ಸಂಪುಟ 9 ಸಂಚಿಕೆ 35 – 30 ಆಗಸ್ಟ್ 2015

ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿತನ ಹದ್ದು ಮೀರುತ್ತಿದೆ. ವಚನ ಭಷ್ಟ್ರತೆ, ವಂಚಕತನಗಳು ಬಯಲಾಗುತ್ತಿವೆ. ಬಂಡವಾಳಗಾರರು, ಶ್ರೀಮಂತ ರಿಗೆ ಮಾತ್ರ ಒಳ್ಳೆಯ ದಿನಗಳು. ಜನರಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಭ್ರಮೆಗಳ ಗುಳ್ಳೆ ಒಡೆಯುತ್ತಿದೆ. ಜನರ ಐಕ್ಯತೆ ಮುರಿದಿಕ್ಕುವ ಸಂಘಪರಿವಾರದ ಕೋಮುವಾದಿ ಕುತಂತ್ರಗಳು ಜನರ ಬದುಕನ್ನು ಆತಂಕಕ್ಕೆ ನೂಕುತ್ತಿವೆ. ಜಾತಿವಾದ ಕೇಕೆ ಹಾಕುತ್ತಿದೆ.

ಬಡವರು, ದಲಿತರು, ದುಡಿಯುವ ಜನರು, ಶೋಷಿತರ ದುಃಖ ದುಮ್ಮಾನಗಳು ಲೆಕ್ಕಕ್ಕೆ ಇಲ್ಲದ ಪರಿಸ್ಥಿತಿ ಬಂದಿದೆ. ಇಂತಹ ಪ್ರಶ್ನೆಗಳ ಆಧಾರದಲ್ಲಿ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ಸಿಪಿಐ(ಎಂ) ರಾಷ್ಟ್ರದಾದ್ಯಂತ ಆಗಸ್ಟ್ 1 ರಿಂದ 15 ರವರೆಗೆ ಜನರ ಬದುಕಿನ ಈ ಜ್ವಲಂತ ಪ್ರಶ್ನೆಗಳ ಆಧಾರದಲ್ಲಿ ತೀವ್ರ ಪ್ರಚಾರಾಂದೋಲನ ಮತ್ತು ಸಾಮೂಹಿಕ ಚಳುವಳಿಗೆ ಕರೆ ನೀಡಿತ್ತು. ಕರ್ನಾಟಕದಲ್ಲಿ ಈ ಚಳುವಳಿಯನ್ನು ವಿಶೇಷ ಸ್ವರೂಪದಲ್ಲಿ ಯೋಜಿಸಲಾಗಿತ್ತು.

ಮೂರು ಹಂತಗಳ ಚಳುವಳಿ. ಮೊದಲನೇ ಹಂತದಲ್ಲಿ ಸ್ಥಳೀಯ ಪ್ರಶ್ನೆಗಳ ಆಧಾರದಲ್ಲಿ ಗ್ರಾಮ ಪಂಚಾಯತ್ ಕಚೇರಿಗಳ ಮುಂದೆ ಸ್ಥಳೀಯ ಪ್ರಶ್ನೆಗಳ ಆಧಾರದಲ್ಲಿ ಚಳುವಳಿ. ಎರಡನೇ ಹಂತದಲ್ಲಿ ತಾಲ್ಲೂಕು ಹಂತದ ಸಮಸ್ಯೆಗಳ ಆಧಾರದಲ್ಲಿ ತಾಲ್ಲೂಕು ಮಟ್ಟದ ಚಳುವಳಿ. ಕೊನೆಯದಾಗಿ ಜಿಲ್ಲಾ ಮಟ್ಟದ ಪ್ರಶ್ನೆಗಳು ಸೇರಿದಂತೆ ಜನರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧದ ಪ್ರತಿರೋಧವಾಗಿ ಜಿಲ್ಲಾ ಮಟ್ಟದ ಸಾಮೂಹಿಕ ಪ್ರತಿರೋಧ ಚಳುವಳಿ-ಸ್ವಾತಂತ್ರ್ಯದ ಆಶಯವನ್ನು ಸಾಕಾರಗೊಳಿಸಲು ಪಣತೊಡುವ ಪ್ರತಿಜ್ಞೆ ಸ್ವೀಕಾರ.

ರಾಜ್ಯದಲ್ಲಿ ಈ ಚಳುವಳಿಯ ಕರೆಗೆ ಅತ್ಯಂತ ಉತ್ಸಾಹದ ಸ್ಪಂದನೆ ಸಿಕ್ಕಿದೆ. ಪ್ರಚಾರಾಂದೋಲನದಲ್ಲಿ ವಾಹನ ಜಾಥಾ, ಬೀದಿಬದಿ ಸಭೆಗಳು, ಮನೆ ಮನೆ ಪ್ರಚಾರ, ಪಂಜಿನ ಮೆರವಣಿಗೆ, ಪ್ರತಿಭಟನಾ ಮೆರವಣಿಗೆ, ಪ್ರತಿಭಟನಾ ಸಭೆಗಳು, ಸಾಮೂಹಿಕ ಧರಣ ಇತ್ಯಾದಿಗಳು ನಡೆದಿವೆ.

ಆಗಸ್ಟ್ 14 ರಂದು ಸಾಮೂಹಿಕ ಪ್ರತಿಭಟನೆ ಜೊತೆಗೆ ಹೋರಾಟದ ಹಾಡುಗಳು, ನಾಟಕ, ನೃತ್ಯ, ಕವಿಗೋಷ್ಠಿ, ಹೀಗೆ ವೈವಿಧ್ಯಮಯ ಚಟುವಟಿಕೆಗಳು ನಡೆದ  ವರದಿಗಳಿವೆ.

chikkaballapura - In front of DC Office- 2

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗಸ್ಟ್ ಆಂದೋಲನ ಅತ್ಯಂತ ಯೋಜಿತವಾಗಿ ಮತ್ತು ವ್ಯಾಪಕವಾಗಿ ನಡೆದಿದೆ.  ಸಿಪಿಐ(ಎಂ) ರಾಜ್ಯ ಸಮಿತಿಯು ಯೋಜಿಸಿದಂತೆ ಗ್ರಾಮ ಪಂಚಾಯತ್ ಮಟ್ಟದ ಸಮಸ್ಯೆ-ಬೇಡಿಕೆಗಳನ್ನು ಆಧರಿಸಿ ಪ್ರಚಾರಾಂದೋಲನ ನಂತರ ತಾಲ್ಲೂಕು ಮಟ್ಟದ ಸಮಸ್ಯೆಗಳ ಆಧಾರದಲ್ಲಿ ಚಳುವಳಿ ಮತ್ತು ಮೂರನೇ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಮೂರು ಹಂತಗಳ ಚಳುವಳಿಗಳೂ ವ್ಯವಸ್ಥಿತವಾಗಿ ನಡೆದಿವೆ.

ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ ನಡೆದಿದೆ. ಮೂರು ತಾಲ್ಲೂಕುಗಳಲ್ಲಿ ತಾಲೂಕು ಮಟ್ಟದ ಸಮಾವೇಶ ನಡೆದಿದೆ. ಮೂರು ತಾಲ್ಲೂಕಿನಲ್ಲಿ ರಾಜಕೀಯ ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಸು. 50,000 ಕರಪತ್ರಗಳನ್ನು ಹಂಚಲಾಗಿದೆ. 10 ವಾಹನಗಳೊಂದಿಗೆ 5 ದಿನಗಳ ಪ್ರಚಾರ ನಡೆಸಲಾಗಿದೆ. ಜಿಲ್ಲೆಯ ಎಲ್ಲ ಹಳ್ಳಿಗಳನ್ನು ತಲುಪಲಾಗಿದೆ. ಮೂರು ತಾಲ್ಲೂಕಿನಲ್ಲಿ ಚಿಂತಾಮಣಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತ್ತು ತಾಲ್ಲೂಕು ಪಂಚಾಯ್ತಿ ಕ್ಷೇತ್ರದಲ್ಲಿ ಪರಿಣಾಮಕಾರಿ ಪ್ರಚಾರ ನಡೆದಿದೆ. ಗ್ರಾಮ ಪಂಚಾಯತ್ ಮಟ್ಟದ ನಾನಾ ಬೇಡಿಕೆಗಳ ಪಟ್ಟಿ ಹಾಗೂ 10 ತಾ.ಪಂ. ಮಟ್ಟದ ಬೇಡಿಕೆಗಳು ಅಲ್ಲದೇ 14 ಜಿಲ್ಲಾ ಮಟ್ಟದ ಬೇಡಿಕೆ ಪಟ್ಟಿ ರೂಪಿಸಲಾಗಿತ್ತು. ಇವುಗಳ ಆಧಾರದಲ್ಲಿ ಎಲ್ಲೆಡೆ ಪ್ರತಿಭಟನಾ ಧರಣ ನಡೆದಿವೆ.

ಮೊದಲ ಹಂತದಲ್ಲಿ 42 ಗ್ರಾಮ ಪಂಚಾಯತ್‌ಗಳ ಮುಂದೆ ಧರಣ ನಡೆದಿದೆ. 5 ಗ್ರಾಮ ಪಂಚಾಯತ್‌ಗಳಲ್ಲಿ ಮನವಿ ನೀಡಲಾಗಿದೆ. ಸರಾಸರಿ ಸುಮಾರು 1000 ಜನ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಈ ಹಂತದಲ್ಲಿ ಜಿಲ್ಲೆಯಲ್ಲಿ ಸುಮಾರು 50 ಸಾವಿರ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಎರಡನೇ ಹಂತದಲ್ಲಿ ಜಿಲ್ಲೆಯ ಆರೂ ತಾಲ್ಲೂಕು ಕಛೇರಿಗಳ ಎದುರು ಚಳುವಳಿ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು ಎರಡು ಸಾವಿರ ಬೀದಿಬದಿ ಸಭೆಗಳನ್ನು ನಡೆಸಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಆಗಸ್ಟ್ 14, 2015 ರಂದು ಶಿಡ್ಲಘಟ್ಟ ವೃತ್ತದಿಂದ ಆರಂಭಿಸಿ ಚಿಕ್ಕಬಳ್ಳಾಪುರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆದಿದೆ. ಮೆರವಣಿಗೆ ಮತ್ತು ನಂತರದ ಸಾಮೂಹಿಕ ಧರಣದಲ್ಲಿ ಸು. 3000 ಜನರು ಪಾಲ್ಗೊಂಡಿದ್ದಾರೆ.

ಪ್ರತಿಭಟನೆ ಜನರ ಮನಸ್ಸನ್ನು ಸೆಳೆದಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನಾ ಸಭೆ ನಡೆದಿದೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಈ ಸ್ಥಳದಲ್ಲಿ ‘ಕುಡುಗೋಲು ಮತ್ತು ಸುತ್ತಿಗೆ’ಯ ಆಕಾರದಲ್ಲಿ ಜನರು ಕುಳಿತು ವಿಶಿಷ್ಟ ರಚನೆಯನ್ನು ಮಾಡಿದ್ದಾರೆ. ಆ ಮೂಲಕ ವಿಶಿಷ್ಟ ಸಂದೇಶವೊಂದನ್ನು ಸಮಾಜಕ್ಕೂ ಜಿಲ್ಲಾಡಳಿತಕ್ಕೂ ನೀಡಲಾಗಿದೆ. ರೈತ-ಕಾರ್ಮಿಕರ, ಶೋಷಿತರ ಪರವಾಗಿ ಸಿಪಿಐ(ಎಂ) ಪಕ್ಷ-ಕೆಂಬಾವುಟ ಬೃಹತ್ ಹೋರಾಟಗಳನ್ನು ನಡೆಸಲಿದೆ. ಜನ ವಿರೋಧಿ ನೀತಿಗಳಿಗೆ ಪ್ರತಿರೋಧ ತೋರಿ ತಡೆ ಒಡ್ಡಲಿದೆ. ಅದೇ ಆ ಸಂದೇಶ. ಧನಿವರ್ಧಕ ಬಳಕೆ ವಿಷಯದಲ್ಲಿ ಜಿಲ್ಲಾಡಳಿತ ಅಡ್ಡಿ ಮಾಡಿದರೂ ಪ್ರತಿಭಟನೆ ಉತ್ಸಾಹಕ್ಕೆ ಇದರಿಂದ ತಡೆಯೇನೂ ಆಗಿಲ್ಲ. ಈ ಕಾರ್ಯಕ್ರಮದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಪಾಲ್ಗೊಂಡು ಮಾತನಾಡಿ ನೆಹರುರವರು ದೇಶ ಸ್ವಾತಂತ್ರ್ಯವನ್ನು ಪಡೆದ ಸಂದರ್ಭದಲ್ಲಿ ಮಾಡಿದ ಪ್ರಸಿದ್ಧ ಭಾಷಣವನ್ನು ನೆನಪಿಸಿ ಕಾಂಗ್ರೆಸ್ ಪಕ್ಷ ಈ ಭಾಷಣದ ಆಶಯವನ್ನು ಕೈಬಿಟ್ಟಿದೆ. ಬಿಜೆಪಿಗೆ ಎಂದೂ ಕೂಡ ಈ ಆಶಯಗಳ ಬಗೆಗೆ ಕಾಳಜಿ ಇರಲಿಲ್ಲ. ಪ್ರಸ್ತುತ ಉದಾರೀಕರಣದ ನೀತಿಗಳಿಗೆ ವಿರುಧ್ಧವಾದ ಎಡಪಕ್ಷಗಳ ಪರ್ಯಾಯ ಧೋರಣೆಗಳೇ ಸ್ವಾತಂತ್ರ್ಯದ ಆಶಯಗಳ ಈಡೇರಿಕೆಗೆ ನಿಜವಾದ ದಾರಿ ಎಂದು ಅವರು ಹೇಳಿದರು.

ನಡುರಾತ್ರಿ 2 ಗಂಟೆವರೆಗೆ ನಡೆದ ಈ ಸಾಮೂಹಿಕ ಚಳುವಳಿಯಲ್ಲಿ ಆಂಧ್ರಪ್ರದೇಶದ ನಲ್ಗೊಂಡದ ‘ಪ್ರಜಾ ನಾಟ್ಯಮಂಡಳಿ’ ಯಿಂದ ಸಾಂಸ್ಕೃತಿಕ ತಂಡ ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿತು. ಎರಡೂವರೆ ತಿಂಗಳ ಕಾಲ ಮಾಧ್ಯಮಗಳಲ್ಲಿ ಈ ವಿಷಯಗಳು ಚರ್ಚಿತವಾಗಿವೆ. ಆಂದೋಲನ ವಿಷಯಗಳು ಚೆನ್ನಾಗಿ ವರದಿಯಾಗಿವೆ. ಬಲವಾದ ಸಂಘಟನೆ ಇರುವ ಬಾಗೇಪಲ್ಲಿ, ಅಲ್ಲದೇ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ತಾಲ್ಲೂಕುಗಳಲ್ಲಿ ಸಹ ಸಿಪಿಐ(ಎಂ) ಚುರುಕುಗೊಳ್ಳಲು ಇದು ಸಹಾಯಕವಾಗಿದೆ.

FREEDOM TORCH 2

ಕೋಲಾರ:

ಕೋಲಾರ ಜಿಲ್ಲೆಯಲ್ಲಿ ರಾಜಕೀಯ ಆಂಧೋಲನದ ಭಾಗವಾಗಿ ನಿವೇಶನದ ಪ್ರಶ್ನೆಯನ್ನು ವಿಶೇಷವಾಗಿ ಕೈಗೆತ್ತಿಕೊಳ್ಳಲಾಗಿದೆ. ಕೋಲಾರದ ಎಲ್ಲಾ 35 ವಾರ್ಡುಗಳಲ್ಲಿ ರಾಜಕೀಯ ಪ್ರಚಾರಾಂದೋಲನ ನಡೆದಿದೆ. ನಿವೇಶನ ರಹಿತರ ಸು. 2,000 ಅರ್ಜಿಗಳನ್ನು ಆಡಳಿತಕ್ಕೆ ಸಲ್ಲಿಸಲಾಗಿದೆ. ಇದೇ ನಿವೇಶನದ ಪ್ರಶ್ನೆ ಆಧಾರದಲ್ಲಿ 4 ಪಂಚಾಯ್ತಿಗಳ ಕಚೇರಿ ಮುಂದೆ ಚಳುವಳಿ ನಡೆದಿದೆ. ಸುಗಟೂರು, ಉತ್ತಾರು ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರಾಂದೋಲನ ವ್ಯಾಪಕವಾಗಿ ನಡೆದಿದೆ. ಮಾಲೂರಿನಲ್ಲಿಯೂ ನಿವೇಶನ ರಹಿತರ ಚಳುವಳಿಯ ನಡೆದಿದೆ. ಬಂಗಾರ ಪೇಟೆಯಲ್ಲಿ ಮನೆಮನೆ ಪ್ರಚಾರ ನಡೆದಿದೆ. ಉಳಿದ ತಾಲ್ಲೂಕುಗಳಲ್ಲಿ ವಾಹನ ಜಾಥಾ ನಡೆಸಲಾಗಿದೆ.

ಆಗಸ್ಟ್ 14 ರಂದು ಗಾಂಧಿಪ್ರತಿಮೆ ಬಳಿ ಬಹಿರಂಗ ಸಭೆ ನಡೆದಿದೆ. ಜಿ.ವಿ. ಶ್ರೀರಾಮರೆಡ್ಡಿಯವರು ಈ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.  ಗಾಂಧಿನಗರ ನಾರಾಯಣಸ್ವಾಮಿ, ವಿ. ಗೀತಾ, ಅರ್ಜುನನ್, ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಸಂಜೆ ಕೋಲಾರದ ಮುಖ್ಯ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆದಿದೆ. ಮೆರವಣಿಗೆಯ ಅಂತ್ಯದಲ್ಲಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನಾ ಧರಣ ನಡೆದಿದೆ. ಧರಣದಲ್ಲಿ ಕೋಲಾಟ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಕೊನೆಯಲ್ಲಿ ಪ್ರತಿಜ್ಞೆ ಸ್ವೀಕರಿಸಲಾಗಿದೆ.

11873708_875981549147940_2007235186030745246_n

ದಕ್ಷಿಣ ಕನ್ನಡ

ದಕ್ಷಿಣ ಕನ್ನಡದಲ್ಲಿ ಪ್ರಾದೇಶಿಕ ಮಟ್ಟದಲ್ಲಿ 9 ರಾಜಕೀಯ ಸಮಾವೇಶ ನಡೆದಿದೆ. 3 ಸ್ಥಳೀಯ ಮಟ್ಟದ ಸಾರ್ವಜನಿಕ ಸಭೆಗಳು ನಡೆದಿವೆ. ಸು. 750 ಜನರು ಭಾಗವಹಿಸಿದ್ದಾರೆ. 25 ಸಾವಿರ ಕರಪತ್ರಗಳನ್ನು ಜನರ ನಡುವೆ ಹಂಚಲಾಗಿದೆ. ನಿವೇಶನದ ಪ್ರಶ್ನೆಯ ಮೇಲೆ 600 ಜನರು ಪಾಲ್ಗೊಂಡಿದ್ದಾರೆ. ಪುತ್ತೂರಿನಲ್ಲಿ ಕಾರ್ಯಕ್ರಮ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆದಿದೆ. ಅದರಲ್ಲಿ ಸಾಮೂಹಿಕ ಸಂಘಟನೆಗಳೂ ಭಾಗವಹಿಸಿದ್ದವು. 40 ಗ್ರಾಮ ಪಂಚಾಯತ್ ಮುಂದೆ ಹೋರಾಟ ನಡೆಸಲಾಗಿದೆ.

‘1947ರ ಆಗಸ್ಟ್ 14ರ ಮಧ್ಯ ರಾತ್ರಿಯ ಭಾಷಣದಲ್ಲಿ ನಾವು ಕಟ್ಟಲಿರುವ ಹೊಸ ರಾಷ್ಟ್ರಕ್ಕೆ ಯಾವ ಸ್ಪೂರ್ತಿಯನ್ನು ನೀಡಿದ್ದರೋ, ಅದನ್ನು ಮುಂದೆ ದೇಶದಲ್ಲಿ ಪ್ರಧಾನಿಗಳಾದವರು ಉಳಿಸಿಕೊಂಡು ಬರಲಿಲ್ಲ’ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿರವರು ಆಗಸ್ಟ್ 14ರಂದು ದ.ಕ ಜಿಲ್ಲಾಧಿಕಾರಿ ಕಛೇರಿಯೆದುರು 12 ಗಂಟೆಗಳ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಹೇಳಿದರು. ಜಿಲ್ಲೆಯ ಹಿರಿಯ ಕಮ್ಯೂನಿಸ್ಟ್ ಮುಖಂಡ ಕೆ.ಆರ್. ಶ್ರೀಯಾನ್ ಸಹ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಬಿ.ಎಂ. ಭಟ್, ಯು. ಬಿ. ಲೋಕಯ್ಯ, ಕೃಷ್ಣಪ್ಪ ಸಾಲ್ಯಾನ್, ಸುನಿಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ. ಹಾಗೂ ಜಿಲ್ಲಾ ಸಮಿತಿ ಸದಸ್ಯರು, ತಾಲೂಕಿನ ಪಕ್ಷ ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದರು. ಧರಣಿ ಸತ್ಯಾಗ್ರಹಕ್ಕೂ ಮೊದಲು ಪುರಭವನದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.

ಆಗಸ್ಟ್ 14ರ ಮಧ್ಯರಾತ್ರಿ 12 ಗಂಟೆಗೆ ಸತ್ಯಾಗ್ರಹಿಗಳು ಜವಾಹರಲಾಲ್ ನೆಹರೂ ಅವರ ‘ಭವಿಷ್ಯದೊಂದಿಗೆ ಮುಖಾಮುಖಿ’ ಭಾಷಣದ ನಾಲ್ಕು ಕನಸುಗಳನ್ನು ನಿಜಗೊಳಿಸುವ ಪ್ರತಿಜ್ಞೆ ತೆಗೆದುಕೊಳ್ಳಲಾಯಿತು.

11889540_410607009130294_2141667604944998724_n

ಉಡುಪಿ:

ರಾಜಕೀಯ ಪ್ರಚಾರಾಂದೋಲನದಲ್ಲಿ ಉಡುಪಿ ಜಿಲ್ಲೆಯಲ್ಲಿ 14 ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆದಿದೆ. 16 ಸಾವಿರ ಕರಪತ್ರ ಹಂಚಲಾಗಿದೆ. ತಾಲ್ಲೂಕು ಪಂಚಾಯಿತಿ ಮುಂದೆ ಧರಣ ನಡೆದಿದೆ. 12 ಸಾವಿರ ಜನ ಭಾಗವಹಿಸಿದ್ದಾರೆ. ರಾಜಕೀಯ ಸಮಾವೇಶ ನಡೆದಿದೆ. 14 ರ ರಾತ್ರಿ 300 ಜನರ ಭಾಗವಹಿಸಿದ್ದ ಧರಣ ನಡೆದಿದೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಶಂಕರ್, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮುಂತಾದವರು ಕಾರ್ಯಕ್ರಮದ ನೇತೃತ್ವವಹಿಸಿದ್ದರು. ವಿಶೇಷ ಬೇಡಿಕೆಗಳ ಬಗ್ಗೆ ಆಗ್ರಹಿಸಲಾಯಿತು. ಕಡಲ್ಕೊರೆತ ಸಮಸ್ಯೆ ಬಗೆಹರಿಸಬೇಕು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಬೇಕು, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಲಾಯಿತು. ಪಕ್ಷದ ಜಿಲ್ಲಾ ಮುಖಂಡರಾದ ಯು.ದಾಸು ಭಂಡಾರಿ, ಮಹಾಬಲ ವಡೇರಹೋಬಳಿ, ವೆಂಕಟೇಶ್ ಕೋಣಿ, ಎಚ್.ನರಸಿಂಹ, ವಿಠಲ ಪೂಜಾರಿ, ಸುರೇಶ್ ಕಲ್ಲಾಗರ, ರಾಜೇಶ್ ವಡೇರಹೋಬಳಿ ಅಲ್ಲದೆ ಖ್ಯಾತ ಸಾಹಿತಿಗಳಾದ ಜಿ.ರಾಜಶೇಖರ್, ಸಿಪಿಐ ಉಡುಪಿ ತಾಲೂಕು ಕಾರ‍್ಯದರ್ಶಿ ಕೆ.ವಿ.ಭಟ್ ಧರಣಿ ಸತ್ಯಾಗ್ರಹಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಸಂಗಾತಿಗಳು ಧರಣಿ ಸತ್ಯಾಗ್ರಹದುದ್ದಕ್ಕೂ ಭಾಷಣಗಳ ಮಧ್ಯೆ ಕ್ರಾಂತಿಗೀತೆಗಳನ್ನು ಹಾಡಿದರು.

ಬೆಂಗಳೂರು: ಪುರಭವನದ ಮುಂದೆ ಸಾಂಸ್ಕೃತಿಕ ಉತ್ಸವ-ಪ್ರತಿರೋಧ ಚಳುವಳಿ.

ಬೆಂಗಳೂರಿನ ಪುರಭವನದ ಮುಂದೆ ಬೆಂಗಳೂರು ಉತ್ತರ-ದಕ್ಷಿಣ ಸಮಿತಿಗಳ ನೇತೃತ್ವದಲ್ಲಿ ಬೃಹತ್ ಸಂಖ್ಯೆಯಲ್ಲಿ, ಸಮಾಜದ ನಾನಾ ವಿಭಾಗದ ಜನರು ಸೇರಿ ಉತ್ಸಾಹದ ಚಳುವಳಿ ನಡೆದಿದೆ. ಹೋರಾಟದಲ್ಲಿ 1500 ಜನ ಭಾಗವಹಿಸಿದ್ದರು. ಸಿಪಿಐ(ಎಂ) ಮುಖಂಡರಾದ ವಿಜೆಕೆ ನಾಯರ್, ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್. ಉಮೇಶ್, ಉತ್ತರ ಸಮಿತಿಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ವಿವಿಧ ಸಾಮೂಹಿಕ ಸಂಘಟನೆಗಳ ರಾಜ್ಯ, ಜಿಲ್ಲಾ ಮುಖಂಡರು ನಡುರಾತ್ರಿವರೆಗಿನ ಹೋರಾಟದಲ್ಲಿ  ಪಾಲ್ಗೊಂಡಿದ್ದಾರೆ. ಪ್ರತಿಜ್ಞೆ ಸ್ವೀಕರಿಸಲಾಗಿದೆ.

ಬೆಂಗಳೂರು ದಕ್ಷಿಣ

ಬಿಬಿಎಂಪಿ ಚುನಾವಣೆಯ ನಡುವೆಯೂ ಪ್ರಚಾರ ನಡೆದಿದೆ. 5,000 ಬಹುಮಡಿಕೆ ಕರಪತ್ರ(ಫೋಲ್ಡರ್)ಗಳನ್ನು ಜನರ ನಡುವೆ ಹಂಚಲಾಗಿದೆ. ಕಾರ್ಮಿಕರ ಮಧ್ಯೆ ಮೋದಿ ವಿರೋಧಿ ಮನೋಭಾವ ಹೆಚ್ಚುತ್ತಿರುವುದು ಕಾರ್ಯಕರ್ತರ ಗಮನಕ್ಕೆ ಅನುಭವಕ್ಕೆ ಬಂದಿದೆ. 5,000 ಕಿರುಹೊತ್ತಿಗೆಗಳನ್ನು ಮಾರಾಟ ಮಾಡಲಾಗಿದೆ.

ಬೆಂಗಳೂರು ಉತ್ತರ

ಬೆಂಗಳೂರು ಉತ್ತರದಲ್ಲಿ 1,00,000 ಕರಪತ್ರ ಮುದ್ರಿಸಿ ಕಾರ್ಮಿಕರ ಮಧ್ಯೆ ಹಂಚಲಾಗಿದೆ.  ಚುನಾವಣಾ ಸಭೆಗಳ ಪ್ರಚಾರದೊಂದಿಗೆ ಎಲ್ಲ ಕಡೆ ರಾಜಕೀಯ ಪ್ರಚಾರಾಂದೋಲನ ಸಹ ಜೊತೆಯಾಗಿ ನಡೆಸಲಾಗಿದೆ. ಪ್ರದೇಶವಾರು ಹಲವಾರು ಬಹಿರಂಗ ಸಭೆಗಳನ್ನು ನಡೆಸಲಾಗಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ರೈತರ ಭೂಸ್ವಾಧೀನ ಕಾಯ್ದೆ ವಿರೋಧಿಸಿ ದುಂಡು ಮೇಜಿನ ಸಭೆ ನಡೆಸಲಾಗಿದೆ. ಜುಲೈ 20 ರಂದು ಪ್ರತಿಭಟನೆ ನಡೆಸಲಾಗಿದೆ. 4 ಸಾವಿರ ಕರಪತ್ರ ಹಂಚಲಾಗಿದೆ.

ballary

ಬಳ್ಳಾರಿ: ಸಹಸ್ರಾರು ನಿವೇಶರಹಿತರ ಬೃಹತ್ ಪ್ರತಿಭಟನೆ

ಆಗಸ್ಟ್ 3 ರಂದು ತಾಲ್ಲೂಕು ಮಟ್ಟದ ಪ್ರತಿಭಟನೆಗಳು ನಡೆದಿವೆ. ಹೊಸಪೇಟೆಯ 15 ವಾರ್ಡುಗಳಲ್ಲಿ ಪ್ರಚಾರಾಂದೋಲನ ಹಾಗು ಸು. 5000 ಜನರು ಪಾಲ್ಗೊಂಡ ನಿವೇಶನ ರಹಿತರ ಬೃಹತ್ ಚಳುವಳಿ ನಡೆದಿದೆ. ಹಗರಿಬೊಮ್ಮನಹಳ್ಳಿ, ಶಿರಗುಪ್ಪ, ಸಂಡೂರು, ಕುರುಗೋಡು, ಹೊಸಪೇಟೆ, ಬಳ್ಳಾರಿಗಳಲ್ಲಿ ಪ್ರಚಾರಾಂದೋಲನ ನಡೆಸಲಾಗಿದೆ. ಆಗಸ್ಟ್ 14 ರಂದು ಬಳ್ಳಾರಿಯಲ್ಲಿ ಸು.3500 ರಿಂದ 4000 ದಷ್ಟು ಜನರ ಬೃಹತ್ ಪ್ರತಿಭಟನೆ ನಡೆದಿದೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು.ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ಬಸವರಾಜ್ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

15 th srtgl hasan 3

ಹಾಸನ: ಪೌರ ಕಾರ್ಮಿಕ ಮಹಿಳೆ ಹಾರಿಸಿದ ಬಾವುಟ

‘ಭಾರತ ಸ್ವತಂತ್ರಗೊಂಡ ಕಳೆದ 68 ವರ್ಷಗಳಲ್ಲಿ ಬಡವ-ಶ್ರೀಮಂತರ ನಡುವಿನ ಅಸಮಾನತೆ ಹೆಚ್ಚಳವಾಗುತ್ತಿದ್ದು ಬಡವರು ಕಡು ಬಡವರಾಗಿ ಕೆಲವೇ ಮಂದಿ ಶ್ರೀಮಂತರು ದೇಶದ ಸಂಪತ್ತಿನ ಒಡೆಯರಾಗಿ ಬೆಳೆಯುತ್ತಿದ್ದಾರೆ. ಇಂತಹ ಅಸಮಾನತೆಯ ಸೃಷ್ಟಿಗೆ ಇದುವರೆಗೂ ಅಧಿಕಾರವನ್ನು ನಡೆಸಿರುವ ಕೇಂದ್ರ-ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳೇ ಕಾರಣ ಎಂದು ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವರಲಕ್ಷ್ಮಿ ಟೀಕಿಸಿದರು.  ಹಾಸನದಲ್ಲಿ ಆಗಸ್ಟ್ 14 ರಂದು ನಗರದ ಹೇಮಾವತಿ ಪ್ರತಿಮೆಯ ಬಳಿಯಲ್ಲಿ ‘ಜನತೆಯ ಸ್ವಾತಂತ್ರ್ಯದೆಡೆಗೆ ಜನಾಂದೋಲನ’ದ ಇಡೀ ರಾತ್ರಿಯ ಧರಣಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಹಿರಿಯ ದಲಿತ ಮುಖಂಡರಾದ ಹೆಚ್.ಕೆ. ಸಂದೇಶ್, ಸಾಹಿತಿಗಳಾದ ಭಾನುಮುಷ್ತಾಕ್, ಟಿಪ್ಪು ಸಂಘರ್ಷ ಸಮಿತಿಯ ಮುಭಾಷಿರ್ ಅಹಮದ್, ಸಿಪಿಐ(ಎಂ)ನ  ಜಿ.ಪಿ.ಸತ್ಯನಾರಾಯಣ, ಪೃಥ್ವಿ  ಹೆಚ್.ಆರ್.ನವೀನ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು. ಇಡೀ ರಾತ್ರಿ ನಡೆದ ಜನಾಂದೋಲನ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯದ ಆಶಯಗಳನ್ನೊಳಗೊಂಡ ಕವಿಗೋಷ್ಟಿ, ಕ್ರಾಂತಿಗೀತೆಗಳು, ಪವಾಡ ರಹಸ್ಯ ಬಯಲು, ನಾಟಕ, ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಪಂಜಿನ ಮೆರವಣಿಗೆಯನ್ನು ನಡೆಸಿ ಹೇಮಾವತಿ ಪ್ರತಿಮೆಯ ಮುಂಭಾಗದಲ್ಲಿ ಸೇರಲಾಯಿತು. ಅಲ್ಲಿ ಪೌರಕಾರ್ಮಿಕ ಮಹಿಳೆ ಅನುರಾಧರವರು ತ್ರಿವರ್ಣ ಧ್ವಜವನ್ನು ಆರೋಹಣ ಮಾಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿದ್ದ ನೂರಾರು ಜನ ಕಾರ್ಯಕರ್ತರು ಬೆಳಗಿನ ಜಾವದವರೆಗೂ ಧರಣಿಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಸಾವಿರ ಕರಪತ್ರ ಮುದ್ರಿಸಿ ಹಂಚಲಾಗಿದೆ. ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ ನಡೆದಿದೆ. ಕಾರ್ಮಿಕ ರಂಗದಲ್ಲಿ ಉದ್ಯೋಗದ ಪ್ರಶ್ನೆಗಳ ಆಧಾರದಲ್ಲಿ ಪ್ರಚಾರಾಂದೋಲನ ನಡೆಸಲಾಗಿದೆ. 5 ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ರಾಜಕೀಯ ಸಭೆಗಳು ನಡೆದಿವೆ. ಕಾರವಾರದಲ್ಲಿ 2 ತಾಲ್ಲೂಕು ಮಟ್ಟದಲ್ಲಿ ಸಭೆಗಳು ನಡೆದಿವೆ. 6 ಕಡೆ ವಾಹನ ಜಾಥಾಗಳು ನಡೆದಿವೆ. ಪಕ್ಷದ ಸದಸ್ಯರ ಸಮಾವೇಶಗಳು. 2 ತಾಲ್ಲೂಕು ಸಮಾವೇಶಗಳು ನಡೆದಿವೆ. 14 ರಂದು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಆಡಳಿತ ಅಡೆತಡೆ ಕಿರುಕುಳದ ನಡುವೆಯೂ 860 ಜನ ಭಾಗವಹಿಸಿದ್ದಾರೆ. ಸಾವಿರ ಜನ ಜಾಥಾದಲ್ಲಿ ಭಾಗವಹಿಸಿದ್ದಾರೆ. ದೀಪಗಳ ಮೆರವಣಿಗೆ ನಡೆದಿದೆ. ಮಧ್ಯರಾತ್ರಿಯವರೆಗೆ ಮಹಿಳೆಯರು ಸಹ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕಾರವಾರದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಕವಿಗೋಷ್ಠಿ ನಡೆದಿದೆ.

tumkuru

ತುಮಕೂರು

ಎರಡು ತಾಲ್ಲೂಕು ಕಛೇರಿ ಮುಂದೆ ಧರಣ ನಡೆಸಲಾಗಿದೆ. ಆಗಸ್ಟ್ 7 ನಗರಸಭೆ ಮುಂದೆ ಪ್ರತಿಭಟನೆ ನಡೆದಿದೆ. ಆಗಸ್ಟ್ 7 ರಂದು ನಗರ ಸಭೆ ಮುಂದೆ ಪ್ರತಿಭಟನೆ ನಡೆದಿದೆ. 5 ವಾರ್ಡ್‌ಗಳಲ್ಲಿ ಮನೆಮನೆಗೆ ಕರಪತ್ರ ಹಂಚಲಾಗಿದೆ. 12 ರಿಂದ 12 ರ ವರೆಗೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆದಿದೆ. 300 ಜನ ಭಾಗವಹಿಸಿದ್ದಾರೆ. 5 ಸಾವಿರ ಕರಪತ್ರ ಹಂಚಲಾಗಿದೆ.

ಮಂಡ್ಯ

ಮಳವಳ್ಳಿ ತಾಲ್ಲೂಕಿನ 18 ಗ್ರಾಮ ಪಂಚಾಯತ್‌ಗಳ ಮುಂದೆ ಧರಣ ನಡೆದಿದೆ. 15 ಸಾವಿರ ಕರಪತ್ರ ಹಂಚಲಾಗಿದೆ. ಮಂಡ್ಯ, ಮದ್ದೂರು, ಮಳವಳ್ಳಿ 3 ತಾಲ್ಲೂಕುಗಳಲ್ಲಿ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. 500 ಜನ ಬಾಗವಹಿಸಿದ್ದಾರೆ. ಆಗಸ್ಟ್ 14 ರಂದು ಸು. 1000 ಜನರ ಪಂಜಿನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ 12 ಗಂಟೆವರೆಗೆ ಪ್ರತಿಭಟನೆ ನಡೆದಿದೆ.

ಮೈಸೂರು

ಮೈಸೂರು 7 ದಿನಗಳ ಕಾಲ ವಾಹನ ಜಾಥಾ ನಡೆಸಲಾಗಿದೆ. 8000 ಕರಪತ್ರ ಹಂಚಲಾಗಿದೆ. 50 ಸಾವಿರ ಜನರಿಗೆ ತಲುಪಿಸಲಾಗಿದೆ. 2 ತಾಲ್ಲೂಕುಗಳಲ್ಲಿ ರಾಜಕೀಯ ಸಮಾವೇಶ ನಡೆದಿದೆ. 14 ರಂದು ಪಂಜಿನ ಮೆರವಣಿಗೆಯೊಂದಿಗೆ ಹೋರಾಟ ನಡೆದಿದೆ.

ಬಿಜಾಪುರ

ಜಿಲ್ಲಾ ಮಟ್ಟದಲ್ಲಿ ರಾಜಕೀಯ ಸಮಾವೇಶ ನಡೆಸಲಾಗಿದೆ. 8 ದಿನಗಳ ರಾಜಕೀಯ ಪ್ರಚಾರಾಂದೋಲನ ನಡೆದಿದೆ. ವಿಚಾರ ಸಂಕಿರಣವನ್ನು ಸಹ  ನಡೆಸಲಾಗಿದೆ. ಆಗಸ್ಟ್ 14 ರ ಹೋರಾಟ. 300 ಜನರು ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಕೊಡಲಾಗಿದೆ. ಸಿಂಧಗಿಯಲ್ಲಿ ಪ್ರತಿಭಟನೆ ನಡೆದಿದೆ. 14 ರ ರಾತ್ರಿ ಅಲ್ಲಿ 100 ಜನರ ಪಂಜಿನ ಮೆರವಣಿಗೆ ನಡೆದಿದೆ.

ರಾಯಚೂರು

5,000 ಕರಪತ್ರದೊಂದಿಗೆ ಪಂಚಾಯ್ತಿ ಮಟ್ಟದಲ್ಲಿ ಬಹಿರಂಗ ಸಭೆ ನಡೆಸಲಾಗಿದೆ. 3 ತಾಲ್ಲೂಕುಗಳ ರಾಜಕೀಯ ಸಭೆಗಳು ನಡೆದಿವೆ. ರಾಯಚೂರು ಮತ್ತು ಸಿಂಧನೂರು ತಾಲ್ಲೂಕು ಕಛೇರಿಗಳಲ್ಲಿ ಮನವಿ ನೀಡಲಾಗಿದೆ. ಆಗಸ್ಟ್ 14 ರಂದು ಸಾಮೂಹಿಕ ಪಂಜಿನ ಮೆರವಣಿಗೆ ನಡೆದಿದೆ.

ಗುಲ್ಬರ್ಗಾ

ಗುಲಬರ್ಗಾ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಜಿಲ್ಲಾ ಮಟ್ಟದ ಸಮಾವೇಶ ನಡೆದಿದೆ. 6,000 ಕರಪತ್ರ ಹಂಚಲಾಗಿದೆ. 14 ರಂದು ನಡುರಾತ್ರಿವರೆಗಿನ ಪ್ರತಿಭಟನಾ ಸಭೆಯಲ್ಲಿ ಜನ ಉತ್ಸಾಹದಿಂದ ಭಾಗವಹಿದ್ದಾರೆ. ದೇಶ ಸ್ವಾಂತಂತ್ರ್ಯ ಗಳಿಸಿದ ಹೊತ್ತಿಗೆ ಸರಿಯಾಗಿ ಅಂದರೆ ನಡುರಾತ್ರಿಯಲ್ಲಿ ನೆಹರೂರವರು ಮಾಡಿದ ಪ್ರಸಿದ್ದ ಬಾಷಣ ‘ಭವಿಷ್ಯದೊಂದಿಗೆ ಮುಖಾಮುಖಿ’(ಟ್ರಸ್ಟ್ ವಿತ್ ಡೆಸ್ಟಿನಿ’) ಬಾಷಣದ ಪೂರ್ಣಪಾಠವನ್ನು ಓದಲಾಗಿದೆ.

ಜೊತೆಗೆ ಪ್ರಚಾರಾಂದೋಲನ ಸಮಾರೋಪವಾಗಿ ಪ್ರತಿಜ್ಞೆ ಸ್ವೀಕರಿಸಲಾಗಿದೆ.

ಧಾರವಾಡ

ಧಾರವಾಡದಲ್ಲಿ 3 ರಾಜಕೀಯ ಸಮಾವೇಶಗಳು ನಡೆದಿವೆ. ಧಾರವಾಡದಲ್ಲಿ ಸಿಐಟಿಯು ನೇತೃತ್ವದಲ್ಲಿ ವಿಚಾರ ಸಂಕಿರಣ ನಡೆಸಲಾಗಿದೆ. 15 ರಂದು ಜಿಲ್ಲಾ ಕೇಂದ್ರದಲ್ಲಿ ಸಂಜೆಯಿಂದ 12.30 ರ ವರೆಗೆ ಸಾಮೂಹಿಕ ಧರಣ ನಡೆದಿದೆ. ಗದಗ್, ಹಾವೇರಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಗಳು ನಡೆದಿವೆ. ದಾವಣಗೆರೆ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ರಾಜಕೀಯ ಸಮಾವೇಶ ನಡೆದಿದೆ. ಜಿಲ್ಲಾ  ಕೇಂದ್ರದಲ್ಲಿ ರಾಜಕೀಯ ಸಮಾವೇಶ ನಡೆದಿದೆ.  14 ರ ರಾತ್ರಿ ಪಂಜಿನ ಮೆರವಣಿಗೆ ಮಧ್ಯರಾತ್ರಿಯವರೆಗೆ ಪ್ರತಿಭಟನೆ ನಡೆದಿದೆ. ಚಿತ್ರದುರ್ಗದಲ್ಲಿಯೂ 14 ರಂದು ಪ್ರತಿಭಟನಾ ಸಭೆ ನಡೆದಿದೆ.

ಕೊಡಗು :

ಕೊಡಗು ಜಿಲ್ಲೆಯಲ್ಲಿ 3000 ಸಾವಿರ ಕರಪತ್ರ ಹಂಚಿ ಪ್ರಚಾರ ನಡೆಸಲಾಗಿದೆ.  ಆಗಸ್ಟ್ 14 ರ ಚಳುವಳಿಯಲ್ಲಿ ಸು. 110 ಜನ ಪಾಲ್ಗೊಂಡಿದ್ದಾರೆ. ಬೆಳ್ತಂಗಡಿಯಲ್ಲಿ ಹಲವು ಸ್ಥಳೀಯ ಪ್ರಶ್ನೆಗಳ ಆಧಾರದಲ್ಲಿ ವ್ಯಾಪಕವಾದ ಪ್ರಚಾರಾಂದೋಲನ ನಡೆಸಲಾಗಿದೆ. ತಾಲೂಕಿನ ಎಲ್ಲಾ ಪಂಚಾಯತು ಹಾಗೂ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ಹಾಗೂ ಅದರ ಪೂರ್ವ ವ್ಯಾಪಕ ಪ್ರಚಾರ ನಡೆಸಲಾಗಿದೆ.

ಗದಗ:

14 ಆಗಸ್ಟ್ ಮದ್ಯಾಹ್ನ-12 ರಿಂದ ಮಧ್ಯರಾತ್ರಿ: 12 ವರೆಗೆ ಗಾಂಧಿ ವೃತ್ತದಲ್ಲಿ ಧರಣಿ ಹೋರಾಟವನ್ನು ನಡೆದಿದೆ

ಜಿಲ್ಲಾ ಸಮಿತಿ ಸದಸ್ಯ ಎಮ್.ಎಸ್.ಹಡಪದ,  ಮಹೇಶ ಹಿರೇಮಠ,  ಬಾಲು ರಾಠೋಡ ಮಾತನಾಡಿದರು. ಬರ ಪರಿಹಾರ ಕ್ರಮ ಸೇರಿದಂತೆ ಹಲವು ಸ್ಥಳೀಯ ಮತ್ತು ನೀತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಆಧಾರದಲ್ಲಿ ಈ ಚಳುವಳಿ ನಡೆದಿದೆ.