“ಯಾರಾದರೂ ಹೇಳುವರೇ….ನನ್ನ ತಪ್ಪೇನೆಂದು?”

ಸಂಪುಟ: 10 ಸಂಚಿಕೆ: 23 date: Sunday, May 29, 2016

ದಿಲ್ಲಿಯಲ್ಲಿ ಆಫ್ರಿಕಾ ದಿನದಂದು ಕವಿತೆಯ ಮೂಲಕ ಆಪ್ರಿಕಾದ ನೋವು ತೋಡಿಕೊಂಡ ಘಾನಾ ಹೈಕಮಿಶನರ್

ಭಾರತ ಮತ್ತು ಆಫ್ರಿಕಾದ ದೇಶಗಳ ನಡುವೆ ದೀರ್ಘಕಾಲದ ಸೌಹಾರ್ದದ ನಂಟಿಗೆ ಈ ಬಾರಿ ಕುತ್ತು ಬಂದಂತೆ ಕಾಣುತ್ತದೆ. ದಿಲ್ಲಿಯಲ್ಲಿ ಭಾರತದ ವಿದೇಶಾಂಗ ಇಲಾಖೆ ಏರ್ಪಡಿಸುವ ‘ಆಫ್ರಿಕಾದಿನ’ದ ಆಚರಣೆಯನ್ನು ಮುಂದೂಡುವಂತೆ ಹಲವು ಆಫ್ರಿಕನ್ ದೇಶಗಳು ಒತ್ತಾಯಿಸಿದ್ದವು. ಇದು ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಕೊನೆಗೂ ಆಫ್ರಿಕಾದ ರಾಯಭಾರಿಗಳ ಮನ ಒಲಿಸಿ ದಿನಾಚರಣೆ ನಡೆದಿದೆ.

ಕಳೆದ ವಾರ ದೇಶದ ರಾಜಧಾನಿಯ ಬೀದಿಯಲ್ಲಿ ಕಾಂಗೋ ಮೂಲದ ಸ್ನಾತಕೋತ್ತರ ವಿದ್ಯಾರ್ಥಿ ಮಾಸುಂದ ಕಿತಾಡ ಓಲಿವರ್‍ನನ್ನು ಬಡಿದು ಸಾಯಿಸಿದ್ದು ಆಫ್ರಿಕಾದ ರಾಯಭಾರಿಗಳ ದುಗುಡಕ್ಕೆ ಕಾರಣ.

ಈ ಸಮಾರಂಭದಲ್ಲಿ ಘಾನಾದ ಹೈಕಮಿಶನರ್ ಸ್ವರಚಿತ ಕವನದ ಮೂಲಕ ಈ ದುಗುಡಕ್ಕೆ ಅಭಿವ್ಯಕ್ತಿ ನೀಡಿದರು-ನನ್ನ ಬಿಸಿ ಆಫ್ರಿಕನ್ ರಕ್ತ ಇದ್ದಕಿದ್ದಂತೆ ತಣ್ಣಗಾಗಿದೆ. ಯಾರಾದರೂ ಹೇಳಬೇಕು ನನ್ನ ತಪ್ಪೇನೆಂದು” ಎಂದು ಆರಂಭವಾಗುವ ಈ ಕವನ ಆಫ್ರಿಕಾದ ಮಹಾ ನದಿಗಳು, ನೈಲ್, ಗ್ರೇಟ್ ಕಾಂಗೊ, ಟಾಂಗಾನಿಕಾ, ವೋಲ್ಟಾ ಗಂಗೆಯಿಂದ ನನ್ನ ನೆತ್ತರನ್ನು ಪಡೆಯಲಿ” ಎಂದು ಕೊನೆಗೊಳ್ಳುತ್ತದೆ.

ಹೀಗೇಕೆ ಆಗುತ್ತಿದೆ? ಮೋದಿ ಸರಕಾರ ಎಚ್ಚೆತ್ತುಕೊಳ್ಳಲು ಆಫ್ರಿಕನ್ ದೇಶಗಳ ಬಹಿಷ್ಕಾರದ ಕರೆಯ ವರೆಗೆ ಕಾಯಬೇಕಿತ್ತೇ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಕೇಳುತ್ತಾರೆ. ಕಳೆದ ವಾರ ಬಿಹಾರದಲ್ಲಿ ‘ಜಂಗಲ್ ರಾಜ್’ಎಂದು ಟೀಕಿಸುತ್ತಿದ್ದರು. ದೇಶದ ರಾಜಧಾನಿಯಲ್ಲಿ ಯಾರ ರಾಜ್ಯವಿದೆ ಎಂಬ ಪ್ರಶ್ನೆಯನ್ನು ಈಗ ಎಲ್ಲರೂ ಕೇಳುತ್ತಿದ್ದಾರೆ. ಕೇಜ್ರಿವಾಲ್  ಸರಕಾರಕ್ಕಂತೂ ಇಲ್ಲಿಯ ಕಾನೂನು ವ್ಯವಸ್ಥೆ ಒಳಪಟ್ಟಿಲ್ಲವಲ್ಲ!

ವೇದರಾಜ್ ಎನ್.ಕೆ.

Advertisements