ್ತು ಬೆಂಬಲಿಗರ ಮೇಲೆ ವಿಶೇಷ ಗುರಿ ಇಟ್ಟಿರುವುದು. ಈ ಬರ್ಬರ ದಾಳಿಗಳನ್ನು ಪ್ರತಿರೋಧಿಸಬೇಕಾಗಿದೆ.

ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಲದಲ್ಲಿ ವಿಧಾನ ಸಭೆಯಲ್ಲಿ 72ಶೇಕಡಾ ಸೀಟುಗಳನ್ನು ಪಡೆದು ಒಂದು ನಿರ್ಣಾಯಕ ಗೆಲುವು ಗಳಿಸಿದೆ. ಆದರೆ ಮಮತಾ ಬ್ಯಾನರ್ಜಿಯವರಿಗೆ ಇಷ್ಟೇ ಸಾಲದು ಎಂಬಂತೆ ಕಾಣುತ್ತಿದೆ. ಅವರಿಗೆ, ಸಿಪಿಐ(ಎಂ) ಮತ್ತು ಎಡರಂಗವನ್ನು ಚುನಾವನಾ ಕಣದಲ್ಲಿ ಸೋಲಿಸುವುದು ಮಾತ್ರವಲ್ಲ, ಒಂದು ರಾಜಕೀಯ ಶಕ್ತಿಯಾಗಿ ನಿರ್ಮೂಲ ಮಾಡಬೇಕಾಗಿದೆ. ಆದ್ದರಿಂದಲೇ ಚುನಾವಣೆಯ ನಂತರ ಇಂಚಿಂಚಾಗಿ ಪ್ರತ್ಯುತ್ತರ ಕೊಡುವುದಾಗಿ ಚುನಾವಣಾ ಪ್ರಚಾರದ ವೇಳೆಯಲ್ಲಿ ಹೇಳಿದ್ದನ್ನು ಆಕೆ ಈಡೇರಿಸುತ್ತಿದ್ದಾರೆ.

ತೃಣಮೂಲ ಕಾಂಗ್ರೆಸ್(ಟಿಎಂಸಿ) ಮಂದಿ ಸಿಪಿಐ(ಎಂ) ಮತ್ತು ಎಡರಂಗದ ವಿರುದ್ಧ ಅಭೂತಪೂರ್ವ ಭಯೋತ್ಪಾದನೆಯನ್ನು ಹರಿಯ ಬಿಟ್ಟಿದ್ದಾರೆ. ಇತರ ಪ್ರತಿಪಕ್ಷಗಳನ್ನೂ ಅವರು ಬಿಟ್ಟಿಲ್ಲ. ಮೇ 19ರಂದು ಚುನಾವಣಾ ಫಲಿತಾಂಶಗಳನ್ನು ಘೋಷಿಸಿದಂದಿನಿಂದ ತೃಣಮೂಲ ಗ್ಯಾಂಗ್‍ಗಳು ರಾಜ್ಯಾದ್ಯಂತ ದಾಳಿಗಳನ್ನು ನಡೆಸುತ್ತಿದ್ದಾರೆ. ಸಿಪಿಐ(ಎಂ) ಮತ್ತು ಎಡರಂಗದ ಪೋಲಿಂಗ್ ಏಜೆಂಟರುಗಳು, ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರ ಮೇಲೂ ಗುರಿಯಿಟ್ಟಿದ್ದಾರೆ. ಹಲ್ಲೆಯ ವಿಧಾನ ಎಲ್ಲೆಡೆಗಳಲ್ಲೂ ಒಂದೇ- ಪಕ್ಷದ ಕಚೇರಿಯನ್ನು ಸುಡುವುದು ಅಥವ ಹಾಳುಗೆಡಹುವುದು; ಪ್ರತಿಪಕ್ಷಗಳ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ಮಾಡಿ ಮನೆ ಸಾಮಾನುಗಳನ್ನೆಲ್ಲ ಧ್ವಂಸ ಮಾಡುವುದು; ಪ್ರತಿಪಕ್ಷಗಳ ಕಾರ್ಯಕರ್ತರ ಮೇಲೆ ದೈಹಿಕವಾಗಿ ದಾಳಿ ಮಾಡುವುದು, ಅವರ ಮನೆಗಳಲ್ಲಿ ಮಹಿಳೆಯರು, ಮಕ್ಕಳನ್ನೂ ಅವರು ಬಿಡುವುದಿಲ್ಲ; ಹಲವು ಸ್ಥಳಗಳಲ್ಲಿ ಜೀವನೋಪಾಯದ ದಾರಿಯನ್ನೇ ಕಡಿದು ಹಾಕಿದ್ದಾರೆ.

ಈ ಧಾಂಧಲೆಗಳ ಒಂದು ಅಸಹ್ಯ ಲಕ್ಷಣ ಎಂದರೆ ಮಹಿಳಾ ಕಾರ್ಯಕರ್ತೆಯರು ಮತ್ತು ಬೆಂಬಲಿಗರ ಮೇಲೆ ವಿಶೇಷ ಗುರಿಯಿಟ್ಟಿರುವುದು. ಈ ಹಿಂದೆ, ಪಂಚಾಯತು ಚುನಾವಣೆಗಳು ಇತ್ಯಾದಿ ಸಂದರ್ಭಗಳಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರು ಹಾಕಿದ್ದ ಕೇಸುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಆಪಾದಿತ ತೃಣಮೂಲ ಮಂದಿ  ಬೆದರಿಸುತ್ತಿದ್ದಾರೆ.

ಪಶ್ಚಿಮ ಬಂಗಾಲ ಇಂದು ಒಂದು ಕಾನೂನುರಹಿತ ರಾಜ್ಯವಾಗಿದೆ. ಪೋಲೀಸರು ಒಂದೋ ಮೂಕಪ್ರೇಕ್ಷಕ ರಾಗಿದ್ದಾರೆ, ಇಲ್ಲವೇ, ದಾಳಿಗೆ ಬಲಿಯಾದವರ ಮೇಲೆಯೇ ಸುಳ್ಳು ಕೇಸುಗಳನ್ನು ಹಾಕುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆಯಲ್ಲಿ ಮುಖ್ಯಮಂತ್ರಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿದ ಪೋಲೀಸ್ ಮತ್ತು ಸರಕಾರೀ ಸಿಬ್ಬಂದಿಗಳಿಗೆ ಪ್ರತೀಕಾರದ ಬೆದರಿಕೆ ಹಾಕಿದ್ದರು.

ಒಂದು ಎಡರಂಗದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯವನ್ನು ಆವರಿಸಿರುವ ಹಿಂಸಾಚಾರ ಮತ್ತು ಭಯೋತ್ಪಾದನೆಯ ವಿವರಗಳಿರುವ ಒಂದು ಸಮಗ್ರ ಮನವಿಯನ್ನು ಸಲ್ಲಿಸಿದೆ. ಸಾಂವಿಧಾನಿಕ ಅಧಿಕಾರಿಗಳು, ಅತ್ಯುನ್ನತ ನ್ಯಾಯಾಂಗ ಕೂಡ ಮಧ್ಯಪ್ರವೇಶಿಸಿ ರಾಜ್ಯದ ನಾಗರಿಕರ ಜೀವ ಮತ್ತು ಆಸ್ತಿಗಳ ರಕ್ಷಣೆಯಾಗುವಂತೆ ಮಾಡಬೇಕಾಗಿದೆ.

ಕೇರಳದಲ್ಲಿ ಬಿಜೆಪಿ ಮೆಲೆ ಸಿಪಿಐ(ಎಂ) ಹಿಂಸಾಚಾರ ನಡೆಸುತ್ತಿದೆ ಎಂದು ಬೊಬ್ಬಿಡುವ ಕೇಂದ್ರ ಸರಕಾರ, ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತರನ್ನೂ ಬಿಡದ ಮಾರಣಾಂತಿಕ ಧಾಂಧಲೆಗಳ ಬಗ್ಗೆ ದಿವ್ಯಮೌನ ತಳೆದಿದೆ.

ಪಶ್ಚಿಮ ಬಂಗಾಲದಲ್ಲಿ ಈಗ ನಡೆದಿರುವುದು ಪ್ರಜಾಪ್ರಭುತ್ವ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಸರ್ವತೋಮುಖ ದಾಳಿ. ಈ ಬರ್ಬರ ದಾಳಿಗಳನ್ನು ಪ್ರತಿರೋಧಿಸಬೇಕಾಗಿದೆ, ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನವಿಭಾಗಗಳು ಇದನ್ನು ವಿರೋಧಿಸಬೇಕಾಗಿದೆ. ಈ ಅಗ್ನಿ ಪರೀಕ್ಷೆಯ ಸಮಯದಲ್ಲಿ ದೇಶದ ಸಮಸ್ತ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳು ಪಶ್ಚಿಮ ಬಂಗಾಳದ ಎಡರಂಗದ ಜೊತೆಗೆ ನಿಲ್ಲುತ್ತಾರೆ. ಎಷ್ಟೇ ಹಿಂಸಾಚಾರ ಮತ್ತು ಭಯೋತ್ಪಾದನೆ ನಡೆಸಿದರೂ ಪಶ್ಚಿಮ ಬಂಗಾಲದಲ್ಲಿ ಎಡ ಆಂದೋಲನದ ಸಿದ್ಧಾಂತ ಮತ್ತು ರಾಜಕೀಯವನ್ನು ನಿರ್ಮೂಲ ಮಾಡುವುದು ಸಾಧ್ಯವಿಲ್ಲ.

600ಕ್ಕೂ ಹೆಚ್ಚು ಎಡಪಕ್ಷಗಳ ಕಚೇರಿಗಳು 440 ಕಾರ್ಯಕರ್ತರ ಮನೆಗಳು ಧ್ವಂಸ

ಎಡಪಕ್ಷಗಳು ಮತ್ತು ಸಾಮೂಹಿಕ ಸಂಘಟನೆಗಳ 600ಕ್ಕೂ ಹೆಚ್ಚು ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ. ಸುಮಾರಾಗಿ ಎಲ್ಲ ಜಿಲ್ಲೆಗಳಲ್ಲಿ ಸಿಪಿಐ(ಎಂ) ಕಚೇರಿಗಳ ಮೇಲೆ ದಾಳಿ ನಡೆದಿದೆ. ಪಶ್ಚಿಮ ಮೇದಿನಿಪುರ ಜಿಲ್ಲೆಯೊಂದರಲ್ಲೇ ಐದು ದಿನಗಳಲ್ಲಿ 7 ವಲಯ ಸಮಿತಿ ಕಚೇರಿಗಳು, 27 ಸ್ಥಳೀಯ ಸಮಿತಿ ಕಚೇರಿಗಳು ಮತ್ತು 42 ಶಾಖಾ ಕಚೇರಿಗಳನ್ನು ಧ್ವಂಸ ಮಾಡಲಾಗಿದೆ, ಅಥವ ಭಸ್ಮಗೊಳಿಸಲಾಗಿದೆ. ಕೊಲ್ಕತ ನಗರದಲ್ಲಿದು ದಿನಗಳಲ್ಲಿ 440 ಎಡ ಕಾರ್ಯಕರ್ತರು ಮತ್ತು ಬೆಂಬಲಿಗರ ಮನೆ ಇಲ್ಲದವರಾಗಿದ್ದಾರೆ. ಅಲ್ಲಿ 52, ಹೂಗ್ಲಿಯಲ್ಲಿ 44, ಪೂರ್ವ ಮೇದಿನಪುರದಲ್ಲಿ 20 ಪಕ್ಷದ ಕಚೇರಿಗಳನ್ನು ಟಿಎಂಸಿ ಗೂಂಡಾಗಳು ವಶಪಡಿಸಿಕೊಂಡಿದ್ದಾರೆ, ಧ್ವಂಸಪಡಿಸಿದ್ದಾರೆ.

ಹೊಸ ಪ್ರದೇಶಗಳವರಲ್ಲಿ ಭೀತಿಯ ವಾತಾವರಣ

ಕಳೆದ ಜುಲೈ 15ರಂದು 51 ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಸೇರಿಕೊಂಡಿದ್ದ ಪ್ರದೇಶಗಳು  ವಿಧ್ಯುಕ್ಯವಾಗಿ ಭಾರತದ ಬಾಗವಾದವ ಮತ್ತು ಅಲ್ಲಿಯ ಸುಮಾರು 14 ಸಾವಿರ ಮಂದಿ ಮೊದಲ ಬಾರಿಗೆ ಚುನಾವಣೆಗಳಲ್ಲಿ ಮತದಾನ ಮಾಡಿದರು. ಇಲ್ಲಿ 91ಶೇ. ಮತದಾನವಾಗಿತ್ತು. ಮೊದಲ ಬಾರಿಗೆ ಮತದಾನ ಮಾಡಿದ ಸಂತಸದಲ್ಲಿದ್ದ ಈ ಜನರಿಗೆ ಮೇ19 ರಂದು ಆಶ್ವರ್ಯ ಕಾದಿತ್ತು. ಏಕೆಂದರೆ ಟಿಎಂಸಿ ಗೂಂಡಾಗಳು 35 ಮನೆಗಳಿಗೆ ನುಗ್ಗಿ ಲೂಟಿ ನಡೆಸಿದರು, 400 ಕುಟುಂಬಗಳಿಗೆ  10,000ರೂ. ಮೇಲ್ಪಟ್ಟು ‘ದಂಡ’ ಹಾಕಿದರು. ಅವರ ಅಪರಾಧ? ಅವರಲ್ಲಿ ಬಹಳಷ್ಟು ಮಂದಿ ಎಡಪಕ್ಷಗಳಿಗೆ ಮತ ನೀಡಿದ್ದರು. ಎಡಪಕ್ಷಗಳ ಕಾರ್ಯಕರ್ತರು ಬಹಳ ವರ್ಷಗಳಿಂದ ಅವರ ಸುಖ-ದು:ಖಗಳನ್ನು ವಿಚಾರಿಸುತ್ತಿದ್ದುದರಿಂದ ಅವರಿಗೆ ಸಮೀಪವಾಗಿದ್ದರು. ಈಗ ಅವರು ಭೀತಿಯಲ್ಲಿ ಬದುಕುತ್ತಿದ್ದಾರೆ. ಹಲವರು ತಮ್ಮ ಗುರುತು ಚೀಟಿಗಳನ್ನು ಹಿಂದಕ್ಕೆ ತಗೊಳ್ಳಿ ಎಂದು ಅಧಿಕಾರಿಗಳಿಗೆ ಹೇಳುತ್ತಿದ್ದಾರಂತೆ.

ಪ್ರಕಾಶ ಕಾರಟ್

Advertisements

“ಮಾನ್ಯ ರವಿಶಂಕರ ಪ್ರಸಾದ್‍ರವರೇ, ನಿಮ್ಮ ಭಾಷೆ ಒಬ್ಬ ಕೇಂದ್ರ ಮಂತ್ರಿಗೆ ತಕ್ಕುದಾಗಿದೆಯೇ?” ಕೇಂದ್ರ ಮಂತ್ರಿಗಳಿಗೆ ಬೃಂದಾ ಕಾರಟ್ ಪ್ರಶ್ನೆ

ಸಂಪುಟ: 10 ಸಂಚಿಕೆ: 23 Sunday, May 29, 2016

ಹಿಂದಿನ ವಾರ ‘ಪೋ ಮೋನೆ ಮೋದಿ’ (ಮನೆಗ್ಹೋಗು ಮಗನೇ) ಎಂಬ ಸಂದೇಶ ಕೇರಳ ರಾಜ್ಯದಾದ್ಯಂತ ಅನುರಣನಗೊಂಡ ನಂತರ, ಕಳೆದ ವಾರ ಮೇ 19ರಂದು ಕೇರಳದಲ್ಲಿ ಚುನಾವಣಾ ಫಲಿತಾಂಶಗಳನ್ನು ಕಂಡು ಹತಾಶರಾದ ಆರೆಸ್ಸೆಸ್-ಬಿಜೆಪಿ ಮಂದಿ ಹಲವೆಡೆ ಸಿಪಿಐ(ಎಂ) ಮೇಲೆ ದಾಳಿ ನಡೆಸಿದರು. ಈಗ ಕೇರಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಪಿಣರಾಯಿ ವಿಜಯನ್ ಅವರ ಊರು ಪಿಣರಾಯಿಯಲ್ಲಿ ಎಲ್‍ಡಿಎಫ್ ವಿಜಯ ರಾಲಿಯ ಮೇಲೆ ಎಸೆದ ಬಾಂಬಿಗೆ  ಸಿ.ವಿ. ರವೀಂದ್ರನ್ ಎಂಬ ಸಿಪಿಐ(ಎಂ) ಕಾರ್ಯಕರ್ತರು ಬಲಿಯಾಗಿದ್ದಾರೆ. ಅವರ ಮಗ ಜಿಶಿನ್ ಮತ್ತು ಇತರ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಪೋಲೀಸರು ಎಫ್.ಐ.ಆರ್.ನಲ್ಲಿ ಹೆಸರಿಸಿದ 18 ಮಂದಿ ಆರೆಸ್ಸೆಸ್ ನವರು.

ಮಟ್ಟನೂರ್ ನಲ್ಲಿ ಸಿಪಿಐ(ಎಂ) ರಾಲಿಯ ಮೇಲೆ ಎಸೆದ ಬಾಂಬಿನಿಂದ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯ ಕಾಂಙಂಗಾಡ್ ಕ್ಷೇತ್ರದಲ್ಲಿ ಗೆದ್ದ ಸಿಪಿಐ ಅಭ್ಯರ್ಥಿ ಅವರ ವಿಜಯದ ಮೆರವಣಿಗೆಯ ಮೇಲ ನಡೆಸಿದ ದಾಳಿಯಲ್ಲಿ ಸ್ವತಃ ಹೊಸದಾಗಿ ಚುನಾಯಿತರಾದ ಇ. ಚಂದ್ರಶೇಖರನ್ ಸೇರಿದಂತೆ ಹಲವರ ಕೈಮುರಿದು ಆಸ್ಪ್ರತೆಗೆ ಸೇರಿಸಬೇಕಾಗಿ ಬಂದಿದೆ.

ಬಿಜೆಪಿ ಗೆದ್ದ ಏಕೈಕ ಕ್ಷೇತ್ರ ನೆಮಂನಲ್ಲಿ ಬಿಜೆಪಿ ಕಾರ್ಯಕರ್ತರು ಸಿಪಿಐ(ಎಂ) ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.

ಆದರೂ ಕೇರಳದಲ್ಲಿ ಸಿಪಿಐ(ಎಂ) ಬಿಜೆಪಿಯ ಮೇಲೆ ದಾಳಿ ಮಾಡುತ್ತಿದೆ ಎಂದು ದಿಲ್ಲಿಯಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿ ಮುಂದೆ ಬಿಜೆಪಿ ಮಂದಿ ಧಾಂಧಲೆ ನಡೆಸಿದರು. ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್ ಅವರು ರಾಷ್ಟ್ರೀಯ ಟೆಲಿವಿಶನ್‍ನಲ್ಲಿ ಬೆದರಿಸಿದರು-”ನಾವು ಅವರನ್ನು ಬೀದಿಯಲ್ಲಿ ಎದುರಿಸುತ್ತೇವೆ, ಭಾರತವನ್ನು ಆಳುತ್ತಿರುವುದು ಬಿಜೆಪಿ ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು”!

ಇದಕ್ಕೆ ಉತ್ತರಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯೆ ಬೃಂದಾ ಕಾರಟ್ “ನಿಮ್ಮ ಭಾಷೆ ಒಬ್ಬ ಕೇಂದ್ರ ಮಂತ್ರಿಗೆ ತಕ್ಕುದಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ.
“ಪ್ರಿಯ ಶ್ರೀಯುತ ರವಿಶಂಕರ್ ಪ್ರಸಾದ್ ಅವರೇ, ಒಬ್ಬ  ಕೇಂದ್ರ ಮಂತ್ರಿಯಂತೆ ಮಾತಾಡಿ, ಒಬ್ಬ ಆರೆಸ್ಸೆಸ್ ಶಾಖೆಯ ಸದಸ್ಯನಂತಲ್ಲ. ಸಿಪಿಐ(ಎಂ) ಕೇಂದ್ರ ಕಚೇರಿ ಎದುರು ಮತಪ್ರದರ್ಶನ ಏರ್ಪಡಿಸುವ ಮತ್ತು ನಿಮ್ಮ ಮಂದಿ ಧಾಂಧಲೆಗಳನ್ನು ನಡೆಸಲು ಪ್ರೋತ್ಸಾಹಿಸುವ ಮೊದಲು ಸತ್ಯಾಂಶಗಳನ್ನು ತಿಳಿದುಕೊಳ್ಳಿ” ಎಂದು ಅವರು ಈ ಕೇಂದ್ರ ಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ.

ಎರಡು ವಿರುದ್ಧ ರಾಜಕೀಯ ಶಕ್ತಿಗಳಿಗೆ ಸೇರಿದವರಂತೆ ಕಾಣುವ ಹಿರಿಯ ಮುಖಂಡರು, ಒಂದೆಡೆ ಆರೆಸ್ಸೆಸ್-ಬಿಜೆಪಿ ಕೂಟದ  ರವಿಶಂಕರ ಪ್ರಸಾದ್ ಮತ್ತು ಅತ್ತ ಬಂಗಾಲದ ಮುಖ್ಯಮಂತ್ರಿ ಮತ್ತು ತೃಣಮೂಲ ಕ್ಯಾಂಗ್ರೆಸಿನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಎಷ್ಟು ಸುಲಭವಾಗಿ ವಿರೋಧಿ ದನಿಗಳನ್ನು ಹಿಂಸಾಚಾರದಿಂದ ಅಡಗಿಸುವ ತಂಡದೊಳಕ್ಕೆ ಜಾರಿ ಬೀಳುತ್ತಾರೆ ಎಂಬುದೊಂದು ವಿಚಿತ್ರ ಸಂಗತಿ,  ಗೆಲ್ಲಲಿ, ಸೋಲಲಿ, ನಾವೇ  ಪರಮಪ್ರಭುಗಳು ಎಂಬುದನ್ನು ಒಪ್ಪಿಕೊಳ್ಳಿ ಎಂಬುದು ಅವರ ಆಟದ ಹೆಸರು ಎನ್ನುತ್ತಾರೆ ಬೃಂದಾ ಕಾರಟ್.

ಇಲ್ಲಿ ಜನರು ತಿರಸ್ಕರಿಸಿದವರ ಹತಾಶೆಯ ಪ್ರದರ್ಶನ ನಡೆದರೆ, ಅತ್ತ ಪಶ್ಚಿಮ ಬಂಗಾಲದಲ್ಲಿ ವಿಜೇತರ ಅಟಾಟೋಪ ನಡೆದಿದೆ. ದೇಶವನ್ನು ಆಳುತ್ತಿದ್ದೇವೆ ಎಂದು ಮೆರೆಯುವ  ಪಕ್ಷದ ಪ್ರಮುಖ ರಾಜ್ಯ ಮುಖಂಡರೂ ಮತ್ತು ಚಿತ್ರ ಕಲಾವಿದೆಯೂ ಆದ ರೂಪಾ ಗಂಗೂಲಿಯವರ ಕಾರಿನ ಮೇಲೆಯೇ ಟಿಎಂಸಿ ಗೂಂಡಾಗಳು ದಾಳಿ ಮಾಡಿದರೂ ಆ ಬಗ್ಗೆ ಈ ಮಂತ್ರಿಗಳಾಗಲೀ, ದಿಲ್ಲಿಯಲ್ಲಿರುವ ಬೇರಾವ ಅವರ ರಾಷ್ಟ್ರೀಯ ಮುಖಂಡರೇ ಆಗಲಿ ತುಟಿ ಪಿಟಕ್ಕೆನ್ನಲಿಲ್ಲ ಏಕೆ, ಏಕೆಂದರೆ ದಿಲ್ಲಿಯಲ್ಲಿ ಅವರಿಗೆ ಮಮತಾ ಬ್ಯಾನರ್ಜಿ ಬೆಂಬಲ ಬೇಕಾಗಿದೆ ಎಂದು  ಬೃಂದಾ ಕಾರಟ್ ನೆನಪಿಸುತ್ತಾರೆ.

ಇದರ ಹಿಂದೆ ಇನ್ನೂ ಆಳವಾದ ಸಂಗತಿ ಇದೆ, ಸರ್ವಾಧಿಕಾರಶಾಹಿ ಮತ್ತು ಪ್ರಜಾಪ್ರಭುತ್ವದ ಬಗ್ಗೆ ತುಚ್ಛೀಕಾರ ಈ ಎರಡು ರಾಜಕೀಯ ಶಕ್ತಿಗಳನ್ನು ಮತ್ತು ಇಬ್ಬರು ಉನ್ನತ ಮುಖಂಡರನ್ನು ಒಟ್ಟಿಗೆ ಬೆಸೆಯುವ ಸಂಗತಿ. ಹೀಗಿರುವಾಗ ಬಹುಶಃ ಎರಡು ವಿರುದ್ಧ ರಾಜಕೀಯ ಶಕ್ತಿಗಳಿಗೆ ಸೇರಿದವರಂತೆ ಕಾಣುವ ಹಿರಿಯ ಮುಖಂಡರು, ಎಷ್ಟು ಸುಲಭವಾಗಿ ವಿರೋಧಿ ದನಿಗಳನ್ನು ಹಿಂಸಾಚಾರದಿಂದ ಅಡಗಿಸುವ ತಂಡದೊಳಕ್ಕೆ ಜಾರಿ ಬೀಳುತ್ತಾರೆ ಎಂಬುದು ವಿಚಿತ್ರ ಸಂಗತಿಯಾಗಿ ಕಾಣುವುದಿಲ್ಲ ಎನ್ನುತ್ತಾರೆ ಬೃಂದಾ ಕಾರಟ್.

ಹೆಂಡ ಇಳಿಸುವವನ ಮಗ ಮುಖ್ಯಮಂತ್ರಿ

ಸಂಪುಟ: 10 ಸಂಚಿಕೆ: 23 Sunday, May 29, 2016

ತುರ್ತು ಪರಿಸ್ಥಿತಿಯ ಕರಾಳ ದಿನಗಳವು. ಆಗ ಶಾಸಕರಾಗಿದ್ದ ಪಿಣರಾಯಿ ವಿಜಯನ್ ಅವರನ್ನು ಕಾಂಗ್ರೆಸಿನ ಕುಖ್ಯಾತ ಗೃಹಮಂತ್ರಿ ಕರಣಾಕರನ್ ಮುಗಿಸಿ ಬಿಡಲು ಯೋಜಿಸಿದಂತಿತ್ತು. ಪಿಣರಾಯಿ ಅವರನ್ನು ಜೈಲಿನಲ್ಲಿ ಬೆತ್ತಲೆ ಮಾಡಿ ಅವರಿಗೆ ದನ ಬಡಿದಂತೆ ಬೆನ್ನ ಚರ್ಮ ಸುಲಿದು ಹೋಗುವ ವರೆಗೆ ಪ್ರಜ್ಞೆ ತಪ್ಪಿ ಹೋಗುವವರೆಗೆ ಬಡಿಯಲಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಅಚ್ಯುತ ಮೆನನ್ ಅವರನ್ನು ಇ.ಎಂ.ಎಸ್. ಮತ್ತು ಎಕೆ.ಜಿ.ಯಂತಹ ಹಿರಿಯ ನಾಯಕರು ಘೇರಾವೋ ಮಾಡಿದ ಮೇಲೆ  ಅವರು ಗೃಹಮಂತ್ರಿಗೆ ವೈಯಕ್ತಿಕವಾಗಿ ದಾಳಿ ನಿಲ್ಲಿಸುವಂತೆ ಆಜ್ಞೆ ಮಾಡುವವರೆಗೆ ವಿಜಯನ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜೈಲಿನಲ್ಲಿ ರಕ್ತಸಿಕ್ತವಾಗಿದ್ದ ತಮ್ಮ ಬಟ್ಟೆಗಳನ್ನು ವಿಜಯನ್ ಜೋಪಾನವಾಗಿ ಇಟ್ಟು ಕೊಂಡಿದ್ದರು. ತುರ್ತು ಪರಿಸ್ಥಿತಿಯ ನಂತರ ವಿಧಾನಸಭೆಯ ಅಧಿವೇಶನದಲ್ಲಿ ಅವರು ಈ ಬಟ್ಟೆಗಳನ್ನು ಪ್ರದರ್ಶಿಸಿ ತುರ್ತು ಪರಿಸ್ಥಿತಿಯ ದಮನಕಾರ್ಯಗಳ ಬಗ್ಗೆ ಮಾಡಿದ ಭಾಷಣ ಚಾರಿತ್ರಿಕವೆನಿಸಿದೆ.

ವಿಜಯನ್ ಕಣ್ಣೂರಿನ ‘ಪಿಣರಾಯಿ’ ಎಂಬ ಹಳ್ಳಿಯ ಹೆಂಡ ಇಳಿಸುವ ಕುಟುಂಬದಲ್ಲಿ ಮುಂಡಾಯಿಲ್ ಕೋರನ್ ಮತ್ತು ಕಲ್ಯಾಣಿ ಅವರ ಕೊನೆಯ ಮಗನಾಗಿ 1944ರಲ್ಲಿ ಹುಟ್ಟಿದರು. ಅವರ ಹಳ್ಳಿಯ ಹೆಸರು ಜನತೆಯ ನಡುವೆ ಮತ್ತು ರಾಜಕೀಯ ವಲಯಗಳಲ್ಲಿ ಅವರ ಅನ್ವರ್ಥನಾಮ ಆಯಿತು. ರಾಜಕೀಯವಾಗಿ ಸಕ್ರಿಯವಾದ ಕಣ್ಣೂರಿನಲ್ಲಿ ವಿಜಯನ್ ಅವರ ಮೇಲೆ ಹದಿ ಹರೆಯದಲ್ಲೇ ಕಮ್ಯುನಿಸ್ಟ್ ಪ್ರಭಾವ ತಟ್ಟಿತು. ಅವರು ತಮ್ಮ ಹೈಸ್ಕೂಲು ನಂತರ ಒಂದು ವರ್ಷ ಕೈಮಗ್ಗದಲ್ಲಿ ಕೆಲಸ ಮಾಡಿದರು. ಆ ನಂತರ ಪಿಯು ಮತ್ತು ಡಿಗ್ರಿ ಶಿಕ್ಷಣ ಪಡೆಯುತ್ತಿರುವಾಗಲೇ ವಿದ್ಯಾರ್ಥಿ ರಾಜಕೀಯ ಪ್ರವೇಶಿಸಿದರು.

ಅವರ ರಾಜಕೀಯ ಜೀವನದ ಕೆಲವು ಮೇಲಿಗಲ್ಲುಗಳು ಹೀಗಿವೆ:

–    1964ರಲ್ಲಿ ಕೇರಳ ಸ್ಟುಡೆಂಟ್ಸ್ ಫೆಡರೇಶನ್ (ಎಸ್.ಎಫ್.ಐ.ಗೆ ಹಿಂದಿನ ವಿದ್ಯಾರ್ಥಿ ಸಂಘಟನೆ)ನ ಕಣ್ಣೂರು ಜಿಲ್ಲಾ ಕಾರ್ಯದರ್ಶಿ
–    1967ರಲ್ಲಿ ತಲಸೇರಿ ವಿದಾನಸಭಾ ಕ್ಷೇತ್ರದ ಸಿಪಿಐ(ಎಂ) ಕಾರ್ಯದರ್ಶಿ
–    1968ರಲ್ಲಿ ಕಣ್ಣೂರು ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ
–    1970ರಲ್ಲಿ ಕಣ್ಣೂರಿನ ಕೂತುಪರಂಬು ಕ್ಷೇತ್ರದಿಂದ ತಮ್ಮ 26ನೇ ವಯಸ್ಸಿನಲ್ಲೇ ವಿಧಾನಸಬಾ ಸದಸ್ಯ
–    1972ರಲ್ಲಿ ಕಣ್ಣೂರು ಸಿಪಿಐ(ಎಂ) ಜಿಲ್ಲಾ ಸೆಕ್ರೆಟಾರಿಯಟ್ ಸದಸ್ಯ
–    ತುರ್ತು ಪರಿಸ್ಥಿತಿಯಲ್ಲಿ (1975-77) 18 ತಿಂಗಳುಗಳಲ್ಲಿ ಜೈಲುವಾಸ
–    1977ರಲ್ಲಿ ಕೂತುಪರಂಬು ಕ್ಷೇತ್ರದಿಂದ 2ನೇ ಬಾರಿ ಶಾಸಕರಾಗಿ ಆಯ್ಕೆ
–    1996ರಲ್ಲಿ ಇ ಕೆ ನಯನಾರ್ ಮಂತ್ರಿಮಂಡಲದಲ್ಲಿ ವಿದ್ಯುತ್ ಮಂತ್ರಿ
–    1998ರಲ್ಲಿ ಕಾ. ಚಡಯನ್ ಗೋವಿಂದನ್ ಮರಣದ ನಂತರ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ
–    2002ರಲ್ಲಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯ
–    2005, 2008, 2011ರಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಪುನಃ ಆಯ್ಕೆ
–    2016ರಲ್ಲಿ ಧರ್ಮಾಡಮ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ: ಮುಖ್ಯಮಂತ್ರಿ ಪದಗ್ರಹಣ

ಪೋಲಿಸ್ – ಜೂನ್ 4 ಪ್ರತಿಭಟನೆಗೆ ಸಿಪಿಐ(ಎಂ) ಬೆಂಬಲ

ಸಂಪುಟ: 10 ಸಂಚಿಕೆ: 23 Sunday, May 29, 2016
        ವೇತನ ತಾರತಮ್ಯ, ರಜೆ ಸೌಲಭ್ಯ, ಹಿರಿಯ ಅಧಿಕಾರಿಗಳ ದುರ್ವರ್ತನೆ ಗೃಹ ಕೃತ್ಯಗಳಿಗೆ ಬಳಕೆ ಮುಂತಾದ ವಿಷಯಗಳ ಬಗ್ಗೆ ಪ್ರತಿಭಟಿಸಿ, ತನ್ನ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ಪೋಲೀಸ್ ಮಹಾ ಸಂಘ ಜೂನ್ 4 ರಂದು ಸಾರ್ವತ್ರಿಕ ಸಿ.ಎಲ್. ರಜೆ ಪಡೆಯುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲು ನಿರ್ಧರಿಸಿದೆ. ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಪ್ರತಿಭಟಿಸುವುದು ಪೋಲೀಸರ ಮೂಲಭೂತ ಹಕ್ಕು. ಅವರ ಈ ಕ್ರಮಕ್ಕೆ ಸಿಪಿಐ(ಎಂ) ರಾಜ್ಯ ಸಮಿತಿ ಬೆಂಬಲಿಸಿದೆ. ರಾಜ್ಯ ಸರ್ಕಾರವು ತಕ್ಷಣವೇ ಮಧ್ಯ ಪ್ರವೇಶಿಸಿ ಪೋಲೀಸರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದೆ.
ಪ್ರೊ. ಕೆ.ಎಸ್. ಭಗವಾನ್ ಗೆ ಬೆಂಬಲ

     ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಪ್ರೊ. ಕೆ.ಎಸ್. ಭಗವಾನ್‍ರವರು ಸ್ಪರ್ಧಿಸುತ್ತಿದ್ದಾರೆ. ಸಿಪಿಐ(ಎಂ) ರಾಜ್ಯ ಸಮಿತಿ ಅವರಿಗೆ ಬೆಂಬಲ ಸೂಚಿಸಿ ಅವರನ್ನು ಗೆಲ್ಲಿಸಲು ತನ್ನ ಘಟಕಗಳಿಗೆ ಹಾಗೂ ಎಡ-ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಕರೆ ನೀಡಿದೆ.

“ನಾಯಕರು ಬದಲಾದರೇ ಸಾಲದು, ನೀತಿಗಳು ಬದಲಾಗಬೇಕು”

ಸಂಪುಟ: 10 ಸಂಚಿಕೆ: 23 Sunday, May 29, 2016

ಅಭಿವೃದ್ಧಿಯ ಹೆಸರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರ್ಕಾರ ಬಹುಸಂಸ್ಕøತಿಯ ನಾಡಿನಲ್ಲಿ ಜನರ ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದೆ. ಕೇವಲ ನಾಯಕ ಬದಲಾದರೇ ಸಾಲದು. ಇಂದು ದೇಶದ ಜನತೆಯ ತೀವ್ರ ಸಂಕಷ್ಟಕ್ಕೆ ಕಾರಣವಾಗಿರುವ ಸರಕಾರದ ಜನವಿರೋಧಿ ನೀತಿಗಳು ಬದಲಾಗಬೇಕು. ಪರ್ಯಾಯ ನೀತಿಗಳಿಗಾಗಿ ದೇಶದ ಎಡಪಕ್ಷಗಳು ಒಂದಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ಸಿಪಿಐ(ಎಂ)ನ ರಾಜ್ಯ ಸಮಿತಿ ಸದಸ್ಯ ಎಸ್. ವೈ ಗುರುಶಾಂತ ಕರೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ, ಸಿಪಿಐ(ಎಂ), ಸಿಪಿಐ, ಹಾಗೂ ಎಸ್‍ಯುಸಿಐ(ಸಿ) ಪಕ್ಷಗಳು ಜಂಟಿಯಾಗಿ ಧಾರವಾಡದ ನಿವೃತ್ತ ನೌಕರರ ಭವನದಲ್ಲಿ ಮೇ 17ರಂದು ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಬಿ.ಎಸ್ ಸೊಪ್ಪಿನ ಮಾತನಾಡಿ ಬರಗಾಲ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಇನ್ನಿತರ ಜ್ವಲಂತ ಸಮಸ್ಯೆಗಳ ವಿರುದ್ಧ ಪ್ರಬಲ ಜನ ಹೋರಾಟಗಳನ್ನು ಬೆಳೆಸುತ್ತಿರುವ ಎಡ ಪ್ರಗತಿಪರ ಸಂಘಟನಾ ಶಕ್ತಿಗಳನ್ನು ತುಳಿಯುವ ಪ್ರಯತ್ನ ನಡೆದಿದೆ. ಜನಪರ ಹೋರಾಟಗಳ ನಿರಂತರತೆಯೇ ಇದಕ್ಕೆ ಪರಿಹಾರ ಎಂದು ಅಭಿಪ್ರಾಯಪಟ್ಟರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಸ್‍ಯುಸಿಐ(ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಸೀರ ಮುದೋಳ, ಮಹೇಶ ಪತ್ತಾರ, ಆರ್.ಎಚ್ ಆಯಿ, ಡಿ.ಎಚ್ ಕರಿಯಣ್ಣವರ್, ಬಿ.ಎನ್.ಪೂಜಾರಿ, ಕೆ.ಎಚ್.ಪಾಟೀಲ, ಬಿ.ಐ.ಈಳಿಗೇರ, ಎಚ್.ಜಿ ದೇಸಾಯಿ, ಲಕ್ಷ್ಮಣ ಜಡಗನ್ನವರ ಸೇರಿದಂತೆ ಎಡಪಕ್ಷಗಳ ನೂರಾರು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪ್ರಚಾರಾಂದೋಲನ: ಕೇಂದ್ರ-ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಎಡಪಕ್ಷದ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಮೇ-25 ರಂದು ಧಾರವಾಡದಲ್ಲಿ, ಮೇ-27 ರಂದು ಹುಬ್ಬಳ್ಳಿಯಲ್ಲಿ ಪ್ರಚಾರಾಂದೋಲನ ಹಾಗೂ ಪ್ರತಿಭಟನಾ ಸಭೆ ನಡೆಸಲಾಯಿತು.

ಅವಳಿ ನಗರದಲ್ಲಿ ವಿವಿಧ ಮಾರ್ಗವಾಗಿ ಜನರಿಗೆ ಕರಪತ್ರಗಳನ್ನು ವಿತರಿಸಿ ನಂತರ ಧಾರವಾಡದ ವಿವೇಕಾನಂದ ಸರ್ಕಲ್‍ನಲ್ಲಿ ಹಾಗೂ ಹುಬ್ಬಳ್ಳಿಯ ದುರ್ಗದಬೈಲ ವೃತ್ತದಲ್ಲಿ ಸೇರಿದ ಎಡಡಪಕ್ಷಗಳ ಕಾರ್ಯಕರ್ತರು ಸಭೆಗಳನ್ನು ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡ ಆರ್.ಎಚ್.ಆಯಿ ಎಸ್‍ಯುಸಿಐ(ಸಿ) ಜಿಲ್ಲಾ ಮುಖಂಡ ಎಚ್.ಜಿ.ದೇಸಾಯಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಸೀರ ಮುಧೋಳ ಮಾತನಾಡಿದರು. ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ಮಹೇಶ ಪತ್ತಾರ

ರಾಜ್ಯದ ವಿವಿದೆಡೆ ನಡೆದ ಎಡ ಪಕ್ಷಗಳ ಸಮಾವೇಶ

ದಾವಣಗೆರೆ:

ಪ್ರಧಾನಿಯಾದ ನಂತರ 37 ಬಾರಿ ವಿದೇಶಗಳಿಗೆ ಬೇಟಿ ಕೊಟ್ಟು, ದೇಶದಲ್ಲಿ 219 ಮತ್ತು ವಿದೇಶದಲ್ಲಿ 140 ಕ್ಕೂ ಅಧಿಕ ಭಾಷಣ ಮಾಡಿದ ಪ್ರಧಾನಿ ಮೋದಿಯವರಿಗೆ 250ಕ್ಕೂ ಹೆಚ್ಚಿನ ಬರಗಾಲ ಪೀಡಿತ ಜಿಲ್ಲೆಗಳಲ್ಲಿ ಒಂದೂ ಜಿಲ್ಲೆಗೆ ಭೇಟಿ ಮಾಡಿಲ್ಲ, ಬರ ಪೀಡಿತ ಜನರ ಬಗ್ಗೆ ಭಾಷಣ ಮಾಡಿಲ್ಲ. ಇದು ಮೋದಿಯವರ ವಿಕಾಸ ಪರ್ವ. ರಾಜ್ಯದಲ್ಲಿ 30 ಕೆ.ಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ರೇಷನ್ ಕಡಿತ ಮಾಡಿದೆ. ಲೋಕಾಯುಕ್ತವನ್ನು ಬಲಗೊಳಿಸುವ ಬದಲು ಭ್ರಷ್ಟ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಹಿತವಾಗುವ ಎ.ಸಿ.ಬಿ ರಚನೆ ಮಾಡಿರುವುದು ಖಂಡನೀಯ ಸಿ.ಪಿ.ಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಕಾಂ||ಕೆ.ಮಹಾಂತೇಶ್ ಹೇಳಿದರು.

ಅವರು ಮೇ 25ರಂದು ಎಡಪಕ್ಷಗಳ ಜನಾಂದೋಲನ ಹಾಗೂ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನ ಜಾರಿಗೆ ಮತ್ತು ಬರ ನಿರ್ವಹಣೆಗೆ ತಾತ್ಸಾರ ಮಾಡಿದ ಬಗ್ಗೆ ಸರ್ವೋಚ್ಚ ನ್ಯಾಯಲಾಯದಿಂದ ತಪರಾಕಿ ಹಾಕಿಸಿಕೊಂಡಿರುವುದು ಮೋದಿ ಸರ್ಕಾರದ ವಿನಾಶ ಪರ್ವದ 2 ವರ್ಷಗಳ ಸಾಧನೆ. ಚುನಾವಣೆ ಬಂದಾಗ ಬಿ.ಜೆ.ಪಿ ಸೋಲಿಸಲು ಎಡ ಪಕ್ಷಗಳ ಬೆಂಬಲ ಬಯಸುವ ಕಾಂಗ್ರೆಸ್ ಪಕ್ಷವು ಜನ ಪರ ನೀತಿಗಳನ್ನು ಜಾರಿಗೆ ತಾರದೆ ಇರುವುದು ಸರಿಯಲ್ಲ ಎಂದು ಸಿ.ಪಿ.ಐ ಪಕ್ಷದ ಮುಖಂಡರಾದ ಡಾ|| ಸಿದ್ದನಗೌಡ ಪಟೀಲ್ ತಿಳಿಸಿದರು.

ಸಮಾವೇಶವನ್ನು ಉದ್ದೇಶಿಸಿ ಎಸ್.ಯು.ಸಿ.ಐ(ಸಿ) ಪಕ್ಷದ ರಾಜ್ಯ ಮುಖಂಡರಾದ ಕಾಂ|| ಸೋಮಶೇಖರ್ ಮತ್ತು ಸಿ.ಪಿ.ಐ-ಎಂ.ಎಲ್ ಪಕ್ಷದ ಕಾಂ|| ಮಾರುತಿ ಸಭೆಯಲ್ಲಿ ಮಾತನಾಡಿದರು ಸಭೆಯ ಅಧ್ಯಕ್ಷತೆಯನ್ನು ಸಿ.ಪಿ.ಐ ಪಕ್ಷದ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಕಾಂ||ಹೆಚ್.ಕೆ. ರಾಮಚಂದ್ರಪ್ಪ ವಹಿಸಿದ್ದರು.

ಆರಂಭದಲ್ಲಿ ಸಿ.ಪಿ.ಐ ನ ಕಾಂ||ಅವರಗೆರೆ ಚಂದ್ರು ಸ್ವಾಗತ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಸಿ.ಪಿ.ಐ(ಎಂ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಲ್.ಭಟ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ವೇದಿಕೆಯಲ್ಲಿ ಸಿ.ಪಿ.ಐ ನ ನಗರಪಾಲಿಕೆ ಸದಸ್ಯ ಕಾಂ|| ಹೆಚ್.ಜಿ. ಉಮೇಶ್, ಕಾಂ|| ಆನಂದ್‍ರಾಜ್, ಎಸ್.ಯು.ಸಿ.ಐ.ನ ಕಾಂ|| ಮಂಜುನಾಥ್ ಕೈದಾಳೆ ಮತ್ತು ಸಿ.ಪಿ.ಐ (ಎಂ.ಎಲ್) ನ ಇದ್ಲಿ ರಾಮಪ್ಪ ಇವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಕಟ್ಟಡ ಕಾರ್ಮಿಕರು, ಬಿಸಿಯೂಟ-ಅಂಗನವಾಡಿ ಕಾರ್ಯಕರ್ತೆಯರು, ಆಟೋ ರಿಕ್ಷಾ ಸಂಘದ ಸದಸ್ಯರು, ಕೆ.ಪಿ.ಆರ್.ಎಸ್- ಡಿ.ವೈ.ಎಫ್.ಐ ಕಾರ್ಯಕರ್ತರು, ಕೊಳಚೆಪ್ರದೇಶ ನಿವಾಸಿಗಳು ಸೇರಿದಂತೆ ಸುಮಾರು 200 ಜನ ಸಭೆಯಲ್ಲಿ ಭಾಗವಹಿಸಿದ್ದರು.

ಚಿತ್ರದುರ್ಗ :

ಮೇ 24ರಂದು ಜಿಲ್ಲೆಯ ಎಡಪಕ್ಷಗಳ ನೇತೃತ್ವದಲ್ಲಿ ಜಿಲ್ಲಾ ಸಮಾವೇಶವು ಪತ್ರಕರ್ತರ ಸಭಾಂಗಣದಲ್ಲಿ ನಡೆಯಿತು. ಸಮಾವೇಶದಲ್ಲಿ ಸಿಪಿಐ ರಾಜ್ಯ ಮುಖಂಡರಾದ ಎಚ್.ಕೆ.ರಾಮಚಂದ್ರಪ್ಪ, ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಕೆ.ಮಹಾಂತೇಶ, ಎಸ್.ಯು.ಸಿ.ಐ.(ಸಿ) ಮುಖಂಡರಾದ ಡಾ.ಸುನೀತಕುಮಾರರವರು ಮಾತನಾಡಿದರು. ಸಮಾವೇಶದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಭಟ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶಿವರುದ್ರಪ್ಪ, ಎಸ್.ಯು.ಸಿ.ಐ ಮುಖಂಡರಾದ ರವಿಕುಮಾರ, ಸಿಪಿಐ(ಎಂ) ಮುಖಂಡರಾದ ಡಿ.ಎಂ.ಮಲಿಯಪ್ಪ, ತಿಪ್ಪೇಸ್ವಾಮಿ, ವೀರಭದ್ರಪ್ಪ, ನಿಂಗಣ್ಣ, ಗೌಸಫೀರ ಮೊದಲಾದವರು ಭಾಗವಹಿಸಿದ್ದರು.

ಮೈಸೂರು :

ಜಿಲ್ಲೆಯ ಟಿ.ನರಸಿಪುರ ತಾಲ್ಲೂಕಿನಲ್ಲಿ ಎಡಪಕ್ಷಗಳ ನೇತೃತ್ವದಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು. ಸಿಪಿಐ, ಸಿಪಿಐ(ಎಂ), ಎಸ್‍ಯುಸಿಐ(ಸಿ), ಸಿಪಿಐ(ಎಂಎಲ್) ಲಿಬರೇಷನ್ ವತಿಯಿಂದ ಮುಖಂಡರು ಮಾತನಾಡಿದರು.

ಎಡಪಕ್ಷಗಳು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊಮ್ಮಬೇಕು: ಶ್ರೀರಾಮರೆಡ್ಡಿ

ಸಂಪುಟ: 10 ಸಂಚಿಕೆ: 23 Sunday, May 29, 2016

ರೈತರು ಕಾರ್ಮಿಕರು, ಜನಸಾಮಾನ್ಯರ ಬದುಕನ್ನು ಬೀದಿಪಾಲು ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಜನಸಾಮಾನ್ಯರ ನೀತಿಗಳಿಗಾಗಿ ಪ್ರಬಲ ರಾಜಕೀಯ ಶಕ್ತಿಯನ್ನು ರಾಜ್ಯದಲ್ಲಿ ಬಲಗೊಳಿಸಲು ಪರ್ಯಾಯ ರಾಜಕೀಯ ಶಕ್ತಿಯಾಗಿ ಎಡಪಕ್ಷಗಳು ಮುಂದಾಗಬೇಕಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಕರೆ ನೀಡಿದರು.

ಅವರು ತುಮಕೂರು ನಗರದ ರಂಗತಾಲೀಮು ಕೇಂದ್ರದಲ್ಲಿ ಮೇ 21ರಂದು ಹಮ್ಮಿಕೊಂಡಿದ್ದ ಎಡಪಕ್ಷಗಳ ರಾಜಕೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರಮೋದಿ ಸರ್ಕಾರ ಜನತೆಯಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿ ಕುರ್ಚಿಗಿಟ್ಟಿಸಿಕೊಂಡು ಬಿಜೆಪಿಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನುಸರಿಸಿದ ನೀತಿಗಳನ್ನು ಬಲು ವೇಗವಾಗಿ ಜಾರಿಗೆ ತರುತ್ತಿದೆ, ನವಉದಾರವಾದಿ ಆರ್ಥಿಕ ನೀತಿಗಳು ಮತ್ತು ದೇಶದ ಐಕ್ಯತೆಯನ್ನು ಒಡೆಯುತ್ತಿರುವ ಕೋಮುವಾದಿ ಶಕ್ತಿಗಳ ಆಕ್ರಮಣದಿಂದ ದೇಶದ ಜನತೆಯ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ ಎಂದು ಹೇಳಿದರು.

ಸಂವಿಧಾನದ ಆಶಗಳ ಮೇಲೆ ದಾಳಿ ನಡೆಯುತ್ತಿದ್ದು ಜನರು ತಿನ್ನುವ ಆಹಾರ ಪದ್ದತಿ ಹೇಗಿರಬೇಕು, ಉಡುವ ಬಟ್ಟೆ ಯಾವುದು, ಪಡೆಯಬೇಕಾದ ಶಿಕ್ಷಣ ಯಾವುದು, ಯಾವ ರೀತಿಯಾಗಿ ಮಾತನಾಡಬೇಕು ಎನ್ನುವ ಎಲ್ಲ ಅಂಶಗಳ ಮೇಲೂ ದಾಳಿಗಳು ನಡೆಯುತ್ತಿದೆ. ಅನಾರೋಗ್ಯ ಪೀಡಿತ ಜನರು ಔಷಧಿಗಳನ್ನು ಕೊಂಡುಕೊಳ್ಳಲಾರದ ಸ್ಥಿತಿ ನಿರ್ಮಾಣವಾಗುತ್ತಿದೆ ಇದು ನರೇಂದ್ರಮೋದಿಯವರ ಆಡಳಿತ ವೈಖರಿಯಾಗಿದೆ.

ಅಹಿಂದಪರ ಎಂದು ಹೇಳಿಕೊಳ್ಳುವ ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತ ವಿರೋಧಿ ನೀತಿಗಳನ್ನು ಜಾರಿಗೆತರುತ್ತಿದೆ. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದು ಇದನ್ನು ತಡೆಯುವಲ್ಲಿ ಸಿದ್ದರಾಮಯ್ಯ ಸರ್ಕಾರ ಮತ್ತು ಗೃಹಮಂತ್ರಿ ಪರಮೇಶ್ವರ್ ವಿಫಲರಾಗಿದ್ದಾರೆ ಎಂದು ಸರ್ಕಾರಗಳ ಜನವಿರೋಧಿ ನೀತಿಗಳನ್ನು ಜನತೆಯ ಮುಂದೆ ತಿಳಿಸಲು ಎಡಪಕ್ಷಗಳು ರಾಜಕೀಯ ಪ್ರಚಾರಾಂದೋಲನವನ್ನು ಹಮ್ಮಿಕೊಂಡಿದ್ದು ಜೂನ್‍ನಲ್ಲಿ ರಾಜ್ಯಮಟ್ಟದ ರ್ಯಾಲಿ ನಡೆಸಲಾಗುವುದು ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶೀ ಮಂಡಳಿ ಸದಸ್ಯ ಎನ್. ಶಿವಣ್ಣ ಮಾತನಾಡಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಸರ್ಕಾರದ ನೀತಿಗಳ ವಿರುದ್ದ ಮಾತನಾಡುವವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದ್ದು ಎಂದರು.

ಎಸ್‍ಯುಸಿಐ(ಸಿ)ನ ರಾಜ್ಯ ಸಮಿತಿ ಸದಸ್ಯ ಕೆ. ಸೋಮಶೇಖರ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಎಸ್‍ಯುಸಿಐ(ಸಿ) ನಗರ ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸೈಯದ್‍ಮುಜೀಬ್ ಸಿಪಿಐ ಗಿರೀಶ್ ಉಪಸ್ಥಿತರಿದ್ದರು.

ವರದಿ : ಎಸ್. ರಾಘವೇಂದ್ರ

ಪಶ್ಚಿಮ ಬಂಗಾಲ: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಬೀದಿಗಿಳಿಯಲು ಎಡರಂಗದ ನಿರ್ಧಾರ

ಸಂಪುಟ: 10 ಸಂಚಿಕೆ: 23 Sunday, May 29, 2016

ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಫಲಿತಾಂಶಗಳ ನಂತರದ ಹಿಂಸಾಚಾರದ ವಿರುದ್ದ ಎಡರಂಗದ ಎರಡು ದಿನಗಳ ಧರಣಿ ಮೇ 24 ಮತ್ತು 25ರಂದು ಕೊಲ್ಕತಾದಲ್ಲಿ ನಡೆದಿದೆ. ಇದರಲ್ಲಿ ಭಾಗವಹಿಸಿ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಸೂರ್ಯಕಾಂತ್ ಮಿಶ್ರ ಪ್ರತಿದ್ವಂದ್ವಿಗಳ ಮೇಲಿನ ಅಮಾನವೀಯ ದಾಳಿಗಳನ್ನು ತಡೆಯುವ ರಾಜಕೀಯ ಇಚ್ಛಾಶಕ್ತಿ ಆಳುವ ಪಕ್ಷಕ್ಕಿಲ್ಲ, ಬದಲಿಗೆ ಅದೇ ಪ್ರತಿಪಕ್ಷಗಳನ್ನು ನಿರ್ಮೂಲಗೊಳಿಸುವ ಉದ್ದೇಶದಿಂದಲೇ ಈ ದಾಳಿಗಳಿಗೆ ನೇತೃತ್ವ ನೀಡುತ್ತಿದೆ ಎಂದರು.

ಎಡರಂಗದ ಅಧ್ಯಕ್ಷ ಬಿಮನ್ ಬಸು ಆಳುವ ಟಿಎಂಸಿ ನಡೆಸುತ್ತಿರುವ ಹಿಂಸಾಚಾರದ ವಿರುದ್ಧ ಪ್ರತಿಯೊಂದು ಜಿಲ್ಲೆಯಲ್ಲೂ ಬೀದಿಗಳಿಯಲು ಎಡರಂಗ ನಿರ್ಧರಿಸಿದೆ, ಇದರಲ್ಲಿ ಪಾಲ್ಗೊಳ್ಳಿ ಎಂದು ಎಲ್ಲ ಎಡ, ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯಾತೀತರಿಗೆ ಮನವಿ ಮಾಡಿದರು. ಪರಿಸ್ಥಿತಿ ಸುಧಾರಿಸದಿದ್ದರೆ ರಾಲಿಗಳು, ಧರಣಿಗಳು, ತಡೆಗಳು ಮುಂತಾದವುಗಳ ಮೂಲಕ ಪ್ರತಿಭಟನೆಗಳನ್ನು ರಾಜ್ಯಾದ್ಯಂತ ಕ್ರಮೇಣ ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿದರು.

ಸಿಪಿಐ(ಎಂ) ಪೊಲಿಟ್ ಬ್ಯೂರೊ ಖಂಡನೆ

ಮತದಾನ ಮುಗಿದ ನಂತರ, ವಿಶೇಷವಾಗಿ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಟಿಎಂಸಿ ಹರಿಯ ಬಿಟ್ಟಿರುವ ಹಿಂಸಾಚಾರವನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೊ ಬಲವಾಗಿ ಖಂಡಿಸಿದೆ.

ಸಿಪಿಐ(ಎಂ) ಮತ್ತು ಎಡರಂಗ ಜನತೆಯ ತೀರ್ಪನ್ನು ವಿನಯದಿಂದ ಒಪಪಿಕೊಂಡಿದೆ. ಹೊಸದಾಗಿ ಚುನಾಯಿತ ಸರಕಾರ ತನ್ನ ಸಾಂವಿಧಾನಿಕ ಹೊಣೆಗಾರಿಕೆಗಳನ್ನು ನಿಭಾಯಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೊ ಹೇಳಿದೆ. (ಈ ಕುರಿತ ಹಿರಿಯ ಸಿಪಿಐ(ಎಂ) ಮುಖಂಡರಾದ ಪ್ರಕಾಶ ಕಾರಟ್ ಅವರ ಲೇಖನ ಈ ಸಂಚಿಕೆಯ ಪುಟ 7ರಲ್ಲಿ  ನೋಡಿ). ಪೊಲಿಟ್ ಬ್ಯೂರೊ ಕರೆಯ ಮೇರೆಗೆ ದೇಶದ ಹಲವೆಡೆ ಸಿಪಿಐ(ಎಂ) ಘಟಕಗಳು ಟಿಎಂಸಿ ಹಿಂಸಾಚಾರದ ವಿರುದ್ಧ ಮತಪ್ರದರ್ಶನ ನಡೆಸಿ ಪಶ್ಚಿಮ ಬಂಗಾಲದ ತಮ್ಮ ಸಂಗಾತಿಗಳಿಗೆ ಅವರ ಹೋರಾಟದಲ್ಲಿ ಸೌಹಾರ್ದವನ್ನು ವ್ಯಕ್ತಪಡಿಸಿವೆ.

ಸಾಮಥ್ರ್ಯವಿದ್ದರೆ `ಕೇರಳ ಮಾದರಿ ಅಭಿವೃದ್ಧಿ’ಯನ್ನು ಗುಜರಾತ್‍ನಲ್ಲಿ ಜಾರಿ ಮಾಡಿ – ಯೆಚೂರಿ ಸವಾಲು

ಸಂಪುಟ: 10 ಸಂಚಿಕೆ: 21 Sunday, May 15, 2016

ಕೇರಳದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಚುನಾವಣಾ ಪ್ರಚಾರವೂ ತೀವ್ರವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರದಲ್ಲಿ ಮಾತನ್ನಾಡುತ್ತಾ `ಬಿಜೆಪಿ ಕೂಟ’ವನ್ನು ಗೆಲ್ಲಿಸಿದರೆ ಕೇರಳವನ್ನು `ಗುಜರಾತ್ ಮಾದರಿ’ಯಲ್ಲಿ ಅಭಿವೃದ್ಧಿ ಮಾಡುವುದಾಗಿ ಕೇರಳದ ಜನತೆಗೆ ಭರವಸೆ ಕೊಡುತ್ತಿದ್ದಾರೆ. ಮೋದಿಯವರ ಈ ಮಾತು ಕೇಳಿ ಕೇರಳದ ಪ್ರಜ್ಞಾವಂತ ಜನತೆಯಂತೂ ಮನಸಾರೆ ನಕ್ಕಿರುತ್ತಾರೆ.

ಎಲ್ಲಿಯ ಕೇರಳ? ಎಲ್ಲಿಯ ಗುಜರಾತ್ !! ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರು ಈ ಹೇಳಿಕೆಗೆ ಸೂಕ್ತ ಉತ್ತರ ನೀಡಿದ್ದಾರೆ. ಅವರು `ಕೇರಳವು ತನ್ನ ಮಾದರಿಯಲ್ಲೆ ಸಂತೋಷವಾಗಿದೆ. ಸಾಮಥ್ರ್ಯವಿದ್ದರೆ ಕೇರಳ ಮಾದರಿಯನ್ನು ಗುಜರಾತ್‍ನಲ್ಲಿ ಜಾರಿಮಾಡಿ’ ಎಂದು ಸವಾಲು ಹಾಕಿದ್ದಾರೆ.  ಈ ಸವಾಲಿಗೆ ಆಧಾರವಾದ ಅಂಶಗಳಲ್ಲಿ ಕೆಲವನ್ನು ಪರಿಶೀಲಿಸೋಣ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳವು ದೇಶಕ್ಕೆ ಮೊತ್ತ ಮೊದಲ ಸ್ಥಾನದಲ್ಲಿದೆ. ಗುಜರಾತ್ ಈ ಸಾಲಿನಲ್ಲಿ 12 ನೇ ಸ್ಥಾನದಲ್ಲಿದೆ. ಇದು ಒಟ್ಟಾರೆ ಅಭಿವೃದ್ಧಿಯ ಪ್ರಶ್ನೆ. ಬಿಡಿ ಬಿಡಿಯಾಗಿಯೂ ಅಭಿವೃದ್ಧಿಯ ಹಲವು ಆಯಾಮಗಳನ್ನು ಪರಿಶೀಲಿಸಬಹುದು. ಸಾಕ್ಷರತೆಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ 18 ನೇ ಸ್ಥಾನದಲ್ಲಿದೆ. ಮನುಷ್ಯನ ಸರಾಸರಿ ಜೀವಿತಾವಧಿಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ 9 ನೇ ಸ್ಥಾನದಲ್ಲಿದೆ. ಗಂಡು-ಹೆಣ್ಣುಗಳ ಉತ್ತಮ ಅನುಪಾತದಲ್ಲಿ ಸಹ ಕೇರಳ ಪ್ರಥಮ ಸ್ಥಾನದಲ್ಲಿದ್ದರೆ ಗುಜರಾತ್ ಕಡೆ ಕಡೆಯ 25 ನೇ ಸ್ಥಾನದಲ್ಲಿದೆ. ಶಿಶು ಮರಣ ನಿಯಂತ್ರಿಸುವಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 21 ನೇ ಸ್ಥಾನದಲ್ಲಿದೆ. ಜನಾರೋಗ್ಯ ಸಾಧನೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 20 ನೇ ಸ್ಥಾನದಲ್ಲಿದೆ. ಬಡತನ ನಿವಾರಣೆಯಲ್ಲಿ ಕೇರಳ 2 ನೇ ಸ್ಥಾನದಲ್ಲಿದ್ದರೆ ಗುಜರಾತ್ 14 ನೇ ಸ್ಥಾನದಲ್ಲಿದೆ. ಕುಡಿಯುವ ನೀರು ಪೂರೈಕೆಯಲ್ಲಿ ಕೇರಳ ಮೂರನೇ ಸ್ಥಾನದಲ್ಲಿದ್ದರೆ ಗುಜರಾತ್ 9 ಸ್ಥಾನದಲ್ಲಿದೆ. ಮನೆಗಳ ವಿದ್ಯುದೀಕರಣದಲ್ಲಿ ಕೇರಳ 5 ಸ್ಥಾನದಲ್ಲಿದ್ದರೆ ಗುಜರಾತ್ 11 ನೇ ಸ್ಥಾನದಲ್ಲಿದೆ. ಸ್ವಚ್ಛತೆಯ ವಿಷಯದಲ್ಲಿ ಕೇರಳ ದೇಶಕ್ಕೆ ಮೊದಲ ಸ್ಥಾನದಲ್ಲಿದ್ದರೆ ಗುಜರಾತ್ 16 ನೇ ಸ್ಥಾನದಲ್ಲಿದೆ. ಜನನ ನಿಯಂತ್ರಣದಲ್ಲಿ ಕೇರಳ ಎರಡನೇ ಸ್ಥಾನದಲ್ಲಿದ್ದರೆ, ಗುಜರಾತ್ 17ನೇ ಸ್ಥಾನದಲ್ಲಿದೆ.

ಪರಿಸ್ಥಿತಿ ಹೀಗಿರುವಾಗ ಯಾರು ಯಾವುದನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾದ ಪರಿಸ್ಥಿತಿ ಇದೆ. ಸಂಘಪರಿವಾರ ಇಂತಹ ಯೋಚನೆ ಮಾಡದಿದ್ದರೂ ಕೇರಳದ  ಜನರಂತೂ ಈ ಬಗೆಗೆ ತೀರ್ಮಾನಿಸುತ್ತಾರೆ.

ಎಲ್‍ಡಿಎಫ್ ಪ್ರಚಾರ ಸಾಮಾಗ್ರಿಗೆ ಬೆಂಕಿ

ಧರ್ಮಾದಮ್ ಒಂದು ವಿಧಾನ ಸಭಾ ಕ್ಷೇತ್ರ. ಈ ಕ್ಷೇತ್ರದಲ್ಲಿ ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್ ಅಭ್ಯರ್ಥಿ. ಮೂರು ಜನ ಅರೆಸ್ಸೆಸಿಗರ ತಂಡ ರಾತ್ರೋ ರಾತ್ರಿ ಪಿಣರಾಯಿ ವಿಜಯನ್ ಅವರ ಪ್ರಚಾರ ಸಾಮಾಗ್ರಿಗಳಿಗೆ ಬೆಂಕಿ ಇಟ್ಟಿದೆ. ಪ್ರಚಾರ ಸಾಮಾಗ್ರಿಗಳನ್ನು ಸುಡಬಹುದು. ಜನರ ಮನಸ್ಸಿನಲ್ಲಿ ಸಿಪಿಐ(ಎಂ) ಬಗೆಗೆ ಮತ್ತು ಎಲ್‍ಡಿಎಫ್ ಬಗೆಗೆ ಇರುವ ಒಲವನ್ನು ಸುಡಲಾಗದು ಎಂಬುದು ಪಾಪ ಅವರಿಗೆ ಗೊತ್ತಿಲ್ಲ.

`ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಹೊಂದಿದ, ಜಾತ್ಯತೀತ ಕೇರಳ’ಕ್ಕಾಗಿ

ಕೇರಳದಲ್ಲಿ ಇಲ್ಲಿಯವರೆಗೆ ಖಾತೆ ತೆರೆಯಲು ವಿಫಲವಾಗಿರುವ ಭಾರತೀಯ ಜನತಾ ಪಾರ್ಟಿ- ಬಿಜೆಪಿಯ ಮುಖಂಡರು ಕೇರಳದಲ್ಲಿ ಸ್ಫರ್ಧೆ ಇರುವುದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ನೇತೃತ್ವದ ಕೂಟದ ನಡುವೆ ಎಂದೂ, ಬಿಜೆಪಿ ನೇತೃತ್ವದ ರಂಗ ಅಧಿಕಾರಕ್ಕೆ ಬರಲಿದೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಈ ಬಗೆಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ) ಮುಖಂಡ ಪಿಣರಾಯಿ ವಿಜಯನ್ `ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಹೊಂದಿದ, ಜಾತ್ಯತೀತ ಕೇರಳ’ಕ್ಕಾಗಿ ಜನತೆ ಎಲ್‍ಡಿಎಫ್ ಅನ್ನು ಆರಿಸಿ ತರಲಿದ್ದಾರೆ. ಕಾಂಗ್ರೆಸ್, ಬಿಜೆಪಿಗಳ ಸ್ಪರ್ಧೆ ಏನಿದ್ದರೂ ಎರಡನೇ ಸ್ಥಾನಕ್ಕಾಗಿ ಎಂದು ತಿರುಗೇಟು ನೀಡಿದ್ದಾರೆ. ಇದಲ್ಲದೇ ಯುಡಿಎಫ್ ಮತ್ತು ಬಿಜೆಪಿ ನಡುವ ರಹಸ್ಯ ಒಪ್ಪಂದ-ಮ್ಯಾಚ್ ಫಿಕ್ಸಿಂಗ್ ಏರ್ಪಟ್ಟಿದೆ ಎಂದೂ ಹೇಳಿದ್ದಾರೆ.

ನಾನಾ ಗಣ್ಯರ ಪ್ರಚಾರ

ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಸೇರಿದಂತೆ  ಚುನಾವಣೆಯಲ್ಲಿ  ಸಿಪಿಐ(ಎಂ) ಪಕ್ಷದ ನಾನಾ ಮುಖಂಡರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಪಟ್ಟಣತಿಟ್ಟ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಪ್ರಕಾಶ್ ಕಾರಟ್ ಪ್ರಚಾರ ಕೈಗೊಂಡಿದ್ದಾರೆ. ತ್ರಿಪುರದ ಮುಖ್ಯಮಂತ್ರಿ ಹಾಗೂ ಪಾಲಿಟ್ ಬ್ಯೂರೋ ಸದಸ್ಯರಾದ ಮಾಣಿಕ್ ಸರಕಾರ್ ಸೇರಿದಂತೆ  ಪಾಲಿಟ್ ಬ್ಯೂರೋ ಸದಸ್ಯರುಗಳಾದ ಬೃಂದಾ ಕಾರಟ್ ಕೋಜಿಕ್ಕೋಡ್ ನಲ್ಲಿ, ಸುಭಾಷಿಣಿ ಆಲಿ ಅಲಪುಜದಲ್ಲಿ, ತಿರುವನಂತಪುರದಲ್ಲಿ ಬಿ.ವಿ. ರಾಘವುಲು, ಪ್ರಚಾರ ಭಾಷಣಗಳನ್ನು ಮಾಡಿದ್ದಾರೆ. ಕೋಡಿಯೇರಿ ಬಾಲಕೃಷ್ಣನ್ ಅವರಲ್ಲದೇ ವರದರಾಜನ್ ಅವರು ಜೊತೆಗೂಡಿದ್ದಾರೆ.

ಬಿ.ವಿ. ರಾಘವುಲು ಅವರು ಮಾನತಾಡುತ್ತಾ ಎಲ್‍ಡಿಎಫ್ ನದು ಜನಪರ ಅಭಿವೃದ್ಧಿಯ ಕಣ್ಣೋಟ, ಆದರೆ ಯುಡಿಎಫ್ ನದು ಕಾರ್ಪೋರೇಟ್ ಪರವಾದ ಅಭಿವೃದ್ಧಿಯ ಕಣ್ಣೋಟ ಎಂದು ತೀವ್ರವಾಗಿ ಟೀಕಿಸಿದ್ದಾರೆ.

-ಆರ್. ರಾಮಕೃಷ್ಣ

ಪಶ್ಚಿಮ ಬಂಗಾಳ : ತೃಣಮೂಲಿಗರ ಚುನಾವಣೋತ್ತರ ಹಿಂಸಾಚಾರ

ಸಂಪುಟ: 10 ಸಂಚಿಕೆ: 21 Sunday, May 15, 2016

ಜನರಲ್ಲಿ ಜಾಗೃತಿ ಮತ್ತು ಪ್ರತಿರೋ ಧ, ಚುನಾವಣಾ ಆಯೋಗದ ಬಿಗಿಯಾದ ಕ್ರಮಗಳು ಇತ್ಯಾದಿಗಳಿಂದ ತಾವು ಯೋಜಿಸಿದಷ್ಟು ಚುನಾವಣಾ ಅಕ್ರಮಗಳನ್ನು ನಡೆಸಲು ಸಾಧ್ಯವಾಗದ ತೃಣಮೂಲ ಕಾಂಗ್ರೆಸ್ ಚುನಾವಣೆ ಮುಗಿದ ಮೇಲೆ ಹಲ್ಲೆ ಹಿಂಸೆಗಳನ್ನು ನಡೆಸುತ್ತಿದೆ.

ಚುನಾವಣೆಗಳು ಮುಗಿದ ಕೂಡಲೇ ಕೇಂದ್ರ ಮೀಸಲು ಪಡೆಯ ಯೋಧರು ಮತ್ತು ಪೋಲಿಸ್ ಕಾವಲನ್ನು ತೆಗೆಯಲಾಗುತ್ತದೆ. ಆಗ ಎಡರಂಗದ ಪರವಾಗಿ ಬೂತ್ ಏಜೆಂಟರಾಗಿ ಕೆಲಸ ಮಾಡಿದವರನ್ನು ಹುಡುಕಿ ಹಲ್ಲೆ ಮಾಡುವುದು, ಸಿಪಿಐ(ಎಂ) ಮತ್ತು ಎಡರಂಗಕ್ಕಾಗಿ ದುಡಿದವರನ್ನು ಹುಡುಕಿ ಹಿಂಸೆ ನೀಡುವುದು ನಡೆಯುತ್ತಿವೆ. ಈ ಬಾರಿ ಹಿಂಸಾಚಾರ ಮತ್ತೊಂದು ಘಟ್ಟವನ್ನು ಮುಟ್ಟಿದೆ.

ಎಡರಂಗಕ್ಕಾಗಿ ಕೆಲಸ ಮಾಡಿದವರನ್ನು ಹುಡುಕಿ ಹಲ್ಲೆ ನಡೆಸುವುದಲ್ಲದೇ ಅವರ ಮನೆಯ ಸದಸ್ಯರ ಮೇಲೆ, ಅದೂ ಮಕ್ಕಳ ಮೇಲೆ ಹಲ್ಲೆಗಳು ನಡೆದಿವೆ. ಹೆಣ್ಣು ಮಕ್ಕಳು ಎಂಬ ಅಂಶವನ್ನೂ ಸಹ ಲೆಕ್ಕಕ್ಕೆ ತೆಗೆದುಕೊಳ್ಳದೇ ಮಕ್ಕಳ ಮೇಲೆ ಕ್ರೂರ ಹಲ್ಲೆಗಳನ್ನು ನಡೆಸಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಡೋಮ್ಕಾಲ್ ಮತಗಟ್ಟೆಯಲ್ಲಿ ಸಿಪಿಐ(ಎಂ) ಪರ ಏಜೆಂಟ್ ಆಗಿದ್ದ ತಹಿದುಲ್ ಇಸ್ಲಾಂ ಅನ್ನು ಟಿಎಂಸಿ ಗೂಂಡಾಗಳು ಕೊಂದುಹಾಕಿದ್ದಾರೆ. ಬಧ್ರ್ವಾನ್ ಜಿಲ್ಲೆಯಲ್ಲಿ ಸಿಪಿಐ(ಎಂ) ಏಜೆಂಟ್ ಆಗಿ ಕೆಲಸ ಮಾಡಿ ವಾಪಸ್ ಬರುವಾಗ ಟಿಎಂಸಿ ಗೂಂಡಾಗಳು ಎಸ್.ಕೆ. ಫಜಲ್ ಹಕ್ವೆ ಮೇಲೆರಗಿ ಕೊಂದು ಹಾಕಿದ್ದಾರೆ. ತನ್ನ ಮಗನನ್ನು ಸಿಪಿಐ(ಎಂ) ಪರವಾಗಿ ಬೂತ್ ಏಜೆಂಟ್ ಆಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ 48 ವರ್ಷದ ದೂಖ್ರಿರಾಮ್ ದಾಲ್ ಅವರನ್ನು ಕಗ್ಗೊಲೆ ಮಾಡಲಾಗಿದೆ. ಇದೇ ಬಧ್ರ್ವಾನ್ ಜಿಲ್ಲೆಯಲ್ಲೆ ಕಾಂಡಕೋಶ್‍ನಲ್ಲಿ ಖಾಂಡಕರ್ ಆಲಿ ಹುಸೇನ್ ಎಂಬ ಕಾಂಗ್ರೆಸ್ ಕಾರ್ಯಕರ್ತರನ್ನು ಟಿಎಂಸಿ ಗೂಂಡಾಗಳು ಕೊಂದು ಹಾಕಿದ್ದಾರೆ.

ಇದು ನಡೆದದ್ದು ಬೆಹಲ(ಪೂರ್ವ)ಹರಿದೇವ್ ಪುರ್ ದಲ್ಲಿ; ಮತ ಚಲಾಯಿಸಬಾರದು ಎಂದು ಟಿಎಂಸಿ ಗೂಂಡಾಗಳು ನೀಡಿದ್ದ ಎಚ್ಚರಿಕೆ ಮೀರಿ ತಾತ ಚಲಾಯಿಸಿದ. ರಾತ್ರಿ ಹುಡುಕಿಕೊಂಡು ಬಂದ ಗೂಂಡಾಗಳು ಆತ ಮನೆಯಲ್ಲಿ ಇಲ್ಲದಿದ್ದಾಗ ಏಳು ವರ್ಷದ ಮುಗ್ಧ ಮಗು ಪ್ರೀತಿ ಮೇಲೆ ಹೀನಾಯ ಹಲ್ಲೆ ಮಾಡಿದರು. 24 ಪರಗಣ ಜಿಲ್ಲೆಯ ಸದ್ಗಚಿಯಾದಲ್ಲಿ ಟಿಎಂಸಿ ಗೂಂಡಾಗಳು ಮೂರು ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಗುವಿನ ಕಿವಿಗೆ ಪೆಟ್ಟು ಬಿದ್ದು ಗಾಯವಾಗಿದೆ. ಇಂತಹ ಅಮಾನವೀಯ ಪ್ರಕರಣಗಳ ದೊಡ್ಡ ಪಟ್ಟಿಯೇ ಸಿಗುತ್ತದೆ.

ಎಡರಂಗದ ಪರವಾಗಿ ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮತ್ತು  ಫಲಿತಾಂಶದ ಹಂತದವರೆಗೆ ಅಗತ್ಯ ಭಧ್ರತೆಯ ಕ್ರಮಗಳನ್ನು ಮುಂದುವರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಜನ ಸಮುದಾಯದ ಬಲದಿಂದ ಜನಶಕ್ತಿಯ  ಬಲದಿಂದ ತೃಣಮೂಲಿಗರ ಗೂಂಡಾಗಿರಿಯನ್ನು ಎದುರಿಸಲು ಗಮನ ನೀಡಲಾಗುತ್ತಿದೆ.

ಎತ್ತಿಹೊಳೆ ಯೋಜನೆ ವಿರೋಧಿ ಜಿಲ್ಲಾ ಬಂದ್ ಗೆ ಸಿಪಿಐ(ಎಂ) ಬೆಂಬಲ ಇಲ್ಲ

Friday, May 13, 2016

ಎತ್ತಿನ ಹೊಳೆ ಯೋಜನೆಯನ್ನು ವಿರೋದಿಸಿ ಮೇ.19ರಂದು ಕರೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಬಂದ್‍ಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಬೆಂಬಲ ನೀಡುವುದಿಲ್ಲ ಎಂದು ಸಿಪಿಐ(ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರೂ ನ್ಯಾಯವಾದಿಗಳೂ ಆದ ಬಿ.ಎಂ.ಭಟ್ ಹೇಳಿದ್ದಾರೆ.

ಇದು ಜನರನ್ನು ಮೂಲ ಸಮಸ್ಯೆಗಳಿಂದ ದೂರ ಸರಿಸುವ ಪ್ರಯತ್ನವಷ್ಟೇ ಆಗಿದೆ. ಎತ್ತಿನಹೊಳೆ ಯೋಜನೆಗೂ ದ.ಕ.ಜಿಲ್ಲೆಯ ನೀರಿನ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂಬ ಸತ್ಯ ಬಂದ್‍ಗೆ ಕರೆ ನೀಡಿದವರಿಗೂ ಸೇರಿದಂತೆ ಎಲ್ಲರಿಗೂ ಗೊತ್ತಿದೆÉ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇಲ್ಲಿ ಎತ್ತಿನಹೊಳೆ ಯೋಜನೆಯನ್ನು ವಿರೋದಿಸುತ್ತಾ, ಕೋಲಾರದಲ್ಲಿ ಬೆಂಬಲ ನೀಡುತ್ತಿವೆ. ಇದು ಜಿಲ್ಲೆಗೆ ನಿಜವಾಗಿಯು ಸಮಸ್ಯೆ ಎಂದು ಇಲ್ಲಿ ಹೇಳುವ ಈ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಜನಪ್ರತಿನಿಧಿಗಳು ಲೋಕಸಭೆಯಲ್ಲಾಗಲಿ, ವಿಧಾನ ಸಭೆಯಲ್ಲಾಗಲಿ ತುಟಿಬಿಚ್ಚುವುದಿಲ್ಲ. ಇಂತವರು ಇಲ್ಲಿ ಬಂದ್‍ಗೆ ಬೆಂಬಲ ಘೋಷಿಸಿದರೆ, ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ವಿಚಾರ ಬೇರೆ ಸಿಗಲಾರದು.

ಜಿಲ್ಲೆಯಲ್ಲಿ ಈಗ ನೀರಿನ ಸಮಸ್ಯೆ ಉದ್ಬವಿಸಿದೆ. ಸುಮಾರು ಮೂವತ್ತು ವರ್ಷಗಳಿಂದ ಜಿಲ್ಲೆಯ ನೀರಿನ ಫಸಲು ಕಡಿಮೆಯಾಗುತ್ತಾ ಬರುತ್ತಿರುವುದು ನಮಗೆಲ್ಲಾ ಗೊತ್ತಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ಸಿಪಿಐ(ಎಂ) ಹೋರಾಡುತ್ತಾ ಬಂದಿದ್ದರೂ ಈಗ ಎತ್ತಿನಹೊಳೆಯನ್ನು ವಿರೋದಿಸುವವರ್ಯಾರು ಬೆಂಬಲ ನೀಡಿರಲಿಲ್ಲ. ಜಿಲ್ಲೆಯ ಎಲ್ಲಾ ನದಿಗಳಿಗೆ ಕಿಂಡಿ ಅಣೆಕಟ್ಟು ಕಟ್ಟಬೇಕು, ಜಿಲ್ಲಾದ್ಯಂತ ಇಂಗು ಗುಂಡಿ ನಿರ್ಮಿಸಿ ನೀರಿಂಗಿಸುವ ಕೆಲಸಗಳಾಗಬೇಕು, ಯಾಂತ್ರಿಕೃತ ಮರಳುಗಾರಿಕೆ ನಿಷೇಧಿಸಬೇಕು ಎಂದು ಸಿಪಿಐ(ಎಂ) ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದರೂ, ಜಿಲ್ಲೆಯ ನೀರಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದ ಜನ ಈಗ ನೀರಿನ ಬರಕ್ಕೆ ಎತ್ತಿನಹೊಳೆ ಕಾರಣ ಎಂದು ಹೇಳಿ ಜನರನ್ನು ದಾರಿತಪ್ಪಿಸುತ್ತಿರುವುದು ಸರಿಯಲ್ಲ. ನೈಜ ಸಮಸ್ಯೆಗಳ ಪರಿಹಾರಕ್ಕಾಗಿಯಾಗಲಿ, ಬೀಡಿಕಾರ್ಮಿಕರು ಬೀದಿ ಪಾಲು ಮಾಡುವ ಕೋಟ್ಪಾ ಕಾಯ್ದೆಯ ವಿರುದ್ದವಾಗಲಿ, ಕಸ್ತೂರಿರಂಗನ್ ವರದಿಯ ವಿರುದ್ದವಾಗಲಿ ಇವರ್ಯಾರೂ ಜಿಲ್ಲಾ ಬಂದ್ ಗೆ ಕರೆ  ನೀಡಿಲ್ಲ. ಈಗ ಕೇವಲ ರಾಜಕೀಯ ಲಾಭಕ್ಕಾಗಿ, ಜನರನ್ನು ನೈಜ ಸಮಸ್ಯೆಗಳಿಂದ ದೂರ ಸರಿಸಲು, ಅಕ್ರಮ ಮರಳುಗಾರಿಕೆಯು ನೀರಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಜನ ಪ್ರತಿಭಟಿಸದಂತೆ ಹಾಗೂ ಎಂ.ಆರ್.ಪಿ.ಯಲ್ ನಂತಹ ಕಂಪೆನಿಗಳು ನೇತ್ರಾವತಿ ನೀರು ಕಬಳಿಸುವುದನ್ನು ಜನ ವಿರೋಧಿಸದಂತೆ ಮಾಡಲು ಈ ನಾಟಕ ಆಡಲಾಗುತ್ತಿದೆ.

ಸಾಂಪ್ರದಾಯಿಕ ಹೊಲಗದ್ದೆಗಳು ಈಗ ಇಲ್ಲದಾಗಿದ್ದು ನೀರಿಂಗಿಸುವ ಬಗ್ಗೆ ಬದಲಿ ವ್ಯವಸ್ಥೆ ಮಾಡಬೇಕಾದ ಸರಕಾರ ಅಕ್ರಮ ಮರಳು ಸಾಗಾಟಕ್ಕೆ ಬೆಂಬಲ ನೀಡುತ್ತಿದೆ. ಸಾಂಪ್ರದಾಯಿಕ ಮರಳುಗಾರಿಕೆ ನಡೆಸುವ ಬದಲು ನದಿ ತೀರದಿಂದ ಪ್ರತಿದಿನ ಸಾವಿರಾರು ಟನ್ ಮರಳನ್ನು ಯಂತ್ರಗಳ ಮೂಲಕ ತೆಗೆದು ಲೂಟಿ ಮಾಡಲಾಗುತ್ತಿದೆ. ಇದು ಜಿಲ್ಲೆಯ ನೀರಿನ ಬರ ಹೆಚ್ಚಲು ಕಾರಣವಾಗಿದ್ದರೂ, ಮರಳು ಲಾಬಿಯವರ ವಿರುದ್ದ ಯಾರೂ ಜಿಲ್ಲಾ ಬಂದಿಗೆ ಕರೆ ನೀಡುವುದಿಲ್ಲ. ಮರಳು ಅಕ್ರಮ ಸಾಗಾಣಿಕೆಯಿಂದ ನೀರಿನ ಬರ ಬರುವುದೆಂದೂ ಕೂಡಾ ಜನ ಗಮನಿಸದೇ ಇರಲು ಎತ್ತಿನಹೊಳೆಯನ್ನು ಜನರ ಶತ್ರುವನ್ನಾಗಿ ಬಿಂಬಿಸಲಾಗುತ್ತಿದೆ.

ಜಿಲ್ಲೆಯ ನೀರಿನ ಬರ ಎತ್ತಿನಹೊಳೆ ಯೋಜನೆ ಜಾರಿಯಾಗುವ ಮೊದಲೇ ಇತ್ತು ಹಾಗೂ ಈಗ ಎದುರಾಗಿರುವ ಬರ ಎತ್ತಿನಹೊಳೆಗೆ ಸಂಭಂದಿಸಿರದ ಜಿಲ್ಲೆಗಳಲ್ಲೂ ಇದೆ. ದ.ಕ. ಜಿಲ್ಲೆ ಹಿಂದೆ ಗದ್ದೆ ಬೇಸಾಯಗಳಿಂದ ಕಂಗೊಳಿಸುತ್ತಿದ್ದು, ಬಿದ್ದ ಮಳೆಯ ನೀರು ಕೂಡಾ ಭೂಮಿಯ ಒಳಗೆ ಇಂಗುತ್ತಿತ್ತು. ಆದರೆ ಜಿಲ್ಲೆಯಲ್ಲಿ ಭತ್ತದ ಬೇಸಾಯ ಲಾಭದಾಯಕವಲ್ಲದ ಕಾರಣ ಅನಿವಾರ್ಯವಾಗಿ ಅಡಿಕೆ, ರಬ್ಬರ್ ಬೆಳೆಗಳಿಗೆ ಶರಣಾಗಿ ಹೊಲಗದ್ದೆಗಳೆಲ್ಲಾ ನಾಶವಾಯಿತು. ಇದರಿಂದ ಜಿಲ್ಲೆಯ ಜನ ಆರ್ಥಿಕವಾಗಿ ಸಬಲರಾದರೂ ನೀರಿಗೆ ಬರ ಬರತೊಡಗಿತು. ಇದರಿಂದ ಮಳೆ ನೀರೆಲ್ಲಾ ಸಮುದ್ರ ಪಾಲಾಗುವಂತಾಯಿತು. ಇಂತಹ ಸಮಯ ಜಿಲ್ಲೆಯ ನೀರಿನ ಒಸರು ಹೆಚ್ಚಲು ಕ್ರಮ ಕೈಗೊಳ್ಳಲು ಒತ್ತಾಯಿಸಿ ಯಾರೂ ಜಿಲ್ಲಾ ಬಂದ್‍ಗೆ ಕರೆ ನೀಡಿರಲಿಲ್ಲ ಯಾಕೆ ? ನೀರಿಗಾಗಿ ಸಿಪಿಐ(ಎಂ) ಹೋರಾಡುತ್ತಾ ಇರುವುದನ್ನೂ ಬೆಂಬಲಿಸಲಿಲ್ಲ ಯಾಕೆ ? ನದಿಯನ್ನೇ ಖಾಸಗೀಕರಣ ಮಾಡಲು ಹೊರಟಾಗ ಹೋರಾಡಿ ಲಾಠಿಏಟು, ಜೈಲು ವಾಸ ಅನುಭವಿಸಿದ್ದು, ಸಿಪಿಐ(ಎಂ) ಪಕ್ಷದ ಸದಸ್ಯರು ಮಾತ್ರ ಎಂಬುದು ಜಿಲ್ಲೆಯ ಚರಿತ್ರೆ.

ಈ ಎಲ್ಲಾ ನೈಜ ಸಮಸ್ಯೆಗಳನ್ನು ಬದಿಗೊತ್ತಿ ಎತ್ತಿನಹೊಳೆ ಯೋಜನೆಯನ್ನು ಜನರ ಶತ್ರುವನ್ನಾಗಿ ಮಾಡಿ ರಾಜಕೀಯ ನಡೆಸುವುದನ್ನು ಸಿಪಿಐ(ಎಂ) ಖಂಡಿಸುತ್ತದೆ. ಜನರು ಇದನ್ನು ಅರ್ಥ ಮಾಡಿಕೊಂಡು ಜಿಲ್ಲೆಯ ಉಳಿವಿಗೆ ಸಿಪಿಐ(ಎಂ) ದಾರಿಯನ್ನು ಅನುಸರಿಸಿದರೆ ಉತ್ತಮ. ಜನ ಈ ನೀರಿನ ಸಮಸ್ಯೆಗಳ ವಿರುದ್ದ ಸರಕಾರ ನಡೆಸುವ ಪಕ್ಷಗಳ ವಿರುದ್ದ ಹೋರಾಡದೆ ಇರಲು, ರಾಜಕೀಯೇತರವಾಗಿ ಹೋರಾಡಿ ತಮ್ಮ ಅಸ್ತಿತ್ವವನ್ನು ಉಳಿಸುವ ಹತಾಶ ಪ್ರಯತ್ನವೇ ಎತ್ತಿನಹೊಳೆ ವಿರೋಧಿ ಹೇಳಿಕೆಗಳು ಮತ್ತು ಹೋರಾಟಗಳು. ಸರಕಾರದ ಜನ ವಿರೋಧಿ ಆಡಳಿತದಿಂದ  ಸರಕಾರದ ವಿರುದ್ದ ಜನರ ರೋಷ ಉಕ್ಕಿ ಹೋರಾಡದಂತೆ ತಡೆಯಲು, ಹಿಂದುಗಳ ಅಭಿವೃದ್ದಿ ಆಗದಿರಲು ಮುಸ್ಲಿಂನವರು ಕಾರಣ ಎಂದು ಬಿಂಬಿಸಿ ಕೋಮುಗಲಬೆ ಬೆಳೆಸಿದಂತೆ, ಇದನ್ನು ಕೂಡಾ ಭಾವನಾತ್ಮಕ ವಿಚಾರವನ್ನಾಗಿಸಿ ಜನರು ನೈಜ ಸಮಸ್ಯೆಗಳ ವಿರುದ್ದ ಹೋರಾಡದಂತೆ ಮಾಡುವುದಷ್ಟೇ ಈ ಜಿಲ್ಲಾ ಬಂದಿನ ಉದ್ದೇಶವಾಗುತ್ತದಷ್ಟೇ.

ನಾವು ಜಿಲ್ಲೆಯ ಜನರ ಬದುಕನ್ನು ಉಳಿಸುವತ್ತ ಗಮನ ನಿಡಬೇಕಾಗಿದೆ. ಬೀಡಿ ಉದ್ಯಮ ಉಳಿಸಲು, ಕಸ್ತೂರಿರಂಗನ್ ವರದಿ ತಿರಸ್ಕರಿಸಲು, ಮಳೆ ನೀರನ್ನು ನೀರಿಂಗಿಸಲು, ಅಕ್ರಮ ಮರಳುಗಾರಿಕೆ ತಡೆಯಲು, ಕಿಂಡಿಅಣೆಕಟ್ಟು ನಿರ್ಮಿಸಲು ಹೋರಾಡಿ ಜನರ ಬದುಕನ್ನು ಉಳಿಸಿದರೆ ಈ ಜಿಲ್ಲೆಯು ಜೀವಂತ ಇರುತ್ತದೆ. ಈ ರೈತ-ಕಾರ್ಮಿಕರನ್ನು ಉಳಿಸಿದರೆ ಮಾತ್ರ ಹಿಂದು ಧರ್ಮ ಎನ್ನಲು, ಮುಸ್ಲಿಂ ಧರ್ಮ ಎನ್ನಲು, ಕ್ರಿಶ್ಚಿಯನ್ ಧರ್ಮ ಎನ್ನಲು, ಆ ಜಾತಿ, ಈ ಜಾತಿ ಎನ್ನಲು ಜನ ಇರುತ್ತಾರೆ. ಜನರ ಬದುಕಿಗೆ ಗಮನ ನೀಡಿದರೆ ಮಾತ್ರ ಎಲ್ಲವು ಉಳಿಯಲು ಸಾದ್ಯ. ಧರ್ಮೋಧ್ದಾರಕರು, ನದಿ ಉಳಿಸೋರು, ಪ್ರತ್ಯೇಕ ರಾಜ್ಯ ಕಟ್ಟುತ್ತೇವೆ ಎನ್ನೋರು ಮೊದಲು ಮನುಷ್ಯರನ್ನು ಉಳಿಸುವ, ನೆಮ್ಮದಿ ಜೀವನ ದೊರಕಿಸುವ ಕಡೆ ಗಮನ ನೀಡಬೇಕಾಗಿದೆ. ಟಾಟಾ ಬಿರ್ಲಾರಿಗೆ ಕಷ್ಟ ಬಂದಿದೆ ಎಂದು ಸಂಕಟ ಪಡುವ ರಾಜಕಾರಣಿಗಳಿಗೆ ಎಲ್ಲರನ್ನು ಬದುಕುಳಿಯುವಂತೆ ಮಾಡುವ ನಡೆದಾಡುವ ದೇವರು ಅನ್ನದಾತನಾದ ರೈತರ ಸಂಕಷ್ಟಗಳು ಅರ್ಥವಾಗುವುದೇ ಇಲ್ಲವಲ್ಲ. ಟಾಟಾ ಉತ್ಪಾದಿಸುವ ಸೊತ್ತುಗಳಿಲ್ಲದಿದ್ದರೂ ಬದುಕಬಹುದು, ರೈತ ಉತ್ಪಾದಿಸುವ ಅನ್ನ ಇಲ್ಲದಿದ್ದರೆ ಬದುಕಲಾರೆವು ತಿಳಿಯಿರಿ.

ಸಿಪಿಐ(ಎಂ) ಪಕ್ಷವು ಜಿಲ್ಲೆಯ ನೀರಿನ ಸಮಸ್ಯ ಪರಿಹರಕ್ಕಾಗಿ, ಹೋರಾಟ ಮುಂದುವರಿಸಲಿದೆ. ಜಿಲ್ಲೆಯ ಎಲ್ಲಾ ನದಿಗಳಿಗೂ ಕಿಂಡಿಅಣಕಟ್ಟು ಕಟ್ಟಲು ಒತ್ತಾಯಿಸಿ, ಜಿಲ್ಲಾದ್ಯಂತ ಇಂಗು ಗುಂಡಿ ನಿರ್ಮಿಸಿ ನೀರಿಂಗಿಸಲು ಆಗ್ರಹಿಸಿ, ಅಕ್ರಮ ಮರಳುಗಾರಿಕೆಯನ್ನು ವಿರೋಧಿಸಿ, ದ.ಕ.ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿಸಲು ಮಾಡಬೇಕಾದ ಅಗತ್ಯ ಕೆಲಸಗಳಿಗಾಗಿ ಒತ್ತಾಯಿಸಿ ಸಿಪಿಐ(ಎಂ) ಹೋರಾಟವನ್ನುತೀವ್ರ ರೀತಿಯಲ್ಲಿ ಮುನ್ನಡೆಸಲಿದೆ. ಜಿಲ್ಲೆಯ ಜನ ಈ ಹೋರಾಟವನ್ನು ಬೆಂಬಲಿಸಿ ಜಿಲ್ಲೆಯ ಉಳಿವಿಗೆ ನೈಜ ಹೋರಾಟದತ್ತ ಸಾಗಬೇಕೆಂದು ಬಿ.ಎಂ.ಭಟ್ ಜಿಲ್ಲೆಯ ಜನತೆಯನ್ನು ವಿನಂತಿಸಿದ್ದಾರೆ. ರೈತರ ಭೂಮಿಯ ಪ್ರಶ್ನೆ, ಹಾಗೂ ರೈತರ ಬದುಕಿನ ರಕ್ಷಣೆಗಾಗಿ, ಬೀಡಿ ಕಾರ್ಮಿಕರ ಬದುಕಿನ ಉಳಿವಿಗಾಗಿ ಹೋರಾಡುತ್ತಿರುವ ಸಿಪಿಐ(ಎಂ)ಗೆ ಜಿಲ್ಲೆಯ ಭವಿಷ್ಯದ ಬಗ್ಗೆಯೂ ಕಾಳಜಿ ಇದೆ. ಅದು ಸರಿಯಾದ ದಾರಿಯಲ್ಲಿ ಸಾಗಿ ಸರಿಯಾದ ಪರಿಹಾರ ಕಂಡುಕೊಳ್ಳುವುದಾಗಿದೆ.