ಸಂಪುಟ: 10 ಸಂಚಿಕೆ:8 ಫೆಬ್ರವರಿ 21, 2016

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಚು, ಕನ್ನಡಕಗಳ ಮೇಲೆ ಕುಮಾರಸ್ವಾಮಿಯವರ ಕಣ್ಣು ಬಿದ್ದಿದೆ. ವಾಚು 50 ಲಕ್ಷಕ್ಕಂತಲೂ ಹೆಚ್ಚು ಬೆಲೆ ಬಾಳುತ್ತದೆ. ಕನ್ನಡಕ ಸಹ ಲಕ್ಷಾಂತರ ಬೆಲೆ ಬಾಳುವಂತಹುದು. ಇವು ಎಲ್ಲಿಂದ ಬಂದವು ಎಂದು ಅವರು ಪ್ರಶ್ನಿಸಿ ವಿವಾದ ಎಬ್ಬಿಸಿದ್ದಾರೆ. ವಾಚು ಬೇಕಾದರೆ ಕುಮಾರಸ್ವಾಮಿಯವರಿಗೆ 5 ಲಕ್ಷಕ್ಕೆÀ್ಷ ಕೊಟ್ಟು ಬಿಡುತ್ತೇನೆ. ಕುಮಾರಸ್ವಾಮಿಯವರ ಮಗನ ಕಾರು ಕೋಟಿಗಟ್ಟಲೆ ಬೆಲೆಯದ್ದು. ಅದಕ್ಕೆ ಹಣ ಎಲ್ಲಿಂದ ಬಂತು? ಅವನು ಸಂಪಾದಿಸಿದ್ದಾನಾ? ಸಿನಿಮಾ ಮಾಡಲು ಕೋಟಿಗಟ್ಟಲೆ ಖರ್ಚು ಮಾಡುತ್ತಿರುವುದು ಯಾರು? ಎಂದು ಸಿದ್ದರಾಮಮಯ್ಯ ಮರುಸವಾಲು ಹಾಕಿದ್ದಾರೆ.

ವಾಚು ಸ್ನೇಹಿತರು ಕೊಟ್ಟ ಉಡುಗೊರೆ ಎಂದೂ ಉತ್ತರಿಸಿದ್ದಾರೆ. ಕಳೆದ ವಾರದ ರಾಜಕೀಯ ಚರ್ಚೆ ಮುಖ್ಯಮಂತ್ರಿಗಳ ವಾಚು, ಕನ್ನಡಕಗಳ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಮಾಧ್ಯಮಗಳು ಈ ವಿವಾದವನ್ನು ಎತ್ತಿಕೊಂಡಿದ್ದು ಈ ವಾಚು, ಕನ್ನಡಕಗಳ ಬ್ರಾಂಡು ಯಾವುದು? ಅದಕ್ಕೆ ಎಷ್ಟು ಬೆಲೆ? ಅದು ಎಲ್ಲಿಂದ ಖರೀದಿಸಿರಬಹುದು? ಯಾರು ಉಡುಗೊರೆ ಕೊಟ್ಟಿರಬಹುದು? ಅವರು ಪ್ರತಿಯಾಗಿ ಏನೂ ನಿರೀಕ್ಷಿಸಿರಬಹುದು? ಉಡುಗೊರೆ ಕೊಟ್ಟಿದ್ದರೆ ಮುಖ್ಯಮಂತ್ರಿಗಳು ಯಾವ ಕಾನೂನಿನ ತೊಡಕಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ? ಎಂದೆಲ್ಲಾ ತನಿಖೆ ಚರ್ಚೆ ಆರಂಭಿಸಿವೆ.

ಕರ್ನಾಟಕದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳು ಯಾವುವು? ಜಿಲ್ಲಾ ಮತ್ತು ತಾಲೂಕು ಪಂಚಾಯತುಗಳು ಜನರ ಈ ನೂರೆಂಟು ಸಮಸ್ಯೆಗಳನ್ನು ತುರ್ತಾಗಿ ಸಮರ್ಪಕವಾಗಿ ಏಕೆ ಪರಿಹರಿಸಲು ಸಾಧ್ಯವಾಗಿಲ್ಲ? ಅವುಗಳಿಗೆ ಅಧಿಕಾರ ಮತ್ತು ಸಂಪನ್ಮೂಲಗಳ ಕೊರತೆ ಇದೆಯೆ? ಇದ್ದ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಅವು ಬಳಸಿಕೊಳ್ಳುತ್ತಿವೆಯೇ? ಅದಕಾಗಿ ಅವುಗಳಿಗೆ ಬೇಕಾದಷ್ಟು ಸಿಬ್ಬಂದಿ ಇದೆಯೇ? ಇತ್ತೀಚೆಗೆ ತಿದ್ದುಪಡಿಯಾದ ಪಂಚಾಯತ್ ಕಾನೂನು ಈ ವಿಷಯಗಳನ್ನು ಎಷ್ಟರ ಮಟ್ಟಿಗೆ ಪರಿಹರಿಸಿದೆ? ಇವು ಈ ವಾರದ ರಾಜಕೀಯ ಚರ್ಚೆಯ ಪ್ರಧಾನ ವಿಷಯಗಳಾಗಬೇಕಿತ್ತು. ಇವಲ್ಲದೆ ರಾಜ್ಯದ ಜನತೆ ಬರ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ.

ಕೇಂದ್ರ ಸರಕಾರ ಕೊಟ್ಟಿರುವ ಬರ ಪರಿಹಾರ ಪೂರ್ತಿಯಾಗಿ ಜನತೆಗೆ ತಲುಪುತ್ತಿಲ್ಲ ಎಂಬ ತೀವ್ರ ಆಪಾದನೆಗಳು ಕೇಳಿ ಬಂದಿವೆ. ರೈತರ ಆತ್ಮಹತ್ಯೆಗಳು ಮುಂದುವರೆಯುತ್ತಿವೆ. ಇನ್ನಷ್ಟು ಬೆಳೆಗಳನ್ನು ಬೆಳೆಯುವ ರೈತರು ಆತ್ಮಹತ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇವೂ ರಾಜಕೀಯ ಸಂವಾದ-ವಿವಾದಗಳ ವಿಷಯಗಳಾಗಬೇಕಿತ್ತು.

ಬದಲಾಗಿ ಮುಖ್ಯಂತ್ರಿಗಳ ವಾಚು, ಕನ್ನಡಕಗಳು ರಾಜಕೀಯ ಚರ್ಚೆಯ ಪ್ರಧಾನ ವಿಷಯವಾಗಿರುವುದು ಆಳುವ ಮತ್ತು ವಿರೋಧಿ ಪಕ್ಷಗಳ ರಾಜಕೀಯ ದೀವಾಳಿತನ ತೋರಿಸುತ್ತಿವೆ. ಮುಖ್ಯಮಂತ್ರಿಗಳು ಮತ್ತು ಇತರ ಮಂತ್ರಿಗಳು ದುಬಾರಿ ಅಲ್ಲದ ಶೋಕಿ ಇಲ್ಲದ ಸರಳ ಕಳಂಕ ರಹಿತ ಜೀವನ ಸಾಗಿಸಬೇಕು. ಅವರ ಜೀವನಶೈಲಿ, ಅವರು ಬಳಸುವ ವಸ್ತುಗಳು, ಅವನ್ನು ಖರೀದಿಸಲು ಹಣ ಎಲ್ಲಿಂದ ಬಂತು? ಇಂತಹ ಉಡುಗೊರೆಗಳನ್ನು ಕೊಟ್ಟವರು ಯಾರು? ಅವರು ಬರಿಯ ಸ್ನೇಹಕ್ಕಾಗಿಯೇ ಉಡುಗೊರೆ ಕೊಟ್ಟರೇ? – ಇವೆಲ್ಲವೂ ಸಾರ್ವಜನಿಕ ರಾಜಕೀಯ ಚರ್ಚೆಯ ವಿಷಯ ಆಗಬಾರದೆಂದೇನಿಲ್ಲ.

ಆದರೆ ಅವೇ ಪ್ರಧಾನ ಅಥವಾ ಏಕಮಾತ್ರ ವಿಷಯವಾಗುವುದು ರಾಜಕೀಯ ದೀವಾಳಿತನವನ್ನು ಪ್ರತಿನಿಧಿಸುತ್ತದೆ ಅಷ್ಟೇ. ಅಲ್ಲದೆ ಮುಖ್ಯಮಂತ್ರಿಗಳಿಗಿಂತಲೂ ಎಷ್ಟೋ ಪಟ್ಟು ಹೆಚ್ಚಿನ ದುಬಾರಿ ಶೋಕಿಯ ಜೀವನಶೈಲಿ ಹೊಂದಿರುವ ಕುಮಾರಸ್ವಾಮಿ ಇಂತಹ ಆಪಾದನೆ ಮಾಡುವುದು, ನೈಸ್ ಅಪಖ್ಯಾತಿಯ ಖೇಣಿ ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸುವುದು ಇನ್ನಷ್ಟು ಹಾಸ್ಯಾಸ್ಪದವಾಗಿದೆ

ವಾಚು, ಕನ್ನಡಕ ವಿವಾದ ಮಾತ್ರವಲ್ಲ, ಈ ವಾರದ ಇತರ ರಾಜಕೀಯ ಚರ್ಚೆಗೆ ಒಳಗಾದ ಇತರ ವಿಷಯಗಳಲ್ಲೂ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಇದೇ ದೀವಾಳಿತನ ಪ್ರದರ್ಶಿಸಿವೆ. ಚುನಾವಣೆಗಳ ಸಮಯದಲ್ಲಿ ಹಿಂದೆಯೂ ಆದಂತೆ ಹಿರಿಯ ಕಾಂಗ್ರೆಸ್ ನಾಯಕರ ಸರಕಾರದ ಕಾರ್ಯ ವೈಖರಿ ಬಗ್ಗೆ ಬಹಿರಂಗ ಟೀಕೆ ರಾಜಕೀಯ ಸಂವಾದವನ್ನು ಇನ್ನಷ್ಟು ದಿಕ್ಕು ತಪ್ಪಿಸಿದೆ. ಮಾಜಿ ಮುಖ್ಯಮಂತ್ರಿ ಕೃಷ್ಣ ಸಿದ್ಧರಾಮಯ್ಯ ಮಂತ್ರಿಮಂಡಲದಲ್ಲಿ ‘ತೂಕದ ವ್ಯಕ್ತಿತ್ವದವರು ಇಲ್ಲ’ ಎನ್ನುವುದು, ಹಿರಿಯ ಕಾಂಗ್ರೆಸ್ ನಾಯಕ  ಜನಾರ್ಧನ ಪೂಜಾರಿ ‘ಸಚಿವರು ಮುಖ್ಯಮಂತ್ರಿಯ ಮಾತುಗಳನ್ನು ಕೇಳುತ್ತಿಲ್ಲ ಮತ್ತು ಕಾರ್ಯಕರ್ತರಿಗೆ ಸ್ಪಂದಿಸುತ್ತಿಲ್ಲ’ ಎಂಬ ಆಪಾದನೆಯನ್ನು ಮಾಡುವುದು ‘ಮೂಲ ಕಾಂಗ್ರೆಸಿಗರು’ ಮತ್ತು ‘ವಲಸೆ ಬಂದವರ’ ನಡುವಿನ ಘರ್ಷಣೆಯನ್ನು ಇನ್ನೊಮ್ಮೆ ಮುನ್ನೆಲೆಗೆ ತಂದಿದೆ.

ಹೆಬ್ಬಾಳದ ಮರುಚುನಾವಣೆಯ ಅಭ್ಯರ್ಥಿಯ ಆಯ್ಕೆಯಲ್ಲಿ ಜಾಫರ್ ಶರೀಫ್ ಮತ್ತು ಸಿದ್ಧರಾಮಯ್ಯ ಅವರ ನಡುವಿನ ಮುಸುಕಿನೊಳಗಿನ ಸಮರ ಇನ್ನೂ ಹಸಿಯಾಗಿದೆ.  ಕೇರಳದ ಚುನಾವಣೆಗಳ ಸಂದರ್ಭದಲ್ಲಿ ‘ಕಾಂಗ್ರೆಸಿಗರು ಮಾತ್ರ ಕಾಂಗ್ರೆಸಿಗರನ್ನು ಸೋಲಿಸಲು ಸಾಧ್ಯ’ ಎಂಬ ರಾಹುಲ್ ಗಾಂಧಿ ಅವರ ಉದ್ಧಟ ಹೇಳಿಕೆ ಸ್ವಲ್ಪ ಬದಲಾವಣೆಯೊಂದಿಗೆ (‘ಕಾಂಗ್ರೆಸಿಗರನ್ನು ಸೋಲಿಸಲು ಕಾಂಗ್ರೆಸಿಗರೇ ಸಾಕು’) ಕರ್ನಾಟಕಕ್ಕಂತೂ ಚೆನ್ನಾಗಿ ಒಪ್ಪುತ್ತದೆ!

ಕರ್ನಾಟಕದ ಪ್ರಮುಖ ವಿರೋಧ ಪಕ್ಷವಾದ ಜೆಡಿ(ಎಸ್) ಒಳಗೆ ಸಹ ಎಲ್ಲವೂ ಸರಿಯಾಗಿಲ್ಲ. ದೇವೇಗೌಡರಂತಹ ಹಿರಿಯ ನಾಯಕರು ಪ್ರಧಾನಿಯಾಗಿದ್ದವರು ತಮ್ಮದೇ ಪಕ್ಷದ ಅಲ್ಪಸಂಖ್ಯಾತ ಶಾಸಕನೊಬ್ಬನನ್ನು ‘ಮೀರ್ ಸಾದಿಕ್’ ಎಂದು ಸಾರ್ವಜನಿಕವಾಗಿ ಹೀಯಾಳಿಸುವುದರೊಂದಿಗೆ ರಾಜಕೀಯ ಸಂವಾದವನ್ನು ಇನ್ನಷ್ಟು ಕೀಳುಮಟ್ಟಕ್ಕೆ ಒಯ್ದಿದ್ದಾರೆ. ಈ ಬಗ್ಗೆ ಅಲ್ಪಸಂಖ್ಯಾತರ ಪ್ರತಿಭಟನೆಯೂ ವ್ಯಕ್ತವಾಗಿದೆ.

ಜಿಲ್ಲಾ/ತಾಲೂಕು ಪಂಚಾಯತ್ ಚುನಾವಣೆಗಳು ಮತ್ತು ಮೂರು ವಿಧಾನಸಭಾ ಮರು ಚುನಾವಣೆಗಳಲ್ಲಿ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ರಾಜಕಾರಣದ ವೈಖರಿ ಇನ್ನೊಮ್ಮೆ ಬಯಲಾಗಿದೆ. ಟಿಕೆಟ್ ಕೊಡಿಸುವುದರಲ್ಲಿ ಕುಟುಂಬ ರಾಜಕಾರಣ, ಬಣಗಳ ಒಳಜಗಳ, ಟಿಕೆಟ್ ಅಂತಿಮವಾದ ನಂತರ ಹಿಂತೆಗೆಯಲು ವಿರೋಧಿ ಅಭ್ಯರ್ಥಿಗಳಿಗೆ ಬೆದರಿಕೆ/ಓಲೈಕೆ, ಪಕ್ಷಗಳ ಗಡಿಬೇಧಗಳನ್ನು ಮೀರಿ ಜಾತಿ ಮುಂತಾದ ಹಿತಾಸಕ್ತಿಗಳಿಗಾಗಿ ಒಳ ಒಪ್ಪಂದಗಳು – ಇವೇ ಚುನಾವಣಾ ರಾಜಕಾರಣ ಎಂದು ಮೂರೂ ಪಕ್ಷಗಳು ಮತ್ತೆ ತೋರಿಸಿವೆ.

ತಮ್ಮ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಒತ್ತಿ ಹೇಳುತ್ತಿವೆ. ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ಸೀರೆ, ಹಣ, ಹೆಂಡ, ಉಡುಗೊರೆಗಳ ಹೊಳೆ ಹರಿಸುವುದರಲ್ಲೂ ಒಂದು ಪಕ್ಷ ಇನ್ನೊಂದು ಪಕ್ಷದೊಂದಿಗೆ ಸ್ಪರ್ಧೆಯಲ್ಲಿದೆ. ಜಿಲ್ಲಾ/ತಾಲೂಕು ಪಂಚಾಯತ್ ಚುನಾವಣೆಗಳಲ್ಲೂ 2-4 ಕೋಟಿ ರೂ. ಖರ್ಚು ಮಾಡದೆ ಯಾವುದೇ ಪಕ್ಷದ ಅಭ್ಯರ್ಥಿ ಗೆಲ್ಲಲಾರ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಚುನಾವಣಾ ಅಕ್ರಮಗಳು ನಡೆಯುತ್ತಿದ್ದರೂ ಕೆಲವು ನಾಮ್-ಕಾ-ವಾಸ್ತೆ ಕ್ರಮಗಳನ್ನು ಬಿಟ್ಟರೆ ಚುನಾವಣಾ ಆಯೋಗ ಕಣ್ಣು ಮುಚ್ಚಿ ಕುಳಿತಿದೆ. ಚುನಾವಣಾ ಅಕ್ರಮಗಳು, ಅವನ್ನು ತಡೆಯುವುದು ಹೇಗೆ ಎಂಬ ಬಗ್ಗೆ ರಾಜಕೀಯ ಸಂವಾದ ನಡೆಯಬೇಕಿತ್ತು.

ಮೂರು ಬೂಜ್ರ್ವಾ-ಭೂಮಾಲಕ ಆಳುವ ವರ್ಗದ ಪಕ್ಷಗಳ ಈ ಚಿಲ್ಲರೆ ರಾಜಕಾರಣವನ್ನು ಮೀರಿ, ನಿಜವಾದ ಜನರ ನಿಜವಾದ ಕಾಳಜಿಯ ವಿಷಯಗಳನ್ನು ಚುನಾವಣೆಯ (ಮತ್ತು ಇತರ) ಸಂದರ್ಭದಲ್ಲೂ ರಾಜಕೀಯ ಚರ್ಚೆಯ ಮುನ್ನೆಲೆಗೆ ತರುವುದು ಸಿಪಿಐ(ಎಂ) ಮತ್ತು ಎಡ ಪಕ್ಷಗಳ ರಾಜಕೀಯ ಜವಾಬ್ದಾರಿಯಾಗಿದೆ.