ಜಪಾನಿನಲ್ಲಿ ಅಣು ಮತ್ತು ಹೈಡ್ರೋಜೆನ್ ಬಾಂಬ್ ವಿರೋಧಿ ಜಾಗತಿಕ ಸಮ್ಮೇಳನ

( ಸಂಪುಟ 8, ಸಂಚಿಕೆ 38, 21 ಸೆಪ್ಟೆಂಬರ್ 2014 )

– ಯಮುನಾ ಗಾಂವ್ಕರ್ 

  ಜಪಾನಿನಲ್ಲಿ ಅಣು ಮತ್ತು ಹೈಡ್ರೋಜೆನ್ ಬಾಂಬ್ ವಿರೋಧಿ ಜಾಗತಿಕ ಸಮ್ಮೇಳನ ನಡೆಯಿತು. ‘ಸಂಪೂರ್ಣ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಮತ್ತು ನಿರ್ಮೂಲನೆಗೆ ಶಾಂತಿಯುತ ನ್ಯಾಯಸಮ್ಮತ ವಿಶ್ವಕ್ಕೆ ಹಾರೈಸಿ’ ನಡೆದ ಸಮ್ಮೇಳನಕ್ಕೆ ದೇಶದ ಕಾಸಿಐಟಿಯು’ವನ್ನು ಪ್ರತಿನಿಧಿಸಿ ರಾಷ್ಟ್ರೀಯ ಉಪಾಧ್ಯಕ್ಷರಾದ ಓರಿಸ್ಸಾದ ವಿಷ್ಣುಚರಣ ಮೊಹಂತಿ ಮತ್ತು ನಾನು-ಯಮುನಾ ಗಾಂವ್ಕರ್ ತೆರಳಿದ್ದೆವು.

  ಜಪಾನ್ 4 ಪ್ರಮುಖ ದೊಡ್ಡ ದ್ವೀಪ, 4 ಪ್ರಮುಖ ಮಹಾನಗರ, 6,852 ದ್ವೀಪಗಳ ಸಮುಚ್ಚಯ. ಜನಸಂಖ್ಯೆಯಲ್ಲಿ ಜಗತ್ತಿನ 10ನೇ ದೇಶ. ಸಮುದ್ರಕ್ಕೆ ಸೇತುವೆ ಕಟ್ಟಿ ದ್ವೀಪಗಳನ್ನು ಸೇರಿಸಿದ ಆ ಬ್ರಿಜ್ಗಳ ಮೇಲೂ ಸಮುದಾಯ ಉಪಯೋಗಿ ಕೆಲಸ ಮಾಡುವ ದೇಶ.

  ಕೈಗಾರಿಕೆ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಪ್ರಪಂಚದ ಅತ್ಯಂತ ಮುಂದುವರಿದ ದೇಶಗಳಲ್ಲಿ ಒಂದಾದ ದೇಶ ಜಪಾನ್. ಜಿಡಿಪಿಯಲ್ಲಿ ವಿಶ್ವದಲ್ಲಿ 3 ನೇ ಸ್ಥಾನದಲ್ಲಿರುವ ದೇಶ. ಕೊಳ್ಳುವ ಸಾಮಥ್ರ್ಯ ಹೆಚ್ಚಿರುವ ದೇಶ. ಚಕ್ರವರ್ತಿಯ ಅರಸೊತ್ತಿಗೆ ಜೊತೆಗೆ ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಯನ್ನು ಸಮ್ಮಿಳಿತಗೊಳಿಸಿಕೊಂಡ ಬಂಡವಾಳಶಾಹಿ ದೇಶ.

  ಮೂಲತಃ ಯುದ್ಧಕೋರ ಮನೋಸ್ಥಿತಿ ಜಪಾನಿನ ಆಳುವ ವ್ಯವಸ್ಥೆಯೊಳಗೇ ಇದ್ದಂತಿದೆ. ಮೊದಲ ಮಹಾಯುದ್ಧದ ಸಂದರ್ಭದಲ್ಲೇ ಅದೊಂದು ಸಾಮ್ರಾಜ್ಯಶಾಹಿಯ ರೂಪ ಪಡೆದಿತ್ತು. ‘ಏಷ್ಯಾ ಖಂಡ ಏಷ್ಯಾ ಖಂಡದಲ್ಲಿದ್ದವರಿಗೆ’ ಎನ್ನುತ್ತ ಹಲವು ಒಪ್ಪಂದಗಳನ್ನು ಬಹಳ ವರ್ಷಗಳ ಹಿಂದೆಯೇ ಮಾಡಿಕೊಂಡಿತ್ತು. ರಷ್ಯಾ, ಚೀನಾ, ಕೋರಿಯಾ, ಜೊತೆಗೆ ಪಾಶ್ಚಿಮಾತ್ಯ ದೇಶಗಳೊಂದಿಗೂ ಯುದ್ಧ ನಡೆಸಿದ, ಯುದ್ಧ ಘೋಷಿಸಿದ ದೇಶ. ಅಮೇರಿಕಾ ಜೊತೆ ಸಾಮರಿಕ, ರಾಜಕೀಯ, ಆರ್ಥಿಕ ಕಾದಾಟ ಇನ್ನೂ ನಡೆದೇ ಇದೆ.

 

  1940 ರ ದಶಕದ ಮೊದಲ ಭಾಗದಲ್ಲಿ 2 ನೇ ಮಹಾಯುದ್ದ ಸ್ಪೋಟಿಸಿತ್ತು. ಹಿಟ್ಲರ್ನ ನೇತೃತ್ವದ ಜರ್ಮನಿಯ ನಾಜಿಗಳು, ಮುಸೋಲಿನಿ ನೇತೃತ್ವದ ಇಟಲಿ ಹಾಗೂ ಜಪಾನ್ನ ಆಳುವವರು ಸೇರಿಕೊಂಡು ಇಡೀ ಜಗತ್ತನ್ನು ಕಪಿಮುಷ್ಠಿಗೆ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಯುದ್ದಸಾರಿದ್ದವು. ಮೊದಲಿಗೆ ಸಾಮಾಜ್ಯಶಾಹಿ ದೇಶಗಳ ನಡುವಿನ ಕದನವಾಗಿದ್ದ ಮಹಾಯುದ್ದವು ಹಿಟ್ಲರ್ ಸೋವಿಯತ್ ಒಕ್ಕೂಟದ ಮೇಲೆ ಆಕ್ರಮಣ ನಡೆಸುವ ಮೂಲಕ ಹೊಸ ಸ್ವರೂಪ ಪಡೆದುಕೊಂಡಿತು. ಕೋಟಿ ಕೋಟಿ ಜನರ ಜೀವಗಳನ್ನು ಬಲಿಪಡೆದ ಈ ಮಹಾಯುದ್ದ ತನ್ನ ವಿನಾಶ ಲೀಲೆಯನ್ನು ವಿಸ್ತರಿಸುತ್ತಾ ಹೋಯಿತು. ಫ್ಯಾಸಿಸಂನ ಭೀಕರ ಕ್ರೌರ್ಯಕ್ಕೆ ಸಿಲುಕಿ ಜಗತ್ತು ತತ್ತರಿಸಿ ಹೋದಾಗ ಸಮಾಜವಾದಿ ಸೋವಿಯತ್ ಒಕ್ಕೂಟ ಅದನ್ನು ಎದುರಿಸಿ ದಿಟ್ಟವಾಗಿ ನಿಂತಿತು. ಸೋವಿಯತ್ ಒಕ್ಕೂಟ ಹಿಟ್ಲರನ ನಾಜಿ ಪಡೆಯನ್ನು ನಿರ್ಣಾಯಕವಾಗಿ ಹಿಮ್ಮೆಟ್ಟಿಸಿ ಫ್ಯಾಸಿಸ್ಟ್ ಪಡೆಗಳಿಗೆ ಮಾರ್ಮಾಘಾತ ನೀಡಿತು. ಮಹಾ ವಿನಾಶವೊಂದರಿಂದ ಜಗತ್ತನ್ನು ಉಳಿಸಿದ ಈ ಚಾರಿತ್ರಿಕ ವಿಜಯಕ್ಕಾಗಿ ಸೋವಿಯತ್ ಒಕ್ಕೂಟದ ಎರಡು ಕೋಟಿ ಸೈನಿಕರು ಬಲಿದಾನ ಮಾಡಬೇಕಾಯಿತು.!! ಜಪಾನ್ ಕೂಡ ಇನ್ನೇನು ಸೋತು ಶರಣಾಗುವ ಹಂತ ತಲುಪಿತ್ತು. ಯುದ್ದದ ನಿರ್ಣಾಯಕ ಘಟ್ಟದವೆರೆಗೂ ಯಾವ ಪ್ರಮುಖ ಪಾತ್ರವನ್ನೂ ವಹಿಸದೆ ಹಿನ್ನಲೆಯಲ್ಲಿದ್ದ ಅಮೆರಿಕ ಇನ್ನೇನು ಯುದ್ದ ಮುಗಿಯುತ್ತಿದೆ ಎನ್ನುವ ಹಂತದಲ್ಲಿ ಯುದ್ದರಂಗ ಪ್ರವೇಶಿಸಿತು. ಆಗ ಯುದ್ದಾನಂತರದ ಜಗತ್ತಿನಲ್ಲಿ ಮುಂದೆ ಸಮಾಜವಾದಿ ಸೋವಿಯತ್ ಒಕ್ಕೂಟವು ಮಹಾನ್ ಜಾಗತಿಕ ಶಕ್ತಿಯಾಗಿ ಉದಯಿಸುವ ಸಾಧ್ಯತೆ ಕಾಣುತ್ತಿತ್ತು. ಅಲ್ಲಿಯವರೆಗೆ `ಸೂರ್ಯ ಮುಳುಗದ ಸಾಮ್ರಾಜ್ಯ’ವಾಗಿದ್ದ ಇಂಗೆಂಡ್ ಮಹಾಯುದ್ದದಲ್ಲಿ ನಲುಗಿ ವಸಾಹತುದೇಶಗಳನ್ನು ಕಳೆದುಕೊಂಡು ಶಕ್ತಿ ಗುಂದುವ ಪರಿಸ್ಥಿತಿ ತೋರುತ್ತಿತ್ತು. ತಾನು ಒಂದು ಬಂಡವಾಳಶಾಹಿ ದೈತ್ಯನಾಗಿ ಬೆಳೆದು ನಿಂತಿದ್ದ ಅಮೆರಿಕಾ ಇದರಿಂದ ಬೆಚ್ಚಿತು. ಭವಿಷ್ಯದ ಜಗತ್ತಿನ ಮೇಲೆ ತನ್ನ ಹಿಡಿತದ ಛಾಪನ್ನು ಒತ್ತಲು 1945 ಅಗಸ್ಟ್ 6 ಮತ್ತು 9 ರಂದು ಅಣುಬಾಂಬ್ನ್ನು ಹಿರೋಶಿಮಾ-ನಾಗಾಸಾಕಿಯ ಮೇಲೆ ಎಸೆದು 2 ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಯಿತು. ಸಾಮಾನ್ಯ ನಾಗರೀಕರನ್ನು ಲಕ್ಷ ಲಕ್ಷಗಳ ಸಂಖ್ಯೆಯಲ್ಲಿ ಸಾಮೂಹಿಕವಾಗಿ ಹತ್ಯೆಗೈಯುವ ವಿನಾಶಕಾರಿ ಬಾಂಬ್ ಅನ್ನು ಅಲ್ಲೀತನಕ ಯಾರೂ ಬಳಸಿರಲಿಲ್ಲ. ಮುಗ್ಧ ಜನರನ್ನು ಅಣು ವಿಕಿರಣದ ನರಕಕ್ಕೆ ನೂಕುವ-ಜಗತ್ತು ಕಂಡು ಕೇಳರಿಯದ ಹಿಂಸೆಗಳಿಗೆ ಗುರಿ ಮಾಡುವ ಅಣು ಬಾಂಬ್ ಪ್ರಯೋಗದ ಮಾಡಿದ ಕುಖ್ಯಾತಿ ಅಮೆರಿಕಕ್ಕೆ ಸೇರಿದೆ. ತಾನು ಮಾತ್ರ ಇಂದಿಗೂ ರಾಶಿ ರಾಶಿ ಅಣ್ವಸ್ತ್ರಗಳನ್ನು ಪೇರಿಸಿಟ್ಟುಕೊಂಡು ಜಗತ್ತಿಗೆಲ್ಲಾ ಅಣ್ವಸ್ತ್ರ ತಯಾರಿಕೆ ವಿರುದ್ದ ಎಚ್ಚರಿಕೆ ಕೊಡುವ ಅಮೆರಿಕದ ಧೋರಣೆ ಎಷ್ಟು ಅಭಾಸಕರ ಎಂಬುದು ಈ ಇತಿಹಾಸವನ್ನು ತಿಳಿದುಕೊಂಡರೆ ಅರ್ಥವಾಗುತ್ತದೆ.

  ‘ಇತಿಹಾಸದಲ್ಲಿ ಅದೇ ಮೊದಲನೇ ಮತ್ತು ಕೊನೆಯ ಮಾರಣ ಹೋಮವಾಗಲಿ, ಮತ್ತೆಂದೂ ಯುದ್ಧಗಳು, ಪರಮಾಣು ಬಾಂಬ್ ಮತ್ತು ಹೈಡ್ರೋಜೆನ್ ಬಾಂಬ್ ಬೇಡ ಎಂದು 1955 ರಿಂದ ಜಪಾನಿನಲ್ಲಿ ಅಂತಾರಾಷ್ಟ್ರೀಯ ಗಮನ ಸೆಳೆಯುವ, ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಶಾಂತಿಗೆ ಕರೆಕೊಡುವ ಯುದ್ಧ ವಿರೋಧಿ ಸಮ್ಮೇಳನ ನಡೆಸುತ್ತಾ ಬರಲಾಗಿದೆ. `ಜಪಾನ್ ಕೌನ್ಸಿಲ್ ಎಗೆನೆಸ್ಟ್ ಎ ಎಂಡ್ ಎಚ್ ಬಾಂಬ್ಸ್’ (ಗೆನ್ಸ್ಯೂಕ್ಯೋ) ಈ ಸಮ್ಮೇಳನದ ರೂವಾರಿ. ಜನಸಮುದಾಯದ ಬದುಕು ಉತ್ತಮವಾಗಿರಲು ಶ್ರಮಿಸುತ್ತಿರುವ, ಯುದ್ಧಾಸ್ತ್ರಗಳಿಗೆ ಹೆಚ್ಚಿನ ಹಣ ಮೀಸಲಿಡುವುದನ್ನು, ಯುದ್ಧವನ್ನು ವಿರೋಧಿಸುವ ಶಾಂತಿ ಬಯಸುವ ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತ ಕೂಟವಾಗಿಯೇ ಇದು ಕೆಲಸ ಮಾಡುತ್ತದೆ. ಸರ್ಕಾರದಿಂದಾಗಲೀ, ಸರ್ಕಾರೇತರ ಕಾರ್ಪೋರೇಟ್ ಸಂಸ್ಥೆಗಳಿಂದಾಗಲಿ ಹಣಕಾಸು ಪಡೆಯದೇ ಸ್ವಾಭಿಮಾನದಿಂದ ಈ ಕಾರ್ಯಕ್ರಮ ಮಾಡಿರುವುದಾಗಿ ಸಂಘಟಕರೇ ತಿಳಿಸಿದ್ದು ವಿಶೇಷ.

  ಈ ಬಾರಿ ಎನ್.ಪಿ.ಟಿ. ರಿವ್ಯೂ ಸಮಾವೇಶಕ್ಕೆ ಒಮ್ಮತಕ್ಕೆ ಬರಲು ಆಗ್ರಹಿಸಿ, ಪ್ಯಾಲಿಸ್ಟೈನ್ ಮೇಲಿನ ಯುದ್ಧವನ್ನು ನಿಲ್ಲಿಸಲು ಆಗ್ರಹಿಸಿ ವಿಶ್ವ ಸಂಸ್ಥೆ ಪ್ರತಿನಿಧಿಗಳಿಗೆ ಮನವಿ ನೀಡಲಾಯಿತು. ಅಣ್ವಸ್ತ್ರ ಭಯಾನಕ ಮಾರಣಾಂತಿಕ ದುರಂತದ ಇತಿಹಾಸ ತಿಳಿಸುವುದು, ಹಿರೋಶಿಮಾ ನಾಗಾಸಾಕಿಯ ಅಣುಬಾಂಬ್ ವಿಕಿರಣ ಸಂತೃಸ್ತರಾದ `ಹಿಬಾಕುಶಾ’ಗಳ ಬದುಕಿನ ಪರಿಸ್ಥಿತಿ, ದೇಶದೇಶಗಳ ದ್ವೇಷಗಳನ್ನು ಮಾತುಕತೆಯ ಮೂಲಕ ಶಾಂತಿ ಪ್ರಕ್ರಿಯೆಯಲ್ಲಿ ಬಗೆಹರಿಸಿಕೊಳ್ಳಲು, ಸಂಪೂರ್ಣ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಮತ್ತು ನಿರ್ಮೂಲನೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಜಗತ್ತಿನಾದ್ಯಂತ ಶಾಂತಿ ಸಂಘಟನೆಗಳ ಪಾತ್ರ ಕುರಿತು ಮಹತ್ವದ ಚರ್ಚೆಗಳು ನಡೆದವು. ಪೂರಕ ಸಮಾವೇಶ, ಕಾರ್ಯಾಗಾರ, ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೇ 5 ರಿಂದ 3 ತಿಂಗಳ ತನಕ ನಡೆದ ಯುದ್ಧವಿರೋಧಿ ಆಶಯದೊಂದಿಗೆ ಹಾಗೂ ಶಾಂತಿಗಾಗಿ ನಡೆದ ಪಾದಯಾತ್ರೆಯ ಸಮಾಗಮ, ಮೆರವಣಿಗೆ, ಬಾಂಬ್ ಹಾಕಿದ ದಿನ ಜಪಾನಿನ ಪ್ರಧಾನ ಮಂತ್ರಿ ಮತ್ತು ವಿವಿಧ ದೇಶಗಳ ರಾಯಬಾರಿಗಳು ಹಾಗೂ ಸರ್ಕಾರಿ ಪ್ರತಿನಿಧಿಗಳು ಹಿರೋಶಿಮಾದ ‘ಶಾಂತಿ ವನದಲ್ಲಿ’ ಬಾಗವಹಿಸಿದ ಬೃಹತ್ ಸಭೆ, ಅಂತಾರಾಷ್ಟ್ರೀಯ ಮಹಿಳಾ ಸಮಾವೇಶಗಳು ನಡೆಯಿತು.

  ಜನರ ನೆಮ್ಮದಿಯ ಬದುಕಿಗೆ ಯುದ್ಧಗಳು ಬೇಕಿಲ್ಲ, ಗಡಿಗಳ ಅವಶ್ಯಕತೆಯೂ ಇಲ್ಲ. ಆದರೆ ಎಲ್ಲಾ ದೇಶಗಳೂ ‘ತಮಗೆ ಹೊರಗಿನವರಿಂದ ಬೆದರಿಕೆ ಇದೆ’ ‘ದೇಶಭಕ್ತಿ’ ‘ದೇಶದ ಹಿತಾಸಕ್ತಿ’ ‘ಗಡಿ ರಕ್ಷಣೆ’ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿವೆ.

  ಜಗತ್ತಿನಲ್ಲಿ 6,000ಕ್ಕೂ ಅಧಿಕ ಅಣ್ವಸ್ತ್ರಗಳಿವೆ ಎಂದು ಅಭಿಪ್ರಾಯಕ್ಕೆ ಬರಲಾಗಿದೆ. ಹಿರೋಶಿಮಾ ಹಾಗೂ ನಾಗಾಸಾಕಿ ಮೇಲೆ ಕೇವಲ 2 ಬಾಂಬ್-`ಲಿಟ್ಲ ಬಾಯ್’ ಹಾಗೂ `ಫ್ಯಾಟ್ ಮನ್’- ಹಾಕಿದಾಗಲೇ ಮಾನವ ಜೀವಿತಕ್ಕೆ ಮಹಾದುರಂತ ತಂದ ನರಮೇಧ ನೋಡಿದ್ದೇವೆ. ಆದರೆ ಈಗಿರುವ 6,000 ಅಣ್ವಸ್ತ್ರಗಳ ಪೈಕಿ 1% ಬಳಸಿದರೂ ವಿಶ್ವವ್ಯಾಪಿ ಹವಾಮಾನ ಬದಲಾವಣೆ, ದುರ್ಭಿಕ್ಷ್ಯಕ್ಕೆ ಮೂಲವಾಗುತ್ತದೆ. ಅಲ್ಲದೇ ಈ ಅಣ್ವಸ್ತ್ರಗಳ ಯುದ್ಧಾಸ್ತ್ರಗಳ ಶಸ್ತ್ರಾಗಾರ ನಿರ್ವಹಣೆ ಮತ್ತು ಆಧುನಿಕರಣಕ್ಕೆ 1.7 ಟ್ರಿಲ್ಲಿಯನ್ ಡಾಲರ್ ಖರ್ಚು ತಗಲುತ್ತಿದೆ. ಜಗತ್ತಿನಾದ್ಯಂತ ಈ ಹಣಕಾಸು ಸಂಪನ್ಮೂಲವನ್ನು ಬಡತನ ನಿವಾರಣೆ, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ, ಆರೋಗ್ಯ, ಶಿಕ್ಷಣ ರಂಗದ ಸವಾಲು, ಸಮಸ್ಯೆ ಬಗೆಹರಿಸಲು ಉದ್ಯೋಗ ನೀಡಲು ಬಳಸಬೇಕಿದೆ.

  ಅಮೇರಿಕಾ ತನ್ನದಲ್ಲದ ಜಾಗದಲ್ಲಿ ಯುದ್ಧಾಸ್ತ್ರ ಪರೀಕ್ಷೆ ನಡೆಸಲು, ವಿವಿಧ ದೇಶಗಳನ್ನು ಬೆದರಿಸಿ ಅದರ ಆಂತರಿಕ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದನ್ನು, ಅದೀನಗೊಳಿಸಿಕೊಳ್ಳುವದನ್ನು ಖಂಡಿಸಿ ಮಾರ್ಶಲ್ ಐಲ್ಯಾಂಡ್ ದೇಶದ ಶಾಂತಿ ಸಂಘಟನೆಗಳು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದನ್ನು ಸಮ್ಮೇಳನ ಸ್ವಾಗತಿಸಿತು.

  ‘ಅಣ್ವಸ್ತ್ರ ಮತ್ತು ಮಾನವರು ಸಹಬಾಳ್ವೆ ಮಾಡಲಾಗದು; ಇನ್ನೆಂದಿಗೂ ಅಣ್ವಸ್ತ್ರಗಳು ಬೇಡಾ; ಮತ್ತೊಂದು ನರಕ ನೋಡೋದು ಬೇಡಾ; ತಮ್ಮ ಜೀವಿತಾವಧಿಯಲ್ಲೇ ಅಣ್ವಸ್ತ್ರ ಮುಕ್ತ ವಿಶ್ವ ನಮ್ಮದಾಗಲಿ’ ಎಂಬುದು ವಿಕಿರಣ ಸಂತ್ರಸ್ತ ಹಿಬಾಕುಶಾಗಳು ಪ್ರಪಂಚಕ್ಕೆ ಕರೆನೀಡಿದ್ದರು. ಇದು 70 ನೇ ವರ್ಷದ ದುರಂತ ವರ್ಷಾಚರಣೆಯ ಸಂದರ್ಭದಲ್ಲಿ ಮತ್ತು 2015ರಲ್ಲಿ ನಡೆಯುವ ಎನ್.ಪಿ.ಟಿ. ರಿವ್ಯೂ ಸಮ್ಮೇಳನಗಳ ಫಲಿತಾಂಶದಲ್ಲಿ ಹೊರಹೊಮ್ಮಲಿ. ಹಾಗಾಗಿ ಎಲ್ಲಾ ದೇಶಗಳೂ ಒಮ್ಮತದಿಂದ ಅಣ್ವಸ್ತ್ರ ನಿರ್ಮೂಲನೆ ಮಾಡುವುದು ಮಾನವೀಯ ಕರ್ತವ್ಯ ಎಂದು ಒಕ್ಕೊರಲ ಅಭಿಪ್ರಾಯಕ್ಕೆ ಬರಲಾಯಿತು.

   ಇಸ್ರೇಲ್ ದೇಶದ ಯುದ್ಧಕೋರತನಕ್ಕೆ ಬಲಿಯಾಗುತ್ತಿರುವ ಪ್ಯಾಲಿಸ್ಟೈನ್ ಹೋರಾಟಕ್ಕೆ ಜಾಗತಿಕವಾಗಿ ಸೌಹಾರ್ದ ಬೆಂಬಲ ನೀಡುವ, ಜಪಾನ್ ದೇಶ ತನ್ನ ಸಂವಿಧಾನದ 9 ನೇ ಕಲಂ ಮಾರ್ಪಡಿಸುವುದರ ವಿರುದ್ಧ ಚರ್ಚೆಗಳು ಮೂಡಿಬಂದುವು.

  ಭಾರತದ ಸಿಐಟಿಯು ಪ್ರತಿನಿಧಿಯಾಗಿ ನಾನು 10 ದಿನಗಳ ಕಾಲ ಎಲ್ಲಾ ಚಟುವಟಿಕೆಗಳಲ್ಲಿ, ಸಭೆ, ಕಾರ್ಯಗಾರದಲ್ಲಿ ಪಾಲ್ಗೊಂಡು ಅನುಭವ ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡಿದೆ. ಹಿರೋಶಿಮಾ ಮತ್ತು ನಾಗಾಸಾಕಿಗಳಲ್ಲಿ, ಅಣ್ವಸ್ತ್ರಕ್ಕೆ ಬಲಿಯಾದವರಿಗೆ ಶಾಂತಿವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆ, ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಪ್ರಪಂಚದ ದೇಶಗಳ ಮೇಲೆ ಒತ್ತಡ ಹೇರಲು ಶಾಂತಿ ಸಂಘಟನೆಗಳ ಪಾತ್ರ, ನಮ್ಮ ಅನುಭವ ಕುರಿತು ಚರ್ಚೆಯಲ್ಲಿ ಮಾತನಾಡಿದ್ದು, ಯುದ್ಧ ವಿರೋಧಿ, ಅಣ್ವಸ್ತ್ರ ನಿರ್ಮೂಲನೆಗೆ ಸಂಘಟನೆಗಳು ನಡೆಸಬಹುದಾದ ಚಟುವಟಿಕೆಗಳ ಕುರಿತು ಕಾರ್ಯಾಗಾರದ ಅಧ್ಯಕ್ಷೀಯ ಮಂಡಳಿಯ ಕೆಲಸದ ಭಾಗವಾಗಿ ಕಾರ್ಮಿಕ ಸಂಘಟನೆಗಳು ಶಾಂತಿ ಪ್ರಕ್ರಿಯೆಯಲ್ಲಿ ಯಾಕಿರಬೇಕೆಂಬ ಕುರಿತು ಮಾತನಾಡಿದ್ದು, ಸಮುದಾಯದ ಮೂಲಕ ಕಲಾವಿದ ಸೊಲಬಕ್ಕನವರ್ 1986ರಲ್ಲಿ ಚಿತ್ರಿಸಿದ ‘ನೂರಡಿ ಬಣ್ಣದ ನಡೆ, ಅಣು ಸಮರಕ್ಕೆ ತಡೆ’ ಚಿತ್ರ ಅಭಿವ್ಯಕ್ತಿಯ ಡಿವಿಡಿ, ಚಿಂತನ ರಂಗ ಅಧ್ಯಯನ ಕೇಂದ್ರದ ಡಾ. ಶ್ರೀಪಾದ್ ಭಟ್ ನಿರ್ದೇಶಿಸಿದ ‘ರೆಕ್ಕೆ ಕಟ್ಟುವಿರಾ? (ಹಿರೋಶಿಮಾ-ನಾಗಾಸಾಕಿ ಮೇಲೆ ಬಾಂಬ್ ದಾಳಿಯ ದುಷ್ಪರಿಣಾಮ ಬಿಂಬಿಸುವ ನಾಟಕ) ನಾಟಕದ ಡಿವಿಡಿ ಪ್ರತಿಯನ್ನು, ಸೌಹಾರ್ದತೆಯ, ಭಾವೈಕ್ಯದ, ಯುದ್ಧ ವಿರೋಧಿ ಹೋರಾಟದ ಹಾಡುಗಳ ಸಂಗ್ರಹದ ಪುಸ್ತಕವನ್ನು ಸಂಘಟಕರಿಗೆ ನೀಡಲಾಯಿತು. ನ್ಯೂ ಜಪಾನ್ ವುಮೆನ್ಸ್ ಅಸೋಶಿಯೇಶನ್ ಸಂಘಟಿಸಿದ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಮಾತನಾಡಿದ್ದು ಎಲ್ಲವೂ ಹೊಸ ಅನುಭವ. ನಾಗಾಸಾಕಿಯ ಬೀದಿಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ನಾಗರಿಕರಿಂದ ಸಹಿಸಂಗ್ರಹದ ಕೆಲಸದಲ್ಲಿ ನಾನು ಮುಂಚೂಣಿ ಪಾತ್ರ ವಹಿಸಿದ್ದು ನಮ್ಮ ಪ್ರದೇಶದಲ್ಲಿ/ಸಂಘಟನೆಯಲ್ಲಿ ಈ ಅನುಭವ ಅನ್ವಯಿಸಲು ಹುಮ್ಮಸ್ಸು ಮೂಡಿಸಿತು.

  ಅಗಸ್ಟ್ 6 ರಂದು ಹಿರೋಶಿಮಾದ ನದಿ ನೀರಿನಲ್ಲಿ ನಮ್ಮ ಶಾಂತಿ ಸಂದೇಶ ಹೊತ್ತ ದೀಪದ ಗೂಡುಗಳನ್ನು ತೇಲಿಬಿಡುವ ಅನುಭವ ಹೃದಯಸ್ಪರ್ಶಿಯಾಗಿತ್ತು. ಹಿರೋಶಿಮಾದಲ್ಲಿ 6ರಂದು, ನಾಗಾಸಾಕಿಯಲ್ಲಿ 9 ರಂದು ನಡೆದ ಶಾಂತಿನಡಿಗೆಯ ಕಾರ್ಯಕ್ರಮದಲ್ಲಿ, ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಆಗ್ರಹಿಸಿ ಅಂತಾರಾಷ್ಟ್ರೀಯ ಪ್ರತಿನಿಧಿಗಳೆಲ್ಲ ಸೇರಿ ಮನವಿ ಅರ್ಪಿಸಿದೆವು. ಹಿಬಾಕುಶಾಗಳೊಂದಿಗೆ ಸಂದರ್ಶನ, ಶಿಕ್ಷಕರ ಸಂಘದ ಮುಖಂಡರ ಜೊತೆ ಸಂವಾದ, ಕಾರ್ಮಿಕ ಸಂಘ ಝೆನ್ ರೋರೆನ್ ರಾಷ್ಟ್ರೀಯ ನಾಯಕರೊಂದಿಗೆ ಒಡನಾಟ, ಮಹಿಳಾ ಸಂಘಗಳ ಅನುಭವ ಹಂಚಿಕೊಳ್ಳುವುದಕ್ಕೆ ಪ್ರಯತ್ನಿಸಿದೆ.

  ಅಂತಿಮವಾಗಿ, ಪ್ರಪಂಚದ ಎಲ್ಲಾ ದೇಶಗಳ ಸರ್ಕಾರಗಳೂ ಅಣ್ವಸ್ತ್ರ ನಿರ್ಮೂಲನೆಗೆ ಸಹಿ ಹಾಕಬೇಕೆಂದು, ಯುದ್ಧಕ್ಕೆ ಆಸ್ಪದ ನೀಡದೇ, ಅದಕ್ಕಾಗಿ ಹೆಚ್ಚು ಹಣ ಮೀಸಲಿಡದೇ ಸಮುದಾಯದ ಸೌಲಭ್ಯಕ್ಕಾಗಿ ಸಮಾಜ ಕಲ್ಯಾಣಕ್ಕಾಗಿ ಸರ್ಕಾರಗಳು ಹಣ ಮೀಸಲಿಡಲಿ, 2015ರಲ್ಲಿ ನಡೆಯುವ ಎನ್.ಪಿ.ಟಿ. ರಿವ್ಯು ಸಮ್ಮೇಳನವನ್ನು ವಾಸ್ತವಿಕವಾಗಿ ಯಶಸ್ವಿಗೊಳಿಸಲು ಕರೆ ನೀಡುವ ಅಂತಾರಾಷ್ಟ್ರೀಯ ಘೋಷಣೆಯನ್ನು ಅಂಗೀಕರಿಸಲಾಯಿತು. ಆ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರುಗಳು ಭಾಗವಹಿಸಿದ್ದರು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಎಲ್ಲವೂ ಅಚ್ಚುಕಟ್ಟಾಗಿ ಸಮಯ ಪ್ರಜ್ಞೆಯೊಂದಿಗೆ ಜವಾಬ್ದಾರಿಯೊಂದಿಗೆ ನಡೆದುದು ನನಗೆ ವಿಶೇಷ ಅನುಭವ. ಜಪಾನ್ ಸಮ್ಮೇಳನದ ಸಂದರ್ಭದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳ ಅನುಭವ, ಅಲ್ಲಿಯ ದುಡಿಯುವ ಜನರ ಪರಿಸ್ಥಿತಿ, ಸರ್ಕಾರಗಳ ನಿಲುವು ಕೇಳುವ ಮೂಲಕ, ನನ್ನ ಅನುಭವದ ವಿಸ್ತಾರವಾದುದಲ್ಲದೇ ಬದ್ಧತೆಯನ್ನು ಗಟ್ಟಿಗೊಳಿಸಿತು.

Advertisements