(ಸಂಪುಟ 8 , ಸಂಚಿಕೆ 27, ಜುಲೈ  2014 )

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಏನಾಗಿದೆ? ಏನು ಮಾಡುತ್ತಿದೆ? ಎಂಬಂತಹ ಸಹಜ ಪ್ರಶ್ನೆಯನ್ನು ಹಾಕಿಕೊಂಡು ಮೇಲೆ, ಕೆಳಗೆ ನೋಡಿದರೆ ಸಾಮಾನ್ಯವಾಗಿ ತಿದ್ದಿಕೊಳ್ಳುವ ಬುದ್ದಿಯೇನಾದರೂ ಇದೆಯೇ ಎಂದು ಇಣುಕಿದರೆ ಅದಂತೂ ಅಲ್ಲಿ ಕಾಣ ಸಿಗುವುದಿಲ್ಲ.

ನಿರ್ಲಕ್ಷತೆ

ಹಾಗೆ ನೋಡಿದರೆ ಕಾಂಗ್ರೆಸ್ ಇದುವರೆಗೂ ತನ್ನ ಸೋಲಿನ ಕಾರಣಗಳನ್ನು ಅದು ಗಂಭೀರವಾಗಿ ಪರಿಶೀಲಿಸಿದ್ದಿಲ್ಲ, ವಿಮರ್ಶಿಸಿದ್ದಿಲ್ಲ. ತಿದ್ದಿಕೊಳ್ಳುವುದಂತೂ ದೂರವೇ ಉಳಿಯಿತು. ಅಂತಹ ಜರೂರತ್ತು ಅದಕ್ಕಿಲ್ಲವೇ ಇಲ್ಲ. ಈಗಲೂ ಪರಿಶೀಲನೆಯನ್ನು ಆ ಪಕ್ಷದ ಹೊರಗಿರುವವರು ಮಾಡುತ್ತಿದ್ದಾರೆ ಹೊರತು ಹೊಣೆ ಹೊತ್ತಿರುವವರಲ್ಲ. ಮೊನ್ನೆ ಮೈಸೂರಿನಲ್ಲಿಯ ಒಂದು ವಿಚಾರಗೋಷ್ಟಿಯಲ್ಲಿ ತಮ್ಮ ಮಗ್ಗುಲಲ್ಲೇ ಇರುವ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟುರವರು ಮಾಡಿದ ವಿಮರ್ಶೆಯನ್ನಾದರೂ ಕಾಂಗ್ರೆಸ್ ನಾಯಕರು ಕೇಳಿಸಿಕೊಂಡರೇ? ಕೇಂದ್ರದವರು ಇರಲಿ ರಾಜ್ಯದ ಕಾಂಗ್ರೆಸ್ನ ಎಷ್ಟು ನಾಯಕರು ಕಿವಿಗೊಟ್ಟರು? ಹೌದು, ಇಂತಹುಗಳಿಂದ ಅವರಿಗೇನು ಗದ್ದುಗೆ ಸಿಗುತ್ತದೆಯೇ? ಬಿಜೆಪಿ ಅವಲೋಕಿಸುತ್ತದೆಯಾದರೂ ಸತ್ಯವನ್ನು ಮರೆ ಮಾಚುತ್ತದೆ. ಸತ್ಯ ಕಾರಣ ಬಹಿರಂಗದಲ್ಲಿ ಗುರುತಿಸಲು ಬಹುತೇಕರು ನಿರಾಕರಿಸುತ್ತಾರೆ. ಇದು ಜನತಾದಳದಂತಹ ಪಕ್ಷದ ವಿಷಯದಲ್ಲೂ ನಿಜ. ಅವರೆಲ್ಲಾ ದೇಶದ ರೆಸಾರ್ಟ್ ಗಳು ಸಾಲದು ಅಂತಾ ಶ್ರೀಲಂಕಾ ದೇಶದ ರೆಸಾರ್ಟ್ ಗಳಲ್ಲಿ ವಿಮರ್ಶೆಯ ವಿಶ್ರಾಂತಿ ಪಡೆದು ಬಂದರಲ್ಲ, ಅಲ್ಲಿಂದ ಹಿಡಿದು ತಂದದ್ದಾದರೂ ಏನು? ಹೀಗೆ ಪಕ್ಷ, ಅದರ ನೀತಿ, ಜನರ ಮೇಲಿನ ಪ್ರೀತಿ ಎಂಬುದೀಗ ಮರೆಯಾಗಿ ಲೇಬಲ್ ಯಾವುದಾದರೇನು, ದಡ ಸೇರಲು ದೋಣಿಯೊಂದಿದ್ದರೆ ಅಷ್ಟೇ ಸಾಕು ಎನ್ನುವಷ್ಟರ ಮಟ್ಟಿಗೆ ಈ ಪಕ್ಷಗಳು ತಲುಪಿ ಬಿಟ್ಟಿವೆ. ಪಕ್ಷದ ಚಟುವಟಿಕೆಗಳು ಕುಟುಂಬದ ಖಾಸಗಿ ಆಸ್ತಿ ವ್ಯವಹಾರ.

ಅಧಿಕಾರವೇ ಮಂತ್ರ-ತಂತ್ರ

ಯಾವಾಗ ಲೋಕಸಭಾ ಚುನಾವಣೆ ಮುಗಿಯಿತೋ ಮಣ್ಣು ಮುಕ್ಕಿದ ಕೇಂದ್ರದ ಕಾಂಗ್ರೆಸ್ ನಾಯಕರು ‘ತಿಂದಿದ್ದನ್ನೆಲ್ಲಾ ಅರಗಿಸಿಕೊಳ್ಳಲು’ ಹಾಸಿಗೆ ಮೇಲೆ ಕಾಲು ಚಾಚಿ ದಿಂಬು ಎಳೆಯುತ್ತಿದ್ದಾರೆ. ಆದರೆ ಅದೇ ಹೊತ್ತಿನಲ್ಲಿ ಹಸಿದಿರುವ ರಾಜ್ಯ ನಾಯಕರು ಅಧಿಕಾರ ಹಂಚಿಕೊಳ್ಳುವ (ಮುಂದೆ ಅಧಿಕಾರ ಕಳೆದುಕೊಳ್ಳುವ) ಕಿತ್ತಾಟದಲ್ಲಿ ತೋಳೇರಿಸಿ ತೊಡೆ ತಟ್ಟಿ ನಿಂತು ಬಿಟ್ಟಿದ್ದಾರೆ. ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ಸೇನಾದರೂ ಒಂದಿಷ್ಟು ನೆಮ್ಮದಿ ತರಬಹುದು ಎಂಬ ಆಶೆಯಿಂದ ಅಧಿಕಾರಕ್ಕೇರಿಸಿದ ರಾಜ್ಯದ ಜನತೆಯನ್ನೇ ಮರೆತು ಬಿಟ್ಟಿದ್ದಾರೆ. ಈ ಗೆಲುವು ತಮ್ಮಿಂದಲೇ, ಆದ್ದರಿಂದ ಅಧಿಕಾರದ ರಸಗವಳದಲ್ಲಿ ತಮಗೆ ಪಾಲು ಸಿಗಲೇಬೇಕೆಂದು ಪಟ್ಟು ಹಿಡಿದು ರಂಪಾಟ ಆರಂಭಿಸಿದ್ದಾರೆ. ‘ಕೊಟ್ಟವನೇ ಕೋಡಂಗಿ, ತಿಂದವನೇ ಈರಭದ್ರನಲ್ಲವೇ?

ಕಾಂಗ್ರೆಸ್ನಲ್ಲಿ ಈಗ ಕಾಣುತ್ತಿರುವುದು ಕುಸ್ತಿ, ಮಸ್ತಿ, ಮುಷ್ಟಿ ಯುದ್ಧ. ಅದು ಒಂದಾಗಿದ್ದ ದಿನಗಳು ಮರೆಯಾಗಿ ದಶಕಗಳೇ ಸರಿದು ಹೋದವು. ಈಗಲೂ ರಾಜ್ಯದ ಕಾಂಗ್ರೆಸ್ ಒಂದು ಐಕ್ಯತೆ ಇರುವ ಪಕ್ಷವಲ್ಲ, ಬದಲಾಗಿ ಮೂಲ ಕಾಂಗ್ರೆಸ್ಸಿಗರು-ವಲಸಿಗರು ಎಂದೋ, ವಿವಿಧ ನಾಯಕರ ಹಿಂಬಾಲಕರ ಬಣಗಳಾಗಿಯೋ ಹೀಗೆ ಸ್ಥಾಪಿತ ಹಿತಾಸಕ್ತಿಗಳ ಹಲವಾರು ಗುಂಪುಗಳ ಗುದ್ದಾಡುವ ಕೂಟ. ಈಗ ಲೋಕಸಭೆಯ ಚುನಾವಣೆ ಮುಗಿಯಲೆಂದೇ ಕಾದು ಕುಳಿತಿದ್ದ ನಾಯಕರೆಲ್ಲಾ ಅಧಿಕಾರದ ತಮ್ಮ ಪಾಲು ಕೊಡಬೇಕೆಂದು ಕದನ ಆರಂಭಿಸಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ರವರು ಸಿ.ಎಂ.ಆಗಲಿಲ್ಲ, ಡಿ.ಸಿ.ಎಂ.ನ್ನಾದರೂ ಮಾಡಲೇಬೇಕೆಂದು ಬಹಿರಂಗವಾಗಿಯೇ ಆಗ್ರಹಿಸುತ್ತಿದ್ದಾರೆ. ಅದಕ್ಕಾಗಿ ಪಟ್ಟು ಹಿಡಿದು ಗುದ್ದಾಡಿ ವಿಧಾನ ಪರಿಷತ್ತಿನಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇದನ್ನು ತಡೆಯಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಣದ ತಂತ್ರಗಳೂ ಗುಪ್ತವೇನಲ್ಲ. ಜಿ.ಪ.ರವರನ್ನು ರಾಜ್ಯಸಭೆಯ ಸದಸ್ಯರನ್ನಾಗಿಸಿ ದೆಹಲಿಗೆ ಸಾಗ ಹಾಕಿ ಬಿಡಬೇಕೆಂಬ ಸಿದ್ದು ಬಣದ ಯತ್ನಗಳನ್ನು ಹೈಮಾಂಡ್ ನೆರವಿನಿಂದ ತಡೆದು ರಾಜ್ಯದ ರಾಜಕಾರಣದಲ್ಲೇ ಜಿ.ಪ. ಉಳಿದಿದ್ದಾರೆ.

ಜಾತಿ ಗುರಾಣಿಗಳು

ಇನ್ನು ಉಪ ಮುಖ್ಯಮಂತ್ರಿಯಾಗುವ ಆಸೆ ಈಡೇರಿಕೆಯ ಹಣಾ ಹಣಿ. ಆ ದಾರಿಯೂ ಸುಗಮವೇನಿಲ್ಲ. ಇದಕ್ಕೆ ಸಿದ್ಧರಾಮಯ್ಯ ಒಪ್ಪುತ್ತಿಲ್ಲವಾದ್ದರಿಂದ ಕೊನೆಗೆ ಮಂತ್ರಿಗಿರಿಗೆ ಪೈಪೋಟಿ! ಒಂದು ವೇಳೆ ಜಿ.ಪ.ರವರು ಮಂತ್ರಿಯಾದರೆ ತೆರವಾಗುವ ಪಕ್ಷದ ರಾಜ್ಯ ಅಧ್ಯಕ್ಷಗಿರಿಗೆ ಯಾರು ಬರಬೇಕು, ಡಿ.ಸಿ.ಎಂ ಯಾರಾಗಬೇಕು ಎಂಬ ವಿಷಯದ ಸುತ್ತಲೂ ಲಾಭಿ, ಪೈಪೋಟಿ ತೀವ್ರ ಸ್ವರೂಪ ಪಡೆಯುತ್ತಿದೆ. ಇದಕ್ಕಾಗಿ ಎಲ್ಲರೂ ಆಶ್ರಯಿಸುತ್ತ್ತಿರುವುದು ಜಾತಿ ಮೂಲಗಳನ್ನೇ. ಆದ್ದರಿಂದಲೇ ಮೇಲ್ಮನೆ ಸದಸ್ಯತ್ವ ಪಡೆಯಲು, ಮಂತ್ರಿಯಾಗಲು ಅಥವಾ ಪಕ್ಷದ ಹುದ್ದೇಗೇರಲು ಬಳಸುತ್ತಿರುವ ಕೋಲು ಎಂದರೆ ಜಾತಿಯೇ. ಈ ಸ್ಪರ್ಧೆಗೆ ಈಗ ಇಳಿದಿರುವವರು ಸೂಕ್ತ ಸ್ಥಾನ ಸಿಕ್ಕಿಲ್ಲವೆಂದು ಲಿಂಗಾಯತರು, ಒಕ್ಕಲಿಗರು, ಅಹಿಂದ ಹೆಸರಿನಲ್ಲಿ ಹಕ್ಕು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿಯೇ ವೀರಶೈವ ಮಹಾಸಭಾ ಮೂಲಕ ಲಿಂಗಾಯತರಿಗೆ ಕಾಂಗ್ರೆಸ್ನಲ್ಲಿ ಸ್ಥಾನವಿಲ್ಲವೆಂದೂ, ಎಲ್ಲವೂ ಅಹಿಂದಮಯವಾಗಿದೆಯೆಂದು ನೀಡಿದ ಹೇಳಿಕೆಯ ಹಿಂದೆ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಕೈವಾಡ ಇರುವುದರಲ್ಲಿ ಯಾರಿಗೂ ಅನುಮಾನ ಉಳಿದಿಲ್ಲ. ತಮ್ಮ ಸ್ವಂತ ಮಗನಿಗೇ ಅಧ್ಯಕ್ಷಗಿರಿ ಬರಲಿ ಎಂಬ ದೂರಾಶೆ! ಇದು ಸಿಗದಿದ್ದರೆ ಡಿ.ಸಿ.ಎಂ. ಸ್ಥಾನವಾದರೂ ಸಿಗಲಿ ಎಂದು ದಾಳ ಬಿಟ್ಟವರು ಒಕ್ಕಲಿಗರ ಪ್ರಾತಿನಿಧ್ಯದ ಬಗ್ಗೆ ಹೇಳುತ್ತಿದ್ದಾರೆ. ಇವುಗಳಿಗೂ ಎದಿರೇಟು ನೀಡಲು ಸಿದ್ಧವಾಗಿರುವ ಸಿದ್ದು ಬಣ ಒಂದೊಮ್ಮೆ ಅಂತಹ ಜಾತಿ ಸೂತ್ರದ ಜಾರಿ ಬಂದರೆ ತಮ್ಮ ಹುದ್ದರಿಗಳನ್ನೇ ಅಲ್ಲಿ ಪ್ರತಿಷ್ಠಾಪಿಸುವ ತಂತ್ರವನ್ನೂ ಹೆಣೆಯುತ್ತಿದ್ದಾರೆ. ಈ ಕದನದಲ್ಲಿ ಎಲ್ಲಾ ಬಣಗಳೂ ಇಳಿದಿವೆ. ಕಾಂಗ್ರೆಸ್ಸನ್ನೇ ಬೆಂಬಲಿಸುತ್ತಾ ಬಂದಿದ್ದೇವೆ ಎಂದು ಹೇಳಿಕೊಂಡ ವೀರಶೈವ ಮಹಾಸಭಾದ ನಾಯಕರಿಗೂ ಸಚಿವ ಆಂಜನೇಯಲು ಅವರಿಗೂ ನಡೆದ ಬಹಿರಂಗ ವಾಗ್ವಾದ ವಿಚಿತ್ರವಾದ ಪ್ರಹಸನವಾಯಿತು.

ಈ ಬಣ ಬಡಿದಾಟದ ಸ್ವರೂಪ ಮತ್ತೊಮ್ಮೆ ಪ್ರದರ್ಶಿತವಾದುದು ಮೇಲ್ಮನೆಗೆ ನಾಲ್ವರ ನಾಮಕರಣದ ವಿಷಯದಲ್ಲಿ. ಮೊದಲು ಸಾಂಸ್ಕೃತಿಕ ಕ್ಷೇತ್ರದಿಂದ ಪ್ರಗತಿಪರ ಚಿಂತಕ ಡಾ.ಮರುಳಸಿದ್ದಪ್ಪನವರನ್ನು ನೇಮಿಸುವ ಪ್ರಕಟಣೆಗಳು ಹೊರಬಂದವು. ಆದರೆ ಅದು ಕೇವಲ ಸುದ್ದಿ ಮಟ್ಟಕ್ಕೆ ನಿಂತಿತು. ಹಾಗೆಯೇ ಇಂಟಕ್ ಕಾರ್ಮಿಕ ನೇತಾರ ಶಾಂತಕುಮಾರರವರ ಹೆಸರೂ ಕೂಡ ರಾಜಭವನ ಪ್ರವೇಶಿಸುವ ವೇಳೆಗೆ ಬದಲಾಗಿ ಹೋಯ್ತು. ಆ ಪಟ್ಟಿಯಲ್ಲಿ ನಟಿ ಜಯಮಾಲ, ಡಿಸೋಜಾ, ಜಬ್ಬರಖಾನ್, ಉಗ್ರಪ್ಪ, ಇಕ್ಬಾಲ್ ಅ. ಸರಡಗಿಯವರ ಹೆಸರುಗಳು ಅಂಗೀಕಾರಕ್ಕೆ ಮಂಡಿತವಾದವು. ಇಲ್ಲಿ ಸಂಸದ ಹೈಕಮಾಂಡ್ನ ಬಿ.ಕೆ.ಹರಿಪ್ರಸಾದ್, ಶಾಮನೂರು ಅವರ ಪಟ್ಟುಗಳೇ ಮೊದಲಿನ ಇಬ್ಬರ ನೇಮಕದಲ್ಲಿ ಕೆಲಸ ಮಾಡಿದವಂತೆ. ಈ ಜಗಳದಲ್ಲಿಯೂ ‘ಅಹಿಂದ’ ಫಾರ್ಮುಲಾವನ್ನೇ ಅನುಸರಿಸಲಾಯಿತಂತೆ!

ಇನ್ನು ಪಕ್ಷದ ಸಂಘಟನೆಯಾದರೂ ಯಾವ ಸ್ಥಿತಿಯಲ್ಲಿದೆ. ಸಚಿವರ ಕೆಲಸ, ಶಾಸಕರ ಅನಿಸಿಕೆಗಳ ಬಗ್ಗೆ ಕೇಂದ್ರದ ನಾಯಕರ ಸಮ್ಮುಖದಲ್ಲಿ ನಡೆದ ಅವಲೋಕನ ಸಭೆಯು ಕೆಲವು ಸಚಿವರನ್ನು ದೂಷಿಸುವ, ನಿರುಪಯೋಗಿಗಳೆಂದು ಪದಚ್ಯುತಿಗೊಳಿಸುವ ಧಾಳಿಯ ಸಂದರ್ಭವಾಗುವಲ್ಲಿ ಬಣ ರಾಜಕೀಯ ಮತ್ತು ಸಚಿವಾಕಾಂಕ್ಷಿ ಲಾಲಸೆಯೂ ಇಲ್ಲದಿರಲಿಲ್ಲ. ಸರ್ಕಾರದ ನಿಗಮ, ಮಂಡಳಿಗಳಿಗೆ ನೇಮಕ ಇತ್ಯಾದಿಗಳನ್ನು ಏನೇನೋ ನೆಪ ಹೇಳಿ ಮುಂದಕ್ಕೆ ಒತ್ತುತ್ತಾ ಬಂದಿರುವುದು ಮತ್ತೇ ಲೋಕಸಭಾ ಚುನಾವಣೆಯ ಬಳಿಕವೇ ಅಧಿಕಾರ ನೇಮಕಾತಿ ಎಂಬ ಸೂಚನೆ ನೀಡಿದ್ದು ಒಂದು ಒತ್ತಡವನ್ನು ಸೃಷ್ಟಿಸಿತ್ತು. ಇದು ಮೇಲ್ಮನೆಗೆ ಶಾಸಕರಾಗುವ ಧಾವಂತದಲ್ಲೂ ಕಂಡಿತು. ಮಂತ್ರಿಮಂಡಲದ ವಿಸ್ತರಣೆಯ ಸಂದರ್ಭವಂತೂ ಕಾಂಗ್ರೆಸ್ನಲ್ಲಿ ಇನ್ನಷ್ಟೂ ಕಿತ್ತಾಟವನ್ನು ಹುಟ್ಟು ಹಾಕುವುದರಲ್ಲಿ ಅನುಮಾನವೇ ಇಲ್ಲ.

ಬಹಿರಂಗ ಕಿತ್ತಾಟಗಳು

ಮೇಲಾಗಿ ಅವಲೋಕನದ ಸಂದರ್ಭದಲ್ಲಿ ಮಂತ್ರಿಗಳು ಉಸ್ತುವಾರಿಯಾಗಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋತದ್ದೇಕೆ ಎಂಬ ಪ್ರಸ್ತಾಪನೆಯೂ ಸಹ ಅಂತಃಕಲಹವನ್ನು ಬಯಲಿಗಿಟ್ಟಿತು. ಆಗಲೇ ಸೋತ ರಮ್ಯಾ ನೇರವಾಗಿ ಅಂಬರೀಶ್ ಬಣವೇ ತಮ್ಮ ಸೋಲಿಗೆ ಕಾರಣವೆಂದು ದೂಷಿಸಿದ್ದರು. ಅಂಬಿ ಬಣವೂ ಕೂಡ ರಮ್ಯಾ ಹೈಕಮಾಂಡ್ಗೆ ದೂರು ನೀಡುವ, ಮತ್ತಿತರೆ ಬೆದರಿಕೆಗಳಿಗೆ ಬಗ್ಗುವುದಿಲ್ಲವೆಂದು ಮಾಧ್ಯಮಗಳ ಮುಂದೆಯೇ ಸವಾಲೆಸೆದಿದ್ದರು. ಇದೂ ಕೂಡ ಪರೋಕ್ಷವಾಗಿ ಹಿರಿಯ ನಾಯಕ ಎಸ್.ಎಂ.ಕೃಷ್ಣರ ಬಣದ ವಿರುದ್ಧದ ಧಾಳಿಯಾಗಿತ್ತು. ಇದಾದ ಬಳಿಕ ಸಚಿವ ಅಂಬರೀಶ್ ಅಕ್ರಮವಾಗಿ ಐದು ನಿವೇಶನಗಳನ್ನು ಪಡೆದಿದ್ದಾರೆ ಎಂಬ ದೂರುಗಳಲ್ಲಿ ವಿರೋಧಿ ಬಣದ ಕೈವಾಡ ಇದೆ ಎನ್ನಲಾಗುತ್ತಿದೆ. ಅಂದರೆ ಈ ಕಿತ್ತಾಟ ಖಂಡಿತಕ್ಕೂ ನಿಲ್ಲುವಂತಹುದೇನಲ್ಲ.

ಬಿಜೆಪಿಗೆ ನೀಡುತ್ತಿರುವ ಅವಕಾಶಗಳು

ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಕೇಂದ್ರದಲ್ಲಿ ದಯನೀಯವಾಗಿ ಸೋತು ತತ್ತರಿಸುತ್ತಿರುವ ಕಾಂಗ್ರೆಸ್ ಕಿಂಚಿತ್ತಾದರೂ ಪಾಠ ಕಲಿಯುತ್ತದೆ ಎಂದು ಭಾವಿಸಲು ಸಾಧ್ಯವೇ ಇಲ್ಲ ಎಂಬುದು ಖಚಿತ. ಅದರಲ್ಲೂ ಬಿಜೆಪಿ ಭಾರೀ ಬಹುಮತವನ್ನು ಸಂಸತ್ತಿನಲ್ಲಿ ಹೊಂದಿ ಧರ್ಮನಿರಪೇಕ್ಷತೆ, ಪ್ರಜಾಪ್ರಭುತ್ವ ಮೌಲ್ಯಗಳನ್ನು, ನ್ಯಾಯಾಂಗವನ್ನೂ, ರಾಜ್ಯಪಾಲರ ಹುದ್ದೆಯಂತಹ ಸಂಸದೀಯ ಸಂಸ್ಥೆಗಳನ್ನು ದುರ್ಬಲಗೊಳಿಸುವ ಹಲವು ಪ್ರಯತ್ನದಲ್ಲಿ ತೊಡಗಿದೆ. ಬೆಲೆ ಹೆಚ್ಚಿಸುವ ನೀತಿಗಳ ಮೂಲಕವೂ ಜನರ ಮೇಲೆ ಧಾಳಿ ಆರಂಭಿಸಿದೆ. ವಿಶೇಷವಾಗಿ ಸಂಘಪರಿವಾರವು ಕೋಮುವಾದ ಬೆಳೆಸಲು, ವಿಭಜನೆ ತರಲು ದೇಶಾದ್ಯಂತ ಹಿಂದೂ ಸಮಾಜೋತ್ಸವಗಳಂತಹ ಹಲವಾರು ಕಾರ್ಯಕ್ರಮಗಳನ್ನು, ಅಲ್ಪಸಂಖ್ಯಾತರ ಮೇಲೆ ಧಾಳಿಯನ್ನೂ ನಡೆಸುತ್ತಿದೆ. ಹೀಗಿರುವಾಗ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮೋದಿ ಸರಕಾರದ ನೀತಿಗಳ ವಿರುದ್ಧ ಪರಿಣಾಮಕಾರಿಯಾಗಿ ಏನೂ ಮಾಡದೇ ಒಂದು ರೀತಿಯ ಮೌನವ್ರತ ಹಿಡಿದಿರುವುದರ ಅರ್ಥವೇನು? ಇದರೊಟ್ಟಿಗೆ ಅಧಿಕಾರ ಇರುವ ರಾಜ್ಯಗಳಲ್ಲಿಯೂ ಸಂಘಟನಾತ್ಮಕವಾಗಿಯೂ, ರಾಜಕೀಯವಾಗಿಯೂ ಒಡಕು, ಕಿತ್ತಾಟ ಮತ್ತು ನಿಷ್ಕ್ರಿಯತೆಗಳು ಖಂಡಿತಕ್ಕೂ ಹಾನಿ ತರದೇ ಇರಲಾರದು. ಅಂದರೆ ರಾಜ್ಯದಲ್ಲಿ ನೆಲಕಚ್ಚಿದ್ದ ಬಿಜೆಪಿ ಲೋಕಸಭಾ ಚುನಾವಣೆಯ ಬಳಿಕ ಮತ್ತೇ ತಲೆ ಎತ್ತಿ ನಡೆಯಲು ಮುಕ್ತ ಅವಕಾಶವನ್ನು ಕಲ್ಪಿಸುತ್ತಿದೆ. ಉದಾಹರಣೆಯೆಂದರೆ ರೈಲ್ವೇ ರೇಟ್ ಹೆಚ್ಚಳದ ಬಗ್ಗೆ ಕಾಂಗ್ರೆಸ್ ಏನೂ ಮಾಡಲಿಲ್ಲ, ಆದರೆ ಕಬ್ಬು ಬೆಳೆಗಾರರ ಪ್ರಶ್ನೆಯೆತ್ತಿ ಬಿಜೆಪಿ ಸದನದಲ್ಲಿ ಪ್ರತಿಭಟನೆ ನಡೆಸಿತು!

ಇಂತಹ ಸನ್ನಿವೇಶದಲ್ಲಿ ಎಡಶಕ್ತಿಗಳು, ಜನ ಸಂಘಟನೆಗಳು ಪರ್ಯಾಯ ನೀತಿಗಳ ಆಧಾರದಲ್ಲಿ ಜನತೆಯ ನಡುವೆ ವ್ಯಾಪಕವಾಗಿ ಹೋಗಬೇಕಾಗಿದೆ.